Date: 25-09-2022
Location: ಬೆಂಗಳೂರು
ಅಷ್ಟು ದೂರದಿಂದ ಹೊಟ್ಟೆ ಪಾಡಿಗಾಗಿ ವ್ಯಾಪಾರ ನಂಬಿಕೊಂಡು ಬೆಂಗಳೂರಿಗೆ ಬಂದಿರುವ ಇವರು ತಮ್ಮ ಸಣ್ಣ ಪ್ರಮಾಣದ ವ್ಯಾಪಾರದಲ್ಲಿಯೂ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ ಎನ್ನುತ್ತಾರೆ ಲೇಖಕಿ ಜ್ಯೋತಿ ಎಸ್. ಅವರು ತಮ್ಮ ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ತಾಮ್ರ ಆಭರಣ ವ್ಯಾಪಾರಿ ಅರವತ್ತೈದು ವರ್ಷದ ಸುನಂದಮ್ಮನವರ ಬಗ್ಗೆ ಬರೆದಿದ್ದಾರೆ.
ಸುನಂದಮ್ಮ ತಾಮ್ರದ ಆಭರಣಗಳ ವ್ಯಾಪಾರಸ್ಥರು. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ತುಳಜಾಪುರ ತಾಲ್ಲೂಕಿನವರು. ಅಷ್ಟು ದೂರದಿಂದ ಹೊಟ್ಟೆ ಪಾಡಿಗಾಗಿ ವ್ಯಾಪಾರ ನಂಬಿಕೊಂಡು ಬೆಂಗಳೂರಿಗೆ ಬಂದಿರುವ ಇವರು ತಮ್ಮ ಸಣ್ಣ ಪ್ರಮಾಣದ ವ್ಯಾಪಾರದಲ್ಲಿಯೂ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. 'ವ್ಯಾಪಾರವಾದರೆ ಮುಖದಲ್ಲಿ ನಗು, ಮನೆಯಲ್ಲಿ ಹೊಟ್ಟೆ ತುಂಬಾ ಊಟ, ಇಲ್ಲವಾದರೆ ಅಂಬಲಿಯೇ ಗತಿ. ಎರಡು ವರ್ಷದಿಂದ ಕೋವಿಡ್ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಎಲ್ಲ ತಾಮ್ರದ ಆಭರಣಗಳನ್ನು ಚೀಲದಲ್ಲಿ ಕಟ್ಟಿ ಎತ್ತಿಟ್ಟಿದ್ದೆವು. ಈಗ ಆಸಿಡ್ ಹಾಕಿ ತೊಳೆದು ಹೊಳೆಯುವಂತೆ ಮಾಡಿ ಹೊಸದಾಗಿಸಿ ವ್ಯಾಪಾರಕ್ಕೆ ಕುಳಿತಿದ್ದೇವೆ' ಎನ್ನುವ ಅರವತ್ತೈದು ವರ್ಷದ ಸುನಂದಮ್ಮನವರ ವ್ಯಾಪಾರ ಮತ್ತು ಜೀವನದ ಬಗ್ಗೆ ಅವರ ಮಾತುಗಳಲ್ಲಿ ಓದಿಕೊಳ್ಳಿ.
*
'ನನ್ನ ಕಲ್ಬುರ್ಗಿಗೆ ಕೊಟ್ಟು ಮದುವೆ ಮಾಡಿದ್ದರು. ನಮಗೆ ಎರಡು ಗಂಡು ಎರಡು ಹೆಣ್ಣು ಮಕ್ಕಳು. ಮೊದಲು ನನ್ನ ಗಂಡ ಈ ವ್ಯಾಪಾರ ಮಾಡುತ್ತಿದ್ದರು. ಅವರಿಗೆ ಸಾರಾಯಿ ಕುಡಿತ ಹೆಚ್ಚು ಇದ್ದದ್ದರಿಂದ ಅವರ ಲಿವರ್ ಹಾನಿಯಾಗಿ ಚಿಕಿತ್ಸೆಗಾಗಿ ಹಾಸ್ಪಿಟಲ್ ಸೇರಿಸಿ ತುಂಬ ಹಣ ಖರ್ಚು ಮಾಡಿದ್ವಿ, ಕೊನೆಗೆ ಹಣನೂ ಹೊಯ್ತು ಅವರೂ ಹೋದರು.. ಈಗ ಅವರಿದ್ದಿದ್ದರೆ ಅನುಕೂಲವಾಗುತ್ತಿತ್ತು. ಆದರೆ ಬದುಕುಳಿಯಲಿಲ್ಲ. ನಮಗೆ ನಮ್ಮ ಊರಿನಲ್ಲಿ ಯಾವುದೇ ಆಸ್ತಿ, ಮನೆ, ಜಮೀನು ಅಂತ ಏನೇನೂ ಇಲ್ಲ. ಬಡತನ, ಅಸಹಾಯಕತೆಯಿಂದಾಗಿ ಜೀವನ ಸಾಗಿಸಲು ಬೆಂಗಳೂರಿಗೆ ಬಂದಿದ್ದೇವೆ. ಸುಮಾರು ಇಪ್ಪತ್ತು ವರ್ಷದಿಂದ ಅಮೃತಹಳ್ಳಿಯ ಯಲ್ಲಮ್ಮನ ದೇವಸ್ಥಾನದ ಹಿಂಭಾಗ ಜೋಪಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ನಮ್ಮದೇ ಸಮುದಾಯದ ಹದಿನೈದು ಕುಟುಂಬಗಳೊಂದಿಗೆ ಇಲ್ಲೇ ವಾಸವಿದ್ದೇವೆ. ನಮಗೆ ಅಕ್ಕಸಾಲಿಗ ವೃತ್ತಿ ಬಿಟ್ಟು ಬೇರೆ ಏನೂ ಕೆಲಸ ಗೊತ್ತಿಲ್ಲ. ಅದಕ್ಕೆ ಈ ಕೆಲಸವನ್ನೇ ಮಾಡುತ್ತಿದ್ದೇವೆ. ಹೇಗಾದರೂ ಜೀವನ ನಡೆಸಬೇಕಲ್ಲ. ಮಹಾರಾಷ್ಟ್ರ, ಸೋಲಾಪುರದಿಂದ ಸರಕು ತೆಗೆದುಕೊಂಡು ಅಲ್ಲಿ ರಾತ್ರಿ 7 ಗಂಟೆಗೆ ರೈಲಿಗೆ ಹತ್ತಿ ಕೂತ್ರೆ ಇಲ್ಲಿ ಬೆಂಗಳೂರಿಗೆ ಬೆಳಗ್ಗೆ ಬಂದು ಇಳಿಯುತ್ತೇವೆ. ಬೈಂಡಿಂಗ್ ವೈರ್ ರೂಪದಲ್ಲಿ ಇರುವ ತಾಮ್ರದ ಬಂಡಲನ್ನು ಬೇಕಾದ ಅಳತೆಗೆ, ಬೇಕಾದ ಆಕಾರಕ್ಕೆ ವಿಧವಿಧವಾಗಿ ಕತ್ತರಿಸಿ ಚಂದ ಗಾಣಿಸುವುದು ನಾನು ಮತ್ತು ಅಳಿಯ ಮಲ್ಲಿಕಾರ್ಜುನ (ಮಲ್ಲಣ್ಣ). ಮಲ್ಲಣ್ಣನಿಗೆ ಹನ್ನೆರಡು ವರ್ಷದವರೆಗೂ ಕಣ್ಣುಗಳು ಚೆನ್ನಾಗಿ ಕಾಣುತ್ತಿದ್ದವು. ಹಾಗೆ ವರ್ಷಗಳು ಕಳೆದಂತೆ ದೃಷ್ಟಿ ಹೋಗಿದೆ. ಪಿ.ಯು.ಸಿ. ತನಕ ಓದಿದ್ದಾನೆ. ಬ್ರೈಲ್ ಲಿಪಿಯನ್ನು ಕಲಿತಿದ್ದಾನೆ. ಈಗ ಒಂದು ಕಣ್ಣು ಕಾಣಿಸಿದರೆ ಹೆಚ್ಚು. ಅವನೂ ಉಂಗುರ, ಬಳೆ ಮಾಡುವ ಎಲ್ಲಾ ಕೆಲಸವನ್ನು ಕಲಿತು ನನ್ನ ಜೊತೆಗೆ ತಾಮ್ರದ ಆಭರಣಗಳ ತಯಾರಿಕೆಯಲ್ಲಿ ಜೊತೆಯಾಗಿದ್ದಾನೆ' ಎನ್ನುತ್ತಾರೆ ಸುನಂದಮ್ಮ.
'ನಾನು ನನ್ನ ಅತ್ತೆ ಸುನಂದಮ್ಮ ಇಬ್ಬರೂ ಸೇರಿ ಹಿತ್ತಾಳೆ ಉಂಗುರ, ತಾಮ್ರದ ಉಂಗುರ, ಪಂಚಲೋಹದ ಉಂಗುರ, ವಿವಿಧ ಡಿಸೈನ್ ಉಂಗುರ, ಕಡಗ, ಕಾಲುಂಗುರ, ಹಾಲು ಕಡಗ, ಮುಳ್ಳು ತೆಗೆಯುವ ಚಿಮುಟ, ಹಲ್ಲಿನ ಕಡ್ಡಿ, ಕಿವಿ ಕ್ಲೀನ್ ಮಾಡುವ ಕಡ್ಡಿಗಳನ್ನು ಮಾಡುತ್ತೇವೆ. ಮೊದಲೇ ದಿನಪತ್ರಿಕೆ, ವಾರ್ತೆ, ಜಾಹಿರಾತುಗಳನ್ನು ನೋಡಿ ಎಲ್ಲೆಲ್ಲಿ ಜಾತ್ರೆ, ಉತ್ಸವ, ಸಂತೆ ನಡೆಯುತ್ತದೆಯೋ ಅಲ್ಲೆಲ್ಲ ಹೋಗಿ ವ್ಯಾಪಾರ ಮಾಡುತ್ತೇವೆ. ಉಳಿದಂತೆ ರಸ್ತೆ ಬದಿಗಳಲ್ಲಿ, ದೇವಸ್ಥಾನದ ಮುಂದೆ ಕುಳಿತು ವ್ಯಾಪಾರ ಮಾಡುತ್ತೇವೆ. ಮಳೆ ಬಂದರೆ, ನೀರು ಬಿದ್ದರೆ ತಾಮ್ರ, ಹಿತ್ತಾಳೆ ಆಭರಣಗಳೆಲ್ಲ ಕಪ್ಪಾಗುತ್ತವೆ. ಆಗ ಆಸಿಡ್ ಹಾಕಿ ತೊಳೆದು ಒಣಗಿದ ಬಟ್ಟೆಯಲ್ಲಿ ಒರೆಸಿದರೆ ಮೊದಲಿನ ಕಲರ್ ಬರುತ್ತದೆ, ಆಗ ಮಾರುತ್ತೇವೆ. ಸಾಮಾನ್ಯವಾಗಿ ಇಲ್ಲಿನವರು ಚಿಕ್ಕ ಮಕ್ಕಳಿಗೆ ಕಾಲ್ ಕಡಗ, ಉಂಗುರಗಳನ್ನು ತೆಗೆದುಕೊಳ್ಳುತ್ತಾರೆ, ಉಳಿದಂತೆ ಬಿಹಾರಿ, ಉತ್ತರಪ್ರದೇಶ ಕಡೆಯವರು ಹೆಚ್ಚು ತೆಗೆದುಕೊಳ್ಳುತ್ತಾರೆ. ತಾಮ್ರದ ಆಭರಣಗಳನ್ನು ಬಳಸುವುದರಿಂದ ದೇಹದ ಉಷ್ಣ ಕಡಿಮೆಯಾಗುತ್ತದೆ. ಪಿಟ್ಸ್ ಬರುವವರು ಕೂಡ ಧರಿಸಬಹುದು, ಸಂಧಿವಾತ ಕಡಿಮೆಯಾಗುತ್ತದೆ. ತಾಮ್ರದ ನೀರು ಮೈ ಮೇಲೆ ಬಿದ್ದರೆ ಆರೋಗ್ಯಕ್ಕೂ ಹತ್ತಾರು ಲಾಭಗಳಿವೆ' ಎನ್ನುತ್ತಾರೆ ಮಲ್ಲಣ್ಣ.
'ಆಗಿನ ಕಾಲದಲ್ಲಿ ತಾಮ್ರದ ಕೊಡದಲ್ಲಿ ನೀರು ತುಂಬಿಸಿಡುತ್ತಿದ್ದರು. ತಾಮ್ರದ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ತಂಬಿಗೆ, ಲೋಟ, ನೀರು ತುಂಬಲು ಕೊಡ ಹೀಗೆ ತಾಮ್ರ ಹೆಚ್ಚು ಪ್ರಚಲಿತದಲ್ಲಿತ್ತು. ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಕಫ, ವಾತ, ಪಿತ್ತ ಸಮತೋಲನದಿಂದಿರುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ತಾಮ್ರ ಉಪಯೋಗಿಸುವವರ ಸಂಖ್ಯೆ ಕಡಿಮೆಯಾಗಿ ತಾಮ್ರದ ವಸ್ತುಗಳನ್ನು ತಯಾರು ಮಾಡುವವರ, ಮಾರುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಈಗೆಲ್ಲ ತಾಮ್ರದ ವಸ್ತುಗಳ ಜಾಗದಲ್ಲಿ ಬಣ್ಣ ಬಣ್ಣದ ಪ್ಲಾಸ್ಟಿಕ್, ಥಳ ಥಳಿಸುವ ಸ್ಟೀಲ್ ವಸ್ತುಗಳು ನಾ ಮುಂದು.. ತಾ ಮುಂದು.. ಎನ್ನುವಂತೆ ಪೈಪೋಟಿಗೆ ಬಿದ್ದಿವೆ. ಈಗಿನ ಯುವ ಜನತೆಗೆ ತಾಮ್ರದ ಬಳಕೆಯ ಬಗ್ಗೆ, ಉಪಯೋಗದ ಬಗ್ಗೆ ತಿಳುವಳಿಕೆ ಕಡಿಮೆ ಇರುವುದರಿಂದ ಬಳಕೆಯೂ ಕಡಿಮೆ. ನಮ್ಮ ಸಮುದಾಯ ಬೈಲ್ ಪತ್ತರ್ (ಅಕ್ಕಸಾಲಿಗರು). ನಮ್ಮ ಸಮುದಾಯದಲ್ಲಿ ಹಣ ಇರುವ ಸಾಕಷ್ಟು ಮಂದಿ ಬೆಳ್ಳಿ ಬಂಗಾರದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ನಾವು ಬಡವರು ನಮ್ಮ ಹತ್ತಿರ ಅಷ್ಟೊಂದು ಹಣವಿಲ್ಲ. ಇಲ್ಲಿ ವಾಹನ ದಟ್ಟಣೆ ಇದ್ದರೂ, ಧೂಳು ತುಂಬಿಕೊಂಡ ರಸ್ತೆ ಬದಿಗಳಲ್ಲಿ, ದೇವಸ್ಥಾನದ ಮುಂಭಾಗದಲ್ಲಿ ತಾಮ್ರದ ಬಳೆ, ಕಡಗ, ಉಂಗುರ, ದೃಷ್ಟಿಮಣಿ ಇತ್ಯಾದಿ ತಾಮ್ರ, ಹಿತ್ತಾಳೆ, ಸ್ಟೀಲ್, ಪಂಚಲೋಹದ ಆಭರಣದ ವ್ಯಾಪಾರ ಮಾಡಿ ಜೀವನ ಮಾಡುತ್ತೇವೆ. ನನ್ನ ಒಬ್ಬ ಮಗನಿಗೆ ಒಬ್ಬ ಮಗಳಿಗೆ ಮದುವೆ ಮಾಡಿದ್ದೇನೆ. ಇಬ್ಬರು ಮಕ್ಕಳಲ್ಲಿ ಒಬ್ಬರು ಗಾರೆ ಕೆಲಸಕ್ಕೆ ಹೋಗುತ್ತಾರೆ. ಕೊನೆಯ ಮಗಳನ್ನು ಓದಿಸುತ್ತಿದ್ದೇವೆ. ನಾವಂತೂ ಆಗಿನ ಕಾಲದಲ್ಲಿ ಓದಿಲಿಲ್ಲ ನಮಗೆ ಶಿಕ್ಷಣದ ಅರಿವು ಮೂಡಿಸುವವರು ಯಾರೂ ಇರಲಿಲ್ಲ. ಬಡತನದ ಕಾರಣದಿಂದ ಶಾಲೆಯ ಮೆಟ್ಟಿಲನ್ನು ಕೂಡ ನಾನು ಹತ್ತಿಲ್ಲ. ನಮ್ಮ ಅಕ್ಕಸಾಲಿಗ ಸಮುದಾಯದಲ್ಲಿ ಯಾರೂ ಹೆಚ್ಚು ಓದುವುದಿಲ್ಲ. ಓದಿದರೂ ನಮ್ಮ ಸಮುದಾಯದವರಿಗೆ ಕೆಲಸ ಸಿಗುವುದು ಕಷ್ಟ. ನಮ್ಮ ಮಗಳಿಗಾದರೂ ನಮ್ಮ ಪರಿಸ್ಥಿತಿ ಬರುವುದು ಬೇಡ ಎಂದು ಅವಳಿಗೆ ಶಿಕ್ಷಣ ಕೊಡಿಸುತ್ತಿದ್ದೇವೆ. ಅವಳ ಭವಿಷ್ಯ ಉಜ್ವಲವಾಗಿರಲಿ' ಎನ್ನುವುದು ಅಮ್ಮನ ಹಾಗೂ ಈ ಸಮುದಾಯದ ಎಲ್ಲರ ಹಾರೈಕೆ.
'ನಮ್ಮ ಮಾತೃ ಭಾಷೆ ಜಗನ್ನಾಥಿ. ನಮ್ಮ ಭಾಷೆ ಯಾರಿಗೂ ಹೆಚ್ಚು ಗೊತ್ತಿಲ್ಲ. ಬಹಳ ಕಡೆ ಪ್ರಚಲಿತದಲ್ಲಿಲ್ಲ. ನಮ್ಮ ಭಾಷೆಯೂ ಗುರುತಿಸುವಂತಾಗಬೇಕು ಉಳಿಯಬೇಕು, ಚಾಲ್ತಿಗೆ ಬರಬೇಕು. ನಮ್ಮ ಜನ ಪ್ರತಿನಿಧಿಗಳು ಮುಂದೆ ಹೋಗಿ ಹೋರಾಟ ಮಾಡಿದರೂ, ಮನವಿಗಳನ್ನು ಸಲ್ಲಿಸಿದರೂ ಗಮನಕ್ಕೆ ತೆಗೆದುಕೊಳ್ಳದೆ ನಮ್ಮ ಭಾಷೆಯನ್ನು ಕಡೆಗಣಿಸಿದ್ದಾರೆ. ಇನ್ನಾದರೂ ನಮ್ಮ ಭಾಷೆ, ಲಿಪಿ, ಇದರ ಅಸ್ತಿತ್ವವನ್ನು ಇನ್ನಷ್ಟು ಸಂಶೋಧನೆ ಮಾಡಿ ಜಗನ್ನಾಥಿ ಭಾಷೆಯನ್ನು ಉಳಿಸಿಕೊಳ್ಳುವುದರ ಕಡೆಗೆ ಭಾಷಾ ತಜ್ಞರು, ಸ್ಥಳೀಯ ಜನ ಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆಯವರು ಗಮನ ಹರಿಸಬೇಕು ಎಂಬ ಕೋರಿಕೆ ಸುನಂದಮ್ಮ ಮಗ ಮಹೇಶ್ ಸೋನಾರ್ ಹಾಗೂ ಅವರ ಸಮುದಾಯದ ಎಲ್ಲರ ಕೂಗು. ಇವರ ಕೂಗಿಗೆ ಧ್ವನಿಯಾಗಿ 'ಅಲ್ಪಸಂಖ್ಯಾತರು ಮಾತನಾಡುವ ಭಾಷೆಗಳಿಗೆ ಮಾನ್ಯತೆ ಬರಬೇಕು ಎಂದರೆ ಅದಕ್ಕೆ ಒಂದು ಸಾಂಸ್ಥಿಕ ಬೆಂಬಲ ಇರಬೇಕು. ಅದು ಸಾಹಿತ್ಯದ ಬೆಂಬಲ, ಆಡಳಿತದ ಅಥವಾ ಸಮೂಹ ಮಾಧ್ಯಮದ ಬೆಂಬಲ ಇರಬೇಕು. ಸಿನೆಮಾ, ರೇಡಿಯೋ ಹೀಗೆ ಅಲ್ಪ ಸ್ವಲ್ಪವಾದರೂ ಸಾಂಸ್ಥಿಕ ಬೆಂಬಲವಿದ್ದರೆ ಹೊರಪ್ರಪಂಚಕ್ಕೆ ಭಾಷೆಯ ಪರಿಚಯವಾದರೂ ಇರುತ್ತದೆ. ಇಂತಹದೊಂದು ಭಾಷೆ, ಜನ ಸಮುದಾಯ ಇದೆ ಎಂದು ತಿಳಿಯುತ್ತದೆ. ಉದಾಹರಣೆಗೆ ಹವ್ಯಕ ಭಾಷೆ, ಕುಂದಾಪುರ ಕನ್ನಡ ಮಾತನಾಡುತ್ತಾರೆ ಅದು ಪ್ರಚಲಿತದಲ್ಲಿದೆ ಹಾಗಾಗಿ ಗೊತ್ತಾಗುತ್ತದೆ. ಈ ತರಹ ಪ್ರತಿನಿಧಿಸುತ್ತಿದ್ದರೆ ಗೊತ್ತಾಗುತ್ತದೆ. ಮಹಾರಾಷ್ಟ್ರದಲ್ಲಿ ಒಟ್ಟು 38 ಭಾಷೆಗಳನ್ನು ಮಾತನಾಡುತ್ತಾರೆ. ಉದಾ : ಮಾರವಾಡಿ, ಗುಜರಾತಿ ಹೀಗೆ ಬೇರೆ ಬೇರೆ ಭಾಷೆಗಳ ವಿವರವಿದೆ. ಆದರೆ ಜಗನ್ನಾಥಿ ಭಾಷೆಯನ್ನು ಬೇರೆ ಭಾಷೆಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ. 10,000 ಕ್ಕಿಂತ ಕಡಿಮೆ ಮಾತಾಡುವ ಜನರಿದ್ದರೆ ಆ ಭಾಷೆಗೆ ಪ್ರತ್ಯೇಕ ಅಸ್ತಿತ್ವ ಕೊಡುವುದಿಲ್ಲ' ಎಂದು ಮಲ್ಲಿಕಾರ್ಜುನ್ ಮೇಟಿ (ಭಾಷಾ ತಜ್ಞರು) ಹೇಳುತ್ತಾರೆ.
ಇನ್ನು ತಾಮ್ರದ ಬಳಕೆಯ ಪ್ರಯೋಜನಗಳು ಹಲವು. ತಾಮ್ರದ ಪಾತ್ರೆಗಳಲ್ಲಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ, ತಾಮ್ರವು ವೈರಸ್ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ, ವಿಕಿರಣಗಳು ದೇಹವನ್ನು ಪ್ರವೇಶಿಸದಂತೆ ತಡೆಯುತ್ತದೆ. ಕೊಲೆಸ್ಟ್ರಾಲ್, ರಕ್ತದೊತ್ತಡ, ರಕ್ತಹೀನತೆಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗುತ್ತದೆ. ತಾಮ್ರದ ಉಂಗುರ, ಬಳೆ, ಕೈಗಡಗ ಧರಿಸುವುದರಿಂದ ದೇಹ ಬಲಗೊಳ್ಳುತ್ತದೆ. ನಮ್ಮ ಪೂರ್ವಜರ ಉತ್ತಮ ಆರೋಗ್ಯದ ಗುಟ್ಟುಗಳಲ್ಲಿ ತಾಮ್ರದ ಸರಿಯಾದ ಬಳಕೆಯೂ ಒಂದು. ಬೆಲೆ ಸ್ವಲ್ಪ ದುಬಾರಿ ಎನಿಸಿದರೂ ತಾಮ್ರದ ಉಪಯೋಗಗಳೂ ಬೆಲೆಯುತವಾದವುಗಳು. ಇಂತಹ ಸಣ್ಣಪುಟ್ಟ ವ್ಯಾಪಾರಸ್ಥರ ಹಿಂದಿರುವ ಶ್ರಮವನ್ನು ತಿಳಿದು ಗೌರವಿಸೋಣ, ಉತ್ತಮ ವಸ್ತುಗಳನ್ನು ವ್ಯಾಪಾರ ಮಾಡುವ ಇಂತಹ ಸಣ್ಣ ವ್ಯಾಪಾರಿಗಳೊಂದಿಗೆ ವ್ಯವಹರಿಸೋಣ.
-ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.