‘ಬದ್ದಿ ಸಹೋದರರ’ ಕಲಾಯಾನ

Date: 01-01-2023

Location: ಬೆಂಗಳೂರು


“ನಮಗೆಲ್ಲ ಬಲ್ಬ್ ಕಂಡುಹಿಡಿದ ' ಥಾಮಸ್ ಅಲ್ವಾ ಎಡಿಸನ್ ' ಗೊತ್ತು. ಅವರು ಸುಮಾರು ಸಾವಿರ ಬಾರಿ ತನ್ನ ಪ್ರಯೋಗದಲ್ಲಿ ವಿಫಲವಾಗಿ ತನ್ನ ಅವಿರತ ಪ್ರಯತ್ನದ ನಂತರ ಬಲ್ಬ್ ತಯಾರಿಸಿದ. ಹಾಗಂತ ಇದು ಎಡಿಸನ್ ಕಥೆಯಲ್ಲ, ಅವನಂತೆಯೇ ಸುಮಾರು ಹತ್ತು ಸಾವಿರ ಪ್ರಯತ್ನಗಳಿಂದ ಕಲಿತು ತಮ್ಮ ನಿರಂತರ ಪ್ರಯತ್ನದ ನಂತರ ಗೆದ್ದ ಬದ್ದಿ ಸಹೋದರರ” ಜೀವನದ ಕುರಿತು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ಹಂಚಿಕೊಂಡಿದ್ದಾರೆ ಲೇಖಕಿ ಜ್ಯೋತಿ ಎಸ್. ಅವರು ಬರೆದಿರುವ ಕಲೆಗಾರರ ಕುರಿತ ಲೇಖನ ನಿಮ್ಮ ಓದಿಗಾಗಿ...

ನಮಗೆಲ್ಲ ಬಲ್ಬ್ ಕಂಡುಹಿಡಿದ ' ಥಾಮಸ್ ಅಲ್ವಾ ಎಡಿಸನ್ ' ಗೊತ್ತು. ಅವರು ಸುಮಾರು ಸಾವಿರ ಬಾರಿ ತನ್ನ ಪ್ರಯೋಗದಲ್ಲಿ ವಿಫಲವಾಗಿ ತನ್ನ ಅವಿರತ ಪ್ರಯತ್ನದ ನಂತರ ಬಲ್ಬ್ ತಯಾರಿಸಿದ. ಹಾಗಂತ ಇದು ಎಡಿಸನ್ ಕಥೆಯಲ್ಲ, ಅವನಂತೆಯೇ ಸುಮಾರು ಹತ್ತು ಸಾವಿರ ಪ್ರಯತ್ನಗಳಿಂದ ಕಲಿತು ತಮ್ಮ ನಿರಂತರ ಪ್ರಯತ್ನದ ನಂತರ ಗೆದ್ದ 'ಬದ್ದಿ ಸಹೋದರರ ' ಜೀವನ ಈ ವಾರದ ನಮ್ಮ ಅಂಕಣದಲ್ಲಿ. ಒಂದು ಕಲೆಯನ್ನು ಪ್ರಸ್ತುತಪಡಿಸುವವರು ಅಥವ ಆ ಕಲೆಗೆ ಬೇಕಾದ ಉಪಕರಣಗಳನ್ನು ತಯಾರು ಮಾಡುವವರು ಸುಲಭವಾಗಿ ಸಿಗಬಹುದು. ಆದರೆ ತಮ್ಮ ಕಲೆಗೆ ಬೇಕಾದ ಉಪಕರಣ ಅಂದರೆ ಕೊಳಲನ್ನು ತಾವೇ ತಯಾರಿಸಿಕೊಂಡು ನುಡಿಸುತ್ತ ದೇಶ ವಿದೇಶಗಳಿಗೆ ತಮ್ಮ ಕಲೆ, ವ್ಯಾಪಾರ ವಿಸ್ತರಿಸಿ ಬೆಳೆದ ರಾಘವ್ ಮತ್ತು ವಿಜಯ್ ಸಹೋದರರು ಸಿಂಧನೂರಿನ ಪ್ರೇಮ್ ನಾಥ್ ಮತ್ತು ಲಕ್ಷ್ಮಿಬಾಯಿಯವರ ಮಕ್ಕಳು.

ವಿಜಯ್ ಅವರು ನಮ್ಮೊಂದಿಗೆ ಮಾತಿಗಿಳಿದು 'ನಮ್ಮದು ಹಾರ್ಡ್ ವೇರ್ ಅಂಗಡಿ ಇದೆ. ನಮ್ಮ ಅಂಗಡಿಯಲ್ಲಿ ತಗಡು ಮತ್ತು ಪೈಪ್ ಸಿಗತ್ತೆ. ಜಿಂಕ್ ಶೀಟನ್ನು ಹಿಡಿದುಕೊಂಡಿರುವಾಗ ಕಸ್ಟಮರ್ ಬಂದು ಒತ್ತಿ ಬಿಟ್ಟಿದ್ದಾರೆ. ಆಗ ಅಣ್ಣನ ತೋರು ಬೆರಳಿನ ನರ ಕಟ್ ಆಗಿತ್ತು. ಎರಡು ಸಲ ಆಪರೇಷನ್ ಮಾಡಿಸಿದರು, ಬೆರಳು ಸರಿ ಹೋಗಲಿಲ್ಲ. ಬೆರಳು ಪೂರ ಬೆಂಡ್ ಆಗೋದಿಲ್ಲ. ಬೆರಳು ಕಟ್ ಆದ ಮೂರು ವರ್ಷ ಕೊಳಲನ್ನು ನುಡಿಸಲು ಆಗುತ್ತಿರಲಿಲ್ಲ. ಆಗ ಕೊಳಲನ್ನು ತಯಾರಿ ಮಾಡವ ಬಗ್ಗೆ ವಿಚಾರ ಮಾಡ್ಕೊಂಡ್ವಿ. ಬೆರಳಿಗೆ ಪೆಟ್ಟಾಗಿದ್ದು ಕೊಳಲು ವಾದನದ ಜೊತೆಗೆ ಕೊಳಲನ್ನು ತಯಾರಿ ಮಾಡಲು ದಾರಿ ದೀಪವಾಯ್ತು. ನಾವು ಸತತವಾಗಿ ಆರು ವರ್ಷ ಬಿದಿರಿನ ಬಗ್ಗೆ ಶೋಧನೆ ಮಾಡಿ, 10,000ಕ್ಕೂ ಹೆಚ್ಚು ಕೊಳಲುಗಳ ಮೇಲೆ ಪ್ರಯೋಗ ಮಾಡಿ ವಿಫಲವಾಗಿ ಕೊನೆಗೆ ಯಶಸ್ವಿ ಆದ ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆವು. ಮೊದಲ ಒಂದೆರಡು ವರ್ಷ ಯಾವ ಯಾವ ಕ್ವಾಲಿಟಿ ಬಂಬುಗಳು ಸಿಗುತ್ತವೆ ಅದರ ಸುತ್ತ ಹುಡುಕಾಟ ಮಾಡಿದ್ವಿ. ಈಗ ಬಿದಿರನ್ನು ಉತ್ತರ ಪ್ರದೇಶದಿಂದ ತರಿಸುತ್ತಿದ್ದೇವೆ. ಅಸ್ಸಾಂನಲ್ಲಿ ಬಿದಿರನ್ನು ಹೆಚ್ಚು ಬೆಳೆಯುತ್ತಾರೆ. ಮೊದಲು ಶಿರಸಿಯಲ್ಲೂ ಸಿಗುತ್ತಿದ್ದವು. ಈಗ ಸಿಗುತ್ತಿಲ್ಲ. ಮೊದಲು ನಮ್ಮ ಕರ್ನಾಟಕದ ಶಿರಸಿ, ಕುಂದಾಪುರ, ಉಡುಪಿ, ಅಸ್ಸಾಂ, ಉತ್ತರ ಪ್ರದೇಶಕ್ಕೆ ಹೋಗಿ ನೋಡಿ ಅಲ್ಲಿನ ಬಿದಿರಿನ ಬಗ್ಗೆ ತಿಳಿದುಕೊಂಡು ಯಾವ ಬಿದಿರಿನಿಂದ ಸ್ವರಗಳು ಎಷ್ಟು ಚೆನ್ನಾಗಿ ಬರತ್ತೆ ಎನ್ನುವುದನ್ನು ಪರೀಕ್ಷಿಸುತ್ತಿದ್ದೆವು. ಉತ್ತರ ಪ್ರದೇಶದಿಂದ ಬರುತ್ತಿದ್ದ ಬಂಬುಗಳಿಗೆ ಹುಳುಗಳು ಆಗಲು ಪ್ರಾರಂಭವಾಯ್ತು. ನಂತರ ಅಸ್ಸಾಂಗೆ ಹೊದೆವು. ಅಲ್ಲಿ ಉತ್ತಮ ಗುಣಮಟ್ಟದ ಬಂಬುಗಳು ಸಿಗಲಾರಂಭಿಸಿದವು. ಇದರಲ್ಲಿ ಸಾವಿರ ನಮೂನೆ ಕೆಲಸ ಇದೆ‌. ಯಾವ ಸ್ವರ ಎಲ್ಲಿ ಬರಬೇಕು, ಬೆರಳು ಎಲ್ಲಿಡಬೇಕು. ಯಾವುದೇ ಒಂದು ಹಳೆಯ ಕೊಳಲು ಇದ್ದರೆ ಅದರದ್ದು ಏನು ಮಿಸ್ಟೇಕ್ ಮಾಡಿದ್ದೇವೆ ಇದರಲ್ಲಿ ಹೇಗೆ ಆ ತಪ್ಪನ್ನು ಸರಿ ಪಡಿಸಿಕೊಳ್ಳಬಹುದು. ರಂಧ್ರ ಸಣ್ಣ ಮಾಡಿದ್ರೆ ಏನಾಗತ್ತೆ, ದೊಡ್ಡದು ಮಾಡಿದ್ರೆ ಏನಾಗತ್ತೆ. ಮೇಲೆ ತಗೊಂಡ್ರೆ ಹೇಗಾಗತ್ತೆ, ಕೆಳಗೆ ತಗೊಂಡ್ರೆ ಏನಾಗತ್ತೆ. ರಂಧ್ರವನ್ನು ಕ್ರಾಸ್ ಹಾಕಿದ್ರೆ ಏನಾಗತ್ತೆ. ಪಾಲಿಶ್ ಪೇಪರ್ ತಗೊಂಡು ತಿಕ್ಕಿದ್ರೆ ಏನಾಗತ್ತೆ. ತಿಕ್ಕಲಿಲ್ಲ ಅಂದ್ರೆ ಏನಾಗತ್ತೆ ಹೀಗೆ ಪ್ರಯೋಗ ಮಾಡ್ತಾ ಮಾಡ್ತಾ ಆರು ವರ್ಷ ಅದರಲ್ಲೇ ಕಳೆದೆವು. ಪ್ರಯತ್ನ ಮಾತ್ರ ಬಿಡಲಿಲ್ಲ. ಕೊಳಲು ತಯಾರಿಕೆ ಪ್ರಾರಂಭಿಸಿ ಈಗ ಹನ್ನೆರಡು ವರ್ಷ ಆಗಿರಬಹುದು. ನಿಮ್ಮ ಕೈಗೆ ಚಿತ್ರ ಕೊಟ್ಟು ಅದನ್ನು ಬಿಡಿಸಿ ಅಂದ್ರೆ ನೀವು ಕೂಡ ಆರಾಮಾಗಿ ಬಿಡಿಸಬಹುದು. ಆದರೆ ಅದಕ್ಕೆ ಜೀವ ತುಂಬಬೇಕಲ್ಲ. ಅದಕ್ಕೇನು ಮಾಡಬೇಕು ಅಂತ ರೇಖಾಚಿತ್ರ ಹಾಕಿಕೊಂಡು ಒಂದೊಂದೆ ಮಾಡುತ್ತಾ ಹೋಗುತ್ತೇವೆ. ಅರ್ಧ ದಿನ ಬೇಕು ಒಂದು ಕೊಳಲನ್ನು ತಯಾರಿ ಮಾಡಲು. ಬಿದಿರನ್ನು ತಂದ ಮೇಲೆ ಹುಳ ತಿನ್ನಲಾರದಂತೆ ಅದಕ್ಕೆ ಬೇವಿನ ಎಣ್ಣೆ ಹಚ್ಚಿ ಒಣಗಿಸುತ್ತೇವೆ. ಅದನ್ನು ಮುಂಜಾನೆ ತೊಳೆದು ಸಂಜೆಯವರೆಗೆ ಗಾಳಿಯಲ್ಲಿ ಒಣಗಿಸುತ್ತೇವೆ. ಒಂದೇ ಅಳತೆಯ ಎಲ್ಲವನ್ನು ಬೇರ್ಪಡಿಸಿ ವರ್ಕ್ ಮಾಡಿ ಮನೆಗೆ ಒಯ್ಯುತ್ತೇವೆ. ಹೆಣ್ಣು ಮಕ್ಕಳು ಪಾಲಿಶ್ ಮಾಡಿ ಥ್ರೇಡಿಂಗ್ ಮಾಡುತ್ತಾರೆ. ಹಾಗೆ ನಮ್ಮ ನಿತ್ಯದ ಕೆಲಸ ನಡೆಯುತ್ತದೆ. ಕರ್ನಾಟಕ , ಬೇರೆ ರಾಜ್ಯಗಳಲ್ಲದೆ ಫ್ರಾನ್ಸ್, ಲಂಡನ್, ಅಮೇರಿಕ, ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಟ್ರೇಲಿಯಾ ಹೀಗೆ ಸುಮಾರು ಇಪ್ಪತ್ತೈದಕ್ಕಿಂತಲೂ ಹೆಚ್ಚು ದೇಶಗಳಿಗೆ ಕೊಳಲನ್ನು ರವಾನಿಸಿದ್ದಾರೆ. ಹೊರದೇಶಗಳಿಗೆ ಕಳುಹಿಸಲು ಅನುಕೂಲವಾಗಿದ್ದು ಸೋಶಿಯಲ್ ಮೀಡಿಯಾ ಫೇಸ್ಬುಕ್ ಪೇಜ್ ಫ್ಲ್ಯೂಟ್ ಮೇಕರ್ ರಾಘವ್ ಬದ್ದಿ ಎನ್ನುವ ಅಕೌಂಟ್ ಮೂಲಕ ಕೊಳಲು ನುಡಿಸುವ ವಿಡಿಯೋಗಳನ್ನು ಶೇರ್ ಮಾಡಿದೆವು. ಒಬ್ಬರಿಂದ ಒಬ್ಬರಿಗೆ ಮಾಹಿತಿ ಹಂಚಿಕೆಯಾಗಿ ಎಲ್ಲಾ ಕಡೆಯಿಂದಲೂ ಆರ್ಡರ್ ಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಅಪ್ಡೇಟ್ ಮಾಡುತ್ತ ಇರುತ್ತೇವೆ' ಎನ್ನುತ್ತಾರೆ ವಿಜಯ್. ಏನಾದರೂ ಮಾಡಲೇಬೇಕು ಅಂತ ಯಾವ ಗುರುವಿಲ್ಲದೆಯೇ ಪ್ರಯತ್ನವೊಂದನ್ನೇ ಮೊದಲಾಗಿಸಿಕೊಂಡು ಕೊಳಲ ತಯಾರಿಕೆಯಲ್ಲಿ ಹೀಗೆ ಯಶಸ್ಸನ್ನು ಕಂಡ ಛಲಗಾರರು ಈ ಅಣ್ಣ ತಮ್ಮಂದಿರು.

'ಸುಮಾರು 70-80 ವರ್ಷಗಳ ಕೆಳಗೆ ನಮ್ಮ ದೊಡ್ಡಪ್ಪ ವಿ. ಎನ್. ಬದ್ದಿ ಕೊಳಲನ್ನು ನುಡಿಸುತ್ತಿದ್ದರು. ಆಕಾಶವಾಣಿಗೆ ಹೋಗಿ ಕಾರ್ಯಕ್ರಮಗಳನ್ನು ಕೊಟ್ಟು ಬರುತ್ತಿದ್ದರು. ಆಗೆಲ್ಲ ನಮಗೆ ಕಲಿಯುವ ಆಸಕ್ತಿ ಇದ್ದರೂ ಅವಕಾಶ ಇರುತ್ತಿರಲಿಲ್ಲ. ಕೊಳಲು ಕಲಿಯಲು ದೊಡ್ಡಪ್ಪನೇ ಸ್ಫೂರ್ತಿ. ಆಗಾಗ ಸಮಯ ಸಿಕ್ಕಾಗ ಹೇಳಿ ಕೊಡುತ್ತಿದ್ದರು. ರಾಗ ಅಂದ್ರೆ ಏನು ಅನ್ನೋದನ್ನು ಇನ್ನೂ ಕಲಿತಿರಲಿಲ್ಲ. ಆಗಲೇ ತೀರಿಕೊಂಡರು. ಅಲ್ಲಲ್ಲಿ ಕೇಳಿ, ನೋಡಿ ಏನಾದರೂ ಮಾಡಿ ಕಲಿಯಬೇಕು ಎಂದು 18-19 ನೇ ವಯಸ್ಸಿಗೆ ನನ್ನ ಸ್ನೇಹಿತನೊಂದಿಗೆ ಮನೆ ಬಿಟ್ಟು ಮುಂಬೈಗೆ ಹೋಗಿದ್ದೆ. ಎಂಟು ದಿನ ಅಲ್ಲಿದ್ದೆ, ಊಟ ಮಾಡಲು, ಅಲ್ಲಿಂದ ಮನೆಗೆ ಬರಲು ಮತ್ತೆ ಹಣವಿರಲಿಲ್ಲ. ನಾವು ಕಲಿಯುವ ಸಲುವಾಗಿ ಹೋಗಿದ್ವಿ ಕಲಿಯದೆ ಬರೋಕೆ ಮನಸ್ಸಿರಲಿಲ್ಲ. ಹಾಗಾಗಿ ಹಣ ಹೆಚ್ಚು ತೆಗೆದುಕೊಂಡು ಹೋಗಿರಲಿಲ್ಲ. ಹರಿಪ್ರಸಾದ್ ಎಂಬ ವಿದ್ವಾಂಸರ ಬಳಿ ಕೊಳಲು ವಾದನವನ್ನು ಕಲಿಯಬೇಕು ಅಂತ ಹೋಗಿದ್ವಿ ಆದರೆ ಅವರ ವಿಳಾಸ ಗೊತ್ತಿಲ್ಲ. ಏಳು ದಿನವೂ ರೈಲ್ವೆ ಸ್ಟೇಷನ್ ನಲ್ಲಿ ಮಲಗಿದ್ದು ಕೊನೆಗೆ ಅವರ ವಿಳಾಸ ಪತ್ತೆ ಹಚ್ಚಿದ್ವಿ. ಅವರು ಪುಣೆಗೆ ಕಾರ್ಯಕ್ರಮಕ್ಕೆ ಹೋಗಿದ್ದರು. ನಂತರ ಮಾತಿಗೆ ಸಿಕ್ಕು ಇರೋಕೆ ವ್ಯವಸ್ಥೆ ಮಾಡಿಕೊಂಡು ಎರಡು ತಿಂಗಳು ಬಿಟ್ಟು ಬನ್ನಿ ಎಂದರು. ನಮಗೆ ಎಲ್ಲಿಲ್ಲದ ಸಂತೋಷ. ಮನೆಗೆ ಬಂದು ವಿಚಾರ ತಿಳಿಸಿದೆವು. ಆದರೆ ಮನೆಯಲ್ಲಿ ಮತ್ತೆ ಹೋಗಲು ಬಿಡಲಿಲ್ಲ. ಮನೆಯಲ್ಲಿ ನೀನೆ ಹಿರಿಯ ಮಗ ನೀನೆ ಹೋದರೆ ಹೇಗೆ ಎಂದು ಮಾತಿನಿಂದ ಕಟ್ಟಿ ಹಾಕಿದರು. ಅಲ್ಲಿಗೆ ಹೋಗಿ ಕೊಳಲು ವಾದನ ಕಲಿಯುವ ಕನಸು ಛಿದ್ರವಾಯ್ತು. ಹಾಗಂತ ಕಲಿಯುದನ್ನು ಬಿಡಲಿಲ್ಲ ಕಲಿತೆ. ರಾಗದ ಮೇಲೆ ಸ್ವರದ ಮೇಲೆ ವಿಚಾರ ಮಾಡಿ ಆಲಾಪ ಹೇಗೆ ಮಾಡಬೇಕು, ದಾಸರ ಪದಗಳು, ಕರ್ನಾಟಕ ಶಾಸ್ತ್ರೀಯ ಸಂಗೀತದ ಬೇಸಿಕ್ ಸ್ವರಗಳನ್ನು, ಧುನ್ ಟೈಪ್ ಛಂದಸ್ಸು ಎನ್ನುವುದನ್ನು ಹುಡುಕಿ ನುಡಿಸುತ್ತೇವೆ. ನನಗೆ ಸಾಥ್ ಆಗಿ ವಿಜಯ್ ತಬಲ ಜೂನಿಯರ್ ನುಡಿಸುತ್ತಾರೆ. ದೊಡ್ಡಪ್ಪ ಅವರಿಂದ ಈ ಆಸಕ್ತಿ ಹುಟ್ಟಿಸಿಕೊಂಡದ್ದು. ದೊಡ್ಡಪ್ಪ ಎಂತಹ ಹಳೆಯ ಕೊಳಲಿದ್ದರೂ ನುಡಿಸಿತ್ತಿದ್ದರು. ಅವರು ಹಳೇ ಮಂದಿ. ಈಗಿನವರಿಗೆ ನಾಜೂಕು ಇರಬೇಕು' ಎನ್ನುತ್ತಾರೆ ರಾಘವ್.

ದಿನಕ್ಕೆ ಎರಡು, ಮೂರು ಕೊಳಲನ್ನು ತಯಾರಿ ಮಾಡುವ ಇವರು ತುಂಬ ಮಾಧುರ್ಯವಾಗಿ ಕೊಳಲನ್ನು ನುಡಿಸುತ್ತಾರೆ. ಇವರ ಕೊಳಲವಾದನವನ್ನು ಕೇಳುತ್ತಿದ್ದರೆ ಮೈಮರೆತು ಕೊಳಲಿನ ನಾದದೊಂದಿಗೆ ಲೀನಾವಾಗುವುದಂತೂ ಸತ್ಯ. ಕೊಳಲ ತಯಾರಿಕೆ ಜೊತೆಗೆ ನುಡಿಸುವುದರಿಂದ ಇವರು ತಯಾರಿ ಮಾಡುವ ಕೊಳಲನ್ನು ಎಲ್ಲರೂ ಇಷ್ಟಪಡುತ್ತಾರೆ. ಕೊಳಲಿನ ಜೊತೆಗೆ ತಬಲ ನುಡಿಸುವುದು ಕೂಡ ಈ ಅಣ್ಣ ತಮ್ಮಂದಿರ ವಿಶೇಷತೆ. ಇಲ್ಲಿಯವರೆಗೆ ಸುಮಾರು 30,000ಕ್ಕೂ ಹೆಚ್ಚು ಕೊಳಲನ್ನು ತಯಾರಿಸಿದ ಕೀರ್ತಿ ಈ ಅಣ್ಣ ತಮ್ಮಂದಿರಿಗೆ ಸಲ್ಲುತ್ತದೆ. ಭಾರತದಲ್ಲಿ ಅತಿಹೆಚ್ಚು ಕೊಳಲು ತಯಾರಿಸುವ ಮೊದಲ ಐದು ಜನರಲ್ಲಿ ಎರಡನೇ ಸ್ಥಾನದಲ್ಲಿ ನಮ್ಮ ರಾಘವ್ ಇದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ. ರಾಘವ್ ಅವರು ರಾಷ್ಟ್ರಮಟ್ಟದ ಕಲಾವಿದರು. ಧಾರಾವಾಹಿ, ಆಲ್ಬಮ್ ಸಾಂಗ್ ಸ್ಟುಡಿಯೋಗಳಲ್ಲಿ ಸಾಕಷ್ಟು ರೆಕಾರ್ಡಿಂಗ್ ಮಾಡಿದ್ದಾರೆ. ಆರು ವರ್ಷಗಳ ಸತತ ಪ್ರಯತ್ನ, 10,000ಕ್ಕೂ ಹೆಚ್ಚು ಕೊಳಲುಗಳು ಹಾಳಾದರೂ ಅದರಲ್ಲಿಯೇ ಪ್ರಯೋಗ ಮಾಡ್ತಾ ಕೊನೆಗೂ ಯಶಸ್ವಿಯಾದ ಈ ಸಂಗೀತ ಪ್ರೇಮಿಗಳ ಕಲಾಸಕ್ತಿಗೆ ಹ್ಯಾಟ್ಸ್ ಆಫ್.... ಅವಕಾಶ ಪಡೆಯುವವನು ಅದೃಷ್ಟವಂತ. ಅವಕಾಶ ಸೃಷ್ಟಿಸಿಕೊಳ್ಳುವವನು ಬುದ್ಧಿವಂತ. ಅದೃಷ್ಟವನ್ನು ಕಾಯಬೇಕಾ? ಬುದ್ಧಿವಂತರಾಗಬೇಕಾ ಆಯ್ಕೆ ನಮ್ಮಲ್ಲೇ ಇರುತ್ತದೆ ಎನ್ನುವುದಕ್ಕೆ ಈ ಸಹೋದರರು ಉದಾಹರಣೆಯಾಗಿದ್ದಾರೆ.

ಧನ್ಯವಾದಗಳೊಂದಿಗೆ
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...