Date: 09-10-2022
Location: ಬೆಂಗಳೂರು
ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ಎನ್ನುವ ಲಕ್ಷ್ಮಿ ಅವರ ಜ್ಞಾನ ಸಂಪಾದನೆ, ತಿಳುವಳಿಕೆಗೆ, ಪರೋಪಕಾರಕ್ಕೆ ದೊಡ್ಡ ನಮಸ್ಕಾರ ಎನ್ನುತ್ತಾರೆ ಲೇಖಕಿ ಜ್ಯೋತಿ ಎಸ್. ಅವರು ತಮ್ಮ ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಗಿಡಮೂಲಿಕೆ ಔಷಧ ಕೊಡುವ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ದೇವದೋಣಗಾರದ ಐವತ್ತೇಳು ವರ್ಷದ ಲಕ್ಷ್ಮಿ ನಾರಾಯಣ ಸಿದ್ದಿಯವರ ಬಗ್ಗೆ ಬರೆದಿದ್ದಾರೆ.
ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಮತ್ತು ಅತ್ಯಂತ ಪ್ರಮುಖ ಆರೋಗ್ಯ ಪದ್ಧತಿ ನಮ್ಮ ಆಯುರ್ವೇದ. ವಿದೇಶಿ ವೈದ್ಯಕೀಯ ವ್ಯವಸ್ಥೆ ಕಣ್ಬಿಡುವ ಮೊದಲೇ ತಲೆತಲಾಂತರದಿಂದ ಆಯುರ್ವೇದ ನಮ್ಮ ಭಾರತೀಯ ಜೀವನ ಪದ್ಧತಿಯಲ್ಲಿ ಹಾಸುಹೊಕ್ಕಾಗಿತ್ತು. ಆದರೆ ದಾಖಲೀಕರಣ, ಆಸಕ್ತಿಯ ಕೊರತೆ, ಮತ್ತು ಅದರೆಡೆಗಿನ ನಿರ್ಲಕ್ಷ್ಯದಿಂದಾಗಿ ಬಹು ಅಮೂಲ್ಯವಾದ ಪರಂಪರೆಯಿಂದ ದೂರಾಗುತ್ತಿದ್ದೇವೆ. ಪ್ರಾಚೀನ ತಜ್ಞರಿಂದ ಇಲ್ಲಿಯವರೆಗೆ ಅಸಂಖ್ಯರು ಅವರಲ್ಲಿನ ಆಯುರ್ವೇದ ಜ್ಞಾನದ ಫಲವನ್ನು ಸಮಾಜಕ್ಕೆ ಹಂಚುತ್ತ ಬಂದಿದ್ದಾರೆ. ಅದರಲ್ಲಿ ಎಷ್ಟೋ ಜನ ಇಂದಿಗೂ ಎಲೆಮರೆಯ ಕಾಯಿಯಂತಿದ್ದಾರೆ. ಅಂತಹದ್ದೇ ಒಂದು ವ್ಯಕ್ತಿತ್ವದ ಪರಿಚಯ ಇಂದಿನ ನಿಮ್ಮ ಓದಿಗೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ದೇವದೋಣಗಾರದ ಐವತ್ತೇಳು ವರ್ಷದ ಲಕ್ಷ್ಮಿ ನಾರಾಯಣ ಸಿದ್ದಿಯವರು ನಮ್ಮ ಪ್ರಕೃತಿಯಲ್ಲಿ ಸಿಗುವ ಔಷಧೀಯ ಸಸ್ಯಗಳಿಂದ ಎಲೆ, ಪುಷ್ಪ, ಬೀಜ, ಬೇರು ಇತ್ಯಾದಿಗಳನ್ನು ಬಳಸಿಕೊಂಡು ಹಲವಾರು ಕಾಯಿಲೆಗಳನ್ನು ಗುಣಪಡಿಸಿದ್ದಾರೆ. ಸುಮಾರು ವರ್ಷಗಳಿಂದಲೂ ಗಿಡಮೂಲಿಕೆಗಳಿಂದ ಆಯುರ್ವೇದ ಔಷಧಿಗಳನ್ನು ತಯಾರಿಸಿ ಚಿಕಿತ್ಸೆ ಕೊಡುತ್ತ ಬಂದಿದ್ದಾರೆ.
ಲಕ್ಷ್ಮಿ ಸಿದ್ದಿಯವರು ತಮಗೆ ತಿಳಿದಿರುವ ಔಷಧ ವಿಧಾನ ಮತ್ತು ಜ್ಞಾನದಿಂದ ಸಕ್ಕರೆ ಕಾಯಿಲೆ, ಜಾಂಡೀಸ್, ಮೂಲವ್ಯಾಧಿ, ಕಫ, ಅಸ್ತಮಾ, ಮಕ್ಕಳಾಗದವರಿಗೆ, ನರದಗಂಟು, ಸರ್ಪಸುತ್ತು, ಮಂಡಿನೋವು, ಸೊಂಟನೋವು, ಕೈ ಕಾಲು ಮುರಿದವರಿಗೆ... ಹೀಗೆ ತಮ್ಮಲ್ಲಿ ಬರುವವರಿಗೆ ಆಯುರ್ವೇದ ಔಷಧಿಗಳನ್ನು ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾರೆ. ಇವರ ವಿಶೇಷತೆ ಎಂದರೆ ಇವರು ಕೊಡುವ ಯಾವ ಔಷಧಿಗೂ ಹಣ ತೆಗೆದುಕೊಳ್ಳುವುದಿಲ್ಲ. ಇವರಲ್ಲಿಗೆ ಬರುವ ರೋಗಿಗಳು ಗುಣಮುಖರಾಗಿ ಮಂದಹಾಸದ ನಗುವನ್ನು ಬೀರಿ ಈಗ ನಾನು ಆರಾಮವಾಗಿದ್ದೇನೆ ಎಂದರೆ ಅದೇ ನನ್ನ ಖುಷಿ ಎನ್ನುವ ಇವರ ಬದುಕು ಅವರ ಮಾತುಗಳಲ್ಲಿ ನಿಮ್ಮ ಓದಿಗಾಗಿ.
'ನಮ್ಮ ತಂದೆ ತಾಯಿಗೆ ಆರು ಜನರು ಮಕ್ಕಳು. ಅದರಲ್ಲಿ ನಾಲ್ಕನೆಯವಳು ನಾನು. ಮೊದಲು ನಮ್ಮ ತಂದೆಯವರು ಆಯುರ್ವೇದ ಔಷಧಿಯನ್ನು ಕೊಡುತ್ತಿದ್ದರು. ಎಷ್ಟು ವರ್ಷದ ಹಳೆಯ ನೋವುಗಳಿದ್ದರೂ ಮಸಾಜ್ ಮಾಡಿ ಶಾಖ ಕೊಟ್ಟು ಗುಣಪಡಿಸುತ್ತಿದ್ದರು. ಇಂತಹ ಗಿಡಮೂಲಿಕೆ ಇಂತಹ ಔಷಧಿಗೆ ಬರುತ್ತದೆ ಎಂದು ಅಪ್ಪ ನನಗೆ ಹೇಳಿಕೊಟ್ಟಿದ್ದರು. ಅದನ್ನು ನೋಡಿಕೊಂಡು ಅವರ ಜೊತೆ ಜೊತೆಗೆ ನಾನು ಅಪ್ಪ ಕೊಡುತ್ತಿದ್ದ ಎಲ್ಲ ಔಷಧಿ, ಬೇರುಗಳ ಮಾಹಿತಿಯನ್ನು ತಿಳಿದುಕೊಂಡೆ. ಚಿಕ್ಕವಳಿರುವಾಗಿನಿಂದಲೇ ನಾನು ಕೂಡ ಔಷಧಿ ಕೊಡುತ್ತಿದ್ದೆ. ಅಪ್ಪನ ಮರಣಾ ನಂತರ ನಾನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ನಾನು ಗಿಡಮೂಲಿಕೆಗಳನ್ನು ಬೆಟ್ಟದಿಂದ ಅಗಿದು ಕಿತ್ತು ತರುತ್ತೇನೆ. ನಂತರ ಕಲ್ಲಿನಿಂದ ಬೀಸಿ ಅವರವರ ಕಾಯಿಲೆಗಳಿಗೆ ಸಂಬಂಧಪಟ್ಟಂತೆ ಔಷಧಿಗಳನ್ನು ಕೊಡುತ್ತೇನೆ. ಒಂದು ತಿಂಗಳ ಶಿಶುವಿನಿಂದ ಹಿಡಿದು ಎಂಭತ್ತು ವರ್ಷದ ವೃದ್ಧರವರೆಗೆ ಮದ್ದು ಕೊಡುತ್ತೇನೆ. ಸಾವಿರಾರು ಜನರು ನನ್ನ ಹತ್ತಿರ ಬಂದು ಔಷಧಿ ತೆಗೆದುಕೊಂಡು ಗುಣಮುಖರಾಗಿದ್ದಾರೆ'.
'ಒಮ್ಮೆ ಭಟ್ಟರ ಮನೆಯಲ್ಲಿ ಸುಮಾರು ತಿಂಗಳಿನಿಂದ ಹಾಸಿಗೆ ಹಿಡಿದು, ಮಲಮೂತ್ರ ಎಲ್ಲ ಹಾಸಿಗೆಯಲ್ಲಿ ಮಾಡಿಕೊಳ್ಳುತ್ತಿದ್ದ ಎಂಭತ್ತು ವರ್ಷದ ಅಜ್ಜನನ್ನು ನೋಡಲು ನನ್ನನ್ನು ಕರೆದುಕೊಂಡು ಹೋದರು. ನಾನು ಹೋಗಿ ನೋಡಿ ಮಸಾಜ್ ಮಾಡಿ ಶಾಖ ಕೊಡುತ್ತ ಬಂದೆ. ಸ್ವಲ್ಪ ದಿನದಲ್ಲೇ ಅವರು ಎದ್ದು ಕೂತು ಓಡಾಡಲು ಆರಂಭಿಸಿದರು. ಮನೆ ಮಂದಿಗೆಲ್ಲಾ ಖುಷಿಯಾಯಿತು. ಈಗ ಆ ಭಟ್ಟರು ಮದುವೆ, ಮುಂಜಿ, ನಾಮಕರಣ ಅಂತ ಎಲ್ಲಾಕಡೆ ಓಡಾಡಿಕೊಂಡು ಚೆನ್ನಾಗಿದ್ದಾರೆ. ಹನ್ನೆರಡು ವರ್ಷದಿಂದ ಒಬ್ಬ ದಂಪತಿಗೆ ಮಕ್ಕಳಿರಲಿಲ್ಲ ನನ್ನಲ್ಲಿ ಔಷಧಿಗಾಗಿ ಬಂದರು. ಔಷಧಿ ತೆಗೆದುಕೊಂಡ ನಂತರ ಈಗ ಅವರಿಗೆ ಐದು ತಿಂಗಳ ಮಗುವಿದೆ. ಮೊದಲು ಕಾಯಿಲೆ ಬಂದವರು ಏನಾಗಿದೆ ಎನ್ನುವುದನ್ನು ನಾಚಿಕೊಳ್ಳದಂತೆ ಸ್ಪಷ್ಟವಾಗಿ ಹೇಳಬೇಕು. ಕೆಲವರಿಗೆ ಮುಟ್ಟು ಹೆಚ್ಚಾಗಿರುತ್ತದೆ, ಇನ್ನೂ ಕೆಲವರಿಗೆ ಬಿಳಿ ಮುಟ್ಟು ಹೋಗುತ್ತದೆ ಹೀಗೆ ಗೌಪ್ಯ ಸಮಸ್ಯೆಗಳಿರುತ್ತವೆ. ಏನಾಗಿದೆ ಎನ್ನುವುದನ್ನು ಹೇಳಿಕೊಂಡರೆ ನನ್ನಿಂದ ಸಾಧ್ಯವಾದಷ್ಟು ಸರಿಯಾದ ಔಷಧಿ ಕೊಡುತ್ತೇನೆ. ಹೇಳದಿದ್ದರೆ ನನಗೆ ಗೊತ್ತಾಗುವುದಿಲ್ಲ. ನಾನು ಔಷಧಿ ಕೊಡುವ ವಿಷಯ ಬಾಯಿಂದ ಬಾಯಿಗೆ ಹರಡಿ ಅಂಕೋಲ, ಕಾರವಾರ, ಮಂಚಿಕೆರೆ, ಹುಬ್ಬಳ್ಳಿ, ಶಿರಸಿ, ಶಿವಮೊಗ್ಗ, ಬೆಳಗಾವಿ, ಯಲ್ಲಾಪುರ ಇನ್ನೂ ಬಹಳ ದೂರದಿಂದೆಲ್ಲ ಬರುತ್ತಾರೆ. ರೋಗಿಗಳು ಬರಲು ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ ಅವರು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಆಗ ರೋಗಿಗೆ ಏನಾಗಿದೆ ಎಂದು ನೋಡಿ ಔಷಧಿ ಕೊಟ್ಟು ಬರುತ್ತೇನೆ. ನಿಮ್ಮ ಕೈ ಗುಣದಿಂದ ಕಾಯಿಲೆ ವಾಸಿಯಾಗಿದೆ ಎಂದು ಹಲವರು ಖುಷಿಯಿಂದ ನಮಸ್ಕಾರ ಮಾಡಿ ಸೀರೆಗಳನ್ನು ತಂದುಕೊಟ್ಟು ಹೋಗುತ್ತಾರೆ. ನಾವು ಯಾವುದೇ ಕೆಲಸವನ್ನು ಮನಸ್ಸಿಟ್ಟು ಶ್ರದ್ಧೆಯಿಂದ ಮಾಡಿದರೆ ಜ್ಞಾನ ತಂತಾನೆ ವೃದ್ಧಿಯಾಗುತ್ತದೆ. ನನ್ನ ಕೈಲಾದಷ್ಟು ಸೇವೆ ಮಾಡಬೇಕು ಎನ್ನುವುದು ನನ್ನ ಗುರಿ. ಈ ನನ್ನ ಕೆಲಸಕ್ಕೆ ಕುಟುಂಬದ ಎಲ್ಲರ ಸಹಕಾರ ಇದೆ' ಎನ್ನುತ್ತಾರೆ ಲಕ್ಷ್ಮಿ.
ಔಷಧಿಗಾಗಿ ಮನೆಗೆ ಬಂದವರಿಗೆ ತಮ್ಮ ಮನೆಯ ಒಂದು ಕೋಣೆಯಲ್ಲಿ ಮಸಾಜ್ ಮಾಡುತ್ತಾರೆ. ಪ್ರತೀದಿನ ಇವರಲ್ಲಿಗೆ ಜನರು ಎಲ್ಲೆಲ್ಲಿಂದಲೋ ಔಷಧಿಗಾಗಿ ಬರುತ್ತಾರೆ. ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ಎನ್ನುವ ಲಕ್ಷ್ಮಿ ಅವರ ಜ್ಞಾನ ಸಂಪಾದನೆ, ತಿಳುವಳಿಕೆಗೆ, ಪರೋಪಕಾರಕ್ಕೆ ದೊಡ್ಡ ನಮಸ್ಕಾರ. ಲಾಭದ ಆಸೆಯಿಂದ ಆಯುರ್ವೇದದ ಹೆಸರಿನಲ್ಲಿ ಜನರ ಆರೋಗ್ಯ, ಸಮಯ, ಹಣ ಪೋಲು ಮಾಡಿ ಮೋಸ ಮಾಡುವ ನಕಲಿಗಳ ಮಧ್ಯೆ ಇವರು ಮಾಡುತ್ತಿರುವ ಈ ಕಾರ್ಯ ಪೂಜೆಗರ್ಹವಾದದ್ದು. ಇವರ ಬದುಕು ಅನುದಿನ ಖುಷಿ, ಸುಖ, ಪ್ರೀತಿಯಿಂದ ತುಂಬಿರಲಿ. ಇಂಥವರ ಸಂತತಿ ಸಾವಿರವಾಗಲಿ.
ಇತ್ತೀಚೆಗೆ ಅತಿಯಾದ ಸ್ವಾರ್ಥಪರತೆ ಆಧುನಿಕತೆಯ ಪ್ರಭಾವದಿಂದಾಗಿ ಕಾಡುಗಳಲ್ಲಿನ ಅತ್ಯಮೂಲ್ಯ ಸಂಪತ್ತು ನಾಶವಾಗುತ್ತಿದೆ. ಈ ಮೂಲಕ ನಾವು ಬರೀ ಗಿಡಮರಗಳನ್ನು ಕಳೆದುಕೊಳ್ಳುತ್ತಿಲ್ಲ ಬದಲಿಗೆ ಆಯುರ್ವೇದದಂತಹ ನಮ್ಮ ಭವ್ಯ ಪರಂಪರೆ, ಉತ್ತಮ ಜೀವನ ಪದ್ಧತಿ, ವೈದ್ಯಕೀಯ ವ್ಯವಸ್ಥೆ, ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ.
ಮಹತ್ವದ ನಮ್ಮ ಈ ಸಂಸ್ಕೃತಿಯನ್ನ ತಿಳಿದುಕೊಂಡು ಅದರ ಸದ್ಬಳಕೆಯೊಂದಿಗೆ ಅದನ್ನು ಉಳಿಸಿ ಬೆಳೆಸುವ ಮತ್ತು ಈ ಆಯುರ್ವೇದ ಜ್ಞಾನವನ್ನು ಮುಂದಿನ ಪೀಳಿಗೆಗೆ ಜತನದಿಂದ ದಾಟಿಸುವ ಜವಾಬ್ದಾರಿ ನಮ್ಮದೇ. ಸರ್ಕಾರ, ವಿಶ್ವವಿದ್ಯಾಲಯಗಳು ಆಯುರ್ವೇದದ ಬಗ್ಗೆ ಸಂಶೋಧನೆ ಹಾಗೂ ಅಧ್ಯಯನ ಮಾಡುವಲ್ಲಿ ಜನರಿಗೆ ತಲುಪಿಸುವಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಬೇಕು.
-ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.