ಆಯ್ದಕ್ಕಿ ಕಾಯಕ ಎಂದರೇನು?

Date: 20-10-2022

Location: ಬೆಂಗಳೂರು


ನೂರಾರು ಸಾವಿರಾರು ಜನರಿಗೆ ಮಹಾಮನೆಯಲ್ಲಿ ದಾಸೋಹ ಮಾಡುವಾಗ ಹಾಗೆ ಕುಟ್ಟಿಕೊಡುವುದು ಮತ್ತು ಕೇರಿ ಎಗ್ಗಲಿಸಿ ಮಾಡಿಕೊಡುವುದು ಒಂದು ಕಾಯಕ ಆಗಿ ಹಿಂದೆ ಇದ್ದಿರಬಹುದು. ಗಂಡಸರೂ ಈ ಕಾಯಕ ಮಾಡುತ್ತಿದ್ದಿರಬಹುದು ಎನ್ನುತ್ತಾರೆ ಲೇಖಕ ರಾಮಲಿಂಗಪ್ಪ ಟಿ ಬೇಗೂರು. ಅವರು ತಮ್ಮ ನೀರು ನೆರಳು ಅಂಕಣದಲ್ಲಿ ಆಯ್ದಕ್ಕಿ ಕಾಯಕ ಎಂಬುದು ನಿಜವಾಗಿಯೂ ಏನು ಎಂಬುದನ್ನು ಚರ್ಚಿಸಿದ್ದಾರೆ.

ಬಸವಾದಿ ಶರಣರ ಸಮಕಾಲೀನರಾದ ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ಇವರ ಹೆಸರಿನಲ್ಲೆ ಆಯ್ದಕ್ಕಿ ಕಾಯಕದ ಉಲ್ಲೇಖವಿದೆ. ಇವರÀ ಕಾಯಕವನ್ನು ಚೆಲ್ಲಿದ ಅಕ್ಕಿಯನ್ನು ಆಯ್ದು ತರುವ ಕಾಯಕ ಎಂದೇ ಬಿಂಬಿಸಲಾಗಿದೆ ಮತ್ತು ನಂಬಿಸಲಾಗಿದೆ. ಮಾರಯ್ಯನ ಕಾಯಕದ ಬಗ್ಗೆ ಗೂಳೂರು ಸಿದ್ಧಲಿಂಗಯತಿಯ ಶೂನ್ಯಸಂಪಾದನೆಯ ಮಾರಯ್ಯಗಳ ಸಂಪಾದನೆಯಲ್ಲಿ ಹೀಗೆ ಹೇಳಲಾಗಿದೆ. ಅದೆ ಸಂಗತಿಯನ್ನೆ ನಂಬಿ ಆಧುನಿಕ ವಿದ್ವಾಂಸರೂ ಆಯ್ದಕ್ಕಿ ಕಾಯಕ ಎಂದರೆ ಚೆಲ್ಲಿಹೋಗಿರುವ ಅಕ್ಕಿಯನ್ನು ಆಯ್ದು ತರುವ ಕಾಯಕ ಎಂದೆ ಮಂಡಿಸಿ, ಮರುಮಂಡಿಸಿರುವುದರಿಂದ ನಾವೆಲ್ಲರೂ ಆದನ್ನೆ ನಂಬಿದ್ದೇವೆ. ಆದರೆ ಇದು ಸತ್ಯವಲ್ಲ.

ಯಾರು, ಎಲ್ಲಿ ಚೆಲ್ಲಿರುವ ಅಕ್ಕಿಯನ್ನು ಈತ ಆಯ್ದು ತರುತ್ತಿದ್ದ ಎಂದರೆ ಗುಮ್ಮಳಾಪುರದ ಸಿದ್ಧಲಿಂಗ ಯತಿಯ ಶೂನ್ಯಸಂಪಾದನೆಯ ಪ್ರಕಾರ ಬಸವಣ್ಣನ ಮನೆಯ ಅಂಗಳದಲ್ಲಿ (ಶರಣರ ಮನೆಯ ಅಂಗಳದಲ್ಲಿ) ಚೆಲ್ಲಿರುತ್ತಿದ್ದ ಅಕ್ಕಿಯನ್ನು ಆತ ಆಯ್ದು ತರುತ್ತಿದ್ದ. ಹಾಗೆ ಯಾರಾದರೂ ಅಕ್ಕಿಯನ್ನು ಏಕೆ ಚೆಲ್ಲುತ್ತಾರೆ?! ಅಕ್ಕಿ ಆರಿಸುವುದು, ಅಕ್ಕಿ ಮಾಡುವುದು ಎಂಬ ನುಡಿಗಳಿಗೆ ನಮ್ಮಲ್ಲಿ ಇಂದಿಗೂ ಅಕ್ಕಿಯನ್ನು ಒಪ್ಪ ಮಾಡುವುದು, ಹಸನು ಮಾಡುವುದು ಎಂದೇ ಅರ್ಥವಿದೆ. ಆಯ್ದಕ್ಕಿ ಮಾರಯ್ಯನ ಕಾಯಕ ಅಂಗಳದಲ್ಲಿ ಚೆಲ್ಲಿರುವ ಅಕ್ಕಿಯನ್ನು ಆರಿಸಿಕೊಂಡು ಬರುವುದೋ ಅಥವಾ ಅಕ್ಕಿಯನ್ನು ಹಸನು ಮಾಡುವ ಕಾಯಕವೋ?

ಗುಮ್ಮಳಾಪುರದ ಯತಿಯ ಮೂರನೆ ಶೂನ್ಯಸಂಪಾದನೆಯಲ್ಲಿ ಉಲ್ಲೇಖ ಆಗಿರುವ ಲಕ್ಕಮ್ಮನ ಒಂದು ವಚನದಲ್ಲಿ ‘ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ, ಇದು ನಿಮ್ಮ ಮನವೋ ಬಸವಣ್ಣನ ಅನುಮಾನದ ಚಿತ್ತವೋ? ಈ ಮಾತು ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ಸಲ್ಲದ ಬೋನ...’ ಎನ್ನಲಾಗಿದೆ. ಅಂದರೆ ಬಸವಣ್ಣನು ಮಾರಯ್ಯನ ಚಿತ್ತಶುದ್ಧಿಯನ್ನು ಶಂಕಿಸುವಂತೆ ಆಗಬಾರದು ಎಂಬ ಎಚ್ಚರ ಈ ವಚನದಲ್ಲಿದೆ. ಈಕೆಯ ಇನ್ನೊಂದು ವಚನದಲ್ಲಿ ‘ಆಯ್ದಿಹೆನೆಂಬ ಕಾಯಕದ ಅರಿಕೆ ಹಿಂಗಿತೆ? ನಾ ಮಾಡಿಹೆನೆಂಬ ತವಕ ಹಿಂಗಿತೆ? ಉಭಯದ ಕೈಕೂಲಿ ಹಿಂಗಿ, ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ಅಲಸಿಕೆಯಾಯಿತು’ ಎನ್ನಲಾಗಿದೆ. ಮತ್ತೊಂದು ವಚನದಲ್ಲಿ ‘ಮಾಡಿ ನೀಡಿ ಹೋದೆನೆಂಬಾಗ ಕೈಲಾಸವೇನು ಕೈಕೂಲಿಯೇ’ ಎನ್ನಲಾಗಿದೆ. ಅಂದರೆ ಎರಡು ಮೂರು ಕಡೆ ಆಯ್ದಕ್ಕಿ ಕಾಯಕಕ್ಕೆ ಕೂಲಿ ಪಡೆಯುವ ಪ್ರಸ್ತಾಪ ಈಕೆಯ ವಚನಗಳಲ್ಲಿ ಬರುತ್ತದೆ. ಅಂಗಳದಲ್ಲಿ ಚೆಲ್ಲಿರುವ ಅಕ್ಕಿಯನ್ನು ಈತ ತನಗಾಗಿ ಆರಿಸಿಕೊಂಡು ಹೋದರೆ ಅದಕ್ಕಾಗಿ ಅವರು ಈತನಿಗೆ ಕೂಲಿ ಏತಕ್ಕೆ ಕೊಡಬೇಕು? ಇದು ಕೂಲಿ ಕೊಟ್ಟು ಮಾಡಿಸುವ ಕೆಲಸವೇ? ಹಾಗಾದರೆ ಆಯ್ದಕ್ಕಿ ಕಾಯಕ ಎಂದರೆ ಅಕ್ಕಿಯನ್ನು ಹಸನು ಮಾಡುವ ದುಡಿಮೆ ಎಂತಲೇ ಎನ್ನಬೇಕಾಗುತ್ತದೆ. ಆಯ್ದಿಹೆನೆಂಬ ಕಾಯಕದ ಅರಿಕೆ ಹಿಂಗಿತೆ ಅಂದರೆ (ಬಾಯಾರಿಕೆ-ದಾಹ ಹಿಂಗಿತೆ ಎಂಬಂತೆ) ದುಡಿಮೆಯ ಆಸೆಗೆ ಕೊನೆ ಎಂಬುದುಂಟೆ ಎಂಬ ಪ್ರಶ್ನೆ. ಈಕೆಯ ವಚನ ಬಹಳ ಸ್ಪಷ್ಟವಾಗಿ ದುಡಿಮೆ ಮತ್ತು ಗಳಿಕೆಗೆ ಒಂದು ಮಿತಿ ಎನ್ನುವುದು ಇರಬೇಕು ಎಂದೇ ಹೇಳುತ್ತಿದೆ. ಅಂದರೆ ಮಾರಯ್ಯನದು ಬಿಟ್ಟಿ ಹೊಟ್ಟೆ ಹೊರೆಯುವ ಚಾಕರಿ ಖಂಡಿತಾ ಅಲ್ಲ.

ಶಿವಗಣಪ್ರಸಾದಿ ಮಹದೇವಯ್ಯನದೆ ಮೊತ್ತಮೊದಲ ಶೂನ್ಯಸಂಪಾದನೆ (ಸು.ಕ್ರಿ.ಶ. 1400). ಎರಡನೆಯದು ಹಲಗೆಯಾರ್ಯನದು. ಮೂರನೆಯ ಶೂನ್ಯಸಂಪಾದನಕಾರ ಗುಮ್ಮಳಾಪುರದ ಸಿದ್ಧಲಿಂಗಯತಿ (ಸು.ಕ್ರಿ.ಶ. 1600) ಮೊದಲಿಗೆ ಸಿದ್ಧಲಿಂಗಯತಿ ತನ್ನ ಸಂಪಾದನೆಯಲ್ಲಿ ಅದುವರೆಗೆ ಇಲ್ಲದಿದ್ದ ಆಯ್ದಕ್ಕಿ ಮಾರಯ್ಯಗಳ ಸಂಪಾದನೆಯನ್ನು ಕಲ್ಪಿಸಿ ಸೇರಿಸುತ್ತಾನೆ. ಆನಂತರದ ಗೂಳೂರು ಸಿದ್ಧವೀರಣ್ಣ ಅದನ್ನು ಮತ್ತಷ್ಟು ವಿಸ್ತರಿಸುತ್ತಾನೆ. ಸಿದ್ಧಲಿಂಗಯತಿಯು ಹೇಳುವಂತೆ ‘ಈ ಹೀಗೆಂದು ಲಕ್ಕಮ್ಮಗಳು ಆಯ್ದಕ್ಕಿಯ ಮಾರಯ್ಯಗಳ ಕಾಯಕಕ್ಕೆ ಕರೆಯಲು ಆ ಮಾರಿತಂದೆಗಳು ಸಂತೋಷಚಿತ್ತರಾಗಿ ದಳದಳನೆ ಬಸವೇಶ್ವರನ ಅಂಗಳಕ್ಕೆ ಬಂದು ಅಲ್ಲಿ ಚೆಲ್ಲಿರ್ದ ತಂಡುಲವಂ ಪಿರಿದಾಗಿ ಆಯ್ದು ತರಲು ಅದು ಆಸೆಯೆಂದು ಲಕ್ಕಮ್ಮಗಳು ವಿಡಂಬಿಸುವ ಪ್ರಸ್ತಾವದ ವಚನ’. (ನೋಡಿ; ಪ್ರಭುದೇವರ ಶೂನ್ಯಸಂಪಾದನೆ ಅನುಬಂಧ-3: ಸಂ.ಎಲ್.ಬಸವರಾಜು. ಪುಟ 321. ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಗುಲಬರ್ಗಾ, 2004). ಇಲ್ಲಿ ಮಾರಯ್ಯನು ಬಸವಣ್ಣನ ಅಂಗಳದಲ್ಲಿ ಚೆಲ್ಲಿದ್ದ ಅಕ್ಕಿಯನ್ನು ಹೆಚ್ಚಾಗಿ ಆಯ್ದುಕೊಂಡು ತಂದನೆಂದೂ ಆತನ ದುರಾಸೆಗೆ ಲಕ್ಕಮ್ಮನು ರೇಗಿ ಅವನ್ನು ವಾಪಸು ಅಲ್ಲೆ ಸುರಿದು ಬಾ ಎಂದಳೆಂದೂ, ಅರಸನಿಗೆ ಆಸೆ ಇರಬೇಕೇ ವಿನಹ ಭಕ್ತರಿಗೆ ಆಸೆ ಇರಬಾರದು, ಧನಕ್ಕೆ ಬಡತನ ಇರಬಹುದು ಭಕ್ತರ ಮನಕ್ಕೆ ಬಡತನವಿಲ್ಲ ಎಂದೆಲ್ಲ ಮಾರಯ್ಯನಿಗೆ ಹೇಳಿದಳೆಂದೂ ಈತ ಲಕ್ಕಮ್ಮನ ವಚನಗಳನ್ನೆ ಉಲ್ಲೇಖಿಸಿ ಹೇಳಿದ್ದಾನೆ. ಆದರೆ ಲಕ್ಕಮ್ಮನ ‘ಸಂದಣ ಗೊಂಡು ಮನಹರುಷದಿಂದ ಬಸವಣ್ಣನ ಅಂಗಳಕ್ಕೆ ಹೋಗಿ, ತಿಪ್ಪೆಯ ತಪ್ಪಲಲ್ಲಿ ಬಿದ್ದಿದ್ದ ತಂಡುಲವ ಕಟ್ಟಿಕೊಂಡು ಎಯಿದಾಗಿ ತರಲು ಎಯಿದಾಗಿ ಬಂದಿತ್ತಲ್ಲಾ...’ (5-728) ಎಂಬ ವಚನದಲ್ಲಿನ ‘ಬಿದ್ದಿದ್ದ ತಂಡುಲ’ ಎಂಬ ಪ್ರಯೋಗವನ್ನು ‘ಚೆಲ್ಲಿರ್ದ ತಂಡುಲ’ ಎಂದು ಉಲ್ಲೇಖಿಸಿದ್ದಾನೆ. ಬಿದ್ದಿರುವ ಅಕ್ಕಿಗೂ ಚೆಲ್ಲಿರುವ ಅಕ್ಕಿಗೂ ವ್ಯತ್ಯಾಸವಿದೆ. ಅಲ್ಲದೆ ಬಸವಣ್ಣ ಅಂಗಳದಲ್ಲಿ ಅಕ್ಕಿಯನ್ನು ಯಾತಕ್ಕಾದರೂ ಚೆಲ್ಲಿಸುತ್ತಾನೆ?! ಹಾಗೆ ಅಕ್ಕಿಯನ್ನು ಚೆಲ್ಲುವುದುಂಟೆ? ವಚನದ ಅಪಓದಿನಿಂದ ಸಂಪಾದನಕಾರ ಬೇರೆಯೆ ಅರ್ಥ, ಪ್ರಸಂಗ ಕಲ್ಪಿಸಿಕೊಂಡಿದ್ದಾನೆ. (ತಂಡುಲ ಎಂದರೆ ಭತ್ತ ಎಂಬ ಅರ್ಥವೂ ಇದೆ. ಅಕ್ಕಿ ಎಂಬ ಅರ್ಥವೂ ಇದೆ). ಇಲ್ಲಿ ಬಿದ್ದಿದ್ದ ಎಂದರೆ ಈ ಸಾರಿ ಒಳ್ಳೆ ಅಕ್ಕಿ ಬಿತ್ತು, ಈ ಸಾರಿ ಒಳ್ಳೆ ರಾಗಿ ಬಿತ್ತು ಎಂಬ ಅರ್ಥದಲ್ಲಿ, ಹೆಚ್ಚಿನದಾಗಿ ಆದ (ಎಯಿದಾಗಿ-ಹೆಚ್ಚಿನದಾಗಿ, ಬಿದ್ದಿದ್ದ- ಒಳ್ಳೆಯ ಆಗುವರಿ) ಎಂದು ಅರ್ಥವೇ ವಿನಹ ಚೆಲ್ಲಿದ್ದ ಎಂದು ಅರ್ಥವಲ್ಲ. (ಶೂನ್ಯಸಂಪಾದನೆಯಲ್ಲಿ ವಚನದಿಂದ ಕಲ್ಪನೆಯೋ ಕಲ್ಪನೆಗಾಗಿ ವಚನವೋ ಎಂಬುದೂ ಬಗೆಹರಿಯದ ಪ್ರಶ್ನೆ. ಶೂನ್ಯಸಂಪಾದಕರು ಪ್ರಸಂಗಕ್ಕಾಗಿ ಅಥವಾ ಪ್ರಸಂಗವಾಗಿ ಕಲ್ಪಿಸಲು ಆಗದ ಅನೇಕ ವಚನಗಳನ್ನು ಬಳಸದೆ ಹಾಗೆಯೆ ಬಿಟ್ಟಿದ್ದಾರೆ).

ಗದ್ದೆಯಲ್ಲಿ ಭತ್ತವನ್ನು ಕಟಾವು ಮಾಡುವಾಗ ಬೀಳುತ್ತಿದ್ದ ಭತ್ತವನ್ನು ಆಯ್ದು ತಂದು ಬದುಕು ಮಾಡುವ ಕಾಯಕ ಇವನದಾಗಿತ್ತು ಎಂದು ನಾವು ಕನ್ನಡ ಎಂ.ಎ. ಓದುತ್ತಿದ್ದಾಗ ನಮ್ಮ ಮೇಷ್ಟ್ರುಗಳು ಹೇಳಿದ್ದರು. ಅದನ್ನೆ ನಾವು ಬಹಳ ಕಾಲ ನಂಬಿದ್ದೆವು. ಹೀಗೂ ಒಂದು ಕಾಯಕ ಇತ್ತೆ ಎಂಬ ಅನುಮಾನವಂತು ನಮ್ಮನ್ನು ಕಾಡಿಸುತ್ತಿತ್ತು. ಆದರೆ ಮಾರಯ್ಯನ ರಗಳೆಯನ್ನು ಓದಿದಾಗ ಮತ್ತು ಆತನ ಕಾಯಕ ಸಂಬಂಧಿ ವಚನಗಳನ್ನು ಓದಿದಾಗ ಇವನ ಕಾಯಕ ಬೇರೆಯೇ ಆಗಿರಬಹುದು ಎನ್ನಿಸಿತ್ತು.

ಸರಿಸುಮಾರು ಗುಮ್ಮಳಾಪುರದ ಸಿದ್ಧಲಿಂಗಯತಿಯ ಕಾಲದಲ್ಲೆ ಬದುಕಿದ್ದ ಶಂಕರದೇವನು (ಕ್ರಿ.ಶ.1580-1600) ಮಾರಯ್ಯನ ಮೇಲೆ ಒಂದು ರಗಳೆಯನ್ನೆ ಬರೆದಿದ್ದಾನೆ. ಹರಿಹರನ ನಂತರ ರಗಳೆ ಪ್ರಕಾರದಲ್ಲಿ ಹೆಚ್ಚು ಕೃಷಿ ಮಾಡಿರುವ ಕವಿಗಳಲ್ಲಿ ಈತ ಅಗ್ರಗಣ್ಯ. ಈತ ಬರೆದಿರುವ 23 ರಗಳೆಗಳು ಇದುವರೆಗೆ ದೊರಕಿವೆ. ಈತ ತನ್ನ ಆಯ್ದಕ್ಕಿ ಮಾರಯ್ಯನ ರಗಳೆಯಲ್ಲಿ ಮಾರಯ್ಯನ ಕಾಯಕದ ಬಗೆಗೂ ಹೇಳಿದ್ದಾನೆ.

ಸತ್ಯಶುದ್ಧಂ ಸಹಜಮಪ್ಪ ಶಿವಕಾಯಕಂ | ನಿತ್ಯಪದವಿಯನೀವುದಲ್ಲದಡನಾಯಕಂ ||
ಹರನ ಶರಣವಾಸದೊರಳ ಕಣ ್ಣನೊಳೊಕ್ಕು | ಹರೆದಕ್ಕಿಗಳನಾಯ್ದು ತಹುದಭವ ಮುದವಕ್ಕು ||
ಗಣವಾಸಕೆ ಬಂದು ನಿಂದು ಕರವಂ ಮುಗಿದು | ಮಾರಹರ ನಮಃ ಶಿವಾ ಎನುತೆ ಭಯದಿಂದ ಸುಗಿದು ||
ಒರಳಸುತ್ತಂ ಮೂರುಜಾವ ಪರಿಯಂತರಂ | ಹರೆದಕ್ಕಿಗಳನಾಯ್ದು ತಪ್ಪಂ ನಿರಂತರಂ || (ಶಂಕರದೇವನ ಸಮಗ್ರ ಕೃತಿಗಳು: ಸಂ. ಎಸ್.ವಿದ್ಯಾಶಂಕರ. ಪು: 331, 2009).

ಇಲ್ಲಿ ಒರಳನ್ನು ಒಕ್ಕು ಹರೆದ ಅಕ್ಕಿಗಳನ್ನು ಆತ ಆಯ್ದು ತರುತ್ತಿದ್ದ ಎಂದು ಹೇಳಲಾಗಿದೆ. ಅಂದರೆ ಒಳಕಲ್ಲಿನಲ್ಲಿ ಭತ್ತವನ್ನು ಕುಟ್ಟಿ ಅಕ್ಕಿ ಮಾಡುವಾಗ ಆಚೀಚೆ ಸಿಡಿದ ಭತ್ತ-ಅಕ್ಕಿಗಳನ್ನು ಗುಡಿಸಿಕೊಂಡು, ಆರಿಸಿಕೊಂಡು ತೆಗೆದುಕೊಂಡು ಬರುವ ಕಾಯಕ ಎಂದು ಇದನ್ನು ಅರ್ಥೈಸಬಹುದು. ಈತ ಧನವಂತ ಶರಣರ ಮನೆಗಳಿಗೆ ಹೋಗುತ್ತಿದ್ದು ಅಲ್ಲಿ ಒರಳಲ್ಲಿ ಭತ್ತ ಕುಟ್ಟುವಾಗ ಕುಟ್ಟಿದ ಅಕ್ಕಿ ಹಸನು ಮಾಡುವ ಕಾಯಕ ಮಾಡುತ್ತಿದ್ದ ಎಂಬುದು ಇಲ್ಲಿನ ಇಂಗಿತ. ಗುಮ್ಮಳಾಪುರದ ಸಿದ್ಧಲಿಂಗಯತಿಯ ಶೂನ್ಯಸಂಪಾದನೆಯಲ್ಲಿ ಈತ ಅಂಗಳದಲ್ಲಿ ಚೆಲ್ಲಿದ ಅಕ್ಕಿ ಆಯ್ದು ತರುತ್ತಿದ್ದ ಎಂದು ಹೇಳಿದರೆ ಇಲ್ಲಿ ಒರಳ ಕಣ ್ಣನಿಂದ ಹರೆದ (ಅಂದರೆ ಭತ್ತ ಕುಟ್ಟುವಾಗ ಆದ ಅಕ್ಕಿಯನ್ನು ಮತ್ತು ಆಚೀಚೆ ಸಿಡಿದ) ಅಕ್ಕಿಯನ್ನು ಆಯುವ ಕಾಯಕ ಮಾಡುತ್ತಿದ್ದ ಎನ್ನಲಾಗಿದೆ. ಶೂನ್ಯಸಂಪಾದಕನಿಂದ ಈತ ಪ್ರಭಾವಿತ ಆಗಿರುವಂತೆ ಕಾಣುವುದಿಲ್ಲ.

‘ಶಿವಭಕ್ತರ ಮನೆಗೆ ಹೋಗಿ ಒರಳಕ್ಕಿಯನಾಯ್ದು ತಂದು, ಲಿಂಗಕ್ಕೆ ಬೋನವ ಮಾಡಿ, ಜಂಗಮಕ್ಕೆ ನೀಡಿ, ಒಕ್ಕುದ ಕೊಂಡವ ಪೋಪನೈ ಕೈಲಾಸಕ್ಕೆ. ಅವರಿಗೆ ಮುಕ್ಕಣ್ಣನಲ್ಲದೆ ಉಳಿದ ಭುವನತ್ರಯದವರು ಸರಿಯಲ್ಲೆಂದಾತನಂಬಿಗ ಚೌಡಯ್ಯ’ (6-259) ಹೀಗೆ ತನ್ನೊಂದು ವಚನದಲ್ಲಿ ಆಯ್ದಕ್ಕಿ ಕಾಯಕದ ಬಗ್ಗೆ ಪ್ರಸ್ತಾಪ ಮಾಡುವ ಅಂಬಿಗರ ಚೌಡಯ್ಯನ ಈ ವಚನವನ್ನು ಓದಿದರೆ; ಶಿವಭಕ್ತರ ಮನೆಗೆ ಹೋಗಿ ಒರಳಕಲ್ಲಿನಲ್ಲಿ ಭತ್ತ ಕುಟ್ಟಿಕೊಟ್ಟು ಬರುವುದು ಮತ್ತು ಹಾಗೆ ಕುಟ್ಟುವಾಗ ಸಿಡಿದ ಅಕ್ಕಿಯನ್ನು ಆಯ್ದು ಒಪ್ಪ ಮಾಡಿ ತರುವುದು ಒಂದು ಕಾಯಕ ಆಗಿದ್ದ ಬಗ್ಗೆ ನಮಗೆ ಮನದಟ್ಟಾಗುತ್ತದೆ. ಹಾಗೆ ಆ ಕಾಯಕ ಮಾಡುವಾಗ ಒರಳಕ್ಕಿಯನ್ನು ಆಯ್ದು (ಒಪ್ಪ ಮಾಡಿ, ಹಸನು ಮಾಡಿ) ತಂದು ಬೋನ ಮಾಡಿ ಜಂಗಮಕ್ಕೆ ನೀಡಿ ಅವರು ತಿಂದು ತೃಪ್ತರಾಗಿ ನಂತರ ಉಳಿದ ಬೋನವನ್ನು (ಒಕ್ಕು ಮಿಕ್ಕ ಪ್ರಸಾದವನ್ನು) ತಾವು ಊಟ ಮಾಡಿ ಬದುಕುವುದು ಶರಣರ ಶಿವಾಚಾರ, ಸದಾಚಾರ ಆಗಿದ್ದಿರಬಹುದು.

ಇಲ್ಲಿ ಒರಳಕ್ಕಿಯನ್ನು ಆಯ್ದು ತಂದು ಎಂಬುದನ್ನು ನಾವು ಎರಡು ರೀತಿಯಲ್ಲಿ ಗ್ರಹಿಸಲು ಸಾಧ್ಯವಿದೆ. ಒಂದು: ಒಳಕಲ್ಲಿನಲ್ಲಿ ಭತ್ತ ಕುಟ್ಟಿದ ನಂತರ ಅದನ್ನು ಜರಡಿಯಾಡಿ, ಕೇರಿ, ಎಗ್ಗಲಿಸಿ, ಅಕ್ಕಿ ಮಾಡಿಕೊಟ್ಟು ಅದರ ಒಂದು ಭಾಗವನ್ನು ಭಕ್ಷೀಸಾಗಿ, ಪಡಿಯಾಗಿ ಪಡೆಯುವುದು. ಜೊತೆಗೆ ಕೂಲಿಯನ್ನೂ ಪಡೆಯುವುದು. (ಕೈಕೂಲಿ). ಇನ್ನೊಂದು: ಹಾಗೆ ಭತ್ತ ಕುಟ್ಟಿ ಅಕ್ಕಿ ಮಾಡುವಾಗ ಆಚೀಚೆ ಸಿಡಿದ ಭತ್ತ-ಅಕ್ಕಿ ಮತ್ತು ನುಚ್ಚು ನುರಿಗಳನ್ನು ಆರಿಸಿಕೊಂಡು; ತೆಗೆದುಕೊಂಡು ಹೋಗುವುದು. ಈ ಎರಡೂ ಒಂದು ರೀತಿಯಲ್ಲಿ ಕಾಯಕಕ್ಕೆ ಸಲ್ಲುವ ರಿವಾಜು, ಕೈಕೂಲಿ ಕೂಡ. ಹಾಗಾಗಿ ಮಾರಯ್ಯನ ಕಾಯಕ ಇದೇ ಇದ್ದೀತು. ಇವೆರಡೂ ಒಂದೇ ಕಾಯಕದ ಎರಡು ಅಂಗಗಳಷ್ಟೆ.

ಈಗೆಲ್ಲ ರೈಸ್‍ಮಿಲ್ಲುಗಳು ಬಂದು ಭತ್ತ ಕುಟ್ಟುವುದನ್ನು ಬಹುತೇಕ ಜನ ಮರೆತೇಬಿಟ್ಟಿದ್ದಾರೆ. ಆದರೆ ನಾವೆಲ್ಲ ಚಿಕ್ಕ ಮಕ್ಕಳಾಗಿದ್ದಾಗ ನಾವೂ ಒಳಕಲ್ಲಿನಲ್ಲಿ ಭತ್ತ ಕುಟ್ಟಿಕೊಟ್ಟಿದ್ದೇವೆ. ಹಾಗೆ ಕುಟ್ಟಿದ್ದನ್ನು ನಮ್ಮ ಮನೆ ಹೆಂಗಸರು ಮಾಡುತ್ತಿದ್ದರು ಕೂಡ. ಅದನ್ನು ಅಕ್ಕಿ ಮಾಡುವುದು ಎಂದೇ ಇಂದಿಗೂ ಕರೆಯುತ್ತೇವೆ. ಅಕ್ಕಿ ಆರಿಸುವುದು ಎಂದರೆ ಹಸನು ಮಾಡುವುದು ಎಂದೇ ಅರ್ಥ. ನಾವು ಚಿಕ್ಕ ಮಕ್ಕಳಾಗಿದ್ದಾಗ ಹಬ್ಬ, ಮದುವೆಗಳಲ್ಲಿ ಸಂಬಂಧಿಕರ ಮನೆಗೆ ಹೋಗಿ ಭತ್ತ ಕುಟ್ಟಿಕೊಟ್ಟೂ ಬಂದಿದ್ದೇವೆ. ನೂರಾರು ಸಾವಿರಾರು ಜನರಿಗೆ ಮಹಾಮನೆಯಲ್ಲಿ ದಾಸೋಹ ಮಾಡುವಾಗ ಹಾಗೆ ಕುಟ್ಟಿಕೊಡುವುದು ಮತ್ತು ಕೇರಿ ಎಗ್ಗಲಿಸಿ ಮಾಡಿಕೊಡುವುದು ಒಂದು ಕಾಯಕ ಆಗಿ ಹಿಂದೆ ಇದ್ದಿರಬಹುದು. ಗಂಡಸರೂ ಈ ಕಾಯಕ ಮಾಡುತ್ತಿದ್ದಿರಬಹುದು.

ಮಾರಯ್ಯ ಮತ್ತು ಲಕ್ಕಮ್ಮ ಇಬ್ಬರೂ ಇದೇ ಕಾಯಕ ಮಾಡುತ್ತಿದ್ದರೇ ಎಂಬ ಬಗ್ಗೆ ವಚನಗಳಲ್ಲಿ ಉಲ್ಲೇಖ ಇಲ್ಲ. ಆದರೆ ಲಕ್ಕಮ್ಮನನ್ನೂ ಆಯ್ದಕ್ಕಿ ಲಕ್ಕಮ್ಮ ಎಂದೇ ಈ ಕಾಯಕದಿಂದ ಗುರ್ತಿಸುತ್ತಿರುವುದರಿಂದ ಆಕೆಯೂ ಅಕ್ಕಿ ಮಾಡುವ ಇದೇ ಕಾಯಕ ಮಾಡುತ್ತಿದ್ದಳು ಎಂಬುದರಲ್ಲಿ ಎರಡು ಮಾತಿಲ್ಲ. ಹಲವು ಲಕ್ಕಮ್ಮಗಳನ್ನು ಬೇರೆ ಬೇರೆ ಎಂದು ಬೇರ್ಪಡಿಸಿ ಗುರ್ತಿಸುವುದಕ್ಕೇ ಈಕೆಗೆ ಆಯ್ದಕ್ಕಿ ಲಕ್ಕಮ್ಮ ಎಂದು ಕರೆದಿರಬಹುದು ಎಂದೂ ನಾವು ವಾದಿಸಲಿಕ್ಕೆ ಸಾಧ್ಯವಿದೆ. ಆದರೆ ಮಾರಯ್ಯಗಳ ಪುಣ್ಯಸ್ರ್ತೀ ಆಯ್ದಕ್ಕಿ ಲಕ್ಕಮ್ಮ ಎಂದೆ ಈಕೆಯನ್ನು ಸಂಭೋದಿಸಿದ್ದಾರೆ. ಹಾಗಾಗಿ ಈಕೆ ಕೂಡ ಇದೇ ಕಾಯಕ ಮಾಡುತ್ತಿದ್ದಳು. ಅಷ್ಟೆ ಅಲ್ಲದೆ ಶೂನ್ಯಸಂಪಾದನೆಯ ಪ್ರಸಂಗದ ಪ್ರಕಾರ ಮಾರಯ್ಯನನ್ನು ಕಾಯಕಕ್ಕೆ ಕರೆಯುವವಳೆ ಈಕೆ.

ಮಾರಯ್ಯನ ಮೂರು ವಚನಗಳು ಆತನ ಕಾಯಕದ ಬಗೆಗೇ ಮಾತನಾಡುತ್ತವೆ. ‘ಕಟ್ಟಿಗೆ ಕಸನೀರು ತಂದು, ಸತ್ಯರ ಮನೆಯಲ್ಲಿ ಒಕ್ಕುದನೀಸಿಕೊಂಡು, ತನ್ನ ಕೃತ್ಯ ತಪ್ಪದೆ ಒಕ್ಕುದ ಕೊಂಡು, ಸತ್ಯನಾಗಿಪ್ಪ ಭಕ್ತನಂಗವೆ ಅದು ಅಮಲೇಶ್ವರಲಿಂಗದ ಸಂಗ’ (6-1169). ‘ಎನಗೆ ಮನೆಯಿಲ್ಲ, ಎನಗೆ ಧನವಿಲ್ಲ, ಮಾಡುವುದೇನು ನೀಡುವುದೇನು? ಮನೆ ಧನ ಸಕಲ ಸಂಪದ ಸೌಖ್ಯವುಳ್ಳ, ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು ಎನ್ನೊಡಲ ಹೊರೆವೆನಾಗಿ, ಅಮಲೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನಬಸವಣ್ಣಾ’ (6-1167). ‘ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು, ಕಾಯಕವೆ ಕೈಲಾಸವಾದ ಕಾರಣ, ಅಮಲೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು’ (6-1170). ಅಂದರೆ ಆಯ್ದಕ್ಕಿ ಮಾರಯ್ಯ ಕೃತ್ಯ ತಪ್ಪದೆ ಸತ್ಯರ ಮನೆಯಲ್ಲಿ ಸತ್ಯನಾಗಿಪ್ಪ ಭಕ್ತನಂತೆ ಇದ್ದವನು. ಸತ್ಯಶುದ್ಧ ಕಾಯಕದ ಪ್ರತಿಪಾದಕನಾಗಿದ್ದವನು. ಕಾಯಕ ಯಾವ ಕಾರಣಕ್ಕೂ ತಪ್ಪಬಾರದು ಎಂಬ ಕಾಯಕನಿಷ್ಠ ಶರಣನೀತ. ಕಾಯಕವೇ ಕೈಲಾಸವೆಂಬ ನಾಣ್ಣುಡಿಯನ್ನು ನಾಡಿಗೆ ನೀಡಿದವನು. ಮನೆಯಿಲ್ಲದ, ಧನವಿಲ್ಲದ ಬಡವನಾಗಿ ಒಕ್ಕುದನೀಸಿಕೊಂಡು ಬಾಳ್ವೆ ಮಾಡುತ್ತಿದ್ದವನು. ‘ತಪ್ಪಲಕ್ಕಿಯನ್ನು ಆಯ್ದು ತಂದು’ ಅಂದರೆ ಕುಟ್ಟಿದ ಅಕ್ಕಿಯನ್ನು ಒಪ್ಪ ಮಾಡಿ ಅದರಿಂದಲೆ ಬಂದ ಆಮದನಿಯಿಂದ ಹೊಟ್ಟೆ ಹೊರೆಯುತ್ತಿದ್ದವನು ಮತ್ತು ದಾಸೋಹವನ್ನೂ ಮಾಡುತ್ತಿದ್ದವನು. (ಇಲ್ಲಿನ ವಚನ ಉಲ್ಲೇಖಗಳು ಸಮಗ್ರ ವಚನ ಸಂಪುಟದ ಉಲ್ಲೇಖಗಳು. ಮೊದಲ ಸಂಖ್ಯೆ ಸಂಪುಟವನ್ನೂ ಎರಡನೆ ಸಂಖ್ಯೆ ಪುಟವನ್ನೂ ಸೂಚಿಸುತ್ತವೆ).

ಈತನ ಇನ್ನೂ ಒಂದು ವಚನ ‘ಬೇಡಿ ತಂದು ದಾಸೋಹವ ಮಾಡುವನ್ನಬರ, ಪಂಗುಳನ ಪಯಣದಂತೆ. ಯಾಚಕತ್ವ ಭಕ್ತಂಗುಂಟೆ?, ಭಕ್ತನಾಗಿ ಹುಟ್ಟಿ ಭಕ್ತರ ಬೇಡಿ ತಂದು ಮಾಡಿ ಮುಕ್ತಿಯನರಸಲುಂಟೆ? ಅದು ಅಮಲೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು’ (6-1182) ಅಂದರೆ ಬೇಡಿ ತಂದು ದಾಸೋಹ ಮಾಡಬಾರದೆಂದು ಹೇಳುತ್ತದೆ. ಬೇಡುವುದು ಹೆಳವನ ಪಯಣದಂತೆ ಎಲ್ಲಿಗೂ ನಮ್ಮನ್ನು ಒಯ್ಯುವುದಿಲ್ಲ. ಬೇಡಬಾರದು ದುಡಿಯಬೇಕು. ದುಡಿದು ತಂದ ದವಸ-ಧಾನ್ಯ-ಹಣದಿಂದಲೇ ದಾಸೋಹ ಮಾಡಬೇಕು. ಅದೂ ದುರಾಸೆಯಿಲ್ಲದ ಚಿತ್ತಶುದ್ಧ ಕಾಯಕವೇ ಆಗಬೇಕು. ನೀಡಿದೆ ಮಾಡಿದೆನೆಂಬ ಅಹಂಕಾರವಿಲ್ಲದೆ, ನಾನು ಮಾಡಿದ್ದರಿಂದ ನನಗೆ ಮುಕ್ತಿ ದೊರಕುತ್ತದೆಂಬ ಪ್ರತಿಫಲಾಪೇಕ್ಷೆ ಇಲ್ಲದೆ ದಾಸೋಹ ಮಾಡಬೇಕು. ‘ಹಾಗದ ಕಾಯಕ ಮಾಡಿ ಹಣವಡ್ಡವ ತಾ ಎಂಬಲ್ಲಿ ಸತ್ಯದ ಕಾಯಕ ಉಂಟೇ?’ (6-1195) ಎಂದು ಇನ್ನೊಂದು ವಚನದಲ್ಲಿ ಪ್ರಶ್ನಿಸುವ ಈತ ಕಡಿಮೆ ಕೆಲಸ ಮಾಡಿ ಹೆಚ್ಚು ಕೂಲಿ ಬಯಸಬಾರದು ಎಂದೂ ಹೇಳುತ್ತಾನೆ. ಹಾಗೆಯೇ ಲಕ್ಕಮ್ಮ ತನ್ನೊಂದು ವಚನದಲ್ಲಿ ಮೂರುಜಾವಗಳಲ್ಲಿ ಮಾಡುವ ಕಾಯಕವನ್ನು ಒಂದೇ ಜಾವದಲ್ಲಿ ಮಾಡುವುದೂ ನೈತಿಕತೆಯಲ್ಲ ಎಂದು ಹೇಳಿದ್ದಾಳೆ. ಹೀಗಿರುವಾಗ ಚೆಲ್ಲಿಹೋದ ಅಕ್ಕಿಯನ್ನು ಆರಿಸಿ ತರುವುದು ಪುಗಸಟ್ಟೆ. ಅದು ಕೂಲಿ ಪಡೆದು ಮಾಡುವ ಕಾಯಕ ಹೇಗಾಗುತ್ತದೆ?

ಕಾಯಕ ಎಂದರೆ ಸತ್ಯಶುದ್ಧ ದುಡಿಮೆ ಎಂಬ; ದಾಸೋಹವನ್ನು ಬಿಟ್ಟಿ ಬಂದದ್ದರಿಂದ ಮಾಡಬಾರದು ಎಂಬ ತಮ್ಮದೇ ತತ್ವಜ್ಞಾನವನ್ನು ಮಂಡಿಸಿರುವವರು ಮಾರಯ್ಯ ಲಕ್ಕಮ್ಮ ದಂಪತಿಗಳು. ಹೀಗಿರುವಾಗ ಮಾರಯ್ಯ ಸುಮ್ಮನೆ ಚೆಲ್ಲಿದ್ದ ಅಕ್ಕಿಯನ್ನು ಬಿಟ್ಟಿಯಾಗಿ ಆರಿಸಿ ತಂದು ಹೊಟ್ಟೆ ಹೊರೆಯುತ್ತಿದ್ದ ಮತ್ತು ಅದರಿಂದಲೆ ದಾಸೋಹವನ್ನೂ ಮಾಡುತ್ತಿದ್ದ ಎಂಬುದನ್ನು ನಂಬಲಾದೀತೇ? ಆತನ ಆಯ್ದಕ್ಕಿ ಕಾಯಕ ಎಂದರೆ ಶರಣರ ಮನೆಯಲ್ಲಿ ಭತ್ತವನ್ನು ಕುಟ್ಟಿ, ನಂತರ ಅಕ್ಕಿಯನ್ನು ಹಸನು ಮಾಡುವ ಕಾಯಕ. ಅಲ್ಲದೆ ಜೊತೆಯಲ್ಲೆ ಹಾಗೆ ಕುಟ್ಟುವಾಗ ಒರಳಿನಿಂದ ಆಚೀಚೆ ಸಿಡಿದ ತಂಡುಲ ಅಂದರೆ ಅಕ್ಕಿಯನ್ನು (ಭತ್ತವನ್ನು) ಆಯುವ (ಹಸನು ಮಾಡಿ ತರುವ) ಕಾಯಕ. ಆಯ್ದಕ್ಕಿ ಎಂದರೆ ಭತ್ತವನ್ನು ಕುಟ್ಟಿ ಅಕ್ಕಿ ಮಾಡುವುದೂ, ಅಕ್ಕಿಯನ್ನು ಒಪ್ಪ ಮಾಡುವುದೂ ಎರಡೂ ಸೇರಿದ ಕಾಯಕ.

-ಡಾ. ರಾಮಲಿಂಗಪ್ಪ ಟಿ. ಬೇಗೂರು

ಈ ಅಂಕಣದ ಹಿಂದಿನ ಬರೆಹಗಳು:
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...