ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ

Date: 18-11-2021

Location: ಬೆಂಗಳೂರು


‘ಶೂದ್ರ ಶ್ರೀನಿವಾಸ್ ಕೇವಲ ಪತ್ರಿಕೋದ್ಯಮದಲ್ಲಿ ಮಾತ್ರವಲ್ಲ; ರೈತಾಪಿ ಬದುಕು, ಸಂಘಟನೆ, ಆಡಳಿತ ನಿರ್ವಹಣೆ, ಸಾಹಿತ್ಯ ರಚನೆ, ಶಿಕ್ಷಣ ಕ್ಷೇತ್ರಗಳಲ್ಲೂ ತಮ್ಮದೇ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ’ ಎನ್ನುತ್ತಾರೆ ಲೇಖಕ, ವಿಮರ್ಶಕ ಡಾ. ರಾಮಲಿಂಗಪ್ಪ ಟಿ.ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ಶೂದ್ರ ಶ್ರೀನಿವಾಸ್ ಅವರ ‘ಮಾತು ಮೌನದ ಮುಂದೆ’ ಕೃತಿಯ ಕುರಿತು ಬರೆದಿದ್ದಾರೆ.

(ಶೂದ್ರ ಅವರ ‘ಮಾತು ಮೌನದ ಮುಂದೆ’ ಅಂಕಣಬರಹಗಳು)

ಶೂದ್ರ ಶ್ರೀನಿವಾಸ್ ಕೇವಲ ಪತ್ರಿಕೋದ್ಯಮದಲ್ಲಿ ಮಾತ್ರವಲ್ಲ; ರೈತಾಪಿ ಬದುಕು, ಸಂಘಟನೆ, ಆಡಳಿತ ನಿರ್ವಹಣೆ, ಸಾಹಿತ್ಯ ರಚನೆ, ಶಿಕ್ಷಣ ಕ್ಷೇತ್ರಗಳಲ್ಲೂ ತಮ್ಮದೇ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ, ಕ್ರೀಡೆ, ಆಡಳಿತ, ರಾಜಕಾರಣ ಹೀಗೆ ಎಲ್ಲ ಕ್ಷೇತ್ರಗಳ ಗಣ್ಯಾತಿಗಣ್ಯರ ಪರಿಚಯ ಮತ್ತು ಒಡನಾಟ ಇದ್ದವರು ಇವರು. ಶೂದ್ರ ಅವರನ್ನು ನೆನೆದಾಗಲೆಲ್ಲ, ನೋಡಿದಾಗೆಲ್ಲ ನನಗವರು ನೈತಿಕತೆಯ ಪ್ರತೀಕವಾಗಿ ಕಾಣುತ್ತಾರೆ. ಇವರಿಗೆ ಶೂದ್ರ ಎಂಬ ಹೆಸರು ಬಂದಿರುವುದೇ ಇವರ ಶೂದ್ರ ಪತ್ರಿಕೆಯಿಂದ. ನಮ್ಮಲ್ಲಿ ಕೊರಗಪ್ಪಗಳ ದಂಡೇ ಇದೆ. ವಯಸ್ಸಾದಂತೆಲ್ಲ ನನಗೆ ಅದು ಸಿಕ್ಕಲಿಲ್ಲ; ಇದು ಸಿಕ್ಕಲಿಲ್ಲ ಎಂದು ಕೊರಗುವವರೇ ನಮ್ಮಲ್ಲಿ ಹೆಚ್ಚು. ಅಲ್ಲದೆ ಎಲ್ಲದಕ್ಕು ಲಾಬಿ ಮಾಡುತ್ತಲೆ ಮುಗುಮ್ಮಾಗಿ ಇರುವವರಿಗು ನಮ್ಮಲ್ಲಿ ಬರವಿಲ್ಲ. ಆದರೆ ಶೂದ್ರ ಎಂದೂ ಯಾವುದಕ್ಕೂ ತಮಗಾಗಿ ಲಾಬಿ ಮಾಡಿದವರಲ್ಲ. ಯಾವ ಪೀಠಾಧಿಪತ್ಯಕ್ಕು ಆಸೆಪಟ್ಟವರಲ್ಲ, ಸಿಕ್ಕಲಿಲ್ಲವೆಂದು ಕೊರಗಿದವರಲ್ಲ. ತಮ್ಮ ಪಾಡಿಗೆ ತಾವು ಸಮಾಜದ ಸೌಖ್ಯಕ್ಕೆ ಚಿಂತಿಸುತ್ತ ಬಂದವರು. ಸಹಬಾಳ್ವೆ, ಪ್ರಾಮಾಣಿಕತೆ, ನೈತಿಕತೆಗಾಗಿ ಹಂಬಲಿಸಿದವರು. ಬೌದ್ಧಿಕ ಮತ್ತು ಸಾಹಿತ್ಯಕ ಉನ್ನತಿಗಾಗಿ ಹಂಬಲಿಸಿದವರು. ಈ ಕಾರಣಕ್ಕಾಗಿ ಶೂದ್ರ ಅವರು ನನಗೆ ಮೆಚ್ಚು.

ನವ್ಯಪಂಥದಿಂದ ಲಂಕೇಶ್, ತೇಜಸ್ವಿ ಮತ್ತು ಅನಂತಮೂರ್ತಿ ಅವರು ಹೊರಳಿಕೊಂಡು ಭಿನ್ನ ರೀತಿಯಲ್ಲಿ ಬರೆಯತೊಡಗಿದ 70ರ ದಶಕದ ಕಾಲಘಟ್ಟದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಇವರೆಲ್ಲರ ಜೊತೆ ಇದ್ದ ಶೂದ್ರ ಶ್ರೀನಿವಾಸ್ ಬಂಡಾಯ ಸಾಹಿತ್ಯ ಸಂಘಟನೆಯ ಜೊತೆಗೂ ಆರಂಭದಲ್ಲಿ ಗುರ್ತಿಸಿಕೊಂಡಿದ್ದವರು. ಬಂಡಾಯ ಸಂಘಟನೆಯ ಸಂಚಾಲಕ ಜವಾಬ್ದಾರಿಯಿಂದ ಹೊರಬಂದ ನಂತರ ಲಂಕೇಶ್, ರಾಮಚಂದ್ರ ಶರ್ಮ, ಡಿ.ಆರ್.ನಾಗರಾಜ, ಕಿ.ರಂ.ನಾಗರಾಜ ಇವರೆಲ್ಲರ ಸಂಪರ್ಕ ಮತ್ತು ಒಡನಾಟದಲ್ಲಿ ಇದ್ದ ಇವರು ಶೂದ್ರ ಪತ್ರಿಕೆಯನ್ನು ಪ್ರಾರಂಭಿಸಿ ಅದನ್ನೊಂದು ಗಂಭೀರ ಜವಾಬ್ದಾರಿ ಎಂಬಂತೆ ವ್ರತದ ರೀತಿಯಲ್ಲಿ ದಶಕಗಟ್ಟಲೆ ನಡೆಸಿದರು. ಹತ್ತು ಹಲವು ಬೌದ್ಧಿಕ ವಾಗ್ವಾದಗಳನ್ನು ಕನ್ನಡದಲ್ಲಿ ಬೆಳೆಸಿದ ಪತ್ರಿಕೆ ಶೂದ್ರ. ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು 70ರ ದಶಕದ ನಂತರ ಕಟ್ಟಿದ ಪತ್ರಿಕೆಗಳಲ್ಲಿ ಇದಕ್ಕೆ ಮುಖ್ಯವಾದ ಸ್ಥಾನವಿದೆ. ಈ ಪತ್ರಿಕೆಯ ಹೆಸರು ಶೂದ್ರ ಅಂತಿದ್ದರೂ ದಲಿತ, ಬಂಡಾಯ, ಸ್ತ್ರೀವಾದಿ, ಮುಸ್ಲಿಂ ಸಂವೇದನೆಗಳ ಜೊತೆಗೆ ‘ಬಂಡಾಯೋತ್ತರ’ ಎನ್ನಬಹುದಾದ ಪೀಳಿಗೆಗೂ ಇದು ವೇದಿಕೆ ಕಲ್ಪಿಸಿಕೊಟ್ಟಿತು. ತುರ್ತುಪರಿಸ್ಥಿತಿಯ ವಿರೋಧಿ ಸಂಚಿಕೆ, ಕುವೆಂಪು ವಿಶೇಷಾಂಕ, 15 ವರ್ಷಗಳ ನೆನಪಿನ ಸಂಚಿಕೆ ಹೀಗೆ ಕಿರುಪತ್ರಿಕೆಗಳ ವಿಶೇಷಾಂಕಗಳು ಗುಣಮಟ್ಟ ಮತ್ತು ಪಾತ್ರದಲ್ಲಿ ಹೇಗಿರಬೇಕು ಎಂಬುದಕ್ಕು ಶೂದ್ರ ಪತ್ರಿಕೆ ತನ್ನದೇ ಮಾದರಿಗಳನ್ನು ನಿರ್ಮಿಸಿದೆ.

ಇವರು ವಾರ್ತಾಭಾರತಿ ಪತ್ರಿಕೆಗೆ ಬರೆದ ‘ಮಾತು ಮೌನದ ಮುಂದೆ’ ಎಂಬ ಅಂಕಣಬರಹಗಳ ಎರಡನೆ ಸಂಪುಟಕ್ಕೆ ಎರಡು ಮಾತು ಬರೆದುಕೊಡಿ ಎಂದಾಗ ನಾನು ಸ್ವಲ್ಪ ತಬ್ಬಿಬ್ಬೇ ಆದೆ. ಆದರೂ ಅವರ ವ್ಯಕ್ತಿತ್ವದ ಮೇಲಿನ ಪ್ರೀತಿಯಿಂದ ಬರೆಯುತ್ತಿದ್ದೇನೆ. ಈ ಮುನ್ನುಡಿ ಎಂಬ ಮುನ್ನುಡಿಗಳು ಸ್ವಲ್ಪ ಹೊಗಳು; ಸ್ವಲ್ಪ ಬೆನ್ನು ಕೆರಿ ಅನ್ನುವ ಧಾಟಿಯಲ್ಲೆ ಇರುತ್ತವೆಯಾಗಿ (ಅಪವಾದ ಉಂಟು) ನನ್ನ ಬರೆಹವೂ ಹಾಗೆಯೇ ಕಂಡರೆ ಓದುಗರು ಮನ್ನಿಸಬೇಕು. ಸಜ್ಜನರಲ್ಲಿ ತಪ್ಪುಗಳನ್ನು ಮಾತ್ರವೆ ಹುಡುಕುವುದು ಸಲ್ಲ. ತಪ್ಪು ಹುಡುಕುವುದನ್ನೆ ತಮ್ಮ ಉದ್ಯೋಗ ಮಾಡಿಕೊಂಡವರೂ ನಮ್ಮಲ್ಲಿದ್ದಾರೆ. ಫಾಲ್ಟ್ ಫೈಂಡಿಂಗ್ ಅನ್ನೆ ತಮ್ಮ ವ್ಯಕ್ತಿತ್ವ ಮಾಡಿಕೊಂಡು ಬೇರೆಯವರು ಯಾವಾಗ ತಪ್ಪು ಮಾಡುತ್ತಾರೆಂದು ಕಾಯುತ್ತ ಕಿಡಿ ಕಾರಲು ಕಾಯುವವರೂ ಇದ್ದಾರೆ. ಇವೆಲ್ಲ ವ್ಯಕ್ತಿತ್ವಕ್ಕೆ ಹಾನಿ. ದೊಡ್ ದೊಡ್ಡವರ ಜೊತೆ ಕೂತಾಕ್ಷಣಕ್ಕೆ ನಾವು ದೊಡ್ಡವರಾಗುವುದಿಲ್ಲ ಅನ್ನುವುದು ಶೂದ್ರ ಅವರಿಗೂ ಗೊತ್ತು. ಆದಾಗ್ಯೂ ನಾನು ಇಂಥವರ ಜೊತೆ ಕೂತಿದ್ದೆ, ಇಂಥವರ ಜೊತೆ ನಿಂತಿದ್ದೆ, ಇಂತಿಂಥವರ ಜೊತೆ ಪಾರ್ಟಿ ಮಾಡಿದೆ ಎಂಬ ಒಂದೇ ಧೋರಣೆ ಅವರಲ್ಲಿನ ಒಂದೇ ದೌರ್ಬಲ್ಯ ಮತ್ತು ಅದು ಅವರ ಲಕ್ಷಣವೂ ಹೌದು. ಆದರೆ ಈ ಧೋರಣೆ ಇವರಲ್ಲಿ ಇಷ್ಟಕ್ಕೆ ನಿಲ್ಲದೆ ಅದು ಸಮಾಜದ ಓದು ಮತ್ತು ವಿಶ್ಲೇಷಣೆ ಆಗಿ ಬೆಳೆಯುತ್ತದೆ. ಪ್ರಾಮಾಣಿಕ ಲೇಖಕನೊಬ್ಬನ ತಲ್ಲಣವಾಗಿ ಬೆಳೆಯುತ್ತದೆ.

ನಮ್ಮ ಸಮಾಜದ ಬಿಕ್ಕಟ್ಟುಗಳ ಬಗೆಗೆ, ಕೋಮು ಗುಮಾನಿಗಳ ಬಗೆಗೆ, ಬಡತನ-ನಿರುದ್ಯೋಗ-ರಾಜಕೀಯ ಅಧಿಕಾರದಾಹ-ಭ್ರಷ್ಟತೆ ಇತ್ಯಾದಿಗಳ ಬಗೆಗೆ ಸದಾ ತಲ್ಲಣಗೊಂಡು ಬರೆಯುವ ಶೂದ್ರ ಅವರ ಇಲ್ಲಿನ ಬರಹಗಳಲ್ಲಿ ಅನ್ಯರ ನೋವಿಗೆ ಮಿಡಿವ ಮಾನವತಾವಾದಿ ಲೇಖಕನೊಬ್ಬನ ನಿರ್ಮಲ ಮನಸ್ಸಿದೆ. ಇಂತಹ ಬರೆಹಗಳಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆ ಇತ್ಯಾದಿಗಳು ಇರುವುದು ಮುಖ್ಯವಾಗಿ ನಮ್ಮ ಸಮಾಜವನ್ನು ಒಳಿತಿನ ಕಡೆಗೆ, ಸಹಬಾಳ್ವೆಯ ಕಡೆಗೆ, ಆನಂದದ ಕಡೆಗೆ, ಸೌಖ್ಯದ ಕಡೆಗೆ ಒಯ್ಯಲಿಕ್ಕೆ ಎಂಬ ಬಲವಾದ ನಂಬಿಕೆಯಿದೆ. ಹಾಗೆಯೇ ಕಲೆ ಇರುವುದು ಮನುಷ್ಯನ ಆನಂದಕ್ಕಾಗಿ ಎಂಬ ಧೋರಣೆಯೂ ಇದೆ. ಈ ರೀತಿಯ ಧೋರಣೆ ಬಗೆಗೆ ನಮಗೆ ನಮ್ಮದೇ ತಕರಾರುಗಳು ಇರಬಹುದು.

ಈಗಾಗಲೇ ‘ಮಾತು ಮೌನದ ಮುಂದೆ’ ಎಂಬ ಇವರ ಅಂಕಣ ಬರಹಗಳ ಸಂಕಲನ ಒಂದು ಪ್ರಕಟವಾಗಿದೆ. ಇವರದೇ ಸಂಪಾದಕತ್ವದ ಶೂದ್ರ ಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದ ಅಂಕಣ ‘ಕನಸಿಗೊಂದು ಕಣ್ಣು’ ಕೂಡ (ಆಯ್ದ ಬರಹಗಳ) ಸಂಕಲನವಾಗಿ ಪ್ರಕಟವಾಗಿದೆ. ಕಸ್ತೂರಿ ಪತ್ರಿಕೆಯಲ್ಲು ಇದೇ ಹೆಸರಿನಲ್ಲಿ ನಾಲ್ಕು ವರ್ಷಗಳಿಂದ ಇವರು ಅಂಕಣ ಬರೆಯುತ್ತಿದ್ದಾರೆ. ಅಲ್ಲಿನ ಆಯ್ದ ಬರಹಗಳ ಒಂದು ಸಂಕಲನವೂ ಪ್ರಕಟವಾಗಿದೆ. ಪದಮಿತಿಯಲ್ಲಿ ಅಂಕಣ ಬರೆಯುವುದರಲ್ಲಿ ಶೂದ್ರ ಅವರದು ಪಳಗಿದ ಕೈ. ಇಲ್ಲಿ ಇವರ ಇದುವರೆಗಿನ ಸುದೀರ್ಘ ಜೀವನದಲ್ಲಿ ಪಡೆದ ಅನುಭವಗಳ, ನಡೆದ ಘಟನೆಗಳ, ನಡೆಸಿದ ಒಡನಾಟಗಳ ಕಿರುಕಥನಗಳಿವೆ. ಇಲ್ಲಿನ ಎಲ್ಲ ಬರೆಹಗಳೂ ನೆನಪಿನ ಚಿತ್ರಗಳೇ. ಇವೆಲ್ಲ ಒಂದು ತೆರನ ಮೆಮಾಯರ್ಸ್‍ಗಳು. ಇಲ್ಲಿ ಕೆಲವೊಂದು ಥೀಮ್ಯಾಟಿಕ್ ಬರಹಗಳಿದ್ದರೆ, ಕೆಲವೊಂದು ವ್ಯಕ್ತಿಕೇಂದ್ರಿತ ಚಿತ್ರಗಳಿವೆ, ಹಾಗೆಯೆ ಕೆಲವೊಂದು ಪ್ರಸಂಗ ಕೇಂದ್ರಿತ ಬರಹಗಳಿದ್ದರೆ ಕೆಲವೊಂದು ಅಪ್ಪಟ ನೆನಪಿನ ನಿರೂಪಣೆಗಳೂ ಇವೆ. ಆತ್ಮಸ್ವಗತ, ನಿರೂಪಣೆ, ಕಥನ, ಸಂವಾದ ಧಾಟಿಗಳು ಉಳ್ಳ ಇಲ್ಲಿನ ಎಲ್ಲ ಬರಹಗಳೂ ಒಂದಲ್ಲ ಒಂದು ರೀತಿಯಲ್ಲಿ ನೆನಪನ್ನು ಮರುಕಟ್ಟುವ, ವ್ಯಾಖ್ಯಾನಿಸುವ ಮತ್ತು ಚಾರಿತ್ರಿಕವಾದ ಕಾಮೆಂಟುಗಳು ಇರುವ ಒಡನಾಟ ಕಥನಗಳು.

ಒಡನಾಟ ಕಥನ ಪ್ರಕಾರದಲ್ಲಿ ಕನ್ನಡದಲ್ಲಿ ಕುವೆಂಪುಗೆ ಪುಟ್ಟ ಕನ್ನಡಿ, ಅಣ್ಣನ ನೆನಪು, ಸಾಹಿತಿಗಳ ಸಂಗದಲ್ಲಿ, ಹಳ್ಳಿಯ ಹತ್ತು ಸಮಸ್ತರು ಹೀಗೆ ಹಲವಾರು ಕೃತಿಗಳು ಪ್ರಕಟವಾಗಿವೆ. ಇಂತಹ ಒಡನಾಟ ಕಥನ ಪ್ರಕಾರಕ್ಕೆ ಶೂದ್ರ ಅವರ ಈ ಬರಹಗಳು ಮೌಲಿಕ ಸೇರ್ಪಡೆ ಆಗಬಲ್ಲವು. ಇಲ್ಲಿನ ಹಲವಾರು ಬರಹಗಳು ಒಡನಾಟ ಕಥನಕ್ಕೆ ಮಾತ್ರ ಸೀಮಿತವಾಗದೆ ಸಾಮಾಜಿಕ ಬದ್ಧತೆಯಿಂದ, ವೈಚಾರಿಕ ಸ್ಪಷ್ಟತೆಯಿಂದ ನಮ್ಮ ನಡವಳಿಗಳನ್ನು ವಿಮರ್ಶಿಸುವ, ವ್ಯಾಖ್ಯಾನಿಸುವ ನೆಲೆಗೂ ಬೆಳೆಯುತ್ತವೆ. ಹಾಗಾಗಿ ಇಲ್ಲಿನ ಬರಹಗಳು ಕೇವಲ ವ್ಯಕ್ತಿಚಿತ್ರಗಳಲ್ಲ, ಕೇವಲ ಒಡನಾಟ ಚಿತ್ರಗಳೂ ಅಲ್ಲ. ‘ದೇಸಿ ವೈದ್ಯ ಪದ್ಧತಿ ಎಂಬ ಸಂಜೀವಿನಿ’, ‘ಶ್ರೇಷ್ಠತೆ ಮತ್ತು ಉತ್ತಮತೆಯ ಕಡೆಗೆ’ ಇಂತಹ ಥೀಮ್ಯಾಟಿಕ್ ಆದ ಬರಹಗಳೂ ಇಲ್ಲಿ ಇವೆ. ಹತ್ತಾರು ವ್ಯಕ್ತಿಗಳ ಕುರಿತ ನೆನಪುಗಳು, ವಿಶ್ಲೇಷಣೆಗಳೂ ಇಲ್ಲಿವೆ. ಆದರೆ ಇಲ್ಲಿನ ಲೇಖನಗಳಲ್ಲಿ ಎಷ್ಟೆಲ್ಲ ನೆನಪುಗಳನ್ನು ಹೆಕ್ಕಿ ಜೋಡಿಸಿ ಬರೆಯಬಲ್ಲ ಇವರ ನೆನಪಿನ ಶಕ್ತಿ ಮಾತ್ರ ಸೋಜಿಗವನ್ನು ಹುಟ್ಟಿಸುತ್ತದೆ. ಅಲ್ಲದೆ ಎಷ್ಟೆಲ್ಲ ವ್ಯಕ್ತಿಚಿತ್ರಗಳು ಇಲ್ಲಿ ಇದ್ದರೂ ಅಪ್ರಮಾಣಿಕತೆಯ ಎಳೆ ಎಲ್ಲು ಸುಳಿಯುವುದಿಲ್ಲ ಕೂಡ.

ಇಲ್ಲಿನ ಕೆಲವು ಸಾಹಿತ್ಯಲೋಕದ ನೆನಪುಗಳು ತುಂಬಾ ಅಪರೂಪದವು. ಶ್ರೀಕೃಷ್ಣ ಆಲನಹಳ್ಳಿ, ಕಿರಂ, ಡಿ.ಆರ್, ಅನಂತಮೂರ್ತಿ ಇವರೆಲ್ಲ ಕಿರಂ ಮನೆಯಲ್ಲಿ ಸೇರಿ ಅಡಿಗ ಮತ್ತು ಪುತಿನರ ಕಾವ್ಯ ಕುರಿತು ತೀವ್ರವಾಗಿ ಚರ್ಚಿಸಿದ್ದು, ಆಲನಹಳ್ಳಿ ಅವರ ಮೊಂಡು ಹಠ ಮತ್ತು ಕಿಡಿಗೇಡಿ ಸ್ವಭಾವಗಳ ಚಿತ್ರ; ಆರ್.ಸಿ. ಹಿರೇಮಠರು ಧಾರವಾಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದದ್ದನ್ನು ವಿರೋಧಿಸಿ ಹುಟ್ಟಿಕೊಂಡ ಜಾಗೃತ ಸಾಹಿತ್ಯ ವೇದಿಕೆ, ಆ ಮೂಲಕ ಹುಟ್ಟಿದ ಸಾಹಿತ್ಯದಲ್ಲಿ ಶ್ರೇಷ್ಠತೆಯ ಪ್ರಶ್ನೆಗಳು; 60ರ ದಶಕದಲ್ಲಿ ಶಿವಮೂರ್ತಿಶಾಸ್ತ್ರಿ ಚಾಮರಾಜಪೇಟೆಯ ಹಮಾಲರನ್ನೆಲ್ಲ ಸಾಹಿತ್ಯ ಪರಿಷತ್ತಿನ ಸದಸ್ಯರನ್ನಾಗಿ ಮಾಡುತ್ತಿದ್ದಾಗ ಅನಕೃ ವಿರೋಧಿಸಿದ್ದು, ಆಗ ಹುಟ್ಟಿಕೊಂಡ ಸಮಕಾಲೀನ ವಿಚಾರವೇದಿಕೆ; ಎಂಡಿಎನ್ ಆರಂಭಿಸಿದ ಯುವಜನಸಭಾ ಸಂಘಟನೆಯ ವಿಚಾರ; ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಆಗಾಗ ನಡೆಯುತ್ತಿದ್ದ ಪಿಪಿ ಕಟ್ಟೆ ಚರ್ಚೆಗಳು; ಆರ್.ವೆಂಕಟಸ್ವಾಮಿ ಅವರ ಜೊತೆ ಸೇರಿ ಇವರು ‘ನಮ್ಮ ನಡುವಿನ ಹೋರಾಟಗಾರರು’ ಕಾರ್ಯಕ್ರಮ ರೂಪಿಸಿದ್ದು ಹೀಗೆ ಹಲವು ನೆನಪುಗಳು ಇಲ್ಲಿ ನಿರೂಪಿತ ಆಗಿವೆ.

ವ್ಯಕ್ತಿಯೊಬ್ಬ ತನ್ನ ಆತ್ಮಚರಿತ್ರೆಯ ಭಾಗಗಳೋ ಎಂಬಂತೆ ತನ್ನ ಅನುಭವದ ತುಣುಕುಗಳನ್ನು ಬರೆಯುತ್ತ ಹೋದಾಗ ಆತನಿಗೆ ಅರಿವಿಲ್ಲದಂತೆ ಆ ಬರವಣಿಗೆಯು ಆತ ಪ್ರತಿನಿಧಿಸುವ ಒಂದು ಕಾಲಮಾನದ ಸಾಮಾಜಿಕ ಚರಿತ್ರೆಯ ಭಾಗವೇ ಆಗಿ ಸಂಭವಿಸಬಹುದು. ಚರಿತ್ರೆ ಬರವಣಿಗೆ ವೇಷದಲ್ಲಿ ಆ ಬರವಣಿಗೆ ಇಲ್ಲದಿದ್ದರೂ ಕನ್ನಡ ಸಮಾಜದ ಚಾರಿತ್ರಿಕ ತುಣುಕೊಂದು ಇಂತಹ ಕಡೆ ಸಿಗುತ್ತದೆ. ಹಾಗಾಗಿ ಕರ್ನಾಟಕದ ಸದ್ಯಃಪೂರ್ವ ಸಮಾಜೋ-ರಾಜಕೀಯ, ಸಮಾಜೋ-ಸಾಂಸ್ಕೃತಿಕ ಚರಿತ್ರೆಯ ಬಗೆಗೆ ತಿಳಿಯಬಯಸುವವರು ಇವರ ಇಲ್ಲಿನ ನೆನಪಿನ ಚಿತ್ರಗಳನ್ನು ಅಗತ್ಯವಾಗಿ ಓದಬಹುದು.

ಕೋಮುವಾದ, ಜಾತೀಯತೆ, ಭಾಷಾಂಧತೆ, ಗಡಿತಂಟೆಗಳು, ಅಧಿಕಾರದಾಹ, ಅಸಹನೆ, ಸ್ವಯಂಪ್ರದರ್ಶನದ ನಾರ್ಸಿಸಸ್‍ ತನ ಇತ್ಯಾದಿ ಇತ್ಯಾದಿ ನಮ್ಮ ನಡುವಣ ವ್ಯಕ್ತಿಕೇಂದ್ರಿತ ಮತ್ತು ಸಾಮಾಜಿಕ ಬಿಕ್ಕಟ್ಟುಗಳ ಬಗ್ಗೆ ಕಳಕಳಿಪೂರ್ಣ ಬರಹಗಳು ಇಲ್ಲಿವೆ. ಈ ಹಿನ್ನೆಲೆಯಲ್ಲಿ ನಮ್ಮ ದೃಷ್ಟಿಕೋನಗಳು ರೂಪಗೊಳ್ಳಬೇಕಾಗಿರುವ ಬಗೆ, ವ್ಯಕ್ತಿಯೊಬ್ಬ ತಪ್ಪು ಮಾಡಿದರೆ ಉಂಟಾಗಬೇಕಾದ ಪಾಪಪ್ರಜ್ಞೆ, ನಮ್ಮಲ್ಲಿರಬೇಕಾದ ಇನ್ನೊಬ್ಬರ ದುಃಖಕ್ಕೆ ಮಿಡಿಯುವ ಹೃದಯವಂತಿಕೆ ಇತ್ಯಾದಿ ವ್ಯಕ್ತಿತ್ವ ನಿರ್ಮಾಣದ ನೆಲೆಯ ಹಲವಾರು ಸಲಹೆ ಸೂಚನೆಗಳು ಇಲ್ಲಿನ ಬರಹಗಳಲ್ಲಿವೆ. ಭಾಷಾಸೌಹಾರ್ದ, ಕೋಮುಸೌಹಾರ್ದ, ಜಾತ್ಯತೀತ ಧೋರಣೆ, ಸಹಬಾಳ್ವೆಯ ನೆಲೆಗಳು ಇಲ್ಲಿನ ಬರಹಗಳಲ್ಲಿ ಹೆಚ್ಚು ಎದ್ದು ಕಾಣುವ ಸಂಗತಿಗಳು. ಹಾಗೆಯೇ ನಮ್ಮ ವಿಮರ್ಶೆ ನಿರ್ವಹಿಸಬೇಕಾದ ಕೆಸಲ ಏನು ಎಂಬ ಸುಳಿವುಗಳೂ ಇಲ್ಲಿನ ಒಂದೆರಡು ಲೇಖನಗಳಲ್ಲಿ ಸಿಗುತ್ತವೆ.

ಸಾಹಿತ್ಯದ ಉದ್ವಿಗ್ನತೆ, ಸಾಮಾಜಿಕ ಸ್ಥಿತ್ಯಂತರ ಇಂತಹ ಕೆಲವೊಂದು ಅಪುರೂಪದ ಲೇಖನಗಳೂ ಇಲ್ಲಿವೆ. ಇವು ನೆನಪು-ಒಡನಾಟ ಕಥನಗಳಿಂದ ಪೂರ್ಣ ಆಚೆ ಸರಿದಿಲ್ಲವಾದರೂ ಚಿಂತನ ಕೇಂದ್ರಿತ ಬರಹಗಳಂತೆ ಇವು ಮೂಡಿ ಬಂದಿವೆ. ‘ಉದ್ವಿಗ್ನತೆ, ತಳಮಳ, ಗೊಂದಲ, ಸಂಭ್ರಮ ಎಲ್ಲವೂ ಒಂದೇ ಬಾಂಡಲಿಯಲ್ಲಿ ಕುದಿಯುತ್ತಿವೆ’ ಎಂಬಂತಹ ಕಾವ್ಯಾತ್ಮಕ ಸಾಲುಗಳೂ ಇಲ್ಲಿವೆ. ಹೌದು ಶೂದ್ರರ ಇಲ್ಲಿನ ಎಲ್ಲ ಬರಹಗಳಲ್ಲೂ ಆತಂಕ, ತಳಮಳ, ಗೊಂದಲ, ಸಂಭ್ರಮಗಳೆಲ್ಲವೂ ಒಟ್ಟಿಗೇ ಕುದಿಯುತ್ತವೆ. ಸಂಭ್ರಮದ, ಖುಷಿಯ, ಸಹಬಾಳ್ವೆಯ ಹಂಬಲ ಇಲ್ಲಿನ ಎಲ್ಲ ಬರಹಗಳಲ್ಲೂ ಮನೆಮಾಡಿದೆ. ಶೂದ್ರ ಅವರ ಪ್ರಾಮಾಣಿಕತೆ, ಸರಳತೆ, ಪಾರದರ್ಶಕತೆ ಮತ್ತು ನೆನಪಿನ ಶಕ್ತಿಗೆ ನನ್ನ ಅಭಿನಂದನೆಗಳು.

ಈ ಅಂಕಣದ ಹಿಂದಿನ ಬರೆಹಗಳು:
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...