ಅಷ್ಟಾವರಣಗಳ ತೌಲನಿಕ ವಿವೇಚನೆ

Date: 27-02-2022

Location: ಬೆಂಗಳೂರು


'ಜಂಗಮವೆಂದರೆ-ಅನುಭಾವ. ಇಂತಹ ಅನುಭಾವ ಅಂತರಂಗದೊಳಗೆ ಜಾಗೃತವಾಗಬೇಕಾದರೆ; ನಾನು-ನನ್ನದೆಂಬ ಅಹಂಭಾವವನ್ನು ಬಿಡಬೇಕಾಗುತ್ತದೆ. ಧನ-ಕನಕಾದಿಗಳನ್ನು ಸಂಕಷ್ಟದಲ್ಲಿರುವವರಿಗೆ, ಕಡುಬಡವರಿಗೆ ಹಂಚಬೇಕಾಗುತ್ತದೆ. ಹೀಗೆ ತನ್ನಲ್ಲಿರುವುದನ್ನೆಲ್ಲ ಕಳೆದುಕೊಂಡಾಗ ಅನುಭಾವವೆಂಬ ಬೆಳಕು ನಮ್ಮೊಳಗೆ ಪ್ರವೇಶಿಸುತ್ತದೆ' ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ ಶರಣ ಧರ್ಮ ಅಂಕಣದಲ್ಲಿ ಅಷ್ಟಾವರಣಗಳ ತೌಲನಿಕ ವಿವೇಚನೆಗಳ ಕುರಿತು ವಿಶ್ಲೇಷಿಸಿದ್ದಾರೆ.

ಬಸವಾದಿ ಶರಣರು ಕಟ್ಟಿಕೊಂಡ ಅಷ್ಟಾವರಣಗಳ ಬಗೆಗೆ ಇಲ್ಲಿ ಚರ್ಚಿಸಲಾಗಿದೆ. ಇಷ್ಟಲಿಂಗದ ಪೂಜೆಯಿಂದ ಮನಸ್ಸಿನ ತುಂಬೆಲ್ಲ ಲಿಂಗಭಾವ ಆವರಿಸುತ್ತದೆ, ಅದೇ ಭಾವಲಿಂಗ. ಇಷ್ಟಲಿಂಗ ಕಣ್ಣಿಗೆ ಕಾಣಿಸುತ್ತದೆ ಮನವೆಂಬ ಭಾವಲಿಂಗ ಕಣ್ಣಿಗೆ ಕಾಣಿಸುವುದಿಲ್ಲ. ಅರಿವಿನ ಪ್ರಕ್ರಿಯೆಯಲ್ಲಿ ಹುಟ್ಟುವುದು ಜ್ಞಾನ. ಇಂತಹ ಜ್ಞಾನವೇ ಜಂಗಮ. ಆದರೆ ಸಾಮಾನ್ಯಜನ ಜಾತಿ ಜಂಗಮರನ್ನು, ಧರ್ಮಪ್ರಚಾರಕರನ್ನು ಜಂಗಮರೆಂದು ನಂಬಿದ್ದರು. ಶರಣರು ಇದನ್ನು ತಿರಸ್ಕರಿಸಿ ಜಂಗಮವೆಂದರೆ ಚಲನಶೀಲವಾದುದು, ಅದೇ ನಿಜವಾದ ಜ್ಞಾನ, ಅದೇ ನಿಜವಾದ ಅನುಭಾವವೆಂದು ಸ್ಪಷ್ಟಪಡಿಸಿದರು. ಹೀಗಾಗಿ ಹಿಂದಿದ್ದ ಜಾತಿ ಜಂಗಮ ಹೊರಟುಹೋಗಿ ಒಳಗಿದ್ದ ಅನುಭಾವ ಜಂಗಮ ಕಾಣಿಸಿಕೊಂಡ. ಶೈವ-ವೀರಶೈವ ಧರ್ಮದಲ್ಲಿ ಪಾದೋದಕವೆಂದರೆ ಸ್ಥಾವರಲಿಂಗದ ಮೈತೊಳೆದ ನೀರಿಗೆ, ಜಂಗಮನ ಪಾದ ತೊಳೆದ ನೀರಿಗೆ ಪಾದೋದಕವೆಂದು ಕರೆಯಲಾಗುತಿತ್ತು. ಪಾದೋದಕವೆಂಬುದು ಪಾದತೊಳೆದ ಹೊಲಸು ನೀರಲ್ಲ; ಅದು ಒಳಗೆ ಹರಿವ ಜ್ಞಾನದ ಸೆಲೆಯೆಂದು ಶರಣರು ಸಾರಿದರು. ಜ್ಞಾನವೇ ಜಂಗಮವಾದಾಗ ಆ ಜ್ಞಾನದ ಸೆಲೆಯೇ ಪಾದೋದಕವಾಯಿತು. ವಿಭೂತಿಯನ್ನು ಶೈವರು-ಶೈವಬ್ರಾಹ್ಮಣರು ಹಣೆಯ ಮೇಲೆ ಧರಿಸುತ್ತಿದ್ದರು, ಸ್ಥಾವರಲಿಂಗಕ್ಕೆ ವಿಭೂತಿ ಹಚ್ಚುತ್ತಿದ್ದರು. ಹೀಗಾಗಿ ವಿಭೂತಿ ಹೊರಗೆ ಕಾಣುತಿತ್ತು. ಶರಣರು ಇಂತಹ ವಿಭೂತಿಯ ಬಗೆಗೆ ಹೇಳಲಿಲ್ಲ; ಜ್ಞಾನದ ಪ್ರಕಾಶವೇ ವಿಭೂತಿಯೆಂದವರು ಹೇಳಿದರು. ಹೀಗಾಗಿ ಜ್ಞಾನವೆಂಬ ಜಂಗಮನ ಮೂಲಕ ಹರಿಯುವ ಅರಿವಿನ ಜಲ ಪಾದೋದಕವಾದರೆ, ಆ ಜಲ ಸೇವಿಸಿದ ನಂತರ ಉಂಟಾಗುವ ಬೆಳಕು ವಿಭೂತಿಯಾಯಿತು. ಇಂತಹ ಪ್ರಕಾಶದ ದೃಷ್ಟಿಯೇ ರುದ್ರಾಕ್ಷಿಯೆಂದು ಶರಣರು ಸ್ಪಷ್ಟಪಡಿಸಿದ್ದಾರೆ. ಹೀಗೆ ಮನದಲ್ಲಿ ಹುಟ್ಟಿದ ಅರಿವು ಜಾಗೃತಿಗೊಂಡು ಜ್ಞಾನವಾಗಿ, ಆ ಜ್ಞಾನಜಲ ಪಾದೋದಕವಾಗಿ, ಅದರ ಪ್ರಕಾಶ ವಿಭೂತಿಯಾಗಿ, ಆ ಜ್ಞಾನಸಾರಾಮೃತ ದೃಷ್ಟಿ ರುದ್ರಾಕ್ಷಿಯಾಗಿ, ಅಂತಹ ಜ್ಞಾನದ ಶಕ್ತಿಕೇಂದ್ರವಾದ ಭಕ್ತನ ನಾಮವೇ ಮಂತ್ರವೆಂದು ಶರಣರು ಹೇಳಿದ್ದಾರೆ. ಹೀಗೆ ಭಕ್ತ, ಸದ್ಭಕ್ತನಾಗಿ ಪರಬ್ರಹ್ಮನಾಗುವುದು ಅಷ್ಟಾವರಣದ ಪ್ರಕ್ರಿಯೆಯಾಗಿದೆ.

ಅಷ್ಟಾವರಣಗಳು ಒಳಗಡೆಯೇ ಇವೆಯೆಂಬುದನ್ನು ಸ್ಪಷ್ಟಪಡಿಸಿದ ಶರಣರು ಗುರು-ಲಿಂಗ-ಜಂಗಮಗಳ ಪರಿಕಲ್ಪನೆಯನ್ನು ತಮ್ಮದೇ ಆದ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ದೇಹ-ದೇವಾಲಯವಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಗುರು-ಲಿಂಗ-ಜಂಗಮ-ಪ್ರಸಾದ-ಪಾದೋದಕ-ವಿಭೂತಿ-ರುದ್ರಾಕ್ಷಿಗಳು ದೇಹದ ಮೂಲಕ ಪ್ರಕಟವಾದಾಗ:ತನು-ಮನ-ಆತ್ಮ-ಪ್ರಾಣ-ಭಾವ-ನೊಸಲು-ಕೊರಳು-ಜಿಹ್ವೆಯ ಮೂಲಕ ಕಾಣಿಸಿಕೊಳ್ಳತ್ತವೆ. ಆಗ ತನುವೇ ಗುರುವಾಗುತ್ತದೆ, ಮನವೇ ಲಿಂಗವಾಗುತ್ತದೆ, ಆತ್ಮವೇ ಜಂಗಮವಾಗುತ್ತದೆ. ಬಾಹ್ಯವಾಗಿದ್ದ ಈ ಅಷ್ಟ ಆವರಣಗಳನ್ನು ಹೀಗೆ ಅಂತರಂಗಕ್ಕಿಳಿಸಿ ದೇಹವನ್ನು ದೇವಾಲಯದ ಪ್ರತಿಮೆಯಂತೆ ಕಟ್ಟಿಕೊಂಡಿರುವುದು ಗಮನಾರ್ಹವಾಗಿದೆ. ಧಾರ್ಮಿಕ ಪ್ರಜ್ಞೆ ಹೇಗೆ ವ್ಯಕ್ತಿಯ ಸಾಧ್ಯತೆಗಳನ್ನು ತೆರೆದುತೋರಿಸುತ್ತದೆಂದಕ್ಕೆ ಅನೇಕ ವಚನಗಳು ಸಾಕ್ಷಿಯಾಗಿವೆ. ಇಂತಹ ವಚನಗಳು ನಿಜವಾದ ಅಷ್ಟಾವರಣಗಳ ಪರಿಚಯ ಮಾಡಿಕೊಡುತ್ತವೆ.

ಶರಣರು ಗುರ-ಲಿಂಗ-ಜಂಗಮ ಪರಿಕಲ್ಪನೆಯನ್ನು ಹೊಸದಾಗಿ ಕಟ್ಟಿಕೊಂಡರು. ಹಾಡಿ ಬೇಡ ಉಣ್ಣುವ ಜಂಗಮರು, ಕಾಡಿ ಬೇಡಿ ಉಣ್ಣುವ ಜಂಗಮರು, ವ್ಯಾಪಾರ ಮಾಡಿ ಉಣ್ಣುವ ಜಂಗಮರು ಶರಣರ ಕಣ್ಣೆದುರು ಇದ್ದರು. ಇಂತವರನ್ನು ಅಂಬಿಗರ ಚೌಡಯ್ಯ ವಿಡಂಬಿಸಿದ್ದಾರೆ. ಇವರು ಬ್ರಹ್ಮ-ವಿಷ್ಣು-ಇಂದ್ರ ಇವರ ಸಂತತಿಯವರಾಗಿದ್ದಾರೆಂದು ಕಟುವಾಗಿ ಟೀಕಿಸಿದ್ದಾರೆ.

ಗುರು-ಲಿಂಗ-ಜಂಗಮರಿಗೆ ತನು-ಮನ-ಧನಗಳನ್ನು ಕೂಡಬೇಕೆಂದು ಶರಣರು ತಮ್ಮ ಅನೇಕ ವಚನಗಳಲ್ಲಿ ಹೇಳಿದ್ದಾರೆ. ಗುರುವಿಂಗೆ-ತನುವನು, ಲಿಂಗಕ್ಕೆ-ಮನವನು, ಜಂಗಮನಿಗೆ ಧನವನೊಪ್ಪಿಸಬೇಕೆಂದವರು ತಿಳಿಸಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಅನೇಕ ಸ್ವಾಮಿಗಳು; ಗುರುವಿಗೆ ತನುವನರ್ಪಿಸಬೇಕಮ್ಮಾ ಎಂದು ಭಕ್ತೆಯರನ್ನು ಕೇಳುತ್ತಾರೆ. ಬಸವಣ್ಣ ಮೊದಲಾದ ಶರಣರೇ ಹೇಳಿದ್ದಾರಲ್ಲಾ “ಗುರುವಿಗೆ ತನುವನರ್ಪಿಸಬೇಕೆಂದು” ಮತ್ತೇಕೆ ತಡ, ನೀವು ಮೋಕ್ಷಹೊಂದಬೇಕಾದರೆ ನಮ್ಮಂತಹ ಗುರುಗಳಿಗೆ ತನುವನೊಪ್ಪಿಸಬೇಕೆಂದು ಅಧಿಕಾರವಾಣ ಯಿಂದ ಕೇಳುತ್ತಾರೆ. ಆದರೆ ಶರಣರು ಹೇಳಿದ ಗುರು-ಲಿಂಗ-ಜಂಗಮರು ಹೊರಗಿನವರಲ್ಲ, ಅವರು ಒಳಗಿನವರು. ಕಣ್ಣಿಗೆ ಕಾಣುವ ವ್ಯಕ್ತಿರೂಪದ ಗುರು-ಜಂಗಮರಲ್ಲ ಅವರು, ಒಳಗಡೆ ಇರುವ ತತ್ವರೂಪದ ಗುರು-ಜಂಗಮರು ಅವರು.

ಗುರುವೆಂದರೆ-ಅರಿವು. ಗುರುವೆಂಬ ವ್ಯಕ್ತಿ ಹೊರಗೆ ಇರುತ್ತಾನೆ, ಆದರೆ ಅರಿವೆಂಬ ತತ್ವ ಒಳಗಿರುತ್ತದೆ ಇಂತಹ ಅರಿವೆಂಬ ತತ್ವವೇ ಗುರು. ಈ ಅರಿವಿಗೆ ಹೇಗೆ ದೇಹವನ್ನು ಅರ್ಪಿಸುವುದು? ಎಂದರೆ; ಅರಿವನ್ನು ಪಡೆಯುವದಕ್ಕಾಗಿ ದೇಹದಂಡಿಸುವುದು ಎಂದರ್ಥ. ದೇಹವನ್ನು ಸಿಕ್ಕಂತೆ ಬೆಳೆಸಿದರೆ, ಅರಿವಿನ ದಾರಿಕಾಣುವದಿಲ್ಲ. ಆದ್ದರಿಂದ ದನದಂತಿರುವ ದೇಹವನ್ನು ದಂಡಿಸಿ, ಕಾಯಕದಿಂದ ಆ ದೇಹವನ್ನು ಸವೆಸಿದಾಗ ಆ ದೇಹದಲ್ಲಿದ್ದ ಅರಿವು ಗುರುವಾಗಿ ಬೆಳೆಯುತ್ತದೆ.

ಲಿಂಗವೆಂದರೆ-ಆಚಾರ ಅಥವಾ ಆಚರಣೆ. ಯಾವುದೇ ವಿಚಾರ ಆಚಾರವಾಗಬೇಕಾದರೆ; ಆಚರಣೆಯಲ್ಲಿ ಬರಬೇಕಾದರೆ ಅದಕ್ಕೆ ಮನಸ್ಸು ಬಹಳ ಮುಖ್ಯ. ಮನಸ್ಸು ಕೊಟ್ಟು ಕೇಳಿದರೆ ಮಾತ್ರ ವಿಚಾರಗಳು ಒಳಗೆ ಹೋಗುತ್ತವೆ. ಆದ್ದರಿಂದ ಆಚಾರವೆಂಬ ಲಿಂಗಕ್ಕೆ ಮನವನರ್ಪಿಸಬೇಕೆಂದು ಹೇಳಿದ್ದಾರೆ. ಮನಸ್ಸಿಗೂ-ಆಚರಣೆಗೂ-ಲಿಂಗಕ್ಕೂ ಸಂಬಂಧವಿದೆ. ಆದ್ದರಿಂದ ಲಿಂಗಕ್ಕೆ ಮನವನರ್ಪಿಸಬೇಕೆಂದಿದ್ದಾರೆ.

ಜಂಗಮವೆಂದರೆ-ಅನುಭಾವ. ಇಂತಹ ಅನುಭಾವ ಅಂತರಂಗದೊಳಗೆ ಜಾಗೃತವಾಗಬೇಕಾದರೆ; ನಾನು-ನನ್ನದೆಂಬ ಅಹಂಭಾವವನ್ನು ಬಿಡಬೇಕಾಗುತ್ತದೆ. ಧನ-ಕನಕಾದಿಗಳನ್ನು ಸಂಕಷ್ಟದಲ್ಲಿರುವವರಿಗೆ, ಕಡುಬಡವರಿಗೆ ಹಂಚಬೇಕಾಗುತ್ತದೆ. ಹೀಗೆ ತನ್ನಲ್ಲಿರುವುದನ್ನೆಲ್ಲ ಕಳೆದುಕೊಂಡಾಗ ಅನುಭಾವವೆಂಬ ಬೆಳಕು ನಮ್ಮೊಳಗೆ ಪ್ರವೇಶಿಸುತ್ತದೆ. ಒಳಗೆ ಅಹಂಭಾವವನ್ನು ತುಂಬಿಕೊಂಡು ಹೊರಗೆ ಸಂಪತ್ತನ್ನು ಗಳಿಸಿಕೊಂಡವರು ಎಂದಿಗೂ ಅನುಭಾವಿಗಳಾಗಲಾರರು. ಅಲ್ಲಮ-ಅಕ್ಕನಂತವರು ಮಾತ್ರ ಅನುಭಾವಿಗಳಾಗುತ್ತಾರೆಯೇ ಹೊರತು

ಸಂಪತ್ತನ್ನು ಕಲೆಹಾಕಿಕೊಂಡು ಸಂಭ್ರಮದಿಂದ ತಿರುಗಾಡುವವರಲ್ಲ. ಆದ್ದರಿಂದಲೇ ಶರಣರು ಧನವನ್ನು ಜಂಗಮನಿಗರ್ಪಿಸಬೇಕೆಂದರು. ಇಲ್ಲಿ ಶರಣರು ಹೇಳಿರುವ ಅರಿವು-ಆಚಾರ-ಅನುಭಾವ ವ್ಯಕ್ತಿಯ ಒಳಗಡೆ ಇರುತ್ತವೆ. ಇವುಗಳಿಗೆ ಮೂರ್ತ ರೂಪವಿಲ್ಲ; ಇವು ನಿರಾಕಾರವಾಗಿವೆ. ಆದರೆ ಸ್ವಾರ್ಥಸ್ವಾಮಿಗಳು ಶರಣರ ಈ ಸತ್ಯವನ್ನು ಮುಚ್ಚಿಟ್ಟು ಮುಗ್ಧ ಭಕ್ತರನ್ನು ವಂಚಿಸಿ ತನು-ಮನ-ಧನಗಳನ್ನು ತಮಗೆ ಅರ್ಪಿಸಲು ಹೇಳುತ್ತಾರೆ. ಶರಣರು ಬೆಲೆಕೊಟ್ಟದ್ದು ಹೊರಗಿನದಕ್ಕಲ್ಲ-ಒಳಗಿನದಕ್ಕೆ; ಬಹಿರಂಗಕ್ಕಲ್ಲ-ಅಂತರಂಗಕ್ಕೆ. ಈ ಸತ್ಯ ತಿಳಿದುಕೊಂಡಾಗ ಒಳಗಿನ ಅರಿವು-ಆಚಾರ-ಅನುಭಾವಗಳೇ ಗುರು-ಲಿಂಗ-ಜಂಗಮವಾಗಿ ಕಾಣಿಸಿಕೊಳ್ಳುತ್ತವೆ.

ಅಷ್ಟಾವರಣಗಳು ತನ್ನೊಳಗಡೆ ಗಟ್ಟಿಯಾಗಿ ನೆಲೆಸಬೇಕಾದರೆ ಕುಲಮದ, ಛಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ರಾಜಮದ, ತಪಮದಗಳೆಂಬ ಅಷ್ಟಮದಗಳನ್ನು ತೊರೆಯಬೇಕೆಂಬುದನ್ನು ಶರಣರು ತಮ್ಮ ವಚನಗಳಲ್ಲಿ ಹೇಳಿದ್ದಾರೆ.

ಅಷ್ಟಾವರಣಗಳನ್ನು ಅಂತರಂಗದಲ್ಲಿ ಅಳವಡಿಸಿಕೊಳ್ಳುವುದು ತುಂಬ ಮುಖ್ಯವಾಗಿದೆಯೆಂದು ವಚನಕಾರರು ಸ್ಪಷ್ಟಪಡಿಸಿದ್ದಾರೆ. ಒಂದೊಂದು ಮದವನ್ನು ಕಳೆದುಕೊಳ್ಳುತ್ತಾ ಹೋದರೆ, ಒಂದೊಂದು ಶಕ್ತಿ ಜಾಗೃತವಾಗುತ್ತಾ ಹೋಗುತ್ತದೆ. ಕುಲಮದವಳಿದಾಗ ಗುರು ದೊರೆಯುತ್ತಾನೆ. ಛಲಮದವಳಿದಾಗ ಲಿಂಗ ದೊರೆಯುತ್ತದೆ. ಧನಮದವಳಿದಾಗ ಜಂಗಮ ಕಾಣಿಸುತ್ತಾನೆ. ರೂಪಮದವಳಿದಾಗ ಭಸ್ಮ ಕಾಣುತ್ತದೆ. ಯೌವನಮದವಳಿದಾಗ ರುದ್ರಾಕ್ಷಿ ಶೋಭಿಸುತ್ತದೆ. ವಿದ್ಯಾಮದವಳಿದಾಗ ಮಂತ್ರ ಲಭಿಸುತ್ತದೆ. ರಾಜಮದವಳಿದಾಗ ಪಾದೋದಕ ಸಿಗುತ್ತದೆ, ತಪಮದವಳಿದಾಗ ಪ್ರಸಾದ ಲಭಿಸುತ್ತದೆಂದು ಶರಣರು ತಿಳಿಸಿದರು. ಅಷ್ಟಾವರಣಗಳೆಂದರೆ ದೇವಾಲಯದ ಹೊರಗೆ ಮಾರುವ ವಿಭೂತಿ, ರುದ್ರಾಕ್ಷಿಗಳಲ್ಲ, ಪುರೋಹಿತರು ಪಠಿಸುವ ಮಂತ್ರಗಳಲ್ಲ; ವೇಷಧಾರಿಗಳಾದ ಗುರು-ಜಂಗಮರಲ್ಲ. ಅಷ್ಟಾವರಣಗಳ ನಿಜವಾದ ವೈರಿಗಳೇ ಅಷ್ಟಮದಗಳು. ಈ ಅಷ್ಟಮದಗಳನ್ನು ಕಳೆದುಕೊಂಡಾಗ ಭಕ್ತ ಅಷ್ಟಾವರಣಗಳನ್ನು ಹೊಂದುತ್ತಾನೆ. ಕುಲ-ಛಲ-ಧನ ಮದಗಳನ್ನಳಿಯುವುದು ಅಷ್ಟು ಸುಲಭದ ಕೆಲಸವಿಲ್ಲ. ಅಂತೆಯೇ ಅಷ್ಟಾವರಣಗಳನ್ನು ಹೊಂದುವದೂ ಸುಲಭದ ಮಾರ್ಗವಲ್ಲ. ಲಿಂಗಾಯತ ಧರ್ಮದ ತತ್ವಗಳು ಕೇಳಲು ಸರಳವಾಗಿದ್ದರೂ ಆಚರಿಸಲು ತುಂಬ ಕಠಿಣವಾಗಿವೆ.

ಅಷ್ಟಾವರಣಗಳು ಲಿಂಗಾಯತ ಧರ್ಮದ ತಳಹದಿಯಾಗಿದ್ದರಿಂದ ಇಂತಹ ಅಷ್ಟಾವರಣಗಳ ಆಚರಣೆ ಇರದವರನ್ನು ಎನಗೆ ತೋರದಿರು ಎಂದು ಅಣ್ಣ ಬಸವಣ್ಣ ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. “ಗುರುಲಿಂಗ ಜಂಗಮಕ್ಕೆ ಆಧಾರ ಬಸವಣ್ಣ
ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ
ಸರ್ವಾಪತ್ತಿಗಾಧಾರ ಬಸವಣ್ಣ.....”
-ಅಂಬಿಗರ ಚೌಡಯ್ಯ (ಸ.ವ.ಸಂ.6, ವ:136)

ಎಂದು ಬಸವಣ್ಣನವರ ವ್ಯಕ್ತಿತ್ವನ್ನು ಮೆಚ್ಚಿಕೊಂಡ ಚೌಡಯ್ಯ ಬಸವಣ್ಣನವರ ಶ್ರೀಪಾದಕ್ಕೆ ನಮೋ ನಮೋ ಎಂದಿದ್ದಾರೆ.

ಅಷ್ಟಾವರಣಗಳು ಈ ದೇಹವೆಂಬ ದೇವಾಲಯದಲ್ಲಿ ಎಲ್ಲೆಲ್ಲಿ ನೆಲೆಗೊಳ್ಳುತ್ತವೆ. ಅವುಗಳು ನಿಲ್ಲುವ ತಾಣ ಯಾವುದೆಂದು ಶರಣರು ತಿಳಿಸಿದ್ದಾರೆ. ಅರುಹಿನಲ್ಲಿ-ಗುರು, ಪ್ರಾಣದಲ್ಲಿ-ಲಿಂಗ, ಜ್ಞಾನದಲ್ಲಿ-ಜಂಗಮ, ಘ್ರಾಣದಲ್ಲಿ-ಪ್ರಸಾದ, ಜಿಹ್ವೆಯಲ್ಲಿ-ಪಾದೋದಕ, ನೇತ್ರದಲ್ಲಿ-ರುದ್ರಾಕ್ಷಿ, ತ್ವಕ್ಕಿನಲ್ಲಿ-ವಿಭೂತಿ, ಶ್ರೋತ್ರದಲ್ಲಿ-ಮಂತ್ರ ಹೀಗೆ ದೇಹದ ಎಂಟು ಸ್ಥಾನಗಳಲ್ಲಿ ಅಷ್ಟಾವರಣಗಳು ಮನೆಮಾಡುತ್ತವೆ. ಈ ಅಷ್ಟಾವರಣಗಳು ದೇಹವನ್ನು ಪ್ರವೇಶಿಸಿದ ಕೂಡಲೇ, ಆತ್ಮ-ಪರಮಾತ್ಮನಾಗಿ ಕರಸ್ಥಲದ ಇಷ್ಟಲಿಂಗದ ಮೇಲೆ ಕಾಣಿಸಿಕೊಳ್ಳುತ್ತಾನೆ. ಆತ ಬೇರೆ ಯಾರೂ ಆಗಿರದೆ ಸಾಕ್ಷಾತ್ ನಿರಂಜನಮೂರ್ತಿಯಾಗಿರುತ್ತಾನೆ, ಜ್ಞಾನದ ಪುಂಜವಾಗಿರುತ್ತಾನೆ, ಬಯಲ ಬೆಳಕಾಗಿರುತ್ತಾನೆ. ಲಿಂಗಾಯತ ಧರ್ಮದ ಧಾರ್ಮಿಕ ತತ್ವಗಳಾದ ಅಷ್ಟಾವರಣಗಳು ಒಳಗೇ ಬೆಳೆದು ನಿಲ್ಲುವ ಪರಿಯನ್ನು, ಅವು ಒಳಗೆ ಕಂಡುಕೊಳ್ಳುವ ಅಸ್ತಿತ್ವವನ್ನು ಕುರಿತಂತೆ ವಚನಕಾರರು ಸೊಗಸಾಗಿ ನಿರೂಪಿಸಿದ್ದಾರೆ.

ಅಷ್ಟಾವರಣಗಳು ಒಳಗಡೆ ನೆಲೆನಿಂತ ಮೇಲೆ ಭಕ್ತನಾದವನು ಅಂಗಸುಖ, ಮನದ ಸುಖ, ಪ್ರಾಣದ ಸುಖ, ರಸದ ಸುಖ, ವಾಸನೆಯ ಸುಖ, ಸೋಂಕಿನ ಸುಖ, ಸ್ತ್ರೀ ಸುಖ, ಕೇಳುವ ಸುಖ ಹೀಗೆ ಈ ಎಂಟು ಸುಖಗಳನ್ನು ತ್ಯಜಿಸಿಬೇಕೆಂದು ತಿಳಿಸಿದ್ದಾರೆ. ಆಗ ಷಡ್‍ವೈರಿಗಳಾದ ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳು ತನ್ನಿಂದ ತಾನೇ ದೂರವಾಗುತ್ತವೆ. ಈ ಷಡ್‍ವರ್ಗಗಳು ಮನುಷ್ಯನ ವೈರಿಗಳಾಗಿವೆ. ಆದುದರಿಂದ ಭಕ್ತ ಅಷ್ಟಾವರಣಿಯಾಗಿರಬೇಕೆಂದು ಶರಣರು ಹೇಳುತ್ತಾರೆ. ತನ್ನನ್ನು ಬಿಟ್ಟು ಗುರುವಿಲ್ಲ, ತನ್ನನ್ನು ಬಿಟ್ಟು ಲಿಂಗವಿಲ್ಲ, ತನ್ನನ್ನು ಬಿಟ್ಟು ಜಂಗಮವಿಲ್ಲ. ಹೀಗೆ ತನ್ನನ್ನು ಬಿಟ್ಟು ಅಷ್ಟಾವರಣಗಳಿಲ್ಲ. ಆದ್ದರಿಂದ ಅವುಗಳನ್ನು ಒಳಗೆ ಕಂಡುಕೊಳ್ಳಬೇಕೆ ಹೊರತು ಹೊರಗಲ್ಲವೆಂದು ಘಟ್ಟಿವಾಳಯ್ಯಾ ಹೇಳಿದ್ದಾರೆ.

“ತನ್ನಿಂದ ಬಿಟ್ಟು ಗುರವಿಲ್ಲ, ತನ್ನಿಂದ ಬಿಟ್ಟು ಲಿಂಗವಿಲ್ಲ,
ತನ್ನಿಂದ ಬಿಟ್ಟು ಜಂಗಮವಿಲ್ಲ, ತನ್ನಿಂದ ಬಿಟ್ಟು ಪ್ರಸಾದವಿಲ್ಲ,
ತನ್ನಿಂದ ಬಿಟ್ಟು ಪಾದೋದಕವಿಲ್ಲ ತನ್ನಿಂದ ಬಿಟ್ಟು ಇನ್ನೇನೂ ಇಲ್ಲ,
ಅನಾದಿಯೊಳಗಿಲ್ಲ, ಭೇದಾಭೇದದೊಳಗಿಲ್ಲ
ಅದು ಇದು ಎಂಬುದಿಲ್ಲ.....”
-ಘಟ್ಟಿವಾಳಯ್ಯ (ಸ.ವಸಂ.7, ವ:473)

ಘಟ್ಟಿವಾಳಯ್ಯನಂತಹ ವಚನಕಾರರು ಎಲ್ಲವೂ ತನ್ನೊಳಗೇ ಇದೆಯೆಂದು ಸ್ಪಷ್ಟಪಡಿಸಿದ್ದಾರೆ. ತನುವನ್ನು ತಾಮಸದಿಂದ ಸಾತ್ವಿಕದತ್ತ ಕರೆದೊಯ್ಯಲು ಅರಿವೆಂಬ ಗುರು ಬರುತ್ತಾನೆ. ಮನವನ್ನು ಚಂಚಲತೆಯಿಂದ ಏಕಾಗ್ರತೆಯತ್ತ ಕರೆದೊಯ್ಯಲು ಇಷ್ಟಲಿಂಗವಿದೆ. ಧನದಾಸೆಯನ್ನು ಮರೆತು, ಆತ್ಮೋದ್ಧಾರ ಮಾಡಿಕೊಳ್ಳಲು ಅನುಭಾವವೆಂಬ ಜಂಗಮನಿದ್ದಾನೆ. ಹೀಗೆ ಒಳಗಿರುವ ಅಷ್ಟಾವರಣಗಳು, ಆತ್ಮನನ್ನು ಪರಮಾತ್ಮನನ್ನಾಗಿ ಮಾಡುತ್ತವೆ.

“ಶ್ರೀ ವಿಭೂತಿಯ ಹೂಸದವರ
ಶ್ರೀ ರುದ್ರಾಕ್ಷಿಯ ಧರಿಸದವರ
ನಿತ್ಯ ಲಿಂಗಾರ್ಚನೆಯ ಮಾಡದವರ
ಜಂಗಮವೇ ಲಿಂಗವೆಂದರಿಯದವರ
ಪ್ರಣವ ಪಂಚಾಕ್ಷರಿಯ ಜಪಿಸಿದವರ
ನಿತ್ಯ ಸತ್ಯಶುದ್ಧಿ ಕಾಯಕವಿಲ್ಲದವರ
ಸದ್ಭಕ್ತ ಶರಣರ ಸಂಗದಲ್ಲಿರದವರ
ತೋರದಿರು ಕೂಡಲಸಂಗಮದೇವ ಸೆರಗೊಡ್ಡಿ ಬೇಡುವೆನು.”
-ಬಸವಣ್ಣ (ಸ.ವ.ಸಂ.1, ವ:455)

ಈ ವಚನದಲ್ಲಿ ಬಸವಣ್ಣ ಹೊರ ಅಷ್ಟಾವರಣಗಳ ಮೂಲಕ, ಒಳ ಅಷ್ಟಾವರಣಗಳನ್ನು ಕುರಿತು ಹೇಳಿದ್ದಾರೆ. ವಿಭೂತಿ ಹಚ್ಚದವರು, ರುದ್ರಾಕ್ಷಿ ಧರಿಸದವರು, ನಿತ್ಯಲಿಂಗಾರ್ಚನೆ ಮಾಡದವರು, ಸದ್ಭಕ್ತರ ಸಂಗದಲ್ಲಿರದವರು ಭಕ್ತರಲ್ಲ. ಅಂತವರ ಮುಖವನ್ನು ತೋರಿಸದಿರು ಎಂದು ಹೇಳಿದ್ದಾನೆ. “ಜಂಗಮವೇ ಲಿಂಗವೆಂದರಿಯದವರ” ಎಂಬ ನುಡಿ ತುಂಬ ಮಹತ್ವದ್ದಾಗಿದೆ. ಜಂಗಮವೆಂದರೆ ಇಲ್ಲಿ ಅನುಭಾವ, ಲಿಂಗವೆಂದರೆ ಆಚಾರಲಿಂಗ. ಜಂಗಮತ್ವವು ಆಚರಣೆಗೆ ಬರದಿದ್ದರೆ ವ್ಯರ್ಥವಾಗುತ್ತದೆ. ಭಾವಲಿಂಗ-ಆಚಾರಲಿಂಗ ಕೂಡಿದಾಗ ಅನುಭಾವವೆಂಬ ಜಂಗಮಲಿಂಗ ಕಾಣಿಸಿಕೊಳ್ಳುತ್ತದೆ. ಈ ವಚನ ಹೊರ ಅಷ್ಟಾವರಣಗಳನ್ನು ಪ್ರಸ್ತಾಪಿಸುತ್ತಲೇ ಒಳ ಅಷ್ಟಾವರಣಗಳತ್ತ ಕರೆದೊಯ್ಯುತ್ತದೆ. ಇನ್ನೊಂದು ವಚನದಲ್ಲಿ ಬಸವಣ್ಣನವರು “ಗುರು-ಲಿಂಗ-ಜಂಗಮದಿಂದಲೇ ಪಾದೋದಕ-ಪ್ರಸಾದವಾಯಿತು (ವ:462)” ಎಂದು ಹೇಳಿದ್ದಾರೆ. ಅಂದರೆ ಪಾದೋದಕ-ಪ್ರಸಾದ ಹೊರಗಿಲ್ಲ ಅವೆಲ್ಲವೂ ಒಳಗೆ ಇವೆಯೆಂಬ ಸತ್ಯ ಈ ವಚನಗಳಿಂದ ಸ್ಪಷ್ಟವಾಗುತ್ತದೆ.

“ತಾನಿಲ್ಲದ ಮುನ್ನ ಗುರುವೆಲ್ಲಿಹುದೊ?
ಲಿಂಗವೆಲ್ಲಿಹುದೊ? ಜಂಗಮವೆಲ್ಲಿಹುದೊ?
ಪ್ರಸಾದವೆಲ್ಲಿಹುದೊ? ಪಾದೋದಕವೆಲ್ಲಿಹುದೊ?
ಪರವೆಲ್ಲಿಹುದೊ? ಸ್ವಯವೆಲ್ಲಿಹುದೊ?......”
-ಹಾವಿನ ಹಾಳ ಕಲ್ಲಯ್ಯ (ಸ.ವ.ಸಂ.9, ವ:1141)

ಈ ವಚನದಲ್ಲಿ ಹಾವಿನಹಾಳ ಕಲ್ಲಯ್ಯ ಅಷ್ಟಾವರಣಗಳ ಬಗ್ಗೆ ಮಹತ್ವದ ವಿಚಾರಗಳನ್ನು ತಿಳಿಸಿದ್ದಾರೆ. ಅಷ್ಟಾವರಣಗಳೆಲ್ಲ ತನ್ನ ಅರುಹಿನ ಕುರುಹು ಆಗಿವೆಯೆಂದು ವಿವರಿಸಿದ್ದಾರೆ. ಗುರು-ಲಿಂಗ-ಜಂಗಮ ಮೊದಲಾದ ಅಷ್ಟಾವರಣಗಳು ತನ್ನಂತರಂಗಕ್ಕೆ ವೇದ್ಯವಾಗಬೇಕೆಂದು ಹೇಳಿದ್ದಾರೆ. ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದ-ವಿಭೂತಿ-ರುದ್ರಾಕ್ಷಿ-ಮಂತ್ರ ಇವೆಲ್ಲವನ್ನು ಅರಿತವನು ತಾನೇ ಆದುದರಿಂದ, ಇವೆಲ್ಲವೂ ತನ್ನೊಳಗೇ ಇವೆಯೆಂದು ಹೇಳುತ್ತಾ ಅವೇ ಸ್ವಯಂಜ್ಯೋತಿಯಾಗಿ ಒಳಗಡೆ ಬೆಳಗುತ್ತವೆಯೆಂದು ತಿಳಿಸಿದ್ದಾರೆ.

“ಗುರುಪಾದ ತೀರ್ಥವೆ ಮಂಗಳ ಮಜ್ಜನವೆನಗೆ
ವಿಭೂತಿಯೆ ಒಳಗುಂದದರಿಷಿಣವೆನಗೆ
ದಿಗಂಬರವೆ ದಿವ್ಯಾಂಬರವೆನಗೆ
ಶಿವಭಕ್ತರ ಪಾದರೇಣುವೆ ಅನುಲೇಪವೆನಗೆ
ರುದ್ರಕ್ಷಿಯೆ ಮೈ ದೊಡಿಗೆಯೆನಗೆ......”
-ಅಕ್ಕಮಹಾದೇವಿ (ಸ.ವ.ಸಂ.5, ವ:200)

ಈ ವಚನದಲ್ಲಿ ಅಷ್ಟಾವರಣಗಳು ಹೊರ ಆಭರಣಗಳಾಗುತ್ತಲೇ ಒಳಗಿನ ಬೆಳಕೂ ಆಗಿವೆ. ಹೊರಗೆ ಇವು ಶೃಂಗಾರವಾಗಿ ಕಂಡರೆ, ಒಳಗೆ ಹೊಳೆವ ಬೆಳಗಾಗಿ ಕಾಣಿಸಿವೆ. ಗುರು ತನ್ನ ವಿನೋದಕ್ಕಾಗಿ ಲಿಂಗವಾಗಿ, ಜಂಗಮವಾಗಿ, ಪಾದೋದಕವಾಗಿ, ಪ್ರಸಾದವಾಗಿ, ವಿಭೂತಿಯಾಗಿ, ರುದ್ರಾಕ್ಷಿಯಾಗಿ, ಮಂತ್ರವಾಗಿ ಕಾಣಿಸಿಕೊಳ್ಳುತ್ತಾನೆಂದು ಅಕ್ಕ ತನ್ನ ಇನ್ನೊಂದು ವಚನದಲ್ಲಿ (ವ:199) ಸ್ಪಷ್ಟಪಡಿಸಿದ್ದಾರೆ. ಗುರು-ಅರಿವಾಗಿ, ಲಿಂಗ-ನಿಷ್ಠೆಯಾಗಿ, ಜಂಗಮ-ಬೆಳಕಾಗಿ ಅಕ್ಕನಿಗೆ ಕಾಣಿಸಿವೆ. ಅಂತೆಯೇ ಗುರು ತನ್ನ ವಿನೋದಕ್ಕಾಗಿ ಇಷ್ಟೆಲ್ಲ ರೂಪಗಳಲ್ಲಿ ಕಾಣಿಸಿಕೊಂಡಿದ್ದಾನೆಂದು ಹೇಳಿದ್ದಾರೆ. ನಿಷ್ಠೆ-ಬದ್ಧತೆ-ಧ್ಯಾನಗಳ ಸಾಧ್ಯತೆಗಳು ಹೆಚ್ಚಾದಾಗ ಹೊರಾವರಣಗಳೆಲ್ಲ, ಒಳಾವರಣಗಳಾಗಿ ಕಾಣಿಸಿಕೊಳ್ಳುತ್ತವೆಯೆಂಬುದು ಅಕ್ಕನ ನಂಬಿಕೆಯಾಗಿದೆ.

“ಅಂಗದ ಗುಣವನರಿತು ಲಿಂಗವನರಿಯಬೇಕೆಂಬರು
ಅಂಗವರಿತ ಮತ್ತೆ ಲಿಂಗಕ್ಕೆ ಕುರುಹುಂಟೆ?
ಅಂಗವೆ ಲಿಂಗ ನಿರಂಗವೆ ಸಂಗ
ಈ ಭಾವದ ಅಂಗವನರಿಯಬೇಕೆಂದನಂಬಿಗ ಚೌಡಯ್ಯ”
-ಅಂಬಿಗರ ಚೌಡಯ್ಯ (ಸ.ವ.ಸಂ.6, ವ:12)

ಈ ವಚನದಲ್ಲಿ ಚೌಡಯ್ಯ ಅಂಗವೇ ಲಿಂಗವೆಂದು ಹೇಳಿದ್ದಾರೆ. ದೇಹವೇ ದೇವಾಲಯವಾದಾಗ ಮನುಷ್ಯನ ಅಂಗವೇ ಲಿಂಗವಾಗುತ್ತದೆಂಬ ಮಾತು ಮಹತ್ವದ್ದಾಗಿವೆ. ಅಂಗದೊಳಗೆ ಲಿಂಗವಿಲ್ಲ, ಅಂಗದ ಹೊರಗೆ ಲಿಂಗವಿಲ್ಲ. ಅಂಗದಲ್ಲಿ ಅರಿವು ಜಾಗೃತವಾದಾಗ ಮಾತ್ರ, ಗುರುವೆಂಬ ಜ್ಞಾನಲಿಂಗ ಕಾಣಿಸಿಕೊಳ್ಳತ್ತದೆಂದು ತಿಳಿಸಿ ಹೇಳಿದ್ದಾರೆ. ಅಂಗಶೃಂಗಾರ ಮಾಡಿಕೊಂಡು ತಿರುಗುವವರನ್ನು ಭಂಗಗೇಡಿಗಳೆಂದು ವಿಡಂಬಿಸಿದ್ದಾರೆ. ಸಂಸಾರದ ಶೃಂಗಾರ ಬೇರೆ, ಆಧ್ಯಾತ್ಮದ ಶೃಂಗಾರ ಬೇರೆಯೆಂದು ಮತ್ತೊಂದು ವಚನದಲ್ಲಿ ವಿವರಿಸಿದ್ದಾರೆ. (ವ:14).

“ಅಯ್ಯಾ, ಅಂತರಂಗದಲ್ಲಿ ಅಷ್ಟಮಲಂಗಳಿಗೆ ಮೋಹಿಸಿ,
ಬಹಿರಂಗದಲ್ಲಿ...., ವಿಭೂತಿ, ರುದ್ರಾಕ್ಷಿ, ಶಿವಲಿಂಗ ಲಾಂಛನವ ಧರಿಸಿ
ಒಳಗೆ ಶುದ್ಧವಿಲ್ಲದೆ ಬರಿದೆ
ಶಿವಪ್ರಸಾದದ ಸುದ್ದಿಯ ಹೇಳುವವರಲ್ಲಿ
ಅಷ್ಟಾವರಣ ಪರಿಚಾರವಿಲ್ಲ ನೋಡಾ |
ತನ್ನಂತರಂಗ ಬಹಿರಂಗದಲ್ಲಿ ಚಿಜ್ಯೋತಿಲಿಂಗವೆಂಬ ರಮಣನ

ಸದ್ಗುರ ಮುಖದಿಂ ಕೂಡಿ ಎರಡಳಿದು
ಆ ಲಿಂಗದ ಚಿಚ್ಚೈತನ್ಯವೇ ನಿರಂಜನ ಜಂಗಮವೆಂದು
ಆ ಜಂಗಮವೆ ತಾನೆಂದರಿದು
ತನ್ನ ಚಿತ್ಕಳೆಯೇ ಚಿದ್ವಿಭೂತಿ-ರುದ್ರಾಕ್ಷಿ-ಲಾಂಛನ,
ತನ್ನ ಪರಮಾನುಭಾವವೇ ಮಹಾಮಂತ್ರ
ತನ್ನ ನಿಜಾನಂದವೇ ಪಾದೋದಕ ಪ್ರಸಾದ
ತನ್ನ ಸತ್ಯ ಸದಾಚಾರ ನಡೆನುಡಿಯೇ ಪರಮಕೈಲಾಸ !
ಇಂತು ಪ್ರಮಥರು ಆಚರಿಸಿದ ಬೇಧವ ತಿಳಿಯದೆ

ಬರಿದೆ ಅಹಂಕರಿಸಿ
ಗುರುಸ್ಥಲ, ಚರಸ್ಥಲ, ಪರಸ್ಥಲ, ಶಿವಭಕ್ತಿ,
ಶಿವಪ್ರಸಾದಿಗಳೆಂದು ವಾಗದ್ವೈತವ ನುಡಿವವರಲ್ಲಿ
ಪರತ್ತತ್ವ ಸ್ವರೂಪ ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಇಲ್ಲ ಇಲ್ಲ ಎಂದ !
-ಘಟ್ಟಿವಾಳಯ್ಯ (ಸ.ವ.ಸಂ.7, ವ:411)

ಈ ವಚನದಲ್ಲಿ ಘಟ್ಟಿವಾಳಯ್ಯನವರು ಅಷ್ಟಾವರಣಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ಕೊಟ್ಟಿದ್ದಾರೆ. ಅಷ್ಟಾವರಣಗಳಲ್ಲಿ ವಿಭೂತಿ-ರುದ್ರಾಕ್ಷಿ-ಮಂತ್ರ-ಪಾದೋದಕ-ಪ್ರಸಾದಗಳು ಶೈವರಲ್ಲಿಯೂ ಬಳಕೆಯಲ್ಲಿವೆ. ಅವರಲ್ಲಿ ಸ್ಥಾವರಲಿಂಗ ಮುಖ್ಯವಾಗಿದ್ದಾನೆ. ಹೀಗೆ ಗುರುಸ್ಥಲ-ಚರಸ್ಥಲಗಳ ಬಗೆಗೆ ಮೊದಲಿನಿಂದಲೂ ಚರ್ಚೆ ನಡೆದದ್ದನ್ನು ಗಮನಿಸಿರುವ ಘಟ್ಟಿವಾಳಯ್ಯ ಈ ವಚನದಲ್ಲಿ ಅಷ್ಟಾವರಣಗಳೆಂದರೆ ಯಾವುವು? ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ವಚನದ ಪ್ರಾರಂಭದಲ್ಲಯೇ ಅಷ್ಟಮಲಗಳನ್ನು ಪ್ರಸ್ತಾಪಿಸಿದ್ದಾರೆ. ಹೊನ್ನು, ಹೆಣ್ಣು, ಮಣ್ಣು, ಅನ್ನ, ವಸ್ತ್ರ, ವಾಹನ, ಆಭರಣ ಇವುಗಳನ್ನು ಒಳಗಿಟ್ಟುಕೊಂಡು ಹೊರಗಿನ ಅಷ್ಟಾವರಣಗಳಿಗೆ ಹಾತೊರೆಯುವದರಿಂದ ಯಾವ ಪ್ರಯೋಜನವೂ ಆಗದೆಂದು ಮೊದಲೇ ತಿಳಿಸಿದ್ದಾರೆ. ತನ್ನಂತರಂಗದಲ್ಲಿರುವ ಚಿಜ್ಯೋತಿರ್ಲಿಂಗವೆಂಬ ಪತಿಯನ್ನು, ಸದ್ಗುರು ಮುಖದಿಂದ ಕೂಡಿ ಎರಡಳಿದು ಒಂದಾದಾಗ, ತನ್ನಲ್ಲಿರುವ ಚೈತನ್ಯವೇ ಜಂಗಮನಾಗುತ್ತಾನೆ. ಆ ಜಂಗಮನೇ ತಾನಾದಾಗ ತನ್ನ ಚಿತ್ಕಳೆಯೇ ವಿಭೂತಿ-ರುದ್ರಾಕ್ಷಿಯಾಗಿ, ತನ್ನಲ್ಲಿರುವ ಅನುಭಾವವೇ ಮಂತ್ರವಾಗಿ ತನ್ನಲ್ಲಿರುವ ನಿಜಾನಂದವೇ ಪಾದೋದಕ-ಪ್ರಸಾದಗಳಾಗುತ್ತವೆ, ಆಗ ಒಳಗಿನ ಅಷ್ಟಮಲಗಳೆಲ್ಲ ನಾಶವಾಗಿ ಆ ಸ್ಥಳದಲ್ಲಿ ಅಷ್ಟಾವರಣಗಳು ಕಂಗೊಳಿಸುತ್ತವೆ. ಈ ಸತ್ಯವನ್ನರಿಯದೆ ಕೇವಲ ಮಾತಿನಲ್ಲಿ ಅದ್ವೈತವ ನುಡಿವವರಲ್ಲಿ ಪರತತ್ವ ಕಾಣ ಸುವದಿಲ್ಲವೆಂದು ಹೇಳಿದ್ದಾರೆ. ಅಂದರೆ ಈ ಅಧ್ಯಾತ್ಮ ಕ್ಷೇತ್ರದಲ್ಲಿ ಮೊದಲಿನಿಂದ ಇಂದಿನವರೆಗೂ ಕೇವಲ ವಾಗದ್ವೈತವ ನುಡಿವವರೇ ಹೆಚ್ಚಾಗಿದ್ದಾರೆಂಬುದು ಈ ವಚನದಿಂದ ಸ್ಪಷ್ಟವಾಗುತ್ತದೆ. ಶರಣರು ಅದ್ವೈತವನ್ನು ಕೇವಲ ನುಡಿಯದೆ, ನಡೆಯಲ್ಲಿ ತಂದರು. ಒಳಗಿನದನ್ನು ತೊಳೆದುಕೊಂಡು ಅಲ್ಲಿಯ ಬೆಳಕಿನ ಮೂಲಕ ಜಗವನ್ನು ಬೆಳಗಿದರು.

“ಅಯ್ಯಾ, ನಾವು ಗುರಲಿಂಗ ಜಂಗಮ
ಪಾದೋದಕ ಪ್ರಸಾದ ಸಂಬಂಧಿಗಳೆಂದು ನುಡಿದುಕೊಂಬ ಪಾತಕರ
ಮುಖವ ನೋಡಲಾಗದು
ಅದೇಕೆಂದಡೆ, ಪಾದೋದಕವ ಕೊಂಡಬಳಿಕ,
ಜನನದ ಬೇರ ಕಿತ್ತೊಗೆಯಬೇಕು.
ಪ್ರಸಾದವ ಕೊಂಡ ಬಳಿಕ, ಪ್ರಳಯವ ಗೆಲಿಯಬೇಕು.
-ಮಡಿವಾಳ ಮಾಚಿದೇವ (ಸ.ವ.ಸಂ.8, ವ:464)

ಇಲ್ಲಿ ಅಷ್ಟಾವರಣಗಳು ಕೇವಲ ಶೃಂಗಾರಕ್ಕಲ್ಲ. ಅವು ಸಮಾಜ ಬದಲಾವಣೆಯ ಸಂಕೇತಗಳಾಗಿವೆಯೆಂದು ಮಡಿವಾಳ ಮಾಚಿದೇವ ಹೇಳಿದ್ದಾರೆ. ಜನನದಿಂದ ಜಾತಿ ನಿರ್ಧಾರವಾಗುತ್ತದೆ, ಜಾತಿಯಿಂದ ಜಗಳ ಪ್ರಾರಂಭವಾಗುತ್ತದೆ. ಪಾದೋದಕವನ್ನು ಸ್ವೀಕರಿಸಿದ ಮೇಲೆ ಜನನದ ಬೇರುಗಳನ್ನು ಕಿತ್ತೆಸೆಯಬೇಕು. ಆಗ ಜನರಲ್ಲಿ ಮೇಲು-ಕೀಳೆಂಬ ಭೇಧಭಾವವಿರುವುದಿಲ್ಲ; ಸ್ಪೃಶ್ಯ-ಅಸ್ಪ್ರಶ್ಯವೆಂಬ ತಾರತಮ್ಯವಿರುವುದಿಲ್ಲ. ಪ್ರಸಾದವಕೊಂಡು ನಿದ್ದೆಮಾಡುವದಲ್ಲ; ನಿಜವಾದ ಪ್ರಸಾದ ಒಳಗೆ ಹೋದರೆ ಪ್ರಳಯವನ್ನೇ ಗೆಲ್ಲುವ ಶಕ್ತಿಯುಂಟಾಗುತ್ತದೆ. ಹೀಗೆ ಅಷ್ಟಾವರಣಗಳು ಇಲ್ಲಿ ವೀರನ ಸಂಕೇತವಾಗಿವೆ. ಭಕ್ತಿಯೇನೆಂಬುದನ್ನುರಿಯದೆ, ಕಂಡವರ ಕೈಯೊಡ್ಡಿ ಇಕ್ಕಿಸಿಕೊಂಡು ತಿರುಗುವ ವಿಶ್ವಾಸಗೇಡಿಗಳಿಗೆ ಅಷ್ಟಾವರಣ ಸಿದ್ಧಿಸುವದಿಲ್ಲವೆಂದು ಶರಣರು ಹೇಳಿದ್ದಾರೆ. ಹೀಗಾಗಿ ಇಲ್ಲಿ ಅಷ್ಟಾವರಣಗಳೆಂದರೆ ಆಭರಣಗಳಲ್ಲ, ಅವು ಸಾಧನೆಯ ಸಂಕೇತಗಳಾಗಿವೆ. ಸಾಧಕನಿಗೆ ಮಾತ್ರ ಇವು ಒಲಿಯುತ್ತವೆಂದು ವಚನಕಾರರು ವಿವರಿಸಿ ಹೇಳಿದ್ದಾರೆ.

“ಗುರು ಎನ್ನ ಕರಸ್ಥಲಕ್ಕೆ ಇಷ್ಟಲಿಂಗಸ್ವರೂಪವಾಗಿ
ಮತ್ತೆ ಮನಸ್ಥಲಕ್ಕೆ ಪ್ರಾಣಲಿಂಗ ಸ್ವರೂಪವಾಗಿ
ಮತ್ತೆ ಭಾವಸ್ಥಲಕ್ಕೆ ಭಾವಲಿಂಗ ಸ್ವರೂಪವಾಗಿ
ಈ ತ್ರಿವಿಧ ಮೂರ್ತಿಯೇ ಅಷ್ಟಾವರಣ ಸ್ವರೂಪವಾಗಿ
ಎನ್ನ ಅರುಹಿನಲ್ಲಿ ಗುರು, ಎನ್ನ ಪ್ರಾಣದಲ್ಲಿ ಲಿಂಗ,
ಎನ್ನ ಜ್ಞಾನದಲ್ಲಿ ಜಂಗಮ, ಎನ್ನ ಜಿಹ್ನೆಯಲ್ಲಿ ಪಾದೋದಕ,
ಎನ್ನ ನಾಸಿಕದಲ್ಲಿ ಪ್ರಸಾದ, ಎನ್ನ ತ್ವಕ್ಕಿನಲ್ಲಿ ವಿಭೂತಿ,
ಎನ್ನ ನೇತ್ರದಲ್ಲಿ ರುದ್ರಾಕ್ಷಿ, ಇಂತಿವು ಅಷ್ಟಾವರಣ ಸ್ವರೂಪವಾಗಿ
ಎನ್ನೊಳು ತನ್ನ ಕರುಣ ಕೃಪೆಯ ತೋರಿದಾತ ನಮ್ಮ ಶಾಂತ ಕೂಡಲಸಂಗಮದೇವ.
-ಗಣದಾಸಿ ವೀರಣ್ಣ (ಸ.ವ.ಸಂ.10, ವ: 601)

ಈ ವಚನದಲ್ಲಿ ಗಣದಾಸಿ ವೀರಣ್ಣ ನಿಜವಾದ ಅಷ್ಟಾವರಣಗಳಾವುವು? ಅವು ಎಲ್ಲಿವೆಯೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ಶೈವ-ವೀರಶೈವ ಧರ್ಮದಲ್ಲಿ ಬರುವ ಅಷ್ಟಾವರಣಗಳಿಗೂ, ಶರಣರು ಸಾರಿದ ಲಿಂಗಾಯತ ಧರ್ಮದಲ್ಲಿ ಬರುವ ಅಷ್ಟಾವರಣಗಳಿಗೂ ತುಂಬ ವ್ಯತ್ಯಾಸವಿದೆಯೆಂಬುದು ಈ ವಚನದಿಂದ ಸ್ಪಷ್ಟವಾಗುತ್ತದೆ.

ಗಣದಾಸಿ ವೀರಣ್ಣನ ಕಾಲ ಕ್ರಿ.ಶ 17ನೇ ಶತಮಾನವೆಂದು ಬಿ.ಶಿವಮೂರ್ತಿಶಾಸ್ತ್ರಿ, ಎಸ್.ಶಿವಣ್ಣ ಮೊದಲಾದ ಸಂಶೋಧಕರು ನಿರ್ಧರಿಸಿದ್ದಾರೆ. ಹೀಗಾಗಿ ಈ ವಚನಕಾರನಿಗೆ, ಶರಣರು ಹೇಳಿದ ಅಷ್ಟಾವರಣಗಳು ಯಾವುವು? ನಂತರದಲ್ಲಿ ವೀರಶೈವರು ಆಚರಿಸಿದ ಅಷ್ಟಾವರಣಗಳಾವುವೆಂಬುದು ಚೆನ್ನಾಗಿ ತಿಳಿದಿದೆ. ಇಷ್ಟೆಲ್ಲ ತಿಳಿದುಕೊಂಡ ಈ ವಚನಕಾರ ತನ್ನ ವಚನಗಳಲ್ಲಿ ಶರಣರು ಹೇಳಿದ ಲಿಂಗಾಯತ ಧರ್ಮದ ಅಷ್ಟಾವರಣಗಳ ಬಗೆಗೆ ಇಲ್ಲಿ ವಿವರಿಸಿದ್ದಾರೆ.

ಇಲ್ಲಿ ಕರಸ್ಥಲ-ಮನಸ್ಥಲ-ಭಾವಸ್ಥಲಕ್ಕೆ ಕ್ರಮವಾಗಿ ಇಷ್ಟಲಿಂಗ-ಪ್ರಾಣಲಿಂಗ-ಭಾವಲಿಂಗ ಸ್ವರೂಪವಾಗಿ ಅಷ್ಟಾವರಣಗಳು ಕಾಣಿಸಿಕೊಂಡಿವೆ. ಅಷ್ಟಾವರಣಗಳು ಹೊರಗಿನ ವಸ್ತು ರೂಪಗಳಾಗಿರದೆ, ಒಳಗಿನ ಅಂಗರೂಪಗಳಾಗಿ ಕಾಣಿಸಿಕೊಂಡಿರುವದನ್ನು ಇಲ್ಲಿ ವಿವರಿಸಲಾಗಿದೆ. ಅರಿವೇ-ಗುರು, ಪ್ರಾಣವೇ-ಲಿಂಗ, ಜ್ಞಾನವೇ-ಜಂಗಮ, ನಾಲಿಗೆಯೇ-ಪಾದೋದಕ, ನಾಸಿಕವೇ-ಪ್ರಸಾದ, ಚರ್ಮವೇ-ವಿಭೂತಿ, ನೇತ್ರವೇ-ರುದ್ರಾಕ್ಷಿ. ಹೀಗೆ ಭಕ್ತನ ದೇಹದಲ್ಲಿರುವ ವಿವಿಧ ಅಂಗಗಳಲ್ಲಿ ಅಷ್ಟಾವರಣಗಳಿವೆಯೆಂಬ ಒಳಸತ್ಯವನ್ನು ಈ ವಚನಕಾರ ತಿಳಿಸಿದ್ದಾರೆ.

ಗಣದಾಸಿ ವೀರಣ್ಣನವರು ತಮ್ಮ ಇನ್ನೊಂದು ವಚನದಲ್ಲಿ ಮನವೇ-ಲಿಂಗ, ಮನದ ಜ್ಞಾನವೇ-ಜಂಗಮ, ಆ ಜ್ಞಾನದ ರೂಪವೇ-ಗುರು, ಆ ಜ್ಞಾನದ ಸಾರವೇ-ಪಾದೋದಕ, ಆ ಜ್ಞಾನದ ಪ್ರಕಾಶವೇ-ವಿಭೂತಿ ಆ ಜ್ಞಾನದೃಷ್ಟಿಯೇ-ರುದ್ರಾಕ್ಷಿ, ಭಕ್ತನ ನಾಮವೇ-ಮಂತ್ರವೆಂದು ಹೇಳುತ್ತ ಅಷ್ಟಾವರಣಗಳು ಜ್ಞಾನದ ಸಂಕೇತವಾಗಿಯೆಂದು ಹೇಳಿದ್ದಾರೆ.

ಹೀಗೆ ಅನೇಕ ವಚನಕಾರರು ಲಿಂಗಾಯತ ಧರ್ಮದ ಅಷ್ಟಾವರಣಗಳು ಯಾವುವು ಎಂಬುದನ್ನು ತಮ್ಮ ಅನೇಕ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಕೆಲವು ವಚನಗಳನ್ನು ಮಾತ್ರ ಉದಾಹರಿಸಲಾಗಿದೆ. ಹೀಗೆ ವೀರಶೈವ ಧರ್ಮದಲ್ಲಿರುವ. ಅಷ್ಟಾವರಣಗಳಿಗೂ, ಲಿಂಗಾಯತ ಧರ್ಮದಲ್ಲಿರುವ ಅಷ್ಟಾವರಣಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಎಲ್ಲವನ್ನೂ ಅಂತರಂಗದ ಮೂಲಕ, ಅಂತಃಕರಣದ ಮೂಲಕ, ಇಹದ ಮೂಲಕ, ದೇಹದ ಮೂಲಕ ನೋಡುವ ಲಿಂಗಾಯತ ಧರ್ಮ ವಿಶಿಷ್ಟವಾದುದಾಗಿದೆ, ವೈಜ್ಞಾನಿಕವಾದುದಾಗಿದೆ.

ಮುಂದುವರೆಯುತ್ತದೆ....

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...