ಅಪರೂಪದ ಪ್ರಕೃತಿ ಹಾಗೂ ಪಕ್ಷಿ ಪ್ರೇಮಿ ವಿನೋದ್ ಕುಮಾರ್ ವಿ.ಕೆ

Date: 18-12-2022

Location: ಬೆಂಗಳೂರು


''ಫೋಟೋಗ್ರಫಿ ಯಾರು ಬೇಕಾದರೂ ಕಲಿಯಬಹುದು. ಫೋಟೋಗ್ರಫಿಯನ್ನು ಹೊಸದಾಗಿ ಕಲಿಯುವ ಆಸಕ್ತಿ ಇರುವವರು ದೊಡ್ಡ ಮಟ್ಟದ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ಸೋಲುಗಳಿಗೆ ಸಿದ್ಧವಾಗಿರಬೇಕು. ಒಂದೇ ಸಲಕ್ಕೆ ಒಳ್ಳೆಯ ಫೋಟೋ ಸಿಗುವುದಿಲ್ಲ. ನೆರಳು ಬೆಳಕಿನ ಮೂಲವನ್ನು ಅರ್ಥ ಮಾಡಿಕೊಳ್ಳಬೇಕು. ಬಹಳ ಮುಖ್ಯವಾಗಿ ವಿಷಯದ ಮೇಲೆ ಕನಿಷ್ಠ ಮಟ್ಟದ ಅಧ್ಯಯನ ಇರಬೇಕು. ಅದರ ಬಗ್ಗೆ ತಿಳಿದುಕೊಂಡು ನಿರಂತರವಾಗಿ ತೊಡಗಿಕೊಳ್ಳಬೇಕು'' ಎನ್ನುತ್ತಾರೆ ಛಾಯಾಗ್ರಾಹಕ ವಿನೋದ್ ಕುಮಾರ್. ವಿ. ಕೆ. ಲೇಖಕಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ವಿನೋದ್ ಕುಮಾರ್. ವಿ. ಕೆ.ಯವರ ಜೀವನಯಾನ’ ಕುರಿತು ಬರೆದಿದ್ದಾರೆ...

ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ದಿನನಿತ್ಯ ಕಾಣಸಿಗುವ ಹಲವು ಪಕ್ಷಿಗಳನ್ನು ನೋಡಿರುತ್ತೇವೆ. ಆದರೆ ಅಪರೂಪದ ಪಕ್ಷಿಗಳು ನೋಡಲು ಸುಲಭವಾಗಿ ಸಿಗುವುದಿಲ್ಲ. ಅವು ಕಾಡುಗಳು, ಹಸಿರು ಮತ್ತು ನೀರು ಇರುವ ಪ್ರದೇಶಗಳಲ್ಲಿ ಇರುತ್ತವೆ. ಆದರೆ ಕೆಲವು ಪ್ರಕೃತಿ ಹಾಗೂ ಪಕ್ಷಿ ಪ್ರೇಮಿಗಳು ಅವುಗಳ ಅಂದವಾದ ಫೋಟೋಗಳನ್ನು ಸೆರೆಹಿಡಿಯುವುದರ ಮೂಲಕ ಎಲ್ಲರೂ ವಿರಳ ಪಕ್ಷಿಗಳನ್ನು ನೋಡಲು ಅವುಗಳ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತಾರೆ. ಆದರೆ ಅದಕ್ಕೆ ನಿಸರ್ಗವನ್ನು ಪ್ರೀತಿಸುವ ಸೂಕ್ಷ್ಮ ಸಂವೇದನೆಯುಳ್ಳ ಮನಸ್ಸು, ಫೋಟೋಗ್ರಫಿಯ ಕೌಶಲ್ಯ ಮತ್ತು ಮುಖ್ಯವಾಗಿ ತಾಳ್ಮೆ ಬೇಕು. ಈ ರೀತಿಯ ವ್ಯಕ್ತಿಗಳು ಸಿಗುವುದೂ ಸಹ ಅಪರೂಪದ ಹಕ್ಕಿಗಳು ಸಿಗುವಷ್ಟೇ ವಿರಳ. ಸಾವಿರಾರು ಸೂಕ್ಷ್ಮ ಫೋಟೋಗಳನ್ನು ಸೆರೆಹಿಡಿದಿರುವ ಒಬ್ಬ ಅಪರೂಪದ ಪ್ರಕೃತಿ ಹಾಗೂ ಪಕ್ಷಿ ಪ್ರೇಮಿ, ನಿಸರ್ಗದ ಬಗ್ಗೆ ಅಪಾರವಾದ ಗೌರವ, ಪ್ರೀತಿ, ಕಾಳಜಿ ಇಟ್ಟುಕೊಂಡಿರುವ ವಿರಾಜಪೇಟೆ ತಾಲೂಕಿನ ಶಿವಕೇರಿ ಗ್ರಾಮದ ವಿನೋದ್ ಕುಮಾರ್. ವಿ. ಕೆ.ಯವರ ಜೀವನಯಾನ ಇಂದಿನ ನಿಮ್ಮ ಓದಿಗೆ ಅವರ ಮಾತುಗಳಲ್ಲಿ.

'ನನ್ನ ತಂದೆ ಹೆಚ್. ಕೆ. ಕೆಂಚಪ್ಪ, ತಾಯಿ ಸರಸ್ವತಿ. ನಮ್ಮ ತಂದೆ ತಾಯಿಗೆ ನಾವು ಇಬ್ಬರು ಮಕ್ಕಳು ನಾನು ಮತ್ತೆ ಅಣ್ಣ. ತಂದೆ ಅರಣ್ಯ ಇಲಾಖೆಯಲ್ಲಿ ನೌಕರರಾಗಿದ್ದರಿಂದ ನನ್ನ ಬಾಲ್ಯ ಹೆಚ್ಚಾಗಿ ನಾಗರಹೊಳೆ, ತಿತ್ತಿಮತ್ತಿ ಕಾಡಿನಲ್ಲೇ ಕಳೆದದ್ದು. ಕಾಡಿನಲ್ಲೇ ಶಾಲೆಗಳು ಇದ್ದುದರಿಂದ ಕಾಡು, ಕಾಡು ಪ್ರಾಣಿಗಳಿಗೆ ಮತ್ತು ನಮಗೆ ಆಗಿನಿಂದಲೂ ಅವಿನಾಭಾವ ಸಂಬಂಧ. ಕಾಡನ್ನು ಬಿಟ್ಟರೆ ನಮಗೆ ಬೇರೆ ಪ್ರಪಂಚ ಇರುತ್ತಿರಲಿಲ್ಲ. ಕಾಡೆಂದರೆ ತುಂಬಾ ಪ್ರೀತಿ. ಒಟ್ಟಾರೆ ಪಶ್ಚಿಮ ಘಟ್ಟದ ಶ್ರೇಣಿಯಲ್ಲೇ ನಾವು ನಮ್ಮ ಬಾಲ್ಯವನ್ನು ಕಳೆದೆವು. ನಾನು ಪಿ. ಯು. ಸಿ. ವರೆಗೆ ವಿದ್ಯಾಭ್ಯಾಸವನ್ನು ಮಾಡಿದ್ದೇನೆ. ನಂತರ ಕಂಪ್ಯೂಟರ್ ಕಲಿತು, ಕಂಪ್ಯೂಟರ್ ಟೀಚರ್ ಆಗಿ, ಡಿ. ಟಿ. ಪಿ ಆಪರೇಟರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಅದೊಂದು ಸಮಯದಲ್ಲಿ ಪೇಪರ್ ಗೆ ವರ್ಕ್ ಮಾಡುತ್ತಿದ್ದೆ. ಆರ್ಟಿಕಲ್, ನ್ಯೂಸ್ ಗಳನ್ನು ಟೈಪ್ ಮಾಡುವಾಗ ನಾನೂ ಈ ರೀತಿ ಬರೆಯಬಹುದು ಅನ್ನಿಸುತ್ತಿತ್ತು. ನಾನು ಇಲಾಖೆ ಸೇರಿದ್ದು 2003 ರಲ್ಲಿ, ಅಲ್ಲಿನ ಕಾಡಿನ ಹಕ್ಕಿಗಳನ್ನು ನೋಡಿ ಹಕ್ಕಿ ಚಾಯಾಗ್ರಹಣದ ಬಗ್ಗೆ ನಿರ್ಧರಿಸಿದೆ. ಒಲಿಂಪಸ್ ಕಂಪನಿಯ ಸಣ್ಣ ಡಿಜಿಟಲ್ ಕ್ಯಾಮ್ ತಗಂಡೆ, ಅದರಲ್ಲಿಯೇ ಛಾಯಾಗ್ರಹಣ ಶುರು ಮಾಡಿದೆ. ತಂದೆಯ ಜೊತೆ ನಾಗರಹೊಳೆಯಲ್ಲಿ ಕ್ವಾಟ್ರಸ್ ನಲ್ಲಿದ್ದೆ. ಆಗ, ರಾತ್ರಿ ಕಾಡಾನೆಗಳು ಕ್ವಾಟ್ರಸ್ ಪಕ್ಕ ಬರ್ತಿದ್ದವು. ಅಮ್ಮ ಕಿಟಕಿ ತೆಗೆದು ಕಾಡಾನೆ ಮೈನ್ನು ಮುಟ್ಟಿಸುತ್ತಿದ್ದರು. ದಿನಾ ರಾತ್ರಿ ಕಾಡು ಪ್ರಾಣಿಗಳನ್ನು ನೋಡಲು ಅವಕಾಶ ಸಿಗುತ್ತಿದ್ದ ಕಾಲ ಅದು. ಹಾಗೆ ಕಾಡು ಮತ್ತು ಪ್ರಾಣಿ ಪಕ್ಷಿಗಳ ಮೇಲೆ ಒಲವು ಬೆಳೆಯಿತು. ಜಿಂಕೆಗಳು ಮನೆ ಮುಂದೆ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದವು. ಕಾಡಾನೆಗಳು ಮನೆ ಗೋಡೆಗೆ ಮೈ ಉಜ್ಜಿಕೊಳ್ಳುತ್ತಿದ್ದವು. ಅಷ್ಟು ಹತ್ತಿರದಿಂದ ಕಾಡು ಪ್ರಾಣಿಗಳನ್ನು ನೋಡಿಕೊಂಡು ಬೆಳೆದವನು ನಾನು. 2009 ರಲ್ಲಿ ಅಲುಮೇಲು ಎಂಬುವವರ ಜೊತೆಗೆ ವಿವಾಹವಾಯ್ತು. ಮೊದಲ ಛಾಯಾಗ್ರಹಣ ಶುರುವಾಗಿದ್ದು, ವಿವಿಟರ್ ಕಂಪನಿಯ ಫಿಲ್ಮ್ ಕ್ಯಾಮರಾ ಮೂಲಕ. ನೂರಾರು ಫಿಲ್ಮ್ ಗಳಲ್ಲಿ ಚಿತ್ರ ತೆಗೆದರೂ, ಡೆವಲಪ್ ಮಾಡಿಸಲು ಹಣವಿಲ್ಲದೆ, ನಂತರ ಅದರ ನಿರ್ವಹಣೆ ಕಷ್ಟವಾಗಿ ಫೋಟೋಗ್ರಫಿ ನಿಲ್ಲಿಸಿದೆ. ನಂತರ ಫುಜಿಫಿಲ್ಮ್ ಕ್ಯಾಮರಾ ತೆಗೆದುಕೊಂಡಿದ್ದು, ಸದ್ಯಕ್ಕೆ Nikon D500 ಬಳಸುತ್ತಿದ್ದೇನೆ ಎನ್ನುತ್ತಾರೆ ವಿನೋದ್ ಕುಮಾರ್. ವಿ‌. ಕೆ.

2011ರಿಂದ ಫೋಟೋಗ್ರಫಿ ಶುರು ಮಾಡಿದೆ. ಫೋಟೋಗ್ರಫಿ ಶುರುಮಾಡಲು ನನಗೆ ಸ್ಫೂರ್ತಿಯಾಗಿದ್ದು ನಾಗರಹೊಳೆ ಗೆಸ್ಟ್ ಹೌಸಿನಲ್ಲಿದ್ದ ಶ್ರೀ ರಾಜ್ ಗೋಪಾಲಚಾರಿ ಮತ್ತು ಎಂ. ಎಂ. ಘೋರ್ಪಡೆ ಅವರು ತೆಗೆದಿರುವ ಫೋಟೋಗಳ ಬುಕ್ಲೆಟ್. ಅದರಲ್ಲಿ ವಿಶೇಷವಾದ ಪ್ರಾಣಿ, ಪಕ್ಷಿಗಳು, ಆನೆ, ಹುಲಿಗಳ ಫೋಟೋಗಳು ಇದ್ದವು. ಅದರಿಂದ ಪ್ರೆರೇಪಿತನಾಗಿ ಕಾಡಿನ ಫೋಟೋಗ್ರಫಿ ಮಾಡಲು ಆಸಕ್ತಿ ಬಂತು. ತಂದೆ ರಾತ್ರಿ ಡ್ಯೂಟಿಗೆ ಹೋಗಿ ಬಂದರೆ ಪ್ರಾಣಿಗಳ ನಡವಳಿಕೆಯ ಬಗ್ಗೆ ಹೇಳ್ತಾ ಇರ್ತಿದ್ರು. ಅದನ್ನೆಲ್ಲ ಕೇಳೋಕೆ ಕುತೂಹಲ ಹೆಚ್ಚಾಗುತ್ತಿತ್ತು. 1997-98 ರಲ್ಲಿ ಫೋಟೋಗ್ರಫಿ ಕಲಿಯಬೇಕು ಅಂತ ಬೆಟರ್ ಫೋಟೋಗ್ರಫಿ ಮ್ಯಾಗಜಿನ್ ಓದುತ್ತಿದ್ದೆ. ಫೋಟೋಗ್ರಫಿ ಅಂದರೇನು ಮೊದಲು ತಿಳಿದುಕೊಂಡು ಆ ನಂತರ ಶುರು ಮಾಡೋಣ ಅಂತ ಸೆಕೆಂಡ್ ಹ್ಯಾಂಡಲ್ ಫಿಲಂ ಕ್ಯಾಮೆರಾವನ್ನು ಎಂಟುಸಾವಿರಕ್ಕೆ ಇನ್ಸ್ಟಾಲ್ ಮೆಂಟ್ ನಲ್ಲಿ ತೆಗೆದುಕೊಂಡೆ. ಆಗ ಕ್ಯಾಮೆರಾ ಸೆಟ್ಟಿಂಗ್ ಎಲ್ಲಿ ಏನು ಗೊತ್ತಿರಲಿಲ್ಲ. ಫಿಲಂ ಹಾಕಿ ಫೋಟೋ ತೆಗೆದಿರುತ್ತಿದ್ದೆ. ಆ ನಂತರ ಒಲಿಂಪಸ್ ಅಂತ ಡಿಜಿಟಲ್ ಕ್ಯಾಮೆರಾ ತಗೊಂಡು ಅದರಲ್ಲಿ ಸ್ವಲ್ಪ ಡಿಜಿಟಲ್ ಫೋಟೋಗ್ರಫಿ ಏನು ಅನ್ನುವುದು ಅರ್ಥ ಮಾಡಿಕೊಂಡೆ. ಅಲ್ಲಿಂದ ಹಕ್ಕಿಗಳ ಫೋಟೋ ತೆಗೆಯುವುದನ್ನು ಶುರು ಮಾಡಿದೆ. ನಾನು ಡ್ರಾಯಿಂಗ್ ಮತ್ತು ಪೇಂಟಿಂಗ್ ಕೂಡ ಮಾಡ್ತಿದ್ದೆ. ಕಲರ್ಫುಲ್ ಆಗಿದೆಯಲ್ಲ ಅಂತ ಹಕ್ಕಿಗಳ ಬಗೆಗೆ ಸೆಳೆತ ಹೆಚ್ಚಾಯ್ತು. ನಾನು ಕ್ಯಾಮೆರಾ ತೆಗೆದುಕೊಂಡ ಕಾಲದಲ್ಲಿ ಹಕ್ಕಿಗಳು ತುಂಬ ಕಾಣುತ್ತಿದ್ದವು. ಈಗ ಅಷ್ಟಿಲ್ಲ. ಆಗ ತಿತ್ತಿಮತ್ತಿ ಕಾಡಿನಲ್ಲಿ ಕೆಲಸ ಮಾಡುತ್ತಿದ್ದೆ. ಕಾಡಿನ ಮಧ್ಯದಲ್ಲಿ ನಮ್ಮ ಆಫೀಸ್ ಇತ್ತು. ಸುತ್ತ ಮುತ್ತ ಎಲ್ಲೇ ಹೋದರೂ ಹಕ್ಕಿಗಳು ಕಾಣುತ್ತಿದ್ದವು. ಇದನ್ನೆಲ್ಲಾ ದಾಖಲು ಮಾಡೋಣ ಫೋಟೋ ತೆಗೆಯೋಣ ಅಂತ ಹಕ್ಕಿಗಳ ಬಗ್ಗೆಯೇ ಪ್ರಾರಂಭಿಸಿ ಸುಮಾರು 260 ಕ್ಕೂ ಹೆಚ್ಚು ಬೇರೆ ಬೇರೆ ಜಾತಿಯ ಹಕ್ಕಿಗಳ ಫೋಟೋಗಳನ್ನು ಸೆರೆಹಿಡಿದಿದ್ದೇನೆ. ಸಾಮಾನ್ಯವಾಗಿ ನನಗೆ ಸಿಗುವಂತದ್ದು ಪಿಕಳಾರ, ಮಿಂಚುಳ್ಳಿ, ನೀಲಕಂಠ, ಹುಲಿಹಕ್ಕಿ, ಮರ ಕುಟಿಕ, ಮಂಗಟೆ ಹಕ್ಕಿ, ಬುಲ್ ಬುಲ್ ಇತ್ಯಾದಿಯಾಗಿ ಯಥೇಚ್ಚವಾಗಿ ಕಾಣಸಿಗುತ್ತಿದ್ದವು. ಈಗ ಕಡಿಮೆ ಆಗ್ತಾ ಬಂದಿದೆ. ಮನುಷ್ಯರ ಜೀವನ ಶೈಲಿ ಬದಲಾದಂತೆ ಮನೆ ಮುಂದೆ ಅಲಂಕಾರಕ್ಕೆ ಹೂವಿನ ಗಿಡಗಳನ್ನು ಬೆಳೆಸುತ್ತಿದ್ದಾರೆ. ಹಕ್ಕಿ ಪಕ್ಷಿಗಳಿಗೆ ಸಹಜವಾಗಿ ಕೀಟಗಳು, ಜೇಡಗಳು, ಇಂತಹ ಆಹಾರಗಳು ಬೇಕು. ಮೊದಲು ಮನೆಯ ಸುತ್ತ ಮುತ್ತ ಮರಗಿಡಗಳು ಇತ್ತು. ಈಗ ಎಲ್ಲ ಗಿಡಮರಗಳನ್ನು ಕಡಿದು ಹಾಕಿ ಬಿಲ್ಡಿಂಗ್ ಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ. ಮೊಬೈಲ್ ರೇಡಿಯೇಷನ್, ಟವರ್ ನಿಂದ ಕೂಡ ಪಕ್ಷಿಗಳು ಕಡಿಮೆಯಾಗುತ್ತಿವೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಕಾಡನ್ನು ನಾವು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ. ಈಗೆಲ್ಲ ಮನೆಯ ಸುತ್ತ ಮುತ್ತ ಮರಗಳನ್ನು ಬೆಳೆಸಲು ಯಾರೂ ಇಷ್ಟಪಡಲ್ಲ. ರಸ್ತೆಗಳನ್ನೆಲ್ಲ ಕಾಂಕ್ರಿಟ್ ಮಾಡಿಕೊಳ್ಳುತ್ತಿದ್ದೇವೆ. ಮನೆ ಮುಂದೆ ಮಣ್ಣು ಸಹ ಇರೋದಕ್ಕೆ ಬಿಡುತ್ತಿಲ್ಲ. ಮೊದಲೆಲ್ಲ ಮನೆ ಮುಂದೆ ಮಣ್ಣು ಇರುತ್ತಿತ್ತು ಗಿಡಗಳು ಬೆಳೆಯುತ್ತಿದ್ದವು. ಅಕ್ಕಿ ಹಿಟ್ಟಿನಿಂದ ರಂಗೋಲಿ ಬಿಡುತ್ತಿದ್ದರು. ಅದನ್ನು ತಿನ್ನಲು ಕೀಟಗಳು, ಹಕ್ಕಿಗಳು ಬರುತ್ತಿದ್ದವು. ಈಗ ಅದಕ್ಕೆಲ್ಲ ಅವಕಾಶವೇ ಇಲ್ಲವಾಗಿದೆ'.

'ಕಿಂಗ್ ಫಿಷರ್ ಫೋಟೋ ಬೇಕು ಅಂದ್ರೆ ನೀರಿರುವ ಪ್ರದೇಶಗಳಲ್ಲಿ, ಸ್ವಲ್ಪ ಜೌಗು ಇರುವ ಕಡೆ ಹೋಗಬೇಕು. ಕುರುಚಲು ಕಾಡು ಇರುವಂತಹ ಜಾಗದಲ್ಲಿ ಬುಲ್ ಬುಲ್ ಹಕ್ಕಿ, ನೀರು ಕೆರೆ ಇರುವಂತ ಜಾಗದಲ್ಲಿ ವಾಟರ್ ಬರ್ಡ್ ಗಳು ಸ್ವಲ್ಪ ಪ್ರಮಾಣದಲ್ಲಿ ಕಾಣ ಸಿಗುತ್ತವೆ. ನೀಲ ಕಂಠ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಓಡಿಸ್ಸಾ, ತೆಲಂಗಾಣ ರಾಜ್ಯಕ್ಕೂ ಕೂಡ ಈ ನೀಲಕಂಠ ರಾಜ್ಯ ಪಕ್ಷಿಯಾಗಿದೆ. ಅದರ ಕುತ್ತಿಗೆ ಭಾಗದಲ್ಲಿ ನೀಲಿ ಇರುವುದರಿಂದ ಅದಕ್ಕೆ ನೀಲಕಂಠ ಎಂಬ ಹೆಸರು ಬಂದಿದೆ. ದೇಹದ ಭಾಗಗಳು ನೀಲಿ ಮತ್ತು ನೇರಳೆ ಬಣ್ಣದಿಂದ ಕೂಡಿದೆ. ಇದು ರೆಕ್ಕೆ ಬಿಚ್ಚಿ ಹಾರಾಡುವಾಗ ರಕ್ಕೆಯೊಳಗಿನ ನೀಲಿ ಬಣ್ಣ ಸುಂದರವಾಗಿ ಕಾಣುತ್ತದೆ. ಇದು ಕಪ್ಪೆ ಮತ್ತು ಇತರೆ ಕೀಟಗಳನ್ನು ತಿನ್ನುತ್ತದೆ. ಇದು ವಿಷ್ಣುವಿನ ಪ್ರೀತಿಯ ಹಕ್ಕಿ ಎನ್ನುವ ಉಲ್ಲೇಖ ಕೂಡ ಇದೆ. ಪಶ್ಚಿಮ ಬಂಗಾಳದಲ್ಲಿ ಇದನ್ನು ಶುಭ ಸಂಕೇತ, ಈ ಪಕ್ಷಿಯನ್ನು ನೋಡಿದರೆ ವಿಷ್ಣುವಿನ ದರ್ಶನ ಪಡೆದಂತೆ ಎಂದು ಭಾವಿಸಿದ್ದಾರೆ. ಇದರ ಕೂಗು ಅಷ್ಟೇನು ಇಂಪಾಗಿ ಇರುವುದಿಲ್ಲ. ಗಂಡು ಹೆಣ್ಣು ಎರಡೂ ಪಕ್ಷಿಗಳು ನೋಡಲು ಒಂದೇ ತರನಾಗಿ ಇರುತ್ತವೆ. ಹಕ್ಕಿಗಳು ಸಾಮಾನ್ಯವಾಗಿ ಹಾರಾಡುತ್ತ ಬರುತ್ತವೆ. ಬಾಯಲ್ಲಿ ಆಹಾರ ಇಟ್ಟುಕೊಂಡಿರುತ್ತದೆ. ಅದೇ ತಿನ್ನುತ್ತದೆಯಾದರೆ ಎಲ್ಲಿ ಕುಳಿತಿರುತ್ತದೆಯೋ ಅಲ್ಲೇ ಚೆನ್ನಾಗಿ ತಿಂದುಬಿಡುತ್ತದೆ. ಕೆಲವು ಸಲ ತಿನ್ನದೇ ಅಲ್ಲೊಂದು ಸಲ, ಇಲ್ಲೊಂದು ಸಲ ಹೋಗಿ ಕುಳಿತುಕೊಳ್ಳುತ್ತದೆ. ಅಲ್ಲೇ ಸುತ್ತಾಡುತ್ತಿದೆ ಎಂದರೆ ಅಲ್ಲೇ ಎಲ್ಲೋ ಪಕ್ಕದಲ್ಲಿ ಮರಿ ಇದೆ ಎಂದರ್ಥ. ಅದು ಮರಿಗಳ ರಕ್ಷಣೆಗಾಗಿ ಕಾದು ನೇರವಾಗಿ ಗೂಡಿಗೆ ಹೋಗದೆ ನಂತರ ಹೋಗುತ್ತದೆ. ಈ ಎಲ್ಲಾ ಸೂಕ್ಷ್ಮ ಗ್ರಹಿಕೆ ನಮಗೆ ಇರಬೇಕು. ಅದನ್ನು ತಾಳ್ಮೆಯಿಂದ ಹಿಂಬಾಲಿಸಿ ನೋಡಿದಾಗ ಹಕ್ಕಿ, ಹಕ್ಕಿ ಗೂಡು ಎಲ್ಲವನ್ನು ಫೋಟೋ ತೆಗೆಯಬಹುದು. ಕೆಲವು ಹಕ್ಕಿಗಳು ಮಾತ್ರ ಅದರ ಆಹಾರವನ್ನು ಹುಡುಕಿಕೊಂಡು ಕಿ. ಮೀ. ಗಟ್ಟಲೆ ಹೋಗುವ ಸಾಧ್ಯತೆ ಇರುತ್ತದೆ. ಆದರೆ ಕೆಲವು ಹಕ್ಕಿಗಳು ಹಾಗಲ್ಲ. ಹೆಣ್ಣು ಪಕ್ಷಿ ಕರೆದರೆ ಗಂಡು ಪಕ್ಷಿ ಬರುವಷ್ಟು ದೂರದಲ್ಲೇ ಆಹಾರ ಹುಡುಕಲು ಹೋಗಿರುತ್ತದೆ. ಹಕ್ಕಿಗಳ ಮುಖದ ಮೇಲಿನ ಧಾವಂತ, ಗಾಬರಿ, ಖುಷಿ ಹೇಳಿದರೆ ಗೊತ್ತಾಗುವುದಿಲ್ಲ ನೋಡಬೇಕು. ಕೆಲವೊಮ್ಮೆ ಹಕ್ಕಿಗಳ ಫೋಟೋ ತೆಗೆಯಲು ಹೋದಾಗ ಕೆರೆಯ ದಡದಲ್ಲಿ ಮಲಗಿ ಕಾಯುವಾಗ ಪಕ್ಕದಲ್ಲೇ ಹಾವುಗಳು ಹಾದು ಹೋಗಿರುತ್ತವೆ. ಅಂತಹ ಸಂದರ್ಭಗಳೂ ಆಗಿರುವುದುಂಟು. ಗೀಜಗನ ಹಕ್ಕಿ ಒಣಗಿದ ಹುಲ್ಲುಗಳ ಮೇಲೆ ಮೊದಲಿಗೆ ಗಟ್ಟಿ ಎಳೆಗಳನ್ನು ಹಾಕಿ ಕಟ್ಟಿ ಬೇಸಿಗೆ ನಂತರ ಸಣ್ಣ ಸಣ್ಣ ಹುಲ್ಲುಗಳನ್ನು ಕಟ್ಟುತ್ತೆ. ಗೂಡು 70% ಆಯ್ತು ಅನ್ನುವಷ್ಟರಲ್ಲಿ ಗದ್ದೆ ಮಣ್ಣನ್ನು ಉಂಡೆ ಉಂಡೆ ಮಾಡಿ ಇಡತ್ತೆ ಆಗ ಅದು ಗಾಳಿಗೆ ತೂರುವುದಿಲ್ಲ. ಹಾಗೆಯೇ ದರ್ಜಿ ಹಕ್ಕಿ ಅಗಲದ ಎಲೆ ಇದ್ದರೆ ಡಿಸೈನ್ ಆಗಿ ಹೆಣೆದು ಚಂದವಾಗಿ ತನ್ನ ಗೂಡನ್ನು ಕಟ್ಟುತ್ತದೆ. ಹಕ್ಕಿಗಳಿಗೆ ಗೂಡು ಕಟ್ಟಲು ಇಂತದ್ದೇ ಮರ ಅಂತ ಏನೂ ಇರುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಹಕ್ಕಿಗಳು ಪೊದೆಗಳಲ್ಲಿ, ನೇರವಾಗಿ ಯಾರಿಗೂ ಕಾಣದೆ ಇರುವ ಜಾಗದಲ್ಲಿ ಗೂಡು ಕಟ್ಟುತ್ತದೆ. ಕುರುಚಲು ಕಾಡಿನ ಒಳಗೆ ಹೋಗಲು ಮೊದಲು ಭಯ ಇರುತ್ತಿತ್ತು. ಈಗ ಹಾಗಿಲ್ಲ. ಅಧ್ಯಯನ ಮಾಡಿದ ಮೇಲೆ ಅಲ್ಲಿನ ವಾಸ್ತವತೆ ಅನುಭವಕ್ಕೆ ಬರುತ್ತದೆ. ಕಾಡಿಗೆ ಹೋಗುವಾಗ ಹಸಿರು ಬಣ್ಣ ಇರುವ ಬಟ್ಟೆಗಳನ್ನೇ ಹಾಕಿಕೊಂಡು ಹೋಗುತ್ತೇನೆ. ಏಕೆಂದರೆ ನಮ್ಮ ಉಪಸ್ಥಿತಿ ಹಕ್ಕಿಗಳಿಗೆ ತೊಂದರೆಯಾಗಬಾರದು ಅದು ಬಹಳ ಮುಖ್ಯ. ಸುಗಂಧ ದ್ರವ್ಯ ಹಾಕಿಕೊಂಡು ಹೋಗಬಾರದು. ಜ್ಯೂಸ್ ಬಾಟಲಿ, ಟಿಷ್ಯೂ ಪೇಪರ್, ಅಂತಹದ್ದನ್ನೆಲ್ಲ ಅಲ್ಲಿ ಬಿಟ್ಟು ಬರಬಾರದು. ಪ್ರತಿದಿನದ ಅವಲೋಕನ ತುಂಬ ಮುಖ್ಯ. ಗೂಡು ಕಟ್ಟಿರುವ ವಾತಾವರಣದಲ್ಲಿ 5% ಬದಲಾವಣೆ ಕಂಡರೂ ಅಲ್ಲಿ ಗೂಡು ಕಟ್ಟುವುದನ್ನು ನಿಲ್ಲಿಸಿ ಬಿಡತ್ತೆ. ಅಲ್ಲಿ ಮರಿ ಮಾಡುವುದಿಲ್ಲ. ಯಾವುದೇ ಕಲಿಕಾ ಪ್ರಕಾರಕ್ಕಾದರೂ ತಾಳ್ಮೆ ಎನ್ನುವುದು ಅತಿ ಮುಖ್ಯ. ಕಲಿಯಲು ಶುರು ಮಾಡಿದಾಗ ಇರುವ ಪ್ರೀತಿಯನ್ನು ನಿರಂತರವಾಗಿ ಉಳಿಸಿಕೊಂಡರೆ ತಾಳ್ಮೆ ತಂತಾನೆ ಬೆಳೆಯುತ್ತದೆ. ಯಾವುದೋ ಪಕ್ಷಿ ಫೋಟೋ ತೆಗೆಯಬೇಕು ಅಂತ ಹೋಗಿದ್ರೆ ಕೆಲವೊಮ್ಮೆ ಎಷ್ಟು ಗಂಟೆ ಕಾದರೂ ಆ ಪಕ್ಷಿ ಬರೋದಿಲ್ಲ. ಆದರೆ ಅದೇ ದಿನದಲ್ಲಿ ಬೇರೆ ಇನ್ನೇನೋ ಹಕ್ಕಿ ಕಂಡಿರತ್ತೆ. ಸಹಜವಾಗಿ ಅದರ ಬಗ್ಗೆ ಕುತೂಹಲ ಹುಟ್ಟಿಸತ್ತೆ. ಅದರ ಬಗ್ಗೆ ಅಧ್ಯಯನ ಮಾಡಿಸತ್ತೆ. ಪ್ರತಿದಿನ ಒಂದು ಗಂಟೆ ಮ್ಯಾಕ್ರೋ ಫೋಟೋಗ್ರಫಿ ಮಾಡುತ್ತೇನೆ. ಈಗ ನಾಲ್ಕು ವರ್ಷಗಳಿಂದ ಚಿಟ್ಟೆಗಳು, ಕೀಟಗಳು, ಜೀರುಂಡೆ, ಜೇನುಹುಳುಗಳ, ಜೇಡಗಳ, ಇರುವೆಗಳ ಮ್ಯಾಕ್ರೋ ಫೋಟೋ ತೆಗೆಯಲು ಆರಂಭಿಸಿದ್ದೇನೆ. ನನಗೆ ಕೀಟಗಳ ಪ್ರಪಂಚ ಚಂದ ಅನ್ಸುತ್ತೆ ಯಾಕಂದ್ರೆ ದೇವರ ಸೃಷ್ಟಿಯಲ್ಲಿ ಎಲ್ಲವೂ ಚಂದ ಇಲ್ಲಿ ಯಾರು ಅಬಲರಲ್ಲ ಯಾರು ಸಬಲರಲ್ಲ. ಏಡಿ, ಜೇಡ, ಜೀರುಂಡೆ, ರಾಬರ್ ಫ್ಲೈ, ಕಂಬಳಿಹುಳು ಎಲ್ಲವೂ ಒಂದಕ್ಕಿಂತ ಒಂದು ಅದ್ಭುತ. ಭಾನುವಾರ ಮತ್ತು ರಜಾ ದಿನಗಳಲ್ಲಿ ಹಕ್ಕಿಗಳ ಫೋಟೋ ತೆಗೆಯಲು ಹೋಗುತ್ತೇನೆ. ನಾನು ತೆಗೆದ ಮೈಕ್ರೋ ಮತ್ತು ಮ್ಯಾಕ್ರೋ ಫೋಟೋಗಳಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ಬಂದಿವೆ. ಇತ್ತೀಚೆಗೆ ಹೆಚ್ಚು ಪಕ್ಷಿಗಳು ಸಿಗ್ತಾ ಇಲ್ಲ. ಹಾಗಾಗಿ ಮ್ಯಾಕ್ರೋ ಫೋಟೋಗ್ರಫಿ ಹೆಚ್ಚು ಮಾಡ್ತಾ ಇದ್ದೇನೆ'.

'ಫೋಟೋಗ್ರಫಿ ಯಾರು ಬೇಕಾದರೂ ಕಲಿಯಬಹುದು. ಫೋಟೋಗ್ರಫಿಯನ್ನು ಹೊಸದಾಗಿ ಕಲಿಯುವ ಆಸಕ್ತಿ ಇರುವವರು ದೊಡ್ಡ ಮಟ್ಟದ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ಸೋಲುಗಳಿಗೆ ಸಿದ್ಧವಾಗಿರಬೇಕು. ಒಂದೇ ಸಲಕ್ಕೆ ಒಳ್ಳೆಯ ಫೋಟೋ ಸಿಗುವುದಿಲ್ಲ. ನೆರಳು ಬೆಳಕಿನ ಮೂಲವನ್ನು ಅರ್ಥ ಮಾಡಿಕೊಳ್ಳಬೇಕು. ಬಹಳ ಮುಖ್ಯವಾಗಿ ವಿಷಯದ ಮೇಲೆ ಕನಿಷ್ಠ ಮಟ್ಟದ ಅಧ್ಯಯನ ಇರಬೇಕು. ಅದರ ಬಗ್ಗೆ ತಿಳಿದುಕೊಂಡು ನಿರಂತರವಾಗಿ ತೊಡಗಿಕೊಳ್ಳಬೇಕು. ಆಗ ಒಬ್ಬ ಒಳ್ಳೆಯ ನೇಚರ್ ಫೋಟೋಗ್ರಾಫರ್ ಆಗಬಹುದು. ಹಾಗೇನೇ ಫೋಟೋಗ್ರಫಿ ಕಲಿಯಬೇಕಾದವರಿಗೆ ಸ್ಪಷ್ಟತೆ ಇರಬೇಕು ಕಾಡು, ನಿಸರ್ಗ, ದೈನಂದಿನ ಚಟುವಟಿಕೆ, ಫೋಟೋ ಜರ್ನಲಿಸಂ ಹೀಗೆ ಯಾವ ಕ್ಷೇತ್ರ ಅಂತ ಆಯ್ಕೆ ಮಾಡಿಕೊಂಡು ಅದಕ್ಕೆ ಸಂಬಂಧಿಸಿದ ಕ್ಯಾಮೆರಾ ತೆಗೆದುಕೊಂಡು ಕಲಿಯಬಹುದು. ನಾವು ಓದುವಾಗ ಹೆಚ್ಚು ಪುಸ್ತಕಗಳು ಸಿಗುತ್ತಿರಲಿಲ್ಲ. ಈಗ ಕಲಿಯಲು ಸಾಕಷ್ಟು ಸಾಧ್ಯತೆಗಳಿವೆ. ಈಗ ಮೊಬೈಲ್ ಕ್ಯಾಮೆರಾಗೆ ಮ್ಯಾಕ್ರೋ ಲೆನ್ಸ್ ಗಳು ಬಂದಿವೆ. 300/- ದಿಂದ 5000/- ಖರ್ಚು ಮಾಡಿದರೆ ಮೊಬೈಲಿನಲ್ಲೇ ಮ್ಯಾಕ್ರೋ ಫೋಟೋ ಶೂಟ್ ಮಾಡಬಹುದು. ಒಳ್ಳೆ ಗುಣಮಟ್ಟದ ಇಮೇಜ್ ಬರುತ್ತದೆ. ಆಗಿನಿಂದ ಇಲ್ಲಿಯವರೆಗೆ ಫೋಟೋಗ್ರಫಿ ಕಾನ್ಸೆಪ್ಟ್ ಅದೇ ನೆರಳು ಬೆಳಕಿನ ಮೇಲೆಯೇ ಇದೆ. ಸಬ್ಜೆಕ್ಟ್ ಮೇಲಿರುವ ನೆರಳು ಬೆಳಕಿನ ಮೇಲೆ ಡಿಪೆಂಡ್ ಆಗಿ ಫೋಟೋ ಕ್ರಿಯೇಟ್ ಆಗತ್ತೆ. ಈಗಲೂ ಅದೇ ತಂತ್ರಜ್ಞಾನವಿದೆ. ಅದರೆ ಈಗ ಬೇರೆ ಬೇರೆ ಸಾಧ್ಯತೆಗಳು ಬಂದಿದ್ದಾವೆ ಅಷ್ಟೆ. ನಾನು ನನ್ನ ಆತ್ಮ ತೃಪ್ತಿಗೆ ಫೋಟೋಗಳನ್ನು ತೆಗೆಯುತ್ತೇನೆ. ಕೊಡಗು, ಬಿಜಾಪುರ, ದಾಂಡೇಲಿ, ಬಾಗಲಕೋಟೆ ಇತ್ಯಾದಿ ಕಡೆಗಳಲ್ಲಿ ಹೋಗಿ ಫೋಟೋಗ್ರಫಿ ಮಾಡಿದ್ದೇನೆ. ಆಗ ತಾನೆ ಕೋಶದಿಂದ ಹೊರಬಂದ ಹಳದಿಚಿಟ್ಟೆ, ಅಪ್ಪ ಅಮ್ಮ ತರುವ ಆಹಾರಕ್ಕಾಗಿ ಕಾಯುತ್ತಿರುವ ಮರ ಕುಟಿಕದ ಮರಿಗಳು, ಏರೋಪ್ಲೇನ್ ಚಿಟ್ಟೆಗಳ ಮುಖಚಿತ್ರ, ಗೂಡು ಕಟ್ಟಲು ಸಿದ್ಧವಾಗಿರುವ ಕೆಂಪು ರಾಟವಾಳ, ಗೂಡು ಪ್ರವೇಶಿಸುತ್ತಿರುವ ಗೀಜಗನ ಹಕ್ಕಿ, ಚಿಟ್ಟೆಯ ಲಾರ್ವ ಹೊತ್ತೋಯ್ಯುತ್ತಿರುವ ಇರುವೆಗಳ ಗುಂಪು, ನೀರಿನ ಹನಿಗಳಿಂದ ಸೃಷ್ಟಿಸಿದ ಆಕೃತಿ, ಬೆಳಗಿನ ತಿಂಡಿಗೆ ಕಪ್ಪೆಯನ್ನು ಬೇಟೆಯಾಡಿದ ಕೆಂಬೂತ, ಮಿರ ಮಿರ ಮಿಂಚುವ ಕುಕ್ಕೂ ಕಣಜ.... ಇತ್ಯಾದಿ ಚಿತ್ರಗಳನ್ನು ಸೆರೆಹಿಡಿದಿದ್ದೇನೆ. ಇದಕ್ಕೆ ನನ್ನ ಹೆಂಡತಿ ಅಲುಮೇಲು ಮತ್ತು ಮಗ ದಿಶಾಂತನ ಸಹಕಾರ, ಪ್ರೋತ್ಸಾಹ ಇದೆ. ಬಿಡುವಿದ್ದಾಗ ಅವರು ಕೂಡ ನನ್ನ ಜೊತೆಗೆ ಫೋಟೋಗ್ರಫಿ ನೋಡಲು ಬರುತ್ತಾರೆ' ಎನ್ನುತ್ತಾರೆ ವಿನೋದ್ ಕುಮಾರ್. ವಿ‌. ಕೆ.

ಇತ್ತೀಚೆಗೆ ತಂತ್ರಜ್ಞಾನ, ಯಾಂತ್ರಿಕ ಬದುಕು ಶುರುವಾದ ಮೇಲೆ ನಾವು ಸೂಕ್ಷ್ಮ ವಿಷಯಗಳ ಬಗ್ಗೆ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ. ಅತಿಯಾದ ಸ್ವಾರ್ಥದಿಂದಾಗಿ ಕಾಡುಗಳು, ಕಾಡು ಪ್ರಾಣಿಗಳು, ನದಿಪಾತ್ರಗಳು, ಹಕ್ಕಿ ಕೀಟಗಳು ಒಟ್ಟಾರೆಯಾಗಿ ನಿಸರ್ಗವನ್ನು ಹಾಳುಮಾಡುವುದರೊಂದಿಗೆ ನಮ್ಮ ವರ್ತಮಾನ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಆಕಾಶ ಮುಟ್ಟಿದರೂ ಸಹ ನಮ್ಮ ಸುತ್ತಲಿನ ಸೂಕ್ಷ್ಮ ವಿಷಯಗಳು, ಸಣ್ಣ ಸಣ್ಣ ಜೀವಿಗಳತ್ತ ಗಮನ ಕೊಡದೆ ಹೀಗೆ ನಾಶವಾಗುತ್ತಿದ್ದರೆ ಪರಿಸರದ ಕೊಂಡಿಯನ್ನು ಕಳಚುತ್ತಿದ್ದರೆ ಮುಂದಿನ ಪೀಳಿಗೆಯ ಶಾಪವಂತೂ ನಮಗೆ ತಟ್ಟುತ್ತದೆ. ನಿಸರ್ಗ ಎಲ್ಲರಿಗೂ ಸಂಬಂಧಿಸಿದ್ದು. ಹಾಗಾಗಿ ಸಾಧ್ಯವಾದಷ್ಟು ಮನೆ ಸುತ್ತ ಗಿಡ ಮರಗಳನ್ನು ಬೆಳೆಸೋಣ. ನಮಗೆ ಗೊತ್ತಿಲ್ಲದೇ ನಮಗೆ ಪ್ರಕೃತಿಗೆ ಉಪಕಾರಿಯಾಗಿರುವ ಕೀಟ ಪಕ್ಷಿಗಳಂತಹ ಜೀವಿಗಳ ಬದುಕಿಗೂ ಅನುವು ಮಾಡಿಕೊಡೋಣ.

 

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

 

 

ಮೊದಲನೇ ಕ್ಯಾಮರಾ...ವಿವಿಟರ್ ಕಂಪನಿಯ ಫಿಲ್ಮ್ ಕ್ಯಾಮರಾ..ನೂರಾರು ಫಿಲ್ಮ್ ಗಳಲ್ಲಿ ಚಿತ್ರ ತೆಗೆದರೂ... ಡೆವಲಪ್ ಮಾಡಿಸಲು ಹಣವಿಲ್ಲದೆ..ನಂತರ ಅದರ ನಿರ್ವಹಣೆ ಕಷ್ಟವಾಗಿ ಫೋಟೋಗ್ರಫಿ ನಿಲ್ಲಿಸಿದೆ.

ನಾನು ಇಲಾಖೆ ಸೇರಿದ್ದು 2003 ರಲ್ಲಿ..ತಿತಿಮತಿ ಗೆ..ಅಲ್ಲಿನ ಕಾಡಿನ ಹಕ್ಕಿಗಳನ್ನು ನೋಡಿ ಹಕ್ಕಿ ಚಾಯಾಗ್ರಹಣದ ಬಗ್ಗೆ ನಿರ್ಧರಿಸಿದೆ.
ಒಲಿಂಪಸ್ ಕಂಪನಿಯ ಸಣ್ಣ ಡಿಜಿಟಲ್ ಕ್ಯಾಮ್ ತಗಂಡೆ..ಅದ್ರಲ್ಕೇ ಶುರು ಮಾಡಿದೆ..ನಂತರ ಫುಜಿಫಿಲ್ಮ್ ಕ್ಯಾಮರಾ ತಗಂಡೆ. ಸದ್ಯಕ್ಕೆ Nikon D500 ಬಳಸ್ತಿದಿನಿ.

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...