Date: 04-01-2023
Location: ಬೆಂಗಳೂರು
“ಪಾಶ್ಚಾತ್ಯ ಕಥೆಗಾರರದ್ದು ಒಂದು ವಿಶಿಷ್ಟ ಲೋಕ. ಅವರು ಭಾರತೀಯ ಕಥೆಗಾರರಂತೆ ನಿಂತಲ್ಲೇ ಸುಳಿಸುತ್ತುವವರಲ್ಲ. ತಮ್ಮ ಕಥೆ ಕಾದಂಬರಿಗಳ ಬರವಣಿಗೆಗಾಗಿ ತಾವೇ ಸ್ವತಃ ಕುಡುಕನಾಗಿ, ವ್ಯಭಿಚಾರಿಯಾಗಿ ಅನುಭವ ಪಡೆದುಕೊಂಡವರಿದ್ದಾರೆ. ಬೋದಿಲೇರ್‌ನಂಥವರಿದ್ದಾರೆ. ಕಥೆಗಳ ವಿಷಯ ಮತ್ತು ನಿರೂಪಣೆಯ ದೃಷ್ಟಿಯಿಂದ ಹಾಗೂ ಒಳಾರ್ಥಗಳನ್ನು ನೀಡಿ ಓದುಗರನ್ನು ವಿಶಿಷ್ಟ ತಿರುವಿನಲ್ಲಿ ಹಿಡಿದು ನಿಲ್ಲಿಸುವ ಬರವಣಿಗೆಯಿಂದ ಈ ಲೇಖಕರು ವಿಭಿನ್ನ” ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿ ಕಡಲು ಅಂಕಣದಲ್ಲಿ ಲೇಖಕ ಗುರುರಾಜ ಕೊಡ್ಕಣಿ ಅವರ ‘ಅಂಕಣಕ್ಕೆ ಅನುವಾದಿಸಿದ ಕಥೆಗಳು’ ಕೃತಿಯ ಕುರಿತು ಬರೆದಿದ್ದಾರೆ.
ಪುಸ್ತಕ: ಅಂಕಣಕ್ಕೆ ಅನುವಾದಿಸಿದ ಕಥೆಗಳು
ಲೇಖಕ: ಗುರುರಾಜ ಕೊಡ್ಕಣಿ, ಯಲ್ಲಾಪುರ
ಪ್ರಕಾಶನ: ಎ ಬಿ ಸಿ ಪಬ್ಲಿಕೇಷನ್, ಬೆಂಗಳೂರು
ಬೆಲೆ: 100/-
ಒಂಬತ್ತನೆಯ ತರಗತಿಗೆ ಲಿಯೋ ಟಾಲಸ್ಟಾಯ್ ರವರ ತ್ರೀ ಕ್ವಶ್ಚನ್ಸ್ ಪಾಠವಿದೆ. ಅದನ್ನು ಪಾಠ ಮಾಡುವಾಗಲೆಲ್ಲ ಮಕ್ಕಳು ಅದರ ಕಥೆ ಹೇಳಿ ಟೀಚರ್ ಎನ್ನುತ್ತಾರೆ. ಹಾಗೆ ನೋಡಿದರೆ ನಾನು ಆ ಕಥೆಯನ್ನು ಸಂಕ್ಷಿಪ್ತಗೊಳಿಸಿ ಇಂಗ್ಲೀಷ್ ನಲ್ಲಿಯೇ ಹೇಳಬೇಕು. ಆದರೆ ನಮ್ಮ ಮಕ್ಕಳ ಅಗತ್ಯತೆಗೆ ಅನುಗುಣವಾಗಿ ಮತ್ತು ನನಗೆ ಆ ಕಥೆಯ ಮೂಲಕ ಮಕ್ಕಳಿಗೆ ಹೇಳಬೇಕಾದ ಹಲವಾರು ವಿಷಯಗಳನ್ನು ತಿಳಿಸುವುದಕ್ಕಾಗಿ ಪಾಠ ಪ್ರಾರಂಭಿಸುವುದಕ್ಕೂ ಮೊದಲೇ ಕಥೆ ಹೇಳೀನಿ ಇವತ್ತು ಎನ್ನುತ್ತ ಪೂರ್ತಿ ಕಥೆ ಹೇಳಿ ಬಿಡುತ್ತೇನೆ. ನೋಡಿ ಮಕ್ಕಳೆ, ಈ ಕ್ಷಣ ಎನ್ನುವುದು ಪ್ರತಿ ಕೆಲಸ ಪ್ರಾರಂಭಿಸಲೂ ಒಳ್ಳೆಯ ಸಮಯ, ನಿಮ್ಮ ಎದುರು ಯಾರಿರ‌್ತಾರೋ ಅವರೇ ಬಹು ಮುಖ್ಯ. ಆ ಕ್ಷಣಕ್ಕೆ ನೀವೇನು ಕೆಲಸ ಮಾಡುತ್ತಿರುತ್ತಾರೋ ಅದು ಬಹಳ ಇಂಪಾರ್ಟೆಂಟ್ ಎಂದೆಲ್ಲ ಹೇಳಿ ಪ್ರತಿ ವರ್ಷವೂ ಇನ್ನೇನು ನನ್ನ ಮಕ್ಕಳು ಗಂಭೀರವಾಗಿ ಓದುತ್ತಾರೆ ಎಂಬ ಭ್ರಮೆಯಲ್ಲಿ ತೇಲಿಸುವಂತಹ ಪಾಠ ಇದು. ಈ ಕಥೆಯನ್ನು ಓದುತ್ತಲೇ ಒಂದು ಕ್ಷಣ ನಾನು ಕ್ಲಾಸ್ ರೂಂನಲ್ಲಿ ಮಕ್ಕಳ ಜೊತೆಗಿದ್ದೇನೆ ಎಂಬ ಭಾವ ಕಾಡಿ, ಎರಡೇ ದಿನಕ್ಕೆ ಮಕ್ಕಳಿಂದ ಅನುಭವಿಸುವ ನಿರಾಸೆ ನೆನಪಾಗಿ ಖುಷಿ, ಬೇಸರ, ಭ್ರಮನಿರಸನ, ಕೋಪ ಹೀಗೆ ಎಲ್ಲ ಭಾವಗಳನ್ನು ಒಟ್ಟೊಟ್ಟಿಗೆ ತಂದುಕೊಟ್ಟ ಈ ಕಥೆಯನ್ನು ಕನ್ನಡಕ್ಕೆ ಅನುವಾದಿಸಿ ನೀಡಿದ್ದು ‘ಅಂಕಣಕ್ಕೆ ಅನುವಾದಿಸಿದ ಕಥೆಗಳು’ ಎಂಬ ಪುಸ್ತಕದಲ್ಲಿ ಗುರುರಾಜ ಕೊಡ್ಕಣಿ ಯಲ್ಲಾಪುರ. ನಮ್ಮೂರು ಹಿರೇಗುತ್ತಿಯ ಪಕ್ಕವೇ ಇರುವ ಕೊಡ್ಕಣಿ ಹಾಗೂ ಅನತಿ ದೂರದ ಯಲ್ಲಾಪುರಕ್ಕೆ ಕಡಲ ಉಪ್ಪಿಗೂ ಬೆಟ್ಟದ ನೆಲ್ಲಿಕಾಯಿಗೂ ಇರುವ ಸಂಬಂಧ ಹೇಳಿಕೊಳ್ಳುತ್ತ ಓದಿದರೆ ಇದು ಹೂಬೆಹೂಬೇ ನನ್ನದೆ ತಲ್ಲಣಗಳು.
ಅಂಕಣ ಬರೆಯುವ ಕಷ್ಟಗಳನ್ನು ನನ್ನಷ್ಟು ಚೆನ್ನಾಗಿ ಬೇರೆಯವರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ವಾರಕ್ಕೆ ನಾಲ್ಕು ಅಂಕಣ ಬರೆಯುತ್ತಿದ್ದವಳು ನಾನು. ಅಂಕಣಕ್ಕೊಂದು ನಿರ್ದಿಷ್ಟ ವಿಷಯವಿದ್ದಾಗ ಬರೆಯುವುದು ಸುಲಭ. ಆದರೆ ನಮ್ಮದು ಒಂದೇ ವಿಷಯಕ್ಕೆ ಸಂಬಂಧಿಸದ ಅಂಕಣವಾದರೆ ಒಂದುವಾರ ಯಾವುದೇ ವಿಷಯ ದೊರಕದೇ ಹೋಗಬಹುದಾದ ಸಾಧ್ಯತೆಗಳಿರುತ್ತವೆ. ಆಗೆಲ್ಲ ಆ ವಾರದ ಅಂಕಣಕ್ಕೆ ವಿಷಯ ಹೊಂದಿಸುವುದು ಅದೆಷ್ಟು ಕಷ್ಟವಾಗುತ್ತದೆಯೆಂದರೆ ಏನು ಬರೆಯುವುದೆಂದೇ ತೋಚದೆ ಯಾಕಾದರೂ ಅಂಕಣ ಬರೆಯಲು ಒಪ್ಪಿಕೊಂಡೆನೋ ಎಂದೆನಿಸಲು ಪ್ರಾರಂಭವಾಗುತ್ತದೆ. ಹಾಗಾದಾಗಲೆಲ್ಲ ಆ ಸಮಯಕ್ಕೆ ಹೊಂದುವ ಬಾಲ್ಯದ ಘಟನೆಗಳನ್ನು ಬರೆದು ಉಸ್ಸಪ್ಪ ಎನ್ನುತ್ತಿದ್ದೆ. ಅದೆಷ್ಟೋ ಸಲ ‘men are from mars, women are from venues’ ಪುಸ್ತಕದ ಯಾವುದೋ ಒಂದು ಚಾಪ್ಟರ್ ಓದಿ ಅದನ್ನು ಸಂಕ್ಷಿಪ್ತವಾಗಿ ಕನ್ನಡೀಕರಣಗೊಳಿಸಿ ತೂಗುಗತ್ತಿಯಿಂದ ಪಾರಾದಂತೆ ನಿಟ್ಟುಸಿರು ಬಿಟ್ಟಿದ್ದೂ ಇದೆ. ಇಲ್ಲಿ ನನ್ನದೇ ದೋಣಿಯ ಸಹಪಯಣಿಗರಾಗಿರುವ ಗುರುರಾಜ ಕೊಡ್ಕಣಿಯವರಿದ್ದಾರೆ. ತಮ್ಮ ಮಾತುಗಳಲ್ಲಿ ಅವರೇ ಹೇಳಿರುವಂತೆ ಅಂಕಣಕ್ಕೆ ವಿಷಯಗಳ ಲಭ್ಯತೆ ಇಲ್ಲದಿರುವಾಗ ಅನುವಾದಿಸಿದ ಕಥೆಗಳು ಇವು. ಇದರಲ್ಲಿನ ಒಂದು ಅತ್ಯುತ್ತಮ ಅಂಶವೆಂದರೆ ಇಂಗ್ಲೀಷ್‌ನ ಅತ್ಯುತ್ತಮ ಕಥೆಗಾರರ ಕಥೆಗಳನ್ನು ಕನ್ನಡದ ಓದುಗರಿಗೆ ಅನುವಾದಿಸಿ ಕೊಟ್ಟಿದ್ದಷ್ಟೇ ಅಲ್ಲದೆ ಕೊನೆಯಲ್ಲಿ ಅದರ ಕುರಿತಾದ ಕಿರು ಟಿಪ್ಪಣಿಯನ್ನು ನೀಡಿರುವುದು.
ಪಾಶ್ಚಾತ್ಯ ಕಥೆಗಾರರದ್ದು ಒಂದು ವಿಶಿಷ್ಟ ಲೋಕ. ಅವರು ಭಾರತೀಯ ಕಥೆಗಾರರಂತೆ ನಿಂತಲ್ಲೇ ಸುಳಿಸುತ್ತುವವರಲ್ಲ. ತಮ್ಮ ಕಥೆ ಕಾದಂಬರಿಗಳ ಬರವಣಿಗೆಗಾಗಿ ತಾವೇ ಸ್ವತಃ ಕುಡುಕನಾಗಿ, ವ್ಯಭಿಚಾರಿಯಾಗಿ ಅನುಭವ ಪಡೆದುಕೊಂಡವರಿದ್ದಾರೆ. ಬೋದಿಲೇರ್‌ನಂಥವರಿದ್ದಾರೆ. ಕಥೆಗಳ ವಿಷಯ ಮತ್ತು ನಿರೂಪಣೆಯ ದೃಷ್ಟಿಯಿಂದ ಹಾಗೂ ಒಳಾರ್ಥಗಳನ್ನು ನೀಡಿ ಓದುಗರನ್ನು ವಿಶಿಷ್ಟ ತಿರುವಿನಲ್ಲಿ ಹಿಡಿದು ನಿಲ್ಲಿಸುವ ಬರವಣಿಗೆಯಿಂದ ಈ ಲೇಖಕರು ವಿಭಿನ್ನ. ಅದರಲ್ಲೂ ಗುರುರಾಜ ಕೊಡ್ಕಣಿ ಅನುವಾದಿಸಿರುವ ರಷ್ಯನ್ ಕಥೆಗಾರ ಚೆಕಾಫ್‌ರವರ ಚಾಯ್ ಮತ್ತು ಎ ಕಂಟ್ರಿ ಕಾಟೇಜ್, ಭಾರತದ ಹಳ್ಳಿಗಳ ವಿಶಿಷ್ಟ ಒಳ ನೋಟ ನೀಡುವಂತಹ ಕಥೆಗಳನ್ನು ಬರೆಯುವ ರಸ್ಕಿನ್ ಬಾಂಡ್‌ರ ದಿ ಐಸ್ ಹ್ಯಾವ್ ಇಟ್ ಹಾಗೂ ದಿ ಪ್ಲೈಯಿಂಗ್ ಕೈಟ್, ಫ್ರೆಂಚ್‌ನ ಶ್ರೇಷ್ಠ ಕತೆಗಾರ್ತಿ ಸಿಡನಿ ಕೂಲೆಟ್‌ರವರ ಕಥೆ, ಸ್ಪಾನಿಷ್‌ನ ದಂತಕಥೆ ಎನಿಸಿಕೊಂಡ ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಸ್‌ರವರ ಒನ್ ಆಫ್ ದೀಸ್ ಡೇಸ್, ಅದ್ಭುತ ಕಥೆಗಾರ ಅರ್ನೆಸ್ಟ್ ಹೆಮ್ಮಿಂಗ್ವೆಯವರ ಓಲ್ಡ್ ಮ್ಯಾನ್ ಅಟ್ ದ ಬ್ರಿಡ್ಜ್ ಮತ್ತು ಎ ಡೇ ವೇಟ್ಸ್, ಅಮೇರಿಕನ್ ಕತೆಗಾರ್ತಿ ಸಲಾಮಿತ್ ಇಶ್ಕಿಶೋರ್ ಬರೆದ ಅಪಾಯಿಂಟ್‌ಮೆಂಟ್ ವಿತ್ ಲವ್, ಪಾಕಿಸ್ತಾನದ ಇಂಗ್ಲೀಷ್ ಲೇಖಕ ಮೊಹ್ಸಿನ್ ಹಮೀದ್‌ರ ಬಿಹೆಡ್ಡಿಂಗ್, ಇಂಗ್ಲೀಷ್‌ನ ಸರ್ವಕಾಲಿಕ ಶ್ರೇಷ್ಠ ಕಥೆಗಾರ ಓ ಹೆನ್ರಿಯವರ ಎ ಸ್ಟ್ರೇಂಜ್ ಸ್ಟೋರಿ, ಅಮೇರಿಕಾದ ಶ್ರೇಷ್ಠ ಹಾರರ್ ಕಥೆಗಾರ್ತಿ ಶಿರ್ಲೆ ಜಾಕ್ಸನ್‌ರವರ ದಿ ಲೊಟರಿ, ಆಗನೇ ನಾನು ಹೇಳಿದ ಲಿಯೋ ಟಾಲಸ್ಟಾಯ್‌ರವರ ತ್ರೀ ಕ್ವೊಶ್ಚನ್ಸ್, ನನ್ನ ಕಾಲೇಜು ದಿನಗಳಿಂದಲೂ ನಡುಕ ಹುಟ್ಟಿಸಿದ್ದ ಸಾದತ್ ಹಸನ್ ಮಾಂಟೋರವರ ದಿ ರಿಟರ್ನ್, ಸೈಕಲ್‌ನ ವಿಲಕ್ಷಣ ಪಯಣ ಎಂಬ ಲೇಖಕರ ಹೆಸರಿಲ್ಲದ ಕಥೆ, ಕೆನೆಡಿಯನ್ ಕಥೆಗಾರ ಸ್ಟಿಫನ್ ಲಿಯಕಾಕ್‌ರವರ ಮೈ ಫೈನಾನ್ಶಿಯಲ್ ಕ್ಯಾರಿಯರ್ ಎಂಬ ಕಥೆ. ಒಟ್ಟೂ ಹದಿನೇಳು ಕಥೆಗಳಿವೆ. ಇಲ್ಲಿನ ಕಥೆಗಳಲ್ಲಿ ಕೆಲವೊಂದು ನೇರ. ಅನುವಾದಗಳಿದ್ದರೆ ಕೆಲವು ಭಾವಾನುವಾದಗಳು. ಆದರೆ ಭಾವಾನುವಾದದಿಂದ ಕಥೆಯ ಮೂಲ ಸ್ವರೂಪಕ್ಕೇನೂ ಧಕ್ಕೆಯಾಗಿಲ್ಲ.
ಅಂಕಣಕ್ಕೆಂದು ಅನುವಾದಿಸಿದ ಕಥೆಗಳಾದರೂ ಎಲ್ಲಿಯೂ ಕಥೆಗಳ ನಿರೂಪಣೆಯಲ್ಲಿ ಇದು ಹೀಗಿರಬಹುದಿತ್ತೇನೋ ಎಂಬ ಕೊಂಕು ತೆಗೆಯದಂತೆ ಹೇಳಲ್ಪಟ್ಟಿದೆ. ಒಂದಿಷ್ಟು ಮುದ್ರಣ ದೋಷಗಳಿದ್ದರೂ ಕಥೆಯ ಓಘದಲ್ಲಿ ಅವು ಮರೆಯಾಗುತ್ತವೆ. ಹೊಸದಾಗಿ ಆಂಗ್ಲ ಸಾಹಿತ್ಯವನ್ನು ತಿಳಿಯಬೇಕೆನ್ನುವವರಿಗೆ ಇದು ಖಂಡಿತ ದಾರಿ ದೀಪವಾಗಬಲ್ಲದು. ಜಾತ್ರೆಯ ನಿಮಿತ್ತ ಒಂದೊಂದು ತರಗತಿಯಲ್ಲಿ ನಾಲ್ಕೈದು ಮಕ್ಕಳಷ್ಟೇ ಇರುವಾಗ ಇಂಗ್ಲೀಷ್ ಕಥೆ ಓದಿ ಎಂದು ಅವರ ಕೈಗಿಟ್ಟೆ. ಅದೇನೋ ಹೊಸ ಲೋಕವೊಂದನ್ನು ಪ್ರವೇಶಿಸುವ ಪುಳಕ ಮಕ್ಕಳ ಕಣ್ಣಲ್ಲಿ. ಪುಸ್ತಕವೊಂದರ ಸಾರ್ಥಕತೆಯಿರುವುದೇ ಇಲ್ಲಿ.
- ಶ್ರೀದೇವಿ ಕೆರೆಮನೆ
ಈ ಅಂಕಣದ ಹಿಂದಿನ ಬರಹಗಳು:
ಮಗುವಾಗಿಸುವ ಸುಂದರ ಹೂ ಮಾಲೆ
ಬಸವಳಿದ ಬಾಳಿಗೆ ಬೆಳಕು ನೀಡಬೇಕಿದೆ ಕಂದೀಲು
ಕಿರಿದರಲ್ಲೇ ಮೆರೆವ ಹಿರಿತನದ ಚುಟುಕುಗಳು
ಹಾಸ್ಯದ ಲೇಪನವಿಟ್ಟು ಮಕ್ಕಳ ಮನಸ್ಥಿತಿಯನ್ನು ಬಿಂಬಿಸುವ ಕಥೆಗಳು
ಭೂತ ವರ್ತಮಾನಗಳ ಬೆಸೆಯುವ ಕಥಾನಕ
ದೇಹದ ಹಂಗು ತೊರೆದು; ಹೊಸದನ್ನು ಹುಡುಕಿ
ತಣ್ಣಗೆ ಕಥೆಯಾಗಿ ಹರಿಯುವ ಗಂಗಾವಳಿ
ಬದಲಾವಣೆಗಾಗಿ ಆತ್ಮಾವಲೋಕನವೊಂದೇ ಮಾರ್ಗ
ವಿಸ್ತಾರ ವಿಷಯದ ಗುಟುಕು ನೀಡುವ ಮಾಯದ ಕಥೆಗಳು
ಅಚ್ಚರಿಗೆ ನೂಕುವ ಹೊಳಹುಗಳು
ಗಜಲ್ ಕಡಲಲ್ಲಿ ಹಾಯಿದೊಣಿಯಲ್ಲೊಂದು ಸುತ್ತು
ಹಲವು ಜಾತಿಯ ಹೂಗಳಿಂದಾದ ಮಾಲೆ
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
©2024 Book Brahma Private Limited.