ಅನಂತಮೂರ್ತಿ ಅವರ `ಕ್ಲಿಪ್ ಜಾಯಿಂಟ್' ಕಥೆಯಲ್ಲಿ ಕಾಣುವ ಮೌಲ್ಯಶೋಧನೆ

Date: 22-01-2025

Location: ಬೆಂಗಳೂರು


"“ಅನಂತಮೂರ್ತಿ ಅವರ ಪ್ರಕೃತಿ, ಕಾರ್ತಿಕ,ಘಟ್ಟಶ್ರಾಧ್ದ,ದಂತಹ ಕತೆಗಳ ಮಟ್ಟದ ಕಲಾತ್ಮಕ ಯಶಸ್ಸು ಇಲ್ಲಿ ಸಿದ್ದಿಸಿಲ್ಲವಾದರೂ ಅವರ ಕಥೆಗಳ ಸಂದರ್ಭದಲ್ಲಿ ಮಾತ್ರವಲ್ಲದೆ ಇಡೀ ಕನ್ನಡ ಸಣ್ಣಕತೆಯ ಚರಿತ್ರೆಯ ಸಂದರ್ಭದಲ್ಲಿ ಕ್ಲಿಪ್ ಜಾಯಿಂಟ್ ಅತ್ಯಂತ ಮಹಾತ್ವಾಂಕ್ಷೆಯಿಂದ ಕೂಡಿದ ಕನ್ನಡದಲ್ಲಿ ಸಣ್ಣಕಥೆಯ ಪ್ರಕಾರ ತನ್ನ ಜೀರ್ಣಶಕ್ತಿಯನ್ನು ಪಣಕ್ಕೊಡ್ಡಿ ಕೊಂಡಿರುವ ಕಥೆಯಾಗಿದೆ”," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಅನಂತಮೂರ್ತಿ ಅವರ "ಕ್ಲಿಪ್ ಜಾಯಿಂಟ್" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.

ಯು. ಆರ್. ಅನಂತಮೂರ್ತಿ ಅವರು ನವ್ಯ ಸಾಹಿತ್ಯ ಕಾಲಘಟ್ಟದಲ್ಲಿ ತಮ್ಮ ವಿಶಿಷ್ಟತೆಯ ಮೂಲಕ ಭಿನ್ನ ನೆಲೆಯ ಛಾಪನ್ನು ಮೂಡಿಸಿರುವ ಲೇಖಕರು. ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ 1932 ರ ಡಿಸೆಂಬರ್ 21ರಂದು ರಾಜಗೋಪಾಲಚಾರ್ಯ ಮತ್ತು ಸತ್ಯಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದವರು.ಇವರ ತಂದೆ ಆಗಿನ ಕಾಲದಲ್ಲೇ ಮೆಟ್ರಿಕ್ಯುಲೇಷನ್ ಹಾಗೂ ಸೀನಿಯರ್ ಕೇಂಬ್ರಿಜ್ ಪರೀಕ್ಷೆ ಕಟ್ಟಿ ಉತ್ತೀರ್ಣರಾದವರು. ಅರ್ಚಕರಾಗಿ,ಶ್ಯಾನುಭೋಗರಾಗಿ,ಅಕೌಂಟೆಂಟ್, ಪೋಸ್ಟ್ ಮಾಸ್ಟರ್,ಮಠದ ಪಾರುಪತ್ತೇಗಾರ ಹೀಗೆ ಹಲವು ಹುದ್ದೆಗಳಲ್ಲಿದ್ದು ವಿಭಿನ್ನ ವ್ಯಕ್ತಿತ್ವ ರೂಢಿಸಿಕೊಂಡವರು ರಾಜಗೋಪಾಲಚಾರ್ಯ. ಇಂತಹ ವಿಶಿಷ್ಟ ವ್ಯಕ್ತಿತ್ವ ಹೊಂದಿದ ರಾಜಗೋಪಾಲಚಾರ್ಯ ಅವರ ಮಗನಾದ ಅನಂತಮೂರ್ತಿ ಅವರು ಕೂಡ ತಮ್ಮನ್ನು ತಾವು ವಿಶಿಷ್ಟ ನೆಲೆಗೆ ಸ್ವತಂತ್ರ ಚಿಂತನೆಗೆ ಒಡ್ಡಿಕೊಂಡು ಹದಗೊಳಿಸಿಕೊಂಡ ಪ್ರತಿಭಾನ್ವಿತ ಲೇಖಕರು. ತಮ್ಮ ಕೃತಿಗಳ ಮೂಲಕ ತಾವು ಒಳಹೊಕ್ಕು ನೋಡುತ್ತಲೇ ಸಮಕಾಲೀನ ಚಿಂತನೆಗಳ ನಡುವೆ ವಾಸ್ತವ ಬದುಕಿನತ್ತ ದೃಷ್ಟಿ ಬೀರುತ್ತಾ ಸಾಗುವ ಅವರ ಕೃತಿಗಳು ಅನೇಕ. “ಸಂಸ್ಕಾರ, ಭಾರತಿಪುರ, ಅವಸ್ಥೆ, ಭವ, ದಿವ್ಯ, ಪ್ರೀತಿ ಮೃತ್ಯು ಭಯ,ಇವರ ಕಾದಂಬರಿಗಳು. ಇವರ ಕಥಾ ಸಂಕಲನಗಳು “ಎಂದೆಂದೂ ಮುಗಿಯದ ಕಥೆ, ಸೂರ್ಯದ ಕುದುರೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಪಚ್ಚೆ ರೆಸಾರ್ಟ್, ಎರಡು ದಶಕದ ಕಥೆಗಳು, ಐದು ದಶಕದ ಕಥೆಗಳು”, ಹೀಗೆ ಹಲವು ಕಥಾ ಸಂಕಲನಗಳನ್ನು ಪ್ರಕಟಿಸುವುದರ ಜೊತೆಗೆ ಅವರ “ಆತ್ಮಕತೆ ಸುರಗಿ” ಯನ್ನು ಸಹ ನೋಡಬಹುದು.ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿದ್ದು, “ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ”,,, ಇನ್ನೂ ಅನೇಕ ಪುರಸ್ಕಾರ ಇವರನ್ನು ಅರಸಿ ಬಂದಿವೆ. “ಹದಿನೈದು ಪದ್ಯಗಳು, ಮಿಥುನ, ಅಜ್ಜನ ಹೆಗಲ ಸುಕ್ಕುಗಳು, ಬಾವಲಿ, ಅಭಾವ”, ಇವು ಇವರ ಕವನ ಸಂಕಲನಗಳು. ಇದರ ಜೊತೆಗೆ ‘ಆವಾಹನೆ’ ಎಂಬ ಏಕೈಕ ನಾಟಕವನ್ನು ಕೂಡ ರಚಿಸಿರುತ್ತಾರೆ. ಇವರ "ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ". ಎಂಬ ವಿಮರ್ಶಾ ಕೃತಿಗಳು ಕೂಡ ಪ್ರಕಟಗೊಂಡಿವೆ.ಇವರ “ಮೌನಿ” ಎಂಬ ಕಥಾ ಸಂಕಲನದಿಂದ “ಕ್ಲಿಪ್ ಜಾಯಿಂಟ್” ಎಂಬ ಕಥೆಯನ್ನು ಆರಿಸಿಕೊಳ್ಳಾಗಿದೆ.

ಈ ಕ್ಲಿಪ್ ಜಾಯಿಂಟ್ ಎಂಬ ಕತೆ ಹೆಸರೇ ವಿಸ್ಮಯವನ್ನು ಹುಟ್ಟಿಸುವಂತಹದ್ದು. ಇಲ್ಲಿ ಯಾವುದು ಕ್ಲಿಪ್ ಜಾಯಿಂಟ್ ಯಾವುದರ ರೂಪಕವಾಗಿ‌ ಯಾವುದರ ಸಂಕೇತವಾಗಿ ನಮಗೆ ಕಥೆಗಾರರು ಕ್ಲಿಪ್ ಜಾಯಿಂಟ್ ಅರ್ಥವನ್ನು ನೀಡಲು ಹೊರಟಿದ್ದಾರೆ ಎಂಬುದು ಕೂಡ ಅಷ್ಟೆ ರೋಚಕ. ಭಾರತೀಯನಾದ ಕೇಶವ ಇಲ್ಲಿಯ ಅಸ್ತವ್ಯಸ್ತ ಬದುಕಿನಿಂದ ಬೇಸತ್ತು, ಈ ಕುಟುಂಬ ವ್ಯವಸ್ಥೆಯ ಜೊತೆಗೆ ತನ್ನ ಬದುಕನ್ನು ಏಗಲಾರದೆ ಏಗುತ್ತಾ ತುಂಬು ಕುಟುಂಬದ ಜವಾಬ್ದಾರಿಯನ್ನು ಹೊತ್ತು,ಅಮ್ಮನ ಕಷ್ಟ ನೋಡಲಾಗದೆ ಅವಡುಗಚ್ಚುವ ಕೇಶವ. ಕೇಶವನ ಅಪ್ಪ ಮೊದಲಿನಿಂದಲೂ ಜವಾಬ್ದಾರಿ ತೆಗೆದ ಕೊಳ್ಳದ ಮನುಷ್ಯ, ಕೇಶವ‌ ಚಿಕ್ಕಪ್ಪ ಶ್ಯಾಮಕಕ್ಕ ಮಹಾ ತಂತ್ರಗಾರಿಕೆಯ ವ್ಯಾಪಾರಸ್ಥನಾದರೆ, ಇನ್ನೊಬ್ಬ ಚಿಕ್ಕಪ್ಪ ಎಲ್ಲರಿಗಿಂತ ತದ್ವಿರುದ್ಧ, ಸುಬ್ಬಣ್ಣಕಕ್ಕ ಸಂನ್ಯಾಸಿ ಆಗಿ ದೇಶಾಂತರ ಹೋದವನು. ಅಪ್ಪನಿಗೆ ಯಾವುದರ ಆಸಕ್ತಿ‌ ಇರದೆ ತಮ್ಮನಿಗೆ ವಹಿವಾಟು ವಹಿಸಿ ನೋಡಿಕೊಂಡಿದ್ದರ ಪರಿಣಾಮ ಇವರಿಗೆ ಅನ್ಯಾಯ ಹೊರತಾಗಿ ಮತ್ತೇನು ಸಿಕ್ಕಿದ್ದಿಲ್ಲ.ಆದರೆ ಅಪ್ಪ ಸಾಯುವ ಕೆಲ ವರ್ಷಗಳ ಹಿಂದೆ ಅವನಲ್ಲಾದ ಬದಲಾವಣೆ ಅಚ್ಚರಿ ಮೂಡಿಸುವಂತಹದ್ದು. ಪ್ರತಿಯೊಂದಕ್ಕೂ ಲೆಕ್ಕಾಚಾರ, ಅಚ್ಚುಕಟ್ಟು,ಶಿಸ್ತುಬದ್ಧ ಕ್ರಮ ಇವೆಲ್ಲವನ್ನೂ ರೂಢಿಸಿಕೊಂಡು ‌ಬಿಟ್ಟ ಅಪ್ಪನ ಬಗ್ಗೆ ಕೇಶವನಿಗೆ ಈಗಲೂ ಅರ್ಥವಾಗದೆ ಇರುವ ಮೌನವೆ ಹೆಚ್ಚಿದೆ. ಈಗ ಕೇಶವನಿಗೆ ನಾಲ್ಕು‌ ಜನ ತಂಗಿಯರು, ಇಬ್ಬರು ಸೋಮಾರಿ ತಮ್ಮಂದಿರು,ಇತನೊಬ್ಬನ ದುಡಿಮೆಯಿಂದ ಜೀವನ ಸಾಗಿಸಬೇಕಾಗಿದೆ.ತನ್ನ ಆಸೆ ಕನಸುಗಳನ್ನು ಕೊಂದುಕೊಂಡು ನಡೆಸುವ ಯಾಂತ್ರಿಕ ಬದುಕು ಅಸಹನೀಯ ಎನಿಸಿದೆ.ಮದುವೆಗೆ ಬಂದ ತಂಗಿಯರು, ಜವಾಬ್ದಾರಿ ಇರದ ತಮ್ಮಂದಿರ ಜೊತೆಗೆ ಹೆಣಗಿ ಹೆಣಗಿ ಕೇಶವ ಬೇಸತ್ತು ಸ್ವಾರ್ಥಿ ಎಂದರು ಪರವಾಗಿಲ್ಲ ಎಂದು ಅಮ್ಮನನ್ನು ಒಪ್ಪಿಸಿ ಇಂಗ್ಲೆಂಡ್ ಗೆ ಬಂದಿದ್ದಾನೆ.ಭಾರತೀಯ ಸಂಸ್ಕೃತಿಗೂ ಹಾಗೂ ಇಂಗ್ಲೆಂಡ್ ನ ಸಂಸ್ಕೃತಿಗೂ ಕೇಶವ ತಾಳೆ ಹಾಕಿ ನೋಡುತ್ತಿದ್ದಾನೆ. ಆತನಿಗೆ ಇಲ್ಲಿಯದೆ ಖುಷಿ ನಿರಾಳ ಎನಿಸಿದರೆ, ಕೇಶವನಿಗೆ ಸಿಕ್ಕ ಸ್ಟೂವಾರ್ಟ್ ಎಂಬ ಗೆಳೆಯಗೆ ಮಾತ್ರ ಭಾರತವೇ ಶ್ರೇಷ್ಠ ಎನಿಸುತ್ತದೆ. ಹೀಗೆ ಇವರಿಬ್ಬರ ನಡುವೆ ಜರಗುವ ಒಂದು ಸಂಭಾಷಣೆಯುಕ್ತ ಕ್ರಿಯಾತ್ಮಕ ಘಟನೆಗಳ ಸುತ್ತ ನಡೆಯುವ ಕತೆಯೆ ಈ ಕ್ಲಿಪ್ ಜಾಯಿಂಟ್.

ಈ ಕತೆ ನಮಗೆ ಎರಡು ಭಿನ್ನ ಸಂಸ್ಕ್ರತಿಗಳ ಮೌಲ್ಯಶೋಧನೆಯನ್ನು ನಮ್ಮೆದುರಿಗೆ ಎದಿರುಬದಿರಾಗಿ ನಿಲ್ಲಿಸುತ್ತಾರೆ ಅನಂತಮೂರ್ತಿ. ಸ್ಟೂವಾರ್ಟ್ನ ನಿಲುವಿಗೂ ಕೇಶವನ ನಿಲುವಿನ ನಡುವೆ ಮೌಲ್ಯಮಾಪನ ನಡೆಸುತ್ತಾರೆ ಕತೆಗಾರ.ಒಮ್ಮೆ ಸ್ಟೂವಾರ್ಟ್ ನ ಪ್ರಶ್ನೆಗೆ “ ನನ್ನನ್ನೆ ತಗೋ ಕೇಶವ್: ನಂಗೆ ಬಡತನದ ಅನುಭವ ಇಲ್ಲ; ಹಸಿವೆಂದರೆ ಏನೂಂತ ತಿಳಿದಿಲ್ಲ. ಈ ದೇಶದಲ್ಲಿ ಹುಡುಗಿಯರ ಜೊತೆ ಮಲಗೋದು ಭಯದ ವಿಷಯವಲ್ಲ.

ಎಲ್ಲ ಆಯಿತು- ತಿಂದೆ, ಉಂಡೆ, ಮಲಗಿದೆ, ಸಂಭೋಗಿಸದೆ, ಇನ್ನಷ್ಟು ತಿಂದೆ, ಮಲಗಿದೆ, ಸಂಭೋಗಿಸಿದೆ ,ಆಮೇಲೆ? ಬದುಕಿನಲ್ಲಿ ಇನ್ನೂ ಯಾವ Thrill ಇದೆ?” ಎಂಬ ಗೆಳೆಯನ ಪ್ರಶ್ನೆಗೆ “ ನಿನ್ನ ಕಂಡರೆ ನನಗೆ ಅಸೂಯೆ ಆಗ್ತಿದೆ ಸ್ಟೂವಾರ್ಟ್ “ ಕೇಶವ ನಗುತ್ತಾ ನುಡಿಯುತ್ತಾನೆ. ಹೀಗೆ ಸಾಗುವ ಇವರ ವಿಚಾರಧಾರೆಗಳು ಭಿನ್ನ ಚಿಂತನೆಗಳನ್ನು ಮುಖಾಮುಖಿಯಾಗಿಸುತ್ತವೆ. ಮೌಲ್ಯಗಳ ಶೋಧ ನಡೆಸುತ್ತವೇ ಹಾಗೂ ಮೌಲ್ಯಮಾಪನ ಮಾಡಿಸುತ್ತವೆ. ಎಲ್ಲ ವಸ್ತುವಿಷಯಗಳು ಬೇಕೆಂದಾಗ ಸಿಗುತ್ತಾ ಸಾಗಿದರೆ ಬದುಕಿನಲ್ಲಿ ಸ್ವಾರಸ್ಯ ಇರಲಾರದು ಎಂಬುದು ಸ್ಟೂವಾರ್ಟ್ ಚಿಂತನೆಯಾದರೆ,,ಕೇಶವನಿಗೆ ಬವಣೆಯ ಬದುಕನ್ನು ನೆನಸಿಕೊಂಡರೆ ಈ ವ್ಯವಸ್ಥೆ ಸಮಾಜ,ಕುಟುಂಬ ಹೀಗೆ ಎಲ್ಲದರ ಮೇಲೂ ಜಿಗುಪ್ಸೆ ಮೂಡುವುದು.ಕೇಶವನಿಗೆ ಮೂವತ್ತಾಗಿದೆ ಆದರೂ ಮದುವೆಯಾಗಿಲ್ಲ. ಸ್ಟೂವಾರ್ಟ್ ಹದಿನಾರನೇ ವಯಸಿನಿಂದಲೇ ಹೆಣ್ಣಿನ ಜೊತೆಗೆ ಸಂಭ್ರಮಿಸಿದ್ದಾನೆ. ಇತ ತನಗೆ ಬೇಕಾಗಿದ್ದನ್ನ ಪಡೆಯಬೇಕಾದರೆ ಮತ್ತದೆ ಗೊಣಗಾಟ, ಗುದ್ದಾಟ ಪರಿಸರ ಮತ್ತು ‌ಪರಿಸ್ಥಿತಿಯೊಂದಿಗೆ ಗುದ್ದಾಡಿ ಆಗದಿದ್ದಾಗ ಹೊಂದಾಣಿಕೆ ಜೀವನ. ತಮ್ಮ ಆಸೆ ಕನಸುಗಳನ್ನು ಸಾಯಿಸಿಕೊಂಡು ಬದುಕುವ ಬಾಳು ಒಂದು ‌ಜೀವನವೆ ಎಂಬುದು ಕೇಶವನ ಪ್ರಶ್ನೆ. ಇದು ಕೇಶವನ ಒಬ್ಬನ ಪ್ರಶ್ನೆಯಲ್ಲ.‌ ಅನಾದಿಯಿಂದ ನವ್ಯಕಾಲಘಟ್ಟದಿಂದಿಡಿದು ಸಮಕಾಲೀನ ಸಂದರ್ಭಕ್ಕೂ ಹಾಗೂ ಮುಂದಿನ ಹಂತದಲ್ಲಿ ಏಳುವ ಮಧ್ಯಮವರ್ಗದವರ ಪ್ರಶ್ನೆ ಕೇವಲ ಪ್ರಶ್ನೆಯಾಗಿಯೇ ಮುಂದುವರಿಯುತ್ತದೆ. ಇಂತಹ ವಿಷಯ ಸನ್ನಿವೇಶವನ್ನು ಕಥೆಗಾರರು ಕೇಶವನ ಮೂಲಕ ಪ್ರತಿನಿಧಿಸುತ್ತಿದ್ದಾರೆ. ವ್ಯಕ್ತಿ ಸಿದ್ದಾಂತಗಳು, ಪಾರಂಪಾರಿಕ ಶ್ರದ್ದೆ ನಂಬಿಕೆಗಳನ್ನು ಪ್ರಶ್ನಿಸುತ್ತಿದ್ದಾರೆ ಅನಂತಮೂರ್ತಿ ಅವರು.ಇಂತಹ ಕ್ಲಿಷ್ಟವಾದ ಬೌದ್ಧಿಕ ನಿಲುವು ಈ ಕತೆಯೊಳಗೆ ತೀವ್ರತರವಾದ ಪರೀಕ್ಷೆಗೆ ಒಳಪಟ್ಟಿದೆ.ಇಂತಹದ್ದೆ ಪರಿಸ್ಥಿತಿ ಸಂದರ್ಭವನ್ನು ಅನಂತಮೂರ್ತಿ ಅವರು ಸಂಸ್ಕಾರ ಕಾದಂಬರಿ ಮೂಲಕ ಕತೆಯ ವಿನ್ಯಾಸ ತಂತ್ರ ಕಾರ್ಯವನ್ನು ತಂದಿರುವುದು ಕಾಣಬಹುದು.ಪರಂಪರೆಯು ಒಂದೆಡೆಯಾದರೆ ವಸ್ತುಸ್ಥಿತಿಯ ಮುಖಾಂತರ ಮೌಲ್ಯಗಳ ಛೇದನೆವನ್ನು ನೋಡಬಹದು. ಹಾಗಾದರೆ ಇಲ್ಲಿ ಮೌಲ್ಯ ಮಾಪನಕ್ಕೆ ಒಳಪಡುತ್ತಿರುವ ಮೌಲ್ಯಗಳಾದರೂ ಯಾವುವು ಎಂಬುದು ಸಹ ಪ್ರಶ್ನೆಯೆ. ನಮಗೆ ನಾವೇ ಮಾಡಿಕೊಂಡ ಬಂದ ಪಾರಂಪರಿಕ ವ್ಯವಸ್ಥೆಯ ಚೌಕಟ್ಟು. ಆ ಚೌಕಟ್ಟನೊಳಗೆ ಬರುವ ಪ್ರತಿಯೊಂದು ವಸ್ತು ವಿಚಾರಗಳೆಲ್ಲವೂ ಮೌಲ್ಯಗಳನೆಸಿ ಬಿಡುತ್ತವೆ.ಉದಾಹರಣೆಗೆ ‌ಮನೆಯಲ್ಲಿ ಬೆಳೆದು ನಿಂತ ಹೆಣ್ಣು ಮಕ್ಕಳನ್ನು ಮದುವೆ ಮಾಡದೆ ಪುರುಷ ಮದುವೆ ಆಗುವಂತಿಲ್ಲ.ಕಾರ್ಯಭಾರ ಜವಾಬ್ದಾರಿ ಇರದ ತಮ್ಮಂದಿರ ಬದುಕಿಗೆ ಜವಾಬ್ದಾರಿ ‌ಹೊತ್ತವನು ಆಸರೆಯಾಗಬೇಕಾಗುವುದು. ಮದುವೆ ಆಗುವವರಿಗೆ ಇಷ್ಟವಿರದಿದ್ದರೂ ಕುಟುಂಬದವರ ಮಾತಿಗೆ ಕಟ್ಟುಬಿದ್ದು ಒಪ್ಪಿಗೆ ಸೂಚಿಸಿ, ಯಾರನ್ನೊ ಕಟ್ಟಿಕೊಂಡು ಒಲ್ಲದ ಮನಸ್ಸಿನಿಂದ ಒಲವಿರದೆ ಸಂಸಾರದ ಭಾರ ಹೊತ್ತು ಸಾಗುವುದು ಇಂತಹ ಮೌಲ್ಯವರ್ಧನೆಗಳು ಬಹಳಷ್ಟಿವೆ ಇಂದಿಗೂ.ಇಂತಹ ಪಾತ್ರವೆ ಈ ಕೇಶವನದು ಈ ಪಾತ್ರದ ಮೂಲಕ ಕತೆಗಾರ ನಮಗೇನು ಹೇಳಲು ಹೊರಟಿದ್ದಾರೆ ಎಂಬುದನ್ನು ವಿಮರ್ಶಿಸುವುದು ಬಹುಮುಖ್ಯ ಆಯಾಮ.ಕತೆಗಾರ ಒಂದು ಸಮಾಜದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದ ಸಂಸ್ಕ್ರತಿಯ ವಿಭಜನೆ ಮತ್ತು ಅದರ ತಾಕಲಾಟ ಹಾಗೂ ಸಾಂಸ್ಕೃತಿಕವಾಗಿ ಅದರ ಚಿತ್ರಣಗಳ ಮುಖಾಮುಖಿ ಮಾಡಿಸುತ್ತಾರೆ.ಮತ್ತು ಹಳ್ಳಿಯ ಪರಿಸರದಲ್ಲಿ ಕಾಣುವ ಸಂಸ್ಕ್ರತಿಯ ವಿನ್ಯಾಸ ಅಕ್ಷರ ಕಲಿತ ಸಮುದಾಯಗಳ ಮನೋಭಾವ ಹೀಗೆ ಎಲ್ಲವನ್ನೂ ಕೇಂದ್ರೀಕರಿಸುತ್ತದೆ ಈ ಕ್ಲಿಪ್ ಜಾಯಿಂಟ್.

“ಅನಂತಮೂರ್ತಿ ಅವರ ಪ್ರಕೃತಿ, ಕಾರ್ತಿಕ,ಘಟ್ಟಶ್ರಾಧ್ದ,ದಂತಹ ಕತೆಗಳ ಮಟ್ಟದ ಕಲಾತ್ಮಕ ಯಶಸ್ಸು ಇಲ್ಲಿ ಸಿದ್ದಿಸಿಲ್ಲವಾದರೂ ಅವರ ಕಥೆಗಳ ಸಂದರ್ಭದಲ್ಲಿ ಮಾತ್ರವಲ್ಲದೆ ಇಡೀ ಕನ್ನಡ ಸಣ್ಣಕತೆಯ ಚರಿತ್ರೆಯ ಸಂದರ್ಭದಲ್ಲಿ ಕ್ಲಿಪ್ ಜಾಯಿಂಟ್ ಅತ್ಯಂತ ಮಹಾತ್ವಾಂಕ್ಷೆಯಿಂದ ಕೂಡಿದ ಕನ್ನಡದಲ್ಲಿ ಸಣ್ಣಕಥೆಯ ಪ್ರಕಾರ ತನ್ನ ಜೀರ್ಣಶಕ್ತಿಯನ್ನು ಪಣಕ್ಕೊಡ್ಡಿ ಕೊಂಡಿರುವ ಕಥೆಯಾಗಿದೆ”.( ಕನ್ನಡ ಸಣ್ಣ ಕಥೆಗಳು- ಜಿ.ಹೆಚ್. ನಾಯಕ್ ಪ್ರಸ್ತಾವನೆಯಿಂದ) ಒಂದಷ್ಟು ಭಾಷೆಯ ಬಿಗುಮಾನ ತುಂಬಿದೆ. ಹೇರಳವಾಗಿ ಗೋಚರಿಸುವ ಆಂಗ್ಲಭಾಷಾ ಸಂಪತ್ತು ಕಾಣವುದು. ಮತ್ತೊಮ್ಮೆ ಮಗದೊಮ್ಮೆ ಓದಿ ಅರ್ಥೈಸಬೇಕೆನಿಸುವ ಹಾಗೂ ವರ್ತಮಾನದ ಕಾಲವು ಭೂತದ ಘಟನಾವಳಿಗಳ ಸುತ್ತಾ ಸುತ್ತಾತ್ತಾ, ಇಂಗ್ಲೆಂಡ್ ನಲ್ಲೆ ಇದ್ದರು ಸಹ ಭಾರತೀಯ ಸನ್ನಿವೇಶ ಪರಿಸ್ಥಿತಿ ಚಿತ್ರಣವೂ ಭೂತಕಾಲದೊಂದಿಗೆ ಸಮ್ಮಿಳಿತಗೊಂಡಿದೆ.

ಈ ಕತೆಯಲ್ಲಿ ಕಂಡುಬರುವ ಮತ್ತೊಂದು ಬಹುಮುಖ್ಯ ಅಂಶ ಕೇಶವನ ತಮ್ಮ ಮಾಧು ಉಡಾಳ. ಆದರೂ ಆತ ಸುಖಿ, ತನಗೆ ಬೇಕಾಗಿದ್ದನ್ನು ಹೇಗಾದರೂ ಸರಿಯೇ ಪಡೆದುಕೊಳ್ಳುವ ವಾಂಛೆ ಉಳ್ಳವನು.ಅದೆ ಕೇಶವ ಮನದೊಳಗೆ ನೂರೊಂದು ಆಸೆ ಹೊತ್ತು ಕೊಂಡೆ ಮರುಭೂಮಿಯಂತೆ ಜೀವನ ಸಾಗಿಸುತ್ತಿದ್ದಾನೆ. ಆತನಿಗೆ ಆತನ ಕನಸು ಈಡೇಸಿಕೊಳ್ಳಲು ಸಿದ್ಧಾಂತಗಳು ಮನೆಯ ಜವಾಬ್ದಾರಿ, ವೈಚಾರಿಕತೆ ಎಲ್ಲವೂ ಅಡ್ಡಬರುವುದು.ಇದೆ ಕಥೆಯಲ್ಲಿ ಕೇಶವನ ಚಿಕ್ಕಪ್ಪ ಶಾಮ ಕಾಕ, ಹೆಣ್ಣು ಹೆಂಡ ರಾಜಕೀಯ ಹೀಗೆ ನಾನಾ ತರದ ಸುಖದ ಲಾಲಾಸೆಯನ್ನೆಲ್ಲ ತೀರಿಸಿಕೊಂಡು ಸುಖಿಸಿದವನು. ಕೇಶವನ ಅಪ್ಪ ಇದಕೆ ತದ್ವಿರುದ್ಧ. ರಾಮ ಕೃಷ್ಣ ಎಂದು ಪೂಜೆ ಪುನಸ್ಕಾರ ಜತ ತಪದಲ್ಲಿ ಜನಿವಾರ ಹೆಣೆಯುತ್ತಾ ವೈದಿಕ ಕರ್ಮದಲ್ಲೇ ತಲ್ಲೀನನಾಗಿ ಬಿಡುವಾತ. ಇಲ್ಲಿ ಮಾಧುಗೆ ಹಾಗೂ ಶಾಮ ಕಾಕನಿಗೂ ಸುಖಿಸುವ ವಿಚಾರದಲ್ಲಿ ತುಲನೆ ಮಾಡಿದರೆ ಒಂದರ್ಥ ತೋರಿದರೆ, ಕೇಶವನದು ಇನ್ನೊಂದು ಆಯಾಮದ ಬದುಕು. ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿ ಅವಲೋಕಿಸಿದರೆ ಪ್ರಾಣೇಶಚಾರ್ಯರ ಬದುಕಿಗೂ ಅವರ ತಮ್ಮನ ಬದುಕಿಗೂ ಇಂತಹದ್ದೆ ವೈರುದ್ಯಗಳು ಕಂಡುಬಂದು ಓದುಗರ ಮನದಲ್ಲಿ ತರ್ಕ ಏಳುವುದು. ಕೊನೆಗೆ ಪ್ರಾಣೇಶಚಾರ್ಯರ ಕರ್ಮ ಸಿದ್ದಾಂತಗಳೆಲ್ಲ ಕಾಮದ ನಡುವೆ ತಮ್ಮನ್ನೆ ಪ್ರಶ್ನೆ ಮಾಡಿ ಬಿಡುವುದು ಕೂಡ ಪಾರಂಪರಿಕವಾಗಿ ನಡೆಸಿಕೊಂಡು ಬಂದ ಪದ್ಧತಿಯ ಒಂದು ಭಾಗವೇ ಆಗಿದೆ.ಇಂದಿಗೂ ಕೂಡ ಕುವೆಂಪು, ಕಾರಂತ,ಬೇಂದ್ರೆ, ತೇಜಸ್ವಿ, ಅನಂತಮೂರ್ತಿ, ಇಂತಹ ಇನ್ನೂ ಹಲವು ಮಹನೀಯರು ನಮಗೆ ಯಾಕೆ ಯಾವಾಗಲೂ ಪ್ರಸ್ತುತ ಅನಿಸುತ್ತಾರೆ ಎಂದರೆ ಇಂತಹ ವೈರುಧ್ಯಗಳ ನಡುವೆ ಮತ್ತೆ ಮತ್ತೆ ಮುಖಾಮುಖಿಯಾಗುತ್ತಾರೆ ನಮಗೆ, ನಮ್ಮನ್ನು ನಮ್ಮ ಸಿದ್ಧಾಂತಗಳನ್ನು ಪ್ರಶ್ನಿಸುತ್ತಾರೆ ಆ ಕಾರಣದಿಂದ ಇವರೆಲ್ಲ ಎಂದಿಂದಿಗೂ ಪ್ರಸ್ತುತವೇ.

ಈ ಕತೆಯಲ್ಲಿ ಕೊನೆದಾಗಿ ಕತೆಗಾರ ಏನು ಹೇಳಲು ಹೊರಟಿದ್ದಾರೆ. ಈ ಕ್ಲಿಪ್ ಜಾಯಿಂಟ್ ಎಂಬ ಭಾಷೆ ಅಥವಾ ಪದಕ್ಕೆ ನೇರವಾಗಿ ಉತ್ತರ ಎಲ್ಲಿ ಕೊಡುತ್ತಾರೆ ಎಂಬುದು ಕೂಡ ಪರಾಮರ್ಶನ ಮಾಡಲೇಬೇಕಿದೆ.ಸ್ಟೂವಾರ್ಟ್ ಜೊತೆಗೂಡಿ ಒಂದು ದಿನ ರಜೆಯ ದಿನ ಎಲ್ಲದರ ವೈಭೋಗವನ್ನು ಕಾಣಬೇಕೆಂಬ ಹಂಬಲದಿಂದ ಯಾವುದೋ ಒಂದು ಕ್ಲಬ್ ನಂತಿರುವ ಜಾಗಕ್ಕೆ ಹೋಗಿ ಹೆಣ್ಣಿನ ಕುಣಿತ ಹಾಡು ಎಲ್ಲ‌ ಕಂಡ ನಂತರ ಅವಳನ್ನು ಪೂರ್ಣ ಅನುಭಸಬೇಕೆಂಬ ಹಂಬಲದಿಂದನೆ ಸ್ಟೂವಾರ್ಟ್ ಬೇಡವೆಂದರೂ ಕೇಳದೆ ಆ ರೋಸಿ ಕರೆದೋಯ್ದ ಆ ರೂಮಿಗೆ ಹೋದಾಗಲೂ ಆಕೆ ಬಿಚ್ಚುವ ಬಟ್ಟೆಯ ಕಣಕಣದಲ್ಲೂ ಆವರಿಸಿಬಿಡೋಣ ಎನಿಸಿದಾಗಲೂ, ಬೆತ್ತಲೆ ನಿಂತ ಹುಡುಗಿ, ಆದರೆ ಆಕೆಯನ್ನು ನೋಡಬಹುದಷ್ಟೆ ಮುಟ್ಟುವಂತಿಲ್ಲ. ಈ ರೂಂ ನಲ್ಲಿ ನನಗಿಷ್ಟೆ ಸ್ವಾತಂತ್ರ್ಯ ಎಂದು ಹೇಳುತ್ತಾ, ಆಕೆ ನಾನು ಸಂಪೂರ್ಣ ಬೇಕು ಎಂದರೆ ನಮ್ಮ ಮನೆಗೆ ಬಾ ಎಂದು ಆಹ್ವಾನವಿತ್ತಾಗ,ಕೇಶವನಿಗೆ ಈ ಕತ್ತಲೆ ಬೆಳಕಿನ ಆಟದಲಿ ಬದುಕು “ಕತ್ತಲೆ ಶೂನ್ಯ, ಸಿಂಬಳದ ಹುಳ,,,.” ಅಂದರೆ ಇಲ್ಲಿ ಕಥೆಗಾರರು ಆ ಸಿಂಬಳದ ಹುಳವಿನ ಮೂಲಕ ತನ್ನೆಲ್ಲ ಆಸೆ ಕನಸುಗಳನ್ನು ತನ್ನೊಳಗೆ ಎಳೆದುಕೊಂಡು ಸಾಗುವ ಹುಳದಂತೆ ಒಂದು ಸಂಕೇತದ ಮೂಲಕ ಕೇಶವನಿಗೆ ಶೂನ್ಯತೆಯ ದಟ್ಟ ಅನುಭವದ ಛಾಯೆಯನ್ನು ಪ್ರತಿಬಿಂಬಿಸುತ್ತಾರೆ.

ಹಾಗಾದರೆ ಇಂಗ್ಲೆಂಡ್ ನಂತಹ ವೈಭವಪೂರಿತ ಸಕಲ ಸೌಲಭ್ಯದ ಬದುಕು ಅನುಭವಿಸಬೇಕೆಂಬ ಉತ್ಕಟತೆ ಹೊಂದಿದ ಕೇಶವ ಯಾಕೆ ಮೌನಿಯಾಗಿ ಕೊನೆಗೆ ಶೂನ್ಯತೆ ಭಾವ ಹೊಂದುತ್ತಾನೆ. ಆತನಿಗೂ ಕೂಡ ನಮ್ಮ ಭಾರತೀಯ ಪಾರಂಪರಿಕವಾಗಿ ನಡೆದುಕೊಂಡು ಬಂದ ಮೌಲ್ಯಗಳು ತುಲನೆ ಮಾಡುತ್ತವೇಯೇ ಎಂಬ ಪ್ರಶ್ನೆ ಏಳುತ್ತದೆ. ರೋಸಿ ನಮ್ಮ ಮನೆಗೆ ಬಾ ಎಂದು ಮುತ್ತು ಕೊಡಲು ಬಗ್ಗಿದಾಗ “ಬೇಡ,,ಏನೂ ಬೇಡ”,, ಒಂದು ಮುತ್ತನ್ನು ಕೂಡ ಮನಸು “ಬೇಡವೆನಿಸಿದ ಮೇಲೆ ಮುತ್ತಿಡುವ, ಅ ಮುತ್ತನ್ನು ಸುಲಿಯಲೆಂದು ಕೊಡುವ, ಈ ಕ್ಲಿಪ್ ಜಾಯಿಂಟ್ ಇಂದ ಬೇಗ ಪಾರಾಗಬೇಕು,,” ಅನಿಸುತ್ತದೆ.ಕೇಶವ ಪಾರಾಗಿದ್ದು ಯಾವುದರಿಂದ ಹಾಗಾದರೆ? ಈ ಲೋಕದ ( ಇಂಗ್ಲೆಂಡ್) ಮಾಯೆ ಸುಂದರ ಎಂದು ಕನವರಿಸುತ್ತಿದ್ದ ಆತ ಈ ಕ್ಲಿಪ್ ಜಾಯಿಂಟ್ ಪಾರಾಗಬೇಕು ಎನಿಸುವ ಆತನ ಮನೋಕಾಮನೆಯು ಯಾವ ಮೌಲ್ಯ ಸೌಧದ ಮೇಲೆ ಗಟ್ಟಿಯಾಗಿ ನೆಲೆನಿಂತಿದೆ ಎಂಬುದು ಅನಾವರಣಗೊಳಿಸಲಾಗಿದೆ.

MORE NEWS

ಐವತ್ತು ವರ್ಷಗಳ ಕಥನ ಚರಿತ್ರೆಯನ್ನು ಕಟ್ಟಿಕೊಡುವ ‘ಸ್ವಾತಂತ್ರ್ಯೋತ್ತರ ಸಣ್ಣ ಕಥೆಗಳು’

15-04-2025 ಬೆಂಗಳೂರು

"ಕಥೆಗಳ ಆಯ್ಕೆಯ ಕ್ರಮವನ್ನು ಹೀಗೆ ಹೇಳುತ್ತಾರೆ `ಕಥೆಗಳ ಆಯ್ಕೆ ಕೂಡ ವ್ಯಕ್ತಿಯ ಆಸಕ್ತಿ, ಅಭಿರುಚಿ ಮತ್ತು ಮನೋಧರ್ಮ...

ಮತ್ತೆ ಮತ್ತೆ ಕಾಡುವ ಹಳೇ ಬಜಾರಿನ ಯಡ್ರಾಮಿ ಸಂತೆ

10-04-2025 ಬೆಂಗಳೂರು

"ಸುತ್ತಮುತ್ತ ನಾಕಿಪ್ಪತ್ತು ಹಳ್ಳಿಗಳಿಗೆ ಎಲ್ಲ ರೀತಿಯಿಂದಲೂ ಹಿರಿಯಣ್ಣನಂತಹ ಯಡ್ರಾಮಿ ನನ್ನ ಪ್ರೀತಿಯ ಊರು. ನಮ್ಮೂ...

ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು-ಮುಂದುವರೆದುದು

06-04-2025 ಬೆಂಗಳೂರು

"ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಕೊಡುವಾಗ ವಿವಿದ ರಾಜ್ಯಗಳು ಪರಸ್ಪರ ಒಂದು ಒಪ್ಪಂ...