ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?

Date: 18-08-2022

Location: ಬೆಂಗಳೂರು


“ಇಂದು ಭಾರತದಲ್ಲಿ ಯಾರು ಯಾವ ಉನ್ನತ ಪ್ರಶಸ್ತಿ ಪಡೆಯಬೇಕು ಎಂಬುದನ್ನು ಒಬ್ಬ ರಾಜಕೀಯ ಉದ್ಯಮಿ ನಿರ್ಧರಿಸುತ್ತಾನೆ. ಹಾಗೆಯೆ ಮುಂದಿನ ಪ್ರಧಾನ ಮಂತ್ರಿ ಯಾರಾಗಬೇಕು ಎಂಬುದನ್ನು ಕೆಲವೆ ಉದ್ಯಮಿಗಳ ಕೂಟ ನಿರ್ಧರಿಸುತ್ತದೆ. ಹಾಗಾದರೆ ಪ್ರಜಾಪ್ರಭುತ್ವದ ಕೀಲಿಕೈ ಎಲ್ಲಿದೆ? ಜ್ಞಾನ ಮತ್ತು ಅಧಿಕಾರ ಎರಡನ್ನೂ ಕುಣಿಸುವುದು ಸಂಪತ್ತು” ಎನ್ನುತ್ತಾರೆ ಲೇಖಕ ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ನೀರು ನೆರಳು ಅಂಕಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನ ಬಗ್ಗೆ ಚರ್ಚಿಸಿದ್ದಾರೆ.

ಒಬ್ಬ ವ್ಯಕ್ತಿಗೆ 75 ವರ್ಷ ವಯಸ್ಸಾದರೆ ಅದು ವೃದ್ಧಾಪ್ಯ. ಆದರೆ ಒಂದು ರಾಷ್ಟ್ರ ಹುಟ್ಟಿ ಅದಕ್ಕೆ75 ವರ್ಷ ವಯಸ್ಸಾದರೆ ಅದು ಅಂತಹ ದೊಡ್ಡ ವಯಸ್ಸೇನೂ ಅಲ್ಲ. ಸಾವಿರಾರು ವರ್ಷಗಳ ನಾಗರೀಕತೆಯ ವಿಕಾಸದಲ್ಲಿ ಎಪ್ಪತ್ತೈದು ವರ್ಷ ಚಿಕ್ಕದೆ. ವಯಸ್ಸು ಹೆಚ್ಚಾದಂತೆಲ್ಲ ಅನುಭವ ಹೆಚ್ಚಾಗಿ ತಪ್ಪುಗಳು ಕಡಿಮೆ ಆಗಬೇಕು. ಆದರೆ ಹಾಗೆ ಆಗುತ್ತಿದೆಯೆ? ನಮಗಿಂತ ಹೆಚ್ಚಿನ ವಯಸ್ಸಾಗಿರುವ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಅಮೇರಿಕ, ಇಗ್ಲೆಂಡುಗಳಿಗೆ ಸಮಸ್ಯೆಗಳು ಕಡಿಮೆಯಿವೆಯೆ? ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ನೆನ್ನೆಗಿಂತ ಇಂದು ವಾಸಿ ಹೌದು. ಆದರೆ ನಿರೀಕ್ಷಿತ ಮಟ್ಟದಲ್ಲಿ ನಾವು ನೆಮ್ಮದಿ ಕಾಣಲು ಸಾಧ್ಯ ಆಗಿದೆಯೆ? ಶಮಾನೋತ್ಸವ, ದ್ವಿಶತಮಾನೋತ್ಸವಗಳೂ ಮುಂದೆ ಬರುತ್ತವೆ. ವ್ಯವಸ್ಥೆ ಹೀಗೆಯೆ ಇದ್ದಲ್ಲಿ ನಾವು ಮುಂದೆ ಏನು ಮಾಡಬೇಕು?

ನಾವು ರಾಜಕೀಯ ಸ್ವಾತಂತ್ರ್ಯ ಗಳಿಸಿ 75 ವರ್ಷಗಳೇನೋ ಆದುವು. ಆದರೆ ನಮಗೆ ನಿಜಕ್ಕೂ ಸ್ವಾತಂತ್ರ್ಯ ಅದರೆಲ್ಲ ಅರ್ಥಗಳಲ್ಲಿ ಇಂದು ಲಭ್ಯ ಇದೆಯೆ? ನಮ್ಮ ಸಂವಿಧಾನವನ್ನು ನಮಗೆ ನಾವು ಅರ್ಪಿಸಿಕೊಂಡ ನಂತರ ಅದರ ಪೀಠಿಕೆಯಲ್ಲಿ ಹೇಳಿಕೊಂಡದ್ದನ್ನು; ಅಷ್ಟನ್ನಾದರೂ ನಾವು ಸಾಧಿಸಲು ಸಾಧ್ಯವಾಯಿತೆ? ಪೀಠಿಕೆಯಲ್ಲಿ ನಾವು ನಮ್ಮ ಕನಸನ್ನು ಹೀಗೆ ಹೇಳಿಕೊಂಡೆವು:

ಭಾರತದ ಪ್ರಜೆಗಳಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ಸ್ಥಾಪಿಸಿಕೊಂಡು;

ಎಲ್ಲಾ ಪ್ರಜೆಗಳಿಗೆ:

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು;

ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು;

ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು;

ದೊರೆಯುವಂತೆ ಮಾಡುವುದಕ್ಕಾಗಿ

ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢ ಸಂಕಲ್ಪ ಮಾಡಿ;

ನಮ್ಮ ಸಂವಿಧಾನ ಸಭೆಯಲ್ಲಿ 1949 ರ ನವೆಂಬರ್ ತಿಂಗಳ 26 ನೇ ದಿನದಂದು, ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡಿದ್ದೇವೆ.

ಪೀಠಿಕೆಯಲ್ಲಿನ ಈ ಸಂಗತಿಗಳನ್ನು ಒಂದೊಂದಾಗಿ ಪರಿಶೀಲಿಸಿದರೆ ನಮ್ಮ ಸೋಲು ಬಹಳ ಚೆನ್ನಾಗಿ ಕಾಣುತ್ತದೆ. ನಮ್ಮ ಆಶಯಗಳೇ ಬೇರೆ ನಾವು ಸಾಗುತ್ತಿರುವ ದಿಕ್ಕುಗಳೇ ಬೇರೆ ಎಂಬುದು ಬಹಳ ಚೆನ್ನಾಗಿ ಮನದಟ್ಟಾಗುತ್ತದೆ.

ಸಾರ್ವಭೌಮ ಎಂದರೆ ಸ್ವಾವಲಂಬಿ ಅಥವಾ ಸ್ವತಂತ್ರ ಅಥವಾ ಇನ್ನೊಬ್ಬರ ನಿಯಂತ್ರಣದಲ್ಲಿ ಇಲ್ಲದ ಎಂದರ್ಥ. ಆದರೆ ನಾವು ನಿಜಕ್ಕೂ ಸಂಪೂರ್ಣ ನಿರ್ವಸಾಹತೀಕರಣ ಆಗಿದ್ದೇವಾ ಎಂದರೆ ಇಲ್ಲ. ಭಾರತವು ಬಾಹ್ಯವಾಗಿ ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿ ಇಲ್ಲ. ಆದರೆ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ, ಜ್ಞಾನ, ವಿಚಾರ, ಆಚಾರ ಎಲ್ಲವೂ ಜಾಗತೀಕರಣದ ಗಾಳಿಗೆ ಸಿಲುಕಿ ಸ್ವಂತಿಕೆಯೆ ಮಾರ್ಪಾಡಾಗುತ್ತಿದೆ.

ಸಮಾಜವಾದಿ ಸ್ಥಿತಿ ಎಂದರೆ ಧರ್ಮ, ಜಾತಿ, ಲಿಂಗ, ಭಾಷೆ, ಪ್ರದೇಶ, ಆರ್ಥಿಕತೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು. ಆದರೆ ಇದನ್ನು ನಾವು ಸಾಧಿಸಿದ್ದೇವಾ? ಖಂಡಿತಾ ಇಲ್ಲ. ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳು ಇರಬೇಕು ಎಂಬುದು ನಮ್ಮ ಸಂವಿಧಾನದ ಆಶಯ. ಆದರೆ ಆ ಆಶಯ ಸಾಕಾರವಾಗಲು ನಮ್ಮ ವ್ಯವಸ್ಥೆ ಬಿಡುತ್ತಿಲ್ಲ. ಒಂದು ಕಡೆ ಸನಾತನವಾದ ಇನ್ನೊಂದು ಕಡೆ ಬಂಡವಾಳವಾದ ಎರಡೂ ನಮ್ಮನ್ನು ಅಸಮಾನ ಸ್ಥಿತಿಯಲ್ಲೆ ಸದಾ ಇರಿಸುತ್ತಿವೆ.

ಆಂತರಿಕ ಪ್ರಜಾಪ್ರಭುತ್ವ ನಮ್ಮಲ್ಲಿ ಶಿಥಿಲವಾಗಿದೆ. ರಾಜಕೀಯ ಪ್ರಜಾಪ್ರಭುತ್ವ ಉಳ್ಳವರ ಏಣಿಯಾಗಿ ಮಾತ್ರ ರೂಪಗೊಂಡಿದೆ. ಆರ್ಥಿಕ ಪ್ರಜಾಪ್ರಭುತ್ವ ಕಾಣೆಯಾಗಿದೆ. ಜನರ ಜೀವಿಸುವ ಹಕ್ಕುಗಳು, ಆಹಾರದ ಹಕ್ಕುಗಳು ದಿನೇ ದಿನೇ ಹತ್ತಿಕ್ಕಲ್ಪಡುತ್ತಿವೆ. ಹೊಸ ಬಗೆಯ ಕಂಪನಿ ಜೀತಗಾರಿಕೆ ಬೆಳೆಯುತ್ತಿದೆ; ಅದಕ್ಕಾಗೆ ಮೂಕ ಕಾರ್ಮಿಕರನ್ನು ಉತ್ಪಾದಿಸುವ ಶಿಕ್ಷಣವ್ಯವಸ್ಥೆ ರೂಪಗೊಳ್ಳುತ್ತಿದೆ! ಕೋಟ್ಯಾಧೀಶರ ಸಂಖ್ಯೆ ಹೆಚ್ಚಾಗುತ್ತಿದೆಯೇನೋ ಹೌದು. ಆದರೆ ಕೋಟ್ಯಂತರ ಜನ ಹೊಟ್ಟೆ, ಬಟ್ಟೆ, ಸೂರುಗಳಿಗಾಗಿ ಹೆಣಗುವಂತಹ ಸ್ಥಿತಿಯಲ್ಲೆ ಇದ್ದಾರೆ. ಹೀಗಿರುವಾಗ ಪ್ರಜಾಸತ್ತಾತ್ಮಕ ಗಣತಂತ್ರ ಎಂಬುದಕ್ಕೆ ಅರ್ಥವಿಲ್ಲವಾಗಿದೆ.

ಜಾತ್ಯತೀತ ರಾಷ್ಟ್ರವಾಗಿ ಭಾರತವನ್ನು ಕಟ್ಟುವುದು ನಮ್ಮ ಕನಸಾಗಿತ್ತು. ಆದರೆ ಅದು ೭೫ ವರ್ಷಗಳಾದರೂ ಇನ್ನೂ ಕನಸಾಗಿಯೆ ಉಳಿದಿದೆ. ಸಹಬಾಳ್ವೆ, ಸಹಿಷ್ಣುತೆ ನಮ್ಮ ಜನಪದರ ಧರ್ಮ. ಆದರೆ ಇಂದು ಭಾರತವನ್ನು ಹಿಂದುಸ್ಥಾನವನ್ನಾಗಿ ಮಾಡುವ ಹುನ್ನಾರಗಳು ನಡೆಯುತ್ತಿವೆ. ಕಾನೂನು ಇದ್ದರೂ ಅಸ್ಪೃಶ್ಯತೆಯ ಆಚರಣೆ ಇಲ್ಲವಾಗಿಲ್ಲ. ಅದು ಹೊಸ ಹೊಸ ರೂಪಾಂತರಗಳನ್ನು ತಾಳಿ ಅವತರಿಸುತ್ತಿದೆ.

ಭಾರತದ ಪ್ರಜೆಗಳು ಧರ್ಮ, ಜಾತಿ, ಲಿಂಗ, ಪ್ರದೇಶ, ಆರ್ಥಿಕತೆ, ಶಿಕ್ಷಣ ಮಟ್ಟ ಈ ಯಾವುದೆ ಭೇದವಿಲ್ಲದೆ ಎಲ್ಲರೂ ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಹಾಗಾಗಿಯೆ ನಮ್ಮದು ಪ್ರಜಾಸತ್ತಾತ್ಮಕ ರಾಷ್ಟ್ರ. ಇಲ್ಲಿ ಎಲ್ಲರ ಓಟಿಗೂ ಒಂದೆ ಬೆಲೆ. ಆದರೆ ವೋಟುಗಳನ್ನು ನಿರಂತರ ಮಾರಾಟ ಮಾಡಿಸುವ ವ್ಯವಸ್ಥೆಯನ್ನು ೭೫ ವರ್ಷಗಳಿಂದ ಇಲ್ಲಿ ರೂಢಿಸುತ್ತ ಬರಲಾಗಿದೆ! ಉಳ್ಳವರಲ್ಲದೆ ಚುನಾವಣೆಯಲ್ಲಿ ಬೇರಾರೂ ಗೆಲ್ಲಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ವಂಶಪಾರಂಪರ್ಯ ಆಡಳಿತ, ಕುಲ-ಜಾತಿ-ಧರ್ಮ, ಹಣ, ಹೆಂಡಗಳ ರಾಜಕಾರಣ ತಾಂಡವ ಆಡುತ್ತಿದೆ. ಸಂವಿಧಾನದ ಆಶಯಗಳನ್ನೆ ಬುಡಮೇಲು ಮಾಡುವ ಕೆಲಸ ನಿತ್ಯ ನಿರಂತರ ನಡೆಯುತ್ತಿದೆ. ಇದಕ್ಕೆ ಒಂದು ಪಕ್ಷ, ಒಂದು ಜಾತಿ ಅಂತ ಇಲ್ಲ. ಎಲ್ಲರೂ ಇದರ ಭಾಗಿದಾರರು.

ಗಣತಂತ್ರ ಎಂದರೆ ಹಲವು ರಾಜ್ಯಗಳ ಒಕ್ಕೂಟ ವ್ಯವಸ್ಥೆ. ಆದರೆ ಇಲ್ಲಿ ರಾಜ್ಯಗಳ ಮೇಲೆ ಕೇಂದ್ರಾಡಳಿತ ಯಜಮಾನಿಕೆ ನಿರಂತರ ನಡೆಯುತ್ತ ಬಂದಿದೆ. ಭಾರತದ ಅಂಚುಗಳು ನಿರ್ಲಕ್ಷಕ್ಕೆ ಒಳಗಾಗಿವೆ. ಉತ್ತರ ದಕ್ಷಿಣವೆಂಬ ಪ್ರಾದೇಶಿಕ ಭೇದಗಳು ಹೆಚ್ಚಾಗುತ್ತಿವೆ. ಬಹುಸಂಖ್ಯಾತ ರಾಜಕಾರಣದಲ್ಲಿ ಅಲ್ಪಸಂಖ್ಯಾತರನ್ನು ಸದಾ ಡೆಮನೈಸ್‌ ಮಾಡುವ, ಭಯೋತ್ಪಾದಕರನ್ನಾಗಿ ಬಿಂಬಿಸುವ ಕೆಲಸ ಆಗುತ್ತಿದೆ.

ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ದೊರೆಯುವಂತೆ ಮಾಡುವುದಕ್ಕಾಗಿ ನಮ್ಮ ಸಂವಿಧಾನವನ್ನು ನಾವು ಶಾಸನವಾಗಿ ವಿಧಿಸಿಕೊಂಡೆವು. ಆದರೆ ಎಲ್ಲಾ ಪ್ರಜೆಗಳಿಗೂ ಈ ನ್ಯಾಯಗಳು ದೊರೆಯುತ್ತಿವೆಯಾ? ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಗಳು ದಿನೆ ದಿನೆ ಹೆಚ್ಚಾಗುತ್ತಿವೆ. ಈ ನ್ಯಾಯದ ಮಾತುಗಳೆಲ್ಲ ಬರಿ ಪುಸ್ತಕದ ಬದನೆಕಾಯಿ ಆಗಿ ಉಳಿಯುತ್ತಿವೆ. ನಮ್ಮ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳು ಮಾನವೀಯವಾಗಿ ಕಾರ್ಯ ನಿರ್ವಹಿಸುವ ಬದಲಾಗಿ ತಾಂತ್ರಿಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಯಾವ ಶಿಕ್ಷೆಗೂ ಸಿಲುಕದೆ ಅಪರಾಧ, ಭ್ರಷ್ಟಾಚಾರಗಳನ್ನು ಮಾಡಿಕೊಂಡು ಹಾಯಾಗಿ ಇರಬಲ್ಲ ಸಾಧ್ಯತೆಗಳನ್ನು ಶೋಧಿಸುವ ಜ್ಞಾನಿಗಳಾಗುತ್ತ, ಅನುಭವಿಗಳಾಗುತ್ತ; ಈ ಮೂರೂ ಅಂಗಗಳಲ್ಲಿ ಕೆಲಸಕ್ಕೆ ಸೇರಿಕೊಂಡವರು ಪರಿಣತರಾಗುತ್ತ ಇದ್ದಾರೆ. ರಾಷ್ಟ್ರಕ್ಕೆ ಹೆಚ್ಚು ಹೆಚ್ಚು ವಯಸ್ಸಾಗುವುದು ಎಂದರೆ ಹೆಚ್ಚು ಹೆಚ್ಚು ಅಸಮಾನತೆ, ಅನ್ಯಾಯಗಳನ್ನು ಜನ ʼಇದೆಲ್ಲ ಸಾಮಾನ್ಯʼ ಎಂದು ಒಪ್ಪುವಂತೆ ಮಾಡುವುದು ಎಂದಾಗುತ್ತಿದೆ.

ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯಗಳು ಜನತೆಗೆ ದೊರೆಯುವಂತೆ ಮಾಡುವುದಕ್ಕಾಗಿ; ಸ್ಥಾನಮಾನ ಮತ್ತು ಅವಕಾಶಗಳ ಸಮತೆ ಜನತೆಗೆ ದೊರೆಯುವಂತೆ ಮಾಡುವುದಕ್ಕಾಗಿ ನಮ್ಮ ಸಂವಿಧಾನವನ್ನು ನಮಗೆ ನಾವು ಅರ್ಪಿಸಿಕೊಂಡೆವು. ಆದರೆ ನಮಗೆ ರಾಜಕೀಯ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ವೈಚಾರಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬಿಕೆಗಳ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಉಪಾಸನೆಯ ಸ್ವಾತಂತ್ರ್ಯ ಇವುಗಳನ್ನು ಪಡೆದುಕೊಂಡೆವೆ? ಸ್ಥಾನಮಾನ ಮತ್ತು ಅವಕಾಶಗಳ ಸಮತೆ ಸಾಧಿಸಲಾಯಿತೆ?

ಮೊನ್ನೆ ತಾನೆ ಸಲ್ಮಾನ್‌ ರಶ್ದಿಯನ್ನು ಅಮೆರಿಕದಲ್ಲಿ ಆತ ವೇದಿಕೆ ಏರುತ್ತಿರುವಂತೆಯೆ ಕೊಲೆ ಮಾಡುವ ಪ್ರಯತ್ನ ಮಾಡಲಾಯಿತು. ಕರ್ನಾಟಕದಲ್ಲಿ ಗೌರಿ, ಕಲಬುರ್ಗಿ ಮೊದಲಾದವರನ್ನು ಕೊಂದ ಕೊಲೆಗಡುಕರನ್ನು ಇನ್ನೂ ಶಿಕ್ಷೆಗೆ ಗುರಿಪಡಿಸಿಲ್ಲ. ಒಂದು ಕಡೆ ಸರ್ಕಾರಪರ ಬರಹಗಾರರನ್ನು ಪ್ರೋತ್ಸಾಹಿಸುವ ಇನ್ನೊಂದು ಕಡೆ ಪ್ರಶ್ನೆ ಮಾಡುವ ಬುದ್ಧಿಜೀವಿಗಳನ್ನು ಕಾರಾಗೃಹಕ್ಕೆ ತಳ್ಳುವ, ದನಿ ಉಡುಗಿಸುವ, ಕೊಲ್ಲುವ ಕೆಲಸ ನಿರಂತರ ಇಲ್ಲಿ ನಡೆಯುತ್ತಿದೆ. ವೈಚಾರಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳಿಗೆ ಇಲ್ಲಿ ಸದಾ ಆತಂಕವೆ. ಈ ೭೫ ವರ್ಷಗಳಲ್ಲಿ ಯಾವ ಸರ್ಕಾರ ಬಂದರೂ ಇದು ಅವ್ಯಾಹತವಾಗಿ ನಡೆಯುತ್ತಿದೆಯಲ್ಲ! ಹಾಗಾದರೆ ಹೋರಾಟ, ಬಲಿದಾನಗಳಿಂದ ನಾವು ಪಡೆದ ಸ್ವಾತಂತ್ರ್ಯದ ಫಲ ಇದೇನಾ? ನಾವು ಕನಸಿದ ನಮ್ಮ ಪ್ರಜಾಪ್ರಭುತ್ವ ಇದೇನಾ!

ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ನಮ್ಮ ಸಂವಿಧಾನವನ್ನು ನಾವು ೭೫ ವರ್ಷಗಳ ಹಿಂದೆ ಶಾಸನವಾಗಿ ಅಂಗೀಕರಿಸಿದೆವು. ಎಲ್ಲರಲ್ಲೂ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢ ಸಂಕಲ್ಪ ಮಾಡಿ ಈ ಶಾಸನ ವಿಧಿಸಿಕೊಂಡೆವು. ಆದರೆ ವ್ಯಕ್ತಿಯ ಘನತೆ ಎನ್ನುವುದು ಸದಾ ಇಲ್ಲಿ ಹರಾಜಿಗಿದೆ. ದೇಶದ ಏಕತೆ ಎಂದರೆ ಅದು ಕಾಂಗ್ರೆಸ್‌ ಏಕತೆ, ಬಿಜೆಪಿ ಏಕತೆ, ಸಿಪಿಎಂ ಏಕತೆ ಎಂಬಂತೆ ಪಕ್ಷಾಧಾರಿತ ಆಗಿದೆ. ಆಗುತ್ತಿದೆ. ಸಮಗ್ರತೆ, ಏಕತೆ ಎಂಬುದು ಪ್ರದೇಶ, ಭಾಷೆಗಳನ್ನೂ ದಾಟಿ ಜಾತಿ, ಧರ್ಮಗಳಿಗೆ ಸೀಮಿತ ಆಗುತ್ತಿದೆ. ಐಕ್ಯತೆ – ಒಗ್ಗಟ್ಟು ಹುಟ್ಟುವುದೆ ಪರದೇಶ, ಪರದರ್ಮಗಳನ್ನು ವೈರಿಗಳನ್ನಾಗಿ ಉತ್ಪಾದನೆ ಮಾಡುವುದರಿಂದ ಎಂಬುದು ಒಂದು ಮಂತ್ರವೆಂಬಂತೆ ಆಗುತ್ತಿದೆ. ರಾಜಕೀಯ ಲಾಭಕ್ಕಾಗಿ ಮತ್ತು ಆರ್ಥಿಕ ಲಾಭಕ್ಕಾಗಿ ಉದ್ಯಮಿಗಳು ಮತ್ತು ರಾಜಕಾರಣಿಗಳಲ್ಲಿ ನಿಗೂಢ ಮೈತ್ರಿ ಏರ್ಪಡುತ್ತಿದೆ. ಅಧಿಕಾರದ ರುಚಿ ಅನುಭವಿಸುವ ಚಪಲದಿಂದ ಅನುಭವಿಗಳು, ಅರಿವು ಉಳ್ಳವರು ಉದ್ಯಮಿಗಳ ಮನೆಯ ಗೇಟ್‌ ಕೀಪರ್‌ಗಳಾಗಿ, ಚೌಕೀದಾರರಾಗಿ ಬದಲಾಗುತ್ತಿದ್ದಾರೆ. ಇದು ವಾಸ್ತವವಾಗಿ ನಮ್ಮಲ್ಲಿನ ಐಕ್ಯತೆ. ಯಾರೆಲ್ಲ ನಮ್ಮವರು ಎಂದರೆ ನಮ್ಮ ಜಾತಿಯವರು ನಮ್ಮ ಧರ್ಮದವರು ನಮ್ಮ ಪಕ್ಷದವರೆಲ್ಲ ನಮ್ಮವರು. ಆದರೆ ಅವರೆಲ್ಲ ಓಟು ಹಾಕುವಾಗ ನಮ್ಮವರು. ಅಧಿಕಾರ ಮತ್ತು ಸಂಪತ್ತಿನ ಪ್ರಶ್ನೆ ಬಂದಾಗ ಒಂದಾಗುವವರು ಅಧಿಕಾರ ಮತ್ತು ಸಂಪತ್ತುಗಳು ಇರುವವರು ಮಾತ್ರ. ಇವರಿಬ್ಬರ ಮನೆಗಳ ಗೇಟ್‌ ಕೀಪರುಗಳಾಗಿ ಆಡಳಿತಶಾಹಿ, ಬೌದ್ಧಿಕಶಾಹಿ ಕೆಲಸ ಮಾಡುತ್ತಿದೆ ಅಷ್ಟೆ.

ಮಿಶೆಲ್‌ ಫ್ಯುಕೊ ಹೇಳಿದ ನಾಲೆಜ್‌ ಅಂಡ್‌ ಪವರ್‌ಗಳ (ಜ್ಞಾನ ಮತ್ತು ಅಧಿಕಾರಗಳ) ಧೃವೀಕರಣವನ್ನು ತನ್ನದೇ ಮಾತುಗಳಲ್ಲಿ ಅಲ್ಲಮ ಬಹಳ ವರ್ಷಗಳ ಹಿಂದೆಯೆ ಹೇಳಿದ್ದಾನೆ.

ಗುರುಹಿರಿಯರೆಲ್ಲ ಲಕ್ಷ್ಮಿಯ ದ್ವಾರಪಾಲಕರಾದರು

ಅರುಹಿಂಗೆ ಈ ವಿಧಿಯೆ ಗುಹೇಶ್ವರಾ!

ಅಂದರೆ ಅರಿವು, ಅನುಭವ ಇರುವ ಗುರುಗಳು, ಹಿರಿಯರುಗಳೆಲ್ಲ ಸಂಪತ್ತಿನ ಒಡತಿಯಾದ ಲಕ್ಷ್ಮಿಯ ಮನೆಯ ದ್ವಾರಪಾಲಕರಾದರಲ್ಲಾ! ನಮ್ಮ ಅರುಹು - ಜ್ಞಾನಕ್ಕೆ ಇಂತಹಾ ದುಸ್ಥಿತಿ ಬಂತೆ! ಜ್ಞಾನವು ಸಮಾನತೆಯ ಸಾಧನೆಗೆ ಶ್ರಮಿಸದೆ ಸಂಪತ್ತಿನ ಬೆನ್ನು ಹತ್ತಿದರೆ ಕೇಡು ತಪ್ಪಿದ್ದಲ್ಲ. ನಾವೆಲ್ಲ ಏನೆಲ್ಲ ಸಾಧಿಸಬೇಕೆಂದು ಬೀಜರೂಪದಲ್ಲಿ ಸಂವಿಧಾನದ ಪೀಠಿಕೆಯಲ್ಲಿ ವಿಧಿಸಿಕೊಂಡೆವೊ ಅದೆಲ್ಲವೂ ಸರ್ವನಾಶ ಆಗುವುದಕ್ಕೆ ಮೂಲ ಕಾರಣ ಅರಿವು, ಅನುಭವ ಇದ್ದ ಗುರು ಹಿರಿಯರೆಲ್ಲ ಸಂಪತ್ತಿನ ದಾಸರಾಗಿ ಹೋದದ್ದು.

ಇಂದು ಭಾರತದಲ್ಲಿ ಯಾರು ಯಾವ ಉನ್ನತ ಪ್ರಶಸ್ತಿ ಪಡೆಯಬೇಕು ಎಂಬುದನ್ನು ಒಬ್ಬ ರಾಜಕೀಯ ಉದ್ಯಮಿ ನಿರ್ಧರಿಸುತ್ತಾನೆ. ಹಾಗೆಯೆ ಮುಂದಿನ ಪ್ರಧಾನ ಮಂತ್ರಿ ಯಾರಾಗಬೇಕು ಎಂಬುದನ್ನು ಕೆಲವೆ ಉದ್ಯಮಿಗಳ ಕೂಟ ನಿರ್ಧರಿಸುತ್ತದೆ. ಹಾಗಾದರೆ ಪ್ರಜಾಪ್ರಭುತ್ವದ ಕೀಲಿಕೈ ಎಲ್ಲಿದೆ? ಜ್ಞಾನ ಮತ್ತು ಅಧಿಕಾರ ಎರಡನ್ನೂ ಕುಣಿಸುವುದು ಸಂಪತ್ತು.

ಇಂತಹ ದುಃಸ್ಥಿತಿಯನ್ನು ನಾವು ಈ ಎಪ್ಪತ್ತೈದು ವರ್ಷಗಳಲ್ಲಿ ಸಾಧಿಸಿದೆವೆ? ಅಲ್ಲ. ಈ ದುಸ್ಥಿತಿ ಸಾವಿರಾರು ವರ್ಷಗಳ ಯಥಾಸ್ಥಿತಿ. ಮೇಲ್ನೋಟಕ್ಕೆ ಕೆಲವೆ ಬದಲಾವಣೆಗಳು ಹಲವು ಹೋರಾಟಗಳಿಂದ ಉಂಟಾಗುತ್ತವೆ. ಆದರೆ ಸಮಾಜ ತನ್ನ ಜಡಸ್ಥಿಗೆ ಮತ್ತೆ ಮರಳುತ್ತದೆ. ಈ ಏರು ಇಳಿವು ಸದಾ ಜರುಗುತ್ತ ಇರುತ್ತದೆ. ಪ್ರಜಾಪ್ರಭುತ್ವ ಕೂಡ ನಾಗರೀಕತೆಯ ವಿಕಾಸದ ಹಾದಿಯಲ್ಲಿ ಒಂದು ಮೈಲುಗಲ್ಲಷ್ಟೆ. ೭೫ ವರ್ಷಗಳ ಕಾಲಮಾನ ಈ ವಿಕಾಸದ ಮಹಾ ಹಾದಿಯಲ್ಲಿ ಒಂದು ಚಿಕ್ಕ ಹೆಜ್ಜೆ. ಇದು ಸಂಪೂರ್ಣ ನಿರಾಸೆಯ ಮರಳುಗಾಡಲ್ಲ. ಇಲ್ಲಿ ಸೋಲು ಗೆಲುವುಗಳ ಹಾಸು ಬೀಸುಗಳಿವೆ. ಅಲ್ಲಲ್ಲಿ ಆಗಾಗ ಸಿಹಿ ನೀರಿನ ಊಟೆಗಳು ಹುಟ್ಟಿವೆ. ಅವುಗಳನ್ನು ಕಾಪಾಡುವ, ಮತ್ತಷ್ಟು ಸೃಷ್ಟಿಸುವ ಹೊಣೆ ನಮ್ಮೆಲ್ಲರದು.

-ಡಾ. ರಾಮಲಿಂಗಪ್ಪ ಟಿ. ಬೇಗೂರು

ಈ ಅಂಕಣದ ಹಿಂದಿನ ಬರೆಹಗಳು:
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...