ಅಂಬಿಕಾತನಯದತ್ತರ ಸಖೀಗೀತ

Date: 12-11-2020

Location: ಬೆಂಗಳೂರು


ಕನ್ನಡ ಪುಸ್ತಕಲೋಕದ ಚಿರಕೃತಿಗಳ ಬಗೆಗಿನ ತಮ್ಮ ಓದು-ಅಭಿಪ್ರಾಯಗಳನ್ನು ವಿಮರ್ಶಕ-ಲೇಖಕ ಶ್ರೀಧರ ಹೆಗಡೆ ಭದ್ರನ್‌ ಅವರು ‘ಬದುಕಿನ ಬುತ್ತಿ’ ಸರಣಿಯಲ್ಲಿ ದಾಖಲಿಸಲಿಸುತ್ತಿದ್ದಾರೆ. ತಲೆಮಾರಿನಿಂದ ತಲೆಮಾರಿಗೆ ಅಸ್ತಿತ್ವ ಉಳಿಸಿಕೊಂಡಿರುವ ಜೊತೆಗೆ ಜನಪ್ರೀತಿಯನ್ನೂ ಗಳಿಸಿರುವ ಪುಸ್ತಕಗಳ ಬಗ್ಗೆ ಬರೆಯುತ್ತಿರುವ ಅಂಕಣದಲ್ಲಿ ಈ ಬಾರಿ ‘ಅಂಬಿಕಾತನಯದತ್ತ ಅವರ ಸಖೀಗೀತ’ದ ಕುರಿತು ಬರೆದಿದ್ದಾರೆ.

ಸಖಿ! ನಮ್ಮ ಸಖ್ಯದ ಆಖ್ಯಾನ ಕಟುಮಧುರ
ವ್ಯಾಖ್ಯಾನದೊಡಗೂಡಿ ವಿವರಿಸಲೇ
ಕರುಳಿನ ತೊಡಕನು ಕುಸುರಾಗಿ ಬಿಡಿಸಿಟ್ಟು
ತೊಡವಾಗಿ ತಿರುಗೊಮ್ಮೆ ನಾ ಧರಿಸಲೇ?

ಎಂಬ ಪ್ರಶ್ನೆಯೊಂದಿಗೆ ಆರಂಭವಾಗುವ ವರಕವಿ ದ. ರಾ. ಬೇಂದ್ರೆಯವರ ಸಖೀಗೀತ ಕನ್ನಡ ಕಾವ್ಯಪ್ರಪಂಚದಲ್ಲಿ ಸ್ವಾನುಭ ಸಾಮಾನ್ಯೀಕರಣಗೊಂಡ ಕಾವ್ಯದ ಒಂದು ಅಪೂರ್ವ ಮಾದರಿ. ಅಂಬಿಕಾತನಯದತ್ತರ ನಾಲ್ಕನೆಯ ಕವನ ಸಂಕಲನವಾದ ಇದು; 1937ರಲ್ಲಿ ಮೊದಲನೆಯ ಆವೃತ್ತಿಯಾಗಿ ಮನೋಹರ ಗ್ರಂಥಪ್ರಕಾಶನ ಸಮಿತಿಯಿಂದ ಪ್ರಕಟಗೊಂಡಿತು. ಇದುವರೆಗೆ ಅನೇಕ ಬಾರಿ ಮರುಮುದ್ರಣಕಂಡಿರುವ ಖಂಡಕಾವ್ಯ; ಹಲವಾರು ವಿಶ್ವವಿದ್ಯಾಲಯಗಳ ಪಠ್ಯವಾಗಿ, ಸಹೃದಯ ರಸಿಕರ ಪ್ರೀತಿಯ ಕಾವ್ಯವಾಗಿ ಜೀವಂತವಾಗಿದೆ. ಮೂವತ್ತು ಕವನಗಳ ಸಂಗ್ರಹವಾದ ಇದರಲ್ಲಿ ‘ಸಖೀಗೀತ’ ಹೆಸರಿನ ಎರಡುನೂರಾ ನಲವತ್ತು ಚೌಪದಿಗಳ; ಒಂಬೈನೂರ ಅರವತ್ತು ಸಾಲುಗಳ ಖಂಡಕಾವ್ಯ ಪ್ರಧಾನ ಪಾಲನ್ನು ಪಡೆದಿದೆ. ಈ ಚೌಪದಿಗಳಾದರೂ ಕುಣಿತದ ಲಯವನ್ನು ಹೊಂದಿರುವುದರಿಂದ ಕವಿಯೇ ಇದನ್ನು ‘ಕುಣಿತದ ಹಾಡು’ ಎಂದು ಕರೆದಿದ್ದಾರೆ. ಇದು ‘ಸಖೀಗೀತ’ವಾದ್ದರಿಂದ ಸಖಿಯ ಜೊತೆಗಿನ ಬದುಕು ಮಾತ್ರ ಇಲ್ಲಿ ವಸ್ತು. ಮದುವೆಯ ಹಿಂದಿನ ಚಿತ್ರಣದ ಜವಾಬ್ದಾರಿ ಈ ಕಾವ್ಯಕ್ಕಿಲ್ಲ. ಹೀಗಾಗಿ ಕವಿ ಹಾಗೂ ಅವನ ಕಾವ್ಯ ನಾಯಕಿಯ ಸಖ್ಯದ ಆಖ್ಯಾನದ ಕಟು-ಮಧುರ ಪ್ರಸ್ತಾಪದಿಂದ ಕಾವ್ಯ ಶುರುವಾಗುತ್ತದೆ. ಜೊತೆಗೆ ‘ಕರುಳಿನ ತೊಡಕನು ಕುಸುರಾಗಿ’ ಬಿಡಿಸಲು ಮತ್ತು ‘ತೊಡವಾಗಿ’ ತಿರುಗಿ ಅದನ್ನು ಧರಿಸಲು ಕವಿ ಉದ್ಯುಕ್ತನಾಗಿದ್ದಾನೆ. ಇಲ್ಲಿ ‘ಕುಸುರಾಗಿ’ ಮತ್ತು ‘ತೊಡವು’ ಎಂಬೆರಡು ಶಬ್ದಗಳೂ ಕಾವ್ಯ ಕಲೆಯ ಕೌಶಲದೆಡೆಗೆ ಬೆರಳು ತೋರಿಸುತ್ತವೆ. ಜೀವನದ ಘಟಿತಗಳನ್ನು ಹೀಗೆ ಹೊರಗಿಟ್ಟು ನೋಡುವುದು ಮತ್ತು ವ್ಯಾಖ್ಯಾನಿಸುವುದು ಬೇಂದ್ರೆಯವರಂತಹ ವರಕವಿಗೆ ಮಾತ್ರ ಸಾಧ್ಯ.

ಕವಿ ಬೇಂದ್ರೆಯವರು “ಈ ಗೀತದಲ್ಲಿ ನನ್ನ ಜೀವನ ಕಥೆಯ ಹಂದರದ ಮೇಲೆ ಸಾಮಾನ್ಯ ಸಂಸಾರದ ಸುಖ ದುಃಖದ ಹಂಬನ್ನು ಹಬ್ಬಬಿಟ್ಟಿದ್ದೇನೆ” ಎಂದು ಹೇಳುವ ಮೂಲಕ ‘ಸಖೀಗೀತ’ದ ವೈಯಕ್ತಿಕ ಮತ್ತು ಸಾಮಾಜಿಕ ಮುಖಗಳೆರಡನ್ನೂ ತೆರೆದು ತೋರಿಸಿದ್ದಾರೆ. ಇಲ್ಲಿ ಬೇಂದ್ರೆಯವರಿಗೆ ಕಾವ್ಯಸೃಷ್ಟಿ ಮತ್ತು ಜೀವನಸೃಷ್ಟಿಗಳು ಪ್ರತ್ಯೇಕ ಕ್ರಿಯೆಗಳಲ್ಲ ಎಂಬುದು ಗೋಚರವಾಗುತ್ತದೆ. ಹೀಗಾಗಿ ಬೇಂದ್ರೆಯವರಿಗೆ ಕಾವ್ಯವೆನ್ನುವುದು ಸಂಪೂರ್ಣವಾಗಿ ತಮ್ಮ ವ್ಯಕ್ತಿತ್ವನ್ನು ತೊಡಗಿಸಿಕೊಳ್ಳುವ ಕ್ರಿಯೆಯಾಗುತ್ತದೆ ಹಾಗೂ ಭಾಷಿಕ ಮಾಧ್ಯಮದ ಮೂಲಕ ತಮ್ಮ ಅನುಭವಗಳನ್ನು ಪುನರನುಭವಕ್ಕೆ ದುಡಿಸಿಕೊಳ್ಳುವ ರಾಚನಿಕ ಸೃಷ್ಟಿಯಾಗುತ್ತದೆ.

ಈ ಸಖ್ಯದ ಆಖ್ಯಾನದ ಬಗ್ಗೆ ಕವಿ ಬೇಂದ್ರೆಯವರು ನೀಡುವ ವಸ್ತು ವಿವರಣೆಯಲ್ಲಿ; ಭಾರತೀಯ ಪರಿಪ್ರೇಕ್ಷ್ಯದಲ್ಲಿ ದಾಂಪತ್ಯ ಎಂಬ ಸಂಸ್ಥೆಯ ರಸ ಸೂತ್ರದ ಚಿತ್ರವಿದೆ; “ಪಾಶ್ಚಿಮಾತ್ಯರ ಸರಸವು ವಿರಸದ ಪ್ರಸ್ತಾವನೆ. ನಮ್ಮ ರಸವೇ ನೀರಸ. ಹೀಗೆ ಸಾಮಾನ್ಯವಾಗಿ ತೋರಿದರೂ ಭಾರತೀಯರ ವೈವಾಹಿಕ ಜೀವನವೇ ಸಂಸ್ಕಾರವಂತರ ಮನೆಗಳಲ್ಲಿ ಜೀವಮಾನದುದ್ದಕ್ಕೂ ಪ್ರಣಯಪರಿಪಾಕದ ರೀತಿಯಾಗಿಯೇ ಇದೆ. ಅಗ್ನಿಸಾಕ್ಷಿಯಾಗಿ, ದಾನವಾಗಿ ಬಂದ ಕನ್ಯೆಯನ್ನು ಸ್ನೇಹದ ಅಭ್ಯಾಸದಿಂದ, ಸುಖ-ದುಃಖಗಳಲ್ಲಿ ಸಮಭಾಗಿಯಾಗುವ ಸಹಾನುಭೂತಿಯ ಅಂತಃಕರಣದಿಂದ ಸಖಿಯನ್ನಾಗಿ ಮಾಡುವ ಕ್ರಮವೊಂದು ಎಡೆಬಿಡದೆ ಸಾಗಿರುವುದು”. ಹೀಗೆ ಸಖಿಯನ್ನಾಗಿಸುವ ಮೊದಲು ಮದುವೆಯೆಂಬುದು ನಡೆಯುತ್ತದಲ್ಲ ಅದೊಂದು ದೈವಿಕ ಕ್ರಿಯೆ ಎಂಬುದು ಕವಿಯ ಅಭಿಪ್ರಾಯ;

ಮಂತ್ರದ ತಂತ್ರದ ಮಂದಿವಾಳದ ಮದುವೆ
ಸಂದಣಿಯಲಿ ಹೇಗೋ ಮೆರೆಯುತಿರೆ
ಅಂತಃಪಟದಾಚೆ ವಿಧಿ ತಂದ ವಧು ನೀನು
ಮಾಲೆಯ ಸಾವರಿಸಿ ನಿಂತಿದ್ದೀಯೆ.

ಆಟದ ಕನ್ನಿಕೆ ಮಂಗಳ ಲಗ್ನಕೆ
ಮಾಲೆಯನಿಕ್ಕುತ ಮಡದಿಯಾದೆ
ನಾಟಿಸಿ ಕಣ್ನೋಟ ಸೋಕಿಸಿ ಕೈಬೆರಳು
ಮರವಟ್ಟ ಮನ-ಬನ ಚಿಗುರಿಸಿದೆ.

ಇಲ್ಲಿ ಅಂತಃಪಟದಾಚೆ ಮಾಲೆಯ ಹಿಡಿದು ನಿಂತಿರುವವಳು ‘ವಿಧಿ ತಂದ ವಧು’. ಈ ಮಾತು ತುಂಬಾ ಅರ್ಥಪೂರ್ಣವಾದುದು. ವಿಧಿ ಬದುಕಿನಲ್ಲಿ ಸಂತಸವನ್ನೂ ತರಬಹುದು, ಸಂಕಟವನ್ನೂ ಒಡ್ಡಬಹುದು. ಅವಳನ್ನು ಮುಂದೆ ‘ದೈವದ ಪುತ್ಥಳಿ’ ಎಂದೂ ವರ್ಣಿಸಲಾಗಿದೆ. ಅವಳು ಜೀವನಕ್ಕೆ ಜೀವವಾಗಿ ಬಂದಿರುವವಳು. ಮನೆ ಮಕ್ಕಳನ್ನು ಪಡೆದು ಮನೆತನ ಬೆಳಗುವವಳು. ಅಂದರೆ ‘ಮದುವೆ’ ಎಂಬ ಸಂಸ್ಥೆಯ ಹಿಂದೆ ಮನುಷ್ಯನನ್ನು ಮೀರಿದ ಒಂದು ಶಕ್ತಿಯ ಉದ್ದೇಶವೂ ಸುಪ್ತವಾಗಿರುತ್ತದೆ. ಮುಂದೆ ಸಂಭವಿಸುವ ಗಂಡ-ಹೆಂಡಿರ ನಡುವಿನ ಅನುಭವಗಳೆಲ್ಲ ಹೇಗೆ ಹೇಗೋ ನಡೆಯುವದಿಲ್ಲ. ಬದಲಿಗೆ ಅವೆಲ್ಲ ನಿಶ್ಚಿತವಾದಂಥವು. ದಾಂಪತ್ಯ ಈ ಪಾವಿತ್ರ್ಯದ ಹಿನ್ನೆಲೆಯಲ್ಲಿ ನಡೆದು ಪರಿಪಕ್ವತೆಯನ್ನು ಮುಟ್ಟುತ್ತದೆ. ಇದು ಗ್ರಹೀತವಾಗಿ ಅರ್ಥವಾದಾಗ ದಿನ ಬೆಳಿಗ್ಗೆ ವರದಿಯಾಗುವ ಕೌಟುಂಬಿಕ ವಿಘಟನೆಗಳಿಗೆ, ವಿವಾಹ ವಿಚ್ಚೇದನಗಳಿಗೆ ಮದ್ದು ದೊರಕೀತು.

ವಿವಾಹದ ನಂತರ ದಾಂಪತ್ಯದ ಬಂಧವನ್ನು ಬಿಗಿಗೊಳಿಸುವ ದೈಹಿಕ ಸಂಬಂಧದ ಸ್ವರೂಪವನ್ನು ಅಶ್ಲೀಲತೆಗೆಡೆಕೊಡದಂತೆ ಬೇಂದ್ರೆ ಚಿತ್ರಿಸಿದ್ದಾರೆ;

ಹಗಲೆಲ್ಲೋ ಹಾರಿದವು ಇರುಳೆಲ್ಲ ಜಾರಿದವು
ಋತು ನಿದ್ದೆಯಾಡಿದವು ಬಗುರಿಯೊಲೇ
ನಗೆಯ ನೊರೆಯ ಕೆಳಗೆ ಮೊರೆವ ಬಯಕೆಯ ಕಡಲು
ತೆರೆತೆರೆ ತೆರನಾಗಿ ತೆರೆಯುತಿರೆ

ನನೆಕೊನೆ ಕಾತಿತು ಅತ್ತೆಗೆ ಸೊಸೆ-ಮುದ್ದು
ಚೊಚ್ಚಿಲ ಬಸಿರಿ ನೀ ಎದೆ ತೆರೆದೆ.

ಖುಷಿಯಾದ ಎರಡು ಎಳೆಯ ಜೀವಗಳು ಒಂದಾಗುವ ಹಾಗೂ ಅದರ ಫಲವಾಗಿ ಚೊಚ್ಚಿಲ ಬಸಿರನ್ನು ಧರಿಸುವ ಸಂಭ್ರಮವಿಲ್ಲಿದೆ. ಆದರೆ ಚೊಚ್ಚಿಲ ಮಗುವನ್ನು ಕಳೆದುಕೊಳ್ಳುವುದರಿಂದ ಸಖ-ಸಖಿಯರ ದುಃಖದ ಪರಂಪರೆ ಆರಂಭವಾಗುತ್ತದೆ. ಮರುಚಲ ಬಸಿರಿನಲ್ಲಿ ದಾಂಪತ್ಯ ಫಲದ ಆಸೆ ಮತ್ತೆ ಚಿಗುರೊಡೆಯುತ್ತದೆ;

ಅಸಿವಸಿಯಲಿ ಕುಸಿದ ತಾಯಾಸೆ ಕತ್ತೆತ್ತಿ
ಕಣ್ಣೆತ್ತಿ ಮತ್ತೊಮ್ಮೆ ಕುದುರದಿರೆ
ಬಿಸಿಗೆ ಬೆಚ್ಚಿದ ಎದೆಯ ಮರುಚಲ ಬಸರಿಯ
ಬಯಕೆಗೆ ತಗೆಬಗೆಯಾಗುತಿರೆ.

ಇಂತಹ ಸಂಭ್ರಮದ ಮಗ್ಗುಲಲ್ಲೇ ಕನಸಿಗೂ ಹೊಳೆಯದ ದುರಂತವೊಂದು ಘಟಿಸುತ್ತದೆ. ಸಖ ತನ್ನ ಪ್ರೀತಿಯ ತಾಯಿಯನ್ನು ಕಳೆದುಕೊಳ್ಳುತ್ತಾನೆ;

ಕನಸಿಗು ಹೊಳೆಯದ ಬರಸಿಡಿಲೆರಗಿತು
ತಾಯಿ-ಗಿಡವು ಮಾಯವಾಯಿತೆಲೇ.
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ?

ಕೊನೆಯ ಎರಡು ಸಾಲುಗಳು ಪ್ರತಿ ಆರು ಚೌಪದಿಗಳ ಪದ್ಯಖಂಡದ ಕೊನೆಯಲ್ಲಿ ಪಲ್ಲವಿಯ ಹಾಗೆ ಪುನರಾವರ್ತನೆಯಾಗುತ್ತ ಸಾಗುತ್ತವೆ. ‘ಕೊನೆ ಬಲ್ಲವರಾರು?’ ಎಂಬ ನುಡಿ ಒಂದೆಡೆ ಮುಕ್ತಾಯವಿಲ್ಲದ ಕಥೆಯ ಓಟವನ್ನೂ ಒಂದು ವಿಚಾರದಿಂದ ಇನ್ನೊಂದು ವಿಚಾರಕ್ಕೆ ದಾಟಿಕೊಳ್ಳುವ ಸುಗಮ ವಿಧಾನವನ್ನೂ ಸೂಚಿಸುತ್ತದೆ. ತಾಯಿಯನ್ನು ಕಳೆದುಕೊಂಡ ನಾಯಕ; ‘ನೆಲೆ ತಪ್ಪಿದ ಹಕ್ಕಿ ಅಲೆವಂತೆ ಮುಗಿಲಲಿ’ ಹತ್ತು ದಿಕ್ಕಿಗೆ ಹಾರಾಡುತ್ತಾನೆ. ‘ಒಲವಿಗೆ ಹುಡುಕಾಡಿ ಬಾಳಿಗೆ ಮಿಡುಕಾಡಿ ಷಡ್ರಸ ನವರಸ ರುಚಿ’ ನೋಡುತ್ತಾನೆ. ಇದನ್ನರಿತೂ ಆಕೆ ‘ಮೀಸಲು ಮುರಿಯದ ಒಲವಿಗೆ ಬಾಯ್ಬಿಡದೆ’ ‘ಕಣ್ಣೊಡ್ಡಿ ಹುದುವಿನ ಸವಿ’ ಬೇಡುತ್ತಾಳೆ. ಗಂಡು ಕನ್ನಡದ ಕೆಲಸಗಳಲ್ಲಿ ಮುಳುಗುತ್ತಾನೆ, ಹೆಣ್ಣು ರಮ್ಯ ಕಥನಗಳ ಓದಿನಲ್ಲಿ ಮೈಮರೆಯುತ್ತಾಳೆ. ಮುಂದೆ ಕವಿ ಮಕ್ಕಳ ಜನನವನ್ನು, ಅವರಲ್ಲಿಬ್ಬರ ಮರಣವನ್ನು ನೋಡಿದ್ದಾನೆ;

ಛಟ್ಟೀ ಮುಂದಿನ ಬಿಟ್ಟಿ ಮೋಡವು ಬಂದೊಂದು
ಗಳಿಗೆಯ ನೆರಳಾಟ ಹೂಡುವೊಲೆ
ಬೆಟ್ಟಿಗೆ ಬಂದನು ಹೊಸದೊಬ್ಬ ಕಂದನು
ಅತಿಥಿಯೋ ಎಂಬಂತೆ ತೆರಳಿದನೇ.

ಹುಟ್ಟಿನಲ್ಲಿ ಸಂಭ್ರಮಿಸುವ ಸಾವಿಗೆ ತತ್ತರಿಸುವ ಘಟ್ಟದಲ್ಲಿ ಬಾಳಿನ ಸಂಕೀರ್ಣತೆಗೆ ಆತ ಮುಖಾಮುಖಿಯಾಗುತ್ತಾನೆ;

ಜನುಮಕು ಮರಣಕು ಒಳಸೂತ್ರ ಇರುವುದ
ಕಂಡಾಗ ಇತಿಮಿತಿಯಾಯ್ತೆನಗೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ?

ಹೀಗಿರುವ ಏರಿಳಿವಿನ ದಾಂಪತ್ಯ ಕಹಿಯಾಗದಿರುವ ಶಕ್ತಿ ಇರುವುದೆಲ್ಲಿ? ಎಂಬ ಪ್ರಶ್ನೆಗೆ; ಬೇಂದ್ರೆ, ಜೋಡಿ ಜೀವಗಳ ಸಹಪ್ರಯಾಣದ ವೃತ್ತಾಂತದೊಳಗೆ ತರುವ ಅನುಭವದ ತೀವ್ರತೆ ಉತ್ತರ ನೀಡುತ್ತದೆ. ಅವುಗಳಲ್ಲಿ ಮುಖ್ಯವಾದುದು ನಿಸರ್ಗದ ಅನುಸಂಧಾನ;

ಹೊಂಗೆಯ ಹೂವಿನ ರಂಗವಲ್ಲಿಯ ಬಿಡಿಸಿ
ನೆರಳನು ನೀಡುತ ನಿಲ್ಲುವುದು
ಮುತ್ತುಗ, ಬೂರಲ ದೀಪಮಾಲೆಯ ಕಂಬ
ಗಗನದ ಬಯಲೊಳಗೆತ್ತುವುದು.

ಸುಖ ತಾನು ಬರುವಾಗ ಗುಳೆ ಎತ್ತಿ ಬರುವುದು
ಒಂದಲ್ಲ, ಎರಡಲ್ಲ ಪರಿವಾರವೆ;
ಕಂದನ ಕಿರಿಕಿರಿ ಕಿಲಿಕಿಲಿ ನಗುವಾಗ
ಹೊಸ ಮನೆ ಗಮಗಮ ಎನ್ನುತಿರೆ.

ಸಂತಸ, ಕಾವ್ಯ ಸೃಷ್ಟಿಯ ಸಮೃದ್ಧಿ ಇವೆಲ್ಲವನ್ನೂ ದಂಡಿಯಾಗಿ ಕಂಡ ಕವಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆ ಪಾಲಾಗುತ್ತಾರೆ; ‘ನರಬಲಿ ಕವನವು ಬಲಿಮಾಡಿತೆನ್ನನು’. ಆಗ ಬಾಳಲ್ಲಿ ವಿರಸ, ದುಃಖಗಳ ಸಂತೆ;

ಮಿಡಿತೆಯ ಉಪಟಳ ಹೊಲದುದ್ದ ಬರುವಂತೆ
ಬಂದಿತು ದುಃಖವು ದಂಡಿನೊಲು
ತೆನೆಗಳ ಚೆಂಡಾಡಿ, ಕಾಳುಗಳ ಚೆಲ್ಲಾಡಿ
ಕಣವನೆ ರಣ ಮಾಡಿ ನಗೆಯಾಡಿತು.

ಬದುಕಿನ ಕೋಟಲೆಗಳಲ್ಲಿ ಸಿಕ್ಕು ಒದ್ದಾಡುವ ಕವಿ ಅದರಿಂದ ಹೊರಬರಲು ಸೃಷ್ಟಿಯೊಡನೆ ಒಂದಾಗುವ ಮತ್ತು ಆ ಮೂಲಕ ಸೃಜನ ಕ್ರಿಯೆಯಲ್ಲಿ ತನ್ಮಯವಾಗುವ ಒಂದು ಉಪಾಯವನ್ನು ಶೋಧಿಸಿಕೊಳ್ಳುತ್ತಾನೆ. ಹೊಸ ಗೆಳೆಯರ ಸಹವಾಸ, ಅಂತಃಕರಣದಿಂದ ಕವಿ ನಿತ್ತರಿಸಿಕೊಳ್ಳುತ್ತಾನೆ. ಲಲಿತಾ ಎಂಬ ಮಗು ಹುಟ್ಟಿ ಒಂದು ವರ್ಷದೊಳಗೆ ತೀರಿಕೊಳ್ಳುತ್ತದೆ. ಆಗ ಸಖಿ ಅನುಭವಿಸಿದ ದುಃಖ ಅಕ್ಷರಗಳಲ್ಲಿ ಹಿಡಿಯಲು ಸಾಧ್ಯವಾಗದಂಥದ್ದು. ಅದನ್ನೂ ಕವಿ ದಾಖಲಿಸುತ್ತಾರೆ; ‘ಹೋ! ಎಂದೆ, ಎದೆ ನೊಂದೆ ಬಚ್ಚಬರಿಗೈಯಿಂದೆ’. ಹೀಗೆ ನೊಂದ ಸಖಿಗೆ; ಬಂದದ್ದನ್ನೆಲ್ಲ ಎದುರಿಸುವುದರಿಂದಲೇ ಜೀವನದ ಪರಿಪಾಕ ಸಾಧ್ಯ ಎಂಬ ತಾತ್ವಿಕತೆಯನ್ನು ಹೇಳಿದಾಗ, ಅವಳ ಪ್ರತಿಕ್ರಿಯೆ;

ಅವರವರ ಕೆಚ್ಚಿಗೆ ಸರಿಯವರ ನೆಚ್ಚಿಕೆ
ನಿಮ್ಮಂತೆ ನನಗಿಲ್ಲ ಆ ತ್ರಾಣವು.

ಎನ್ನುತ್ತಾಳೆ. ಇದು ಸಮಾಧಾನ ತರದಿದ್ದರೂ ಹೇಗೋ ಏನೋ ಜೋಡಿ ಇಲ್ಲದ ಎತ್ತು ಎಳೆದಾಡುವ ಗಾಡಿಯಂತೆ ಕೆಲವು ದಿನಗಳನ್ನು ಕಳೆದೆ ಎನ್ನುತ್ತಾರೆ. ಈ ಮಧ್ಯೆ ಸಖ-ಸಖಿಯರ ನಡುವಿನ ಸುದೀರ್ಘ ಸಂಭಾಷಣೆಯನ್ನು ಕವಿ ಇಲ್ಲಿ ನಿರೂಪಿಸಿದ್ದಾರೆ. ಇದು ಕಥನ ಕ್ರಮದಲ್ಲಿ ವೈವಿಧ್ಯವನ್ನು ತರುವುದರೊಂದಿಗೆ; ದಂಪತಿಗಳ ನಡುವಿನ ಮೌನವನ್ನು ಮುರಿಯುವ ತಂತ್ರವಾಗಿಯೂ ಉಪಯುಕ್ತವಾಗಿದೆ. ಗಂಡನ ಗೂಢವಾದ ಮಾತುಗಳಿಗೆ;

ನಿಮ್ಮ ಮಾತಿನ ರೀತಿ ಗಹನ ಗೀತಿಯ ಹಾಗೆ
ಆದರಿದು ಈ ಪ್ರೀತಿ ಹುಸಿಗಾಳಿಯು
ನಿಮ್ಮ ಜೀವನ ರೀತಿ ಬೇಸಿಗೆಯ ಬಿರುಗಾಳಿ
ಅದರ ಸೆರಗಿಗೆ ನಾನು ಬರಿ ಹಾಳಿಯು.

ಎನ್ನುತ್ತಾಳೆ. ಇಲ್ಲಿ ಅವಳಿಗೆ ಪ್ರೇಮವೆನ್ನುವುದು ಸುಳ್ಳೆನಿಸುತ್ತದೆ. ಅವನ ಜೀವನದ ರೀತಿ ಬೇಸಿಗೆಯ ಬಿರುಗಾಳಿಯಂತಿದ್ದು, ತಾನು ಅದರ ಅಂಚಿನಲ್ಲಿರುವ ಕಾಗದ ಹಾಳೆಯಂತೆ ಎಂದು ತಿಳಿಯುತ್ತಾಳೆ. ಆಗ ಸಖ; ‘ಅಹಹಾ! ಜೀವದ ಗೆಳತಿ, ಜೀವನದ ಜೊತೆಗಾರ್ತಿ, ನಿನ್ನನ್ನು ಬಿಟ್ಟು ನಾನಿರುವುದು ಸಾಧ್ಯವೇ ಇಲ್ಲ’ ಎನ್ನುತ್ತಾನೆ. ಸಂಭಾಷಣೆಯ ಎರಡನೆಯ ಘಟ್ಟದಲ್ಲಿ ಪ್ರೇಮದ ಬಗ್ಗೆ ಚರ್ಚೆ ನಡಿಯುತ್ತದೆ. ಮೂರನೆಯ ಹಂತದಲ್ಲಿ ಗಂಡನನ್ನು ಗೌರೀಶಂಕರಕ್ಕೂ ತನ್ನನ್ನು ನೆಲದ ಕಡೆ ಹರಿಯುವ ಗಂಗೆಗೂ ಸಖಿ ಹೋಲಿಸಿಕೊಳ್ಳುತ್ತಾಳೆ. ಅವನ ಹಿಮ ಕರಗಿದರೆ ತನ್ನಲ್ಲಿ ನೀರು ಹರಿಯುವುದು ಎನ್ನುತ್ತಾಳೆ. ಬೆಡಗಿನ ಮಾತು ಬೇಡ, ಸಾಮಾನ್ಯರಂತೆ ಮಾತನಾಡು ಎಂದು ಒತ್ತಾಯಿಸುತ್ತಾಳೆ. ಯಾಕೆಂದರೆ ಹಿಂದೆ ಸಲ್ಲಾಪದ ಮಾತುಗಳ ಸವಿಯುಂಡ ಅವಳಿಗೆ ಅದೆಲ್ಲ ಈಗೇಕಿಲ್ಲ ಎಂಬ ಹಳಹಳಿಯಿದೆ. ತಾನು ಮುತ್ತೈದೆಯಾಗಿ ಸತ್ತರೆ ಸಾಕು ಎನ್ನುವಾಗ ಅವಳಲ್ಲಿ ಕುಗ್ಗಿ ಹೋಗಿರುವ ಆತ್ಮಗೌರವದ ಅರಿವು ಸಖನಿಗೆ ಆಗುತ್ತದೆ;

ಯಾವ ಪಾತಾಳಕ್ಕೆ ಇಳಿದಿತ್ತೊ ಆ ಮಾನ
ಪಾತಾಳಗರಡಿಯ ಹತ್ತದಿದೆ
ಸರಸ ವಿರಸವಾಗಿ ಮೌನ ನೀರಸವಾಗಿ
ಒಗಟೆಯಾಗುವ ಬಾಳು ಒಡೆಯದಿದೆ.

ಹೀಗೆ ಅವಳ ಪರಿಸ್ಥಿತಿ ಅರ್ಥವಾದಾಗ; ‘ಝಲ್ಲೆಂದ ಹೃದಯದ ಜೊಳ್ಳುನಾದವ ಕೇಳಿ ಡಿಳ್ಳವಾಯಿತು ಬಾಳು’ ಎಂಬ ವ್ಯಥೆಗೆ ಒಳಗಾಗುತ್ತಾನೆ. ಹೀಗೆ ಬೇಂದ್ರೆಯವರು ತಮ್ಮ ಸಾಂಸಾರಿಕ ಜೀವನದ ಒಳಹೊರಗನ್ನು ತೆರೆದಿಡುತ್ತಾ ಹೋಗುತ್ತಾರೆ. ಎಷ್ಟೇ ಮುಚ್ಚಿಟ್ಟರೂ ಸಖಿಯ ನೋವಿಗೆ ತಾವೆಷ್ಟು ಕಾರಣರು ಎಂಬ ವಿಶ್ಲೇಷಣೆಗೆ ಇಲ್ಲಿ ಜಾಗವಿದೆ. ಆತ್ಮಕಥನಾತ್ಮಕ ಬರೆಹಕ್ಕೆ ಇರಬೇಕಾದ ಸತ್ಯ ನಿಷ್ಠುರತೆ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇದೂ ಸಖೀಗೀತದ ಮಹತ್ವವನ್ನು ಹೆಚ್ಚಿಸಿರುವ ಸಂಗತಿಗಳಲ್ಲಿ ಒಂದಾಗಿದೆ.

ಕೊನೆಯ ಹಂತದಲ್ಲಿ ನಡೆಯುವ ಸಖ್ಯದ ವ್ಯಾಖ್ಯಾನ ಅರ್ಥಪೂರ್ಣವಾದುದು;

ಅನ್ನಕೆ ಬಾಳಾಗಿ ಕಾಮಕೆ ಹೋಳಾಗಿ
ಮಾನಕೆ ಆಳಾಗಿ ಉಸಿರೆಳೆದುದು
ಬಾಳಲ್ಲ ಬದುಕಲ್ಲ ಜೀವಜೀವಕೆ ಉ-
ದ್ದೀಪನವಾದುದೆ ಜೀವನವು.

ಅದು ಇದೆ ಎದೆಯಲ್ಲಿ, ಬೆಳಕಿನ ಬದಿಯಲ್ಲಿ
ರಸಗಂಗಾ ನದಿಯಲ್ಲಿ ಅದರುಗಮ
ಹೆಸರದಕೆ ಪ್ರೀತಿಯು ಹಿಗ್ಗಿನ ರೀತಿಯು
ಆತ್ಮದ ನೀತಿಯು ಮಧುಸಂಗಮ.

ಅನ್ನಕ್ಕಾಗಿ ಬದುಕುವುದು, ಕಾಮಕ್ಕಾಗಿ ಮಗ್ಗುಲಾಗುವುದು, ಮಾನಕ್ಕಾಗಿ ಹೋರಾಡುವುದು ಇವುಗಳಿಗಾಗಿ ಉಸಿರಾಡುವುದು ಬಾಳೂ ಅಲ್ಲ; ಬದುಕೂ ಅಲ್ಲ. ಒಂದು ಜೀವ ಇನ್ನೊಂದು ಜೀವವನ್ನು ಕಳೆಗಟ್ಟುವಂತೆ ಮಾಡುವುದೇ ಜೀವನ ಎಂಬುದು ಬೇಂದ್ರೆಯವರ ದೃಷ್ಟಿಯಲ್ಲಿ ಬದುಕಿನ ಅರ್ಥ. ಮಾನವನ ಹೃದಯವೇ ಪ್ರೀತಿಯ ಸ್ಥಾನ. ಬೆಳಕಿನ ಬದಿಯಲ್ಲಿ ರಸದ ಗಂಗಾ ನದಿಯಲ್ಲಿ ಅದು ಹುಟ್ಟುತ್ತದೆ. ಅದು ಹಿಗ್ಗಿನ ರೀತಿ; ಆತ್ಮದ ನೀತಿ; ಸಿಹಿಯಾದವುಗಳ ಸಂಗಮ... ಹೀಗೆ ಬದುಕು-ಪ್ರೀತಿಯಂತಹ ತಾತ್ವಿಕತೆಗಳಿಗೆ ಭಾಷ್ಯ ಬರೆದಿದ್ದಾರೆ.

‘ಸಖೀಗೀತ’ ಗಂಡು-ಹೆಣ್ಣಿನ ನೋವು ನಲಿವುಗಳನ್ನು; ಸೃಷ್ಟಿಯ ಹಿನ್ನೆಲೆಯಲ್ಲಿ ನಿರೂಪಿಸುತ್ತದೆ. ಸಮಗ್ರ ಬಾಳಿನ ಏರಿಳಿತಗಳನ್ನು ಹೊರಜಗತ್ತು ಮತ್ತು ಹೃದಯದ ಜಗತ್ತುಗಳ ಏರಿಳಿತಗಳ ಸಂದರ್ಭದಲ್ಲಿ ಇಟ್ಟು ತೋರಿಸುತ್ತದೆ. ಎರಡು ದಶಕಗಳ ಅವಧಿಯಲ್ಲಿ ಒಟ್ಟಿಗಿದ್ದೂ ಮಕ್ಕಳನ್ನು ಪಡೆದು ಸುಖ ದುಃಖಗಳಲ್ಲಿ ಪಾಲುದಾರರಾಗಿಯೂ ತಮ್ಮ ಮನಸ್ಸುಗಳನ್ನು ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿ ಪರಸ್ಪರ ಒದ್ದಾಡುವ ಪ್ರಕ್ರಿಯೆಯನ್ನು ಗುರುತಿಸುತ್ತದೆ. ಬಾಳಿನ ಸಂಕೀರ್ಣತೆ, ಸವಾಲುಗಳನ್ನು ಮೂರ್ತಗೊಳಿಸುತ್ತದೆ.

ಅಂಬಿಕಾತನಯನ ಜಂಬದ ಪಾಡಳಿದು
ನಂಬಿಕೆಯ ಹಾಡಾಗಿ ಬಂತಿಲ್ಲಿಗೆ
ಪೂರ್ವಾನುರಾಗವೀ ಪರ್ವಕೆ ಸಂದಿತು
‘ಉತ್ತರೋತ್ತರವಿರಲಿ ಉತ್ತರಕೆ!

ಕಲ್ಯಾಣ-ಶಕ್ತಿಯ ಕೈಯ ಕುಶಲತೆಯಿಂದ
ಪಾಕವಾಗಲಿ ಪ್ರೇಮ! ಎನ್ನುವೆನೇ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ!

ಅಂಬಿಕಾತನಯದತ್ತ ಈ ಹಾಡನ್ನು ಕಟ್ಟುವಾಗ ಅವನ ಜಂಬ ಕುಗ್ಗಿ ಹೋಗಿ ನಂಬಿಕೆಯ ಹಾಡಾಗಿ ಇದು ಹೊರಹೊಮ್ಮಿದೆ. ಇಲ್ಲಿಗೆ ಪೂರ್ವಾನುರಾಗದ ಪರ್ವ ಮುಗಿಯಿತು ಎನ್ನುವ ಕವಿ ಉತ್ತರಕಾಂಡಕ್ಕೆ ಯಶಸ್ಸನ್ನು ಹಾರೈಸಿದ್ದಾರೆ. ಪ್ರಪಂಚವನ್ನು ಯಾವಾಗಲೂ ಕಾಪಾಡುವ ಕಲ್ಯಾಣ ಶಕ್ತಿಯ ಆಶೀರ್ವಾದದಿಂದ ಪ್ರೇಮ ಪಾಕಗೊಳ್ಳುತ್ತಿರಲಿ ಎಂಬ ಹಾರೈಕೆಯೊಂದಿಗೆ ಕಾವ್ಯಕ್ಕೆ ಕವಿ ಮಂಗಲ ಹಾಡಿದ್ದಾರೆ.‘ಸಖೀಗೀತ’ ಆಧುನಿಕ ಕನ್ನಡ ಕಾವ್ಯದ ಶ್ರೇಷ್ಠ ಸಾಧನೆಗಳಲ್ಲಿ ಒಂದು ಎಂದು ಸ್ವೀಕೃತವಾಗಿದೆ. ‘ಕೂಡಿರಲಿ ಬಾಳು ಇಡಿಗಾಳಿನಂತೆ’ ಎಂಬ ಬೇಂದ್ರೆ ತತ್ವಜ್ಞಾನ ಇಲ್ಲಿ ಹೊನಲಾಗಿದೆ. ಕೂಡಿರುವ ಕಾಳಿನಿಂದ ಬದುಕೇ ಹೊರತು ಬೇಳೆಯಿಂದ ಸಾಧ್ಯವಿಲ್ಲ. ಕೂಡಿರುವ ಕಾಳಿನಲ್ಲಿರುವ ಫಲವಂತಿಕೆ, ಜೀವಂತಿಕೆ ಬೇಳೆಯಲ್ಲಿರುವುದಿಲ್ಲ. ಇದು ಬೇಂದ್ರೆಯವರು ಬಾಳಿನ ಬಗ್ಗೆ ಬೇರೆಡೆ ವ್ಯಕ್ತ ಮಾಡಿರುವ ತಾತ್ವಿಕತೆ. ಬೇಂದ್ರೆಯವರ ಸಖ್ಯದ ಆಖ್ಯಾನವಾದ ‘ಸಖೀಗೀತ’ದ ಕುರಿತು ಸಮೀಪ ಮುಕ್ಕಾಲು ಶತಮಾನ ಕಾಲ ಚರ್ಚೆ ನಡೆದಿದೆ. ಸರ್ವಶ್ರೀ ಕೀರ್ತಿನಾಥ ಕುರ್ತಕೋಟಿ, ಸುಮತೀಂದ್ರ ನಾಡಿಗ, ಡಿ. ಆರ್. ನಾಗರಾಜ್, ಕೆ. ವಿ. ತಿರುಮಲೇಶ್, ಬಸವರಾಜ ಕಲ್ಗುಡಿ, ಎಲ್. ಎಸ್. ಶೇಷಗಿರಿರಾವ್, ಸತ್ಯಕಾಮ, ಜಿ. ಎಸ್. ಆಮೂರ ಮುಂತಾದ ಸಹೃದಯರು, ವಿಮರ್ಶಕರು ವಿಶ್ಲೇಷಣೆ, ವಿಮರ್ಶೆ, ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಇದು ಬೇಂದ್ರೆಯವರ ಅತ್ಯುತ್ತಮ ಕೃತಿಯಾಗುವುದರೊಂದಿಗೆ ಆಧುನಿಕ ಕನ್ನಡ ಸಾಹಿತ್ಯದ ಚಿರಕೃತಿ ಎಂಬ ಯಶಸ್ಸಿನ ಕುರಿತೂ ಚರ್ಚಿಸಿದ್ದಾರೆ.

ವಿಮರ್ಶೆ-ಚರ್ಚೆಗಳೊಂದಿಗೆ ‘ಸಖೀಗೀತ’ದ ಕಾವ್ಯ ಮಾದರಿಯ ಮುಂದುವರಿಕೆಯೆಂಬಂತೆ ಡಾ. ಸುಮತೀಂದ್ರ ನಾಡಿಗರ ‘ದಾಂಪತ್ಯಗೀತ’ ಎಂಬ ಖಂಡಕಾವ್ಯ ಪ್ರಕಟವಾಗಿದೆ (1987). “ಬೇಂದ್ರೆಯವರು ನನ್ನ ಪ್ರೀತಿಯ ಕವಿ. ಅವರ ‘ಸಖೀಗೀತ’ವಿಲ್ಲದಿದ್ದರೆ ನನ್ನ ‘ದಾಂಪತ್ಯಗೀತ’ ಬರುತ್ತಿರಲಿಲ್ಲ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ”- ಎಂದು ನಾಡಿಗರು ಅನೇಕ ಬಾರಿ ಹೇಳಿದ್ದಾರೆ. ಇದರೊಂದಿಗೆ ತಮ್ಮ ಕಾವ್ಯದಲ್ಲಿಯೂ;

“ಪಂಪ ಕುವರವ್ಯಾಸ ಬೇಂದ್ರೆ ಕರೆದರು ನನ್ನ
ಪ್ರೀತಿ ಗೌರವದಿಂದೆ ಬಳಿಸಾರಿದೆ...
ಹಾಡು ಸಖ್ಯವನೆಂದು ದತ್ತಗುರು ಹೇಳಿದರು...
ಪಿರಿಯಕ್ಕರವ ಹಿಡಿದು ಹಾಡು ಶುರು ಮಾಡಿದ್ದೆ
ಬೇಂದ್ರೆ ತಂಪಿಗೆ ನಾನು ಬಳಲಿಹೋದೆ...

ಬೇಂದ್ರೆ ಅಡಿಗರ ದೃಷ್ಟಿ ಕೃಪೆಯಿಂದ ನಡೆಸುತಿದೆ
ಈ ನನ್ನ ಕಾವ್ಯ ಸೃಷ್ಟಿ...”

ಹೀಗೆ ನಾಡಿಗರು ತಮ್ಮ ‘ದಾಂಪತ್ಯಗೀತ’ದ ಮೇಲೆ ಸಖೀಗೀತ ಮತ್ತು ಬೇಂದ್ರೆಯವರ ಪ್ರಭಾವವನ್ನು ಸಾರಿ ಹೇಳಿದ್ದಾರೆ. ಜೊತೆಗೆ ಸಖೀಗೀತಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ದಾಂಪತ್ಯದ ಸಾಮರಸ್ಯದ ಚಿತ್ರಣವನ್ನು ನಾಡಿಗರು ಮಾಡಿದ್ದಾರೆ. ಒಂದು ಪರಂಪರೆಯನ್ನು ಹುಟ್ಟುಹಾಕುವ ಸಾಮರ್ಥ್ಯವನ್ನು ಪಡೆದ ‘ಸಖೀಗೀತ’ ಒಂದು ಅಮರ ಕಾವ್ಯ.

*

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...