Date: 22-06-2022
Location: ಬೆಂಗಳೂರು
“ಬದುಕು ಸದಾ ತಿರುವುಗಳ ಮೇಲೆ ಜೋಲಿಯಾಡುತ್ತಲೇ ಇರುವುದನ್ನು ಯಾರೂ ಅಲ್ಲಗೆಳೆಯಲಾರರು” ಎನ್ನುತ್ತಾರೆ ಲೇಖಕಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ಓ ಹೆನ್ರಿ ಬರೆದ ಸಣ್ಣಕತೆ ‘ದಿ ಗ್ರೀನ್ ಡೋರ್’ ಬಗ್ಗೆ ಬರೆಯುತ್ತ, ಆ ಕತೆ ತೆರೆದಿಡುವ ಹಲವು ಸಾಧ್ಯತೆಗಳನ್ನು ವಿಶ್ಲೇಷಿಸಿದ್ದಾರೆ.
“All the same, I believe it was the hand of fate that doped out the way for me to find she”.
ಈ ಮೇಲೆ ಉದಾಹರಿಸಿದ ಇಂಗ್ಲೀಷಿನ ಸಾಲು ‘ಓ ಹೆನ್ರಿ ಬರೆದ ಸಣ್ಣ ಕಥೆಯೊಂದರದ್ದು. “ದಿ ಗ್ರೀನ್ ಡೋರ್” ಕಥೆಯಲ್ಲಿನ ಈ ಮಾರ್ಮಿಕ ಸಾಲು ವಿಶಿಷ್ಟ ಧ್ವನಿಯಲ್ಲಿ ನನ್ನೊಳಗೆ ಮಾರ್ದನಿಸುತ್ತಿದೆ. ನನ್ನ ಅನುಭವದೊಂದಿಗೆ ತಳಕು ಹಾಕಿಕೊಂಡಂತಿದೆ. ಏನನ್ನೋ ಹುಡುಕ ಹೊರಟವನಿಗೆ ಬೇರೇನೋ ಸಿಕ್ಕು, ಅದು ಅಕಲ್ಪಿತ ಸಂದರ್ಭವಾಗಿಯೂ ಆ ಕಲ್ಪನೆ ಆಶಾವಾದವನ್ನೇ ಹರಳುಗಟ್ಟಿಸಬಹುದು. ಅಂತಹ ಪಾತ್ರಗಳ ಜೊತೆ ಸಂಭಾಷಿಸುವಂತೆ ಮಾಡುತ್ತಾನೆ ಓ ಹೆನ್ರಿ.
“ನೀವು ಹೀಗೆ ರಸ್ತೆಯಲ್ಲಿ ಚಲಿಸುತ್ತಿರುವಾಗಲೇ ಹಠಾತ್ತಾಗಿ ಸುಂದರಿಯಾದ ಹೆಣ್ಣೊಬ್ಬಳು ನಿಮ್ಮ ಕೈ ತೋಳು ಹಿಡಿದು ನಿಲ್ಲಿಸಿ, ನಿಮಗೊಂದು ತಿನಿಸು ಬಾಯಿಗಿಕ್ಕಿ, ಮರುಕ್ಷಣವೇ ನೀವು ತೊಟ್ಟ ಕೋಟಿನ ಗುಂಡಿಯನ್ನು ಕ್ಷಣಾರ್ಧದಲ್ಲಿ ಕತ್ತರಿಸಿ ಪರಾರಿಯಾಗಿ ಬಿಟ್ಟರೆ ನೀವೇನು ಮಾಡುವಿರಿ? ಬಹುಶಃ ನಿಮಗೇನೂ ಮಾಡಲಾಗದು” ಕಥೆಯೊಂದು ಈ ರೀತಿ ಪ್ರಾರಂಭವಾಗುತ್ತದೆ. ಇದೊಂದು ಸೂಕ್ಷ್ಮ ತಂತ್ರಗಾರಿಕೆ. ದ್ವಿತೀಯ ಪುರುಷದಲ್ಲಿ ಕಥೆಯನ್ನು ಪ್ರಾರಂಭಿಸುವ ಕಥೆಗಾರ ಕಥೆಗೆ ಮುನ್ನ ಒಂದು ತಿರುವುಳ್ಳ ಪಾರಂಭವನ್ನು ಕೊಡುತ್ತಾನೆ. ಬದುಕು ಹೇಗೆಲ್ಲ ಯಾಮಾರಿಸಬಹುದೆಂಬ ಸಂಗತಿಯನ್ನು ಸೂಚ್ಯವಾಗಿ ವಿಶ್ಲೇಷಿಸುವಂತೆ ಮಾಡುತ್ತಾನೆ.
“ದಿ ಗ್ರೀನ್ ಡೋರ್” ನಾಯಕ ನೋಡೊದಕ್ಕೆ ತುಂಬಾ ಚೆನ್ನಾಗಿರೋ ರುಡಾಲ್ಫ್ ಸ್ಟೇನರ್, ಸಂತೆಯಲ್ಲಿ ಪಿಯಾನೋ ನುಡಿಸುತ್ತಾ ಬದುಕು ಕಟ್ಟಿಕೊಂಡವ. ಆತನ ಆಸ್ತಿಪಾಸ್ತಿ ಎಲ್ಲವೂ ಕಬಳಿಸಲ್ಪಟ್ಟಿದೆ. ಆದರೆ ಆದಕ್ಕಾತ ತಲೆಕೆಡಿಸಿಕೊಂಡಿಲ್ಲ. ಸಂತೋಷದಿಂದಲೇ ಇದ್ದಾನೆ. ಪ್ರತಿ ಹಂತದಲ್ಲೂ ಹೊಸತನ್ನು ಹುಡುಕುವ ಆತ ನಿರಂತರ ಉತ್ಸಾಹಿ. ಅದೊಂದು ರಾತ್ರಿ ಮನೆಗೆ ವಾಪಸ್ಸಾಗುವ ವೇಳೆ ಆತನ ಕಣ್ಣಿಗೆ ಕಪ್ಪು ದಡಿಯನೊಬ್ಬ ಬೀಳುತ್ತಾನೆ. ಆ ಕಪ್ಪು ವ್ಯಕ್ತಿ ವೈದ್ಯರ ಆಫೀಸಿನ ಪಕ್ಕ ನಿಂತು ಹೋಗಿ ಬರುವವರಿಗೆ ಸಣ್ಣ ಗಾತ್ರದ ಚೀಟಿಯೊಂದನ್ನು ನೀಡುತ್ತಿದ್ದಾನೆ. ರುಡಾಲ್ಫಗೆ ಸಿಕ್ಕ ಚೀಟಿಯಲ್ಲಿ ‘ದಿ ಗ್ರೀನ್ ಡೋರ್’ ಎಂದು ಒಂದು ಬದಿಯಲ್ಲಿ ಬರೆಯಲ್ಪಟ್ಟಿದೆ. ಅದೇ ಕ್ಷಣ ಅಲ್ಲಿಯೇ ಮತ್ತೊಬ್ಬ ವ್ಯಕ್ತಿ ತನಗೆ ಸಿಕ್ಕ ಚೀಟಿಯನ್ನು ಬೇಡವೆಂಬಂತೆ ಕೆಳಕ್ಕೆಸೆದು ಹೊರಟು ಹೋಗುತ್ತಾನೆ. ರುಡಾಲ್ಫ ಆ ಚೀಟಿಯನ್ನು ಕೂಡಾ ಎತ್ತಿಕೊಳ್ಳುತ್ತಾನೆ. ಆದರೆ ಅದು ವೈದ್ಯರು ಬರೆದುಕೊಟ್ಟ ಔಷಧ ಚೀಟಿ. ಆದರೆ ತನ್ನ ಚೀಟಿಯಲ್ಲಿ ‘ಗ್ರೀನ್ ಡೋರ್‘ ಎಂದು ಬರೆದಿರುವುದು ಕಾಣುತ್ತಲೇ ರುಡಾಲ್ಫ ಗೊಂದಲಗೊಳ್ಳುತ್ತಾನೆ. ತನಗೆಲ್ಲೋ ತಪ್ಪಿ ಆ ಚೀಟಿ ಸಿಕ್ಕಿರಬಹುದೆಂದು ರುಡಾಲ್ಫ ಮತ್ತೆ ಮತ್ತೆ ಹೋಗಿ ಚೀಟಿಯನ್ನು ಪಡೆದು ಬರುತ್ತಾನೆ ಆದರೆ ಪ್ರತಿಸಲವೂ ಆತನಿಗೆ ಅದೇ ‘ಗ್ರೀನ್ ಡೋರ್’ ಎಂಬ ನಮೂದಿನ ಚೀಟಿ ಸಿಗುತ್ತಲೇ ಹೋಗುತ್ತದೆ. ಕೊನೆಗೂ ನಾಯಕ ಆ ‘ಗ್ರೀನ್ ಡೋರ್‘ ಇರುವ ಮನೆಯ ಹುಡುಕಿಹೋಗುತ್ತಾನೆ. ಆದರೆ ಅಲ್ಲಿಯೂ ಆತನಿಗೆ ಡೋಲಾಯಮಾನ ಸ್ಥಿತಿ ಎದುರಾಗುತ್ತದೆ. ಅಲ್ಲಿಯ ಎಲ್ಲ ಮನೆಯ ಬಾಗಿಲುಗಳು ಗ್ರೀನ್ ಡೋರ ಹೊಂದಿರುವುದು ಆತನನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಮರಳಿ ಹೋಗುವ ವಿಚಾರ ಮಾಡುತ್ತಾನೆ. ಆದರೆ ಮರುಕ್ಷಣ ಬಂದುದ್ದನ್ನು ಎದುರಿಸಲು ನಿರ್ಧಾರ ಮಾಡುತ್ತಾನೆ. ಒಂದು ಮನೆಯ ಬಾಗಿಲ ಕರೆಗಂಟೆ ಒತ್ತುತ್ತಲೇ ಒಳಗಿನಿಂದ ಬಂದ ಇಪ್ಪತ್ತರ ಪ್ರಾಯದ ಯೌವನದ ಹೆಣ್ಣೊಬ್ಬಳು ಬಾಗಿಲು ತೆಗೆಯುತ್ತಲೇ ಆತನ ತೋಳಿಗೇ ಜಾರಿ ಬೀಳುತ್ತಾಳೆ. ತೀರಾ ಹಸಿದ ಆಕೆ ನಿತ್ರಾಣಗೊಂಡಂತೆ ಕಾಣುತ್ತಲೂ ಆತನಲ್ಲಿ ಆಕೆ ಕುರಿತು ಕರುಣೆ ಉಕ್ಕುತ್ತದೆ. ಆಕೆಗೆ ಊಟ ತಂದುಕೊಡುವ ಆತ ಆಕೆ ಸುಧಾರಿಸಿಕೊಳ್ಳುತ್ತಲೇ ಮಾರನೇ ದಿನ ಬರುವುದಾಗಿ ಹೇಳಿಹೋಗುತ್ತಾನೆ. ಮರಳಿ ಬರುವ ದಾರಿಯಲ್ಲಿ ಪುನಃ ಸಿಕ್ಕ ಅದೇ ಕಪ್ಪುವರ್ಣದ ದಡಿಯನಲ್ಲಿ ತನಗೆ ಕೊಟ್ಟ ಚೀಟಿಯ ಕುರಿತು ವಿಚಾರಿಸಲಾಗಿ ಅದು ಥೇಟರ್ ಒಂದರ ಕಾರ್ಡ ಎಂತಲೂ, ಅಲ್ಲಿ ಹೊಸ ನಾಟಕವೊಂದು ಪ್ರದರ್ಶನವಾಗುತ್ತಿದೆಯೆಂದೂ ಆತ ಹೇಳುತ್ತಾನೆ. ಆತ ಹೇಳಿದ ದಿಕ್ಕಿಗೆ ಮುಖಮಾಡಿದ ರುಡಾಲ್ಫನಿಗೆ ಝಗಮಗಿಸುವ ಬೆಳಕಿನಲ್ಲಿ ಥೇಟರಿನ ‘ದಿ ಗ್ರೀನ್ ಡೋರ್’ ಹೆಸರು ಕಾಣಿಸುತ್ತದೆ.
ಆತನಿಗೆ ಆಶ್ಚರ್ಯ. ಆದಾಗ್ಯೂ ವಿಧಿ ಆತನ ಕರೆದೊಯ್ದಿದ್ದು ಆ ಹುಡುಗಿಯ ಕಡೆಗೆ. ಆಕೆ ಆತನಿಗೆ ಮುಂದೆ ಸಿಗಬಹುದು ಇಲ್ಲ ಸಿಗದೇಯೂ ಇರಬಹುದು. ಆದರೂ ಆತನಾರಿಸಿಕೊಂಡದ್ದು ಅಡೆತಡೆಗಳ ಹಾದಿಯನ್ನು. ಆತನಾರಿಸಿಕೊಂಡ ದಾರಿ ಇನ್ನೊಂದು ಜೀವಕ್ಕೆ ತೃಪಿ ನೀಡಿತು. ಜೀವ ಉಳಿಸಿತು.
ಬದುಕಿಗೆ ಎರಡು ದಾರಿಗಳು. ಒಂದು ಹಿಂದಿನವರು ಪಾಲಿಸಿಕೊಂಡು ಬಂದ ಮತ್ತು ಹಾಕಿಕೊಟ್ಟ ಸಾಂಪ್ರದಾಯಿಕ ಮಾರ್ಗ. ಇನ್ನೊಂದು ಅದಕ್ಕೆ ವಿರುದ್ದವಾಗಿ ನಡೆಯುವ ಭಿನ್ನ ಆದರೆ ಸಂಘರ್ಷದ ದಾರಿ. ಸಾಮಾನ್ಯನೊಬ್ಬ ನಮ್ಮ ನಿಮ್ಮಂತೆ ನಿರುಮ್ಮಳ ಬದುಕಿನ ಸೊಗಸಿಗಾಗಿ ಹಾರೈಸಿ, ಸರಳ ಮಾರ್ಗವನ್ನು ಆಯ್ದುಕೊಂಡರೆ ವಿರಳರಲ್ಲಿ ಅತಿ ವಿರಳರು ಸಂಘರ್ಷದ ದಾರಿಯನ್ನೆ ಆಯ್ದುಕೊಳ್ಳುವರು. ಅದು ಬದುಕಿನ ಆಕಸ್ಮಿಕತೆಯೂ ಆಗಬಹುದು. ಆದರೆ ಅಲ್ಲೊಂದು ಬದುಕಿನ ಹೊಸತನವಿದೆ. ಅನುಭವಗಳ ಹಾಸಿದೆ ಎಂಬ ಸಂದೇಶವನ್ನು ಹೆನ್ರಿ ನೀಡಬಯಸುತ್ತಾನೆ.
ಅದೃಷ್ಟದ ಕೈಗಳು ತುಂಬಾ ಉದ್ದವಾಗಿರುತ್ತವೆ. ಸುರುಳಿಸುರುಳಿಯೂ ಆಗಿರಬಹುದು, ಅಂಕುಡೊಂಕಾಗಿ ಸುತ್ತಿ ಸುಳಿದು ಯಾರನ್ನೋ ಎಲ್ಲಿಗೋ ಕರೆದೊಯ್ಯಬಹುದು, ಇಷ್ಟಪಟ್ಟಿದ್ದನ್ನೆಲ್ಲಾ ಎದುರಿಗೆ ತಂದೊಪ್ಪಿಬಹುದು. ಬೇಡಬೇಡವೆಂದರೂ ಸುಖದ ಸುಪ್ಪತ್ತಿಗೆಯನ್ನು ಹಾಸಬಹುದು. ಮುಟ್ಟಿದ್ದೆಲ್ಲಾ ಚಿನ್ನವಾಗಿಸಬಹುದು, ಅಥವಾ ಬೇಡದ ಬಂಧಗಳನ್ನು ಸೃಷ್ಟಿಸಬಹುದು. ಬೇಕು ಎನ್ನಿಸಿದ್ದನ್ನೂ ಹಾಗೇ ಹಿಸುಕಿ ತೆಪ್ಪಗಾಗಿಸಬಹುದು. ಮುಟ್ಟಿದ್ದೆಲ್ಲಾ ಕಲ್ಲಾಗಲೂಬಹುದು. ಅದೇ ಬದುಕು... ಸದಾ ತಿರುವುಗಳ ಮೇಲೆ ಜೋಲಿಯಾಡುತ್ತಲೇ ಇರುವುದನ್ನು ಯಾರೂ ಅಲ್ಲಗೆಳೆಯಲಾರರು ಅಲ್ಲವೇ?
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
©2024 Book Brahma Private Limited.