Date: 02-02-2022
Location: ಬೆಂಗಳೂರು
ಹಿರಿಯ ಲೇಖಕಿ ಡಾ.ವಿಜಯಶ್ರೀ ಸಬರದ ಅವರ ಮಹತ್ವದ ಕೃತಿ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’. ಮೂವತ್ತೊಂಬತ್ತು ವಚನಕಾರ್ತಿಯರ ಇತಿವೃತ್ತಗಳನ್ನು ಒಳಗೊಂಡ ಈ ಸಂಶೋಧನಾತ್ಮಕ ಕೃತಿ ಮುದ್ರಣಕ್ಕೂ ಮೊದಲು ‘ಬುಕ್ ಬ್ರಹ್ಮ’ ಸಾಹಿತ್ಯಿಕ ವೇದಿಕೆಯ ಪಾಕ್ಷಿಕ ಅಂಕಣವಾಗಿ ಪ್ರಕಟವಾಗುತ್ತಿದೆ. 'ಶಿವಶರಣೆಯರ ಸಾಹಿತ್ಯ ಚರಿತ್ರೆ'ಯ ಎರಡನೇ ಭಾಗವಾಗಿ ಅಕ್ಕಮಹಾದೇವಿ ಪರಿಚಯದ ಪೂರ್ಣ ಭಾಗ ಇಲ್ಲಿದೆ.
ಅಕ್ಕಮಹಾದೇವಿ ಬಸವಾದಿ ಶರಣರ ಸಮಕಾಲೀನಳಾಗಿದ್ದರಿಂದ ಕ್ರಿ.ಶ. 1162ರಲ್ಲಿ ಆಕೆ ಇದ್ದಿರಬಹುದೆಂದು ವಿದ್ವಾಂಸರು ಹೇಳಿದ್ದಾರೆ ಅಂದರೆ ಅಕ್ಕಮಹಾದೇವಿ ಕ್ರಿ. ಶ. 1140 ರಲ್ಲಿ ದವನದ ಹುಣ್ಣಿಮೆಯಂದು ಶಿವಮೊಗ್ಗ ಜಿಲ್ಲೆಯ ಉಡುತಡಿಯೆಂಬ ಗ್ರಾಮದಲ್ಲಿ ಶಿವಭಕ್ತರಾಗಿದ್ದ ನಿರ್ಮಲ ಮತ್ತು ಸುಮತಿಯರ ಮಗಳಾಗಿ ಜನಿಸಿದಳೆಂದು ತಿಳಿದುಬರುತ್ತದೆ, ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಗೆ ಸಮೀಪದಲ್ಲಿರುವ ಉಡುತಡಿ ಗ್ರಾಮವಿದ್ದು ಈ ಪ್ರದೇಶವು ಶರಣರ ಕೇಂದ್ರಸ್ಥಾನವಾಗಿತ್ತು. ಬಳ್ಳಿಗಾವೆಯಲ್ಲಿ ನಗ್ನಸ್ತ್ರೀಯ ಪ್ರತಿಮೆಯೊಂದಿದ್ದು ಅದು ಮಹಾದೇವಿಯ ಮೂರ್ತಿಯೆಂದು ಅಲ್ಲಿಯ ಜನ ಹೇಳುತ್ತಾರೆ. ಈಕೆಯ ಮೂಲ ಹೆಸರು ಮಹಾದೇವಿಯಾಗಿತ್ತೆಂದು ತಿಳಿದು ಬರುತ್ತದೆ.
ಅಕ್ಕಮಹಾದೇವಿಗೆ ಮದುವೆಯಾಗಿತ್ತೆ ಅಥವಾ ಇಲ್ಲವೆ ಎಂಬುದರ ಬಗೆಗೆ ವೀರಶೈವ ಕವಿಗಳಲ್ಲಿಯೇ ಭಿನ್ನಾಭಿಪ್ರಾಯಗಳಿವೆ. ಅಕ್ಕಮಹಾದೇವಿ ಕೌಶಿಕರಾಜನನ್ನು ಮದುವೆಯಾಗಿದ್ದಳೆಂದು ಹರಿಹರ ಮೊದಲಾದ ಕವಿಗಳು ಹೇಳಿದ್ದಾರೆ. ಅಕ್ಕಮಹಾದೇವಿಯ ಮಹತ್ವದ ಕೃತಿ “ಯೋಗಾಂಗ ತ್ರಿವಿಧಿ” ಯಲ್ಲಿಯ ಕೆಲವು ತ್ರಿಪದಿಗಳನ್ನು ಗಮನಿಸಿದಾಗ ಮಹಾದೇವಿ ಮದುವೆಯಾಗಿದ್ದಳೆಂದು ತಿಳಿದುಬರುತ್ತದೆ. ಬಿಜ್ಜಳನ ಪ್ರತಿನಿಧಿಯಾಗಿ ಬಳ್ಳಿಗಾವೆ ಪ್ರದೇಶವನ್ನಾಳುತ್ತಿದ್ದ ಕಸಪಯ್ಯ ನಾಯಕನೇ ಕೌಶಿಕನಾಗಿದ್ದನೆಂದು ಡಾ. ಚಿದಾನಂದಮೂರ್ತಿ ಮೊದಲಾದ ವಿದ್ವಾಂಸರು ಹೇಳಿದ್ದಾರೆ. ಚಾಮರಸ ಮೊದಲಾದ ಕವಿಗಳು ಮಹಾದೇವಿಯ ಮದುವೆಯ ವಿಷಯವನ್ನು ಸ್ಪಷ್ಟವಾಗಿ ಹೇಳದೆ, ಕೌಶಿಕ ಮತ್ತು ಮಹಾದೇವಿಯ ನಡುವೆ ದೈಹಿಕ ಸಂಪರ್ಕವಿರಲಿಲ್ಲವೆಂದು ತಿಳಿಸಿದ್ದಾರೆ.
ಮಹಾದೇವಿಯು ಕೌಶಿಕನನ್ನು ತೊರೆದು ದಿಗಂಬರೆಯಾಗಿ ಬಳ್ಳಿಗಾವೆಯನ್ನು ತೊರೆದು ಕಲ್ಯಾಣಕ್ಕೆ ಹೋದಳೆಂಬುದನ್ನು ಎಲ್ಲ ವೀರಶೈವ ಕವಿಗಳೂ ಒಪ್ಪಿಕೊಂಡಿದ್ದಾರೆ. ಕಲ್ಯಾಣದಲ್ಲಿ ಬಸವಾದಿ ಶರಣರು ಕಟ್ಟಿದ್ದ ಅನುಭವಮಂಟಪಕ್ಕೆ ಬಂದ ಮಹಾದೇವಿಯನ್ನು ಶರಣರು ಅಕ್ಕನೆಂದು ಗೌರವಿಸಿದನು, ಅವರ ವಚನಗಳಿಂದ ತಿಳಿಯಬಹುದಾಗಿದೆ. ಉಡುತಡಿಯ ಮಹಾದೇವಿಯನ್ನು ಕಿನ್ನರಿಬೊಮ್ಮಯ್ಯನೆಂಬ ಶರಣನು ಕಲ್ಯಾಣದ ದಾರಿಯಲ್ಲಿಯೇ ತಡೆದು ಪರೀಕ್ಷಿಸಿದನೆಂದು ಶೂನ್ಯಸಂಪಾದನೆಗಳು ಹೇಳುತ್ತವೆ. ಹೀಗೆ ಇಂತಹ ಅನೇಕ ಪರೀಕ್ಷೆಗಳನ್ನೆದುರಿಸಿದ ಮಹಾದೇವಿ ಅನುಭವಮಂಟಪದ ಅಧ್ಯಕ್ಷನಾಗಿದ್ದ ಅಲ್ಲಮಪ್ರಭುವಿನ ಪ್ರಶ್ನೆಗೂ ಸಮರ್ಪಕ ಉತ್ತರ ಕೊಡುತ್ತಾಳೆ. ಕಲ್ಯಾಣದಲ್ಲಿ ಕೆಲವು ವರ್ಷವಿದ್ದ ಮಹಾದೇವಿ ವಚನಗಳನ್ನು ರಚಿಸಿ ಅನುಭಾವದೆತ್ತರಕ್ಕೇರಿ ಶರಣರಿಂದ ಅಕ್ಕನೆಂದು ಗೌರವಿಸಿಕೊಂಡು ಚನ್ನಮಲ್ಲಿಕಾರ್ಜುನನ ಹುಡುಕಾಟದಲ್ಲಿ ಶ್ರೀಶೈಲಕ್ಕೆ ಹೋದಳೆಂದು ತಿಳಿದುಬರುತ್ತದೆ.
ಅಕ್ಕಮಹಾದೇವಿಯ ಜೀವನದಲ್ಲಿ ಶರಣರ ಕ್ರಾಂತಿಯ ಕೇಂದ್ರವಾಗಿದ್ದ ಕಲ್ಯಾಣವು ಮಹತ್ವದ ಪಾತ್ರವಹಿಸಿದೆ. ಕಲ್ಯಾಣವು ಅಕ್ಕಮಹಾದೇವಿಯಂತಹ ಶರಣೆಯರನ್ನು ಆಧ್ಯಾತ್ಮದೆತ್ತರಕ್ಕೆ ಬೆಳಿಸಿದೆ, ಅಕ್ಕನನ್ನು ಅನುಭಾವಿಯನ್ನಾಗಿ ಮಾಡಿದೆ. ಅನುಭವಮಂಟಪದಲ್ಲಿ ಅಲ್ಲಮಪ್ರಭು, ಅಕ್ಕನನ್ನು ಬಗೆಬಗೆಯಾಗಿ ಪ್ರಶ್ನಿಸಿದ್ದು, ಪರೀಕ್ಷಿಸಿದ್ದು ಶೂನ್ಯಸಂಪಾದನೆಗಳಿಂದ ತಿಳಿದುಬರುತ್ತದೆ. ಎಲ್ಲ ಶರಣರ ಗೌರವಕ್ಕೆ ಪಾತ್ರಳಾದ ಮಹಾದೇವಿಯಕ್ಕೆ ಕೊನೆಗೆ ಶ್ರೀಶೈಲಕ್ಕೆ ಹೋಗಿ ಕದಳಿವನದಲ್ಲಿ ಲಿಂಗೈಕ್ಯಳಾಗುತ್ತಾಳೆ. ಉಡುತಡಿಯಿಂದ ಪ್ರಾರಂಭವಾದ ಅವಳ ಚನ್ನಮಲ್ಲಿಕಾರ್ಜುನನ ಹುಡುಕಾಟ ಶ್ರೀಶೈಲದ ಕದಳಿಯಲ್ಲಿ ಚನ್ನಮಲ್ಲಿಕಾರ್ಜುನನ ಪುಣ್ಯಕ್ಷೇತ್ರದಲ್ಲಿ ಕೊನೆಗೊಳ್ಳುತ್ತದೆ.
ಅಕ್ಕಮಹಾದೇವಿಯನ್ನು ಕುರಿತು ಇಂದು ನಾಡಿನಲ್ಲಿ ಅನೇಕ ಸ್ಮಾರಕಗಳಿವೆ. ಬಸವಕಲ್ಯಾಣದ ತ್ರಿಪುರಾಂತ ಕೆರೆಯ ಬಲಮಗ್ಗಲಿಗೆ ಪೂರ್ವಕ್ಕೆ ಒಂದು ಗವಿಯಿದೆ ಇದನ್ನು ಅಕ್ಕಮಹಾದೇವಿಯ ಗವಿಯೆಂದು ಕರೆಯುತ್ತಾರೆ. ಇಲ್ಲಿ ಅಕ್ಕ ಅನುಷ್ಠಾನ ಮಾಡುತ್ತಿದಳೆಂದು ತಿಳಿದುಬರುತ್ತದೆ. ಈ ಸ್ಥಳಕ್ಕೆ “ಬಂದವರ ಓಣಿ”ಯೆಂದು ಕರೆಯುತ್ತಾರೆ. ಇಲ್ಲಿರುವ ಹೊಂಡವನ್ನು ಅಕ್ಕನ ತೀರ್ಥವೆಂದು ಕರೆಯಲಾಗುತ್ತದೆ. ಇಂದು ಅನೇಕ ಕಡೆ ಅಕ್ಕಮಹಾದೇವಿಯ ಗುಡಿಗಳಿವೆ. ಅವುಗಳಲ್ಲಿ ನಾರಾಯಣಪುರದ ಶಿವನ ಗುಡಿಯ ಎದುರುಗಡೆ ಒಂದು ಮಠವಿದೆ, ಅದನ್ನು ಹಿರೇಮಠ ಎಂದುಕರೆಯುತ್ತಾರೆ ಇಲ್ಲಿ ಅಕ್ಕಮಹಾದೇವಿಯ ಗುಡಿಯಿತ್ತೆಂದು ಜನ ಹೇಳುತ್ತಾರೆ. ಕಲಬುರಗಿ ಜಿಲ್ಲೆಯ ಮಹಾಗಾಂವದಲ್ಲಿ ಅಕ್ಕಮಹಾದೇವಿಯ ಗುಡಿಯಿದೆ.
ಉಡುತಡಿಯಿಂದ ಕಲ್ಯಾಣಕ್ಕೆ ಹೋಗುವಾಗ ಅಕ್ಕ ಈ ಸ್ಥಳದಲ್ಲಿ ತಂಗಿದ್ದಳೆಂಬ ಪ್ರತೀತಿಯಿಂದ ಕೆಲವು ವಿದ್ವಾಂಸರು ಅಕ್ಕಮಹಾದೇವಿ ಮಹಾಗಾಂವದವಳಾಗಿರಬೇಕೆಂದು ಹೇಳಿರುವುದು ಇದೇ ಕಾರಣಕ್ಕಾಗಿ ಎಂದೆನಿಸುತ್ತದೆ. ಮಲ್ಲಿಕಾರ್ಜುನನ ಪುರಾತನ ಗುಡಿ ಇಲ್ಲಿಯೇ ಇರುವುದರಿಂದ ಅಕ್ಕ ಇಲ್ಲಿ ತಂಗಿದ್ದುದು ಸ್ಪಷ್ಟವಾಗುತ್ತದೆ. ಶ್ರೀಶೈಲದ ಚನ್ನ ಮಲ್ಲಿಕಾರ್ಜುನನ ಗುಡಿಯ ಆವರಣದಲ್ಲಿ ಅಕ್ಕಮಹಾದೇವಿಯ ವಿಗ್ರಹವಿದೆ. ಶ್ರೀಶೈಲದ ಪಾತಾಳಗಂಗೆಯಿಂದ 23 ಕಿಲೋಮೀಟರ್ ದೂರದಲ್ಲಿರುವ ದೊಡ್ಡಗವಿಯೊಂದರಲ್ಲಿ ಅಕ್ಕ ಅನುಷ್ಠಾನ ಮಾಡಿದ್ದಳೆಂದು ತಿಳಿದುಬರುತ್ತದೆ. ಸುಂದರವಾದ ಕದಳಿವನದ ಗವಿಯಲ್ಲಿ ಅಕ್ಕನ ಐಕ್ಯಮಂಟಪವಿದೆ. - 12ನೇ ಶತಮಾನದಿಂದ ಇಲ್ಲಿಯವರೆಗೆ ಅಕ್ಕಮಹಾದೇವಿಯನ್ನು ಕುರಿತು ಪ್ರಕಟವಾದ ಕೃತಿಗಳನ್ನು ಆರು ಪ್ರಕಾರಗಳಲ್ಲಿ ವಿಂಗಡಿಸಬಹುದಾಗಿದೆ. ೧) ಅಕ್ಕಮಹಾದೇವಿ ಕುರಿತಾದ ಶರಣರ ವಚನಗಳು ೨) ನಡುಗನ್ನಡ ಕಾವ್ಯಕೃತಿಗಳು ೩) ಸಾಂದರ್ಭಿಕ ಕೃತಿಗಳು ೪) ಸಂಕಲನ ಕೃತಿಗಳು ೫) ಜನಪದ ಕೃತಿಗಳು ೬) ಆಧುನಿಕ ಕೃತಿಗಳು.
12ನೇ ಶತಮಾನದ ಸಮಕಾಲೀನ ಶರಣರು, ಅಕ್ಕ ಮಹಾದೇವಿಯನ್ನು ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ. ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಕಿನ್ನರಿಬ್ರಹ್ಮಯ್ಯ, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವ, ಇನ್ನು ಮುಂತಾದ ಶರಣರು ತಮ್ಮ ವಚನಗಳಲ್ಲಿ ಅಕ್ಕನ ಅನುಭಾವದೆತ್ತರವನ್ನು ವಿವರಿಸಿ ಹೇಳಿದ್ದಾರೆ. ಅಕ್ಕನ ವಚನಗಳು ಎಷ್ಟೊಂದು ಸತ್ವಯುತವಾಗಿವೆಯೆಂಬುದನ್ನು ತೌಲನಿಕವಾಗಿ ಅಧ್ಯಯನ ಮಾಡಿ ಹೇಳಿದ್ದಾರೆ.
"ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ
ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ
ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ
ಅಜಗಣ್ಣನ ಐದು ವಚನಕ್ಕೆ ಕೂಡಲ ಚೆನ್ನಸಂಗಮದೇವಾ
ಮಹಾದೇವಿಯಕ್ಕನ ಒಂದು ವಚನ ನಿರ್ವಚನ”
- ಚೆನ್ನಬಸವಣ್ಣ (ವ-೨೨೧, ಸವ.ಸಂ.೩,೧೯೯೩)
ಚೆನ್ನಬಸವಣ್ಣನವರ ಈ ವಚನದಲ್ಲಿ ಅಕ್ಕಮಹಾದೇವಿಯ ವಚನಗಳ ತೌಲನಿಕ ವಿಮರ್ಶೆಯಿದೆ. ಅಕ್ಕ ವಚನಕಾರರಲ್ಲಿಯೇ ಎಂತಹ ಉನ್ನತಸ್ಥಾನ ಗಳಿಸಿದ್ದಳೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ವಚನವು 12ನೇ ಶತಮಾನದಲ್ಲಿ ನಡೆದ ತೌಲನಿಕ ಸಾಹಿತ್ಯ ವಿಮರ್ಶೆಯ ಪ್ರಥಮ ಹೆಜ್ಜೆಯಾಗಿದೆ. ವಚನ ತುಂಬ ಸರಳವಾಗಿದ್ದರೂ, ಇಲ್ಲಿ ವಿಮರ್ಶೆ ವಸ್ತುನಿಷ್ಠವಾಗಿ ಬಂದಿದೆ. ದಣ್ಣಾಯಕನೆಂದರೆ ಸ್ವತಃ ಚೆನ್ನಬಸವಣ್ಣನೇ ಆಗಿದ್ದಾನೆ. ತನ್ನ ಇಪ್ಪತ್ತು ವಚನಗಳು ಕೂಡಿದರೂ, ಅಕ್ಕನ ಒಂದು ವಚನಕ್ಕೆ ಸಮವಾಗಲಾರವೆಂಬ ನುಡಿ ಸ್ವವಿಮರ್ಶೆಯ ಮಹತ್ವದ ಹೆಜ್ಜೆಯಾಗಿದೆ.
"ಎನ್ನ ಭಕ್ತಿಯ ಶಕ್ತಿಯು ನೀನೆ, ಎನ್ನ ಯುಕ್ತಿಯ ಶಕ್ತಿಯು ನೀನೆ, ಎನ್ನ ಮುಕ್ತಿಯ ಶಕ್ತಿಯು ನೀನೆ” ಎಂದು ಹೇಳಿರುವ ಬಸವಣ್ಣನವರು ಅಕ್ಕಮಹಾದೇವಿಯ ಆಧ್ಯಾತ್ಮಿಕ ಸಾಧನೆಯನ್ನು ತಮ್ಮ ವಚನದಲ್ಲಿ ಹೇಳಿದ್ದಾರೆ. "ಮಹಾದೇವಿಯಕ್ಕನ ನಿಲುವಿಗೆ ಶರಣೆಂದು ಶುದ್ದನಾದೆ ಕಾಣಾ, ಚೆನ್ನಬಸವಣ್ಣ" ಎಂದು ಸಿದ್ದರಾಮೇಶ್ವರ ಹೇಳಿದರೆ, "ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ ಮಹಾದೇವಿಯಕ್ಕಗಳ ನಿಲಿವಿಂಗೆ ಶರಣೆನುತಿರ್ದೆನು" ಎಂದು ಅಲ್ಲಮಪ್ರಭು ಹೇಳಿದ್ದಾರೆ. ಅಕ್ಕಮಹಾದೇವಿಯ ವ್ಯಕ್ತಿಜೀವನ ಕುರಿತು ಶರಣರ ಯಾವ ವಚನದಲ್ಲಿಯೂ ಪ್ರಸ್ತಾಪವಿಲ್ಲ. ಆದರೆ ಅಕ್ಕನ ಆಧ್ಯಾತ್ಮ ಸಾಧನೆ, ಆಕೆಯ ಸಾಹಿತ್ಯ, ಆಕೆಯ ವ್ಯಕ್ತಿತ್ವ ಕುರಿತು ಅನೇಕ ವಚನಗಳಿವೆ.
ವಚನಕಾರರ ನಂತರ ಬಂದ ಮೊದಲ ಕವಿಯೆಂದರೆ ಹರಿಹರ; ನಂತರದಲ್ಲಿ ಬರುವ ಚಾಮರಸ, ಚೆನ್ನಬಸವಾಂಕ, ರಾಚಕವಿ, ಶೂನ್ಯಸಂಪಾದನೆಕಾರರು ಇವರೆಲ್ಲರನ್ನು ನಡುಗನ್ನಡ ಕವಿಗಳೆಂದು ಕರೆಯಲಾಗುತ್ತದೆ. ಹರಿಹರನ (೧೨೧೦) "ಉಡುತಡಿಯ ಅಕ್ಕಮಹಾದೇವಿಯ ರಗಳೆ', ಚೆನ್ನಬಸವಾಂಕನ (೧೫೬೦) "ಮಹಾದೇವಿಯಕ್ಕನ ಪುರಾಣ", ರಾಚಕವಿಯ (೧೯೦೦) "ಮಹಾದೇವಿಯಕ್ಕನ ಸಾಂಗತ್ಯ' ಈ ಮೊದಲಾದ ಕಾವ್ಯಕೃತಿಗಳನ್ನು ಪುರಾಣ ಕಾವ್ಯಗಳು ಎಂದು ಕರೆಯಲಾಗುತ್ತದೆ. ಇವೆಲ್ಲ ಅಕ್ಕಮಹಾದೇವಿಯನ್ನು ಕುರಿತು ಬರೆದ ಸ್ವತಂತ್ರ ಕೃತಿಗಳಾಗಿವೆ. ಇನ್ನು ಸಾಂದರ್ಭಿಕ ಕೃತಿಗಳಲ್ಲಿ ಅಕ್ಕನ ಜೀವನ ಅಲ್ಲಲ್ಲಿ ಪ್ರಸ್ತಾಪವಾಗಿದೆ. ಚಾಮರಸನ - "ಪ್ರಭುಲಿಂಗಲೀಲೆ", ನೀಲಕಂಠಾಚಾರ್ಯನ "ಆರಾಧ್ಯ ಚರಿತ್ರೆ', ವಿರಕ್ತ ತೋಂಟದಾರ್ಯನ" “ಪಾಲ್ಕುರಿಕೆ ಸೋಮೇಶ್ವರಪುರಾಣ", ಅದೃಶ್ಯಕವಿಯ 'ಪ್ರೌಢದೇವರಾಯನ ಕಾವ್ಯ" ವಿರೂಪಾಕ್ಷಪಂಡಿತನ 'ಚೆನ್ನಬಸವ ಪುರಾಣ", ಉತ್ತರದೇಶದ ಬಸವಲಿಂಗನ 'ಬಸವೇಶ್ವರಪುರಾಣ ಕಥಾಸಾಗರ", ವಿರುಪೇಂದ್ರನ "ಗುರುಭಕ್ತ ಚಾರಿತ್ರ್ಯ", ಎಳಂದೂರ ಹರೀಶ್ವರನ "ಪ್ರಭುದೇವರ ಪುರಾಣ," ಸಿದ್ಧನಂಜೇಶನ "ಗುರುರಾಜ ಚಾರಿತ್ರ", ಷಡಕ್ಷರ ದೇವನ 'ಬಸವರಾಜ ವಿಜಯ", ಶಾಂತಲಿಂಗದೇಶಿಕನ 'ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ" ಇವೆಲ್ಲ ಅಕ್ಕಮಹಾದೇವಿಯ ಬಗೆಗೆ ಪ್ರಸ್ತಾಪಿಸಿದ ಸಾಂದರ್ಭಿಕ ಕೃತಿಗಳಾಗಿವೆ.
ಸಂಕಲನ ಕೃತಿಗಳಲ್ಲಿ ಕಲ್ಲುಮಠದ ಪ್ರಭುದೇವರ-"ಲಿಂಗಲೀಲಾ ವಿಲಾಸ ಚಾರಿತ್ರ", ಗುಬ್ಬಿಯ ಮಲ್ಲಣಾರ್ಯನ - "ಗಣಭಾಷಿತ ರತ್ನಮಾಲೆ", ಸಿದ್ದಲಿಂಗೇಶ್ವರನ - ಏಕೋತ್ತರ ಶತಸ್ಥಲ", ಶಿವಗಣ ಪ್ರಸಾದಿ ಮಹಾದೇವಯ್ಯನ-" ಪ್ರಭುದೇವರ ಶೂನ್ಯ ಸಂಪಾದನೆ", ಕೆಂಚವೀರಣ್ಡೆಯನ - "ಶೂನ್ಯ ಸಂಪಾದನೆ", ಗುಮ್ಮಳಾಪುರದ ಸಿದ್ದಲಿಂಗಯತಿಯ-" ಶೂನ್ಯಸಂಪಾದನೆ", ಗೂಳೂರು ಸಿದ್ದವೀರಣ್ಣೊಡೆಯನ ಶೂನ್ಯ ಸಂಪಾದನೆ" ಈ ಮೊದಲಾದ ಕೃತಿಗಳು ನಡುಗನ್ನಡ ಸಾಹಿತ್ಯ ಸಂದರ್ಭದ ಸಂಕಲನ ಕೃತಿಗಳಾಗಿವೆ. ಇವರೆಲ್ಲ ಅಕ್ಕನ ವಚನಗಳನ್ನು ಉಲ್ಲೇಖಿಸಿ ತಮ್ಮ ಕೃತಿಗಳಲ್ಲಿ ಅಕ್ಕನ ಬದುಕು-ಬರಹ ಕುರಿತು ಹೇಳಿದ್ದಾರೆ.
ಜನಪದ ಕವಿಗಳು ಕೂಡಾ ತಮ್ಮದೇ ಅಕ್ಕಮಹಾದೇವಿಯನ್ನು ಸೃಷ್ಟಿಸಿಕೊಂಡಿದ್ದಾರೆ. ಡಾ.ಬಿ.ಎಸ್.ಗದ್ದಗಿಮಠರ- "ಕನ್ನಡ ಜಾನಪದ ಗೀತೆಗಳು", ಡಾ. ಎಂ.ಎಸ್. ಸುಂಕಾಪುರ ಅವರು ಸಂಪಾದಿಸಿರುವ "ಜೀವನ ಜೋಕಾಲಿ ಕೋಲುಪದ", ಕಾಪಸೆ ರೇವಪ್ಪನವರು ಸಂಪಾದಿಸಿರುವ "ಮಲ್ಲಿಗೆದಂಡೆ", ಡಾ. ಶಿವಾನಂದ ಗುಬ್ಬಣ್ಣನವರ ಸಂಪಾದಿಸಿರುವ "ಬಸವಣ್ಣ ನಿನ್ನಹೆಸರು ದೆಸೆದೆಸೆಗೆ ಶಿವಮಂತ್ರ', ವೀರಣ್ಣದಂಡೆಜಯಶ್ರೀದಂಡೆಯವರು ಸಂಪಾದಿಸಿರುವ - "ಶರಣ ಪರಿವಾರ” ಈ ಮೊದಲಾದ ಜನಪದ ಹಾಡಿನ ಸಂಗ್ರಹಗಳಲ್ಲಿ ಅಕ್ಕನ ಜೀವನಚರಿತ್ರೆ ವಿಶಿಷ್ಟವಾದ ರೀತಿಯಲ್ಲಿ ಕಾಣಿಸಿಕೊಂಡಿದೆ. ಅಕ್ಕಮಹಾದೇವಿ ಜನಪದ ರಂಗಭೂಮಿಯನೂ ಪ್ರವೇಶಿಸಿದಾಳೆ. ಅಕ್ಕನನ್ನು ಕುರಿತಂತೆ ಮೂರು ಸಣ್ಣಾಟಗಳು ಪ್ರಕಟವಾಗಿವೆ. ಬೆಳಗಾವಿ ಜಿಲ್ಲೆಯ ಕಾದ್ರೋಳ್ಳಿಯ ನೀಲಕಂಠಪ್ಪ ಮಾಸ್ತರ (೧೮೯೫) ರಚಿಸಿರುವ - "ಮಹಾದೇವಿಯಕ್ಕೆ" ಸಣ್ಣಾಟವು ಅಕ್ಕನನ್ನು ಕುರಿತಾದ ಪ್ರಥಮ ಸಣ್ಣಾಟವಾಗಿದೆ. ಹಣ್ಣಿಕೇರಿ ಶಿವಾನಂದ (೧೯೩೦) ಕವಿ ರಚಿಸಿರುವ- "ಉಡುತಡಿಯ ಮಹಾದೇವಿ" ಎಂಬ ಸಣ್ಣಾಟ ಎರಡನೇ ಸಣ್ಣಾಟವಾಗಿದೆ. ಶಿವಣ್ಣ ಕವಿ ರಚಿಸಿರಬಹುದಾದ "ಅಕ್ಕಮಹಾದೇವಿ ಸಣ್ಣಾಟ" 2002ರಲ್ಲಿ ಪ್ರಕಟವಾಗಿದೆ. ಈ ಸಣ್ಣಾಟವನ್ನು ಡಾ. ಶಾಂತಾ ಇಮ್ರಾಪುರ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಬಾಲಪಾಪಾಂಬ ಎಂಬ ಲೇಖಕಿ "ಅಕ್ಕಮಹಾದೇವಿ ಬೋಧೋಲಾ" ಎಂಬ ಯಕ್ಷಗಾನ ನಾಟಕ ರಚಿಸಿದ್ದಾಳೆ.
ಕಾಪಸೆ ರೇವಪ್ಪನವರು ಸಂಪಾದಿಸಿರುವ (೧೯೯೦) "ಮಲ್ಲಿಗೆದಂಡೆ" ಸಂಗ್ರಹದಲ್ಲಿ ಅಕ್ಕಮಹಾದೇವಿಯ ಹಾಡುಬರುತ್ತದೆ. ಆ ಹಾಡಿನಲ್ಲಿಯ ಎರಡು ಸಾಲುಗಳನ್ನು ಗಮನಿಸಬಹುದಾಗಿದೆ.
"ನೀವು ಜೈನರು / ನಾವು ನಿಂಗಾಯಿತರು
ಕೊಟ್ಟರೊಲ್ಲೆ ನಾ ಜೈನರಿಗೆ ಕೋಲ"
- (ಮಲ್ಲಿಗೆದಂಡೆ ಪು.೫೯)
ಹಾಡಿನ ಈ ನುಡಿಯನ್ನು ಗಮನಿಸಿದಾಗ ಅಕ್ಕಮಹಾದೇವಿ ಲಿಂಗಾಯತ ಧರ್ಮಕ್ಕೆ ಸೇರಿದವಳು, ಕೌಶಿಕನು ಜೈನಧರ್ಮಕ್ಕೆ ಸೇರಿದವನಾಗಿದ್ದನೆಂದು ತಿಳಿದುಬರುತ್ತದೆ. ನಳಿನಾಕ್ಷಿ ಅರಳಗುಪ್ಪಿಯವರು ಅಕ್ಕನ ಲಾವಣಿಯನ್ನು ಸಂಗ್ರಹಿಸಿದ್ದಾರೆ. 'ಕೇಳಿರಿ ಪೇಳುವೆ ಅಕ್ಕಮಹಾದೇವಿಯ ಚರಿತವ” ಎಂದು ಪ್ರಾರಂಭವಾಗುವ ಲಾವಣಿ 67ದ್ವಿಪದಿಗಳನ್ನೊಳಗೊಂಡಿದೆ.
"ಮಲ್ಲಯ್ಯ ನಿನನಾಮ ಎಲ್ಲರೂ ಮಾಡ್ಯಾರ
ಮಲ್ಲಯ್ಯನ ಮಡದಿ ಅಕ್ಕನ ನೆನೆದರ
ಎಲ್ಲಿಲ್ಲ ಹಾಡು ಹರದಾವ"
ಈ ತ್ರಿಪದಿಯಲ್ಲಿ ಜನಪದರ ದೃಷ್ಟಿಯಲ್ಲಿ, ಚೆನ್ನಮಲ್ಲಿಕಾರ್ಜುನ ಮಲ್ಲಯ್ಯನಾಗಿದ್ದಾನೆ. ಅಕ್ಕ ಮಲ್ಲಯ್ಯನ ಮಡದಿಯಾಗಿದ್ದಾಳೆ. ಹರಿಹರನ ಮಹಾದೇವಿ ಕೈಲಾಸದ ಪಾರ್ವತಿಯ ಶಾಪದಿಂದ ಧರೆಗಿಳಿದು ಬಂದರೆ, ಚಾಮರಸನ ಪ್ರಭುಲಿಂಗಲೀಲೆಯಲ್ಲಿ ಅಕ್ಕ ಮಾಯೆಯಾಗಿ ಕಾಣಿಸಿಕೊಂಡಿದ್ದಾಳೆ. ಆದರೆ ಜನಪದರು ತಮ್ಮ ಲೋಕದ ಮೂಲಕವೇ ಅಕ್ಕನನ್ನು ಕಟ್ಟಿಕೊಂಡಿದ್ದಾರೆ. ಅವರಿಗೆ ಅಕ್ಕ ಮಲ್ಲಯ್ಯನ ಮಡದಿಯಾಗಿ, ಮಹಾಶರಣೆಯಾಗಿ ಕಾಣಿಸಿಕೊಂಡಿದ್ದಾಳೆ.
"ಅಕ್ಕನ ಜೀವನ ಚೊಕ್ಕ ಚಿನ್ನದಂತೆ
ಪಕ್ವಾದ ಮಾವಿನ ಫಲದಂತೆ! ಅಕ್ಕವ್ವ
ಮಿಕ್ಯಾಳ ಮೂರು ಲೋಕಕ"
ಎಂಬ ತ್ರಿಪದಿಯಲ್ಲಿ ಅಕ್ಕಮಹಾದೇವಿ ಜನಪದರಿಗೆ ಚೊಕ್ಕ ಚಿನ್ನವಾಗಿ ಕಾಣಿಸಿಕೊಂಡಿದ್ದಾಳೆ. ಪಕ್ವವಾದ ಮಾವಿನ ಹಣ್ಣಿನಂತೆ ಕಾಣಿಸಿದ್ದಾಳೆ. ಮೂರು ಲೋಕದಲ್ಲಿ ಇಂತಹ ಶರಣೆ ಇಲ್ಲವೆಂದು ಜನಪದರು ಅಕ್ಕನನ್ನು ಹಾಡಿಹೊಗಳಿದ್ದಾರೆ.
20ನೇ ಶತಮಾನದ ಆಧುನಿಕ ಸಾಹಿತ್ಯದಲ್ಲಿ ಅಕ್ಕಮಹಾದೇವಿಯನ್ನು ಕುರಿತಂತೆ ಅನೇಕ ಕೃತಿಗಳು ಪ್ರಕಟವಾಗಿವೆ. ಕಾವ್ಯಕೃತಿಗಳು, ಕಾದಂಬರಿಗಳು, ನಾಟಕಗಳು, ಬಿಡಿಕವಿತೆಗಳು ಹೀಗೆ ಆಧುನಿಕ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅಕ್ಕ ಕಾಣಿಸಿಕೊಂಡಿದ್ದಾಳೆ. ಕಾವ್ಯಪ್ರಕಾರದಲ್ಲಂತೂ ಅನೇಕ ಮಹತ್ವದ ಕೃತಿಗಳು ಪ್ರಕಟವಾಗಿವೆ. ಪುಟ್ಟರಾಜ ಗವಾಯಿಗಳ "ಉಡುತಡಿಯ ಅಕ್ಕಮಹಾದೇವಿ ಪುರಾಣ" (೧೯೪೬) ಷಟ್ಟದಿಕಾವ್ಯವಾಗಿದ್ದು 241 ಪುಟಗಳ ವ್ಯಾಪ್ತಿಯಲ್ಲಿದೆ. ಜಯದೇವಿ ತಾಯಿ ಲಿಗಾಡೆಯವರ-" ತಾಯಿಯ ಪದಗಳು" ಮತ್ತೊಂದು ಕೃತಿಯಾಗಿದೆ. ಸಂ.ಶಿ. ಭೂಸನೂರಮಠರ
'ಭವ್ಯಮಾನವ" (೧೯೮೩) 600 ಪುಟಗಳನ್ನೊಳಗೊಂಡ ಆಧುನಿಕ ಮಹಾಕಾವ್ಯವಾಗಿದೆ. ಅಕ್ಕಮಹಾದೇವಿಯ ವ್ಯಕ್ತಿತ್ವ ಇಲ್ಲಿ ವಿವರವಾಗಿ ಮೂಡಿಬಂದಿದೆ. ಈ ಕಾವ್ಯದಲ್ಲಿ ಕಲ್ಯಾಣಕಾಂಡ, ಶ್ರೀಶೈಲಕಾಂಡ ಕತ್ತಲೆಯಕಾಂಡ ಉದಯಕಾಂಡ, ಉಜ್ವಲಕಾಂಡ, ಭವ್ಯಕಾಂಡವೆಂಬ ಆರು ಭಾಗಗಳಿವೆ. ಅಲ್ಲಮಪ್ರಭು, ಅಕ್ಕಮಹಾದೇವಿಯನ್ನು ಅನುಭವಮಂಟಪದಲ್ಲಿ ಎದುರುಗೊಳ್ಳುವ ಪ್ರಸಂಗದಿಂದ ಕಾವ್ಯ ಪ್ರಾರಂಭವಾಗುತ್ತದೆ. ಗುರುದೇವಿ ಹಿರೇಮಠರ "ಅಕ್ಕಮಹಾದೇವಿ ಪುರಾಣ' (೧೯೭೪) ಧಾರವಾಡದ ಶ್ರೀ ಮುರುಘಾಮಠದಿಂದ ಪ್ರಕಟವಾಗಿದೆ. ಇದರಲಿ 9ಸಂಧಿಗಳಿವೆ. ಸದಾನಂದ ಹೋಳಿಕಟ್ಟೆಯವರ "ವಿರಕ್ತಿ ವಿಮುಕ್ತಿ" ಚೌಪದಿಗಳಲ್ಲಿ ರಚನೆಯಾದ ಕಥನಕಾವ್ಯವಾಗಿದೆ. ಪ್ರೊ. ಎಸ್.ಎಸ್. ಕೋತಿನ ಅವರ "ಗಿರಿಯ ಪರಂಜ್ಯೋತಿ" (೧೯೭೨) 447 ತ್ರಿಪದಿಗಳ ಕೃತಿಯಾಗಿದೆ. ಅಕ್ಕಮಹಾದೇವಿಯನ್ನು ಕುರಿತಂತೆ ಹೀಗೆ ಅನೇಕ ಆಧುನಿಕ ಕಾವ್ಯಕೃತಿಗಳು ಪ್ರಕಟವಾಗಿವೆ.
ಭೂಸನೂರ ಮಠದ 'ಭವ್ಯಮಾನವ" ಮಹಾಕಾವ್ಯದ ಕೇಂದ್ರಬಿಂದು ಅಕ್ಕಮಹಾದೇವಿಯಾಗಿದ್ದಾಳೆ. ಇಲ್ಲಿ ಅಕ್ಕ ಪೌರಾಣಿಕ ಪಾತ್ರವಾಗಿ ಬರದೆ, ಆಂತರಿಕ ಸಂವೇದನೆಗಳ ತಳಮಳವಾಗಿ ಕಾಣಿಸಿಕೊಂಡಿದ್ದಾಳೆ. ಹರಿಹರ ಮೊದಲಾದ ನಡುಗನ್ನಡದ ಕವಿಗಳು ಅಕ್ಕನನ್ನು ಒಬ್ಬ ವಿರಾಗಿಣಿಯನ್ನಾಗಿ ಚಿತ್ರಿಸಿದರೆ, ಭೂಸನೂರಮಠರು ಅಕ್ಕನನ್ನು ಅನುಭಾವಿಯನ್ನಾಗಿ ರೂಪಿಸಿದ್ದಾರೆ. ಆದರೆ ಆಧುನಿಕ ಕಾಲದಲ್ಲಿ ಪ್ರಕಟವಾದ ಇತರ ಕಾವ್ಯಕೃತಿಗಳು ಹರಿಹರ, ಚಾಮರಸ, ವಿರೂಪಾಕ್ಷ ಪಂಡಿತ, ರಾಚಕವಿ ಈ ಮೊದಲಾದ ಕವಿಗಳ ಕಾವ್ಯ ಪರಂಪರೆಯ ಮುಂದುವರಿಕೆಯಂತೆ ಕಾಣಿಸುತ್ತವೆ. ಇವರ ಕಾವ್ಯದಲಿ ಅಕ್ಕನ ಮದುವೆಯ ವಿಚಾರವೇ ಮಹತ್ವದ್ದಾಗಿದೆ. ಶೂನ್ಯಸಂಪಾದನೆಗಳಲ್ಲಿ ಸ್ವತಃ ಅಲ್ಲಮಪ್ರಭುವೇ ಅಕ್ಕನ ಮದುವೆಯ ವಿಷಯವನ್ನು ಕೇಳುತ್ತಾನೆ. ಅಕ್ಕನನ್ನು ಪರೀಕ್ಷಿಸಲು ಕಿನ್ನರಿ ಬೊಮ್ಮಯ್ಯನನ್ನು ಕಳಿಸುತ್ತಾನೆ. ಈ ಎಲ್ಲ ಪ್ರಸಂಗಗಳು ಶೂನ್ಯ ಸಂಪಾದನೆಕಾರರ ಸೃಷ್ಟಿಗಳಾಗಿವೆಯೇ ಹೊರತು, ಅಲ್ಲಮ-ಬಸವಣ್ಣ-ಸಿದ್ದರಾಮ ಮೊದಲಾದ ಶರಣರು ಮಹಿಳೆಗೆ ತುಂಬ ಮಹತ್ವದ ಸ್ಥಾನ ಕೊಟ್ಟಿದ್ದಾರೆ. ಶೂನ್ಯ ಸಂಪಾದನೆಕಾರರು ಎಷ್ಟೊಂದು ಕೊಟ್ಟಿ ವಚನಗಳನ್ನು ರಚಿಸಿ ಶರಣರ ಹೆಸರಿನಲ್ಲಿ ಸೇರಿಸಿದ್ದಾರೆಂಬುದನ್ನು ಡಾ. ಎಂ.ಎಂ. ಕಲಬುರಗಿ, ಡಾ. ಬಿ.ವಿ. ಶಿರೂರ, ಡಾ. ಬಸವರಾಜ ಸಬರದ ಅವರು ತಮ್ಮ ಕೃತಿಗಳಲ್ಲಿ ಸ್ಪಷ್ಟಪಡಿಸಿದ್ದಾರೆ. (ನೋಡಿ: "ಶೂನ್ಯಸಂಪಾದನೆ ಪ್ರಸ್ತುತ ಸವಾಲುಗಳು" ಡಾ. ಬಸವರಾಜ ಸಬರದ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೭) ಚಾಮರಸ, ಶೂನ್ಯಸಂಪಾದನೆಕಾರರು, ನೂರೊಂದು ವಿರಕ್ತರು ತಾಳಿದ ನಿಲುವುಗಳನ್ನೇ ಆಧುನಿಕ ಸಂದರ್ಭದ ಪ್ರಾರಂಭದ ಕವಿಗಳು ತಾಳಿದ್ದಾರೆ. ಅಕ್ಕನ ಈ ತೊಳಲಾಟ 12ನೇ ಶತಮಾನದಿಂದ 21ನೇ ಶತಮಾನದವರೆಗೂ ಹಾಗೆಯೇ ಮುಂದುವರೆದುಕೊಂಡು ಬಂದಿದೆ. ಆದರೆ ಅಕ್ಕನನ್ನು ಕುರಿತು ಆಧುನಿಕ ಸಂದರ್ಭದಲ್ಲಿ ನೂರಾರು ಬಿಡಿಕವಿತೆಗಳು ಪ್ರಕಟವಾಗಿವೆ. ಇಂತಹ ಕವಿತೆಗಳಲ್ಲಿ ಅಕ್ಕ ಹೊಸ ರೀತಿಯಿಂದ ಕಾಣಿಸಿಕೊಂಡಿದ್ದಾಳೆ. ಸ್ತ್ರೀವಾದಿ ಕವಯತ್ರಿಯರೆಲ್ಲ ಅಕ್ಕನನ್ನು ಹೋರಾಟಗಾರ್ತಿಯೆಂದು ಚಿತ್ರಿಸಿದ್ದಾರೆ. ಅಕ್ಕನ ಚೆನ್ನಮಲ್ಲಿಕಾರ್ಜುನನಂತೂ ಈ ಕವಯತ್ರಿಯರಿಗೆ ಒಂದು ಆಕರ್ಷಣೆಯಾಗಿ, ಸಂಭ್ರಮವಾಗಿ ಕಾಣಿಸಿಕೊಂಡಿದ್ದಾನೆ. ಕೆಲವು ಕವಯತ್ರಿಯರು ಚೆನ್ನಮಲ್ಲಿಕಾರ್ಜುನನ್ನು ಕೃಷ್ಣನ ರೂಪದಲ್ಲಿ ಕಂಡಿದ್ದಾರೆ. ರಾಧೆಯ ಕೃಷ್ಣಭಕ್ತಿಯನ್ನು ಅಕ್ಕನ ಚೆನ್ನಮಲ್ಲಿಕಾರ್ಜುನನ ಮುಖಾಂತರ ಕಂಡುಕೊಂಡಿದ್ದಾರೆ. ನಿಜವಾದ ಕವಿ; ಈ ಚರಿತ್ರೆ, ಪುರಾಣ, ಮತಧರ್ಮಗಳನ್ನು ಮೀರಿ ಬೆಳೆಯುತ್ತಾನೆಂಬುದಕ್ಕೆ ಅಕ್ಕನನ್ನು ಕುರಿತಾಗಿರುವ ಅನೇಕ ಕವಿಗಳ ಬಿಡಿ ಕವಿತೆಗಳು ಸಾಕ್ಷಿಯಾಗಿವೆ. ನಾನು ಸಂಪಾದಿಸಿರುವ "ಅಕ್ಕ" ಕವನ ಸಂಕಲನವು ಕಲಬುರಗಿಯ ಮಹಾಂತಜ್ಯೋತಿ ಪ್ರಕಾಶನದಿಂದ 1999ರಲ್ಲಿ ಪ್ರಕಟವಾಗಿದೆ. ಈ ಕವನ ಸಂಗ್ರಹದಲ್ಲಿ 69 ಕವಿಗಳ ಕವಿತೆಗಳಿವೆ. ಅವುಗಳಲ್ಲಿ ಕೆಲವು ಕವಿತೆಯ ಸಾಲುಗಳನ್ನು ಇಲ್ಲಿ ನೋಡಬಹುದಾಗಿದೆ.
"ಸರಿಯೆ ಸರಿಕಣೆ ಅಕ್ಕ ಆ ನಿನ್ನ ಈಶ
ತಾ ಮಾತ್ರ ಇದ್ದಲ್ಲೇ ಇದ್ದುಬಿಟ್ಟ ಯಾಕೆ?...."
- ವೈದೇಹಿ (ಪು.೭೦)
"ಅವ್ವ ಕೇಳೇ ನಾನೊಂದು ಕನಸ ಕಂಡೆ
ಕಣ್ಣರೆಪ್ಪೆ ಬಿಗಿಯೆ ಕದತಟ್ಟಿ ಒಳಬಂದ
ಮುಕ್ಕಣ್ಣ ತಾನೆಂದು ಮುಂಗೈಗೆ ಮುತ್ತಿಟ್ಟ
ತುಂಬೆಯ ಹೂ ಬಿಡಿಸಿ ತುರುಬಿಗೆ ಮುಡಿಸಿದ
ಒಂದೊಂದು ಕಿವಿಯಲ್ಲೂ ದುಂಬಿಯ ಇರಿಸಿದ..."
- ಸವಿತಾ ನಾಗಭೂಷಣ (ಪು.೯೭)
"ಬೆಳೆಕು ಮೈನಡೆದಿತ್ತು ಕತ್ತಲೆಯ ಮುಡಿಗೆದರಿ
ಚಿಕ್ಕೆ ಲಜ್ಜೆಯನಿಟ್ಟು ಬಾನ ತುಂಬ
ಬೆಳಗು ಬೆಳಗೊಳು ಬೆರೆದು ಒಲವಿನಲಿ ಮೂಡಿತ್ತು
ಶ್ರೀಶೈಲ ಜೂಟದಲಿ ಚಂದ್ರಬಿಂಬ"
- ಜಿ.ಎಸ್. ಶಿವರುದ್ರಪ್ಪ (ಪು.೭೯)
"ಒಂದಿರುಳಗಲಿದರೆ ತೆಕ್ಕೆ ಸಡಿಲಿದ ಜಕ್ಕವಕ್ಕಿಯಂತಾಗುವ
ಬಂದಪ್ಪಿದರೆ ಅಸ್ಥಿಗಳು ನುಗ್ಗುನುರಿಯಾಗುವ ಆ ನಿನ್ನ ಚೆನ್ನ
ಮಲ್ಲಿಕಾರ್ಜುನನ ನನಗೊಮ್ಮೆ ತೋರಿಸುವೆಯಾ?
ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಆ ಚೆಲುವನನ್ನೊಮ್ಮೆ ಕಳಿಸುವೆಯಾ?"
- ಎಚ್.ಎಸ್. ಮುಕ್ತಾಯಕ್ಕ (ಪು. ೪೫)
ಇಂತಹ ಅನೇಕ ಆಧುನಿಕ ಕವಿತೆಗಳಲ್ಲಿ ಮತ್ತೆ ಅಕ್ಕ ಹೊಸರೂಪ ಧರಿಸಿ ಬಂದಿದ್ದಾಳೆ. ಸಾವಿಲ್ಲದ ಕೇಡಿಲ್ಲದ ಆಕೆಯ ಚೆನ್ನಮಲ್ಲಿಕಾರ್ಜುನನಿಗಾಗಿ ಆಧುನಿಕ ಕವಯತ್ರಿಯರು ಹಂಬಲಿಸಿದ್ದಾರೆ. ನಾನು ಸಂಪಾದಿಸಿದ ಸಂಗ್ರಹದಲ್ಲಿ ಅಕ್ಕನನ್ನು ಕುರಿತು ಅನೇಕ ಸುಂದರ ಕವಿತೆಗಳಿವೆ.
ಆಧುನಿಕ ಸಾಹಿತ್ಯದ ಇತರ ಪ್ರಕಾರಗಳಾದ ಕಾದಂಬರಿ ನಾಟಕಗಳಲ್ಲಿಯೂ ಅಕ್ಕಮಹಾದೇವಿ ಜೀವಂತವಾಗಿದ್ದಾಳೆ. ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರ 'ಕದಳಿಯ ಕರ್ಪುರ", ಬಸವರಾಜ ಕಟ್ಟಿಮನಿಯವರ "ಗಿರಿಯ ನವಿಲು", ಮಾತೆಮಹಾದೇವಿ ಯವರ "ತರಂಗಿಣಿ," ವಿಜಯಕುಮಾರ ಮಹಾನುಭಾವಿಗಳ "ಅಕ್ಕಮಹಾದೇವಿ" ಈ ಮೊದಲಾದ ಕಾದಂಬರಿಗಳು ಅಕ್ಕನ ಜೀವನ ವೃತ್ತಾಂತವನ್ನು ಇಪ್ಪತ್ತನೇ ಶತಮಾನದ ವರ್ತಮಾನಕ್ಕನುಗುಣವಾಗಿ ಕಟ್ಟಿಕೊಡುತ್ತವೆ. ಅಕ್ಕನನ್ನು ಕುರಿತು ಇನ್ನೂ ಕೆಲವು ಕಾದಂಬರಿಗಳು ಪ್ರಕಟವಾಗಿದ್ದರೂ, ಈ ನಾಲ್ಕು ಕಾದಂಬರಿಗಳು ತುಂಬ ಪ್ರಮುಖವಾದವುಗಳಾಗಿವೆ.
ಅಕ್ಕನನ್ನು ಕುರಿತ ಪ್ರಥಮ ಕಾದಂಬರಿಯೆಂದರೆ ಬಸವರಾಜ ಕಟ್ಟಿಮನಿಯವರ "ಗಿರಿಯನವಿಲು," ಇದು 1956ರಲ್ಲಿ ಪ್ರಕಟವಾಗಿದೆ. 'ಕದಳಿ ಕರ್ಪುರ" 1962ರಲ್ಲಿ ಪ್ರಕಟವಾದರೆ, "ತರಂಗಿಣಿ" 1975 ರಲ್ಲಿ ಮುದ್ರಣಗೊಂಡಿದೆ. "ಅಕ್ಕಮಹಾದೇವಿ" ಕಾದಂಬರಿ 1997 ರಲ್ಲಿ ಪ್ರಕಟವಾಗಿದೆ.
ಈ ಕಾದಂಬರಿಯಂತಹ ಸೃಜನಶೀಲ ಸಾಹಿತ್ಯದಲ್ಲಿ ಅಕ್ಕಮಹಾದೇವಿಯ ಚರಿತ್ರೆ ಸಿಗುವುದಿಲ್ಲ. ಚರಿತ್ರೆ ಬರೆಯುವುದು, ಚರಿತ್ರೆಕಾರರ ಕಾರ್ಯವೇ ಹೊರತು ಸೃಜನಶೀಲ ಸಾಹಿತಿಗಳದಲ್ಲ. ಆದರೆ ಈ ಸೃಜನಶೀಲ ಕೃತಿಗಳು, ಹಿಂದಿನ ಚರಿತ್ರೆಯ ವ್ಯಕ್ತಿಗಳನ್ನು ವರ್ತಮಾನದಲ್ಲಿ ಸೃಷ್ಟಿಸುತ್ತವೆ. ಅಕ್ಕ 12ನೇ ಶತಮಾನದಲ್ಲಿ ಜನಿಸಿದ್ದರೂ 20ನೇ ಶತಮಾನದ ಸೃಜನಶೀಲ ಲೇಖಕನೊಂದಿಗೆ ಮತ್ತೆ ಜೀವಂತವಾಗುತ್ತಾಳೆ. ಹೊಸರೂಪ ತೊಟ್ಟುಕೊಂಡು ಬರುತ್ತಾಳೆ. ಹೀಗಾಗಿ ಒಬ್ಬ ಕವಿಯ ಸಾಂಸ್ಕೃತಿಕ ಸಾಧ್ಯತೆಗಳನ್ನು ಸೃಜನಶೀಲ ಕೃತಿಗಳು ಹೇಳುತ್ತವೆ.
"ಗಿರಿಯನವಿಲು" ಕಾದಂಬರಿಯಲ್ಲಿ ಅಕ್ಕಮಹಾದೇವಿಯ ತಾಯಿ-ತಂದೆಗಳು ಸುಮತೀದೇವಿ-ನಿರ್ಮಲ ಶೆಟ್ಟಿಯರಾಗಿದ್ದರೆಂದು ಹೇಳಲಾಗಿದೆ. ಆದರೆ ತಿಪ್ಪೇರುದ್ರಸ್ವಾಮಿ, ಮಾತೆಮಹಾದೇವಿ, ವಿಜಯಕುಮಾರ ಮಹಾನುಭಾವಿಗಳು ತಮ್ಮ ಕಾದಂಬರಿಗಳಲ್ಲಿ ಓಂಕಾರಶೆಟ್ಟಿ - ಲಿಂಗಮ್ಮ ಅಕ್ಕನ ತಂದೆ-ತಾಯಿಗಳೆಂದು ತಿಳಿಸಿದ್ದಾರೆ. ಕೌಶಿಕನೊಂದಿಗೆ ಅಕ್ಕನ ಮದುವೆಯಾದುದದರ ಬಗೆಗೆ ಈ ಕಾದಂಬರಿಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಬಸವರಾಜ ಕಟ್ಟಿಮನಿಯವರು ಈ ವಿಷಯದಲ್ಲಿ ಹರಿಹರನನ್ನು ಅನುಸರಿಸಿದರೆ, ಉಳಿದ ಮೂವರು ಕಾದಂಬರಿಕಾರರು ಚಾಮರಸನು ಹೇಳಿರುವ ವಿಚಾರಗಳನ್ನೇ ಒಪ್ಪಿದ್ದಾರೆ. ಸಾಂಸಾರಿಕ ಜೀವನದಲ್ಲಿ ಅಕ್ಕ ತೊಡಗಿಸಿಕೊಳ್ಳಲಿಲ್ಲವೆಂದು ಈ ಮೂವರು ಕಾದಂಬರಿಕಾರರು ಹೇಳಿದ್ದಾರೆ. ಸಾಮಾನ್ಯವಾಗಿ ಐತಿಹಾಸಿಕ ಕಾದಂಬರಿಗಳ ಉದ್ದೇಶವು ಇತಿಹಾಸದ ಚೌಕಟ್ಟಿನಲ್ಲಿ ವರ್ತಮಾನವನ್ನು ಕಟ್ಟುವದಾಗಿರುತ್ತದೆ. ಆದುದರಿಂದ ಆಧುನಿಕ ಸಾಹಿತ್ಯ ಕೃತಿಗಳು ಮುಖ್ಯವಾಗುತ್ತವೆ.
ಅಕ್ಕಮಹಾದೇವಿಯನ್ನು ಕುರಿತು ಅನೇಕ ನಾಟಕಗಳು ಪ್ರಕಟವಾಗಿವೆ. ಅವುಗಳ ವಿವರವನ್ನಿಲ್ಲಿ ನೋಡಬಹುದಾಗಿದೆ.
೧) ರಂ. ಶ್ರೀ ಮುಗುಳಿ - ಅಕ್ಕಮಹಾದೇವಿ (೧೯೩೩)
೨) ತಲ್ಲೂರು ರಾಯನಗೌಡ - ಅಕ್ಕಮಹಾದೇವಿ (೧೯೩೮)
೩) ಕಂಠಿ ಸಿದ್ದಲಿಂಗಪ್ಪ - ವಿರಾಗಿಣಿ (೧೯೪೧)
೪) ಬಿ. ಪುಟ್ಟಸ್ವಾಮಯ್ಯ - ಅಕ್ಕಮಹಾದೇವಿ (೧೯೪೬)
೫) ಪುಟ್ಟರಾಜ ಗವಾಯಿಗಳು - ಶಿವಶರಣೆ ಅಕ್ಕಮಹಾದೇವಿ (೧೯೪೬)
೬) ಬಿ.ವಿ. ಶಿವಲಿಂಗಪ್ಪ - ಅಕ್ಕಮಹಾದೇವಿ (೧೯೫೬)
೭) ಟಿ.ಎಚ್.ಎಂ. ಸದಾಶಿವಯ್ಯ - ಅಕ್ಕನ ಹಂಬಲ (೧೯೫೮)
೮) ಸಿ.ಜೆ. ವಿರಕ್ತಮಠ - ಅಕ್ಕನ ಆದರ್ಶ (೧೯೫೮)
೯) ಮುಧೋಳ ಮೃತ್ಯುಂಜಯ ಮಹಾಸ್ವಾಮಿಗಳು - ಚಿಜ್ಯೋತಿ (೧೯೭೪)
೧೦) ಸುಲೋಚನಾ ಆರಾಧ್ಯ – ತಪಸ್ವಿನಿ (೧೯೭೬)
೧೧) ತರಳಬಾಳು ಹಿರಿಯ ಜಗದ್ಗುರುಗಳು - ಶರಣಸತಿ ಲಿಂಗಪತಿ (೧೯೮೧)
೧೨) ಎಸ್. ಚಿದಾನಂದ - ದಿವ್ಯಾಂಬರಿ (೨೦೦೧)
೧೩) ವಿ. ಸಿದ್ದರಾಮಣ್ಣ - ವೀರವಿರಾಗಿಣಿ ಅಕ್ಕಮಹಾದೇವಿ (೨೦೦೬)
೧೪) ಜಿ.ವಿ. ರೇಣುಕಾ - ಉಡುತಡಿಯ ಮಲ್ಲಿಗೆ (೨೦೦೮)
೧೫) ಅಕ್ಕನಬಳಗ, ಮುರಘಾಮಠ, ಧಾರವಾಡ - ಉಡುತಡಿಯ ಜ್ಯೋತಿ (೨೦೦೮)
೧೬) ಕಲಾ ಮಂಜುನಾಥ - ದಿಗಂಬರೆ ದಿವ್ಯವಸ್ತಾಂಬರೆ (೨೦೧೬)
ಹೀಗೆ ಅಕ್ಕಮಹಾದೇವಿಯನ್ನು ಕುರಿತು ಅನೇಕ ನಾಟಕಗಳು ಪ್ರಕಟವಾಗಿವೆ. ಕೆಲವು ರೂಪಕಗಳು ಆಕಾಶವಾಣಿ ಕೇಂದ್ರಗಳಿಂದ ಬಿತ್ತರಗೊಂಡಿವೆ. ಈ ಎಲ್ಲ ನಾಟಕಗಳ ಬಗೆಗೆ ಬರೆಯುವುದು ಇಲ್ಲಿಯ ಉದ್ದೇಶವಲ್ಲ. ಈ ನಾಟಕಗಳಲ್ಲಿ ಅಕ್ಕ ಹೇಗೆ ಹೊಸ ರೂಪ ತೊಟ್ಟುಕೊಂಡು ಬಂದಿದ್ದಾಳೆಂಬುದನ್ನು ಗುರುತಿಸುವುದು ಮುಖ್ಯವಾಗಬೇಕು. ಅಕ್ಕನನ್ನು ಕುರಿತು ಪ್ರಕಟವಾಗಿರುವ ನಾಟಕಗಳಲ್ಲಿ ರಂ.ಶ್ರೀ. ಮುಗುಳಿ ಅವರ "ಅಕ್ಕಮಹಾದೇವಿ" ನಾಟಕ ಪ್ರಥಮ ನಾಟಕವಾಗಿದೆ. ಕಲಾ ಮಂಜುನಾಥ ಅವರ "ದಿಗಂಬರೆ ದಿವ್ಯ ವಸ್ತಾಂಬರೆ" ಇತ್ತೀಚಿನ ವರ್ಷಗಳಲ್ಲಿ ಪ್ರಕಟವಾದ ನಾಟಕವಾಗಿದೆ. ಇವುಗಳಲ್ಲಿ ವೃತ್ತಿ ನಾಟಕಗಳು, ಹವ್ಯಾಸಿ ನಾಟಕಗಳು, ಗೀತ ನಾಟಕಗಳು ಎಲ್ಲಾ ಸೇರಿಕೊಂಡಿವೆ.
ಈ ಎಲ್ಲ ನಾಟಕಗಳ ಕಥಾವಸ್ತುವನ್ನು ವಿವರಿಸುವುದು ಇಲ್ಲಿಯ ಉದ್ದೇಶವಲ್ಲ. ಕೆಲವು ನಾಟಕಕಾರರು ಅಕ್ಕಮಹಾದೇವಿಯ ಜೀವನಚರಿತ್ರೆಗೆ ಸಂಬಂಧಿಸಿದಂತೆ ಕೆಲವು ಸಂಗತಿಗಳನ್ನು ತಿಳಿಸಿದ್ದಾರೆ. ಅಂತವುಗಳನ್ನು ಗಮನಿಸಬೇಕಾಗುತ್ತದೆ. ಅಕ್ಕಮಹಾದೇವಿ ಕೌಶಿಕ ರಾಜನನ್ನು ಮೊದಲಬಾರಿಗೆ ವೈಹಾಳಿಯ ಸಂದರ್ಭದಲ್ಲಿ ನೋಡುತ್ತಾಳೆ. ಪುರಾಣ ಕವಿಗಳು ಈ ವಿಷಯವನ್ನು ತಿಳಿಸಿದ್ದಾರೆ. ಆದರೆ ರಂ. ಶ್ರೀ ಮುಗುಳಿಯವರ ನಾಟಕದಲ್ಲಿ ಕೌಶಿಕನು ಅಕ್ಕಮಹಾದೇವಿಗೆ ನೇರವಾಗಿ ಓಲೆ ಬರೆದು ಕಳಿಸಿ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ. ಅಕ್ಕಮಹಾದೇವಿಯ ವಚನಗಳಿಂದ ಅಭಿವ್ಯಕ್ತವಾಗುವ ಅಕ್ಕನ ಅಂತರಂಗದ ತೊಳಲಾಟ ಮತ್ತು ಆಕೆಯ ಆಧ್ಯಾತ್ಮದ ಸಾಧನೆಯನ್ನು ತನ್ನ ನಾಟಕದಲ್ಲಿ ಪ್ರಕಟಿಸಿದ್ದೇನೆಂದು ಬಿ. ಪುಟ್ಟಸ್ವಾಮಯ್ಯ ತಮ್ಮ ನಾಟಕದ ಪ್ರಾರಂಭದಲ್ಲಿ ಹೇಳಿದ್ದಾರೆ. ಇವರ “ಅಕ್ಕಮಹಾದೇವಿ” ನಾಟಕವನ್ನು ಗುಬ್ಬಿ ವೀರಣ್ಣನವರು ತಮ್ಮ ಗುಬ್ಬಿ ಕಂಪನಿಯಿಂದ ಪ್ರಯೋಗ ಮಾಡಿದ್ದಾರೆ. ಪುಟ್ಟರಾಜ ಗವಾಯಿಗಳು ಹರಿಹರ ಕವಿಯ ಕಾವ್ಯದ ಪ್ರಭಾವದಿಂದ ಪೌರಾಣಿಕ ದೃಷ್ಟಿಯಿಂದ ಅಕ್ಕನನ್ನು ಕಂಡಿದ್ದಾರೆ.
ಹಿಂದಿನ ಕವಿಗಳ ಕಾವ್ಯದ ಅಧ್ಯಯನದಿಂದ ಮತ್ತು ಅಕ್ಕನ ವಚನಗಳ ಅಧ್ಯಯನದಿಂದ ತಾವು ಅಕ್ಕನ ಬಗ್ಗೆ ನಾಟಕ ರಚಿಸಿರುವುದಾಗಿ ಬಿ.ವಿ. ಶಿವಲಿಂಗಪ್ಪ ಹೇಳಿದ್ದಾರೆ. ಅಕ್ಕನ ಆಧ್ಯಾತ್ಮಿಕ ಜೀವನಕ್ಕೆ ಕಳಂಕ ಬಾರದಂತೆ ನಾಟಕ ರಚಿಸಿರುವುದಾಗಿ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಹೇಳಿದ್ದಾರೆ. ಸದಾಶಿವಯ್ಯನವರ "ಅಕ್ಕಮಹಾದೇವಿ' ದೀರ್ಘ ನಾಟಕವಾಗಿದ್ದು, ಈ ನಾಟಕಕ್ಕೆ ಡಾ. ವಿ.ಕೆ. ಗೋಕಾಕ ಅವರು ಮುನ್ನುಡಿ ಬರೆದಿದ್ದಾರೆ. ಅಕ್ಕನ ವಚನಗಳನ್ನಾಧರಿಸಿಯೇ ಈ ನಾಟಕ ರಚನೆಗೊಂಡಿದೆ. ಮೃತ್ಯುಂಜಯ ಮಹಾಸ್ವಾಮಿಗಳ 'ಚಿಜ್ಯೋತಿ" ನಾಟಕವು ಸಂಗೀತ ನಾಟಕವಾಗಿದೆ.
ಸ್ತ್ರೀಯ ಮುಂದೆ ಪುರುಷ ಮಾಯೆಯಾಗಿ ಈ ನಾಟಕದಲ್ಲಿ ಕಾಣಿಸಿಕೊಂಡಿದ್ದಾನೆ. ಇಲ್ಲಿ ಕೌಶಿಕನೇ ಮಾಯೆಯಾಗಿ ಕಾಣಿಸಿಕೊಂಡಿದ್ದಾನೆ. ಸುಲೋಚನಾ ಆರಾಧ್ಯ ಅವರ "ತಪಸ್ವಿನಿ" ಗೀತನಾಟಕವಾಗಿದೆ. ಮಹಾದೇವಿಯ ಮೌಲ್ಯಗಳ ಪ್ರತಿಪಾದನೆ ಇಲ್ಲಿದೆ. ಸಿರಿಗೆರೆಯ ಹಿರಿಯ ಜಗದ್ಗುರುಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ರಚಿಸಿರುವ 'ಶರಣಸತಿ ಲಿಂಗಪತಿ' ನಾಟಕದಲ್ಲಿ ಪ್ರಧಾನ ಪಾತ್ರವೇ ಮಹಿಳೆಯಾಗಿದ್ದಾಳೆ. ಈ ನಾಟಕದ ಅಕ್ಕ, ಶರಣಸತಿ ಲಿಂಗಪತಿ ಭಾವವನ್ನು ಮೆರೆದಿದ್ದಾಳೆ. ಶಿವಲಿಂಗಪ್ಪನವರ ಅಕ್ಕಮಹಾದೇವಿ ನಾಟಕದಲ್ಲಿ ಅನುಭವ ಮಂಟಪದ ಚರ್ಚೆಯಿದ್ದರೆ, ಕಂಠಿ ಸಿದ್ದಪ್ಪನವರ “ವಿರಾಗಿಣಿ' ನಾಟಕದಲ್ಲಿ ಅಕ್ಕನ ಬಿಡುಗಡೆಯ ದಾರಿ ಕಾಣಿಸುತ್ತದೆ. ಸುಲೋಚನಾ ಆರಾಧ್ಯ ಅವರಿಗೆ ಅಕ್ಕ ತಪಸ್ವಿನಿಯ ಹಾಗೆ ಕಂಡರೆ, ಜಿ.ವಿ. ರೇಣುಕಾ ಅವರಿಗೆ ಅಕ್ಕ ಉಡುತಡಿಯ ಮಲ್ಲಿಗೆಯಾಗಿ ಕಾಣಿಸಿದ್ದಾಳೆ. ಕಲಾ ಮಂಜುನಾಥ ಅವರಿಗೆ ಮಹಾದೇವಿಯಕ್ಕ ಕಾರಣಿಕ ಶಿಶುವಾಗಿ ಕಂಡಿದ್ದಾಳೆ. ಕೌಶಿಕ ಮತ್ತು ಅಕ್ಕನ ಸಂಬಂಧವನ್ನು ಈ ನಾಟಕಕಾರ್ತಿ ತಾಯಿ ಮಗುವಿನ ಸಂಬಂಧಕ್ಕೆ ಹೋಲಿಸಿದ್ದಾಳೆ. ಹೀಗೆ ಈ ನಾಟಕಗಳು ವಿಶಿಷ್ಟವಾಗಿವೆ.
ಅಕ್ಕಮಹಾದೇವಿ ರಚಿಸಿರುವ ಸಾಹಿತ್ಯ ಕುರಿತು ಒಂದಿಷ್ಟು ಹೇಳಲೇಬೇಕಾಗುತ್ತದೆ. ಅಕ್ಕ ಬಹುದೊಡ್ಡ ಶರಣೆಯಾಗಿರುವಂತೆ, ಬಹುಮಹತ್ವದ ವಚನಕಾರ್ತಿಯೂ ಆಗಿದ್ದಾಳೆ. 'ಚೆನ್ನಮಲ್ಲಿಕಾರ್ಜುನ" ಅಂಕಿದಲ್ಲಿ ಅಕ್ಕ 434 ವಚನಗಳನ್ನು ರಚಿಸಿದ್ದಾಳೆ. ವಚನಗಳ ಜತೆಗೆ ಸ್ವರವಚನಗಳನ್ನೂ ಅಕ್ಕ ರಚನೆ ಮಾಡಿದ್ದಾಳೆ. ಇವುಗಳ ಜತೆಗೆ "ಯೋಗಾಂಗ ತ್ರಿವಿಧಿ", "ಸೃಷ್ಟಿಯ ವಚನಗಳು", ಮಂತ್ರಗೋಪ್ಯ'ದಂತಹ ಕೃತಿಗಳು ಪ್ರಕಟವಾಗಿವೆ. ಅಕ್ಕನ ವಚನಗಳು ಸಂಖ್ಯೆಯಲ್ಲಿ ಅಧಿಕವಾಗಿರುವಂತೆ, ಸತ್ವಯೂತವೂ ಆಗಿವೆ. ಕಾವ್ಯದ ಅನನ್ಯತೆಯ ದೃಷ್ಟಿಯಿಂದ ಅಕ್ಕನ ವಚನಗಳು ಹೊಸ ಮಾದರಿಗಳಾಗಿ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಂಡಿವೆ. ಅಕ್ಕನ ವಚನಗಳಲ್ಲಿಯೇ ಆಕೆಯ ಬದುಕಿನ ಕೆಲವು ಪ್ರಸಂಗಗಳು ಕಾಣಿಸಿಕೊಂಡಿವೆ. ಅವು ಚಾರಿತ್ರಿಕವಾಗಿ ಮುಖ್ಯವಾಗಿರುವುದರಿಂದ ಅವುಗಳಲ್ಲಿ ಕೆಲವು ವಚನಗಳನ್ನಿಲ್ಲಿ ಗಮನಿಸಬಹುದಾಗಿದೆ.
"ಹುಟ್ಟಿದೆ ಶ್ರೀ ಗುರುವಿನ ಹಸ್ತದಲ್ಲಿ
ಬೆಳೆದೆನು ಅಸಂಖ್ಯಾತರ ಕರುಣದೊಳಗೆ..."
(ವ-೪೨೬)
ಹರಿಹರ ಮೊದಲಾದ ಕವಿಗಳು, ಅಕ್ಕಮಹಾದೇವಿ ಉಡುತಡಿಯಲ್ಲಿ ನಿರ್ಮಲಸುಮತಿಯ ದಂಪತಿಗಳಿಗೆ ಮಗಳಾಗಿ ಹುಟ್ಟಿದಳೆಂದು ಹೇಳಿದರೆ, ಅಕ್ಕ ತನ್ನ ನಿಜವಾದ ಹುಟ್ಟು ಯಾವುದು, ಅದು ಎಲ್ಲಿ ಆಯಿತೆಂಬುದನ್ನು ಈ ವಚನದಲ್ಲಿ ಹೇಳಿಕೊಂಡಿದ್ದಾಳೆ. ಗುರುವಿನ ಹಸ್ತದಲ್ಲಿ ಹುಟ್ಟಿದೆ. ಅಸಂಖ್ಯಾತರ ಕಾರಣ್ಯದಲ್ಲಿ ಬೆಳೆದೆ ಎಂದು ಹೇಳಿರುವ ಮಾತು ಸಣ್ಣದಲ್ಲ. ಅವರೆಲ್ಲರೂ ತನಗೆ ಭಾವವೆಂಬ ಹಾಲನ್ನು, ಸುಜ್ಞಾನವೆಂಬ ತುಪ್ಪವನ್ನು, ಪರಮಾರ್ಥವೆಂಬ ಸಕ್ಕರೆಯನಿಕ್ಕಿದರೆಂದು ಮುಂದಿನ ಸಾಲುಗಳಲ್ಲಿ ಹೇಳಿದ್ದಾಳೆ.
"ಬಸವಣ್ಣನ ಮನೆಯ ಮಗಳಾದ ಕಾರಣ, ಭಕ್ತಿ ಪ್ರಸಾದವ ಕೊಟ್ಟನು. ಸಿದ್ದರಾಮಯ್ಯನ ಶಿಶುಮಗಳಾದ ಕಾರಣ ನಿರ್ಮಲ ಪ್ರಸಾದವ ನಿಶ್ಚೈಸಿಕೊಟ್ಟನು. ಇಂತೀ ಅಸಂಖ್ಯಾತ ಗಣಂಗಳೆಲ್ಲರು ತಮ್ಮ ಕರುಣೆಯ ಕಂದನೆಂದು ತಲೆದಡಹಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಶ್ರೀಪಾದಕ್ಕೆ ಯೋಗ್ಯಳಾದೆನೆಂದು (ವ-೨೯೮)" ತನ್ನ ವಚನದಲ್ಲಿ ಹೇಳಿಕೊಂಡಿದ್ದಾಳೆ. ಅಕ್ಕನ ಮದುವೆ ಕೌಶಿಕನೊಡನಾಗಿತ್ತೆಂದು ಈ ಕವಿಗಳು ಹೇಳಿದರೆ, ತನ್ನ ಮದುವೆ ಯಾರೊಡನೆ ಆಗಿತ್ತೆಂಬುದನ್ನು ಅಕ್ಕ ಹೀಗೆ ಹೇಳಿದ್ದಾಳೆ.
"ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ,
ಪವಳದ ಚಪ್ಪರವಿಕ್ಕಿ, ಮುತ್ತು ಮಾಣಿಕದ ಮೇಲುಕಟ್ಟ ಕಟ್ಟಿ
ಮದುವೆ ಮಾಡಿದರು, ಎಮ್ಮವರೆನ್ನ ಮದುವೆ ಮಾಡಿದರು
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆ ಮಾಡಿದರು"
ಈ ವಚನದಲ್ಲಿ ತನ್ನ ಮದುವೆ ಚೆನ್ನಮಲ್ಲಿಕಾರ್ಜುನನೊಡನೆ ಆಗಿತ್ತೆಂದು ಸ್ಪಷ್ಟಪಡಿಸಿದ್ದಾಳೆ. ಹರಿಹರ, ಚಾಮರಸ ಮೊದಲಾದ ಕವಿಗಳು ಅಕ್ಕಮಹಾದೇವಿಯು ಉಡುತಡಿಯಲ್ಲಿ ಜನಿಸಿದಳು, ಕೌಶಿಕನನ್ನು ಮದುವೆಯಾಗಿದ್ದಳೆಂದು ಹೇಳಿದರೆ, ಅಕ್ಕಮಹಾದೇವಿ ತಾನು ಗುರುವಿನ ಹಸ್ತದಲ್ಲಿ ಹುಟ್ಟಿರುವುದಾಗಿಯೂ, ತನ್ನ ಪತಿ ಚೆನ್ನಮಲ್ಲಿಕಾರ್ಜುನನೆಂದೂ ಹೇಳಿದ್ದಾಳೆ. ಹರಿಹರ ಮೊದಲ ಕವಿಗಳು ಅಕ್ಕನ ಇಹದ ಬಗೆಗೆ ಹೇಳಿದರೆ, ಅಕ್ಕ ಮಾತ್ರ ತನ್ನ ಪಾರಮಾರ್ಥಿಕ ಜೀವನಚರಿತ್ರೆಯನ್ನು ತನ್ನ ವಚನಗಳ ಮೂಲಕ ಕಟ್ಟಿಕೊಟ್ಟಿದ್ದಾಳೆ.
ಅಕ್ಕಮಹಾದೇವಿ ಕೌಶಿಕನನ್ನು ತೊರೆದು ಕಲ್ಯಾಣದ ಕಡೆಗೆ ಹೊರಟಾಗ ಅವಳು ಏಕಾಂಗಿಯಾಗಿದ್ದಳು. ಜೀವನದಲ್ಲಿ ಜಿಗುಪ್ಸೆಗೊಂಡಿದ್ದಳು. ಪತಿಯನ್ನೂ ಪ್ರಭುವನ್ನೂ ಏಕಕಾಲಕ್ಕೆ ತಿರಸ್ಕರಿಸಿ ಬಂದಿದ್ದ ಅವಳು ಮುಂದೆಇಟ್ಟ ಹೆಜ್ಜೆಯನ್ನು ಹಿಂದೆ ಇಡಲಿಲ್ಲ.
"ಹಸಿವಾದೊಡೆ ಊರೊಳಗೆ ಭಿಕ್ಷಾನ್ನಗಳುಂಟು.
ತೃಷೆಯಾದಡೆ ಕೆರೆಹಳ್ಳ ಭಾವಿಗಳುಂಟು
ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು
ಶಯನಕ್ಕೆ ಹಾಳುದೇಗುಲಗಳುಂಟು
ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನನಗುಂಟು" (ವ-೪೧೩)
"ಆರೂ ಇಲ್ಲದವಳೆಂದು ಅಳಿಗೊಳಲುಬೇಡ ಕಂಡಯ್ಯಾ
ಏನ ಮಾಡಿದರೂ ಆನಂಜುವವಳಲ್ಲ..." (ವ-೬೪)
"ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ?...” (ವ-೩೦೭)
"ಕಿಡಕಿಡಿ ಕೆದರಿದಡೆ, ಎನಗೆ ಹಸಿವು ತೃಷೆಯಡಗಿತೆಂಬೆನು
ಮುಗಿಲು ಹರಿದುಬಿದ್ದಡೆ ಎನಗೆ ಮಜ್ಜನಕ್ಕೆರೆದರೆಂಬೆನು....” (ವ-೧೭೨)
ಈ ಎಲ್ಲ ವಚನಗಳಲ್ಲಿ ಅಕ್ಕ ಅನುಭವಿಸಿದ ನೋವು ಸಂಕಟಗಳು ಪ್ರಕಟವಾಗಿವೆ. ಆದರೆ ಆಕೆ ಯಾವುದಕ್ಕೂ ಅಂಜದೆ, ಅಳುಕದೆ ಮುನ್ನಡೆದಿದ್ದಾಳೆ, ತಾನು ನಂಬಿದ ತತ್ವಕ್ಕೆ ಬದ್ಧಳಾಗಿದ್ದಾಳೆ. ಹಸಿವು, ತೃಷೆಗಳನ್ನು ಲೆಕ್ಕಿಸದೆ ಮುಂದೆ ಸಾಗಿದ್ದಾಳೆ. ಅಕ್ಕನ ಬದುಕಿನಲ್ಲಿ ನಡೆದ ಇಂತಹ ಅನೇಕ ಪ್ರಸಂಗಗಳು ಆಕೆಯ ವಚನಗಳಲ್ಲಿ ಉಲ್ಲೇಖವಾಗಿವೆ. ಹೀಗಾಗಿ ಆಕೆಯ ಇಂತಹ ಕೆಲವು ವಚನಗಳೇ ಆಕೆಯ ಚರಿತ್ರೆಯ ಆಕರಗಳಾಗಿವೆ.
"ಅಜಕೋಟಿ ಕಲ್ಪವರುಷದವರೆಲ್ಲರೂ ಹಿರಿಯರೇ?
ಹುತ್ತರಿ ಬೆತ್ತಬೆಳೆದ ತಪಸ್ವಿಗಳೆಲ್ಲರೂ ಹಿರಿಯರೆ?....” (ವ-೫೪)
"ನಡೆಯದ ನುಡಿಗಡಣ ಮಾಡದ ಕಲಿತನ
ಚಿತ್ರದ ಸತಿಯ ಶೃಂಗಾರವದೇತಕ್ಕೆ ಪ್ರಯೋಜನ?" (ವ-೨೪೮)
"ಹಾಲಹಿಡಿದು ಬೆಣ್ಣೆಯನರಸಲುಂಟೆ?
ಲಿಂಗವಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ?" (ವ-೪೧೭)
ಇಂತಹ ಅನೇಕ ವಚನಗಳಲ್ಲಿ ಅಕ್ಕ ತನ್ನ ಕಡುಕಷ್ಟದ ಬದುಕಿನಲ್ಲಿ ಕಂಡುಕೊಂಡ ಅನುಭವಗಳು ಹೇಗಿದ್ದವೆಂಬುದನ್ನು ಹೇಳಿದ್ದಾಳೆ. ಒಂದು ಹೆಣ್ಣು, ತವರುಮನೆ ಗಂಡನ ಮನೆ ತೊರೆದು ಹೊರಹೋದಾಗ ಎಂತಹ ಸಂಕಷ್ಟಗಳು ಬರುತ್ತವೆ, ಎಂತಹ ಸಮಸ್ಯೆ ಗಳೆದುರಾಗುತ್ತವೆಂಬುದನ್ನು ಅಕ್ಕ, ತನ್ನ ಈ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾಳೆ.
ಅಕ್ಕಮಹಾದೇವಿಯ ಜೀವನ ತುಂಬ ವಿಶಿಷ್ಟವಾದುದಾಗಿದೆ. ಅವಳ ಬದುಕಿನಲ್ಲಿ ಮೂರು ಮಹತ್ವದ ಘಟ್ಟಗಳು ಕಾಣಿಸಿಕೊಳ್ಳುತ್ತವೆ. ಕೌಶಿಕನೊಂದಿಗೆ ಮದುವೆಯಾದ ಪ್ರಸಂಗ ಮೊದಲನೆಯದು. ಇಲ್ಲಿ ಅವಳು ಸುಂದರ ತರುಣಿಯಾಗಿದ್ದಳು. ಲೋಕದ ಕಪಟತನ ತಿಳಿಯದವಳಾಗಿದ್ದಳು. ತನ್ನ ತಂದೆ-ತಾಯಿಗಳಿಗೆ ಕೌಶಿಕ ಮರಣದಂಡನೆ ಕೊಟ್ಟಾನು ಎಂಬ ಭಯದಿಂದ ಮದುವೆಗೆ ಒಪ್ಪುತ್ತಾಳೆ. ಆದರೆ ಮದುವೆಗೆ ಮುನ್ನ ಕರಾರು ಹಾಕುತ್ತಾಳೆ ಆ ಕರಾರುಗಳನ್ನು ಕೌಶಿಕ ಮುರಿದಾಗ, ಆಕೆಯ ಸ್ವಾಭಿಮಾನಕ್ಕೆ ಧಕ್ಕೆ
ಬಂದಾಗ ಅರಮನೆ ತೊರೆದು ಹೊರಟು ಹೋಗುತ್ತಾಳೆ. ಅವಳ ಬದುಕಿನ ಪ್ರಾರಂಭದ ಘಟ್ಟವೇ ದುರಂತದಿಂದ ಕೂಡಿದೆ. ಅಕ್ಕ ಕಲ್ಯಾಣವನ್ನು ಪ್ರವೇಶಿಸಿದಾಗ ಆಕೆಯ ಬದುಕಿನ ಎರಡನೇ ಘಟ್ಟ ಪ್ರಾರಂಭವಾಗುತ್ತದೆ. ಅನುಭವ ಮಂಟಪದಲ್ಲಿ ಹೋಗಿ ನಿಂತಾಗ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಆ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ ಅಕ್ಕ ಅನುಭವ ಮಂಟಪದ ಪ್ರಮುಖ ಭಾಗವಾಗಿ ಬೆಳೆಯುತ್ತಾಳೆ. ಅಕ್ಕನಿಲ್ಲದ ಅನುಭವ ಮಂಟಪ ವ್ಯರ್ಥವೆಂಬ ಹಂತಕ್ಕೆ ಬೆಳೆದು ನಿಲ್ಲುತ್ತಾಳೆ. ಶರಣರು ಆಕೆಯ ಪಾದಕ್ಕೆ ನಮೋ ನಮೋ ಎಂದು ನಮಿಸುತ್ತಾರೆ. ಉಡುತಡಿಯಿಂದ ಅವಮಾನಿತಳಾಗಿ ಬಂದ ಅಕ್ಕ, ಕಲ್ಯಾಣದಲ್ಲಿ ಎಲ್ಲರ ಗೌರವಕ್ಕೆ ಕಾರಣಳಾಗುತ್ತಾಳೆ. ಆಕೆಯ ಆಧ್ಯಾತ್ಮ ಸಾಧನೆಗೆ ಮತ್ತು ಸಾಹಿತ್ಯ ಸಾಧನೆಗೆ ಕಲ್ಯಾಣವು ಕೇಂದ್ರವಾಗುತ್ತದೆ. ಇದು ಆಕೆಯ ಬದುಕಿನ ಪ್ರಮುಖ ಘಟ್ಟವಾಗಿದೆ. ಕಲ್ಯಾಣವನ್ನು ಬಿಟ್ಟು ಚೆನ್ನಮಲ್ಲಿಕಾರ್ಜುನನ್ನು ಹುಡುಕುತ್ತಾ ಅಕ್ಕ ಶ್ರೀಶೈಲಕ್ಕೆ ಹೋಗುತ್ತಾಳೆ. ಶ್ರೀಶೈಲದಲ್ಲಿ ಯೋಗಸಾಧನೆ ಮಾಡಿ "ಯೋಗಾಂಗ ತ್ರಿವಧಿ", "ಮಂತ್ರಗೋಪ್ಯ" ಕೃತಿಗಳನ್ನು ರಚಿಸುತ್ತಾಳೆ. ತನ್ನೊಳಗಡೆಯೇ ಚೆನ್ನಮಲ್ಲಿಕಾರ್ಜುನನ್ನು ಕಂಡುಕೊಂಡ ಅಕ್ಕ ಕದಳಿಯ ಬನ ಪ್ರವೇಶಿಸಿ ಬಯಲಲ್ಲಿ ಬಯಲಾಗುತ್ತಾಳೆ. ಇಂದಿಗೂ ಬಯಲ ಬೆಳಕಾಗಿ ಕಾಣಿಸಿಕೊಂಡಿದ್ದಾಳೆ. ಇದು ಆಕೆಯ ಬದುಕಿನ ಮೂರನೇ ಘಟ್ಟವಾಗಿದೆ.
ಅಕ್ಕಮಹಾದೇವಿಯ ರಚನೆಗಳ ಬಗೆಗೆ ಸಂಕ್ಷಿಪ್ತವಾಗಿ ಇಲ್ಲಿ ಉಲ್ಲೇಖಿಸಲಾಗಿದೆ. ಅಕ್ಕನ 434 ವಚನಗಳು ಪ್ರಕಟವಾಗಿವೆ. ಈ ವಚನಗಳನ್ನು ಕುರಿತು ನೂರಾರು ಲೇಖನಗಳು, ಹಲವಾರು ಕೃತಿಗಳು ಪ್ರಕಟವಾಗಿವೆ. ಈ ಕೃತಿಯ ಎರಡನೇ ಭಾಗದಲ್ಲಿ ಈ ವಚನಗಳ ಬಗ್ಗೆ ವಿವರವಾಗಿ ಅಧ್ಯಯನ ಮಾಡಲಾಗಿದೆ. ಅಕ್ಕಮಹಾದೇವಿ ಅನೇಕ ಸ್ವರವಚನಗಳನ್ನು ರಚಿಸಿದ್ದಾಳೆ, ಸದ್ಯಕ್ಕೆ ಅಕ್ಕನ 45 ಸ್ವರವಚನಗಳು ಲಭ್ಯವಾಗಿವೆ. ಅಕ್ಕ ತನ್ನ ಎಲ್ಲಾ ಸ್ವರವಚನಗಳಿಗೂ ರಾಗಗಳನ್ನು ಸೂಚಿಸಿದ್ದಾಳೆ. ಆದುದರಿಂದ ಅಕ್ಕನಲ್ಲಿ ಸಂಗೀತ ಜ್ಞಾನವಿತ್ತೆಂದು ತಿಳಿದುಬರುತ್ತದೆ. ಆಕೆ ಹೇಳಿರುವ ಕಾಂಬೋಧಿ, ಶಂಕರಾಭರಣ ಮೊದಲಾದ ರಾಗಗಳು ಇಂದಿಗೂ ಇವೆ. ಛಂದಸ್ಸಿನ ದೃಷ್ಟಿಯಿಂದ ಹೇಳುವುದಾದರೆ, ಅಕ್ಕನ ಸ್ವರವಚನಗಳಲ್ಲಿ ಮಾತ್ರಾ ಛಂದಸ್ಸು, ಅಂಶ ಛಂದಸ್ಸು ಮತ್ತು ಮಿಶ್ರ ಛಂದಸ್ಸು ಹೀಗೆ ಮೂರು ಛಂದಸ್ಸುಗಳು ಕಾಣಿಸುತ್ತವೆ. ಅಕ್ಕನ ಸ್ವರವಚನಗಳು, 19ನೇ ಶತಮಾನದಲ್ಲಿ ಹರಿದಾಸರು ರಚಿಸಿದ ಕೀರ್ತನೆಗಳಿಗೆ ಪ್ರೇರಣೆಯಾಗಿವೆ. ಅಕ್ಕ ರಚಿಸಿದ್ದ ಕೆಲವು ಸ್ವರವಚನಗಳು ಇಂದು ಅಂಕಿತ ಬದಲಿಸಿಕೊಂಡು ಪುರಂದರದಾಸರ ಕೀರ್ತನೆಗಳಲ್ಲಿ ಸೇರಿಕೊಂಡಿವೆ. "ಅಂಬಿಗ ನಿನ್ನ ನಂಬಿದೆ" ಎಂಬ ಅಕ್ಕನ ಸ್ವರವಚನವು ಪುರಂದರದಾಸರ ಕೀರ್ತನೆಯಾಗಿ, ಕೆಸ್ತೂರದೇವನ ಸ್ವರವಚನವಾಗಿ ಪ್ರಕಟವಾಗಿದೆ.
"ಸತ್ಯವೆಂಬ ಹುಟ್ಟು ಅಂಬಿಗ
ಭಕ್ತಿಯೆಂಬ ಪದವಂಬಿಗ
ನಿತ್ಯಮುಕ್ತಿ ನಮ್ಮ ಚೆನ್ನಮಲ್ಲಿಕಾರ್ಜುನನ
ಮುಕ್ತಿಮಂಟಪಕೊಯ್ಯೋ ಅಂಬಿಗ
- ಅಕ್ಕಮಹಾದೇವಿ (ಸ್ವರವಚನ)
ಅಕ್ಕನ ಇದೇ ಸ್ವರವಚನವು ಇಂದು ಬೇರೆ ಬೇರೆ ಕವಿಗಳ ಕೃತಿಗಳಲ್ಲಿ ಕಾಣಿಸಿಕೊಂಡಿದೆ. ಇಲ್ಲಿಯ ಅಂಬಿಗ ಸಾಮಾನ್ಯ ಅಂಬಿಗನಾಗಿರದೆ, ಸಾಕ್ಷಾತ್ ಶಿವನೇ ಆಗಿದ್ದಾನೆ.
"ಒಂದೇ ಎರಡಾದವೆಯಮ್ಮ
ಎರಡೇ ಮೂರಾದುವಮ್ಮ
ಮೂರೇ ಆರಾದುವಮ್ಮ
ಆರೇ ಮೂವತ್ತಾರಾದವಮ್ಮ
ಆ ಮೂವತ್ತಾರೇ ಇನ್ನೂರ ಹದಿನಾರಾದವೆ ಅಮ್ಮ...."
- ಅಕ್ಕಮಹಾದೇವಿ (ಸ್ವರವಚನ)
ಈ ಸ್ವರವಚನಲ್ಲಿ ಷಟ್‌ಸ್ಥಲಗಳ ಬೆಳವಣಿಗೆಯನ್ನು ಕಾಣಬಹುದಾಗಿದೆ. ಭಕ್ತಿಸ್ಥಲದಿಂದ ಐಕ್ಯಸ್ಥಲದವರೆಗೆ ಸಾಗಿದ ಆಧ್ಯಾತ್ಮಿಕ ಮುನ್ನಡೆಯನ್ನು ಈ ಸ್ವರವಚನ ಹೇಳುತ್ತದೆ. ಇಲ್ಲಿ ಜ್ಞಾನಮಾರ್ಗ, ಕರ್ಮಮಾರ್ಗ, ಭಕ್ತಿಮಾರ್ಗಗಳ ಸಮಾಗಮವಾಗಿದೆ. ಅಕ್ಕನ ಎಲ್ಲ ಸ್ವರವಚನಗಳನ್ನು ಕುರಿತು ಈಗಾಗಲೇ ಅಧ್ಯಯನಗಳು ನಡೆದು ಕೆಲವು ಕೃತಿಗಳು ಪ್ರಕಟವಾಗಿವೆ. ಇಲ್ಲಿ ಮಾದರಿಗಾಗಿ ಅಕ್ಕನ ಸ್ವರವಚನಗಳ ಎರಡು ನುಡಿಗಳನ್ನು ಉಲ್ಲೇಖಿಸಲಾಗಿದೆ.
ಅಕ್ಕನ ಇನ್ನೊಂದು ಮಹತ್ವದ ಕೃತಿ "ಯೋಗಾಂಗ ತ್ರಿವಿಧಿ", ತ್ರಿಪದಿಯ ಛಂದಸ್ಸಿನಲ್ಲಿರುವ ಈ ಕಾವ್ಯಕೃತಿಯಲ್ಲಿ 67 ತ್ರಿಪದಿಗಳಿವೆ. ಈ ತ್ರಿಪದಿಗಳಲ್ಲಿ ಯೋಗಶಾಸ್ತ್ರದ ರಹಸ್ಯವೇ ಅಡಗಿದೆ. ಯೋಗದ ಮೂಲಕ ಇಲ್ಲಿ ಶಿವಯೋಗವನ್ನು ಹೇಳಲಾಗಿದೆ. ಇಷ್ಟ ಲಿಂಗಧಾರಣೆ, ಸದ್ಗುರುವಿನ ಕಾರಣ್ಯ, ಸ್ಕೂಲ-ಸೂಕ್ಷ್ಮ ದೇಹಗಳ ಪರಿಚಯ, ತ್ರಿವಿಧ ಪೂಜೆಯ ವಿವರಣೆ, ಲಿಂಗಾಗ ಸಾಮರಸ್ಯದ ಅನುಭವ ಈ ಮೊದಲಾದ ವಿಷಯಗಳು ಈ ತ್ರಿಪದಿಗಳಲ್ಲಿವೆ. ಇಲ್ಲಿ ಬೆಡಗಿನ ಭಾಷೆಯನ್ನು ಬಳಸಲಾಗಿದೆ.
'ಕೋಡಗನ ಒಡಗೂಡಿ ಆಡುವ ನರಿನಾಯಿ
ಗೀಡಾದ ಮನೆಯ ಮುಂದೇನು ಮತ್ತೊಂದು
ಗೂಡಿನೊಳು ನಾನು ಮೆರೆದೆನು"
"ಒಡಹುಟ್ಟಿದೈವರ ಒಡನೆ ಶಿರಗಳನರಿದು
ಮಡದಿಯ ಕರವ ಹಿಡಿದೆನು / ಮುಂದಣ
ನಡುಬಟ್ಟೆಯೊಳಗೆ ನಡೆವೆನು"
- ಅಕ್ಕಮಹಾದೇವಿ (ಯೋಗಾಂಗ ತ್ರಿವಿಧಿ)
ಈ ಎರಡೂ ತ್ರಿಪದಿಗಳಲ್ಲಿ ಬೆಡಗಿನ ಭಾಷೆಯಿದೆ. ಕೋಡಗನಂತಿರುವ ಮನಸ್ಸು, ನರಿನಾಯಿಗಳಂತಾಗಿರುವ ಈ ದೇಹ, ಇದನ್ನು ಬದಲಿಸಿಕೊಂಡು, ಮತ್ತೊಂದು ಹೊಸ ದೇಹವನ್ನಾಗಿ ಪರಿವರ್ತಿಸಿಕೊಂಡು ಬದುಕುವ ಪರಿ ಮೊದಲ ತ್ರಿಪದಿಯಲ್ಲಿದೆ. ಒಡಹುಟ್ಟಿದೈವರು ಎಂದರೆ ಪಂಚಪಾತಕಗಳು, ಈ ಪಂಚಪಾತಕಗಳನ್ನು ಕೊಂದು ಶರಣಸತಿ-ಲಿಂಗಪತಿ ಭಾವದಲ್ಲಿ ಹೊಸದಾರಿಯಲ್ಲಿ ನಡೆಯುವ ಪ್ರಯತ್ನ ಎರಡನೇ ತ್ರಿಪದಿಯಲ್ಲಿದೆ. ಹೀಗೆ ಅನೇಕ ವೈವಿಧ್ಯಮಯ ಕೃತಿಗಳನ್ನು ರಚಿಸಿರುವ ಅಕ್ಕ, ಕೇವಲ ವಚನಕಾರ್ತಿ ಮಾತ್ರವಾಗಿರದೆ, ಮಹತ್ವದ ಕವಯತ್ರಿಯಾಗಿದ್ದಾಳೆ. ಪ್ರಮುಖ ಅನುಭಾವಿಯಾಗಿದ್ದಾಳೆ.
ಅಕ್ಕನಲ್ಲಿ ಭಕ್ತಿ-ಜ್ಞಾನ-ವೈರಾಗ್ಯ ಈ ಮೂರು ಮುಪ್ಪರಿಗೊಂಡಿವೆ. ತನುವಿನೊಳಗಿದ್ದು ತನುವಗೆದ್ದ, ಮನದೊಳಗಿದ್ದು ಮನವಗೆದ್ದ ವಿಷಯದೊಳಗಿದ್ದು ವಿಷಯಗಳ ಗೆದ್ದ ಮಹಾದೇವಿಯಕ್ಕನ ಶ್ರೀಪಾದಕ್ಕೆ ಅಲ್ಲಮಪ್ರಭುವಿನಂತಹ ಶರಣರು ನಮೋ ನಮೋ ಎಂದು ನಮಿಸಿರುವುದು ಅಕ್ಕನ ಎತ್ತರದ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.
ಅಕ್ಕಮಹಾದೇವಿಯು ರಚಿಸಿರುವ ಸಾಹಿತ್ಯದಲ್ಲಿ ವಚನಗಳೇ ಪ್ರಧಾನವಾಗಿವೆ. ಆಕೆಯ 434 ವಚನಗಳನ್ನು ಕುರಿತು ಈಗಾಗಲೇ ಚರ್ಚೆಯಾಗಿದೆ. ಈ ಕೃತಿಯಲ್ಲಿಯೂ ಕೂಡ ಮೂರನೇ ಅಧ್ಯಾಯದಲ್ಲಿ ವಿವಿಧ ವಿಷಯಗಳಡಿಯಲ್ಲಿ ಅಕ್ಕನ ವಚನಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಇಲ್ಲಿ ಅಕ್ಕನ ವಚನಗಳ ಒಟ್ಟು ಆಶಯವೇನೆಂಬುದನ್ನು ಕುರಿತು ಕೆಲವು ಮಾತುಗಳನ್ನು ಹೇಳಬೇಕಾಗುತ್ತದೆ.
ಅಕ್ಕನ ಬಹುತೇಕ ವಚನಗಳು ಭಾವಗೀತೆಗಳ ಹಾಗೆ ಸುಂದರವಾಗಿವೆ; ಗೇಯಗುಣವನ್ನೊಳಗೊಂಡಿವೆ. ಕೆಲವು ವಚನಗಳಂತೂ ಕಾವ್ಯಾತ್ಮಕವಾಗಿ ತುಂಬ ಅನನ್ಯವಾಗಿವೆ. ಮೂರನೇ ಅಧ್ಯಾಯದ ಕಾವ್ಯಸೌಂದರ್ಯದ ಭಾಗದಲ್ಲಿ ಈ ಬಗೆಗೆ ವಿವರಿಸಲಾಗಿದೆ. ವಚನಕಾರರಲ್ಲಿ ಬಹಳಷ್ಟು ವಚನಕಾರರು ಶರಣಸಿದ್ದಾಂತದ ಬಗೆಗೆ ಜನಸಾಮಾನ್ಯರಿಗೆ ಹೇಳಲು ಹೊರಟಿದ್ದಾರೆ. ಹೀಗಾಗಿ ಅವರ ವಚನಗಳು ತುಂಬ ವಾಚ್ಯವಾಗಿವೆ. ಕೆಲವು ವಚನಕಾರರ ವಚನಗಳಂತೂ ವರದಿಗಳ ಹಾಗೆ ಇವೆ. ವಚನಕಾರರಲ್ಲಿ ತುಂಬ ಕಾವ್ಯಾತ್ಮಕವಾಗಿರುವ ವಚನಗಳೆಂದರೆ ಅಕ್ಕಮಹಾದೇವಿಯ ವಚನಗಳು ಮಾತ್ರವೆಂದು ಸ್ಪಷ್ಟವಾಗಿ ಹೇಳಬಹುದಾಗಿದೆ. ಅಂತೆಯೇ ಅಕ್ಕನನ್ನು ಮೊದಲ ಕವಯತ್ರಿಯೆಂದು ಕರೆಯಲಾಗಿದೆ.
ಅಂಗಲಿಂಗದಂತಹ ಆಧ್ಯಾತ್ಮ ವಿಷಯ ಕುರಿತು ಹೇಳಬೇಕಾದಾಗಲೂ ಅಕ್ಕ ಕಾವ್ಯದ ಲಯವನ್ನು ಬಿಟ್ಟುಕೊಡುವುದಿಲ್ಲ.
"ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ
ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ" (ವ-೩)
"ಆಕಾರವಿಲ್ಲದ ನಿರಾಕಾರ ಲಿಂಗವ
ಕೈಯಲ್ಲಿ ಹಿಡಿದು ಕಟ್ಟಿದವೆಂಬರು ಅಜ್ಞಾನಿ ಜೀವಿಗಳು" (ವ-೫೩)
"ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ?
ಕ್ಷಮೆ ದಮೆ ಶಾಂತಿ ಸೈರಣೆಯಿರಲು, ಸಮಾಧಿಯ ಹಂಗೇಕಯ್ಯಾ?" (ವ-೮೭)
"ಕಣ್ಣಿಗೆ ಶೃಂಗಾರ ಗುರುಹಿರಿಯರ ನೋಡುವುದು
ಕರ್ಣಕ್ಕೆ ಶೃಂಗಾರ ಪುರಾತನರ ಸುಗೀತಂಗಳ ಕೇಳುವುದು” (ವ-೧೪೨)
"ಕಾಮಉಳ್ಳವರಿಗೆ ಕಾಯಸಂಗ ಮಚ್ಚು ನೋಡಾ
ಕಾಮವಿಲ್ಲದವರಿಗೆ ಲಿಂಗಸಂಗ ಮಚ್ಚು ನೋಡಾ" (ವ-೧೫೯)
ಇಂತಹ ಅನೇಕ ವಿಷಯಗಳು ಅಂಗಲಿಂಗತ್ತೆ ಸಂಬ೦ಧಿಸಿದವುಗಳಾಗಿವೆ. ಈರೀತಿ ಶಾಸ್ತ್ರವಿಷಯಗಳ ಬಗೆಗೆ ಹೇಳಬೇಕಾದಾಗಲೂ ಅಕ್ಕನು ಕಾವ್ಯವನ್ನು ಬಿಟ್ಟುಕೊಡುವುದಿಲ್ಲ. ಅಕ್ಕಮ್ಮನ ಹಾಗೆ ವರದಿ ಒಪ್ಪಿಸುವುದಿಲ್ಲ, ಚೆನ್ನಬಸವಣ್ಣನಂತೆ ಆದೇಶ ಮಾಡುವುದಿಲ್ಲ. ಅಲ್ಲಮನಂತೆ ಬೋಧಿಸುವುದಿಲ್ಲ. ಶಾಸ್ತ್ರದ ವಿಷಯವಾದರೂ ಅದನ್ನು ಮನಮುಟ್ಟುವಂತೆ ಹೇಳಿದ್ದಾಳೆ.
ಕಾವ್ಯದ ಅನನ್ಯತೆಯ ಬಗೆಗಂತೂ ಅಕ್ಕನ ವಚನಗಳು ತುಂಬ ಪ್ರಸಿದ್ಧವಾಗಿವೆ. ಕಾವ್ಯತೋರಣ ಕಟ್ಟಿದಂತೆ, ಒಂದಕ್ಕೊಂದು ವಚನ ಶೃಂಗರಿಸಿಕೊಂಡಿವೆ.
"ಅರಲುಗೊಂಡ ಕೆರೆಗೆ ತೊರೆಬಂದು ಹಾಯ್ದಂತಾಯಿತ್ತು.
ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು....” (ವ-೩೯)
"ಗಿರಿಯಲಲ್ಲದೆ ಹುಲ್ಲು ಮೊರಡಿಯಲ್ಲಾಡುವುದೆ ನವಿಲು?
ಕೊಳಕ್ಕಲ್ಲದೆ ಕಿರುವಳ್ಳಕ್ಕೆಳೆಸುವುದೆ ಹಂಸೆ?" (ವ-೧೯೬)
"ಚಂದನವ ಕಡಿದುಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ?
ತಂದು ಸುವರ್ಣವ ಕಡಿದೊರೆದಡೆ ಬೆಂದು ಕಳಂಕ ಹಿಡಿಯಿತ್ತೆ?" (ವ-೨೦೬)
"ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು
ದೇವಾಂಗವನುಟ್ಟೆನೆಲೆ ಪುರುಷ ಬಾರಾ" (ವ-೪೫)
"ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ,
ಪವಳದ ಚಪ್ಪರವನಿಕ್ಕಿ, ಮುತ್ತುಮಾಣಿಕವ ಕಟ್ಟಿ ಮದುವೆಯ ಮಾಡಿದರು" (ವ-೨೭೬)
ಇಂತಹ ಅನೇಕ ವಚನಗಳಲ್ಲಿ ಕಾವ್ಯದ ಕಮನೀಯತೆಯನ್ನು ಕಾಣಬಹುದಾಗಿದೆ. ಇಲ್ಲಿ ಬಂದಿರುವ ಕಲ್ಪನೆಗಳು, ರೂಪಕಗಳು ಅಗಾಧವಾಗಿವೆ. ಪ್ರಕೃತಿಯ ಮೂಲಕ, ಚೆನ್ನ ಮಲ್ಲಿಕಾರ್ಜುನನೊಂದಿಗಿನ ತನ್ನ ಪ್ರೇಮಪ್ರಸಂಗಗಳನ್ನು ಸೊಗಸಾಗಿ ನಿರೂಪಿಸಿದ್ದಾಳೆ. ಇಂತಹ ಅನೇಕ ವಚನಗಳು ಪ್ರೇಮಗೀತೆಗಳಂತೆ ಸುಂದರವಾಗಿರುವುದರ ಜತೆಗೆ ಅನುಭಾವದಂತರಂಗವನ್ನು ಬಿಚ್ಚಿಡುತ್ತವೆ.
ತಾನು ಬದುಕಿದ್ದ ಪರಿಸರ ತಳೆದ ಫಲವಾಗಿ ಅಕ್ಕನಲ್ಲಿ ಭಕ್ತಿ, ಜ್ಞಾನ, ವೈರಾಗ್ಯ ಈ ಮೂರು ಮುಪ್ಪುರಿಗೊಂಡವು. ಅಕ್ಕಮಹಾದೇವಿ ಹಿರಿಯ ಅನುಭಾವಿಯಾಗಿ ಎಲ್ಲರಿಗೂ ಅಕ್ಕನಾಗಿ ಕಾಣಿಸಿಕೊಂಡಳು. ಸಂಸಾರವೆಂಬ ಬೆಂಕಿಯಲ್ಲಿ ಉರಿಯುವ ಕೆಂಡಗಳನ್ನು ತುಳಿಯುತ್ತ ತನ್ನ ಬದುಕಿನ ಘಟಗಳನ್ನು ದಾಟುತ್ತಾ ಹೋದಂತೆ, ಅಕ್ಕನಲ್ಲಿ ಮಲ್ಲಿಕಾರ್ಜುನನ ಮೇಲೆ ಪ್ರೀತಿ ಹೆಚ್ಚಾಗುತ್ತ ಹೋಗುತ್ತದೆ. ಸಂಸಾರ ನಿಸ್ಸಾರವೆಂದು ತಿಳಿದಕೂಡಲೆ, ಅಕ್ಕನಲ್ಲಿ ವೈರಾಗ್ಯ ಮೊಳೆತು ಹೆಮ್ಮರವಾಗಿ ಬೆಳೆಯುತ್ತದೆ. ಒಂದು ಹೆಣ್ಣು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಎಷ್ಟೊಂದು ಎತ್ತರಕ್ಕೆ ಬೆಳೆಯಬಲ್ಲಳೆಂಬುದಕ್ಕೆ ಅಕ್ಕ ಜೀವಂತ ಉದಾಹರಣೆಯಾಗಿದ್ದಾಳೆ. ಮಹಾದೇವಿಯಕ್ಕನ ವಚನಗಳಲ್ಲಿ ಬುದ್ದಿಗಿಂತ ಭಾವಕ್ಕೆ ಪ್ರಧಾನತೆಯಿದೆ; ಮಾತಿಗಿಂತ ಕ್ರಿಯೆಗೆ ಮಹತ್ವವಿದೆ, ಅಧಿಕಾರಕ್ಕಿಂತ ಅಂತಃಕರಣ ಮುಖ್ಯವಾಗಿದೆ. ತಾನು ಹೇಳುವ ಮಾತು ಪಾಂಡಿತ್ಯದ ಪ್ರದರ್ಶನವಾಗಿರದೆ. ಅಂತರಂಗದಲ್ಲಿ ಹಚ್ಚಿಟ್ಟ ದೀಪದಂತಿದೆ. ಹೀಗೆ ಅಕ್ಕ ಒಬ್ಬ ಕವಯತ್ರಿಯಾಗಿ, ಅನುಭಾವಿಯಾಗಿ, ಜ್ಞಾನದ ಬೆಳಕಾಗಿ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಂಡಿದ್ದಾಳೆ.
ವಿಜಯಶ್ರೀ ಸಬರದ
9845824834
ಮುಂದುವರೆಯುವುದು....
ಈ ಅಂಕಣದ ಹಿಂದಿನ ಬರೆಹಗಳು:
ಚರಿತ್ರೆ ಅಂದು-ಇಂದು
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.