ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ

Date: 15-01-2024

Location: ಬೆಂಗಳೂರು


"ಈ ಹಿಂದೆ ನಾವು ಮನೆಯೊಳಗೆ ಕಾಣಿಸುವ ಗಂಡಹೆಂಡಿರ ಮತ್ತು ವಿವಿದ ಸಂಬಂದಗಳ ನಡುವೆ ಕಾಣಿಸುವ ಅನುಸಂದಾನದ ಹಾಗೆ ಇರುವ ಬಾಶಿಕ ಅನುಸಂದಾನವನ್ನು ಗಮನಿಸಿದೆವು. ಈ ಸಲ, ಸ್ವಲ್ಪ ಅಡುಗೆಮನೆಯಲ್ಲಿದ್ದು ಅಡುಗೆಮನೆಯ ಬಾಶಿಕ ಜಗತ್ತನ್ನು ಅವಲೋಕಿಸೋಣ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ 'ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ’ ಕುರಿತು ವಿಶ್ಲೇಷಿಸಿದ್ದಾರೆ.

ಇದನ್ನು ‘ಅಡುಗೆಮನೆ ಕನ್ನಡ’ ಅಂತ ಕರೆಯೋಣ, ಹಾಗೆ ಹೇಳೋದಕ್ಕೆ ಕಾರಣವೆಂದರೆ ಈ ಬರವಣಿಗೆ ಕನ್ನಡ ಕೇಂದ್ರಿತವಾಗಿರುವುದು. ಅಡುಗೆಮನೆಯ ಒಳಗೆ ಕನ್ನಡವನ್ನ, ಬಾಶೆಯನ್ನು ಅವಲೋಕಿಸುವುದು ಏನಿದೆ? ಎಂದು ಹುಬ್ಬೇರಿಸಬಹುದು. ಬಾಶೆಯಿಲ್ಲದ ಬದುಕೆಲ್ಲಿ? ಸರಿ, ಬನ್ನಿ, ಅಡುಗೆಮನೆಗೆಯ ಒಳಗೆ ಹೋಗೋಣ. ಸವಿ ಸವಿ ಬಾಶಾಸವಿಯನ್ನು ಅನುಬವಿಸೋಣ.

ಕನ್ನಡ ಮಾತಾಡುವವರ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಯಾವ ಬಾಶೆಯ ಪದಗಳು ಹೆಚ್ಚು ಬಳಕೆಯಲ್ಲಿವೆ? ಎಂಬ ಪ್ರಶ್ನೆಯನ್ನು ಗಮನಿಸಿದಾಗ ಕನ್ನಡ ಎಂಬುದು ಸಹಜ ಉತ್ತರ. ಆದರೆ, ಇಂದು ಇಂಗ್ಲೀಶಿನ ಪದಗಳು ಎಗ್ಗಿಲ್ಲದೆ ನಮ್ಮ ಅಡುಗೆಮನೆಯನ್ನು ಹೊಗುತ್ತಿವೆ, ಅಂದರೆ ಒಳಬರುತ್ತಿವೆ. ಇಲ್ಲಿ ಕನ್ನಡ ಮತ್ತು ಇಂಗ್ಲೀಶುಗಳ ಸುಂದರ ಅನುಸಂದಾನವನ್ನು ಕಾಣಬಹುದು. ಇಲ್ಲಿ ಕಾಣಿಸುವ ಅನುಸಂದಾನ ಸಾಮಾಜಿಕ ಅನುಸಂದಾನವೂ, ಆದುನಿಕತೆಯ ಅನುಸಂದಾನವೂ ಆಗಿದ್ದು ಬಾಶಿಕ ಅನುಸಂದಾನದಲ್ಲಿ ಅವತರಿಸಿ ಕಾಣಿಸುತ್ತದೆ. ಇಂಗ್ಲೀಶಿನ ಪದಗಳು ಹೇಗೆ ಅಡುಗೆಮನೆಯೊಳಗೆ ಬರುತ್ತಿವೆ ಅನ್ನೋದನ್ನ ನೋಡೋದಕಿಂತ ಮೊದಲು ತುಸು ಅಡುಗೆಮನೆ ಕನ್ನಡವನ್ನು ಪರಿಚಯಿಸಿಕೊಳ್ಳೋಣ.

ಅಡುಗೆಮನೆಯಲ್ಲಿ ಏನೇನಿರುತ್ತೆ? ವಿವಿದ ಬಗೆಯ ಅಡುಗೆಗಳು, ಅಡುಗೆ ಮಾಡುವುದಕ್ಕೆ ಬಳಕೆಯಾಗುವ ಕಾಯಿಪಲ್ಲೆಗಳು, ದವಸದಾನ್ಯಗಳು, ಮಸಾಲೆ ಮೊದಲಾದವು ಇರುತ್ತವೆ. ಇಂತ ಸಾವಿರಾರು ಪದಾರ‍್ತಗಳು ಅಡುಗೆಮನೆಯಲ್ಲಿ ಒಟ್ಟೊಟ್ಟಿಗೆ ಕಾಣಿಸುತ್ತವೆ. ಅವುಗಳ ನಡುವಿನ ಹೊಂದಾಣಿಕೆಯೆ ನಮ್ಮ ಸಾಮಾಜಿಕ ಬದುಕಿನ ಕೂಡಿಬದುಕುವಿಕೆಗೆ ಒಂದು ಮಾದರಿ. ಅದಕ್ಕೆ ಇರಬೇಕು, ನಮ್ಮ ಮಂದಿ ಅಡುಗೆಮನೆಯಲ್ಲಿ ಎಲ್ಲವೂ ಒಟ್ಟೊಟ್ಟಿಗೆ ಇರುವುದಕ್ಕೆ ‘ಸಂಗೀತ’ ಅಂತ ಕರೆಯುತ್ತಾರೆ.

ಅಡುಗೆಮನೆಯಲ್ಲಿ ಅಡುಗೆ ಮಾಡುವುದಕ್ಕೆ ಬಳಕೆಯಾಗುವ ಸಾದನಗಳು ಇವೆ. ಅಡುಗೆ ಮಾಡುವ ಸಾದನಗಳ ಜಗತ್ತೆ ಒಂದು ವಿಚಿತ್ರವೂ ವಿಶಾಲವೂ ವಯಿಬೋಗವೂ ಆದ ಜಗತ್ತು. ಅಡುಗೆಮನೆ ಇಂದು ಪಾರಂಪರಿಕವಾಗಿ ಬಂದ ಈ ಬಹುತ್ವವನ್ನು ಆದುನಿಕತೆಯ ಕಾರಣದಿಂದ, ಯಂತ್ರಗಳ ಕಾರಣದಿಂದ, ಹಲವು ಕೆಲಸಗಳನ್ನು ಮಾಡುವ ಒಂದೆ ಯಂತ್ರದ ಕಾರಣದಿಂದ, ಸರಳತೆಯ ಅನಿವಾರ‍್ಯತೆಯಿಂದ ಕಳೆದುಕೊಳ್ಳುತ್ತಿದೆ. ಇನ್ನೊಂದು ಬಗೆಯ ವಾತಾವರಣ ಅಡುಗೆಮನೆಯಲ್ಲಿ ರೂಪತಳೆಯುತ್ತಿದೆ.

ಅಡುಗೆಮನೆಯಲ್ಲಿ ಅಡುಗೆಗೆ ಬಳಸುವ ಸಾದನಗಳ ಜಗತ್ತು ವಿಚಿತ್ರವಾದುದು. ಹಲವು ನೂರು ಸಾದನಗಳು ಅಡುಗೆಮನೆಯಲ್ಲಿ ಇವೆ ಮತ್ತು ಅವುಗಳಿಗೆ ಬಿನ್ನವಿಬಿನ್ನ ಹೆಸರುಗಳು ಇವೆ. ಇಲ್ಲಿ ಉಲ್ಲೇಕಿಸಬೇಕಾದ ಮಹತ್ವದ ಅಂಶವೆಂದರೆ ಒಂದು ಸಾದನ ಅದರ ಆಕಾರ, ಅಳತೆ, ವಿನ್ಯಾಸ, ಅದನ್ನು ಬಳಸುಕ ಕ್ರಮ ಇವುಗಳ ಮೇಲೆ ವಿಬಿನ್ನ ಹೆಸರುಗಳನ್ನು ಪಡೆದುಕೊಳ್ಳುತ್ತದೆ. ನೀರು ಕುಡಿಯುವುದಕ್ಕೆ ಬಳಸುವ ಸಾದನ ಉದ್ದವಾಗಿದ್ದರೆ ಗಿಲಾಸು, ಗಿಡ್ಡವಾಗಿದ್ದರೆ ವಾಟಗ, ಅಗಲವಾಗಿದ್ದರೆ ಬಟ್ಟಲು, ದುಂಡಗೆ ಇದ್ದರೆ ಗಿಂಡಿ, ತುಸು ದೊಡ್ಡದಿದ್ದು ದುಂಡಗೆ ಇದ್ದರೆ ಚರಿಗೆ, ತಂಬಿಗೆ ಅದೆ ಉದ್ದಕಿದ್ದರೆ ಜಗ್ಗು, ಮಗ್ಗು. ನೀರನ್ನು ತುಂಬಿಡುವ ಸಾದನ ಒಂದು ಸಣ್ಣ ಅಳತೆಯಲ್ಲಿ ಇದ್ದರೆ ಬಿಂದಿಗೆ, ತುಸು ದೊಡ್ಡದಿದ್ದರೆ ಕೊಡ, ಇನ್ನೂ ದೊಡ್ಡದಿದ್ದರೆ ಆಂಡೆ. ಮಾಡಿದ ಅಡುಗೆಯನ್ನು ಬಳಸಿಕೊಳ್ಳುವುದಕ್ಕೆ ಬಳಸುವ ಸಾದನ ಸಾಮಾನ್ಯವಾಗಿ ಚಮಚ. ಆದರೆ, ಅನ್ನ ನೀಡಿಕೊಳ್ಳುವುದಕ್ಕೆ ಒಂದು ಹೆಸರು, ಸಾರು ಬಳಸಿಕೊಳ್ಳುವುದಕ್ಕೆ ಇನ್ನೊಂದು ಹೆಸರು. ಕಡಿಮೆ ಪ್ರಮಾಣದ ಅಡುಗೆ ಮಾಡುವಲ್ಲಿ ಬಳಸಿದರೆ ಒಂದು ಹೆಸರು, ದೊಡ್ಡ ಪ್ರಮಾಣದ ಅಡುಗೆಯಲ್ಲಿ ಬಳಸಿದರೆ ಇನ್ನೊಂದು ಹೆಸರು. ಹೀಗೆ ಅಡುಗೆಮನೆಯ ವಿವಿದತೆ ಕಣ್ಣರಳಿಸುವಂತೆ ಮಾಡುತ್ತದೆ.

ಇನ್ನು ಅಡುಗೆಗಳ ಬಗೆಗೆ ಒಂದೆರಡು ಮಾಡುಗಳನ್ನಾಡಬಹುದು. ನೂರಾರು ಬಗೆಯ ಅಡುಗೆಗಳು ನಮ್ಮ ಅಡುಗೆಮನೆಯಲ್ಲಿವೆ. ಇದು ನಮ್ಮ ಸಾಮಾನ್ಯರ ಬದುಕಿನ ರಸಿಕತೆಯನ್ನು ಹೇಳುತ್ತದೆ. ಪ್ರತಿಯೊಂದು ಅಡುಗೆಗೆ ಒಂದೊಂದು ಹೆಸರು. ಇಲ್ಲಿಯೂ ಅಡುಗೆ ಮಾಡುವ ಕ್ರಮ, ವಸ್ತು ಮೊದಲಾದವು ಬದಲಾಗುತ್ತಿದ್ದಂತೆ ಬಿನ್ನ ಅಡುಗೆಗಳು ಸಿದ್ದವಾಗುತ್ತವೆ. ಈ ಬಿನ್ನ ಅಡುಗೆಗಳಿಗೆ ತಕ್ಕಂತೆ ಅವುಗಳಿಗೆ ಬಳಸುವ ಸಾಮಗ್ರಿಗಳು, ಸಾದನಗಳು ಬಿನ್ನವಾಗುತ್ತವೆ, ಅದರಂತೆಯೆ ಪ್ರಕ್ರಿಯೆಗಳೂ ಕೂಡ. ಈ ಎಲ್ಲವಕ್ಕೂ ಹೆಸರಿಸುವ ನಾಮಪದಗಳು, ಅವುಗಳಲ್ಲಿ ಇರುವ ಕ್ರಿಯೆಗಳನ್ನು ಸೂಚಿಸುವುದಕ್ಕೆ ವಿಬಿನ್ನ ಕ್ರಿಯಾಪದಗಳು ಇರುತ್ತವೆ.

ಅಡುಗೆಮನೆಯಲ್ಲಿ ಬಳಕೆಯಲ್ಲಿರುವ ಕ್ರಿಯಾಪದಗಳ್ನು ಈಗ ತುಸು ಗಮನಿಸಬಹುದು. ಇದು ಇನ್ನೂ ಬೆರಗಿನದೊಂದು ಚಿತ್ರಣವನ್ನು ತೋರಿಸುತ್ತದೆ. ಒಂದು ವಸ್ತುವನ್ನು ಅಡುಗೆಗೆ ಸಿದ್ದತೆ ಮಾಡಿಕೊಳ್ಳುವ, ಅಡುಗೆ ಮಾಡುವ ಪ್ರಕ್ರಿಯೆಗಳು, ಅಡುಗೆಯನ್ನು ಊಟಕ್ಕೆ ಅಣಿಗೊಳಿಸುವ ಎಲ್ಲ ಬಗೆಯ ಪ್ರಕ್ರಿಯೆಗಳು ಹೊಂದಿರುವ ಕ್ರಿಯಾಪದಗಳು ಬಲು ಮಜವಾಗಿವೆ. ‘ಬೀಸು’, ‘ಕುಟ್ಟು’, ‘ಮುರಿ’, ‘ರುಬ್ಬು’, ‘ಅರಿ’ ಮೊದಲಾದ ಕ್ರಿಯಾಪದಗಳನ್ನು ಗಮನಿಸಬಹುದು. ಈ ಎಲ್ಲ ಕ್ರಿಯೆಗಳನ್ನು ಮಾಡುವುದಕ್ಕೆ ಒಂದೊಂದು ಬಿನ್ನ ಸಾದನಗಳಿವೆ. ಆ ಸಾದನಗಳಲ್ಲಿಯೂ ಬಗೆಬಗೆಯ ವಿವಿದತೆಗಳಿವೆ. ಈ ಸಾದನಗಳಿಗೆ ವಿಬಿನ್ನ ಅಂಗಗಳಿವೆ, ಅವುಗಳಿಗೆ ಹೆಸರುಗಳಿವೆ. ‘ಸುಡುವ’, ‘ಉರಿಯುವ’, ‘ಕರಿಯುವ’ ಮೊದಲಾದ ಕೆಲಸಗಳು ಇದ್ದವು.

ಇದು ಅಡುಗೆಮನೆ ಕನ್ನಡ ಎಶ್ಟು ಶ್ರೀಮಂತಿಕೆಯಿಂದ ಕೂಡಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಕನ್ನಡ ಮಾತುಗರು ಎಂತಾ ರಸಿಕರು ಎಂದು ತಿಳಿದುಕೊಳ್ಳುವುದಕ್ಕೆ ಅಡುಗೆಮನೆಯ ಕನ್ನಡವನ್ನು, ಅಂದರೆ ಅಡುಗೆಮನೆ ಜಗತ್ತನ್ನು ಗಮನಿಸಬೇಕು. ಬಹುಶ, ನಮ್ಮ ಬದುಕನ್ನ ಅರ‍್ತ ಮಾಡಿಕೊಳ್ಳುವುದಕ್ಕೆ ಹೀಗೆ ತುಸು ನಿಂತು ನಮ್ಮ ಬದುಕನ್ನ ನಾವು ಅವಲೋಕಿಸಬೇಕು. ಬರಿಯ ಮೂಡತೆ ಎಂದು ಹೇಳಿ ಕೆಳವರ‍್ಗಗಳ ಮತ್ತು ಕೆಳಜಾತಿಗಳೆಂದು ಕರೆಯುವವರ ಬದುಕನ್ನ ಹೀಗಳೆಯುವ ಬದಲು ಅವರ ಮನೆಯೊಳಗೆ ತುಂಬಿರುವ ಅದ್ಬುತ ರಮ್ಯ ಬದುಕಿನ ಪ್ರೀತಿಯನ್ನು ಅನುಬವಿಸಬಹುದು. ಈ ಬದುಕನ್ನ ತಿಳಿದುಕೊಳ್ಳುವ ದಾರಿಯನ್ನೂ ತಿಳಿದುಕೊಂಡಿರಬೇಕು. ಇರಲಿ.

ಈ ವಿವಿದತೆ ಇದ್ದ ಅಡುಗೆಮನೆ ಕನ್ನಡ ಇಂದಿನ ಆದುನಿಕ ಬದುಕಿನ ಹಲವಾರು ಬಗೆಯ ಬದಲಾವಣೆಗಳಿಂದಾಗಿ ವಿಪರೀತ ಬದಲಾವಣೆಗೆ ಒಳಗಾಗುತ್ತಿದೆ. ಅಡುಗೆಮನೆಯಲ್ಲಿ ಹಲವಾರು ಪದಾರ‍್ತಗಳನ್ನು ಬಳಸುವ ರೂಡಿ ಕಡಿಮೆಯಾಗುತ್ತಿದೆ. ನಿದಾನವಾಗಿ ಅವುಗಳಗೆ ಸಂಬಂದಿಸಿದ ಪದಗಳೂ ಈ ಪ್ರಕ್ರಿಯೆಗಳ ಪದಗಳೂ ಇಲ್ಲವಾಗುತ್ತಿವೆ. ಇದಕ್ಕೆ ಬರಹದ ಮೊದಲಲ್ಲಿ ಹೇಳಿದಂತೆ ಆದುನಿಕತೆಯ ಬರವು ಹೆಚ್ಚು ಕಾರಣ. ಮೇಲೆ ಹೇಳಿದ ‘ಮುರಿಯುವ’, ‘ಕಡಿಯುವ’, ‘ಬೀಸುವ’, ‘ರುಬ್ಬುವ’ ಮೊದಲಾದ ಪ್ರಕ್ರಿಯೆಗಳು ನಿದಾನವಾಗಿ ಇಲ್ಲವಾಗುತ್ತಿವೆ. ಇವೆಲ್ಲವುಗಳನ್ನು ‘ಮಿಕ್ಸಿಗೆ ಹಾಕು’, ‘ಮಿಕ್ಸರಿಗೆ ಹಾಕು’ ಎಂಬ ಪದಪುಂಜ ಬದಲಾಯಿಸುತ್ತಿದೆ. ‘ಮಿಕ್ಸರ್’ ಎಂಬ ಒಂದು ಸಾದನ ಅಡುಗೆಮನೆಯ ಹಲವು ಸಾದನಗಳ ಕೆಲಸಗಳನ್ನು ಮಾಡುತ್ತಿದೆ. ಹೀಗಾಗಿ ‘ಒಳ್ಳು’, ‘ಒಳ್ಳುಕಲ್ಲು’, ‘ಒನಕೆ’, ‘ಗುಂಡು’, ‘ರುಬ್ಬುಗುಂಡು’ ಮೊದಲಾದ ಸಾದನಗಳ ಮತ್ತು ಈ ಸಾದನಗಳ ಬಾಗಗಳ ಹೆಸರುಗಳು ಇಲ್ಲವಾಗುತ್ತಿವೆ. ಈ ಸಾದನಗಳ ಮೂಲಕ ಮಾಡುತ್ತಿದ್ದ ‘ರುಬ್ಬು’, ‘ಅರಿ’, ‘ಕುಟ್ಟು’ ಮೊದಲಾದ ಕ್ರಿಯೆಗಳು ಇಲ್ಲವಾಗುತ್ತಿರುವುದರಿಂದ ಅವುಗಳನ್ನು ಸೂಚಿಸುವ ಕ್ರಿಯಾಪದಗಳು ಕೂಡ ಅಡುಗೆಮನೆಯಿಂದ ಹೊರಹೋಗುತ್ತಿವೆ. ಅಡುಗೆಮನೆಯ ಆಚೆಗೆ ಈ ಕ್ರಿಯಾಪದಗಳಿಗೆ ಇನ್ನೂ ಕೆಲಸವಿದೆ ಎನ್ನುವುದು ನಿಜವಾದರೂ ಆ ಪದಗಳು ತಮ್ಮ ಬಳಕೆಯ ಒಂದು ಅತ್ಯಂತ ಮಹತ್ವದ ವಲಯದಿಂದ ಹೊರಬಿದ್ದವು. ಆ ಸಾದನಗಳು, ಕ್ರಿಯೆಗಳು ಅಡುಗೆಮನೆಯಲ್ಲಿ ನಿದಾನವಾಗಿ ಮೂಲೆಗುಂಪಾಗುತ್ತಿವೆ. ಮದುವೆ ಮೊದಲಾದ ಕಾರ‍್ಯಗಳಲ್ಲಿ ಮಾತ್ರ ಇವು ಇನ್ನೂ ತಮ್ಮ ಮಹತ್ವವನ್ನು ಉಳಿಸಿಕೊಂಡಿವೆ.

ಹೀಗೆ ಇಂಗ್ಲೀಶು ಕನ್ನಡದ ಅಡುಗೆಮನೆಯನ್ನು ಅವ್ಯಾಹತವಾಗಿ ಒಳಹೊಗುತ್ತಿದೆ. ಇದು ಬೇಕು ಬೇಡದ ಪ್ರಶ್ನೆಯೆ ಅಲ್ಲ. ಸಾಮಾನ್ಯವಾಗಿ ಇಂಗ್ಲೀಶನ್ನು ವಿರೋದಿಸುವ ಸಮಯದಲ್ಲಿ ನಮ್ಮ ಅಡುಗೆಮನೆಯನ್ನೊಮ್ಮೆ ನೋಡಬೇಕು, ಅಡುಗೆಮನೆಯನ್ನು ಇನ್ನೂ ಹೆಂಗಸರಿಗೇನೆ ಉಳಿಸಿರುವ ಸಮಾಜ ಹೆಂಗಸರ ಈ ಕೆಲಸವನ್ನಾದರೂ ಉಳಿಸುವ, ಕಡಿಮೆ ಮಾಡುವ ‘ಮಿಕ್ಸರ್’ ಅನ್ನು ಬೇಡವೆನ್ನಬಹುದೆ? ‘ಇಂಗ್ಲೀಶು ಮಾದ್ಯಮದ ಶಾಲೆ’ ಎನ್ನುವುದು ಒಂದು ಬ್ರಮೆ, ಆದರೆ, ಇಂಗ್ಲೀಶು ಬಾಶೆಯ ನಮ್ಮ ಸಂಬಂದವಲ್ಲ. ಇಂಗ್ಲೀಶಿನ ಸಂಬಂದದ ಮೂಲಕವೆ ಆದುನಿಕತೆ ನಮಗೆ ಬರುತ್ತಿರುವುದು. ಇಂಗ್ಲೀಶಿನ ಶಬ್ದಗಳನ್ನು ವಿರೋದಿಸುವ ಮೂಲಕ ಇಂಗ್ಲೀಶಿನಿಂದ ಬಂದ ಅನುಕೂಲಗಳನ್ನು ತಿರಸ್ಕರಿಸಲು ಆಗುವುದಿಲ್ಲವಲ್ಲ.

ಅದೇನೆ, ನೂರು ಕತೆಗಳಿರಲಿ, ಅಡುಗೆಮನೆ ಎಂಬ ಈ ವಲಯವು ಕನ್ನಡ ಮತ್ತು ಇಂಗ್ಲೀಶುಗಳ ನಡುವಿನ ಸುಂದರ ಅನುಸಂದಾನ. ಅದರೊಟ್ಟಿಗೆ, ಕನ್ನಡ ಬಾಶೆಯ ಮಹತ್ವದ ಒಂದು ವಲಯ ತುಸು ಹಗುರವಾಗುತ್ತಿದೆ. ಇನ್ನು ಮುಂದೆ ಕನ್ನಡ ಹೇಗೆ ತನ್ನ ಪಾತ್ರವನ್ನು, ಮಹತ್ವವನ್ನು ಬದಲಾಯಿಸಿಕೊಳ್ಳುತ್ತದೆ ಮತ್ತು ಅಸ್ತಿತ್ವವನ್ನು ಹೇಗೆ ಬದಲಾದ ವಾತಾವರಣಕ್ಕೆ ತಕ್ಕ ಹಾಗೆ ಗಟ್ಟಿಗೊಳಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಬೇಕು.

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...