‘ಅದನ್ನು ಬಳಸಬೇಡಿ, ಬೇರೆ ರಾಗಿ ಸ್ವಚ್ಛ ಮಾಡಿಸಿ ಕಳಿಸುತ್ತೇನೆ’


"ವೈಯಕ್ತಿಕ ನೆಲೆಯಲ್ಲಿ ನನಗಿಷ್ಟ ಬಂದ, ಸಿಕ್ಕ ಸಿಕ್ಕ ಸಾಹಿತ್ಯ ಕೃತಿಗಳನ್ನು ಓದಿಕೊಳ್ಳುತ್ತಿದ್ದೆನಷ್ಟೇ. ಬರೆದಿಟ್ಟ ಕವಿತೆಗಳನ್ನು ಸಂಕಲನ ರೂಪದಲ್ಲಿ ತರಬೇಕೆಂಬ ಒತ್ತಡ ಬಂದಿದ್ದು ಕೂಡ, ಹಾಸನದ ನಮ್ಮ ಗೆಳತಿಯರ ಬಳಗದ ಕವಿಗೋಷ್ಠಿ ಕಾರ್ಯಕ್ರಮವೊಂದರಲ್ಲಿ ಹಿರಿಯ ಕವಯಿತ್ರಿ ಪ್ರೊ.ಸ. ಉಷಾ ಮೇಡಂ ಅವರ ಆಕಸ್ಮಿಕ ಭೇಟಿಯಿಂದ! ನನ್ನ ಕವನವನ್ನು ಕೇಳಿ ಮೆಚ್ಚಿ, ಮಿಕ್ಕ ಬರೆದಿಟ್ಟ, ಅಲ್ಲಿಲ್ಲಿ ಪ್ರಕಟವಾಗಿದ್ದ ಕವಿತೆಗಳನ್ನು ತರಿಸಿಕೊಂಡು ಓದಿ, ಮೊದಲ ಕವನ ಸಂಕಲನವನ್ನು ತರಲು ಅರ್ಹವಾಗಿದೆ ಎಂದವರು ಹೇಳಿದ್ದರು," ಎನ್ನುತ್ತಾರೆ ರೂಪ ಹಾಸನ. ಅವರು ಚಂದ್ರಕಾಂತ ವಡ್ಡು ಅವರ ಸಂಪಾದಕತ್ವದ ‘ಚುಂಬಕ ಗಾಳಿ’ ಕೃತಿಗೆ ಬರೆದ ಲೇಖನ.

ಕೆಲವು ವ್ಯಕ್ತಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಮೊದಲೇ ಅವರ ಬಗ್ಗೆ ಗೌರವ ಮಿಶ್ರಿತ ಭಯ ಮೂಡುವಂತೆ ಮಾಡಿಬಿಟ್ಟಿರಲಾಗುತ್ತದೆ! ಅದಕ್ಕೆ ಜನಾಭಿಪ್ರಾಯ ಕಾರಣವಾದರೂ, ಅಂತಹ ಅಭಿಪ್ರಾಯ ಮೂಡಲು ಕೆಲವ್ಯಕ್ತಿಗಳ ವಿಶಿಷ್ಟ ವ್ಯಕ್ತಿತ್ವವೂ ಕಾರಣವಾಗಿರುತ್ತದೆ. ಅಂತಹ ವ್ಯಕ್ತಿಗಳಲ್ಲಿ ಬಳ್ಳಾರಿಯ ಚನ್ನಬಸವಣ್ಣ ಅವರೂ ಒಬ್ಬರು! ಚನ್ನಬಸವಣ್ಣನವರ ಪರಿಚಯ ನನಗಾಗಿದ್ದು ಆಕಸ್ಮಿಕವೆಂದೇ ಹೇಳಬೇಕು. ಏಕೆಂದರೆ ನಾನು ಸಾಹಿತ್ಯ ಲೋಕಕ್ಕೆ ಬಂದಿದ್ದೇ ಆಕಸ್ಮಿಕವಾಗಿ! ಹೈಸ್ಕೂಲ್‌ ದಿನಗಳಿಂದಲೇ ಕವಿತೆಯನ್ನು ಬರೆದುಕೊಳ್ಳುತ್ತಾ ಬಂದಿದ್ದರೂ, ಸಾಹಿತ್ಯವನ್ನು ಶಾಸ್ತ್ರೀಯವಾಗಿ, ಶಾಸ್ತ್ರೋಕ್ತವಾಗಿ... ಅಂದರೆ ಅಕಾಡೆಮಿಕ್‌ ನೆಲೆಯಲ್ಲಿ ಅಧ್ಯಯನ ಮಾಡಲು ಅವಕಾಶಗಳು ಸಿಗಲಿಲ್ಲ. ವೈಯಕ್ತಿಕ ನೆಲೆಯಲ್ಲಿ ನನಗಿಷ್ಟ ಬಂದ, ಸಿಕ್ಕ ಸಿಕ್ಕ ಸಾಹಿತ್ಯ ಕೃತಿಗಳನ್ನು ಓದಿಕೊಳ್ಳುತ್ತಿದ್ದೆನಷ್ಟೇ. ಬರೆದಿಟ್ಟ ಕವಿತೆಗಳನ್ನು ಸಂಕಲನ ರೂಪದಲ್ಲಿ ತರಬೇಕೆಂಬ ಒತ್ತಡ ಬಂದಿದ್ದು ಕೂಡ, ಹಾಸನದ ನಮ್ಮ ಗೆಳತಿಯರ ಬಳಗದ ಕವಿಗೋಷ್ಠಿ ಕಾರ್ಯಕ್ರಮವೊಂದರಲ್ಲಿ ಹಿರಿಯ ಕವಯಿತ್ರಿ ಪ್ರೊ.ಸ. ಉಷಾ ಮೇಡಂ ಅವರ ಆಕಸ್ಮಿಕ ಭೇಟಿಯಿಂದ! ನನ್ನ ಕವನವನ್ನು ಕೇಳಿ ಮೆಚ್ಚಿ, ಮಿಕ್ಕ ಬರೆದಿಟ್ಟ, ಅಲ್ಲಿಲ್ಲಿ ಪ್ರಕಟವಾಗಿದ್ದ ಕವಿತೆಗಳನ್ನು ತರಿಸಿಕೊಂಡು ಓದಿ, ಮೊದಲ ಕವನ ಸಂಕಲನವನ್ನು ತರಲು ಅರ್ಹವಾಗಿದೆ ಎಂದವರು ಹೇಳಿದ್ದರು. ಅಷ್ಟೇ ಅಲ್ಲ, ಪ್ರಕಾಶಕರನ್ನು ಹುಡುಕುವ ಜವಾಬ್ದಾರಿಯನ್ನೂ ಅವರೇ ತೆಗೆದುಕೊಂಡರು. ನನಗಂತೂ ಈಪುಸ್ತಕ ಪ್ರಕಾಶನದ ಕೆಲಸಗಳು ಯಾವ ರೀತಿ ಇರುತ್ತವೆ ಎಂಬ ಸಣ್ಣಪರಿಕಲ್ಪನೆಯೂ ಇರಲಿಲ್ಲ! ಯಾವ ಪ್ರಕಾಶಕರ ಪರಿಚಯವೂ ಇರಲಿಲ್ಲ. ಯಾವುವು ಒಳ್ಳೆಯ ಪ್ರಕಾಶನ ಸಂಸ್ಥೆಗಳು ಎಂದೂ ತಿಳಿದಿರಲಿಲ್ಲ. ಉಷಾ ಮೇಡಂ ಮತ್ತು ಮಂಜಪ್ಪ ಸರ್ ಅವರೇ ತಮಗೆ ಪರಿಚಿತ ಕೆಲವು ಪ್ರಕಾಶಕರನ್ನು ಕೇಳಿ, ಕೊನೆಗೆ ಅವರ ಸಹಪಾಠಿ ಮಿತ್ರರಾದ ನೆಲಮನೆ ಪ್ರಕಾಶನದ ನೆಲಮನೆ ದೇವೇಗೌಡರು ಪ್ರಕಟಣೆಗೆ ಒಪ್ಪಿರುವರೆಂದು ತಿಳಿಸಿದರು. ಹೀಗೆ ನನ್ನ ಮೊದಲ ಕವನ ಸಂಕಲನ `ಒಂದಿಷ್ಟು ಹಸಿಮಣ್ಣು' 2000ದಲ್ಲಿ ಪ್ರಕಟವಾಯ್ತು.

ಮುಂದೆ 2005ರಲ್ಲಿ ನನ್ನ `ಬಾಗಿಲಾಚೆಯ ಮೌನ' ಕವನ ಸಂಕಲನದ ಹಸ್ತಪ್ರತಿಗೆ ಮುಂಬೈ ಕರ್ನಾಟಕ ಸಂಘದ ಸುಶೀಲಾ ಎಂ.ಶೆಟ್ಟಿ ಕಾವ್ಯ ಪ್ರಶಸ್ತಿ ಘೋಷಣೆಯಾದಾಗ ಮತ್ತೆ ಯಾರಿಂದ ಈ ಕವನ ಸಂಕಲನ ಪ್ರಕಟಿಸುವುದು ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಏಕೆಂದರೆ ಅಷ್ಟರಲ್ಲಾಗಲೇ ನೆಲಮನೆ ದೇವೇಗೌಡರು ತೀರಿಕೊಂಡಿದ್ದರು. ಅವರ ಪ್ರಕಾಶನ ಸಂಸ್ಥೆ ಮುಚ್ಚಲ್ಪಟ್ಟಿತ್ತು. ಈ ಮಧ್ಯೆ 2003ರಲ್ಲಿ ನನ್ನ ‘ಲಹರಿ’ ಅಂಕಣ ಬರಹಗಳ ಸಂಕಲನ ಮೈಸೂರಿನ ಸಂವಹನ ಪ್ರಕಾಶನದಿಂದ ಪ್ರಕಟವಾಗಿತ್ತು. ಸಂವಹನ ಪ್ರಕಾಶನದ ಲೋಕಪ್ಪನವರನ್ನು ಮೈಸೂರಿನ ನನ್ನ ತವರು ಮನೆಯ ಹತ್ತಿರದಲ್ಲೇ ಇದ್ದ, ಉಷಾ ಮೇಡಂ ಅವರ ಮಾನಸ ಗಂಗೋತ್ರಿಯ ಗುರುಗಳೂ ಆಗಿದ್ದ ರುಕ್ಕಮ್ಮ ಮೇಡಂ ಪರಿಚಯಿಸಿದ್ದರು. ಆದರೆ ಅವರು ಕವನ ಸಂಕಲನಗಳನ್ನು ಮುದ್ರಿಸಲು ಆಸಕ್ತಿ ಹೊಂದಿರಲಿಲ್ಲ. ಹೀಗಾಗಿ ನಾನು ಮತ್ಯಾರನ್ನು ಕೇಳುವುದೆಂದು ಗೊಂದಲದಲ್ಲಿದ್ದೆ. ಏಕೆಂದರೆ ಆಗಲೂ ನನಗೆ ಯಾವ ಪ್ರಕಾಶಕರ ಪರಿಚಯವೂ ಇರಲಿಲ್ಲ! ಅಷ್ಟರಲ್ಲಿ ಉಷಾ ಮೇಡಂ, ಮಂಜಪ್ಪ ಸರ್ ಅವರಿಗೆ ಚನ್ನಬಸವಣ್ಣನವರು ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕಾಗ, ಅವರ ಬಳಿ ನನ್ನ ಹಸ್ತಪ್ರತಿಯ ಪ್ರಕಟಣೆಯ ಬಗ್ಗೆ ಪ್ರಸ್ತಾಪಿಸಿದ್ದರಂತೆ. ಅವರು ಹೆಚ್ಚೇನೂ ಮಾತಾಡದೇ ‘ನೋಡೋಣ’ ಎಂದಷ್ಟೇ ಹೇಳಿದರು, ಎಂದು ಉಷಾ ಮೇಡಂ ಕೊಂಚ ನಿರಾಸೆಯಿಂದಲೇ ಹೇಳಿದರು. ಅದಾದ 2-3 ದಿನಗಳಲ್ಲೇ ಒಂದು ಬೆಳಗ್ಗೆ ಚನ್ನಬಸವಣ್ಣನವರೇ ನನಗೆ ಫೋನ್ ಮಾಡಿದರು! ಆಗಲೂ ನನಗೆ ಅವರ ಲೋಹಿಯಾ ಪ್ರಕಾಶನದ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಅವರ ಪರಿಚಯವೂ ಇರಲಿಲ್ಲ. ಆದರೆ ಚನ್ನಬಸವಣ್ಣನರು ನಿಷ್ಠುರವಾದಿಗಳೂ, ತತ್ವನಿಷ್ಠರು, ಪ್ರಾಮಾಣಿಕರು, ಸರಳ ಸಜ್ಜನರೆಂದು ಅದು ಹೇಗೋ ಗಾಸಿಪ್ ಮೂಲಕ ನನ್ನ ಕಿವಿ ತಲುಪಿತ್ತು! ಚನ್ನಬಸವಣ್ಣನವರು, “ನಿಮ್ಮ ಸಂಕಲನ ಪ್ರಕಟಣೆಯ ಬಗ್ಗೆ ಸ. ಉಷಾ ಅವರು ಮೊನ್ನೆ ಕೇಳಿದರು, ನೀವೇ ನನ್ನಲ್ಲಿ ಮಾತಾಡಿ ಕೇಳಬಾರದಿತ್ತೇ” ಎಂದು ಆಕ್ಷೇಪಣೆಯ ದನಿಯಲ್ಲಿ ನುಡಿದಾಗ ಏನು ಹೇಳಲೂ ತೋಚದೇ ತಬ್ಬಿಬ್ಬಾಗಿದ್ದೆ. ಅಂತೂ ಹೀಗೆ ಚನ್ನಬಸವಣ್ಣನವರ ಪರಿಚಯ, ನನ್ನ ಪುಸ್ತಕ ಪ್ರಕಟಣೆ, ಆನಂತರ ಮಾರ್ಚ್ 23ರ ಲೋಹಿಯಾ ಜನ್ಮ ದಿನಾಚರಣೆಯಂದೇ ಏಕಕಾಲಕ್ಕೆ ರಾಜ್ಯದ ಹಲವು ಭಾಗಗಳಲ್ಲಿ ಹಲವು ಲೇಖಕರ ಪುಸ್ತಕ ಬಿಡುಗಡೆಯ ಜೊತೆ ಜೊತೆಗೆ ನನ್ನ ಕವನ ಸಂಕಲನದ ಬಿಡುಗಡೆಯೂ, ಲೋಹಿಯಾ ನೆನಪಿನ ಕಾರ್ಯಕ್ರಮದೊಂದಿಗೆ ಹಾಸನದಲ್ಲಿ ಏರ್ಪಡಿಸಿದ್ದಾಯ್ತು.

ಹೀಗೆ ನಾನೂ ಚನ್ನಬಸವಣ್ಣನವರ ಆಪ್ತ ಲೇಖಕರ ಬಳಗಕ್ಕೆ ಸೇರಿಕೊಂಡ ನಂತರ ಲೋಹಿಯಾ ವಿಚಾರಗಳು, ಲೋಹಿಯಾ ಪ್ರಕಾಶನದ ವಿಭಿನ್ನ ಚಿಂತನೆಯ ಪುಸ್ತಕಗಳು, ಕಾವ್ಯ, ಕಥಾ ಸಂಕಲನಗಳು... ಆ ಮೂಲಕ ಹಲವು ಬರಹಗಾರರ ಪರಿಚಯ- ಹೀಗೆ ಅಕ್ಕರೆಯ ಬಿತ್ತ ಬಿದ್ದಿದ್ದು, ಈಗ ಮರವಾಗಿ ಹಬ್ಬಿದೆ. ಅಂದಾಜು ಎರಡು ದಶಕಗಳ ಹತ್ತಿರ ಹತ್ತಿರದ ಚನ್ನಬಸವಣ್ಣನವರ ಮತ್ತು ನನ್ನ ನಡುವಿನ ಪರಿಚಯವೀಗ, ನಿಧಾನಕ್ಕೆ ತಂದೆ-ಮಗಳಂತಹ ವಾತ್ಸಲ್ಯದ ಸಂಬಂಧವಾಗಿ ಅರಳಿ ನಿಂತಿದೆ. ಇಷ್ಟಾದರೂ ನಾವು ಮಾತನಾಡಿದ್ದು, ಭೇಟಿಯಾಗಿದ್ದು ಅತ್ಯಂತ ಕಡಿಮೆಯೇ. ಹಿಂದೆ ಚನ್ನಬಸವಣ್ಣನವರು ನಾನು ಕೇಳಿದ ಯಾವುದಾದರೂ ಪುಸ್ತಕದ ಪಾರ್ಸೆಲ್ ಕಳಿಸಿದ ನಂತರ ಫೋನ್ ಮಾಡಿದಾಗ, ನಾನು ನನ್ನ ಸಾಮಾಜಿಕ ಕೆಲಸಗಳ ಒತ್ತಡದಿಂದಾಗಿ ಮನೆಯಲ್ಲಿ ಇರುತ್ತಿರಲೇ ಇಲ್ಲ! ಅದಿನ್ನೂ ಸ್ಥಿರ ದೂರವಾಣಿಯ ಕಾಲ. ಹೀಗಾಗಿ ಹೆಚ್ಚಿನ ಬಾರಿ ಫೋನ್ ಸ್ವೀಕರಿಸಿದ ನನ್ನ ಪತಿಯೊಂದಿಗೇ ಚನ್ನಬಸವಣ್ಣನವರ ಆಪ್ತ ಮಾತುಕತೆ ನಡೆದಿರುತ್ತಿತ್ತು. ಹೀಗಾಗಿ ದೂರದಲ್ಲಿದ್ದರೂ ಅಪರೂಪಕ್ಕೆ ಮಾತನಾಡಿದರೂ, ಕುಟುಂಬದ ಹಿರಿಯರೊಬ್ಬರೊಂದಿಗೆ ಖಾಸಗಿಯಾಗಿ, ಆತ್ಮೀಯವಾಗಿ ಒಡನಾಡುವಷ್ಟೇ ಪ್ರೀತಿಯ ಬಾಂಧವ್ಯ ನಮ್ಮಲ್ಲಿ ಉಂಟಾಗಿತ್ತು. ಯಾವಾಗಲೇ ಯಾವುದೇ ಕಾರಣಕ್ಕೆ ಅವರು ನನಗೆ ಫೋನ್ ಮಾಡಿದರೂ, ನನ್ನ ಪತಿ ಮತ್ತು ಮಗನ ವಿಷಯವನ್ನು ವಿವರವಾಗಿ ವಿಚಾರಿಸಿಯೇ ಮಾತು ಮುಗಿಸುವುದು! ಅವರೊಮ್ಮೆ ನಮ್ಮ ಹಾಸನ ಭಾಗದ ಕೆಂಪುರಾಗಿ ಚೆನ್ನಾಗಿರುವುದರಿಂದ, 25ಕೆಜಿಯಷ್ಟು ಕಳಿಸಲು ಸಾಧ್ಯವೇ ಎಂದು ಕೇಳಿದರು. ನಾನೂ ಖುಷಿಯಿಂದ ಒಪ್ಪಿ, ಪರಿಚಿತರೊಬ್ಬರಿಗೆ ಹೇಳಿ ರಾಗಿ ತರಿಸಿ ಬಳ್ಳಾರಿಗೆ ಕಳಿಸಿಕೊಟ್ಟೆ. ಆದರೆ ರಾಗಿ ತಲುಪಿದ ಕೆಲ ದಿನಗಳ ನಂತರವಷ್ಟೇ ಆದ ಪ್ರಮಾದ ಅರಿವಾಗಿದ್ದು! ನಾನು ರಾಗಿಯನ್ನು ಕೊಂಡವರು, ಅದನ್ನು ಪೂರ್ಣವಾಗಿ ಸ್ವಚ್ಛ ಮಾಡಿ ಕೊಟ್ಟಿರಲಿಲ್ಲ. ನಾವು ಬೇಕಾದಾಗ ಬೇಕಾದಷ್ಟೇ ರಾಗಿ ಹಿಟ್ಟನ್ನು ಕೊಂಡು ತಂದು ಬಳಸುತ್ತಿದ್ದರಿಂದ, ರಾಗಿಯನ್ನು ಸ್ವಚ್ಛ ಮಾಡುವ ಕಷ್ಟದ ಪರಿಕಲ್ಪನೆಯೇ ಇರಲಿಲ್ಲ! ಚನ್ನಬಸವಣ್ಣನವರ ಮನೆಯಲ್ಲಿ ಅವರ ಪತ್ನಿಯವರು ನಾನು ಕಳಿಸಿದ ರಾಗಿ ಸ್ವಚ್ಛ ಮಾಡಲು, ಒನೆದು, ಸೋಸಿ, ಜಾಲಿಸಿ... ಪಡುತ್ತಿರುವ ಕಷ್ಟವನ್ನೆಲ್ಲಾ ವಿವರಿಸಿ ಹೇಳಿದಾಗ, ಈ ವಯಸ್ಸಿನಲ್ಲಿ ಅವರಿಗೆ ಇಷ್ಟೊಂದು ಕಷ್ಟ ಕೊಟ್ಟೆನಲ್ಲ ಎಂದುತೀರಾ ಪಶ್ಚಾತ್ತಾಪ ಉಂಟಾಯ್ತು. ‘ಅದನ್ನು ಬಳಸಬೇಡಿ, ಬೇರೆ ರಾಗಿ ಸ್ವಚ್ಛ ಮಾಡಿಸಿ ಕಳಿಸುತ್ತೇನೆ’ ಎಂದರೂ ಅವರು- ‘ಛೇ! ಇದನ್ನೇನು ವ್ಯರ್ಥವಾಗಿ ಚೆಲ್ಲಲು ಬರುತ್ತಾ, ಬೇಡ, ಬೇಡ’ ಎಂದು ಒಪ್ಪಲೇ ಇಲ್ಲ. ಮತ್ತೆ ಒಂದೆರಡು ಬಾರಿ ರಾಗಿ ಸ್ವಚ್ಛ ಮಾಡಿ ಕಳಿಸುತ್ತೇನೆ ಎಂದು ಕೇಳಿದಾಗಲೂ ಬೇಡವೇ ಬೇಡ ಎಂದು ನಿರಾಕರಿಸಿಬಿಟ್ಟರು.

ಹೀಗೆ ನನ್ನ ತಪ್ಪಿನ ಪಶ್ಚಾತ್ತಾಪ ಶಾಶ್ವತವಾಗಿ ನನ್ನೊಂದಿಗೇ ಉಳಿಯುವಂತಾಗಿ ಬಿಟ್ಟಿತು. ಮತ್ತೆ ಮುಂದೆ 2010ರಲ್ಲೂ ನನ್ನ `ಕಡಲಿಗೆಷ್ಟೊಂದು ಬಾಗಿಲು' ಕವನ ಸಂಕಲನವನ್ನು ಚನ್ನಬಸವಣ್ಣನವರೇ ಮುದ್ರಿಸಿದರು. 2015ರಲ್ಲಿ ನನ್ನ`ತನ್ನಷ್ಟಕ್ಕೆ' ಕವನ ಸಂಕಲನ ಮುದ್ರಣಕ್ಕೆ ಸಿದ್ಧಗೊಳಿಸುವ ವೇಳೆಗಾಗಲೇ ಅವರು ಲೋಹಿಯಾ ಪ್ರಕಾಶನವನ್ನು ನಿಧಾನಗೊಳಿಸಿದ್ದರು. ಹೀಗಾಗಿ ಅವರ ಪ್ರಕಾಶನದಿಂದ ನನ್ನ ಎರಡೇ ಕವನ ಸಂಕಲನಗಳು ಮುದ್ರಣಗೊಂಡಿದ್ದು. ಆದರೆ ಮುಂದೆಯೂ ಬಾಂಧವ್ಯ ಮಾತ್ರ ಗಟ್ಟಿಗೊಳ್ಳುತ್ತಾ ಸಾಗಿದೆ. ಈ ಮಧ್ಯೆ ಸಾಹಿತ್ಯ ಕಾರ್ಯಕ್ರಮಕ್ಕೆಂದು ಬಳ್ಳಾರಿಗೆ ಹೋದಾಗೊಮ್ಮೆ ಚನ್ನಬಸವಣ್ಣ ಅವರನ್ನು ಹಾಗೂ ಅವರ ಪತ್ನಿಯವರನ್ನು ಮನೆಗೆ ಹೋಗಿ ಮೊದಲ ಬಾರಿಗೆ ಭೇಟಿಯಾದೆ! ಬೆಳಗಿನ ತಿಂಡಿ ತಿನ್ನುತ್ತಾ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಹಲವು ವಿಚಾರಗಳನ್ನು ಚರ್ಚಿಸಿದ್ದು ಮರೆಯಲಾಗದ ಅನುಭವ. ಹಾಗೇ ಅವರ ಪತ್ನಿಯವರು ಪ್ರೀತಿ ಅಕ್ಕರೆಯಿಂದ ನೀಡಿದ ಹೂವು ಹೂವಿನ ತಿಳಿಬಿಳಿ ಮತ್ತು ಕೆಂಪುಮಿಶ್ರಿತ ಸೀರೆ, ನನ್ನ ಅತ್ಯಂತ ಇಷ್ಟದ ಸೀರೆಗಳಲ್ಲೊಂದಾಗಿ ಹೋಗಿದೆ. ಮುಂದೆ ವಿವಿಧ ಪ್ರಕಾಶಕರು ಪರಿಚಯವಾದರು. ನನ್ನ ಹಲವು ಗದ್ಯ ಪದ್ಯ ಸಂಕಲನಗಳೂ ಪ್ರಕಟವಾದವು. ಅವೆಲ್ಲವನ್ನೂ ತಪ್ಪದೇ ಚನ್ನಬಸವಣ್ಣನವರಿಗೆ ಕಳಿಸುತ್ತಿದ್ದೆ. ಅವರು ಪ್ರಾಮಾಣಿಕ ಓದುಗರು! ಪುಸ್ತಕ ಓದಿದ ನಂತರ ತಪ್ಪದೇ ಫೋನ್‌ ಮಾಡಿ ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಸುದೀರ್ಘವಾಗಿ ಹಂಚಿಕೊಳ್ಳುತ್ತಲೇ ಬಂದಿರುವುದು, ನನಗವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದೆ. ಹಾಸನಕ್ಕೆ ಕುಟುಂಬ ಸಮೇತರಾಗಿ ಬಂದು ಈ ಭಾಗದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಎಂದು ಚನ್ನಬಸವಣ್ಣನವರಿಗೆ ಹೇಳಿದಾಗಲೆಲ್ಲಾ, ‘ನೋಡೋಣಮ್ಮ’ ಎನ್ನುತ್ತಲೇ ಹಾಸನಕ್ಕೆ ಬರದೇ ಉಳಿದಿದ್ದರು. ಆದರೆ ನಾನು ನಿರಿಕ್ಷಿಸಿಯೇ ಇಲ್ಲದ ಸಂದರ್ಭದಲ್ಲಿ ಹಾಸನಕ್ಕೆ ಬಂದು ನನ್ನ ಕುಟುಂಬದ ಸಂತೋಷವನ್ನು ಹೆಚ್ಚಿಸುವ ಜೊತೆಗೆ ಮತ್ತೊಂದು ಬಗೆಯ ಪಶ್ಚಾತ್ತಾಪಕ್ಕೂ ದೂಡಿದರು! ಅದು 2019ರಲ್ಲಿ ನಡೆದ ನನ್ನ ಮಗನ ಮದುವೆಯ ಆರತಕ್ಷತೆಯ ಸಂದರ್ಭ.

ಆತ್ಮೀಯರೆಲ್ಲರಿಗೆ ಕಳಿಸಿದಂತೆ ಚನ್ನಬಸವಣ್ಣ ಅವರಿಗೂ ಆಹ್ವಾನ ಪತ್ರಿಕೆ ಕಳಿಸಿದ್ದೆ. ಅವರಿಗೆ ಮಂಡಿ ನೋವು ಇದ್ದಿದ್ದು ತಿಳಿದಿದ್ದರಿಂದ ಫೋನ್ ಮಾಡಿಯೇನೂ ಆಹ್ವಾನಿಸಿರಲಿಲ್ಲ. ಹೀಗಾಗಿ ಅವರನ್ನು ಆರತಕ್ಷತೆಗೆ ನಿರೀಕ್ಷಿಸಿರಲಿಲ್ಲ. ಆದರೆ ಅವರು ಅಷ್ಟು ದೂರದ ಬಳ್ಳಾರಿಯಿಂದ ಹಾಸನಕ್ಕೆ ಆಗಮಿಸಿದ್ದರು. ಆರತಕ್ಷತೆಯ ವೇದಿಕೆಗೆ ಬಂದಾಗಲೇ ನಮಗವರು ಬಂದಿದ್ದು ತಿಳಿದಿದ್ದು! ಮೊದಲೇ ಅವರಬರುವು ತಿಳಿದಿದ್ದರೆ ಅವರಿಗೆ ಉಳಿದುಕೊಳ್ಳಲು ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ಅನುವುಗೊಳಿಸಬಹುದಿತ್ತಲ್ಲಾ, ಅವರೆಡೆಗೆ ಸರಿಯಾಗ ಗಮನ ನೀಡಲಾಗಲಿಲ್ಲವಲ್ಲಾ ಎಂದು ನಾನು, ನನ್ನ ಪತಿ ಪೇಚಾಡಿಕೊಂಡೆವು. ಮದುವೆಯ ಗಡಿಬಿಡಿ ಕೊಂಚ ಕಳೆದ ಮೇಲೆ ಚನ್ನಬಸವಣ್ಣನವರಿಗೆ ಫೋನ್‌ಮಾಡಿ “ನೀವು ಬಂದಿದ್ದು ತುಂಬಾ ಸಂತೋಷ ನೀಡಿತು ಸರ್. ಹೇಗೆ ಧನ್ಯವಾದ ತಿಳಿಸುವುದು ಗೊತ್ತಾಗ್ತಾ ಇಲ್ಲ. ಖಂಡಿತಾ ಆರತಕ್ಷತೆಗೆ ನೀವು ಬರುವ ನಿರೀಕ್ಷೆ ಇರಲಿಲ್ಲ. ಹೀಗಾಗಿ ದೂರದಿಂದ ಬಂದಿದ್ದ ನಿಮಗೆ ಫ್ರೆಶ್ ಆಗಲೂ ವ್ಯವಸ್ಥೆ ಕಲ್ಪಿಸಲಾಗಲಿಲ್ಲ. ನಿಮಗೆಷ್ಟು ತೊಂದರೆ ಆಯ್ತೋ ತಿಳಿಯಲಿಲ್ಲ. ಕ್ಷಮಿಸಿ” ಎಂದೆ. ಅವರದಕ್ಕೆ ಅಷ್ಟೇ ಸಲೀಸಾಗಿ “ಬರದೇ ಇರೋದು ಹೇಗಮ್ಮ? ನಿಮಗಿರೋದು ಒಬ್ಬನೇ ಮಗ. ಮೇಲಾಗಿ ಇದವನ ಪ್ರೇಮ ವಿವಾಹ. ಜೊತೆಗೆ ಅಂತರ್‌ಧರ್ಮೀಯ, ಅಂತರ್ ರಾಜ್ಯದ ಹೆಣ್ಣು ಮಗಳೊಂದಿಗಿನ ಮದುವೆ. ಈ ಸಂದರ್ಭದಲ್ಲಿನಿಮ್ಮ ಕುಟುಂಬದೊಡನಿದ್ದು ಸಂಭ್ರಮಿಸುವುದು ನನಗೂ ಸಂತೋಷವೇ. ಏನೂ ತೊಂದರೆ ಆಗಲಿಲ್ಲ ಬಿಡಮ್ಮ” ಎಂದರು. ದೊಡ್ಡ ಮನಸ್ಸಿನ ಅವರೇನೋ ನಿರಾಳವಾಗಿದ್ದರು. ಆದರೆ ನಮಗೆ ಮಾತ್ರ ಇದು, ನೆನೆದಾಗಲೆಲ್ಲಾ ಪಶ್ಚಾತ್ತಾಪಪಡುವ ವಿಷಯವೇ ಆಗಿಹೋಗಿದೆ. ಚನ್ನಬಸವಣ್ಣನವರೊಂದಿಗೆ ಇತ್ತೀಚೆಗೆ ಮಾತನಾಡುವಾಗಲೆಲ್ಲಾ ನೈತಿಕ ಅಧಃಪತನದೆಡೆಗೆ ಸಾಗುತ್ತಿರುವ ಸಮಾಜದ ಹಲವು ವಿಕೃತಿಯ ಕುರಿತು ಹೆಚ್ಚು ಆತಂಕದಿಂದ ಚರ್ಚಿಸುತ್ತಿರುತ್ತೇವೆ. ಜಾಗೃತ ಮನಸಿನ ನಿಷ್ಠಾವಂತರಿಗೆಲ್ಲ ಇದು ಗಂಭೀರವಾಗಿ ಕಾಡುವ ವಿಷಯವೇ. ಆಗೆಲ್ಲಾ ನಾನು ಮತ್ತೆ ಮತ್ತೆ, ‘ನಿಮ್ಮಂಥವರ ಆತ್ಮಚರಿತ್ರೆಗಳು ಈ ಕಾಲದ ಯುವಜನರಿಗೆ ಅತ್ಯಂತ ಮುಖ್ಯವಾದುದು ಸರ್. ದಯವಿಟ್ಟು ಬರೆಯಿರಿ’ ಎಂದು ಮನವಿ ಮಾಡುತ್ತಲೇ ಇದ್ದೇನೆ. ಅವರದನ್ನು ನಯವಾಗಿ ತಿರಸ್ಕರಿಸುತ್ತಾ ಬಂದಿದ್ದಾರೆ. ‘ನನಗೆ ಬರೆಯಲು ಬರಲ್ಲಮ್ಮ. ಮತ್ತೀಗೀನ ಯುವಜನರಿಗೆ, ಅವರ ದೇಹಲವು ಲೋಕಗಳ ವಿಸ್ತಾರ ತೆರೆದುಕೊಂಡಿರುವಾಗ, ನಮ್ಮ ಪುರಾಣಗಳೆಲ್ಲಾ ಯಾರಿಗೆ ಬೇಕು?’ ಎನ್ನುತ್ತಾರೆ. ಆದರೂ ನಾನು ಬಿಡದೇ, “ನೆನಪಾದಾಗಲೆಲ್ಲಾ, ನೆನಪಾದಷ್ಟು ದಾಖಲಿಸಿಡಿ ಸರ್. ಮುಂದೆ ಎಲ್ಲ ಸೇರಿಸಿ ಬರೆಯಬಹುದು. ನೀವಲ್ಲದಿದ್ದರೇ ಬೇರೆಯವರಾದರೂ ಜೀವನ ಕಥನವನ್ನು ಕಟ್ಟಿಕೊಡಲು ಸಾಧ್ಯವಿದೆ” ಎಂದು ಹೇಳುತ್ತಲೇ ಇದ್ದೇನೆ. ಚನ್ನಬಸವಣ್ಣನವರ ಆತ್ಮೀಯರು ಯಾರಾದರೂ ಅವರ ಜೀವನ ಕಥನವನ್ನು ಸಾಧ್ಯವಾದಷ್ಟೂ ಬೇಗ ಕಟ್ಟಿಕೊಡುವಂತಾಗಲಿ. ಅದು ಇಂದಿನ ದಿಕ್ಕು ತಪ್ಪಿರುವಂತಿರುವ ನಮ್ಮ ಯುವಜನರಿಗೆ ಒಂದಿಷ್ಟಾದರೂ ದಾರಿತೋರಲು ನೆರವಾಗಲಿ ಎಂಬ ಆಶಯವಂತೂ ಇದ್ದೇ ಇದೆ. ಅಷ್ಟೇ ಅಲ್ಲ, ಇದು ನಮ್ಮ ಹಿಂದಿನ ತತ್ವನಿಷ್ಠ ತಲೆಮಾರಿನ ಸಂಘರ್ಷ ಮತ್ತು ಜೀವನದ ಮಹತ್ವದ ದಾಖಲೀಕರಣವೂ ಆಗುತ್ತದೆ.

MORE FEATURES

ಕನ್ನಡ ಆಧುನಿಕ ಕಥನ ಸಾಹಿತ್ಯವು ಪ್ರಾರಂಭದಲ್ಲಿ ಹೊಂದಿದ್ದ ವೈವಿಧ್ಯ ಈಗ ಕಾಣಿಸುತ್ತಿಲ್ಲ

23-03-2025 ಬೆಂಗಳೂರು

"ಲೇಖಕರ ಹಾಸ್ಯ, ವ್ಯಂಗ್ಯಗಳು ಮತ್ತು ಕುತೂಹಲ ಉಳಿಸಿಕೊಳ್ಳುವ ನಿರೂಪಣೆ ಈ ಕತೆಗಳ ವೈಶಿಷ್ಟ್ಯ. ಕತೆಗಳು ಒಂದು ಒಂದೂವ...

ಪ್ರಕೃತಿ ಸಹಜವಾದ ಆಕರ್ಷಣೆಯ ಆದರ್ಶ ಜೀವನ ಎಲ್ಲರಿಗೂ ಬೇಕು

23-03-2025 ಬೆಂಗಳೂರು

"ಜಲಪಾತ ಹೆಸರೇ ಸೂಚಿಸುವಂತೆ ನಿರಂತರ ಹರಿಯುತ್ತಿರುವ ಪ್ರಕೃತಿಯ ಶಕ್ತಿಯ ಅಗಾಧತೆಯನ್ನು ಬಿಂಬಿಸುವ ಪ್ರಾಕೃತಿಕ ಸೃಷ್...

'ಮೂಕತೋಳ' ಎಲ್ಲೂ ಹೆಚ್ಚು ಮಾತನಾಡದಿರುವುದು ಕಾದಂಬರಿಯ ಅತಿದೊಡ್ಡ ಶಕ್ತಿ!

23-03-2025 ಬೆಂಗಳೂರು

"ಲೇಖಕರೇ ಹೇಳಿದಂತೆ ಇದು ಕ್ರೂರ, ಸ್ವಾರ್ಥಿ, ವಿವೇಚನಾರಹಿತ ಗಂಡಸರ ಕೈಯ್ಯಲ್ಲಿ ಸಿಕ್ಕಿಕೊಂಡ ಅನೇಕ ಹೆಣ್ಣುಮಕ್ಕಳ ಕ...