"ಜಲಪಾತ ಹೆಸರೇ ಸೂಚಿಸುವಂತೆ ನಿರಂತರ ಹರಿಯುತ್ತಿರುವ ಪ್ರಕೃತಿಯ ಶಕ್ತಿಯ ಅಗಾಧತೆಯನ್ನು ಬಿಂಬಿಸುವ ಪ್ರಾಕೃತಿಕ ಸೃಷ್ಟಿ. ಯಾವುದೇ ಹಂಗಿಲ್ಲದೆ ಮೇಲಿನಿಂದ ಕೆಳಕ್ಕೆ ಧುಮುಕುವ ಈ ನೀರಿನ ಹರಿವನ್ನು ಚಿತ್ರಕಲಾ ಪ್ರಪಂಚದೊಂದಿಗೆ ಮೇಳೈಸಿ ಭೂಮಿಯಲ್ಲಿ ಜೀವ ಸೃಷ್ಟಿಯ ಮೂಲ ಪ್ರಕ್ರಿಯೆಯೊಂದಿಗೆ ಹೆಣೆದು ಬರೆದ ಕಥಾನಕ ಲೇಖಕರ ಅಗಾಧ ಪಾಂಡಿತ್ಯ ಹಾಗೂ ಸೃಜನಶೀಲ ಕೌಶಲ್ಯಕ್ಕೆ ಸಾಕ್ಷಿ," ಎನ್ನುತ್ತಾರೆ ಶೈಲಾ ಗೋವಿಂದ್. ಅವರು ಎಸ್.ಎಲ್. ಭೈರಪ್ಪ ಅವರ ‘ಜಲಪಾತ’ ಕೃತಿ ಕುರಿತು ಬರೆದ ವಿಮರ್ಶೆ.
ಶ್ರೀಯುತ ಎಸ್ ಎಲ್ ಭೈರಪ್ಪನವರ ಕಾದಂಬರಿಯ ಓದು ಯಾವಾಗಲೂ ಗಂಭೀರ ಚಿಂತನೆಗೆ ಹಚ್ಚುವಂತಹ ಕಥಾನಕ. ತೂಕಬದ್ದ ಪ್ರಸ್ತಾಪನೆ, ಅಧ್ಯಯನಶೀಲ ವಿಶ್ಲೇಷಣೆಗಳು, ವಸ್ತುನಿಷ್ಠ ನಿರೂಪಣೆ ಹಾಗೂ ಅನನ್ಯ ಬರವಣಿಗೆಯ ಶೈಲಿಯಿಂದ ಅವರ ಎಲ್ಲ ಕಾದಂಬರಿಗಳ ಮರುಓದು ಪ್ರತಿ ಸಲವೂ ಹೊಸ ಚಿಂತನೆಗಳನ್ನೇ ಹುಟ್ಟು ಹಾಕುತ್ತದೆ. ಕಾದಂಬರಿಯನ್ನು ವಿಶ್ಲೇಷಿಸುವಷ್ಟು ಅನುಭವಸ್ಥಳಲ್ಲದ ನಾನು ಈ ಪುಸ್ತಕದ ಮೊದಲ ಓದಿನ ಚಿಕ್ಕ ಪರಿಚಯವನ್ನು ಇಲ್ಲಿ ಮಾಡಿಕೊಡುವ ಪ್ರಯತ್ನ ಮಾಡಿರುವೆ.
ಜಲಪಾತ ಹೆಸರೇ ಸೂಚಿಸುವಂತೆ ನಿರಂತರ ಹರಿಯುತ್ತಿರುವ ಪ್ರಕೃತಿಯ ಶಕ್ತಿಯ ಅಗಾಧತೆಯನ್ನು ಬಿಂಬಿಸುವ ಪ್ರಾಕೃತಿಕ ಸೃಷ್ಟಿ. ಯಾವುದೇ ಹಂಗಿಲ್ಲದೆ ಮೇಲಿನಿಂದ ಕೆಳಕ್ಕೆ ಧುಮುಕುವ ಈ ನೀರಿನ ಹರಿವನ್ನು ಚಿತ್ರಕಲಾ ಪ್ರಪಂಚದೊಂದಿಗೆ ಮೇಳೈಸಿ ಭೂಮಿಯಲ್ಲಿ ಜೀವ ಸೃಷ್ಟಿಯ ಮೂಲ ಪ್ರಕ್ರಿಯೆಯೊಂದಿಗೆ ಹೆಣೆದು ಬರೆದ ಕಥಾನಕ ಲೇಖಕರ ಅಗಾಧ ಪಾಂಡಿತ್ಯ ಹಾಗೂ ಸೃಜನಶೀಲ ಕೌಶಲ್ಯಕ್ಕೆ ಸಾಕ್ಷಿ. ಎಷ್ಟೇ ಅಂಕು ಡೊಂಕು, ನ್ಯೂನ್ಯತೆಗಳಿದ್ದರೂ ಗುಣದೋಷ ಎರಡನ್ನು ಒಳಗೊಂಡ ಪ್ರಕೃತಿ ಸಹಜವಾದ ಹರಿವು ಸದಾ ತಾದಾತ್ಮ್ಯವಾಗಿರುತ್ತದೆ. ಅಂತೆಯೇ ಗಂಡು-ಹೆಣ್ಣಿನ ಸಂಭೋಗದಿಂದ ಉಂಟಾಗುವ ಮಗುವಿನ ಸೃಷ್ಟಿಯೂ ಕೂಡ ಎಂದು ಲೇಖಕರು ಇಲ್ಲಿ ತಿಳಿಸುತ್ತಾರೆ. ಜನನ ನಿಯಂತ್ರಣಗಳ ಅಳವಡಿಕೆ ಎಂಬುದು ಹೇಗೆ ಜಲಪಾತಗಳಿಗೆ ಕಟ್ಟುವ ಅಣೆಕಟ್ಟುಗಳಿಗೆ ಸಮನಾಗಿ ಪ್ರಾಕೃತಿಕ ಹರಿವಿಗೆ ತಡೆಯೊಡ್ಡಿ ಆರೋಗ್ಯ -ಮನಸ್ಸಿನ ಮೇಲೆ ದುಷ್ಪರಿಣಾಮಗಳನ್ನು ಬೀರಬಹುದು ಎಂದು ಕೂಡ ಇದರಲ್ಲಿ ತಿಳಿಸಿದ್ದಾರೆ. ಸೃಷ್ಟಿಯ ಉದ್ದೇಶರಹಿತ , ಬರಿಯ ಶಾರೀರಿಕ ಸುಖಕ್ಕಾಗಿ ದಂಪತಿ ಮಾಡುವ ಕಾಮ, ಸಂಭೋಗಗಳೂ ಕೂಡ ಹೇಗೆ ವ್ಯಭಿಚಾರ ಎನಿಸಿಕೊಳ್ಳುತ್ತದೆ ಎಂದು ವಿಶ್ಲೇಷಿಸಿದ ಪರಿ ತಾರ್ಕಿಕ ಚಿಂತನೆಗಳಿಂದ ಕೂಡಿದೆ. ಸೃಷ್ಟಿಯ ಪೂರ್ವಭಾವಿ ತಯಾರಿ ಹಾಗೂ ಪ್ರಕ್ರಿಯೆಗಳ ವರ್ಣನೆ- ಹೋಲಿಕೆ ಅಲ್ಲದೆ ಪರಿಸರದ ಪ್ರಭಾವಗಳನ್ನು ಬಹಳ ಪ್ರಭಾವಕಾರಿಯಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಚರ್ಚಿಸಿದ್ದಾರೆ. ಸಂಗೀತದ ಶಾಸ್ತ್ರೀಯ ಭಾಷೆ, ಚಿತ್ರಕಲಾ ನೈಪುಣ್ಯತೆ ಹಾಗೂ ಜೋಗ ಜಲಪಾತದ ವಸ್ತುನಿಷ್ಠ ವಿವರಣೆಗಳು ಲೇಖಕರ ಅಧ್ಯಯನ ಶ್ರಮವನ್ನು ಎತ್ತಿ ತೋರಿಸುತ್ತದೆ.
ಮುಂಬೈ ಪ್ರಯಾಣದ ವಿವಿಧ ಮಾರ್ಗಗಳನ್ನು ಪರಿಚಯಿಸುತ್ತಾ ಆರಂಭವಾಗುವ ಕಥೆ ಮೈಸೂರು ಮೂಲದ ಶ್ರೀಪತಿ/ಭೂದೇವ ಎಂಬವರ ಸ್ವಗತದಿಂದ ಆರಂಭವಾಗುತ್ತದೆ. ಮಾವನ ಮಗಳನ್ನು ಮದುವೆಯಾಗಿ ಪತ್ನಿ ಭೂದೇವಿ/ವಸುಂಧರಾಳನ್ನು ನಾಲ್ಕು ವರ್ಷಗಳ ತನಕ ಅಗಲಿದ್ದು, ಮಗ ವಿಶ್ವ ಹುಟ್ಟಿದ ತರುವಾಯ ಮುಂಬೈ ಮಹಾನಗರಕ್ಕೆ ಕರೆಸಿಕೊಂಡಿರುತ್ತಾನೆ. ಊರಿನಲ್ಲಿದ್ದ ಕೋಟಿಗದ್ದೆ ಮಾರಿ ಮಾಹೀಮ್ ನಲ್ಲಿ ಆಗತಾನೇ ಏಳುತ್ತಿದ್ದ ನಾಲ್ಕು ಅಂತಸ್ತಿನ ಕಟ್ಟಡದ ಒಂದೂವರೆ ಕೋಣೆಯ ಮನೆಯನ್ನು ತನ್ನದಾಗಿಸಿ ಸಂಸಾರ ಆರಂಭಿಸುವ ಶ್ರೀಪತಿ ಈ ಕಥೆಯ ನಾಯಕ. ಚಿತ್ರಕಲೆಯ ಹುಟ್ಟುಪ್ರತಿಭೆಯಾದ ಈತ ಕಲಿಕೆಯನ್ನು ಅರ್ಧದಲ್ಲಿ ಬಿಟ್ಟು ಚಿತ್ರಕಲೆಯಲ್ಲಿಯೇ ಪರಿಣತಿ ಹೊಂದುತ್ತಾನೆ. ಗ್ರಾಹಕರ ಯೋಜನೆಗೆ ತಕ್ಕಂತೆ ವಿನ್ಯಾಸಗಳನ್ನು ಮಾಡುವ ಕಂಪನಿ ಒಂದರಲ್ಲಿ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಸೇರಿಕೊಂಡರೂ ಸ್ವಾಭಾವಿಕ ಚಿತ್ರಕಲೆಯ ಮನಸ್ಸಂತೋಷ ಅಲ್ಲಿ ಸಿಗುವುದಿಲ್ಲ. ಈ ನಡುವೆ ಹೊತ್ತು ಕಳೆಯಲು ವಸಂಧರ ಸಂಗೀತ ಪಾಠಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿ ಕಲಿಸುವ ಸಂಗೀತ ಗುರುಗಳ ವಿಶ್ಲೇಷಣೆಗಳು ಲೇಖಕರ ಆಳವಾದ ಸಂಗೀತ ಜ್ಞಾನವನ್ನು ಅನಾವರಣಗೊಳಿಸುತ್ತದೆ.
ವಸುಂಧರಾ ಗರ್ಭ ತೆಗಸಲು ಕಾರಣವೇನು? ಮುಂಬೈ ರೈಲು ಪ್ರಯಾಣದ ಪರದಾಟಗಳೇನು? ರೆಬೆಲೋ ಶ್ರೀಪತಿಯಲ್ಲಿ ಇಟ್ಟ ವಿಚಿತ್ರ ಬೇಡಿಕೆ ಏನು? ಶ್ರೀದೇವಿ-ಶ್ರೀಪತಿಯವರ ಬಾಲ್ಯದ ಒಡನಾಟ ಹೇಗಿತ್ತು? ಮತ್ರಾನಿಯವರ ಮದುವೆ ಸಂಭ್ರಮದ ವಿಪರ್ಯಾಸಗಳೇನು? ಸುಂದರ ಸುಂದರ ಬಾಯಿಯವರ ಒಡನಾಟದ ಕ್ಷಣಗಳು ಯಾವುವು? ಜೋಗ ಜಲಪಾತಕ್ಕೆ ಭೇಟಿ ನೀಡಿದ ಶ್ರೀಪತಿ ವಸುಂಧರಾರ ರಸವತ್ತಾದ ಕ್ಷಣಗಳ ನೆನಪುಗಳೇನು? ಪ್ರಾಣಿ ಪ್ರಸೂತಿ ತಜ್ಞರಾಗಿದ್ದ ಪ್ರೊ. ನಾಡಗೌಡ ಅವರ ಆಧುನಿಕ ಮನೋಭಾವನೆಗಳೇನು? ರೆಬೆಲೊಳ ತೈಲವರ್ಣ ಬರೆಯಲು ಒಪ್ಪಿಕೊಂಡ ಶ್ರೀಪತಿಯ ಮನಸ್ಥಿತಿಯೇನು? ಕಾಮಟಿಪುರಕ್ಕೆ ಆತ ಭೇಟಿ ನೀಡಲು ಕಾರಣವೇನು? ವಸುಂಧರಾ ಆತನ ಕಣ್ತೆರೆಸಿದ ಪರಿ ಹೇಗೆ? ಹೀಗೆ ಅನೇಕ ರೋಚಕ ತಿರುವುಗಳೊಂದಿಗೆ ಕಥೆ ಮುಂದೆ ಸಾಗುತ್ತದೆ.
ಮತ್ತೆ ಗರ್ಭಿಣಿಯಾದ ವಸುಂಧರಾ, ಸ್ವಯಂ ಪ್ರೇರಿತನಾಗಿ ಪ್ರಕೃತಿಯ ಮಡಿಲಲ್ಲಿ ಶ್ರೀಪತಿ ಆಕೆಯನ್ನು ಕುಳ್ಳಿರಿಸಿ ಬರೆದ ತೈಲ ಚಿತ್ರಗಳು, ಸುಧಾ ಬಾಯಿಯ ಉಪಚಾರ- ಆರೈಕೆ, ಉಮಾಳ ಜನನ, ಹೆರಿಗೆ ನೋವಿನಿಂದ ಹಿಡಿದು ಮಗು ಜನನದವರೆಗಿನ ಕೆಲ ಗಂಟೆಗಳ ಕಾಲದ ಸ್ತ್ರೀ-ಸಂವೇದನೆಗಳನ್ನು ಮರು ಹುಟ್ಟಿನ ಗಳಿಗೆಗಳನ್ನು ಅಲ್ಲದೆ ಸ್ತ್ರೀಯ ಮಾತೃತ್ವದಛಾಯೆ ಅರಳುವ ಸನ್ನಿವೇಶವನ್ನು ಒಬ್ಬ ಗಂಡಾಗಿ ಲೇಖಕರು ಸಮರ್ಥವಾಗಿ ಅಕ್ಷರಕ್ಕಿಳಿಸಿದ್ದು ಅಚ್ಚರಿ ತರುತ್ತದೆ.
ಸ್ವಾಭಾವಿಕ, ಪ್ರಕೃತಿಗೆ ಹತ್ತಿರವಾದ ಜೀವನವನ್ನು ಜೀವಿಸಲು ಮುಂಬಯಿ ತೊರೆದು ಊರಿಗೆ ಬರುವ ಶ್ರೀಪತಿ-ವಸು ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಬದಲಾದ ಹಳ್ಳಿ ಜೀವನ, ದ್ವೇಷ-ಪಿತೂರಿಗಳ ಮುಖಾಮುಖಿ, ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಜ್ವರಪೀಡಿತ ಉಮಾಳ ಸಾವು, ಶ್ರೀದೇವಿಯ ಉಪದೇಶ, ಮರಳಿ ಮುಂಬೈಯ ಕೆಲಸಕ್ಕೆ ಹೋಗುವ ನಿರ್ಧಾರ ಎಲ್ಲವೂ ಕಥೆಯ ಕೊನೆಯ ಭಾಗದಲ್ಲಿ ಸಮಾಜದ ಬದಲಾವಣೆಗೆ ಹೊಂದಿಕೊಳ್ಳುವ ಅನಿವಾರ್ಯತೆಯನ್ನು ಸೂಚಿಸುತ್ತದೆ. ಬದುಕಿನಲ್ಲಿ ಸಹಜ ಹಾಗೂ ಕೃತಕಗಳ ನಡುವಿನ ವ್ಯತ್ಯಾಸ ಹಾಗೂ ಅನಿವಾರ್ಯತೆಗಳನ್ನು ಅನೇಕ ಸಂದರ್ಭಗಳಲ್ಲಿ ಇವರು ಜೀವನದ್ವಂದ್ವಗಳಾಗಿ ನಿರೂಪಿಸಿದ್ದಾರೆ.
ಬದಲಾವಣೆಗಳು ಜಗದ ನಿಯಮ, ಪ್ರಕೃತಿ ಸಹಜವಾದ ಆಕರ್ಷಣೆಯ ಆದರ್ಶ ಜೀವನ ಎಲ್ಲರಿಗೂ ಬೇಕು, ಪ್ರವಾಹದ ವಿರುದ್ಧ ಎಂದು ಈಜಲಾಗದು, ಜೀವ ಸೃಷ್ಟಿಯ ಸೂಕ್ಷ್ಮ ವಿಷಯಗಳು ಜಗತ್ತಿನ ಕಣಕಣದಲ್ಲೂ ಅಡಗಿವೆ, ಆಧುನಿಕ ಆವಿಷ್ಕಾರಗಳ ಬಳಕೆ ಮಿತಿಯೊಳಗೆ ಇರಬೇಕು, ಪ್ರಕೃತಿ ನಿಯಮದ ವಿರುದ್ಧವಾಗಿ ಯಾವುದೂ ನಡೆಯದು.. ಕಾಲನ ಜಲಪಾತದಲ್ಲಿ ನಾವೆಲ್ಲ ಕೊಚ್ಚಿಕೊಂಡು ಹೋದರೆಷ್ಟೇ ಜೀವನ, ವಿರುದ್ಧ ಈಜಿದರೆ ಅಪಾಯ ವಿನಾಶ ಖಚಿತ... ಹೀಗೆ ನಾನಾ ಹಳ ಹೂಗಳನ್ನು ಓದುಗರ ಚಿಂತನೆಗೆ ಹಚ್ಚಿ ಪ್ರತೀ ಓದಿನಲ್ಲು ಹೊಸ ಹೊಳಹು ನೀಡುವ ಪ್ರಬುದ್ಧ ಕಾದಂಬರಿ ಇದು.
"ಇಲ್ಲಿನ ಕತೆಗಳಲ್ಲಿ ಸಂಕೀರ್ಣ ನಿರೂಪಣೆ ಇಲ್ಲ. ಅವು ಸುದೀರ್ಘವೂ ಅಲ್ಲ. ಹಾಗಂದ ಮಾತ್ರಕ್ಕೆ ಅವು ಕಾವ್ಯಾತ್ಮಕ ಗುಣದ...
"ಬಾಲ್ಯದಲ್ಲಿ ಶ್ರೀಮಂತಿಕೆಯಲ್ಲಿ ಬೆಳೆದ ಭುಜಂಗಾಚಾರ್ಯರು ತಂದೆಯ ಅಕಾಲಿಕ ಮರಣದಿಂದ ವಿಧಿ ತಂದೆಯನ್ನಲ್ಲದೇ ಶ್ರೀಮಂತ...
“ಇಲ್ಲಿ ಲೇಖಕಿಯು ವೇಶ್ಯೆಯ ಮಗಳು ಸಮಾಜದಲ್ಲಿ ಎದುರಿಸುವ ಸವಾಲು ಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಹಾಗೂ ಆ...
©2025 Book Brahma Private Limited.