"ಲೇಖಕರ ಹಾಸ್ಯ, ವ್ಯಂಗ್ಯಗಳು ಮತ್ತು ಕುತೂಹಲ ಉಳಿಸಿಕೊಳ್ಳುವ ನಿರೂಪಣೆ ಈ ಕತೆಗಳ ವೈಶಿಷ್ಟ್ಯ. ಕತೆಗಳು ಒಂದು ಒಂದೂವರೆ ಪುಟದಿಂದ ಇಪ್ಪತ್ತೊಂದು ಪುಟದವರೆಗಿನ ಗಾತ್ರದವುಗಳು. ಯಾವುದೇ ಮಿತಿಗಳನ್ನು ಹಾಕಿಕೊಳ್ಳದೆ ವಸ್ತು ವೈವಿಧ್ಯಕ್ಕನುಗುಣವಾಗಿ ಗಾತ್ರ ವೈವಿಧ್ಯ ಇರುವುದನ್ನು ಗಮನಿಸಬಹುದು," ಎನ್ನುತ್ತಾರೆ ಬಿ. ಜನಾರ್ದನ ಭಟ್. ಅವರು ಎಸ್ ಎನ್ ಸಿಂಹ ಅವರ ‘ಕನ್ನಡಿ ಸುಳ್ಳು ಹೇಳುವುದಿಲ್ಲ’ ಕೃತಿ ಕುರಿತು ಬರೆದ ವಿಮರ್ಶೆ.
ಕನ್ನಡ ಆಧುನಿಕ ಕಥನ ಸಾಹಿತ್ಯವು ಪ್ರಾರಂಭದಲ್ಲಿ ಹೊಂದಿದ್ದ ವೈವಿಧ್ಯ ಈಗ ಕಾಣಿಸುತ್ತಿಲ್ಲ. ಓ. ಹೆನ್ರಿ, ಪಿ.ಜಿ. ವುಡ್‌ಹೌಸ್ ಮತ್ತಿತರ ಹಲವಾರು ಕತೆಗಾರರು ಸೃಷ್ಟಿಸುತ್ತಿದ್ದ ಪಾಶ್ಚಾತ್ಯ ಕತೆಗಳು, ಲಘು ಹಾಸ್ಯಪ್ರಬಂಧ ಶೈಲಿಯ ಕಥನಗಳು, ಲಲಿತ ಪ್ರಬಂಧಗಳು wit, humour, suspense ಇತ್ಯಾದಿ ಹೂರಣಗಳೊಂದಿಗೆ ಬಗೆಬಗೆಯ ಓದಿಗೆ ಗ್ರಾಸ ಒದಗಿಸುತ್ತಿದ್ದ ಕಾಲದಲ್ಲಿ (20 ನೆಯ ಶತಮಾನದ ಪೂರ್ವಾರ್ಧದಲ್ಲಿ) ಕನ್ನಡದಲ್ಲಿಯೂ ಕೊರವಂಜಿ ಬಳಗ, ಮಂಗಳೂರಿನ ಲೇಖಕರು (ಪಂಜೆ, ಎಂ. ಎನ್. ಕಾಮತ್, ಹುರುಳಿ ಭೀಮರಾಯರು, ಪಡುಕೋಣೆ ರಮಾನಂದ ರಾಯರು, ಕುಡ್ಪಿ ವಾಸುದೇವ ಶೆಣೈ, ರಮಾನಂದ ಘಾಟೆ, ಜೋಡುಮಠ ವಾಮನ ಭಟ್ಟರು ಮುಂತಾದವರು) ಕಥನದಲ್ಲಿ ಹಾಸ್ಯ, ವ್ಯಂಗ್ಯ, ಕಟಕಿ ಇತ್ಯಾದಿಗಳನ್ನು ಬಳಸಿ ಬದುಕಿನ ಅವಲೋಕನದ ಹೊಸಹೊಸ ಸಾಧ್ಯತೆಗಳನ್ನು ತೋರಿಸಿದ್ದರು.
ಈಗ ಅದು ನೆನಪಾಗಲು ಎಸ್ ಎನ್ ಸಿಂಹರ 'ಕನ್ನಡಿ ಸುಳ್ಳುಹೇಳುವುದಿಲ್ಲ' ಸಂಕಲನ ಕಾರಣವಾಯಿತು. ಲೇಖಕರ ಹಾಸ್ಯ, ವ್ಯಂಗ್ಯಗಳು ಮತ್ತು ಕುತೂಹಲ ಉಳಿಸಿಕೊಳ್ಳುವ ನಿರೂಪಣೆ ಈ ಕತೆಗಳ ವೈಶಿಷ್ಟ್ಯ. ಕತೆಗಳು ಒಂದು ಒಂದೂವರೆ ಪುಟದಿಂದ ಇಪ್ಪತ್ತೊಂದು ಪುಟದವರೆಗಿನ ಗಾತ್ರದವುಗಳು. ಯಾವುದೇ ಮಿತಿಗಳನ್ನು ಹಾಕಿಕೊಳ್ಳದೆ ವಸ್ತು ವೈವಿಧ್ಯಕ್ಕನುಗುಣವಾಗಿ ಗಾತ್ರ ವೈವಿಧ್ಯ ಇರುವುದನ್ನು ಗಮನಿಸಬಹುದು.
ಈ ಕತೆಗಳು ತಮ್ಮ ಚುರುಕಿನ ನಿರೂಪಣೆ, ವ್ಯಂಗ್ಯ ಮತ್ತು ಹಾಸ್ಯದ ಶೈಲಿಯಿಂದ ಚೆನ್ನಾಗಿ ಓದಿಸಿಕೊಳ್ಳುತ್ತವೆ.
ಸಿಂಹ ಅವರು ವರ್ತಮಾನ ಕಾಲದ ಸಮಾಜದ ಹಳವಂಡಗಳನ್ನು ವಿವಿಧ ಕತೆಗಳಾಗಿ ತೋರಿಸಿಕೊಡುತ್ತಾರೆ. ಉದಾಹರಣೆಗೆ, 'ಹಾರುವ ನವಿಲುಗಳು' ನವಿಲು ಕೆಂಬೂತಗಳ ಕತೆಯನ್ನು ಹೇಳುತ್ತದೆ, ಅದರೆ ಕತೆ ಸೂಚಿಸುವುದು ಸಮಾಜದ ಒಂದು ವಾಸ್ತವವನ್ನು. 'ಜೇಡಗಳು', 'ಕೋಗಿಲೆ ಕಾಗೆಯಾದ ಕಥೆ' ಕತೆಗಳೂ ಹಾಗೆಯೆ. 'ಸಿಮ್ ಕಾರ್ಡ್' ಮುಂತಾದ ಕತೆಗಳು ಆಧುನಿಕ ಬದುಕಿನ ವೈಚಿತ್ರ್ಯಗಳಿಗೆ ಸೂಕ್ತವಾದ ರೂಪಕಗಳನ್ನು ಬಳಸುತ್ತವೆ.
ಒಟ್ಟಿನಲ್ಲಿ ಚುರುಕಾಗಿ ಓದಿಸಿಕೊಳ್ಳುವ ವ್ಯಂಗ್ಯ ದರ್ಶನದ ಕತೆಗಳಿವು. ಹಲವು ಕತೆಗಳು ಈಗಿನ 'ಹನಿ ಕತೆ', 'ಮಿನಿ ಕತೆ'ಗಳಂತಿವೆ.
"ಇಲ್ಲಿನ ಕತೆಗಳಲ್ಲಿ ಸಂಕೀರ್ಣ ನಿರೂಪಣೆ ಇಲ್ಲ. ಅವು ಸುದೀರ್ಘವೂ ಅಲ್ಲ. ಹಾಗಂದ ಮಾತ್ರಕ್ಕೆ ಅವು ಕಾವ್ಯಾತ್ಮಕ ಗುಣದ...
"ಬಾಲ್ಯದಲ್ಲಿ ಶ್ರೀಮಂತಿಕೆಯಲ್ಲಿ ಬೆಳೆದ ಭುಜಂಗಾಚಾರ್ಯರು ತಂದೆಯ ಅಕಾಲಿಕ ಮರಣದಿಂದ ವಿಧಿ ತಂದೆಯನ್ನಲ್ಲದೇ ಶ್ರೀಮಂತ...
“ಇಲ್ಲಿ ಲೇಖಕಿಯು ವೇಶ್ಯೆಯ ಮಗಳು ಸಮಾಜದಲ್ಲಿ ಎದುರಿಸುವ ಸವಾಲು ಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಹಾಗೂ ಆ...
©2025 Book Brahma Private Limited.