ಅಚ್ಚರಿಗೆ ನೂಕುವ ಹೊಳಹುಗಳು 

Date: 06-10-2022

Location: ಬೆಂಗಳೂರು


ಜನಪದ ದಾಟಿಯಲ್ಲಿ ಬರೆದ ಹಲವಾರು ಗಜಲ್‌ಗಳು ಇಲ್ಲಿದ್ದು ಪ್ರಯೋಗಾತ್ಮಕ ದೃಷ್ಟಿಯಿಂದ ಇವುಗಳನ್ನು ಗಮನಿಸಬಹುದು ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿ ಕಡಲು ಅಂಕಣದಲ್ಲಿ ಸುರೇಶ ಎಲ್ ರಾಜಮಾನೆಯವರ ಸಂಕಲನ ಕುರಿತು ಬರೆದಿದ್ದಾರೆ.

ಪುಸ್ತಕ- ಕತ್ತಲ ಗರ್ಭದ ಬೆಳಕು
ಲೇ- ಸುರೇಶ ಎಲ್ ರಾಜಮಾನೆ
ಪ್ರ-ವಿಶ್ವಖುಷಿ ಪ್ರಕಾಶನ ಬಾಗಲಕೋಟೆ
ವ-2022

ಗಜಲ್ ಬರೆಯೋದೇ ಬೇಡ ಅಂದುಕೊಳ್ಳುತ್ತಲೆ ಗಜಲ್‌ನ್ನು ಎದೆಗಾನಿಸಿಕೊಂಡವಳು ನಾನು.ಹೀಗಾಗಿ ಗಜಲ್ ಪುಸ್ತಕ ಕೈಗೆ ಬಂದರೆ ಒಂದಿಷ್ಟು ಹೆಚ್ಚೇ ಎನ್ನುವ ಆಸ್ತೆಯಿಂದ ಓದುತ್ತೇನೆ.

ಹಾಗೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ಗಜಲ್ ಎನ್ನುವುದು ಎಲ್ಲ ಕಾವ್ಯ ಪ್ರಕಾರಗಳ ರಾಣಿ ಎಂದು ಕರೆಯಿಸಿಕೊಳ್ಳುವಷ್ಟು ಸಶಕ್ತವಾಗಿ ಬೆಳೆದು ನಿಂತಿದೆ. ಹೊಸತಲೆಮಾರಿನ ಕವಿಗಳಲ್ಲಿ ಹೆಚ್ಚಿನ ಕವಿ/ಕವಿಯತ್ರಿಯರು ಗಜಲ್ ಪ್ರಕಾರಕ್ಕೆ ಮಾರುಹೋದವರು. ಒಮ್ಮೆಯಾದರೂ ನಿಯಮದ ಪ್ರಕಾರ ಗಜಲ್ ಬರೆಯಬೇಕೆಂದು ಆಸೆಪಟ್ಟ ಕಿರಿಯರು ಒಂದೆಡೆಯಾದರೆ ನಿಯಮಗಳನ್ನೆಲ್ಲ ಮೀರಿ ಬರೆದದ್ದೇ ಗಜಲ್ ಎಂದು ಗಟ್ಟಿಸಿ ಹೇಳಿ ಯುವಗಜಲ್‌ಗೋಗಳನ್ನು ಹಾದಿ ತಪ್ಪಿಸುತ್ತಿರುವ ಹಿರಿಯರೆನ್ನಿಸಿಕೊಂಡವರು ಇನ್ನೊಂದೆಡೆ. ಇಷ್ಟಾದರೂ ಕನ್ನಡದಲ್ಲಿ ಈಗ ಗಜಲ್ ಎನ್ನುವುದು ತುಂಬ ಪ್ರಚಲಿತದಲ್ಲಿರುವ ಕಾವ್ಯ.ಈ ಕಾವ್ಯಪ್ರಕಾರಕ್ಕೆ ಈಗ ಸುರೇಶ್ ಎಲ್ ರಾಜಮಾನೆಯವರು ಪ್ರವೇಶಿಸಿ ಕತ್ತಲ ಗರ್ಭದ ಬೆಳಕು ಎನ್ನುವ ತಮ್ಮ ಸಂಕಲನವನ್ನು ಕನ್ನಡ ಗಜಲ್ ಕ್ಷೇತ್ರಕ್ಕೆ ನೀಡಿದ್ದಾರೆ.

ಬೆಳಕು ಹುಟುವುದೇ ಕತ್ತಲ ಗರ್ಭದ ಒಳಗಿಂದ. ಒಂದು ದೀಪದ ಕುಡಿ ಕತ್ತಲ ಗರ್ಭದೊಳಗೆ ಅಡಗಿದ್ದರೂ ಇಡೀ ಕತ್ತಲಿನ ಸಾಮ್ರಾಜ್ಯವನ್ನು ಅಳಿಸಿಬಿಡುವಷ್ಟು ನಿಖರವಾಗಿರುತ್ತದೆ. ಒಂದು ನಿರಾಶೆಯ ಕತ್ತಲ ಗರ್ಭದ ಒಳಗೆ ನಂಬಿಕೆ ಎನ್ನುವ ಸೊಡರು ಬದುಕನ್ನು ಬೆಳಕಿನೆಡೆಗೆ ಒಯ್ಯುತ್ತದೆ.

ದ್ವೇಷದ ಕತ್ತಲೆಯಲಿ ಉರಿಯುತ್ತಿವೆ ದೀಪಗಳು
ಬಡವನ ಮನೆಯಲ್ಲಿ ಅರಳುತ್ತಿವೆ ದೀಪಗಳು (ದೀಪಗಳು)

ಸಂಕಲನದ ಹೆಸರಿಗೆ ತಕ್ಕಂತೆ ಬರೆದಿರುವ ಈ ಗಜಲ್‌ನಲ್ಲಿ ದ್ವೇಷವನ್ನು ಕತ್ತಲೆಗೆ ಹೋಲಿಸಲಾಗಿದೆ. ದ್ವೇಷದ ಕತ್ತಲೆಯನ್ನು ಸೀಳಿ ಮುಂದುವರೆದರೆ ಬದುಕಿನಲ್ಲಿ ಬೆಳಕು ತುಂಬಿಕೊಳ್ಳುತ್ತದೆ. ಈ ಕಾರಣಕ್ಕಾಗಿ ದ್ವೇಷದ ಕತ್ತಲೆಯಲ್ಲೂ ಪ್ರೀತಿ ಎಂಬ ಬೆಳಕನ್ನು ಹಚ್ಚಬೇಕಾಗಿದೆ. ಹಗೆ ಪ್ರೀತಿ ಎಂಬ ಬೆಳಕನ್ನು ಹಚ್ಚಿದರೆ ಬಡವರ ಮನೆಯಲ್ಲೂ ನೆಮ್ಮದಿ ಎಂಬ ಬೆಳಕು ಮೂಡಲು ಸಾಧ್ಯ.

ಸಂಕಲನದಲ್ಲಿ ನಂಬಿಕೆಯನ್ನು ಪ್ರತಿಫಲಿಸುವ ಹಲವಾರು ಶೇರ್‌ಗಳನ್ನು ಕಾಣಬಹುದು. ನಂಬಿಕೆಯ ಬೆಳಕು ಜೀವನದ ಹಲವಾರು ಕತ್ತಲ ಗರ್ಭಕ್ಕೆ ಉತ್ತರವಾಗುತ್ತದೆ. ನಿರಾಸೆಯನ್ನು ಕೊನೆಗೊಳಿಸಿ ಬದುಕಿನ ಸಾರ್ಥಕತೆಯನ್ನು ಮೂಡಿಸುವುದು ನಂಬಿಕೆಯಲ್ಲದೆ ಬೇರೇನೂ ಅಲ್ಲ.

ಮೊಳಕೆಯೊಡೆದ ಬೀಜಗಳು ಹಗಲು ರಾತ್ರಿಯೆನ್ನದೆ ಹಲುಬುತ್ತಿವೆ.
ಬೀಜದ ಬದುಕು ನಿಜದ ಬದುಕಾಗಲೆಂದು ಕಾಯುತ್ತಿರುವೆ.

ಈ ಶೇರ್‌ನಲ್ಲಿ ಮೊಳಕೆಯೊಡೆಯುತ್ತಿರುವ ಬೀಜ ಆಶಾವಾದದ ಪ್ರತೀಕವಾಗಿದೆ. ಮಳೆಗಾಗಿ ಕಾಯವುದು ನಂಬಿಕೆಯನ್ನು ಹೇಳುತ್ತದೆ. ಬದುಕಿನಲ್ಲಿರುವ ಭರವಸೆ ಹಾಗೂ ನಂಬಿಕೆ ಸೇರಿದರೆ ಬೀಜ ಮೊಳಕೆಯೊಡೆದು ಸಸಿಯಾಗಿ ಮರವಾಗಿ ಫಸಲು ನೀಡುತ್ತದೆ.

ಈ ಕಾರಣಕ್ಕಾಗಿಯೇ,
ನನ್ನೊಳಗಿನ ಕೋಪ ತಣ್ಣಗಾಗಲಿ ಎಂದು ಕಾಯುತ್ತಿರುವೆ ಮಳೆಗಾಗಿ
ಹೊತ್ತುರಿಯುತ್ತಿರುವ ಬೆಂಕಿ ಆರಲೆಂದು ಕಾಯುತ್ತಿರುವೆ ಮಳೆಗಾಗಿ (ಒಲವ ಹನಿ ಒಲುಮೆಯ ಮಣ್ಣು)

ಎಂದು ಹೇಳುತ್ತಾರೆ. ಕೋಪ ಎನ್ನುವುದು ಎದೆಯೊಳಗಿನ ಕತ್ತಲೆ. ಆ ಕೋಪ ತಣ್ಣಗಾಗುವುದರಿಂದ ಬದುಕನ್ನು ನೇರ್ಪುಗೊಳಿಸಿಕೊಳ್ಳಬಹುದೆಂಬ ನಂಬಿಕೆ ಇಲ್ಲಿದೆ. ನಂಬಿಕೆ ಎನ್ನುವುದು ಬದುಕನ್ನು ನಡೆಸಬಲ್ಲ ಚಾಲನಾ ಶಕ್ತಿಯಾಗಿರುವಾಗ ಕುಸಿದು ಬಿದ್ದ ನಂಬಿಕೆ ಜೀವನವೇ ನಿರರ್ಥಕ ಎನ್ನಿಸುವಂತೆ ಮಾಡಿಬಿಡುತ್ತದೆ. ಹಾಗೆ ನಂಬಿಕೆ ಕಳೆದುಹೋಗುವುದು ಹೊಸತೇನೂ ಅಲ್ಲ.ಒಣಗರಿಕೆಯೂ ಹನಿ ಮಳೆ ಬಿದ್ದರೆ ಮತ್ತೆ ಚಿಗುರುವ ನಿರೀಕ್ಷೆಯಲ್ಲಿರುತ್ತದೆ.

ಒಣಗರಿಕೆಯೂ ನಂಬಿದೆ ಬೆಳಕ ಕುಡಿದು ಬದುಕಬಲ್ಲೆ
ಇಲ್ಲಿ ನಂಬಿಕೆ ಇಟ್ವರೆದೆಯ ರಕ್ತ ಕುಡಿಯುವವರೆ ಹೆಚ್ಚು (ನಂಬಿಕೆ ಇಟ್ಟವರೆದೆಯ ರಕ್ತ ಕುಡಿಯುವವರು)

ಮಳೆ ಹನಿಯಿಲ್ಲದಿದ್ದರೂ ಒಂದಿಷ್ಟು ಬೆಳಕನ್ನು ಹೀರಿಯಾದರೂ ಜೀವ ಉಳಿಸಿಕೊಳ್ಳಬಹುದಾದ ನಂಬಿಕೆ ಹುಲ್ಲಿಗಿರುವಾಗ ನಂಬಿದವರ ಎದೆ ಸೀಳಿರಕ್ತ ಕುಡಿಯುವವರು ಹೆಚ್ಚಾಗುತ್ತಿರುವುದನ್ನು ವಿಷಾದದಿಂದ ಹೇಳುತ್ತಾರೆ.

ಸಾಮಾನ್ಯ ಜನರಿಗೆ ದೇವರೆಂದರೆ ನಂಬಿಕೆ ಹೆಚ್ಚು. ಅಂತಹ ದೇವರನ್ನೂ ವಿಡಂಬಿಸುವುದನ್ನು ನಾವು ಕಾಣುತ್ತೇವೆ. ಇಲ್ಲಿ ದೇವರು ಎನ್ನುವುದು ಕೇವಲ ನಂಬಿಕೆಯ ಪ್ರಶ್ನೆಯಾದಾಗ ನಂಬಿಕೆಯನ್ನು ಒಡೆಯಲು ಏನು ಬೇಕೋ ಅದನ್ನು ಮಾಡುವ ಭರದಲ್ಲಿ ದೇವರನ್ನೂ ಕಾಲಡಿಗೆ ತಳ್ಳುತ್ತಾರೆ.

ದೇವರುಗಳ ಹೆಸರಿನಲ್ಲಿ ಮನುಷ್ಯ ಮತ್ತೆ ಮತ್ತೆ ಭಕ್ತನಾಗುತ್ತಾನೆ
ಮನುಷ್ಯರ ಕೈಯ್ಯಲ್ಲಿ ದೇವರು ಮತ್ತೆ ಮತ್ತೆ ಬೆತ್ತಲಾಗುತ್ತಾನೆ (ಅಳಿವಿನ ಹಾದಿ)

ದೇವರ ಹೆಸರಿನಲ್ಲಿ ಮನುಷ್ಯ ಭಕ್ತನಾಗುತ್ತಾನಾದರೂ ನಂಬಿಕೆಯನ್ನು ಕಳೆದುಕೊಂಡ ದೇವರು ಭಕ್ತರ ಎದುರಿಗೆ ಬತ್ತಲಾಗುವುದು ವಿಪರ್ಯಾಸ ಎಂಬುದು ಗಜಲ್‌ಕಾರರ ಕಲ್ಪನಾಶಕ್ತಿಯನ್ನು ತಿಳಿಸುತ್ತದೆ. ಗಜಲ್‌ನ ಜೀವಾಳ ಇರುವುದೇ ಇಂತಹ ರೂಪಕಗಳನ್ನು ಜೋಡಿಸುವುದರಲ್ಲಿ ಎಂದುಕೊಂಡರೆ ಗಜಲ್‌ಕಾರ ಇಲ್ಲಿ ಗೆಲ್ಲುತ್ತಾರೆ.

ದ್ವೇಷದ ದೌಲತ್ತಿನಲಿ ದೇವರನ್ನೇ ನಿಂದಿಸುವವರಿದ್ದಾರೆ
ದೇವರಾದರೂ ಇರುವನೆ ? ಉತ್ತರವಿಲ್ಲ ಇಲ್ಲಿ ಬರಿ ಪ್ರಶ್ನೆಗಳು (ದರ್ಪಕ್ಕೆ ದರ್ಪದ ಚೂರಿ)

ದೌಲತ್ತು ನಮ್ಮನ್ನು ಏನು ಬೇಕಾದರೂ ಮಾಡಬಹುದು ಎನ್ನುವ ಅಹಂಕಾರವನ್ನು ನೀಡುತ್ತದೆ. ತಾವು ಮಾಡಿದ್ದೇ ಸರಿ ಎನ್ನುವ ಸೊಕ್ಕನ್ನು ತಲೆಗೆ ತುಂಬುತ್ತದೆ. ತಾವು ಎಲ್ಲರಿಗಿಂತ ಹೆಚ್ಚು ಎಂಬ ಭ್ರಮೆಯನ್ನು ತುಂಬಿ ವಿಕೃತವಾಗಿ ವರ್ತಿಸಲು ಪ್ರೇರೇಪಿಸುತ್ತದೆ. ಹಾಗೆ ಹಣ ಅಧಿಕಾರದ ಮದದಲ್ಲಿರುವವರು ದೇವರನ್ನೇ ನಿಂದಿಸುತ್ತಾರೆ. ಆದರೆ ಇಲ್ಲಿ ಮೂಲಭೂತವಾದ ಒಂದು ಪ್ರಶ್ನೆಯಿದೆ. ದವರಾದರೂ ಇರುವನೆ? ಒಂದುವೇಳೆ ದೇವರು ಇದ್ದಿದ್ದೇ ನಿಜವಾದರೆ ಆರ್ತವಾಗಿ ಬೇಡಿಕೊಳ್ಳುವ ಬಡವರ ಕಡೆಗೆ ಯಾಗೆ ದಯೆ ತೋರುವುದಿಲ್ಲ? ನೋವಿನಲ್ಲಿ ನರಳುವವರನ್ನು ಯಾಕೆ ಸಮಾಧಾನಿಸುವುದಿಲ್ಲ ಎಂಬ ಪ್ರಶ್ನೆ ತಾನೇ ತಾನಾಗಿ ಏಳುತ್ತದೆ. ದೇವರಿರುವನೆ ಎಂಬ ಪ್ರಶ್ನೆಗೆ ನಿಜವಾದ ಉತ್ತರವಾದರೂ ಎಲ್ಲಿದೆ ಹೇಳಿ?

ಕೊರೋನಾ ಕವಿತೆ ಇಂತಹ ವಿಡಂಬನೆಗಳಲ್ಲಿ ಒಂದು ಘಂಟೆ ಭಾರಿಸಿ, ದೀಪ ಹಚ್ಚಿ ಕೊರೋನಾ ಓಡಿಸುತ್ತೇವೆಂದು ನಂಬಿಸಿದವರನ್ನು ಇದು ವ್ಯಂಗ್ಯವಾಡುತ್ತದೆ.ಪುಕ್ಸಟ್ಟೆ ಹಾಲು ಹಂಚಿದರೆ, ಸರಾಯಿ ಕುಡಿದು ನಡು ಬೀದಿಯಲಿ ಬಿದ್ದರೆ ಕೊರೋನಾ ಹೋಗುತ್ತದೆಯೆಂಬ ಭ್ರಮೆಯನ್ನು ಕುಹಕವಾಡುತ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬದಲು ಸಮಾಜವನ್ನು ಒಡೆದು ಹಾಕಿದ ನಡೆಯನ್ನು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತದೆ. ಕೊರೋನಾದಿಂದಾದ ಸಾವಿಗಿಂತ ಹಸಿವಿನಿಂದಾದ ಸಾವು ಹೆಚ್ಚು ಎಂಬುದನ್ನು ನೆನಪಿಸುತ್ತ ಒಂದು ನಿಷ್ಫಲ ಆಡಳಿತದಿಂದ ಜನರ ಬಾಳು ಹೇಗೆ ದಿಕ್ಕೆಟ್ಟು ಹೋಗಬಹುದೆಂಬುದನ್ನು ಸೂಚ್ಯವಾಗಿ ಹೇಳುವುದನ್ನು ಇಲ್ಲಿ ಕಾಣಬಹುದು.

ಹರಿದ ಸೀರೆಯಲಿ ಸಾವಿರಾರು ನಕ್ಷತ್ರಗಳು ಮೂಡಿವೆ
ಚಂದ್ರನ ಕಾಂತಿಯಲಿ ಕಪ್ಪುಕಲೆಗಳು ಹೊಳೆಯುತ್ತಿವೆ (ನಕ್ಷತ್ರಗಳು)

ಬಡತನದ ಗಾಯದ ಮೇಲೆ ಕಾದ ಕಬ್ಬಿಣದಿಂದ ಬರೆ ಹಾಕುವಂತೆ ಕೊರೋನಾ ಬಂದೆರಗಿದಾಗ ಬಡವರು ಪೂರ್ತಿಯಾಗಿ ನೆಲಕಚ್ಚಿದ್ದು ನಮಗೆ ಗೊತ್ತೇ ಇದೆ. ಆದರೂ ಬಡವರ ಜೀವನೋತ್ಸಾಹ ಕಡಿಮೆಯಾದುದಲ್ಲ. ಸೀರೆ ಹರಿದಿದ್ದರೂ ಅದರ ತೂತಿನಿಂದ ನಕ್ಷತ್ರಗಳು ಕಾಣುತ್ತವೆಯೆಂದು ಖುಷಿಪಡುವವರು ಇವರು. ಅಂತೆಯೆ ಸೌಂದರ್‍ಯಕ್ಕೆ ಹೆಸರುವಾಸಿಯಾದ ಚಂದ್ರನ ಮೇಲೆ ಅಸಂಖ್ಯಾತ ಕಪ್ಪು ಕಲೆಗಳಿವೆ. ಆದರೆ ಗಜಲ್ ಗೋಗೆ ಆ ಕಪ್ಪು ಕಲೆಗಳು ಅಸಬಂದ್ಧ ಎನ್ನಿಸುತ್ತಿಲ್ಲ. ಬದಲಾಗಿ ಕಪ್ಪು ಕಲೆಗಳು ಹೊಳೆಯುತ್ತಿರುವಂತೆ ಭಾಸವಾಗುತ್ತಿದೆ. ಈ ಶೇರ್‌ನಲ್ಲಿರುವ ಹೊಳಹುಗಳು ನಮ್ಮನ್ನು ಒಂದು ಕ್ಷಣ ಅಚ್ಚರಿಗೆ ನೂಕದೆ ಇರಲಾರದು.

ಗಜಲ್ ಎಂದರೆ ಅದು ಪ್ರೀತಿಯ ಪಿಸುಗುಡುವಿಕೆ. ಪ್ರೇಮದ ಆಲಾಪಗಳು ಇಲ್ಲದೆ ಹೋದರೆ ಗಜಲ್ ಅಪೂರ್ಣ. ಯಾವುದೇ ವಿಷಯವನ್ನು ಎಷ್ಟೇ ಬರೆದು ಅಹುದಹುದು ಎನ್ನಿಸಿಕೊಂಡರೂ ಪ್ರೇಮದ ತುಡಿತವನ್ನು ಹೇಳದೆ ಹೋದರೆ ಅದು ನಿರರ್ಥಕ. ಇಲ್ಲಿ ಗಜಲ್ ಗೋ ಪ್ರೇಮದ ನವಿರತೆಯನ್ನು ಕಟ್ಟಿಕೊಟ್ಟಿದ್ದಾರೆ.

ಹಗಲಿರುಳು ಕಾದಿರುವೆ ನಿನಗಾಗಿ ನನ್ನೊಲವೆ ನೀ ಬರಬಾರದೆ
ನಿನ್ನದೆ ಇಬಾದತ್ತಿನಲ್ಲಿ ಊಟ ನಿದ್ದೆ ಮರೆತಿರುವೆ ನೀ ಬರಬಾರದೆ (ಒಂಟಿ ದಾರಿಯ ನಡಿಗೆ)

ಪ್ರೇಮಿಗಾಗಿ ಕಾಯುವುದೆಂದರೆ ಅದು ಜನ್ಮ ಜನ್ಮಾಂತರದ ಕೆಲಸ. ಬರುವೆನೆಂದ ಒಲವಿಗಾಗಿ ಹಗಲು ರಾತ್ರಿ ಕಾಯುವುದರಲ್ಲಿ ಅದೇನೋ ಮತ್ತಿದೆ. ಊಟ ನಿದ್ದೆ ಬಿಟ್ಟು ಬರುವವಳ ಹಾದಿ ಕಾಯುವುದು ಎಂದೆಂದಿಗೂ ಮುಗಿಯದ ಭಾವಸ್ಪೂರ್ತಿ. ಪ್ರೇಮಿ ಒಮ್ಮೆ ಬಂದು ಬಿಟ್ಟರೆ ಸಾಕು ಎಂದುಕೊಳ್ಳುವ ಆ ಆವೇಗವನ್ನು ಅನುಭವಿಸಿಯೇ ತೀರಬೇಕು.
ಇನ್ನು ಸರೇಶ ಎಂದರೆ ಅವರ ಹೆಸರೇ ಮರೆಯಾಗುವಂತೆ ಚಂದ್ರಿಯನ್ನು ಒಳಗೊಂಡವರು. ಹೀಗಾಗಿ ಚಂದಿ ಇಲ್ಲದ ಒಲುಮೆಯ ಗಜಲ್ ಇಲ್ಲದೆ ಹೋದರೆ ಅದು ವ್ಯರ್ಥ ಎಂದುಕೊಳ್ಳುವಾಗಲೆ

ಹೂಗಳ ಒಳಗೆ ಹೂವಾಗೋಣ ಬಾ ಚಂದ್ರಿ
ಹೂವಲಿ ಜೇನ ಹನಿಯಾಗೋಣ ಬಾ ಚಂದ್ರಿ (ಚಂದ್ರಿ)

ಎನ್ನುತ್ತ ಚಂದ್ರಿಯನ್ನು ಪ್ರೇಮದ ಬೇಟಕ್ಕೆ ಆಹ್ವಾನಿಸುತ್ತಾರೆ. ಹೂವಾಗುತ್ತ ಹೂವಿನೊಳಗಿನ ಜೇನ ಹನಿಯಾಗುತ್ತ ಒಂದಾಗಲು ಚಂದ್ರಿಯನ್ನು ಕರೆಯುವ ಪರಿ ಅನನ್ಯವಾಗಿದೆ.

ಆದರೂ ಹೊಸದಾಗಿ ಗಜಲ್ ಬರೆಯುವವರು ಅರಿಯಬೇಕಾದ ಕಿವಿಮಾತೊಂದಿದೆ. ಪ್ರೇಮ ಸರ್ವಾಂತರ್ಯಾಮಿ. ಎಷ್ಟೇ ಅನ್ಯ ವಿಷಯಗಳನ್ನು ಆಯ್ದುಕೊಂಡರೂ ಗಜಲ್‌ನ ಸ್ಥಾಯಿಭಾವ ಪ್ರೇಮವೇ ಆಗಿರುವುದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ. ಪ್ರೇಮದ ಎಳೆಯಿಲ್ಲದೆ ಗಜಲ್ ಬರೆಯಲು ಸಾಧ್ಯವೇ ಇಲ್ಲ. ಯುವ ಗೋಗಳು ಪ್ರೇಮದ ಪರಿ ಇನ್ನಷ್ಟು ಹಬ್ಬಬೇಕಾದ ಅಗತ್ಯವಿದೆ.

ಒಲಿಮ್ಯಾಲಿನ ಹಾಲು ಕಾದಮ್ಯಾಲ ಉಕ್ಕತಾವು ಹುಷಾರು ಬಾಳ ನಗಬ್ಯಾಡ
ಉಕ್ಕಿದ ಹಾಲನ್ನು ಊರಜನ ಎಲ್ಲ ಮುಕ್ಕತಾರು ಹುಷಾರು ಬಾಳ ನಗಬ್ಯಾಡ (ಎಚ್ಚರಿರಬೇಕು)

ಈ ಗಜಲ್‌ನ ಶೇರ್‌ಗಳಲ್ಲಿ ಕಂಡುಬರುವ ಜನಪದ ಹಾಡಿನ ದಾಟಿ ಗಮನ ಸೆಳೆಯುತ್ತದೆ. ಜನಪದ ದಾಟಿಯಲ್ಲಿ ಬರೆದ ಹಲವಾರು ಗಜಲ್‌ಗಳು ಇಲ್ಲಿದ್ದು ಪ್ರಯೋಗಾತ್ಮಕ ದೃಷ್ಟಿಯಿಂದ ಇವುಗಳನ್ನು ಗಮನಿಸಬಹುದು.

ಒಂದು ವಿಷಯದ ಆಳ ಅಗಲವನ್ನು ಸಂಪೂರ್ಣವಾಗಿ ಅರಿಯುವುದು ಬಹು ಮುಖ್ಯವಾದದ್ದು. ಗಜಲ್ ಎಂದರೆ ಸುಮ್ಮನೆ ಅಂತ್ಯಪ್ರಾಸ ಹೊಂದಿಸಿ ಭಾವಗೀತೆಯಂತೆ ಬರೆಯುವುದಲ್ಲ ಎಂಬುದನ್ನು ಹೊಸದಾಗಿ ಗಜಲ್ ರಚಿಸುತ್ತಿರುವ ಎಲ್ಲ ಯುವ ಗಜಲ್‌ಕಾರರು ಗಮನದಲ್ಲಿಟ್ಟುಕೊಳ್ಳಬೇಕು. ಗಜಲ್‌ಗೆ ಅದರದ್ದೇ ಆದ ನಿಯಮಗಳಿವೆ. ಛಂದೋಬಂಧವಾದ ವಿನ್ಯಾಸವಿದೆ. ನಿರ್ದಿಷ್ಟವಾದ ಮಾತ್ರೆಗಳಿರುತ್ತವೆ. ಹಿರಿಯ ಗಜಲ್ ಗೋಗಳು ಪದೆ ಪದೆ ಮುರಿದು ಕಟ್ಟುವ ಮಾತನಾಡಬಹುದಾದರೂ ಹೊಸದಾಗಿ ಬರೆಯುವವರು ಆ ಪ್ರಯೋಗಕ್ಕೆ ಇಳಿಯದಿರುವುದೇ ಒಳ್ಳೆಯದು. ಯಾಕೆಂದರೆ ಮೊದಲು ಕಟ್ಟುವುದು ಹೇಗೆಂಬುದನ್ನು ಅರಿತಿರಬೇಕಾದುದ್ದು ಬಹು ಮುಖ್ಯ. ಕಟ್ಟಲು ಬರದೆ ಮುರಿದುಬಿಟ್ಟರೆ ಮುಂದೆ ಕಟ್ಟಲು ಏನೇನೂ ಉಳಿದಿರುವುದಿಲ್ಲ. ಹೀಗಾಗಿ ಗಜಲ್ ಬರೆಯುವಾಗ ಕಡ್ಡಾಯವಾಗಿ ಮೂಲಭೂತವಾದ ಸರಳ ನಿಯಮಗಳನ್ನಾದರೂ ಪಾಲಿಸಲೇ ಬೇಕು. ಮತ್ಲಾದಲ್ಲಿ ನಾವೇ ಹಾಕಿಕೊಂಡ ನಿಯಮವನ್ನು ನಂತರದ ಶೇರ್‌ಗಳಲ್ಲಿ ಮುರಿದು ಬಿಟ್ಟರೆ ಅದು ಗಜಲ್ ಎನ್ನಿಸಿಕೊಳ್ಳದೆ ಭಾವಗೀತೆಯಾಗುವ ಅಪಾಯವನ್ನು ಗಮನಿಸಬೇಕು. ಉದಾಹರಣೆಗೆ ಕತ್ತಲಲ್ಲೇ ಬೆಳಕು ಎಂಬ ಗಜಲ್‌ನ ಮತ್ಲಾದಲ್ಲಿ ರಧಿಪ್ ನಾ ನಿನ್ನ ಪ್ರೇಮಾರಾಧಕ ಎಂದು ಬಳಸಲಾಗಿದೆ. ಇಲ್ಲಿ ಬಯಸುವ ಹಾಗೂ ಶರಣಾಗುವ ಎಂಬ ಕಾಫಿಯಾಗಳಿದ್ದು ವ ಎನ್ನುವುದು ರವೀಶ್ ಆಗಿದೆ. ಆದರೆ ನಂತರದ ಶೇರ್‌ಗಳಲ್ಲಿ ರಧೀಫ್ ಅದೇ ರೀತಿ ಮುಂದುವರೆದಿಲ್ಲ. ಕಾಫಿಯಾಗಳೂ ಇಲ್ಲ. ಒಂದುವೇಳೆ ಇದನ್ನು ಕಾಫಿಯಾನಾ ಗಜಲ್ ಮಾಡುವುದಿದ್ದಲ್ಲಿ ಮತ್ಲಾದಲ್ಲಿಯೇ ಅದನ್ನು ಅಳವಡಿಸಿಕೊಂಡಿದ್ದರೆ ಒಳ್ಳೆಯದಿತ್ತು ಎಂಬುದು ನನ್ನ ಅಭಿಪ್ರಾಯ. ಆದರೆ ಈ ಗಜಲ್‌ನಲ್ಲಿ ಉತ್ತಮ ಪ್ರೇಮದ ನಿವೇದನೆಯಿದ್ದು ಮತ್ತಿಷ್ಟು ಗಮನವಹಿಸಿದ್ದರೆ ಒಳ್ಳೆಯ ಗಜಲ್ ಆಗಬಹುದಾದ ಎಲ್ಲ ಸಾಧ್ಯತೆಗಳಿದ್ದುದನ್ನು ಗಮನಿಸಬೇಕು. ಅದೇ ರೀತಿ ಬೆಳಕು ಚೆಲ್ಲುವ ಬೆರಗು ಗಜಲ್‌ನಲ್ಲಿ ಮತ್ಲಾದಲ್ಲಿ ದ್ವೇಷಿಸಬೇಡ ಎಂಬುದು ರಧೀಫ್ ಆಗಿದೆ. ಆದರೆ ನಂತರದ ಶೇರ್‌ಗಳಲ್ಲಿ ಈ ರಧೀಪ್ ಇಲ್ಲದಿರುವುದು ಗಜಲ್‌ನ ಮೂಲ ನಿಯಮಗಳಿಗೇ ಧಕ್ಕೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.. ಹೊಸದಾಗಿ ಗಜಲ್ ಬರೆಯುವ ಎಲ್ಲರಿಗೂ ಇರುವ ಇಂತಹ ಚಿಕ್ಕಪುಟ್ಟ ಅಪವಾದಗಳನ್ನು ಹೊರತುಪಡಿಸಿ ನೋಡಿದರೆ ಹೆಚ್ಚಿನ ಗಜಲ್‌ಗಳಲ್ಲಿ ಹೊಳಹುಗಳಿದ್ದು ಸಂಕಲನಕ್ಕೊಂದು ನೇರವಂತಿಕೆಯನ್ನು ತಂದುಕೊಡುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ಗಜಲ್ ಕಡಲಲ್ಲಿ ಹಾಯಿದೊಣಿಯಲ್ಲೊಂದು ಸುತ್ತು
ಹಲವು ಜಾತಿಯ ಹೂಗಳಿಂದಾದ ಮಾಲೆ
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ

26-12-2024 ಬೆಂಗಳೂರು

"ತ.ರಾ‌. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...

ಬರಹಗಾರ ವಸ್ತುನಿಷ್ಠವಾಗಿ ಹೇಳದೇ ಹೋದರೆ...

25-12-2024 ಬೆಂಗಳೂರು

"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...