Date: 25-10-2024
Location: ಬೆಂಗಳೂರು
"ಆ ಮಧುರ ನೆನಪುಗಳು ನನ್ನೊಳಗೆ ನೂರು ತಾಜ್ ಮಹಲುಗಳನ್ನು ನಿರ್ಮಿಸಿವೆ. ನನ್ನೆದೆಯ ತಿದಿಯಲಿ ದೇಹಿ ಉಸಿರಿನ ದೀಪ ಮುಡಿಸಿವೆ. ಭಾವ ಬ್ರಹ್ಮಾಂಡದ ತುಂಬೆಲ್ಲಾ ಅಪರಿಮಿತ ನಕ್ಷತ್ರಗಳ ಲೋಕ. ಚುಕ್ಕಿಯೊಳಗ ಕನಸುಗಳು ಕುಣಿದಾಡಿದ್ಹಾಂಗ ಅವಳ ನನ್ನಸಂಗ," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ‘ಯಡ್ರಾಮಿ ಸಂತೆಯಲಿ ಕಂಡ ರೇಣುಕೆಯ ಮುಖ’ ಲೇಖನ ನಿಮ್ಮ ಓದಿಗಾಗಿ..
ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ವರುಷಗಳ ಕಾಲ ಅವಳ ಕಣ್ಣಲ್ಲಿ ಕಣ್ಣಿಟ್ಟು ನಿರಂತರವಾಗಿ ಕಣ್ತುಂಬಿಸಿಕೊಂಡ ನನ್ನ ನೆನಪಿಗೆ ಸಾವಿಲ್ಲ. ಮರೆತೆನೆಂದರೂ ಮರೆಯಲಾಗದ ಮೃದುಲ ಮುಖವದು. ಅದೊಂದು ಅನಿರ್ವಚನೀಯ ಮಧುರ ಸ್ಮೃತಿ. ಜೀವದೊಂದಿಗೆ ಬೆಸೆದು ಹೋದ ಸಾವಯವ ಸಂವೇದನೆ.
ಹೌದು, ಅವಳ " ಆ ಮುಖ " ನನ್ನ ಮನಃಪಟಲದಲ್ಲಿ ಕಳೆದ ಶತಮಾನದಿಂದ ಹಾಗೇ ಅನಂತ ಮತ್ತು ನಿತಾಂತವಾಗಿ ಸಾಗಿಬರುತ್ತಲೇ ಇದೆ. ನನ್ನ ಪಾಲಿಗೆ ಅದು ಬಣ್ಣಿಸಲಾಗದ ಅಮರ ಪ್ರ(ತಿ)ಭೆಯ ಸುಮಧುರ ಸಮಾರಾಧನೆ. ಅವಳನ್ನು ಅದೆಷ್ಟು ಬಾರಿ ಭೆಟ್ಟಿಮಾಡಿ, ಅವಳೊಂದಿಗೆ ಮಾತಾಡಿ, ಜೀವ ಹಗುರ ಮಾಡಿಕೊಂಡಿದ್ದೇನೆಂಬುದು ಲೆಕ್ಕವಿಟ್ಟಿಲ್ಲ.
ಆ ಮಧುರ ನೆನಪುಗಳು ನನ್ನೊಳಗೆ ನೂರು ತಾಜ್ ಮಹಲುಗಳನ್ನು ನಿರ್ಮಿಸಿವೆ. ನನ್ನೆದೆಯ ತಿದಿಯಲಿ ದೇಹಿ ಉಸಿರಿನ ದೀಪ ಮುಡಿಸಿವೆ. ಭಾವ ಬ್ರಹ್ಮಾಂಡದ ತುಂಬೆಲ್ಲಾ ಅಪರಿಮಿತ ನಕ್ಷತ್ರಗಳ ಲೋಕ. ಚುಕ್ಕಿಯೊಳಗ ಕನಸುಗಳು ಕುಣಿದಾಡಿದ್ಹಾಂಗ ಅವಳ ನನ್ನಸಂಗ.
ಯಡ್ರಾಮಿಯ ನನ್ನ ಶಾಲಾದಿನಗಳು ಮುಗಿಯುವ ಮುಜೇತಿ, ಅವಳ ನನ್ನ ಮೊಟ್ಟಮೊದಲ ಭೆಟ್ಟಿ. ಅವಳನ್ನು ಮಾತಾಡಿಸುವ, ಅವಳು ನನ್ನೊಂದಿಗೆ ಮರು ಮಾತಾಡಬೇಕೆಂಬ ದಿವ್ಯ ಕುತೂಹಲ ನನಗೆ. ಆದರೆ ಅವಳು ಹ್ಞುಂ..ಹೂಂ.. ನನ್ನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಎಳಕು ಪ್ರಾಯಕೆ ಚುಳುಕು ಹುಟ್ಟಿಸುವ ಮಹಾಪ್ರೀತಿ.
ಆಕೆಗೆ ನಾನ್ಯಾವ ಲೆಕ್ಕ.? ಹೇಳಿಕೇಳಿ ನಾನು 'ಹಸೀಮಡ್ಡ' ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೆ. ಸಾವಿರ ಅಪ್ಸರೆಯರ ರೂಪ ರಾಶಿಗಳನ್ನೆಲ್ಲ ಕರಗಿಸಿ, ಗಟ್ಟಿಗೊಂಡ ವಜ್ರದ ಚೆಲುವನ್ನೆಲ್ಲ ಕಟೆದು ಕೆತ್ತಿ ಅವಳ ಜೀವ ತುಂಬಿದಂತಿತ್ತು. ಹೌದು ಅವಳು ಬರೀ ಹೆಣ್ಣಲ್ಲ, ಬೆಳದಿಂಗಳ ಜಲಪಾತ. ನನ್ನ ಭಾವ ಜಗತ್ತಿನ ಜಗದ್ವಿಖ್ಯಾತವಾದ ಆ ಚೆಲುವನ್ನು ನೋಡ ನೋಡುತ್ತಲೇ... ವರುಷ ನಾಲ್ಕು ಕಳೆದಿರಬಹುದು.
ಅದೊಂದು ಮಟಮಟ ಮಧ್ಯಾಹ್ನ. ದುಡಿದು, ದಣಿದು ಬಂದಿದ್ದಳು. ಕಂದು ಬಣ್ಣದ ಚಂದ್ರಕಾಳಿ ಸೀರೆಯುಟ್ಟಿದ್ದಳು. ಕಡಲೇಬೇಳೆ ಬಣ್ಣದ ಹಣೆಯ ಮೇಲಿದ್ದ ಕಾಸಿನಗಲದ ಗಂಧ ಕುಂಕುಮದ ಬೊಟ್ಟೆಲ್ಲ ಕರಗಿ ಕಟಿನೀರು ಬಸಿದು, ಮೃದುಮಲ್ಲಿಗೆ ಮುತ್ತಿನಂತೆ, ಹವಳದ ತುಟಿದಾಟಿ ಅವಳೆದೆಯ ದಾಸವಾಳಗಳ ಮೇಲೆ ತಟಕು ತಟಕೆಂದು ಹನಿಸುತ್ತಿದ್ದವು.
ಭಾವಗೋಳ ತೆಕ್ಕೆಯ ಪಕ್ಕದ ಹಣಮಂದೇವರ ಗುಡಿಯ ಬಾಜೂಕೆ ಇರುವ ರುದ್ರಯ್ಯ ಮುತ್ಯಾನ ಹೊಟೇಲ್. ಜೋಡು ಬಸರಿಗಿಡದ ದಟ್ಟನೆರಳು : ಪತರಾಸಿನ ಹೊಟೇಲಿಗೂ ಹಣಮಪ್ಪನ ಗುಡಿಯ ಪೌಳಿಗೂ. ಆ ಸವಿನೆರಳಿಗೆ ಸಂತೆಯ ಸಹಸ್ರ ಸಹಸ್ರದ ಗೌಜು ಗದ್ದಲದ ಪರಿವಿಲ್ಲ. ಅಲ್ಲಿ ನಾನು, ಅವಳು ಮತ್ತು ದಿವ್ಯಮೌನ.
ಗುಡಿಕಟ್ಟೆಯ ಮೇಲೆ ಕುಂತಿದ್ದಾಕೆ.., ಇನ್ನೇನು ನಾನು ಬಂದು " ತನ್ನ ಮಾತಾಡಿಸಿ ಬಿಡುತ್ತೇನೆಂಬಂತೆ" ಕಮಟಾದ ಹರಕು ಸೀರೆಯ ಸೆರಗಿನಿಂದ ಮುಖದ ಮೇಲಿಂದ ಉದುರುವ ಕಟ್ನೀರು ಒರೆಸಿಕೊಂಡಳು.
ಸೆರಗ ಮರೆಯಲಿದ್ದ ಅರಿಶಿಣ ಉಂಡೆದ್ದ ಕೆಂಪು ಕುಪ್ಪಸ ಹೊದ್ದ ದಾಸವಾಳಗಳ ಮೇಲೆ ಬಿದ್ದ ಕಟಿನೀರಿನ ಹಸಿ ಹಸಿ ಗುರುತುಗಳು..! ಆಹಾ!! ಆ ಹಸಿ ಹಸಿ ಗುರುತುಗಳ ಮೇಲೆ ಚಿದ್ವಿಲಾಸದ ಬಿಸಿ ಬಿಸಿ ಸಾಲುಗಳ ಗೀಚಲು ನನ್ನ ಬರಹಗಣ್ಣು ಕನಸಿದವು. ಅದು ಅಭಿಜಾತ ಪ್ರೀತಿಯ ಪ್ರಥಮವಾಂಛೆ ಅರಳಿ ನಿಂತ ಕವಿಸಮಯ. ಬೆರಳ ತುದಿಗೆ ಹೆರಳ ನೇವರಿಕೆಯ ಸವಿನಯ.
"ಅವು" ನನ್ನ ಕಳ್ಳಗಣ್ಣಿಗೆ ಬಿದ್ದುದ ಗೊತ್ತಾಗಿ ನನ್ನತ್ತ ಮಿಂಚಿನ ಕಣ್ಣು ಹಾಯಿಸಿ, ಎದೆಯ ಸೆರಗು ಸರಿಪಡಿಸಿಕೊಂಡಳು. ಆಹಾ..! ಅದೆಂಥ ಮಾಧುರ್ಯದ ಕಣ್ಣುಗಳವು...!
ಒಂದೊಂದು ಕಣ್ಣಲ್ಲೂ ಪೂರ್ಣ ಚಂದಿರಿನ ಹಾಲ್ಬೆಳದಿಂಗಳ ಸರೋವರ. ಅವಳ ಮೌನದ ಮಹಾಮನೆಯೊಳಗೆ ಪ್ರವೇಶ ದೊರಕಿದ ಅನನ್ಯತೆಯ ಖುಷಿ ನನ್ನೆದೆಯ ತುಂಬೆಲ್ಲಾ. ಅವಳ ಮಧುರ ಮೌನದ ತುಂಬೆಲ್ಲಾ ಸಮರ್ಪಣೆಯ ಭಾವ. ಒಂದು ಅವ್ಯಕ್ತ ಉನ್ಮಾದದ ತಿಳಿಗಾಳಿ ತೀಡಿದಂತಿತ್ತು.
ನನಗೆ ಮಧ್ಯಾಹ್ನವೇ ಮರೆತು ಹೋಗಿತ್ತು. ಏನಿಲ್ಲವೆಂದರೂ ವಯಸಿನಲ್ಲಿ ನನಗಿಂತ ಒಂದೆರಡು ವರುಷವಾದರೂ ಹಿರೀಕಳು. ಅದ್ಯಾವುದು ಅಡ್ಡಿಯಾಗಿ ಇಬ್ಬರನು ಕಾಡಲಿಲ್ಲ ಮತ್ತು ಕಾಣಲಿಲ್ಲ. ಕಣ್ಣಿಗೆ ಕಾಣದ ವಯಸು. ಕೊರಳ ಮೋಹದ ಬಲೆಗೆ ಕರುಳಬಳ್ಳಿ ಸುತ್ತಿಕೊಂಡ, ಬ್ರಹ್ಮಾಂಡ ಬೀಜಗಳ ಖಂಡುಗ ಕನಸು.
ಹೇಳು.., ನನ್ನ ಕನಸುಗಳಿಗೆ ಒಡತಿಯಾಗುವೆಯಾ... ಎಂದು ಕೇಳುವುದನ್ನ ತಡೆ ಹಿಡಿದು ಅವಳ ಹೆಸರು ಕೇಳಿದೆ.
" ರೇಣುಕೆ " ಎಂದಳು. ನಾನು ಈ ಊರಿನವಳಲ್ಲ...
ನನ್ನ ಅಪ್ಪ ಯಾರಂತ ನನಗೇ ಗೊತ್ತಿಲ್ಲ. ಅವ್ವ ಜೋಗೇರ ಚೆಂಗಳಿ...
ದೇವರಿಗೆ ಬಿಟ್ಟವಳು... ನಾನವಳ ಮಗಳು. ಅವಳ ಹವಳದ ತುಟಿದಾಟಿ ಬಳಬಳನೆ ಮುತ್ತುಗಳುದುರಿದಂತೆ ಮಾತುಗಳುದುರಿದವು. ಅವನ್ನೆಲ್ಲ
ಆಯ್ದು ಮನದ ತುಂಬಾ ತುಂಬಿ ಕೊಳ್ಳಬೇಕೆನಿಸಿತು.
ನಾನು ಪ್ರಶ್ನಿಸದಿದ್ದರೂ ತಾನೇ ಕತೆ ಹೇಳಿದಂತೆ ಹರಿಗಡಿಯದೇ ಹೇಳ ತೊಡಗಿದಳು. "ನಂಗೊತ್ತಿಲ್ಲ... ಅದೇಕೋ ನಿನ್ಮುಂದೆ ಎಲ್ಲ ಹೇಳಿಕೊಳ್ಳಬೇಕನಸ್ತಿದೆ " ಎನ್ನುತ್ತಾ ಎಲ್ಲ ತೆರೆದಿಟ್ಟಳು. ತನ್ನ ಜೀವದ ಗೆಳತಿ ಲಂಬಾಣಿ ತಾಂಡಾದ ಲಕುಮಿ. ಅವಳು ತನಗೆ ಮಾಡಿದ ಸಹಾಯ, ಸಹಕಾರ ಕುರಿತು ಹೇಳುತ್ತಾ.,
ಹೊರಮಠದ ಬೀಜದಹೋರಿ ಯೊಂದು ತನ್ನನ್ನು ಬೆನ್ನಟ್ಟಿ ದಾಳಿಮಾಡಿ, ತನ್ನ ಹೆಣ್ತನದ ಜೀವಶಿಲ್ಪಕ್ಕೆ ಕೈಹಾಕಲು ಬಂದಾಗ ತನ್ನನ್ನು ಕಾಪಾಡಿದಾಕೆ. ಹೀಗೆ ಲಮಾಣೇರ ಲಕುಮಿ ತನ್ನ "ಜೀವದಜೀವ" ಎಂದಳು.
ಅಂದು ಸೋಮವಾರ ಯಡ್ರಾಮಿ ಸಂತೆಯದಿನ. ಅಮ್ಮನ ಕೊಡ ತುಂಬಿ ತುಳುಕುವಷ್ಟು ರೊಕ್ಕ. ಹಣಮಂದೇವರ ಮುಂದಿಟ್ಟ ತುಂಬಿದ ತಾಮ್ರದ ಕೊಡ, ಬಿಚ್ಚಿಟ್ಟ ತನ್ನ ಕಾಲ್ಗೆಜ್ಜೆ, ಭಂಡಾರದ ಚೀಲ ತೋರಿಸಿದಳು.
ಅದು ನನ್ನ ತಾಯಿಗೇ ಕಡೆಯಾಗಲಿಲ್ಲ. ನನಗೂ ಕೊಡ ಹೊರಿಸಿದಳು ಗುಡ್ಡದ ಅಮ್ಮ. ಮೂರು ವರುಷಗಳಿಂದ ಗುಡ್ಡಕ್ಕೆ ಹರಕೆ ತೀರಿಸುತ್ತಿದ್ದೇನೆ. ಅಮ್ಮನ ಶಕ ಸಣ್ಣದಲ್ಲ ಮತ್ತು ಸುಮ್ಮನಲ್ಲ... ಬಂದಳು ನೋಡು ಅಮ್ಮ ಯಲ್ಲಮ್ಮ. ಅಂದಳು.
ಡೇಕರಿಕೆ ಶುರುವಾಗಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡಳು. ಕುಣಿಯತ್ತಾ, ಕುಣಿಯುತ್ತಾ ಲೋಕ ಚುಂಬಕದ ಝಲಕಿನಲಿ ಹಾಡ ತೊಡಗಿದಳು. ನೋಡ ನೋಡುತ್ತಿದ್ದಂತೆ ಸಂತೆಯಜನ ಗಿಜಿ ಗಿಜಿ ಗಿಜಿಗುಡತೊಡಗಿದರು. ರೊಕ್ಕದ ಝಣ ಝಣ ಝಣತ್ಕಾರ.
ಕನಸು ಮತ್ತು ಕಣ್ಣೀರು ಬಿಕರಿಯ ಕ್ಷಣಗಳು. ಹಾಗನಿಸಿದ್ದು ನನಗೆ. ಎಡ ಬಗಲಿಗೆ ದಾರೂ ತುಂಬಿದ ಸಣ್ಣ ತತ್ರಾಣಿ ಕಟ್ಟಿಕೊಂಡ ಎಣ್ಣೆಗಮಟಿನ ಜಡೆಯ ಮುದುಕನೊಬ್ಬ ತುಂತಣಿ, ಚೌಡಿಕೆ ನುಡಿಸುತ್ತ ಜನರ ಹಣೆಗೆ ಭಂಡಾರ ಹಚ್ಚುತ್ತಾ ನಡೆದ. ಅವನ ನಡಿಗೆಯಲಿ ಸಾವಿರ ಸಾವಿರ ಸಂಕಟ ತುಂಬಿದ ಮಹಾ ಮೌನದ ಸದ್ದುಗಳಿದ್ದವು. ಅವುಗಳ ತುಂಬೆಲ್ಲಾ ಗಂಡು ಹೆಣ್ಣೆಂಬ ಭೇದವರಿಯದ ಗಂಡಭೇರುಂಡ ಜೀವಕಾಳಿನ ತಾಯ್ತನ ತುಂಬಿ ತುಳುಕುತ್ತಿದ್ದವು.
ಬೇವಿನ ಸೊಪ್ಪಿನ ಸಡಿಲ ಸಿವುಡು ಸವರುತ್ತಾ, ಸವರುತ್ತಾ ಉಧೋ..ಉಧೋ..ಉಧೋ.. ನಿನ್ನಾಲಕುಧೋ. ಯಲ್ಲವ್ವ ನಿನ್ನಾಲಕುಧೋ ಉದ್ಘೋಷಣೆಗಳೊಂದಿಗೆ... ಜನ ಜಂಗುಳಿಯ ನಡುವೆ ಕರಗಿ ಹೋದ. ಚೌಡಿಕೆಯ ತಂತಿನಾದ ನನ್ನ ಜೀವತಂತುಗಳಲ್ಲಿ ಬೆಸೆದು ಕೊಳ್ಳತೊಡಗಿತು. ನನಗೆ ನಾನೇ ಮರೆತು ಹೋದೆ. ಅದೇನೋ ಬವಳಿ ಬಂದ ಅನುಭವ.
ಆರಂಭಕ್ಕೆ ಅದೆಷ್ಟೋ ವರಗಳು ರೇಣುಕೆಯ ಮದುವೆ ಮಾಡಿಕೊಳ್ಳಲೆಂದು ಮುಂದೆ ಬಂದರೂ, ಗುಡ್ಡದ ಅಮ್ಮ ಹಾಗೂ ತನ್ನ ತಾಯಿಗೋಸ್ಕರ ರೇಣುಕ ಮದುವೆ ನಿರಾಕರಿಸಿದಳು. ಈಗೀಗಂತು ಐಹಿಕ ಸುಖದ ಮಾತುಗಳಿಂದ ವಿಮುಕ್ತಳು. ಅಮ್ಮ ಯಲ್ಲಮ್ಮನ ಸುಖದೆದುರು ಇನ್ನೆಲ್ಲಿಯ ಸುಖಗಳು.? ತನಗೆ ತಾನೇ ಮಾತಾಡಿ ಕೊಳ್ಳುತ್ತಾಳೆ.
ಅಬ್ಬಬ್ಬಾ..! ಎಂಥಾ ಮೋಜು. ಗೆಜ್ಜೆ ಕಟ್ಟಿಕೊಂಡ ಲಯಬದ್ದ ಕುಣಿತ. ಉತ್ತರಾದಿಯ ರಾಧೆ - ಕೃಷ್ಣರ ಹಾಡಿನ ಮೋಡಿ..! ಆಹಾ!! ಮಣ್ಣ ನಾದದಲಿ ಕಲೆತು ಹೋದ ಅವಳೆದೆಗಣ್ಣುಗಳ ಸುಗಂಧ ಗೀತನೃತ್ಯ. ಅಭಿಜ್ಞಾನ ಪ್ರೀತಿ ಹುಟ್ಟಿಸುವ ಅವಳ ಸಿರಿಕಂಠದ ಸಂಗೀತಕೆ ಮಾರು ಹೋಗದವರಿಲ್ಲ. ಅಂದಿನ ಆ ಪಾರಿಜಾತದ ಘಮಲಿನ ಗಂಧರ್ವ ಗುಂಗಿನಿಂದ ನಾನಿನ್ನೂ ಪಾರಾಗಿ ಬಂದಿಲ್ಲ. ಅದೆಲ್ಲ ಮರೆಯಲಾಗದ ಮಹಾ ಸ್ವಪ್ನದಂತೆ ನನ್ನೆದೆಯಲ್ಲಿ ಸ್ಥಾಯಿಗೊಂಡಿದೆ. ಅದೊಂದು ಜೀವಸ್ಫುರಣದ ಸ್ಥಾಯೀಸ್ಮರಣೆ.
ಮಲ್ಲಿಕಾರ್ಜುನ ಕಡಕೋಳ
9341010712
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...
©2024 Book Brahma Private Limited.