Date: 20-04-2022
Location: ಬೆಂಗಳೂರು
'ನಾವು ಇವತ್ತು ಯಾರಿಗಾದ್ರು ಏನಾದ್ರು ಸಹಾಯ ಮಾಡಿದ್ರೆ ದೇವರು ನಮಗೆ ಎಲ್ಲಾದ್ರು ಯಾರನ್ನಾದ್ರು ಮಡ್ಗಿರ್ತಾನೆʼ ಅಂತ. ಹಂಗೇ ನಾವು ಇವತ್ತು ಯಾರಿಗಾದ್ರು ಏನಾದ್ರು ಕೇಡು ಮಾಡಿದರೆ ಅದರ ಪರಿಣಾಮನ ಎಲ್ಲೊ ಯಾವತ್ತೊ ಎದುರಿಸಲೇಬೇಕಾಗ್ತದೆ' ಎನ್ನುತ್ತಾರೆ ಲೇಖಕ, ವಿಮರ್ಶಕ ಡಾ. ರಾಮಲಿಂಗಪ್ಪ ಟಿ.ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ಬಾಲ್ಯದ ನೆನಪುಗಳೊಟ್ಟಿಗೆ ಕದಡಿದ ಸಾಮರಸ್ಯದ ಕುರಿತು ಬರೆದಿದ್ದಾರೆ.
ಸುಗ್ಗಿ ಕಣ ಮುಗುದ ಮೇಲೆ, ಆಮೇಲೆ ಗದ್ದೆ ಕೊಯ್ಲು ಮುಗುದ ಮೇಲೆ ನಾವು ಇಲಿ ಹಿಡಿಯೋಕೆ ಅಂತ ಹೋಗ್ತಿದ್ವು. ಗದ್ದೆ ಬದ, ಕಾಲುವೆ ಬದಿ, ಗದ್ದೆ ಪಕ್ಕದ ಒಣಗಿದ ಕಾವ್‌ಲು ಇಲ್ಲೆಲ್ಲ ಇಲಿಗಳು ನೆಲ್ಲಿನ ತೆನೆ ತೆನೆಗಳ್ನೆ, ಇಲುಕುಗಳ್ನೆ ಕತ್ತರಿಸಿ ಬಿಲಗಳಗೆ ಸಂಗ್ರೈಸಿ ಇಡ್ತಿದ್ದವು. ನಮಗೆ ಕೊಬ್ಬಿದ ಇಲಿಗಳ ಜತೆ ಇಂಥ ನೆಲ್ಲು ಸರಕ್‌ನೂ ಬೇಟೆ ಆಡೋದು ಪ್ರತಿ ವರ್ಶ ಮಾಮೂಲು. ಬೆಳ್ಳಿಲಿ, ತೋಡ, ಸುಂಡಿಲಿ, ಮಟ್ರಿಲಿ ಹಿಂಗೆ ಹಲವಾರು ಬಗೆ ಇಲಿಗಳನ್ನು ಬಲೆ ಹಾಕಿ ಹಿಡೀತಿದ್ವು. ಆಗೆಲ್ಲ ನಮಗೆ ಬಾಡಿನ ಹಬ್ಬ. ಗದ್ದೆಗಳಲ್ಲಿ, ತೋಟಗಳಲ್ಲಿ ಮುದ್ದೆ ಎಲ್ಲೆಲ್ಲಿ ಹಾಕಿರ್ತಾವೊ; ಗುದ್ದುಗಳಲ್ಲಿ ಹೊಸ ಮಣ್ಣು ಎಲ್ಲೆಲ್ಲಿ ತೋಡಿರ್ತಾವೊ ಅಲ್ಲೆಲ್ಲ ಹತ್ತಾರು ಇಲಿಗಳು ಇರ್ತಾವೆ ಅಂತಾನೆ ಅಂದಾಜು. ನಾವು ಹೊಸ ಮಣ್ಣು ತೋಡಿರೊ ಬಿಲ ಅಗೆದು ಹೊಗೆ ಹಾಕಿದರೆ ಎಲ್ಲೆಲ್ಲಿ ಅವು ಹೊರಗೆ ನುಗ್‌ಬೌದು ಅಂತ ಅಂದಾಜು ಮಾಡಿ ಬಲೆ ಬಿಡ್ತಿದ್ದೆವು. ಆದರೆ ಅಲ್ಲಿ ಅವು ಹೊರಗೆ ಬರದೆ ಎಲ್ಲೊ ಕಳ್‌ಮುದ್ದೆ ಹಾಕ್ಕೊಂಡು, ಸುರಂಗ ತೋಡ್ಕೊಂಡು ಅಲ್ಲಿಂದ ಗುದ್‌ಕೊಂಡು ಹೊರಗೆ ಬಂದು ದಿಕ್ಕಾಪಾಲಾಗಿ ಓಡೋಗಿ ತಪ್ಪಿಸ್ಕೊಳೋವು. ಅಂದರೆ ಅವು ಎಲ್ಲಿ ಹೊರಗೆ ಬರ್ತಾವೆ ಅಂತ ಅಂದಾಜು ಮಾಡಿರ್ತಿದ್ದೆವೊ ಅಲ್ಲಿ ಬರದೆ ಎಲ್ಲೆಲ್ಲೊ ಬಂದು ತಪ್ಪಿಸಿಕಳೋವು. ನಾವು ಎಲ್ಲೆಲ್ಲಿ ಕಳ್‌ಗುದ್ದು ಇರಬೌದು, ಎಲ್ಲೆಲ್ಲಿ ಮೇಲ್‌ಮುದ್ದೆ ಇರಬೌದು ಅಂತ ನೋಡಿದರೂ ನಮ್ಮ ಅನುಭವ, ತಿಳುವಳಿಕೆ, ಅಂದಾಜೆಲ್ಲ ಮೀರಿ ಅವು ಇನ್ನೆಲ್ಲೊ ಹೊರಗೆ ನುಗ್ಗಿ ಬಲೆಗೂ ಸಿಗದೆ, ಕೈಗೂ ಸಿಗದೆ ಓಡಿಹೋಗವು. ಇಂತಹ ಅನುಭವ ನಮಗೆ ಸಾಕಷ್ಟು ಸಲ ಆಗಿದೆ. ಕೆಲವು ಸಲ ಎರಡು ಮೂರು ಚೀಲ ಭತ್ತದ ಗೊನೆ, ಇಲುಕು ತುಂಬ್‌ಕಂಡು, ಗೊಂಚಲು ಗೊಂಚಲು ಇಲಿ ಸರ ಏರಿಸಿಕಂಡು ತೂಗಾಡಿಸ್‌ಕಂಡು ಬೇಟೆ ಮುಗಿಸಿ ಸಂತೋಶ್‌ದಿಂದ ಬಂದದ್ದೂ ಅದೆ; ಕೆಲವು ಸಲ ಒಂದೊ ಎರಡೋ ತೋಡ ಹಿಡಕಂಡು ಪೆಚ್ ಮಾರೆ ಹಾಕಂಡು ಭತ್ತ ಮಾತ್ರ ಸೋವಿಕಂಡು ಬಂದದ್ದೂ ಅದೆ. ಆಗೆಲ್ಲ ನಮ್ಮಜ್ಜ ಬಲ್‌ಬ್ಯಾಟ್‌ಗಾರ್ರು ಬಂದ್ರು ಆರತಿ ಎತ್ರಪ್ಪಾ ಅನ್ನೋನು.
ವಿಶೇಶ್‌ವಾಗಿ ಭತ್ತದ ಗದ್ದೆಗಳಲ್ಲಿ ಇಲಿ ಕ್ವಾಟ್ಲೆ ಭಾರಿ ಇರೋದು. ಈ ಇಲಿ ಬ್ಯಾಟೆ ಕತೆ ಹಂಗ್ ಇರಲಿ; ಇದನ್ನ ಯಾಕೆ ಹೇಳಿದೆ ಅಂದರೆ ಒಂದು ಕಡೆ ಬಿಲ ಅಗದು ಮುಚ್ಚಿ ಹೊಗೆ ಹಾಕಿದರೆ ಇನ್ನೊಂದು ಕಡೆ ಅವು ಬರಬೇಕಲ್‌ವಾ? ಆದರೆ ಅವು ಎಲ್ಲೆಲ್ಲೊ ಬರ್ತಿದ್ವು. ಅಂದರೆ ಒಂದು ಕಡೆ ದಾರಿ ಮುಚ್ಚಿರೆ ಹತ್ತಾರು ಕಡೆ ದಾರಿ ಇರ್ತವೆ, ತೆರಕತವೆ ಅಂತ. ಮೂಗು ಮುಚ್ಚಿರೆ ಬಾಯಿ ತಾನಾಗಿ ತೆರಕತದೆ ಅಂತೀವಿ ನಾವು; ಆದರೆ ಕೆಲವು ಸಲ ಯಾವ ಕಾರ್ಯದ ಪರಿಣಾಮ ಯಾವಾಗ ಏನಾಗ್ತದೆ ಅಂತ ಹೇಳೋಕೇ ಆಗಲ್ಲ; ಊಹೆ ಮಾಡಕು ಆಗಲ್ಲ. ಇವತ್ತಿನ ಒಂದು ಕೆಲಸದ ಪರಿಣಾಮ ಇನ್ಯಾವತ್ತೋ ಇನ್ನೆಲ್ಲೊ ಇನ್ನೇನೋ ರೀತೀಲಿ ಕಂಡ್ ಬರಬೌದು. ಹಂಗೆ ಎಲ್ಲಕ್ಕು ಕೆಲವೊಮ್ಮೆ ಕಾರ್ಯ, ಕಾರಣ, ಪರಿಣಾಮ ಇವುಗಳ ಸಂಬಂಧ ನೇರಾನೇರ ಇರದು ಇಲ್ಲ ಅನ್ನಿ.
ನಮ್ಮಲ್ಲಿ ಅತ್ತೆ ಮ್ಯಾಗಳ ಕ್ವಾಪ ಕತ್ತೆ ಮ್ಯಾಲೆ ತಗುದ್ರು ಅಂತ ಒಂದು ಗಾದೆ ಮಾತದೆ. ಯಾವುದರ ಮೇಲಿನ ಸಿಟ್‌ನೊ ಇನ್ಯಾವುದರ ಮೇಲೋ ತೋರಿಸೋ ಬಗ್ಗೆ ಇರೋ ಮಾತಿದು. ಕೆಲವೊಮ್ಮೆ ಗಂಡನ ಮೇಲೆ ತೋರಿಸೊ ಕೋಪಾನ ಹೆಣ್‌ಮಕ್ಕಳು ಅವನ ಮೇಲೆ ತೋರಿಸೋಕೆ ಆಗದೆ ಪಾತ್ರೆ ಮೇಲೋ, ನಾಯಿ, ಬೆಕ್ಕಿನ ಮೇಲೋ ತೋರಿಸೋದಿಲ್ವೇ ಹಂಗೆ. ಕೆಲವೊಮ್ಮೆ ನಾವು ಇವತ್ತು ಯಾರ ಜೊತೆಗೋ ಜಗಳ ಆಡಿರ್ತೀವಿ, ಅವರಿಗೆ ಏನೋ ಇಕ್ಕಟ್ಟು ಕೊಟ್ಟಿರ್ತೀವಿ ಅನ್ಕಳಿ; ಇವತ್ತೆ ನಮಗೆ ಅವರು ಅದರ ಸೇಡು ತೀರಿಸ್ಕಳಕೆ ಆಗದೆ ಇರಬಹುದು. ಅಷ್ಟು ಶಕ್ತಿ, ಅಧಿಕಾರಾನೂ ತತ್ಕಾಲುಕ್ಕೆ ಅವರಿಗೆ ಇಲ್ಲದೆ ಇರಬಹುದು. ಆದರೆ ಅವರು ಸುಮ್‌ನೆ ಇರಲ್ಲ; ಕಾಲ ಕಾಯ್ತಾರೆ. ಹೆಂಗೆ ಇದನ್ನ ತೀರಿಸ್ಕದು ಅಂತ ಮನಸ್‌ನಗೆ ಗುಣಾಕಾರನೂ ಹಾಕ್ತಾ ಇರ್ತಾರೆ. ಹಂಗೂ ಅಲ್ಲದೆ ಇದ್‌ಕಿದ್ದಂಗೆ ಯಾವಾಗಲೊ ಅವರಿಗೆ ಅವಕಾಶ ಸಿಕ್ಕಾಗ ಹಳೆ ಸಿಟ್ಟೆಲ್ಲ ಯಾವುದೋ ರೂಪದಲ್ಲಿ ವ್ಯಕ್ತ ಆಗಬೌದು. ನಾವು ಕೊಟ್ಟ ಏಟಿನ್ ಎರಡರಶ್ಟು ಪೆಟ್ ವಾಪಸು ಕೊಡಬೌದು. ಅದೂ ನಾವು ಕೊಟ್ಟ ರೀತಿಲೆ ಕೊಟ್ಟ ರೂಪದಗೆ ಕೊಡಬೇಕು ಅಂತೇನಿಲ್ಲ.
ಇನ್ನೂ ಒಂದು ಮಾತದೆ; ಅದೇನೆಂದರೆ ʼನಾವು ಇವತ್ತು ಯಾರಿಗಾದ್ರು ಏನಾದ್ರು ಸಹಾಯ ಮಾಡಿದ್ರೆ ದೇವರು ನಮಗೆ ಎಲ್ಲಾದ್ರು ಯಾರನ್ನಾದ್ರು ಮಡ್ಗಿರ್ತಾನೆʼ ಅಂತ. ಹಂಗೇ ನಾವು ಇವತ್ತು ಯಾರಿಗಾದ್ರು ಏನಾದ್ರು ಕೇಡು ಮಾಡಿದರೆ ಅದರ ಪರಿಣಾಮನ ಎಲ್ಲೊ ಯಾವತ್ತೊ ಎದುರಿಸಲೇಬೇಕಾಗ್ತದೆ. ಉದಾರಣೆಗೆ ಇವತ್ತು ನೀವು ಪಕ್ಕದ ಮನೆ ಸಿದ್ದಪ್ಪನಿಗೆ ಅವಮಾನ ಆಗೋ ಹಂಗೆ ಬೈದಿರಿ ಅನ್ಕಳಿ; ನೀವು ದೊಡ್ ಕುಳ ಅಥವಾ ದೊಡ್ ಅಧಿಕಾರದಗೆ ಇರೋರಾದ್ರೆ ನಿಮ್ ವಿರುದ್ಧ ಅವನು ಆವಾಗ್ಲೆ ತಿರುಗಿಸಿ ವಾಪಾಸ್ ಕೊಡೋಕೆ ಆಗಲ್ಲ. ಅದರೆ ಅವನು ಸುಮ್ನೆ ಇರ್ತಾನೆ ಅಂತ ಅಲ್ಲ. ಎಲ್ಲೊ ಕಟ್ಟೆ ಮ್ಯಾಲೆ ಜತೆಗಾರರ ಜತೆ ಕುಂತು ಮಾತಾಡವಾಗ ನೀವು ಎದುರು ಮನೆ ಆಫೀಸರ್ ಹೆಂಡ್ತಿ ಜೊತೆ ಸಂಬಂಧ ಇಟ್ಕಂಡೀದೀರಿ ಅಂತ ಇಲ್ದೆ ಇದ್ರು ಕತೆ ಕಟ್ಟಿ ದ್ವೇಶ ತೀರಿಸ್ಕಬೌದು. ಅಂದ್ರೆ ನೀವು ಇವತ್ತು ನಿಮ್ಮ ಸ್ಥಾನ ಮಾನದ ಬಲದಿಂದ ಯಾರಿಗಾದರು ತೊಂದರೆ ಕೊಟ್ಟರೆ ಅವರು ಯಾವತ್ತೊ ಎಲ್ಲೊ ನಿಮಗೆ ಗೊತ್ತಿಲ್‌ದಂಗೆನೆ ಮೂಗೇಟು ಕೊಡಬೌದು. ಇದನ್ನೆ ರೂಪ ಬದಲಿಸಿಕಂಡಂಥ ವೇಶಾಂತರದ ಸಿಟ್ಟು ಅಥವಾ ಸ್ಥಳ ಕಳಕಂಡಂಥ ದೇಶಾಂತರದ ಸಿಟ್ಟು ಅಂತಾರೆ. ಇದು ಯಾವಾಗ ಯಾವ ರೀತಿ ಪ್ರಕಟ ಆಗ್ತದೆ ಅಂತ ಊಹೆ ಮಾಡಕು ಬರಲ್ಲ.
ಇನ್ನೊಂದ್ ಏನ್ ಗೊತ್ತಾ! ಚರಿತ್ರೆಲಿ ಬ್ರಿಟಿಶ್‌ನೋರು ನಮ್ಮನ್ನ ಆಳಿದರು ಅಂತ ಅವರ ಮೇಲಿನ ಸಿಟ್‌ನ ಇವತ್ತು ಇಂಗ್ಲೆಂಡಿನಗೆ ಇರೋರ ಮೇಲೆ ತೀರಿಸ್ಕಳಕೆ ಆಗುತ್ತಾ? ಆದರೆ ನಮ್ ಜನ ಹೆಂಗೆ ಅಂದ್ರೆ ಶತಶತಮಾನದ ಹಿಂದೆ ಯಾರೋ ಮಾಡಿದ ಅನ್ಯಾಯಕ್ಕೆ ಇವತ್ತು ಸೇಡು ತೀರಿಸ್ಕಳಕ್ ಹೋಗ್ತಾರೆ. ಹಿಂಗೆ ನಮ್ಮ ಸಿಟ್ಟು ದ್ವೇಶಕ್ಕೆ ಕಾಲ ಕಳಚ್ಕತದೆ. ಅಲ್ಲೆಲ್ಲೊ ಬಳ್ಳಾಪುರದಲ್ಲಿ ಒಂದು ಕೋಮಿನ ಜನರ ಮೇಲೆ ಗಲಾಟೆ ಆಯ್ತು ಅಂತ ಇಲ್ಲೆಲ್ಲೊ ಬೆಂಗಳೂರಲ್ಲಿ ಯಾರನ್ನು ಯಾರೋ ಹಿಡಕೊಂಡು ಹೊಡೀತಾರೆ. ಈ ಸಿಟ್ಟು, ಸೇಡಿಗೆ ಕಾಲದ ಒಡ್ಡಲ್ಲ; ಜಾಗದ ಒಡ್ಡುನೂ ಇರಲ್ಲ. ಅದಕ್ಕೆ ಎಶ್ಟೆ ಜನಬಲ, ಹಣಬಲ, ಅಧಿಕಾರದ ಬಲ ಇದ್ರೂ ಅನ್ಯಾಯ, ಸೇಡು, ದ್ವೇಶ ಇವೆಲ್ಲ ವೇಶ ಬದಲಾಸ್‌ಕಂಡು ಸಿಟ್ಟಾಗಿ ಒಂದಲ್ಲ ಒಂದ್ ರೀತಿ ತಿರುಗಿ ಬಡಿದೇ ಬಡೀತಾವೆ. ಯಾವತ್ತಿದ್ರು ಇವುಗಳಿಂದ ಅಪಾಯಾನೆ. ಪ್ರೀತಿ ವಿಶ್ವಾಸ, ನ್ಯಾಯ, ಸೌಹಾರ್ದ ಮಾತ್ರ ನಮ್ಮನ್ನೆಲ್ಲ ಕಾಪಾಡಬಲ್ವು.
ಆದ್ರೆ ನೋಡಿ ನಾವಿವತ್ತು ನಾವು ನೀವು ಅಂತ ಸಮಾಜನ ಗೆರೆ ಕೊರದಂಗೆ ಕತ್ತರಿಸಕೆ ಹೊರಟಿದೀವಿ. ಹಲಾಲ್ ಕಟ್ ಮಾಂಸ ತಗಬೇಡಿ, ಜಟಕಾ ಕಟ್ ಮಾತ್ರ ತಗಳಿ ಅಂತ ಹೇಳ್ತ ಇದೀವಿ. ಅವುರ್ ಹತ್ರ ಏನೂ ವ್ಯಾಪಾರ ಮಾಡಬೇಡಿ ನಮ್ಮೋರ್ ಹತ್ರ ಮಾತ್ರ ವ್ಯಾಪಾರ ಮಾಡಿ ಅಂತ ಹೇಳ್ತಾ ಇದೀವಿ! ನಮ್ ಜಾತ್ರೆ ನಡೆಯವಾಗ ಅವರು ಅಂಗಡಿ ಇಡಬಾರದು ಅಂತ ಕಟ್ಟು ಕಟ್‌ಳೆ ಮಾಡ್ತಾ ಇದೀವಿ. ಯಾಕಿವೆಲ್ಲ ಮಾಡ್ತಾ ಇದೀವಿ? ನಾವು ಧರ್ಮ ಧರ್ಮ ಅಂತ ಬೇಲಿ ಹಾಕ್ಕಂಡು ಜೀವನ ಮಾಡಕ್ಕಾಗುತ್ತಾ? ಗ್ಯಾಟ್ ಒಪ್ಪಂದಕ್ಕೆ ಸೈನ್ ಮಾಡಿ ಇಡಿ ದೇಶನೆ ಒಂದು ಓಪನ್ ಮಾರ್ಕೆಟ್ ಅಂತ ನಮ್ಮುನ್ ನಾವು ಗೋಶಣೆ ಮಾಡ್ಕಂಡ್ ಮೇಲೆ ಧರ್ಮುದ್ ಬೇಲಿ ಹಾಕ್ಕಳಕಾಗುತ್ತ? ಇವೆಲ್ಲ ನಮ್ಮುನ್ನ ಸ್ಯಾನೆ ದೂರ ಕರಕಂಡ್ ಹೋಗಲ್ಲ.
ಕಲ್ಲಂಗಡಿ ನಾಶ ಮಾಡಿ ಅದುನ್ನ ದೊಡ್ ಸುದ್ದಿ ಮಾಡ್ಕಂಡೊ. ನಲವತ್ ಪರ್ಸೆಂಟ್ ಕಮೀಶನ್ನು ಅಂತ ಹೇಳಿ ಒಬ್ಬ ಆತ್ಮಹತ್ಯೆ ಮಾಡ್ಕಂಡ ಅಂತ ಒಂದು ಪಕ್ಶದೋರು ಕೂಗಿಕ್ಕಿದರೆ ಇನ್ನೊಂದು ಪಕ್ಶದೋರು ಅದುನ್ನ ಕೊಲೆ ಅಂತ ಕೂಗಿಕ್ಕ್‌ತಾವರೆ! ಇದೇನ್ ಪಕ್ಶ ಪಾರ್ಟಿನೋರು ನಮ್ ಸಮಾಜನ ಕೂದು ಪಾಲಕ್ಕಳಕ್ ನೋಡ್ತಾವರಾ? ನಾವು ಅದ್ಕೆ ಸರಿಯಾಗೆ ಆಡ್ತಾ ಇದೀವಿ. ಅವರು ಆಡಿಸ್ತಾರೆ ನಾವೆಲ್ಲ ಯಾರೋ ನಮ್ಮುನ್ನ ಆಡುಸ್ತಾ ಅವರೆ ಅಂತನು ತಿಳಿದೆ ಆಡ್ತಾ ಇದೀವಿ. ನಾಳೆ ಒಂದಿನ ದಾರೀಲಿ ಬೈಕ್ನಗೆ ಹೋಗ್ತಾ ಇರ ಒಬ್ಬ ಸಾಬರ ಹುಡುಗನ್ನ ಕರದು ನಮ್ ಅತ್ತಿಗೆ ಹೆರಿಗೆ ನೋವಿಂದ ಒದ್ದಾಡ್ತಾ ಅವಳೆ ಕನ. ಆಸ್ಪತ್ರೆಗೆ ಕರಕೊಂಡು ಹೋಗ್ಬೇಕು ಬಾರಣ್ಣ ಅಂತ ಕರೆದರೆ ನಿಮ್ ಹಿಂದೂ ಗಾಡಿ ತಗಂಬರೋಗ್ರೊ ಅಂದ್ರೆ ಅದಕ್ಕೆ ಯಾರ್ ಕಾರಣ?
ಆದರೆ ರೊಟ್ಟಿ ಮಗಚಾಕ್‌ದಂಗೆ ಯಾವಾಗ ಬೇಕಾದ್ರು ಸಿಟ್ಟು, ರೋಶ, ದ್ವೇಶ ಇವೆಲ್ಲ ವೇಶ ಬದಲಾಸ್ಕಂಡು ನಮ್ಮುನ್ನ ಹೆಂಗ್ ಬೇಕಾದ್ರು ಬಡೀಬೌದು ಅನ್ನಾದ್ ಮಾತ್ರ ನಿಜ. ಹೊಡತ ಬಿದ್ದಾಗ ಅದು ಯಾಕ್ ಬಿತ್ತು ಅಂತಾನೆ ಎಶ್ಟೊ ಸಲ ನಮಗೆ ಅರ್ಥ ಆಗದೆ ಹೋಗಬೌದು. ಚರಿತ್ರೆ ಸದಾ ಹೊಸ ಹೊಸ ರೂಪ ತಾಳ್ಕಂಡು ಅದರಿಂದ ನಮಗೆ ಬಿಡುಗಡೆನೆ ಇಲ್ಲ ಅನ್ನಂಗೆ ಬಂದು ಹೊಡೀತಾ ಇರ್ತದೆ. ಚರಿತ್ರೆ ಅಂದ್ರೆ ಇನ್ನೇನೂ ಅಲ್ಲ ನಮ್ ತಂದೆ, ತಾತ ಮುತ್ತಾತರ ತರ್ಲೆ ತಾಪತ್ರಯಗಳೆ. ಯಾಕೆ ನಮ್ ನೆನ್ನೆನೆ ನಮಗೆ ವೈರಿ ಆಗಬೌದು. ಇವಾಗ ನಾವು ಬದುಕ್ತಾ ಇರೊ ಒಂದ್ ಕ್ಶಣ ಇನ್ನೊಂದು ಕ್ಶಣದಾಗೆ ಚರಿತ್ರೆ ಆಗೋಗ್ತದೆ. ಇಲ್ಲೆಲ್ಲೊ ಕಲ್ಲಂಗಡಿ ಜಜ್ಜಿದರೆ ಅಲ್ಲೆಲ್ಲೊ ತಲೆನೆ ಜಜ್ಜಿ ಅದು ಸುದ್ದಿನೆ ಆಗದೆ ಇರಬೌದು ಅಲ್ವಾ? ಇವತ್ತು ದೇಶದೇಶಗಳೆ ಚಿಕ್ಕ ಹಳ್ಳಿಗಳ ಥರ ಆಗ್ತಾ ಇದಾವೆ. ಹಿಂಗಿರಾವಾಗ ಧರ್ಮದ ಬೇಲಿ ಕಟ್ಕಂಡು ಸೇಫಾಗಿ ಬದುಕೋದುಂಟಾ?
ತಲೆಗೊಂದ್ ತರ್ಕ ಮಾಡ್‌ಕಂಡು ಸೋಶಲ್ ಮೀಡಿಯಾದಾಗೆ ಅಕ್ಷರದ್ ಜಗಳ ಆಡ್ಕಂಡು ಹೊಟ್ಟೆ ತುಂಬಿದೋರು ಯಾರ್ ಏನೆ ಕೆಸರು ಎರಚ್ಕಬೌದು. ಹೊಟ್ಟೆಗೆ ಬಟ್ಟೆಗೆ ಪರದಾಡೋರು ಮಾತ್ರ ಕಣ್ಣೀರು ಹಾಕ್ತಾನೆ ಇರ್ತಾರೆ. ಅವರವರೆ ಇನ್ನೊಬ್ಬರ ಸಂಚಿಗೆ ಬಲಿ ಆಗ್ತಾ ಇದೀವಿ ಅಂತಾನು ಗೊತ್ತಾಗ್ದೆ ಹೊಡೆದಾಡ್ತಾ ಇರ್ತಾರೆ! ಈ ಜಾತಿ, ಧರ್ಮ, ಪಂಥ, ಸಿದ್ಧಾಂತ ಇವೆಲ್ಲ ಹಸಿದವರಿಗೆ ಅನ್ನ ಕೊಡಲ್ಲ. ಜಗಳ ಹಚ್ಚಿ ಅವರವರು ಎಲ್ಲೆಲ್ಲಿ ಇದಾರೊ ಅಲ್ಲಲ್ಲೆ ಇರೊ ಹಂಗೆ; ಇನ್ನಾ ಪಾತಾಳಕ್ಕೆ ಇಳಿಯೊ ಹಂಗೆ ಯಾರದೋ ಚೂರಿ ಆಗಿ ಇರೀತಾ ಇರ್ತವೆ. ಅದುಕ್ಕೆ ನಾವೆಲ್ಲ ಸದಾ ಚರಿತ್ರೆಯಿಂದ ಬಿಡುಗಡೆ ಪಡೀತಾ ಇರಬೇಕು.
ನಮ್ಮ ವರ್ತಮಾನ ಮಾನಗೇಡಿ ಆಗದೆ ಇರೋ ಹಂಗೆ ಬಾಳೋದೆ ನಾವು ನಮ್ಮ ಚರಿತ್ರೆಯಿಂದ ಬಿಡುಗಡೆ ಪಡೆಯೋ ದಾರಿ. ನಮ್ಮ ನಮ್ಮ ಸಿಟ್ಟು ದ್ವೇಶಗಳೆಲ್ಲ ವೇಶಾಂತರ, ದೇಶಾಂತರ ಆಗದೆ ಇರ ಹಂಗೆ ನೋಡ್ಕಬೇಕು ಅಂದರೆ ನಾವೆಲ್ಲ ಇವತ್ತು ಕೂಡುಬಾಳು ಬಾಳಬೇಕು. ಇದು ಬರಿ ಧರ್ಮ ಧರ್ಮಗಳ ನಡಂತರದ ಮಾತಶ್ಷೆ ಅಲ್ಲ. ಒಬ್ಬ ಅಲಮಾರಿ, ಒಬ್ಬ ಅಸ್ಪೃಶ್ಯ, ಒಬ್ಬ ವಿಧವೆ, ಒಬ್ಬಳು ಶಿಕಂಡಿ ಇಂತೋರ್ನೆಲ್ಲ ಗನತೆ ಗೌರವ ಇರಂಗೆ ಬದುಕೋಕೆ ಬಿಡದೆ ಇರೋರು ಜಟಕಾ ಕಟ್ ತಗಳಿ ಅಂತ ಹೆಂಗ್ ಹೇಳ್ತೀರಾ? ನಮ್ ಜಾತ್ರೆನಾಗೆ ಅಂಗಡಿ ಮುಂಗಟ್ ಇಡಬ್ಯಾಡಿ ಅಂತ ಹೆಂಗ್ ಹೇಳ್ತೀರಾ? ಇದೆಲ್ಲ ನಮಗೆ ಗೌರವ ತರಾ ಆಚಾರವಾ? ತೋ ತೋ...
ಈ ಅಂಕಣದ ಹಿಂದಿನ ಬರೆಹಗಳು:
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.