Date: 21-01-2022
Location: ಬೆಂಗಳೂರು
‘ತಮ್ಮದೆ ತಾತ್ವಿಕ ಖಾಚಿತ್ಯ ಇದ್ದಲ್ಲಿ ಮಾತ್ರ ಅವು ಏನಾದರು ದಿಗ್ದರ್ಶಕವಾಗಿ ನುಡಿಯಬಲ್ಲವು. ಅಂತಹ ಪ್ರಜ್ಞೆ ಮತ್ತು ತಾತ್ವಿಕ ಖಾಚಿತ್ಯ ಇಲ್ಲಿನ ಕಥನಗಳಿಗಿದೆ’ ಎನ್ನುತ್ತಾರೆ ಲೇಖಕ, ವಿಮರ್ಶಕ ಡಾ. ರಾಮಲಿಂಗಪ್ಪ ಟಿ.ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ಶ್ರೀಹರ್ಷ ಸಾಲಿಮಠ ಅವರ ‘ಉದಕ ಉರಿದು’ ಕತಾಸಂಕಲನದ ಕುರಿತು ವಿಶ್ಲೇಷಿಸಿದ್ದಾರೆ.
ಶ್ರೀಹರ್ಶ ಸಾಲಿಮಠ ಅವರ ‘ಉದಕ ಉರಿದು’ ಕತಾಸಂಕಲನವನ್ನು ಒಂದೆ ಗುಕ್ಕಿಗೆ ಪಟ್ಟಾಗಿ ಕೂತು ಓದಿದೆ. ಓದುತ್ತ ಓದುತ್ತ ಹೋದಂತೆ ಕತೆಗಳು ನನ್ನೊಳಗೆ ಇಳಿಯುತ್ತ ಹೋದುವು. ಅನುಭವ ಮತ್ತು ಅರಿವು ಎರಡೂ ಹೆಣೆದುಕೊಂಡಂತೆ ಇಲ್ಲಿನ ಕಥೆಗಳು ಇವೆ. ಇಲ್ಲಿನ ಕತೆಗಳು ನಮ್ಮ ಸಮಾಜವನ್ನು ನೋಡುವ ದೃಶ್ಟಿ ಮುನ್ನೋಟವಾದಿ ಆದುದು. ಯಾವುದೆ ಕಥನಗಳು ತಮ್ಮದೆ ಆದ ವಿಚಾರ ಪ್ರಜ್ಞೆ, ಮೌಲ್ಯಪ್ರಜ್ಞೆ ಮತ್ತು ಆಚಾರಪ್ರಜ್ಞೆ ಇದ್ದಲ್ಲಿ ಮಾತ್ರ ಹೊಸದು ಏನಾದರು ಕೊಡಬಲ್ಲವು; ಬದಲಾಗುವ ವರ್ತಮಾನದ ಸಮಾಜದ ದಿಕ್ಕುದೆಸೆಗಳನ್ನು ತಮ್ಮದೆ ದೃಶ್ಟಿಯಲ್ಲಿ ನಿರ್ದೇಶಿಸಬಲ್ಲವು. ತಮ್ಮದೆ ತಾತ್ವಿಕ ಖಾಚಿತ್ಯ ಇದ್ದಲ್ಲಿ ಮಾತ್ರ ಅವು ಏನಾದರು ದಿಗ್ದರ್ಶಕವಾಗಿ ನುಡಿಯಬಲ್ಲವು. ಅಂತಹ ಪ್ರಜ್ಞೆ ಮತ್ತು ತಾತ್ವಿಕ ಖಾಚಿತ್ಯ ಇಲ್ಲಿನ ಕಥನಗಳಿಗಿದೆ.
‘ಉದಕ ಉರಿದು’, ‘ಬೇರಿಗಿದೆ ಕುರುಹು’, ‘ಸ್ವಾತಂತ್ರ್ಯ’ ಇಂತಹ ಕತೆಗಳು ಕನ್ನಡದ ಭೌಗೋಳಿಕ ಎಲ್ಲೆಕಟ್ಟನ್ನು ವಿಸ್ತರಿಸುವಂತಹ ಕತೆಗಳು. ಸ್ಥಳೀಯ ಭೂಗೋಳ ಮತ್ತು ವಿಶ್ವ ಭೂಗೋಳ ಎರಡನ್ನೂ ಬೆರೆಸುವಂತಹ ಕತೆಗಳು. ಹಾಗೆಯೆ ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು.
ಮಾನವ ಕಳ್ಳಸಾಗಣೆಯ ಸುತ್ತ ಇರುವ ಸಂಕೀರ್ಣ ವಲಯಗಳು, ದೇಶಪ್ರೇಮ, ದೇಶದ್ರೋಹ ಮತ್ತು ದೇಶಹೀನತೆಯ ಸಂಕೀರ್ಣ ಸಂಬಂಧಗಳು, ಸ್ಥಳೀಯ ಮತ್ತು ಪರಕೀಯತೆಗಳ ನಡುವಣ ವಸಾಹತುಶಾಹಿ ಸಂಘರ್ಶಗಳು, ಸ್ವಾತಂತ್ರ್ಯದ ಪರಿಕಲ್ಪನೆ, ಜ್ಞಾನ ಮತ್ತು ಕ್ರಿಯೆಗಳ ನಿರ್ವಸಾಹತೀಕರಣ ಹೀಗೆ ಹಲವು ವಿಚಾರಗಳು ಇಲ್ಲೆಲ್ಲ ಕಥನಗೊಂಡಿವೆ. ಈ ಮೂರೂ ಕತೆಗಳಲ್ಲಿನ ಒಂದು ಸಾಮಾನ್ಯ ಅಂಶ ಎಂದರೆ ಅದು ದೇಶದ್ರೋಹದ ಸಂಕಥನ. ‘ಬೇರಿಗಿದೆ ಕುರುಹು’ ಕತೆಯ ಬಾಲು ದರಿ ಮೇಲೆ ದೇಶದ್ರೋಹದ ಆಪಾದನೆ ಹೊರಿಸಲಾಗುತ್ತದೆ. ಪ್ರಭುತ್ವಕ್ಕೆ ಮಣಿಯಲಿಲ್ಲ ಎನ್ನುವ ಕಾರಣಕ್ಕೆ ಅವನನ್ನು ಸೆರೆಹಿಡಿದು ಕೊಲ್ಲಲಾಗುತ್ತದೆ. ‘ಸ್ವಾತಂತ್ರ್ಯ’ ಕತೆಯಲ್ಲಿನ ಶಾಕಂಬಿಯನ್ನು ಕೂಡ ನಕ್ಸಲನೊಬ್ಬನಿಗೆ ಆರೈಕೆ ಮಾಡಿದ ಕಾರಣ ನೀಡಿ ದೇಶದ್ರೋಹಿ ಎನ್ನಲಾಗುತ್ತದೆ. ದೇಶದ್ರೋಹದ ಆರೋಪ ಹೊರಿಸಿ ಜನರನ್ನು ಹದ್ದುಬಸ್ತಿನಲ್ಲಿ ಇಡುವ ವಿದ್ಯಮಾನ ಭಾರತಕ್ಕೆ ಹೊಸತಲ್ಲ. ಇಂದಿಗು ಅದು ಸುಡುವ ವರ್ತಮಾನದ ಆತಂಕ.
ನಮ್ಮಲ್ಲಿ ನಿರಂಜನರ ‘ಕೊನೆಯ ಗಿರಾಕಿ’, ಮಾಸ್ತಿಯವರ ‘ವೆಂಕಟಿಗನ ಹೆಂಡತಿ’, ತೇಜಸ್ವಿಯವರ ‘ತಬರನ ಕತೆ’, ದೇವನೂರರ ‘ಅಮಾಸ’ ಇಂತಹ ಕತೆಗಳು ಕನ್ನಡದಲ್ಲಿ ಮತ್ತೆ ಮತ್ತೆ ಓದಿಗೆ ಗುರಿಯಾಗಿರುವ ಕತೆಗಳು; ಶಾಲಾ ಕಾಲೇಜು ಪಠ್ಯಗಳಲ್ಲು ಮತ್ತೆ ಮತ್ತೆ ಸ್ಥಾನ ಪಡೆದಿರುವ ಕತೆಗಳು. ಇಂಥವು ಯಾಕೆ ಮತ್ತೆ ಮತ್ತೆ ಓದಿಗೆ ಗುರಿಯಾಗುತ್ತವೆ ಎಂದರೆ ಅವಕ್ಕೆ ಕಾಲ, ಸ್ಥಳಗಳನ್ನು ದಾಟಬಲ್ಲ ಸಾಧ್ಯತೆ ಇದೆ; ಹಾಗೆಯೆ ಅವುಗಳಿಗೆ ಗದ್ಯರೂಪಕಗಳೆ ಆಗಬಲ್ಲ ಸಾಧ್ಯತೆ ಇದೆ. ಇಂಥವು ಕನ್ನಡದಲ್ಲಿ ಸಾಕಷ್ಟಿವೆ. ಆದರೆ ಒಂದೆರಡನ್ನು ಮಾತ್ರ ಇಲ್ಲಿ ಉದಾಹರಣೆ ಕೊಟ್ಟಿದ್ದೇನೆ. ಇದೆ ರೀತಿ ಇಲ್ಲಿನ ‘ಬೇರಿಗಿದೆ ಕುರುಹು’, ‘ಸ್ವಾತಂತ್ರ್ಯ’, ‘ಉದಕ ಉರಿದು’ ಕತೆಗಳು ಒಂದು ರೀತಿಯಲ್ಲಿ ಗದ್ಯರೂಪಕಗಳ ಹಾಗೆ ಇರುವ ಕತೆಗಳು. ಇವಕ್ಕೆ ಮಾತ್ರವಲ್ಲ ಅಂತಹ ಸಾಧ್ಯತೆ ಇಲ್ಲಿನ ಹಲವು ಕತೆಗಳಿಗೆ ಇದೆ.
ಬಾಲು ದರಿ ಸಾಯುವುದು, ಶಾಕಂಬಿ ದಸ್ತಗಿರಿ ಆಗುವುದು, ಗಂಧಕ್ಕೊಂದು ಬರೆ ಕತೆಯ ಮಾಸ್ತರ ದಸ್ತಗಿರಿ ಆಗುವುದು, ಶ್ರೀಲಂಕಾದ ನಿರಾಶ್ರಿತ ತಮಿಳನೊಬ್ಬ ಆಸ್ಟ್ರೇಲಿಯಾದಲ್ಲಿ ತಬ್ಬಲಿ ಆಗುವುದು ಎಲ್ಲವೂ ನಮ್ಮ ವ್ಯವಸ್ಥೆ ಭಿನ್ನ ನೆಲೆಗಳಲ್ಲಿ ಗಬ್ಬೆದ್ದು ಹೋಗಿರುವುದರ ಸಂಕೇತಗಳು. ಇಂದು ನಾವು ಬಾಳುತ್ತಿರುವ ವರ್ತಮಾನವು ನಿರ್ವಸಾಹತೀಕರಣದ, ಜ್ಞಾನಶಾಸ್ತ್ರೀಯ ಅವಿಧೇಯತೆಯ ಕಾಲ. ಇಂತಹ ಕಾಲದಲ್ಲಿ ಇಲ್ಲಿನ ಈ ಕತೆಗಳು ಹೆಚ್ಚು ಪ್ರಸ್ತುತವಾದ ಕತೆಗಳಾಗಿ ಕಾಣುತ್ತವೆ. ಕಾಲ, ಸ್ಥಳಗಳನ್ನು ದಾಟಬಲ್ಲ ರೂಪಕ ಆಗಬಲ್ಲ ಕಥೆಗಳಾಗಿ ಕಾಣುತ್ತವೆ.
ಲೈಂಗಿಕತೆ ನಮ್ಮನ್ನು ಅನಾದಿಯಿಂದ ಕಾಡುತ್ತ ಬಂದಿರುವ ಸಂಗತಿ. ಅದರ ಬಗ್ಗೆ ನಮ್ಮಲ್ಲಿ ಸಾಗರದಷ್ಟು ಸಂಕಥನ ಸದಾ ಸೃಷ್ಟಿಯಾಗುತ್ತ ಬಂದಿದೆ. ಹರಿಯುವ ನೀರಾದ ಸಮಾಜದಲ್ಲಿ ಇಂತಹ ಸಂಗತಿಯ ಸಂಕಥನಕ್ಕೆ ಒಡ್ಡೆನ್ನುವುದೆ ಇರಲಾರದು. ‘ದೊಡ್ಡಪ್ಪ ಹೋಗ್ತಾನಾ’, ‘ಉಡಾಳ ಬಸ್ಯಾನ ಖೂನಿ’, ‘ಅನಾವೃತ ಜಗಜ್ಜನನಿ’ ಈ ಮೂರೂ ಕತೆಗಳಲ್ಲು ಲೈಂಗಿಕತೆ ಒಂದು ಸಾಮಾನ್ಯವಾದ ಅಂಶವಾಗಿ ಬಂದಿದೆ. ಉಡಾಳ ಬಸ್ಯಾನ ಖೂನಿ ಕತೆಯಲ್ಲಿ ವಿವಾಹಪೂರ್ವ ಲೈಂಗಿಕತೆಯ ಸಂಕಥನ ಇದ್ದರೆ ‘ಅನಾವೃತ ಜಗಜ್ಜನನಿ’ ಕತೆಯಲ್ಲಿ ವಿಲೋಮ ಲೈಂಗಿಕತೆಯ ಸಂಕಥನವಿದೆ. ‘ದೊಡ್ಡಪ್ಪ ಹೋಗ್ತಾನಾ’ ಇವೆರಡಕ್ಕು ಭಿನ್ನವಾದ ಆದರೆ ಅಷ್ಟೆ ಸಶಕ್ತವಾದ ಲೈಂಗಿಕತೆಯ ಸಂಕಥನ. ಇಲ್ಲಿ ಗಂಡ ಓಂಕಾರಪ್ಪಜ್ಜ ತನ್ನ ಹೆಂಡತಿಯನ್ನು ಜೀವಮಾನ ಇಡೀ ಮನೆಗೆ ಸೇರಿಸದೆ ಆಚೆ ಇರಿಸುತ್ತಾನೆ. ಆಕೆ ಊರೆಲ್ಲ ಭಿಕ್ಶೆ ಬೇಡಿ ತನ್ನ ಮನೆ ಹೊರ ಜಗಲಿಯ ಮೇಲೆ ಜೀವಿಸಿ ಪ್ರಾಣ ಬಿಡುತ್ತಾಳೆ. ಮನೆ, ದಾಂಪತ್ಯ, ಊರು, ಜಾತಿ ಇವೆಲ್ಲವು ಗಂಡಾಳಿಕೆಯ ಮೂಕ ಪ್ರೇಕ್ಶಕರ ಸ್ಥಾನ ವಹಿಸುವುದು ಈ ಕತೆಯ ವ್ಯಂಗ್ಯ. ಲೈಂಗಿಕತೆಯ ಹಲವು ಬಗೆಯ ವಿಧಿನಿಶೇಧಗಳು ಈ ಮೂರೂ ಕತೆಗಳನ್ನು ಓದುತ್ತ ಹೋದಂತೆ ನಮ್ಮೊಳಗೆ ಜಂಗಿ ಕುಣಿಯುತ್ತವೆ.
‘ದೊಡ್ಡಪ್ಪ ಹೋಗ್ತಾನಾ’ ಕತೆಯ ಒಳಗೆ ಲೈಂಗಿಕತೆ ಸ್ವಲ್ಪ ಅಪ್ರಧಾನ ಆದಂತೆ ಮರೆಗೊಂಡಿದೆ. ವೃದ್ಧಾಪ್ಯ ಮತ್ತು ಕೌಟುಂಬಿಕ ಸಂಬಂಧಗಳಲ್ಲಿನ ಹೊಣೆಗಾರಿಕೆಗಳ ಜಿಜ್ಞಾಸೆಯನ್ನು ಈ ಕತೆಯು ಬಹಳ ಚೆನ್ನಾಗಿ ರಾಚುತ್ತದೆ. ಆತ್ಮಹತ್ಯೆಯ ಕಡೆಗೆ ಬಲವಂತವಾಗಿ ವೃದ್ಧರನ್ನು ತಳ್ಳುವಷ್ಟು ನಮ್ಮ ಸಂಬಂಧಗಳು ಯಾಂತ್ರಿಕ ಮತ್ತು ಅಮಾನವೀಯ ಆಗಿರುವುದನ್ನು ಈ ಕತೆ ಅನಾವರಣಗೊಳಿಸುತ್ತದೆ. ಯಾವುದೇ ಕೃತಕತೆ ಇಲ್ಲದ ಸಹಜ ಕತೆ ಇದಾಗಿದೆ. (ಚರ್ಚೆಯ ಭಾಗವಾಗಿ ಕ್ಲಬ್ ಹೌಸ್ನಲ್ಲಿ ಮಾತಾಡಿದ ಶ್ರೀಹರ್ಶ ಅವರ ತಂದೆ ಇದೊಂದು ನೈಜವಾಗಿ ನಡೆದ ಘಟನೆ ಎಂದು ಹೇಳಿದರು) ಸಾಮಾಜಿಕ ವಾಸ್ತವ ಸಾಹಿತ್ಯಕ ವಾಸ್ತವ ಆಗಿ ಬದಲಾಗಿ ಕತೆಯಾದಾಗ ಹೇಗೆ ಸಹಜವಾಗಿ ಕಾಣುತ್ತದೆ ಎನ್ನುವುದು ಈ ಕತೆಯನ್ನು ನೋಡಿದರೆ ತಿಳಿಯುತ್ತದೆ.
‘ಸಂಕೋಲೆಯೂ ಸರಕು’ ಕತೆ ಮೇಲ್ನೋಟಕ್ಕೆ ಕಾರ್ಪೋರೇಟ್ ಜಗತ್ತಿನ ಕತೆಯಾಗಿ ಕಂಡರೂ ಆಳದಲ್ಲಿ ಅದು ಕುಟುಂಬದ ಸಂಕಥನವನ್ನೆ ಹೊಂದಿರುವ ಕತೆ. ‘ಬಿಳಲು ಬೇರು’ ಕೂಡ ಅಂತಹದ್ದೆ ಕುಟುಂಬ ಸಂಕಥನ. ವಿವಾಹ ಎಂಬ ಸಂಸ್ಥೆಗೆ ಜಾತಿಯನ್ನು ಅಲುಗಾಡಿಸುವ ಶಕ್ತಿ ಇದೆ ಎಂದು ನಮ್ಮ ಸಮಾಜ ನಂಬಿರುವ ಕಾಲದಲ್ಲಿ ನಾವಿದ್ದೇವೆ. ಅಂತರಜಾತಿ ವಿವಾಹದಿಂದ ಜಾತಿ ನಿರ್ಮೂಲನೆ ಸಾಧ್ಯ ಎಂದು ಹಲವರು ನಮ್ಮಲ್ಲಿ ನಂಬಿದ್ದಾರೆ. ಆದರೆ ‘ಬಿಳಲು ಬೇರು’ ಅಂತಹ ನಂಬಿಕೆಯ ಬುಡವನ್ನೆ ಅಲ್ಲಾಡಿಸುತ್ತದೆ. ಲಿಂಗಾಯತ ಹುಡುಗನೊಬ್ಬ ಪ್ರೀತಿಸಿ ಮದುವೆ ಆದ ಮುಸ್ಲಿಮ್ ಹುಡುಗಿಯೊಬ್ಬಳು ಲಿಂಗಾಯತಳಾಗಿ ಹೋಗುವ ಪ್ರಕ್ರಿಯೆ ಇಲ್ಲಿ ಸದ್ದಿಲ್ಲದೆ ನಡೆದು ಬೀಗತನ, ಇತರ ಸಂಬಂಧಗಳೆಲ್ಲ ಉದುರಿಹೋಗುತ್ತವೆ. ಜಾತಿಗಳು ದ್ವೀಪವಾಗಿಯೆ ಉಳಿಯುವ ಸಾಮಾಜಿಕ ವಾಸ್ತವವನ್ನು ಈ ಕತೆ ಹಿಡಿದಿಡುತ್ತದೆ. ‘ಸಂಕೋಲೆಯೂ ಸರಕು’ ಇದೆ ಸಂಗತಿಯನ್ನು ಜಾತಿಯಿಂದ ವರ್ಗಕ್ಕೆ, ಆರ್ಥಿಕ ನೆಲೆಗೆ ವಿಸ್ತರಿಸುತ್ತದೆ.
ಒಂದು ನದಿಯನ್ನೆ, ಕೆರೆಯನ್ನೆ, ಇಡಿಯ ದ್ವೀಪವನ್ನೆ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಳ್ಳುವ ಜನ ನಮ್ಮಲ್ಲಿದ್ದಾರೆ. ದೇಶದೇಶಗಳನ್ನೆ ವಸಾಹತುಗಳನ್ನಾಗಿ, ಬಯಲು ಬಂದೀಖಾನೆಗಳನ್ನಾಗಿ ಮಾಡುವ ಜನ ನಮ್ಮಲ್ಲಿದ್ದಾರೆ. ಇಂಥ ವಿದ್ಯಾಮಾನಗಳನ್ನು ಗದ್ಯ ರೂಪಕ ಮಾಡಬಲ್ಲ ಛಾತಿ ಕತೆಗಾರನಿಗೆ ಇರಬೇಕಾಗುತ್ತದೆ. ಇಂಥವುಗಳನ್ನು ನೋಡುವ ಭಿನ್ನ ದೃಶ್ಟಿ ಕತೆಗಾರನಿಗೆ ಬೇಕಾಗುತ್ತದೆ. ಸಾಗರದಲ್ಲಿ ಮಾನವ ಕಳ್ಳಸಾಗಣೆಯ ಕಾರಣಕ್ಕೆ ತಿಂಗಳಾನುಗಟ್ಟಲೆ ದಡ ಸೇರದೆ ನಿಲ್ಲುವಾಗ ಸಾಯುವವರನ್ನು ಸಮಾಧಿ ಮಾಡಲು ನೆಲವಾಗಲಿ, ಸುಡಲು ಬೆಂಕಿಯಾಗಲಿ ಸಿಗುವುದಿಲ್ಲ. ಆಗ ನೀರೆ ಸಮಾಧಿ ಆಗುತ್ತದೆ. ಆಗ ಸಮುದ್ರವನ್ನು ದ್ರವರೂಪದ ಸ್ಮಶಾನವಾಗಿ ಕಾಣುವ ಕಣ್ಣೂ ಕತೆಗಾರನಿಗೆ ಇರಬೇಕಾಗುತ್ತದೆ. ಇಂತಹ ಕಣ್ಣುಗಳು ಶ್ರೀಹರ್ಶ ಅವರಿಗೆ ಇವೆ. ಇದಕ್ಕೆ ಸಾಕ್ಷಿಯಾಗಿ ಇವರ ‘ಉದಕ ಉರಿದು’ ಕತೆಯಿದೆ.
ತಾತ್ವಿಕ ಖಾಚಿತ್ಯ ಇರುವ ಲೇಖಕನೊಬ್ಬ ವಾಚ್ಯ ಮಾತನ್ನೂ ವ್ಯಂಗ್ಯವಾಗಿ, ಗೇಲಿಯಾಗಿ ಮಾರ್ಪಡಿಸಬಲ್ಲ. ಅಂತಹ ಒಂದು ಪ್ರಸಂಗ ‘ಬೇರಿಗಿದೆ ಕುರುಹು’ ಕತೆಯಲ್ಲಿ ಬರುತ್ತದೆ. ನ್ಯೂ ಸೌತ್ ವೇಲ್ಸ್ ದ್ವೀಪವನ್ನು ಆಕ್ರಮಿಸಿ ಇಂಗ್ಲೆಂಡಿನ ವಸಾಹತು ಮಾಡಿ ಆಳುವ ಕತೆಯಲ್ಲಿನ ಗವರ್ನರ್ ಫಿಲಿಪ್ ‘ಗೆಲ್ಲಬೇಕಾಗಿರುವುದು ನೆಲವನ್ನಲ್ಲ, ಜನರ ಮನಸ್ಸನ್ನು’ ಎಂದು ಹೇಳುವ ಮಾತು ಕೇವಲ ವಾಚ್ಯ ಮಾತಾಗದೆ ವ್ಯಂಗ್ಯ, ಗೇಲಿ ಆಗಿ ಕತೆಯಲ್ಲಿ ಬೆಳೆಯುತ್ತದೆ. ಆದರೆ ‘ಗುತ್ತೆಪ್ಪನವರ ಮನೆಗೆ ಗಣಪ ಬಂದದ್ದು’ ಕತೆ ಹಾಗಲ್ಲ. ಈ ಕತೆಯಲ್ಲಿ ಶೂದ್ರರ ಆಚಾರವನ್ನು ನಿರ್ದೇಶಿಸುವ ಪುರೋಹಿತ ಶಾಹಿಯ ಹುನ್ನಾರದ ಕಥನವಿದೆ. ಆ ಹುನ್ನಾರವನ್ನು ಎದ್ದು ಕಾಣುವ ಹಾಗೆ ಕತೆ ಚಿತ್ರಿಸುತ್ತದೆ. ತಾತ್ವಿಕ ಖಾಚಿತ್ಯವೆ ಅತಿಯಾದ ಎಚ್ಚರವಾಗಿ ತನ್ನ ತಾತ್ವಿಕತೆಗೆ, ಮೌಲ್ಯಜಿಜ್ಞಾಸೆಗೆ, ಆಚಾರಪ್ರಜ್ಞೆಗೆ ಕತೆಯನ್ನು ಮುರಿದು ಮುರಿದು ದೂಡುವ ಕೆಲಸ ನಡೆದರೆ ಕತೆ ವಾಚಾಳಿ ಆಗಿಬಿಡುತ್ತದೆ. ಇಂತಹ ವಾಚಾಳಿ ತಾತ್ವಿಕತೆಯಿಂದಲು ಶ್ರೀಹರ್ಶ ಅವರು ತಪ್ಪಿಸಿಕೊಳ್ಳಬೇಕಾಗಿದೆ. ಯಾವುದೆ ಕತೆ ತಾತ್ವಿಕತೆಗೆ ಧಾವಿಸಿ, ಓಡಬಾರದು. ತತ್ವ ಅಥವಾ ಫಿಲಾಸಫಿ ಕತೆಯಲ್ಲಿ ಆಗಬೇಕು, ಮಾಗಬೇಕು. ತತ್ವ ಬಳ್ಳಿಯಂತೆ ಹಬ್ಬಬೇಕು, ಹೂವಿನಂತೆ ಅರಳಬೇಕು. ಅದು ಕತೆಗಾರನ ಬಲವಂತದ, ಉದ್ದೇಶಿತ ಹೆಣಿಗೆ ಆಗಕೂಡದು.
ಶ್ರೀಹರ್ಶ ಅವರಿಗೆ ಕತೆಯನ್ನು ಕಟ್ಟುವ ಕಲೆ ಸಿದ್ಧಿಸಿದೆ. ಮುಂದುವರಿದು ಕಥನದ ಭೂಗೋಳವನ್ನು ಮತ್ತು ಅನುಭವ ಲೋಕವನ್ನು ಅದಲುಬದಲು ಮಾಡಬಲ್ಲ ಶಕ್ತಿ ಅವರಿಗೆ ಸಿದ್ಧಿಸಲಿ ಎಂದು ಆಶಿಸುತ್ತೇನೆ. ಕತೆಗಳನ್ನು ಕಟ್ಟುವಾಗ ಅವರು ಇನ್ನೂ ಎಚ್ಚರದ ಕಟ್ಟಾಣಿ ಕೆಯಿಂದ ಸಹಜ ಆಗುವಿಕೆಯ ಕಡೆಗೆ ಚಲಿಸಬೇಕಾಗಿದೆ. ಮೆದುಳನ್ನು ಎದೆಯನ್ನಾಗಿ ಮಾರ್ಪಡಿಸುವ ಕಲೆಯನ್ನು ಸಿದ್ಧಿಸಿಕೊಳ್ಳಬೇಕಾಗಿದೆ. ವಾಚ್ಯವಾಗಿ ಕತೆಗಳಿಗೆ ನಾಮಕರಣ ಮಾಡದೆ, ಓದುಗರಿಗೆ ಅನುಭವಕ್ಕೆ ತೆರೆದುಬಿಡುವ ಹಾಗೆ ಹೆಸರು ಕೊಡುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಇವೆಲ್ಲ ಮಾತುಗಳನ್ನು ಇದು ಅವರ ಮೊದಲ ಸಂಕಲನ ಎನ್ನುವ ಕಾರಣಕ್ಕೆ ಹೇಳುತ್ತಿದ್ದೇನೆ. ತನ್ನ ಮೊದಲ ಸಂಕಲನಕ್ಕೇ ಇಶ್ಟೊಂದು ಒಳ್ಳೆಯ ಕತೆಗಳನ್ನು ನೀಡಿರುವ ಶ್ರೀಹರ್ಶ ಸಾಲಿಮಠ ಅವರಿಗೆ ನನ್ನ ಅಭಿನಂದನೆಗಳು. ಇವರಿಂದ ಕನ್ನಡ ಕಥನ ಲೋಕ ಇನ್ನಶ್ಟನ್ನು ನಿರೀಕ್ಶಿಸಬಹುದು.
ಶ್ರೀಹರ್ಶ ಸಾಲಿಮಠ ಅವರ ‘ಉದಕ ಉರಿದು’ ಕತಾಸಂಕಲನ ಕುರಿತು ಕ್ಲಬ್ ಹೌಸ್ನಲ್ಲಿ ಮಾತಾಡಬೇಕು ಅಂತ ಗೆಳೆಯ ಹನುಮಂತ ಹಾಲಗೇರಿ ಕೇಳಿದಾಗ ಆತಗೆ ಮಾತು ಕೊಟ್ಟು ತಪ್ಪು ಮಾಡಿದೆ ಅನ್ನಿಸಿತು. ನನ್ನದೇ ಕೆಲಸದ ಒತ್ತಡಗಳಲ್ಲಿ ಮಾತಿನ ದಿನದವರೆಗೆ ಕಥೆಗಳನ್ನು ಓದಲು ಆಗಿರಲೆ ಇಲ್ಲ. ಏನಾದರು ಸಬೂಬು ಹೇಳಿ ಎಂದೂ ಮಾತಿಗೆ ತಪ್ಪಿಸಿಕೊಂಡವನಲ್ಲ. ಇವತ್ತು ಮಾತಿಗೆ ತಪ್ಪುವ ಪರಿಸ್ಥಿತಿ ಬಂತಲ್ಲ ಅಂತ ಮಧ್ಯಾಹ್ನ ಕೂತು ಪಟ್ಟಾಗಿ ಒಂದೇ ಗುಕ್ಕಿಗೆ ಇಡಿ ಸಂಕಲನ ಓದಿದೆ. ಹಾಲಗೇರಿಗೆ ಧನ್ಯವಾದಗಳು.
ಈ ಅಂಕಣದ ಹಿಂದಿನ ಬರೆಹಗಳು:
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.