ಶ್ರೀಕೃಷ್ಣದೇವರಾಯ ತೆಲುಗಿನವನೆ? ಕನ್ನಡಿಗನೇ?


"ಈ ಕೃತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಶಂಕುಸ್ಥಾಪನೆಯ ವಿವರ, ವಿದ್ಯಾರಣ್ಯರ ಪ್ರಶಂಸೆ, ಕೃಷ್ಣರಾಯ ನಿಗೆ ಮಂತ್ರಿಗಳ ಉಪದೇಶ, ಲೋಕದ ವ್ಯವಹಾರಗಳನ್ನು ತಿಳಿಯುವ ಸಲುವಾಗಿ ಏರ್ಪಡಿಸಿದ್ದ ಗೂಢಚರ್ಯದ ವ್ಯವಸ್ಥೆ, ಕೃಷ್ಣರಾಯನ ಪಟ್ಟಣ ಶೋಧ ಸಂಚಾರ, ಸೇನಾ ವಿವರಣೆ, ಸಾಳುವ ತಿಮ್ಮರಸನ ಪ್ರಶಂಸೆ ಮುಂತಾದ ಅಂಶಗಳನ್ನು ಕಾಣಬಹುದು," ಎನ್ನುತ್ತಾರೆ ಆರ್‌. ಶೇಷಶಾಸ್ತ್ರಿ. ಅವರು ಸು. ರುದ್ರಮೂರ್ತಿ ಶಾಸ್ತ್ರಿ ಅವರ ‘ಶ್ರೀ ಕೃಷ್ಣದೇವರಾಯ’ ಕೃತಿಗೆ ಬರೆದ ಮುನ್ನುಡಿ.

ಭಾರತದ ಅರಸರುಗಳಲ್ಲಿ ಶ್ರೀಕೃಷ್ಣದೇವರಾಯನಿಗೆ ವಿಶಿಷ್ಟವಾದ ಸ್ಥಾನವಿದೆ. ಸಮರ್ಥ ಆಡಳಿತಗಾರ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಪರಾಕ್ರಮಿ; ಕಲೆ, ಸಾಹಿತ್ಯ ರಂಗಗಳ ಪೋಷಕ; ತಾನು ವೈಷ್ಣವ ಧರ್ಮವನ್ನು ಅನುಸರಿಸಿದರೂ ಇತರ ಧರ್ಮಗಳ ಬಗ್ಗೆ ಒಬ್ಬ ರಾಜ ನಡೆದುಕೊಳ್ಳುವ ರೀತಿಯಲ್ಲಿ ನಡೆದುಕೊಂಡ ಸಂಯಮಿ. ತನ್ನನ್ನು ಕನ್ನಡ ರಾಯನೆಂದು ಕರೆಸಿಕೊಂಡ ಭಾಷಾಪ್ರೇಮಿ. ಯವನ ರಾಜ್ಯ ಸ್ಥಾಪಕನೆಂಬ ಬಿರುದನ್ನು ಪಡೆದ ರಣಧೀರ. ಬಹುಶಃ ಈತನ ಬಗ್ಗೆ ಪ್ರಚಲಿತದಲ್ಲಿರುವಷ್ಟು ದಂತ ಕಥೆಗಳು ಬೇರಾವ ರಾಜನ ಬಗ್ಗೆಯೂ ಇಲ್ಲ.

ಕೃಷ್ಣದೇವರಾಯನಂತಹ ಆಶ್ರಯದಾತ ದೊರೆತು ತೆನಾಲಿ ರಾಮಕೃಷ್ಣ ಖ್ಯಾತ ನಾದನೋ, ತೆನಾಲಿ ರಾಮಕೃಷ್ಣನಂತಹ ವಿಕಟಕವಿಗೆ ಆಶ್ರಯ ನೀಡಿ ಶ್ರೀಕೃಷ್ಣದೇವರಾಯ ಜನಪದರಲ್ಲಿ ಜನಪ್ರಿಯನಾದನೋ ಹೇಳುವುದು ಕಷ್ಟ. ಅವರಿಬ್ಬರ ನಡುವೆ ನಡೆದ ಸ್ವಾರಸ್ಯಕರ ಪ್ರಸಂಗಗಳು ದಂತಕತೆಗಳಾಗಿ ದೇಶದಲ್ಲಿ ವ್ಯಾಪ್ತಿ ಹೊಂದಿವೆ. ಹಂಪಿಯಲ್ಲಿ ತೆನಾಲಿ ರಾಮಕೃಷ್ಣನ ಮಂಟಪವೆಂದು ಐತಿಹ್ಯವಿರುವ ಸ್ಥಳವೂ ಇದೆ. ಅವು ಬಹುಮಟ್ಟಿಗೆ ಚಾರಿತ್ರಿಕ ಸತ್ಯಗಳಲ್ಲ ಎಂದು ತಿಳಿದಿದ್ದರೂ ಆ ಕಥೆಗಳಲ್ಲಿನ ಭಾವಸತ್ಯ ನಮ್ಮನ್ನು ಆಕರ್ಷಿಸಿ ಚಾರಿತ್ರಿಕ ಸತ್ಯವೆಂದು ಭಾವಿಸುವಂತೆ ಮಾಡುತ್ತವೆ. ಶ್ರೀಕೃಷ್ಣದೇವರಾಯನ ಕಾಲದಲ್ಲಿ ತೆನಾಲಿ ರಾಮಕೃಷ್ಣ ಎಂಬ ಕವಿ ಇದ್ದದ್ದು ನಿಜ.ವಿಜಯನಗರ ಸಾಮ್ರಾಜ್ಯ ಎಂದಕೂಡಲೇ ನೆನಪಿಗೆ ಬರುವುದು ಶ್ರೀಕೃಷ್ಣದೇವರಾಯ ಮತ್ತು ಚಾಣಕ್ಯನಷ್ಟೇ ಚತುರನಾದ, ಶ್ರೀಕೃಷ್ಣದೇವರಾಯನಿಗೆ ಶ್ರೀರಕ್ಷೆಯಾಗಿ ನಿಂತ ಆತನ ಮಂತ್ರಿ ಮಹಾಮಂತ್ರಿ ತಿಮ್ಮರಸು. ಇವರಿಬ್ಬರ ನಡುವೆಯೂ ಹಲವಾರು ದಂತಕಥೆಗಳು ಹುಟ್ಟಿಕೊಂಡಿವೆ.

ಶ್ರೀಕೃಷ್ಣದೇವರಾಯನನ್ನು ಕುರಿತು ಹಲವಾರು 'ಚಾಟು ಪದ್ಯ'ಗಳು (ಒಂದು ಸ್ವಾರಸ್ಯಕರ ಪ್ರಸಂಗವನ್ನು ನಿರೂಪಿಸುವ ಪದ್ಯಗಳು, ಮುಕ್ತಕಗಳು) ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಹಲವಾರು ದೊರೆಯುತ್ತವೆ, ಈ ಹಿಂದೆ ಹೇಳಿದಂತೆ ಇವೆಲ್ಲವೂ ಕೇವಲ ಭಾವಸತ್ಯಗಳಷ್ಟೇ.

ಶ್ರೀಕೃಷ್ಣದೇವರಾಯನೇ ಹಾಕಿಸಿದ ಕನ್ನಡ ತೆಲುಗು ಮತ್ತು ತಮಿಳು ಭಾಷೆಗಳ ಶಾಸನಗಳು ದಕ್ಷಿಣ ಭಾರತಾದ್ಯಂತ ದೊರೆಯುತ್ತವೆ. ಇವುಗಳ ಜೊತೆಗೆ ಶ್ರೀ ಕೃಷ್ಣದೇವ ರಾಯನೇ ರಚಿಸಿದನೆಂದು ಭಾವಿಸಲಾದ 'ಜಾಂಬವತಿ ಕಲ್ಯಾಣ' ಎಂಬ ಸಂಸ್ಕೃತ ನಾಟಕ ಮತ್ತು 'ಆಮುಕ್ತಮಾಲ್ಯದ' ಎಂಬ ತೆಲುಗು ಕಾವ್ಯಗಳಿವೆ. ಇದು ತಮಿಳುನಾಡಿನ ಕಥೆ, ಬರೆದವನು ಕನ್ನಡಿಗ, ಬರೆದ ಭಾಷೆ ತೆಲುಗು. ಇದರಲ್ಲಿ ಶ್ರೀಕೃಷ್ಣದೇವರಾಯನ ಜೀವನಾನುಭವ ದಾಖಲಾಗಿದೆ.

ಇಂಥಾ ಶ್ರೀಕೃಷ್ಣದೇವರಾಯ ತೆಲುಗಿನವನೆ? ಕನ್ನಡಿಗನೇ? ಎಂಬುದರ ಬಗ್ಗೆ ಸಂಶೋಧನೆಗಳು ಭಾವನಾತ್ಮಕ ಮಟ್ಟದಲ್ಲಿ ನಡೆದಿವೆ. ಕನ್ನಡಿಗರಿಗಿಂತಲೂ ಶ್ರೀಕೃಷ್ಣದೇವ ರಾಯನ ಬಗ್ಗೆ ಅಭಿಮಾನ ಹೊಂದಿರುವವರು ತೆಲುಗು ಭಾಷಿಕರೆ. ಇದಕ್ಕೆ ಮುಖ್ಯ ಕಾರಣ ಆತನು ತೆಲುಗು ಕವಿಗಳಿಗೆ ನೀಡಿದ ಪ್ರೋತ್ಸಾಹ ಮತ್ತು ಆಶ್ರಯ. ಇಂದಿಗೂ ತೆಲುಗರಿಗೆ ಸಾಂಸ್ಕೃತಿಕ ವೀರನೆಂದರೆ ಶ್ರೀಕೃಷ್ಣದೇವರಾಯನೇ ಹೊರತು ಬೇರಲ್ಲ. ಆತನ ಹೆಸರಲ್ಲಿ ಅನೇಕ ಸಾಂಸ್ಕೃತಿಕ ಸಂಸ್ಥೆಗಳು, ಒಂದು ವಿಶ್ವವಿದ್ಯಾಲಯ ಆಂಧ್ರದಲ್ಲಿವೆ. ಶ್ರೀಕೃಷ್ಣದೇವರಾಯನ ಆಸ್ಥಾನಕ್ಕೆ ಭುವನವಿಜಯವೆಂಬ ಹೆಸರಿತ್ತು. ಅಲ್ಲಿ ಅಂದು ನಡೆದುದೆಂದು ಊಹಿಸಲಾದ ಕವಿತಾ ಪ್ರಸಂಗಗಳನ್ನು. ಅಷ್ಟ ದಿಗ್ಗಜ ಕವಿಗಳ ಚತುರ ಸಂಭಾಷಣೆಯನ್ನು, ಅದನ್ನು ನಿರ್ವಹಿಸುತ್ತಿದ್ದ ಶ್ರೀಕೃಷ್ಣದೇವರಾಯನ ಸಾಹಿತ್ಯಾಭಿರುಚಿ ಯನ್ನು ಸಾರುವ 'ಭುವನವಿಜಯ' ಎಂಬ ರೂಪಕವನ್ನು ಒಂದು ಪ್ರದರ್ಶನ ಕಲೆಯಾಗಿ ನಡೆಸುತ್ತಾರೆ

ಇಂದಿಗೂ ಜನಮಾನಸದಲ್ಲಿ ನೆಲಸಿರುವ ವರ್ಣರಂಜಿತ ಐತಿಹಾಸಿಕ ವ್ಯಕ್ತಿ ಶ್ರೀಕೃಷ್ಣದೇವರಾಯ ಈತನನ್ನು ಕುರಿತು ಈತನ ನಂತರದ ಕಾಲದಲ್ಲಿ ಕುಮಾರ ಧೂರ್ಜಟಿ ಎಂಬ ತೆಲುಗು ಕವಿ 'ಕೃಷ್ಣರಾಯ ವಿಜಯ' ಎಂಬ ಕಾವ್ಯವನ್ನು ಬರೆದಿದ್ದಾನೆ. ಇದರಲ್ಲಿ ಶ್ರೀಕೃಷ್ಣದೇವರಾಯನ ದಿಗ್ವಿಜಯಗಳ ಹಿನ್ನೆಲೆಯಲ್ಲಿ ಆತನ ಚರಿತೆಯನ್ನು ವರ್ಣಿಸಲಾಗಿದೆ.

ಶ್ರೀಕೃಷ್ಣದೇವರಾಯನ ಜೀವನದ ಬಗ್ಗೆ ತಿಳಿಸುವ ಮತ್ತೊಂದು ಕೃತಿ 'ರಾಯವಾಚಕಮು'. ಇದರ ಕನ್ನಡ ರೂಪ 'ಶ್ರೀಕೃಷ್ಣದೇವರಾಯ ದಿನಚರಿ' ಎಂಬುದು. ಈ ಗ್ರಂಥಗಳೆರಡೂ ಪ್ರಕಟವಾಗಿವೆ. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಮಧುರೆಯಲ್ಲಿಯೇ ಇದ್ದ ಸ್ಥಾನಪತಿಯೊಬ್ಬ ಮಾಹಿತಿಗಳನ್ನು ಸಂಗ್ರಹಿಸಿ ಬರೆದಿದ್ದಾನೆ. ಈ ಕೃತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಶಂಕುಸ್ಥಾಪನೆಯ ವಿವರ, ವಿದ್ಯಾರಣ್ಯರ ಪ್ರಶಂಸೆ, ಕೃಷ್ಣರಾಯ ನಿಗೆ ಮಂತ್ರಿಗಳ ಉಪದೇಶ, ಲೋಕದ ವ್ಯವಹಾರಗಳನ್ನು ತಿಳಿಯುವ ಸಲುವಾಗಿ ಏರ್ಪಡಿಸಿದ್ದ ಗೂಢಚರ್ಯದ ವ್ಯವಸ್ಥೆ, ಕೃಷ್ಣರಾಯನ ಪಟ್ಟಣ ಶೋಧ ಸಂಚಾರ, ಸೇನಾ ವಿವರಣೆ, ಸಾಳುವ ತಿಮ್ಮರಸನ ಪ್ರಶಂಸೆ ಮುಂತಾದ ಅಂಶಗಳನ್ನು ಕಾಣಬಹುದು. ಇವೆಲ್ಲವೂ ಈ ಕೃತಿಕಾರ ತನ್ನ ಕಾಲದ ಜನರಲ್ಲಿ ಪ್ರಚಲಿತವಿದ್ದ ಮಾಹಿತಿಗಳನ್ನು ಆಧರಿಸಿರುವಂತಹವು.

ಕೃಷ್ಣರಾಯನ ಹೆಸರಿನೊಂದಿಗೆ ತೆನಾಲಿ ರಾಮಕೃಷ್ಣನು ಹೇಗೆ ಇದ್ದಾನೆಯೋ ಹಾಗೆಯೇ ತಿಮ್ಮರಸುವಿದ್ದಾನೆ. ಕೃಷ್ಣರಾಯನಿಗೆ ತಂದೆಯ ಸ್ಥಾನದಲ್ಲಿದ್ದವನು. ಶ್ರೀಕೃಷ್ಣದೇವರಾಯನ ಅಕಾರಣಬಂಧುವಾಗಿ, ಮಂತ್ರಿಯಾಗಿ ತಿಮ್ಮರಸುವಿನ ಸುತ್ತ ಹಲವಾರು ಕಥೆಗಳು ಹೆಣೆದುಕೊಂಡಿವೆ. ಒಂದು ಭಾವನಾತ್ಮಕ ನಾಟಕೀಯ ಪ್ರಸಂಗವೇ ರೂಪುಗೊಂಡಿದೆ. ಬಾಲ್ಯದಲ್ಲಿ ಕೃಷ್ಣದೇವರಾಯನನ್ನು ಅಪಾಯಗಳಿಂದ ಕಾಪಾಡಿದವನು ತಿಮ್ಮರಸು. ಅವನಿಗೆ ಸಿಂಹಾಸನ ದೊರೆಯುವಂತೆ ಮಾಡಿದವನು ತಿಮ್ಮರಸು. ಅವನ ಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಲು ಸಹಕರಿಸಿದವನು ತಿಮ್ಮರಸು. ಕೃಷ್ಣರಾಯ ತಿಮ್ಮರಸನನ್ನು 'ಅಪ್ಪಾಜಿ' ಎಂದು ಕರೆಯುತ್ತಿದ್ದ. ಇಂತಹ ತಿಮ್ಮರಸುವಿನ ಬಗ್ಗೆಯೇ ಕೃಷ್ಣದೇವರಾಯನಿಗೆ ಅನುಮಾನ ಮೂಡುತ್ತದೆ. ತನ್ನ ಮಗನ ಸಾವಿಗೆ ತಿಮ್ಮರಸುವೇ ಕಾರಣವೆಂದು ಪಿಸುಣರ ಮಾತು ಕೇಳಿ ತಿಮ್ಮರಸುವಿನ ಕಣ್ಣು ಕೀಳಿಸುತ್ತಾನೆ. ಕೃಷ್ಣರಾಯನ ಕಣ್ಣುಗಳನ್ನು ಕೀಳುವ ಪ್ರಯತ್ನ ನಡೆದಾಗ ಅದರಿಂದ ಪಾರು ಮಾಡಿದವನೇ ತಿಮ್ಮರಸು. ಈಗ ಅದೇ ತಿಮ್ಮರಸುವಿನ ಕಣ್ಣುಗಳನ್ನು ಕೃಷ್ಣದೇವರಾಯನೇ ಕೀಳಿಸುತ್ತಾನೆ. ಪೆನುಗೊಂಡೆ ಯಲ್ಲಿ ಬಂಧಿಸಿಡುತ್ತಾನೆ. ಪೆನುಗೊಂಡೆಯಲ್ಲಿ ತಿಮ್ಮರಸು ಚರಸಾಲ (ಸೆರೆಮನೆ) ಎಂಬ ಕಟ್ಟಡ ಇದೆ. ಇದಕ್ಕೆ ಐತಿಹಾಸಿಕ ದಾಖಲೆಗಳ ಬೆಂಬಲ ದೊರೆಯುವುದಿಲ್ಲ. ನಿಜ, ಇಂಥ ಎಷ್ಟೋ ಸಂಗತಿಗಳ ಬಗ್ಗೆ ದಾಖಲೆ ದೊರೆಯುವುದಿಲ್ಲ ಎಂಬುದು ವಾಸ್ತವ ಸಂಗತಿ. ಏನೋ ನಡೆದಿರಬೇಕು, ಜನರ ಕಿವಿಗೆ ಬಿದ್ದು, ಅವರ ನಾಲಗೆಯ ಮೇಲೆ ನೆನೆದು ಕೊನೆಗೆ ಒಂದು ಕರುಣಾರಸಭರಿತವಾದ ಕತೆ ಹುಟ್ಟಿಕೊಂಡಿತು. ಕೃಷ್ಣರಾಯನು ನಿಜಕ್ಕೂ ಹೀಗೆ ಮಾಡಿರಬಹುದೇ ಎಂಬ ಪ್ರಶ್ನೆಯನ್ನು ಯಾರೂ • ಹಾಕಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಕಥೆಯಲ್ಲಿನ 'ಕರುಣರಸ'. ಮಹಾಮಂತ್ರಿ ತಿಮ್ಮರಸು ವಿನ ಪಾತ್ರವನ್ನೇ ಕೇಂದ್ರವಾಗಿಟ್ಟುಕೊಂಡು ತೆಲುಗಿನಲ್ಲಿ ನಾಟಕಗಳು ಬಂದಿವೆ. ಒಂದು ಆಸಿನಿಮಾ ಕೂಡಾ ಬಂದಿದೆ. ಕನ್ನಡದಲ್ಲಿಯೂ ಶ್ರೀಕೃಷ್ಣದೇವರಾಯ ಎಂಬ ಸಿನಿಮಾ • ಬಂದಿರುವುದನ್ನು ಸ್ಮರಿಸಬೇಕು. ಕಣ್ಣು ಕೀಳುವ ಪ್ರಸಂಗವನ್ನು ಕೆಲವು ಮಂದಿ ಇತಿಹಾಸಕಾರರೂ ದಾಖಲಿಸಿದ್ದಾರೆ.

ಕನ್ನಡ, ತೆಲುಗು, ಇಂಗ್ಲಿಷ್ ಭಾಷೆಗಳಲ್ಲಿ ಶ್ರೀಕೃಷ್ಣದೇವರಾಯನನ್ನು ಕುರಿತ ಸಂಶೋಧನಾ ಗ್ರಂಥಗಳು, ಲೇಖನಗಳು ಬಂದಿದೆ. ಡಾ. ನೇಲಟೂರಿ ವೆಂಕಟರಮಣಯ್ಯ ಡಾ. ಜಿ.ಎಸ್. ದೀಕ್ಷಿತ್ ಅವರ ಸಂಶೋಧನಾ ಕೃತಿಗಳು ಮೌಲಿಕವಾದುವು.

ಶ್ರೀಕೃಷ್ಣದೇವರಾಯನನ್ನು ಕುರಿತ ಕಾದಂಬರಿಗಳು ಕನ್ನಡ ಮತ್ತು ತೆಲುಗಿನಲ್ಲಿ ಗಣನೀಯ ಸಂಖ್ಯೆಯಲ್ಲಿ ಬಂದಿವೆ. ಇವುಗಳಲ್ಲಿ ಚಾರಿತ್ರಿಕ ಅಸ್ಥಿಪಂಜರಕ್ಕೆ ತಮ್ಮ ಕಲ್ಪನೆ ಯಿಂದ ರಕ್ತಮಾಂಸಗಳನ್ನು ತುಂಬಲಾಗಿದೆ. ಈ ರೀತಿ ಮಾಡುವಾಗ ಅವರ ಒಲವು ಬಹುಮಟ್ಟಿಗೆ ದಂತಕತೆಗಳ ಜಾಡನ್ನೇ ಹಿಡಿದಿದೆ. ಮುಖ್ಯವಾಗಿ ಕೃಷ್ಣದೇವರಾಯನ ನಡವಳಿಕೆಯ ಬಗ್ಗೆ, ಹೆಚ್ಚು ಒತ್ತನ್ನು ನೀಡಿವೆ. ಅವನ ಮಾನಸಿಕ ತುಮುಲಗಳ ಬಗ್ಗೆ, ಅವನ ಭಾವನೆಗಳ ಬಗ್ಗೆ ವಿಶೇಷವಾಗಿ ಗಮನ ನೀಡಿಲ್ಲ. ಈ ಮಾತನ್ನು ಕನ್ನಡ, ತೆಲುಗು ಭಾಷೆಗಳಲ್ಲಿ ಬಂದಿರುವ 'ಚರಿತ್ರೆ'ಗಳ ಬಗ್ಗೆಯೂ ಹೇಳಬಹುದು. ಅದನ್ನು ನಾನು ಆಕ್ಷೇಪಿಸುತ್ತಿಲ್ಲ. ಅದು ಅಂದಿನ ಕಾವ್ಯಧೋರಣೆಯಾಗಿತ್ತು.

ಇನ್ನು ಆಧುನಿಕ ಕಾಲಕ್ಕೆ ಬರುವುದಾದರೆ ಇಲ್ಲಿ ಇತಿಹಾಸ ಮತ್ತು ಕಾವ್ಯ ದೃಷ್ಟಿಯಿಂದ ನಮ್ಮವರು ಶ್ರೀಕೃಷ್ಣದೇವರಾಯನ ವ್ಯಕ್ತಿತ್ವವನ್ನು ಆವಿಷ್ಕರಿಸುವ ಪ್ರಯತ್ನ ಮಾಡಿದ್ದಾರೆ.

ಇತಿಹಾಸಕಾರರು ಗತಕಾಲವನ್ನು, ಗತಕಾಲದ ವ್ಯಕ್ತಿಗಳನ್ನು ಆ ಕಾಲಘಟ್ಟದಲ್ಲಿ ನಡೆದ ಸಂಘಟನೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾರೆ. ಕಾವ್ಯಧೋರಣೆಯನ್ನು ಹೊಂದಿರುವ ಕಥೆಗಾರರು, ಕಾದಂಬರಿಕಾರರು ಆ ಚಾರಿತ್ರಿಕ ಘಟನೆಗಳ, ಪ್ರಸಂಗಗಳ ಹಿಂದಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವ್ಯಕ್ತಿಗಳನ್ನು ವಿಶ್ಲೇಷಿಸುತ್ತಾರೆ. ಯಾವುದನ್ನು ಸಂಶೋಧನೆಯ ಚೌಕಟ್ಟಿನಲ್ಲಿ ಹೇಳಲಾಗುವುದಿಲ್ಲವೋ, ಅಂತಹ ಮಾನವಸಂಬಂಧ, ಸಂಘರ್ಷಗಳನ್ನು, ತಮ್ಮ ಕಲ್ಪನೆಯ ಮೂಸೆಯಲ್ಲಿ ಪುಟವಿಟ್ಟು ಪಾತ್ರಗಳನ್ನು, ಸನ್ನಿವೇಶಗಳನ್ನು ನಮಗೆ ಕಟ್ಟಿಕೊಡುತ್ತಾರೆ.

ಈ ಕಾದಂಬರಿಯಲ್ಲಿ ಮಿತ್ರ ಶ್ರೀ ಸು. ರುದ್ರಮೂರ್ತಿಶಾಸ್ತ್ರಿ ಶ್ರೀಕೃಷ್ಣದೇವರಾಯನ ಚರಿತ್ರೆಯನ್ನು ನಿರೂಪಿಸುವುದಕ್ಕಿಂತಲೂ ಆತನ ಚಾರಿತ್ರ್ಯವನ್ನು ನಿರೂಪಿಸುವುದರತ್ತ ಹೆಚ್ಚು ಗಮನಹರಿಸಿದ್ದಾರೆ. ಶ್ರೀಕೃಷ್ಣದೇವರಾಯ ಈ ಕಾದಂಬರಿಯ ಪ್ರಧಾನ ಪಾತ್ರ ಆದರೆ ಎಲ್ಲ ಪಾತ್ರಗಳ ಒಳಹೊರ ಚಾರಿತ್ರ್ಯಗಳನ್ನು ಗಮನಿಸಿ ಎಲ್ಲ ಪಾತ್ರಗಳನ್ನೂ ನಮ್ಮ ಮುಂದಿರಿಸಿದ್ದಾನೆ. ಬಹುಶಃ ಈ ಕಾರಣದಿಂದ ಶ್ರೀಕೃಷ್ಣದೇವರಾಯನ ಬದುಕಿನ ಸುತ್ತ ಹೆಣೆದುಕೊಂಡಿರುವ ಹಲವಾರು ಅಸಂಗತಗಳು ತಮ್ಮಷ್ಟಕ್ಕೆ ತಾವೇ ಕಳಚಿಕೊಂಡಿವೆ.

ಒಬ್ಬ ಸಾಧಾರಣ ಓದುಗ ಬಯಸುವ, ಒಂದು ಕಥೆಗೆ ಬೇಕಾದ ಮಾನವ ಸಹಜ ಶೃಂಗಾರ ಭಾವಗಳು ನವಿರಾಗಿ ಮೂಡಿಬಂದಿವೆ. ಮನುಷ್ಯನಿಗೆ ಮುಖ್ಯವಾಗಿ 'ಉತ್ಸಾಹ' ಸ್ಥಾಯೀಭಾವವಾಗಿದ್ದರೆ ಅವನು ಆರೋಗ್ಯಪೂರ್ಣನಾಗಿರುತ್ತಾನೆ. ಶೃಂಗಾರ, ವೀರ, ಕರುಣ ಮುಂತಾದ ರಸಗಳು ಮಾನವನಿಗೆ ಸಹಜ. ಇವುಗಳಿಲ್ಲದ ಜೀವನವೂ ಒಂದು ಬದುಕೆ?

ಆ ಕಾಲದ ಆಂತರಂಗಿಕ ಗೂಢಚರ್ಯೆ, ಅಧಿಕಾರ ದಾಹದ ಪಿತೂರಿಗಳು, ಉಪಾಯಗಳಿಗೆ ಪ್ರತ್ಯುಪಾಯಗಳು ಮುಂತಾದ ಕುತೂಹಲ ಮೂಡಿಸುವ ಪ್ರಸಂಗಗಳೂ ಹಿತವಾಗಿ ಮೂಡಿಬಂದಿವೆ. ಇವೆಲ್ಲವೂ ಆ ಪಾತ್ರಗಳ ವ್ಯಕ್ತಿತ್ವವನ್ನು ಆವಿಷ್ಕರಿಸುವಲ್ಲಿ ಸಹಕಾರಿಯಾಗಿವೆ.ನಮ್ಮ ರುದ್ರಮೂರ್ತಿ ಏನು ಬರೆದರೂ ಸರಳವಾಗಿ, ತಿಳಿಯಾಗಿ ಬರೆಯುತ್ತಾನೆ. ಆತನ ಇತ್ತೀಚಿನ ಕಾದಂಬರಿಗಳು ಹಿಂದಿನ ಕಾದಂಬರಿಗಳಿಗಿಂತಲೂ ಹೆಚ್ಚು ಕಾವ್ಯಾತ್ಮಕ ವಾಗಿ ಮೂಡಿಬಂದಿವೆ. ಅವುಗಳಲ್ಲಿ ಕೆಲವೊಂದು ಭಾಗಗಳನ್ನು ಮತ್ತೊಮ್ಮೆ ಓದೋಣ ಎನ್ನಿಸುತ್ತದೆ. ಹಲವಾರು ಕಡೆ ನಾಣ್ಣುಡಿಗಳಂತಹ ಮಾತುಗಳು ಪಾತ್ರಗಳ ಬಾಯಿಂದ ಸಹಜವಾಗಿ ಮೂಡಿಬಂದಿವೆ. ಒಟ್ಟಿನ ಮೇಲೆ ಈ ಕಾದಂಬರಿ ಚಾರಿತ್ರಿಕ ಕಥನಕ್ಕನುಗುಣ ವಾದ ಗಾಂಭೀರ್ಯವನ್ನು ಹೊಂದಿದೆ.

ಸಹೃದಯರು ಈ ಕಾದಂಬರಿಯನ್ನು ಓದಿ ಆಸ್ವಾದಿಸಬಲ್ಲರು. ಅದರಿಂದ ನಾನು ಕಥೆಯನ್ನು ವಿಶ್ಲೇಷಿಸುವ ಪ್ರಯತ್ನ ಮಾಡಲು ಹೋಗುವುದಿಲ್ಲ.

ಈ ಮುನ್ನುಡಿಯನ್ನು ಬರೆಯುವುದಕ್ಕೆ ಒಂದೆರಡು ಕಾರಣಗಳನ್ನು ನಾನು ಹೇಳಬೇಕು. ಒಂದು, ಅಂಕಿತ ಪುಸ್ತಕದ ಒಡೆಯರಾದ ಶ್ರೀ ಪ್ರಕಾಶ್ ಕಂಬತ್ತಳ್ಳಿಯವರ ಒತ್ತಾಯ. ಎರಡು, ನನ್ನ ಬದುಕಿಗೆ ಆಶ್ರಯ ನೀಡಿದ್ದು ನೀಡುತ್ತಿರುವುದು ಶ್ರೀಕೃಷ್ಣದೇವ ರಾಯನ ಹೆಸರಲ್ಲಿ ಸ್ಥಾಪಿತವಾದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಅನಂತಪುರ, ಆಂಧ್ರಪ್ರದೇಶ. ಹೀಗಾಗಿ ಶ್ರೀಕೃಷ್ಣದೇವರಾಯನ ಬಗ್ಗೆ ಇರುವ ಕೃತಜ್ಞತಾಭಾವ.

ಗೆಳೆಯ ಸು. ರುದ್ರಮೂರ್ತಿ ಶಾಸ್ತಿ ನನ್ನಿಂದ ಸ್ನೇಹವನ್ನು ಬಿಟ್ಟು ಏನೊಂದನ್ನೂ ಬಯಸುವವನಲ್ಲ, ತುಂಬ ಮುಜುಗರದಿಂದ "ನೋಡಪ್ಪ, ಇದಕ್ಕೆ ನೀನು ಮುನ್ನುಡಿ ಬರಿತೀಯೇನೋ' ಎಂದು ನವಿರಾಗಿ ಹೇಳುತ್ತಾನೆ. ನನಗೆ ಮುನ್ನುಡಿ ಬರೆಯುವ ಯೋಗ್ಯತೆ, ಅರ್ಹತೆ ಇದೆ ಎಂದಲ್ಲ; ಬೇರಾರೂ ಬರೆಯುವುದಿಲ್ಲ ಎಂದೂ ಅಲ್ಲ... ನನ್ನ ಬಗ್ಗೆ ಅವನಿಗಿರುವ ಮಮತೆ ಅಂತಹುದು. ಇದು ನಾನು ಅವನ ಮೂರನೆಯ ಪುಸ್ತಕಕ್ಕೆ ಬರೆಯುತ್ತಿರುವ ಮುನ್ನುಡಿ.

ನೀತಿಯುತರ್, ಅಮಲ ಕವಿತಾ ನೀತಿಯುತರ್, ಕೆಲರೇ ಪರಮ ಕವಿ ವೃಷಭರ್ಕಳ್
- ಕವಿರಾಜಮಾರ್ಗ.

- ಆರ್‌. ಶೇಷಶಾಸ್ತ್ರಿ

MORE FEATURES

ಅಕ್ಷರಗಳ ಸಖ್ಯ ನಿತ್ಯ ಸಿಗುವಂತೆ ವಿಧಿ ಹರಸಲಿ

04-01-2025 ಬೆಂಗಳೂರು

“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...

ಮೌನಂ ನ ಸಮ್ಮತಿ ಲಕ್ಷಣಂ

04-01-2025 ಬೆಂಗಳೂರು

“ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್...

ಬೆಂಗಳೂರು ಸಹಾನುಭೂತಿಯ ಬಂಡವಾಳಶಾಹಿಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ

04-01-2025 ಬೆಂಗಳೂರು

“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿ...