Date: 06-04-2023
Location: ಬೆಂಗಳೂರು
'ಶಿವನನ್ನಲ್ಲದೆ ಅನ್ಯದೈವವ ಪೂಜಿಸೆ, ಶಿವಶಬ್ದವನ್ನಲ್ಲದೆ ಅನ್ಯದೈವದ ಶಬ್ದವ ಕೇಳೆ'' ಎಂಬ ನಿಷ್ಠೆ ಸತ್ಯಕ್ಕನದಾಗಿತ್ತು. ಸಾಹಿತ್ಯಕವಾಗಿ ಸತ್ಯಕ್ಕ ವಚನಸಾಹಿತ್ಯದಲ್ಲಿ ಗಮನ ಸೆಳೆಯುತ್ತಾಳೆ. ಸತ್ಯಕ್ಕನ 27 ವಚನಗಳು ಪ್ರಕಟವಾಗಿವೆ ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ ಅವರು ತಮ್ಮ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’ ಅಂಕಣದಲ್ಲಿ ಶಿವಶರಣೆ ಸತ್ಯಕ್ಕನ ಕುರಿತು ವಿಶ್ಲೇಷಿಸಿದ್ದಾರೆ.
ಸತ್ಯಕ್ಕನನ್ನು ಕುರಿತು ನಡುಗನ್ನಡ ಕಾವ್ಯಕೃತಿಗಳಲ್ಲಿ ಪ್ರಸ್ತಾಪವಿದೆ. ಹರಿಹರ, ಲಕ್ಕಣ್ಣ ದಂಡೇಶ, ಮುಪ್ಪಿನ ಷಡಕ್ಷರಿ, ನಂಜುಂಡ ಕವಿ, ವಿರೂಪಾಕ್ಷ ಪಂಡಿತ, ಷಡಕ್ಷರದೇವ, ಶಾಂತಲಿಂಗ ದೇಶಿಕ, ತೋಂಟದ ಸಿದ್ಧಲಿಂಗಶಿವಯೋಗಿ, ಸರ್ವಜ್ಞ ಈ ಮೊದಲಾದ ಶಿಷ್ಟಕವಿಗಳ ಕಾವ್ಯದಲ್ಲಿ ಸತ್ಯಕ್ಕನ ಬಗೆಗೆ ಉಲ್ಲೇಖಗಳಿವೆ. ಬಿ. ಶಿವಮೂರ್ತಿಶಾಸ್ತ್ರಿಯವರು ಸಂಪಾದಿಸಿರುವ "ಶಿವಶರಣರ ತ್ರಿಪದಿಗಳು", ಮತಿಘಟ್ಟ ಕೃಷ್ಣಮೂರ್ತಿಯರು ಸಂಪಾದಿಸಿರುವ "ಕನ್ನಡ ಜನಪದ ಸಾಹಿತ್ಯ ಭಂಡಾರ", ಎ.ಜಿ. ನೀಲಗಾರ ಅವರು ಸಂಪಾದಿಸಿರುವ "ಅಕ್ಕನಾಗಮ್ಮನ ಜೋಗುಳಪದ" ಈ ಮೊದಲಾದ ಜನಪದ ಕಾವ್ಯಗಳಲ್ಲಿಯೂ ಸತ್ಯಕ್ಕನ ಜೀವನ ವೃತ್ತಾಂತಗಳಿವೆ. ಸಮಕಾಲೀನ ಶರಣನಾಗಿದ್ದ ಆದಯ್ಯನ ವಚನಗಳಲ್ಲಿ ಸತ್ಯಕ್ಕ ಕಾಣಿಸಿಕೊಂಡಿದ್ದಾಳೆ. ಹೀಗೆ ಸತ್ಯಕ್ಕನನ್ನು ಕುರಿತು ಅನೇಕ ಆಕರಗ್ರಂಥಗಳಿವೆ. ಈ ಎಲ್ಲ ಆಕರಗಳನ್ನು ಪರಿಶೀಲಿಸಿ ಸತ್ಯಕ್ಕನ ಜೀವನ ಚರಿತ್ರೆಯನ್ನು ಹೀಗೆ ಹೇಳಬಹುದಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಿಂದ 4 ಕಿಲೋಮೀಟರ್ ದೂರದಲ್ಲಿರುವ ಹಿರೇಜಂಬೂರು ಗ್ರಾಮವೇ ಸತ್ಯಕ್ಕನ ವಾಸಸ್ಥಾನವಾಗಿತ್ತು. ಇದೇ ಗ್ರಾಮದಲ್ಲಿ ಜಕ್ಕೇಶ್ವರ ದೇವಸ್ಥಾನವಿದೆ. 12ನೇ ಶತಮಾನದಲ್ಲಿ ಶಿವಶರಣರ ವಾಸಸ್ಥಾನವಾಗಿದ್ದ ಜಂಬೂರು ಗ್ರಾಮದಲ್ಲಿ ಶರಣರ ಮನೆಯ ಅಂಗಳದ ಕಸಗೂಡಿಸುವ ಕಾಯಕದಲ್ಲಿ ಸತ್ಯಕ್ಕ ನಿರತಳಾಗಿದ್ದಳೆಂದು ಫ.ಗು. ಹಳಕಟ್ಟಿಯವರ "ಶಿವಶರಣೆಯ ಚರಿತ್ರೆಗಳು" ಕೃತಿಯಿಂದ ತಿಳಿದುಬರುತ್ತದೆ. ಸತ್ಯಕ್ಕನು ಬಾಣ, ನಂಬಿಯಣ್ಣ, ಸಿರಿಯಾಳ, ಚಂಗಳೆ, ಸಿಂಧುಬಲ್ಲಾಳ, ಗೊಲ್ಲಾಳ, ಸಾಮವೇದಿ ಮೊದಲಾದ ಪುರಾತನ ಶರಣರನ್ನು ಸ್ಮರಿಸಿದ್ದಾಳೆ. ಅದೇರೀತಿ ಸಮಕಾಲೀನ ಹಿರಿಯ ಶರಣರಾಗಿದ್ದ ದಾಸಿಮಯ್ಯ, ದುಗ್ಗಳೆ, ಕೆಂಭಾವಿ ಭೋಗಣ್ಣರನ್ನು ಸ್ತುತಿಸಿದ್ದಾಳೆ. ಬಸವಾದಿ ಶರಣರಾಗಿದ್ದ ಮಾದಾರ ಚೆನ್ನಯ್ಯ, ಬಿಬ್ಬಿಬಾಚಯ್ಯ, ಬಳೇಶ್ವರ ಮಲ್ಲಯ್ಯ, ಮರುಳ ಶಂಕರದೇವ, ಮುಕ್ತಾಯಕ್ಕ ಮೊದಲಾದ ವಚನಕಾರರನ್ನು ಕುರಿತು ತನ್ನ ವಚನಗಳಲ್ಲಿ ಪ್ರಸ್ತಾಪಿಸಿದ್ದಾಳೆ. ಹೀಗಾಗಿ ಈಕೆಯ ಕಾಲ ಕ್ರಿ.ಶ. 1160 ಆಗಿತ್ತೆಂದು ತಿಳಿಯಬಹುದಾಗಿದೆ. ಕಲ್ಯಾಣದ ಅನುಭವ ಮಂಟಪದಲ್ಲಿ ಈಕೆ ಭಾಗವಹಿಸಿರುವುದರ ಬಗೆಗೆ ಆಧಾರಗಳಿಲ್ಲ. ಶೂನ್ಯಸಂಪಾದನೆಕಾರರು ಈಕೆಯ ಹೆಸರನ್ನು ಪ್ರಸ್ತಾಪಿಸಿಲ್ಲ. ಕೆಲವು ವಿದ್ವಾಂಸರು ಈಕೆ ಬಸವಾದಿ ಶರಣರಿಗಿಂತ ಹಿರಿಯ ಶರಣೆಯಾಗಿರಬೇಕೆಂದು ಹೇಳಿದ್ದಾರೆ. ಮುಕ್ತಾಯಕ್ಕ, ಮರುಳ ಶಂಕರದೇವ ಅವರನ್ನೂ ತನ್ನ ವಚನಗಳಲ್ಲಿ ಈಕೆ ಸ್ಮರಿಸಿರುವುದರಿಂದ ಈಕೆ ಹಿರಿಯ ಸಮಕಾಲೀನಳಾಗಿರಲಿಲ್ಲ. ನನ್ನ ಅಧ್ಯಯನದ ಪ್ರಕಾರ ಈಕೆ ಶರಣರ ಕ್ರಾಂತಿಯ ಕೊನೆಯ ಘಟ್ಟದಲ್ಲಿ ಬೆಳಕಿಗೆ ಬಂದ ಶರಣೆಯಾಗಿದ್ದಾಳೆ. ಈ ಕಾರಣದಿಂದಲೇ ಅನುಭವ ಮಂಟಪದಲ್ಲಿ ಈಕೆ ಭಾಗವಹಿಸಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ.
ಅನುಭವ ಮಂಟಪದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ವಚನಗಳಲ್ಲಿ ಆದಯ್ಯನ ಪ್ರಸ್ತಾಪವೂ ಇಲ್ಲ. ಆದಯ್ಯ ಮತ್ತು ಸತ್ಯಕ್ಕನಂತಹ ಅನೇಕ ವಚನಕಾರರು ಶರಣಕ್ರಾಂತಿಯ ಕೊನೆಯ ಘಟ್ಟದಲ್ಲಿ ಬಂದಿರಬಹುದಾಗಿದೆ. ಆದಯ್ಯನ ಎರಡು ವಚನಗಳಲ್ಲಿ ಸತ್ಯಕ್ಕನ ಪ್ರಸ್ತಾಪವಿದೆ. "ಮಹಾದೇವಿಯಕ್ಕನ ಜ್ಞಾನ, ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರೆ, ಸತ್ಯಕ್ಕನ ಯುಕ್ತಿ..." ಎಂದು ಆದಯ್ಯನ ವಚನಗಳಲ್ಲಿ ಸತ್ಯಕ್ಕನ ಪ್ರಸ್ತಾಪವಿದೆ. ಮಹಾದೇವಿಯಕ್ಕ ಜ್ಞಾನಕ್ಕೆ, ಮುಕ್ತಾಯಕ್ಕ ಅಕ್ಕರೆಗೆ, ಹೆಸರಾಗಿರುವಂತೆ, ಸತ್ಯಕ್ಕ ಯುಕ್ತಿಗೆ ಪ್ರಸಿದ್ಧಳಾಗಿದ್ದಳೆಂದು ತಿಳಿದುಬರುತ್ತದೆ. ಶಕ್ತಿಗಿಂತ ಯುಕ್ತಿ ದೊಡ್ಡದೆಂದು ತಿಳಿದುಕೊಂಡಿದ್ದ ಸತ್ಯಕ್ಕ ಹೊಸ ರೀತಿಯಿಂದ ಚಿಂತಿಸಿದ್ದಾಳೆ; ಅನೇಕ ಹೊಸ ವಿಚಾರಗಳನ್ನು ತನ್ನ ವಚನಗಳಲ್ಲಿ ಹೇಳಿದ್ದಾಳೆ.
ಜಂಬೂರಿನ ಹೊರವಲಯದಲ್ಲಿ ಸತ್ಯಕ್ಕನ ಇಷ್ಟದೈವವಾಗಿದ್ದ ಶಂಭುಜಕ್ಕೇಶ್ವರ ದೇವಾಲಯವಿದೆ. ಅದನ್ನು ಜಕ್ಕೇಶ್ವರ ಗುಡಿಯೆಂದು ಕರೆಯುತ್ತಾರೆ. ಈಕೆಯ ವಚನಾಂಕಿತವೂ 'ಶಂಭುಜಕ್ಕೇಶ್ವರ' ಆಗಿದೆ. ಈ ದೇವಾಲಯಕ್ಕೆ ಹಿಂದಿನಿಂದಲೂ ಅಸ್ಪೃಶ್ಯ ಸಮುದಾಯದವರು ಹರಕೆ ಹೊರುತ್ತಿದ್ದರೆಂದು ತಿಳಿದುಬರುತ್ತದೆ. ``ಆವ ಜಾತಿಯಲ್ಲಿ ಜನಿತವಾದಡೇನು? ಪೂರ್ವಗುಣಧರ್ಮಗಳ ಮುಟ್ಟದೆ?'' ಎಂಬ ನುಡಿ ಈಕೆಯ ವಚನಗಳಲ್ಲಿ ಬರುತ್ತದೆ. ಜಕ್ಕೇಶ್ವರ ದೇವಾಲಯ, ಹರಕೆ ಹೊರುವ ಅಸ್ಪೃಶ್ಯರು, ಜಾತಿಯ ಬಗೆಗೆ ಈಕೆಗಿದ್ದ ಸಿಟ್ಟು ಇವೆಲ್ಲವುಗಳನ್ನು ಗಮನಿಸಿದಾಗ ಸತ್ಯಕ್ಕ ದಲಿತ ವರ್ಗದ ಶರಣೆಯಾಗಿರಬೇಕೆಂಬ ವಿಷಯ ಸ್ಪಷ್ಟವಾಗುತ್ತದೆ. ಆದರೂ ಈ ವಿಷಯದ ಬಗೆಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಮಾದರ ಚೆನ್ನಯ್ಯನಂತೆ ಸತ್ಯಕ್ಕ ಕೂಡಾ ಶಿವಭಕ್ತಿಗೆ ನಿಷ್ಠಳಾಗಿದ್ದಾಳೆ.
ಒಂದು ಸಲ ಶಿವನು ಭಿಕ್ಕಕ್ಕೆ ಬರುತ್ತಾನೆ. ಸತ್ಯಕ್ಕನ ಗುಡಿಸಲಿಗೂ ಬಂದು ಭಿಕ್ಷೆ ಕೇಳುತ್ತಾನೆ. ಆಗ ಸತ್ಯಕ್ಕ ಸವಟಿನಿಂದ ಭಿಕ್ಷೆ ನೀಡುತ್ತಾಳೆ. ಶಿವ ತಂದಿದ್ದ ಜೋಳಿಗೆ ಹರಿದು ಹೋಗಿದ್ದರಿಂದ ನೀಡಿದ್ದೆಲ್ಲಾ ಹೊರಗೆ ಚೆಲ್ಲುತ್ತದೆ. ಆಗ ಶಿವನು ಹರಿದ ಹರಿಯಲ್ಲಿ ಚೆಲ್ಲಿತೆಂದು ಹೇಳಿದಾಗ ಸತ್ಯಕ್ಕನಿಗೆ ಹರಿಯ ಹೆಸರು ಕೇಳಿ ಸಿಟ್ಟು ಬರುತ್ತದೆ. ಆಗ ಅದೇ ಸವಟಿನಿಂದ ಭಿಕ್ಷುಕನ ರೂಪದಲ್ಲಿರುವ ಶಿವನಿಗೆ ಹೊಡೆದಳೆಂದು ಕಥೆ ಇದೆ. ಶಿವನ ಬಗೆಗೆ ಏಕನಿಷ್ಠಾಭಕ್ತಿ ಹೊಂದಿದ್ದ ಸತ್ಯಕ್ಕ ತನ್ನ ವಚನಗಳಲ್ಲಿ ಶಿವನನ್ನೇ ವಿಡಂಬಿಸಿದ್ದಾಳೆ. ತಮಿಳುನಾಡಿನ ಅರವತ್ತುಮೂರು ಪುರಾತನರ ಪ್ರಭಾವಕ್ಕೊಳಗಾಗಿದ್ದ ಸತ್ಯಕ್ಕ ತನ್ನ ವಚನಗಳಲ್ಲಿ ಅವರೆಲ್ಲರನ್ನೂ ಸ್ಮರಿಸಿದ್ದಾಳೆ. ಹೀಗಾಗಿ ಸತ್ಯಕ್ಕನ ಮೇಲೆ ಅನುಭವ ಮಂಟಪದ ಶರಣರಿಗಿಂತ, ಅರವತ್ತುಮೂರು ಪುರಾತನರ ಪ್ರಭಾವ ದಟ್ಟವಾಗಿದ್ದು, ಆಕೆ ಶರಣಕ್ರಾಂತಿಯ ಕೊನೆಯ ಘಟ್ಟದಲ್ಲಿ ಬಂದ ಶರಣೆಯಾಗಿದ್ದಾಳೆ. ಸತ್ಯಕ್ಕನ ವಚನದಲ್ಲಿ ಲಂಚ ಪದಬಳಕೆಯಾಗಿದೆ. ಲಂಚವೆಂಬ ಪದವು 12ನೇ ಶತಮಾನದ ಪ್ರಾರಂಭದಲ್ಲಿ ಬಳಕೆಯಲ್ಲಿರಲಿಲ್ಲ. ಇದೆಲ್ಲವನ್ನು ಗಮನಿಸಿದರೆ ಸತ್ಯಕ್ಕ ಶರಣರ ಕಿರಿಯ ಸಮಕಾಲೀನಳಾಗಿರಬೇಕೆಂಬುದು ಸ್ಪಷ್ಟವಾಗುತ್ತದೆ. ನಡುಗನ್ನಡ ಪುರಾಣಕವಿಗಳ ಕಾವ್ಯದಲ್ಲಿ ಸತ್ಯಕ್ಕನ ಹೆಸರು ಪ್ರಸ್ತಪವಾಗಿರುವುದನ್ನು ಸಂಕ್ಷಿಪ್ತವಾಗಿ ನೋಡಬಹುದಾಗಿದೆ.
"ನಂಬಿಯಣ್ಣನ ನಂಬಿಯಕ್ಕ ಮಹದೇವಿಯಂ
ಜಂಬೂರೊಳೆಸೆವ ಸತ್ಯಕ್ಕ ನಮ್ಮವ್ವೆಯಂ..."
- ಹರಿಹರ (ಮಹಿಮಾ ರಗಳೆಗಳು)
"ಸತ್ಯಕ್ಕನೆಂಬೊರ್ವ ಭಕ್ತೆ ಜಂಬೂರೊಳಗೆ
ಭಕ್ತಿವಿದೆ ಹರಿಶಬ್ದಮಂ ಕೇಳದಿಹ ಭಾಷೆ"
- ಲಕ್ಕಣ್ಣದಂಡೇಶ (ಶಿವತತ್ವ ಚಿಂತಾಮಣಿ)
"ಅಕ್ಕನಾಗಮ್ಮ ಸತ್ಯಕ್ಕ ಚಂಗಳೆ ಚೆಲ್ವೆ. "
- ಸುಬೋಧ ಸಾರ
"ಹರಿ ಎಂದ ವಿಪ್ರನ ಕರದು ಸಟ್ಟುಗದಿ ನಿ
ಬ್ಬರದಿ ಪೊಯ್ಯಲು ಹಲ್ಲುಮುರಿಯೆ||
ನೆರವೆಲ್ಲರ್ ಕಾಬಂತೆ ಹರನಗರ್ಭವ ಪೊಕ್ಕ
ಳಿರದೆ ಸತ್ಯಕ್ಕನನರಿಯೆ||"
- ನಂಜುಂಡ ಕವಿ (ಭೈರವೇಶ್ವರ ಕಾವ್ಯ)
"ಲಿಂಗಾಂಬೆ ಸೂರಸೇನೆ ಸು
ಮಂಗಳೆ ಸತ್ಯಕ್ಕನಲ್ಲಮಾಂಬಿಕೆ. "
- ಷಡಕ್ಷರಿ (ಬಸವರಾಜ ವಿಜಯಂ)
"ಅಮ್ಮವ್ವೆ ಪಿಟ್ಟವ್ವೆ ಗೊಗ್ಗವ್ವೆ ಸತ್ಯಕ್ಕ
ಹೆಣ್ಣು ಹೆರೂರು ಕೊಡಗೂಸು | ನಂಬೆಕ್ಕನ ಮೊಮ್ಮಗನು ನಾನು ಸರ್ವಜ್ಞ"
- ಸರ್ವಜ್ಞ (ಸರ್ವಜ್ಞನ ಚನಗಳು - 1978)
"ಮೆರೆಮಿಂಡ, ಮಡಿವಾಳನು ಜರಿದು ಹೊರಗಿಕ್ಕಿದರು, ಕಲಿಕಾಮ ಕಲಿಗಣನು ನನ್ನನಿರಿಯಬಂದರು ಸತ್ಯಕ್ಕ ನಿಂಬವ್ವೆಯರು ಹುಟ್ಟಿನಲ್ಲಿ ವನಕೆಯಲ್ಲಿ ಹೊಯ್ದರು. "
- ಶಾಂತಲಿಂಗದೇಶಿಕ (ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ)
"ಅವಿವೇಕದಿಂ ತೆಗಳಲಾಗದಾನೆಂದೆಂದು
ಮವರ್ಗೆಯಂಜುವೆನೆಂತೆ ನಲೊರ್ವ ಸದ್ಭಕ್ತೆ
ವಿವರಿಸಲ್ಸತ್ಯಕ್ಕನೆಂಬ ಪೆಸರಿಂದೆ ಜಂಬೂರೊಳೊಪ್ಪುತಿರ್ಪಳು"
- ತೋಂಟದ ಸಿದ್ಧಲಿಂಗ ಶಿವಯೋಗಿ (ಪಾಲ್ಕುರಿಗೆ ಸೋಮೇಶ್ವರ ಪುರಾಣ)
ಹೀಗೆ ನಡುಗನ್ನಡ ಕಾವ್ಯಕೃತಿಗಳಲ್ಲಿ ಸತ್ಯಕ್ಕನ ಕಥೆ ಬಂದಿದೆ. ಆಕೆ ಭಿಕ್ಷುಕನ ವೇಷದಲ್ಲಿರುವ ಶಿವನನ್ನು ಸವಟಿನಿಂದ ಹೊಡೆದಳು, ಹರಿಯೆಂಬ ಶಬ್ದ ಕಿವಿಗೆ ಬೀಳುತ್ತಲೇ ಕೋಪಗೊಂಡಳು. ಅಂತಹ ಶಿವನಿಷ್ಠಾಭಕ್ತೆಯಾಗಿದ್ದ ಸತ್ಯಕ್ಕ ನಿತ್ಯಶರಣೆಯಾಗಿದ್ದಳೆಂದು ಈ ಎಲ್ಲ ಶಿಷ್ಟಕವಿಗಳು ಸತ್ಯಕ್ಕನನ್ನು ತಮ್ಮ ಕಾವ್ಯಕೃತಿಗಳಲ್ಲಿ ಕೊಂಡಾಡಿದ್ದಾರೆ. ಜನಪದ ಕಾವ್ಯದಲ್ಲಿ ಸತ್ಯಕ್ಕನ ಮಹತ್ವವನ್ನು ಎತ್ತಿ ಹೇಳಲಾಗಿದೆ. ಸತ್ಯಕ್ಕನನ್ನು ಕುರಿತಂತೆ ತ್ರಿಪದಿಗಳು, ಜೋಗುಳ ಪದಗಳು ಪ್ರಕಟವಾಗಿವೆ.
"ಹರನು ಚರರೂಪಿಂದೆ 'ಹರಿ'ಯೆಂಬ ನುಡಿಪೇಳೆ ಕರದ ಹುಟ್ಟಿನಿಂದ ತಿವಿದೀಶನೊಲಿಸಿದ
ಗುರುವೆ ಸತ್ಯಕ್ಕಗೆ ಶರಣಾಗು||
"ಅಕ್ಕಮಂಗಾಯಕ್ಕ ಅಕ್ಕ ಚಂಗಳೆಯಕ್ಕ ಅಕ್ಕ ಚೋಳಕ್ಕ ಸತ್ಯಕ್ಕ ಮುಕ್ತಾಯಿ ಅಕ್ಕ ನೀಯೆನಗೆ ಕೃಪೆಯಾಗು"
- ಶಿವಶರಣರ ತ್ರಿಪದಿಗಳು
(ಸಂ. ಬಿ. ಶಿವಮೂರ್ತಿಶಾಸ್ತ್ರಿ, 1969)
ಈ ತ್ರಿಪದಿಗಳಲ್ಲಿ ಸತ್ಯಕ್ಕನ ಶಿವನಿಷ್ಠೆಯು ಪ್ರಕಟವಾಗಿದೆ. ಹರಿಯೆಂಬ ಶಬ್ದ ಕೇಳಿದಾಕ್ಷಣ ಸವಟಿನಿಂದ ಹೊಡೆದ ಸತ್ಯಕ್ಕ ದೊಡ್ಡ ಶರಣೆಯಾಗಿದ್ದು, ಹರನಿಷ್ಠೆಯನ್ನು ಪ್ರಕಟಿಸಿರುವ ಆಕೆಗೆ ಶರಣಾಗು ಎಂದು ಹೇಳಲಾಗಿದೆ. ಈ ಸಂಗ್ರಹದಲ್ಲಿ ಶಿವಶರಣೆಯರನ್ನು ಸ್ಮರಿಸುತ್ತ ಅವರಿಗೆಲ್ಲ ಅಕ್ಕ ಎಂದು ಸಂಬೋಧಿಸಲಾಗಿದೆ. ಜೋಗುಳ ಪದಗಳಲ್ಲಿ ಈ ಶರಣೆಯರೆನ್ನೆಲ್ಲ ಮುತ್ತೈದೆ ಶರಣೇರು ಎಂದು ಕರೆಯಲಾಗಿದೆ. ಕೆಲವು ಲಾವಣಿ ಪದಗಳಲ್ಲಿಯೂ ಸತ್ಯಕ್ಕನ ಮಹಿಮೆಯನ್ನು ಕೊಂಡಾಡಲಾಗಿದೆ. ನಿಷ್ಠಾಭಕ್ತಿಗೆ ಸತ್ಯಕ್ಕ ಹೆಸರಾಗಿದ್ದಾಳೆ. ಜನಪದರು ಕೂಡಾ ಮುಗ್ಧರು, ನಿಷ್ಠಾವಂತರು. ಹೀಗಾಗಿ ಸತ್ಯಕ್ಕನನ್ನು ಕುರಿತು ಅವರು ತಮ್ಮ ರಚನೆಗಳಲ್ಲಿ ಹಾಡಿಹೊಗಳಿದ್ದಾರೆ.
'ಶಿವನನ್ನಲ್ಲದೆ ಅನ್ಯದೈವವ ಪೂಜಿಸೆ, ಶಿವಶಬ್ದವನ್ನಲ್ಲದೆ ಅನ್ಯದೈವದ ಶಬ್ದವ ಕೇಳೆ'' ಎಂಬ ನಿಷ್ಠೆ ಸತ್ಯಕ್ಕನದಾಗಿತ್ತು. ಸಾಹಿತ್ಯಕವಾಗಿ ಸತ್ಯಕ್ಕ ವಚನಸಾಹಿತ್ಯದಲ್ಲಿ ಗಮನ ಸೆಳೆಯುತ್ತಾಳೆ. ಸತ್ಯಕ್ಕನ 27 ವಚನಗಳು ಪ್ರಕಟವಾಗಿವೆ. ``ಶಂಭುಜಕ್ಕೇಶ್ವರ'' ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾಳೆ. ಈಕೆಯ ವಚನಗಳಲ್ಲಿ ಕಾವ್ಯಕೌಶಲ್ಯಕ್ಕಿಂತ ವಿಚಾರವಂತಿಕೆ ಪ್ರಧಾನವಾಗಿದೆ. ಸತಿಪತಿ ಭಾವದ ವಚನಗಳಿಗೆ ಸತ್ಯಕ್ಕ ಪ್ರಸಿದ್ಧಳಾಗಿದ್ದಾಳೆ. ಈಕೆ ನಿಜಜೀವನದಲ್ಲಿ ಮದುವೆಯಾಗಿ ಸಂಸಾರ ನಡೆಸಿರದಿದ್ದರೂ, ಶಿವನೇ ತನ್ನ ಪತಿಯೆಂದು ಭಾವಿಸಿದ್ದಾಳೆ. "ಭಾವನೇಕೆ ಬಾರನೆನ್ನ ಮನೆಗೆ, ಆತನ ಕರೆದು ತಾರವ್ವ ಶಂಭುಜಕ್ಕೇಶ್ವರನ ನೆರೆದು ನೋಡುವೆನು" ಎನ್ನುವ ಆಕೆಯ ವಚನದಲ್ಲಿ ಸತಿಪತಿಭಾವದ ವಿಷಯ ಪರಿಣಾಮಕಾರಿಯಾಗಿ ಪ್ರಕಟವಾಗಿದೆ.
ಸತ್ಯಕ್ಕನ ವಚನಗಳಲ್ಲಿ ಶಿವಮಹಿಮೆ, ಸತಿಪತಿಭಾವ, ಸದ್ಭಕ್ತಿಯ ಮಹತ್ವ, ಸದಾಚಾರ, ಸ್ತ್ರೀ-ಪುರುಷರ ಸಮಾನತೆ, ಗುರು-ಶಿಷ್ಯರ ಸಂಬಂಧ, ಗುರು-ಲಿಂಗ-ಜಂಗಮದ ಪ್ರಾಮುಖ್ಯತೆ, ಡಾಂಭಿಕರ ವಿಡಂಬನೆ ಈ ಮೊದಲಾದ ವಿಷಯಗಳು ಗಮನ ಸೆಳೆಯುತ್ತವೆ. ಡಾಂಭಿಕ ಗುರುಶಿಷ್ಯರನ್ನು ನೇರವಾಗಿ ವಿಡಂಬಿಸಿರುವ ಸತ್ಯಕ್ಕ ಭವಿಗಳನ್ನು ಟೀಕಿಸಿದ್ದಾಳೆ. ಭವಿಗಳನ್ನು ಈಕೆ 'ಜಡಜೀವಿಗಳು', 'ಹುಟ್ಟಂಧಕರು', 'ಭಾಷೆಹೀನರು', ಎಂದು ವಿಡಂಬಿಸಿದ್ದಾಳೆ. ಶರಣರ ಭವಿಯ ಕಲ್ಪನೆ ಗಮನಿಸುವಂತಿದೆ. ಅಹಂಭಾವದ ಅರಸರನ್ನು, ಅಸಮಾನತೆಯನ್ನು ಬಿತ್ತುವ ಪುರೋಹಿತರನ್ನು, ಕಾಯಕ ಮಾಡದ ಆಲಸಿಗಳನ್ನು ಅವರು ಭವಿಗಳೆಂದು ಕರೆದರು. ಭವಿಬಿಜ್ಜಳನಿಗಾನು ಅಂಜುವೆನೆ?" ಎಂಬ ಬಸವಣ್ಣನವರ ವಚನದಲ್ಲಿ ಇದಕ್ಕೆ ಉತ್ತರವಿದೆ. ಸತ್ಯಕ್ಕನೂ ಕೂಡ ಭವಿಗಳನ್ನು ಕುರಿತು ತೀವ್ರವಾದ ವಿಂಡಬನೆ ಮಾಡಿದ್ದಾಳೆ.
ಕಸಗೂಡಿಸುವ ಒಬ್ಬ ಸಾಮಾನ್ಯ ಮಹಿಳೆ ಆಧ್ಯಾತ್ಮ ಕ್ಷೇತ್ರದಲ್ಲಿ ಎತ್ತರವಾಗಿ ಬೆಳೆಯಲಿಕ್ಕೆ ಬಸವಾದಿ ಶರಣರ ಪ್ರಭಾವವೇ ಕಾರಣವಾಗಿದೆ. ದೃಢನಿಲುವಿನ ನಿಷ್ಠಾಭಕ್ತಿಯ ಸತ್ಯಕ್ಕ ಶರಣರಲ್ಲಿಯೇ ವಿಶಿಷ್ಟ ವ್ಯಕ್ತಿತ್ವ ಹೊಂದಿದವಳಾಗಿದ್ದಾಳೆ. ಬೊಂತಾದೇವಿ, ಗೊಗ್ಗವ್ವೆಯರ ಹಾಗೆ ಈ ಶರಣೆ ಕೂಡ ಮದುವೆಯಾಗಿಲ್ಲ. ಮದುವೆಯಾಗಿ ಸಂಸಾರವನ್ನೇ ಕಂಡಿರದ ಈ ಶರಣೆಯರು ಸಂಸಾರವನ್ನು ಕುರಿತು ಬಹುಮಹತ್ವದ ಮಾತುಗಳನ್ನಾಡಿರುವುದು ಕುತೂಹಲಕಾರಿಯಾಗಿದೆ. ಶಿವನನ್ನಲ್ಲದೆ ಅನ್ಯ ದೇವರುಗಳನ್ನು ಪೂಜಿಸದ ಸತ್ಯಕ್ಕ ನಿಜವಾದ ಶಿವಶರಣೆಯಾಗಿದ್ದಾಳೆ. ಶಿವನ ಪರಮಭಕ್ತಳಾದ ಸತ್ಯಕ್ಕ, ಶಿವನನ್ನೇ ವಿಡಂಬಿಸುತ್ತಾಳೆ. ಶಿವಪುರಾಣದಲ್ಲಿ ಬರುವ ಒಂದೊಂದೇ ಕಥಾ ಪ್ರಸಂಗಗಳನ್ನುದಾಹರಿಸಿ ಶಿವನಿಗೆ ಪ್ರಶ್ನೆಗಳ ಸುರಿಮಳೆಗರೆಯುತ್ತಾಳೆ. ಶಿವನು ಬಾಣನ ಮನೆಯ ಬಾಗಿಲು ಕಾಯ್ದದ್ದು, ನಂಬಿಯಣ್ಣನಿಗೆ ಕುಂಟಣಿಯಾದದ್ದು, ಸಿರಿಯಾಳನ ಮಗನ ಕೊಲಿಸಿದ್ದು, ದಾಸಿಮಯ್ಯನ ವಸ್ತ್ರವಸೀಳಿದ್ದು, ಬಲ್ಲಾಳನ ವಧುವ ಬೇಡಿದ್ದು, ಸರಿಯಾದ ನಿರ್ಣಯಗಳಲ್ಲವೆಂಬುದು ಆಕೆಯ ತಿಳುವಳಿಕೆಯಾಗಿದೆ. ಶಿಶುವಧೆ-ಕುಂಟಣಿತನ-ಕಾಮುಕತನ, ಇವುಗಳನ್ನು ಮಾಡುವುದು ಶಿವನಾದ ನಿನಗೆ ಸರಿಯೆ? ಎಂದು ಕೇಳುವ ಸತ್ಯಕ್ಕ. (ಗಂಗೆ-ಗೌರಿ) ನಾರಿಯರಿಬ್ಬರೊಡನಿರುವುದು ಸರಿಯೆ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾಳೆ. ಅರ್ಚನೆ-ಪೂಜೆ ನೇಮವಲ್ಲ, ಮಂತ್ರ-ತಂತ್ರ ನೇಮವಲ್ಲ, ದೂಪ-ದೀಪಾರತಿ ನೇಮವಲ್ಲವೆಂದು ಸ್ಪಷ್ಟಪಡಿಸಿದ ಸತ್ಯಕ್ಕ, ಪರಧನ -ಪರಸ್ತ್ರೀ - ಪರದೈವಂಗಳಿಗೆರಗದಿಪ್ಪುದೇ ನೇಮವೆಂದು ಹೇಳಿದ್ದಾಳೆ. ರೀತಿ-ನೀತಿ-ನೇಮ-ವ್ರತಗಳ ಬಗೆಗೆ ಮೇಲ್ಜಾತಿಯವರು ಅದರಲ್ಲೂ ಪುರೋಹಿತರು ಹೇಳುತ್ತಿದ್ದರು, ಉಪದೇಶ ಕೊಡುತ್ತಿದ್ದರು. ಆದರೆ 12ನೇ ಶತಮಾನದ ವಚನಚಳವಳಿಯ ಪ್ರಭಾವದಿಂದಾಗಿ ಕಸಗೂಡಿಸುವವರು, ಚಪ್ಪಲಿ ಹೊಲಿಯುವವರು, ಕೂಲಿಕೆಲಸ ಮಾಡುವವರು ಈ ತತ್ವಗಳನ್ನು ಹೇಳತೊಡಗಿದರು. ಇದು ಬಸವಕ್ರಾಂತಿಯ ಬಹುದೊಡ್ಡ ಬದಲಾವಣೆಯಾಗಿದೆ. ಅರ್ಚನೆ-ಪೂಜೆ, ಮಂತ್ರ-ತಂತ್ರ, ದೂಪ-ದೀಪಾರತಿಗಳು, ಶರಣರು ಬರುವದಕ್ಕಿಂತ ಮೊದಲಿದ್ದ ಪೂಜಾ ವಿಧಾನಗಳಾಗಿದ್ದರೆ, ಪರಧನ-ಪರಸ್ತ್ರೀ-ಪರದೈವಗಳನ್ನು ಮುಟ್ಟಬಾರದೆಂಬುದು ತಳವರ್ಗದ ಶರಣರ ಸಂದೇಶವಾಗಿದೆ. ಕೆಲವೇ ವರ್ಷಗಳಲ್ಲಿ ಈ ಸಮಾಜವ್ಯವಸ್ಥೆಯಲ್ಲಿ ಬಸವಣ್ಣ ಮೊದಲಾದ ಶರಣರು ಎಂತಹ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾದರೆಂಬುದು ಇದರಿಂದ ಸ್ಪಷ್ಟವಾಗುತ್ತಿದೆ.
'ದೇವರೆಂಬವರಿಗೆಂಟೊಡಲುಂಟೆ?'' ಎಂದು ಪ್ರಶ್ನಿಸಿರುವ ಸತ್ಯಕ್ಕ ದೇವರು ತಪ್ಪು ಮಾಡಿದರೂ ತಪ್ಪೇ ಎಂದು ಸ್ಪಷ್ಟಪಡಿಸಿದ್ದಾಳೆ. ಅಂತೆಯೇ 12ನೇ ಶತಮಾನದಲ್ಲಿ ಶಿವನಿಗಿಂತ ಶಿವಶರಣ ಅಧಿಕನಾದ. ಸಾತ್ವಿಕ ಸದ್ಭಕ್ತರು, ಶಿವನಿಗಿಂತಲೂ ದೊಡ್ಡವರೆಂದು ಸತ್ಯಕ್ಕ ಹೇಳಿದ್ದಾಳೆ. ಶರಣರು ಭವಿ-ಭಕ್ತರ ಬಗೆಗೆ ವಿವರವಾಗಿ ಹೇಳಿದ್ದಾರೆ. ಸಂಸಾರದ ವಿಷಯಂಗಳಲ್ಲಿ ಮುಳುಗಿ ಹೋದವರು, ಭೋಗಜೀವನ ನಡೆಸುತ್ತಿರುವ ರಾಜ- ಮಹಾರಜರು ಭವಿಗಳೆಂದು ಹೇಳಿರುವ ಶರಣರು, ಇಂತಹ ಭವಿಗಳ ಸಂಗದಿಂದ ಭಕ್ತರು ದೂರವಿರಬೇಕೆಂದು ಹೇಳಿದ್ದಾರೆ. ಶರಣರಲ್ಲಿ ಭವಿ-ಭಕ್ತರ ಹೋರಾಟ ನಡೆದೇ ಇತ್ತು. ಸತ್ಯಕ್ಕ ಕೂಡಾ ಭವಿಗಳನ್ನು ಪ್ರಶ್ನಿಸಿದ್ದಾಳೆ.
"ಭವಿಯ ಬೆರಸಿದ ಭಕ್ತನು, ಹವಿಯ ಬೆರಸಿದ ಬೀಜದಂತೆ" ಎಂದು ಸತ್ಯಕ್ಕ ಉದಾಹರಣೆಗಳೊಂದಿಗೆ ಭವಿ-ಭಕ್ತರ ಸಮಾಗಮವನ್ನು ಟೀಕಿಸಿದ್ದಾಳೆ.
"ಲಂಚವಂಚನಕ್ಕೆ ಕೈಯಾನದ ಭಾಷೆ
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಥಮರಾಣೆ.
ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ. ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ
ನೀನಾಗಲೆ ಎನ್ನ ನರಕದಲ್ಲಿ ಅದ್ದಿ
ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ"
- ಸತ್ಯಕ್ಕ (ಸ.ವ.ಸಂ.5, ವ -1229)
ಈ ವಚನದಲ್ಲಿ ಸತ್ಯಕ್ಕ ಮಹತ್ವದ ವಿಚಾರಗಳನ್ನು ಹೇಳಿದ್ದಾಳೆ. ಲಂಚ-ಭ್ರಷ್ಟತೆ ಇಂದು ಮುಗಿಲು ಮುಟ್ಟಿದೆ, ಹೀಗಾಗಿ ಈ ವಚನ ಇಂದು ತುಂಬ ಪ್ರಸ್ತುತವಾಗಿದೆ. ಇಲ್ಲಿ ಸತ್ಯಕ್ಕ ಕಾಯಕದ ಮೂಲಕ ತನ್ನ ನಿಷ್ಠೆ-ಪ್ರಾಮಾಣಿಕತೆಗಳನ್ನು ಹೇಳಿದ್ದಾಳೆ. ತಾನು ಲಂಚಕ್ಕೆ ಕೈಯೊಡ್ಡುವುದಿಲ್ಲ, ಬಟ್ಟೆಯಲ್ಲಿ (ದಾರಿಯಲ್ಲಿ) ಹೊನ್ನು ವಸ್ತ್ರ ಬಿದ್ದಿದ್ದರೆ, ತಾನು ಕೈಮುಟ್ಟಿ ಎತ್ತಿಕೊಳ್ಳುವುದಿಲ್ಲವೆಂದು ಶಿವನ ಮೇಲೆ ಆಣೆ-ಪ್ರಮಾಣಮಾಡಿ ಹೇಳಿದ್ದಾಳೆ. ಚಂಚಲ ಮನಸ್ಸಿನವರು, ಸ್ವಾರ್ಥಿಗಳು ಪರರ ಹಣಕ್ಕೆ ಆಸೆಪಡುತ್ತಾರೆ. ತಾನು ಚಂಚಲೆಯಲ್ಲ ಸ್ವಾರ್ಥಿಯಲ್ಲ ತನಗೆ ಪರರ ಹಣ, ಒಡವೆಗಳ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸುತ್ತಾಳೆ.
ದಿನನಿತ್ಯ ಕಾಯಕದಲ್ಲಿದ್ದ ಸತ್ಯಕ್ಕಳನ್ನು ಪರೀಕ್ಷಿಸಲು ಯಾರೋ ಆಕೆ ಕಸಗೂಡಿಸುತ್ತಿದ್ದ ಶಿವಭಕ್ತರ ಅಂಗಳದಲ್ಲಿ ಹೊನ್ನು ಚೆಲ್ಲಿದ್ದರಂತೆ. ತಾನು ಕಸಗೂಡಿಸುವಾಗ ಆ ಹೊನ್ನಿನ ನಾಣ್ಯಗಳನ್ನು ಅವಳು ಕಲ್ಲುಚೂರುಗಳೆಂದು ಕಸದೊಂದಿಗೇ ಗೂಡಿಸಿ ಚೆಲ್ಲಬಿಡುತ್ತಾಳೆ. ಇಂತಹ ನಿಷ್ಠಾವಂತ, ಪ್ರಮಾಣಿಕ ಶರಣರರಿದ್ದುದರಿಂದಲೇ 12ನೇ ಶತಮಾನದಲ್ಲಿ ಕಲ್ಯಾಣಕ್ರಾಂತಿ ನಡೆಯಲು ಸಾಧ್ಯವಾಯಿತು. ಸತ್ಯಕ್ಕನಂತಹ ಶರಣೆಯರು ಇಂದಿಗೂ ಬೆಳಕು ನೀಡುತ್ತಿದ್ದಾರೆ.
ವಿಜಯಶ್ರೀ ಸಬರದ
9845824834
ಈ ಅಂಕಣದ ಹಿಂದಿನ ಬರೆಹಗಳು:
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ವಚನಗಾರ್ತಿ ಮುಕ್ತಾಯಕ್ಕ
ಅಕ್ಕನಾಗಮ್ಮ
ಅಮುಗೆ ರಾಯಮ್ಮ
ವಚನಕಾರ ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆ
ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ, ಶಾಂಭವಿದೇವಿ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ
ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು
"ಲೋಕದೊಂದಿಗೆ ಅನುಸಂಧಾನ ಮಾಡುವ ಇಲ್ಲಿಯ ಕವಿತೆಗಳು ಹೊಸ ಕಾವ್ಯರೂಪಕದ ಬದುಕನ್ನು ನೋಡುತ್ತವೆ. ಇದೊಂದು ಕಾವ್ಯ ಪರಂ...
"ಬದುಕಿನ ಏಳುಬೀಳುಗಳ ನಡುವೆ ಗುಮಾಸ್ತರಾಗಿ ನೌಕರಿ ಆರಂಭಿಸಿದ ನಂತರ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ಸೇವೆ ಮಾಡಿರುವ...
"ಮಲೆನಾಡಿನ ದಟ್ಟ ಕಾನನದ ನಡುವೆ ತುಂಗೆಯ ತಟದಲ್ಲಿ ಜನಿಸಿದ ಕುವೆಂಪುರವರು ಕುಪ್ಪಳ್ಳಿ ಎಂಬ ಊರಿನಿಂದ ಅಂತಾರಾಷ್ಟ್ರೀ...
©2024 Book Brahma Private Limited.