ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

Date: 02-10-2024

Location: ಬೆಂಗಳೂರು


"ಯಶವಂತ ಚಿತ್ತಾಲರ ಸೆರೆ ಕಥೆಯನ್ನು ಒಂದು ದೃಷ್ಟಾಂತವಾಗಿ ನೋಡಬಹುದಾದದ್ದು. ತಂದೆಯ ಶ್ರಾದ್ಧದ ದಿನದಂದೇ ಮಗನ ಮದುವೆ ಪ್ರಸ್ತಾಪವನ್ನು ವ್ಯಕ್ತಪಡಿಸುವ ತಾಯಿಯ ಮನೋಭೂಮಿಕೆಯು ವಿರುದ್ಧ ಅನ್ಯಮನಸ್ಕನಾಗಿ ಯುದ್ಧ ಸಾರುವಂತಹ ಪ್ರಕ್ರಿಯೆಯೆ ಕಥೆಯ ಮುನ್ನುಡಿಗೆ ಕಳಸವಿಟ್ಟಂತೆ. ಕಥೆಯ ಒಳ ವಿವರಗಳು ಇದರ ಮೂಲಕ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ "ಅಂತರ್ ದೃಷ್ಟಿ" ಅಂಕಣದಲ್ಲಿ ಯಶವಂತ ಚಿತ್ತಾಲರ ‘ಸೆರೆ’ ಕಥೆ ಬಗ್ಗೆ ವಿವರಿಸಿದ್ದಾರೆ.

ನವ್ಯ ಕಾವ್ಯ ಸಾಹಿತ್ಯ ಘಟ್ಟದಲ್ಲಿ ನಾವು ಪ್ರಮುಖವಾಗಿ ಗುರುತಿಸಬಹುದಾಗಿರುವ ಸಾಹಿತ್ಯ ಕೃಷಿಯನ್ನು ಮಾಡಿರುವ ಯಶವಂತ ಚಿತ್ತಾಲರು ಬರೆದಿದ್ದು ಕಡಿಮೆ ಆದರೂ ಕೆಲವಷ್ಟು ಸತ್ವ ಪೂರ್ಣ ಕೃತಿಯನ್ನು ನೀಡಿರುವುದು ಗಮನರ್ಹ ಅಂಶ. ಕಥೆ ಕಾದಂಬರಿ ಬರವಣಿಗೆಯಲ್ಲಿ ವಿಶೇಷ ಛಾಪನ್ನು ಮೂಡಿಸಿರುವ ಯಶವಂತ ಚಿತ್ತಾಲರ "ಸೆರೆ" ಎಂಬ ಕಥೆಯ ಹಂದರವು ತೆರೆದುಕೊಳ್ಳುವ ರೂಪವನ್ನು ಅವಲೋಕಿಸಬಹುದಾಗಿದೆ.

ಯಶವಂತ ಚಿತ್ತಾಲರ ಸೆರೆ ಕಥೆಯನ್ನು ಒಂದು ದೃಷ್ಟಾಂತವಾಗಿ ನೋಡಬಹುದಾದದ್ದು. ತಂದೆಯ ಶ್ರಾದ್ಧದ ದಿನದಂದೇ ಮಗನ ಮದುವೆ ಪ್ರಸ್ತಾಪವನ್ನು ವ್ಯಕ್ತಪಡಿಸುವ ತಾಯಿಯ ಮನೋಭೂಮಿಕೆಯು ವಿರುದ್ಧ ಅನ್ಯಮನಸ್ಕನಾಗಿ ಯುದ್ಧ ಸಾರುವಂತಹ ಪ್ರಕ್ರಿಯೆಯೆ ಕಥೆಯ ಮುನ್ನುಡಿಗೆ ಕಳಸವಿಟ್ಟಂತೆ. ಕಥೆಯ ಒಳ ವಿವರಗಳು ಇದರ ಮೂಲಕ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಶ್ರಾದ್ಧದ ದಿನವೂ ಮದುವೆ ವಿಚಾರದ ಪ್ರಸ್ತಾಪವು ಸುತರಾಂ ಇಷ್ಟವಿಲ್ಲದ ಮಗನ ಚಿತ್ತವು ಸೋದರತ್ತೆ ಸತ್ತ ಘಳಿಗೆ ಸರಿ ಇರದ ಕಾರಣದಿಂದ ಮೂರು ತಿಂಗಳು ಖಾಲಿ ಬಿಟ್ಟು ಮುಚ್ಚಿದ ಮನೆಯ ಕಡೆ ಬೇಸರದಿಂದಲೇ ಹೊರಡುವ ಮಗನನ್ನು ಅಮ್ಮ ಎಲ್ಲಿಗೆ? ಏಕೆ? ಎಂದು ಕೇಳುವ ಪ್ರಸಂಗದ ಸಂದರ್ಭಕ್ಕನುಗುಣವಾಗಿ ಆ ಮನೆಯ ಅಡಿಗೆ ಮನೆ ಬಾಗಿಲು ರಿಪೇರಿ ಮಾಡುವುದಾಗಿ ನೆಪ ಒಡ್ಡಿ ಹೊರಡುವ ಮಗನ ಮನದಲ್ಲಿ ನೂರಾರು ತಾಕಲಾಟಗಳು ಏಳುತ್ತವೆ. ತಾಯಿ ಶ್ರಾದ್ಧಕ್ಕೆ ಬಂದ ಭಟ್ಟರೊಂದಿಗಿನಾ ಮದುವೆ ಮಾತಿನ ಅಸಹನಿಯತೆಯಿಂದ ಹೊರಬರುವ ಸಲುವಾಗಿ ಆತನಿಗೆ ಮುಂದಿನ ನಡೆಯ ಬಗ್ಗೆ ಚಿಂತಿಸುವಂತೆ ಮಾಡುವುದು ಗಮನಿಸಬೇಕಾದ ಅಂಶ.

ಹೊನ್ನಾಪ್ಪಚಾರಿಯ ಮನೆ ಬಾಗಿಲಿಗೆ ತಾನೇ ಕರಗಸ ತರುವುದಾಗಿ ತೆರಳುವ ಪರಿಯು ಸಹ ಅವನ ತಳಮಳದ ಮನಕ್ಕೆ ಹಿಡಿದ ಕನ್ನಡಿಯಂತೆ ತೋರುವುದು. ಹೊನ್ನಪ್ಪಚಾರಿಯ ಮನೆ ಮುಂದೆ ಆಕಸ್ಮಿಕವಾಗಿ ಹೋಗಿ ನಿಂತು ಮುಜುಗರದಿಂದ ಗರಗಸವನ್ನು ಕೇಳುವ ಆತನ ಸ್ಥಿತಿ ಇಕ್ಕಟ್ಟಿಗೆ ದೂಡಿದಂತಿರುವಾಗಲೆ "ಇವರು ದಿನವೂ ನಸುಕಿನಲ್ಲೇ ಗಂಗಾವಳಿಗೆ ಹೋದವರು ತಿರುಗಿ ಮನೆಗೆ ಬರುವುದು ತುಂಬಾ ರಾತ್ರಿಯಾದ ಮೇಲೆ". ಎಂದು ವೈಯಾರದಿಂದ ನುಡಿವ ಹೊನ್ನಪ್ಪಚಾರಿಯ ಹೆಂಡತಿಯು "ಮನೆಯ ಅಂಗಳದಲ್ಲೇ ಕೂತು ಮಗುವಿನ ಕೂದಲು ಹಿಕ್ಕಿಸುತ್ತಿದ್ದವಳು", "ನೀನೀಗ ಆಡಲಿಕ್ಕೆ ಹೋಗೆ", ಎಂದು ಆ ಹುಡುಗಿಯನ್ನು ಓಡಿಸುತ್ತಾ ಇವನತ್ತ ತಿರುಗಿ "ಏನು ಬೇಕಿತ್ತೋ"? ಎಂದು ಕೇಳುವ ಆಕೆಯ ತುಂಟ ವೈಯಾರವು ಆತನನ್ನು ನಖಶಿಖಾಂತ ಉರಿಯುವಂತೆ ಮಾಡಿತು. ಗಿರಣಿಗೆ ಸಿಕ್ಕಿ ಆತನ ತೊಳಲಾಟದ ಮನಸ್ಸು ಹಿಟ್ಟಿನಂತೆ ಪುಡಿಯಾಗುವುದೇನೋ ಎನ್ನುವಂತಿತ್ತು. "ಥತ್ ಇವಳ; ಹೊನ್ನಪ್ಪ ಆಚಾರಿ ಹೆಂಡತಿ ಬಹಳ ಹಲ್ಕಟ್ ಹೆಂಗಸಂತೆ, ಊರಿನ ಯಾವ ಗಂಡಸರನ್ನು ಬಿಟ್ಟಿಲ್ಲವಂತೆ ಎಂಬ ಅವರಿವರ ಮಾತು ಕಿವಿಗೆ ಹಾದು ಹೋಗುತ್ತಿದ್ದಂತೆ ಧರೆಗಿಳಿದ ಪಶುವಿನಂತಾದ ಆತನ ಮನಸ್ಥಿತಿ ಬೇಗ ಬೇಗನೆ ಗರಗಸವನ್ನು ತೆಗೆದುಕೊಂಡು ಅಲ್ಲಿಂದ ಕಾಲ್ಕೀಳುವಂತೆ ಮಾಡಿತು.

ಅದುವರೆಗೆ ನಡೆದ ಕಥಾ ಸನ್ನಿವೇಶದಲ್ಲಿ ಎಲ್ಲಿಯೂ ಸಹ ಓದುಗರು ಆಚೆ ಈಚೆ ಕದಲದಂತೆ ತಡೆಹಿಡಿದು ಬಿಡುವುದು ಬಹುಶಃ ನವ್ಯ ಸಾಹಿತ್ಯದ ವಿಚಾರವಂತಿಕೆಯ ರೂಪರೇಷೆ ಎಂದೆನಿಸದೆ ಇರದು. ಮುಂದೆ ಕಥೆಯ ತಂತ್ರ ಎಲ್ಲಿ ಕಳಚಿ ಹೋಗುವುದೇನೋ ಎಂಬ ಆತಂಕವಿರದೆ ನಿರ್ಭೀಡೆಯಿಂದ ಮತ್ತೆ ತಲ್ಲಿನಗೊಳಿಸಿಬಿಡುತ್ತದೆ.

ಹೊನ್ನಪ್ಪ ಆಚಾರಿ ಮನೆಯಿಂದ ತೆರಳುವಾಗಲೇ ಆತನ ಹೆಂಡತಿ "ನಿಮ್ಮ ಹಳೆ ಮನೆಯ ಜಗುಲಿಯ ಮೇಲೆ ಆ ದೇವಿ ಒಲೆ ಹೂಡಿದ್ದಾಳಂತಲ್ಲ"? ಅಬ್ಬ ಅವಳ ಧೈರ್ಯವಾದರೆ ಧೈರ್ಯವಪ್ಪ! ಎಂದು ಮುಗುಳ್ನಕ್ಕ ಆಕೆಯ ಆ ನಗುವಿನ ಹಿಂದಿನ ಲಕ್ಷ್ಯ ಆತನ ಅರಿವೆಗೆ ಬಾರದೇನಿರಲಿಲ್ಲ. ಕಥೆ ಪ್ರಾರಂಭವಾದಾಗಿಂದ ಕಥೆಯ ನಾಯಕನ ಹೆಸರನ್ನು ಲೇಖಕರು ಎಲ್ಲಿಯೂ ಪ್ರಸ್ತಾಪಿಸದೆ ನಿರಾತಂಕವಾಗಿ ಕಥಾ ಹಂದರವನ್ನು ಹೆಣೆಯುತ್ತಾ ಬಂದು ಆ ಹಳೆ ಮನೆಯನ್ನು ಹೊಕ್ಕೊಡನೆ ಅಲ್ಲೇ ಜಿಗ್ಗನ್ನು ಆರಿಸಿ ಒಲೆ ಉರಿಸಲು ತಲ್ಲಿನಳಾದ ದೇವಿ,ಒಳಗೆ ಹೋಗಿ ಕದಕ್ಕೆ ಅಗುಣಿ ಬಡಿಯುವ ಕೆಲಸಕ್ಕೆ ತೆರಳಿದ ಆತನನ್ನು ಕಂಡ ದೇವಿ ಈ "ಬರ್ಮಾಚಾರಿಯ ದೈರ್ಯವಾದರೆ ಧೈರ್ಯವಪ್ಪ" ಎಂಬ ನುಡಿಯ ಮೂಲಕವೇ ಕತೆಯ ಕೇಂದ್ರ ಪಾತ್ರದ ಹೆಸರು ಬರ್ಮಚಾರಿ ಎಂಬುದು ಸಹೃದಯಗೆ ಅಂತರ್ಗತವಾಗುವುದು.ಇದರ ಜೊತೆಯಲ್ಲಿ ಬರ್ಮಚಾರಿಯ ತಾಯಿ ತನ್ನ ಮಗನ ಕುರಿತು,ಎಳ್ಳು ದರ್ಭೆ,ಪಿಂಡ ಸವ್ಯ ಅಪಸವ್ಯಗಳ ಗದ್ದಲದ ನಡುವೆಯೂ ತಾಯಿ ಭಟ್ಟರೊಂದಿಗೆ "ಇವನೀಗೀಗ ಕಡಿಮೆ ವಯಸ್ಸೇ ಭಟ್ಟರೆ", 'ಅದೇನೋ ಕೇಳಿದಾಗಲೆಲ್ಲ ಬ್ರಹ್ಮಚಾರಿಯಾಗಿಯೇ ಇರುತ್ತೇನೆ ಎನ್ನುವ ತನ್ನ ಮಗನ ಬಗ್ಗೆ ತಾಯಿಯ ಮಾತಿಗೂ, ಹಿಂದಿಲ್ಲ ಮುಂದಿಲ್ಲದೆ ಯಾವ ಅಡೆತಡೆಗೂ ಅಂಜದ ದೇವಿ ಬಾಯಲ್ಲಿ ಉಸುರುವ "ಬರ್ಮಚಾರಿ ಒಡೆದೀರು" ಎಂಬ ಪದದ ಹಿಂದಿರುವ ಧ್ವನಿಗಿರುವ ಒಳ ಅಂತರ್ಯವೇನೆಂದು ಅರಿಯದು. ನಿಜನಾಮ ಬರ್ಮಚಾರಿಯೇ? ಅಥವಾ ಬ್ರಹ್ಮಚಾರಿ ಆದವನನ್ನು ದೇವಿ ವ್ಯಂಗ್ಯವಾಗಿ ಬರ್ಮಚಾರಿ ಅಂತ ಕರೆದಿರಲೂಬಹುದು.ಅದೇನೇ ಇದ್ದರೂ ಈ ದೇವಿಯ ವ್ಯಂಗ್ಯ ಮುಸು ಮುಸು ನಗು ಅವಳ ನಾಚಿಕೆ ಬಿಟ್ಟ ವಿಲಕ್ಷಣ ವ್ಯಕ್ತಿತ್ವವನ್ನು ಲೇಖಕರು ಅಚ್ಚುಕಟ್ಟಾಗಿ ವ್ಯಕ್ತಪಡಿಸುತ್ತಾರೆ. ದೇವಿ ಕೆಲಸ ಮಾಡುವ ಶಂಕರರಾಯರು ಬೈದಾಗಲೂ ಸಹ ಓಡಿ ಹೋದ ತನ್ನ ಗಂಡನ ಬಗ್ಗೆಯಾಗಲಿ ತನ್ನ ಬದುಕು ಹೀಗೆ ಆಗಿರುವುದರ ಬಗ್ಗೆ ಚಿಂತೆ ಆಗಲಿ ಯಾವುದೇ ಆಕ್ಷೇಪಣೆಗಳಿಗೆಡೆ ಇರದೇ ತನ್ನ ಅಂಗಾಂಗ ಪ್ರದರ್ಶನವನ್ನು ಪುಕ್ಕಟೆಯಾಗಿ ಯಾವ ಮುಜುಗರ ಪಟ್ಟುಕೊಳ್ಳದೇ ತೋರುವ ಆಕೆಯ ಮನಸ್ಥಿತಿ ಅವಳ ಒಳ ಮನಸ್ಸಿನ ವ್ಯಾಪಾರವನ್ನು ಕತೆಗಾರ ಸೂಕ್ಷ್ಮ ಗ್ರಹಿಕೆಗೆ ಒಳಪಡಿಸಿದ್ದಾರೆ.

ಅಡಿಗೆ ಮನೆಗೆ ದನ ನುಗ್ಗಿದ್ದು,ಹಾವು ಹೊಕ್ಕಿದ್ದು ಹೀಗೆ ತಾಯಿ ಹಾಗೂ ಶಂಕರರಾಯರ ಹೆಂಡತಿ ಹೇಳಿರುವಂತಹ ಈ ಎಲ್ಲ ವಿಚಾರಗಳನ್ನು ಮೆಲಕು ಹಾಕುತ್ತಾ ಅಗುಳಿಯನ್ನು ಈಗ ಒಳಗಿನಿಂದಲೇ ಹಾಕುವ ಸಲುವಾಗಿ ಬೇಗುದಿ ತುಂಬಿದ ಮನದಲ್ಲಿ ಕತ್ತಲೆ ಅರೆಬೆಳಕಿನಾಟದಲ್ಲಿ ಬಾಗಿಲನ್ನು ಭದ್ರ ಪಡಿಸುವ ಬರ್ಮಚಾರಿಯ ಮನದೊಳಗೆ ಹಾಗೂ ಹೊರಗೆ ಇಳಿಯುವ ಬೆವರಿಗೆ ದಾರಿ ಕಾಣದಂತಾಗಿತ್ತು. ಈ ಮನೆ ಬಿಟ್ಟ ಮೂರು ತಿಂಗಳು ಈ ಕತ್ತಲೆಯ ಮನೆಯಲ್ಲಿಯೇ ಕೆಲಸ ಮುಗಿಸಿ ಹೊರಬರುವ ಸಮಯಕ್ಕೆ ಅಡುಗೆ ಮನೆಯಾಚೆ ಮಂಗ ಈತನನ್ನು ಗುರಾಯಿಸುತ್ತಾ, ಬಾಗಿಲಡ್ಡವಾಗಿ ಕೂತ ಸನ್ನಿವೇಶವಂತು ನವ್ಯ ಬರಹಗಾರರ ಕ್ಷಮತೆಯನ್ನು ಪ್ರತಿಬಿಂಬಿಸುವ ಪ್ರತಿಮಾ ಸಂಕೇತಾರ್ಥವಾಗಿ ಮೂಡಿಸಿರುವುದು ವಿಶೇಷ. ಆ ಕತ್ತಲೆಯಲ್ಲಿ ಖೆಕ್ ಕಿಸ್ ಎಂಬ ಶಬ್ದದಿಂದಲೇ ಬೆವತು ಹೋದ ಬರ್ಮ ಚಾರಿ ಒಮ್ಮೆಲೇ ತನ್ನ ಸೋದರತ್ತೆಯೇ ದೆವ್ವವಾಗಿ ಬಂದಿರಬಹುದಾ ಎಂದು ಶಂಕಿಸುತ್ತಿರುವಾಗಲೇ ಹೊರಗಿನಿಂದ "ಈ ಮಂಗಗಳಿಗೆ ಬಂದ ರೋಗವೇ ಮನೆ ಮಾಡಿನ ಮೇಲೆ ಆಡ್ತಾವಲ್ಲ ಇವು', ದೇವಿಯ ಮಾತಿಂದ ಇದು ನಿಜವಾದ ಮಂಗವೇ ಎಂದು ಧೈರ್ಯ ತಂದುಕೊಂಡರು ಹೊರಗೆ ಕಾಲಿಡಲು ಬಿಡದೆ ಕಿತಾಯಿಸುತ್ತಿರುವ ಮಂಗನಿಂದ ಪಾರಾಗುವ ಸಲುವಾಗಿ ದೇವಿಯನ್ನು ಕೂಗಿದರು ಮತ್ತೆ ನಾಚಿಕೆ ಪಟ್ಯಕೊಂಡ.ಹಾಗಾಗಿ ಅಡಿಗೆ ಮನೆಗೆ ಹೊಡೆದ ಅಗುಳಿ ಕೇಳುವುದೇ ಲೇಸಂದು ಮತ್ತೆ ಬೆವರು ಹರಿಸಿ ಅಗುಳಿ ಕಿತ್ತಾಗ ತಣ್ಣಗೆ ಗಾಳಿ ತಂಪಾದ ಸುಳಿಗಾಳಿ ಬೀಸುತ್ತಿದ್ದಂತೆ, ಆಗ ಕರೆದ ದನಿಯರಸಿ ಹೊರಗಿನಿಂದ ಬಂದ ದೇವಿ ಒಳ ಬಂದವಳೇ "ಆಗ ನೀವು ಕಿಟಕಿಯೊಳಗಿಂದ ಕರೆದಾಗಲೇ ನನಗೆ ತಿಳಿದಿತ್ತು ಒಡೆಯ" ಎನ್ನುತ್ತಾ ತನ್ನ ಹಿಂದೆಯೇ ಕದ ಮುಚ್ಚಿಕೊಂಡಳು. ಇಲ್ಲಿಗೆ ಕತೆ ಮುಗಿಯಿತು ಎಂಬ ಸುಳಿವನ್ನು ನೀಡಿದ ಕಥೆಗಾರ ಅವರಿಬ್ಬರೂ ಅಹ ಕೂಡಿದರು ಎಂಬ ಸತ್ಯಾಸತ್ಯತೆಯನ್ನು ಕದ ಮುಚ್ಚಿದಳು ಎಂಬ ಸಂಕೇತದೊಂದಿಗೆ ಓದುಗರಿಗೆ ಬಿಡುವುದು ಅವಲೋಕಿಸಬಹುದಾದ ಅಚ್ಚರಿಯ ಸಂಗತಿ. ಇಲ್ಲಿ ಬಹು ಮುಖ್ಯವಾಗಿ ಮನೆ ಒಳಗೆ ಹೊಕ್ಕಿರುವಂತಹ ದನ, ಹಾವು,ಮಂಗ, ಇವುಗಳು ಆ ಯುವಕನ ಸಹಜ ಪ್ರವೃತ್ತಿಯ ಸಂಕೇತಗಳಾಗಿ ಪ್ರತಿಧ್ವನಿಸುತ್ತವೆ ಈ ಕಥೆಯಲ್ಲಿ. ಈ ಕಥೆಯ ಯಾವೊಂದು ಭಾಗವನ್ನು ಓದದೆ ಬಿಟ್ಟರೆ ಸೆರೆ ಕಥೆಯ ಮಟ್ಟಿಗೆ ಅಪೂರ್ಣ ಭಾವ ಕಾಡಿದಂತೆ. ಇಲ್ಲಿ ಹಳೆಯ ಮನೆಯ ಎಲ್ಲಾ ಪ್ರಸ್ತಾಪಗಳು ವಸ್ತು ವಿನ್ಯಾಸಗಳು ಆ ಕ್ಷಣದ ಕ್ರಿಯೆಯನ್ನು ನಮ್ಮೆದುರಿಗೆ ತಂದು ನಿಲ್ಲಿಸುತ್ತವೆ. "ಕೇಳಿದಾಗಲ್ಲ ತಾನು ಬ್ರಹ್ಮಚಾರಿಯಾಗಿಯೇ ಇರುತ್ತೇನೆ ತನಗೆ ಮದುವೆ ಬೇಡ ಅನ್ನುತ್ತಾನೆ" ಆ ಸ್ವಾಮಿ ಈ ಸ್ವಾಮಿ ಎಂದು ಯಾರದೋ ಪುಸ್ತಕಗಳನ್ನು ಓದುತ್ತಾನಂತೆ ಸೂರ್ಯ ನಮಸ್ಕಾರ ಆಸನ ಮಾಡುತ್ತಾನೆ" ಎನ್ನುವಂತ ಆತನ ಮನಸ್ಥಿತಿ ಯುವಕನ ಮನದೊಳಗೆ ನಿಯಂತ್ರಣಕ್ಕೊಳಪಡಿಸುವ ಪ್ರಯೋಗಗಳನ್ನು ಆತ ಪ್ರಯತ್ನ ಪೂರಕವಾಗಿ ಮಾಡುತ್ತಿದ್ದರೂ ಸಹ ಆತ ಪ್ರಕೃತಿಯ ಮುಂದೆ ಸೋಲೊಪ್ಪಿಕೊಳ್ಳದೆ ನಿರ್ವವಿಲ್ಲ ಎಂಬ ಧ್ವನಿಯನ್ನು ಪ್ರತಿಮೆ ಸಂಕೇತಗಳ ಮೂಲಕ ಕಥೆ ಎತ್ತಿ ತೋರಿಸುತ್ತದೆ.

ಇಲ್ಲಿ ಹಾವು ಕಾಮದ ಸಂಕೇತದಂತೆ ಬಹಳ ಸೊಗಸಾಗಿ ಕಥೆಗೆ ಪೂರಕವಾಗಿಸಿದ್ದಾರೆ. ಇನ್ನು ಚಿತ್ತ ಚಾಂಚಲ್ಯವನ್ನು ಹೊಂದಿರುವ ಮಂಗನ ಮನಸ್ಥಿತಿಯು ಸಹ ಮನುಷ್ಯನ ಇನ್ನೊಂದು ಭಾವವೇ ಆಗಿದೆ.ಹಾಗೂ ತುಡುಗ ದನಗಳು ಎಲ್ಲಿ ಬೇಕೆಂದರಲ್ಲಿ ಲಂಗು ಲಗಾಮು ಇರದೆ,ಬೇಲಿಯ ಸಂಕೋಲೆಯು ಇದ್ದಾಗ್ಯೂ ನಗ್ಗುವುದು ತುಡುಗು ದನಗಳ ಪರಿಪಾಠವನ್ನು ಪ್ರತಿನಿಧಿಸುತ್ತದೆ ಹೊನ್ನಪ್ಪ ಆಚಾರಿ ಹೆಂಡತಿಯ ವೈಯಾರ ಹಾಗೂ ದೇವಿಯ ಕಂಡು ಬಗ್ಗನೇಳುವ ಆತನ ಸಹಜ ಕಾಮನೆಗೆ ಮಣಿದಾಗ ಒಂದರ್ಥದಲ್ಲಿ ಸೆರೆಯಿಂದ ಹೊರ ಬಂದು ತಂಪು ತಂಗಾಳಿಗೆ ಮೈಯೊಡ್ಡಿ ಮನ ವಿಕಿಸಿತವಾಗುವುದು.

ಇಲ್ಲಿ ನವ್ಯ ಬರಹಗಾರನ ಈ ಕಥೆಯ ಉದ್ದೇಶವು ಪೂರ್ಣವಾದ ಮೇಲೆ ಇದಕ್ಕೆ ಬೆಲೆಕಟ್ಟಿ ವರ್ಣಿಸುವುದು ಅನಗತ್ಯ. ಇಲ್ಲಿಯ ತಂತ್ರವೂ ಸಹ ಒಂದಕ್ಕೊಂದು ಪೂರಕವಾಗಿರುವುದರಿಂದ ಕಥೆಗಾರನ ತಂತ್ರಗಾರಿಕೆಯ ಚೌಕಟ್ಟು ಫಲಿತಗೊಂಡಂತೆ. ಇನ್ನೊಂದು ಬಹಳ ಮುಖ್ಯವಾಗಿ ನವ್ಯ ಕಾವ್ಯ ಪರಂಪರೆ ಸಂದರ್ಭವನ್ನು ಈ ಕಥೆಗೆ ಪೂರಕವಾಗಿಸಿ ಅವಲೋಕಿಸಿದಾಗ ಆ ಯುವಕ ಸೆರೆಯಿಂದ ಆಚೆ ಬರುವ ಸಲುವಾಗಿ ಅಸಹಾಯಕನಾದನೇ ಆ ಮನೆಯ ಹಳೆಯ ಪರಿಸರ ವಸ್ತು ವಿನ್ಯಾಸಗಳಿಂದಾಗಿ? ಎಂಬಂತಹ ಪ್ರಶ್ನೆಗಳು ಮೂಡಿದಾಗಲೂ ಸಹ ಪ್ರಕೃತಿ ಧರ್ಮದ ವಿರುದ್ಧ ಮನುಷ್ಯ ಸಹಜವಾಗಿ ಅಸಹಾಯಕ ಎಂಬ ನಿಲುವನ್ನು ಈ ಸೆರೆ ಕಥೆಯು ಧ್ವನಿಸುತ್ತದೆ. ಇಲ್ಲಿ ಭಾಷೆ ಒಂದು ಸಾಧನವಾಗಿ ಚಿತ್ರ ಮತ್ತು ಇತರ ಪ್ರತಿಮೆಗಳು ಸಂಕೇತಗಳು ಅಗತ್ಯವಾಗಿ ಕಥೆಗೆ ಪೂರಕವಾಗಿವೆ.

- ವಾಣಿ ಭಂಡಾರಿ, ಶಿವಮೊಗ್ಗ

 

MORE NEWS

ತಾಯ್ಮಾತು-ತಾಯಿ ಮಾತು-ಗುರ‍್ತಿಕೆ  

28-09-2024 ಬೆಂಗಳೂರು

"ತಾಯ್ಮಾತು ಎಂಬುದು ಸಹಜವಾಗಿಯೆ ತಾಯಿ ಪದವನ್ನು ಒಳಗೊಂಡಿರುವುದರಿAದ ತಾಯಿಯೊಂದಿಗೆ ನಂಟನ್ನು ತೋರಿಸುತ್ತದೆ. ಈ ಪದದ...

ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು

26-09-2024 ಬೆಂಗಳೂರು

"ಎನ್. ಧರ್ಮಸಿಂಗ್ ಅವರನ್ನು ಮೊಟ್ಟ ಮೊದಲ ಬಾರಿ ನಾನು ಅತ್ಯಂತ ಹತ್ತಿರದಿಂದ ನೋಡಿದ್ದು 1972ರಲ್ಲಿ. ಆಗ ನಾನು ಹೈಸ್...

ಕನ್ನಡ ವಿಮರ್ಶೆ -1

23-09-2024 ಬೆಂಗಳೂರು

"ಪಾಶ್ಚಾತ್ಯ ಸಾಹಿತ್ಯ ಮತ್ತು ವಿಮರ್ಶೆ, ಸಂಸ್ಕೃತ ಸಾಹಿತ್ಯ ಮತ್ತು ಮೀಮಾಂಸೆ, ಕನ್ನಡ ಸಾಹಿತ್ಯ ಪರಂಪರೆ ಮತ್ತು ಹೊಸ...