Date: 31-12-2022
Location: ಬೆಂಗಳೂರು
“ಸಾವಿತ್ರಿಬಾಯಿಯ ಮಹಿಳಾ ಶಿಕ್ಷಣ ಆಂದೋಲನಕ್ಕೆ ಅವರ ಸಂಬಂಧಿಕಳಾದ ಸುಗುಣಾಬಾಯಿಯ ಸಂಪೂರ್ಣ ಸಹಕಾರ. ಮುಸ್ಲಿಂ ಮಹಿಳೆ ಫಾತಿಮಾ ಷೇಕ್ ಸಾವಿತ್ರಿಬಾಯಿಗೆ ಹೊಯ್ ಕೈಯಾಗಿ ನಿಂತು ಬಾಲಕಿಯರಿಗಾಗಿ ಶಾಲೆಗಳನ್ನು ಸ್ಥಾಪಿಸುವ ಸಾಹಸಗಳನ್ನೇ ಮೆರೆಯುತ್ತಾರೆ” ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, 'ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ’ದ ಕುರಿತ ಲೇಖನವನ್ನು ಬರೆದಿದ್ದಾರೆ.
ಅದೆಷ್ಟು ನೂರು ವರುಷಗಳು ಕಳೆದರೂ ಜಾತಿ ವ್ಯವಸ್ಥೆಯ ಸಮಸ್ಯೆ ಹೋಗಲಾಡಿಸಲು ಆಗದು ಎಂಬಂತೆ ಅದರ ಬೇರು, ಬಿಳಿಲುಗಳು ಘೋರವಾಗಿ ಬೆಳೆದು ಬಿಟ್ಟಿವೆ. ಕಣ್ಣಿಗೆ ಕಾಣುವ ಸಮಾಜದ ನಿತ್ಯ ನಡವಳಿಕೆಗಳು ಕೇವಲ ತೋರಿಕೆಯಲ್ಲದೇ ಅವು ಮನುಷ್ಯರ ನೆತ್ತರಿನೊಳಗೇ ಬೆರೆತು ಹೋಗಿವೆ. ಮನುಷ್ಯರನ್ನು ಅವರು ಹುಟ್ಟಿಬಂದ ಜಾತಿಮೂಲದ ನೆಲೆಗಳಿಂದಲೇ ಗುರುತಿಸುವ ಒಳಹೇತುಗಳು ದಿನೇ ದಿನೇ ದ್ವಿಗುಣದ ಹಾದಿ ಹಿಡಿದಿವೆ.
ವಿಚಾರಗಳು ಜಗತ್ತನ್ನು ಆಳುವ ಸಮಾನತೆಯ ವಿಚಾರಧಾರೆ ಸಿದ್ಧಾಂತಗಳು ಅನುಷ್ಠಾನಕ್ಕೆ ಬರುವ ದಿನಗಳಿಗೆ ಬದಲು ತರತಮದ ಜಾತಿ ವ್ಯವಸ್ಥೆ ಬಲಾಢ್ಯವಾಗಿ ಬೆಳೆಯುತ್ತಿರುವುದು ಸಾಮಾಜಿಕ ಪೆಡಂಭೂತದ ರಕ್ಕಸ ದುರಂತ. ಆದರೆ ಸಮಾಧಾನಕರ ಸಂಗತಿ ಎಂದರೆ ಮತಾಂಧತೆಯ ಕ್ರೌರ್ಯದಲಿ ನಲುಗಿಯೂ ಇದೇ ಮಣ್ಣಲ್ಲಿ ಶತಮಾನಗಳಿಂದ ತಾಯ್ತನದ ಕರುಳಬೀಜ ಬಿತ್ತಿ ಬೆಳೆದವರು ಕೆಲವರು.
ಅಜಮಾಸು ಎರಡುನೂರು ವರುಷಗಳ ಹಿಂದಿನ ದಿನಮಾನಗಳು. ಅಂದರೆ ಮಹಾತ್ಮಾ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಹುಟ್ಟಿನ ಪೂರ್ವದಲ್ಲಿ ಅವರಿಬ್ಬರ ಕನಸುಗಳ ಕಿಡಿಯನ್ನು ಹೊತ್ತಿಸಿ ತಿಳಿಬೆಳಕಿನ ಹೊಳಪು ಮೂಡಿಸಿದವರು ಕೆಲವರು. ಅವರಲ್ಲಿ ಸಾವಿತ್ರಿಬಾಯಿ ಮತ್ತು ಮಹಾತ್ಮ ಜ್ಯೋತಿಬಾ ಫುಲೆ ದಂಪತಿ ಅಗ್ರಗಣ್ಯರು. ಮಹಾರಾಷ್ಟ್ರದ ಹಿಂದುಳಿದ ಮಾಲಗಾರ ಎಂಬ ಮಾಳಿ ಕುಲದವರು. ಅಂದರೆ ಕರ್ನಾಟಕದಲ್ಲಿ ಜೀರ ಕುಲದವರು.
ಜ್ಯೋತಿಬಾ ಫುಲೆ ಪುಣೆಯ ಸ್ಥಿತಿವಂತ ಕುಟುಂಬದವರು. ಹೀಗಾಗಿ ಅವರಿಗೆ ಕನಿಷ್ಠ ಪ್ರಮಾಣದಲ್ಲಿಯಾದರೂ ಶೈಕ್ಷಣಿಕ ಅವಕಾಶ ಸಾಧ್ಯವಾಯಿತು. ಆಗ ಪೇಶ್ವೆಯವರ ಕಾಲದ ಸನಾತನಿ ಸಮಾಜದಲ್ಲಿ ಜ್ಯೋತಿಬಾ ವಿದ್ಯಾಭ್ಯಾಸ. ಬ್ರಿಟಿಷ್ ವಸಾಹತುಶಾಹಿ ಆಡಳಿತವಿದ್ದರೂ ಕರ್ಮಠ ಪೇಶ್ವೆಗಳ ಕಂದಾಚಾರಗಳಿಗೇನು ಕೊರತೆ ಇರಲಿಲ್ಲ. ಮೇಲ್ಜಾತಿಗಳ ಅಟ್ಟಹಾಸ, ಶ್ರೇಣೀಕೃತ ಸಮಾಜ ವ್ಯವಸ್ಥೆಯ ಸಂಕಟ, ಸತಿಸಹಗಮನ, ಕೇಶಮುಂಡನ, ಬಾಲ್ಯವಿವಾಹ ಈ ಎಲ್ಲ ಅನಿಷ್ಟ ಪದ್ದತಿಗಳು ಗರಿಷ್ಠ ಗತಿಯಲ್ಲೇ ಗುದುಮುರಿಗೆ ಹಾಕುತ್ತಿದ್ದವು.
ಶಾಲೆಯಲ್ಲಿ ಜ್ಯೋತಿಬಾ ಒಬ್ಬರನು ಬಿಟ್ಟರೆ ಬಾಕಿಯವರೆಲ್ಲರೂ ಬ್ರಾಹ್ಮಣರು. ಶಾಲಾ ದಿನಗಳಿಂದಲೇ ಬದುಕಿನ ಪಾಠದ ಬೃಹತ್ ಅನುಭವಗಳು ಆರಂಭ. ಇವರ ಪತ್ನಿ ಸಾವಿತ್ರಿಬಾಯಿ ಅವರದು ಸತಾರಾ ಜಿಲ್ಲೆಯ ನಾಯಗಾಂವ ಎಂಬ ಹಳ್ಳಿ. ಹಾಗೆ ನೋಡಿದರೆ ಅಲ್ಲಿನ ಹಳ್ಳಿಯ ಹಿಂದುಳಿದ ಮಾಳಿ ಕುಲದವರಿಗೆ ಗೌಡಕಿ ಇತ್ತು. ಹಾಗಿದ್ದರೂ ಸಾವಿತ್ರಿಬಾಯಿ ಅನಕ್ಷರಸ್ಥೆ. ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಅಕ್ಷರಶಃ ನಿಷಿದ್ಧದ ಕಾಲ ಅದಾಗಿತ್ತು. ಇವರ ಮದುವೆಯ ಸಂಬಂಧ ಕುದುರಿಸಿದ್ದು ಅವರ ಹತ್ತಿರದ ಸಂಬಂಧಿ ಸುಗುಣಾಬಾಯಿ. ಸಾವಿತ್ರಿಬಾಯಿಯ ಹದಿಮೂರನೇ ವಯಸ್ಸಿನಲ್ಲಿ ಜ್ಯೋತಿಬಾ ಜತೆ ಬಾಲ್ಯವಿವಾಹ.
ಮದುವೆ ನಂತರದ ಸಾವಿತ್ರಿಬಾಯಿಯ ಬದುಕು ಮತ್ತು ಸಾಧನೆಗಳು ಅಕ್ಷರಶಃ ಸಮಾಜಮುಖಿ ಹೋರಾಟವೇ. ಅದರಲ್ಲೂ ವಿಶೇಷವಾಗಿ ಮಹಿಳೆಯರ ಶಿಕ್ಷಣ ಮತ್ತು ಮಾನವೀಯ ಸಂಬಂಧಗಳ ಹುಡುಕಾಟವೇ ಆಗಿರುವಂತಹದ್ದು. ಮಹಿಳೆಯರನ್ನು ಎರಡನೇ ದರ್ಜೆಯ ಸಾಲಿನಲ್ಲಿ ನಿಲ್ಲಿಸಿ ನೋಡುವ ಕಣ್ಣುಗಳಿಗೆ ಸಾವಿತ್ರಿಬಾಯಿ ತಾನು ಸಾಕ್ಷರಳಾಗಿ ಇತರೆ ಎಲ್ಲ ಜಾತಿಯ ಮಹಿಳೆಯರು ಸಾಕ್ಷರರಾಗುವ ಮೂಲಕ ಸಮಸಮಾಜದ ಕನಸುಗಳ ಸಾಕಾರಕ್ಕಾಗಿ ಅವಿರತ ಹೋರಾಟದ ಕ್ರಿಯೆಗೆ ತೊಡಗುತ್ತಾಳೆ. ಅಷ್ಟೊತ್ತಿಗಾಗಲೇ ಜ್ಯೋತಿಬಾ ಫುಲೆಯ ವಿಮುಕ್ತ ಮಾನವ ಚಳವಳಿಯು ಉತ್ತುಂಗದ ಹಾದಿಯಲ್ಲಿರುತ್ತದೆ.
ಸಾವಿತ್ರಿಬಾಯಿಯ ಮಹಿಳಾ ಶಿಕ್ಷಣ ಆಂದೋಲನಕ್ಕೆ ಅವರ ಸಂಬಂಧಿಕಳಾದ ಸುಗುಣಾಬಾಯಿಯ ಸಂಪೂರ್ಣ ಸಹಕಾರ. ಮುಸ್ಲಿಂ ಮಹಿಳೆ ಫಾತಿಮಾ ಷೇಕ್ ಸಾವಿತ್ರಿಬಾಯಿಗೆ ಹೊಯ್ ಕೈಯಾಗಿ ನಿಂತು ಬಾಲಕಿಯರಿಗಾಗಿ ಶಾಲೆಗಳನ್ನು ಸ್ಥಾಪಿಸುವ ಸಾಹಸಗಳನ್ನೇ ಮೆರೆಯುತ್ತಾರೆ. ಈಗ್ಗೆ ನೂರೆಪ್ಪತ್ತೈದು ವರ್ಷಗಳಷ್ಟು ಹಿಂದಿನ ಕಾಲಮಾನದಲ್ಲಿ ಇದೆಲ್ಲಾ ನಾವೀಗ ಗ್ರಹಿಸಿದಷ್ಟು ಸುಲಭ ಮತ್ತು ಸರಳವಾಗಿರಲಿಲ್ಲ. ಮಹಿಳೆಯರು ಶಿಕ್ಷಣ ಪಡೆಯುವುದು ಧರ್ಮವಿರೋಧಿ ನಡೆಯೇ ಆಗಿತ್ತು. ಮನುವಾದಿ ವೈದಿಕ ಮನಸುಗಳು ಸಾವಿತ್ರಿಬಾಯಿ ಮತ್ತು ಸಹವರ್ತಿಗಳಿಗೆ ಆಗ ಸಗಣಿ ನೀರು ಎರಚುವ ಹತ್ತು ಹಲವು ಬಗೆಯ ಅಮಾನವೀಯ ಪ್ರತಿರೋಧಗಳು ನಿತ್ಯವೂ ಎದುರಾಗುತ್ತವೆ.
ಅಂತಹ ಎಲ್ಲ ಪ್ರತಿರೋಧಗಳನ್ನು ಸಾವಿತ್ರಿಬಾಯಿ ದಿಟ್ಟ ಹೋರಾಟದ ಮೂಲಕ ಎದುರಿಸುವಲ್ಲಿ ಯಶಸ್ಸು ಕಾಣುತ್ತಾರೆ. ತಾನು ವಿದ್ಯಾವಂತೆ ಮಾತ್ರವಲ್ಲ ಚಿಂತನಶೀಲ ಕವಿತೆಗಳನ್ನು ಬರೆದು ಕವಿತೆಗಳ ಸಂಕಲನ ಪ್ರಕಟಿಸುವಷ್ಟು ಪ್ರಗತಿ ಸಾಧಿಸುತ್ತಾಳೆ. ಅದಕ್ಕೆಲ್ಲ ಅವಳ ಪತಿ ಜ್ಯೋತಿಬಾ ಫುಲೆಯ ಮಾರ್ಗದರ್ಶನ, ಪ್ರೀತಿ ಪ್ರೋತ್ಸಾಹಗಳ ಗಟ್ಟಿ ಬೆಂಬಲ ನಿರಂತರ ದೊರಕುತ್ತವೆ. ಜ್ಯೋತಿಬಾ ಎಂಬ ಜ್ವಾಲಾಮುಖಿಯ ಸಣ್ಣದೊಂದು ಕಿಡಿ ತಾನೆಂಥಲೂ, ಫುಲೆಯಂತಹ ಬೃಹತ್ ಆಲದ ಮರದ ತಣ್ಣನೆಯ ಸಣ್ಣನೆರಳು ತಾನೆಂದು ಖುದ್ದು ಸಾವಿತ್ರಿಬಾಯಿ ತನ್ನ ಪತಿ ಜ್ಯೋತಿಬಾ ಕುರಿತು ಹೇಳಿ ಕೊಂಡಿದ್ದಾಳೆ.
ಇಂತಹದ್ದೊಂದು ಸಾಹಸ ಕಥನ ಜರುಗಿರುವುದನ್ನು ಇತಿಹಾಸಕಾರರು ಅನೇಕ ವರುಷಗಳ ಕಾಲ ಮರೆ ಮಾಚಿದರು. ಇತ್ತೀಚಿನ ವರುಷಗಳಲ್ಲಿ ಹತ್ತು ಹಲವು ತಳ ಸಮುದಾಯಗಳ ಅಧ್ಯಯನಗಳು ಸಾಂಸ್ಕೃತಿಕ ಮತ್ತು ಚಾರಿತ್ರಿಕ ಮಹತ್ವಗಳನ್ನು ಕಂಡು ಕೊಂಡಿವೆ. ಅಷ್ಟು ಮಾತ್ರವಲ್ಲದೆ ಅವುಗಳು ಪ್ರಾದೇಶಿಕ ನೆಲೆಗಳಲ್ಲಿ ಹೊಸಬಗೆಯ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ.
ಇಂತಹ ಕಥನಗಳಿಗೆ ಲೋಕಪ್ರೀತಿಯ ಮನ್ನಣೆ ದಕ್ಕುತ್ತಲಿವೆ. ಅವನ್ನು ಕೇವಲ ಇತಿಹಾಸ ಪುಟಗಳಿಗೆ ದಾಖಲಿಸುವುದಲ್ಲದೇ ಸಾಂಸ್ಕೃತಿಕ ಲೋಕದ ವಿಭಿನ್ನ ನೆಲೆಗಳಲ್ಲಿ ಗಂಭೀರ ತೆರನಾದ ಸಾಂಸ್ಕೃತಿಕ ಮಹತ್ವಗಳು ಪ್ರಾಪ್ತಿಯಾಗುತ್ತಲಿವೆ. ರಂಗಭೂಮಿ ಆ ನಿಟ್ಟಿನಲ್ಲಿ ಹೊಸತನ ಕಂಡುಕೊಂಡಿದೆ. ನಮ್ಮ ನಡುವಿನ ಮಹತ್ವದ ನಾಟಕಕಾರ ಬೆಳಗಾವಿಯ ಡಾ. ಡಿ. ಎಸ್. ಚೌಗಲೆ ಸಾವಿತ್ರಿಬಾಯಿಯ ಸಾಹಸಮಯ ಬದುಕು ಸಾಧನೆಗಳ ಕುರಿತು ಕನ್ನಡದಲ್ಲಿ ನಾಟಕ ರಚಿಸಿದ್ದಾರೆ.
ಮತ್ತೊಂದು ವಿಶೇಷವೆಂದರೆ ಪ್ರಬುದ್ಧ ರಂಗ ನಿರ್ದೇಶಕ ಮಂಜುನಾಥ ಎಲ್. ಬಡಿಗೇರ ಅದನ್ನು ರಂಗಪ್ರಯೋಗಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರ ಏಕವ್ಯಕ್ತಿ ರಂಗಪ್ರಯೋಗದ ಪ್ರಥಮ ಪ್ರಯತ್ನ. ಇದುವರೆಗಿನ ಕನ್ನಡದ ಬಹುಪಾಲು ಏಕವ್ಯಕ್ತಿ ರಂಗಪ್ರಯೋಗಗಳು ಪೌರಾಣಿಕ ವಸ್ತು ಕಥನಗಳು. ಅವಕ್ಕೆ ಕಪೋಲ ಕಲ್ಪನೆಯ ಎಸೆನ್ಸ್ ಸೇರಿಸಿ ಪ್ರಯೋಗವನ್ನು ವರ್ಣಮಯ ಮಾಡಬಹುದು. ಆದರೆ ಐತಿಹಾಸಿಕ ವ್ಯಕ್ತಿತ್ವಗಳನ್ನು ರಂಗಕ್ಕೆ ತರುವಾಗ ಅದು ಡಾಕ್ಯುಮೆಂಟರಿ ಆಗುವ ಸಾಧ್ಯತೆಯ ಸವಾಲುಗಳು ಅಧಿಕ. ಅಂತಹ ಸವಾಲು ಮೀರುವ ಯತ್ನಗಳನ್ನು ನಿರ್ದೇಶಕ ಬಡಿಗೇರ ಮಾಡಿದ್ದಾರೆ.
ಮತ್ತೊಂದು ವಿಶೇಷವೆಂದರೆ ಅದನ್ನು ಏಕವ್ಯಕ್ತಿ ರಂಗಪ್ರಸ್ತುತಿಯಾಗಿ ಯಶಸ್ಸು ದೊರಕಿಸಿರುವುದು ಹೆಗ್ಗೋಡು ಹತ್ತಿರದ ಎಚ್. ಕಲ್ಲುಕೊಪ್ಪದ ಕೆ. ವಿ. ಸುಬ್ಬಣ್ಣ ರಂಗ ಸಮೂಹದ ಎ. ಎಸ್. ಶೈಲಜಾ. ಏಕವ್ಯಕ್ತಿ ಅಭಿನಯದ ಮೂಲಕ ಅರವತ್ತಾರು (1831 - 1897)ಸಾರ್ಥಕ ಸಂವತ್ಸರಗಳ ಸಾವಿತ್ರಿಬಾಯಿ ಮತ್ತು ಆಕೆಯ ಹೋರಾಟದ ಅನೇಕ ಒಡನಾಡಿಗಳ ಪಾತ್ರ ಪ್ರವೇಶ ಮಾಡುವ ಮೂಲಕ ಸಾವಿತ್ರಿಬಾಯಿಯನ್ನು ರಂಗದ ಮೇಲೆ ಶೈಲಜಾ ಸಾಕ್ಷಾತ್ಕರಿಸಿದ್ದಾರೆ. ಸಣ್ಣದೊಂದು ಹಣತೆ ದೀಪದೊಂದಿಗೆ ನಾಂದಿಯಾಗಿ ನಾಟಕ ಮಂಗಲವಾಗುವಾಗ ನೂರಾರು ಜ್ಯೋತಿ(ಬಾ)ಗಳಾಗಿ ಪರಿವರ್ತನೆಯಾಗುವುದು ಪ್ರಗತಿಯ ರೂಪಕ.
ಇತ್ತೀಚೆಗೆ ಮಹಿಳಾ ಏಕವ್ಯಕ್ತಿ ರಂಗಪ್ರಯೋಗಗಳು ಜನಪ್ರಿಯ ಆಗುತ್ತಲಿವೆ. ಅದೊಂದು ರಂಗಪರಂಪರೆಯಾಗಿ ಅಭಿವೃದ್ಧಿ ಆಗುತ್ತಲಿದೆ. ಎರಡು ದಶಕಗಳ ಹಿಂದೆ ಲಕ್ಷ್ಮಿ ಚಂದ್ರಶೇಖರ ಮತ್ತು ಬಿ. ಜಯಶ್ರೀ ಅವರು ಇದಕ್ಕೆ ತೀವ್ರ ಚಾಲನೆ ನೀಡಿದವರು. ತದನಂತರ ಎನ್. ಮಂಗಳಾ, ಭಾಗಿರಥಿಬಾಯಿ ಕದಂ, ಪ್ರತಿಭಾ ಸಾಗರ, ದಾವಣಗೆರೆ ಶಶಿಕಲಾ, ಅಕ್ಷತಾ ಪಾಂಡವಪುರ, ಬದಾಮಿ ಮಂಜುಳಾ, ವೃತ್ತಿ ರಂಗಭೂಮಿಯ ಮೈಸೂರು ಹೆಲನ್ ಇದೀಗ ಎ ಎಸ್. ಶೈಲಜಾ ಮತ್ತೊಂದು ಮಹತ್ತರ ಸೇರ್ಪಡೆ. ಆರಂಭಿಕ ದಿನಗಳಲ್ಲಿ ಸಿ. ಆರ್. ಸಿಂಹ ಅವರು " ಟಿಪಿಕಲ್ ಟಿ. ಪಿ. ಕೈಲಾಸಂ " ಏಕವ್ಯಕ್ತಿ ರಂಗಪ್ರಯೋಗದ ಮೂಲಕ ಸುಪ್ರಸಿದ್ಧಿ ಪಡೆದರು. ಕಳೆದ ದಶಕದೀಚೆಗೆ " ಸಾಯುವವನೇ ಚಿರಂಜೀವಿ " ಏಕವ್ಯಕ್ತಿ ರಂಗ ಪ್ರಯೋಗದ ಮೂಲಕ ಕೃಷ್ಣಮೂರ್ತಿ ಕವತ್ತಾರ ಜನಪ್ರಿಯರಾದರು.
ಜನವರಿ ಮೂರನೇ ತಾರೀಖು ಸಾವಿತ್ರಿಬಾಯಿ ಅವರ ಜನ್ಮ ದಿನಾಚರಣೆ. ಅಂದು ದಾವಣಗೆರೆಯಲ್ಲಿ ಸಾವಿತ್ರಿಬಾಯಿ ಫುಲೆ ಏಕವ್ಯಕ್ತಿ ರಂಗಪ್ರದರ್ಶನ. ಹೆಗ್ಗೋಡು ಹತ್ತಿರದ ಶಾಲಾಶಿಕ್ಷಕಿ ಎ. ಎಸ್. ಶೈಲಜಾ ಅವರಿಂದ ಏಕವ್ಯಕ್ತಿ ರಂಗಪ್ರಯೋಗ. ಪ್ರಜಾವಾಣಿ ಅಮೃತ ಮಹೋತ್ಸವದ ಸಂಭ್ರಮ ಬಳಗ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಜಿಲ್ಲಾ ಸಂಘಗಳ ಸಹಯೋಗ. ಹೊಸ ವರ್ಷದ ಆರಂಭದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿಯ ನಾಟಕ ಪ್ರದರ್ಶನ. ಅಂದು ಮುಂಜಾನೆ ಎ.ಆರ್. ಜಿ. ಕಾಲೇಜ್, ಸಂಜೆ ಕನ್ನಡ ಭವನದಲ್ಲಿ ಪ್ರದರ್ಶನಗಳು.
ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರ...
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
©2024 Book Brahma Private Limited.