ಸಮುದಾಯ-ಸಮಾಜವನ್ನು ಸಂಕೀರ್ಣವಾಗಿ ನೇಯ್ದಿಟ್ಟುಕೊಂಡಿರುವ ಕಥ


"ಈ ಕಾದಂಬರಿಯು ಮೇಲ್ನೋಟಕ್ಕೆ ಮಳೆಗಾಗಿ ಕಾಯುತ್ತಿರುವ ಬಯಲು ಸೀಮೆಯ ಹಳ್ಳಿಯೊಂದರ ಬರಗಾಲದ ಎಲ್ಲ ಬಗೆಯ ದಂದುಗವನ್ನು, ಜೊತೆ ಜೊತೆಗೆ ಬದುಕಿನ ಸಹಜ ಚೆಲುವನ್ನು ಕಟ್ಟಿ ಕೊಡುವ ಸರಳ ಸಹಜ ಕಥನವಾಗಿ ಕಾಣುತ್ತ, ಒಡಲೊಳಗೆ ಮನುಷ್ಯನ ವೈಯಕ್ತಿಕ- ಸಮುದಾಯ-ಸಮಾಜ ಹೀಗೆ ಒಂದರೊಳಗೊಂದು ಸಂಕೀರ್ಣ ನೇಯ್ದೆ ಇಟ್ಟುಕೊಂಡಿರುವ ಕಥನ," ಎನ್ನುತ್ತಾರೆ ಅನುಪಮಾ ಪ್ರಸಾದ್ ಅವರು ಹಳೆಮನೆ ರಾಜಶೇಖರ ಅವರ 'ಒಡಲುಗೊಂಡವರು' ಕೃತಿಗೆ ಬರೆದ ಮುನ್ನುಡಿ.

ಸ್ನೇಹಮಯಿ ರಾಜಶೇಖರ ಅವರೆ ನೀವು ಬರೆದ ಕಾದಂಬರಿಯ ಹಸ್ತ ಪ್ರತಿ ಓದಿ ಅಭಿಪ್ರಾಯ ಬರೆಯಬೇಕೆಂದು ಕೇಳಿದ ನಿಮ್ಮ ವಿಶ್ವಾಸಕ್ಕೆ ಶರಣು. ನೀವು ಮಿಂಚಂಚೆಯಲ್ಲಿ ಕಾದಂಬರಿ ಕಳುಹಿಸಿದ ಸಮಯದಲ್ಲಿ ನಾನು ಮತ್ತೊಮ್ಮೆ ನನ್ನ ಮನೆ ಬದಲಿಸುವ ತರಾತುರಿಯಲ್ಲಿದ್ದೆ. ಇರಲಿ ಬಿಡಿ. ಮನೆಯ ಸಾಮಗ್ರಿಗಳ ಮಾರಾಪು ಕಟ್ಟುತ್ತಾ 'ಒಡಲುಗೊಂಡವರು' ಕಾದಂಬರಿ ಓದಿದೆ.

'ಒಡಲುಗೊಂಡವರು' ಕಾದಂಬರಿಯು ಮೇಲ್ನೋಟಕ್ಕೆ ಮಳೆಗಾಗಿ ಕಾಯುತ್ತಿರುವ ಬಯಲು ಸೀಮೆಯ ಹಳ್ಳಿಯೊಂದರ ಬರಗಾಲದ ಎಲ್ಲ ಬಗೆಯ ದಂದುಗವನ್ನು, ಜೊತೆ ಜೊತೆಗೆ ಬದುಕಿನ ಸಹಜ ಚೆಲುವನ್ನು ಕಟ್ಟಿ ಕೊಡುವ ಸರಳ ಸಹಜ ಕಥನವಾಗಿ ಕಾಣುತ್ತ, ಒಡಲೊಳಗೆ ಮನುಷ್ಯನ ವೈಯಕ್ತಿಕ- ಸಮುದಾಯ-ಸಮಾಜ ಹೀಗೆ ಒಂದರೊಳಗೊಂದು ಸಂಕೀರ್ಣ ನೇಯ್ದೆ ಇಟ್ಟುಕೊಂಡಿರುವ ಕಥನ. ಇದು ಈ ಕೃತಿ ಓದಿ ಮುಗಿಸಿದಾಗ ನನ್ನೊಳಗೆ ಮೂಡಿದ ಭಾವ.

ವಿಧವೆ ನೀಲವ್ವ ಗೌಡಸಾನಿ, ಆಕೆಯ ಆಸರೆಯಲ್ಲಿರುವ ಸಿದ್ದವ್ವ, ಸಂಚಾರಿ ತತ್ವ ಪದಕಾರ ಶಿವಯ್ಯ ತಾತ, ಆಳು ಮಗ ಭೀಮ ಅವನ ಪ್ರೇಯಸಿ ಶಿವಬಸವ್ವ ಇವರುಗಳ ಮೂಲಕ ದೇಹ ತತ್ವ-ಜೀವತತ್ವಗಳ ತಾತ್ವಿಕತೆಯ ದರ್ಶನಕ್ಕೆ ಕಾದಂಬರಿ ಹಂಬಲಿಸುವ ಪರಿ ಅನನ್ಯ.

ಇಲ್ಲಿ ಊರು ಕೇರಿ ಇದೆ. ಊರು ಕೇರಿಯ ನಡುವೆ ಅಂತಃಕರಣದ ಅನುಬಂಧವೂ, ಒಳ ಹರಿವಿನಲ್ಲಿ ಊರು ಕೇರಿಯ ನಡುವಿನ ಅಂತರವೂ ಜೊತೆ ಜೊತೆಗೇ ಇದೆ. ಊರು-ಕೇರಿಯ ನಡುವಿನ ನೋವು-ನಲಿವಿನ ಸಮಾಚಾರ ಎರಡೂ ಕಡೆಗೂ ತಲುಪಿಸಲು ಎಲ್ಲರ ಭೀಮನಿದ್ದಾನೆ. ಕಥನ ಸುರುವಾಗುವುದೇ ಕತೆಯ ಒಂದು ಕೇಂದ್ರ ಪಾತ್ರವಾಗಿರುವ ಭೀಮನೆಂಬ ದುಡಿಮೆಗಾರನ ಕನಸಿನಲ್ಲಿ ಬರಗಾಲದ ತೀವ್ರತೆಯ ಸ್ವರೂಪ ಕಾವ್ಯ ರೂಪದಲ್ಲಿ ಅನಾವರಣಗೊಳ್ಳುವುದರ ಮೂಲಕ. ಈ ಕನಸಲ್ಲಿ ಅವನ ಅನ್ನದಾತೆಯಾಗಿರುವ ನೀಲವ್ವ ಕಂಕುಳಲ್ಲಿ ಕೂಸುಗಳ ಕಟ್ಟಿಕೊಂಡು ಬೆಂಕಿ ಮಳೆಯ ಪ್ರವಾಹದಲ್ಲಿ ನಡೆಯುತ್ತ, ಕಂಕುಳ ಮಕ್ಕಳನ್ನು ರಕ್ಷಿಸಲು ಅಸಹಾಯಕಳಾಗಿ ಭೀಮನನ್ನು ಕೂಗಿಕೊಳ್ಳುವ ಸಂದರ್ಭವೂ ಬರುತ್ತದೆ. ಇದು ನೀಲವ್ವಳೆಂಬ ಗೌಡಸಾನಿಯ ಅಂತಃಕರಣ ತುಂಬಿದ ವ್ಯಕ್ತಿತ್ವನ್ನು ಚಿತ್ರಿಸುವಂತೆ ಕಂಡರೂ ಅಷ್ಟನ್ನೇ ಅಲ್ಲ ಇನ್ನೇನನ್ನೊ ಕಾಣಿಸುವ ಮಹತ್ವಾಕಾಂಕ್ಷೆ ಇಲ್ಲಿದೆ ಎಂಬುದು ಕಾದಂಬರಿಯ ಅಂತ್ಯಕ್ಕೆ ಹೊಳೆಯುತ್ತದೆ. ಈ ಭೀಮನಿಗೆ ಬೀಳುವ ಅರ್ಥವಿಲ್ಲದ ಕನಸುಗಳ ಹಿಂದಿನ ನಿಗೂಢತೆಗಳು, ಭೀಮ ಹಾಗು ಹದ್ದಿನ ಪ್ರಸಂಗದ ಮಾಂತ್ರಿಕ ವಾಸ್ತವ – ಇವೆರಡೂ ಕಾದಂಬರಿ ಓದಿ ಮುಗಿಯುವ ಹೊತ್ತಿಗೆ ನಮ್ಮೊಳಗೆ ಶಕ್ತಿಯುತ ಸಂಕೇತವಾಗಿ ಬಿಚ್ಚಿಕೊಳ್ಳುತ್ತ, ಗಾಢ ವಿಷಾದದಲ್ಲಿ ಮುಳುಗಿಸುತ್ತದೆ. ಅಂದರೆ, ಈ ಕಥನದಲ್ಲಿ ನಾವು ಓದುವ ಕತೆಯೊಂದಿಗೆ ನಮ್ಮೊಳಗೆ ಕಾಣಿಸುವ ಕತೆಯೂ ಇದೆ.

ಕತೆ ನಡೆಯುವುದು ರಾಯಚೂರಿನ ಒಂದಾನೊಂದು ಹಳ್ಳಿಯಾಗಿರಬಹುದಾದ ಬನ್ನಿಪುರದಲ್ಲಿ ಹಳ್ಳಿಯೆಂದ ಮೇಲೆ ರೈತಾಪಿ ಬದುಕು ಎಂಬುದು ಅದರ ಆತ್ಮ. ರೈತಾಪಿ ಬದುಕಿನ ವಿವರಗಳನ್ನು, ಹೊಲದ ದುಡಿಮೆಯ ಪದ್ಧತಿಯನ್ನು, ಅಡುಗೆಗಳನ್ನು ಕಥನ ಸಂದರ್ಭಕ್ಕೆ ತಕ್ಕಂತೆ ಒಂದರೊಳಗೊಂದು ನೇದುಕೊಂಡು ತನ್ಮಯತೆಯಿಂದ ಪ್ರತಿ ಹೆಜ್ಜೆಗೂ ನಮ್ಮನ್ನು ಕೈ ಹಿಡಿದು ಇದು ಹೀಗೆ ಎಂದು ಮುಟ್ಟಿಸಿ ಮುಟ್ಟಿಸಿ ತೋರಿಸುತ್ತದೆ. ಕೃಷಿ ಸಲಕರಣೆಗೆ ಕುಲುಮೆ ಹಾಕುವ ಮಹಾದೇವಯ್ಯ, ಒಮ್ಮೆ ಉಡಿ ತುಂಬಿಕೊಂಡು ಬೀಜ ಬಿತ್ತನೆಗೆ ತೊಡಗಿದರೆ ಊರ ಹೊಲಗಳ ಬಿತ್ತನೆ ಮುಗಿಸಿಯೇ ಉಡಿ ಬಿಚ್ಚುವ ಕೇರಿಯ ಮಲ್ಲಯ್ಯ, ಸಾಬಯ್ಯ ಇವರುಗಳ ತಾದಾತ್ಮತೆ ಎಲ್ಲೂ ಹೊರಗಿನಿಂದ ಬಂದಿರುವುದಲ್ಲ. ಆ ವ್ಯಕ್ತಿತ್ವದ ತಾತ್ವಿಕತೆಯೇ ಅಂತದ್ದು ಎಂಬ ಅನುಭವ ಕೊಡುತ್ತ ನಮ್ಮ ಒಡನಾಟಕ್ಕೆ ಬಂದಿರಬಹುದಾದ ವ್ಯಕ್ತಿಗಳನ್ನು ನೆನಪಿಸುತ್ತದೆ.

ನೀಲವ್ವ ಗೌಡಸಾನಿ ತನ್ನ ಜಾನುವಾರುಗಳನ್ನು ಹಸನಾಗಿ ನೋಡಿಕೊಳ್ಳುವಂತೆಯೇ, ತನ್ನ ಹೊಲದಲ್ಲಿ ದುಡಿಮೆ ಮಾಡುವ ಕೇರಿಜನ ಹಸಿದಿರಬಾರದೆಂಬ ಕಕ್ಕುಲಾತಿಯಿಂದ ತಾನೇ ಕೈಯಾರೆ ರೊಟ್ಟಿ ಬುತ್ತಿಯೊಂದಿಗೆ ಹೊಲಕ್ಕೆ ಬರುವಂತವಳು. ಅವರ ಬರಗಾಲದ ಬವಣೆಗೆ ಆಸರೆಯಾಗುವಂತವಳು. ಊರ ಜನರ ಕಷ್ಟಕ್ಕೆ ಕೇರಿಜನರ ಕಷ್ಟಕ್ಕೆ ಊರ ಉಳ್ಳವರು ಮಿಡಿಯುವ ಬಗೆ ಈ ಕಥನದಲ್ಲಿ ಅತ್ಯಂತ ಸಹಜವಾಗಿ ಬಂದಂತೆ ಕಾಣಿಸಿದರೂ, ಇಲ್ಲೊಂದು ಮರ್ಮವಿದೆ. ಇದು ಹೇಗೆಂದರೆ, ಮನುಷ್ಯ ತನ್ನ ಅನುಕೂಲಕ್ಕಾಗಿ ಜಾನುವಾರುಗಳನ್ನು ಸಾಕಿ, ತನ್ನ ಹೊಲದ ಕೆಲಸ ಕಾರ್ಯಗಳಲ್ಲಿ ಅವುಗಳು ಚೆನ್ನಾಗಿ ದುಡಿಯಬೇಕೆಂಬ ಕಾರಣಕ್ಕೆ ಅವುಗಳನ್ನು ಚೆನ್ನಾಗಿ ನೋಡಿಕೊಂಡು ಅವುಗಳು ಯಾವತ್ತೂ ತನಗೆ ಕೃತಜ್ಞರಾಗಿರುವಂತೆ ನೋಡಿಕೊಳ್ಳುವ ಬಗೆಯಂತೆಯೇ ಕೇರಿಜನರ ಮನಸ್ಥಿತಿ ಇರುವಂತೆ ನೋಡಿಕೊಳ್ಳಲಾಗುತ್ತಿದೆಯಲ್ಲವೆ ಎಂಬ ಪ್ರಶ್ನೆ ಓದುಗರಾದ ನಮ್ಮೊಳಗೆ ಏಳದಿರುವುದಿಲ್ಲ. ಹಾಗೆಂದು ಇದಾವುದನ್ನೂ ನೀಲಮ್ಮ ಗೌಡಸಾನಿಯಾಗಲಿ, ನಾಗೇಗೌಡನ ಮನೆಯವರಾಗಲಿ ಅರಿವಿನಿಂದ ಮಾಡುತ್ತಾರೆಂದಲ್ಲ. ಕಾಲದ ನಡೆಯಲ್ಲಿ ಸಾಗಿ ಬಂದ ವ್ಯವಸ್ಥೆ ಕೆಡದಂತೆ ಆ ವ್ಯವಸ್ಥೆಯ ವಾರಸುದಾರರಂತೆ ಅವರಿಗೂ ಅರಿವಿಲ್ಲದವರಂತೆ ತಮ್ಮ ಉದಾತ್ತತೆಯ ಜೊತೆ ಜೊತೆಗೇ ಮುನ್ನಡೆಸಿಕೊಂಡು ಹೋಗುತ್ತಿರುತ್ತಾರೆ. ಮನೆಯೆಂಬ ಗೂಡು ಹಾಗು ಅದರ ಸುತ್ತಲಿನ ತಿಪ್ಪೆಯನ್ನು ತಮ್ಮ ಜೀವನವೇ ಇದು ಎಂಬಂತೆ ಉತ್ಸಾಹದಿಂದಲೇ ಒಳಗೊಳ್ಳುತ್ತಿರುವ ಕೇರಿ ಮಂದಿಯೂ ಆ ಮನಸ್ಥಿತಿಯ ಮುಂದುವರಿಕೆಯ ವಾರಸುದಾರರಾಗಿ, ಊರಿಗೆ ನೀಲವ್ವಳ ಮಗ ಬಸವರಾಜನ ಮರಳುವಿಕೆ ಯವರೆಗೆ ಎಲ್ಲವೂ ಹಸನಾಗಿ ಆದರ್ಶಮಯವಾಗಿತ್ತು ಎಂಬ ಭ್ರಮೆ ಹುಟ್ಟುವಂತೆ ಕಾಣಿಸುವ ನಿರೂಪಕ ಅದೇ ಭ್ರಮೆಯನ್ನು ಹದ್ದಿನ ಕಣ್ಣಿನ ಮೂಲಕ ಕೆಣಕುವುದು ಕಥನದೊಳಗಿಂದಲೇ ಮೂಡಿ ಬಂದು ಕಾದಂಬರಿಯು ಇನ್ನೊಂದು ಆಯಾಮಕ್ಕೆ ಚಲಿಸಲು ಪ್ರಯತ್ನಿಸುತ್ತದೆ. ಇನ್ನುಳಿದಂತೆ ಪ್ರಾದೇಶಿಕ ನುಡಿಯನ್ನು ನೀವು ಬಳಸಿದ ರೀತಿ ಗಮನಿಸುವಂತದ್ದು. ಏಕೆಂದರೆ ಪ್ರಾದೇಶಿಕತೆಯಲ್ಲಿರಲಿ, ಸಮುದಾಯದೊಳಗಿರಲಿ ಕೆಲವೊಮ್ಮೆ ಆಡುವ ಮಾತು ಒಂದೆ ಅನಿಸಿದರು ಸೂಕ್ಷ್ಮವಾದ ವ್ಯತ್ಯಾಸವಿರುತ್ತದೆ. ಅದನ್ನು ನೀವು ಲಕ್ಷಿಸಿದ್ದೀರಿ ಅನಿಸಿತು. ಕಥೆಗಾರರಾದ ನೀವು ಈ ಕೃತಿಯ ಮೂಲಕ ಕಾದಂಬರಿಕಾರನಾದಿರಿ. ನಿಮ್ಮ ಈ ಮೊದಲ ಕಾದಂಬರಿ ಓದುಗರನ್ನು ತಲುಪಲಿ, ಚರ್ಚೆಗೊಳ ಪಡಬೇಕಾದ ಇನ್ನಷ್ಟು ಸಂಗತಿಗಳನ್ನು ಓದುಗರು ಚರ್ಚಿಸಲಿ.

- ಅನುಪಮಾ ಪ್ರಸಾದ್

MORE FEATURES

ಅಕ್ಷರಗಳ ಸಖ್ಯ ನಿತ್ಯ ಸಿಗುವಂತೆ ವಿಧಿ ಹರಸಲಿ

04-01-2025 ಬೆಂಗಳೂರು

“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...

ಮೌನಂ ನ ಸಮ್ಮತಿ ಲಕ್ಷಣಂ

04-01-2025 ಬೆಂಗಳೂರು

“ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್...

ಬೆಂಗಳೂರು ಸಹಾನುಭೂತಿಯ ಬಂಡವಾಳಶಾಹಿಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ

04-01-2025 ಬೆಂಗಳೂರು

“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿ...