“ನನ್ನ ಮುಂದಿನ ಶಿಕ್ಷಣದಲ್ಲೂ ನೌಕರಿಯ ಕಾಲದಲ್ಲೂ ಸಾಹಿತ್ಯಕ್ಕೆ ಸ್ಥಾನವಿಲ್ಲದಿದ್ದರೂ ಈ ಪುಸ್ತಕ ಪ್ರೀತಿಯಿಂದಾಗಿ ಸಾಹಿತ್ಯದ ಓದು ಮುಂದುವರಿಯಿತು,” ಎನ್ನುತ್ತಾರೆ ಜಿ. ರಾಮನಾಥ ಭಟ್. ಅವರು ‘ಬಹುರೂಪಿ ಗೀತಾಂಜಲಿ’ ಕೃತಿ ಕುರಿತು ಬರೆದ ಅರಿಕೆ.
ನನ್ನ ಹೈಸ್ಕೂಲ್ ವಿದ್ಯಾಭ್ಯಾಸದ ಕಾಲದಲ್ಲಿ ನನ್ನ ಅಧ್ಯಾಪಕರೆಲ್ಲ ಸಾಹಿತ್ಯಾಸಕ್ತರಾಗಿದ್ದುದರಿಂದ ಸಹಜವಾಗಿಯೇ ನನ್ನಲ್ಲಿ ಪುಸ್ತಕ ಪ್ರೀತಿ ಬೆಳೆಯಿತು. ನನ್ನ ತಂದೆಯವರು ಸಂಸ್ಕೃತದಲ್ಲಿ ಮದರಾಸು ವಿಶ್ವವಿದ್ಯಾಲಯದ ಪದವೀಧರರಾಗಿದ್ದು ಅವರ ಬಳಿ ಸಂಸ್ಕೃತ ಸಾಹಿತ್ಯ ಮತ್ತು ವೇದಾಂತ ಪುಸ್ತಕಗಳ ದೊಡ್ಡ ಸಂಗ್ರಹವೇ ಇದ್ದುದೂ ನನ್ನಲ್ಲಿ ಪುಸ್ತಕಪ್ರೀತಿ ಬೆಳೆಯಲು ಕಾರಣವಾಗಿರಬಹುದು. ನನ್ನ ಮುಂದಿನ ಶಿಕ್ಷಣದಲ್ಲೂ ನೌಕರಿಯ ಕಾಲದಲ್ಲೂ ಸಾಹಿತ್ಯಕ್ಕೆ ಸ್ಥಾನವಿಲ್ಲದಿದ್ದರೂ ಈ ಪುಸ್ತಕಪ್ರೀತಿಯಿಂದಾಗಿ ಸಾಹಿತ್ಯದ ಓದು ಮುಂದುವರಿಯಿತು.
1961ರ ಗುರುದೇವ ರವೀಂದ್ರನಾಥ ಠಾಕೂರರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾದೆಮಿಯು ಡಾ. ಎಸ್. ರಾಧಾಕೃಷ್ಣನ್ ಅವರ ಸಂಪಾದಕತ್ವದಲ್ಲಿ 'ಶತಮಾನೋತ್ಸವ ಸಂಪುಟ' ಎಂಬ ಬೃಹತ್ ಗ್ರಂಥವೊಂದನ್ನು ಪ್ರಕಟಿಸಿತು ; ಮೈಸೂರು ವಿಶ್ವವಿದ್ಯಾಲಯದ ನಿಯತಕಾಲಿಕ 'ಪ್ರಬುದ್ಧ ಕರ್ನಾಟಕ' 'ರವೀಂದ್ರಾಂಕ' ಎಂಬ ವಿಶೇಷ ಸಂಚಿಕೆಯನ್ನು ಪ್ರಕಟಿಸಿತು. ಇವುಗಳೊಂದಿಗೆ ಅನೇಕ ಪತ್ರಿಕೆಗಳಲ್ಲೂ ನಿಯತಕಾಲಿಕಗಳಲ್ಲೂ ರವೀಂದ್ರರನ್ನು, ಅವರ ಕಾವ್ಯವನ್ನು ಕುರಿತ ಹಲವಾರು ಲೇಖನಗಳು ಪ್ರಕಟವಾದುವು.
ಇವನ್ನೆಲ್ಲ ಓದುತ್ತಿದ್ದಂತೆ ಠಾಕೂರರ ಸಾಹಿತ್ಯದ ಕಡೆಗಿನ ನನ್ನ ಒಲವು ಹೆಚ್ಚಾಯಿತು. ಹೀಗಾಗಿ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಲಭ್ಯವಿದ್ದ ಅವರ ಸಣ್ಣ ಕತೆಗಳು, ಕಾದಂಬರಿಗಳು ಹಾಗೂ ನಾಟಕಗಳನ್ನು ಓದಲು ಪ್ರಾರಂಭಿಸಿದೆ. ಬಾಲ್ಯದಿಂದಲೂ ನನಗೆ ಕಾವ್ಯದಲ್ಲಿ ವಿಶೇಷ ಆಸಕ್ತಿ ಇದ್ದುದರಿಂದ ಅವರ ಕವಿತೆಗಳು ನನ್ನನ್ನು ಹೆಚ್ಚುಹೆಚ್ಚಾಗಿ ಸೆಳೆದುವು. ಲಂಡನ್ನಿನ ಮೆಕ್ಸಿಲನ್ ಪ್ರಕಾಶನ ಸಂಸ್ಥೆಯು 1913-28ರ ಅವಧಿಯಲ್ಲಿ ರವೀಂದ್ರರ ಹತ್ತು ಇಂಗ್ಲಿಷ್ ಕವನಸಂಗ್ರಹಗಳನ್ನು ಪ್ರಕಟಿಸಿತ್ತು. ಮುಂದೆ ರವೀಂದ್ರರ ಮರಣಾನಂತರ ವಿಶ್ವಭಾರತಿಯು ರವೀಂದ್ರರ ಅಪ್ರಕಟಿತ ಇಂಗ್ಲಿಷ್ ಕವಿತೆಗಳನ್ನು ಸಂಗ್ರಹಿಸಿ 1942ರಲ್ಲಿ Poems ಎಂಬ ಸಂಕಲನವನ್ನು ಪ್ರಕಟಿಸಿತು. ಈ ಕವಿತೆಗಳ ಬಗ್ಗೆ ನನ್ನ ಕೆಲ ಸಾಹಿತ್ಯಾಸಕ್ತ ಮಿತ್ರರಲ್ಲಿ ಆಗೀಗ ಪ್ರಸ್ತಾಪ ಮಾಡಿದಂತೆ ಅವುಗಳನ್ನು ಕನ್ನಡಕ್ಕೆ ಅನುವಾದಿಸಲು ಪ್ರೇರೇಪಿಸಿದರು. ಇದರ ಫಲವಾಗಿ 1964ರಲ್ಲಿ ನಾನು ರವೀಂದ್ರರ ಕೆಲವು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದೆ. ನನ್ನ ಮಿತ್ರರು ಇವುಗಳನ್ನು ಮೆಚ್ಚಿ ಪ್ರಕಟಿಸುವಂತೆ ಸೂಚಿಸಿದರು. ಆದರೆ ರವೀಂದ್ರರ ಕವಿತೆಗಳಲ್ಲಿನ ಯಾವುದೋ ಒಂದು ಅವ್ಯಕ್ತ ಭಾವವು ನನ್ನ ಕೈಗೆಟುಕದೆ ತಪ್ಪಿಸಿಕೊಳ್ಳುತ್ತಿದೆಯೇನೋ ಎಂದು ನನಗೆ ಭಾಸವಾಗುತ್ತಿದ್ದುದರಿಂದ ಅವುಗಳನ್ನು ಹಾಗೆಯೇ ಮುಚ್ಚಿಟ್ಟು, ಅವರ ಜೀವನದರ್ಶನವನ್ನು ಅರಿತುಕೊಳ್ಳಲು ಅಧ್ಯಯನವನ್ನು ಮುಂದುವರಿಸುತ್ತಾ, ಆಗಾಗ ಅಲ್ಲೊಂದು ಇಲ್ಲೊಂದು ಕವಿತೆಯನ್ನು ಅನುವಾದಿಸುತ್ತಿದ್ದೆ.
ಕೊನೆಗೆ 1993ರಲ್ಲಿ ಒಂದು ದಿನ ಅಲ್ಲಲ್ಲಿ ಒಂದೊಂದು ಕವಿತೆಯನ್ನು ಅನುವಾದಿಸುವುದನ್ನು ಬಿಟ್ಟು ಒಂದೊಂದೇ ಪುಸ್ತಕವನ್ನು ಸಮಗ್ರವಾಗಿ ಅನುವಾದಿಸುವುದು ಹೆಚ್ಚು ಸೂಕ್ತವೆಂದು ಭಾವಿಸಿ ಗೀತಾಂಜಲಿಯ ಅನುವಾದವನ್ನು ಪ್ರಾರಂಭಿಸಿ 1994ರಲ್ಲಿ ಪೂರ್ಣಗೊಳಿಸಿದೆ.
ಆದರೆ ಆ ವೇಳೆಗಾಗಲೇ ಗೀತಾಂಜಲಿಯ ನಾಲ್ಕೈದು ಅನುವಾದಗಳು ಪ್ರಕಟವಾಗಿದ್ದ ವಿಚಾರ ನನಗೆ ತಿಳಿದು. ಇನ್ನೊಂದು ಅನುವಾದದ ಅಗತ್ಯವಿದೆಯೆ ? ಎಂಬ ಸಂದೇಹ ನನ್ನನ್ನು ಕಾಡತೊಡಗಿ, ಹಿರಿಯ ಸಾಹಿತಿಗಳಾದ ಡಾ. ಹಾ. ಮಾ. ನಾಯಕ ಅವರಿಗೆ ಒಂದು ಪತ್ರ ಬರೆದು, ಜೊತೆಗೆ ನನ್ನ ಕೆಲವು ಅನುವಾದಗಳನ್ನೂ ಕಳುಹಿಸಿ ಅವರ ಸಲಹೆಯನ್ನು ಕೇಳಿದೆ. ಅವರು ಕೂಡಲೇ ಪತ್ರ ಬರೆದು 'ಅವರ ಕೆಲಸ ಅವರದು; ನಮ್ಮ ಕೆಲಸ ನಮ್ಮದು. ಆದುದರಿಂದ ಇದನ್ನು ಪ್ರಕಟಿಸಿ. ಆದರೆ ಲಂಡನ್ನಿನ ಮೆಕ್ಸಿಲನ್ ಪ್ರಕಾಶನ ಸಂಸ್ಥೆಯಿಂದಲೂ ಶಾಂತಿನಿಕೇತನದ ವಿಶ್ವಭಾರತಿಯಿಂದಲೂ ಪೂರ್ವಾನುಮತಿಯನ್ನು ಪಡೆಯಬೇಕು' ಎಂದು ತಿಳಿಸಿದರು. ಕೂಡಲೇ ನಾನು ಈ ಎರಡೂ ಸಂಸ್ಥೆಗಳಿಗೆ ಪ್ರಕಟಣೆಗೆ ಅನುಮತಿ ನೀಡಲು ವಿನಂತಿಸಿ ಪತ್ರ ಬರೆದೆ.
ಸುಮಾರು ಎರಡು ವರ್ಷಗಳ ಪತ್ರವ್ಯವಹಾರದ ನಂತರ ರವೀಂದ್ರರ ಎಲ್ಲ ಕೃತಿಗಳ ಗ್ರಂಥಸ್ವಾಮ್ಯ (copyright) ಹೊಂದಿದ್ದ 'ವಿಶ್ವಭಾರತಿ' ವಿಶ್ವವಿದ್ಯಾಲಯ ನನಗೊಂದು ಪತ್ರ ಬರೆದು, ನನ್ನ ಅನುವಾದದ ಹಸ್ತಪ್ರತಿಯನ್ನು ಅವರಿಗೆ ಕಳುಹಿಸಬೇಕೆಂದೂ ಅದನ್ನು ಅವರ ಪರಿಣತ ಸಮಿತಿ ಒಪ್ಪಿಕೊಂಡಲ್ಲಿ ಅನುಮತಿ ನೀಡಲಾಗುವುದೆಂದೂ ತಿಳಿಸಿದರು. ಹಸ್ತಪ್ರತಿಯನ್ನು 'ವಿಶ್ವಭಾರತಿ'ಗೆ ಕಳುಹಿಸಿದೆ; ಸುಮಾರು ಒಂದು ವರ್ಷದ ಬಳಿಕ ಅನುಮತಿ ದೊರಕಿ 1999ರಲ್ಲಿ ಪ್ರಕಟವಾಯಿತು. ಹೀಗೆ ನಾನು ಗೀತಾಂಜಲಿಯ ಪ್ರಕಟಣೆಗೆ ಪೂರ್ವಾನುಮತಿಯನ್ನು ಪಡೆಯಲು ಮೂರು ವರ್ಷಗಳ ಕಾಲ ಕಾಯಬೇಕಾದರೂ ನನ್ನ ಅನುವಾದಗಳು ಪರಿಣತ ಸಮಿತಿಯ ಪರಿಶೀಲನೆಗೆ ಒಳಪಟ್ಟು ಪ್ರಕಟಣೆಗೆ ಯೋಗ್ಯವೆಂದು ಅಂಗೀಕೃತವಾದುದರಿಂದ ರವೀಂದ್ರರ ಇತರ ಕವಿತೆಗಳ ಅನುವಾದವನ್ನು ಮುಂದುವರಿಸಲು ನನಗೆ ಧೈರ್ಯವುಂಟಾಯಿತು. ಹೀಗಾಗಿ 1999ರಿಂದ 2008ರ ಅವಧಿಯಲ್ಲಿ ಗೀತಾಂಜಲಿ, ಫಲಸಂಚಯ, ವನಪಾಲಕ, ಕವಿತಾ ಸಂಚಯ, ಕಬೀರರ ಕವನಗಳು, ಬಿದಿಗೆಯ ಚಂದ್ರ ಮತ್ತು ಶೇಷಗೀತ ಎಂಬ ಏಳು ಸಂಪುಟ ಗಳಲ್ಲಿ 900ಕ್ಕೂ ಹೆಚ್ಚು ಕವಿತೆಗಳು ಹಾಗೂ 600 ಕಿರುಗವಿತೆಗಳ ಅನುವಾದಗಳು ಪ್ರಕಟವಾದುವು.
ಕೇಂದ್ರ ಸಾಹಿತ್ಯ ಅಕಾದೆಮಿಯು ರವೀಂದ್ರರ ಸಮಗ್ರ ಇಂಗ್ಲಿಷ್ ಬರಹಗಳನ್ನು 1994-96ರ ಅವಧಿಯಲ್ಲಿ ಮೂರು ಬೃಹತ್ ಸಂಪುಟಗಳಲ್ಲಿ ಪ್ರಕಟಿಸಿತು. ಇದಾದ ಕೆಲಕಾಲದನಂತರ ಶ್ರೀ ನಿತ್ಯಪ್ರಿಯ ಘೋಷ್ ಅವರು ಶಾಂತಿನಿಕೇತನದ ರವೀಂದ್ರ ಪತ್ರಾಗಾರದಲ್ಲಿ ಯಾವುದೋ ದಾಖಲೆಯನ್ನು ಹುಡುಕುತ್ತಿದ್ದಾಗ ಅವರಿಗೆ ಅವರೆಗೂ ಎಲ್ಲಿಯೂ ಪ್ರಕಟವಾಗಿರದಿದ್ದ ಅನೇಕ ಕವಿತೆಗಳೂ ಲೇಖನಗಳೂ ಗೋಚರಿಸಿದುವು. ಇದರ ಫಲವಾಗಿ ಕೇಂದ್ರ ಸಾಹಿತ್ಯ ಅಕಾದೆಮಿಯು 2007ರಲ್ಲಿ ನಾಲ್ಕನೆಯ ಸಂಪುಟವನ್ನು ಪ್ರಕಟಿಸಿತು. ಇದರಲ್ಲಿನ 200ಕ್ಕೂ ಹೆಚ್ಚು ಕವಿತೆಗಳನ್ನು ನಾನು 2008 -10ರ ಅವಧಿಯಲ್ಲಿ ಅನುವಾದಿಸಿದೆ. ಈ ಎಲ್ಲ ಅನುವಾದಗಳನ್ನು ಈಗಾಗಲೇ ಪ್ರಕಟವಾಗಿರುವ ಏಳು ಸಂಪುಟಗಳ ಅನುವಾದಗಳೊಂದಿಗೆ ಸೇರಿಸಿ ಅವುಗಳನ್ನು ಇಂಗ್ಲಿಷ್ ನಲ್ಲಿ ಪ್ರಕಟವಾದ ಕಾಲಾನುಕ್ರಮದಲ್ಲಿ ಹೊಂದಿಸಿ ಸಿದ್ಧಪಡಿಸಿದ 'ರವೀಂದ್ರ ಕಾವ್ಯಸಂಚಯ 2014ರಲ್ಲಿ ಪ್ರಕಟವಾಯಿತು.
ಈ ಕೃತಿಯು ಪ್ರಕಟವಾದ ಮೇಲೆ ರವೀಂದ್ರನಾಥ ಠಾಕೂರರ ಭಾಷಣಗಳು ಮತ್ತು ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಲು ಪ್ರಾರಂಭಿಸಿ 'ರವೀಂದ್ರ ಗದ್ಯ ಸಂಚಯ ಭಾಗ 1' ಮತ್ತು ಚೀನಾ ದೇಶದಲ್ಲಿ 1924ರ ಪ್ರವಾಸ ಕಾಲದಲ್ಲಿ ಮಾಡಿದ ಭಾಷಣಗಳ ಅನುವಾದ 'ನವಯುಗದ ಚೈತನ್ಯ' ಎಂಬ ಪುಸ್ತಕಗಳು ಪ್ರಕಟವಾದುವು.
ಇದರ ನಡುವೆ ಸಮಯ ದೊರೆತಾಗಲೆಲ್ಲ ರವೀಂದ್ರನಾಥ ಠಾಕೂರರು ತಮ್ಮ ಗೀತಾಂಜಲಿ ಹಾಗೂ ಇತರ ಬಂಗಾಲಿ ಭಾಷೆಯ ಕವನ ಸಂಗ್ರಹಗಳಿಂದ ಆಯ್ದ ಕವಿತೆಗಳನ್ನು 1912ರಲ್ಲಿ ಇಂಗ್ಲಿಷ್ ಭಾಷೆಗೆ ಸಂಗೀತಮಯ ಗದ್ಯರೂಪದಲ್ಲಿ ಅನುವಾದಿಸಿ ಯುರೋಪ್ ಖಂಡದ ಸಾಹಿತ್ಯಲೋಕದಲ್ಲಿ ಹೊಸ ಸಂಚಲನ ಮೂಡಿಸಲು ನಡೆದುಬಂದ ದಾರಿಯ ಹೆಜ್ಜೆಗುರುತುಗಳನ್ನು ಅಧ್ಯಯನ ಮಾಡುವ ಕಾರ್ಯವನ್ನು ಮುಂದುವರಿಸಿದ್ದೆ. ಅದರ ಫಲವಾಗಿ ಈಗ 'ಬಹುರೂಪಿ ಗೀತಾಂಜಲಿ' ಪ್ರಕಟವಾಗುತ್ತಿದೆ.
ಈ ಪುಸ್ತಕದ ಹಸ್ತಪ್ರತಿಯನ್ನು ಅಂದವಾಗಿ ಬೆರಳಚ್ಚು ಮಾಡಿಕೊಟ್ಟ ಮೈಸೂರಿನ ಶ್ರೀ ಎಂ.ಸಿ. ಆನಂದ್, ಇದನ್ನು ವಿನ್ಯಾಸ ಮಾಡಿದ ಶ್ರೀ ಜಿ.ವಿ. ಧನಂಜಯ ಹಾಗೂ ಈ ಪುಸ್ತಕದ ಪ್ರಕಟಣೆಯಲ್ಲಿ ಆಸಕ್ತಿವಹಿಸಿ ಪ್ರಕಟಣೆಗೆ ಕಾರಣರಾದ ಹಾಗೂ ಈ ಪುಸ್ತಕಕ್ಕೆ ಪೀಠಿಕೆಯನ್ನು ಬರೆದು ಅಂದಗೊಳಿಸದ ಪ್ರಾಧ್ಯಾಪಕ ಡಾ. ಕೆ.ಸಿ. ಶಿವಾರೆಡ್ಡಿ - ಇವರಿಗೆಲ್ಲ ನನ್ನ ಕೃತಜ್ಞತೆಗಳು.
- ಜಿ. ರಾಮನಾಥ ಭಟ್
“ಸಮಾಜೋ ಸಾಂಸ್ಕೃತಿಕ ಸಂರಚನೆಯನ್ನು ಆಳುತ್ತಿರುವ ಊಳಿಗಮಾನ್ಯ ಪದ್ಧತಿಯ ಪ್ರಜ್ಞೆ ಮತ್ತು ಅದರಲ್ಲಿ ಆಳವಾಗಿ ಬೇರೂರಿ...
"ಆ ಶಾಲೆಯ ಸಿಬ್ಬಂದಿಯೊಂದಿಗೆ ಅವಳು ತಾತ್ಕಾಲಿಕ ಸಂಬಂಧ ಉಂಟಾಗಿ, ಅದು ಊರಿನವರ ಮಾತುಕತೆಗೆ ಆಹಾರವಾಗುತ್ತದೆ. ಕಿಡಿಗ...
“ಈ ಕೃತಿಯಲ್ಲಿ ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ, ಸಂಗೀತ, ವ್ಯಕ್ತಿಚಿತ್ರ ಮೊದಲಾದ ವಿಷಯಗಳ...
©2025 Book Brahma Private Limited.