"ಭಾರತದ ಯಾವುದೇ ಭಾಗದ ಇತಿಹಾಸವಲ್ಲ. ನಮಗೆ ಯಾರಿಗೂ ಗೊತ್ತಿಲ್ಲದ ಮೂರುಸಾವಿರ ವರ್ಷಗಳಷ್ಟು ಹಿಂದಿನ ಪ್ರಾಚೀನ ಐಗುಪ್ತದ( ಇವತ್ತಿನ ಈಜಿಪ್ಟ್) ಇತಿಹಾಸ. ಜಗತ್ತಿನ ನಾಗರಿಕತೆಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಈಜಿಪ್ಟ್ ಎಂದು ನಾವು ಕೇಳಿದ್ದೇವೆ," ಎನ್ನುತ್ತಾರೆ ಪಾರ್ವತಿ ಜಿ.ಐತಾಳ್. ಅವರು ಶುಭದಾ ಎಚ್.ಎನ್ ಅವರ ‘ದೇವಿ ಕುರುಬತಿ’ ಕೃತಿ ಕುರಿತು ಬರೆದ ವಿಮರ್ಶೆ.
ಇದು ಒಂದು ಐತಿಹಾಸಿಕ ಕಥೆ ಅಧಾರಿತವಾದ ಅತ್ಯಂತ ವಿಶಿಷ್ಟ ಕೃತಿ. ಭಾರತದ ಯಾವುದೇ ಭಾಗದ ಇತಿಹಾಸವಲ್ಲ. ನಮಗೆ ಯಾರಿಗೂ ಗೊತ್ತಿಲ್ಲದ ಮೂರುಸಾವಿರ ವರ್ಷಗಳಷ್ಟು ಹಿಂದಿನ ಪ್ರಾಚೀನ ಐಗುಪ್ತದ( ಇವತ್ತಿನ ಈಜಿಪ್ಟ್) ಇತಿಹಾಸ. ಜಗತ್ತಿನ ನಾಗರಿಕತೆಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಈಜಿಪ್ಟ್ ಎಂದು ನಾವು ಕೇಳಿದ್ದೇವೆ. ಆದರೆ ಇಲ್ಲಿ ಈ ಕಾದಂಬರಿಯಲ್ಲಿರುವುದು ಸತ್ಯ ಘಟನೆಗಳ ವರದಿಗಳಿಂದ ತುಂಬಿದ ಇತಿಹಾಸವಲ್ಲ. ಮನುಷ್ಯನ ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಲೋಕಗಳ ರೋಮಾಂಚನಕಾರಿ ಚಿತ್ರಣವಿರುವ ಮನ ಸೆಳೆಯುವ ಕಥೆ.
ಪ್ರಜಾಪರಿಪಾಲಕ ರಾಜನೆಂದರೆ ಕೇವಲ ಲೌಕಿಕ ದೃಷ್ಟಿಯಿಂದ ಮಾತ್ರವಲ್ಲ, ಕುರಿಗಳನ್ನು ತನ್ನ ಮಕ್ಕಳಂತೆ ಪ್ರೀತಿಯಿಂದ ಪಾಲಿಸುವ ಕುರುಬನೆಂದು ಐಗುಪ್ತದ ಜನತೆ ನಂಬಿಕೊಂಡು ಬಂದಿದ್ದ ಕಾಲವದು. ಫೆರೋ ಅಹಮೋಸ್ ನ ಮರಣದ ನಂತರ ಆತನ ಪತ್ನಿ, ಚತುರಮತಿ ನುಕಿಯಾ ರಾಜಮಾತೆಯಾಗುವುದರೊಂದಿಗೆ ಅರಂಭವಾಗುವ ಕಥೆ ಆಕೆಯ ಸೊಸೆ ಆನೆಪ್ ಸಮರ್ಥ ಆಡಳಿತಗಾರ್ತಿಯಾಗಿ ಮುಂದುವರಿದು ಅಕೆಯ ಸಾವಿನೊಂದಿಗೆ ಕೊನೆಯಾಗುತ್ತದೆ. ನಮಗೆ ಅಪರಿಚಿತವಾಗಿರುವ ನೂರಾರು ಸಾಂಸ್ಕೃತಿಕ ವಿಚಾರಗಳು ಕಾದಂಬರಿಯ ಉದ್ದಕ್ಕೂ ಬಿತ್ತರಗೊಂಡಿವೆ. ಸುದ್ದರಕ್ತಗಳ ಬೆಸುಗೆಯ ಮೂಲಕ ಮಾತ್ರವೇ ದೇಶವನ್ನು ಆಳುವ ರಾಜಕುಮಾರನ ಜನನವಾಗಬೆಕು ಎನ್ನು ನಂಬಿಕೆ ಮತ್ತು ಅದಕ್ಕಾಗಿ ರಾಜಕುಮಾರ ತನ್ನ ಸಹೋದರಿಯನ್ನೇ ವಿವಾಹವಾಗಬೇಕು ಎಂಬ ನಿರ್ಬಂಧ ನಮಗೆ ವಿಚಿತ್ರವೆನ್ನಿಸುತ್ತದೆ. ಆ ಕಾರಣಕ್ಕಾಗಿ ನುಕಿಯಾಳ ಮಗ ಫೆರೋಪೇಪಿಯು ನುಕಿಯಾಳ ಸವತಿಯ ಮಗಳು ಪೇಪಿಗಿಂತ ದೊಡ್ಡವಳಾದ ಆನೆಪ್ ಳನ್ನು ಮಗನಿಗೆ ವಿವಾಹ ಮಾಡಿಸುತ್ತಾಳೆ. ಇದು ಇಬ್ಬರಿಗೂ ಇಷ್ಟವಿಲ್ಲದ್ದರಿಂದ ದಾಂಪತ್ಯವು ಅನೇಕ ಅಡೆತಡೆಗಳನ್ನು ಎದುರಿಸ ಬೇಕಾಗುತ್ತದೆ. ಅವತಿಬ್ಬರ ನಡುವಿನ ಸಮಾಗಮಕ್ಕೆ ರಾಜಮಾತೆ ತುಂಬಾ ಪ್ರಯತ್ನಿಸುತ್ತಾಳಾದರೂ ಕೊನೆಗೂ ಆನೆಪ್ ತಿಳಿಯದೇ ಮಾಡಿದ ಅಚಾತುರ್ಯದಿಂದಾಗಿ ಮಗು ಹುಟ್ಟುವುದು ಒಬ್ಬ ಕಲಾವಿದನ ಜತೆಗಿನ ಸಮಾಗಮದಿಂದ. ಇದು ಕೊನೆಯ ತನಕವೂ ರಹಸ್ಯವಾಗಿ ಉಳಿದರೂ ಆನೆಪ್ ಳನ್ನು ಅಪರಾಧಿ ಭಾವ ಸದಾ ಕಾಡುತ್ತದೆ.
ಆಡಳಿತ ಸಾಮರ್ಥ್ಯ, ಬುದ್ಧಿವಂತಿಕೆ, ಮತ್ತು ದೂರದರ್ಶಿತ್ವಗಳು ರಾಜಮಾತೆ ನುಕಿಯಾಳಲ್ಲೂ ಬಹಳಷ್ಟು ಇದ್ದರೂ ಎಲ್ಲವೂ ಸಾಕಾರಗೊಳ್ಳುವುದು ಅನೆಪ್ ಳಲ್ಲಿ. ದೇಶದಲ್ಲಿ ಹಿಂದಿನ ಫೆರೋಗಳ ಕಾಲದಲ್ಲಿ ತುಂಬಿ ಹೋಗಿದ್ದ ಎಲ್ಲಾ ಅನ್ಯಾಯ, ಅನಾಚಾರ, ಜನಸಾಮಾನ್ಯರ ಸಂಕಷ್ಟಗಳು, ಬಡವರ ಶೋಷಣೆ, ಅನಗತ್ಯ ತೆರಿಗೆ, ಧಾರ್ಮಿಕತೆಯ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿದ್ದ ಭ್ರಷ್ಟಾಚಾರ-ಸುಲಿಗೆ-ಎಲ್ಲವನ್ನೂ ತನ್ನ ಸೂಕ್ಷ್ಮ ಕಣ್ಣುಗಳಿಂದ ವಿಕ್ಷಿಸಿದ ಆನೆಪ್ ತನ್ನ ಆಡಳಿತ ಕಾಲದಲ್ಲಿ ಎಲ್ಲವನ್ನೂ ಸರಿಪಡಿಸಿ ದೇಶದಲ್ಲಿ ಸುವರ್ಣ ಯುಗಕ್ಕೆ ನಾಂದಿ ಹಾಡುತ್ತಾಳೆ. ಜೀವನದಿಯಾಗಿದ್ದ ನೀಲನದಿಗೆ ಅಣೆಕಟ್ಟು ಕಟ್ಟುವ, ಮಾತ್ರವಲ್ಲದೆ ಆ ಕಾರಣಕ್ಕಾಗಿ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ಪುನರ್ವಸತಿಯನ್ನು ಕಲ್ಪಿಸಿ ಕೊಡುವ ಯೋಜನೆ ಹಾಕುವ ಪರಿ ಅತ್ಯಂತ ಅದ್ಭುವೆನ್ನಿಸುತ್ತದೆ. ಅಕೆ ಇಷ್ಟರ ಮಟ್ಟಿಗೆ ಬಡವರ ಮತ್ತು ಶೋಷಿತರ ಪರವಾಗಿ ನಿಲ್ಲುವುದರಿಂದಲೇ ಜನರಿಂದ 'ದೇವಿ ಕುರುಬತಿ 'ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಾಳೆ. ಕೊನೆಯಲ್ಲಿ ತನ್ನ ರಾಜಕೀಯ ಉದ್ದೇಶಕ್ಕೋಸ್ಕರ ಮಾಡಿದ ಪರ್ಯಟನೆಯ ಸಂದರ್ಭದಲ್ಲಿ ನದಿಗೆ ಬಿದ್ದ ಒಬ್ಬ ಸಾಮಾನ್ಯನನ್ನು ರಕ್ಷಿಸಲೆಂದು ನೀರಿಗೆ ಹಾರಿ ಅಕೆ ಪ್ರಾಣ ಕಳೆದುಕೊಳ್ಳುವುದು ಆತ್ಮಹತ್ಯೆಗೆ ಸಮಾನವಾಗುವ ಒಂದು ದುರಂತ. ಮಗನ ವಿಚಾರದಲ್ಲಿ ಆಕೆಯ ಒಳಗನ್ನು ತುಂಬಿಕೊಂಡಿದ್ದ ಅಪರಾದಿ ಭಾವವೇ ಇದಕ್ಕೆ ಕಾರಣವಾಗಿರಬಹುದು.
ಇಡೀ ಕಾದಂಬರಿಯು ಮೂರು ಸಾವಿರ ವರ್ಷಗಳ ಹಿಂದೆ ಇತಿಹಾಸದ ಗರ್ಭದೊಳಗೆ ಹೂತುಹೋದ ಅನೇಕ ವಿಚಾರಗಳನ್ನು ಮತ್ತೆ ಬೆಳಕಿಗೆ ತಂದು ಹೊಸದಾಗಿ ನಮಗೆ ಕಟ್ಟಿಕೊಡುವ ಶ್ಲಾಘನೀಯ ಕೆಲಸವನ್ನು ಮಾಡುತ್ತದೆ. ಇತಿಹಾಸದ ಓದುಗರಿಗೆ ಚಿರಪರಿಚಿತವಾದ ಗೋರಿಮನೆ(ಪಿರಮಿಡ್ )ಗಳ ರಚನೆಯ ಹಿನ್ನೆಲೆ ಇಲ್ಲಿ ಢಾಳಾಗಿ ಚಿತ್ರಿತವಾಗಿದೆ. ಪ್ರತಿಷ್ಠಿತ ವ್ಯಕ್ತಿಗಳು ಬದುಕಿರುವಾಗಲೇ ತಮಗಾಗಿ ಕಟ್ಟಬೇಕಾದ ಗೋರಿಮನೆಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ, ಅದಕ್ಕಾಗಿ ಎಷ್ಟು ಧಾರಾಳವಾಗಿ ಖರ್ಚು ಮಾಡುತ್ತಾರೆ ಅನ್ನುವುದನ್ನು ನಾವು ಇಲ್ಲಿ ನೋಡುತ್ತೇವೆ. ರಾಜರುಗಳು ಮತ್ತು ಧಾರ್ಮಿಕ ಗುರುಗಳ ಗೋರಿಮನೆಗಳಿಗಾಗಿ ಜನಸಾಮಾನ್ಯರ ಹಣಮತ್ತು ಅವರು ಬೆವರು ಸುರಿಸಿ ಸಂಪಾದಿಸಿದ ವಸ್ತುಗಳು ಎಷ್ಟು ಲೂಟಿಯಾಗುತ್ತವೆ ಮತ್ತು ಅವುಗಳನ್ನು ಕಟ್ಟಲು ಬಡ ಕೂಲಿ ಕಾರ್ಮಿಕರು ಎಷ್ಟೊಂದು ರಕ್ತ ಸುರಿಸಬೇಕಾಗುತ್ತದೆ ಅನ್ನುವುದನ್ನು ನೋಡಿದಾಗ ಕರುಳು ಕಿವಿಚಿದಂತಾಗುತ್ತದೆ. ಅದರೆ ಆನೆಪ್ ಮಾತ್ರ ತನಗೆ ಅತ್ಯಂತ ಸರಳವಾದ ಗೋರಿಮನೆಯನ್ನು ಕಟ್ಟಿಕೊಂಡು ಮಹಾನ್ ಮಾದರಿ ವ್ಯಕ್ತಿಯಾಗುತ್ತಾಳೆ.
ಹಳೆಯ ಕಾಲಕ್ಕೆ ಹೋಗುವಾಗ ಭಾಷೆಯ ಬಳಕೆ ಸುಲಭವಲ್ಲ. ಅದು ನಮ್ಮದಲ್ಲದ ಒಂದು ಅಪರಿಚಿತ ಸಂಸ್ಕೃತಿಯ ಬಗ್ಗೆ ಬರೆಯುವುದು ಹರಸಾಹಸವೇ ಸರಿ. ಅಲ್ಲಿ ಉಪಯೋಗಿಸುತ್ತಿದ್ದ ಅನೇಕ ಪದಗಳ ಅರ್ಥವನ್ನು ಲೇಖಕಿ ಇಲ್ಲಿ ಪ್ರತ್ಯೇಕವಾಗಿ ನೀಡಿದ್ದಾರೆ. ಕಥನ ಶೈಲಿಯೂ ಸುಂದರವಾಗಿದೆ. (ಅಲ್ಲಲ್ಲಿ ಕಾಗುಣಿತ ಮತ್ತು ಮುದ್ರಣ ದೋಷಗಳು ಮಾತ್ರ ಉಳಿದುಕೊಂಡಿವೆ. ಮುಂದಿನ ಮುದ್ರಣಗಳಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ.)
- ಪಾರ್ವತಿ ಜಿ.ಐತಾಳ್
"ಮಹಿಳಾ ನಾಗಾ ಸಾಧುಗಳು ಜೀವಿಸಿರುವಾಗಲೇ ಸ್ವತಃ ತನ್ನ ಪಿಂಡದಾನವನ್ನು ಕೊಡಬೇಕು. ಮುಂಡನ ಮಾಡಿಸಿಕೊಳ್ಳಬೇಕು. ನದಿಯಲ...
"ಆತ್ಮ-ಪರಮಾತ್ಮ, ಭೂತ-ಪ್ರೇತ, ಧರ್ಮ-ಅಧರ್ಮಗಳಿಗೆ ಹೆದರಿ ಬದುಕುವುದು ಸರಿಯಲ್ಲ ಎನ್ನುತ್ತಾರೆ. ಅಂಧಶ್ರದ್ಧೆಯಿಂದ ಮ...
"ಪ್ರಪಂಚದಾದಂತ್ಯ ರೈತರು, ಸಾಮಾನ್ಯ ಜನರು, ಹೆಂಗಸರು, ಮಕ್ಕಳು ಹೇಗೆ ತಮ್ಮದಲ್ಲದ ಯುದ್ಧದಂತಹ, ಕ್ಷಾಮದಂತಹ ಸದಾ ಕಾಡ...
©2024 Book Brahma Private Limited.