Date: 17-03-2021
Location: .
ಇಸ್ರೇಲಿಯ ಧಾರ್ಮಿಕ ಉಗ್ರವಾದ , ಜನಾಂಗೀಯವಾದ, ಅಲ್ಲಿಯ ಹೆಣ್ಣುಮಕ್ಕಳ ಮೇಲಿನ ಕ್ರೌರ್ಯ, ತಮ್ಮ ನೆಲದಲ್ಲಿದ್ದೂ ಪರಕೀಯ ಭಾವ ಅನುಭವಿಸುವ ಪ್ಯಾಲಿಸ್ತೀನಿಯರ ಹೀನ ನೀತಿ, ನೈತಿಕ ಪೊಲೀಸ್ ಗಿರಿ ಹೀಗೆ ಹತ್ತು ಹಲವು ಅಂಶಗಳನ್ನು ಒಳಗೊಂಡ ಕೃತಿ- ಪೋಸ್ಟ್ ಬಾಕ್ಸ್ ನಂ 9. ಲೇಖಕ ಲಕ್ಷ್ಮೀಪತಿ ಕೋಲಾರ ಅವರ ಈ ನಾಟಕ ಕೃತಿಯನ್ನು ಲೇಖಕ -ವಿಮರ್ಶಕ ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.
ಲಕ್ಷ್ಮೀಪತಿ ಕೋಲಾರ ಅವರ ಪೋಸ್ಟ್ ಬಾಕ್ಸ್ ನಂ.9 ನಾಟಕ ಶ್ರುಹರ್‍ದ್ ಯೆಲ್ ಮುರಾಯ್, ಕೈಫಾ ಅಫೀಫೀ ಮತ್ತು ಓರ್‍ವ ಶಾಲಾ ಬಾಲಕಿ ಹೀಗೆ ಇಸ್ರೇಲಿನ ಮೂವರು ಹೆಣ್ಣುಮಕ್ಕಳ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಆಧರಿಸಿದ ಒಂದು ನಾಟಕ. ಜೊತೆಗೆ ಇಸ್ರೇಲಿ ಜನಾಂಗೀಯವಾದ, ಪವಿತ್ರ ಸೆಟ್ಲ್‌ಮೆಂಟ್ ಯೋಜನೆ, ತನ್ನ ನೆಲದಲ್ಲಿದ್ದೂ ಪರಕೀಯತೆ ಅನುಭವಿಸುವ ಪ್ಯಾಲೆಸ್ತೀನಿನ ರಾಷ್ಟ್ರಹೀನ ಸ್ಥಿತಿ, ಪ್ಯಾಲೆಸ್ತೀನಿ ಹೆಣ್ಣುಮಕ್ಕಳ ಮೇಲಿನ ಇಸ್ರೇಲಿ ಮಿಲಿಶಿಯಾ ಗಂಡು ನಾಯಿಗಳ ಕ್ರೌರ್‍ಯ, ನೈತಿಕ ಪೊಲೀಸ್ ಗಿರಿ ಇತ್ಯಾದಿಗಳನ್ನು ಹೇಳುವ ನಾಟಕ. ಕೈಫಾ ಅಫೀಫೀಯನ್ನೆ ಇಲ್ಲಿ ಮುಖ್ಯ ಪಾತ್ರವನ್ನಾಗಿ ಗ್ರಹಿಸಲಾಗಿದೆ. ಇದನ್ನು ಸರಳವಾಗಿ ತಾ. ಶ್ರೀ. ಗುರುರಾಜ್ ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.
ಯಾವುದೇ ಒಂದು ನಾಟಕ ತಾನು ಯಶಸ್ವಿ ಅನ್ನಿಸಿಕೊಳ್ಳುವುದು ಅದರ ಪ್ರಯೋಗಗಳ ಸಂಖ್ಯೆಯಿಂದ ಮಾತ್ರವಲ್ಲ; ವಸ್ತುವಿನ ಹೊಸತನದಿಂದ ಮತ್ತು ಅದರ ಕಟ್ಟಾಣ ಕೆಯ ಹೊಸತನದಿಂದ ಕೂಡ. ನಾಟಕದ ಕಾವ್ಯಪ್ರತೀಕಗಳು, ದೃಶ್ಯರೂಪಕಗಳು, ಸಾಂಕೇತಿಕ ನಿರೂಪಣಾ ತಂತ್ರಗಳು ನಾಟಕದ ತೂಕವನ್ನು ಹೆಚ್ಚಿಸುತ್ತವೆ. ನಾಟಕಕಾರ ತಾನು ಹೇಳಬೇಕಾದ ಸಂಗತಿಗಳನ್ನು ರೂಪಕಗಳಲ್ಲಿ ಹೇಳಲು ತೊಡಗಿದಾಗ ನಾಟಕ ತನ್ನ ಕಾಲ ಮತ್ತು ಸ್ಥಳಗಳ ಮಿತಿಗಳನ್ನು ದಾಟಿಬಿಡುತ್ತದೆ. ಅಂತಹ ಭಿನ್ನ ನಿರೂಪಣಾ ಕ್ರಮ ಮತ್ತು ಕಾಲ, ಸ್ಥಳಗಳನ್ನು ಮುರಿಯುವ ನಾಟಕ ಇದಾಗಿದೆ.
ನಾಟಕದ ಮೊದಲ ಮತ್ತು ಎರಡನೆಯ ದೃಶ್ಯಗಳು ನಾಟಕದ ತಳಪಾಯದ ರೀತಿಯ ದೃಶ್ಯಗಳು. ಇಲ್ಲಿನ ಮೊದಲ ದೃಶ್ಯದಲ್ಲಿ ಮಲೆಮಾದಪ್ಪನ ಗುಡ್ಡ ಮಾದಯ್ಯನ ಪಾತ್ರ ಬರುತ್ತದೆ. ಆತ ಕಲಾಪ್ರಸ್ತುತಿಗೆ ಇಸ್ರೇಲಿಗೆ ಬಂದವನು; ಅಲ್ಲಿನ ಮಿಲಿಟರಿ ಕಾವಲುಗಾರರರಿಂದ ವೆಸ್ಟ್ ಬ್ಯಾಂಕ್ ಗೋಡೆಯ ಆಚೆಗೆ ಎಸೆಯಲ್ಪಡುತ್ತಾನೆ. ಅವನ ಜೊತೆಗೆ ಅಲ್ಲಿನ ಗೋಡೆಯಿಂದಲೆ ನಾಲ್ಕು ಗೋಡೆ ಪಾತ್ರಧಾರಿಗಳು ಎದ್ದು ಬಂದು ಮೇಳವಾಗಿ ಸೇರಿಕೊಳ್ಳುತ್ತಾರೆ. ಆನಂತರ ಹಾಡುಗಾರ ಮಾದಯ್ಯ ಬಿಳಿಗಿರಿರಂಗನ ಬೆಟ್ಟದ ಗುಡಿಯಲ್ಲಿ ಕುಳಿತ ಶಿವನನ್ನು ದಾಸಯ್ಯನೊಬ್ಬ ಒಕ್ಕಲೆಬ್ಬಿಸಿದ ಕಥೆಯನ್ನು ಹಾಡುತ್ತಾನೆ. ಆ ಕಥೆ ಸಂಕ್ಶಿಪ್ತವಾಗಿ ಹೀಗಿದೆ:
ಬೆಟ್ಟ ಹತ್ತಿ ಬಂದ ದಾಸಯ್ಯನಿಗೆ ಬಿಸಿಲು ತಡೆಯಲು ಆಗದೆ, ಅಲ್ಲಿ ಗುಡಿಯ ಒಳಗೆ ಕುಳಿತ ಶಿವನನ್ನು ನನಗೂ ಒಂದಿಶ್ಟು ಜಾಗ ಕೊಡು ಎಂದು ಕೇಳುತ್ತಾನೆ. ಆಗ ದಾಸಯ್ಯನನ್ನು ಶಿವ ಒಳಗೆ ಕರೆಯುತ್ತಾನೆ. ದಾಸಯ್ಯ ತನ್ನ ಶಂಖ ಜಾಗಟೆ ಅಲ್ಲಿ ಇಟ್ಟಾಗ ಗುಡಿಯ ಮೂರಂಕಣ ತುಂಬಿ ಹೋಗುತ್ತದೆ. ನನ್ನ ಬವನಾಸಿ ಎಲ್ಲಿಡಲಿ ಎಂದು ದಾಸಯ್ಯ ಕೇಳಿದಾಗ ಇಲ್ಲೆ ಪಕ್ಕದಲ್ಲೆ ಇಡು ಎಂದು ಶಿವ ಹೇಳುತ್ತಾನೆ. ಅದನ್ನೂ ಇಟ್ಟಾಗ ಇನ್ನುಳಿದ ಮೂರಂಕಣವೂ ತುಂಬಿ ಹೋಗುತ್ತದೆ. ಹೊರಗೇ ನಿಂತ ದಾಸಯ್ಯ ನಾನೆಲ್ಲಿ ಬಂದು ಕೂರಲಿ ಎನ್ನುತ್ತಾನೆ. ಶಿವ ಹೊರಗೆ ಬಂದು ಸ್ವಲ್ಪ ಹೊತ್ತು ಒಳಗೆ ವಿಶ್ರಾಂತಿ ತೆಗೆದುಕೊಳ್ಳಲು ದಾಸಯ್ಯನಿಗೆ ಅವಕಾಶ ಮಾಡಿಕೊಡುತ್ತಾನೆ. ಒಳಗೆ ಹೋದ ದಾಸಯ್ಯ ಶಿವನ ಜಾಗದಲ್ಲೆ ಕೂರುತ್ತಾನೆ. ತನ್ನ ಗುಡಿಯಲ್ಲಿ ತನಗೇ ಶಿವನಿಗೆ ಜಾಗವಿಲ್ಲದಾಗುತ್ತದೆ. ಶಿವನು ಏ ದಾಸಯ್ಯ ಹೊರಗೆ ಬಾರಯ್ಯ ಅಂದಾಗ; ನಾನು ದಾಸಯ್ಯ ಅಲ್ಲ ರಂಗಯ್ಯ, ಸ್ವಲ್ಪ ಗೌರವದಿಂದ ಮಾತಾಡು ಎಂದು ಉತ್ತರ ಕೊಡುತ್ತಾನೆ. ಆಗಲಿ ರಂಗಯ್ಯನವರೆ ನನಗೇ ಜಾಗ ಇಲ್ಲವಲ್ಲ; ನಾನೆಲ್ಲಿ ಹೋಗಲಿ ಎಂದು ಆಗ ಶಿವ ಆಕ್ಶೇಪಿಸುತ್ತಾನೆ. ಅದಕ್ಕೆ ಆ ದಾಸಯ್ಯ ಇಲ್ಲಿಂದ ಮೂರು ಮೈಲಿ ಆಚೆ ಒಂದು ಪಾಳು ಗುಡಿ ಇದೆ; ಬೇಕಾದರೆ ಅದನ್ನು ರಿಪೇರಿ ಮಾಡಿಸಿಕೊಂಡು ಅಲ್ಲಿರು ಅನ್ನುತ್ತಾನೆ. ದಾಸಯ್ಯನು ಶಿವನ ಗುಡಿಗೆ ಬಂದು ರಂಗಯ್ಯನಾಗುವ ಈ ಪ್ರಸಂಗ ಶೈವ ವೈಷ್ಣವ ಸಂಘರ್ಷವನ್ನು ಹೇಳುವ ಕಥನವಾಗಿದೆ.
ಪ್ಯಾಲೆಸ್ತೀನಿನ ನೆಲವನ್ನು ಇಸ್ರೇಲಿಗಳು ಆಕ್ರಮಿಸಿ, ಅವರ ನೆಲಕ್ಕೇ ಗೋಡೆ ಹಾಕಿ, ಅವರನ್ನೆ ಅಲ್ಲಿಂದ ಒಕ್ಕಲೆಬ್ಬಿಸಿ, ಅವರು ಪ್ರತಿಭಟಿಸಿದಾಗ ಇದು ನಮ್ಮ ರಾಷ್ಟ್ರೀಯ ಭದ್ರತೆಗೆ ಒದಗಿದ ಅಪಾಯ ಎಂದು ಹುಯಿಲೆಬ್ಬಿಸಿ, ಅವರ ಪ್ರತಿಭಟನೆಯನ್ನೆ ಭಯೋತ್ಪಾದನೆಯೆಂದು ಬಿಂಬಿಸಿ, ಪ್ಯಾಲೆಸ್ತೀನೀಯರನ್ನು ಅಂತಾರಾಷ್ಟ್ರೀಯವಾಗಿ ರಾಕ್ಷಸೀಕರಿಸುವ ಕೆಲಸವನ್ನು ಮಾಡಿದ ಇಸ್ರೇಲಿಗಳ ಒಕ್ಕಲೆಬ್ಬಿಸುವ ಹುನ್ನಾರಕ್ಕೆ ಇಲ್ಲಿ ದಾಸಯ್ಯನ ಸ್ಥಳೀಯವಾದ ಪ್ರಸಂಗವನ್ನು ಎದುರು ನಿಲ್ಲಿಸಲಾಗಿದೆ. ಯಹೂದಿ ಅರಬ್ ಮತ್ತು ಶೈವ ವೈಷ್ಣವ ಸಂಘರ್ಷಗಳ ಸಮೀಕರಣವನ್ನು ಇಲ್ಲಿ ಮಾಡಲಾಗಿದೆ. ಆ ಮೂಲಕ ಕಾಲ, ಸ್ಥಳಗಳನ್ನು ಇಲ್ಲಿ ಮುರಿಯಲಾಗಿದೆ. ಸ್ಥಳೀಯ ಮತ್ತು ಪರಕೀಯವೆಂಬ ಬೈನರಿಗಳನ್ನು ಮುರಿಯಲಾಗಿದೆ. ಪಾಂಥಿಕ, ಜನಾಂಗೀಯ, ಜಾತೀಯ, ಪ್ರಾದೇಶಿಕ ಸಂಘರ್ಷಗಳು ಅನಾದಿ ಮತ್ತು ವೈಶ್ವಿಕ ಎಂಬ ಧ್ವನಿಯನ್ನು ಈ ಮೂಲಕ ಹೊರಡಿಸಲಾಗಿದೆ.
ಅನ್ಯ ಎನ್ನಿಸಿಬಿಡಬಹುದಾದ ವಸ್ತುವನ್ನು ಆಯ್ಕೆ ಮಾಡಿಕೊಂಡಾಗ ನಾಟಕಕಾರನಿಗೆ ಇಂತಹ ಸಂವಾದಿ ದೃಶ್ಯಗಳನ್ನು ಹುಡುಕಿ ಹೊಂದಿಸಿಕೊಳ್ಳುವ ಮತ್ತು ಸೃಷ್ಟಿಸಿಕೊಳ್ಳುವ ಒತ್ತಡಗಳು ಉಂಟಾಗುತ್ತವೆ. ಇಂತಹ ಒತ್ತಡವನ್ನು ಲಕ್ಶ್ಮೀಪತಿ ಬಹಳ ಚೆನ್ನಾಗಿ ಈ ವಿಶುವಲ್ ಮೆಟಫರ್ ಹುಡುಕಿಕೊಳ್ಳುವ ಮೂಲಕ ಇಲ್ಲಿ ನಿರ್‍ವಹಿಸಿದ್ದಾರೆ. ಇದು ನಾಟಕದ ಕಟ್ಟಾಣ ಕೆಯ ತಂತ್ರದ ಸೃಷ್ಟಿಯೂ ಹೌದು. ಸಾಂಸ್ಕೃತಿಕವಾಗಿ ಅನನ್ಯವಾದ ಇಂತಹ ದೃಶ್ಯಗಳ ರೂಪಕ ಸಾಧ್ಯತೆಯನ್ನು ಅನುವಾದ ಮಾಡುವುದು ಸವಾಲಿನ ಕೆಲಸ. ಕನ್ನಡ ಗೊತ್ತಿಲ್ಲದ ಇಂಗ್ಲಿಷಿನ ಟಾರ್‍ಗೆಟ್ ಆಡಿಯೆನ್ಸ್‌ಗೆ ಇದನ್ನು ಅನುವಾದಿಸಿದಾಗ ಅದು ದಾಸಯ್ಯನ ಹೆಸರು ರಂಗಯ್ಯ ಎಂದು ಕೇವಲ ಹೆಸರು ಬದಲಾಗುವ ದೃಶ್ಯ ಆಗಿಬಿಡುವ ಸಾಧ್ಯತೆ ಇರುತ್ತದೆ.
ಇಲ್ಲಿನ ಮೂರನೆ ದೃಶ್ಯದಲ್ಲಿ ಕೈಫಾ ಅಫೀಫೀ ಆಲಿವ್ ತೋಟದಲ್ಲಿ ಜಿನ್ ಗಾಬ್ಲಿನ್ ಅನ್ನು ಮುಖಾಮುಖಿ ಆಗುವ ಪ್ರಸಂಗವಿದೆ. ಆ ಪಿಶಾಚಿಯ ಹತ್ತಿರ ಅದರ ಮನೆಯ ಬೀಗದ ಕೈ ಇದೆ. ಆದರೆ ಮನೆಯೇ ಇಲ್ಲ. ಅದು ಇಸ್ರೇಲಿಗರಿಂದ ನಾಶವಾಗಿದೆ. ಬೀಗದ ಕೈ ಹಿಡಿದುಕೊಂಡು ಇಲ್ಲದಿರುವ ತನ್ನ ಮನೆಯನ್ನು ಪಿಶಾಚಿ ಹುಡುಕುತ್ತ ಇರುತ್ತದೆ. ಜಿನ್ ಪಿಶಾಚಿಯನ್ನು ನೋಡಿದರೆ ಸಾಕು ಎಲ್ಲರು ಹೆದರುವ ಸ್ಥಿತಿ ಇರುವಾಗ ಈ ಜಿನ್ ಪಿಶಾಚಿಯೆ ಇಸ್ರೇಲಿ ಮಿಲಿಟರಿ ಹೆಸರು ಕೇಳಿ ಹೆದರಿ ಓಡಿಹೋಗುತ್ತದೆ. ಯಾಕೆಂದರೆ ಈ ಪಿಶಾಚಿ ಇಸ್ರೇಲಿ ಮಿಲಿಶಿಯಾ ಕ್ರೌರ್‍ಯಕ್ಕೆ ತುತ್ತಾದ ಪ್ಯಾಲೆಸ್ತೀನಿ ಹೆಂಗಸೇ ಆಗಿರುತ್ತದೆ. ಈ ದೃಶ್ಯ ಕೂಡ ಇಸ್ರೇಲಿ ಕ್ರೌರ್‍ಯವನ್ನು ಓದುಗ/ನೊಡುಗರಿಗೆ ಪರಿಚಯಿಸುವ ಒಂದು ರೂಪಕ. ಒಕ್ಕಲೆಬ್ಬಿಸುವ ರಾಜಕಾರಣದ ರೂಪಕ. ಇದೇ ಧಾಟಿಯಲ್ಲಿ ನಾಟಕ ಹಲವು ದೃಶ್ಯರೂಪಕಗಳ ಮೂಲಕ ಮಾತನಾಡುತ್ತದೆ.
ಹಿಟ್ಲರ್‌ನಿಂದ ಸಬ್‌ಹ್ಯೂಮನ್ಸ್ ಎಂದು ಕರೆಸಿಕೊಂಡ; ಅಸಹನೀಯ ಹಿಂಸೆಗೆ ಗುರಿಯಾದ ಯಹೂದಿಗಳೆ ಹಿಟ್ಲರ್‌ನನ್ನೂ ಮೀರಿಸುವ ಹಿಂಸೆಗೆ ಪ್ಯಾಲೆಸ್ತೀನೀಯರನ್ನು ಗುರಿಮಾಡುವುದು ಇತಿಹಾಸದ ಒಂದು ವ್ಯಂಗ್ಯ. ಕೈಫಾ ಅಫೀಫೀ ಇಲ್ಲಿ ಹಿಟ್ಲರನ ಕಾಲದ ಯಹೂದಿ ಹುಡುಗಿ ಅನಾ ಫ್ರಾಂಕ್‌ಳನ್ನೆ ನೆನಪಿಸುತ್ತಾಳೆ! ತಾವೇ ಕ್ರೌರ್‍ಯಕ್ಕೆ ಗುರಿಯಾದ ಚರಿತ್ರೆಯಿಂದ ಪಾಠ ಕಲಿಯದ ಇಸ್ರೇಲಿ ಯಹೂದಿಗಳು ಪ್ಯಾಲೆಸ್ತೀನಿಯರ ಮೇಲೆ ಕ್ರೌರ್‍ಯ ತೋರುವುದು ದುರಂತವೇ ಸರಿ. ಪೂರ್‍ವೀಕರಟ್ಟೀಗೆ ಕನಸು ಕೀಲಿಗಳೊಟ್ಟಿಗೆ... ಎಂಬ ಮಾದಯ್ಯನ ಹಾಡು ಈ ನಾಟಕದಲ್ಲಿ ಮತ್ತೆ ಮತ್ತೆ ಬರುತ್ತದೆ. ನಾಟಕದ ಸಿಗ್ನೇಚರ್ ಸಾಂಗ್ ಇದು. ನಾವು ಸದಾ ನಮ್ಮ ನಮ್ಮ ಪೂರ್‍ವಿಕರ ಸಹಬಾಳ್ವೆಯ ದಾರಿಗಳ ಕಡೆಗೆ ಯಾನಿಸುತ್ತಿರಬೇಕು; ಇತಿಹಾಸದಿಂದ ನಾವು ಪಾಠ ಕಲಿಯಬಹುದಾದ ಒಂದು ಸೂಕ್ತ ಮಾರ್ಗವಿದು ಎಂಬ ತತ್ವವನ್ನು ಈ ಹಾಡು ಮಂಡಿಸುತ್ತದೆ. ಮಾನಕ ಭಾಷೆಯಲ್ಲಿ ನಾಟಕ ಇದ್ದರೂ ಹಾಡುಗಾರ ಮಾದಯ್ಯ ನಾಟಕದ ನಿರೂಪಕ ಆಗಿರುವುದರಿಂದ ಈ ನಾಟಕಕ್ಕೆ ಸಹಜವಾಗಿ ಒಂದು ಮ್ಯೂಸಿಕ್ಯಾಲಿಟಿ ಮತ್ತು ಕಲೋಕ್ವಿಯಾಲಿಟಿ ಒದಗಿಬಂದಿದೆ. ಅಷ್ಟೆ ಅಲ್ಲ, ಇದೊಂದು ಕಾವ್ಯನಾಟಕ ಆಗಿ ಬೆಳೆದಿದೆ. ಈ ಗೀತಗುಣ, ಆಡುನುಡಿಯ ಸೊಗಡು ಮತ್ತು ಕಾವ್ಯಾಂಶ ಇವೆಲ್ಲವನ್ನು ಅನುವಾದಿಸುವುದು ಕೂಡ ಸವಾಲಿನ ಕೆಲಸವೆ. ಅಂತಹ ಕೆಲಸವನ್ನು ಗುರುರಾಜ್ ಇಲ್ಲಿ ತಕ್ಕಮಟ್ಟಿಗೆ ಎದುರಿಸಿ ಯಶಸ್ವಿಯಾಗಿದ್ದಾರೆ.
ಈ ನಾಟಕದಲ್ಲಿ ಅಲ್ಲಲ್ಲಿ ಕತೆಯ ಒಳಗಿನಿಂದಲೆ ಅದರ ಒಡಲನ್ನು ದಾಟಿದ ಸಾಮಾಜಿಕ ಒಳನೋಟಗಳು ಪಂಚಿಂಗ್ ಡೈಲಾಗ್‌ಗಳ ರೀತಿಯಲ್ಲಿ ಎದ್ದು ಬರುತ್ತವೆ. ಮೆಸೇಜಿಂಗ್ ಡೈಲಾಗ್‌ಗಳ ರೀತಿ ಇವು ಕಾಣುತ್ತಿದ್ದರೂ, ಕೆಲವೊಮ್ಮೆ ರಂಜನೆಯನ್ನು ಅವು ನೀಡುವಂತೆ ಇದ್ದರೂ ಅವು ಆಳದಲ್ಲಿ ನಾಟಕಕಥನ ಹುಟ್ಟಿಸುವ ದರ್ಶನದ ತುಣುಕುಗಳೆ ಆಗಿರುತ್ತವೆ. ಅನುವಾದದಲ್ಲಿ ಇಂತಹ ಪಂಚ್‌ಗಳನ್ನು ಉಳಿಸಿಕೊಳ್ಳುವುದು ಮತ್ತು ರಂಜನೆಮಿಶ್ರಿತ ಮಾತುಗಳ ತತ್ವಜ್ಞಾನೀಯ ಸಾಧ್ಯತೆಗಳನ್ನು ಟಾರ್‍ಗೆಟ್ ಭಾಷೆಗೆ ದಾಟಿಸುವುದು ಕೂಡ ಒಂದು ಸವಾಲು. ಇಂತಹ ಸವಾಲನ್ನೂ ಅನುವಾದಕರು ಚೆನ್ನಾಗಿ ನಿಭಾಯಿಸಿದ್ದಾರೆ.
ಲಂಡನ್ನಿನ ಚಿತ್ರಕಾರ ಬಾಂಕ್ಸಿ ವೆಸ್ಟ್ ಬ್ಯಾಂಕ್ ಗೋಡೆಯ ಮೇಲೆ ಚಿತ್ರ ಬರೆದು ಪ್ರತಿರೋಧಿಸುವ ದೃಶ್ಯದಲ್ಲಿ ಆತ ಕೈಫಾ ಜೊತೆ ಮಾತನಾಡುವ ಪ್ರಸಂಗವಿದೆ. ಹಾಗೆಯೆ ಜೈಲಿನ ವಿಚಾರಣಾ ದೃಶ್ಯ ಮತ್ತು ಇಸ್ರೇಲಿನ ಚೆಕ್ ಪಾಯಿಂಟ್ ದೃಶ್ಯಗಳೂ ಇಲ್ಲಿ ಬರುತ್ತವೆ. ಹೀಗೆ ನಾಟಕ ಕೆಲವು ಸ್ವತಂತ್ರವಾಗಿ ನಿರೂಪಣೆ ಉಳ್ಳ ದೃಶ್ಯಗಳಿಂದಲೂ ಹೆಣೆಯಲ್ಪಟ್ಟಿದೆ. ಅಲ್ಲದೆ ಈ ನಾಟಕದಲ್ಲಿ ಹಾಡುಗಾರ ಮಾದಯ್ಯನ ಮೂಲಕ ನಿರೂಪಣೆ ಮಾಡುವ ತಂತ್ರದ ಜೊತೆಗೆ ಕೈಫಾಳ ಮನೋಲೋಕವನ್ನು ಬಿಚ್ಚಿಡುವ ತಂತ್ರವನ್ನೂ ಬಳಸಲಾಗಿದೆ. ಆಕೆಗೆ ಪೋಸ್ಟ್ ಬಾಕ್ಸ್ ನಂಬರ್ ನೈನ್ ಈ ಲೋಕದಲ್ಲಿನ ಅತ್ಯಂತ ಆಪ್ತ ಗೆಳೆಯ. ನಾಟಕದ ಐದು, ಒಂಬತ್ತು ಮತ್ತು ಹನ್ನೆರಡನೆ ದೃಶ್ಯಗಳಲ್ಲಿ ಕೈಫಾಳ ಅಂಚೆ ಗೆಳೆಯರು ಕೈಫಾಳೊಂದಿಗೆ ಅವಳ ಮನೋಲೋಕದಲ್ಲೆ ಭೇಟಿಯಾಗುತ್ತಾರೆ. ಇಸ್ರೇಲಿನ ಸೈಕ್ರಿಯಾಟ್ರಿಸ್ಟ್ ಅವಿ, ಪ್ರಾರಿಸ್ಸಿನ ಗೆಳತಿ ಎಮಿಲಿ, ಚೈನಾದ ಡಾಕ್ಟರ್ ಆಂಗ್ ಸ್ಟಿ ಚಾಯ್, ಲಂಡನ್ನಿನ ವಿಲಿಯಂ, ಬೈರೂತಿನ ಅಜ್ಜ ಹೀಗೆ ಕೈಫಾ ದೇಶವಿದೇಶಗಳ ಅಂಚೆ ಬಂಧುಮಿತ್ರರೊಂದಿಗೆ ಪತ್ರಗಳ ಮುಖೇನ ಸಂವಾದ ಮಾಡುತ್ತ ಇರುವುದನ್ನೆ ರಂಗವಾಸ್ತವವನ್ನಾಗಿ ಇಲ್ಲಿ ಕಟ್ಟಿಕೊಡಲಾಗಿದೆ. ಇವೆಲ್ಲವೂ ಫ್ಯಾಂಟಸಿ ಮತ್ತು ವಾಸ್ತವವನ್ನು ಕಲಿಸುವ ದೃಶ್ಯಗಳು.
ಇಲ್ಲಿನ ಆರು ಮತ್ತು ಏಳನೇ ದೃಶ್ಯಗಳು ಸ್ವತಂತ್ರವಾದ ದೃಶ್ಯಗಳಾದರೆ ಎಂಟನೆ ದೃಶ್ಯಕ್ಕೆ ಹಾಡುಗಾರ ಮಾದಯ್ಯ ಕ್ಯು ಕೊಡುತ್ತಾನೆ. ಇಲ್ಲಿ ಕೈಫಾ ಹೀಬ್ರೂ ಯೂನಿವರ್‍ಸಿಟಿಯಲ್ಲಿ ಕಲಿಯುವ ಪ್ರಸಂಗವಿದೆ. ತನ್ನ ಅಜ್ಜನ ಕಿತ್ತಳೆ ತೋಟವನ್ನು ಕಿತ್ತುಕೊಂಡು ಅಲ್ಲೆ ಹೀಬ್ರೂ ವಿಶ್ವವಿದ್ಯಾಲಯ ಕಟ್ಟಿರುವ ನೆಲದಲ್ಲೆ ಈಕೆ ಮನೋವಿಜ್ಞಾನ ಕಲಿಯಲು ಬಂದಿರುತ್ತಾಳೆ. ಈ ಹೀಬ್ರೂ ವಿವಿಯ ದೃಶ್ಯದಲ್ಲಿ ತನ್ನಜ್ಜನ 1. ತೋಟದ ಒಂದು ಕಿತ್ತಳೆ ಹಣ್ಣನ್ನು ಈಕೆ ಮುಟ್ಟಿದ್ದಾಳೆ; 2. ಯಾಸೇರ್ ಅರಾಫತನ ಫೋಟೋವನ್ನು ತನ್ನ ಚೀಲದಲ್ಲಿ ಇಟ್ಟುಕೊಂಡಿದ್ದಾಳೆ; 3. ಪರಧರ್ಮಿ ಹುಡುಗರ ಜೊತೆ ಇದ್ದಾಳೆ ಎಂಬ ಕಾರಣಗಳಿಗೆ ಇವಳಿಗೆ ಅಲ್ಲಿ ಇಸ್ರೇಲಿ ಯುವಕರು ಕಲ್ಲೇಟು ಹೊಡೆಯುವ ಶಿಕ್ಷೆ ವಿಧಿಸುತ್ತಾರೆ. ಇದನ್ನು ನೋಡಿದರೆ ನಮಗೆ ಜೆ.ಎನ್.ಯು.ನ ವಿದ್ಯಾರ್ಥಿಗಳ ಮೇಲೆ ನಡೆದ ಇತ್ತೀಚಿನ ದಾಳಿಗಳು ಮತ್ತು ಭಾರತದ ನೈತಿಕ ಪೊಲೀಸ್ ಗಿರಿಗಳೇ ನೆನಪಿಗೆ ಬರುತ್ತವೆ. ಈ ದೃಶ್ಯದ ಕೊನೆಯಲ್ಲಿ ಒಬ್ಬ ಇಸ್ರೇಲಿ ಯುವಕ (ಯಹೂದಿ ವಿದ್ಯಾರ್‍ಥಿಗಳ ನಾಯಕ) ಧ್ವಜ ಬೀಸುವ ದೃಶ್ಯ ಬರುತ್ತದೆ. ಆತ ಇಸ್ರೇಲಿನ ಧ್ವಜವನ್ನು ಒಮ್ಮೆ ಬೀಸಿ ತಪ್ಪು ಮಾಡಿದವನಂತೆ ಅದನ್ನು ಕಂಕುಳಲ್ಲಿ ಇರಿಸಿ ಭಗವಾಧ್ವಜವನ್ನು ಬೀಸುತ್ತಾನೆ. ಆದರೆ ನಂತರ ಗೊಂದಲಕ್ಕೆ ಬಿದ್ದವನಂತೆ ಒಮ್ಮೆ ಇಸ್ರೇಲಿನ ಧ್ವಜವನ್ನು ಬೀಸಿದರೆ ಮತ್ತೊಮ್ಮೆ ಭಗವಾಧ್ವಜವನ್ನು ಬೀಸುತ್ತಾನೆ. ಮತ್ತೂ ಗೊಂದಲಕ್ಕೆ ಬಿದ್ದವನಂತೆ ಕೊನೆಗೆ ಎರಡು ಧ್ವಜಗಳನ್ನು ಎರಡು ಕೈಗಳಲ್ಲೂ ಹಿಡಿದು ಬೀಸುತ್ತಾನೆ. ಯಹೂದಿಗಳ ಜನಾಂಗೀಯವಾದ ಮತ್ತು ಭಾರತೀಯ ಹಿಂದೂ ಮೂಲಭೂತವಾದ ಇವೆರಡರ ನಡುವೆ ವ್ಯತ್ಯಾಸವಿಲ್ಲ ಎಂಬುದನ್ನೂ; ಭಾರತೀಯ ಮಾರಲ್ ಪೊಲೀಸಿಂಗ್ ಮತ್ತು ಇಸ್ರೇಲಿಗಳ ಹಾಗೂ ಅರಬ್ಬರ ಮಾರಲ್ ಪೊಲೀಸಿಂಗ್‌ಗಳ ನಡುವೆ ವ್ಯತ್ಯಾಸವಿಲ್ಲ ಎಂಬುದನ್ನೂ ಈ ನಡೆ ಸಂಕೇತಿಸುತ್ತದೆ. ಇಂತಹ ಸಂಕೇತಗಳನ್ನು ಯಶಸ್ವಿಯಾಗಿ ಅನುವಾದಿಸುವುದು ಕೂಡ ಸವಾಲಿನ ಕೆಲಸವೆ.
ಈ ದೃಶ್ಯದ ಭಗವಾಧ್ವಜ ಎಂಬುದನ್ನು ಗುರುರಾಜ್ ಅವರು ರೆಡ್ ಫ್ಲ್ಯಾಗ್ ಎಂದು ಅನುವಾದಿಸಿದ್ದಾರೆ. ಭಗವಾಧ್ವಜ ನಮಗೆಲ್ಲ ತಿಳಿದಿರುವಂತೆ ಅದು ಆರೆಸ್ಸೆಸ್ ಧ್ವಜ. ಆದರೆ ಅದನ್ನು ರೆಡ್ ಫ್ಲ್ಯಾಗ್ ಎಂದು ಅನುವಾದಿಸಿದರೆ ಆಗ ಅದರ ಸೂಚನೆಯೆ ಬೇರೆ ಆಗಿಬಿಡುತ್ತದೆ. ಹಾಗೊಂದು ವೇಳೆ ಸಂವಾದಿ ಅನುವಾದ ಮಾಡುವುದಾದರೆ ಯಹೂದಿಗಳು 1891ರಲ್ಲಿ ಅವರ ಜಿಯೋನಿಸ್ಟ್ ಮೂವ್‌ಮೆಂಟ್‌ಗೆ ತಯಾರಿಸಿಕೊಂಡ ಜ್ಯೂಯಿಶ್ ಪ್ರೇಯರ್ ಶಾಲ್ ಬಳಸಬಹುದಿತ್ತು. ಆದರೂ ಇಂಗ್ಲಿಷಿಗೆ ಅನುವಾದಿಸುವಾಗ ಭಗವಾಧ್ವಜವನ್ನು ನೇರ ತೆಗೆದುಕೊಂಡು ಹೋಗುವುದೇ ಸರಿಯಾದುದು. ಸಾಲುಗಳ ನಡುವಿನ ಮೌನ ಮತ್ತು ಧ್ವನಿಗಳನ್ನು ಭಾಷಾಂತರಿಸುವುದು, ಆಕರ ಭಾಷೆಯ ಅನನ್ಯತೆಯನ್ನು ಅನುವಾದಿಸುವುದು, ಸ್ಥಳೀಯ ಸಂವಾದಿ ಸಾಂಸ್ಕೃತಿಕ ಅನನ್ಯತೆಗಳನ್ನು ಕಂಡುಕೊಳ್ಳುವುದು ಮತ್ತು ಸೃಷ್ಟಿಸಿಕೊಳ್ಳುವುದು, ಸಾಂಕೇತಿಕ ಪ್ರತೀಕಗಳನ್ನು ಅನುವಾದಿಸುವುದು ಎಲ್ಲವೂ ಅನುವಾದದ ಸವಾಲುಗಳೆ. ಇಲ್ಲಿ ಒಂದು ಕಡೆ ಬಾಲಕಿ ಕೈಫಾಳನ್ನು ಸೈನಿಕನೊಬ್ಬ ನಂದ್ರಶ್ಟಿಲ್ಲ ನಿನ್ನ ಎತ್ತರ ನಿಂದೆಶೆ ಧಿಮಾಕು ಎನ್ನುತ್ತಾನೆ. ಇದನ್ನು ಯು ಆರ್ ನಾಟ್ ಈವನ್ ಹೈ ಆಸ್ ಮೈ ಆಸ್ ಎಂದು ಅನುವಾದಿಸಲಾಗಿದೆ. ಹಾಗೆಯೆ ಉಗುರಲ್ಲಿ ಹೋಗೋದಕ್ಕೆ ಕೊಡ್ಲಿ ತಗೊಂಡ್ರಂತೆ ಎಂಬ ಗಾದೆ ಮಾತನ್ನು ಇಟ್ ಈಸ್ ಲೈಕ್ ಟೇಕಿಂಗ್ ಅನ್ ಏಕ್ಸ್ ಫಾರ್ ವಾಟ್ ಕ್ಯನ್ ಬಿ ಡನ್ ಬೈ ಅ ನೈಲ್ ಎಂದೂ ಅನುವಾದಿಸಲಾಗಿದೆ. ಇಲ್ಲೆಲ್ಲ ಗುರುರಾಜ್ ಅವರದ್ದು ಪದಗಳ ತದ್ವತ್ ಅನುವಾದ ಮತ್ತು ಅಳವಡಿಕೆಗಳ ಮದ್ಯಮಮಾರ್ಗವನ್ನು ಹಿಡಿದ ಅನುವಾದವಾಗಿದೆ.
ಇಲ್ಲಿ ಬರುವ ವೆಸ್ಟ್ ಬ್ಯಾಂಕ್ ವಾಲ್ ಅನ್ನು ವಾಲ್ ಆಫ್ ಶೇಮ್ ಎಂದು ಕರೆಯಲಾಗಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ಗಳನ್ನು ಭೌತಿಕವಾಗಿ ಪ್ರತ್ಯೇಕಿಸುವ ಗೋಡೆಯಿದು. ಇದು ನಮ್ಮ ಸುತ್ತ ಇರುವ ಇಂಥ ಹತ್ತು ಹಲವು ಗೋಡೆಗಳ ಸಂಕೇತವಾಗಿಯೂ ಕೆಲಸ ಮಾಡುತ್ತದೆ. ಭಾಷೆ, ದೇಶ, ಜಾತಿ, ಜನಾಂಗ, ಧರ್ಮ, ಲಿಂಗ, ಪ್ರದೇಶ, ಪಂಥ, ಸಿದ್ಧಾಂತ ಇತ್ಯಾದಿ ಇತ್ಯಾದಿಯಾದ ನಮ್ಮ ನಡುವಿನ ಅನೇಕ ಭೌತಾಭೌತ ಗೋಡೆಗಳನ್ನು ನಾವೆಲ್ಲ ನಿರಂತರ ಕೆಡವಿಹಾಕಬೇಕಾದ ಅಗತ್ಯವನ್ನು ಇಂತಹ ಪ್ರತೀಕಗಳ ಮೂಲಕ ಈ ನಾಟಕ ಒತ್ತಿ ಹೇಳುತ್ತದೆ.
ಇಲ್ಲಿನ ಜೈಲಿನ ಸೆಲ್ ಮತ್ತು ಇಸ್ರೇಲಿ ಚೆಕ್ ಪಾಯಿಂಟ್ ದೃಶ್ಯಗಳಲ್ಲಿ ಗಂಡಸರು ಹೆಣ್ಣುಗಳನ್ನು ಕ್ರೂರವಾಗಿ ಮತ್ತು ದೇಹ ಮಾತ್ರವಾಗಿ ನಡೆಸಿಕೊಳ್ಳುವ ಚಿತ್ರಗಳಿವೆ. ಈ ದೃಶ್ಯಗಳಲ್ಲಿ ಸ್ತ್ರೀವಾದಿ ದನಿಯೊಂದು ಬಲವಾಗಿ ಪ್ರತಿಪಾದಿತ ಆಗಿದೆ. ಆಕ್ಟಿವಿಸ್ಟ್ ಕೈಫಾ ಮೇಡಿನ್ ಪ್ಯಾಲೆಸ್ತೀನ್ ಇಲ್ಲಿ ಬಿಚ್ ಮೇಡಿನ್ ಇಸ್ರೇಲ್ ಆಗಿದ್ದಾಳೆ. ಯಾವ ಹೆಣ್ಣೂ ಹಾಗೆ ಗಂಡಸರಿಲ್ಲದೆ ಸ್ವತಃ ಬಿಚ್ ಆಗಲು ಸಾಧ್ಯವಿಲ್ಲ. ಅವಳನ್ನು ಬಿಚ್ ಎಂದು ಬಯ್ಯುವ ಗಂಡಸರೇ ಆಕೆಯನ್ನು ಹಾಗೆ ಬಳಸುತ್ತಾರೆ. ಎಲ್ಲರಂತೆ ತುಂಟಿ ಮತ್ತು ಪಾದರಸದಂತೆ ಚೂಟಿಯಾದ ಹೆಣ್ಣುಮಗುವೊಂದು ತನ್ನ ವಿರುದ್ಧ ನಿರಂತರವಾಗಿ ದಾಳಿ ಮಾಡುವ ಗಂಡು ಲೋಕದ ಎದುರು ದಿಟ್ಟ ಹೋರಾಟಗಾರ್‍ತಿ ಆಗಿ ರೂಪಗೊಳ್ಳುವ ಕಥನ ಆಗಿಯೂ ಈ ನಾಟಕ ಬೆಳೆದಿದೆ.
ಇಡೀ ನಾಟಕದಲ್ಲಿ ಜನಾಂಗೀಯವಾದ ಮತ್ತು ರಾಷ್ಟ್ರವಾದಗಳು, ಧರ್ಮ ಮತ್ತು ದೇಶಗಳು ಕಲಸಿಹೋಗಿರುವುದನ್ನು ಬಲವಾಗಿ ಪ್ರತಿರೋಧಿಸಲಾಗಿದೆ. ದಿನಾಂಕ: 12-02-2021ರ ಪ್ರಜಾವಾಣಿ ಪತ್ರಿಕೆಯಲ್ಲಿ ರಾಜನೀತಿ ಎಂಬ ಪದವನ್ನು ಮೋದಿಯವರು ರಾಷ್ಟ್ರನೀತಿ ಪದವಾಗಿ ಬದಲಿಸಿ ಬಳಸಬೇಕೆಂದು ತಿಳಿಸಿರುವುದಾಗಿ ವರದಿಯಾಗಿದೆ. ರಾಷ್ಟ್ರೀಯತೆ ಎನ್ನುವುದು ಕೆಲವರನ್ನು ಹೊರಗಿಡುವ, ಒಕ್ಕಲೆಬ್ಬಿಸುವ ಹುನ್ನಾರ ಆದಾಗ; ಜನರನ್ನು ಸ್ವ ಮತ್ತು ಅನ್ಯ ಎಂದು ಒಡೆಯುವ ಹುನ್ನಾರ ಆದಾಗ; ಅನ್ಯರನ್ನು ಒಡನೆ ಇರುವುದಾದರೆ ಎರಡನೆ ಧರ್ಮ ಪ್ರಜೆಗಳನ್ನಾಗಿ ಇರಲು ಒತ್ತಡ ಹೇರುವ ಹುನ್ನಾರ ಆದಾಗ ಆ ರಾಷ್ಟ್ರೀಯತೆ ಮತ್ತು ದೇಶಭಕ್ತಿ ನಿಜಕ್ಕು ಮಾನವವಿರೋಧಿ ಆದುದೇ ಹೌದು. ನಮ್ಮಲ್ಲಿ ಏಕರೂಪಿ ಹಿಂದೂ ರಾಜಕೀಯ ರಾಷ್ಟ್ರೀಯತೆಯನ್ನೇ ರಾಷ್ಟ್ರ ನೀತಿ ಆಗಿ ಜಾರಿ ಮಾಡುವ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಗೌರವಿಸುವ ಎರಡರ ನಡುವಣ ಸಂಘರ್ಷ ನಿರಂತರವಾಗಿ ಸಂಭವಿಸುತ್ತಿರುವದನ್ನು ನಾವೆಲ್ಲ ಬಲ್ಲೆವು. ಇಂತಹ ಸ್ಥಿತಿಯಲ್ಲಿ ಈ ನಾಟಕದ ತಾತ್ವಿಕತೆ ಹೆಚ್ಚು ಪ್ರಸ್ತುತ ಅನ್ನಿಸುತ್ತದೆ. ಒಕ್ಕಲೆಬ್ಬಿಸುವ ಧಾರ್‍ಮಿಕ ಉಗ್ರವಾದ ಮತ್ತು ಇಸ್ರೇಲಿ ನೋಬಲ್ ಸೆಟ್ಲ್‌ಮೆಂಟ್ ಮಿಶನ್‌ನ್ನು ಅನುಕರಿಸುವ ರಾಷ್ಟ್ರ ನೀತಿ ನಮ್ಮಲ್ಲು ಜಾರಿ ಆಗುತ್ತಿದೆಯಾ? ಜನರ ಆಲೋಚನಾ ವಿಧಾನವನ್ನು ಬದಲಿಸುವ, ಜೀವನವಿಧಾನವನ್ನು ಬದಲಿಸುವ ಮೂಲಕ ಶಕ್ತಿರಾಜಕಾರಣದ, ಪಕ್ಷ-ಸಿದ್ಧಾಂತ ರಾಜಕಾರಣದ, ಬಹುಸಂಖ್ಯಾತವಾದದ ಭಾಗವನ್ನಾಗಿ ಜನತೆಯನ್ನು ಮಾಡುವುದು ನಿಜಕ್ಕು ದುರಂತವೇ ಸರಿ.
ತನ್ನ ಮತ್ತು ತನ್ನವರ ಆತ್ಮಗೌರವಕ್ಕಾಗಿ ಶ್ರಮಿಸುವುದು ಭಯೋತ್ಪಾದನೆಯಾ? ಮತ್ತೊಂದು ದೇಶ, ಧರ್‍ಮದವರನ್ನು ಅವಮಾನಿಸುವುದು ಮತ್ತು ರಾಕ್ಷಸೀಕರಿಸುವುದು ದೇಶಭಕ್ತಿಯಾ? ಉಗ್ರ ಧಾರ್‍ಮಿಕ ವಾದ ಆಗಲೀ ಮೃದು ಹಿಂದುತ್ವ ಆಗಲೀ ಅಥವಾ
ಯಾವುದೇ ಬಗೆಯ ಉಗ್ರ ಇಸ್ಲಾಮಿತ್ವ ಆಗಲೀ ಯಹೂದಿತ್ವ ಆಗಲೀ ಎಲ್ಲವೂ ನಿರಾಕರಣ ಯವೆ ಅಲ್ಲವೆ? ಯಾಕೆ ಜನ ತಮ್ಮ ಮೆದುಳುಗಳನ್ನು ಅಧಿಕಾರದಲ್ಲಿನ ಪಕ್ಶಗಳಿಗೆ ಮಾರಿಕೊಳ್ಳುತ್ತಾರೆ? ಯಾವ ಪಕ್ಶಗಳಿಗೂ ರಿಯಾಯಿತಿ ತೋರದೆ ಎಲ್ಲ ಪಕ್ಶಗಳನ್ನೂ ಕೇರಿ ಎಗ್ಗಲಿಸುವ ಛಾತಿ ನಮಗೇಕೆ ಇಲ್ಲವಾಗುತ್ತಿದೆ? ಹಿಂದು, ಬೌದ್ಧ, ಕ್ರೈಸ್ತ, ಜೈನ, ಸಿಖ್, ಮುಸ್ಲಿಮ್, ಜುದಾಯಿ, ಜರತುಶ್ಟ್ರ, ಅಚಲಿಗ, ಲಿಂಗಾಯತ... ಎಲ್ಲರೂ ಮನುಷ್ಯರೇ ಅಲ್ಲವೇ? ಒಬ್ಬರು ಇನ್ನೊಬ್ಬರನ್ನು ರಾಕ್ಶಸೀಕರಿಸುವುದು ಮತ್ತು ಸ್ವತಃ ರಾಕ್ಶಸರಾಗುವುದು ಯಾಕೆ? ನೆಲಗಳನ್ನು ಧರ್‍ಮಗಳಿಗೆ ಕೊಯ್ದುಕೊಟ್ಟು ರಾಷ್ಟ್ರ ಗಳನ್ನಾಗಿ ಮಾಡಿಕೊಂಡು ಹಂಚಿಕೊಳ್ಳಬೇಕೆ? ಹಾಗಾದರೆ ತಮ್ಮದೇ ರಾಷ್ಟ್ರ ವಿಲ್ಲದ ಧರ್‍ಮದವರು ಎಲ್ಲಿ ಹೋಗಬೇಕು? ಅವರಿಗೆ ಘನತೆಯಿಂದ ಬದುಕುವ ಹಕ್ಕು ಇಲ್ಲವೆ? ರಾಷ್ಟ್ರಗಳ ಗಡಿ ಇರುವುದು ಪರಸ್ಪರ ದ್ವೇಷ, ಯುದ್ಧಗಳಿಗಾ? ಇಸ್ರೇಲಿಗಳಂತೆ ಇನ್ನೊಬ್ಬರು ನೆಲೆಸಿದ ನೆಲ ನಮ್ಮ ದೇಶದ ನೆಲವೆಂದು ಹೇಳಿ ಗೋಡೆ ಕಟ್ಟಿ, ಎಲೆಕ್ಟ್ರಾನಿಕ್ ಬೇಲಿ ಹಾಕಿ, ರೊಬೋಗಳನ್ನು ಕಾವಲಿಟ್ಟು, ಮಿಲಿಟರಿ ನೆರವಿನಿಂದ ಜಾತಿ, ಜನಾಂಗ, ಧರ್‍ಮಗಳನ್ನು ರಕ್ಶಿಸಬೇಕೆ? ದೇಶಭಕ್ತಿಯ ಹೆಸರಿನಲ್ಲಿ ಜಾತಿ, ಜನಾಂಗ, ಧರ್‍ಮಗಳಿಗೆ ನಮ್ಮ ಮತ್ತು ಅನ್ಯವೆಂಬ ಹಣೆಪಟ್ಟಿ ಹಚ್ಚಿ ಹೊರಗಿಡುವ ರಾಜಕಾರಣ ಮಾಡಬೇಕೆ? ರೊಹಿಂಗ್ಯ ಮುಸ್ಲಿಮರಂಥ ಜನರಿಗೆ ಅವರದೇ ದೇಶವಿಲ್ಲ ಎನ್ನುವುದಾದರೆ ಅವರೆಲ್ಲ ಎಲ್ಲಿ ಹೋಗಬೇಕು? ಉರ್‍ದು ಭಾಷಿಕರಿಗೆ ಅವರದೇ ರಾಜ್ಯವಿಲ್ಲ ಅನ್ನುವುದಾದರೆ ಅವರು ಎಲ್ಲಿ ಹೋಗಬೇಕು? ನಮ್ಮದೆ ದೇಶ ಎಂಬ ದೇಶವೆ ಇಲ್ಲದವರು ಹಾಗಾದರೆ ಘನತೆಯಿಂದ ಬದುಕುವುದಕ್ಕೆ ಹಕ್ಕಿಲ್ಲವೇ? ದೇಶ ಇಲ್ಲದವರು ಎಂಬುದೇ ಅರ್ಥಹೀನ ಕಲ್ಪನೆ ಅಲ್ಲವೆ? ದೇಶ ಎನ್ನುವುದು ಯಾರ ಸೊತ್ತು? ದೇಶವೆನ್ನುವುದು ನಿರ್ದಿಷ್ಟ ಜನಾಂಗ, ಧರ್‍ಮದವರ ಗುತ್ತಿಗೆಯಾ? ಈ ರೀತಿಯ ಹತ್ತಾರು ಪ್ರಶ್ನೆಗಳನ್ನು ಈ ನಾಟಕ ಹುಟ್ಟಿಸುತ್ತದೆ.
ಮೆಕ್ಕ ಮತ್ತು ಮದೀನ ನಂತರದಲ್ಲಿ ಜೆರುಸಲೇಮ್ ಮುಸ್ಲಿಮರಿಗೆ ಒಂದು ಪವಿತ್ರ ಸ್ಥಾನ. ಹಾಗೆಯೆ ಕ್ರೈಸ್ತರಿಗೂ ಇದು ಏಸುವು ತನ್ನ ಸಾವಿನ ನಂತರ ಮರುಹುಟ್ಟಿ ಬಂದ ಪವಿತ್ರ ಸ್ಥಳ. ಯಹೂದಿಗಳಿಗೂ ಇದು ತಮ್ಮ ಸಿನೆಗಾಗ್‌ಗಳು ಇರುವ ಪವಿತ್ರ ಸ್ಥಳ. ಈಗ್ಗೆ ನೂರು, ಸಾವಿರ ವರ್ಷಗಳ ಹಿಂದೆ, ಐವತ್ತು ಲಕ್ಷ ವರ್ಷಗಳ ಹಿಂದೆ ಈಗಿನ ಇಸ್ರೇಲಿನ ನೆಲ ಯಾರ ಒಡೆತನದಲ್ಲಿ ಇತ್ತು? ಕಾಲಕ್ಕೆ ರೆಕ್ಕೆ ಬಂದರೆ ನೆಲಕ್ಕೆ ಧರ್‍ಮದ ಹಕ್ಕು, ದೇಶದ ಹಕ್ಕು ಉಂಟೇನು?
ಜೆರುಸಲೇಮ್‌ನ ಕ್ರೈಸ್ತ, ಜುದಾಯಿ, ಮುಸ್ಲಿಮ್ ಎಲ್ಲರಿಗೂ ತಂತಮ್ಮ ಸಾಂಸ್ಕೃತಿಕ ಅನನ್ಯತೆಗಳ ಜೊತೆ ಶಾಂತಿಯುತವಾಗಿ ಸಹಬಾಳ್ವೆ ಮಾಡುವ ಅಗತ್ಯವಿದೆ. ಅಲ್ಲಿನ ಜನ ಅದನ್ನು ಬಲ್ಲರು. ಆದರೆ ಅಧಿಕಾರ ರಾಜಕಾರಣ ಮಾಡುವ ಕೆಲವರಿಗೆ ಬೆಂಕಿ ಹಚ್ಚುವುದೆ ಮತ್ತು ಅಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವುದೆ ಬೇಕಾಗಿದೆ. ಇದಕ್ಕಾಗಿ ಸದಾ ಪರಸ್ಪರ ದಾಳಿ ಮಾಡುತ್ತ ಕೆಸರು ಎರಚುತ್ತ ಇದ್ದಾರೆ. ಇಂತಹ ಒಂದು ಇಕ್ಕಟ್ಟಿನ ಸ್ಥಿತಿಯನ್ನು ಲಕ್ಶ್ಮೀಪತಿ ಕೋಲಾರ ನಾಟಕ ಮಾಡಿದ್ದಾರೆ. ಆ ಮೂಲಕ ಕನ್ನಡ ದಲಿತ ಬಂಡಾಯ ಸಂವೇದನೆಗೆ ಒಂದು ಭಿನ್ನ ವಿಸ್ತರಣೆ ನೀಡಿದ್ದಾರೆ. ಅದನ್ನು ಅನುವಾದ ಮಾಡುವ ಮೂಲಕ ತಾ.ಶ್ರೀ. ಗುರುರಾಜ್ ಕನ್ನಡ ಸಂವೇದನೆಯನ್ನು ಇಂಗ್ಲಿಷಿಗೆ ಒಯ್ಯಲು ಯತ್ನಿಸಿದ್ದಾರೆ. ಇಬ್ಬರಿಗೂ ಅಭಿನಂದನೆಗಳು.
ಹಾಗೆ ನೋಡಿದರೆ ನವೋದಯ ಪ್ರಗತಿಶೀಲ ನವ್ಯ ದಲಿತ ಬಂಡಾಯ ಎಂದೆಲ್ಲ ಶೈಕ್ಷಣಿಕ ವಲಯದಲ್ಲಿ ವರ್ಗೀಕೃತ ಗೊಂಡಿರುವ ಸಾಹಿತ್ಯವು ಲಕ್ಶ್ಮೀಪತಿ ಅವರಲ್ಲಿ ಏಕೀಭವಿಸಿದೆ. ಇವರ ಆದಿಮ ಶಿವರಹಸ್ಯ, ಮಾಸ್ಟೀಕರ ಸಂಸ್ಕೃತಿ, ದಕ್ಶಿಣದಂಡಾಜೀವಿಕ, ಹರಪ್ಪ ಡಿಎನ್‌ಎ ನುಡಿದ ಸತ್ಯ, ಅಲ್ಲಮನ ಬಯಲಾಟ, ಸಿಐಐಎಲ್ ಕಿರುಚಿತ್ರಗಳು, ವಾರ್‍ತಾ ಇಲಾಖೆ ಕಿರುಚಿತ್ರಗಳು, ಚಲನಚಿತ್ರ ಸಂಭಾಷಣೆಗಳು, ಗೀತರಚನೆಗಳು, ಕವಿತೆಗಳು, ಅನುವಾದಗಳು, ಸಂಪಾದನೆಗಳು ಹೀಗೆ ಇವರ ಬರವಣಿಗೆ ಫಾರಮ್ ದೃಷ್ಟಿಯಿಂದ ಮಾತ್ರವಲ್ಲ ಕಂಟೆಂಟ್ ದೃಷ್ಟಿಯಿಂದಲೂ ವೈವಿಧ್ಯವಾದುದು. ನಮ್ಮ ಶೈಕ್ಷಣಿಕ ವರ್ಗೀಕರಣದ ಚೀಲಗಳಿಗೆ ಹೊಂದಿಕೆ ಆಗದ ಬರಹಗಳು ಇವರವು. ಲಕ್ಶ್ಮೀಪತಿ ಇಂತಹ ಇನ್ನಷ್ಟು ನಾಟಕಗಳನ್ನು ಕನ್ನಡಕ್ಕೆ ನೀಡಲಿ ಎಂದು ಆಶಿಸುತ್ತೇನೆ.
ಈ ಅಂಕಣದ ಹಿಂದಿನ ಬರೆಹಗಳು
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.