ನೊಬೆಲ್ ಪಾರಿತೋಷಕ ಸಲ್ಲಲು ಕಾರಣವಾದ ಕಾದಂಬರಿ ದಿ. ಗುಡ್ ಅರ್ಥ್


"ಪ್ರಪಂಚದಾದಂತ್ಯ ರೈತರು, ಸಾಮಾನ್ಯ ಜನರು, ಹೆಂಗಸರು, ಮಕ್ಕಳು ಹೇಗೆ ತಮ್ಮದಲ್ಲದ ಯುದ್ಧದಂತಹ, ಕ್ಷಾಮದಂತಹ ಸದಾ ಕಾಡುವ ಸಂಗತಿಗಳಿಗೆ ಬಲಿಯಾಗುತ್ತಿದ್ದಾರೆ ಎನ್ನುವ ಚಿತ್ರಣ ಪರಿಣಾಮಕಾರಿಯಾಗಿ ಭವ್ಯಭೂಮಿ ಕಾದಂಬರಿಯಲ್ಲಿ ಚಿತ್ರಿಸಲ್ಪಟ್ಟಿದೆ," ಎನ್ನುತ್ತಾರೆ ಎಂ.ವಿ. ಶಶಿಭೂಷಣ ರಾಜು. ಅವರು ಕೃಷ್ಣಮೂರ್ತಿ ಶ್ರೀನಾಥ್(ಕೆ. ಶ್ರೀನಾಥ್) ಅವರ ‘ಭವ್ಯ ಭೂಮಿ’ ಕೃತಿ ಕುರಿತು ಬರೆದ ವಿಮರ್ಶೆ.

ಪ್ರಪಂಚದ ಬೇರೆ ಬೇರೆ ಭಾಷೆಯ ಅತ್ಯುತ್ತಮ ಕಾದಂಬರಿಗಳನ್ನು ಕನ್ನಡಕ್ಕೆ ತರುತ್ತಿರುವ ಅಗ್ರಗಣ್ಯರಲ್ಲಿ ಶ್ರೀಯುತ ಕೃಷ್ಣಮೂರ್ತಿ ಶ್ರೀನಾಥ್ (ಕೆ.ಶ್ರೀನಾಥ್) ಅವರೂ ಒಬ್ಬರು. ಮೂಲ ಕಾದಂಬರಿಗಳ ಭಾವಕ್ಕೆ, ಆಶಯಕ್ಕೆ ಯಾವುದೇ ಚ್ಯುತಿ ಬರದ ಹಾಗೆ ಭಾಷಾಂತರಿಸುವುದು ಶ್ರೀನಾಥ್ ಅವರ ವಿಶೇಷ. ಕಥೆ ಮತ್ತು ಮಾತುಗಳನ್ನು ಪರಿಣಾಮಕಾರಿಯಾಗಿ ಕನ್ನಡೀಕರಿಸಿ ಮೂಲ ಅರ್ಥವನ್ನು ಯಥಾರೀತಿ ಧ್ವನಿಸುವಂತೆ ಮಾಡುವುದು ಅವರಿಗೆ ಒದಗಿ ಬಂದಿರುವ ಕಲೆ.

ಇತ್ತೀಚಿಗೆ ಕೆ. ಶ್ರೀನಾಥ್ ಅವರು ಕನ್ನಡಕ್ಕೆ ತಂದಿರುವ ಅಮೇರಿಕಾದ ಬರಹಗಾರ್ತಿ ಪರ್ಲ್.ಎಸ್. ಬಕ್ ಅವರ ಅತ್ಯುತ್ತಮ ಹಾಗು ಪುಲಿಟ್ಜರ್ ಪ್ರಶಸ್ತಿ ಪಡೆದ, ತನ್ಮೂಲಕ ಅವರಿಗೆ ನೊಬೆಲ್ ಪಾರಿತೋಷಕ ಸಲ್ಲಲು ಕಾರಣವಾದ ಕಾದಂಬರಿ ದಿ. ಗುಡ್ ಅರ್ಥ್. ಶ್ರೀನಾಥ್ ಅವರು ಗುಡ್ ಅರ್ಥ್ ಕಾದಂಬರಿಯನ್ನು ಭವ್ಯ ಭೂಮಿ ಎನ್ನುವ ಅದ್ಬುತ ಹೆಸರಿರಿಸಿ ಕನ್ನಡಕ್ಕೆ ತಂದಿದ್ದಾರೆ. ಪುಸ್ತಕ ಓದಲು ಪ್ರಾರಂಭಿಸಿದರೆ ಕೆಳಗಿಡಲು ಸಾಧ್ಯವಾಗವುದಿಲ್ಲ, ಒಂದು ವೇಳೆ ನಿಲ್ಲಿಸಿದರೆ ಕಥೆ, ಮಾತು, ಸನ್ನಿವೇಶಗಳು ತಲೆಯಲ್ಲಿ ಕುಳಿತು ಸೆಳೆಯುತ್ತಿರುತ್ತವೆ, ಪುಸ್ತಕ ಪೂರ್ತಿ ಓದಿದರೇನೇ ಮುಕ್ತಿ. ಪ್ರಪಂಚದಾದಂತ್ಯ ರೈತರು, ಸಾಮಾನ್ಯ ಜನರು, ಹೆಂಗಸರು, ಮಕ್ಕಳು ಹೇಗೆ ತಮ್ಮದಲ್ಲದ ಯುದ್ಧದಂತಹ, ಕ್ಷಾಮದಂತಹ ಸದಾ ಕಾಡುವ ಸಂಗತಿಗಳಿಗೆ ಬಲಿಯಾಗುತ್ತಿದ್ದಾರೆ ಎನ್ನುವ ಚಿತ್ರಣ ಪರಿಣಾಮಕಾರಿಯಾಗಿ ಭವ್ಯಭೂಮಿ ಕಾದಂಬರಿಯಲ್ಲಿ ಚಿತ್ರಿಸಲ್ಪಟ್ಟಿದೆ.

Pearl Comfort Sydenstricker Buck (ಪರ್ಲ್.ಎಸ್ .ಬಕ್) ಹುಟ್ಟಿದ್ದು ಜೂನ್ ಇಪ್ಪತ್ತಾರು, ಸಾವಿರದ ಎಂಟನೂರು ತೊಬ್ಬತೆರಡನೇ ಇಸವಿಯಲ್ಲಿ. ಹುಟ್ಟಿದ್ದು ಅಮೇರಿಕಾದ ವೆಸ್ಟ್ ವರ್ಜಿನೀಯಾ ರಾಜ್ಯದಲ್ಲಿ. ಮಿಷನರಿಗಳಾಗಿದ್ದ ತಂದೆ ತಾಯಿ ಮದುವೆಯ ನಂತರ ಚೀನಾಕ್ಕೆ ತೆರಳಿ, ಅಮೆರಿಕೆಗೆ ಹಿಂತುರುಗಿ, ಪರ್ಲ್ ಹುಟ್ಟಿದನಂತರ ಮತ್ತೆ ಚೀನಾಕ್ಕೆ ತೆರೆಳುತ್ತಾರೆ. ಪರ್ಲ್ ತಮ್ಮ ಎಂಬತ್ತು ವರುಷಗಳ ಆಯಸ್ಸಿನಲ್ಲಿ ನಲವತ್ತು ವರುಷಗಳನ್ನು ಚೀನಾದಲ್ಲಿ ಕಳೆಯುತ್ತಾರೆ. ಇನ್ನುಳಿದ ನಲವತ್ತು ವರುಷಗಳನ್ನು ಪೆನ್ಸಿಲ್ವೇನಿಯಾಯಾದ ಫರ್ಕಾಶಿ ಎಂಬಲ್ಲಿ ಕಳೆದರು.

ಪರ್ಲ್ ಎಸ್. ಬಕ್ ಅವರದು ಅಗಾಧ ಸಾಹಿತ್ಯ ಸೃಷ್ಟಿ, ನೂರಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ ಅದರಲ್ಲಿ ಸುಮಾರು ನಲವತೈದು ಕಾದಂಬರಿಗಳು, ಎರಡು ಸಂಪುಟಗಳ ಆತ್ಮಕಥೆ, ಹಲವಾರು ಕಥಾ ಸಂಕಲನಗಳು ಸೇರಿವೆ. ಬರಹಗಾರರಲ್ಲದೆ ಪರ್ಲ್ ಬಕ್ ಅವರು ಮಾನವಾತಾವಾದಿಯೂ ಆಗಿದ್ದರು. ತಮ್ಮ ಮಗಳ ಜೊತೆ, ಹನ್ನೆರಡು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕಿಕೊಂಡಿದ್ದರು.

1931 ಮತ್ತು 1932 ರಲ್ಲಿ ಅಮೇರಿಕಾದಲ್ಲಿ ಹೆಚ್ಚು ಮಾರಾಟವಾದ ಕಾದಂಬರಿ ದಿ ಗುಡ್ ಅರ್ಥ್‌ಗೆ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ ಮತ್ತು 1932 ರಲ್ಲಿ ಈ ಕಾದಂಬರಿಗೆ ಪುಲಿಟ್ಜೆರ್ ಪ್ರಶಸ್ತಿಯನ್ನು ಗೆದ್ದರು. 1938 ರಲ್ಲಿ, ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಅಮೇರಿಕನ್ ಮಹಿಳೆಯಾದರು, ಅದಲ್ಲದೆ ಪುಲಿಟ್ಜೆರ್ ಮತ್ತು ನೊಬೆಲ್ ಪ್ರಶಸ್ತಿ ಎರಡನ್ನೂ ಗೆದ್ದ ಮೊದಲ ಅಮೇರಿಕನ್ ಮಹಿಳಾ ಬರಹಗಾರ್ತಿ ಪರ್ಲ್ ಬಕ್ ಅವರು. ಚೀನಾದಲ್ಲಿನ ರೈತರ ಜೀವನದ ಶ್ರೀಮಂತಿಕೆಯ ವೈಭವ ಮತ್ತು ಬಡತನದ ಬವಣೆಗಳ ಗುಡ್ ಅರ್ಥ್ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ.

ಗುಡ್ ಅರ್ಥ್, ಸಾವಿರದ ಒಂಬೈನೂರ ಮೂವತ್ತಳೆರಲ್ಲಿ ಚಲನಚಿತ್ರವಾಗಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಚಿತ್ರದ ನಾಯಕಿ ಲೂಸಿ ರೈನರ್ ಅವರಿಗೆ ಅತ್ಯುತ್ತಮ ನಟನೆಗಾಗಿ ಆಸ್ಕರ್ ಪ್ರಶಸ್ತಿ ಅರಸಿ ಬಂತು. ಇದೇ ಚಿತ್ರದ ಛಾಯಾಗ್ರಹಣಕ್ಕೂ ಆಸ್ಕರ್ ಪ್ರಶಸ್ತಿ ಬಂದಿದೆ. ಉತ್ತಮ ನಿರ್ದೇಶನವೂ ಸೇರಿ ಐದು ವಿಭಾಗಗಳಲ್ಲಿ ಚಿತ್ರ ನಾಮನಿರ್ದೇಶನಗೊಂಡಿತ್ತು.

ಕಥೆಗೆ ಹೋಗದೆ, ಕಾದಂಬರಿಯಲ್ಲಿ ಚಿತ್ರಿಸಿರುವ ಕೆಲವು ಸನ್ನಿವೇಶಗಳನ್ನು ನೋಡೋಣ.

ಮೊದಲನೆಯ ಮಹಾಯುದ್ಧದ ಪೂರ್ವದಲ್ಲಿ ಇಂಗ್ಲಿಷ್-ಮಾತನಾಡುವ ಉತ್ತರ ಚೀನಾದಲ್ಲಿ ಕಥೆ ಪ್ರಾರಂಭವಾಗುತ್ತದೆ. ಪ್ರಪಂಚದ ಬಡ ಯುವ ರೈತರಿಗೆ ಇಂದಿಗೂ ಮದುವೆಯಾಗಲು ಹೆಣ್ಣು ಸಿಗದೆ ಇರುವ ಚಿತ್ರಣ ಬರುತ್ತದೆ . ದೊಡ್ಡ (ಶ್ರೀಮಂತ)ಮನೆಯ ಸೇವಕಿಯರೇ ಮೊದುವೆಯಾಗಲು ಸಿಗುವ ಹೆಣ್ಣುಗಳು, ತುಟಿ ಸೀಳದ ಹೆಣ್ಣು ಸಿಕ್ಕರೆ ಅದೇ ಭಾಗ್ಯ. ಹೆಣ್ಣೆಂದರೆ ಮಕ್ಕಳು ಮಾಡುವ ಕಾರ್ಖಾನೆ, ಗಂಡು ಮಕ್ಕಳಿಗೆ ಆದ್ಯತೆ. ಇರುವ ಜಮೀನಿನ ಜೊತೆ ಮತ್ತೆ ಜಮೀನನ್ನು ಕೊಳ್ಳುವ ಕಾದಂಬರಿಯ ನಾಯಕ ವ್ಯಾಂಗ್ ಲಂಗ್ ಕ್ರಮೇಣ ಒಳ್ಳೆಯ ಸ್ಥಿತಿ ತಲುಪುತ್ತಾನೆ. ಆದರೆ ಭಯಾನಿಕ ಕ್ಷಾಮ ಅಪ್ಪಳಿಸಿ ಆ ಸುಖ ಬೇಗ ಕರಗಿಹೋಗುತ್ತದೆ. ಬದುಕುಳಿಯಲು ಊರು ಬಿಟ್ಟು ನಗರಕ್ಕೆ ಗುಳೆ ಹೋಗಬೇಕಾಗುತ್ತದೆ. ನಗರದಲ್ಲಿ ಆಹಾರಕ್ಕಾಗಿ ಪಡುವ ಬವಣೆ, ಹೆಂಡತಿ ಮಕ್ಕಳನ್ನು ಯುದ್ಧದ ಕರಿಛಾಯೆಯಲ್ಲಿ ರಕ್ಷಿಕೊಳ್ಳಬೇಕಾದ ಅನಿವಾರ್ಯತೆ, ಶ್ರೀಮಂತ ಮನೆಯ ಲೂಟಿಯಲ್ಲಿ ಹೆಂಡತಿಯ ಅನುಭವದ ಸಹಾಯ ಎಲ್ಲವೂ ಮೂಡಿಬಂದು ಪುಸ್ತಕ ಓದುತ್ತಿದ್ದರೆ ದೃಶ್ಯಗಳು ಮನದಲ್ಲಿ ಹಾಗೆಯೇ ಮೂಡಿಬರುತ್ತವೆ. ಹೇಗೋ ಬದುಕುಳಿದು ಮರಳಿ ಮಣ್ಣಿಗೆ ಬಂದು ಹೇಗೆ ಬದುಕು ಕಟ್ಟಿ ಕೊಂಡು, ಬಡ ರೈತ ದೊಡ್ಡಮನೆ ಸಾಹುಕಾರನಾಗಿ ಮೆರೆಯಲು ತೊಡಗುತ್ತಾನೆ, ಹಣ ಸಿಕ್ಕ ಮೇಲೆ ಹೇಗೆ ಹೆಣ್ಣಿನಾಸೆಗೆ ಹಂಬಲಿಸುತ್ತಾನೆ ಎನ್ನುವ ಚಿತ್ರಣ ಮೂಡಿಬಂದಿದೆ.

ಇದರಲ್ಲಿ ಹೆಚ್ಚು ನೋವನ್ನು ಅನುಭವಿಸಿ ಮೌನವಾಗಿ ಮೂಕವೇದನೆ ಅನುಭವಿಸುವವಳು ಕಾದಂಬರಿಯ ನಾಯಕಿ ವಾಂಗ್ ಲಂಗ್ ನ ಹಂಡತಿ ಓ-ಲಾನ್. ಮನೆಯ ಕೆಲಸ, ಮಕ್ಕಳನ್ನು ಹೆತ್ತು ಕೊಡುವುದು, ಹೊಲದಲ್ಲಿ ಕೆಲಸ ಮಾಡುವುದು ಹೀಗೆ ತನ್ನ ಬಯಕೆಗಳೇನು ಎಂದು ಅರಿಯದೆ ಇಡೀ ಬಾಳನ್ನು ಸವಿಸುತ್ತಾಳೆ. ಇಷ್ಟೆಲ್ಲಾ ದುಡಿದರೂ ಹಣ ಬಂದ ತಕ್ಷಣ ಗಂಡ ಇನ್ನೊಬ್ಬಳ ಸಂಗಕ್ಕೆ ಬೀಳುವುದು, ಅವಳನ್ನು ಮನೆಯಲ್ಲಿ ತಂದಿರಿಸಿ ಓ-ಲಾನ್ ತನ್ನ ಮನೆಯಲ್ಲೇ ಪರಕೀಯತೆ ಅನುಭವಿಸುವುದು, ಹೆಣ್ಣೊಂದರ ಬವಣೆ ಎಲ್ಲ ಕಾಲಗಳಲ್ಲೂ ಒಂದೇ, ಅವಳ ಸುಖಕ್ಕೆ ತಾವೇ ಇರದು ಎನ್ನುವ ಸಾರ್ವಕಾಲಿಕ ಸತ್ಯ ವೇದ್ಯವಾಗುತ್ತದೆ .

ಕಾದಂಬರಿಯನ್ನು ಓದಿ ಮುಗಿಸಿದ ಮೇಲೆ, ನಾವೇ ಹುಟ್ಟಿ, ಬೆಳೆದು, ಜೀವಿಸಿ, ಕಾಲವಾಗುವುದನ್ನು ಅನುಭವಿಸದಂತೆ ಆಗುತ್ತದೆ. ರೈತ, ಹೆಣ್ಣು ಎಲ್ಲಾ ಕಾಲದಲ್ಲೂ, ಎಲ್ಲಾ ದೇಶಗಳಲ್ಲೂ ಸುಖಿಸದ ಜೀವಿಗಳು ಎಂದು ಅನುಭವವಾಗುತ್ತದೆ. ಮಾನವನ ಇಡೀ ಜೀವನ ಕಾದಂಬರಿಯಲ್ಲಿ ಬರುತ್ತದೆ. ರೈತರ ಮುಕ್ತಿ ಮರಳಿ ಮರಳಿ ಮಣ್ಣಿಗೆ ಹೋಗುವುದರಲ್ಲೇ ಇದೆ ಎನ್ನುವುದು ಸಿದ್ದವಾಗುತ್ತದೆ.

ಕೆ. ಶ್ರೀನಾಥ್ ಅವರು ಮಹತ್ಕಾರ್ಯ ಮಾಡಿದ್ದಾರೆ, ಕರ್ನಾಟಕದ ಕಥೆ ಎಂಬಂತೆ ಕಾದಂಬರಿಯನ್ನು ಓದಿಕೊಳ್ಳಬಹದು, ಊರು, ಹೆಸರು ಗಳನ್ನು ಕನ್ನಡದ ಹೆಸರಾಗಿಸಿದರೆ ನಮ್ಮದೇ ಕಾದಂಬರಿಯಾಗುತ್ತದೆ, ಇಲ್ಲಿನ ಕಥೆ ಸಾರ್ವಕಾಲಿಕ. ಕಾದಂಬರಿಯನ್ನು ಪ್ರಕಟಿಸಿದ ಪ್ರಕಾಶಕರಿಗೂ (ಸೃಷ್ಟಿ ಪ್ರಕಾಶನ) ಅಭಿನಂದನೆಗಳನ್ನೂ, ಧನ್ಯವಾದಗಳನ್ನೂ ತಿಳಿಸಬೇಕು.

ಮೊನ್ನೆ, ನನ್ನ ಮನೆಗೆ ಹತ್ತಿರವಿರುವ ಪರ್ಲ್ ಬುಕ್ ಅವರು ತಮ್ಮ ಜೀವನದ ಕೊನೆಯ ನಲವತ್ತು ವರುಷಗಳನ್ನು ಕಳೆದ ಮನೆಗೆ ಹೋಗಿದ್ದೆ. ಅಲ್ಲಿಯೇ ಅವರ ಸಮಾಧಿ ಸ್ಥಳವೂ ಇದೆ. ಅರ್ಧ ದಿವಸ ಅಲ್ಲಿಯೇ ಕಳೆದು, ಮಹಾನ್ ಬರಹಗಾರ್ತಿ ಓಡಾಡಿದ ಜಾಗದಲ್ಲಿ ಓಡಾಡಿದೆ, ಧನ್ಯತಾಭಾವ ಮೂಡಿತು.

ಇಂತಹ ಮಹಾನ್ ಬರಹಗಾರರಿಗೆ ನಾವು ಏನು ಕೊಡಲು ಸಾಧ್ಯ, ಅವರ ಕೆಲ ಪುಸ್ತಕಗಳನ್ನು ಓದಿದರೆ ಅದೇ ಆವರಿಗೆ ನಾವು ಕೊಡುವ ಗೌರವ. ಭವ್ಯ ಭೂಮಿಯನ್ನು ಎಲ್ಲರೂ ಓದಬೇಕು, ಈ ಮೂಲಕ ಕೆ. ಶ್ರೀನಾಥ್ ಅವರಿಗೆ ಇನ್ನು ಹೆಚ್ಚು ಇತರ ಭಾಷೆಗಳ ಅದ್ಬುತ ಪುಸ್ತಕಗಳನ್ನು ಕನ್ನಡಕ್ಕೆ ಕಟ್ಟಿಕೊಡಲು ಸ್ಪೂರ್ತಿಯಾಗಬೇಕು ಎನ್ನುವುದೇ ನನ್ನ ಬಯಕೆ.

- ಎಂ.ವಿ. ಶಶಿಭೂಷಣ ರಾಜು

MORE FEATURES

ಇದು ಕೇವಲ ರೋಚಕ ಕತೆ ಮಾತ್ರವಲ್ಲ ಸತ್ಯ ಕತೆ

04-11-2024 ಬೆಂಗಳೂರು

"ಆತ್ಮ-ಪರಮಾತ್ಮ, ಭೂತ-ಪ್ರೇತ, ಧರ್ಮ-ಅಧರ್ಮಗಳಿಗೆ ಹೆದರಿ ಬದುಕುವುದು ಸರಿಯಲ್ಲ ಎನ್ನುತ್ತಾರೆ. ಅಂಧಶ್ರದ್ಧೆಯಿಂದ ಮ...

ಶ್ರೀಕೃಷ್ಣದೇವರಾಯ ತೆಲುಗಿನವನೆ? ಕನ್ನಡಿಗನೇ?

04-11-2024 ಬೆಂಗಳೂರು

"ಈ ಕೃತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಶಂಕುಸ್ಥಾಪನೆಯ ವಿವರ, ವಿದ್ಯಾರಣ್ಯರ ಪ್ರಶಂಸೆ, ಕೃಷ್ಣರಾಯ ನಿಗೆ ಮಂತ್ರಿಗಳ ...

ಪ್ರಾಚೀನ ಐಗುಪ್ತದ ಸಮರ್ಥ ಆಡಳಿತಗಾರ್ತಿ' ದೇವಿ ಕುರುಬತಿ'

04-11-2024 ಬೆಂಗಳೂರು

"ಭಾರತದ ಯಾವುದೇ ಭಾಗದ ಇತಿಹಾಸವಲ್ಲ. ನಮಗೆ ಯಾರಿಗೂ ಗೊತ್ತಿಲ್ಲದ ಮೂರುಸಾವಿರ ವರ್ಷಗಳಷ್ಟು ಹಿಂದಿನ ಪ್ರಾಚೀನ ಐಗುಪ...