ನಿಜವಾಗಿಯೂ ಸಾವಿಲ್ಲದ ಮರ್ತ್ಯನ, ಅಶ್ವತ್ಥಾಮನ ಪ್ರಯಾಣವೇ..


"ಇದು ನಿಜವಾಗಿಯೂ ಸಾವಿಲ್ಲದ ಮರ್ತ್ಯನ, ಅಶ್ವತ್ಥಾಮನ ಪ್ರಯಾಣವೇ ಅಥವಾ ಸ್ನೇಹಿತರ ಮೇಲೆ ಆಡಲಾದ ವಿಸ್ತಾರವಾದ ಕಪಟವೇ ಎನ್ನುವುದನ್ನು ಇದನ್ನು ಓದಿಯೇ ತಿಳಿದುಕೊಳ್ಳಬೇಕು," ಎನ್ನುತ್ತಾರೆ ಪೂರ್ಣಿಮಾ ಮಾಳಗಿಮನಿ. ಅವರು ಸಂಜಯ್ ಕೊಪ್ಪಿಕರ್ ಅವರ ‘ನರೋ ವಾ’ ನಾಟಕ ಕೃತಿ ಕುರಿತು ಬರೆದಿರುವ ವಿಮರ್ಶೆ.

ಕನ್ನಡ ಸಾಹಿತ್ಯ ವಲಯದಲ್ಲಿ ಇತ್ತೀಚಿಗೆ ಐತಿಹಾಸಿಕ, ಪೌರಾಣಿಕ ಮತ್ತು ಫ್ಯಾಂಟಸಿ ಪ್ರಕಾರದ ಕೃತಿಗಳು ಬರುತ್ತಿವೆ. ಉದಾಹರಣೆಗೆ, ತೇಜೋ ತುಂಗಭದ್ರಾ, ಚೆನ್ನ ಬೈರಾದೇವಿ, ಹಸ್ತಿನಾವತಿ, ಮಹಾಭಾರತ: ಪ್ರೇಮ ಮತ್ತು ಯುದ್ಧದ ಕತೆಗಳು, ಭೀಷ್ಮ ಹೇಳಿಕೊಟ್ಟ ಮ್ಯಾನೇಜ್ಮೆಂಟ್ ಕತೆಗಳು,

ರೇಷ್ಮೆ ಬಟ್ಟೆ, ನಿಯುಕ್ತಿ ಪುರಾಣ, ಕೆಂಪ ನಂಜಮ್ಮಣ್ಣಿ ಇತರೆ. ಸಿನಿಮಾ ರಂಗದಲ್ಲಿಯೂ ಕೂಡ KGF, ಮಗಧೀರನ್, ಬಾಹುಬಲಿ, ಬ್ರಹ್ಮಾಸ್ತ್ರ, ಪೊನ್ನಿಯಿನ್ ಸೆಲ್ವಂ, ಭ್ರಮಾಲೋಕಂ, ಕಾಲ್ಕಿ, ಮುಂತಾದುವು ಯಶಸ್ವಿಯಾಗುತ್ತಿವೆ. ಇದೊಂದು ಕುತೂಹಲಕಾರಿಯಾದ ಬೆಳವಣಿಗೆ ಎನ್ನಬಹುದು.

'ನರೋ ವಾ' ಕೂಡ ಅಂತಹ ಒಂದು ಪ್ರಕಾರಕ್ಕೆ ಸೇರುವ ನಾಟಕವಾಗಿದೆ. ಸಾಮಾನ್ಯವಾಗಿ ನಾಟಕಗಳನ್ನು ಓದುವುದಕ್ಕಿಂತ ನೋಡುವುದನ್ನು ಹೆಚ್ಚು ಇಷ್ಟ ಪಡುವ ನಾನು, ಈ ನಾಟಕವನ್ನು ಓದಿದೆ. ಆಗಸ್ಟ್ ತಿಂಗಳಲ್ಲಿ ನಡೆದ ಬುಕ್ ಬ್ರಹ್ಮ ಸಾಹಿತ್ಯ ಉತ್ಸವದಲ್ಲಿ ಇದು ನನಗೆ ಉಡುಗೊರೆಯಾಗಿ ಸಿಕ್ಕಿತ್ತು. ಬೆಂಗಳೂರು ಮೂಲದ ತಂತ್ರಜ್ಞಾನಿ, ಉದ್ಯಮಿ, ಲೇಖಕ, motivational speaker (TEDx) ಹಾಗು Rotarian ಕೂಡ ಆಗಿರುವ ಸಂಜಯ್ ಕೊಪ್ಪಿಕರ್ ಇದರ ಮೂಲ ಲೇಖಕ. ಇದನ್ನು ಕನ್ನಡಕ್ಕೆ 'ದೀಪದ ಮಲ್ಲಿ' ಅವರು ಅನುವಾದಿಸಿದ್ದಾರೆ. ಸಾಹಿತ್ಯ, ರಂಗಭೂಮಿ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ದೀಪಾ ಬಹಳ ಚೆನ್ನಾಗಿ ಅನುವಾದ ಮಾಡಿದ್ದಾರೆ.

ಮತ್ತೊಂದು ಊರಿಗೆ ವಲಸೆ ಹೋಗುತ್ತಿರುವ ಆಪ್ತ ಸ್ನೇಹಿತ 'ದ್ರೌಣಿ' ಗೆ ವಿದಾಯ ಹೇಳಲು ಸೇರಿರುವ ಆತನ ಸ್ನೇಹಿತರಾದ ಶೋಭಾ, ಡಾ. ಖಾನ್, ಪ್ರೊ. ಭಟ್, ಪ್ರೊ. ಜೇಕಬ್ ಹೀಗೆ ಎಲ್ಲಾ ಧರ್ಮದವರೂ ಇದ್ದಾರೆ. ಇವರುಗಳ ಮದ್ಯೆ ನಡೆಯುವ ಸಂಭಾಷಣೆಯ ಮೂಲಕ ದ್ರೌಣಿ, ಸಾವಿರಾರು ವರ್ಷಗಳಿಂದ ಬದುಕಿರುವ, ಕಾಡುಮೇಡುಗಳಲ್ಲಿ ಅಲೆಯುತ್ತಾ, ಹದಿನೈದು ವರ್ಷಗಳಿಗೊಮ್ಮೆ ಊರು ಬದಲಾಯಿಸುತ್ತಾ, ಎಷ್ಟು ಅಸಾಧಾರಣವಾದ ದಾರಿಯನ್ನು ಕ್ರಮಿಸಿದ್ದಾನೆ ಎನ್ನುವುದು ತಿಳಿಯುತ್ತದೆ. ಇದು ನಿಜವಾಗಿಯೂ ಸಾವಿಲ್ಲದ ಮರ್ತ್ಯನ, ಅಶ್ವತ್ಥಾಮನ ಪ್ರಯಾಣವೇ ಅಥವಾ ಸ್ನೇಹಿತರ ಮೇಲೆ ಆಡಲಾದ ವಿಸ್ತಾರವಾದ ಕಪಟವೇ ಎನ್ನುವುದನ್ನು ಇದನ್ನು ಓದಿಯೇ ತಿಳಿದುಕೊಳ್ಳಬೇಕು.

ಈ ನಾಟಕವನ್ನು ಮೂರು ದೃಶ್ಯಗಳಲ್ಲಿ (ನಾಂದಿ, ಒಗ್ಗಟ್ಟು ಮತ್ತು ಸಂಘರ್ಷ, ಇತಿಹಾಸ) ವಿಂಗಡಿಸಲಾಗಿದೆ. ಇತಿಹಾಸ ಮತ್ತು ಪುರಾಣದ ನಡುವಿನ ಅಂತರವೇನು ಎನ್ನುವ ಪ್ರಶ್ನೆಯನ್ನೂ ಉತ್ತರಿಸುವ ಪ್ರಯತ್ನ ನಡೆದಿದೆ.

ಮೊದಲ ಭಾಗ ಹೆಚ್ಚು ಕಡಿಮೆ ಫೇಸ್ಬುಕ್ ಇತರ ಜಾಲತಾಣಗಳಲ್ಲಿ ಇತ್ತೀಚಿಗೆ ನಡೆಯುವ ಜಾತಿ, ಮತ, ಧರ್ಮದ ಕುರಿತ ಚರ್ಚೆಗಳನ್ನೇ ಹೋಲುತ್ತದೆ. ಸ್ನೇಹಿತರಾಗಿದ್ದವರು ಧರ್ಮದ ವಿಷಯಕ್ಕೆ ಬಂದಾಗ ಬದಲಾಗುವ ಪರಿ, ನಿರಭಿಮಾನ, ದುರಭಿಮಾನ ಎಲ್ಲವೂ ನೈಜವಾಗಿ ಚಿತ್ರಿತವಾಗಿವೆ.

ನಂತರದ ಪುಟಗಳಲ್ಲಿ ಈ ಭಾಗ ಇಷ್ಟವಾಯಿತು.

"ಕರ್ಣನನ್ನು ಕೊಂದ ಮೇಲಷ್ಟೇ ಅವನು ತನ್ನ ಸಹೋದರ ಎನ್ನುವುದನ್ನು ಅರಿತ ಅರ್ಜುನ, ಕರ್ಣನ ಮಗ ವೃಷಕೇತುವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಅವನಿಗೆ ಎಷ್ಟೋ ರಹಸ್ಯ ಪಟ್ಟುಗಳನ್ನು ಕಲಿಸುತ್ತಾನೆ. ಮುಂದೆ ಅವನು ಅರ್ಜುನನ ಜೊತೆ ಸೇರಿ, ಬಬ್ರುವಾಹನನ ಮೇಲೆ ಯುದ್ಧ ಮಾಡುತ್ತಾನೆ, ಹೆಚ್ಚಿನ ಅಸ್ತ್ರಗಳು ತಿಳಿದಿದ್ದರೂ ಅವುಗಳನ್ನು ಬಳಸಲು ಆಗದೆ, ಆ ಯುದ್ಧದಲ್ಲಿ ಮಡಿಯುತ್ತಾನೆ. ಕೃಷ್ಣ ವೃಷಕೇತುವಿಗೆ ಆ ರಹಸ್ಯ ಪಟ್ಟುಗಳನ್ನು ಎಲ್ಲಿಯೂ ದಾಖಲಿಸಬೇಡ, ಯಾರಿಗೂ ಕಲಿಸಲೂ ಬೇಡ ಎಂದು ಹೇಳುತ್ತಾನೆ."

ಈ ಪಾಲಿಸಿಯನ್ನು ಇಂದಿನ ಕಾಲಮಾನದ ಸ್ಥಿತಿಯಲ್ಲಿ ಇಟ್ಟು ನೋಡಿದಾಗ, ಯುದ್ಧಗಳನ್ನು ನಿಲ್ಲಿಸುವ, ಶಾಂತಿಯನ್ನು ಕಾಪಾಡುವ ಒಂದು ಮಹದುದ್ದೇಶವಿರುವುದು, ಇಂಥವುಗಳನ್ನು ನಮ್ಮ ಪುರಾಣದ ಕಥೆಗಳಲ್ಲಿ ಎಷ್ಟೋ ವಿಚಾರಗಳಲ್ಲಿ ಉಲ್ಲೇಖಿಸಿರುವುದು ತಿಳಿಯುತ್ತದೆ. ಆದರೆ ದುರದೃಷ್ಟವಶಾತ್ ಯುದ್ಧಗಳು ಇಂದಿಗೂ ನಿಂತಿಲ್ಲ, ನಿಲ್ಲುವ ಲಕ್ಷಣಗಳೂ ಕಾಣುತ್ತಿಲ್ಲ. 'War is the only way of keeping peace!' ಅಥವಾ 'The purpose of all wars, is peace' ಎನ್ನುವ ವಿಡಂಬನಾತ್ಮಕ ಮಾತುಗಳು ನೆನಪಾಗುತ್ತವೆ.

ಅಲ್ಲಲ್ಲಿ ಬೋಧನೆಯಂತೆ ಅನ್ನಿಸಿದರೂ, ಉದ್ದುದ್ದ ಸಂಭಾಷಣೆಗಳು ಸಹನೆಯನ್ನು ಬೇಡಿದರೂ, ಒಟ್ಟಾರೆ ಒಂದು ಉತ್ತಮ ಆಶಯವುಳ್ಳ ನಾಟಕ ಇದಾಗಿದೆ. ಯುದ್ಧದ ಸಮಯದಲ್ಲಿ ದ್ರೋಣಾಚಾರ್ಯರನ್ನು ಸೋಲಿಸಲು ಅವರ ಮಗ ಅಶ್ವತ್ಥಾಮ ಮಡಿದನೆಂದು ಸುಳ್ಳು ಸುದ್ಧಿ ಹಬ್ಬಿಸುವ 'ಅಶ್ವತ್ಥಾಮ ಹತಃ, ನರೋ ವಾ, ಕುಂಜರೋವ' ಎನ್ನುವ ಸಾಲಿನಿಂದ ಇದರ ಶೀರ್ಷಿಕೆ ರೂಪುಗೊಂಡಿದೆ. ಧರ್ಮದ ಹೆಸರಿನಲ್ಲಿ ಶಾಂತಿ ಸೌಹಾರ್ದತೆಯನ್ನು ಕದಡುವವ ಮನುಷ್ಯ ಅಲ್ಲ ಎನ್ನುವ ವ್ಯಂಗ್ಯವೂ ಹೌದು.

- ಪೂರ್ಣಿಮಾ ಮಾಳಗಿಮನಿ

 

MORE FEATURES

ಹಳ್ಳಿಯ ಬದುಕನ್ನು ಚಿತ್ರಿಸುವ ಕೆಲವು ಸುಂದರ ತುಣುಕುಗಳಿವೆ

02-01-2025 ಬೆಂಗಳೂರು

“ಸಮಾಜೋ ಸಾಂಸ್ಕೃತಿಕ ಸಂರಚನೆಯನ್ನು ಆಳುತ್ತಿರುವ ಊಳಿಗಮಾನ್ಯ ಪದ್ಧತಿಯ ಪ್ರಜ್ಞೆ ಮತ್ತು ಅದರಲ್ಲಿ ಆಳವಾಗಿ ಬೇರೂರಿ...

ಹಾದು ಬಂದ ದಾರಿಯ ಮೇಲೆ ಬೆಳಕು ಚೆಲ್ಲುತ್ತದೆ

02-01-2025 ಬೆಂಗಳೂರು

"ಆ ಶಾಲೆಯ ಸಿಬ್ಬಂದಿಯೊಂದಿಗೆ ಅವಳು ತಾತ್ಕಾಲಿಕ ಸಂಬಂಧ ಉಂಟಾಗಿ, ಅದು ಊರಿನವರ ಮಾತುಕತೆಗೆ ಆಹಾರವಾಗುತ್ತದೆ. ಕಿಡಿಗ...

ಈಗಲೂ ಇದು ನನಗೊಂದು ಅಚ್ಚರಿಯ ಸಂಗತಿ

02-01-2025 ಬೆಂಗಳೂರು

“ಈ ಕೃತಿಯಲ್ಲಿ ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ, ಸಂಗೀತ, ವ್ಯಕ್ತಿಚಿತ್ರ ಮೊದಲಾದ ವಿಷಯಗಳ...