ನೀಲಾಂಬಿಕೆ

Date: 15-02-2022

Location: ಬೆಂಗಳೂರು


ಹಿರಿಯ ಲೇಖಕಿ ಡಾ.ವಿಜಯಶ್ರೀ ಸಬರದ ಅವರ ಮಹತ್ವದ ಕೃತಿ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’. ಮೂವತ್ತೊಂಬತ್ತು ವಚನಕಾರ್ತಿಯರ ಇತಿವೃತ್ತಗಳನ್ನು ಒಳಗೊಂಡ ಈ ಸಂಶೋಧನಾತ್ಮಕ ಕೃತಿ ಮುದ್ರಣಕ್ಕೂ ಮೊದಲು ‘ಬುಕ್ ಬ್ರಹ್ಮ’ ಸಾಹಿತ್ಯಿಕ ವೇದಿಕೆಯ ಪಾಕ್ಷಿಕ ಅಂಕಣವಾಗಿ ಪ್ರಕಟವಾಗುತ್ತಿದೆ. 'ಶಿವಶರಣೆಯರ ಸಾಹಿತ್ಯ ಚರಿತ್ರೆ'ಯ ಮೂರನೇ ಭಾಗವಾಗಿ ವಚನಗಾರ್ತಿ ನೀಲಾಂಬಿಕೆ ಅವರ ಪರಿಚಯದ ಪೂರ್ಣ ಭಾಗ ಇಲ್ಲಿದೆ.

ನೀಲಾಂಬಿಕೆಯು ಕ್ರಿ.ಶ. 1160ರಲ್ಲಿದ್ದಳೆಂದು ಹೇಳಬಹುದಾಗಿದೆ. ಈಕೆಯ ಮೊದಲಿನ ಹೆಸರು ಮಾಯಾದೇವಿಯೆಂದು ತಿಳಿದುಬರುತ್ತದೆ. ನಂತರದಲ್ಲಿ ಈಕೆಯನ್ನು ನೀಲಮ್ಮ-ನೀಲಾಂಬಿಕೆ-ನೀಲಲೋಚನೆಯೆಂದು ಕರೆಯಲಾಗಿದೆ. ನೀಲಾಂಬಿಕೆಯ ಜೀವನ ವಿವರಗಳು ನಡುಗನ್ನಡ ಕವಿಗಳ ಕಾವ್ಯಗಳಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಸಿದ್ಧನಂಜೇಶನ "ಗುರುರಾಜ ಚಾರಿತ್ರ" ಮತ್ತು ಸಿಂಗರಾಜನ "ಸಿಂಗಿರಾಜ ಪುರಾಣ"ದಲ್ಲಿ ನೀಲಾಂಬಿಕೆಯ ಜೀವನದ ಕೆಲವು ಸಂಗತಿಗಳು ಪ್ರಕಟವಾಗಿವೆ. ನೀಲಾಂಬಿಕೆಯು ಸಿದ್ಧರಸ ಮತ್ತು ಪದ್ಮಗಂಧಿಯರ ಮಗಳೆಂದೂ, ಬಸವಣ್ಣನವರ ಪತ್ನಿಯೆಂದೂ "ಗುರುರಾಜ ಚಾರಿತ್ರ" ಹೇಳಿದರೆ, ಸಿದ್ಧರಸನು ಬಿಜ್ಜಳ ಅರಸನ ಮಂತ್ರಿ ಮತ್ತು ದಣ್ಣಾಯಕನಾಗಿದ್ದನೆಂದು "ಸಿಂಗಿರಾಜ ಪುರಾಣ" ಹೇಳುತ್ತದೆ. ತಂದೆ-ತಾಯಿ ಇಟ್ಟ ಹೆಸರು ಮಾಯಾದೇವಿಯೆಂದು, ನೋಡಲು ಚೆಲುವೆಯಾಗಿದ್ದರಿಂದ ನಂತರದಲ್ಲಿ ಈಕೆಯನ್ನು ನೀಲಲೋಚನೆಯೆಂದು,

ನೀಲಾಂಬಿಕೆಯೆಂದು ಕರೆಯುತ್ತಿದ್ದರೆಂದು ಈ ಪುರಾಣಕಾವ್ಯಗಳಿಂದ ತಿಳಿದುಬರುತ್ತದೆ. ಹರಿಹರನು ಗಂಗಾದೇವಿ-ಮಾಯಾದೇವಿ ಬಸವಣ್ಣನ ಪತ್ನಿಯರೆಂದು ತಿಳಿಸಿದ್ದಾನೆ. ಲಕ್ಕಣ್ಣ ದಂಡೇಶನು, ಈಕೆ ಬಿಜ್ಜಳನ ತಂಗಿಯಾಗಿದ್ದಳೆಂದು ಹೇಳಿದ್ದಾನೆ. ನೀಲಾಂಬಿಕೆ ಸಿದ್ಧರಸನ ಮಗಳೆಂದು "ವೀರಶೈವಾಮೃತ ಪುರಾಣ"ದಲ್ಲಿ ಹೇಳಲಾಗಿದೆ. ಇನ್ನು ಕೆಲವರು ಈಕೆಯನ್ನು ಬಿಜ್ಜಳನ ಸಾಕು ತಂಗಿಯೆಂದು ಕರೆದಿದ್ದಾರೆ. ಈಕೆಗೆ ನೀಲನೇತ್ರಗಳಿದ್ದುದರಿಂದ ನೀಲಲೋಚನೆಯೆಂದು ಕರೆದಿರಬಹುದಾಗಿದೆ. "ಗಣಭಾಷ್ಯ ರತ್ನಮಾಲೆ"ಯಿಂದ ಇವಳ ಹೆಸರು ನೀಲಲೋಚನೆಯಾಗಿತ್ತೆಂದು ತಿಳಿದುಬರುತ್ತದೆ.

ಬಸವಣ್ಣನವರನ್ನು ಮದುವೆಯಾದ ನಂತರ ನೀಲಾಂಬಿಕೆಯು ಬಾಲಸಂಗಯ್ಯನೆಂಬ ಮಗನನ್ನು ಹೆತ್ತಳೆಂದೂ, ಅವನು ಬಹಳ ವರ್ಷ ಇರಲಿಲ್ಲವೆಂದೂ ತಿಳಿದುಬರುತ್ತದೆ. ಬಲದೇವ ಮತ್ತು ಸಿದ್ಧರಸ ಇವರಿಬ್ಬರೂ ಬಸವಣ್ಣನವರ ತಾಯಿ ಮಾದಲಾಂಬಿಕೆಯ ಸಹೋದರರಾಗಿದ್ದರು. ಬಲದೇವಮಂತ್ರಿಯ ಮಗಳಾಗಿದ್ದ ಗಂಗಾಂಬಿಕೆಯನ್ನು ಬಸವಣ್ಣನವರು ಮದುವೆಯಾದರು. ನಂತರ ಮತ್ತೆ ಸಿದ್ಧರಸನ ಮಗಳಾದ ನೀಲಾಂಬಿಕೆಯನ್ನು ಮದುವೆಯಾಗಲು ಕಾರಣವಾದರೂ ಏನು? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ನೀಲಾಂಬಿಕೆಯನ್ನು ಬಸವಣ್ಣನವರು ಮದುವೆಯಾಗಿರಬಹುದೆಂದು ಅಂದುಕೊಂಡರೆ, ಗಂಗಾಂಬಿಕೆಗೆ ಸಿದ್ಧರಸ ಹೆಸರಿನ ಮಗನಿದ್ದ. ಲಕ್ಷಣದಂಡೇಶ ಹೇಳುವ ಹಾಗೆ ನೀಲಲೋಚನೆ ಸಿದ್ಧರಸನ ಮಗಳಾಗಿರದೆ, ಕ್ಷತ್ರಿಯ ಕುಲದ ಬಿಜ್ಜಳನ ತಂಗಿಯಾಗಿರಬೇಕೆಂದು ತಿಳಿಯುವುದು ಸೂಕ್ತವೆನಿಸುತ್ತದೆ. ಡಾ.ಎಂ.ಎಂ. ಕಲಬುರ್ಗಿಯವರೂ ಕೂಡ ನೀಲಾಂಬಿಕೆ ಬಿಜ್ಜಳನ ತಂಗಿಯೇ ಆಗಿದ್ದಳೆಂದು ತಮ್ಮ ಲೇಖನದಲ್ಲಿ ಹೇಳಿದ್ದಾರೆ. (ನೋಡಿ, "ಮಾತೋಶ್ರೀ" ಅಭಿನಂದನಗ್ರಂಥ ಮುದ್ದೇಬಿಹಾಳ, ಪುಟ: 32, 1986) ನೀಲಾಂಬಿಕೆ ಬಿಜ್ಜಳನ ತಂಗಿಯೆಂದಾದರೆ, ಕನ್ನಡ ನಾಡಿನಲ್ಲಿ ಬಸವಣ್ಣನವರದೇ ಪ್ರಥಮ ಅಂತರ್ಜಾತಿ ವಿವಾಹವೆಂಬ ಸತ್ಯ ಸ್ಪಷ್ಟವಾಗುತ್ತದೆ. ಜಾತಿಯತೆಯನ್ನು ಹೊಡೆದೋಡಿಸಲು ಚಳವಳಿ ಮಾಡಿದ ಬಸವಣ್ಣನವರು ತಾವೇ ಮೊದಲು ಅಂತರ್ಜಾತಿ ವಿವಾಹವಾಗಿರಲು ಸಾಧ್ಯವಿದೆ. ಕೆಲವು ವೀರಶೈವ ಕವಿಗಳು ಈ ಅಂತರ್ಜಾತಿ ವಿವಾಹವನ್ನು ಮುಚ್ಚಿಡಲು ನೀಲಲೋಚನೆ ಸಿದ್ಧರಸನ ಮಗಳಾಗಿದ್ದಳೆಂದು ಹೇಳಿರಬಹುದಾಗಿದೆ.

ಬಿಜ್ಜಳ ಕಟುಚ್ಚುರಿ ಕ್ಷತ್ರಿಯ. ಬಸವಣ್ಣನವರ ಜ್ಞಾನಶಕ್ತಿ-ಕ್ರಿಯಾಶಕ್ತಿಗಳನ್ನು ಕಂಡು ತನ್ನ ರಾಜ್ಯದ ಅಭಿವೃದ್ಧಿಗೆ ಬಸವಣ್ಣನವರೇ ಕಾರಣರಾಗುತ್ತಾರೆಂದು ತಿಳಿದು ತನ್ನ ತಂಗಿ ನೀಲಾಂಬಿಕೆಯನ್ನು ಕೊಟ್ಟು ಮದುವೆ ಮಾಡಿರಬಹುದಾಗಿದೆ. ನೀಲಾಂಬಿಕೆಯ ಸೌಂದರ್ಯ ಮತ್ತು ಆಕೆಯ ವೈಚಾರಿಕ ನಿಲುವುಗಳನ್ನು ಗಮನಿಸಿದ ಬಸವಣ್ಣನವರು ಈ ಮದುವೆಗೆ ಒಪ್ಪಿರಬೇಕು. ಬಸವಣ್ಣನವರು ತಮ್ಮ ವಚನದಲ್ಲಿ "ಎನ್ನಸತಿ ನೀಲಲೋಚನೆ ಪೃಥ್ವಿಗಗ್ಗಳ ಚೆಲುವೆ" ಎಂದು ಹೇಳಿದ್ದಾರೆ. ಇನ್ನು ನೀಲಲೋಚನೆಯ ವಚನಗಳ ಕೆಲವು ಸಾಲುಗಳು ಹೀಗಿವೆ:

"ಕಾಮಿತ ಸುಖವ ಕಂಗೊಳಿಸಿದ ಗುರುವೆ, ಕಲ್ಪಿತವ ನಷ್ಟಮಾಡಿದ ಗುರುವೆ" (ವ-141)
"ಇಬ್ಬರು ನಾವು ಒಂದೆಡೆಯನುಂಡೆವು" (ವ-54)
"ಎನಗೆ ಲಿಂಗವು ನೀವೆ ಬಸವಯ್ಯಾ, ಎನಗೆ ಸಂಗವು ನೀವೆ ಬಸವಯ್ಯಾ" (ವ-77)
"ಕಾಮವನಳಿದ ಹೆಣ್ಣಲ್ಲ ನಾನು, ಕಾಮ ಉಂಟೆನಗೆ (ವ-140)
"ಕುಲವಳಿದ ಹೆಣ್ಣ ಕಣ್ಣ ಬಯಲಕಂಡು, ಕುಲವಡಗಿ ಸಂಗಸ್ವಯರೂಪಾಯಿತ್ತಯ್ಯ" (ವ-149)

ನೀಲಾಂಬಿಕೆಯ ಈ ವಚನಗಳನ್ನು ಗಮನಿಸಿದಾಗ, ತನ್ನ ಪ್ರತಿವಚನದಲ್ಲಿ ಬಸವಾ, ಬಸವಾ ಎಂದು ಹಂಬಲಿಸುತ್ತಿರುವುದನ್ನು ನೋಡಿದಾಗ ಬಸವಣ್ಣ ಮತ್ತು ನೀಲಾಂಬಿಕೆಯರ ಮದುವೆ ಅದು ಅಂತರ್ಜಾತಿ ವಿವಾಹವಾಗಿರುವುದರ ಜತೆಗೆ ಪ್ರೇಮವಿವಾಹವೂ ಆಗಿದ್ದಿರಬೇಕೆಂದು ತಿಳಿಯಲು ಅವರ ವಚನಗಳಲ್ಲಿಯೇ ಆಧಾರಗಳು ಸಿಗುತ್ತವೆ. ಕನ್ನಡನಾಡಿನಲ್ಲಿ ಪ್ರಥಮ ಪ್ರೇಮವಿವಾಹ ಹಾಗೂ ಪ್ರಥಮ ಅಂತರ್ಜಾತಿಯ ವಿವಾಹ ಮಾಡಿಕೊಂಡ ಶ್ರೇಯಸ್ಸು ಬಸವಣ್ಣ-ನೀಲಾಂಬಿಕೆಯರಿಗೆ ಸಲ್ಲುತ್ತದೆ. ಸಾಮಾನ್ಯವಾಗಿ ಇಂದಿಗೂ ಕೂಡ ನಾವು ಗಮನಿಸಿದರೆ, ಪ್ರೇಮವಿವಾಹಗಳೆಲ್ಲ ಅಂತರ್ಜಾತಿ ವಿವಾಹಗಳೇ ಆಗಿರುತ್ತವೆ. ಅಂತರ್ಜಾತಿ ವಿವಾಹವನ್ನು ಅನೇಕ ತಂದೆ - ತಾಯಿಗಳು ಇಂದಿಗೂ ಒಪ್ಪುವುದಿಲ್ಲವಾದುದರಿಂದ ಅವರು ಪ್ರೇಮ ವಿವಾಹವಾಗುತ್ತಾರೆ. ಈ ಪರಂಪರೆ 12ನೇ ಶತಮಾನದಿಂದಲೇ ಪ್ರಾರಂಭವಾಗಿರುವುದನ್ನು ಕಾಣಬಹುದಾಗಿದೆ.

"ಬಸವನ ಅನುಭವದಿಂದ ವಿವರವ ಕಂಡು, ವಿಚಾರ ಪತ್ನಿಯಾದೆನಯ್ಯ" (ವ-195)
"ಮಡದಿ ಎನಲಾಗದು ಬಸವಂಗೆ ಎನ್ನನು,
ಪುರುಷನೆನೆಲಾಗದು ಬಸವನ ಎನಗೆ" (ವ-224)

ನೀಲಾಂಬಿಕೆಯ ಇಂತಹ ವಚನಗಳನ್ನು ಗಮನಿಸಿದಾಗ, ಆಕೆ ತುಂಬ ವಿಶಿಷ್ಟ ವ್ಯಕ್ತಿತ್ವದ ವಚನಕಾರ್ತಿಯಾಗಿದ್ದಳೆಂದು ತಿಳಿದುಬರುತ್ತದೆ. ಬಸವಣ್ಣನ ಅನುಭವದಿಂದ ತಾನು ವಿಚಾರಪತ್ನಿಯಾಗಿ ಬೆಳೆದೆನೆಂದು ಹೇಳಿದ್ದಾಳೆ. ವಿಚಾರಪತ್ನಿ ಎಂಬ ಮಾತು ಇಲ್ಲಿ ಬಹುಮುಖ್ಯವಾಗುತ್ತದೆ. ತಾನು ಬಸವನ ಮಡದಿ ಮಾತ್ರವಲ್ಲ, ಮತ್ತು ಬಸವ ಕೇವಲ ತನಗೆ ಪತಿಮಾತ್ರವಲ್ಲ ತಮ್ಮಿಬ್ಬರ ಸಂಬಂಧ ಇದೆಲ್ಲವನ್ನೂ ಮೀರಿದ್ದಾಗಿದೆಯೆಂದು ತನ್ನ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾಳೆ. ಈ ಎಲ್ಲ ಸಂಗತಿಗಳನ್ನು ಗಮನಿಸಿದಾಗ, ಆಕೆಯದು ಪ್ರೇಮವಿವಾಹವೆಂದು ಸ್ಪಷ್ಟವಾಗುತ್ತದೆ.

ನೀಲಾಂಬಿಕೆಯು ಬಸವಣ್ಣನವರನ್ನು ಮದುವೆಯಾದ ನಂತರ, ಆಧ್ಯಾತ್ಮ ಕ್ಷೇತ್ರದಲ್ಲಿ ಎತ್ತರವಾಗಿ ಬೆಳೆದು ನಿಲ್ಲುತ್ತಾಳೆ. ಸಾಹಿತ್ಯಕವಾಗಿಯೂ ಅಷ್ಟೇ ಮಹತ್ವದ ವಚನಕಾರ್ತಿಯಾಗುತ್ತಾಳೆ. ಅಕ್ಕಮಹಾದೇವಿಯನ್ನು ಬಿಟ್ಟರೆ ಅಧಿಕ ಸಂಖ್ಯೆಯಲ್ಲಿ ವಚನಗಳನ್ನು ರಚಿಸಿದ ಶರಣೆ ನೀಲಾಂಬಿಕೆಯಾಗಿದ್ದಾಳೆ. ಈಕೆಯ 288 ವಚನಗಳು ಪ್ರಕಟವಾಗಿವೆ. "ಸಂಗಯ್ಯ" ಎಂಬುದು ಇವಳ ವಚನಾಂಕಿತವಾಗಿದೆ. ವಚನಗಳ ಜತೆಗೆ ಏಳುಸ್ವರವಚನಗಳನ್ನೂ ನೀಲಾಂಬಿಕೆ ರಚಿಸಿದ್ದಾಳೆ. ಇನ್ನೂ ಮಹತ್ವದ ಸಂಗತಿಯೆಂದರೆ ಈಕೆ ಕಾಲಜ್ಞಾನದ ವಚನಗಳನ್ನೂ ರಚಿಸಿದ್ದಾಳೆ. ಈ ಕಾಲಜ್ಞಾನ ಪರಂಪರೆ ಮುಂದೆ 15ನೇ ಶತಮಾನದಲ್ಲಿ ಕೊಡೇಕಲ್ಲ ಬಸವಣ್ಣನವರಿಂದ ಎತ್ತರೆತ್ತರಕೆ ಬೆಳೆದು ನಿಂತದ್ದನ್ನು ಕಾಣಬಹುದಾಗಿದೆ. "ಪ್ರಸಾದ ಸಂಪಾದನೆ" ಕೃತಿಯನ್ನು ನೀಲಾಂಬಿಕೆಯೇ ರಚಿಸಿರಬಹುದಾಗಿದೆಯೆಂದು ಕವಿಚರಿತಕಾರರು ಹೇಳಿದ್ದಾರೆ.

ಬಸವಣ್ಣನವರು ನೇತೃತ್ವ ವಹಿಸಿದ್ದ ವಚನ ಚಳವಳಿಯಲ್ಲಿ ನೀಲಾಂಬಿಕೆ ಮಹತ್ವದ ಪಾತ್ರವಹಿಸಿದ್ದಾಳೆ. ಬಸವಣ್ಣನವರು ಕಟುಚ್ಚುರಿ ಕ್ಷತ್ರಿಯ ಕುಲದ ನೀಲಾಂಬಿಕೆಯನ್ನು ವಿವಾಹವಾಗಿರುವುದು ಎಷ್ಟು ಮುಖ್ಯವೋ ಅದೇ ಕುಲದ ಹಡಪದಪ್ಪಣ್ಣನನ್ನು ತಮ್ಮ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡದ್ದು ಇನ್ನೂ ಮಹತ್ವದ ಸಂಗತಿಯಾಗುತ್ತದೆ. 12ನೇ ಶತಮಾನದಲ್ಲಿ ಕಟುಚ್ಚುರಿಗಳಾಗಿದ್ದ ಬಿಜ್ಜಳ ಮತ್ತು ಹಡಪದಪ್ಪಣ್ಣನ ಕುಲದವರು, ಮುಂದೆ 15ನೇ ಶತಮಾನದಲ್ಲಿ ವಿಜಯನಗರ ಅರಸರಕಾಲಕ್ಕೆ ಕ್ಷೌರಿಕರಾದರೆಂದು ತಿಳಿದುಬರುತ್ತದೆ. 12ನೇ ಶತಮಾನದ ಹಡಪದಪ್ಪಣ್ಣ ಬಸವಣ್ಣನವರ ಅಂಗರಕ್ಷಕನಾಗಿದ್ದ ವೀರಕ್ಷತ್ರಿಯನಾಗಿದ್ದನೆಂಬುದು ಬಹುಮುಖ್ಯವಾದ ಸಂಗತಿಯಾಗುತ್ತದೆ. 15ನೇ ಶತಮಾನದ ನಂತರ ಕಟುಚ್ಚುರಿ ಕ್ಷತ್ರಿಯರಾಗಿದ್ದ ಇವರು ಹಡಪದ ವೃತ್ತಿಗಿಳಿಯ ಬೇಕಾಯಿತೆಂಬುದು ಕೂಡ ಅಷ್ಟೇ ಸತ್ಯವಾಗಿದೆ. (ನೋಡಿ : ಹಡಪದ ಶರಣರ ವಚನಗಳಲ್ಲಿ ವೈಚಾರಿಕತೆ'' ಡಾ. ಬಸವರಾಜ ಸಬರದ, ಪು.3, 2013)

ಕಲ್ಯಾಣದಲ್ಲಿ ಪುರೋಹಿತಶಾಹಿಯ ಕೈಮೇಲಾಗಿ ಬಿಜ್ಜಳನ ಕೊಲೆಯಾಗುತ್ತದೆ. ಬಿಜ್ಜಳನ ಕೊಲೆ ಮಾಡಿಸಿದ ಮಗ ಸೋವಿದೇವನೇ ಸಿಂಹಾಸನವನ್ನೇರುತ್ತಾನೆ. ಆಗ ಸಂಪ್ರದಾಯವಾದಿಗಳ ಮತ್ತು ಪುರೋಹಿತಶಾಹಿಯ ಮಾತು ಕೇಳಿ ಶರಣರಿಗೆ ಎಳೆಹೂಟೆಶಿಕ್ಷೆ ವಿಧಿಸುತ್ತಾನೆ. ಆ ಸಂದರ್ಭದಲ್ಲಿಯೇ ಬಸವಣ್ಣನವರನ್ನು ಕೂಡಲ ಸಂಗಮದ ವರೆಗೆ ಸೈನಿಕರು ಅಟ್ಟಿಸಿಕೊಂಡು ಹೋಗಿರಬಹುದಾಗಿದೆ. ಬಸವಣ್ಣನವರು ಆಗ ನೀಲಾಂಬಿಕೆಯನ್ನು ಕರೆತರಲು ತಮ್ಮ ಅಂಗರಕ್ಷಕನಾಗಿದ್ದ ಹಡಪದಪ್ಪಣ್ಣನಿಗೆ ತಿಳಿಸುತ್ತಾರೆ. ಆಗ ನೀಲಾಂಬಿಕೆ ಕೊಡುವ ಉತ್ತರಗಳು ಗಮನಾರ್ಹವಾಗಿವೆ. "ಅಲ್ಲಿ ಇಹ ಸಂಗಮನು ಇಲ್ಲಿಯೂ ಇಲ್ಲವೆ?" ಎಂದು ಆಕೆ ಕೇಳುವ ಪ್ರಶ್ನೆಯನ್ನು ಗಮನಿಸಿದಾಗ ನೀಲಾಂಬಿಕೆ ನಿಜವಾಗಿಯೂ ಬಸವಣ್ಣನವರ ವಿಚಾರಪತ್ನಿಯಾಗಿದ್ದಳೆಂದು ತಿಳಿದುಬರುತ್ತದೆ. ಬಸವಣ್ಣನವರು ಕೂಡಲಸಂಗಮದಲ್ಲಿ ಲಿಂಗೈಕ್ಯರಾದ ನಂತರ, ಹಡಪದಪ್ಪಣ್ಣ ಮತ್ತು ನೀಲಮ್ಮ ಕೂಡಲಸಂಗಮಕ್ಕೆ ಹೋಗಬೇಕೆಂದು ಬಂದಿರಬೇಕು. ಆದರೆ ಸಂಗಮ ಮುಟ್ಟುವ ಮೊದಲೇ ತಂಗಡಗಿಯಲ್ಲಿ ಅವರು ಕೆಲಕಾಲವಿದ್ದು ನಂತರ ಲಿಂಗೈಕ್ಯರಾಗಿರಬೇಕು. ನೀಲಾಂಬಿಕೆ ಮತ್ತು ಹಡಪದಪ್ಪಣ್ಣನವರ ಐಕ್ಯಮಂಟಪಗಳು ತಂಗಡಿಗಿಯಲ್ಲಿವೆ. ತಂಗಡಿಗಿಯಲ್ಲಿ ನೀಲಾಂಬಿಕೆಯ ಐಕ್ಯಮಂಟಪ ಹಾಗೂ ತಂಗಡಗಿ ಜಮೀನಿನಲ್ಲಿ ನೀಲಮ್ಮನ ಕಟ್ಟೆ ಎರಡೂ ಇವೆ. ಪ್ರತಿವರ್ಷ ಇಲ್ಲಿ ನೀಲಮ್ಮನ ಜಾತ್ರೆ ನಡೆಯುತ್ತದೆ. ಊರ ಹೊರಗೆ ಇತ್ತೀಚೆಗೆ ನೀಲಮ್ಮನ ಗುಡಿಯನ್ನು ನಿರ್ಮಿಸಲಾಗಿದೆ. ಗುಡಿಯ ಒಳಗಡೆ ನೀಲಮ್ಮನ ಶಿಲ್ಪಮೂರ್ತಿ ಇದೆ. ನೀಲಮ್ಮನ ಗುಡಿಯಲ್ಲಿ ಹಡಪದಪ್ಪಣ್ಣನ ಮೂರ್ತಿಯೂ ಇದೆ. ನೀಲಮ್ಮನ ಗುಡಿಯ ಅಂಗಳದಲ್ಲಿ ಮಡಿವಾಳ ಮಾಚಯ್ಯನವರ ಶಿಲ್ಪವಿದೆ. ನೀಲಾಂಬಿಕೆಯ ಜೀವನ ಚರಿತ್ರೆಯನ್ನು ಹೀಗೇ ಎಂದು ಕಟ್ಟಿಕೊಡಲು ಸಾಧ್ಯವಿಲ್ಲ.

ಶರಣರು ತಮ್ಮ ಬಗೆಗೆ ಎಲ್ಲಿಯೂ ಹೇಳಿಕೊಳ್ಳಲಿಲ್ಲ. ನಂತರದಲ್ಲಿ ಬಂದ ವೀರಶೈವ ಕವಿಗಳು ತಮ್ಮ ಕೃತಿಗಳಲ್ಲಿ ಇವರ ಜೀವನಚರಿತ್ರೆಯನ್ನು ಸ್ಪಷ್ಟವಾಗಿ ನಿರೂಪಿಸಲಿಲ್ಲ. ಹೀಗಾಗಿ ಇಡೀ ಶರಣರ ಚರಿತ್ರೆಯೇ ಗೊಂದಲದ ಗೂಡಾಗಿದೆ. ಇಲ್ಲಿ ಕೇವಲ ಊಹೆ, ತರ್ಕ, ಅನ್ನಿಸಿಕೆಗಳೇ ಪ್ರಧಾನವಾಗಿವೆ.

ನೀಲಾಂಬಿಕೆಯನ್ನು ಕುರಿತು ನಂತರದ ಕವಿಗಳು ಕೆಲವು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ "ನೀಲಮ್ಮನ ಸ್ತೋತ್ರ", "ನೀಲಾಂಬಿಕಾ ಪಂಚವಿಂಶತಿ", "ನೀಲಮ್ಮನ ತ್ರಿವಿಧಿ" ಈ ಮೊದಲಾದವುಗಳನ್ನು ಉದಾಹರಿಸಬಹುದಾಗಿದೆ. "ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ" ಕೃತಿಯಲ್ಲಿ (ಪುಟ - 371) ಪ್ರಮಥರು ನೀಲಾಂಬಿಕೆಯನ್ನು "ಲಿಂಗಪ್ರಾಣಿ' ಎಂದು ಸ್ತೋತ್ರ ಮಾಡಿದ್ದಾರೆ.

"ತಾಯೆ, ಪರಮ ಸುಖಾಚಾರದ ಮೂರ್ತಿಯನಡಗಿಸಿ ನೀನೆಯಾದೆಯವ್ವಾ ತಾಯೆ,
ಮಹಾಜ್ಞಾನ ಕಲ್ಪಿತದಲ್ಲಿ ನೀನೆಯಡಗಿದೆಯವ್ವಾ ತಾಯೆ,
ನೀಲಮ್ಮನೆಂಬ ಸುಖವಾಸಮೂರ್ತಿ ಕಪಿಲಸಿದ್ಧ ಮಲ್ಲಿನಾಥಯ್ಯ,
ನಮ್ಮ ತಾಯೆ ನೀಲಮ್ಮನಾದಳು"
- ಸಿದ್ದರಾಮೇಶ್ವರ (ಸ.ವ.ಸಂ. 4, ವ-1009)

ಈ ವಚನದಲ್ಲಿ ಸಿದ್ದರಾಮನು, ನೀಲಾಂಬಿಕೆಯನ್ನು "ತಾಯೆ", "ತಾಯೆ" ಎಂದು ಪ್ರತಿಸಾಲಿನಲ್ಲಿಯೂ ಗೌರವದಿಂದ ಕರೆದಿದ್ದಾನೆ. ನೀಲಾಂಬಿಕೆಯನ್ನು ಕುರಿತು ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಸ್ಮರಣೆ ಮಾಡಿದ್ದಾರೆ. ತುಂಬ ಗೌರವದಿಂದ ಕಂಡಿದ್ದಾರೆ.

"ನೀಲಮ್ಮನ ನುಡಿಯಿಂದ ಲಿಂಗಪೂಜೆಯ ಸಂಪತ್ತು" ಎಂದು ಕಿನ್ನರಿ ಬೊಮ್ಮಯ್ಯನು ನೀಲಾಂಬಿಕೆಯನ್ನು ನೆನಪಿಸಿಕೊಂಡಿದ್ದಾನೆ. ಲಿಂಗಪೂಜೆಯೇ ನಿಜವಾದ ಸಂಪತ್ತೆಂದು ಶರಣರು ತಿಳಿದುಕೊಂಡಿದ್ದರು. ಅನೇಕ ಜನಪದ ಕವಿಗಳು, ಜನಪದ ಗರತಿಯರು ನೀಲಾಂಬಿಕೆಯನ್ನು ಕುರಿತು ತಮ್ಮ ತ್ರಿಪದಿಗಳಲ್ಲಿ ಸ್ತುತಿ ಮಾಡಿದ್ದಾರೆ.

"ನೀಲವ್ವ ನೀ ಬಾರ, ನೀಲಲೋಚನೆ ಬಾರ
ನೀನೇನ್ನ ಮನೆಗೆ ಇರಬಾರ| ಸೋಮಾರ
ಹಾಲೀಗೆ ಹೆಪ್ಪು ಕೊಡಬಾರ"
(ಕನ್ನಡ ಜಾನಪದ ಗೀತೆಗಳು, ಪು-24, 1963)

ಡಾ. ಬಿ. ಎಸ್. ಗದ್ದಗಿಮಠ ಅವರ "ಕನ್ನಡ ಜಾನಪದ ಗೀತೆಗಳು ಕೃತಿಯಲ್ಲಿ ಪ್ರಕಟವಾಗಿರುವ ಇಂತಹ ತ್ರಿಪದಿಗಳಲ್ಲಿ ಜನಪದರು ಶರಣರನ್ನು ಹೇಗೆ ಭಕ್ತಿಭಾವದಿಂದ ಕಾಣುತ್ತಿದ್ದರೆಂಬುದು ವ್ಯಕ್ತವಾಗುತ್ತದೆ. "ಶರಣರ ನೆನೆದಾರ ಸರಗಿಯ ಇಟ್ಟಾಂಗ" ಎನ್ನುವ ಜನಪದ ಗರತಿಯ ನುಡಿಗಳಲ್ಲಿ ಶರಣರ ಮಹತ್ವವೆಂತಹದೆಂಬುದು ಸ್ಪಷ್ಟವಾಗುತ್ತದೆ. "ಲಿಂಗಪೂಜೆ ಮಾಡುತ್ತಿದ್ದಳೇ| ನಿಜಭಕ್ತಿ ನೀಲಾ, ಲಿಂಗಪೂಜೆ ಮಾಡುತ್ತಿದ್ದಳೆ" ಎಂಬ ಜನಪದ ಹಾಡುಗಳಲ್ಲಿ ನೀಲಾಂಬಿಕೆಯ ಲಿಂಗಪೂಜೆಯ ಬಗೆಗೆ ಪ್ರಸ್ತಾಪಿಸಲಾಗಿದೆ. ಹೀಗೆ ಅನೇಕ ಜನಪದ ಗೀತೆಗಳಲ್ಲಿ ನೀಲಾಂಬಿಕೆಯ ಪ್ರಸ್ತಾಪವಿರುವುದನ್ನು ಕಾಣಬಹುದಾಗಿದೆ.

ಆಧುನಿಕ ಸಾಹಿತ್ಯದಲ್ಲಿ ನೀಲಾಂಬಿಕೆಯ ಬಗೆಗೆ ಮಹತ್ವದ ಸ್ವತಂತ್ರ ಕೃತಿಗಳು ಪ್ರಕಟವಾಗಿರದಿದ್ದರೂ, ಬಸವಣ್ಣನವರನ್ನು ಕುರಿತಾದ ನಾಟಕಗಳಲ್ಲಿ ನೀಲಾಂಬಿಕೆಯ ಪಾತ್ರ ಬಂದಿದೆ. ಅನೇಕ ಏಕಾಂಕ ನಾಟಕಗಳಲ್ಲಿ ನೀಲಾಂಬಿಕೆ ಕಾಣಿಸಿಕೊಂಡಿದ್ದಾಳೆ.ನೀಲಾಂಬಿಕೆಯು ಸ್ತ್ರೀ ಸಾಧ್ಯತೆಯ ಸಂಕೇತವಾಗಿದ್ದಾಳೆ, ವಿಚಾರವಾದಿಯಾಗಿದ್ದಾಳೆ. ಇಂತಹ ವಚನಕಾರ್ತಿಯರ ಬಗೆಗೆ ಸ್ತ್ರೀವಾದಿ ಲೇಖಕಿಯರು ಸೃಜನಶೀಲ ಕೃತಿಗಳನ್ನು ರಚಿಸಬಹುದಾಗಿದೆ.

ನೀಲಾಂಬಿಕೆಯ ವಚನಗಳನ್ನು ಕುರಿತು ಮೂರನೇ ಅಧ್ಯಾಯದಲ್ಲಿ ಆನ್ವಯಿಕ ವಿಮರ್ಶೆಯನ್ನು ಮಾಡಲಾಗಿದೆ. ನೀಲಾಂಬಿಕೆ 288 ವಚನಗಳನ್ನು ರಚಿಸಿರುವುದರಿಂದ ಅದರ ಬಗೆಗೆ ಪ್ರತ್ಯೇಕ ಕೃತಿಯನ್ನೇ ಪ್ರಕಟಿಸಬೇಕಾಗುತ್ತದೆ. ಆಕೆಯ ವಚನಗಳಲ್ಲಿ ವೈವಿಧ್ಯತೆಯಿದೆ. ತಾನು ಹೆಣ್ಣುರೂಪ ಧರಿಸಿದಾಕ್ಷಣ ಹೆಣ್ಣಾಗುವುದಿಲ್ಲ. ಗಂಡಾಗಿ ಹುಟ್ಟಿದಾಕ್ಷಣ ಗಂಡಾಗುವುದಿಲ್ಲ, ಉಭಯದ ಸಂಗವ ಕಂಡು ಕಾಣದಂತಿರಬೇಕೆಂದು ಹೇಳಿದ ಆಕೆಯ ಮಾತು ಬಹು ಮಹತ್ವದ್ದಾಗಿದೆ. ಬಸವಣ್ಣನವರು ತನ್ನ ಪತಿಯಷ್ಟೇ ಅಲ್ಲ, ಅವರು ತನಗೆ ದೊಡ್ಡ ಗುರುವಾಗಿದ್ದರೆಂದು ತನ್ನ ಅನೇಕ ವಚನಗಳಲ್ಲಿ ಪ್ರಸ್ತಾಪಿಸಿದ್ದಾಳೆ.

"ತೆಗೆದುಕೊಡಾ ಎಲಾ ಚಂಡಾಲಗಿತ್ತಿ ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ, ಕೂಡಲಸಂಗಮನಲ್ಲದೆ ಮತ್ತಾರೂ ಅಲ್ಲ" ಎಂಬ ಬಸವಣ್ಣನವರ ಈ ವಚನವನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ನೀಲಾಂಬಿಕೆಗೆ ಬಸವಣ್ಣ ಈ ಮಾತನ್ನು ಹೇಳಿದ್ದಾನೆಂದು ವಿವರಿಸಿದ್ದಾರೆ. ಆದರೆ ಬಸವಣ್ಣನವರು ಈ ಮಾತನ್ನು ತಮಗೆ ತಾವೇ ಹೇಳಿಕೊಂಡಿದ್ದಾರೆ. ತಾನು ಸತಿ, ಲಿಂಗ ಪತಿ; ಸತಿಪತಿಭಾವದಲ್ಲಿ ಈ ವಚನ ರಚನೆಯಾಗಿದೆ. ತಾನು ಲಿಂಗದೇವನಿಗೆ ನಿಜವಾದ ಸತಿಯಲ್ಲ, ತಾನು ಚಂಡಾಲಗಿತ್ತಿಯಾದವಳು ಎಂದು ಬಸವಣ್ಣವರು ಈ ವಚನದಲ್ಲಿ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ. "ಕರಿಯನೇಸುಬಾರಿ ಬೆಳಗಿದರೆ ಬಿಳಿದಾಗಬಲ್ಲದಯ್ಯ?"

"ಡಂಬುಡಳಹು ಎನ್ನದಯ್ಯಾ, ಡಂಬಕನು ನಾನಯ್ಯ" ಎಂಬಂತಹ ವಚನಗಳ ಸಾಲಿಗೆ ಈ ವಚನ ಬರುತ್ತದೆ. ಹೀಗಾಗಿ ಇಲ್ಲಿ ನೀಲಾಂಬಿಕೆಗೆ ಬಸವಣ್ಣನವರು, ಚಂಡಾಲಗಿತ್ತಿಯೆಂದು ಕರೆದಿಲ್ಲವೆಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಇನ್ನು ಕೆಲವರು ಚಂಡಾಲಗಿತ್ತಿ ಪದ ``ಬೆಂಡೊಲೆ''ಯಾಗಿರಬಹುದೆಂದು ತರ್ಕ ಮಾಡಿದ್ದಾರೆ. ನೀಲಾಂಬಿಕೆಯ ವಚನಗಳ ಹಾಗೆ ಆಕೆಯ ಸ್ವರವಚನಗಳೂ ಸತ್ವಯುತವಾಗಿವೆ. ಛಂದೋಬದ್ಧ ಗೀತೆಗಳಾಗಿವೆ. ಇಲ್ಲಿ ಪೂರ್ವಾಶ್ರಮ ನಿರಸನ, ಶೀಲಸಂಪಾದನೆ, ಸಹಭೋಜನ, ರುದ್ರಾಕ್ಷಿ ಈ ಮೊದಲಲಾ'ದ ವಿಷಯಗಳ ಪ್ರಸ್ತಾಪವಿದೆ.

"ಅಂಗದೊಳಗೆ ಗುರುಲಿಂಗದೊಳಗೆ ಮನ
ಜಂಗಮದಲಿ ಧನವರ್ಪಿತವಾಗಿಯೆ
ಲಿಂಗಾಂಗಿತವಾಗಿರಬಲ್ಲಡೆ ಸಂಗನೊಳದು ಶೀಲ"
- (ನೀಲಾಂಬಿಕೆಯ ಸ್ವರವಚನ)

ಎಂಬ ನೀಲಾಂಬಿಕೆಯ ಪದ್ಯದಲ್ಲಿ ಶರಣಧರ್ಮದ ತತ್ವವಡಗಿದೆ. ಹೀಗೆ ನೀಲಾಂಬಿಕೆಯ ವ್ಯಕ್ತಿತ್ವ ಬಹುದೊಡ್ಡದು. ವೈಚಾರಿಕ ನಿಲುವು ಆಕೆಯ ಅನೇಕ ವಚನಗಳಲ್ಲಿ ಕಾಣಿಸಿಕೊಂಡಿದ್ದು, ನೀಲಾಂಬಿಕೆ ಮಹತ್ವದ ವಚನಕಾರ್ತಿಯಾಗಿದ್ದಾಳೆ. 288 ವಚನಗಳನ್ನು ರಚಿಸಿರುವ ನೀಲಾಂಬಿಕೆಯ ವಚನಗಳನ್ನು ಕುರಿತು ಈಗಾಗಲೇ ಅನೇಕ ಲೇಖಕರು ಚರ್ಚಿಸಿದ್ದಾರೆ. ಈ ಕೃತಿಯ ಮೂರನೇ ಅಧ್ಯಾಯದಲ್ಲಿಯೂ ನೀಲಾಂಬಿಕೆಯ ಕೆಲವು ವಚನಗಳನ್ನು ಬಳಸಿಕೊಳ್ಳಲಾಗಿದೆ. ಆಕೆಯ ವಚನಗಳ ವಿಶಿಷ್ಟತೆಯೇನೆಂಬುದನ್ನು ಕುರಿತು ಈ ಸಂದರ್ಭದಲ್ಲಿ ಹೇಳಬೇಕಾಗುತ್ತದೆ.

ಅಕ್ಕಮಹಾದೇವಿಯ ಹಾಗೆ ನೀಲಮ್ಮನ ಅನೇಕ ವಚನಗಳು ಸ್ವಗತಗೀತೆಗಳಾದರೂ, ನೀಲಾಂಬಿಕೆಯ ವಚನಗಳ ತುಂಬ ಬಸವಣ್ಣನವರೇ ಆವರಿಸಿಬಿಟ್ಟಿದ್ದಾರೆ. ಬಸವಣ್ಣನವರೇ ತನ್ನ ಪತಿ ಮತ್ತು ಗುರು ಎಂದು ಗೌರವದಿಂದ ಹೇಳಿರುವ ನೀಲಾಂಬಿಕೆಯ ವಚನಗಳಲ್ಲಿ ಬಸವಣ್ಣನವರ ವ್ಯಕ್ತಿತ್ವವು ವಿಶಿಷ್ಟವಾಗಿ ಮೂಡಿಬಂದಿದೆ.
"ಅಂಗದ ಸಂಗಿಗನಲ್ಲ ನಮ್ಮ ಬಸವಯ್ಯನು
ಪ್ರಾಣದ ಭ್ರಮೆಯವನಲ್ಲ ನಮ್ಮ ಬಸವಯ್ಯನು" (ವ-2)
"ಆಡದ ಭಾಷೆಯ ನುಡಿವಳಲ್ಲ ನಾನು ಬಸವಾ
ಆ ನುಡಿಯ ಭಾಷೆಯ ಕೇಳುವಳಲ್ಲ ನಾನು ಬಸವಾ" (ವ-38)
ಎರಡಿಲ್ಲದ ವಸ್ತುವೆ ನೀನೆರಡಾದೆಯಲ್ಲ ಬಸವಯ್ಯ ಎರಡನೇಕೀಕರಿಸಿ ಭ್ರಮೆಯ ಬಿಡಿಸಿದೆಯಲ್ಲ ಬಸವಯ್ಯ" (ವ-89)
ಎಲೆ ಅಯ್ಯಗಳಿರಾ, ಎಲೆಗಳೆದ ವೃಕ್ಷವ ಕಂಡಿರೆಬಸವನ?
ಎಲೆ ಅಯ್ಯಗಳಿರಾ, ರೂಹಿಲ್ಲದ ಚೋಹವ ಕಂಡಿರೆ ಬಸವನ?" (ವ-93)
ಎಸಳದಳವಳಿದು ನಿಂದ ಬಸವಾ
ದಳರೂಪಿತದಲ್ಲಿ ಕುರುಹಡಿಗಿದ ಬಸವಾ" (ವ-104)
ಏಕಾಂಗವೆನಗೆ ಅನೇಕ ಬಸವಾ
ಪ್ರಾಣ ಪ್ರಸನ್ನವದನೆಯಾದೆನು ಬಸವಾ" (ವ-119)
ಕಲ್ಲಮಾಲೆಯ ಕಡಿದಾತ ಬಸವಯ್ಯನು ಕಾಲನ ಗೆಲಿದಾತ ಬಸವಯ್ಯನು" (ವ-136)

ಹೀಗೆ ನೀಲಾಂಬಿಕೆಯ ವಚನಗಳ ತುಂಬ ಬಸವಣ್ಣನವರು ತುಂಬಿಕೊಂಡಿದ್ದಾರೆ. ಅಕ್ಕನ ಚೆನ್ನಮಲ್ಲಿಕಾರ್ಜುನ ಅಮೂರ್ತರೂಪವಾಗಿ ವರ್ಣನೆಗೆ ಒಳಗಾಗಿದ್ದರೆ, ನೀಲಾಂಬಿಕೆಯ ಬಸವಣ್ಣ ಮೂರ್ತರೂಪದ ಮಹಾವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾನೆ. ಅಂಡಜವಳಿದ, ಪಿಂಡಜವಳಿದ, ಆಕಾರವಳಿದ ನಿರಾಕಾರವಳಿದ, ಸಂಗವಳಿದ, ನಿಸ್ಸಂಗವಳಿದ ಬಸವಣ್ಣನವರು ನೀಲಾಂಬಿಕೆಯ ದೃಷ್ಟಿಯಲಿ ಮಹಾತ್ಮರಾಗಿ ಕಾಣಿಸಿ ಕೊಂಡಿದ್ದಾರೆ. ಇಷ್ಟೆಲ್ಲ ರೀತಿಯಲ್ಲಿ ಬಸವಣ್ಣನವರನ್ನು ವರ್ಣಿಸಿದ ನೀಲಾಂಬಿಕೆಯು "ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ, ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ" ಎಂಬುದನ್ನೂ ಹೇಳಿದ್ದಾಳೆ. ಬಸವಣ್ಣನವರು ತನ್ನ ವ್ಯಕ್ತಿತ್ವದ ಬೆಳವಣಿಗೆಗೆ ಕಾರಣವಾದ ವಿಷಯವನ್ನು ನೀಲಮ್ಮ ಕೃತಜ್ಞತೆಯಿಂದ ಸ್ಮರಿಸಿದ್ದಾಳೆ.

"ಅಲ್ಲಮನ ವಂಶದವಳು ನಾನು, ಅಜಾತ ಶರಣರ ವಂಶದವಳು ನಾನು. ಅಪ್ರತಿಮ ಶರಣರ ವಂಶದವಳು ನಾನು" ಎಂದು ತನ್ನ ವಚನದಲ್ಲಿ ಹೇಳಿಕೊಂಡಿರುವ ನೀಲಾಂಬಿಕೆ ಇಡೀ ಶರಣ ಸಂಕುಲವನ್ನು ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾಳೆ. "ಆನು ಭಕ್ತೆಯಲ್ಲ, ಆನು ವಿರಕ್ತೆಯಿಲ್ಲ" ಎಂಬ ಆಕೆಯ ನುಡಿಯಲ್ಲಿ ಆತ್ಮಶೋಧನೆ ಇರುವುದನ್ನು ಕಾಣಬಹುದಾಗಿದೆ.

"ಇಪ್ಪೆಯ ಹೂವನನುಗೊಳಿಸಲು ಇಪ್ಪೆ ಹಿಪ್ಪೆಯಾಯಿತ್ತು
ಸರ್ಪನ ಶಿರಕಂಠದಲ್ಲಿ ಮೂಗುತಿಯ ಸರಗೊಳಿಸಿದೆನಯ್ಯಾ" (ವ-53)
"ಇರವರಿದು ಪರವ ಮರದೆ
ಆ ಪರವನರಿದು ಪರಬ್ರಹ್ಮವ ಕಂಡೆನಯ್ಯ" - (ವ-55)
"ಎಲೆಗಳೆದ ಮರದಲ್ಲಿ ನೆಳಲನರಸಲಿಲ್ಲ
ಕಳೆಯರತ ದೀಪದಲ್ಲಿ ಬೆಳಗನರಸಲಿಲ್ಲ" (ವ-97)

"ನೀರುಂಡ ಸಾರ ನಿಸ್ಸಾರವಾಯಿತ್ತಯ್ಯಾ
ನಿರಾಳದ ಪದ ನಿಃಪ್ರಪಂಚಿನಲ್ಲಿ ಅಡಗಿತ್ತಯ್ಯಾ" (ವ-188)
"ಪಯಣವಿಲ್ಲದೆ ಗಮನವ ಕಂಡವರುಂಟೆ?
ಗತಿಯಿಲ್ಲದೆ ಪೂಜೆಯ ಮಾಡಿದವರುಂಟೆ?" (ವ-193)

ಇಂತಹ ಅನೇಕ ವಚನಗಳಲ್ಲಿ ನೀಲಾಂಬಿಕೆಯ ಜ್ಞಾನ, ಅನುಭಾವ ಕಾಣಿಸಿಕೊಂಡಿದೆ. ಆಕೆ ವಿಚಾರಪತ್ನಿಯಾಗಿ ಹೇಗೆ ಬೆಳೆದು ನಿಂತಳೆಂಬುದನ್ನು ಕೆಲವು ವಚನಗಳು ಹೇಳುತ್ತವೆ. ಶರಣರ ಸಹವಾಸದಲ್ಲಿಯೇ ಬೆಳೆದು, ಶರಣರು ದಾರಿ ತಪ್ಪಿದಾಗ ನಿಜವಾದ ದಾರಿತೋರಿಸಿದ ಶ್ರೇಯಸ್ಸು ಈ ಶರಣೆಯರಿಗೆ ಸಲ್ಲುತ್ತದೆ. "ಮನವಿಲ್ಲದೆ ತನುವ ಕುಡ ಹೋದರೆ, ಆ ತನು ಮನದಲ್ಲಿ ನಿಂದಿತ್ತು." ಎಂಬ ಮಹತ್ವದ ಮಾತನ್ನಾಡಿದ್ದಾಳೆ. ಬದುಕಿನಲ್ಲಿ ತಾನು ಕಂಡುಂಡ ಸತ್ಯಗಳನ್ನೇ ನೀಲಾಂಬಿಕೆ ತನ್ನ ವಚನಗಳಲ್ಲಿ ಬಿಚ್ಚಿಟ್ಟಿದ್ದಾಳೆ "ಮನಸ್ಸಿನಲ್ಲಿ ಏಕಾಂತವೇರ್ಪಟ್ಟಾಗ ಮಾತಿನ ಹಂಗೇಕೆ? ಅರ್ಪಿತದ ಹಂಗ ಹರಿದ ಬಳಿಕ ಅಜಾತನ ಒಲುಮೆ ಏತಕ್ಕೆ?" ಎನ್ನುವ ಅವಳ ಅನೇಕ ಪ್ರಶ್ನೆಗಳಲ್ಲಿ ವೈಚಾರಿಕತೆಯ ಬೆಳಕಿದೆ.

ಬಸವಣ್ಣನವರ ಬದುಕಿನಲ್ಲಿ ಮಹತ್ವದ ಪಾತ್ರವಹಿಸಿದ ನೀಲಾಂಬಿಕೆ ವಚನ ಚಳವಳಿಯ ಆಶಯವನ್ನು ಸಾಮಾನ್ಯ ಜನತೆಗೆ ಬಿಡಿಸಿ ಹೇಳಿದ್ದಾಳೆ. ಬಿಜ್ಜಳನ ತಂಗಿಯಾಗಿ ಶ್ರೀಮಂತಿಕೆಯಲ್ಲಿ ಬೆಳೆದ ನೀಲಾಂಬಿಕೆ, ಬಸವಣ್ಣನವರನ್ನು ಮದುವೆಯಾದ ನಂತರ ತುಂಬ ಸರಳ ಜೀವನ ನಡೆಸಿದ್ದಾಳೆ. ತಾನು ಅರಮನೆಯೊಳಗಿದ್ದೆಯೆಂಬುದನ್ನೇ ಮರೆತಿದ್ದಾಳೆ. ಜೀವನದುದ್ದಕ್ಕೂ ಬಸವಣ್ಣನವರ ಹೋರಾಟದಲ್ಲಿ ಭಾಗವಹಿಸಿದ ನೀಲಾಂಬಿಕೆಯು, ಬಸವಣ್ಣನವರ ಉಸಿರಲ್ಲಿ ಉಸಿರಾಗಿ ಬೆರೆತು ಹೋಗಿದ್ದಾಳೆ. ಬಸವಣ್ಣ ಮತ್ತು ನೀಲಲೋಚನೆಯ ಸಂಗಮವು ಹೋರಾಟ ಮತ್ತು ವೈಚಾರಿಕತೆಯ ಸಂಗಮವಾಗಿದೆ.

ವಿಜಯಶ್ರೀ ಸಬರದ
9845824834

ಮುಂದುವರೆಯುವುದು....
ಈ ಅಂಕಣದ ಹಿಂದಿನ ಬರೆಹಗಳು:
ಅಕ್ಕಮಹಾದೇವಿ

ಚರಿತ್ರೆ ಅಂದು-ಇಂದು

MORE NEWS

ಹೊಸ ರೂಪಕದ ಕವಿತೆಗಳು 

07-11-2024 ಬೆಂಗಳೂರು

"ಲೋಕದೊಂದಿಗೆ ಅನುಸಂಧಾನ ಮಾಡುವ ಇಲ್ಲಿಯ ಕವಿತೆಗಳು ಹೊಸ ಕಾವ್ಯರೂಪಕದ ಬದುಕನ್ನು ನೋಡುತ್ತವೆ. ಇದೊಂದು ಕಾವ್ಯ ಪರಂ...

ಗುರುಗಳ ಮಹಿಮೆ ಕಥೆಯಲ್ಲಿರುವ ತಾರ್ಕಿಕತೆ

06-11-2024 ಬೆಂಗಳೂರು

"ಬದುಕಿನ ಏಳುಬೀಳುಗಳ ನಡುವೆ ಗುಮಾಸ್ತರಾಗಿ ನೌಕರಿ ಆರಂಭಿಸಿದ ನಂತರ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ಸೇವೆ ಮಾಡಿರುವ...

ಯಾರು ಅರಿಯದ ವೀರನ ತ್ಯಾಗ

31-10-2024 ಬೆಂಗಳೂರು

"ಮಲೆನಾಡಿನ ದಟ್ಟ ಕಾನನದ ನಡುವೆ ತುಂಗೆಯ ತಟದಲ್ಲಿ ಜನಿಸಿದ ಕುವೆಂಪುರವರು ಕುಪ್ಪಳ್ಳಿ ಎಂಬ ಊರಿನಿಂದ ಅಂತಾರಾಷ್ಟ್ರೀ...