ನವೋದಯ ಲೇಖಕರ ಜೀವನಾಡಿಯಾಗಿಯೇ ಠಾಕೂರರ ಸಾಹಿತ್ಯ ಪ್ರಭಾವಿಸಿದೆ


“ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಠಾಕೂರರ ಕೃತಿಗಳ ಅನುವಾದಗಳು ಅದರ ಹಿಂದಿನ ಸಾಂಸ್ಕೃತಿಕ ರಾಜಕಾರಣ ಹಾಗೂ ಅನುವಾದಗಳ ಆಶಯಗಳನ್ನು ಶೋಧಿಸಿಕೊಳ್ಳುವುದು ಮುಖ್ಯವೆಂದು ಕಾಣುತ್ತದೆ” ಎನ್ನುತ್ತಾರೆ ಕೆ.ಸಿ. ಶಿವಾರೆಡ್ಡಿ. ಅವರು ಜಿ. ರಾಮನಾಥ ಭಟ್ ಅವರ (ವಿಶ್ವಕವಿ ಗುರುದೇವ ರವೀಂದ್ರನಾಥ ಠಾಕೂರರ) ‘ಬಹುರೂಪಿ ಗೀತಾಂಜಲಿ’ ಕೃತಿಗೆ ಬರೆದ ಅನಿಸಿಕೆ ನಿಮ್ಮ ಓದಿಗಾಗಿ.

ಠಾಕೂರರು ಹುಟ್ಟಿ (1861) 2023ಕ್ಕೆ 163 ವರ್ಷಗಳು ತುಂಬಿವೆ. ಅವರ ಸಾಹಿತ್ಯ, ಸಂಸ್ಕೃತಿ ಚಿಂತನೆ, ವಸಾಹತು ಸಂದರ್ಭದಲ್ಲಿ ಭಾರತದ ಎಲ್ಲ ಭಾಷೆಗಳ ಮೇಲೆ ಒಂದಲ್ಲ ಒಂದು ಬಗೆಯಲ್ಲಿ ಪ್ರಭಾವ ಬೀರಿದೆ. ಕನ್ನಡದ ಮಟ್ಟಿಗೆ ನವೋದಯ ಲೇಖಕರ ಜೀವನಾಡಿಯಾಗಿಯೇ ಠಾಕೂರರ ಸಾಹಿತ್ಯ ಪ್ರಭಾವಿಸಿದೆ. ಹಾಗೆಯೇ ಅವರ ಕಥೆ, ಕಾದಂಬರಿ, ಭಾವಗೀತೆ, ನಾಟಕ, ಚಿತ್ರಕಲೆ, ಶಿಕ್ಷಣದ ವಿಚಾರಗಳು ನಿರಂತರವಾಗಿ ಕನ್ನಡಕ್ಕೆ ಅನುವಾದಗೊಂಡಿವೆ. ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಠಾಕೂರರ ಕೃತಿಗಳ ಅನುವಾದಗಳು ಅದರ ಹಿಂದಿನ ಸಾಂಸ್ಕೃತಿಕ ರಾಜಕಾರಣ ಹಾಗೂ ಅನುವಾದಗಳ ಆಶಯಗಳನ್ನು ಶೋಧಿಸಿಕೊಳ್ಳುವುದು ಮುಖ್ಯವೆಂದು ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಠಾಕೂರರ ಅನುವಾದ, ಕೃತಿಗಳ ಅನುವಾದ ಹಾಗೂ ಕನ್ನಡ- ಬಂಗಾಳಿ ಸಾಂಸ್ಕೃತಿಕ ಅನುಸಂಧಾನದ ನೆಲೆಗಳನ್ನು ಶೋಧಿಸಿಕೊಳ್ಳುವುದು ಅಗತ್ಯವೆಂದು ತಿಳಿದಿದ್ದೇನೆ.

ಪ್ರಾಚ್ಯ ಮತ್ತು ಪಾಶ್ಚಾತ್ಯ ಮೌಲ್ಯಗಳ ಸಂಘರ್ಷ ಮೊತ್ತಮೊದಲು ಎದುರಾದದ್ದು ಬಂಗಾಳದಲ್ಲಿ. ಅನಂತರ ಮಹಾರಾಷ್ಟ್ರ, ಕರ್ನಾಟಕಗಳಲ್ಲೂ ಪ್ರಬಲವಾದ ಹೋರಾಟಕ್ಕೆ ಎಡೆಮಾಡಿಕೊಟ್ಟಿತು. ಈ ಎರಡೂ ಸಂಸ್ಕೃತಿಗಳ ಸಂಘರ್ಷವು ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನೇ ಉಂಟುಮಾಡಿತು. ಸಾಮಾಜಿಕ ಹಾಗೂ ಧಾರ್ಮಿಕ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗುತ್ತ ಭಾರತೀಯ ಸಾಂಪ್ರದಾಯಿಕ ಸಮಾಜದಲ್ಲಿದ್ದ ಅನಿಷ್ಟಗಳನ್ನು ನಿರ್ಮೂಲನ ಮಾಡಲು ಕ್ರಿಯಾಶೀಲರಾದವರಲ್ಲಿ ಬಹುಮುಖ್ಯರೆಂದರೆ ದೇವೇಂದ್ರನಾಥ ಠಾಕೂರ್, ಈಶ್ವರಚಂದ್ರ ವಿದ್ಯಾಸಾಗರ, ಕೇಶವಚಂದ್ರ ಮೊದಲಾದವರು.

ಸ್ತ್ರೀ ಸ್ವಾತಂತ್ರ್ಯ, ಯಜ್ಞೋಪವೀತ ಪರಿತ್ಯಾಗ, ಸತೀಪದ್ಧತಿ, ಅಸವರ್ಣ ವಿವಾಹ ಮೊದಲಾದ ಸುಧಾರಣೆಗಳಿಗಾಗಿ ಈ ಮೇಲಿನ ಸುಧಾರಕರು ಆ ಕಾಲದಲ್ಲಿ ತೊಡಗಿದರು. ಭಾರತೀಯ ಸಾಮಾಜಿಕ ಸುಧಾರಕ ಹಾಗೂ ಕ್ರೈಸ್ತ ಪಾದ್ರಿಗಳ ಸಭೆಗಳು, ಉಪನ್ಯಾಸಗಳು, ಚರ್ಚೆಗಳು, ವಾಗ್ವಾದಗಳು ಅಂದಿನ ಸಮಾಜವನ್ನು, ಶ್ರೀ ಸಾಮಾನ್ಯನನ್ನು ಒಂದು ರೀತಿಯ ಗೊಂದಲದಲ್ಲಿ ಸಿಲುಕಿಸಿದ್ದವೆನ್ನಬಹುದು. ಪ್ರಾಚ್ಯ ಮತ್ತು ಪಾಶ್ಚಾತ್ಯ ಮೌಲ್ಯಗಳು ಒಂದನ್ನೊಂದು ಕಬಳಿಸುತ್ತಿದ್ದ ಸಂದರ್ಭ ಅದಾಗಿತ್ತು. ಈ ಕಾಲಮಾನವನ್ನು ಕುವೆಂಪು 'ಭರತ ಖಂಡವು ಕುಲುಮೆಯ ಮೇಲಿನ ಮೂಷೆಯಂತಿತ್ತು' ಎನ್ನುತ್ತಾರೆ.

ಹತ್ತೊಂಬತ್ತನೆಯ ಶತಮಾನದ ಅಂತ್ಯಭಾಗದಲ್ಲಿ ಪಾಶ್ಚಾತ್ಯ ಶಿಕ್ಷಣ ಪದ್ಧತಿ ಭಾರತಕ್ಕೆ ಒದಗಿಸಿಕೊಟ್ಟ ಕಾರ್ಯೋತ್ಸಾಹ ಚೈತನ್ಯಗಳು ಸಾಮಾಜಿಕ ಹಾಗೂ ಧಾರ್ಮಿಕ ನೆಲೆಗಳಲ್ಲಿ ಉಂಟುಮಾಡಿದವು. ಜೊತೆಗೆ ಭರತಖಂಡವೆಲ್ಲ ಏಕ ರಾಷ್ಟ್ರವೆಂಬ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಿದವು. ಈ ಹಿನ್ನೆಲೆಯಲ್ಲಿ ಆ ಕಾಲಮಾನದಲ್ಲಿ ನಡೆದ ರಾಷ್ಟ್ರೀಯ ಮಹಾಸಭೆಗಳು, ರಾಜಕೀಯ ಆಂದೋಲನಗಳು ಧರ್ಮಕೇಂದ್ರೀತ ಜನರ ಮನಸ್ಸನ್ನು ರಾಜಕೀಯದ ಕಡೆಗೆ ಅವಸ್ಥಾಂತರಗೊಳಿಸಿದವು. ಇದೇ ಕಾಲಮಾನದಲ್ಲಿ ಜೀವಿಸಿದ್ದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರತಿಭೆಗಳಾದ ಬಂಕಿಮಚಂದ್ರ, ರವೀಂದ್ರನಾಥ ಠಾಕೂರ್ ಅವರಂಥ ಸೃಷ್ಟಿಶೀಲ ಲೇಖಕರು ಪರಕೀಯ ಆಕರ್ಷಣೆ-ವಿಕರ್ಷಣೆಗಳಿಗೆ ಒಳಗಾಗುತ್ತಲೇ ಆಕ್ರಮಣಶೀಲ ಸಂಸ್ಕೃತಿಗೆ ಪ್ರತಿರೋಧ ಒಡ್ಡಿರುವುದನ್ನು ವಿಶದಪಡಿಸುತ್ತವೆ. ಈ ಪ್ರತಿರೋಧದಲ್ಲಿಯೇ ಭಾರತೀಯ ನವೋದಯದ ವಿಕಾಸವನ್ನು ಗುರುತಿಸಿಕೊಳ್ಳುತ್ತೇವೆ. ಆ ಕಾಲದ ಸಂಕೀರ್ಣವಾದ ರಾಜಕೀಯ ಹಾಗೂ ಸಾಂಸ್ಕೃತಿಕ ಬದುಕನ್ನು ನಿಶ್ಚಿತ ವಿಮರ್ಶೆಗೆ ಠಾಕೂರರು ಗುರಿಪಡಿಸಿದರು. ಆ ಮೂಲಕ ತಮ್ಮದೇ ಆದ ಅನನ್ಯತೆಯನ್ನು ಕಂಡುಕೊಂಡರು. ಸಾಹಿತ್ಯ ಸಂಗೀತ ಶಿಕ್ಷಣ ಚಿತ್ರಕಲೆ ಮೊದಲಾದ ಸೃಷ್ಟಿಶೀಲ ಕೃತಿಗಳಲ್ಲಿ ಹಾಗೂ ಪ್ರಯೋಗಗಳಲ್ಲಿ ಪ್ರಾಚ್ಯ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಚಿಂತನೆಗಳನ್ನು ಮುಖಾಮುಖಿಯಾಗಿಸಿದರು. ಆ ಮುಖೇನ ಹೊಸ ವಿಚಾರಧಾರೆಯೊಂದನ್ನು ಕಟ್ಟಿಕೊಂಡು ತಮ್ಮ ಕೃತಿಗಳಲ್ಲಿ ಪ್ರಕಟಪಡಿಸಿದರು.

ಠಾಕೂರರ ಕೃತಿಗಳಲ್ಲಿ ಸ್ವಾತಂತ್ರ್ಯದ ಗುರಿ, ಭಾರತೀಯ ಸಂಸ್ಕೃತಿಯ ಮೌಡ್ಯತೆಯ ಖಂಡನೆ, ಪ್ರಗತಿ ಮತ್ತು ಪರಂಪರೆಗಳ ಚಿಂತನೆ, ಹೊಸಕಾಲದ ಬಗೆಗಿನ ಆಕರ್ಷಣೆ, ಪಾಶ್ಚಾತ್ಯ ಸಂಸ್ಕೃತಿಯ ವೈಜ್ಞಾನಿಕ ಶೋಧಗಳ ಬಗ್ಗೆ ಶ್ರದ್ದೆ, ಭಾರತೀಯ ಸಂಸ್ಕೃತಿಯ ವಿಶಿಷ್ಟತೆಯ ಬಗೆಗಿನ ಗೌರವ, ಆಂಗ್ಲರ ಸಾಮ್ರಾಜ್ಯಶಾಹಿ ಕ್ರೌರದಯದ ಖಂಡನೆ, ಭಾಷೆ ಹಾಗೂ ಶಿಕ್ಷಣದ ಬಗೆಗಿನ ಚಿಂತನೆಗಳು, ಪೂರ್ವ ಮತ್ತು ಪಶ್ಚಿಮದ ಅನುಸಂಧಾನದ ಅಗತ್ಯತೆ ಬಹುಮುಖ್ಯ ಆಶಯಗಳಾಗಿ ಅವರ ಕೃತಿಗಳಲ್ಲಿ ವಿಶ್ಲೇಷಣೆಗೊಳಗಾದವು.

ಇಂಥ ಅನೇಕ ಸಂಘರ್ಷಾತ್ಮಕ ಸಂದರ್ಭದಲ್ಲಿ (ಸಾಂಸ್ಕೃತಿಕ ಪರಿಸರವೊಂದು ಸಮೃದ್ಧಗೊಂಡು ಅತ್ಯಂತ ಉನ್ನತ ಮಟ್ಟವನ್ನು ತಲುಪಿದ ಕಾಲಘಟ್ಟದಲ್ಲಿ) ರವೀಂದ್ರನಾಥ ಠಾಕೂರರ ಸಾಹಿತ್ಯ ಕೃಷಿ ಆರಂಭವಾಯಿತು. ಒಂದು ಕಡೆ ಭಾರತೀಯ ಸಮಾಜದ ಲೋಪದೋಷಗಳ, ಮೌಡ್ಯತೆಗಳ ವಿಮರ್ಶೆ, ಮತ್ತೊಂದು ಕಡೆ ಭಾರತೀಯ ಸಂಸ್ಕೃತಿಗೆ ಪಾಶ್ಚಾತ್ಯ ನಾಗರಿಕತೆಯಿಂದ ಎದುರಾದ ಕಳವಳಕ್ಕೆ ಠಾಕೂರರು ಪ್ರತಿಕ್ರಿಯಿಸಿದ ಕಾಲವೂ ಇದಾಗಿತ್ತು. ಆಂಗ್ಲ ರಾಜಕೀಯ ಆಕ್ರಮಣವು ಇಡೀ ರಾಷ್ಟ್ರವನ್ನು ಅಲ್ಲೋಲಕಲ್ಲೋಲ ಮಾಡುತ್ತಿದ್ದು ಪರಕೀಯವೆಲ್ಲವೂ ನೂತನವೆಂಬ ಶ್ರೇಷ್ಠವಾದುದೆಂಬ ವಾದಗಳು ಪ್ರಚಲಿತವಾಗುತ್ತಿದ್ದ ಕಾಲದಲ್ಲಿ ಠಾಕೂರರು ನಿರ್ದಾಕ್ಷಿಣ್ಯವಾಗಿ ಅಂತಹ ವಿಚಾರಗಳನ್ನು ತಮ್ಮ ಕೃತಿಗಳಲ್ಲಿ ಪುನರ್‌ವಿಮರ್ಶೆಗೆ ಗುರಿಪಡಿಸುತ್ತಿದ್ದರು. ಪೂರ್ವ- ಪಶ್ಚಿಮಗಳ ಸಮನ್ವಯವಾಗದೆ ಸಂಘರ್ಷ ನಿಲ್ಲದೆಂಬ ಅವರ ನಿಲುವು, ಭಾರತೀಯ ಸಂಸ್ಕೃತಿಗೆ ವೈಜ್ಞಾನಿಕ ಸ್ಪರ್ಶ, ಪಾಶ್ಚಾತ್ಯ ಸಂಸ್ಕೃತಿಗೆ ಪೌರಾತ್ಯ ಸಂಸ್ಕೃತಿಯ ಆಧ್ಯಾತ್ಮ ಸ್ಪರ್ಶದ ಅಗತ್ಯ ಇದೆ ಎಂಬುದನ್ನು ಮನಗಾಣಿಸಿತು.

- ಕೆ.ಸಿ. ಶಿವಾರೆಡ್ಡಿ

MORE FEATURES

ಹಳ್ಳಿಯ ಬದುಕನ್ನು ಚಿತ್ರಿಸುವ ಕೆಲವು ಸುಂದರ ತುಣುಕುಗಳಿವೆ

02-01-2025 ಬೆಂಗಳೂರು

“ಸಮಾಜೋ ಸಾಂಸ್ಕೃತಿಕ ಸಂರಚನೆಯನ್ನು ಆಳುತ್ತಿರುವ ಊಳಿಗಮಾನ್ಯ ಪದ್ಧತಿಯ ಪ್ರಜ್ಞೆ ಮತ್ತು ಅದರಲ್ಲಿ ಆಳವಾಗಿ ಬೇರೂರಿ...

ಹಾದು ಬಂದ ದಾರಿಯ ಮೇಲೆ ಬೆಳಕು ಚೆಲ್ಲುತ್ತದೆ

02-01-2025 ಬೆಂಗಳೂರು

"ಆ ಶಾಲೆಯ ಸಿಬ್ಬಂದಿಯೊಂದಿಗೆ ಅವಳು ತಾತ್ಕಾಲಿಕ ಸಂಬಂಧ ಉಂಟಾಗಿ, ಅದು ಊರಿನವರ ಮಾತುಕತೆಗೆ ಆಹಾರವಾಗುತ್ತದೆ. ಕಿಡಿಗ...

ಈಗಲೂ ಇದು ನನಗೊಂದು ಅಚ್ಚರಿಯ ಸಂಗತಿ

02-01-2025 ಬೆಂಗಳೂರು

“ಈ ಕೃತಿಯಲ್ಲಿ ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ, ಸಂಗೀತ, ವ್ಯಕ್ತಿಚಿತ್ರ ಮೊದಲಾದ ವಿಷಯಗಳ...