ಮೃತ್ಯುಂಜಯ ಕಾದಂಬರಿ ತಾತ್ವಿಕ ವಿಶ್ಲೇಷಣೆ

Date: 14-09-2024

Location: ಬೆಂಗಳೂರು


"ಚರಿತ್ರೆಯ ಬಗೆಗಿರುವ ಅವರ ಆಸಕ್ತಿ ಚರಿತ್ರೆಯ ಸಂಗತಿಗಳನ್ನು ಮಾನವಶಾಸ್ತ್ರಿಯ ದೃಷ್ಟಿಕೋನದಲ್ಲಿ ವಿಶ್ಲೇಷಿಸುವಂತೆ ಮಾಡಿದೆ. ಮಾನವನ ಅಭ್ಯುದಯಕ್ಕೆ ಅಡ್ಡಿಯಾದ ವರ್ಗತಾರತಮ್ಯದ ಕಾಲಘಟ್ಟವನ್ನು ಮತ್ತು ಅದನ್ನು ಮೀರುವ ಆಯಾಮಗಳನ್ನು ಮೃತ್ಯುಂಜಯ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈಗಾಗಲೆ ಸಿದ್ಧವಾದ ಚರಿತ್ರೆಯ ಬರವಣಿಗೆಗಿಂತ ವಿಭಿನ್ನವಾದ ಚರಿತ್ರೆಯ ವಿನ್ಯಾಸವನ್ನು ಈ ಕೃತಿಯಲ್ಲಿ ತಂದಿದ್ದಾರೆ," ಎನ್ನುತ್ತಾರೆ ಅಂಕಣಕಾರ ಹಳೆಮನೆ ರಾಜಶೇಖರ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ʻಮೃತ್ಯುಂಜಯ ಕಾದಂಬರಿಃ ತಾತ್ವಿಕ ವಿಶ್ಲೇಷಣೆʼ ಕುರಿತು ಬರೆದಿದ್ದಾರೆ.

ನಿರಂಜನರು ಸಾಹಿತ್ಯ ರಚನೆಯನ್ನು ಸೌಂದರ್ಯದ ನೆಲೆಯಲ್ಲಿ ನೋಡದೆ ಸಾಮನ್ಯರ ಬವಣೆಗಳ ನೆಲೆಯಲ್ಲಿ ನೋಡಿದರು. ಇದರಿಂದಾಗಿ ಸಾಮನ್ಯರ ಬದುಕಿನ ವಿನ್ಯಾಸವೇ ಅವರ ಸಾಹಿತ್ಯದಲ್ಲಿ ಕಾಣುತ್ತೇವೆ. ಅವರ ಕಥನ ಸಾಹಿತ್ಯವು ಜನ ಸಾಮನ್ಯರ ಜೀವನ ಕಥನವೇ ಆಗಿದೆ. ಮಾನವನ ಉಗಮದಿಂದ ಇಂದಿನ ವರೆಗೆ ಹಂತಹಂತವಾಗಿ ಸಾಮನ್ಯ ಜನರು ಯಾವ ರೀತಿಯ ಶೋಷಣೆ, ದಬ್ಬಾಳಿಕೆಗೆ ಈಡಾಗುತ್ತಾ ಬಂದಿದ್ದಾರೆ ಎಂಬುದನ್ನು ಚರಿತ್ರೆಯ ಆಳವಾದ ಅಧ್ಯಯನದಿಂದ ತಮ್ಮ ಕಥನದಲ್ಲಿ ಕಟ್ಟಿದ್ದಾರೆ. ಚರಿತ್ರೆಯ ಬಗೆಗಿರುವ ಅವರ ಆಸಕ್ತಿ ಚರಿತ್ರೆಯ ಸಂಗತಿಗಳನ್ನು ಮಾನವಶಾಸ್ತ್ರಿಯ ದೃಷ್ಟಿಕೋನದಲ್ಲಿ ವಿಶ್ಲೇಷಿಸುವಂತೆ ಮಾಡಿದೆ. ಮಾನವನ ಅಭ್ಯುದಯಕ್ಕೆ ಅಡ್ಡಿಯಾದ ವರ್ಗತಾರತಮ್ಯದ ಕಾಲಘಟ್ಟವನ್ನು ಮತ್ತು ಅದನ್ನು ಮೀರುವ ಆಯಾಮಗಳನ್ನು ಮೃತ್ಯುಂಜಯ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈಗಾಗಲೆ ಸಿದ್ಧವಾದ ಚರಿತ್ರೆಯ ಬರವಣಿಗೆಗಿಂತ ವಿಭಿನ್ನವಾದ ಚರಿತ್ರೆಯ ವಿನ್ಯಾಸವನ್ನು ಈ ಕೃತಿಯಲ್ಲಿ ತಂದಿದ್ದಾರೆ. ಅಂದರೆ ಚರಿತ್ರೆಯ ಬರವಣಿಗೆಯನ್ನು ಈ ಕೃತಿಯಲ್ಲಿ ಮಾಡುತ್ತಿಲ್ಲ. ಸೃಜನಶೀಲ ಮನಸ್ಸೊಂದು ತನ್ನ ಕಥನದ ಮೂಲಕ ಒಂದು ಕಾಲಘಟ್ಟಕ್ಕೆ ಮುಖಾಮುಖಿಯಾಗುವ ಸಂದರ್ಭವನ್ನು ಕಾಣುತ್ತೇವೆ. ನಿರಂಜನರು ಜಗತ್ತಿನ ಚರಿತ್ರೆಯನ್ನು ಓದುವಾಗ ಅದರ ಬೆಳವಣಿಗೆಗೆ ರೋಮಾಂಚಿತರಾಗಿ ಆ ಕುರಿತು ಕಾದಂಬರಿ ಬರೆಯುವ ಆಲೋಚನೆ ಮಾಡಿದ್ದಾರೆ. ಅದು ಇರುವ ಚರಿತ್ರೆಯ ಮಾನದಂಡಗಳಿಗೆ ವಿಭಿನ್ನವಾದ ಬಾವನಾತ್ಮಕ ಮತ್ತು ಮಾನವೀಯ ಸ್ಪರ್ಷ ತರುವ ಪ್ರಯತ್ನ ಮಾಡಿದೆ. ಇದರಿಂದಾಗಿ ನಿರಂಜನರ ಚರಿತ್ರೆಯ ಪರಿಕಲ್ಪನೆ ಜನಸಾಮನ್ಯರ ದೌನಂದಿನ ಜೀವನ ಸಂಗತಿಗಳನ್ನು ಅನಾವರಣ ಮಾಡುವುದೇ ಆಗಿದೆ. ಇವರು ತಮ್ಮ ಕಥನದ ಮೂಲಕ ಸಾಮನ್ಯರ ಚರಿತ್ರೆಯನ್ನು ಬರೆಯುತ್ತಿದ್ದಾರೆ. "ಸಾಹಿತಿಗೆ ಇತಿಹಾಸವೆಂದರೆ ಸಾಮನ್ಯ ಜನರ, ಅವರನ್ನೊಳಗೊಂಡ ಸಮಾಜದ, ಆ ಸಮಾಜದ ಆಂತರಿಕ ಸಾಮರ್ಥ್ಯ- ಪೊಳ್ಳುಗಳ ಸಮೀಕ್ಷೆ. ಇತಿಹಾಸದಲ್ಲಿ ಆಕಸ್ಮಿಕ ಹಾಗು ಅಗೋಚರವಾದುದುದೇನೂ ಇಲ್ಲ. ಪ್ರತಿಯೊಂದು ಐತಿಹಾಸಿಕ ಘಟನೆಗು ತನ್ನದೆ ಆದ ಕಾರಣವಿದೆ. ಮತ್ತು ಎರಡು ಘಟನೆಗಳ ಮಧ್ಯೆ ಕಾರ್ಯ ಕಾರಣ ಸಂಬಂಧವಿದೆ. ಈ ಐತಿಹಾಸಿಕ ಪ್ರಜ್ಞೆಯುಳ್ಳ ಸಾಹಿತಿಗಳ ಕೃತಿಗಳಲ್ಲಿ ರಾಜಪುರುಷರು ಅಧಿಕಾರಿಗಳು ಕಂಡುಬಂದರು ಒತ್ತು ಬೀಳುವುದು ಆಕಾಲದ ಸಾಮನ್ಯ ಜನರ ಮೇಲೆ. ಅವರ ಆಶೋತ್ತರಗಳ ಮೇಲೆ. ಮತ್ತು ಅಂದಿನ ಸಮಾಜದ ರಚನೆಯ ಮೇಲೆ. ನಿರಂಜನರ ಯಶಸ್ವಿ ಐತಿಹಾಸಿಕ ಕಾದಂಬರಿಗಳಲ್ಲಿ ಈ ವಿಧದ ಐತಿಹಾಸಿಕ ಪ್ರಜ್ಞೆ ಇದೆ.”1

ಕಾದಂಬರಿಯನ್ನು ಚರಿತ್ರೆಯೆಂದು ಒಪ್ಪಿಕೊಳ್ಳಬಹುದೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅಲ್ಲಿ ಬರುವ ಪಾತ್ರಗಳು ಲೇಖಕನ ಕಲ್ಪನೆಯ ಕೂಸುಗಳೇ ಆಗಿರುವದರಿಂದ ಅವು ಅಧಿಕೃತವಾಗುತ್ತವೆಯೇ ಎಂದು ಅನಿಸುತ್ತದೆ. ಆದರೆ, ಲೇಖಕ ಎಷ್ಟೇ ಕಲ್ಪನೆಯಲ್ಲಿ ಪಾತ್ರಗಳನ್ನು ಸೃಷ್ಟಿಸಿರಲಿ ಅವು ವಾಸ್ತವದ ಹಾಗು ಅನುಭವದ ತಳಹದಿಯನ್ನು ಹೊಂದಿರುತ್ತವೆ. ಇಂದಿನ ಬದುಕಿನೊಂದಿಗೆ ಸಂಬಂಧವನ್ನು ಹೊಂದಿರುತ್ತವೆ. ಏಕೆಂದರೆ ಲೇಖಕ ಯಾವುದೇ ಕಾಲವನ್ನು ಕಾದಂಬರಿಯಲ್ಲಿ ಚಿತ್ರಿಸುತ್ತಿರಲಿ ಅವನಿಗೆ ವಾಸ್ತವದ ಅರಿವು ಇರುತ್ತದೆ. ಲೇಖಕನ ಆಲೋಚನೆಯನ್ನು ಇರುವಿಕೆಯ ಸಂಗತಿಗಳೇ ರೂಪಿಸುತ್ತಿರುತ್ತವೆ. ನಿರಂಜನರು ಅಧ್ಯಯನದ ಮೂಲಕ ಪೂರ್ವ ಕಾಲದ ಸಂಗತಿಗಳನ್ನು ಕಥನ ಮಾಡುವಾಗ ವಾಸ್ತವದ ಸಂಗತಿಗಳೇ ಅವರನ್ನು ಪ್ರೇರೇಪಿಸುತ್ತಿರುತ್ತವೆ. ಅವರು ಆಯ್ಕೆ ಮಾಡಿಕೊಳ್ಳುವ ವಸ್ತುವಿನಲ್ಲಿಯೇ ಅವರ ಮನೋಭಾವವನ್ನು ಗುರುತಿಸಬಹುದು. "ಕಾದಂಬರಿಯೆಂದರೆ ಚರಿತ್ರೆಯಲ್ಲ. ಇನ್ನು ಮೃತ್ಯುಂಜಯದ ತುಂಬಾ ಬಂದ ಇತರ ಪಾತ್ರಗಳ ವಿಚಾರವೇನು. ಮೆನೆಪ್‌ಟಾ, ನುಟ್‌ಮೋಸ್, ಗೇಬು, ನೆಹನವೇಮ್ಟ್, ನೆಫರುರಾ, ಅಮೆರೆಬ್, ಹೆಖ್ವೆಟ್, ಹೇಪಟ್, ಒಬ್ಬರೇ ಇಬ್ಬರೆ ಎಲ್ಲರೂ ಸಾಹಿತಿಯ ಶಿಶುಗಳೇ! ಕೆಲವು ಹೆಸರುಗಳನ್ನಷ್ಟೇ ನಿರಂಜನರು ತಾವು ಓದಿದ ಪುಸ್ತಕಗಳಿಂದ ತೆಗದಿರಬಹುದು. ಇನ್ನುಳುದವುಗಳನ್ನು ಅವರು ತಾವಾಗಿಯೇ ನರ‍್ಮಿಸಿರಬೇಕು. ಹಾಗೆಯೇ ನೀರಾನೆ ಪ್ರಾಂತ. ಅಲ್ಲಿ ನಡೆದ ಬಂಡಾಯ, ಅದರ ಪ್ರೇರಣೆ, ಪರಿಣಾಮ ಇವೆಲ್ಲ ಪುರಾತನ ಐಗುಪ್ತದ ಇತಿಹಾಸದಲ್ಲಿ ನಡೆದ ಘಟನೆಗಳೋ ಅಲ್ಲವೋ ಎಂದು ಹೇಳುವುದು ಹೇಗೆ? ಕಲ್ಪನೆಯನ್ನು ಬಡಿದೆಬ್ಬಿಸುವ ಒಂದು ವಾಕ್ಯವೋ ಹೇಳಿಕೆಯೊ ನಿರಂಜನರಿಗೆ ಯಾವುದಾದರು ಒಂದು ಗ್ರಂಥದಲ್ಲಿ ದೊರಕಿರಬಹುದೆಂದು ಊಹಿಸಬಹುದು. ಉಳಿದುದೆಲ್ಲ ಅವರ ಕಲ್ಪನೆಯೆ ಸರಿ. ಆದರೆ ಐಗುಪ್ತವೆಂಬ ನಾಡು, ಪೆರೊ ಎಂಬ ಹೆಸರಿನ ಮನೆತನ, ರಾ, ಅಮೆನ್ ಇತ್ಯಾದಿ ದೇವರುಗಳ ಕಲ್ಪನೆ, ನೀಲನದಿ, ಪಿರಮಿಡ್ಡುಗಳು ಮುಂತಾದವುಗಳ ನಮಗೆ ಗೊತ್ತು. ಆದ್ದರಿಂದ ಕಾದಂಬರಿಯ ಹಿನ್ನಲೆ ಪೂರ್ತಿ ಫ್ಯಾಂಟಸಿಯಲ್ಲ.”2 ಅಂದರೆ ಇಲ್ಲಿ ಬರುವ ಪಾತ್ರ ಮತ್ತು ಕಾಲ ಪುರಾತನದ್ದು ಇರಬಹುದು. ಆದರೆ ಅಲ್ಲಿಯ ಮನಸ್ಥಿತಿಗಳು ಎಲ್ಲಾ ಕಾಲದವು ಆಗಿರುತ್ತವೆ ಎಂಬುದನ್ನು ಗಮನಿಸಬೇಕು.

ನಿರಂಜನರು ಚರಿತ್ರೆಯನ್ನು ಗತಕಾಲದಿಂದ ಎತ್ತಿಕೊಂಡು ಯಥಾವತ್ತಾಗಿ ಕಥನ ಮಾಡುವ ಉತ್ಸಾಹ ತೋರಿದವರು. ಅವರು ಆಯ್ಕೆ ಮಾಡಿಕೊಂಡ ಕಾಲವನ್ನು ಜೀವಸಹಿತ ಚಿತ್ರಿಸುವುದು ಮುಖ್ಯವಾದುದು. ಈಗಾಗಲೇ ಕನ್ನಡದಲ್ಲಿದ್ದ ಐತಿಹಾಸಿಕ ಕಾದಂಬರಿಗಳ ಪರಂಪರೆಯನ್ನು ಅವರು ಮುಂದುವರೆಸಲಿಲ್ಲ. ಚರಿತ್ರೆಯನ್ನು ರೋಚಕಗೊಳಿಸುವ ಉಮೇದು ಅವರಿಗೆ ಇರಲಿಲ್ಲ. ಶೋಷಿತರ, ಧಮನಿತರ, ಅವಮಾನಿತರ, ದುರ್ಬಲರ ಸಾಮಾಜಿಕ ಜೀವನವನ್ನು ಕಟ್ಟಿಕೊಡುವುದು ಅವರ ಆಶಯವಾಗಿತ್ತು. ಮುಖ್ಯವಾಗಿ ವರ್ಗಸಂಘರ್ಷದ ಆಯಾಮಗಳನ್ನು ಗುರಿತಿಸುವದಾಗಿತ್ತು.``ಇತಿಹಾಸವೆಂದರೆ ರಾಜ-ರಾಣಿಯರ, ಅಧಿಕಾರಕ್ಕಾಗಿ ಅವರು ನಡೆಸಿದ ಕಾರಸ್ಥಾನಗಳ ವಿವರವಲ್ಲವೆಂದು ಹೇಳುತ್ತಾ ನಿರಂಜನರು `ಕಲ್ಯಾಣಸ್ವಾಮಿ’ಯ ಹಿನ್ನುಡಿಯಾಗಿ ಬರುವ `ಇತಿಹಾಸ ಮತ್ತು ಸೃಷ್ಟಿ ಸಾಹಿತ್ಯ’ ಎಂಬ ಪ್ರಬಂಧದಲ್ಲಿ ತಮ್ಮ ವಿಚಾರಗಳನ್ನು ಹೀಗೆ ಮಂಡಿಸುತ್ತಾರೆ. `ಕಾಲಕಾಲಕ್ಕೂ ಬದಲಾಗುತ್ತಾ ಬಂದ ಬದುಕು, ಆಗಿನ ಕಾಲಧರ್ಮ, ಅದರಿಂದ ಪ್ರಭಾವಿತರಾದ ಜನರ ರೀತಿ ನೀತಿಗಳು, ಆ ಸಾಮಾಜಿಕ ವ್ಯವಸ್ಥೆಯ ಪ್ರಮುಖ ಶಕ್ತಿಗಳು.’ ಇವು ಇತಿಹಾಸವನ್ನು ರೂಪಿಸುವ ಮುಖ್ಯ ಅಂಶಗಳು. `ಗತಜೀವನದ ಪುನರ್ ಸೃಷ್ಟಿಯೇ ಐತಿಹಾಸಿಕ ಸಹಿತ್ಯ ಕೃತಿಗಳಲ್ಲಿರಬೇಕಾದ ಪ್ರಧಾನ ಅಂಶ’ (ಪುಟಗಳು 149-151). ಚಿಂತನಶೀಲ ನಿರಂಜನರ ಈ ವಿಚಾರಗಳು ಸಾಹಿತ್ಯಿಕವಾಗಿ ಸಫಲವಾಗುವುದು `ಮೃತ್ಯುಂಜಯ’ ಕೃತಿಯಲ್ಲಿಯೇ. ಭಾಷೆ, ಪಾತ್ರ ರಚನೆ, ಒಟ್ಟು ಕೃತಿಯ ನೆಲೆಗಟ್ಟಾಗಿರುವ ಸಾಮಾಜಿಕ ಸಿದ್ಧಾಂತ- ಪ್ರತಿಯೊಂದರಲ್ಲಿಯು `ಮೃತ್ಯುಂಜಯ’ ನಿರಂಜನರ ಇತರ ಐತಿಹಾಸಿಕ ಕೃತಿಗಳಿಗಿಂತ ಬಿನ್ನವಾಗಿದೆ. ಮತ್ತು ನಿರಂಜನರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಅಪೂರ್ವ ಕೊಡುಗೆಯಾಗಿದೆ. ಈ ಅಪ್ರತಿಮ ಯಶಸ್ವಿಗೆ ಮುಖ್ಯ ಕಾರಣ ಪ್ರಾಯಶಃ ಕೃತಿಕಾರನಿಗೂ ವಸ್ತುವಗೂ ಇರುವ ದೂರ. `ಮೃತ್ಯಂಜಯ’ ಕನಿಷ್ಟ ಪಕ್ಷ ಮೂರು ಸಾವಿರ ವರ್ಷಗಳ ಹಿಂದೆ ಇದ್ದಿರಬಹುದಾದ ಈಜಿಪ್ತ್ ಸಮಾಜದ ವರ್ಣನೆ ಮತ್ತು ವಿಶ್ಲೇಷಣೆ. ಆದ್ದರಿಂದ ಈ ಕೃತಿಯಲ್ಲಿ ಇತಿಹಾಸದ ಗರ್ಭದಲ್ಲಿ ಹುದುಗಿಹೋದ ಘಟನೆಯನ್ನು-ಅನಕ್ಷರಸ್ಥ ರೈತರು, ಕುಶಲ ಕೆಲಸಗಾರರು ಮತ್ತು ಕೂಲಿಕಾರರು ಶ್ರೇಣಿಕೃತ ಮತ್ತು ವರ್ಗೀಕೃತ ಸಮಾಜ ವ್ಯವಸ್ಥೆಯ ವಿರುದ್ಧ ಎದ್ದನಿಂತ ಘಟನೆಯನ್ನು - ನಿರುದ್ವೇಗದಿಂದ ನಿಷ್ಪಾಕ್ಷಿಕವಾಗಿ ಇತಿಹಾಸಕಾರನಂತೆ ಚಿತ್ರಿಸಲು ನಿರಂಜನಿರಿಗೆ ಸಾದ್ಯವಾಗಿದೆ.”3

“ಮಾನವ ನಾಗರಿಕತೆಯ ಮೂಲದತ್ತ ಪಯಣ- ರೋಮಾಂಚಕಾರಿ ಅನುಭವ. ಆ ದಾರಿಯಲ್ಲಿ ಪ್ರಾಚೀನ ಈಜಿಪ್ಟ ಬಲು ದೊಡ್ಡ ತಂಗುದಾಣ. ಅದರ ಆಕರ್ಷಣೆಗೆ ನಾನು ಸಂಪೂರ್ಣ ಮನಸೋತಿದ್ದೇನೆ. ಅದನ್ನು ಅಂಗೈಯಲ್ಲಿ ಕಟ್ಟಿಕೊಡುವ ಆಶೆ.” ಎಂದು ತಾವು ಕಾದಂಬರಿ ಬರೆಯುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ಅವರಿಗೆ ಪ್ರಾಚೀನ ಈಜಿಪ್ಟ್ನ ಚರಿತ್ರೆ ಕಾಡುತ್ತಾ ಹೋಗಿದೆ. ಕಾರಣ, ಚರಿತ್ರೆಯ ಒಳಗಿರುವ ಸಂಘರ್ಷಗಳು. ಪ್ರಭುತ್ವಗಳು ಸೃಷ್ಟಿಸಿರುವ ಯಜಮಾನಿಕೆಯ ವ್ಯವಸ್ಥೆಯನ್ನು ಮೀರುವ ಸಂದರ್ಭದ ಕಾಲಘಟ್ಟಗಳು. ಯಾಕಂದರೆ ನಮ್ಮ ಚರಿತ್ರೆಯ ಬರವಣಿಗೆಯಲ್ಲಿ ಪ್ರಭುತ್ವಗಳು ಬದುಕಿದ ರೀತಿಯನ್ನೇ ಚರಿತ್ರೆಯ ರೀತಿಯೆಂದು ನಂಬಿಸಲಾಗಿದೆ. ಅಂದರೆ ಅಲ್ಲಿ ಸಾಮನ್ಯರ ಬದುಕಿನ ಕ್ರಮಗಳ ಗೈರು ಹಾಜರಿಯನ್ನು ಕಾಣುತ್ತೇವೆ. ಅದು ನಿರಂಜನರಿಗೆ ಚರಿತ್ರೆಯನ್ನು ಹೊಸ ಬಗೆಯಲ್ಲಿ ನೋಡಲು ಪ್ರೇರೇಪಿದೆ.

"ಚರಿತ್ರೆಯ ಸತ್ಯ ಮತ್ತು ಸಾಹಿತ್ಯದ ಸತ್ಯ ಇವೆರಡೂ ಸತ್ಯವೇ ಆಗಿದ್ದರು ಇವುಗಳ ರೀತಿಗಳು ಬೇರೆ ಬೇರೆ. ಚರಿತ್ರೆ ಸಂಭವಗಳನ್ನು ಮಾತ್ರ ಚಿತ್ರಿಸಿದರೆ, ಸಾಹಿತ್ಯ ಸಂಭವನೀಯಗಳನ್ನು ಮಾತ್ರ ಚಿತ್ರಿಸುತ್ತದೆ. ಸಂಭವನೀಯದೊಳಗೆ ಸಂಭವವೂ ಸೇರಿರುತ್ತದೆ. ಆದರೆ ಸಂಭವದೊಳಗೆ ಸಂಭವನೀಯವೆಲ್ಲವೂ ಸೆರಿರುವದಿಲ್ಲವೆಂಬುದನ್ನು ಗಮನಿಸಬೇಕು. ಸಂಭವನೀಯ ಜಗತ್ತು ಸಂಭವ ಜಗತ್ತಿಗಿಂತ ಮುಖ್ಯವಾದುದು. ಆದ್ದರಿಂದ ನೀರಾನೆ ಪ್ರಾಂತವೆಂಬುದಂದು ಇತ್ತೇ ಅಲ್ಲಿ ಮೆನೆಪ್‌ಟಾನ ನಾಯಕತ್ವದಲ್ಲಿ ಪೆರೋ, ಅರ್ಚಕ, ಭೂಮಲೀಕ ಸರ್ವಾಧಿಕಾರದ ವಿರುದ್ಧ ಬಂಡಾಯವೊಂದು ನಡೆಯಿತೆ, ಈ ಬಂಡಾಯ ಸಮೂಹ ಹತ್ಯೆಯಲ್ಲಿ ಕೊನೆಗೊಂಡಿತೆ ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಐತಿಹಾಸಿಕ ದಾಖಲೆಗಳಲ್ಲಿ ಹುಡುಕಲಾರೆವು. ಇಂಥ ಘಟನೆಗಳು ಸಂಭವನೀಯ ಜಗತ್ತಿಗೆ ಸೇರಿದವು ಹಾಗು ಬೇರೆ ಬೇರೆ ರೂಪಗಳಲ್ಲಿ ಮಾನವ ಇತಿಹಾಸದಲ್ಲಿ ಕಾಣಿಸಿಕೊಂಡವು ಎಂದು ತಿಳಿದರೆ ಸಾಕು.”

ಈಜಿಪ್ಟ್ನ ಚರಿತ್ರೆಯನ್ನು ಅಧ್ಯಯನ ಮಾಡುವಾಗ ಅವರಿಗೆ ಕಂಡ ಹೊಸ ಸತ್ಯವೊಂದನ್ನು ಕಥನವಾಗಿಸುವ ಚಿಂತನೆ ಮಾಡಿದ್ದಾರೆ. ಪ್ರಭುತ್ವದ ವಿರುದ್ಧ ಹೋರಾಡಿದ ಸಾಮನ್ಯರ ಜೀವನಗಾತೆಯು ಅವರನ್ನು ವಿಸ್ಮಿತರನ್ನಾಗಿಸಿದೆ. ಅದನ್ನೇ ಅವರು ಕಾದಂಬರಿ ಮಾಡಿದ್ದಾರೆ. "ಸರ್ವಶಕ್ತ ಪೆರೋಗಿದಿರು ದಲಿತರು ಹೋರಾಡಿದ ಆ ಕಥೆ ಎಷ್ಟು ಹಳೆಯದು? ಅಧ್ಯಯನ ಆರಂಭಿಸಿದೆ. ಪ್ರಾಚೀನ ಹೆರೊಡೊಟಸನಿಂದ ಮೊದಲಾಗಿ ಆಧುನಿಕವರೆಗೆ. ದೀರ್ಘ ಕಾಲ ಆಳಿದ ಎರಡನೆಯ ಪೇಪಿಯ ಆಳ್ವಿಕೆಯಲ್ಲಿ ಅಂಥ ಘರ್ಷಣೆಗಳು ನಡೆದವು ಎನ್ನುವುದಕ್ಕೆ ಆಧಾರಗಳು ದೊರೆತವು. ಅಂದರೆ, ಆ ಸಂಗತಿ 4,500 ವರ್ಷ ಹಳೆಯದು ಎಂದಾಯಿತು. ನೀಲ ನದಿಯ ದಂಡೆಗಳು ಕೃಷಿಯಿಂದ ಹಸಿರಾಗತೊಡಗಿ ಆಗಲೇ 4,000 ವರ್ಷ ಕಳೆದಿದ್ದವು. ಊರುಗಳು-ನಗರಗಳು ರೂಪಗೊಂಡಿದ್ದವು. ಲಿಪಿ ಸೃಷ್ಟಿಯಾಗಿತ್ತು. ಸತ್ತ ಪೆರೋಗಳಿಗಾಗಿ ಗೋರಿಗಳ ನರ‍್ಮಾಣ ಆರಂಭಗೊಂಡಿತ್ತು. ಅದು ಈಜಿಪ್ಟ್ನ ಬಹುಜನಸಮುದಾಯವೇ ಗುಲಾಮ ಜೀವನ ನಡೆಸುತ್ತಿದ್ದ ಕಾಲ. ಆಗ ನಡೆದ ಬಂಡಾಯ ಮಾನವ ನಾಗರಿಕತೆಯ ಇತಿಹಾಸದಲ್ಲಿಯೇ ಪ್ರಪ್ರಥಮ.”5

ಇಡೀ ಕಾದಂಬರಿಯಲ್ಲಿ ಕಾಣುವುದು ಈಜಪ್ಟ್ನ 4000 ವರ್ಷಗಳ ಹಿಂದಿರುವ ಜೀವನವನ್ನು. ಆ ಸಂದರ್ಭದ ಎಲ್ಲಾ ಸಾಂಸ್ಕೃತಿಕ ವಿವರಗಳನ್ನು ಕಾದಂಬರಿಯಲ್ಲಿ ತಂದಿದ್ದಾರೆ. ಪಾತ್ರಗಳಿಗೆ ಅಲ್ಲಿಯ ಸಮುದಾಯದ ಹೆಸರುಗಳನ್ನೇ ಇಟ್ಟಿದ್ದಾರೆ. ಹೀಗಾಗಿ ಆ ಕಾಲದಲ್ಲಿಯೇ ನಡೆದಾಡಿದ ಅನುಭವವನ್ನು ಈ ಕಾದಂಬರಿ ನೀಡುತ್ತದೆ. ವರ್ಗ ಸಂಘರ್ಷದ ಮೂಲ ನೆಲೆಗಳನ್ನು ಶೋಧಿಸುವ ಮತ್ತು ಕಟ್ಟಿಕೊಡುವ ಕಾದಂಬರಿ ಇದಾಗಿದೆ. ಕಲ್ಪನೆಯ ಆಧಾರದಿಂದ ಮಾತ್ರ ಇದು ರಚನೆಯಾಗಿಲ್ಲ. ವಾಸ್ತವಾಂಶಗಳನ್ನು ಒಳಗೊಂಡಿದೆ. ಅದಕ್ಕಾಗಿ ನಿರಂಜನರು ಈಜಿಪ್ಟ್ ದೇಶಕ್ಕೆ ಹೋಗಿ ಅಲ್ಲಿ ಕೆಲವು ದಿನಗಳ ಕಾಲ ವಾಸ ಮಾಡಿ ಮಾಹಿತಿ ಸಂಗ್ರಹ ಮಾಡಿಕೊಂಡು ಬಂದಿದ್ದಾರೆ. ಆ ಕಾಲದ ಚರಿತ್ರೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿದ್ದಾರೆ. "ಆ ಕಾಲಾವಧಿಯ ಸಾಮಾಜಿಕ ಆರ್ಥಿಕ, ರಾಜಕೀಯ ಬದುಕನ್ನು ಅರಿಯಲು ಶ್ರಮಿಸಿದೆ. ಪುರಾತತ್ತ÷ತತ್ವಜ್ಞರನ್ನು ಊರುಗೋಲಾಗಿ ಬಳಿಸಿ, ಕಾಲದ ಅಂತರವನ್ನು ದಾಟಿ, ಪ್ರಾಚೀನ ಈಜಿಪ್ಟ್ಗೆ ಹೋದೆ. ಗೋರಿಗಳ ನಡುವೆ ಓಡಾಟ, ಸತ್ತವರ ಸಂಗ, ನೀಲ ನದಿಯಲ್ಲಿ ದೋಣಿ ಪ್ರವಾಸ. ರೈತನಾದೆ, ಕುಶಲಕರ್ಮಿಯಾದೆ, ಲಿಪಿಕಾರನಾದೆ, ಪುರೋಹಿತನಾದೆ, ಪೆರೋ ಪಾತ್ರವನ್ನು ಧರಿಸಿದೆ. ಒಂಬತ್ತು ತಿಂಗಳ ಯತ್ನ. (ನಾನು ನೆರವು ಪಡೆದದ್ದು ಫ್ಲಂರ್‍ಸ್ ಪೆಟ್ರಿ, ಲಿಯೋನಾರ್ಡ್ವೊಲ್ಲೀ, ಹವರ್ಡ್ ಕಾರ್ಟರ್, ಜೇಮ್ಸ್ ಬ್ರೆಸ್ಟೆಡ್, ವಿಲ್ ಡ್ಯೂರಂಟ್, ಲಿಯೋನಾರ್ಡ್ ಕಾಟ್ರೆಲ್, ಜಾಕ್ ಲಿಂಡ್ಸೆ ಮತ್ತಿತರ ಕೃತಿಗಳಿಂದ) ಇಷ್ಟಾದ ಮೇಲೆ ನಾನು ಸಿದ್ಧ ಎನಿಸಿತು.”6 ÷ಹೀಗೆ ಅವರು ವಾಸ್ತವದ ನೆಲೆಗಟ್ಟಿನ ಮೇಲೆ ಕಾದಂಬರಿಯನ್ನು ಬರೆದಿದ್ದಾರೆ.

"ನಿರಂಜನರ `ಮೃತ್ಯುಂಜಯ’ಕಾದಂಬರಿ ಚರಿತ್ರೆಯನ್ನು ತೀರ ಬಿನ್ನವಾದ ರೀತಿಯಲ್ಲಿ ಬಳಸಿಕೊಳ್ಳುತ್ತದೆ. ಕಾದಂಬರಿಯಲ್ಲಿ ಎದ್ದು ಕಾಣುವ ಅಂಶವೆಂದರೆ ಈಜಿಪ್ತಿನ ಗತಕಾಲವೊಂದರ ಮೂರ್ತವಾದ ಮತ್ತು ಕೆಲವು ಕಡೆಗೆ ದೀರ್ಘವೆನಿಸುವ ವಿವರಗಳು. ಈಜಿಪ್ತಿನ ಬದುಕಿನ ಈ ವಿವರಗಳು ನಮಗೆ ಕಡಿಮೆ ಪರಿಚಿತವಾಗಿದ್ದರಿಂದ ಮತ್ತು ಕಾದಂಬರಿಯ ಭಾಷೆ ವಿವರಗಳಿಗೆ ಜೀವಸ್ಪರ್ಶ ಮಾಡಿಸುವಷ್ಟು ಉದ್ದೀಪಕವಾಗದೇ ಇರುವದರಿಂದ ಮೊದಲ ಓದಿನಲ್ಲಿ ಅವು ನಮಗೆ ತೊಡಕಾಗುತ್ತವೆ. ಕಥೆಯ ಓಟಕ್ಕೆ ಅಡಚಣೆಯಾದಂತೆ ಭಾಸವಾಗುತ್ತವೆೆ. ಆದರೆ, ಕಾದಂಬರಿಯ ಬಂಧವನ್ನು ಸರಿಯಾಗಿ ಗುರುತಿಸಿದಾಗ ಈ ವಿವರಗಳು ಕೇವಲ ಒಬ್ಬ ಸಂಶೋಧಕನ ಟಿಪ್ಪಣೆಗಳಲ್ಲ, ಕಾದಂಬರಿಯ ಸತ್ವಕ್ಕೆ ಅನಿವಾರ್ಯವಾದುವು ಎನ್ನುವುದು ಸ್ಪಷ್ಟವಾಗುತ್ತದೆ. ಕಾದಂಬರಿಯ ಸತ್ವ ಮತ್ತು ಅದನ್ನು ಹೊಮ್ಮಿಸುವ ಅದರ ಬಂಧ- ಇವೆರಡನ್ನು ಗುರುತಿಸಲು ಈಜಿಪ್ತಿನ ಇತಿಹಾಸದ ಮತ್ತು ನಿರಂಜನರು ಬಳಿಸಿಕೊಳ್ಳುವ ಪುರಾಣ ಕಥೆಗಳ ಪರಿಚಯ ಅವಶ್ಯಕವಾಗಿದೆ.”7

ಈಜಿಪ್ತ್ನ್ನು ಕೇಂದ್ರವಾಗಿಟ್ಟುಕೊಂಡು ಮಾನವನ ಚರಿತ್ರೆಯನ್ನು ಕಂಡುಕೊಳ್ಳುವ ಯತ್ನ ಕಾದಂಬರಿ ಮಾಡುತ್ತದೆ. ಜನಸಾಮನ್ಯರ ಜೀವನವಿಧಾನವನ್ನು ನಾವು ಚರಿತ್ರೆಯಲ್ಲಿ ಕಾಣುವುದಿಲ್ಲ. ಅಲ್ಲಿ ಕೇವಲ ರಾಜ ಮಹಾರಾಜರ ಜೀವನ ವಿಧಾನವನ್ನು ಮಾತ್ರ ಕಾಣುತ್ತೇವೆ. ಕಾದಂಬರಿಯಲ್ಲಿ ಅವರ ಜೊತೆಗೆ ಜೀವನದ ಎಲ್ಲಾ ಮುಖಗಳನ್ನು ಅನಾವರಣ ಮಾಡುಲಾಗಿದೆ. ಈ ಕಾರಣಕ್ಕೆ ಚರಿತ್ರೆಯ ಬಿನ್ನ ಧ್ವನಿಯನ್ನು ಕಾದಂಬರಿ ಅಭಿವ್ಯಕ್ತಿಸುತ್ತದೆ. ಕಾದಂಬರಿ ಆ ಕಾಲದ ಜೀವನ ವಿವರಗಳನ್ನು ಒದುಗಿಸುತ್ತಿಲ್ಲ. ಅದು ವರ್ಗವ್ಯವಸ್ಥೆಯ ಸ್ವರೂಪವನ್ನು ಶೋಧಿಸುತ್ತದೆ. "ಈ ಕೃತಿ ಆರಂಭವಾಗುವುದು ಐಸಿಸ್‌ನ ನೆನಪಿಗಾಗಿ ಪ್ರತಿವರ್ಷವೂ ಪುಣ್ಯಕ್ಷೇತ್ರವಾದ ಅಬ್ಟುವಿನಲ್ಲಿ ನಡೆಯುವ ದೊಡ್ಡ ಜಾತ್ರೆಯಿಂದಲೆ. ಈ ಜಾತ್ರೆಯ ಸಂದರ್ಭವನ್ನು ಅತಿ ಕುಶಲತೆಯಿಂದ ಲೇಖಕರು ಅಂದಿನ ವರ್ಗೀಕೃತ - ಶ್ರೇಣಿಕೃತ ಸಮಾಜವನ್ನು ನಮ್ಮ ಮುಂದಿಡಲು ಉಪಯೋಗಿಸುತ್ತಾರೆ. ನಮಗರಿವಿಲ್ಲದಂತೆಯೇ ನಾವು ರೈತರಾದ ಮೆನೆಪ್‌ಟಾ ಮತ್ತಿತರ ಯಾತ್ರಿಕರು, ಕುಶಲಕರ್ಮಿಗಳಾದ ಅಂಬಿಗ ಬಟಾ ಮತ್ತು ಅವನ ಸಹಾಯಕರು ಇವರಿಂದ ಪ್ರಾರಂಭಿಸಿ, ಯಾತ್ರೆಯು ಮುದುವರಿದಂತೆಲ್ಲ ಸಮಾಜದ ಒಂದೊಂದೇ ವರ್ಗವನ್ನು ಮತ್ತವರ ಸಾಮಾಜಿಕ ಸ್ಥಾನಮಾನಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ಸಮಾಜದ ಅತೀ ಕೆಳಗೆ ಭಿಕ್ಷುಕರು-ಅವರಿಗಿಂತ ತುಸು ಮೇಲೆ ನೇಯುವ, ನೂಲುವ, ಮರ-ಕಬ್ಬಿಣ ಕೆಲಸ ಮಾಡುವ ಕುಶಲಕರ್ಮಿಗಳು ಅವರ ನಂತರ ವರ್ತಕರು-ವರ್ತಕರಿಗಿಂತ ಕೊಂಚ ಮೇಲೆ ಭೂಮಾಲೀಕರು, ಪ್ರಾಂತಪಾಲರು-ಈ ದೈತ್ಯಾಕೃತಿಯ ಪಿರಮಿಡ್‌ನ ತುದಿಯಲ್ಲಿ ಸರಿಸಮನಾಗಿ ಅಧಿಕಾರ ಹಂಚಿಕೊಂಡಿರುವ ಮತ್ತು ಆ ಕಾರಣದಿಂದಲೇ ಸದಾ ಪರಸ್ಪರ ಸಂದೇಹ- ದ್ವೇಷಗಳಿಂದ ತುಂಬಿರುವ ಚಕ್ರವರ್ತಿ ಪೆರೋ ಮತ್ತು ಧರ್ಮಗುರು ಹೆಪಾಟ್ ಇಂತಹ ಸಮಾಜದ ಚಿತ್ರ ಅತ್ಯಂತ ಸಹಜವಾಗಿಯೇ ಯಾತ್ರೆಯ ಸಂದರ್ಭದಲ್ಲಿ ನಮ್ಮ ಕಣ್ಮುಂದೆ ನಿಲ್ಲುತ್ತದೆ. ಅಬ್ಟುವಿನ ದೋಣಿಕಟ್ಟೆಯಲ್ಲಿ ಪ್ರತಿಯೊಂದು ವರ್ಗಕ್ಕೂ ತನ್ನದೇ ಆದ ಸ್ಥಾನ ದೋಣಿ ನಿಲ್ಲಿಸಲು, ಆ ಸ್ಥಾನ ಪಲ್ಲಟವಾಗದಂತೆ ಶಿಸ್ತು ಕಾಯಲು ಸದಾ ಚಾಟಿ ಹಿಡಿದು ನಿಂತಿರುವ ಸೈನಿಕರು.”7. ಹೀಗೆ ಕಾದಂಬರಿ ಇಡೀ ಆ ಕಾಲದ ಜನಜೀವನವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ.

ಕಾದಂಬರಿಯು ಕೇವಲ ಬೌತಿಕ ವಿವರಗಳಿಗೆ ಮಾತ್ರ ಸೀಮಿತವಾಗುವದಿಲ್ಲ. ಪ್ರತಿಯೊಂದು ಪಾತ್ರದ ಮಾನಸಿಕ ಬೆಳವಣಿಗೆಯನ್ನು ವಿಶ್ಲೇಸಿಸುತ್ತಾ ಹೋಗುತ್ತದೆ. ಪಾತ್ರಗಳ ವಿಕಾಸವು ಒಂದು ರೀತಿಯಲ್ಲಿ ಚರಿತ್ರೆಯ ಸಾಮಾಜಿಕ ವಿನ್ಯಾಸವನ್ನು ಅನಾವರಣ ಮಾಡುತ್ತಲೇ ಅದನ್ನು ಮೀರುವ ನಿಲುವುಗಳನ್ನು ಧ್ವನಿಸುತ್ತದೆ. "ಕಾದಂಬರಿಯ ಮುಖ್ಯ ಅಂಶವಾದ ಪೆರೋ ಮತ್ತು ಪುರೋಹಿತಶಾಹಿಯ ವಿರುದ್ಧ ನೀರಾನೆ ಪ್ರಾಂತದ ಮೆನೆಪ್‌ಟಾ ಮಾಡುವ ಬಂಡಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾದಂಬರಿಯ ಎಲ್ಲಾ ವಿವರಗಳು ಇಜಿಪ್ತಿನ ವರ್ಗವ್ಯವಸ್ಥೆಯ ಸ್ವರೂಪವನ್ನು ಮೂರ್ತವಾಗಿ ಹಿಡಿದು ಕೊಡುವ ಕುರುಹುಗಳಾಗಿವೆ. ಇದನ್ನು ಅರ್ಥಮಾಡಿಕೊಂಡರೆ ಕಾದಂಬರಿಯ ಒಂದು ಬಂಧ ನಮಗೆ ಗೋಚರಿಸುತ್ತದೆ. ಕಾದಂಬರಿಯ ಕೇಂದ್ರ ಮೊದಲ ಭಾಗದಲ್ಲಿ ಬಹಳ ಬೇಗನೆ ಸುಲಭವಾಗಿ ನಡೆದು ಹೋಗುವ ಬಂಡಾಯವಲ್ಲ. ಕಾದಂಬರಿಯ ಬಂಧವಿರುವುದು ನಾಯಕ ಮೆನೆಪ್‌ಟಾ ಇಜಿಪ್ತಿನ ಸಮಾಜ ವ್ಯವಸ್ಥೆಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವ ಚಿಂತನೆಯ ಬೆಳವಣಿಗೆಯಲ್ಲಿ. ಅಂದರೆ, ಕಾದಂಬರಿಯ ರಚನೆ ಘಟನೆಗಳ ಬದಲಾಗಿ ನಾಯಕನ ಮಾನಸಿಕ ಬೆಳವಣಿಗೆಯನ್ನು ಅನುಸರಿಸುತ್ತದೆ. ನಿರಂಜನರು ಮೊದಲಿಂದಲೂ ಕೊಡುತ್ತಾ ಹೋಗುವ ಜನಜೀವನದ ವಿವರಗಳು ಕ್ರಮೇಣವಾಗಿ ತೆರೆಯನ್ನು ಸರಿಸುತ್ತಾ ವ್ಯವಸ್ಥೆಯ ಮೂಲದಲ್ಲಿರುವ ಕ್ರೌರ್ಯವನ್ನು ಬಯಲು ಮಾಡುತ್ತದೆ. ಅವುಗಳನ್ನು ಅನುಸರಿಸುವಂತೆ ಮೆನೆಪ್‌ಟಾ ಕೂಡ ತನ್ನ ಸುತ್ತಲಿನ ಬದುಕಿನ ಆಳಕ್ಕೆ ಇಳಿಯುತ್ತಾ ಕೊನೆಗೆ ಅದರ ನಿಜ ಸ್ವರೂಪವನ್ನು ಅರ್ಥಮಾಡಿಕೊಳ್ಳುತ್ತಾನೆ. ಕಂದಾಯ ವಸೂಲಿಯ ಅನ್ಯಾಯವನ್ನು ಮಾತ್ರ ಪ್ರತಿಭಟಿಸಿದ ಅವನು ಕಾದಂಬರಿಯ ಕೊನೆಯ ವಿಚಾರಣೆಯ ಸನ್ನಿವೇಶದಲ್ಲಿ ಇಡೀ ಸಮಾಜ ವ್ಯವಸ್ಥೆಯ ಬ್ರಷ್ಟತೆಗೆ ಸವಾಲು ಎಸೆಯುತ್ತಾನೆ. ಮೊದಲ ಭಾಗದ ನೀರಾನೆ ಪ್ರಾಂತದ ಜೀವನದ ಸರಳತೆಗೂ ಮುಂದೆ ಮೆಂಫಿಸ್‌ನ ಬದುಕಿನ ಸಂಕೀರ್ಣತೆಗೂ ಇರುವ ವ್ಯತ್ಯಾಸಕ್ಕೂ ಇದೇ ಕಾರಣ. ಆದ್ದರಿಂದ ಕಾದಂಬರಿಯ ಬೆಳವಣಿಗೆ ಇರುವುದು ಸಾಮನ್ಯವೆನಿಸುವ ವಿವರಗಳನ್ನು ಕೊಡುತ್ತಾ ಕೊನೆಗೆ ಅವುಗಳ ಹಿಂದಿರುವ ಸಮಾಜ ವ್ಯವಸ್ಥೆಯ ಸ್ವರೂಪವನ್ನು ಬಯಲು ಮಾಡುವುದರಲ್ಲಿ.”9

ನಾಗರಿಕತೆಯೊಳಗೆ ಸೃಷ್ಟಿಯಾಗುವ ಕ್ರೌರ್ಯದ ನಾನಾ ಮುಖಗಳನ್ನು ಕಾದಂಬರಿ ಅನಾವರಣಗೊಳಿಸುತ್ತದೆ. ಭೂಮಾಲಿಕರು, ರಾಜರು, ಪುರೋಹಿತರು ಒಂದಾಗಿ ನ್ಯಾಯಯುತವಾಗಿ ಬದುಕುವ ಸಮುದಾಯಗಳನ್ನು ಹೇಗೆ ಅಮಾನುಷವಾಗಿ ನಿರ್ನಾಮ ಮಾಡುತ್ತವೆ ಎಂಬುದನ್ನು ಶೋಧಿಸುತ್ತದೆ. ಪೆರೊ, ಹೆಪೆಟ್ ಪಾತ್ರಗಳು ನಾಗರಿಕತೆಯ ಮೇಲೆ ಹಿಡಿತ ಸಾಧಿಸಿ ಸಾಮನ್ಯರ ಬದುಕುಗಳ ಜೊತೆಗೆ ಹೇಗೆ ಚೆಲ್ಲಾಟವಾಡುತ್ತವೆ ಎಂಬುದನ್ನು ಕಾಣುತ್ತೇವೆ. ಇವರು ವ್ಯವಸ್ಥೆಯನ್ನು ಮುನ್ನೆಡಿಸುವವರು. ಆದರೆ, ಸಾಮನ್ಯರ ರಕ್ತ ಹೀರಿ ಬದಕುವವರು. "ಇಜಿಪ್ತಿನ ಆಳುವ ವರ್ಗದ ಲೋಲುಪತೆಯ ಜೀವನ, ಮಾನವೀಯ ಮೌಲ್ಯಗಳೇ ಇಲ್ಲದ ಸಿನಿಕತನ ಮತ್ತು ಬ್ರಷ್ಟತೆ, ಭಾವನೆಗಳಿಗೆ ಅವಕಾಶವೇ ಇಲ್ಲದ ಕ್ರೂರ ಜಾಣತನ ಇವೆಲ್ಲವೂ ಸಹಜವಾಗಿ ಮೂಡಿ ಬಂದಿವೆ. ಮೇಲುವರ್ಗದ ಸಿನಿಕತನದ ಮನುಷ್ಯ ಸಂಬಂಧಗಳು ನೀರಾನೆ ಪ್ರಾಂತದ ಜನರ ಸಹಜ ಸಂಬಂಧಗಳ ವೈದೃಶ್ಯದಿಂದಾಗಿ ನಾಗರೀಕತೆಯೊಂದರ ಸಾವಿನ ಕಥೆಯನ್ನು ಸೂಕ್ಷ್ಮವಾಗಿ ಹೇಳುತ್ತವೆ. ಈ ಬ್ರಷ್ಟವರ್ಗದ ಪ್ರತಿನಿಧಿಯಾದ ಹೆಖ್ವೆಟ್, ತನ್ನ ಕಾರ್ಯಸಾಧನೆಗಾಗಿ ತನ್ನ ರತಿವರ್ಚಸ್ಸನ್ನು ಬಳಿಸಿಕೊಳ್ಳುವ ಇಜಿಪ್ತಿನ ರಾಣಿ, ತನ್ನ ಪುರುಷತ್ವವನ್ನು ದಾಸಿಯರಿಗೆ ಧಾರೆಯೆರೆದು `ಸೆಡ್’ ಉತ್ಸವದಿಂದ ಮತ್ತೆ ಯೌವನ ಪಡೆದುಕೊಳ್ಳಬಯಸುವ ಪರೋ- ಇವರೆಲ್ಲಾ ಅದೋಗತ ಸಮಾಜವೊಂದರ ಪ್ರತಿನಿಧಿಗಳಾಗಿದ್ದಾರೆ. ಮಹಾ ಅರ್ಚಕ ಹೆಪಾಟ್ ಮತ್ತು ಅವನ ಹಿಂಬಾಲಕರು ದಬ್ಬಾಳಿಕೆಯಲ್ಲಿ ಶಾಮೀಲಾಗಿರುವ ಪುರೋಹಿತಶಾಹಿಯನ್ನು ಪ್ರತಿನಿಧಿಸುತ್ತಾರೆ. ರಾಜಸತ್ತೆ ಮತ್ತು ಪುರೋಹಿತಶಾಹಿಯ ಮಧ್ಯೆ ಅಧಿಕಾರಕ್ಕಾಗಿ ಕಚ್ಚಾಟ ಇಜಿಪ್ತಿನ ಸಂದರ್ಭದಲ್ಲಿ ಅನಿವಾರ್ಯವಾಗಿತ್ತು.”10

ಇಂತಹ ಕ್ರೂರ ವ್ಯವಸ್ಥೆಯನ್ನು ಬದಲಾಯಿಸಿ ಹೊಸ ವ್ಯವಸ್ಥೆಯನ್ನು ಕಟ್ಟುವ ಯುವ ಪಡೆಯನ್ನು ಕಾದಂಬರಿಯಲ್ಲಿ ಕಾಣುತ್ತೇವೆ. ಆದರೆ, ಇಂತಹ ಪಡೆಯನ್ನು ಆಳುವ ವರ್ಗ ತನ್ನ ತೋಳ್ಬಲ ಮತ್ತು ಅಧಿಕಾರದಿಂದ ಸದೆಬಡೆಯುವ ಪ್ರಯತ್ನ ಮಾಡುತ್ತದೆ. ಅದರಲ್ಲಿ ಯಶಸ್ವಿಯು ಆಗುತ್ತದೆ. ಈ ವರ್ಗಸಂಘರ್ಷ ಚರಿತ್ರೆಯಲ್ಲಿ ನಿರಂತರವಾಗಿ ಸಾಗುತ್ತಾ ಬಂದಿದೆ. ಈ ಚಿತ್ರಣವನ್ನು ಕಾದಂಬರಿ ಪ್ರತಿಬಿಂಬಿಸುತ್ತದೆ. "ಸಮಾಜ ವ್ಯವಸ್ಥೆಯ ಈ ಸ್ವರೂಪವನ್ನು ಬಯಲು ಮಾಡುವುದೇ ಕಾದಂಬರಿಯ ಕೇಂದ್ರಬಿಂದು ಎಂದು ಇಟ್ಟುಕೊಂಡರೆ ಕಾದಂಬರಿಯಲ್ಲಿ ವೈಯಕ್ತಿಕ ಮಟ್ಟದಲ್ಲಿ ಕಾಣುವ ದೌರ್ಜನ್ಯದ ವಿವರಗಳು, ಈ ವಿಶ್ಲೇಷಣೆಯ ಹಿನ್ನಲೆಯಲ್ಲಿ ಹೆಚ್ಚಿನ ಅರ್ಥವಂತಿಕೆ ಪಡೆದುಕೊಳ್ಳುತ್ತವೆ. ಮೊದಲಿಗೆ ನೀರಾನೆ ಪ್ರಾಂತದ ಬಂಡಾಯದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಬೆಂಬಲವಾಗಿರುವುದು ಋಜು ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎಂಬ ಸರಳವಾದ ನೈತಿಕ ಸ್ಥೈರ್ಯ. ಆದರೆ, ಹಿನ್ನಲೆಯೆಲ್ಲವೂ ಅರ್ಥವಾದ ಮೇಲೆ ಅವರು ನೆಚ್ಚಿಕೊಂಡ `ಮಾಟ್’( ವೈಯಕ್ತಿಕ ನೀತಿ ಮಾರ್ಗ) ಚರಿತ್ರೆಯ ತಿರುವಿನೊಂದರಲ್ಲಿ ದುಡಿಯುವ ವರ್ಗ ಆಳುವ ವರ್ಗದ ವಿರುದ್ದ ಹೋಡಬೇಕಾದ ಬಂಡಾಯ ಶಕ್ತಿಯಾಗಿ ಪರಿಣಮಿಸುತ್ತದೆ. ಹೀಗೆ ಕಾದಂಬರಿಯ ಬಂಧ ವ್ಯಕ್ತಿ ತನ್ನ ಸ್ವಂತ ಬದುಕಿನ ನೋವುಗಳಿಂದ ಆರಂಭಿಸಿ ಅವುಗಳ ಹಿನ್ನಲೆಯನ್ನು ಚರಿತ್ರೆಯ ವಿಶಾಲ ಬಿತ್ತಿಯ ಮೇಲೆ ಗುರುತಿಸಿಕೊಳ್ಳುತ್ತಾ ಸಾಗುವ ಕ್ರಿಯೆಯನ್ನು ಅನುಸರಿಸುತ್ತದೆ. ಅರ್ಚಕ ವರ್ಗದವನಾಗಿದ್ದು ಅದರಿಂದ ಸಿಡಿದೆದ್ದು ಮೆನ್ನ ವ್ಯವಸ್ಥೆಯ ಕ್ರೌರ್ಯವನ್ನು ನೋಡಿ ವಿಹ್ವಲಗೊಂಡ ಸೂಕ್ಷ್ಮಜೀವಿ. ಅಸಾಹಾಯಕ ಹುಚ್ಚಿನ ಮಟ್ಟದಲ್ಲಿದ್ದ ಅವನ ವೈಯಕ್ತಿಕ ಬಂಡಾಯ ಕಾದಂಬರಿಯ ಕೊನೆಗೆ ಹೆಚ್ಚು ಕ್ರಿಯಾಶೀಲವಾಗುತ್ತದೆ. ಅವನು ಕೂಡ ವೈಯಕ್ತಿಕ ಮಟ್ಟದ ಬಂಡಾಯ ತರಬಹುದಾದ ಒಬ್ಬಂಟಿತನವನ್ನು ಮೀರಿ ದುಡಿಯುವ ವರ್ಗದ ಸಾಮಾಜಿಕ ಬಂಡಾಯದಲ್ಲಿ ಒಂದಾಗುತ್ತಾನೆ.”11

ವಸ್ತುನಿಷ್ಠತೆಯಿಂದ ನಿರಂಜನರು ಕಾದಂಬರಿಯನ್ನು ರೂಪಿಸುತ್ತಾ ಹೋಗಿದ್ದಾರೆ. ಇದರಿಂದಾಗಿ ಕಾದಂಬರಿಗೆ ಚಾರಿತ್ರಿಕ ಆಯಾಮ ದೊರೆತಿದೆ. ಅಲ್ಲಿ ಆ ಕಾಲವನ್ನು ಯಥಾವತ್ತಾಗಿ ತರುವ ಅಧ್ಯಯನಶೀಲತೆ ಕಾಣುತ್ತೇವೆ. ಪ್ರತಿಯೊಂದು ಪಾತ್ರವನ್ನು ಬಹಳ ಸೂಕ್ಷ್ಮವಾಗಿ ಕಡೆಯುತ್ತಾ ಹೋಗಿದ್ದಾರೆ. ಅವರರವರ ಮನೋಭಾವಕ್ಕೆ ಅನುಗುಣವಾಗಿ ಚಿತ್ರವತ್ತಾದ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಅವು ಆ ಕಾಲದವು ಅನಿಸುತ್ತದೆ. ವಾಸ್ತವಾಗಿ ಆ ರೀತಿಯ ಮನಸ್ಥಿತಿ ಎಲ್ಲಾ ಕಾಲದ ಪ್ರಭುತ್ವದ್ದಾರುತ್ತದೆ. "ರಾಣಿ ನೆಫರ್‌ಟೀಮ್ ನಾನು ಹೇಳ ಹೊರಟಿರುವುದು ನಿನ್ನ ಸೃಷ್ಟಿಯ ಅಗತ್ಯವನ್ನು. ಕಾಲ ದೇಶಗಳಿಗೆ ದೂರವಾದ ನಿನ್ನ ಹಾಗು ನಿನ್ನಂತಹ ಅನೇಕರ ಸೃಷ್ಟಿಕ್ರಿಯೆ ಯಾಕೆ ಬೇಕಾಯಿತು ಎಂಬುದನ್ನು. ಪೆರೋಪಿಯ ಪುರಾತನ ಐಗುಪ್ತವನ್ನು ಚಿತ್ರಿಸುತ್ತಾ ನಿರಂಜನರು ಚಿಸ್ಮರಣೆಯಲ್ಲಿ ಗಳಿಸಲಾರದ ವಸ್ತುನಿಷ್ಠತೆಯನ್ನು ಮೃತ್ಯುಂಜಯದಲ್ಲಿ ಗಳಿಸಿಕೊಂಡರು. ಕತೆಯ ಸನ್ನಿವೇಶವೇ ಇಂಥ ವಸ್ತುನಿಷ್ಠತೆಯನ್ನು ಒತ್ತಾಯಿಸುತ್ತದೆ. ಉದಾಹರಣೆಗೆ ನಿನ್ನ ಕೇಶಮುಂಡನೆ, ಕರೀಟಧಾರಣೆ ಇತ್ಯಾದಿ ಪ್ರಸಂಗಗಳು. ಕೃತಿಮ ಕೇಶಕವಚವನ್ನು ನೀನು ವರ್ತಕ ಕೆಪ್ಪುವಿನಿಂದ ಕೊಂಡುಕೊಳ್ಳುತ್ತೀಯ. ಹಾಗು ಆಕೃತಿಮ ಕೂದಲು ಯಾವಳೋ ಅಸ್ಸೀರಿಯಾದ ಸುಂದರಿಗೆ ಸೇರಿದ್ದು ಎಂದು ಕೆಪ್ಟು ಹೇಳುತ್ತಾನೆ. ಇದು ವಿದೇಶಿಯವೇ ಆಗಬೇಕು. ಇಲ್ಲದಿದ್ದರೆ ನಿನಗೆ ಅವಮಾನವಾದ ಹಾಗಾಗುತ್ತದೆ. ನಿನ್ನದೇ ಪ್ರಜೆಯ ಕೂದಲನ್ನು ನೀನು ಧರಿಸುವದೆಂದರೇನು! ಇನ್ನೂ ಕೈ ಬಳಿಕೆಯ ಸಾಧನಗಳ ವಿಷಯದಲ್ಲಿ ಲೇಖಕರು ತೋರಬೇಕಾದ ಎಚ್ಚರಿಕೆ; ನಿನ್ನ ಕಾಲದಲ್ಲಿ ಇನ್ನೂ ಕಬ್ಬಿಣ ತಯಾರಾಗಿದ್ದಿಲ್ಲ; ಗಾಜಿನ ಕನ್ನಡಿಯು ಇರಲಿಲ್ಲ. ಆದ್ದರಿಂದಲೇ ಅರಸಿಯ ಉಪಯೋಗಕ್ಕೆ ಚಿನ್ನದ ಕತ್ತರಿ, ಕಂಚಿನ ರೂಪದರ್ಶಕ. ಈ ರೂಪದರ್ಶಕವನ್ನು ನೋಡುತ್ತಾ, ಈ ಜಗತ್ತಿನಲ್ಲಿ ಅತ್ಯಂತ ರೂಪವತಿ ಯಾರು ಎಂದು ನೀನು ಕೇಳಿರಬುದಲ್ಲವೇ? ಹೀಗೆ ನಿನ್ನ ಕಾಲದ ಐಗುಪ್ತವನ್ನು ಚಿತ್ರಲೆಳೆಸುವ ಯಾವನೆ ಲೇಖಕನಿಗೂ ಕೂಡ ವಸ್ತುನಿಷ್ಠತೆ ತುಂಬಾ ಮಹತ್ವದ್ದಾಗುತ್ತದೆ. ಕತೆಯ ನಾಯಕ ಮೆನೆಪ್‌ಟಾನ ವಧೆ ಕೂಡ ಲೇಖಕರನ್ನು ಭಾವೋದ್ವೋಗಕ್ಕೆ ಗುರಿಮಾಡುವದಿಲ್ಲ. ಮುಂದೆ ಅವರ ಶವಲೇಪನ, ಸಮಾಧಿ ಎಲ್ಲವೂ ಚಿತ್ರವತ್ತಾಗಿ ಮೂಡಿಬಂದಿರುವುದು ಇಂಥ ವಸ್ತುನಿಷ್ಠತೆಯಿಂದಾಗಿಯೆ. ಒಂದು ರೀತಿಯಲ್ಲಿ ಮೃತ್ಯುಂಜಯ ಪುರಾತನ ಐಗುಪ್ತದ ಸಂಶೋಧನೆಯೆಂದರೂ ಸರಿಯೆ.”12

ಅಧಿಕಾರಕ್ಕಾಗಿ ನಡೆಯುವ ಸಂಘರ್ಷಗಳು ಕಾಲತೀತವಾದುವು. ಅಧಿಕಾರವನ್ನು ಉಳಿಸಿಕೊಳ್ಳಲು ತಮ್ಮ ವಂಶಕ್ಕೆ ದಾಟಿಸಲು ನಡೆಯುವ ಸಂಗತಿಗಳು ಎಲ್ಲಾ ಕಾಲದಲ್ಲಿಯು ಒಂದೇ ರೀತಿಯಲ್ಲಿರುತ್ತವೆ. ಅವಧಿ ಬೇರೆಯಿರಬಹುದು ಸಮುದಾಯಗಳು ಬೇರೆ ಇರಬಹುದು ಜರುಗುವ ಸಂದರ್ಭಗಳು ಮಾತ್ರ ಒಂದೆ ನೆಲೆಯನ್ನು ಪಡೆದಿರುತ್ತವೆ. ನಿರಂಜನರು ಈ ಕಾದಂಬರಿಯಲ್ಲಿ ಅಧಿಕಾರಕ್ಕಾಗಿ ನಡೆಯುವ ಎಲ್ಲಾ ಹುನ್ನಾರಗಳನ್ನು ಉಳ್ಳವರ ದುರುಳುತನ ಅಮಾನವೀಯೆತೆಯನ್ನು ನೆಫರ್‌ಟೀಮ್ ಮಹಾರಾಣಿ, ಪೆರೊ, ಹೆಪಟ್ ಮೂಲಕ ಬಯಲು ಮಾಡುತ್ತಾರೆ. ಇವರ ಮನೋಭಾವದಂತಹ ದುರುಳರನ್ನು ಈಗಲೂ ಕಾಣಬಹುದು. "ಸೌಂದರ್ಯವತಿಯಾದ ನಿನಗೆ ನನ್ನ ಸೌಂದರ್ಯದ ಅರಿವಿದೆ. ಸತಿಯಾಗಿ ನಿನಗೆ ಗಂಡನ ದೌರ್ಬಲ್ಯಗಳು ಗೊತ್ತು. ಅದೇ ರೀತಿ ರಾಣಿಯಾಗಿ ಅರಸು ಮನೆತನಕ್ಕೆ ಬಂದೊದುಗುವ ವಿಪತ್ತನ್ನು ನೀನು ಬಲ್ಲೆ. ಈಗುಪ್ತದ ಪೇರೋ ವಂಶವಳಿ ಯಾವ ತೊಂದರೆಯು ಇಲ್ಲದೇ ಅಧಿಕಾರದಲ್ಲಿ ಮುಂದುವರಿಯಬೇಕೆಂಬುದೆ ನಿನ್ನ ಆಸಕ್ತಿ. ವಿಷಯಲಂಪಟನಾದ ಪೇಪಿಯಿಂದ ರಾಜಕುಮಾರನಿಗೆ ಅಧಿಕಾರದ ಹಸ್ತಾಂತರವಾಗಬೇಕು. ಅಲ್ಲಿಯ ತನಕ ನಿನಗೆ ಸಮಾಧಾನವಿಲ್ಲ. ಇದರ ಮೊದಲ ಹೆಜ್ಜೆಯೇ ಶೆಡ್ ಉತ್ಸವ. ಮರು ಯೌವ್ವನ ಪಡೆಯಲು ಅರಸನು ಕೈಗೊಳ್ಳುವ ಧಾರ್ಮಿಕ ವಿಧಿಗೆ ಕೇವಲ ಸಾಂಕೇಂತಿಕ ಅರ್ಥವೊಂದೆ ಇರುವುದೆಂಬುದು ನಿನಗೆ ಗೊತ್ತು. ಸೆಡ್ ಉತ್ಸವದಿಂದ ಪುನಶ್ಚೇತನವನ್ನು ಪಡೆಯಬೇಕಾಗಿದ್ದ ಪೆಪಿ ಬಳಲಿ ಬೆಂಡಾದುದನ್ನು ನೀನು ನೋಡಿದ್ದಿಯ. ಹಾಗೆಯೇ ಕೇಶಮುಂಡನದ ಒಳ ಉದ್ದೇಶ ಬಿಳಿಗೂದಲು ಕಾಣಿಸದೆ ಇರುವುದಕ್ಕಾಗಿ ಎಂದು ನಿನ್ನ ಸಂದೇಹ. ಅದೇನೇ ಇದ್ದರೂ, ಅಧಿಕಾರ ದರ್ಪದಿಂದ ಬೀಗಿದ ಪುರೋಹಿತಶಾಹಿಯನ್ನು ಅಡಿಗಿಸಲು ಸೆಡ್ ಉತ್ಸವವನ್ನು ಉಪಯೋಗಿಸಿಕೊಂಡುದು ನಿನ್ನ ಜಾಣ್ಮೆ ಮೆಚ್ಚತಕ್ಕದ್ದು. ಈಗುಪ್ತವನ್ನು ಆಳುತ್ತಿದ್ದದು ಪೇರೋ ಒಬ್ಬನೇ ಅಲ್ಲ. ಅರಸ, ಪುರೋಹಿತ ವರ್ಗ ಮತ್ತು ಭೂಮಾಲೀಕ ವರ್ಗಗಳ ಶಕ್ತಿತ್ರಯ. ಇವು ಒಂದನ್ನೊಂದು ಸಮತೋಲನದಲ್ಲಿರಿಸಿದರೇನೆ ಈ ಆಳ್ವಿಕೆ ಸುಗಮವಾಗುವುದು. ಪೇರೋ ಪೇಪಿಯ ಕಾಲದಲ್ಲಿ ಈ ಸಮತೋಲನ ತಪ್ಪುತ್ತಿರುವುದನ್ನು ನೀನು ಗಮನಿಸಿದೆ. ಮತ್ತೆ ಆ ಶಕ್ತಿತ್ರಯಗಳನ್ನು ಒಂದು ಗೂಡಿಸುವಲ್ಲಿ ನಿನ್ನ ಕೈವಾಡವೇನು ಸಣ್ಣದಲ್ಲ. ನಿನ್ನನ್ನು ನೋಡಿದೊಡನೆಯೆ ಮಹಾ ಅರ್ಚಕನ ಬಿಗುಮಾನ ಸಡಿಲಾಗುತ್ತದೆ. ಹೇಪಾಟ್‌ನ ಈ ದೌರ್ಬಲ್ಯವನ್ನು ನೀನು ಬಹಳ ಚೆನ್ನಾಗಿಯೆ ಉಪಯೋಗಿಸಿಕೊಳ್ಳುತ್ತಿಯೆ. ನಿನ್ನ ರಾಜಕಾರಣದ ಮುಂದೆ ಎಲ್ಲಾರು ಸಪ್ಪೆಯಾಗಿಬಿಡುತ್ತಾರೆ ಎಂಬುವುದು ಉಳಿದವರ ಟೀಕೆಯಲ್ಲ. ನಿನ್ನ ಮುತ್ಸದ್ದಿತನದ ಹೆಚ್ಚಳ. ರಾಣಿ ನೆಫರ್ ಟೀಮ್ ನಮ್ಮ ನಡುವೆ ಎಂದಿಗೂ ದಟಲಾರದ ಕಾಲ ಹಲವು ಸಾಹಸ್ರ ವರ್ಷಗಳಷ್ಟು ಬಿದ್ದುಕೊಂಡಿದೆ. ಒಮ್ಮೆ, ಒಡೆದ ಮೊಟ್ಟೆಯನ್ನು ಹೇಗೆ ಮತ್ತೆ ಮದಲಿನ ಸ್ಥಿತಿಗೆ ತರಲಾರೆವೋ ಹಾಗೆಯೇ ಒಮ್ಮೆ ಸರಿದ ಕಾಲವನ್ನು ಹಿಂದಕ್ಕೆ ಕೊಂಡೊಯ್ಯುವದು ಅಸಾಧ್ಯದ ಮಾತು. ಆದರೂ ಕೆಲವೊಂದು ಸಂಗತಿಗಳು ಮತ್ತೆ ಮತ್ತೆ ಮರುಕಳಿಸುವದರಿಂದ ಚರಿತ್ರೆ ನಮಗೆ ನಮ್ಮನ್ನು ತಿಳಿದುಕೊಳ್ಳುವುದಕ್ಕೆ ಸಹಾಯವಾಗುತ್ತದೆ. ನೀರಾನೆ ಪ್ರಾಂತದಲ್ಲಿ ನಿನ್ನ ಕಾಲದಲ್ಲಿ ನಡೆದ ಬಂಡಾಯ ಈ ಹಿಂದೆ ಹೇಳಿದಂತೆ ಸಂಭವನೀಯ ಜಗತ್ತಿಗೆ ಸೇರಿದ್ದಾದರು, ಇದು ಸಂಭವವಾಗಿ ಪ್ರತಿಯೊಂದು ದೇಶದಲ್ಲಿ ಕಾಣಿಸಿಕೊಂಡುದೆ. ಇಂಥಹ ಬಂಡಾಯದ ಹುಟ್ಟು ಮತ್ತು ಬೆಳವಣಿಗೆ ಮತ್ತು ಅವಸಾನದಲ್ಲಿಯೂ ಕೂಡ ಒಂದು ರೀತಿಯ ಕ್ರಮಬದ್ಧತೆ ಇರುವುದನ್ನು ಕಾಣುತ್ತೇವೆ. ಆದ್ಧರಿಂದಲೇ ಮಾರ್ಕ್ಸಿಸ್ಟ್ ಚಿಂತಕರು ಇದನ್ನೊಂದು ಸಿದ್ಧಾಂತವಾಗಿ ಮಾಡಿಕೊಂಡಿದ್ದಾರೆ. ಬಂಡಾಯವು ಒಂದು ನಿರಂತರ ಅಗತ್ಯವೆಂದು ಮತ್ತೆ ಕೆಲವರು ಹೇಳಿದರೆ ಮಾರ್ಕ್ಸವಾದಿಗಳು ಹಾಗೆ ಭಾವಿಸುವದಿಲ್ಲ. ಒಂದು ಕಾಲಘಟ್ಟದಲ್ಲಿ ಪೂರ್ಣ ಸಮಾನತೆಯ ಆದರ್ಶರಾಜ್ಯ ಸಾಧ್ಯವೆಂಬ ಅವರ ಮತ. ನಿರಂಜನರ ನಿಲುವು ಕೂಡ ಇದೇ ಎಂಬುದು ಅವರ ಚಿರಸ್ಮರಣೆ ಮತ್ತು ಮೃತ್ಯುಂಜಯಗಳೆರಡರಲ್ಲಿಯೂ ಸ್ಪಷ್ಟವಾಗುತ್ತದೆ.”13

ನ್ಯಾಯಕ್ಕಾಗಿ ಹೋರಾಡಿದವರನ್ನು ಪ್ರಭುತ್ವ ಶಕ್ತಿಗಳು ತಮ್ಮ ಬಲದ ಮೂಲಕ ಬಲಿಯಾಗಿಸುತ್ತಾರೆ. ಅದು ಎಲ್ಲಾ ಕಾಲದಲ್ಲಿಯು ಇರುತ್ತದೆ. ಅದನ್ನು ನಿರಂಜನರು ತಮ್ಮ ಬರಹಗಳ ಮೂಲಕ ಕಾಣಿಸುತ್ತಲೇ ಬಂದಿದ್ದಾರೆ. ತಮ್ಮ ಸ್ವಾತಂತ್ಯ್ರ ಮತ್ತು ಹಕ್ಕುಗಳಿಗೆ ಹೋರಾಟ ಮಾಡುವ ಸಮುದಾಯಗಳನ್ನು ಅಮಾನುಷವಾಗಿ ಧಮನ ಮಾಡುವ ಆಡಳಿತಶಾಹಿಯನ್ನು ಚರಿತ್ರೆಯುದ್ದಕ್ಕು ಕಾಣುತ್ತೇವೆ. ಈ ಸಂಗತಿಗಳು ಚರಿತ್ರೆಯಲ್ಲಿ ಎಲ್ಲಿಯೂ ದಾಖಲಾಗುವದಿಲ್ಲ. ಇಂತಹ ಕಥನಗಳಲ್ಲಿ ಇವು ಅಭಿವ್ಯಕ್ತಿಯಾಗುತ್ತವೆ. ನಿರಂಜನರು ಈ ಕಡೆಗೆ ಹೆಚ್ಚಿನ ಒಲವನ್ನು ತೋರಿಸಿ ಧಮನಿತರ ಚರಿತ್ರೆಯನ್ನು ದಾಖಲುಮಾಡುವ ಪ್ರಯತ್ನ ಮಾಡಿದ್ದಾರೆ. ಈ ಕಾದಂಬರಿಯಲ್ಲಿ ಬರುವ ಬುಡಕಟ್ಟು ನಾಯಕ ಮೆನೆಪ್‌ಟಾನನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ ಅವನ ಇಡೀ ನೀರಾನೆಯ ಸಮುದಾಯವನ್ನೇ ನಾಶ ಮಡಿ ಜನರಲ್ಲಿ ಭಯ ಹುಟ್ಟಿಸುತ್ತಾರೆ. ಅಂದರೆ ಪ್ರಭುತ್ವದ ವಿರುದ್ಧ ಹೋರಾಡುವ ನಾಯಕರನ್ನು ತಮ್ಮ ಬಲದ ಮೂಲಕ ನಾಶ ಮಾಡುವುದು ಬಹಳ ಸಹಜ ಎಂಬಂತೆ ನೋಡುತ್ತಾ ಬಂದಿದ್ದೇವೆ. ಈ ಅಂಶವನ್ನು ಮನಗಾಣಿಸುವುದು ನಿರಂಜನರಿಗೆ ಮುಖ್ಯವಾಗಿದೆ. "ಪುರಾತನ ಐಗುಪ್ತದ ಅಂದಿನ ರಾಜಕಾರಣ, ಸಂಘರ್ಷ, ಸಮೂಹ ಹತ್ಯೆ ಇಂದಿನ ತನಕಮರುಕಳಿಸುತ್ತಲೇ ಬಂದಿದೆ. ಈ ಮರುಕಳಿಕೆಯಲ್ಲಿ ಮೆನೆಪ್‌ಟಾ ನಂತಹ ಅದೆಷ್ಟೋ ಮುಗ್ಧರು ಅಸುನೀಗುತ್ತಲೂ ಬಂದಿದ್ದಾರೆ. ಮಹಾ ಅರ್ಚಕ ಹೆಪೆಡ್ ಸೆಡ್ ಉತ್ಸವದಲ್ಲಿ ಭಾಗವಹಿಸಲು ಮೆನಪ್‌ಟಾನ ಬಲಿಯನ್ನು ಬೇಡುತ್ತಾನೆ. ಒಂದು ರೀತಿಯಲ್ಲಿ ಈ ಬಲಿ ನಿನ್ನದೆ (ನೆಫರ್‌ಟೀಮ್) ಸೂಚನೆ. ಮೆನೆಪ್ ಟಾನನ್ನು ಮಾತ್ರ ನೀನು ವೈಯಕ್ತಿಕವಾಗಿ ಎಂದು ದ್ವೇಷಿಸಲಿಲ್ಲ. ನಿಜವಾದ ರಾಜಕಾರಣದಲ್ಲಿ ಪ್ರೀತಿ ದ್ವೇಷಗಳಿಗೆ ಸ್ಥಾನವಿಲ್ಲವಲ್ಲವೇ? ಅಲ್ಲದಿದ್ದರೆ ಮೆನೆಪ್‌ಟಾನ ಬಲಿಗೆ ನೀನು ಬಹುಶಃ ಒಪ್ಪುತ್ತಿರಲಿಲ್ಲವೆಂದೇ ಹೇಳಬೇಕು. ಮೆನೆಪ್‌ಟಾನ ಬಗ್ಗೆ ನಿನಗೆ ಒಳಗಿಂದೊಳಗೆ ಮೆಚ್ಚಿಗೆ ಇತ್ತು. ಪೇಪಿಯ ಸ್ಥಾನದಲ್ಲಿ ಮೆನೆಪ್ ಟಾನನ್ನು ಇರಿಸಿ ನೋಡಿರಬಹುದು. ಹಾಗೆ ನೋಡಿದಾಗ ಇಬ್ಬರ ನಡುವಿನ ಅಗಾಧವಾದ ಅಂತರ ನಿನಗೆ ಗೋಚರಿಸಲೇಬೇಕು. ಆದರೆ ಮೆನೆಪ್‌ಟಾ ಎಂದಿಗೂ ಪೇರೋ ಆಗಲಾರನೆಂಬುದು ನಿನಗೆ ಗೊತ್ತು. ಹೆಚ್ಚೆಂದರೆ ಆತ ಏರಬಹುದಾದ ಸ್ಥಾನ ಪ್ರಾಂತಪಾಲಕನದು. ಇದೂ ನಿರಾನೆ ಪ್ರಾಂತದ ಜನರು ತಾವಾಗಿಯೇ ಕೊಟ್ಟ ಸ್ಥಾನವೇ ಹೊರತು ಮೇಲಿನಿಂದ ದಯಪಾಲಿಸಿದ್ದಲ್ಲ. ಮೆಂಫಿಸ್‌ಗೆ ಬರಲು ಅವನಿಗೆ ಪ್ರಾಂತಪಾಲಕನೆಂಬ ಹೆಸರಿನಲ್ಲಿ. ಎಂದರೆ ಮೆನೆಪ್‌ಟಾ ನೀರಾನೆ ಪ್ರಾಂತದ ನಾಯಕನಾಗಿ ಮುಂದುವರಿಯುವದಕ್ಕೆ ಬಹುಶಃ ಅರಸೊತ್ತಿಗೆಯ ಆಕ್ಷೇಪವೇನು ಇರಲಿಲ್ಲ. ಆದರೆ ಇಡಿಯ ಅರಸೊತ್ತಿಗೆಯೇ ಭೂಮಾಲೀಕ ಮತ್ತು ಪುರೋಹಿತ ಶಕ್ತಿಗಳ ನಡುವೆ ಸಿಕ್ಕಿ ದುರ್ಬಲವಾಗಿತ್ತಲ್ಲ! ಅರಸೊತ್ತಿಗೆ ತನ್ನ ಶಕ್ತಿಯನ್ನು ಮರಳಿ ಗಳಿಸುವದಕ್ಕೆ ಮೆನೆಪ್‌ಟಾನ ಬಲಿ ಸೆಡ್ ಉತ್ಸವಕ್ಕಿಂತ ಹೆಚ್ಚು ಅಗತ್ಯವಾಗಿತ್ತು.”14

ಐಜಿಪ್ತ ನಾಡನ್ನು ಆಳುವ ದೊರೆ ಪೆರೋ ವಿಲಾಸದ ಜೀವನವನ್ನು ನಡೆಸುವವನು. ಜನರ ರಕ್ತ ಹೀರಿ ವೈಭೋಗ ಜೀವನ ಮಾಡುವವನು. ಜನರು ಕೂಡ ಅದನ್ನು ಒಪ್ಪಿಕೊಂಡು ಬಂದವರು. ಯಾರು ಪ್ರಶ್ನೆ ಮಾಡುವಂತ ಸಾಮರ್ಥ್ಯ ಉಳ್ಳವರಲ್ಲ. ಅವರನ್ನು ಒಪ್ಪಿಕೊಂಡು ಜೀವಿಸುವುದೇ ತಮ್ಮ ಬದುಕೆಂದು ಭಾವಿಸಿದವರು. ವೈಭೋಗದಿಂದ ಬದುಕುವುದೇ ರಾಜತ್ವ ಎಂದು ನಂಬಿದವರು. ಪರೋ ರಾಜನ ವರ್ಣನೆ ಅವನ ವಿಲಾಸಿ ಜೀವನಕ್ಕೆ ಸಾಕ್ಷಿಯಗಿದೆ. "ಜನಸಮುದಯವೆಲ್ಲ ತನ್ನ ಪಾದಗಳಿಗೆ ಮಣಿಯುವಂತೆ ಮಾಡುವ ಭವ್ಯ ರೂಪ ಪೆರೋನದು. ಆತ ಮೆಟ್ಟಿದುದು ಬಂಗಾರದ ಪಾದರಕ್ಷೆಗಳನ್ನು. ಭುಜಗಳ ಮೇಲೆ ಇಳಿಬಿಟ್ಟಿತ್ತು ಕಸೂತಿ ಅಂಚಿನ ಸಮವಸ್ತ್ರ. ಅದರ ಮೇಲ್ಗಡೆ, ಇಗುಪ್ತ ದೇಶದ ಉತ್ತರ ದಕ್ಷಿಣ ಭಾಗಗಳ ಒಡೆತನವನ್ನು ಸಾರುವ ಎತ್ತರದ ಜೋಡಿ ಕಿರೀಟ. ಮೇಲಣದ ಐಗುಪ್ತದ ಬಿಳಿ ಕಿರೀಟ; ಅದರಲ್ಲಿ ರಾಜಲಾಂಚನ ಸರ್ಪ. ಆ ಕಿರೀಟವನ್ನು ಆವರಿಸಿ ಕೆಂಪು ಕಿರೀಟ. ಕೆಳಗಣ ಐಗುಪ್ತದ್ದು. ಅದರಲ್ಲಿ ಗಿಡುಗ ಚಿಹ್ನೆ. ಮೂಲದಲ್ಲಿ ಬಿಳುಪಾಗಿದ್ದರೂ ಬಿಸಿಲಿನ ಝಳಕ್ಕೆ ಗೋದಿಗೆಂಪಾಗಿ ಮಾರ್ಪಟ್ಟಿದ್ದ ಮೈ ಬಣ್ಣ- ಪ್ರಜೆಗಳ ಕರಿಬಣ್ಣಕ್ಕಿಂತ ಭಿನ್ನ. ನಡುವಯಸ್ಸು ದಾಟಿದ್ದ ನುಣುಪು ಮುಖ. ಕೆನ್ನೆ ತುಟಿಗಳಿಗೆ ಹಚ್ಚಿದ್ದ ಕೆಂಪು. ತುಸು ಬಾಗಿದ ನೀಳ ಮೂಗು. ಕಾಠಿಣ್ಯ ಬೆರೆತ ಗಾಂಭೀರ್ಯ. ನಿರ್ಭಯವಾದ ತಿವಿಯುವ ನೋಟ. ಕತ್ತಿನಿಂದ ತುಸು ಕೆಳಗಿನವರೆಗೂ ಹಾರಗಳ ಎದೆಗವಚ. ಬಲ ಎಡ ಕೈಗಳು ವಕ್ಷಸ್ಥಲಕ್ಕೆ ಅಡ್ಡಲಾಗಿ ಹಿಡಿದಿದ್ದ ಲಾಂಛನಗಳು ಕಾಳು ಒಡೆಯುವ ಸಾಧನ ಮತ್ತು ಕುರುಬನ ಕೊಂಡಿಕೋಳು. ಸೊಂಟ ಪಟ್ಟಿಯಿಂದ ಮೊಣಕಾಲೀನವರೆಗೂ ಕಸೂತಿ ಹಾಕಿದ ಅಂಗವಸ್ತ್ರ....... ಪಲ್ಲಕ್ಕಿಯ ಹಿಂದೆ ನೂರುಜನ ಕಾವಲು ಭಟರು-ಭಿಲ್ಲಾಳುಗಳು. ಬಲ ಮಗ್ಗುಲ್ಲಲಿ ಅವರ ಮುಖ್ಯಸ್ಥ. ಅವರ ಹಿಂದೆ ಹೇರು ಹೊತ್ತ ಗುಲಾಮರು. ಗುಲಾಮರ ಹಿಂದೆ ಶಿಸ್ತಿಲ್ಲಿದೆ ಗುಂಪು ಕಟ್ಟಿಕೊಂಡು ವೇಗವಾಗಿ ನಡೆಯಲೆತ್ನಿಸುತ್ತಿದ್ದ ಜನರು.”15

ಪೆರೋನಂತಹ ರಾಜಪ್ರಭುತ್ವ ಒಂದೆಡೆಯಾದರೆ ಹೇಪಟ್ ನಂತಹ ಪುರೋಹಿತರು ಇನ್ನೊಂದೆಡೆ ಜನರ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದರು. ಅದರಲ್ಲಿ ಜನ ಅತಂತ್ರರಾಗುತ್ತಿದ್ದರು. ಒಬ್ಬರಿಗೆ ಸೈನಿಕರ ಬಲವಿದ್ದರೆ, ಇನ್ನೊಬ್ಬರಿಗೆ ದೇವರ ಬಲ. ದೇವರನ್ನು ಮುಂದಿಟ್ಟುಕೊಂಡು ರಾಜರನ್ನೇ ಬೆದರಿಸುವ ಸಂಚುಗಳನ್ನು ಹೇಪಟ್‌ನಂತವರು ಮಾಡುತ್ತಿದ್ದರು. ಹೀಗಾಗಿ ರಾಜ ಪುರೋಹಿತಶಾಹಿಗೆ ಹೆದರಿಕೊಂಡು ಆಡಳಿತ ಮಾಡುತ್ತಿದ್ದರು. ಆದ್ದರಿಂದ ಸಮಾಜದಲ್ಲಿ ರಾಜರಿಗೆ ಕೊಟ್ಟಷ್ಟು ಗೌರವವನ್ನು ಪುರೋಹಿತರಿಗೂ ಕೊಡುತ್ತಿದ್ದರು. ಅವರು ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು."ಬೋಳು ತಲೆಯ ಯುವಕ ದೇವಸೇವಕರು ಹೇಪಾಟ್ ಕೂಳಿತಿದ್ದ ಪಲ್ಲಕ್ಕಿಯನ್ನು ಹೊತ್ತಿದ್ದರು. ಅವರ ಹಿಂದೆ ಸಾಮಾನು ಸರಂಜಾಮುಗಳ ಹೊರೆ ಭಾರದಿಂದ ಭಾಗಿದ್ದ ಗುಲಾಮರಿದ್ದರು. ಜನಸ್ತೋಮವನ್ನು ಅನುಸರಿಸಿ ಹೇಪಾಟ್ ಗೂ ಮೆನೆಪ್‌ಟಾ ನಮಿಸಿದ. ತಕ್ಷಣವೇ ತಲೆ ಎತ್ತಿ ಕುತೂಹಲದಿಂದ ಮಹಾ ಅರ್ಚಕನನ್ನು ಈಕ್ಷಿಸಿದ. ನೂರುವರ್ಷಗಳಿಂದ ಹೆಚ್ಚುತ್ತಾ ಬಂದಿದ್ದ ದೇವಸೇವಕರ ಪ್ರಾಬಲ್ಯಕ್ಕೆ ಉತ್ತರಾಧಿಕಾರಿಯಾದವನು ಹೇಪಟ್ ಎಂದು ಮೆನೆಪ್‌ಟಾ ಕೇಳಿದ್ದ. ದೇಶದಲ್ಲಿನ ಎಲ್ಲಾ ದೇವಮಂದಿರಗಳ ಒಡೆತನವು ಅವನದು. ಮೆಂಫಿಸ್‌ನ ದೇಗುಲಕ್ಕೂ ಅಧೀನ ಮಂದಿರಗಳಿಗೂ ತೆರಿಗೆ ವಿನಾಯ್ತಿಯ ಹೇರಳ ಆಸ್ತಿ ಇತ್ತು. ಸಹಸ್ರ ಸಹಸ್ರ ಗುಲಾಮ ಚಾಕರರಿದ್ದರು. ಅಪಾರ ಬೆಲೆಬಾಳುವ ಕನಕ ಭಂಡಾರವಿತ್ತು. ಆಳುವ ಪ್ರಭುಗಿಂತಲೂ ಅರ್ಚಕನೇ ಹೆಚ್ಚು ಶ್ರೀಮಂತ ಎಂಬ ಪಿಸುಮಾತು ಮೆನೆಪ್‌ಟಾ ನ ಕಿವಿಗೆ ಬಿದ್ದಿತ್ತು. ಮೆಂಫಿಸ್‌ನಿಂದ ಬದಿದ್ದ ದೊಡ್ಡ ದೋಣಿಯೊಂದರ ಹಿರಿ ಅಂಬಿಗ `ಮಹಾ ಅರ್ಚಕನ ಅನುಮತಿ ಪಡೆದೆ ಅರಮನೆಗಳಲ್ಲಿ ಕಾರ್ಯಗಳು ನಡಿತವೆ.’ ಎಂದು ಸುದ್ದಿ ಹಬ್ಬಿಸಿದ್ದ.” 16

ಜನರ ನಂಬಿಕೆಗಳನ್ನು ಬಳಿಸಿಕೊಂಡು ಅವರನ್ನು ಮೂಢರನ್ನಾಗಿ ಮಾಡಲಾಗುತ್ತದೆ. ಪುರಾತನ ಕಾಲದಿಂದಲೂ ನಡೆಕುಕೊಂಡು ಬಂದಿದ್ದೆಂದು ಹೇಳಿ ಅದರಂತೆ ನಡಕೊಳ್ಳುವಂತೆ ಜನರನ್ನು ಪ್ರೇರೇಪಿಸಲಾಗುತ್ತದೆ. ಏನು ಅರಿಯದ ಜನರು ಆ ನಂಬಿಕೆಗಳನ್ನು ಚಾಚು ತಪ್ಪದೆ ಪಲಿಸಿಕೊಂಡು ಬರುತ್ತಾರೆ. ನಂಬಿಕೆಗಳು ಆಡಳಿತ ವರ್ಗವನ್ನು ಪ್ರಬಲಗೊಳಿಸುವದ್ದಾಗಿರುತ್ತದೆಯೇ ಹೊರತು ಜನರಿಗೆ ಅರಿವನ್ನು ನೀಡುವ ಉದ್ದೇಶವನ್ನು ಹೊಂದಿರುವದಿಲ್ಲ. ಪಿರಮಿಡ್‌ಗಳ ರಚನೆಗಳು ಈ ಹಿನ್ನಲೆಯಲ್ಲಿ ರಚನೆಯಾಗಿರುವಂತವು. ಅವುಗಳಿಗೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. "ಗೋರಿ ಕಟ್ಟೋ ಹಕ್ಕು ಮೊದಲು ಪೆರೋಗೆ ಮಾತ್ರ ಇತ್ತು. ಅವರಿಗೆ ಸಾವಿಲ್ಲ. ಯಾಕೆ ಅಂದರೆ ಓಸೈರಿಸಿನ ಕೃಪೆಯಿಂದ ಪೆರೋಗೆ ಪುನರುತ್ಥಾನ ಸಾಧ್ಯ. ಮೂರು ಸಾವಿರ ವರ್ಷ ಅವರು ಬಾಳೋದು ಖಚಿತ......ಆಮೇಲೆ ಅಮಾತ್ಯರಿಗೂ ಗೋರಿ ನರ‍್ಮಾಣಕ್ಕೆ ಅನುಮತಿ ಸಿಕ್ತು. ಮುಂದೆ ಭೂಮಾಲಿಕ ಪ್ರಭುಗಳು ಗೋರಿ ಕಟ್ಟಬಹುದಂತಾಯಿತು. ನೀವು ಭೂಮಲೀಕರಲ್ಲವಲ್ಲ.”17 ಸಾಮನ್ಯ ಜನರು ಮೇಲ್ ಸ್ತರದ ಯಾವುದೆ ಆಯ್ಕೆಯನ್ನು ಮಾಡಿಕೊಳ್ಳುವ ಹಾಗಿಲ್ಲ. ಕೇವಲ ದುಡಿಲಿಕ್ಕೆ ಮಾತ್ರ ಇರುವರು ಎಂಬ ಅಭಿಪ್ರಾಯ ಇತ್ತು.

ಐಗುಪ್ತ ಸಮುದಾಯದ ನಂಬಿಕೆಯ ದೇವತೆ ಓಸೈರಿಸ್. ಆ ದೇವತೆಗೆ ನಡೆಯುವ ವಿಧಿವವಿಧಾನಗಳು ಅರಸರ ಸೂಚನೆಯಂತೆ ನಡೆಯುತ್ತವೆ. ಅಲ್ಲಿ ಸಾಮನ್ಯರಿಗೆ ಪ್ರವೇಶವಿಲ್ಲ. ಆ ದೇವತೆಗಳ ಸಂತುಷ್ಟತೆಗಾಗಿ ಯಥೇಚ್ಯ ಹಣ ಖರ್ಚು ಮಾಡುತ್ತಾರೆ. ಒಂದು ರೀತಿಯಲ್ಲಿ ಅದೆಲ್ಲ ರಾಜನಿಗೆ ಸಲ್ಲಿಸುವ ಗೌರವವೆಂತಲು ಭಾವಿಸಲಾಗುತ್ತದೆ. "ಹಲವು ಸಹಸ್ರ ಜನ ಸಾಗಿದ ಮೇಲೆ, ಹಾಸುಗಲ್ಲಿನ ದಾರಿಯಲ್ಲಿ, ಬಗೆ ಬಗೆ ಭಕ್ಷ್ಯ ಭೋಜ್ಯ ತುಂಬಿದ್ದ ಜಾಡಿಗಳನ್ನು ಸೇವಕರು ಹೊತ್ತು ತಂದರು. ಇದು ಓಸೈರಿಸನಿಗೆ. ಆ ಲೋಕದ ಬುತ್ತಿ (ಒಂದು ವರ್ಷಕ್ಕಾಗುವಸ್ಟು). ಅನಂತರ ಮರದ ಪೆಟಾರಿಗಳನ್ನು ಹೊತ್ತ ಸೇವಕರು. ಆ ಪೆಟಾರಿಗಳಲ್ಲಿ ಓಸೈರಿಸನ ಆಭರಣಗಳು, ಉಡುಪುಗಳು. ಅವರ ಹಿಂದೆ ಅಧಿಕಾರ ದಂಡ ಹಿಡಿದ ಮಹಾ ಅರ್ಚಕ. ಆತನ ಹಿಂದೆ, ಇಬ್ಬರು ಕಿರಿಯ ದೇವ ಸೇವಕರು ಎಳೆಯುತ್ತಿದ್ದ ಜಾರು ಬಂಡಿ. ಅದರಲ್ಲಿ ಓಸೈರಿಸನ ಮೆದುಳು ಶ್ವಾಸಕೋಶ, ಕರುಳು ಇರಿಸಿದ್ದ, ಮೇಲ್ಕಟ್ಟು ಕಟ್ಟಿದ, ಜಾಡಿಗಳು. ಆ ಜಾರುಬಂಡಿಯ ಹಿಂದೆ ಇನ್ನೊಂದು ನೀಳವಾದ ಜಾರು ಬಂಡಿ. ಅದರಲ್ಲಿ ಓಸೈರಿಸನ ಶೆವಪೆಟ್ಟಿಗೆಯನ್ನು ಹೊತ್ತ ಮಂಚ. ಅದಕ್ಕೊಂದು ಮೇಲ್ಚಪ್ಪರ. ತಲೆಗೆ ಸಮೀಪದಲ್ಲಿ ಮಂಚನ ಮಗ್ಗುಲಲ್ಲಿ ಸಾಗಿದ್ದಳು ಐಸಿಸ್ ದುಖಿಃನಿ. ಆಕೆಗೆ ತಗಲಿಕೊಂಡು ಶೋಕ ಸ್ತ್ರೀಯರು. ಓಸೈರಿಸನ ಪಾದದ ಬಳಿ, ಜಾರು ಬಂಡಿಯ ಪಕ್ಕದಲ್ಲಿ ಕಿರಿಟಧಾರಿ ಸರ್ವಾಲಂಕೃತ ಪೆರೋ. ಆತನಿಗೆ ಅಂಟಿಕೊಂಡ ಅಂಗರಕ್ಷಕರು. ಅವರ ಹಿಂದೆ ಭೂಮಾಲೀಕರು. ಕಿರಿಯ ದೇವ ಸೇವಕರು ಜಾರು ಬಂಡಿಯನ್ನು ಎಳೆಯುತ್ತಿದ್ದರು. ಅದನ್ನು ಹಿಂಬಾಲಿಸಿ ಬಂತು ಬರಿಯ ರಾಜಪಲ್ಲಕ್ಕಿ. ಹೊತ್ತಿದ್ದವರು ದಾಸಜನ. ಬಳಿಕ ಅರಸನ ಯೋಧರು. ಅವರ ಹಿಂದೆ ಹೊತ್ತುಕೊಂಡು ಬರುತ್ತಿದ್ದ ಗುಲುಗಲು ಗದ್ದಲದ ಜನಸಮುದಾಯ.”18

ಜನರು ಅನಕ್ಷರಸ್ತರಾದ್ದರಿಂದ ಆಡಳಿತವನ್ನು ಪ್ರಶ್ನೆ ಮಾಡುವ ಅರಿವು ಇರೋದಿಲ್ಲ. ಅವರು ಯಾವುದನ್ನು ಹೇಳುತ್ತಾರೋ ಅದನ್ನು ಮಾತ್ರ ನಂಬಿಕೊಂಡು ಬದುಕುತ್ತಾರೆ. ಪ್ರಭುತ್ವದವರು ತಮ್ಮ ವಂಶವನ್ನು ದೇವಸಮಾನವಾದುದೆಂದು ಬಿಂಬಿಸುತ್ತಾ ಹೋಗುವುದು. ಜನಗಳು ಅದನ್ನು ಬಲವಾಗಿ ನಂಬುವ ವಾತವರಣವನ್ನು ನಿರ‍್ಮಿಸುವುದು. ಆರಾಧಿಸುವಂತೆ ಪ್ರೇರೇಪಿಸುವುದು. ಮತ್ತೆ ಶಾಸನ ಮಾಡುವುದು. ತಮ್ಮನ್ನು ವಿಜೃಂಭಿಸಿಕೊಳ್ಳುವ ಹೊಗಳುಭಟ್ಟರನ್ನು ನೇಮಕ ಮಾಡುವುದು ಮಾಡುತ್ತಾರೆ. ಇಡೀ ಜನಾಂಗವನ್ನೇ ಸಮೂಹ ಸನ್ನಿಗೆ ಒಳಪಡಿಸುವಂತೆ ಶ್ರೇಷ್ಟತೆಯ ವ್ಯಸನವನ್ನು ತುಂಬಿತ್ತಾರೆ. ಅದರಿಂದ ಮತ್ತರಾದ ಜನ ತಮ್ಮ ಆಡಳಿಗಾರರಿಗಾಗಿ ತಮ್ಮನ್ನು ಅರ್ಪಣೆ ಮಾಡಿಕೊಳ್ಳುತ್ತಾರೆ. ಅದನ್ನು ಮೀರುವವರು ದೇಶದ್ರೋಹದ ಅಪರಾಧಿಗಳಾಗಿ ಶಿಕ್ಷೆಗೆ ಒಳಗಾಗುತ್ತಾರೆ. ತಮ್ಮ ಹೆಸರು ಶಾಸ್ವತವಾಗಿ ಉಳಿಯಲು ಬೃಹದಾಕಾರದ ಕಟ್ಟಡಗಳನ್ನು ನರ‍್ಮಿಸುತ್ತಿದ್ದರು. ಜನರನ್ನು ಬೇಕಾಬಿಟ್ಟಿ ದುಡಿಸುತ್ತಿದ್ದರು. "ಜಗತ್ತಿನಲ್ಲಿಯೇ ಶ್ರೇಷ್ಟತಮವೆನಿಸಿದ ಐಗುಪ್ತದ ಪ್ರಜೆಗಳು ನಾವು. ಸೃಷ್ಟಿಕರ್ತ ರಾನ ಮಕ್ಕಳು. ಮಹಾ ಪೆರೋನ ಪ್ರೀತಿ ಪಾತ್ರ ಕುರಿಗಳು. ದೇವಸಂತಾನ ಹುಟ್ಟಿಸಿದ ದೇವರೆ ಈ ಲೋಕದಲ್ಲಿ ನಿಂತು ಪ್ರಭುವಾಗಿ ನಮ್ಮನ್ನು ಆಳಿದ ಸಹಸ್ರಾರು ಸಂವತ್ಸರ. ಹಾಗೆಯೆ ದೇವಪುತ್ರ, ಓಸೈರಿಸ್, ಆತನ ಕುಮಾರ ಹೋರೆಸ್ ಇವರು ಸಹಸ್ರಾರು ವರ್ಷ ಆಳಿದರು. ಕಾಲವಾದ ಮೇಲೆ ಅಮರರಾದರು. ದೇವತೆಗಳ ಶ್ರೇಣಿಯಲ್ಲಿ ಸ್ಥಾನ ಪಡೆದರು. ಅದೇ ರೀತಿ ವಿದ್ಯಧಿದೇವತೆ ಥೊಥ್. ಈತ ಮಹಾ ಪ್ರಭುವಾಗಿ ಮೂರು ಸಾವಿರ ವರ್ಷ ರಾಯಭಾರ ಮಾಡಿದ; ಕಾನೂನು ಕಟ್ಟಳೆಗಳ ಇಪ್ಪತ್ತು ಸಾವಿರ ಗ್ರಂಥಗಳನ್ನು ರಚಿಸಿದ. ಮಿಕಗಳನ್ನು ಬೇಟೆಯಾಡುತ್ತಾ ಅಲೆಮಾರಿಗಳಾಗಿದ್ದ ನಮ್ಮ ಪೂರ್ವಜರು ನೀಲ ನದಿಯ ದಂಡೆಗಳಲ್ಲಿ ನೆಲೆನಿಂತರು, ಕೃಷಿವಲರಾದರು. ಲಿಪಿಯ ಸೃಷ್ಟಿಯಿಂದ ಹೊಸ ಮನ್ವಂತರ ಆರಂಭವಾಯಿತು. ಆ ಮನ್ವಂತರದ ಮೊದಲ ಮಹಾಪ್ರಭು ಮೆನೆಸ್. ಕೇವಲ ಒಂದು ಸವಿರ ವರ್ಷ ಹಿಂದೆಯಷ್ಟೇ ಆಳಿದನು ಈತ. ಇವನ ಕಾಲದಿಂದ ಪ್ರಭುಗಳ ಆಯುಷ್ಯನ್ನು ಮೀರಲಿಲ್ಲ; ಆದರೆ, ಈ ಲೋಕದಲ್ಲಿ ಧರ್ಮನಿಷ್ಠರಾಗಿ ಜೀವಿಸಿ ಗೋರಿ ಕಂಡ ಮೇಲೆ ಮೂರುಸವಿರ ವರ್ಷ ಬದುಕುವ ಅರ್ಹತೆಯನ್ನು ಅವರು ಪಡೆದರು. ಆ ವರೆಗೆ ಮೇಲಣ ಐಗುಪ್ತ ಮತ್ತು ಕೆಳಗಲ ಐಗುಪ್ತ ಅಂತ ಎರಡು ಹೋಳಾಗಿತ್ತು ದೇಶ. ಮೆನೆಸ್ ದೇಶವನ್ನು ಒಗ್ಗೂಡಿಸಿದ, ಜೋಡಿ ಕಿರೀಟ ಧರಿಸಿದ. ಥೊಥ್ ರೂಪಿಸಿದ್ದ ಆಚರಣೆಗಳನ್ನು ಆಚರಣೆಗೆ ತಂದ. ಮಂಚದ ಮೇಲೆ ಮಲಗೋದಕ್ಕೆ, ಕುರ್ಚಿಮೇಲೆ ಕುಳಿತುಕೊಳ್ಳೋದಕ್ಕೆ ಹೇಳಿಕೊಟ್ಟ. ಕಟ್ಟೆಗಳನ್ನು ಕಟ್ಟಿ ನೀಲ ನದಿಯ ನೀರು ಹೊಲಗಳಿಗೆ ಬರೋ ಹಾಗೆ ಮಾಡಿದ. ಪೆರೋ ಜೊಸರನ ಕಾಲದಲ್ಲಿ ಎಂಬತ್ತಾರು ಆಳೆತ್ತರದ ಗೋರಿ ಸಿದ್ದವಾಯಿತು. ಅದನ್ನು ಕಟ್ಟಿದವನು ಮಹಾಶಿಲ್ಪಿ ಇಮ್ಹೊಟೆಪ್. ನಮ್ಮವರು ಮಣ್ಣಿನಿಂದ ಇಟ್ಟಿಗೆ ಮಾಡುವದನ್ನು ಕಲಿತರು. ಇಟ್ಟಿಗೆಯಿಂದ ಮಾತ್ರವಲ್ಲ, ಕಲ್ಲಿನಿಂದಲೂ ಕಟ್ಟಡ ನರ‍್ಮಿಸೋದಕ್ಕೆ ಶುರು ಮಾಡಿದರು. ಪೆರೋ ಖುಫು ರಕ್ಷಕ ದೇವತೆಯ ಮಹಾಶಿಲ್ಪ ಮಾಡಿಸಿದ. ಕಾಓರಾ, ಮೆಂಕೋರಾ ಕಲ್ಲಿನ ಮಹಾ ಪಿರಮಿಡ್ಡುಗಳನ್ನು ಕಟ್ಟಿಸಿದರು. ಒಂದು ರಚನೆಗೆ ಇಪ್ಪತ್ತು ವರ್ಷ! ನೂರು ಸಹಸ್ರ ಜೀತದ ದುಡಿಮೆ!”19

ವ್ಯಾಪಾರವು ಜನರನ್ನು ಒಗ್ಗೂಡಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಅದ್ದರಿಂದ ಯಾವುದೆ ಆಡಳಿತವು ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತದೆ. ಅನ್ಯರ ವ್ಯಾಪಾರ ಕೇಂದ್ರಗಳನ್ನು ವಶಪಡಿಸಿಕೊಳ್ಳುವ ಸಂಚುಗಳನ್ನು ರೂಪಿಸುತ್ತಿರುತ್ತದೆ. ಯಾವ ರಾಜ ವ್ಯಾಪಾರವನ್ನು ಬಲಿಷ್ಠಗೊಳಿಸುತ್ತಾನೊ ಆತ ಹೆಚ್ಚು ಜನಮನ್ನಣೆಯನ್ನು ಗಳಿಸಿತ್ತಾನೆ. ಜನರ ಮೆಚ್ಚಿಗೆಗೂ ಪಾತ್ರನಾಗುತ್ತಾನೆ. ಆದ್ದರಿಂದ ಎಲ್ಲಾ ಅರಸರು ವ್ಯಾಪಾರವನ್ನು ಬಲಗೊಳಿಸಲು ಪ್ರಯತ್ನಿಸುತ್ತಿದ್ದರು. "ಖೇಮು ದೇವರ ಕೃಪೆಯಿಂದ, ನೀಲ ನದಿಯ ದಯೆಯಿಂದ ಹತ್ತು ಹಗಲು ಹತ್ತು ರಾತ್ರಿಗಳ ಪ್ರವಾಸದ ದೂರ ಒಂದು ಲೆಕ್ಕವೇ ಅಲ್ಲ. ನಮ್ಮ ನೌಕೆಗಳು ಈಗ ಮಹಾ ಹಸುರು ಸಮುದ್ರವನ್ನು ಹೊಕ್ಕು ಕೆಫ್ಟಿಯ ದ್ವೀಪದವರೆಗೆ ಹೋಗಿ ಬರುತ್ತವೆ. ಇತ್ತ ಕೆಟಾ ಜನರ ಜೊತೆ ನಮಗೆ ವಾಣಿಜ್ಯ ಸಂಬಂಧವಿದೆ. ದೂರ ದೇಶವಾದ ಪಂಟ್‌ಗೂ ಐಗುಪ್ತದ ನೌಕೆಗಳು ಹೋಗಿ ನಮ್ಮ ಸಾಮಗ್ರಿಗಳಿಗೆ ವಿನಿಮಯವಾಗಿ ತಾಮ್ರ, ಕಂಚು, ಬಂಗಾರ, ಬೆಳ್ಳಿ , ಹಸ್ತಿದಂತ, ಅಪೂರ್ವ ಮರಗಳು, ಅಮೂಲ್ಯ ಹರಳುಗಳು, ಸಾಂಬಾರ ವಸ್ತುಗಳು, ಆಕರ್ಷಕ ಪ್ರಾಣಿಚರ್ಮ, ಉಷ್ಟçಪಕ್ಷಿಯ ಪುಕ್ಕ ಇವೆಲ್ಲ ತರುತ್ತವೆ.”20

ಜನರಿಗೆ ತೆರಿಗೆ ವಿಧಿಸುವುದರ ಮೂಲಕ ಆದಾಯವನ್ನು ಸಂಗ್ರಹಿಸಲಾಗುತಿತ್ತು. ಅದು ಅವರ ಪರಿಸ್ಥಿತಿಯನ್ನು ನೋಡಿ ತೆರಿಗೆಯನ್ನು ವಿಧಿಸುತ್ತಿರಲಿಲ್ಲ. ಒಟ್ಟು ನಿಗದಿಯಾದ ತೆರಿಗೆಯನ್ನು ಕೊಡಬೇಕು ಅಷ್ಟೆ. ಕೊಡಲಾಗದವರನ್ನು ಉಗ್ರ ಶಿಕ್ಷೆಗೆ ಒಳಪಡಿಸಲಾಗುತಿತ್ತು. ಅದಕ್ಕೆ ಆಡಳಿತವನ್ನು ವಿವಿಧ ಬಗೆಯಲ್ಲಿ ಹಂಚಲಾಗಿತ್ತು. ಅಧಿಕಾರವು ವಿಕೇಂದ್ರಿಕರಣ ನೆಲೆಯಲ್ಲಿ ಇರಲಿಲ್ಲ. ತಮಗೆ ಬೇಕಾದವರನ್ನು ಆಡಳಿತಧಿಕಾರಿಯನ್ನಾಗಿ ನೇಮಕ ಮಾಡುತ್ತಿದ್ದರು. ಅವರು ಸಾಮನ್ಯರ ಕಷ್ಟ ಸುಖಗಳಿಗೆ ಸ್ಪಂದಿಸದೆ ಆಡಳಿತವನ್ನು ಜನರ ಸುಲಿಗೆಗಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದೆ ಅವರಿಗೆ ಮುಖ್ಯವಾಗಿತ್ತು. ಜನರ ಏಳಿಗೆಗಾಗಿ ತಮ್ಮನ್ನು ಅರ್ಪಿಸಿಕೊಳ್ಳುತ್ತಿರಲಿಲ್ಲ. ಈಗುಪ್ತದ ಆಡಳಿತವನ್ನು ಪ್ರಾಂತಗಳನ್ನಾಗಿ ವಿಂಗಡಿಸಲಾಗಿತ್ತು. ಒಟ್ಟು ನಲವತ್ತು ಪ್ರಾಂತಗಳಿದ್ದವು. ಪ್ರತಿಯೊಂದು ಪ್ರಾಂತಕ್ಕೆ ಒಬ್ಬ ಪ್ರಾಂತಪಾಲಕರನ್ನು ನೇಮಕ ಮಾಡುತ್ತಿದ್ದರು. ಆ ಪ್ರಾಂತಪಾಲಕರು ರಾಜರ ಅಣತಿಯಂತೆ ನಡೆಯುತ್ತಿದ್ದರು. ಈ ಪ್ರಾಂತಾದಿಕಾರಿಗಳ ಮೇಲೆ ತೆರಿಗೆಯನ್ನು ಸಂಗ್ರಹಿಸಲು ಕಂದಾಯದ ಅಧಿಕಾರಿಗಳು ಇಡಿ ದೇಶಕ್ಕೆ ಮೂರು ಜನ ಇರುತ್ತಿದ್ದರು. ಪ್ರಾಂತಧಿಕಾರಿಗಳಿಗಿಂತ ಅವರು ಮೇಲಿನವರಾಗಿದ್ದರು. ಇವರು ಹೇಳಿದಂತೆ ಪ್ರಾಂತಾಧಿಕಾರಿಗಳು ಕೇಳಬೇಕಿತ್ತು. ಸಂಪೂರ್ಣ ತೆರಿಗೆ ಸಂಗ್ರಹಿಸುವ ಅಧಿಕಾರ ಕಂದಾಯ ಅಧಿಕಾರಿಗಳಿಗೆ ಸೇರಿದ್ದಾಗಿತ್ತು. ವರ್ಷಕ್ಕೆ ಒಂದು ಸಾರಿ ತೆರಿಗೆಯನ್ನು ಸಂಗ್ರಹಿಸಲು ಬರುತ್ತಿದ್ದರು.``ಪೆರೊನ ಕೃಪೆಯಿಂದ ಪ್ರತಿ ವರ್ಷವೂ, ಅಯನ ಸಂಕ್ರಮಣ ಬಿಂದುವಿನಲ್ಲಿ ರಾ ದಕ್ಷಿಣಕ್ಕೆ ಹೊರಳುವ ದಿನ, ಮುಂಜಾನೆ ತುಸು ಮುನ್ನ, ಸೊಥಿಸ್ ನಕ್ಷತ್ರ ಉದಯಿಸುತ್ತದೆ. ನೀಲ ನದಿಯಲ್ಲಿ ಪ್ರವಾಹ ಬರುತಿದೆ-ಅಂತ ಅದು ಸಾರ‍್ತದೆ. ಆ ದಿನದಿಂದ ಈಗುಪ್ತದಲ್ಲಿ ಹೊಸ ವರ್ಷ ಆರಂಭ. ನೀವೆಲ್ಲ ತಿಳಿದಿರೋ ಹಾಗೆ ಇದು ನದಿಯ ಎರಡೂ ದಂಡೆಗಳನ್ನು ನೂರು ದಿನ ನೀರಲ್ಲಿ ಅದ್ದೋ ಭಾರೀ ಪ್ರವಾಹ. ಹೊಲಗಳಲ್ಲಿ ಫಲವತ್ತಾದ ಮಣ್ಣನ್ನು ಬಿಟ್ಟು ಪ್ರವಾಹ ಇಳಿತದೆ. ಪ್ರವಾಹ ಎಷ್ಟು ಎತ್ತರ ಇತ್ತು ಅನ್ನೋದರ ಆಧಾರದ ಮೇಲೆ ಮುಂದಿನ ವರ್ಷದ ಫಸಲನ್ನು ರಾಜಬೊಕ್ಕಸಕ್ಕೆ ಮತ್ತು ದೇವ ಮಂದಿರಕ್ಕೆ ಸಲ್ಲಬೇಕಾದ ಕಂದಾಯವನ್ನು ಗೊತ್ತು ಮಾಡ್ತೇವೆ. ಯಾವಾಗಲೂ ಪ್ರವಾಹದ ಸೌಲಭ್ಯ ಇರೋ ಭೂಮಿ, ಒಮ್ಮೊಮ್ಮೆ ಮಾತ್ರ ಪ್ರವಾಹ ಸೌಲಭ್ಯ ಇರೋ ಭೂಮಿ, ಪ್ರವಾಹ ಸೌಲಭ್ಯ ಯಾವತ್ತು ಇರದ ಭೂಮಿ- ಮೂರು ರೀತಿ ವಿಂಗಡಿಸುತ್ತೇವೆ. ಕಂದಾಯ ನಿಗದಿ ಮಾಡೋದು ಈ ಆಧಾರದ ಮೇಲೆ. ಧರ್ಮಾತ್ಮ ಒಸೈರಿಸ್ ಹೆಮ್ಮೆ ಪಡಬಹುದಾದ ವ್ಯವಸ್ಥೆ ಇದು. ಚಳಿಗಾಲದಲ್ಲಿ ಆಯನ ಬಿಂದು ತಲುಪಿದ ಮೇಲೆ ರಾ ಉತ್ತರಕ್ಕೆ ಹೊರಳ್ತಾನೆ. ಹಗಲು ದೀರ್ಘವಾಗ್ತದೆ. ಕುಯಿಲು ಆದ ಮೇಲೆ ನಾವು ಬರ‍್ತೇವೆ.”21 ಎಂದು ಅಧಿಕಾರಿಗಳು ವರ್ಷದ ಮುಂಚೆನೆ ಕಂದಾಯ ವಸೂಲಿಗೆ ಬರುವ ಸೂಚನೆಯನ್ನು ನೀಡುತ್ತಿದ್ದರು.

ಕಂದಾಯವನ್ನು ವಸೂಲಿ ಮಾಡುವಾಗ ಕ್ರೂರವಾಗಿ ನಡಕೊಳ್ಳುತ್ತಿದ್ದರು. ಜನರ ಸಮಸ್ಯೆಗಳನ್ನು ಲೆಕ್ಕಿಸದೆ ಅಧಿಕಾರಿಗಳು ಮನಸೇಚ್ಚೆ ವಸೂಲಿ ಮಾಡುತ್ತಿದ್ದರು. ನಿರ್ದಯವಾಗಿ ಜನರ ಮೇಲೆ ಹಲ್ಲೆ ಮಾಡುತ್ತಿದ್ದರು. ಅವರು ಬೆಳೆ ನಾಶವಾಗಿದೆ ಎಂದು ಬೇಡಿಕೊಂಡರು ಲೆಕ್ಕಿಸದೆ ವಸೂಲಿಗೆ ಇಳಿಯುತ್ತಿದ್ದರು. ಮಳೆ ಬೆಳೆಯ ಪರಸ್ಥಿತಿಯನ್ನು ಅವಲೋಕನ ಮಾಡುತ್ತಿರಲಿಲ್ಲ. ತೆರಿಗೆಯನ್ನು ಕೊಡಬೇಕು ಅಷ್ಟೆ. ಜನರಿಗೆ ಮಾತಾಡುವ ಹಕ್ಕನ್ನು ಕೂಡ ಕೊಟ್ಟಿರಲಿಲ್ಲ. ಅಧಿಕಾರಿಗಳು ಹೇಳಿದಷ್ಟನ್ನು ತೆರಿಗೆ ಕೊಟ್ಟು ಜೀವನ ಸಾಗಿಸಬೇಕು. ಇಲ್ಲದಿದ್ದರೆ ಸಾವಿಗೆ ಶರಣಾಬೇಕು. ಅಷ್ಟು ಅಮಾನುಷವಾಗಿ ತೆರಿಯನ್ನು ವಸೂಲು ಮಾಡುತ್ತಿದ್ದರು. "ಕಂದಾಯ ವಸೂಲಿಯ ಆರು ಜನ ಅಲ್ಲಿಗೆ ಬಂದರು. ಮುಖ್ಯ ಪಟ್ಟಣದಲ್ಲಿ ತಮ್ಮ ಕೆಲಸ ಮುಗಿಸಿ ಹಳ್ಳಿಗಳ ಕಡೆಗೆ ಅವರು ವಸೂಲಿಗೆ ಹೊರಟಿದ್ದರು. ಅದಿಕಾರಿ ಇರಲಿಲ್ಲ ಭಟರು ಮಾತ್ರ.

ತನ್ನ ಗುಡಿಸಿಲಿಗೆ ಅವರು ಬಂದಾಗ ನೆಫಿಸಳ ಚಿಕ್ಕಪ್ಪ ದೈನ್ಯದಿಂದ ಪ್ರಾರ್ಥಿಸಿದ.
`ಪೆರೋನ ಆಯುರಾರೋಗ್ಯ ಹೆಚ್ಚಲಿ! ಈ ವರ್ಷ ನನ್ನಲ್ಲೇನು ಇಲ್ಲ...’
ಒಬ್ಬ ಭಟ ಅಣುಕಿಸಿ
`ನನ್ನಲ್ಲನು ಇಲ್ಲ! ಕಳ್ಳ ನನ್ಮಕ್ಳು. ಈ ಪಲ್ಲವಿ ನಿಮಗೆ ರೂಢಿಯಾಗಿದೆ.’
ಇನ್ನೊಬ್ಬ ಭಟ ನೀರಾನೆ ತೊಗಲಿನ ಚಾವಟಿಯಿಂದ ಚುರುಕು ಮುಟ್ಟುಸಿದ. ಚಿಮ್ಮುವ ರಕ್ತದ ವೃತ್ತ ಬೆನ್ನನ್ನು ಎದೆಯನ್ನು ಬಳಿಸಿತು. ಒಬ್ಬನ ಕೈಯಲ್ಲಿ ಹಗ್ಗವಿತ್ತು. ಉಳಿದವರ ಕೈಗಳಲ್ಲಿ ಸೋಗೆ ಕಿತ್ತ ತಾಳೆಯ ಕೊರಡುಗಳು.
` ಆಣೆ ಮಾಡಿ ಹೇಳ್ತೇನೆ .. ಇನ್ನೊಂದು ವಾರಕ್ಕೆ ಸಾಲುವಷ್ಟು ಕಾಳು ನನ್ನಲ್ಲಿ ಇಲ್ಲ.’
`ಕುಯ್ಲು ಮುಗಿದು ಒಂದು ತಿಂಗಳು ಆಗಿಲ್ಲ. ಎಲ್ಲಿ ಬಚ್ಚಿಟ್ಟೆ?
`ಹೊಲದಲ್ಲಿಯೇ ಫಸಲಿಗೆ ಹುಳು ಹಿಡಿತು. ಅರ್ಧ ಕೆಟ್ಟು ಹೋಯಿತು. ಕಾಡು ಹಂದಿಗಳ ಪಾಲಾಯ್ತು ಒಂದಿಷ್ಟು. ಉಳಿದಿದ್ದರಲ್ಲಿ ಇಲಿಗಳೂ ಮಿಡತೆಗಳು ಸ್ವಲ್ಪ ಮುಕ್ಕಿದವು.’
`ಹಕ್ಕಿಗಳು ಬರಲಿಲ್ವ?’
`ಬಂದ್ವು ನಮ್ಮಪ್ಪ.. ಚೂರು ಪಾರು ಮನೆಗೆ ಬರೋದಕ್ಮುಂಚೆ ಕಳ್ಳರು ಕೈ ಹಾಕಿದ್ರು’
ಚಾವಟಿ ಮತ್ತೆ ಸುಂಯ್ ಗುಟ್ಟಿತು. ಗುಡಸಲಿನ ಮುಂದಿತ್ತು ನೀರು ಹರಿಯುತ್ತಿದ್ದ ಕಿರು ನಾಲೆ. ನೆಫಿಸಳ ಚಿಕ್ಕಪ್ಪನನ್ನು ದರದರನೆ ಎಳೆದು ಬೋರಲು ಕೆಡವಿದರು. ಮುಖವನ್ನು ನಾಲೆಯಲ್ಲಿ ಅದ್ದಿದರು.
ಇಬ್ಬರು ಗುಡಿಸಲು ಒಳಗಿದ್ದುದನ್ನೆಲ್ಲ ಜಾಲಾಡಿದರು. ಹೆದರಿ ಮೂಲೆ ಸೇರಿ ಅಳುತ್ತಾ ನಿಂತಿದ್ದ ನೆಫಿಸಳನ್ನೂ ಚಿಕ್ಕ ಮಕ್ಕಳನ್ನು ಗದುರಿಸಿದರು. ಅಂಗೈಯಿAದ ಏಟು ಕೊಟ್ಟರು, ಮುಷ್ಟಿಗಳಿಂದ ಗುದ್ದಿದರು.
`ಎಲ್ಲಿ ನಿಮ್ಮಮ್ಮ?’
`ಸತ್ತೋದ್ಲು’ ಎಂದಳು ನೆಫಿಸ್
ಅಷ್ಟರಲ್ಲೇ ಓಡಿಬಂದಳು, ಭೂಮಾಲಿಕರ ಮನೆಗೆ ದುಡಿಯಲು ಹೋಗಿದ್ದ ಚಿಕ್ಕಮ್ಮ. ಆಕೆ ಧ್ವನಿ ತೆಗೆದು ಹತ್ತಳು.
`ನಮ್ಮಮ್ಮ ಸತ್ತೋದ್ಲು ಅಂತ ಸುಳ್ಳು ಹೇಳಿದೆಯಾ?’
ಆತ ಹುಡುಗಿ ತುರುಬಿಗೆ ಕೈ ಹಾಕಿ ಎಳೆದ
` ಅದು ತಬ್ಬಲಿ ಮಗು. ನನ್ನ ಅಕ್ಕಂದು. ಬಿಟ್ಬಿಡಿ’ ಎನ್ನುತ್ತಾ ಚಿಕ್ಕಮ್ಮ ತನ್ನ ಗಂಡನ ಬಳಿಗೆ ಧಾವಿಸಿದಳು.
ಭಟರು ಅವಳ ರಟ್ಟೆ ಹಿಡಿದು ತಿರುವಿದರು.
`ಎಲ್ಲಿಟ್ಟಿದ್ದಿಯಾ ಧಾನ್ಯ’?
`ಇಲ್ಲಪೋ ಈ ವರ್ಷ ಇಲ್ಲಪೋ.. ‘
ಅವಳನ್ನೂ ಕೆಡವಿದರು. ಗಂಡನನ್ನು ಹೆಂಡತಿಯನ್ನು ಒಟ್ಟಿಗೆ ಹಗ್ಗದಿಂದ ಬಿಗಿದರು. ಕೊರಡಿನಿಂದ ಹೊಡೆದರು. ತುಳಿದರು.
ನಡು ಆಕಾಶದಲ್ಲಿತ್ತು ರಾನ ರಥ. ಚಿಕ್ಕಮ್ಮನ ಹಾಗೂ ಮಕ್ಕಳ ಆಕ್ರಂದನ ಆಕಾಶಕ್ಕೆ ಏರುತಿತ್ತು.
ಇದ್ದಕ್ಕಿದ್ದಂತೆ ಒಬ್ಬ ಭಟನೆಂದ
`ಇವನು ಸತ್ತ’
ತೊಡೆಯನ್ನು ತುಳಿದು ನೂಕಿ ಅಂದ
`ಜೀವ ಇಲ್ಲ’
`ನಡೀ ಎಂದ ಇನ್ನೊಬ್ಬ.’
ಎಲ್ಲಿಯೂ ಕಾಣಿಸದಿದ್ದ ರೈತರನ್ನು ಹುಡಿಕಿಕೊಂಡು ಹೊರಟರು ಅವರು.” 22

ಇಂತಹ ಕರುಳಿರುವಂತ ಪ್ರಸಂಗಗಳು ಎಲ್ಲೂ ಚರಿತ್ರೆಯಲ್ಲಿ ದಾಖಲಾಗುವದಿಲ್ಲ. ಚರಿತ್ರೆಯಲ್ಲಿ ಕೇವಲ ತೆರೆಗೆಯನ್ನು ವಸೂಲು ಮಾಡಿದರು ಎಂಬ ಅಂಶಗಳು ಮಾತ್ರ ಇರುತ್ತವೆ. ಆದರೆ ತೆರಿಗೆಯನ್ನು ಹೇಗೆ ವಸೂಲು ಮಾಡಿದರು ಎಂಬ ಬಗ್ಗೆ ಯಾವ ವಿವರಗಳು ಇರುವದಿಲ್ಲ. ಆದ್ದರಿಂದ ಕಾದಂಬರಿಗಳು ಹೇಳುವ ಚರಿತ್ರೆಯ ಪರಿಕಲ್ಪನೆ ಬೇರೆ ರೀತಿಯಲ್ಲಿ ಇರುತ್ತದೆ. ನಿರಂಜನರು ಶೋಷಣೆಯ ಚರಿತ್ರೆಯನ್ನು ಕಾದಂಬರಿ ಮಾಡುತ್ತಿದ್ದಾರೆ. ಅದು ಅವರ ಉದ್ದೇಶವಲ್ಲ. ಆದರೆ, ಆ ಕಾದಂಬರಿ ಅದನ್ನು ಧ್ವನಿಸುತ್ತದೆ.

ತೆರಿಗೆ ಕೊಡದ ಕಾರಣಕ್ಕೆ ಹಿಂಸೆ ಮಾಡುವುದು ಸಾಮನ್ಯ ಸಂಗತಿಯಾಗಿತ್ತು. ಯಾರು ಅದನ್ನು ಪ್ರಶ್ನೆ ಮಾಡುವ ಹಾಗಿಲ್ಲ. ಪ್ರಭುತ್ವ ಹೇಳುವದನ್ನು ಮಾಡಬೇಕು ಅಷ್ಟೆ. ಅದನ್ನು ಮೀರುವವರು ವಿಪರೀತ ಹಿಂಸೆಗೆ ಒಳಗಾಗಬೇಕಿತ್ತು. ಅವರ ಬವಣೆಗಳನ್ನು ಕೇಳುವವರು ಇದ್ದಿಲ್ಲ. ಇದ್ದರು ಅಂತವರಿಗೆ ಬಲ ಇರಲಿಲ್ಲ. ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡರು ಅವನ್ನು ಕೇಳಿ ಪರಿಹರಿಸುವವರು ಇರಲಿಲ್ಲ. ತೆರಿಗೆ ವಸೂಲಿಗೆ ಬರುವವರು ಮತ್ತಷ್ಟು ದರ್ಪ ತೋರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು. "ದಾಖಲೆಯಾಗಿರೋ ಹಾಗೆ ಕಳೆದ ವರ್ಷ `ಒಳ್ಳೆಯ ನೀಲ’ ಆದರೇನಾಯಿತು? ಹಗ್ಗ ಎಳೆಯುವವರು ಎಳೆದರು. ಮೋಜಣಿದಾರರು ನೆಲ ಅಳೆದರು. ನಾಲೆಗಳ ದುರಸ್ತಿ ಮಾತ್ರ ಆಗಲಿಲ್ಲ. ಕೆರೆಗಳ ಹೂಳು ತೆಗೆದು ನೀರು ಸಂಗ್ರಹಿಸೋ ಕೆಲಸ ನಡೀಲಿಲ್ಲ. ಇದು ಬಡ ಪ್ರಜೆಗಳಿಂದ ಆಗುವಂತದ್ದೆ? ಆಳುವವರಲ್ಲವೆ ಮಾಡಬೇಕಾದ್ದು? ನಾವು ಷಾಡೂಫ್ ನಡೆಸೇವು. ನದಿಯಿಂದ ನೀರೆತ್ತಿ ಬಾವಿಗೆ ಸುರಿದೇವು. ಆದರೆ ಈ ನೀರು ಎಷ್ಟು ಹೊಲಗಳಿಗೆ ಸಾಕು? ಇಷ್ಟಕ್ಕೆ ಮುಗಿಲಿಲ್ಲ ನಮ್ಮ ಕಷ್ಟ. ಮುದಿ ಹೋರಿಗೆ ಬದಲು ಹೊಸ ಹೋರಿ ತರಬೇಕು ನೇಗಿಲಿಗೆ ಬೇರೆ ಮೊನೆ ಹಾಕಬೇಕು. ಇದಕ್ಕೆ ಖರ್ಚಾಗದಿಲ್ವ? ಧಾನ್ಯ ಬೇಡವಾ? ಇನ್ನು ಇಲಿ, ಹೆಗ್ಗಣ, ಕಾಡುಹಂದಿ, ಹುಳು ಹುಪ್ಪಟೆ, ಮಿಡಿತೆ, ಹಕ್ಕಿಗಳ ಕಾಟದ ವಿಷಯ ಎಷ್ಟು ಹೇಳಿದರು ಸ್ವಲ್ಪವೇ? ಕಳ್ಳರೂ ಇರ‍್ತಾರೆ. ರಾಜಕಾರಣಕ್ಕೆ ಹಿಂದೆ ಹತ್ತರಲ್ಲಿ ಒಂದಂಶ ಸಲ್ಲಿಸ್ತಿದ್ವಿ. ಈಗ ಕಂದಾಯ ಇಮ್ಮಡಿಯಾಗಿದೆ. ಹತ್ತರಲ್ಲಿ ಒಂದಂಶ ದೇವ ಮಂದಿರಕ್ಕೂ ಸಲ್ಲಬೇಕಾಗಿದೆ. ಕೈಯಲ್ಲಿದ್ದ ಚೂರು ಪಾರು ಕಾಳು ಮುಗಿದಾಗ ನಾವು ಏನನ್ನು ತಿನ್ಬೇಕು? ಆಗ ಪೆಪೆರೈಸ್ ದಂಟಿನ ಬುಡಭಾಗವೇ ನಮ್ಮ ಆಹಾರ. ಇಲ್ಲವೇ ನೀರು ಗಿಡಗಳ ಬೇರುಗಳು, ಕಡ್ಡಿಗಳು, ಹಸಿಯೋ ಬೇಯಿಸಿಯೋ ಸುಟ್ಟೋ ತಿನ್ಬೇಕು” 23 ಎಂದು ರೈತರು ತಮ್ಮ ಗೋಳನ್ನು ಹೇಳಿಕೊಂಡರೆ ಅದಕ್ಕೆ ಕಿವಿಗೊಡದೆ ತೆರಿಗೆಯನ್ನು ವಸೂಲಿ ಮಾಡುತ್ತಿದ್ದರು.
ತೆರಿಗೆ ವಸೂಲಿ ಮಾಡುವಾಗಲು ಕೂಡ ತಾರತಮ್ಯ ಮಾಡಲಾಗುತಿತ್ತು. ಭೂಮಾಲಿಕರು ಸುಳ್ಳು ಲೆಕ್ಕಕೊಟ್ಟು ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ತೆರಿಗೆಯ ಅಧಿಕಾರಿಗಳು ರಾಬೊಕ್ಕಸಕ್ಕೆ ಸಂಗ್ರವಾದದ್ದನ್ನೆಲ್ಲ ತಲುಪಿಸುತ್ತಿಲ್ಲ. ಅದರಲ್ಲಿ ಅರ್ಧದಷ್ಟು ನುಂಗುತ್ತಿದ್ದರು. ಇದನ್ನು ಯಾರು ಪ್ರಶ್ನೆ ಮಾಡುವ ಹಾಗಿಲ್ಲ. ಪ್ರಶ್ನೆ ಮಾಡಿದರೆ ಅಂತವರು ಶಿಕ್ಷೆಗೆ ಒಳಗಾಗಬೇಕಾಗುತಿತ್ತು. ನೀರಾನೆಯ ಹೋರಾಟಗಾರನಾದ ಮೆನೆಪ್‌ಟಾ ಈ ಕುರಿತು ತೆರಿಗೆದಾರರನ್ನು ಕೇಳಿದರೆ ಅವರು ವರ್ತಿಸುವ ಪರಿಯೇ ಬೇರೆ. ಅದು ಅತ್ಯಂತ ನಿರ್ದಯವಾದುದು. "ರೈತ ತನ್ನ ಫಸಲಿನ, ಪಶುಪಾಲಕ ತನ್ನ ಮಂದೆಯ, ಕಸಬುದಾರ ತನ್ನ ಕುಶಲ ಕೆಲಸದ, ಬೆಸ್ತ ತಾನು ಹಿಡಿದ ಮೀನಿನ, ಬೇಡ ತಾನು ಹೊಡೆದ ಮಿಕಗಳ ಹತ್ತರಲ್ಲೆರಡು ಭಾಗ ತೆರಿಗೆಯಾಗಿ ತೆರಲೆಬೇಕು. ಮನುಷ್ಯರ ಮತ್ತು ಪ್ರಾಣಿಗಳ ಗಣತಿ ನಡಿತಲೇ ಇರ‍್ತದೆ. ಗಣತಿಯ ಕಾಲದಲ್ಲಿ ಪ್ರಾಣಿಗಳನ್ನು ದೂರ ಓಡಿಸಿ ನಮ್ಮಿಂದ ಮರೆ ಮಾಡ್ತಾರೆ-ಅಂತ ಗಣತಿಯವರು ದೂರುತಾರೆ. ನಮ್ಮ ಪ್ರಾಂತದ ಅತ್ಯಂತ ದೊಡ್ಡ ಭೂಮಾಲಿಕ ನುಟ್ ಮೋಸರ ಹಿತ್ತಲಲ್ಲಿ ಹದಿನೈದು ನೂರು ರಾಸು ಇವೆ. ಆದರೆ ದಾಖಲಲ್ಲಿ ಇರೋದೆಷ್ಟು?

`ಎಷ್ಟು?’
`ಪೆಟಾರಿಯಿಂದ ಸುರುಳಿ ತೆಗೆದು ನೋಡಿ.’
` ಲಂಚ ತಗಂಡು ಸುಳ್ಳು ಲೆಕ್ಕ ಬರಿತಾರೆ ಅಂತ ಆಪಾದಿಸುತಿಯ?’
` ನನಗೆ ಗೊತ್ತಿಲ್ಲ. ವಿಚಾರಣೆ ನಡಿಸಬಹುದು. ಒಂದು ನಾವೆಯ ಮುಖ್ಯಸ್ಥ ರಾಜಬೊಕ್ಕಸಕ್ಕೂ ದೇವ ಮಂದಿರಕ್ಕೆ ಮುಟ್ಟಿಸೋದಕ್ಕೆ ಒಯ್ಯುತ್ತಿದ್ದ ಧಾನ್ಯದ ನೂರರಲ್ಲಿ ಎಂಬತ್ತು ಪಾಲು ರಾಜದಾನಿಗೆ ತಲುಪಲೇ ಇಲ್ಲ ಅಂತ ಕೇಳಿದ್ದೇನೆ’ “24

ನೀರಾನೆ ಪ್ರಾಂತದಲ್ಲಿ ತೆರಿಗೆ ವಂಚಿಸುವವರ ಬಗ್ಗೆ ಕೇಳಿದರೆ ಅಂತವರನ್ನು ಸಾರ್ವಜನಿಕವಾಗಿ ವಿಚಾರಣೆ ನಡಿಸಿ ಉಗ್ರ ಶಿಕ್ಷೆಗೆ ಗುರಿಪಡಿಸುತ್ತಿದ್ದರು. ಅವರನ್ನು ನೋಡಿ ಬೇರೆ ಯಾರು ಪ್ರಭುತ್ವದ ವಿರುದ್ಧ ಮಾತಾಡಬಾರದು ಎಂಬುದು ಅವರ ಉದ್ದೇಶ. ಹಾಗೆ ಅನ್ಯಾಯವನ್ನು ಬಯಲಿಗೆಳೆವ ಮೆನೆಪ್‌ಟಾನನ್ನು ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಶಕ್ಷೆ ನೀಡಲಾಗುತ್ತದೆ. ಅದನ್ನು ಅವರ ಮಗ ನೋಡಿ ತಾಯಿಗೆ ಹೇಳುತ್ತಾನೆ. ಇದು ಅತ್ಯಂತ ಅಮಾನುಷವಾದುದು.
"ರಾಮೆರಿಪ್‌ಟಾನೆ ನುಡಿದ:
"ಮನೆಗೆ ಹೋಗು ಅಮ್ಮನ ಹತ್ತಿರ ಇರು- ಅಂದ ಅಪ್ಪ”
"ಹುಂ”
"ಅಪ್ಪ ಸಭಾಂಗಣದಲ್ಲಿ ನಿಂತು, ನಮ್ಮ ಜನರಿಗೆ ಹೇಗೆ ಅನ್ಯಾಯ ಆಗ್ತಿದೆಂತ ಹೆಳಿಯೇ ಬಿಟ್ಟ. ಬಹಳ ಹೊತ್ತು ಮಾತಾಡ್ದ. ಅಧಿಕಾರಿಗೆ ತುಂಬಾ ಸಿಟ್ಟು ಬಂತು. ನಮ್ಮಪ್ಪ ಹೆದರಲೇ ಇಲ್ಲ. ನಮ್ಮವರೆಲ್ಲ ಬಂದಿದ್ರೂ. ಸೂಪ್ನು ಮಾವ, ಸೆಬೆಕ್ಖು ಮಾವ ಎಲ್ಲಾ ಇದ್ರು…......”
"ಆ ಮೇಲೆ.....”
"ಆಮೇಲೆ ಕಟ್ಟಾಕಿದ್ರೂ”
ದ್ರವಿಸತೊಡಗಿದ ದುಗುಡವನ್ನು ಬಿಗಿಹಿಡಿಯಲೆತ್ನಿಸಿದ ರಾಮೆರಿಪ್‌ಟಾ ಅವುಡುಗಚ್ಚಿದ
"ಹೊಡೆದ್ರಾ?”
ಬಿಕ್ಕುತ್ತ ರಾಮೆರಿ ಗಟ್ಟಿಯಾಗಿ ಅಂದ:
"ಹ್ಹಾ. ಆದರೆ ಅಪ್ಪಾ ಅಳಲಿಲ್ಲ, ಒಂದು ಸರ್ತಿನೂ ಅಳಲಿಲ್ಲ.”
ಹಾಗೆ ಹೇಳುತ್ತಾ ಕಂಬನಿ ಹರಿಸುತ್ತಾ, ತಾಯಿಯ ಬಳಿ ರಾಮೆರಿಪ್‌ಟಾ ಕುಸಿದು ಕುಳಿತು, ಆಕೆಯ ಮಡಿಲಲ್ಲಿ ಮುಖವಿರಿಸಿದ
"ರಾಮೆರಿ ರಾಮೆರಿ” ಎಂದು ಮಗನ ಮೈ ದಡುವುತ್ತಾ ನೆಫಿಸ್ ಸಂತೈಸಿದಳು, ತಾನು ಕಣ್ಣೀರು ಸುರಿಸುತ್ತಾ.
ನಿಂತಿದ್ದ ಹುಡುಗರಿಗೂ ಅಳು ಬಂತು.”25

ನೀರಾನೆಯ ಜನನಾಯಕನಾದ ಮೆನೆಪ್‌ಟಾನನ್ನು ಬಂಧಿಸಿ ಕಂಬಕ್ಕೆ ಕಟ್ಟಿ ಮೈಯಲ್ಲಿ ರಕ್ತ ಬರುವ ಹಾಗೆ ಕಂದಾಯ ಅಧಿಕಾರಿಗಳು ಹೊಡೆಯುತ್ತಾರೆ. ಇದನ್ನು ನೋಡಿದ ಜನ ಅವನನ್ನು ಬಿಡಿಸಿಕೊಂಡು ಬರುವ ಪ್ರಯತ್ನ ಮಾಡುತ್ತಾರೆ. ಜನರ ಈ ಪ್ರಯತ್ನ ಕಂದಾಯ ಅಧಿಕಾರಿಯಾದ ಟೆಹುಟಿಗೆ ತಮ್ಮ ವಿರುದ್ಧ ಎದ್ದು ನಿಂತರಲ್ಲ ಎಂದು ಅವರನ್ನು ಸದೆ ಬಡೆಯುವ ನಿರ್ದಾರ ಮಾಡುತ್ತಾನೆ. ಜನರ ಹೋರಾಟಗಳನ್ನು ತಮ್ಮ ಸೈನ್ಯದ ಬಲಪ್ರಯೋಗದ ಮೂಲಕ ಹತ್ತಿಕ್ಕುವುದು ಯಾವುದೆ ಪ್ರಭುತ್ವದ ನೀತಿಯಾಗಿರುತ್ತದೆ. ಟೆಹುಟಿ ಕೂಡ ಆ ರೀತಿಯ ಬಲ ಪ್ರಯೋಗ ಮಾಡುತ್ತಾನೆ. ಆದರೆ ಜನ ಅದಕ್ಕೆ ಹೆದರುವದಿಲ್ಲ. ಅಧಿಕಾರಿಗಳ ದಬ್ಬಾಳಿಕೆ ಜನರಲ್ಲಿ ವಿಪರೀತ ಅಸಹನೆ ಹುಟ್ಟಿಸಿರುತ್ತದೆ. ತಮ್ಮೆಲ್ಲರ ಏಳ್ಗೆಗಾಗಿ ಶ್ರಮಿಸುತ್ತಿದ್ದ ಮೆನೆಪ್‌ಟಾನನ್ನು ಬಂಧಿಸಿ ಉಗ್ರ ಶಿಕ್ಷೆ ಕೊಡುತ್ತಿರುವುದು ಜನರಲ್ಲಿ ಆಕ್ರೋಶ ಮೂಡಿಸಿತ್ತು. ಆದ್ದರಿಂದ ಜನರೆಲ್ಲ ಸೇರಿ ಕಂದಾಯ ಅಧಿಕಾರಿಗಳ ಸ್ಥಳಕ್ಕೆ ಮುತ್ತಿಗೆ ಹಾಕಿ ಮೆನೆಪ್‌ಟಾನನ್ನು ಬಿಡಿಸಿಕೊಂಡು ಬರುವ ಆಲೋಚನೆ ಮಾಡುತ್ತಿದ್ದರು. ಹೀಗಾಗಿ ಎಲ್ಲಾರು ಒಟ್ಟಾಗಿ ಟೆಹುಟಿ ಇರುವ ಸ್ಥಳಕ್ಕೆ ಹೋಗುತ್ತಾರೆ. ಆ ಜನರನ್ನು ಟೆಹುಟಿ ನಿರ್ಧಯವಾಗಿ ತಮ್ಮ ಸೈನಿಕರಿಂದ ಹತ್ಯೆ ಮಾಡಿಸುತ್ತಾನೆ. "ಗೋಡೆಯ ಮೇಲೆ ಭಟರು ಹೆದೆ ಏರಿಸುತ್ತಿದ್ದದನ್ನು ಕಂಡವರು `ಹೋ!’ `ಹೋ!’ ಎಂದರು. ಬಾಣಗಳು ಸುಂಯ್‌ಗುಟ್ಟಿದವು. ಯಾವುದೇ ನಿರ್ದಿಷ್ಟ ಮೃಗದ ಬೇಟೆಯಲ್ಲ. ಗೊತ್ತು ಗುರಿಯಿಲ್ಲದ ಎಸೆತ. ಒಂದು ಬಾಣ ಒಬ್ಬನ ಭುಜವನ್ನು ಇರಿಯಿತು. ಇನ್ನೊಂದು ಇನ್ನೊಬ್ಬನ ಹೊಟ್ಟೆಯನ್ನು ಹೊಕ್ಕಿತು; ಮೂರನೆಯದು ಮತೊಬ್ಬನ ತೊಡೆಯನ್ನು ತಿವಿಯಿತು. ಜನಜಂಗುಳಿಯಲ್ಲಿ ಹಾಹಾಕಾರ. ಸ್ನೂಫ್ರು ಗಾಯಗೊಂಡವರತ್ತ ದಾವಿಸಿದಂತೆ, ಮತ್ತೆ ಮೂರು ಬಾಣಗಳು ಆಹುತಿ ಬಯಸಿದವು. ಒಂದು ಸ್ಮೂಫ್ರುವಿನ ಬಳಿಯಿಂದಲೇ ಹಾದು ಹೋಗಿ, ನೆಲ ಮುಟ್ಟಿತು. ಇನ್ನೊಂದು ಪುಟ್ಟ ಗಾಯಗಳಿಂದ ತೃಪ್ತಿ ಪಡಬೇಕಾಯಿತು. ಮೂರನೆಯದು ಮಾತ್ರ ಮತ್ತೊಬ್ಬನನ್ನು ಕೆಳಕ್ಕೆ ಕೆಡವಿತು.”26

ಮೆನೆಪ್‌ಟಾನ ನೇತೃತ್ವದಲ್ಲಿ ಆಗಲೇ ಜನರಲ್ಲಿ ಒಂದು ಪ್ರಜ್ಞೆ ಬೆಳೆಯುತಿತ್ತು. ಜನರು ಅವನ ಮುಂದಾಳತ್ವದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಯೋಚನೆ ಮಾಡುತ್ತಿದ್ದರು. ರಾಜ ಪ್ರಭುತ್ವದ ಆಧೀನ ಬದುಕಿಗಿಂತ ಸ್ವತಂತ್ರವಾಗಿ ಬದುಕುವ ಆಸೆಯನ್ನು ಹೊತ್ತಿದ್ದರು. ಅದಕ್ಕೆ ಮೆನೆಪ್‌ಟಾ ಬುನಾದಿ ಹಾಕಿದ್ದ. ಇಡೀ ನೀರಾನೆಯ ಜನ ಮೆನೆಪ್‌ಟಾನನ್ನು ನಂಬಿದ್ದರು. ಅವನ ಆಶಯದಂತೆ ಮುನ್ನೆಡೆಯಲು ನಿರ್ಧರಿಸಿದ್ದರು. ರಾಜಪ್ರಭುತ್ವದ ದಬ್ಬಾಳಿಕೆಯಿಂದ ವಿಮುಕ್ತಿ ಹೊಂದಿ ಸಮಾನವಾಗಿ ಬಾಳುವ ಇಚ್ಚೆಯನ್ನು ಜನತೆ ಹೊಂದಿದ್ದರು. ಈಗ ಬರಗಾಲ ಬಂದಿದ್ದು ಜನರಿಗೆ ಮನೆಯಲ್ಲಿ ಕಾಳು ಕಡಿ ಇಲ್ಲದೆ ಇರುವಾಗ ತೆರಿಗೆಯನ್ನು ಕೊಡಲೇಬೇಕೆಂದು ಕೊಡದಿದ್ದವರ ಮೇಲೆ ದೈರ್ಜನ್ಯ ಮಾಡುವುದು ಜನರಲ್ಲಿ ರಾಜ ಪ್ರಭುತ್ವದ ಬಗ್ಗೆ ಜಿಗುಪ್ಸೆ ಮೂಡಿಸಿತ್ತು. ಇದಕ್ಕೆ ಸರಿಯಾಗಿ ತೆರಿಗೆ ಅಧಿಕಾರಿ ಟೆಹುಟಿ ಜನರ ಮೇಲೆ ತನ್ನ ಸೈನ್ಯಾಧಿಕಾರಿಗಳ ಮೂಲಕ ದಾಳಿ ನಡೆಸಿದ. ಜನರು ಅನೇಕ ರಿತಿಯಲ್ಲಿ ಸಾವುನೋವಿಗೆ ಒಳಗಾದರು. ತಮ್ಮ ನಾಯಕನನ್ನು ಬಂಧಿಸಿ ಶಿಕ್ಷೆ ಕೊಟ್ಟಿದ್ದು ಕೂಡ ಜನರಲ್ಲಿ ಆಕ್ರೋಶ ಮೂಡಿಸಿತ್ತು. ಇದೆಲ್ಲವೂ ಅವರು ತೆರಿಗೆ ಅಧಿಕಾರಿಗಳ ವಿರುದ್ದ ದಂಗೆ ಏಳುವಂತೆ ಮಾಡಿತು. ಮುಖ್ಯವಾಗಿ ತಮ್ಮ ನಾಯಕ ಮೆನೆಪ್‌ಟಾನನ್ನು ಬಿಡುಗಡೆಗೊಳಿಸುವುದು ಅವರಿಗೆ ಮುಖ್ಯವಾಗಿತ್ತು. ಅವರು ತೆರಿಗೆ ಅಧಿಕಾರಿಗಳು ಉಳಿದುಕೊಂಡಿದ್ದ ರಾಜಗೃಹದ ಮೇಲೆ ದಾಳಿ ಮಾಡುತ್ತಾರೆ. "ಬಕಿಲ ಆಗಲೇ ಮೆಟ್ಟಿಲುಗಳನ್ನು ಸಮಿಪಿಸಿದ್ದ. ನೆಟ್ಟಿದ್ದ ಬಾಣವನ್ನು ಕಿತ್ತು ಬಲಗೈಯಲ್ಲಿ ಹಿಡಿದಿದ್ದ. ಕಣ್ಣಿನಿಂದ ರಕ್ತ ಧಾರಾಕಾರವಾಗಿ ಹರಿಯುತಿತ್ತು. ಹತ್ತಿಕ್ಕಿದ್ದ ರೋಷ ಕಿರುಲು ಧ್ವನಿಯಲ್ಲಿ ಗಂಟಲಿನಿಂದ ಹೊರಬೀಳಲು ಯತ್ನಿಸುತಿತ್ತು.
ಹೊರಗೆ ಜನಸ್ತೋಮ ``ಹೋ!” ಎಂದಿತು. ಮೇಲಿದ್ದ ಕಾವಲು ಭಟರು ಅಂಗಳಕ್ಕೆ ಧುಮಿಕಿದ್ದರು. ಏಣಿಗಳನ್ನು ಏರಿದವರು ಅವರನ್ನು ಹಿಂಬಾಲಿಸಿದರು. ಅದಕ್ಕೆ ಸರಿಯಾಗಿ ಹೆಬ್ಬಾಗಿಲು ಮುರಿಯಿತು. ಕಟ್ಟೆಯೊಡೆದ ಜನಪ್ರವಾಹ ಒಳಗೆ ನುಗ್ಗಿತು.

ಸ್ನೂಫ್ರು, ಸೆಬೆಕ್ಖು, ಬಟಾ ಮತ್ತು ಹಲವರು ಮೆನೆಪ್‌ಟಾನನ್ನು ಕಟ್ಟಿದ್ದ ಕಂಬದೆಡೆಗೆ ಧಾವಿಸಿದರು. ಅಲ್ಲಿ ಮೆನೆಪ್‌ಟಾ ಬಳಿ ಇಪ್ಯುವರ್ ನಿಂತದ್ದ. ಆನಂದಾಶ್ರು ಸುರಿಸುತ್ತ.
ಹಗ್ಗಗಳನ್ನು ಕತ್ತರಿಸಿ ಬಿಚ್ಚಿದರು. ಕುಸಿದು ಬೀಳದಂತೆ, ಎಡಬಲಗಳಲ್ಲಿ ಒಬ್ಬೊಬ್ಬರು ಮೆನೆಪ್‌ಟಾನ ತೋಳುಗಳಿಗೆ ಆಸರೆ ನೀಡಿದರು.
ಧನುರ್ಧಾರಿ ಖ್ನೆಮ್ ಹೊಟೆಪ್ ಕಾಣಿಸಿಕೊಂಡು ಜಯಕಾರ ಮಾಡಿದ.
"ಓ ಮೆನೆಪ್‌ಟಾ!”
"ಓ ಮೆನೆಪ್‌ಟಾ!”
ಅವರ ಜತೆಗೆ ತಾನು ಜಯಕಾರ ಮಾಡಿದÉನಲ್ಲ ಎಂದು ಇಪ್ಯವರ್ ಗಾಬರಿಯಾಗಿ, ಬಾಯನ್ನು ಅಂಗೈಯಿAದ ಮುಚ್ಚಿಕೊಂಡ. ಮರುಕ್ಷಣವೇ ಕೈ ತೆಗೆದು ಗಟ್ಟಿಯಾಗಿ ನಕ್ಕ.
"ಆ ಬಕಿಲ ಎಲ್ಲಿದ್ದಾನೆ ಹುಡಿಕಿ’’
ಖೆಮ್‌ಹೊಟೆಪ್‌ನ ಧ್ವನಿ.
"ಆ ಅಧಿಕಾರಿ, ಗೇಬು ಎಲ್ಲಿದ್ದಾರೆ ನೋಡಿ.
-ಇನ್ನೊಬ್ಬನ ಕಂಠ
ಅವರಿರಲಿಲ್ಲ. ಕಂದಾಯ ವಸೂಲಿಗೆ ಬಂದ ಕಾವಲು ಭಟರು ಇರಲಿಲ್ಲ. ರಾಜಗೃಹದ ಭಟರೂ ಅಲ್ಲಿರಲಿಲ್ಲ. ಕುದಿಯುವ ನೀರಿಗಾಗಿ ಒಲೆಗೆ ಉರಿ ಹಾಕಲು ಯತ್ನಿಸುತ್ತಿದ್ದ ಸೇವಕರಲ್ಲೊಬ್ಬ ದಿಡ್ಡಿ ಬಾಗಿಲ ಕಡೆ ಬೊಟ್ಟು ಮಾಡಿ "ಹೊರಟು ಹೋದ್ರು” ಅಂದ
"ಓಡಿ ಹೋದ್ರು” ಎಂದು ಇನ್ನೊಬ್ಬ ತಿದ್ದಿದ.
ನದಿಯ ದಂಡೆಗೆ ಕಳ್ಳ ದಾರಿ. ಅಲ್ಲಿಂದ ರಾಜನಾವೆಯನ್ನೇರಿ ಮೆಂಫಿಗೆ ಪಲಾಯನ..... ’’27

ನೀರಾನೆ ಜನರು ತಮ್ಮ ನ್ಯಾಯಯುತ ಹೋರಾಟದಿಂದ ತೆರಿಗೆ ಅಧಿಕಾರಿಗಳನ್ನು ಪಲಾಯನ ಮಾಡುವಂತೆ ಮಾಡುತ್ತಾರೆ. ಅವರ ದಬ್ಬಾಳಿಕೆಗೆ ದೊಡ್ಡ ಪ್ರತಿಭಟನೆ ಒಡ್ಡುತ್ತಾರೆ. ಮೆನೆಪ್‌ಟಾ ಅಧಿಕಾರಿಗಳಿಂದ ಕ್ರೂರ ಹಿಂಸೆಗೆ ಒಳಗಾಗುತ್ತನೆ. ಹೀಗೆ ಹಿಂಸೆ ಮಾಡುವುದು ನ್ಯಾಯ ಕೇಳುವವರನ್ನು ಹತ್ತಿಕ್ಕುವುದು ರಾಜ ಪ್ರಭುತ್ವಕ್ಕೆ ಸಾಮನ್ಯ ಸಂಗತಿಯಾಗಿತ್ತು. ಜನರು ಈಗ ಎಚ್ಚೆತ್ತುಕೊಂಡಿದ್ದರಿಂದ ಅವರ ದೌರ್ಜನ್ಯವನ್ನು ಪ್ರತಿಭಟಿಸಿದರು. ನೀರಾನೆ ಪ್ರಾಂತವನ್ನು ಜನತೆ ತಮ್ಮ ಇಚ್ಚೆಯಂತೆ ಪ್ರಜಾಪ್ರಭುತ್ವ ಮಾದರಿಯಲ್ಲಿ ರೂಪಿಸುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ನಾಯಕನನ್ನಾಗಿ ಮೆನೆಪ್‌ಟಾ ನನ್ನು ನೇಮಕ ಮಾಡಿಕೊಳ್ಳುತ್ತಾರೆ. ಇದು ಇಡೀ ಪ್ರಭುತ್ವಕ್ಕೆ ಸವಾಲು ಹಾಕುವ ಚಳುವಳಿ ಆಗುತ್ತದೆ. ಇಂತ ಅನೇಕ ಹೋರಾಟಗಳು ಚರಿತ್ರೆಯಲ್ಲಿ ನಡೆದು ಹೋಗಿವೆ. ಆದರೆ ಅವು ಎಲ್ಲೂ ದಾಖಲೆಯ ಚರಿತ್ರೆಯಲ್ಲಿ ಗುರುತಿಸಿಕೊಳ್ಳುವುದಿಲ್ಲ. ಇದು ಕಾದಂಬರಿಯಲ್ಲಿ ಕಲ್ಪಿತವಾಗಿ ಬಂದಿರಬಹುದು. ಅದು ಹೇಳುವ ಸತ್ಯದ ವಾಸ್ತವದ ಆಯಾಮವನ್ನು ಗಮನಿಸಬೇಕಾಗುತ್ತದೆ.

ನೀರಾನೆಯ ಜನತೆ ಹೊಸ ಮಾದರಿಯಲ್ಲಿ ಆಡಳಿತವನ್ನು ಮೆನೆಪ್‌ಟಾನ ನೇತೃತ್ವದಲ್ಲಿ ತರುವ ಚಿಂತನೆ ಮಾಡುತ್ತಾರೆ. ಮೆನೆಪ್‌ಟಾನನ್ನು ತಮ್ಮ ನಾಯಕನನ್ನಾಗಿ ಒಪ್ಪಿಕೊಂಡು ಅನೇಕ ಸುಧಾರಣೆಗಳನ್ನು ಮಾಡುತ್ತಾರೆ. ಆ ಸುಧಾರಣೆಗಳು ಪ್ರಜಾಪ್ರಭುತ್ವದ ಆಶಯಗಳನ್ನು ಒಳಗೊಂಡಿರುವಂತದ್ದು. ಎಲ್ಲರೂ ಒಂದೇ ಕುಟುಂಬದಂತೆ ಇಡೀ ಪ್ರಾಂತದ ಆದಾಯವನ್ನು ಹಂಚಿಕೊಂಡು ತಿನ್ನುವ ಯೋಜನೆಯನ್ನು ಈ ಜನತೆ ರೂಪಿಸುತ್ತಾರೆ. ಪರಸ್ಪರ ಪ್ರೀತಿ ಸ್ನೇಹದಿಂದ ವ್ಯವಸ್ಥೆಯನ್ನು ಮುನ್ನೆಡೆಸುತ್ತಾರೆ. ರಾಜಪ್ರಭುತ್ವಕ್ಕಿಂತ ಭಿನ್ನವಾದ ಜನಪರವಾದ ಆಡಳಿತವನ್ನು ರೂಪಿಸುವುದು ಇವರ ಇರಾದೆಯಾಗಿದೆ. ಇದು ಆ ಸಂದರ್ಭದಲ್ಲಿ ಬಲಿಷ್ಠವಾದ ಪ್ರಭುತ್ವವನ್ನು ಎದುರು ಹಾಕಿಕೊಂಡು ಮುನ್ನೆಡೆಯುವದು ಆಗಿದೆ. ಇದು ಸುಗಮವಾದ ಹಾದಿಯಲ್ಲ. ಇದನ್ನು ಬಗ್ಗು ಬಡೆಯುವ ಎಲ್ಲಾ ತಂತ್ರಗಳನ್ನು ಪ್ರಭುತ್ವ ಮಾಡುತ್ತದೆ. ಇದನ್ನೆಲ್ಲ ಎದುರಿಸುವ ಶಕ್ತಿ ಪ್ರಾಂತದ ಜನತೆಗೆ ಇರುವದಿಲ್ಲ. ಆದರೆ ಪ್ರಯತ್ನ ಮಾಡುತ್ತಾರೆ. ಇಂತಹ ಸಣ್ಣ ಪ್ರಯತ್ನಗಳು ಮುಂದೆ ಜಗತ್ತಿನಲ್ಲಿ ಪ್ರಜಾಪ್ರಭುತ್ವ ನೆಲೆಯೂರಲಿಕ್ಕೆ ಕಾರಣವಾದುದನ್ನು ಕಾಣಬಹುದು.

ಹೋರಾಟದಲ್ಲಿ ಮಡಿದ ಅನ್ಪು ತೀರಿಕೊಂಡಿದ್ದ. ಅವನು ಸಾಮನ್ಯ ವರ್ಗದವನು ಅವನನ್ನು ಊಳುವುದು ಸಾಮನ್ಯ ರೀತಿಯಲ್ಲಿ. ಆದರೆ ಇವರ ನೇತೃತ್ವದಲ್ಲಿ ಸಾಮನ್ಯರನ್ನು ಕೂಡ ರಾಜಮರ್ಯಾದೆಯಿಂದ ಊಳುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಒಂದು ವ್ಯವಸ್ಥೆಯಲ್ಲಿ ಎಲ್ಲಾರು ಸಮಾನರು. ಅವರಲ್ಲಿ ಯಾವ ರೀತಿಯ ಭೇದಬಾವ ಇರಬಾರದು ಎಂಬುದು ಅವರ ನಿಲುವಾಗಿತ್ತು. ಅವರು ಹೆಣವನ್ನು ಊಳುವಾಗ ಪಠಿಸುವ ಪಾಠ ಎಲ್ಲಾ ಕಾಲದ ಜನರು ಅನುಸರಿಸುವ ಮೌಲ್ಯಗಳನ್ನು ಒಳಗೊಂಡಿರುವಂತದ್ದು. "ಓಸೈರಿಸ್ ರಾಜ್ಯವಾದ ಪರಲೋಕದ ಹೆಬ್ಬಾಗಿಲ ಬಳಿ ಮೃತನು ನಿಂತು ಹೀಗೆ ಪ್ರಾರ್ಥಿಸುತ್ತಾನೆ. ಉಘೇ! ಮಹಾದೇವನೆ! ಸತ್ಯದ ಪ್ರಭುವೆ, ನ್ಯಾಯದ ಪ್ರಭುವೆ, ಉಘೇ! ನನ್ನೊಡೆಯ ನಿನ್ನೆದರು ಬಂದು ನಿಂತಿದ್ದೇನೆ ನಾನು. ನಿನ್ನ ಸೌಂದರ್ಯಾತಿಶಯವನ್ನು ಕಾಣಲೆಂದು ನನ್ನನ್ನು ಇಲ್ಲಿಗೆ ಕರೆತಂದಿದ್ದಾರೆ. ನಾನು ದಿಟವಾಡುತ್ತಿದ್ದೇನೆ. ಮನುಜರಲ್ಲಿ ನಾನು ಭೇದ ಭಾವ ಎಣಿಸಿಲ್ಲ. ಬಡವರ ಸುಲಿಗೆ ಮಾಡಿಲ್ಲ ನಾನು. ಸ್ವತಂತ್ರನಾದ ಯಾವನನ್ನು ಅವನ ಇಚ್ಚೆಗಿಂತ ಹೆಚ್ಚಾಗಿ ನಾನು ದುಡಿಸಿಲ್ಲ. ಕರ್ತವ್ಯ ಲೋಪ ಎಸಗಿಲ್ಲ ನಾನು. ದೇವರಿಗೆ ಅಪ್ರಿಯವಾದುದ್ದೇನು ಮಾಡಿಲ್ಲ ನಾನು. ಯಾವ ಯಜಮಾನನು ತನ್ನ ದಾಸನೊಡನೆ ಕೆಟ್ಟದಾಗಿ ನಡೆದುಕೊಳ್ಳಲು ನಾನು ಕಾರಣನಾಗಿಲ್ಲ. ನಾನು ಯಾವುದೇ ಮನುಷ್ಯನನ್ನು ಉಪವಾಸ ಕೆಡವಿಲ್ಲ. ಯಾರು ಅಳುವಂತೆ ಮಾಡಿಲ್ಲ. ಯಾರನ್ನು ನಾನು ಕೊಲೆಗೈದಿಲ್ಲ. ನಾನೆಂದು ರಾಜದ್ರೋಹ ಎಸಗಿಲ್ಲ. ದೇವಮಂದಿರಕ್ಕೆ ಯಾವ ಸರಬರಾಜನ್ನು ನಾನು ಕಡಿಮೆ ಮಾಡಿಲ್ಲ. ದೇವರ ನೈವಧ್ಯವನೆಂದು ಕೆಡೆಸಿಲ್ಲ. ದೇವಮಂದಿರದ ಪವಿತ್ರ ಕ್ಷೇತ್ರದಲ್ಲಿ ವಿಷಯಾಸಕ್ತನಾಗಿ ವರ್ತಿಸಿಲ್ಲ. ದೇವರನ್ನು ದಿಕ್ಕರಿಸಿ ನಡೆದಿಲ್ಲ. ತಕ್ಕಡಿಯಲ್ಲಿ ಮೋಸ ಮಾಡಿಲ್ಲ. ಪಕ್ಕದ ಹೊಲಕ್ಕೆ ನೀರು ತಡೆಹಿಡಿದಿಲ್ಲ. ಎದೆಹಾಲಿನ ಮಕ್ಕಳ ಬಾಯಿಂದ ಹಾಲನ್ನು ಕಸಿದಿಲ್ಲ. ದೇವರ ಹಕ್ಕಿಗಳನ್ನು ಬಲೆಯಲ್ಲಿ ಹಿಡಿದಿಲ್ಲ. ನಾನು ಪರಿಶುದ್ಧ..... ನಾನು ಪರಿಶದ್ಧ...... ನಾನು ಪರಿಶುದ್ಧ.....”28

ಪ್ರತಿಯೊಬ್ಬರ ಸಾವಿನ ಸಂದರ್ಭದಲ್ಲಿ ಈ ರೀತಿಯ ಜನಸಮೂಹದ ಮುಂದೆ ಪಠಣವಿರುತ್ತದೆ. ಇದರಿಂದ ಮುಂದಿನವರು ಒಳ್ಳೆಯ ರೀತಿಯಲ್ಲಿ ಬದುಕುವ ಇಚ್ಚೆಯನ್ನು ಬೆಳಸಿಕೊಳ್ಳಲೆಂಬುದು ಅವರ ಇಂಗಿತವಾಗಿತ್ತು.

ನೀರಾನೆಯ ಜನತೆ ಈಗ ಹೊಸ ಮನ್ವಂತರಕ್ಕೆ ಅಣಿಯಾದರು. ತಮ್ಮದೇ ಆದ ರೀತಿಯಲ್ಲಿ ಆಡಳಿತ ಮಾಡಲು ನಿಶ್ಚಯಿಸಿದರು. ಜನರಿಗಾಗಿ ಅಡಳಿತ ಎಂಬ ತೀರ್ಮಾನಕ್ಕೆ ಬಂದರು. ಜನರಿಗೆ ಒಳ್ಳೆಯದು ಮಾಡುವುದೆ ಆಡಳಿತದ ಗುರಿಯಾಬೇಕೆಂದರು. ಅದರಂತೆ ನಡೆಯಲು ಸಿದ್ಧನಿದ್ದ ಮೆನೆಪ್‌ಟಾನನ್ನು ತಮ್ಮ ಅಧಿನಾಯಕನನ್ನಾಗಿ ಮಾಡಿಕೊಂಡರು. ಈ ವ್ಯವಸ್ಥೆಯನ್ನು ಒಪ್ಪದಿರುವ ಒಂದು ವರ್ಗವು ನೀರಾನೆಯಲ್ಲಿ ಇತ್ತು. ಅವರನ್ನು ಮನ ಒಲಿಸಿ ಇದನ್ನು ಒಪ್ಪಿಕೊಳ್ಳುವಂತೆ ಮಾಡುವುದು ಅಷ್ಟು ಸುಲಭ ಇರಲಿಲ್ಲ. ಮುಖ್ಯವಾಗಿ ಭೂಮಾಲಿಕ ವರ್ಗವನ್ನು ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಮಾಡುವುದು ಸಾಧ್ಯವಿರಲಿಲ್ಲ. ಇವರು ಪ್ರಭುತ್ವವನ್ನು ಕಾಪಾಡುವವರು. ಅದರ ವಿರುದ್ಧ ದಂಗೆ ಎದ್ದು ಹೊಸ ವ್ಯವಸ್ಥೆ ತರುವ ವಿದ್ಯಾಮಾನವನ್ನು ಒಪ್ಪಿಕೊಳ್ಳಲು ಸಾಧ್ಯವಿರಲಿಲ್ಲ. ಇವರನ್ನು ಎದುರಿಸುವುದು ಅವರಿಗೆ ಮುಖ್ಯವಾಗಿತ್ತು. ಭೂಮಾಲಿಕರು ಆರ್ಥಿಕವಾಗಿ ತುಂಬಾ ಪ್ರಬಲವಾಗಿದ್ದವರು. ಪೆರೊ ರಾಜನಿಗೆ ಹತ್ತಿರ ಇರುವವರು. ರಾಜನ ಎಲ್ಲಾ ನೀತಿಗಳನ್ನು ಒಪ್ಪಿಕೊಂಡು ಅವುಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುವವರು. ರಾಜಪ್ರಭುತ್ವವನ್ನು ವಿರೋಧಿಸುವವರನ್ನು ಸದೆಬಡೆಯುವವರು. ಅಧಿಕಾರವೆಲ್ಲ ತಮ್ಮ ಬಳಿಯೆ ಇಟ್ಟುಕೊಂಡವರು. ಒಬ್ಬ ಸಾಮನ್ಯ ಪ್ರಜೆ ನೀರಾನೆಯ ಒಡೆತನವನ್ನು ವಹಿಸಿಕೊಳ್ಳುತ್ತಾನೆ ಎಂಬುದು ಅವರಿಗೆ ನುಂಗಲಾರದ ತುತ್ತಾಗಿತ್ತು. ಹೀಗಾಗಿ ಅವನ ಅಧಿಕಾರಕ್ಕೆ ಭೂಮಾಲಿಕರ ಸಹಕಾರ ಇರಲಿಲ್ಲ. ಈ ಅಂಶ ಮೆನೆಪ್‌ಟಾ ನಿಗೂ ಗೊತ್ತಿತ್ತು. ಅದನ್ನು ಹೇಗೆ ನಿಭಾಯಿಸಬೇಕು ಎಂಬ ಚಿಂತನೆಯು ನಡೆದಿತ್ತು.``ತಾವು ಅಧಿಕಾರಕ್ಕೆ ಬರುವುದಕ್ಕೋಸ್ಕರ ಅವರನ್ನು ಓಡಿಸಿದ್ದಲ್ಲ. ಜನರಿಗೆ ಹಿತವಾಗಬೇಕು. ತರಿಗೆ ಕಂದಾಯ ಅರ್ಧಕ್ಕೆ ಇಳಿಯಬೇಕು. 'ನೀನು ರಾಜಗೃಹದಲ್ಲಿ ವಾಸಿಸ್ಬೆಕು ಮೆನೆಪ್ ಟಾ.’ `ಅದು ನನ್ನಿಂದ ಸಾಧ್ಯವಿಲ್ಲ. ದಿನವೂ ಅಲ್ಲಿಗೆ ಹೋಗಿ ರ‍್ತೇನೆ ವಾಸ ಇಲ್ಲೇ.’ ನದಿ ದಂಡೆಯ ಕಾವಲು ಭಟರು, ಒಳನಾಡಿನ ಕಾವಲಿನವರು- ಇವರೆಲ್ಲರಿಗೂ ಮೇಲಣ ಅಧಿಕಾರಿ ಖ್ನೆಮ್ ಹೊಟೆಪ್ ದಳಪತಿ. ಮಾಡಿ ಬೇಡ ಅನ್ನೋದಿಲ್ಲ. ನನ್ನ ಅಳಿಯನಿಗೆ ಮೂಗಿನ ತುದಿಯಲ್ಲೇ ಕೋಪ. ಮರೀಬೇಡಿ. ಜವಬುದಾರಿ ಇದ್ದರೆ ಯಾರು ಸುಮ್ಮಸುಮ್ಮನೆ ಸಿಟ್ಟಾಗುವುದಿಲ್ಲ. ದೇವ ಮಂದಿರಕ್ಕೆ ಮಂದಿರದ ವೆಚ್ಚ ನಮ್ಮದು. ಅಪೆಟ್ ಚಿಂತಿಸಬೇಕಾಗಿಲ್ಲ. ಸಂಗ್ರಹದ ಕಂದಾಯ ಮಾತ್ರ ರಾಜಗೃಹದ ಕಣಜದಲ್ಲಿ. ಭೂಮಾಲಿಕರು ನಮ್ಮ ಜತೆ ರ‍್ತಾರೋ ಅಥವಾ ಓಡಿಹೋಗ್ತಾರೋ ನೋಡ್ಬೇಕು” 29

ಮೆನೆಪ್ ಟಾನ ನೇತೃತ್ವದಲ್ಲಿ ಹೊಸ ಸಂವಿಧಾನ ನಿರ‍್ಮಾಣವಾಗುತ್ತದೆ. ಜನ ಬಯಸಿದವರಿಗೆ ಅಧಿಕಾರ ಸಿಗುತ್ತದೆ. ಅಧಿಕಾರ ವಹಿಸಿಕೊಂಡವರು ವಿಲಾಸಕ್ಕಾಗಿ ಆಡಳಿತ ಮಾಡುವವರಲ್ಲ. ಜನರ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡವರು. ಅನೇಕ ಸುಧಾರಣೆಗಳನ್ನು ತರುವುದರ ಮೂಲಕ ಜನರಿಗೆ ಹಿತವನ್ನುಂಟುಮಾಡಬೇಕೆನ್ನುವ ಇಚ್ಚೆ ಅವರದಾಗಿತ್ತು. ಅವರು ಯಾರ ವಿರೋಧಿಗಳಲ್ಲ. ಜನರಿಗೆ ಒಳ್ಳೆದಾಗಬೇಕೆಂದು ಬಯಸುವವರು. ರಾಜಪರಿವಾರವನ್ನು ಬೆಂಬಲಿಸುವವರನ್ನು ಕೂಡ ಗೌರವದಿಂದ ಕಾಣುವವರು. ಭೂಮಾಲಿಕರನ್ನು ಕೂಡ ವಿಸ್ವಾಸಕ್ಕೆ ತಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಅವರು ಒಪ್ಪುವದಿಲ್ಲ. ಈಗಾಗಲೆ ತೆರಿಗೆಯ ಭಾರದಿಂದ ನಲಿಗಿ ಹೋಗಿದ್ದ ಜನರ ತೆರಿಗೆ ಭಾರವನ್ನು ಇಳಿಸುತ್ತಾರೆ. ಮೊದಲು ತಾವು ಸರಳವಾಗಿ ಬದುಕುವ ಪಣ ತೊಡುತ್ತಾರೆ. ಸರಳತೆಯೆ ಆಡಳಿತದ ಸೂತ್ರವನ್ನಾಗಿ ಮಾಡುತ್ತಾರೆ. ಇದೆಲ್ಲವು ಜನರಲ್ಲಿ ಅಧಿನಾಯಕ ಮನೆಪ್‌ಟಾನ ಬಗ್ಗೆ ಗೌರವ ಮೂಡುವಂತೆ ಮಾಡುತ್ತದೆ. ಅನೇಕ ಬದಲಾವಣೆಯನ್ನು ಮೆನೆಪ್‌ಟಾ ಅಧಿಕಾರ ವಹಿಸಿಕೊಂಡ ಕೂಡಲೆ ಜಾರಿಗೆ ತರುತ್ತಾನೆ.``ಇನ್ನು ಕಂದಾಯದ ವಿಷಯ. `ಜನ ಅದನ್ನು ಹೇಳಿ ಅದನ್ನು ಹೇಳಿ’ ಅರ್ಧಕ್ಕೆ ಇಳಿಸಬೆಕಂತ ತೀರ್ಮಾನಿಸಿದ್ದೇವೆ. ಎಲ್ಲ ಸಂದಾಯವು ರಾಜ ಗೃಹದ ಕಣಜಕ್ಕೆ. ದೇವ ಮಂದಿರದ ಖರ್ಚಿಗೆ ಇಲ್ಲಿಂದಲೆ ಕೊಡ್ತೇವೆ. ಮುಖ ಕಪ್ಪಿಟ್ಟರೂ ಗಂಭೀರವಾಗಿ ಕುಳಿತ ಅಪೆಟ್. `ಪ್ರವಾಹ ಕಮ್ಮಿ ಬಂದಾಗ ಕಂದಾಯ ವಸೂಲಿ ಮಾಡಬಾರದು’ ಒಂದು ಧ್ವನಿ. ಮಾಡೋದಿಲ್ಲ. ಪ್ರತಿ ವರ್ಷ ಪ್ರವಾಹ ಬಂದ ಮೇಲೆ ಹಿರಿಯರು ಪ್ರಾಂತದಲ್ಲಿ ಸಂಚಿರಿಸಿ, ಫಸಲು ಅಂದಾಜು ಮಾಡಿ ಕಂದಾಯ ನಿರ್ಧರಿಸುತ್ತಾರೆ. ಕುಯಿಲು ಆದಾಗ ನಿರೀಕ್ಷೆಗಿಂತ ಕಮ್ಮಿ ಫಸಲು ಬಂದರೆ ಕಂದಾಯವನ್ನು ಕಮ್ಮಿ ಮಾಡ್ತಾರೆ. ಜಯಕಾರ: `ಓ ಮೆನೆಪ್ ಟಾ! ಓ ನಾಯಕ ಮೆನೆಪ್ ಟಾ!’ ಕಲರವ ನಿಂತಾಗ ಒಂದು ಗಡಸು ಸ್ವರ: ಮನೆಗೆ ಹಿತ್ತಲಿಗೆ ನೀರು. ಖಂಡಿತ! ಹೂಳು ತೆಗೆದು ಕಾಲುವೆ ಆಳ ಮಾಡ್ತೇವೆ. ನಾಳೆಯಿಂದಲೆ ಕೆಲಸ ಆರಂಭ. 30

ಮೆನೆಪ್ ಟಾ ಇಡೀ ವ್ಯವಸ್ಥೆಯನ್ನು ಜನಪರವಾಗಿ ರೂಪಿಸುವ ಪ್ರಯತ್ನ ಮಾಡುತ್ತಾನೆ. ಇಂದೆ ಯಾವಾವ ರೀತಿಯಲ್ಲಿ ಜನರಿಗೆ ತೊಂದರೆಯಾಗುವ ನಿಯಮಗಳಿದ್ದವೋ ಅವುಗಳನ್ನೆಲ್ಲ ಮುರಿದು ಹೊಸ ನಿಯಮಗಳನ್ನು ರೂಪಿಸುತ್ತಾನೆ. ಈ ನಿಯಮಗಳು ಪ್ರಜಾಪ್ರಭುತ್ವ ಮಾದರಿಯಲ್ಲಿದ್ದವು. ಜನರನ್ನು ಶೋಷಣೆಗೆ ದೂಡುತ್ತಿದ್ದ ನೀತಿಗಳನ್ನೆಲ್ಲ ನರ‍್ಮೂಲನೆ ಮಾಡಿದ. ಜನ ಮತ್ತು ಆಡಳಿತದ ನಡುವಿನ ಭೇದ ಭಾವವನ್ನು ಅಳಿಸಿ ಹಾಕಿದ. ಎಲ್ಲಾರು ಒಟ್ಟಾಗಿ ದುಡಿದು ಪ್ರಾಂತವನ್ನು ಅಭಿವೃದ್ಧಿಗೊಳಿಸುವ ಮಂತ್ರವನ್ನು ಎಲ್ಲಾರು ಪಾಲಿಸುವಂತೆ ಮಾಡಿದ. ಯಾರು ಯಾರ ಮೇಲೆ ದಬ್ಬಾಳಿಕೆ ಮಾಡುವ ಹಾಗಿಲ್ಲ. ಎಲ್ಲಾರು ಘನತೆಯಿಂದ ಬದುಕುವುದು ಮುಖ್ಯವೆಂದು ನಂಬಲಾಯಿತು. ಸಾಮನ್ಯರು ಆಡಳಿಗಾರರು ಒಂದೇ ಎಂಬ ಅಭಿಪ್ರಾಯವನ್ನು ಸಾರ್ವಜನಿಕರಲ್ಲಿ ಮೂಡಿಸಿದರು. ಬಂಧನದಲ್ಲಿದ್ದ ಜನರನ್ನು ಬಿಡುಗಡೆಗೊಳಿಸಿದರು. ವಿಲಾಸದ ಜೀವನಕ್ಕೆ ಎಡೆ ಇಲ್ಲದಂತೆ ಮಾಡಿದರು. ಪಾರದರ್ಶಕವಾದ ಆಡಳಿತವನ್ನು ಜಾರಿಗೆ ತಂದರು. ಎಲ್ಲವು ಜನರ ಮುಂದೆ ಇತ್ಯರ್ಥವಾಗುವ ಕಾನೂನುಗಳನ್ನು ರೂಪಿಸಿದರು.ಆಡಳಿತ ನಡೆಸುವವರು ಕೂಡ ಸಾಮನ್ಯರೇ ಎಂಬ ಅಭಿಪ್ರಾಯವನ್ನು ಜನರಲ್ಲಿ ಮೂಡಿಸಿದರು. ಆಡಳಿತಗಾರರನ್ನು ಸೇವೆ ಮಾಡುವ ದಾಸ ದಾಸಿಯರ ವರ್ಗವನ್ನೆ ಇಲ್ಲದಂತೆ ಮಾಡಲಾಗುತ್ತದೆ. ಯಾರು ಯಾರ ಸೇವೆ ಮಾಡುವ ಹಾಗಿಲ್ಲ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ಎಲ್ಲಾರು ದುಡಿದು ತಿನ್ನುವುದು ಆಡಳಿತ ಧ್ಯೇಯ ಎಂಬುದನ್ನು ಜನರಿಗೆ ಮನಗಾಣಿಸುತ್ತಾರೆ. ಜನರ ಸಾಮರ್ಥ್ಯಕ್ಕೆ ಅನುಗುಣವಾದ ಉದ್ಯೋಗಗಳನ್ನು ಸೃಷ್ಟಿಸುತ್ತಾರೆ. ಹೀಗಾಗಿ ಜನರು ಯಾರ ಹಂಗಿಲ್ಲದೆ ಸಮೃದ್ಧ ಜೀವನ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುತ್ತಾರೆ.``ಹೊಸ ವ್ಯವಸ್ಥೆಯಲ್ಲಿ ದಾಸರಿಲ್ಲ. ದಾಸಿಯರಿಲ್ಲ. ಎಲ್ಲರೂ ಮುಕ್ತರು. ವಿಮುಕ್ತ ದುಡಿಮೆಗಾರರು. ರಾಜಗೃಹದ ಉದ್ಯೋಗಿಗಳಗೂ ಮುಂದೆ ಕೆಲಸವಿದೆ. ಆದರೆ ಭೋಜನ ಮಂದಿರದ ದಾಸಿಯರ ಅಗತ್ಯವಿಲ್ಲ. ಅವರು ಸ್ವತಂತ್ರರು ಅವರು ಹೋಗಬಹುದು.

ದಾಸಿಯರು ಆರು ಜನ ಬಿಕ್ಕಿ ಬಿಕ್ಕಿ ಅಳತೊಡಗಿದರು.
ಖ್ನೆಮ್ ಹೊಟೆಪ್ `ಸುಮ್ನಿರಿ’ ಎಂದು ಗದರಿಸಿದ.
`ಇಫ್ಯವರ್ ಅಳಬೇಡ. ನೆಪೆರುರಾ ನೀನು ಮಾತಾಡು’ ನೀನು ಮಾತಾಡು ಎಂದ.
ಮುಚ್ಚಂಜೆಯಾಗುತ್ತಾ ಬಂತು. ಸ್ತಬ್ಧತೆಯಲ್ಲಿ ದಾಸಿಯರ ಅಳು ಮಾತ್ರ ಕೇಳಿಸುತ್ತಿತ್ತು. ಅವರು ಕೈ ಬೆರಳಲ್ಲಿ ಕಣ್ಣೀರು ವರಿಸಿಕೊಂಡರು. ನೆಪೆರುರಾ ಅವರಲ್ಲಿ ಅತ್ಯಂತ ಸುಂದರಿ.

`ಅಣ್ಣ ಈ ದಾಸಿಯರಿಗೆ ನಾನು ಮುಖ್ಯಸ್ಥೆ. ವಿಷಯ ಇಷ್ಟೆ ಅಣ್ಣ. ಹಿರಿಯರಿಗೆ ಗೊತ್ತಿರೋ ಹಾಗೆ ಐಗುಪ್ತದ ಸ್ತ್ರೀಯರಿಗೆ ಇರೋ ಉದ್ಯೋಗಳು ನಾಲ್ಕು. ದೆವ ಸೇವಕಿಯಾಗೋದು, ಸೂಲಗಿತ್ತಿಯಾಗೋದು, ಶೋಕಸ್ತ್ರೀಯಾಗೋದು, ನರ್ತಕಿಯಾಗೋದು. ಹಂದಿಯ ಮುಸುಡಿಗೆ ಬಂಗಾರದ ಉಂಗುರ ಹಾಕಿ ಏನು ಫಲ? ವಿವೇಚನೆ ಇಲ್ಲದ ಸ್ಫರದ್ರೂಪಿಣಿಯರ ಅವಸ್ಥೆಯೂ ಅಷ್ಟೆ. ನೀವೇ ಹೇಳಿ. ನಮಗೆ ಯಾರು ಕೆಲಸ ಕೊಡ್ತಾರೆ. ರಾಜಗೃಹದಲ್ಲೇ ಇರಲಿಕ್ಕೆ ಅವಕಾಶ ಕೊಟ್ಟರೆ......
ಮಾತು ಸುಸಂಬದ್ಧವಾಗಿರಲಿಲ್ಲ. ಅದೆ ಕಂಠ ಇಂಪಾಗತ್ತು. ಪದಗಳು ಮೋಹಕವಾಗಿ ಕುಣಿದವು. ನೀರವತೆಯನ್ನು ಮುರಿದು ಮೆಚ್ಚಿಗೆಯ ಉದ್ಗಾರಗಳು ಕೇಳಿಸಿದವು. ನೆಫೆರುರಾ ಒಳ್ಳೆಯ ಹೆಸರು ಅಂದುಕೊಂಡ ಮೆನೆಪ್ ಟಾ
ಆತನೆಂದ:

ನೆಪೆರುರಾ, ಇನ್ನೂ ರಾಗೃಹದಲ್ಲಿ ಔತಣ - ನರ್ತನ-ಹಾಡುಗಾರಿಕೆ ಇಲ್ಲ. ದಾಸಿಯರಿಗೆ ಇಲ್ಲಿ ಕೆಲಸವಿಲ್ಲ. ನೀವೀಗ ಯಾರ ಸ್ವತ್ತೂ ಅಲ್ಲ. ಸ್ವತಂತ್ರರು. ಮದುವೆಯಾಗಬಹುದು. ದುಡಿದು ಸಂಪಾದಿಸಬಹುದು. ಇಲ್ಲಿ ರುವ ಸ್ತಿçÃಯರ ಹಾಗೆ ತಲೆ ಎತ್ತಿ ನಡೆಯಬಹುದು. ಏನಾದರೂ ಏರ್ಪೇಟು ಆಗುವವರೆಗೆ ನಿಮಗೆ ರಾಜ ಗೃಹದ ಕಣಜದಿಂದ ಧಾನ್ಯ ಮತ್ತಿತರ ಸಾಮಗ್ರಿ ಸಿಗ್ತವೆ. ಅಳೋದರ ಬದಲು ನೀವು ಸಂತೋಷ ಪಡಬೇಕು.’’ 31

ರಾಜಗೃಹದ ಎಲ್ಲಾ ವಿಲಾಸಗಳನ್ನು ಮೆನೆಪ್‌ಟಾ ನಿರಾಕರಿಸುತ್ತಾನೆ. ಅನಾವಶ್ಯಕವಾಗಿ ಜನರು ರಾಜ ಸೇವೆ ಮಾಡುವುದನ್ನು ನಿಲ್ಲಿಸುತ್ತಾನೆ. ಅದರಲ್ಲೂ ನೀರಾನೆ ಪ್ರಾಂತದಲ್ಲಿ ರಾಜಗೃಹಗಳಿಗೆ ದಾಸಿಯರನ್ನು ಸೇವೆಗೆ ನೇಮಿಸಿಕೊಳ್ಳುವ ಕೆಟ್ಟ ಪದ್ಧತಿ ಇತ್ತು. ದಾಸಿಯರನ್ನು ನೇಮಕ ಮಾಡಿಕೊಂಡು ರಾಜರು ಅವರನ್ನು ನಿರಂತರ ಭೋಗಿಸುತ್ತಾ ಬರುವುದು. ಇದು ಅತ್ಯಂತ ಹೇಯ ಪದ್ದತಿಯಾಗಿತ್ತು. ಆ ಪದ್ಧತಿಯನ್ನು ಅಧಿಕಾರಕ್ಕೆ ಬಂದ ಮೊದಲಲ್ಲೇ ನಿಲ್ಲಿಸುತ್ತಾರೆ. ಅವರಿಗೆ ಘನತೆಯ ಜೀವನವನ್ನು ತಂದು ಕೊಡುತ್ತಾರೆ. ದುಡಿಯುವ ಅವಕಾಶವನ್ನು ಕಲ್ಪಿಸುತ್ತಾರೆ. ಸಾಮಾಜಿಕ ಮರ್ಯಾದೆಯನ್ನು ತಂದುಕೊಡುತ್ತಾರೆ. ಇದೆಲ್ಲವು ಆಡಳಿತದ ಜವಬ್ದಾರಿಯಾಗಿರುತ್ತದೆ. ಇದರ ಜೊತೆಗೆ ಅನೇಕ ಜನಪರವಾದ ಸುಧಾರಣೆಗಳನ್ನು ತರಲಾಗುತ್ತದೆ.
ಮೆನೆಪ್‌ಟಾನ ನೇತೃತ್ವದಲ್ಲಿ ಜನಪರ ಸುಧಾರಣೆಗಳು ನೀರಾನೆಯಲ್ಲಿ ಜರುಗಿದವು. ರಾಜನಂತೆ ಮೆನೆಪ್‌ಟಾ ನಡೆದುಕೊಳ್ಳದೆ ಸಾಮನ್ಯರಂತೆ ಜೀವನ ಮಾಡಿದನು. ರಾಜಗೃಹವನ್ನು ಕೂಡ ಸ್ವಂತ ವಾಸಕ್ಕೆ ಬಳಿಸಲಿಲ್ಲ. ಜನರು ಯಾವ ರೀತಿ ಜೀವನ ಮಾಡುತ್ತಾರೊ ಅದೆ ರೀತಿಯ ಜೀವನವನ್ನು ರೂಢಿಸಿಕೊಂಡನು. ವಿಲಾಸಿ ಜೀವನಕ್ಕೆ ತಿಲಾಂಜಲಿ ಹಾಡಿದನು. ಜನರಿಗೆ ಹೊಸ ಆಡಳಿತದ ಬಗ್ಗೆ ಗೌರವ ಮೂಡಿತು. ಈ ಕಾದಂಬರಿಯಲ್ಲಿ ಆಡಳಿತದ ಒಂದು ಮಾದರಿಯನ್ನು ಮೆನೆಪ್‌ಟಾ ನ ಮೂಲಕ ಕಾಣಿಸುವ ಚಿಂತನೆ ಇದೆ. ಇತಿಹಾಸದಲ್ಲಿ ಈ ರೀತಿ ಆಡಳಿತ ಮಾಡಿದ ರಾಜರಿಲ್ಲ. ಎಷ್ಟೇ ಸುಧಾರಣೆ ಮಾಡಿದರು ಸಾಮನ್ಯರಂತೆ ಬದುಕಿದ ರಾಜರಿಲ್ಲ. ವಿಲಾಸದ ಜೀವನವೆ ರಾಜತ್ವ ಎಂಬ ಮನೋಭಾವ ಬೇರೂರಿದೆ. ಅದನ್ನು ಕಿತ್ತೊಗೆದು ಹೊಸ ಆಡಳಿತವನ್ನು ನೀಡಬೇಕು ಎಂಬುದು ಲೇಖಕರ ಆಶಯ. ಇಂತಹ ಆಡಳಿತ ಕೆಲವು ಪ್ರಾಂತಗಳಲ್ಲಿ ಸಂಭವಿಸಿರಬಹುದು. ಆದರೆ ಚರಿತ್ರೆಯಲ್ಲಿ ಇಂತಹ ರಾಜರನ್ನು ಕಾಣಲು ಸಾಧ್ಯವಿಲ್ಲ. ಇಂತಹ ಆಡಳಿತ ನಿಜವಾಗಿಯು ಜನರಿಗೆ ಬೇಕಾಗಿರುವುದು. ಇದನ್ನು ಆಡಳಿತ ಮಾಡುವವರು ಅರ್ಥಮಾಡಿಕೊಳ್ಳಬೇಕಾಗಿರುವದು. ಆದರೆ ಇಂತಹ ಜನಪರವಾದ ಆಡಳಿತ ಇಂದಿಗೂ ಕೂಡ ಸಾಧ್ಯವಾಗಿಲ್ಲ. ಈಗಲು ಕೂಡ ವಿಲಾಸದ ಆಡಳಿತವನ್ನೇ ನೋಡಿತ್ತಿದೇವೆ. ಕಾದಂಬರಿ ಕಟ್ಟಿಕೊಡುವ ಚರಿತ್ರೆಯ ಅಂಶಗಳು ವಾಸ್ತವನ್ನು ರೂಪಿಸಿಕೊಳ್ಳಲಿಕ್ಕೆ ಸಹಾಯ ಮಾಡುತ್ತವೆ. ಹೀಗಾಗಿ ಈ ಕಾದಂಬರಿಯಲ್ಲಿ ಪ್ರಸ್ತಾಪವಾಗುವ ಸುಧಾರಣೆಯು ಎಲ್ಲಾ ಕಾಲದ ಆಡಳಿತಗಾರರಿಗೆ ಮಾದರಿಯಾದದು.

"ನೀರಾನೆಯ ಪ್ರಾಂತದ ಹೊಸ ಜೀವನ ಕ್ರಮ ಎಲ್ಲ ಬಗೆಯ ಜನರನ್ನೂ ಆವರಿಸಿತು.

ಕಂದಾಯ ವಸೂಲಿ ಕೆಲಸಕ್ಕಾಗಿಯೆ ಹಲವರು ನೇಮಕಗೊಂಡರು. ಅವರ ತಂಡಗಳಿಗೆ ಮುಖ್ಯಸ್ಥರನ್ನು – ಕಾಪಿರುಗಳನ್ನು- ಖ್ನೇಮ್ ಹೊಟೆಪ್ ಗೊತ್ತು ಮಾಡಿದ. ಸ್ವಲ್ಪ ಹೊತ್ತು ತಾನು ಅವರ ಜೊತೆಗಿದ್ದು ವಸೂಲಿಯ ಕಾರ್ಯ ಹೇಗೆ ನಡೆಯಬೇಕೆಂಬುದನ್ನು ತೋರಿಸಿಕೊಟ್ಟ. ಪ್ರತಿ ದಿನ ಅಪರಾಹ್ನ ಕತ್ತೆಗಳ ಮೇಲೆ ಚೀಲಗಳಲ್ಲಿ ಧಾನ್ಯ ರಾಜಗೃಹಕ್ಕೆ ಬರತೊಡಗಿತು. ಕಂದಾಯ ಸಲ್ಲಿಸಿದವರ ಹೆಸರನ್ನು ದಾನ್ಯದ ಅಳತೆಯನ್ನು ಇಪ್ಯುವರ್ ಬರೆದುಕೊಟ್ಟ.

ಒಂದಡೆ ಕಂದಾಯ ವಸೂಲಿ, ಇನ್ನೊಂದೆಡೆ ಊರಿಗೆ ನೀರು ಪೂರೈಕೆಯಾಗುವ ನದೀ ದಡದ ಬಾವಿಯಿಂದಲೂ ಹೂಳೆತ್ತುವ ದುಡಿಮೆ. ಅಲ್ಲಿ ಇನ್ನೂರು ಮುನ್ನುರು ಜನ ದುಡಿದರು. ಬೆಳೆಗ್ಗೆ ರಾಜಗೃಹಕ್ಕೆ ತೆರೆಳಿ ಇಫ್ಯುವರ್‌ಗೆ ಹೆಸರು ಕೊಟ್ಟು, ಕೆಲಸಕ್ಕೆ ಹೋಗುತ್ತಿದ್ದರು, ಈ ಜನ. ಹದಿನೆಂಟು ಇಪ್ಪತ್ತು ಜನರ ತಂಡ. ಸಂಜೆ ರಾಜಗೃಹದಲ್ಲಿ ಅವರಿಗೆ ಧಾನ್ಯ ಎಣ್ಣೆ ವಿತರಣೆ. ಹತ್ತು ದಿನಗಳಿಗೊಮ್ಮೆ ಒಂದು ದಿನ ರಜಾ. ಮುಖ್ಯ ಬೀದಿಯ ಪಕ್ಕದಲ್ಲಿ, ಅಡ್ಡ ರಸ್ತೆಗಳ ಮಗ್ಗುಲಲ್ಲಿ, ಮನೆಮನೆಗಳ ಬಳಿ ನೀರು ಹರಿಯತೊಡಗಿದಾಗ ಜನರ ಸಂಭ್ರಮವೋ ಸಂಭ್ರಮ.
ಗ್ರಾಮಾಂತರ ಪ್ರದೇಶಗಳಲ್ಲೂ ಕಂದಾಯ ವಸೂಲಿ ನಡೆಯಿತು. ಅಲ್ಲಿ ಕೆಟ್ಟು ಹೋಗಿದ್ದ ರಸ್ತೆಗಳನ್ನು ಸರಿಪಡಿಸುವ, ಹೊಸವನ್ನು ನರ‍್ಮಿಸುವ ಕಾರ್ಯವೂ ನೆರವೇರಿತು. ಮೆನೆಪ್ ಟಾನೊಂದಿಗೆ ಅಬ್ಟು ಯಾತ್ರಿಕರಿದ್ದವರಿಗೆಲ್ಲ ಎಲ್ಲಿಲ್ಲದ ಆಸಕ್ತಿ.
‘ನಮಗೆ ನಾವೆ ರಾಜರಾದರು ಕಂದಾಯ ತಪ್ಪಲಿಲ್ಲ.’ ಎಂದು ಕುಚೇಷ್ಟೆಯ ಮಾತು ಆಡಿದವರು ಇದ್ದರು.

ಆದರೆ ಮೆನೆಪ್‌ಟಾನ ತನಕ ಒಂದು ದೂರು ಬರಲಿಲ್ಲ. ನಾಯಕ ದಿನಂಪ್ರತಿ ಪೂರ್ವಾಹ್ನ ರಾಜಗೃಹಕ್ಕೆ ಹೋಗಿ ಮದ್ಯಾಹ್ನದವರೆಗೆ ಅಲ್ಲಿ ಇರುತ್ತಿದ್ದ. ದಿನಬಿಟ್ಟು ದಿನ ಸ್ನೊಫ್ರು ಅಥವಾ ಸೆಬೆಕ್ಖು ಬರುತ್ತಿದ್ದರು. ತಿಂಗಳಿಗೊಮ್ಮೆ ಹಿರಿಯರ ಸಮಿತಿ ಸೇರುತಿತ್ತು. ಹಿರಿಯರು ಪ್ರಾಂತಗಳಲ್ಲಿ ಸಂಚರಿಸಿ ಗ್ರಾಮಸಮಿತಿಗಳನ್ನು ರಚಿಸಿ ಬಂದರು. ತನ್ನ ಪಾಲಿನ ಕಂದಾಯವನ್ನು ಮೆನೆಪ್‌ಟಾ ಸಂದಾಯ ಮಾಡಿದ.”32

ಕಂದಾಯವನ್ನು ಎಲ್ಲಾರು ಕಟ್ಟಬೇಕೆಂದು ತರ‍್ಮಾನಿಸಿದರು. ಮೊದಲು ಮೆನೆಪ್‌ಟಾನೆ ತೆರಿಗೆಯನ್ನು ಕಟ್ಟಿದ. ತೆರಿಗೆಯಲ್ಲಿ ಯಾವುದೆ ಬೆದ ಬಾವ ಮಾಡಲಿಲ್ಲ. ಕಷ್ಟ ಇರುವವರಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಯಿತು. ಇದರಿಂದ ಜನರು ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಯಿತು. ಕೆಲವು ಸೌಲಭ್ಯಗಳನ್ನು ರಾಜಗೃಹದಿಂದಲೆ ಮಾಡಿದರು. ಕೃಷಿಗೆ ಬೇಕಾದ ವಸ್ತುಗಳನ್ನು ಆಡಳಿತದವರೆ ನೀಡಿದರು. ಕೃಷಿ ಚಟುವಟಿಕೆಗಳು ಯಾವ ಸಮಸ್ಯೆಯಿಲ್ಲದೆ ಮುಂದುವರಿದವು. ಅವರಿಗೆ ಯಾವುದೆ ಸಮಸ್ಯೆ ಇದ್ದರು ನೇರವಾಗಿ ರಾಜಭವನದಲ್ಲಿ ಬಂದು ನಿವೇದನೆ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿದರು. ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳುವುದರಿಂದ ಮಧ್ಯವರ್ತಿಗಳ ಹಾವಳಿ ಇಲ್ಲದಂತಾಯಿತು. ಜನರ ಬವಣೆಗಳು ಸುಲಭವಾಗಿ ಬಗೆಹರಿದವು. ಎಲ್ಲಾರು ಸಮಾನವಾಗಿ ದುಡಿದು ಸಮಾನವಾಗಿ ಹಂಚಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಿದರು. ಎಲ್ಲಾರಿಗೂ ಸಮಾನ ಶಿಕ್ಷಣ ಸಿಗಬೇಕೆಂಬ ಮಹತ್ವದ ಯೋಜನೆಯನ್ನು ರೂಪಿಸಿದನು. ಇದು ಕೆಲವರಿಗೆ ಅಪಥ್ಯವಾಯಿತು. ಮುಖ್ಯವಾಗಿ ಭೂಮಾಲಿಕರು ಈ ಹೊಸ ವ್ಯವಸ್ಥೆಯ ವಿರುದ್ಧ ಪಿತೂರಿ ನಡೆಸಲು ಪ್ರಾರಂಭಿಸಿದರು. ಒಳ ಒಳಗೆ ಈ ಆಡಳಿತದ ಬಗೆಗೆ ಹುಸಿ ನುಡಿಯಲು, ದೂರಲು ಪ್ರಯತ್ನಿಸಿದರು. ಇವರ ಆಡಳಿತವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರು. ಹೆಗಾದರು ಮೆನೆಪ್ ಟಾ ನನ್ನು ಅಧಿಕಾರದಿಂದ ಕೆಳಗಿಳಿಸಿ ತಮ್ಮ ಅಸ್ತಿತ್ವವನ್ನು ಮತ್ತೆ ಸ್ಥಾಪಿಸಬೇಕೆಂದು ಸಂಚು ರೂಪಿಸಿದರು. ಇದು ಎಲ್ಲಾ ಕಾಲದಲ್ಲಿಯು ಬೆಳೆದುಕೊಂಡ ಬಂದ ಸಂಗತಿಯಾಗಿತ್ತು. ಇದನ್ನು ಕಾದಂಬರಿ ಅನಾವರಣಗೊಳಿಸುವುದರ ಮೂಲಕ ಹೊಸ ಚರಿತ್ರೆಯ ಆಯಾಮವನ್ನು ಕಟ್ಟಿಕೊಡುತ್ತದೆ.

ಮೆನೆಪ್‌ಟಾನ ಸುಧಾರಣೆಯನ್ನು ಸಹಿಸದ ಭೂಮಲಿಕ ವರ್ಗ ಅಧಿಕಾರದಿಂದ ಕೆಳಗಿಳಿಸಲು ಸರ್ವ ಪ್ರಯತ್ನ ಮಾಡಿತು. ರಾಜಗೃಹ ಇವನ ಬಗೆಗೆ ಸಲ್ಲದ ದೂರುಗಳನ್ನು ಸಲ್ಲಿಸಿತು. ಅವನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವ ಹಾಗೆ ಚಿತ್ರಣ ನೀಡಲಾಯಿತು. ಅವನ ಮೇಲೆ ನೇರವಾಗಿ ಯುದ್ಧ ಸಾರದೆ, ಕುತಂತ್ರದಿಂದ ಸೆರೆಯಾಳಿಗಿಸಿ ಗಲ್ಲಿಗೇರಿಸುವ ಸಂಚು ರೂಪಿಸುತ್ತಾರೆ. ಇದನ್ನು ಅರಿಯದ ಮೆನೆಪ್‌ಟಾ ಸುಲಭವಾಗಿ ಅವರ ಮೋಸಕ್ಕೆ ಬಲಿಯಾಗುತ್ತಾನೆ. ಇರುವ ವ್ಯವಸ್ಥೆಯನ್ನು ಬದಲಿಸಿ ಹೊಸ ವ್ಯವಸ್ಥೆಯನ್ನು ರೂಪಿಸುವುದು ಎಂಥ ಬಿಕ್ಕಟ್ಟಿನ ಸಂಗತಿಯೆಂಬುದನ್ನು ಕಾದಂಬರಿ ನಿರೂಪಿಸುತ್ತದೆ. ಜನರ ಮೇಲೆ ಸವಾರಿ ಮಾಡುತ್ತಾ ಬಂದ ವರ್ಗ ಜನರೊಂದಿಗೆ ಸಾಮನ್ಯವಾಗಿ ಬದುಕುವುದು ರಾಜತ್ವಕ್ಕೆ ಬಗೆವ ದ್ರೋಹವೆಂದು ಬಾವಿಸಲಾಯಿತು.

ಬದಲಾವಣೆಯನ್ನು ತಂದುದೆ ಮೆನೆಪ್‌ಟಾನಿಗೆ ಸಮಸ್ಯೆಯಾಯಿತು. ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಹೋಗುವವರಿಗೆ ಯಾವುದೆ ಸಮಸ್ಯೆಯಿರುವದಿಲ್ಲ. ಅದನ್ನು ಪ್ರಶ್ನೆ ಮಾಡಿ ಹೊಸ ವ್ಯವಸ್ಥೆ ರೋಪಿಸಲು ಹೊರಟಾಗ ಅನೇಕ ಬವಣೆಯನ್ನು ಎದುರಿಸಬೇಕಾಗುತ್ತದೆ. ಜೀವವನ್ನು ಕೊಡಬೇಕಾಗುತ್ತದೆ. ಬದಲಾವಣೆ ತರಲು ಬಯಸುವ ಮಾನವತವಾದಿಗಳು ಜೀವಕ್ಕಿಂತ ತಾವು ನಂಬಿದ ಮೌಲ್ಯಗಳಿಗೆ ಬದ್ದರಾಗಿರುತ್ತಾರೆ. ಜನರ ಉದ್ದಾರಕ್ಕೆ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಯಾವುದಕ್ಕು ಅವರು ಹೆದರುವದಿಲ್ಲ. ಮೆನೆಪ್‌ಟಾ ಕೂಡ ದುರುಳರ ಕುತಂತ್ರಕ್ಕೆ ಈಡಾದರು ಕೂಡ ಹೆದರದೆ ಗಲ್ಲಿಗೇರುತ್ತಾನೆ. ಗಲ್ಲಿಗೇರುವ ಮುಂಚೆ ಅವನ ವಿಚಾರಣೆ ನಡೆಯುತ್ತದೆ. ಆ ವಿಚಾರಣೆಯಲ್ಲಿ ಆಗುವ ಚರ್ಚೆಗಳು ಚರಿತ್ರೆಯ ಹೊಸ ನಿರುಪಣೆಯಾಗುತ್ತದೆ.
ಮೆನೆಪ್‌ಟಾನನ್ನು ಮೋಸದಿಂದ ಬಂಧಿಸಲಾಗುತ್ತದೆ. ಅರಸನಾದ ಪೆರೊನ ವಿರುದ್ಧ ಬಂಡಾಯ ಹೂಡಿದನೆಂದು ಆರೋಪ ಹೊರಿಸಲಾಗುತ್ತದೆ. ಪುರೋಹಿತರು, ಭೂಮಾಲಿಕರು ಸೇರಿ ಅವನನ್ನು ಅಪರಾಧಿಯನ್ನಾಗಿ ಮಾಡಲಾಗುತ್ತದೆ.

ಮೆನೆಪ್‌ಟಾನ ಮೇಲೆ ಹೊರಿಸುವ ಆರೋಪಗಳು ಅವನನ್ನು ವೃತಾ ಆರೋಪಿಯನ್ನಾಗಿ ಮಾಡುತ್ತವೆ. ನ್ಯಾಯಕ್ಕಾಗಿ, ಜನರ ಹಕ್ಕುಗಳ ರಕ್ಷಣೆಗಾಗಿ ಅವನು ಮಾಡಿದ ಹೋರಾಟ ರಾಜ ಪ್ರಭುತ್ವಕ್ಕೆ ದೇಶದ್ರೋಹದಂತೆ ಕಾಣುತ್ತದೆ. ರಾಜ ಪರಿವಾರವನ್ನು ರಕ್ಷಣೆ ಮಾಡುವ ಭೂಮಾಲಿಕರು, ಅಧಿಕಾರಿಗಳು ಮೆನೆಪ್‌ಟಾನನ್ನು ದೊಡ್ಡ ಅಪರಾಧಿಯೆಂದು ಬಿಂಬಿಸಲಾಗುತ್ತದೆ. ರಾಜರ ಪರವಾಗಿರುವ ಟೆಹುಟಿ ಮಾಡುವ ಆರೋಪಗಳು ಚರಿತ್ರೆಯ ಮತ್ತೊಂದು ಮುಖವನ್ನು ತೆರೆದಿಡುತ್ತವೆ. "ಈ ದುರುಳನ ಆಕೃತ್ಯ ಇಡೀ ಐಗುಪ್ತಕ್ಕೆ ಗೊತ್ತಿದೆ. ಆದರೂ ಸ್ಥಾನಕ್ಕೆ ಮನವರಿಕೆಯಾಗಲೆಂದು ಮತ್ತೊಮ್ಮೆ ಹೇಳುತ್ತೇನೆ. ಕಳೆದ ವರ್ಷ ಅಬ್ಟು ಉತ್ಸವದ ಮಾರನೆಯ ದಿನ ಕಂದಾಯ ವಸೂಲಿಯ ಕರ್ತವ್ಯ ಪಾಲನೆಗಾಗಿ ನಾನು ನೀರಾನೆ ಪ್ರಾಂತದ ಮುಖ್ಯ ಪಟ್ಟಣಕ್ಕೆ ಹೋದೆ. ಆ ರಾತ್ರೆ ಈ ಅಪರಾಧಿಯು ಸಂಗಡಿಗರೂ ಅಬ್ಟುವಿನಿಂದ ವಾಪಸಾದರು. ಕಂದಾಯ ಸಂಗ್ರಹವನ್ನು ಇದಿರಿಸಬೇಕು ನನ್ನನ್ನು ಸಾಯಿಸಿ ನೀಲ ನದಿಗೆ ಎಸೀಬೇಕು ಅಂತ ಫಿತೂರಿ ನಡೆಸಿದರು. ಬೆಳಗಾಗೋ ಹೊತ್ತಿಗೆ ಇಡೀ ಊರನ್ನೇ ನನ್ನ ವಿರುದ್ಧ ಎತ್ತಿಕಟ್ಟಿದರು. ರಾಜ ಗೃಹದಲ್ಲಿ ನಾನು ಊರಿನ ಪ್ರಮುಖರ ಸಭೆ ಕರೆದಾಗ, ಮನವಿ ಸಲ್ಲಿಸೋ ನೆಪದಲ್ಲಿ ಈತ ರೈತರನ್ನು, ಕುಸಲಿ ಕರ್ಮಿಗಳನ್ನು ಕರೆದುಕೊಂಡು ಆ ಸಭೆಗೆ ನುಗ್ಗಿದ. ಮಹಾಪ್ರಭು, ಮಹಾ ಅರ್ಚಕ ಮತ್ತು ಅಮಾತ್ಯ ವರ್ಯರನ್ನು ದಿಕ್ಕರಿಸಿ ಮಾತಾಡಿದ. ನನ್ನ ಮೇಲೆ ಕೈ ಮಾಡಿದ. ನನ್ನ ಭಟರ ಮುಖ್ಯಸ್ಥರ ಕಣ್ಣು ಕಿತ್ತಿದ. ಶಾಂತಿ ಸ್ಥಾಪನೆಗಾಗಿ ನಾನು ಮಾಡಿದ ಪ್ರಯತ್ನವೆಲ್ಲ ವಿಫಲವಾಯಿತು. ಪ್ರಯಾಸಪಟ್ಟು ಪ್ರಾಣ ಉಳಿಸಿಕೊಂಡೆ. ಪ್ರಾಂತಪಾಲನನ್ನು ಉಳಿಸಿದೆ. ಸೃಷ್ಟಿಕರ್ತ ರಾನ ಆಳ್ವಿಕೆಯಲ್ಲಿ ಕೆಲವು ಜನ ಸತ್‌ನ ಆರಾಧಕರಾದದ್ದು ರಾ ಅವರನ್ನು ದಂಡಿಸಿದ್ದು ನಮಗೆ ಗೊತ್ತಿದೆ. ಆದರೆ ಇಡಿಯ ಸಮಾಜದ, ದೇಶದ ವಿರುದ್ಧ ಬಂಡಾಯ ನಡೆದಿರುವುದು ಐಗುಪ್ತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಇದೆ ಮೊದಲು. ಐಗುಪ್ತದ ನಲ್ವತ್ತು ನೂರು ಸಹಸ್ರ ಜನಸಂಖ್ಯೆಯಲ್ಲಿ ನೂರರಲ್ಲಿ ಒಂದು ಭಾಗ ಮಾತ್ರ ಬಂಡಾಯವೆದ್ದಿದ್ದಾರಂತ ಸುಮ್ಮನಿರೋಣವೆ? ಮರುಳುಗಾಡಿನ ಈ ಕಿಡಿಯನ್ನು ಕಡೆಗಣಿಸಿದರೆ ನಾಳೆ ನೀಲನದಿಗೇ ಜ್ವಾಲೇ ಅಂಟೀತು. ಐಗುಪ್ತದ ನಾಗರಿಕತೆ ನಾಶವಾದೀತು. ಭೂಮಿಯ ಮೇಲೆ ರಾನ ಪ್ರಭುತ್ವ ಮುಕ್ತಾಯವಾದೀತು. ಇಷ್ಟೇ ನನ್ನ ದೂರು ಅಷ್ಟೇ”33

ಜನರ ಪರವಾಗಿ ಹೋರಾಡುವ ಮೆನೆಪ್ ಟಾನನ್ನು ಎಲ್ಲಾ ಪ್ರಭುತ್ವ ಶಕ್ತಿಗಳು ಹತ್ತಿಕ್ಕುವ ಪ್ರಯತ್ನ ಮಾಡುತ್ತಾರೆ. ಜನರ ನೆಮ್ಮದಿಗಾಗಿ ಚಿಂತಿಸುವ ಅದನ್ನು ಜಾರಿಗೆ ತರಲು ಯೋಚನೆ ಮಾಡುವ ಮೆನೆಪ್ ಟಾನನ್ನು ದೊಡ್ಡ ಅಪರಾಧಿಯನ್ನಾಗಿ ಬಿಂಬಿಸಲಾಗುತ್ತದೆ. ಇದೊಂದು ಚರಿತ್ರೆಯ ಬಹು ದೊಡ್ಡ ವ್ಯಂಗ್ಯ. ಮೆನೆಪ್‌ಟಾನ ಬಗ್ಗೆ ಮತ್ತೊಬ್ಬ ಭೂಮಾಲಿಕ ನೂಟ್‌ಮೊಸ್ ಹೇಳುವ ಮಾತುಗಳು ಚರಿತ್ರೆಯಲ್ಲಿ ದಾಖಲಾಗದ ಸಂಗತಿಗಳನ್ನು ತೆರೆದಿಡುತ್ತದೆ. "ನಾನು ನೂಟ್‌ಮೋಸ್. ಮಹಾಪ್ರಭುವಿನ ಪಲ್ಲಕ್ಕಿ ಹೊತ್ತಿರುವ ಪುಣ್ಯಶಾಲಿ. ನೀರಾನೆ ಪ್ರಾಂತದ ಬಂಡಾಯಕ್ಕೆ ಮುಂಚೆ ಅಲ್ಲಿನ ಅತಿ ದೊಡ್ಡ ಭೂಮಾಲಿಕನಾಗಿದ್ದವನು. ಪ್ರಾಂತಪಾಲರ ನೇಮಕಕ್ಕೆ ಮೊದಲು ಮಹಾಪ್ರಭುವಿನ ಪ್ರತಿನಿಧಿಯಾಗಿದ್ದವನು. ಈತ ಸೆತೆಕ್ ನೆಕ್ತ್, ಈತ ಉರ‍್ಟ್- ಎಲ್ಲವನ್ನು ಕಳೆದುಕೊಂಡ ನನ್ನ ಹಾಗೆ ದೊರೆಯ ಕೃಪಾಶ್ರಯ ಪಡೆದವರು. ಮಹಾ ಅರ್ಚಕರ ಕರುಣೆ ಅಮಾತ್ಯರ ಸಹಾನುಭೂತಿ ನಮ್ಮನ್ನು ಉಳಿಸಿವೆ. ಈ ದುಷ್ಟನ ಕೈಯಲ್ಲಿ ನಾವು ಪಟ್ಟ ಕಷ್ಟವನ್ನು ಏನಂತ ನಿವೇದಿಸಲಿ? ಒಬ್ಬ ಸಾಮನ್ಯ ಮನುಷ್ಯ ಜನರನ್ನು ಮರಳು ಮಾಡಿ, ಅವರನ್ನು ಸಾಧನವಾಗಿ ಬಳಿಸಿ ಸಮಾಜವನ್ನು ಬುಡಮೇಲು ಮಾಡಬಹುದಂತ ಯಾರು ಬಾವಿಸಿದ್ದರು? ಬಂಡಾಯ ನಡೆದ ದಿವಸ ಮಹಾಪ್ರಭುವಿನ ಜೊತೆ ಅಬ್ಟು ಯಾತ್ರೆ ಮುಗಿಸಿ ರಾಜದಾನಿಗೆ ಪ್ರಯಾಣ ಬೆಳೆಸ್ತಾ ಇದ್ದೆ... ಆ ಮೇಲೆ ನನಗೆ ತಿಳಿದು ಬಂದ ಪ್ರಕಾರ ಈತನು ಇವನ ಸಂಗಡಿಗರು ರಾಜಗೃಹದ ಪ್ರಾಕಾರವನ್ನು ಪುಡಿ ಮಾಡಿದರು. ಎಲ್ಲ ಭೂಮಲಿಕರ ಹೊಲ ಕಸಗಂಡ್ರು, ರಾಸುಗಳನ್ನು ವಶಕ್ಕೆ ತಗಂಡ್ರು. ಹೆಂಗಸರ ಮಾನಭಂಗ: ಅತ್ಯಾಚಾರ. ಅಯ್ಯೋ ಅಯ್ಯೋ... ಏನು ಹೇಳ್ಲಿ? ಪರಂಪರಗತವಾಗಿ ನಮ್ಮ ಜತೆ ಸುಖವಾಗಿದ್ದ ದಾಸ ದಾಸಿಯರನ್ನು ಬಿಡುಗಡೆ ಮಾಡಿದ್ರು. ಅವರು ಅನಾಥರಾದ್ರು. ತಮ್ಮ ಬಾಲಬಡಕ ಬಡವರ ಮಕ್ಕಳಿಗೆ ಶಾಲೆ ಲಿಪಿ ಸುರುಳಿ ಪಾಠ. ನಮ್ಮ ಮಕ್ಕಳಿಗೆ ಜೀತ. ಪ್ರಾಕಾರ ದ್ವಾರವನ್ನು ಮುರಿದ ಮರದ ದಿಮ್ಮಿ ಇವರ ಸ್ಮಾರಕ ಕಂಬ. ಅದಕ್ಕೆ ಅಲಂಕಾರ. ತಾನೇ ಮಹಾರಾಣಿ ಅನ್ನುವ ಹಾಗೆ ಈತನ ಹೆಂಡತಿಯೆ ಮೆರಿತಿದ್ದಾಳೆ. ಇನ್ನೂ ಸ್ವಲ್ಪ ಸಮಯ ಹೀಗೆ ಬಿಟ್ಟರೆ ಸಮಾಜದ ಬೆನ್ನೆಲುಬಾದ ಭೂಮಾಲಿಕ ಸಮುದಾಯವೇ ನಾಶವಾಗ್ತದೆ. ಒಂದು ಸಿಂಹವನ್ನು ಕೊಂದು ಅದರ ಒಂದು ಕಣ್ಣು ಕುಕ್ಕಿ ತೆಗೆದು, ಹೊಟ್ಟು ತುಂಬಿಸಿ ಹೊಲೆದು, ಅದಕ್ಕೆ ಬಕಿಲ ಎಂದು ಹೆಸರಿಟ್ಟು, ನಮ್ಮ ಮಾನ್ಯ ಕಂದಾಯ ಅಧಿಕಾರಿ ಟೆಹುಟಿಯವರ ಮುಖ್ಯಸ್ಥನನ್ನು ಈ ಜನ ಅವಮಾನಿಸಿದ್ದಾರೆ ಅಂತ ಕೇಳಿದ್ದೇನೆ. ಅಲ್ಲಿ ನಡೆದ ಎಲ್ಲಾ ದೌರ್ಜನಕ್ಕೆ ಈತನೆ ಮೂಲ.”34

ಧರ್ಮದ ವಾರಸುದಾರರೆಂದು ಹೇಳುವ ಪುರೋಹಿತರು ಜನರ ಹಿತವನ್ನು ಕಾಯುವದಿಲ್ಲ. ದೇವರ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಲೇ ಇರುತ್ತಾರೆ. ಅವರನ್ನು ಪ್ರಶ್ನೆ ಮಾಡುವವರಿಗೆ ಪ್ರಭುತ್ವದ ಬೆಂಬಲ ಬಳಿಸಿಕೊಂಡು ಸೆದೆ ಬಡಿಯಲು ಪ್ರಯತ್ನಿಸುತ್ತಾರೆ. ಸದಾ ರಾಜರನ್ನು ಓಲೈಸಿಕೊಂಡು ಅವರನ್ನು ದೇವರ ಅವತಾರವೆಂದು ಬಿಂಬಿಸುತ್ತಿರುತ್ತಾರೆ. ಇಂತವರು ಮೆನೆಪ್‌ಟಾನ ನೀತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರು ಕೂಡ ಅನೇಕ ಆರೋಪಗಳನ್ನು ಅವನ ಮೇಲೆ ಮಾಡುತ್ತಾರೆ.``ಇದು ಕೇಳು ಕಿವಿ ಕಿವುಡಾಗುವಷ್ಟು ಕೆಟ್ಟ ಸುದ್ದಿ; ಮಾಡಿದ ಕೈಗಳು ತಾವೇ ಕಡಿದು ಬೀಳುವಷ್ಟು ದುಷ್ಟ ಕೆಲಸ. ಬಂಡಾಯ ಹೂಡಿದ ಮಾರನೇ ದಿನವೇ ಈತ ತನ್ನ ಸಂಗಡಿಗರೊಂದಿಗೆ ದೇವಮಂದಿರಕ್ಕೆ ನುಗ್ಗಿ ದುಂಡಾವರ್ತನೆ ನಡೆಸಿದ. ನೆರೆದ ಜನರ ಎದುರಿನಲ್ಲಿ ಅರ್ಚಕ ಅಪೆಟ್‌ನನ್ನು ಥಳಿಸಿದ. ಇಲ್ಲಿರುವ ಮಾನ್ಯ ಭೂಮಾಲಿಕರು ಸೆತೆಕ್ ನಕ್ತ್ ಮತ್ತು ಸೆನ್ ಉರ‍್ಟ್ ಇದಕ್ಕೆ ಸಾಕ್ಷಿ. ಮಂದಿರದ ಮೂರ್ತಿ ದೇವರಲ್ಲ, ನಾನೆ ದೇವರು, ನನಗೆ ಪೂಜೆ ಸಲ್ಲಿಸಿ-ಎಂದ. ದೇವ ಮಂದಿರದ ಉಗ್ರಾಣವನ್ನು ಹೊಕ್ಕು ಭಕ್ತಾಧಿಗಳು ನೀಡಿದ ದವಸಧಾನ್ಯ ಮತ್ತಿತರ ಕಾಣಿಕೆಗಳನ್ನು ವಶಪಡಿಸಿಕೊಂಡ. ಬಂಗಾರದ ತಟ್ಟೆಗಳನ್ನು ದೋಚಿದ. ಶಿರಚ್ಛೇದನ ಮಾಡಿ ಸ್ಮಾರಕ ಕಂಬಕ್ಕೆ ತೂಗಿ ಹಾಕ್ತೇನೆ ಅಂತ ಅಪೆಟ್‌ನನ್ನು ಹೆದರಿಸಿದ. ಮಹಾಪ್ರಭು-ಮಹಾಅರ್ಚಕರು-ಭೂಮಾಲಿಕರು ಒಟ್ಟಾಗಿ ಐಗುಪ್ತನನ್ನು ಹರಿದು ತಿನ್ತಿದ್ದಾರೆ-ಅಂತ ಕೂಗಾಡಿದ. ಇವನು ಮಾಡಿರುವುದು ದೇಶದ್ರೋಹ. ಈತ ಮನುಷ್ಯನಲ್ಲ-ಸಾರಿ ಸಾರಿ ಹೇಳ್ತೆನೆ ಇವನು ಸೆತ್ ಸೆತ್” 35

ಮೆನೆಪ್ ಟಾನನ್ನು ಎಲ್ಲಾರು ಸೇರಿ ಮಹಾ ಅಪರಾಧಿಯೆಂದು ತೀರ್ಮಾನಿಸುತ್ತಾರೆ. ಅವನ ನ್ಯಾಯಯುತ ವರ್ತನೆಯೆ ಆಡಳಿತದವರಿಗೆ ಅನ್ಯಾಯವಾಗಿ ಕಾಣುತ್ತದೆ. ಅವರ ವ್ಯವಸ್ಥೆಯನ್ನು ಪ್ರಶ್ನಿಸುವ ಮನೋಭಾವನ್ನು ಹತ್ತಿಕ್ಕುವುದೆ ಅವರ ಹಿತಾಸಕ್ತಿಯಾಗಿರುತ್ತದೆ. ಅದರಂತೆ ಮೆನೆಪ್‌ಟಾನನ್ನು ಗಲ್ಲಿಗೆ ಹಾಕುವ ತೀರ್ಮಾನ ಮಾಡುತ್ತಾರೆ. ಕಾನೂನು ರೂಪಿಸುವವರು ಅವರೆ ಆಗಿರುವದರಿಂದ ತೀರ್ಮಾನ ನೀಡುವವರು ಅವರೆ. ಇದರಿಂದಾಗಿ ಸಾಮನ್ಯರಿಗೆ ನ್ಯಾಯ ಸಿಗುವುದಿಲ್ಲ. ಇದು ಸಾವಿರಾರು ವರ್ಷ ಚರಿತ್ರೆಯಲ್ಲಿ ನಡೆದುಕೊಂಡು ಬಂದಿದೆ. ಇರುವ ವ್ಯವಸ್ಥೆಯನ್ನು ಬದಲಾಯಿಸಿ ಹೊಸ ವ್ಯವಸ್ಥೆಯನ್ನು ನರ‍್ಮಿಸಲು ಹೊರಟಾಗ ಉಂಟಾಗುವ ಬಿಕ್ಕಟ್ಟುಗಳನ್ನು ಮೆನೆಪ್‌ಟಾ ಎದುರಿಸಿ ಗಲ್ಲಿಗೇರಬೇಕಾಗುತ್ತದೆ. ಆದರೆ ಗಲ್ಲಿಗೇರುವ ಮುಂಚೆ ಮೆನೆಪ್ ಟಾ ಕೇಳುವ ಪ್ರಶ್ನೆಗಳು ಹೊಸ ವ್ಯವಸ್ಥೆಯ ನರ‍್ಮಾಣಕ್ಕೆ ನಾಂದಿ ಹಾಡುತ್ತವೆ.

"ನಮ್ಮ ಸಮಾಜ ವಿಸ್ತಾರ ಬುನಾದಿಯ ಮೇಲಿನ ಹತ್ತಾಳು ಎತ್ತರದ ಗೋರಿ. ಈ ಸೋಪಾನ ವ್ಯವಸ್ಥೆ ನಿಂತಿರೋದು ಸಹಸ್ರ ಸಹಸ್ರ ಶ್ರಮಜೀವಿಗಳ ಭುಜಗಳ ಮೇಲೆ. ಎತ್ತರಕ್ಕೆ ಹೋಗ್ತಾ ಅಗಲ ಕಿರಿದು. ದುಡಿಸುವ ಕಾಪಿರುಗಳು, ಭೂಮಲಿಕರು, ವರ್ತಕರು, ಸೈನ್ಯ, ಆಡಳಿತಗಾರರು-ಅರ್ಚಕರು. ಸುಲಿಗೆಯ ಸೂತ್ರ ಈ ವ್ಯವಸ್ಥೆಯನ್ನು ಬಿಗಿದು ಕಟ್ಟಿದೆ. ನಮ್ಮ ಪ್ರಾಚೀನರ ಮಾತಿನಂತೆ ಮುಂಗೈಜೋರೊನಿಂದ ಏನನ್ನು ಸಾಧಿಸಲು ಆಗುವದಿಲ್ಲ. ಆದರೆ ನಮ್ಮ ನಡವಳಿಕೆ ಆ ಮಾತನ್ನು ಸುಳ್ಳು ಮಾಡಿದೆ. ಕಂದಾಯ ವಸೂಲಿ, ಗೋರಿ ನಿರ್ಮಾಣ, ಗಣಿಕೆಲಸ ಇವೆಲ್ಲ ಬಲಪ್ರಯೋದಿಂದಲೇ ನಡಿತವೆ. ದಾಸ ದಾಸಿಯರ ಬಲತ್ಕಾರದ ದುಡಿಮೆಯಿಂದ ನಮ್ಮಲ್ಲಿ ಸಂಪತ್ತು ಉತ್ಪನ್ನವಾಗಿದೆ. ಇದು ಸ್ವರ್ಣ ಪಿಶಾಚಿಗಳ ಸಮಾಜ. ಮನುಷ್ಯ ಜೀವಕ್ಕೆ ಇಲ್ಲಿ ಬೆಲೆ ಇಲ್ಲ. ಹೋರಾಟದಲ್ಲಿ ಸೆರೆ ಸಿಕ್ಕಿದವರು ನಮ್ಮ ವ್ಯವಸ್ಥೆಯ ಗುಲಾಮರಾಗುತ್ತಾರೆ. ಅವರನ್ನು ಕೆಡವಿದಾಗ ಅವರ ಬಲಗೈಯನ್ನೋ ಯೋನಿಯನ್ನೋ ಕತ್ತರಿಸಿ ತರುತ್ತಾರೆ ನಮ್ಮ ವೀರ ಯೋಧರು... ಅರಮನೆಯ ಲೆಕ್ಕಿಗನಿಗೆ ತೋರಿಸಿ ದಾಖಲೆ ಇಡಿಸೋದಕ್ಕೆ. ಆ ಸಾಧನೆಯ ಪ್ರಮಾಣಕ್ಕೆ ಅನುಸಾರವಾಗಿ ಬಹುಮಾನ. ಇದಲ್ಲವಾ ನಾಗರಿಕತೆ.

ಆಯಿತು ಕೊನೆ ಮಾತು. ಇಷ್ಟು ದಿನ ನಿಮ್ಮ ಚೌಕಮಣೆ ಆಟದಲ್ಲಿ ಕಾಯಿಯಾಗಿದ್ದೆ. ನೀವು ಹೀಗೆಲ್ಲ ಒಂದಾಗಿದ್ದೀರಿ. ಸದ್ಯಕ್ಕೆ ಆಟ ಮುಗಿದಿದೆ. ಕಾಯಿಯಾಗಿದ್ದ ಅಗತ್ಯ ನಿಮಗಿಲ್ಲ. ಸೋಪ್ರು, ಸೆಬೆಕ್ಖು, ನಮ್ಮ ಪ್ರಾಂತದ ಹಿರಿಯ ಸಮಿತಿ ಸದಸ್ಯರು. ಖ್ನೆಮ್ ಹೊಟೆಪ್-ಎಲ್ಲರ ದೃಷ್ಟಿಯಲ್ಲಿ ನಾನೊಬ್ಬ ಶಾಂತ ಸ್ವಭಾವದ ನಾಯಕ. ಬಟಾ ಕೇಳಿದ ಒಂದು ಪ್ರಶ್ನೆ ಇದು- `ಅಣ್ಣ ನಿನಗೆ ಸಿಟ್ಟು ಬರೋದು ಯಾವತ್ತು?’( ಬಹಳ ಮೆಲ್ಲನೆ) ಯಾವತ್ತು? ಯಾವತ್ತು? (ಕ್ರಮೇಣ ಧ್ವನಿ ಏರಿಸುತ್ತಾ) ಮಹಾ ಪ್ರಭುಗಳೇ ಮಹಾ ಅರ್ಚಕರೇ ಅಮಾತ್ಯರೇ, ಪ್ರತಿಷ್ಠಿತರೇ! ಕಿವಿಗೊಟ್ಟು ಕೇಳಿ! ನಮಗೆ ಜನರಿಗೆ ಸಿಟ್ಟು ಬಂದಾಗ ಅದು ಮಹಾಪೂರವಾಗ್ತದೆ. ಅದರಲ್ಲಿ ನೀವೆಲ್ಲ ಕೊಚ್ಚಿ ಹೋಗ್ತೀರಿ! ಮಹಾಪೂರ ಇಳಿದಾಗ ಕಂಡುಬರೋ ಜಗತ್ತು ಹೊಸದು- ಹೊಚ್ಚ ಹೊಸದು! ಆ ನೂತನ ಸೃಷ್ಟಿ ನಿರಾಂತಕವಾಗಿ ಆಗಲಿ ಅಂತ.- ಇಗೋ ರಾನನ್ನು ಪ್‌ಟಾನನ್ನು ಅನನ್ಯಭಾದಿಂದ ಪ್ರಾರ್ಥಿಸುತ್ತೇನೆ.” 36

ಇಡೀ ಕಾದಂಬರಿ ಜನತೆಯ ಭಾವನೆಗೆ ಸ್ಪಂದಿಸುವ ಒಬ್ಬ ನಾಯಕನನ್ನು ಸೃಷ್ಟಿಸಿದೆ. ಅದೇ ನಾಯಕನನ್ನು ಪ್ರಭುತ್ವ ಶಕ್ತಿಗಳು ತಮ್ಮ ಹಿತಾಸಕ್ತಿಗಾಗಿ ಹೇಗೆ ಧಮನ ಮಾಡುತ್ತವೆ ಎಂಬುದನ್ನು ಅನಾವರಣಗೊಳಿಸಲಾಗಿದೆ. ಇಂತಹ ಮನಕರಗಿಸುವ ಸಂಗತಿಗಳು ಪರಿಣಾಮಕಾರಿಯಾಗಿ ಚರಿತ್ರೆಯ ಬರವಣಿಗೆಯಲ್ಲಿ ಬರುವದಿಲ್ಲ. ಚರಿತ್ರೆಯ ಕರಾಳತೆಯನ್ನು ಅರ್ಥ ಮಾಡಿಕೊಂಡು ಮೆನೆಪ್‌ಟಾ ನಂತಹ ನಾಯಕನನ್ನು ನಮ್ಮ ಕಾಲ ಹೊಂದಬೇಕೆಂಬುದನ್ನು ನಾವು ಮನಗಾಣಬೇಕಿದೆ.

ಅಡಿಟಿಪ್ಪಣಿಗಳು
೧. ಡಾ. ಸಿ.ಎನ್. ರಾಮಚಂದ್ರನ್, ನಿರಂಜನರ ಐತಿಹಾಸಿಕ ಕಾದಂಬರಿಗಳುಃ ಒಂದು ವಿಮರ್ಶೆ, ಪು. ೨೭೦, ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ, ೧೯೮೬
೨. ಕೆ. ವಿ. ತಿರುಮಲೇಶ, ನೆಫರ್‌ಟೀಮ್‌ಳಿಗೊಂದು ಪತ್ರ, ಪು. ೨೫೯, ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ,
೩.ಡಾ. ಸಿ.ಎನ್. ರಾಮಚಂದ್ರನ್, ನಿರಂಜನರ ಐತಿಹಾಸಿಕ ಕಾದಂಬರಿಗಳುಃ ಒಂದು ವಿಮರ್ಶೆ, ಪು. ೨೭೦, ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ, ೧೯೮೬)
೪. ಕೆ. ವಿ. ತಿರುಮಲೇಶ, ನೆಫರ್‌ಟೀಮ್‌ಳಿಗೊಂದು ಪತ್ರ, ಪು. ೨೫೮, ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ
೫. ಮೃತ್ಯುಂಜಯ, ನಿರಂಜನ, ಪು.೧, ಐಬಿಎಚ್ ಪ್ರಕಾಶನ-೧೯೭೬
೬. ಮೃತ್ಯುಂಜಯ, ನಿರಂಜನ, ಪು.೧, ಐಬಿಎಚ್ ಪ್ರಕಾಶನ-೧೯೭೬
೭. ಎಂದಿಗೂ ಹೊಸದು, ರಾಜೇಂದ್ರ ಚೆನ್ನಿ, ಪು.೧೦೪,ಅಭಿರುಚಿ ಪ್ರಕಾಶನ, ಮೈಸೂರು, ೨೦೧೪)
೮. ಡಾ. ಸಿ.ಎನ್. ರಾಮಚಂದ್ರನ್,ನಿರಮಜನರ ಈತಿಹಾಸಿಕ ಕಾದಂಬರಿಗಳುಃ ಒಂದು ವಿಮರ್ಶೆ, ಪು. ೨೭೬-೭೭, ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ,
೯. ಎಂದಿಗೂ ಹೊಸದು, ರಾಜೇಂದ್ರ ಚೆನ್ನಿ, ಪು.೧೦೫, ಅಭಿರುಚಿ ಪ್ರಕಾಶನ, ಮೈಸೂರು, ೨೦೧೪
೧೦. ಎಂದಿಗೂ ಹೊಸದು, ರಾಜೇಂದ್ರ ಚೆನ್ನಿ, ಪು.೧೦೬, ಅಭಿರುಚಿ ಪ್ರಕಾಶನ, ಮೈಸೂರು, ೨೦೧೪
೧೧. ಎಂದಿಗೂ ಹೊಸದು, ರಾಜೇಂದ್ರ ಚೆನ್ನಿ, ಪು.೧೦೬,ಅಭಿರುಚಿ ಪ್ರಕಾಶನ, ಮೈಸೂರು, ೨೦೧೪
೧೨. ಕೆ. ವಿ. ತಿರುಮಲೇಶ, ನೆಫರ್‌ಟೀಮ್‌ಳಿಗೊಂದು ಪತ್ರ, ಪು. ೨೬೧, ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ, ೧೯೮೬
೧೩. ಕೆ. ವಿ. ತಿರುಮಲೇಶ, ನೆಫರ್‌ಟೀಮ್‌ಳಿಗೊಂದು ಪತ್ರ, ಪು. ೨೬೩, ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ, ೧೯೮೬
೧೪ .ಕೆ. ವಿ. ತಿರುಮಲೇಶ, ನೆಫರ್‌ಟೀಮ್‌ಳಿಗೊಂದು ಪತ್ರ, ಪು. ೨೬೪, ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ, ೧೯೮೬
೧೫. ಮೃತ್ಯುಂಜಯ, ನಿರಂಜನ, ಪು.೧೪, ಐಬಿಎಚ್ ಪ್ರಕಾಶನ-೧೯೭೬
೧೬. ಮೃತ್ಯುಂಜಯ, ನಿರಂಜನ, ಪು.೧೪, ಐಬಿಎಚ್ ಪ್ರಕಾಶನ-೧೯೭೬
೧೭. ಅದೇ, ಪು ೨೦
೧೮. ಅದೇ, ಪು ೨೫-೨೭
೧೯. ಅದೇ, ಪು. ೩೯-೪೦
೨೦. ಅದೇ, ಪು. ೪೦
೨೧. ಅದೇ,ಪು೪೧-೪೨
೨೨. ಅದೇ,ಪು. ೪೫-೪೬
೨೩. ಅದೇ, ಪು. ೪೮-೪೯
೨೪. ಅದೇ, ಪು. ೪೯-೫೦
೨೫. ಅದೇ, ಪು. ೫೧
೨೬. ಅದೇ, ಪು. ೭೦
೨೭. ಅದೇ ಪು. ೭೫-೭೬
೨೮. ಅದೇ ಪು.೮೧
೨೯. ಅದೇ ಪು.೮೫
೩೦. ಅದೇ ಪು. ೯೩
೩೧.ಅದೇ, ಪು.೯೪
೩೨. ಅದೇ, ಪು. ೯೯-೧೦೦
೩೩. ಅದೇ, ಪು. ೪೦೩-೪೦೪
೩೪. ಅದೇ, ಪು. ೪೦೬
೩೫. ಅದೇ, ಪು. ೪೦೭
೩೬. ಅದೇ, ಪು. ೪೧೮-೧೯

 

MORE NEWS

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...

ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ

26-12-2024 ಬೆಂಗಳೂರು

"ತ.ರಾ‌. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...