Date: 19-12-2024
Location: ಬೆಂಗಳೂರು
ಮಂಡ್ಯ: ‘ಸಕ್ಕರೆ ನಾಡು’ ಮಂಡ್ಯ ಮೂರು ದಿನಗಳ ಕಾಲ ನಡೆಯಲಿರುವ ನುಡಿ ಜಾತ್ರೆಗೆ ಸಿದ್ಧವಾಗಿದೆ. ಮೂರು ದಶಕದ ಬಳಿಕ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿ.20, 21,22 ರಂದು ನಡೆಯಲಿದ್ದು, ಜಿಲ್ಲೆಯು ಸಾಹಿತ್ಯ ಪ್ರೇಮಿಗಳ ಬರುವಿಕೆಗೆ ಸಕಲ ರೀತಿಯಲ್ಲಿ ಸಜ್ಜಾಗಿದೆ.
‘ನುಡಿ ಜಾತ್ರೆ’ಗೆ ನಗರದ ಸ್ಯಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿನ ಪ್ರದೇಶವನ್ನು ಮೀಸಲಾಗಿಸಿದ್ದು, ಡಿಸೆಂಬರ್ 20 ರಂದು ಬೆಳಿಗ್ಗೆ 10.30 ಗಂಟೆಗೆ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭವು ಪ್ರಧಾನ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ಲಕ್ಷಾಂತರ ಜನರು ಭಾಗಿಯಾಗುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹಾಗೂ ಸಂಸದ ಹೆಚ್. ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ದೊಡ್ಡ ರಂಗೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಗೌರವ ಕಾರ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಭಾಗಿಯಾಗುವ ಪ್ರಮುಖರು: ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಮಾಜ ಕಲ್ಯಾಣ ಸಚಿವ ಡಾ. ಹೆಚ್. ಸಿ. ಮಹದೇವಪ್ಪ, ವಿಧಾನಸಭೆ ಸರ್ಕಾರಿ ಮುಖ್ಯ ಸಚೇತಕರು ಅಶೋಕ್ ಮಹದೇವಪ್ಪ ಪಟ್ಟಣ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ದೊಡ್ಡನಗೌಡ ಹನಮಗೌಡ ಪಾಟೀಲ, ವಿರೋಧ ಪಕ್ಷದ ನಾಯಕ ಆರ್ ಅಶೋಕ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ಎ.ಬಿ. ರಮೇಶ ಬಂಡಿಸಿದ್ದೇಗೌಡ ಅವರುಗಳು ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಮುಖ್ಯವಾಗಿ ಸಮ್ಮೇಳನದಲ್ಲಿ ಮೂರು ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಸುಮಾರು 70 ರಿಂದ 80 ಎಕರೆ ಪ್ರದೇಶದಲ್ಲಿ ಪ್ರಧಾನ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಯನ್ನು ನಿರ್ಮಿಸಲಾಗಿದೆ. 60 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. 55 ವಸ್ತು ಪ್ರದರ್ಶನ, 350 ವಾಣಿಕ್ಯ ಮತ್ತು 450 ಪುಸ್ತಕ ಮಳಿಗೆ ತೆರೆಯಲಾಗುತ್ತಿದೆ. ಊಟ ಬಡಿಸಲು ಒಟ್ಟಾಗಿ 300 ಕೌಂಟರ್ ಗಳನ್ನು ತೆರೆಯಲಾಗಿದ್ದು, 6 ಸಾವಿರ ನೋಂದಾಯಿತ ಪ್ರತಿನಿಧಿಗಳು, ಪೊಲೀಸ್ ಮತ್ತು ಸಾರಿಗೆ ಇಲಾಖೆ ಸಿಬ್ಬಂದಿ, ಗಣ್ಯರಿಗೆ ಪ್ರತ್ಯೇಕವಾಗಿ ಕೌಂಟರ್ ಗಳನ್ನು ತೆರೆಯಲಾಗಿದೆ.
ಪ್ರಧಾನ ವೇದಿಕೆ "ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ"ಯಲ್ಲಿ ಸಮ್ಮೇಳನಾಧ್ಯಕ್ಷರ ಜತೆಗಿನ ಸಂವಾದವೂ ಸೇರಿದಂತೆ 11 ಗೋಷ್ಠಿ, ಮೊದಲನೇ ಸಮಾನಾಂತರ ವೇದಿಕೆಗೆ "ಸರ್ ಎಂ. ವಿಶ್ವೇಶ್ವರಯ್ಯ " ಹಾಗೂ 2ನೇ ಸಮಾನಾಂತರ ವೇದಿಕೆಗೆ "ಸರ್ ಮಿರ್ಜಾ ಇಸ್ಮಾಯಿಲ್" ಮಹಾಮಂಟಪ ಎನ್ನುವ ಹೆಸರಿಡಲಾಗಿದ್ದು ಇಲ್ಲಿ ಒಟ್ಟಾಗಿ 20 ಗೋಷ್ಠಿಗಳು ಆಯೋಜನೆಗೊಂಡಿವೆ.
ಸಮ್ಮೇಳನ ವಿಭಿನ್ನತೆ, ಹೊಸತನಗಳಿಗೆ ವೇದಿಕೆಯಾಗುವ ನಿಟ್ಟಿನಲ್ಲಿ ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ರಾಜ್ಯದ ವಿವಿಧೆಡೆಗಳಿಂದ 201 ತಂಡಗಳನ್ನು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕಾಗಿ ಆಯ್ಕೆ ಮಾಡಲಾಗಿದೆ. ಮುಖ್ಯ ವೇದಿಕೆ ಹಾಗೂ 2 ಸಮಾನಂತರ ವೇದಿಕೆಗಳಲ್ಲಿ ಬೆಳಿಗ್ಗೆ 8 ರಿಂದ 10ರ ತನಕ ಹಾಗೂ ಸಂಜೆ 7 ರಿಂದ 10.30ರ ತನಕ ವಿಭಿನ್ನವಾದ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಲಿವೆ.
ಮಂಡ್ಯ ಜಿಲ್ಲೆಯಿಂದ 109 ಕಲಾ ತಂಡಗಳು, ಹೊರ ಜಿಲ್ಲೆಯಿಂದ 33 ತಂಡಗಳು ಮತ್ತು ಬೇರೆ ರಾಜ್ಯಗಳಿಂದ 5 ಕಲಾ ಪ್ರಕಾರಗಳ ತಂಡಗಳು ಭಾಗವಹಿಸಲಿವೆ. ಮೂಡಲಪಾಯ, ಯಕ್ಷಗಾನ, ಬುಡಕಟ್ಟು ಸಮುದಾಯದ ನೃತ್ಯಗಳು, ನಾಡಿನ ಹೆಸರಾಂತ ಜನಪದ ಕಲಾ ಪ್ರದರ್ಶನಗಳು, ಸುಗಮ ಸಂಗೀತ ಇನ್ನಿತರ ಕಲಾ ಪ್ರದರ್ಶನಗಳು ನಡೆಯಲಿವೆ. ಈ ಬಾರಿ ಮಂಡ್ಯ ಜಿಲ್ಲೆ ಹಾಗೂ ಗಡಿ ಜಿಲ್ಲೆಗಳಿಗೆ ಶೇ 50 ರಷ್ಟು, ಇತರ ಜಿಲ್ಲೆಯ ಕಲಾವಿದರಿಗೆ ಶೇ.50ರಷ್ಟು ಪ್ರಧಾನ್ಯತೆ ನೀಡಲಾಗಿದೆ.
ವಿವಿಧ ಕೇಂದ್ರಗಳ ಉದ್ಘಾಟನೆಯನ್ನ ಮಾಡಲಿರುವ ಗಣ್ಯರು: ಡಿಸೆಂಬರ್ 20 ರಂದು ಬೆಳಿಗ್ಗೆ 10.30 ಗಂಟೆಯಿಂದ ಪ್ರಧಾನ ವೇದಿಕೆಯಲ್ಲಿ ವಿವಿಧ ಕೇಂದ್ರಗಳ ಉದ್ಘಾಟನೆ ಕಾರ್ಯಕ್ರಮಗಳು ಜರುಗಲಿವೆ.
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಡ್ಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಾಹಿತ್ಯ ಉತ್ಸವದ ಅಂಗವಾಗಿ ವಿವ...
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೆಯ ಅಖಿಲ...
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಡ್ಯದಲ್ಲಿ ಡಿ. 20, 21, 22 ರಂದು ನಡೆಯುತ್ತಿರುವ ಮೂರನೇ ವರ್ಷದ 87ನ...
©2024 Book Brahma Private Limited.