Date: 08-02-2025
Location: ತಿರುವನಂತಪುರ
`ಬುಕ್ ಬ್ರಹ್ಮ’ ವಿಶೇಷ ವರದಿ
ತಿರುವನಂತಪುರ: ೨೦೨೧ರ ಆಗಸ್ಟ್ ೮ ರಿಂದ ೧೭ರ ಅವಧಿಯಲ್ಲಿ ಅಫ್ಘಾನಿಸ್ತಾನ ಸರ್ಕಾರ ಕುಸಿಯುತ್ತಾ, ಇಡೀ ದೇಶ ತಾಲಿಬಾನ್ ಕೈವಶವಾದ ಸಂದರ್ಭ ಅಫ್ಘಾನ್ ರಾಜಧಾನಿ ಕಾಬೂಲ್ ನಲ್ಲಿ ಭಾರತದ ಒಬ್ಬರೇ ಒಬ್ಬ ’ವಾರ್ ಕರೆಸ್ಪಾಂಡೆಂಟ್’ ಉಳಿದುಕೊಂಡಿದ್ದು. ನಯನಿಮ ಬಸು!
ಇಲ್ಲಿನ ಕನಕಕುನ್ನು ಅರಮನೆಯ ’ಫೆಸ್ಟಿವಲ್ ಹಾಲ್’ ನಲ್ಲಿ ಮಾತೃಭೂಮಿ ಅಂತರ್ ರಾಷ್ಟ್ರೀಯ ಅಕ್ಷರ ಹಬ್ಬ (ಮಾತೃಭೂಮಿ ಇಂಟರ್ ನ್ಯಾಷನಲ್ ಫೆಸ್ಟಿವಲ್ ಆಫ್ ಲೆಟರ್ಸ್ – ಎಂಬಿಐಎಫ್ಎಲ್) -೨೦೨೫ ರ ಎರಡನೇ ದಿನ ನಯನಿಮ ಅವರ ಕೃತಿ ’ದಿ ಫಾಲ್ ಆಫ್ ಕಾಬೂಲ್’ ಬಗ್ಗೆ ಒಂದು ವಿಶೇಷ ಗೋಷ್ಠಿ ನಡೆಯಿತು. ಈ ಗೋಷ್ಠಿಯನ್ನು ನಡೆಸಿಕೊಟ್ಟದ್ದು, ಕಳೆದ ಮೂರು ದಶಕಗಳ ಅವಧಿಯಲ್ಲಿ ಭಾರತ ಉಪಖಂಡದಲ್ಲಿ ಬಹುತೇಕ ಸಂಘರ್ಷಗಳ ವರದಿ ಮಾಡಿದ ಹಿರಿಯ ಪತ್ರಕರ್ತ ಪಿ.ಎಂ. ನಾರಾಯಣನ್.
ಈ ಇಬ್ಬರು ’ವಾರ್ ಕರೆಸ್ಪಾಂಡೆಂಟ್’ಗಳು ಹೇಳಿದ್ದು, “ತಾಲಿಬಾನ್ ೧.೦ ಗಿಂತ ತಾಲಿಬಾನ್ ೨.೦ ಅತ್ಯಂತ ಅಪಾಯಕಾರಿ ಎಂದೆನ್ನಿಸುತ್ತಿದೆ. ಇದಕ್ಕೆ ಕಾರಣ ಕೇವಲ ಅಫ್ಘಾನಿಸ್ತಾನ ಮಾತ್ರವಲ್ಲ. ಸುಮಾರು ಮೂರ್ನಾಲ್ಕು ದಶಕಗಳಿಂದ ಆ ಆಯಕಟ್ಟಿನ ದೇಶದ ಮೇಲೆ ಕಣ್ಣಿಟ್ಟಿರುವ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಾದ ರಷ್ಯಾ – ಅಮರಿಕ. ಈ ನಡುವೆ ಭಾರತ ಮತ್ತು ಪಾಕಿಸ್ತಾನ ಕೂಡ ಅ ಅಫ್ಘಾನಿಸ್ತಾನದ ಮೇಲೆ ತಮ್ಮ ಹಕ್ಕುಸ್ವಾಮ್ಯ ಸ್ಥಾಪಿಸಲು ಬೇರೆ – ಬೇರೆ ರೂಪದಲ್ಲಿ ಪ್ರಯತ್ನ ಮಾಡುತ್ತಲೇ ಇವೆ” ಎಂದರು.
“೨೦೨೧ರಲ್ಲಿ ಅಮೆರಿಕ ತನ್ನ ಸೈನ್ಯವನ್ನುಅಫ್ಘಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಂಡ ಮೇಲೆ, ತಾಲಿಬಾನ್ ಅಫ್ಘಾನ್ ಸರ್ಕಾರವನ್ನು ಉರುಳಿಸಿ, ಆಡಳಿತವನ್ನು ತನ್ನ ಕೈವಶ ಪಡಿಸಿಕೊಂಡಿತು. ಆನಂತರದ ದಿನಗಳಲ್ಲಿ ಅಮೆರಿಕ ಮತ್ತು ಭಾರತದ ಪ್ರಭಾವ ಅಲ್ಲಿ ಕಡಿಮೆಯಾಗಿದೆ. ಈ ನಡುವೆ ಅತ್ಯಂತ ಗೌಪ್ಯವಾಗಿ ಅಫ್ಘಾನಿಸ್ತಾನವನ್ನು ಪ್ರವೇಶಿಸಿದ ಚೀನಾ ಅಲ್ಲಿ ತಾಲಿಬಾನ್ ಸರ್ಕಾರದ ಜೊತೆ ಕೈಜೋಡಿಸಿತು. ಅಫ್ಘಾನಿಸ್ತಾನದಲ್ಲಿರುವ ಅಪಾರ ಖನಿಜ ಸಂಪನ್ಮೂಲದ ಮೇಲೆ ಕಣ್ಣು ಹಾಕಿರುವ ಚೀನಾ ಆ ದೇಶದಲ್ಲಿ ಸಾಕಷ್ಟು ಬಂಡವಾಳ ಹೂಡುತ್ತಿದೆ” ಎಂಬ ಎಚ್ಚರಿಕೆಯ ಮಾತುಗಳನ್ನು ಇಬ್ಬರೂ ಆಡಿದರು.
ನಯನಿಮ ಅವರು, “ಜಿಯೊ ಪಾಲಿಟಿಕಲ್ ದೃಷ್ಟಿಯಿಂದ ಇದು ಅತ್ಯಂತ ಕಳವಳಕಾರಿ ಸಂಗತಿ. ಚೀನಾ ಹಿಂದೆಂದಿಗಿಂತಲೂ ಹೆಚ್ಚಾಗಿ ಈಗಅಫ್ಘಾನಿಸ್ತಾನದಲ್ಲಿ ತನ್ನ ನೆಲೆ ಗಟ್ಟಿ ಮಾಡಿಕೊಳ್ಳಲು ಹೊರಟಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಬಾಂಗ್ಲಾ, ಮಯನ್ಮಾರ್, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಹೀಗೆ ಉಪಖಂಡದ ಎಲ್ಲ ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿ ಮಾಡಿಕೊಳ್ಳಲು ಯತ್ನಿಸುತ್ತಿರುವುದು ಭಾರತದ ಪಾಲಿಗೆ ಒಳ್ಳೆಯದಲ್ಲ” ಎಂದು ಹೇಳಿದರು.
“ಅಮೆರಿಕ ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವ ಮೊದಲು ಸ್ಥಳೀಯ ಯೋಧರಿಗೆ ಸೂಕ್ತ ತರಬೇತಿ ಮತ್ತು ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಕೊಟ್ಟಿದ್ದೇನೆ ಎಂದು ಹೇಳಿದ್ದು ಎಷ್ಟರ ಮಟ್ಟಿಗೆ ನಿಜ?” ಎಂಬ ಪ್ರೇಕ್ಷಕರ ಪ್ರಶ್ನೆಗೆ ಅವರು, “ಅದೊಂದು ಕಣ್ಣೊರೆಸುವ ಹೇಳಿಕೆ. ವಾಸ್ತವದಲ್ಲಿ ಅಮೆರಿಕ ಕೊಟ್ಟಿದ್ದು ಒಂದಿಷ್ಟು ಸಮವಸ್ತ್ರಗಳನ್ನು, ಬಿಟ್ಟು ಹೋದದ್ದು ಹಾಳಾದ ಕೆಲಸಕ್ಕೆ ಬಾರದ ಶಸ್ತ್ರಾಸ್ತ್ರಗಳನ್ನು. ಕೊನೆ- ಕೊನೆಗೆ ಅಫ್ಘಾನಿಸ್ತಾನ ಸರ್ಕಾರ ಅಲ್ಲಿನ ಸೇನೆಯಲ್ಲಿದ್ದ ಸ್ಥಳೀಯ ಯೋಧರಿಗೆ ವರ್ಷಗಟ್ಟಲೇ ಸಂಬಳವನ್ನೇ ನೀಡಿರಲಿಲ್ಲ. ಆದರೂ ಆ ಯುವಕರು ತಾಲಿಬಾನ್ ವಿರುದ್ಧ ಕೊನೆಯ ಕ್ಷಣದವರೆಗೆ ತೀವ್ರ ಹೋರಾಟ ನೀಡಿದರು” ಎಂದವರು ಹೇಳಿದರು.
ಈ ಹಿಂದಿನ ತಾಲಿಬಾನ್ ಮತ್ತು ಈಗ ಅಫ್ಘಾನಿಸ್ತಾನವನ್ನು ಆಳುತ್ತಿರುವ ತಾಲಿಬಾನ್ ನಡುವಿನ ವ್ಯತ್ಯಾಸದ ಬಗ್ಗೆ ಪ್ರಶ್ನೆಗೆ ಅವರು, “ಈ ಬಾರಿ ತಾಲಿಬಾನ್ ಸಂವಹನದಲ್ಲಿ ಅತ್ಯಂತ ಆಧುನಿಕವಾಗಿದೆ ಮತ್ತು ಜಗತ್ತಿನ ವಿವಿಧ ದೇಶಗಳ ನಡುವಿನ ಸಂಬಂಧ ಬೆಳೆಸುವುದು ಮತ್ತು ಅವುಗಳೊಂದಿಗೆ ಸಂಧಾನ ನಡೆಸುವ ನಿಟ್ಟಿನಲ್ಲಿ ಅತ್ಯಂತ ವೃತ್ತಿಪರವಾಗಿದೆ. ಜಾಗತಿಕ ನೆಲೆಯಲ್ಲಿ ರಾಜತಾಂತ್ರಿಕವಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಈಗಿನ ತಾಲಿಬಾನ್ ೨.೦ ಸರ್ಕಾರ ಚೆನ್ನಾಗಿ ಅರಿತಿದೆ. ಅದರ ಪರಿಣಾಮವಾಗಿಯೇ ಚೀನಾ ಈಗಿನ ತಾಲಿಬಾನ್ ಸರ್ಕಾರವನ್ನು ಅಧಿಕೃತ ಎಂದು ಮಾನ್ಯ ಮಾಡಿ, ಸಹಜವಾಗಿಯೇ ಅದರೊಂದಿಗೆ ವ್ಯವಹಾರ ನಡೆಸುತ್ತಿದೆ” ಎಂದವರು ಹೇಳಿದರು.
ಬೆಂಗಳೂರು: ‘ಈ ಹೊತ್ತಿಗೆ’ ಮಾಸಪತ್ರಿಕೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮ ಜೆ ...
“ಈ ಕತೆಯನ್ನು ಹೇಳಲು ಲೇಖಕರು ಬಳಸಿದ ಬಾಷೆ ಅತ್ಯಂತ ಆಪ್ತವಾಗಿದೆ. ಬಹುತೇಕ ಪಾತ್ರಗಳ ನಡುವಿನ ಸಂವಾದಗಳಲ್ಲೇ ಸಾಗುವ...
“ಮಾತೃಭಾಷೆ, ಮಾತೃಭಾಷೆಯಲ್ಲಿನ ಕಲಿಕೆ ಅದರ ಅನಿವಾರ್ಯ ಅವಶ್ಯಕತೆ, ಮಹತ್ವ ಕುರಿತು ಇಲ್ಲಿನ ಎಲ್ಲ ಲೇಖನಗಳು ಹಲವು ನ...
©2025 Book Brahma Private Limited.