ನೆನಪಿನ ಪುಟಗಳನ್ನು ಸದ್ದಿಲ್ಲದೆ ತಿರುವಿ ಹಾಕಿತು

Date: 25-01-2025

Location: ಬೆಂಗಳೂರು


“ಈ ಕತೆಯನ್ನು ಹೇಳಲು ಲೇಖಕರು ಬಳಸಿದ ಬಾಷೆ ಅತ್ಯಂತ ಆಪ್ತವಾಗಿದೆ. ಬಹುತೇಕ ಪಾತ್ರಗಳ ನಡುವಿನ ಸಂವಾದಗಳಲ್ಲೇ ಸಾಗುವ ಕಾದಂಬರಿ ಓದುಗರನ್ನೂ ಪಾತ್ರಗಳ ಜೊತೆಯಲ್ಲಿ ಅವರ ಯಾವುದೋ ಸಿದ್ಧಾಂತದ ಜೊತೆಯಲ್ಲಿ ಕನೆಕ್ಟ್ ಮಾಡುತ್ತದೆ,” ಎನ್ನುತ್ತಾರೆ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರು ವಸುಧೇಂದ್ರ ಅವರ “ರೇಷ್ಮೆಬಟ್ಟೆ” ಕೃತಿ ಕುರಿತು ಬರೆದ ವಿಮರ್ಶೆ

ತನ್ನ ಬದುಕಿನ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅತ್ಯಂತ ಧರ್ಮಸಂಕಟದ ಘಳಿಗೆಗಳು ಮಹತ್ತರವಾದ ಬದಲಾವಣೆಗಳಿಗೆ ಕಾರಣವಾಗುತ್ತವೆ. ನಮ್ಮೆದುರು ಸೃಷ್ಟಿಯಾಗುವ ಅವಕಾಶಗಳು ಮತ್ತು ಅಂತಹ ಬಿಕ್ಕಟ್ಟಿನ, ಅನಿವಾರ್ಯದ ಸಂದರ್ಭಗಳಲ್ಲಿ ತೆಗೆದುಕೊಳ್ಳುವ ನಮ್ಮ ನಿರ್ಧಾರಗಳು ಬದುಕಿಗೆ ದೊಡ್ಡದಾದ ತಿರುವುಗಳನ್ನು ಕೊಡುವಷ್ಟು ಶಕ್ತಿಯುತವಾಗಿರುತ್ತವೆ.ಬದುಕಿಗೆ ಹಿಮ್ಮುಖವಾದ ಚಲನೆಯಿಲ್ಲ.ಬದುಕಿನ ಬೇರೆಯೆ ಸ್ತರದಲ್ಲಿ ನಿಂತು ಹಿಂತಿರುಗಿ ನೋಡಿದಾಗ ತಪ್ಪು ನಿರ್ಧಾರ ತೆಗೆದುಕೊಂಡೆ ಅನ್ನುವ ಭಾವ ಮೂಡಿದಾಗ ಮತ್ತೆ ಹಿಂದೆ ತಿರುಗಿ ಬದುಕನ್ನು ಹೊಸದಾಗಿ ಆರಂಭ ಮಾಡುವ ಪರಿಸ್ಥಿತಿ ಇಲ್ಲದಷ್ಟು ಬದುಕಿನ ದಾರಿಗಳು ಬದಲಾಗಿರುತ್ತದೆ. ಈಗಿರುವ ಬದುಕಿಗೆ ಶರಣಾಗಿ ಹೊಂದಾಣಿಕೆಯಿಂದ ಬದುಕಬೇಕು ಅನ್ನುವ ಸತ್ಯದರ್ಶನವಾಗಿ ಬಹುಶಃ ಎಲ್ಲಾ ಕಾಲದಲ್ಲಿಯೂ ಬದುಕು ಇರುವುದೇ ಹೀಗೆ ಅನ್ನುವ ಸತ್ಯದ ಅರಿವಾಗುತ್ತದೆ.

ವಸುಧೇಂದ್ರರ ರೇಷ್ಮೆಬಟ್ಟೆ ಕಾದಂಬರಿ ನನಗೆ ಹೀಗೆ ಮುಖಾಮುಖಿಯಾಗುತ್ತಲೇ ಬದುಕಿನ ಸತ್ಯಗಳನ್ಜು ಅನಾವರಣ ಮಾಡುತ್ತಾ ಅರಿವನ್ನು ವಿಸ್ತರಿಸುತ್ತಾ ಬೆರಗನ್ನೂ ಓದುವ ಕುತೂಹಲವನ್ನೂ ಪುಟಪುಟದಲ್ಲೂ ಹೆಚ್ಚಿಸಿತು. ಕಾದಂಬರಿಯ ಪ್ರಮುಖ ಪಾತ್ರಗಳಾದ ಹವಿನೇಮ,ಮಿತ್ರವಂದಕ,ಮಧುಮಾಯ,ಜ್ಞಾನಸೇನ,ಲೀಹ್ವಾ,ಬುದ್ಧಮಿತ್ರ ತೆಗೆದುಕೊಳ್ಳುವ ನಿರ್ಧಾರಗಳು ಬದುಕಿನ ದಾರಿಗಳ ಎಲ್ಲಾ ತಿರುವುಗಳನ್ನು ಕಾಣಿಸುವಂತೆ ಮಾಡುತ್ತಾ ಬದುಕು ಅರ್ಥವಾದಷ್ಟೂ ನಿಗೂಢವಾಗಿ ಉಳಿಯುವ ಪರಿಗೆ ಬೆರಗಾಗುವ ಹಾಗೆ ಮಾಡುತ್ತವೆ.

ಒಂದು ಕಾಲಘಟ್ಟದಲ್ಲಿ ಬೇರೆ ಬೇರೆ ಪರಿಸರದಲ್ಲಿ ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆ ವೃತ್ತಿಯಲ್ಲಿ ಬದುಕಿದ್ದ ಈ ಪಾತ್ರಗಳ ಮೂಲಕ ವ್ಯಾಪಾರದ ಹೊಸ ದಾರಿಯೊಂದು ತರೆದುಕೊಂಡಾಗ ಬದಲಾವಣೆಗೆ ಒಗ್ಗಿಕೊಳ್ಳಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ ತೋರಿದ ವರ್ತನೆಗಳಲ್ಲಿ ಬದುಕಿನ ಮೂಲ ದ್ರವ್ಯವನ್ನು ಲೇಖಕರು ಉತ್ಕಟವಾಗಿ ಶೋಧಿಸಿದ್ದಾರೆ.ಹಲವುತನದ ಮೈಮರೆಸುವಾಟವಿದು ನಿಜವು ತೋರದಲ್ಲ ಅನ್ನುವ ಅಡಿಗರ ಕಾವ್ಯದ ಸಾಲೊಂದು ಈ ಹಿನ್ನಲೆಯಲ್ಲಿ ನೆನಪಿನ ಪುಟಗಳನ್ನು ಸದ್ದಿಲ್ಲದೆ ತಿರುವಿ ಹಾಕಿತು.ಜೀವನಪೂರ್ತಿ ಜೊತೆಯಲ್ಲಿ ಬಾಳಿದ ಸಂಗಾತಿಯೇ ಬದುಕಿನಲ್ಲಿ ಪೂರ್ತಿಯಾಗಿ ಅರ್ಥವಾಗುವುದಿಲ್ಲ. ಇನ್ನು ಈ ಕಾಡು ಮತ್ತು ಪರ್ವತಗಳು ಪೂರ್ತಿಯಾಗಿ ಗೊತ್ತೆಂದು ಹೇಗೆ ಹೇಳಲಿ? ಮನುಷ್ಯರಂತೆ ಕಾಡಿಗೆ ಒಂದೇ ಬಾಲ್ಯ ಒಂದೇ ಹರೆಯ ಒಂದೇ ಮುಪ್ಪು ಇರಲು ಸಾಧ್ಯವೆ? ಅದು ನಿತ್ಯ ಹೊಸ ಅವತಾರಗಳನ್ನು ತಾಳುತ್ತಿರುತ್ತದೆ ಅನ್ನುವ ಶಿಖನೇಮನ ಮಾತು ಬದುಕಿನ ಬಗೆಗೂ ಅನ್ವಯಿಸದೇ ಇರದು.

ಹೊಸದಾಗಿ ಆರಂಭವಾದ ವ್ಯಾಪಾರದ ದಾರಿ ದೇಶದೇಶಗಳನ್ನು ಹಾದು ಹೋಗುವಾಗ ಅಲ್ಲಿ ಕೇವಲ ವಸ್ತುಗಳಷ್ಟೇ ಬಿಕರಿಯಾಗಲಿಲ್ಲ.ಜನಸಾಮಾನ್ಯರ ಬದುಕೂ ಹರಾಜಿಗಿಟ್ಟ ವಸ್ತುವಾಯಿತು.ಸದ್ಯದ ಬದುಕನ್ನು ಮೀರಿ ಇನ್ನೇನನ್ನೋ ಹಿಡಿಯುವ ಯತ್ನದಲ್ಲಿ ತೆಗೆದುಕೊಂಡ ನಿರ್ಧಾರಗಳು ಬದುಕನ್ನು ಅವರು ಅಂದುಕೊಳ್ಳದೇ ಇರುವ ಮಹತ್ತರವಾದ ತಿರುವುಗಳಲ್ಲಿ ತಂದು ನಿಲ್ಲಿಸಿದವು. ಅಲ್ಲಿಂದ ಮತ್ತೆ ಮೂಲಕ್ಕೂ ಹಿಂದಿರುಗಲಾರದೆ ಬದಲಾದ ಪರಿಸ್ಥಿತಿಗಳಲ್ಲಿ ಅಲ್ಲಿ ಇರಲೂ ಆಗದಂತಹ ಪರಿಸ್ಥಿತಿಗಳು ಎದುರಾದಾಗ ಈ ಜಾಗತೀಕರಣ ಚಾಚಿಕೊಂಡ ಬಾಹುಗಳ ಪರಿಚಯವಾಗಿ ಬದುಕು ತಲ್ಲಣಿಸಿತು.

ಯಾವುದು ಕತ್ತಲೆ? ಯಾವುದು ಬೆಳಕು? ಒಂದುಕಾಲಕ್ಕೆ ಕತ್ತಲು ಅನ್ನಿಸಿದ್ದು ಮತ್ತೊಂದು ಕಾಲಕ್ಕೆ ಬೆಳಕಾಗಿ ಕಾಣಬಹುದಲ್ಲವೇ? ಎಲ್ಲವೂ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ.ಬದಲಾವಣೆ ಜಗದ ನಿಯಮ ಅನ್ನುವ ತತ್ವವನ್ನೂ ಬಂಡಾಯದ ಮಾತುಗಳಲ್ಲಿ ಪಾತ್ರದ ಮೂಲಕ ಹೇಳುತ್ತದೆ.ಬದಲಾವಣೆ ಅವಕಾಶದ ಬಾಗಿಲುಗಳನ್ನೇ ತೆರೆದಿದೆ ಅನ್ನುತ್ತಾ ಆ ದಾರಿಯಲ್ಲಿ ಸಾಗಿದವರಿಗೆ ಅದು ಬದುಕನ್ನು ಸಫಲತೆಯ ಕಡೆಗೆ ಕೊಂಡೊಯ್ಯುವ ರಹದಾರಿಯಾಗಿಯೂ ಕಾಣಿಸಿಕೊಂಡು ಹೊಸಹೊಸ ಉದ್ಯೋಗಗಳೂ ಹೇಗೆ ಸೃಷ್ಟಿಯಾದವು ಅನ್ನುವುದರ ಮೇಲೂ ಬೆಳಕು ಚೆಲ್ಲುತ್ತದೆ.ಮಾನವ ಇತಿಹಾಸವನ್ನು ಸದಾ ಕಾಲವೂ ಧರ್ಮ ರಾಜಕೀಯ ಮತ್ತು ವ್ಯಾಪಾರ ನಿಯಂತ್ರಿಸುತ್ತಲೇ ಬಂದಿರುವುದನ್ನು ಈ ಕಾದಂಬರಿ ಬಹಳ ಅರ್ಥಪೂರ್ಣವಾಗಿ ಕಟ್ಟಿಕೊಡುತ್ತದೆ.

ವ್ಯಾಪಾರದ ಜೊತೆಯಲ್ಲಿ ಬೆಸೆದುಕೊಂಡ ಧಾರ್ಮಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗಿಸಿ ಬೇರೆ ಬೇರೆ ಧರ್ಮಗಳ ಆಚಾರ ವಿಚಾರ ಪರ ಬಾಹಿರ ನಿಲುವುಗಳನ್ನು ಶೋಧಿಸುವಲ್ಲಿಯೂ ಲೇಖಕರ ಗ್ರಹಿಕೆ ಬಹಳ ಆಳವಾಗಿ ಈ ಕಾದಂಬರಿಯಲ್ಲಿ ಅಭಿವ್ಯಕ್ತವಾಗಿದೆ.ಚಲನೆಯಿದ್ದರೆ ಮಾತ್ರ ಅಭಿವೃದ್ಧಿ ಇರುತ್ತದೆ. ಧರ್ಮದ ಅಭಿವೃದ್ಧಿ ಬೇಕೆನ್ನುವವರು ಈ ದಾರಿಯ ಅಭಿವೃದ್ಧಿಯನ್ನೂ ಗೌರವಿಸಬೇಕಾಗುತ್ತದೆ. ಬದಲಾವಣೆಗಳು ನಿರಂತರ. ಅದಕ್ಕೆ ನಾವು ಹೊಂದಿಕೊಳ್ಳಲೇ ಬೇಕು ಅನ್ನುತ್ತಾ ರಾಜ ಕಾನಿಷ್ಕ ಧರ್ಮವನ್ನೂ ವಾಣಿಜ್ಯದ ದಾರಿಗೆ ಪೂರಕವಾಗಿ ಬದಲಿಸಿ ಸಿಲ್ಕ್ ರೂಟ್ ನ ಪ್ರಯಾಣವನ್ನು ಸುಗಮಗೊಳಿಸಿರುವುದನ್ನು ಗಮನಿಸಿದರೆ ಹೇಗೆ ಧರ್ಮವೂ ಕೂಡಾ ಈ ದಾರಿಯ ಅವಶ್ಯಕತೆಗಳಿಗೆ ತಕ್ಕ ಹಾಗೆ ಮಾರ್ಪಾಡುಗೊಂಡಿತು ಅನ್ನುವುದು ನಮಗೆ ಗೊತ್ತಾಗುತ್ತದೆ. ಆ ಮೂಲಕ ವ್ಯಾಪಾರವನ್ನೂ ಧರ್ಮಬಾಹಿರ ಅಂದುಕೊಂಡು ಬದುಕುತ್ತಿದ್ದ ಒಂದು ಧರ್ಮದ ಜನಸಮುದಾಯವೂ ಮುಂದೆ ಈ ಬದಲಾವಣೆಯ ಗಾಳಿಗೆ ಅನಿವಾರ್ಯವಾಗಿ ಬದಲಾಗಲೇಬೇಕಾಯಿತು.ವಸ್ತುವಿನ ಬದಲಿಗೆ ತನಗೆ ಬೇಕಾದ ವಸ್ತುವನ್ನು ಪಡೆದುಕೊಳ್ಳುವ ವ್ಯವಹಾರದ ಕ್ರಮವನ್ನು ಅನುಸರಿಸುತ್ತಿದ್ದ ಜನಸಮುದಾಯ ಮೊತ್ತಮೊದಲ ಬಾರಿಗೆ ತಾವು ಮಾರಿದ ವಸ್ತುಗಳ ಬದಲಿಗೆ ನಾಣ್ಯಗಳು ಕೈಸೇರಿದಾಗ ಅನುಭವಿಸಿದ ತಳಮಳ ದ್ವಂದ್ವವೂ ಬಹಳ ಸಶಕ್ತವಾಗಿ ಇಲ್ಲಿ ವ್ಯಕ್ತವಾಗಿದೆ.

ಕಾಡಿನಲ್ಲಿ ವಾಸಿಸುವ ತುಷಾರ ಜನಾಂಗ ನಾಡಿನ ಸವಲತ್ತುಗಳಿಗೆ ಅಕರ್ಷಿತವಾಗಿ ನಾಡಿಗೆ ವಲಸೆ ಹೋಗುವ ತುಡಿತವನ್ನು ಹವಿನೇಮ ಮತ್ತು ಸಗನೇಮಿಯ ವಲಸೆಯ ಮೂಲಕ ಬಹಳ ಮಾರ್ಮಿಕವಾಗಿ ಕಟ್ಟಿಕೊಡುತ್ತದೆ.ಹಿರಿಯರು ನಡೆದ ದಾರಿಯಲ್ಲಿಯೇ ನಾವು ನಡೆಯುತ್ತಾ ಹೋದರೆ ಹೊಸತು ಹುಟ್ಟುವುದಿಲ್ಲ.ನನಗೆ ಈ ಹಳೆಯ ಬದುಕು ಸಾಕಾಗಿದೆ.ಹೊಸದನ್ನು ಕಾಣೋಣ.ನಾವು ಈ ಕಾಡಿನಲ್ಲಿ ಬದುಕನ್ನು ಸವೆಸಿದ್ದು ಸಾಕು. ನಮ್ಮ ಮಗ ಬುದ್ದಿವಂತನಾಗಿ ಬೆಳೆಯಬೇಕು. ಬರಿ ಹೊಟ್ಟೆ ಬಟ್ಟೆ ಅಷ್ಟೇ ಬದುಕಲ್ಲ ಅಂತ ಗಂಡನನ್ನು ನಾಡಿಗೆ ಹೊರಡಿಸುವ ಸಗನೇಮಿ ಈಗಲೂ ಹಳ್ಳಿಯಿಂದ ನಗರಕ್ಕೆ ಹೋಗಿ ಅಲ್ಲಿಯೇ ನೆಲೆಸುವ ದೊಡ್ಡ ಸಮುದಾಯದ ಪರಂಪರೆಯ ಮೊದಲ ಪ್ರತಿನಿಧಿಯಾಗಿ ಕಾಣಿಸುತ್ತಾಳೆ.

ಅನಿಶ್ಚಿತತೆಗಳ ತಾಕಲಾಟಗಳಲ್ಲಿಯೇ ಉದ್ಯೋಗ ಹುಡುಕುತ್ತಾ ಹಳ್ಳಿ ತೊರೆದು ಪಟ್ಟಣ ಸೇರುವ ಯುವಕರನ್ನು ಸಗನೇಮಿಯ ಗಂಡ ಹವಿನೇಮ ಪ್ರತಿನಿಧಿಸುತ್ತಾ ಮುಂದೆಂದೂ ಮತ್ತೆ ಕಾಡಿಗೆ ಹಿಂದಿರುಗಲು ಅಸಾಧ್ಯವಾಗಿ ನಾಡಿನ ಬದುಕಿನ ಹೊಸ ಸವಾಲುಗಳಲ್ಲಿ ಬಂಧಿಯಾಗುವ ಚಿತ್ರಣ ಬಹಳ ಅರ್ಥಪೂರ್ಣವಾಗಿ ಚಿತ್ರಿತವಾಗಿದೆ.

ಒಂದು ಸೂಜಿ ಎಷ್ಟು ಪ್ರಮುಖ ವಸ್ತುವಾಗಿತ್ತು ಆ ಕಾಲದಲ್ಲಿ ಅನ್ನುವುದನ್ನು ಗಮನಿಸುವಾಗ ನಿಜಕ್ಕೂ ಈಗ ನಿಂತು ನೋಡುವಾಗ ಅಚ್ಚರಿ ಅನ್ನಿಸುತ್ತದೆ. ಬಿಡಿಗಳನ್ನು ಇಡಿ ಮಾಡುವ ಸೂಜಿ ಪಾರಸೀಕರಲ್ಲಿ ಪೂಜನೀಯ ವಸ್ತುವಾಗಿದ್ದರೆ ಬುದ್ಧ ಕೂಡಾ ಒಬ್ಬ ಬಿಕ್ಕು ಇಟ್ಟುಕೊಳ್ಳಬಹುದಾದ ಕನಿಷ್ಟ ವಸ್ತುಗಳಲ್ಲಿ ಸೂಜಿಯನ್ನೂ ಹೆಸರಿಸಿದ್ದಾನೆ ಎಂದರೆ ಅದರ ಮಹತ್ವವನ್ನು ಊಹಿಸಬಹುದು.ಮೊದಲು ಮರ, ಎಲುಬಿನಿಂದ ತಯಾರಿಸುತ್ತಿದ್ದ ಸೂಜಿ ನಂತರ ಲೋಹದ ಅನ್ವೇಷಣೆ ಆದ ನಂತರ ಲೋಹದಿಂದ ತಯಾರಿಸುವವರೆಗೆ ನಡೆದ ಕ್ರಾಂತಿಯನ್ನು ವಸುಧೇಂದ್ರ ಅವರು ಒಂದು ಕಡೆ ಹೇಳಿದ್ದನ್ನು ಕೇಳಿದ್ದೆ.ನನಗಿನ್ನೂ ನೆನಪಿದೆ, ಬಾಲ್ಯದಲ್ಲಿ ಹೊಸ ಬಟ್ಟೆ ಅಂತ ಹೊಲಿಸುತ್ತಿದ್ದದ್ದು ದೀಪಾವಳಿಗೆ ಮಾತ್ರ. ಹರಿದಾಗ ಹೊಲಿದುಕೊಳ್ಳುವ ಕ್ರಮ ಬಹುತೇಕ ಆಗ ಎಲ್ಲರ ಮನೆಗಳಲ್ಲೂ ಇತ್ತು. ಇನ್ನು ಎರಡನೆಯ ಶತಮಾನದಲ್ಲಿ ಯಾವುದೇ ಕೈಗಾರಿಕಾ ಕ್ರಾಂತಿ ನಡೆದಿರದ ನಾಗರೀಕತೆ ಆಗಷ್ಟೇ ವಿಕಾಸವನ್ನು ಕಾಣುತ್ತಿದ್ದ ಕಾಲದಲ್ಲಿ ಬಟ್ಟೆಗಳೂ ಅಮೂಲ್ಯವೇ ಆಗಿರಬಹುದು ಮತ್ತು ಹರಿದ ಬಟ್ಟೆಗಳನ್ನು ಜೋಡಿಸುವ ಸೂಜಿಗೆ ಅದಕ್ಕಿಂತಲೂ ಹೆಚ್ಚಿನ ಮಹತ್ವ ಸಿಗುತ್ತಿದ್ದಿರಬಹುದು. ಆ ವಿವರಗಳೆಲ್ಲಾ ತುಂಬಾ ಸೊಗಸಾಗಿ ಕತೆಯ ಜೊತೆಯಲ್ಲಿ ಮಿಳಿತವಾಗಿದೆ.

ಹೆಣ್ಣೆಂದರೆ ಭೂಮಿಯಲ್ಲ, ಗಂಡಸು ತನಗೆ ಬೇಕಾದ ಬೀಜವನ್ನು ಬಿತ್ತಿ ಬೆಳೆ ಬೆಳೆದುಕೊಳ್ಳುವುದಕ್ಕೆ. ಹೆಣ್ಣು ಒಂದು ಸಮುದ್ರವಿದ್ದಂತೆ. ನೀನು ಯಃಕಶ್ಚಿತ್ ಗಂಡು, ಒಂದು ಸಣ್ಣ ನದಿಯಿದ್ದಂತೆ. ಸಾಗರವ ಸೇರದೆ ನೀನು ಏಕಾಂಗಿಯಾಗಿ ಏನನ್ನೂ ಸಾಧಿಸಲಾರೆ ಅನ್ನುವ ಸಗನೇಮಿಯ ಮಾತು ತಾನು ನಂಬಿಕೊಂಡ ತತ್ವವೆಲ್ಲವೂ ಒಂದು ಕ್ಷಣ ನಿಸ್ಸಾರ ಅಂತ ಅನ್ನಿಸಿ ಬದಲಾವಣೆಗೆ ಹೊಂದಿಕೊಳ್ಳುವ ಬುದ್ಧಮಿತ್ರ ಸಂಸಾರದ ಒಂದು ಸುಂದರ ರೂಪಕವಾಗಿ ಕಾಣಿಸುತ್ತಾನೆ.ಹೆಣ್ಣಿಲ್ಲದೆ ಗಂಡು ಗಂಡಿಲ್ಲದೆ ಹೆಣ್ಣು ಯಾವತ್ತೂ ಪರಿಪೂರ್ಣರಲ್ಲ ಅನ್ನುವ ಪ್ರಕೃತಿಯ ಸಹಜ ಅರಿವನ್ನು ನೀಡುವ ಕಾದಂಬರಿಯ ಈ ಭಾಗ ಅತ್ಯಂತ ಸುಂದರವಾಗಿದೆ.

ಸ್ವಾತಂತ್ರ್ಯ ಅನ್ನುವುದು ಗಾಳಿಯಿದ್ದಂತೆ. ಅದು ಯಥೇಚ್ಛವಾಗಿ ದೊರಕುವಾಗ ಅದರ ಮಹತ್ವ ತಿಳಿಯುವುದಿಲ್ಲ. ಯಾವಾಗ ಉಸಿರಾಡುವ ಗಾಳಿ ಅಪರೂಪವಾಗುತ್ತದೆಯೋ ಆಗಲೇ ಅದು ದೈವದತ್ತ ಕೊಡುಗೆ ಅನ್ನುವ ಸಾಕ್ಷಾತ್ಕಾರವಾಗುತ್ತದೆ.ಜಾಗತೀಕರಣ ಈ ವ್ಯಾಪಾರದ ದಾರಿಯ ಮೂಲಕ ಹೇಗೆ ಸದ್ದಿಲ್ಲದೇ ನಡೆಯಿತು ಅನ್ನುವುದನ್ನು ಹೇಳಲು ಕಟ್ಟಿಕೊಟ್ಟ ಕತೆ ಬಹುವಾಗಿ ಕಾಡುವಂತದ್ದು. ತನ್ನನ್ನು ತಾನು ಮಾರಿಕೊಳ್ಳುವ ಮಧುಮಾಯ, ರಾಜಕೀಯದ ದಾಳವಾಗಿ ಅರಮನೆಯ ಪಂಜರದ ಹಕ್ಕಿಯಾಗುವ ಲೀಹ್ವಾ, ಕಾನಿಷ್ಕ ಮಹಾರಾಜರ ಮಾತಿಗೆ ಕಟ್ಟಿಬಿದ್ದು ಸ್ವತಂತ್ರವಾಗಿ ಆಲೋಚಿಸಲಾಗದ ಜ್ಞಾನಸೇನ…ಹೀಗೆ ಪ್ರಮುಖ ಪಾತ್ರಗಳಲ್ಲಿ ಸ್ವಾತಂತ್ರ್ಯ ಕಳೆದುಕೊಂಡ ಮನುಷ್ಯನ ತಳಮಳ ಸಂದಿಗ್ದತೆಗಳನ್ನು ಅಪೂರ್ವವಾಗಿ ಈ ಕಾದಂಬರಿ ಕಟ್ಟಿಕೊಡುತ್ತದೆ.ಕಳೆದುಕೊಂಡಾಗ ಮಾತ್ರ ವಸ್ತುವಿನ ನೈಜ ಬೆಲೆಯ ಅರಿವಾಗುವುದು. ಆದರೆ ಆಗ ನಿಜಕ್ಕೂ ಕಾಲ ಮಿಂಚಿರುತ್ತದೆ.

ಈ ಕತೆಯನ್ನು ಹೇಳಲು ಲೇಖಕರು ಬಳಸಿದ ಬಾಷೆ ಅತ್ಯಂತ ಆಪ್ತವಾಗಿದೆ. ಬಹುತೇಕ ಪಾತ್ರಗಳ ನಡುವಿನ ಸಂವಾದಗಳಲ್ಲೇ ಸಾಗುವ ಕಾದಂಬರಿ ಓದುಗರನ್ನೂ ಪಾತ್ರಗಳ ಜೊತೆಯಲ್ಲಿ ಅವರ ಯಾವುದೋ ಸಿದ್ಧಾಂತದ ಜೊತೆಯಲ್ಲಿ ಕನೆಕ್ಟ್ ಮಾಡುತ್ತದೆ.ಕೊನೆಯಲ್ಲಿ ಅವಸರವಾಗಿ ಮುಗಿಸಿದಂತೆ ಒಮ್ಮೆ ಅನ್ನಿಸಿದರೂ ಲೇಖಕರಿಗೆ ಮಾತ್ರ ಹೇಳಬೇಕಾದದ್ದು ಎಲ್ಲವೂ ಹೇಳಿ ಆಗಿದೆ ಸುಮ್ಮನೆ ಕತೆ ಹೇಳುವುದರಲ್ಲಿ ಅರ್ಥವಿಲ್ಲ ಅಂತ ಅನ್ನಿಸಿರಬೇಕು, ಅದಕ್ಕಾಗಿ ಕತೆಯನ್ನು ಓದುಗರಲ್ಲಿ ಬೆಳೆಯಲು ಅವಕಾಶ ಮಾಡಿಕೊಟ್ಟು ಕಾದಂಬರಿಯನ್ನು ನಿಲ್ಲಿಸಿದ್ದಾರೆ.

- ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

MORE NEWS

‘ಈ ಹೊತ್ತಿಗೆ’ ೧೨ನೇ ವಾರ್ಷಿಕೋತ್ಸವ ‘ಹೊನಲು’ ಮಾರ್ಚ್ ೯ರಂದು ಬೆಂಗಳೂರಿನಲ್ಲಿ

07-03-2025 ಬೆಂಗಳೂರು

ಬೆಂಗಳೂರು: ‘ಈ ಹೊತ್ತಿಗೆ’ ಮಾಸಪತ್ರಿಕೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮ ಜೆ ...

MBIFL-2025; ಅಫ್ಘಾನಿಸ್ತಾನ ಚೀನಾ ದೃಢ ಹೆಜ್ಜೆ; ಭಾರತದ ಪಾಲಿಗೆ ನುಂಗಲಾರದ ತುತ್ತು

08-02-2025 ತಿರುವನಂತಪುರ

`ಬುಕ್ ಬ್ರಹ್ಮ’ ವಿಶೇಷ ವರದಿ ತಿರುವನಂತಪುರ: ೨೦೨೧ರ ಆಗಸ್ಟ್ ೮ ರಿಂದ ೧೭ರ ಅವಧಿಯಲ್ಲಿ ಅಫ್ಘಾನಿಸ್ತಾನ ಸರ್ಕಾ...

ಇದರಲ್ಲಿ ನಾಡಜನರ ಪಾಲುಕೂಡ ಇದೆ

23-12-2024 ಬೆಂಗಳೂರು

“ಮಾತೃಭಾಷೆ, ಮಾತೃಭಾಷೆಯಲ್ಲಿನ ಕಲಿಕೆ ಅದರ ಅನಿವಾರ್ಯ ಅವಶ್ಯಕತೆ, ಮಹತ್ವ ಕುರಿತು ಇಲ್ಲಿನ ಎಲ್ಲ ಲೇಖನಗಳು ಹಲವು ನ...