ಇದರಲ್ಲಿ ನಾಡಜನರ ಪಾಲುಕೂಡ ಇದೆ

Date: 23-12-2024

Location: ಬೆಂಗಳೂರು


“ಮಾತೃಭಾಷೆ, ಮಾತೃಭಾಷೆಯಲ್ಲಿನ ಕಲಿಕೆ ಅದರ ಅನಿವಾರ್ಯ ಅವಶ್ಯಕತೆ, ಮಹತ್ವ ಕುರಿತು ಇಲ್ಲಿನ ಎಲ್ಲ ಲೇಖನಗಳು ಹಲವು ನಿಟ್ಟಿನಿಂದ ಅವಲೋಕಿಸಿವೆ,” ಎನ್ನುತ್ತಾರೆ ವೆಂಕಟೇಶ ಮಾಚಕನೂರ ಅವರು ತಮ್ಮ “ಶಿಕ್ಷಣದಲ್ಲಿ ಕನ್ನಡ ಮಾಧ್ಯಮ” ಕೃತಿಗೆ ಬರೆದ ಲೇಖಕರ ಮಾತು.

ಸಮಾಜಮುಖಿ ಮಾಸಿಕ ಪತ್ರಿಕೆ 'ಶಿಕ್ಷಣ ಮಾಧ್ಯಮದಲ್ಲಿ ಮಾತೃಭಾಷೆ ಬೇಕೆಂಬ ವಾದಕ್ಕೆ ಜಾಗತಿಕ-ವೈಚಾರಿಕ ತಳಹದಿಯೇನು..?' ಎಂಬ ಮುಖ್ಯ ಪ್ರಶ್ನೆಯೊಂದಿಗೆ ಕಲಿಕಾ ಮಾಧ್ಯಮದ ವಿವಿಧ ಆಯಾಮಗಳ ಕುರಿತು ಯುವ ಲೇಖಕರಿಂದ ಲೇಖನಗಳನ್ನು ಆಹ್ವಾನಿಸಿತ್ತು. ಅದಕ್ಕೆ ಪ್ರತಿಯಾಗಿ ಬಂದ ಇನ್ನೂರಕ್ಕೂ ಹೆಚ್ಚು ಲೇಖನಗಳಲ್ಲಿ ಬಹುಮಾನಿತ ಐದು ಲೇಖನಗಳನ್ನು ೨೦೨೪ರ ನವಂಬರ್ ತಿಂಗಳ ಸಮಾಜಮುಖಿ ಸಂಚಿಕೆಯಲ್ಲಿ ಪ್ರಕಟಿಸಿತು. ಅವುಗಳೊಂದಿಗೆ ಕನ್ನಡದ ಪ್ರಬುದ್ಧ ಬರಹಗಾರರ ಕೆಲವು ಲೇಖನಗಳನ್ನು ಕೂಡ ನವಂಬ‌ರ್ ಮತ್ತು ಡಿಸೆಂಬರ್ ತಿಂಗಳ ಸಂಚಿಕೆಗಳಲ್ಲಿ ಪ್ರಕಟಿಸಿತು. ಆ ಎಲ್ಲ ಲೇಖನಗಳು ಮತ್ತು ಅದೇ ವಿಷಯ ಕುರಿತು ಹಿಂದಿನ ಸಂಚಿಕೆಗಳಲ್ಲಿ ಬಂದ ಕೆಲವು ಲೇಖನಗಳನ್ನು ಒಳಗೊಂಡು ಈ ಕೃತಿ ರೂಪಗೊಂಡಿದೆ. ಮಾತೃಭಾಷೆ, ಮಾತೃಭಾಷೆಯಲ್ಲಿನ ಕಲಿಕೆ ಅದರ ಅನಿವಾರ್ಯ ಅವಶ್ಯಕತೆ, ಮಹತ್ವ ಕುರಿತು ಇಲ್ಲಿನ ಎಲ್ಲ ಲೇಖನಗಳು ಹಲವು ನಿಟ್ಟಿನಿಂದ ಅವಲೋಕಿಸಿವೆ.

ಮಾತೃಭಾಷೆ, ಪರಿಸರದ ಭಾಷೆಯಲ್ಲಿನ ಕಲಿಕೆನಮ್ಮ ಶಾಲೆಗಳಲ್ಲಿ ತೀವ್ರಗತಿಯಲ್ಲಿ ಹಿನ್ನೆಲೆಗೆ ಸರಿಯುತ್ತಿದೆ. ಅದರ ಸ್ಥಳವನ್ನು ಆಂಗ್ಲಭಾಷೆ ಆವರಿಸಿಕೊಳ್ಳುತ್ತಿದೆ. ಗುಣಮಟ್ಟದ ಶಿಕ್ಷಣಕ್ಕೆ ಆಂಗ್ಲಮಾಧ್ಯಮ ಪರ್ಯಾಯ ವಾಗಿರುವುದೊಂದು ವಿಪರ್ಯಾಸದ ಬೆಳವಣಿಗೆ ಆಗಿದೆ. ಶಾಲೆಗಳಲ್ಲಿ ಕ್ಷೀಣಿಸುತ್ತಿರುವ ನಮ್ಮ ಭಾಷೆಯ ಆರ್ತನಾದ ಈ ಲೇಖನಗಳಲ್ಲಿ ಹೊರಹೊಮ್ಮಿದೆ.

ಅದರಲ್ಲಿ ಬಲವಂತವಾಗಿ ಆಂಗ್ಲಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಆರ್ತನಾದವೂ ಸೇರಿಕೊಂಡಿದೆ. ಶಾಲೆಗಳಲ್ಲಿ ಉಳಿಯದ ನಮ್ಮ ನಾಡಭಾಷೆ ಅಥವಾ ಮಾತೃಭಾಷೆ ಆಡುಭಾಷೆಯಾಗಿ ಮಾತ್ರ ಉಳಿಯುವ ದಿನಗಳು ದೂರವಿಲ್ಲ ಎಂದೆನಿಸುತ್ತಿದೆ. ಕನ್ನಡಮಾಧ್ಯಮ ಶಾಲೆಗಳನ್ನು ಎಲ್ಲ ರೀತಿಯಿಂದ ಬಲಪಡಿಸಿ ನಾಡನುಡಿಯನ್ನು ಸಂರಕ್ಷಿಸಬೇಕಾದ ಸರ್ಕಾರವೇ ಮುಂದಾಗಿ ಆಂಗ್ಲಮಾಧ್ಯಮ ತರಗತಿಗಳನ್ನು ಆರಂಭಿಸುತ್ತಿರುವುದು ಈ ಆತಂಕ ಹೆಚ್ಚುವಂತೆ ಮಾಡಿದೆ. ಇದರಲ್ಲಿ ನಾಡಜನರ ಪಾಲುಕೂಡ ಇದೆ. ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಅಸ್ಮಿತೆಯ ಪ್ರತೀಕ. ಅದರ ಅಳಿವು, ಉಳಿವು, ಕಲಿಕೆಯ ವಿವಿಧ ಆಯಾಮಗಳನ್ನು ಒಳಗೊಂಡ ಇಲ್ಲಿನ ಲೇಖನಗಳು ಸ್ವಯಂವೇದ್ಯ ಸಮಾಜಮುಖಿಯಲ್ಲಿ ಬಂದ ಲೇಖನಗಳು ಕೃತಿ ರೂಪದಲ್ಲಿ ಬಂದರೆ ಹೆಚ್ಚು ಜನರಿಗೆ ತಲುಪಬಹುದೆಂಬ ನನ್ನ ಹಂಬಲಕ್ಕೆ ಬೆಂಬಲವಾಗಿ, ಸಂಪಾದಕರಾದ ಚಂದ್ರಕಾಂತ ವಡ್ಡು ಅವರು ಎಲ್ಲ ರೀತಿಯ ಸಹಮತ ವ್ಯಕ್ತಪಡಿಸಿ, ಎಲ್ಲ ಲೇಖನಗಳನ್ನು ಒದಗಿಸಿ ಕೃತಿರೂಪದಲ್ಲಿ ಬರಲು ಸಹಕರಿಸಿದ್ದಾರೆ. ಅವರಿಗೂ, ಲೇಖನಗಳನ್ನು ಪ್ರಕಟಿಸಲು ಅನುಮತಿ ನೀಡಿದ ಎಲ್ಲ ಲೇಖಕರಿಗೂ ಅನಂತ ಧನ್ಯವಾದಗಳು.

ನಾಡು ನುಡಿ ಕುರಿತು ಉದ್ದಕ್ಕೂ ಅತೀವ ಕಳಕಳಿಯನ್ನು ವ್ಯಕ್ತಪಡಿಸುತ್ತಾ,ಆ ದಿಶೆಯಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತ ಬಂದಿರುವ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಅವರ ಕಾಳಜಿ ಮತ್ತು ಮುತುವರ್ಜಿಯಿಂದಾಗಿ ಈ ಕೃತಿ ಅತಿ ಕಡಿಮೆ ಕಾಲಾವಧಿಯಲ್ಲಿ ಪ್ರಕಟಗೊಳ್ಳಲು ಸಾಧ್ಯವಾಗಿದೆ. ಅವರಿಗೂ ಮತ್ತು ಕ್ಷಿಪ್ರಗತಿಯಲ್ಲಿ ಇಲ್ಲಿನ ಲೇಖನಗಳನ್ನು ಪುಸ್ತಕ ರೂಪಕ್ಕೆ ಅಳವಡಿಸಿ ಕೊಟ್ಟ ಟಿ.ಎಲ್. ವೆಂಕಟೇಶ್ ಅವರಿಗೂ, ಮುಖಪುಟ ವಿನ್ಯಾಸ ಮಾಡಿಕೊಟ್ಟ ಸುಧಾಕರ ದರ್ಬೆಯವರಿಗೂ ಅನಂತ ನಮನಗಳು. ಇಲ್ಲಿನ ಲೇಖನಗಳು ಸ್ವಲ್ಪಮಟ್ಟಿಗಾದರು ಕನ್ನಡ ಮನಸ್ಸುಗಳನ್ನು ತಟ್ಟಿದರೆ ನಮ್ಮ ಶ್ರಮ ಸಾರ್ಥಕ

- ವೆಂಕಟೇಶ ಮಾಚಕನೂರ

MORE NEWS

ಸಾಹಿತ್ಯದಲ್ಲಿ ಪತ್ತೇದಾರಿ ಕಥೆ-ಕಾದಂಬರಿಗಳ ಪ್ರಸ್ತುತತೆ ಏನು?

02-12-2024 ಬೆಂಗಳೂರು

“ಈ ಕಾದಂಬರಿ ತನ್ನ ೧೦೩ ಪುಟಗಳ ಉದ್ದಕ್ಕೂ ಕುತೂಹಲ ಮೂಡಿಸಿಕೊಂಡು ಹೋಗುತ್ತದೆ. ಇಲ್ಲಿ ಪತ್ತೇದಾರಿ ಕಥೆ ಮಾತ್ರವಲ್ಲ...

ಇದು ಕಾದಂಬರಿಯೇ ಹೊರತು, ಚರಿತ್ರೆಯ ಮಾಹಿತಿ ಕೋಶವಲ್ಲ

16-11-2024 ಬೆಂಗಳೂರು

“ಚರಿತ್ರೆಯ ವಿವರಗಳು ಭಿತ್ತಿಯಾಗಿದ್ದು, ಅದರ ಮೇಲೆ ಮಹಾನ್ ಚಕ್ರವರ್ತಿ ಕೃಷ್ಣದೇವರಾಯನ ಚಾರಿತ್ರ್ಯ, ಅವನ ಪರಿವಾರದ...

ಈ ಕಥಾ ಸಂಕಲನದಲ್ಲಿ ದಟ್ಟ ಕಾಡಿನ ರೌದ್ರ ವರ್ಣನೆ ಓದುಗರನ್ನು ಮೋಹಗೊಳಿಸುತ್ತದೆ‌

22-10-2024 ಬೆಂಗಳೂರು

“ಈ ಸಂಕಲನ ಮಲೆಯ ಮಹದೇಶ್ವರದ ತಪ್ಪಲಿನ ಗುಡ್ಡಗಾಡು ಜನರ ಬದುಕುಗಳ ಚಿತ್ರಣಗಳನ್ನು ಬಲು ನಿಖರವಾಗಿ ಕೊಡುತ್ತದೆ&rdqu...