ಮಕ್ಕಳಿಗಾಗಿ ಬರೆಯುವುದೆಂದರೆ ಮಕ್ಕಳಾಟವಲ್ಲ


“ಎಲ್ಲದಕ್ಕಿಂತ ಮುಖ್ಯವಾಗಿ ಇವೆಲ್ಲ ಕಾದಂಬರಿಯ ಮುಖ್ಯ ಕಥಾನಕಕ್ಕೆ ಪೂರಕ ಅಂಶಗಳಾಗಿ ಬಂದುಹೋಗುವುದರಿಂದ, ಓದುಗರಿಗೆ ಅರಿವು ಮತ್ತು ಓದಿನ ಖುಷಿಗಳೆರಡನ್ನೂ ನೀಡಬಲ್ಲದು,” ಎನ್ನುತ್ತಾರೆ ಪ್ರಸಾದ್ ನಾಯ್ಕ್ ಅವರು ತಮ್ಮ "ಜಿಪ್ಸಿ ಜೀತು" ಕೃತಿಗೆ ಬರೆದ ಲೇಖಕರ ಮಾತು.

ಅಂಕಣ, ಅನುವಾದ, ಲೇಖನ, ಕತೆಗಳೆಂದು ಹಿರಿಯರ ಸಾಹಿತ್ಯಲೋಕದಲ್ಲಿ ಅಲೆದಾಡುತ್ತಿದ್ದ ನಾನು ಮಕ್ಕಳ ಸಾಹಿತ್ಯಲೋಕಕ್ಕೆ ಎದುರಾಗಿದ್ದು ಒಂದು ಆಕಸ್ಮಿಕವೇ. ಅಸಲಿಗೆ 2023 ರ ವರ್ಷವು ನನ್ನ ಮಟ್ಟಿಗೆ ಹಲವು ಆರಂಭಗಳಿಗೆ ನಾಂದಿ ಹಾಡಿತು. ಮೊದಲನೆಯದಾಗಿ ಮನೆಗೂ, ಮಡಿಲಿಗೂ ಸಂಭ್ರಮದ ಸಾಕಾರಮೂರ್ತಿಯಾಗಿ ಮಗಳು ಬಂದಳು. 2023 ರಲ್ಲಿ ಬಹುರೂಪಿ ಪ್ರಕಾಶನ ಸಂಸ್ಥೆಗಾಗಿ ಸದಭಿರುಚಿಯ ಎರಡು ಮಕ್ಕಳ ಕೃತಿಗಳನ್ನು ಅನುವಾದಿಸಿದೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ದೆಹಲಿ ಘಟಕದ ಪದಾಧಿಕಾರಿಗಳಲ್ಲೊಬ್ಬನಾಗಿ ಒಂದಿಷ್ಟು ಕೆಲಸ ಮಾಡಿದೆ. ಸುಮ್ಮನೆ ಖುಷಿಗೆಂದು ಮಕ್ಕಳಿಗಾಗಿ ಒಂದೆರಡು ಪುಸ್ತಕಗಳನ್ನು ಬರೆದು ಹಸ್ತಪ್ರತಿಗಳನ್ನು ಸಿದ್ಧಮಾಡಿಟ್ಟುಕೊಂಡೆ. ಹೀಗೆ ಮಕ್ಕಳ ಸಾಹಿತ್ಯಲೋಕದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಅಂದುಕೊಳ್ಳುತ್ತಿರುವಂತೆಯೇ ಬೆರಳೆಣಿಕೆಯ ಕೆಲ ಪುಟ್ಟ ಹೆಜ್ಜೆಗಳನ್ನಿಟ್ಟು ಏನೇನೋ ಕಸರತ್ತು ಮಾಡಿದೆ. ಈ ಗುಂಗಿನಲ್ಲಿ ಒಂದು ಕಿರುಕಾದಂಬರಿಯೂ ಸಿದ್ಧವಾಯಿತು.

ಮಕ್ಕಳಿಗಾಗಿ ಬರೆಯುವುದೆಂದರೆ ಮಕ್ಕಳಾಟವಲ್ಲ ಎಂದು ಹಿಂದೊಮ್ಮೆ ನಾನೇ ಲೇಖನವೊಂದರಲ್ಲಿ ಬರೆದ ನೆನಪು. ಅದು ಈ ಕಾದಂಬರಿಯ ಸೃಷ್ಟಿಯಲ್ಲಿ ಮತ್ತೊಮ್ಮೆ ನಿಜವಾಯಿತು. ಇನ್ನು ಈ ಕ್ಷೇತ್ರದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ನನ್ನಂತಹ ಹವ್ಯಾಸಿ ಬರಹಗಾರನಿಗೆ ಅದು ಸಹಜವೂ ಆಗಿತ್ತು. ಕಾದಂಬರಿಯೆಂದರೆ ಕಗ್ಗಂಟಿನಂತಿರಬೇಕು;

ಸಂಕೀರ್ಣ ಕತೆಗಳ, ಕಥಾಪಾತ್ರಗಳ ಅದ್ಭುತ ಕಸೂತಿಯಂತಿರಬೇಕು ಎಂಬಂತಿನ ಭ್ರಮೆಗಳನ್ನೆಲ್ಲ ನನ್ನ ಮಟ್ಟಿಗೆ ತೊಡೆದುಹಾಕಿದ್ದು ಖ್ಯಾತ ಲೇಖಕ ಪೌಲೋ ಕೊಯೆಲೋ. ಹಾಗೆ ನೋಡಿದರೆ ಪೌಲೋ ವಿಶೇಷವಾಗಿ ಮಕ್ಕಳಿಗಾಗಿ ಅನ್ನುವಂಥದ್ದೇನೂ ಬರೆದಿಲ್ಲ. ಆದರೆ ದೊಡ್ಡವರಿಗಾಗಿ ಕೂಡ ಸರಳ, ಚಂದದ ಕತೆಯೊಂದನ್ನು ಕಾದಂಬರಿಯ ರೂಪದಲ್ಲಿ ಕಟ್ಟಿಕೊಡಲು ಸಾಧ್ಯವಿದೆ ಎಂಬುದು ಸೀಮಿತ ಓದಿನ ಹಿನ್ನೆಲೆಯಲ್ಲಿ ನನಗೆ ಮನದಟ್ಟಾಗಿದ್ದು ಈತನಿಂದಲೇ.

ಹೀಗಿರುವಾಗ ಮಕ್ಕಳಿಗೆ ಮತ್ತು ಗಂಭೀರ ಓದಿನತ್ತ ಹೊಸದಾಗಿ ಹೊರಳಿಕೊಳ್ಳುತ್ತಿರುವ ಹರೆಯದ ಉತ್ಸಾಹಿ ಓದುಗರಾಗಿ ಕಾದಂಬರಿಯೊಂದನ್ನು ಸಿದ್ಧಪಡಿಸುವಾಗ ಯಾವ್ಯಾವ ಅಂಶಗಳನ್ನು ಪರಿಗಣಿಸಬೇಕು ಎನ್ನುವುದು ಕೂಡ ಚಿಂತನಾರ್ಹ ಅಂಶವಾಗಿತ್ತು. ಇದರಂತೆ ಈ ವಯಸ್ಸಿನ ಮಕ್ಕಳಿಗೆ ಬದುಕಿನ ಬಗೆಗಿರುವ ಕುತೂಹಲ, ಅವರ ಕನಸುಗಳು, ಮಹಾತ್ವಾಕಾಂಕ್ಷೆ, ಸುತ್ತಮುತ್ತಲಿನ ಸಾಮಾಜಿಕ ಅಂಶಗಳು, ನಿರಂತರವಾಗಿ ಬದಲಾಗುತ್ತಿರುವ ತಂತ್ರಜ್ಞಾನ, ಸೋಷಿಯಲ್ ಮೀಡಿಯಾ, ಸಾಮಾಜಿಕ ಜವಾಬ್ದಾರಿಗಳು... ಹೀಗೆ ಹಲವು ಛಾಯೆಗಳನ್ನು ಈ ಕಾದಂಬರಿಯಲ್ಲಿ ಓದುಗರು ಕಾಣಬಹುದು. ಹಾಗಂತ ಇವಿಷ್ಟೇ ಈ ಕಾದಂಬರಿಯಲ್ಲಿಲ್ಲ. ನೀತಿಕತೆಯಂತೆ ಓದಿಸಿಕೊಂಡು ಹೋಗುವ ನೀರಸ ಕಥಾನಕವೂ ಇದಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಇವೆಲ್ಲ ಕಾದಂಬರಿಯ ಮುಖ್ಯ ಕಥಾನಕಕ್ಕೆ ಪೂರಕ ಅಂಶಗಳಾಗಿ ಬಂದುಹೋಗುವುದರಿಂದ, ಓದುಗರಿಗೆ ಅರಿವು ಮತ್ತು ಓದಿನ ಖುಷಿಗಳೆರಡನ್ನೂ ನೀಡಬಲ್ಲದು ಎಂಬ ನಂಬಿಕೆ ನನ್ನದು. ಹೀಗಾಗಿ ಯಾವುದಕ್ಕೂ ನೀವೊಮ್ಮೆ ಓದಿ ನೋಡಿ ಎಂದಷ್ಟೇ ಸದ್ಯ ಹೇಳಬಲ್ಲೆ.

ಈ ಕಾದಂಬರಿಯ ಕಥಾನಾಯಕನಾಗಿರುವ ಜೀತು ನನ್ನದೇ ಒಂದು ಆಲ್ಬರ್ ಇಗೋ ಎಂಬಂತೆ ನನ್ನನ್ನು ಆಗಾಗ ಕಾಡಿದ್ದಾನೆ. ಇಲ್ಲಿರುವ ಪಾತ್ರಗಳೊಂದಿಗೆ ಮುಖಾಮುಖಿಯಾಗುತ್ತಾ ನಿಮಗೆ ನಿಮ್ಮದೇ ಬಾಲ್ಯವು ನೆನಪಾಗಬಹುದು. ನಿಮ್ಮ ಗೆಳೆಯರ ಬಳಗದ ಜೊತೆಗೆ ಕಳೆದ

ಕ್ಷಣಗಳ ನೆನಪು ಹಸಿರಾಗಬಹುದು. ಇನ್ನು ಈ ಕಾದಂಬರಿಯನ್ನು ಓದುತ್ತಿರುವ ನೀವು ಜೆನ್-ಝೀ ಪೀಳಿಗೆಯವರಾಗಿದ್ದರೆ ಇದು ನಿಮ್ಮದೇ ಕತೆ ಅಂತಲೂ ನಿಮಗೆ ಅನಿಸಬಹುದು. ಅಷ್ಟಕ್ಕೂ ಇಂಟರ್ನೆಟ್ ನಮ್ಮ ಬದುಕಿಗೆ ಬಂದಾಗಿನಿಂದ ಹಳ್ಳಿಗಳು ಮತ್ತು ನಗರಗಳ ನಡುವೆ ಇಂದು ಹೆಚ್ಚಿನ ವ್ಯತ್ಯಾಸಗಳೇನೂ ಉಳಿದಿಲ್ಲ. ಹೀಗಾಗಿ ಈ ಕಾದಂಬರಿಯಲ್ಲಿ ಬಂದುಹೋಗುವ ಹಳ್ಳಿ ಮತ್ತು ಮಹಾನಗರಗಳೆಂಬ ವೇದಿಕೆಗಳು ಎಲ್ಲರನ್ನೂ ಏಕಕಾಲದಲ್ಲಿ ಒಳಗೊಳ್ಳುವಂಥದ್ದು ಎಂಬ ವಿಶ್ವಾಸವು ನನಗಿದೆ.

ಅಂದಹಾಗೆ ಇದು ನನ್ನ ಮೊದಲ ಕಾದಂಬರಿ. ಅದರಲ್ಲೂ ಹರೆಯದ ಮಕ್ಕಳಿಗಾಗಿ ಬರೆದಿರುವ ಮತ್ತು ಪ್ರಕಟಣೆಯನ್ನು ಕಾಣುತ್ತಿರುವ ಮೊದಲ ಸ್ವತಂತ್ರ, ಸೃಜನಶೀಲ ಕೃತಿ. ಹೀಗಾಗಿ ಸಂತೋಷ, ಉತ್ಸಾಹ, ಆತಂಕ, ಕುತೂಹಲಗಳೆಲ್ಲವೂ ನನ್ನಲ್ಲಿ ದಂಡಿಯಾಗಿವೆ. ಅಲ್ಲದೆ ಈ ಕೃತಿಯೊಂದಿಗೆ ಹೊಸ ಓದುಗರ ವರ್ಗವೊಂದಕ್ಕೂ ನಾನು ತೆರೆದುಕೊಳ್ಳುತ್ತಿರುವುದು ವೈಯಕ್ತಿಕ ನೆಲೆಯಲ್ಲಿ ನನಗೆ ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಕಾದಂಬರಿಯನ್ನು ಓದಿ ಒಂದು ಇ-ಮೈಲ್ ಅಥವಾ ಪತ್ರದ ಮುಖಾಂತರ ನಿಮಗೇನನ್ನಿಸಿತು ಎಂಬುದನ್ನು ತಿಳಿಯಲು ಕಾತರನಾಗಿದ್ದೇನೆ.

ನನ್ನ ಬಾಳಸಂಗಾತಿ ಈ ಕಾದಂಬರಿಯ ರೂಪುಗೊಳ್ಳುವಿಕೆಯ ಹಂತದಲ್ಲಿ ಎಂದಿನಂತೆ ನನ್ನ ಜೊತೆಯಾಗಿದ್ದಾರೆ. ಇನ್ನು ಮಕ್ಕಳ ಸಾಹಿತ್ಯಲೋಕದಲ್ಲಿ ಗಮನಾರ್ಹ ಹೆಜ್ಜೆಗಳನ್ನಿಡುತ್ತಿರುವ ಹರಿವು ಬುಕ್ಸ್ ಸಂಸ್ಥೆಯು ಈ ಕಾದಂಬರಿಯನ್ನು ಪ್ರಕಟಿಸಲು ಮುಂದಾಗಿದ್ದು ನನಗೆ ಮತ್ತಷ್ಟು ಧೈರ್ಯವನ್ನು ತುಂಬಿದೆ. ಮಕ್ಕಳಿಗಾಗಿ ಇನ್ನೊಂದಿಷ್ಟು ಬರೆಯಬಹುದು ಎಂಬ ಆತ್ಮವಿಶ್ವಾಸವನ್ನು ನನ್ನಲ್ಲಿ ಮೂಡಿಸಿದೆ. ಇವರೆಲ್ಲರಿಗೂ ನಾನು ಋಣಿ. ಯಂಗ್ ಅಡಲ್ಸ್ ಫಿಕ್ಷನ್ ಎಂಬ ಪ್ರಕಾರವು ಪಶ್ಚಿಮದ ದೇಶಗಳಲ್ಲಿ ಬಹಳ ಜನಪ್ರಿಯವಾದ ಸಾಹಿತ್ಯಪ್ರಕಾರಗಳಲ್ಲೊಂದು. ಆದರೆ ಕನ್ನಡದಲ್ಲಿ, ಈ ಪ್ರಕಾರದಲ್ಲಿ ಸೃಜನಶೀಲ ಕೃತಿಗಳು ಬಂದಿರುವುದು ನನಗೆ ಗೊತ್ತಿರುವಂತೆ

ಕಮ್ಮಿಯೇ. ಇದರೊಂದಿಗೆ ಕನ್ನಡದ ಈ ಪುಟ್ಟ ಲೀಗಿನಲ್ಲಿ ನಾನೂ ಸೇರಿಕೊಳ್ಳುತ್ತಿರುವುದು ನನಗೆ ಖುಷಿಯ ಮತ್ತು ಹೆಮ್ಮೆಯ ಸಂಗತಿ.

"ಜಿಪ್ಸಿ ಜೀತು" ಒಂದೊಳ್ಳೆಯ ಓದಿನ ಅನುಭವವನ್ನು ನಿಮಗೆ ನೀಡಲಿ ಎಂಬ ಹಾರೈಕೆ ಮತ್ತು ನಿರೀಕ್ಷೆಯೊಂದಿಗೆ...

- ಪ್ರಸಾದ್ ನಾಯ್ಕ್

MORE FEATURES

ಅಕ್ಷರಗಳ ಸಖ್ಯ ನಿತ್ಯ ಸಿಗುವಂತೆ ವಿಧಿ ಹರಸಲಿ

04-01-2025 ಬೆಂಗಳೂರು

“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...

ಮೌನಂ ನ ಸಮ್ಮತಿ ಲಕ್ಷಣಂ

04-01-2025 ಬೆಂಗಳೂರು

“ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್...

ಬೆಂಗಳೂರು ಸಹಾನುಭೂತಿಯ ಬಂಡವಾಳಶಾಹಿಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ

04-01-2025 ಬೆಂಗಳೂರು

“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿ...