"ಕಾದಂಬರಿ ವಿಶಿಷ್ಟ ಎನಿಸಲು ಪ್ರಮುಖ ಕಾರಣ ಕಾದಂಬರಿಯನ್ನು ಸರಳಾದೇವಿಯೊಂದಿಗೆ ಆರಂಭಿಸಿರುವುದು. ಮಹಾರಾಣಿಯ ಚರಿತೆ ಅಥವಾ ರಾಜವಂಶದ ಚರಿತೆ ಒಬ್ಬ ಪ್ರಜೆಯ ಮೂಲಕ ತೆರೆದುಕೊಳ್ಳುವುದು ಧ್ವನಿಪೂರ್ಣವಾಗಿದೆ. ರಾಜರ ಚರಿತ್ರೆ ಎಂದೊಡನೆ ಹೆಚ್ಚಾಗಿ ಅದು ರಾಜರ ಕಣ್ಣಿನಿಂದ ನೋಡುವಂತೆಯೇ ಚಿತ್ರಿತವಾಗುತ್ತದೆ," ಎನ್ನುತ್ತಾರೆ ಜಗದೀಶ ಶರ್ಮಾ ಸಂಪ. ಅವರು ಗಜಾನನ ಶರ್ಮ ಅವರ ‘ಕೆಂಪನಂಜಮ್ಮಣ್ಣಿ’ ಕೃತಿ ಕುರಿತು ಬರೆದ ವಿಮರ್ಶೆ.
ಗಜಾನನಶರ್ಮರ ಹೊಸ ಕಾದಂಬರಿ ಭಾರತ ಕಂಡ ಮಹೋನ್ನತ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಮಹಾರಾಣಿ ಕೆಂಪನಂಜಮ್ಮಣ್ಣಿ ಅಥವಾ ಶ್ರೀಮದ್ ವಾಣೀವಿಲಾಸ ಸನ್ನಿಧಾನ ಅವರ ಅನುಪಮ ಕೊಡುಗೆಯ ಅಸದೃಶ ಚಿತ್ರಣ ಇದು. ಮಹಾರಾಣಿಯವರ ವ್ಯಕ್ತಿತ್ವದಷ್ಟೇ ಕಾದಂಬರಿಯೂ ಎತ್ತರವೇ.
ಈ ಕೃತಿ ನನಗೆ ಯಾಕೆ ಮಹತ್ತ್ವದ್ದು ಅನ್ನಿಸಿತು ಎನ್ನುವುದಕ್ಕೆ ಇಲ್ಲಿ ಕೆಲವು ಕಾರಣ ಕೊಟ್ಟಿದ್ದೇನೆ. ಇವಲ್ಲದ ಇನ್ನೂ ಅನೇಕ ಕಾರಣಗಳೂ ಇವೆ - ಕಾದಂಬರಿ ನನಗೆ ಇಷ್ಟವಾಗಲು.
1. ಪ್ರಜೆಯ ಕಣ್ಣಲ್ಲಿ ಮಹಾರಾಣಿ
ಕಾದಂಬರಿ ವಿಶಿಷ್ಟ ಎನಿಸಲು ಪ್ರಮುಖ ಕಾರಣ ಕಾದಂಬರಿಯನ್ನು ಸರಳಾದೇವಿಯೊಂದಿಗೆ ಆರಂಭಿಸಿರುವುದು. ಮಹಾರಾಣಿಯ ಚರಿತೆ ಅಥವಾ ರಾಜವಂಶದ ಚರಿತೆ ಒಬ್ಬ ಪ್ರಜೆಯ ಮೂಲಕ ತೆರೆದುಕೊಳ್ಳುವುದು ಧ್ವನಿಪೂರ್ಣವಾಗಿದೆ. ರಾಜರ ಚರಿತ್ರೆ ಎಂದೊಡನೆ ಹೆಚ್ಚಾಗಿ ಅದು ರಾಜರ ಕಣ್ಣಿನಿಂದ ನೋಡುವಂತೆಯೇ ಚಿತ್ರಿತವಾಗುತ್ತದೆ. ಒಬ್ಬ ರಾಜ ಒಳ್ಳೆಯವನೋ ಕೆಡುಕನೋ ಎಂದು ನಿರ್ಣಯವಾಗಬೇಕಾದ್ದು ಪ್ರಜೆಯ ಕಣ್ಣೋಟದಲ್ಲಿ. ಇದು ಕೃತಿಕಾರರ ಆಶಯ. ಇದನ್ನೇ ಅವರು ಇಡಿಯ ಕೃತಿಯಲ್ಲಿ ಮಾಡಿರುವುದು. ಚೆನ್ನಭೈರಾದೇವಿಯಲ್ಲಿಯೂ ಮೊದಲು ಪ್ರಜೆಯೊಬ್ಬಳಿಂದಲೇ ಅವರು ಕಾದಂಬರಿಯನ್ನು ಆರಂಭಿಸುತ್ತಾರೆ. ಈ ಅಂಶ ಗಮನಾರ್ಹವಾದ ಸಂಗತಿ ನನ್ನ ದೃಷ್ಟಿಯಲ್ಲಿ.
2. ಬ್ರಿಟಿಷ್ ಆಡಳಿತದ ಪರಿಚಯ
ಕಾದಂಬರಿ ಉಪಯುಕ್ತ ಎನ್ನಿಸಲು ಕಾರಣ ಇದು ಕಟ್ಟಿಕೊಡುವ ಆಂಗ್ಲರ ಆಡಳಿತ ವೈಖರಿ. ಅನ್ಯಾಕ್ರಾಂತತೆ, ಅವರ ಕ್ರೌರ್ಯ, ದರ್ಪ, ಅನ್ಯಾಯ ಇವೆಲ್ಲ ನೋವಿನ ನಡುವೆಯೂ ಅವರಿಂದ ನಡೆದ ಅನೇಕ ಒಳಿತಿನ ಕಾರ್ಯಗಳೆಡೆ ನಾವು ದೃಷ್ಟಿ ಹರಿಸಬೇಕು. ಅದನ್ನು ಈ ಕೃತಿ ಮಾಡುತ್ತದೆ. ಅದರಲ್ಲಿಯೂ ಕೆಲವು ಆಂಗ್ಲ ಅಧಿಕಾರಿಗಳ ಕೊಡುಗೆಗಳನ್ನು ಗಮನಿಸಿದಾಗ ಈ ಕೋನದಲ್ಲಿ ಆ ಕಾಲವನ್ನು ನೋಡಲು ಈ ಕೃತಿ ಸಹಾಯಕಾಗುತ್ತದೆ.
3. ಮೈಸೂರು ಅರಸು ಮನೆತನದ ಕೊಡುಗೆ
ಕಾದಂಬರಿ ಹೆಮ್ಮೆ ತರುವುದು ಮೈಸೂರು ಆಳರಸರು ಕರ್ನಾಟಕಕ್ಕೆ ಕೊಟ್ಟ ಕೊಡುಗೆಗಳನ್ನು ಇದು ನಿರೂಪಿಸಿದ ಕಾರಣಕ್ಕೆ. ಆಧುನಿಕ ಕರ್ನಾಟಕದ ನಿರ್ಮಿತಿಯಲ್ಲಿ ಶತಮಾನದ ಹಿಂದೆ ಅವರು ಯೋಚಿಸಿದ್ದು ಮತ್ತು ಕಾರ್ಯ ನಡೆಸಿದ್ದು ಅಪೂರ್ವ. ಅದನ್ನು ಕಾದಂಬರಿ ಚೆನ್ನಾಗಿ ಮನದಟ್ಟು ಮಾಡಿ ಆ ಮನೆತನದ ಬಗ್ಗೆ ಗೌರವ ಮೂಡಿಸುತ್ತದೆ.
4. ಮಹಾರಾಣಿಯೊಬ್ಬಳ ಮಹತ್ಸಾಧನೆ
ವಿಚಿತ್ರ ಸನ್ನಿವೇಶದಲ್ಲಿ ಮಹಾರಾಣಿ ಆಡಳಿತಕ್ಕೆ ಇಳಿಯಬೇಕಾಗುತ್ತದೆ. ಅದನ್ನು ಅವರು ನಿರ್ವಹಿಸಿದ ವಿಧಾನ ಅಚ್ಚರಿ ತರಿಸುತ್ತದೆ. ಕರ್ನಾಟಕದ ಹೆಚ್ಚಿನವರಿಗೆ ಗೊತ್ತೇ ಇರದ ಈ ಸಾಧನೆಯನ್ನು ಕಾದಂಬರಿ ನಿರೂಪಿಸುತ್ತದೆಯಾದ ಕಾರಣ ಇದು ಈ ಕಾಲಕ್ಕೆ ಬೇಕೇಬೇಕಾದ ಓದು. ಹಾಗಾಗಿ ಇದು ಕಾಲೋಚಿತ ಕೃತಿ.
5. ಪಟ್ಟವೇರಿದವರ ವೈರಾಗ್ಯಪರತೆ
ಮಗ ವಯಸ್ಕನಾದೊಡನೆ ಮಹಾರಾಣಿ ಆಡಳಿತ ಹಸ್ತಾಂತರ ಮಾಡುತ್ತಾರೆ. ಅದರ ಅನಂತರ ಅವರು ರಾಜ್ಯಾಡಳಿತದಲ್ಲಿ ಮೂಗು ತೂರಿಸುವುದಿಲ್ಲ. ಇದೊಂದು ಅಪರೂಪದ ಸನ್ನಿವೇಶ. ಇದು ಅವರ ಸ್ವಭಾವವೇ ಆದರೂ ಅಲ್ಲೊಬ್ಬ ಅವಧೂತರ ಪ್ರವೇಶ ಕಾದಂಬರಿಗೆ ಇನ್ನೊಂದು ಆಯಾಮ ನೀಡುತ್ತದೆ. ಭೋಗದ ಜೊತೆಗೆ ತ್ಯಾಗದ ಮೇಳೈಕೆ ಕಾದಂಬರಿಯನ್ನು ಎತ್ತರಿಸುತ್ತದೆ. ಇದು ಭಾರತೀಯ ರಾಜನೀತಿಯ ಪರಮೋಚ್ಚ ಆದರ್ಶವನ್ನು ನೆನಪಿಸುತ್ತದೆ.
“ಇಲ್ಲಿರುವ ಮಗ ಮಗಳು ಪ್ರಯಾಣ ಪ್ರಯಾಸ ಭಯ ಸಂಭ್ರಮ ಓದುವ ನಿಮ್ಮವೂ ಆಗಬಹುದು. ಬರೆಯದ ಕಥೆಗಾರರೇ ನಮ್ಮ ನಡುವೆ ಹೆಚ್...
“ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್...
“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿ...
©2025 Book Brahma Private Limited.