ಮಹಾಂತೇಶ್ ಅವರ ಹಾಡುಪಾಡು ಬದುಕಿನ ನೋಟ

Date: 14-08-2023

Location: ಬೆಂಗಳೂರು


“ಎಲ್ಲರ ಪ್ರೋತ್ಸಾಹದ ಮೇರೆಗೆ ಎರಡು ಬಾರಿ ಟಿವಿ ಚಾನೆಲ್ ಗೆ ಸಂಗೀತ ಕಾರ್ಯಕ್ರಮಕ್ಕೆ ಹೋಗಿಬಂದೆ. ಒಮ್ಮೆ ಮೊದಲನೆಯ ಸುತ್ತಿನಲ್ಲಿ ಆಯ್ಕೆಯಾಗಿದ್ದೆ ಎರಡನೇ ಸುತ್ತಿನಲ್ಲಿ ಮತ್ತೆ ಫೋನ್ ಮಾಡುತ್ತೇವೆ ಅಂತ ಹೇಳಿ ಕಳಿಸಿಬಿಟ್ಟರು. ನಾನು ಸಂಗೀತವನ್ನು ಶಾಸ್ತ್ರಿಯವಾಗಿ ಕಲಿಯಬೇಕು ಎಂದು ತೀರ್ಮಾನಿಸಿದೆ. ಆದರೆ ನನ್ನ ಹಣಕಾಸಿನ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು ಆದರೂ ಸಂಗೀತ ಕಲಿಯುವ ಹುಚ್ಚು ನನ್ನನ್ನು ತುಂಬ ಆವರಿಸಿತ್ತು,” ಎನ್ನುತ್ತಾರೆ ಮಹಾಂತೇಶ್. ಜ್ಯೋತಿ ಎಸ್ ಅವರು ತಮ್ಮ ‘‘ಹೆಜ್ಜೆಯ ಜಾಡು ಹಿಡಿದು” ಅಂಕಣದಲ್ಲಿ “ಮಹಾಂತೇಶ್ ಅವರ ಹಾಡುಪಾಡಿನ ಬದುಕು” ಕುರಿತು ಕಟ್ಟಿಕೊಟ್ಟಿದ್ದಾರೆ.

ಕೆಲವರಿಗೆ ಪ್ರತಿಭೆ ಇರುತ್ತೆ ಅದೃಷ್ಟ ಇರಲ್ಲ, ಪ್ರತಿಭೆಗೆ ತಕ್ಕ ವೇದಿಕೆಗಳು ಸಿಗುವುದಿಲ್ಲ. ಒಂದಿಷ್ಟು ಅವಕಾಶ ಪ್ರೋತ್ಸಾಹ ಸಿಕ್ಕರೆ ಏನನ್ನೋ ಸಾಧಿಸಬಹುದಾದ ಸಾಮರ್ಥ್ಯವಿದ್ದೂ ಎಲ್ಲೋ ಹೇಗೋ ಬದುಕಿರುತ್ತಾರೆ. ಅಂತಹ ಒಬ್ಬ ಹುಟ್ಟು ಪ್ರತಿಭೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದವರಾದ ಮಹಾಂತೇಶ್. ಇವರು ಯಾರದ್ದೋ ಮನೆಯ ರೇಡಿಯೋದಲ್ಲಿ ಬರುವ ಹಾಡು ಕೇಳಿಸಿಕೊಂಡು ಹೊಲದಲ್ಲಿ ಕೆಲಸ ಮಾಡ್ತಾ ಅದನ್ನೇ ಗುನುಗುತ್ತಾ ಆ ಹಾಡನ್ನು ಕಲಿತೇ ತೀರುವ ಹಠವಾದಿ. ಒಮ್ಮೆ ಹಾಡು ಇಷ್ಟ ಆಯ್ತು ಅಂದ್ರೆ ಅದನ್ನು ಕಲಿಯುವ ತನಕ ಬಿಡುತ್ತಿರಲಿಲ್ಲ. ಇದರ ಜೊತೆಗೆ ಕಥೆ ಬರೆಯುವುದು, ನಾಟಕ ಬರೆಯುವುದು, ಬರೆದ ನಾಟಕಕ್ಕೆ ಮಕ್ಕಳನ್ನೆಲ್ಲ ಸೇರಿಸಿ ಜೀವ ತುಂಬಿ ಕಾರ್ಯಕ್ರಮಗಳನ್ನು ಮಾಡುವುದು ಮಾಡುತ್ತಾರೆ. ಮಹಾಂತೇಶ್ ಅವರು ತಮ್ಮ ಹಾಡುಪಾಡಿನ ಬಗ್ಗೆ ನನ್ನೊಂದಿಗೆ ಮಾತಾದದ್ದು ಹೀಗೆ.

'ನಾನು ಗಿಡ್ಡಕೆ ಇರುವುದರಿಂದ ನನ್ನನ್ನು ಎಲ್ಲರೂ ಕುಳ್ಳ ಅಂತ ಚುಡಾಯಿಸುವುದು, ಗೇಲಿ ಮಾಡುವುದು, ಹಿಂದೆ ನಿಂತು ನಗುವುದು ಇಂತಹ ಹಲವಾರು ಸನ್ನಿವೇಶಗಳನ್ನು ಎದುರಿಸಿದ್ದಿದೆ. ಇಂತಹ ಸಾಕಷ್ಟು ಅವಮಾನಗಳ ನಡುವೆಯೂ ಬದುಕನ್ನು ಸವೆಸಿದ್ದೇನೆ. ನನ್ನ ತಂದೆ ಗಿರಿಯಪ್ಪ ತಾಯಿ ಸಿದ್ದಮ್ಮ ಅವರಿಗೆ ಮೂರು ಜನರು ಮಕ್ಕಳು. ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮಗು. ಅಣ್ಣ ನಾನು ಇಬ್ಬರೂ ಇರುವುದು ಕಡಿಮೆ ಎತ್ತರ. ತಾಯಿತಂದೆ ಶಾಲೆಯ ಮುಖವನ್ನೇ ಕಂಡವರಲ್ಲ. ಅಪ್ಪ ಕುಂಬಾರಿಕೆ ಕೆಲಸ ಮಾಡಿ ನಮ್ಮನ್ನೆಲ್ಲ ಸಾಕುತ್ತಿದ್ದರು. ಆಗೆಲ್ಲ ಬಡತನ ಬಹಳಷ್ಟಿತ್ತು. ಅನ್ನ ತಿನ್ನಬೇಕು ಅಂದ್ರೆ ಒಂದು ವಾರ ಕಾಯಬೇಕಿತ್ತು. ವಾರಕ್ಕೊಮ್ಮೆ ಶನಿವಾರ ಮಾತ್ರ ನಾವು ಅನ್ನ ಕಾಣುತ್ತಿದ್ದೆವು. ಉಳಿದಂತೆ ರಾಗಿ ಅಂಬಲಿ, ಮುದ್ದೆಯೇ ನಮಗೆ ಅಮೃತವಾಗಿತ್ತು. ನಾವು ಸ್ಕೂಲಿಗೆ ಹೋದರೆ ನಮ್ಮನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಇನ್ನೂ ಸಣ್ಣ ಹುಡುಗರು ಅಂತ ನಮ್ಮನ್ನು ವಾಪಸ್ಸು ಕಳಿಸಿಬಿಡುತ್ತಿದ್ದರು. ನನ್ನ ಕುಬ್ಜತೆಯಿಂದ ಎಲ್ಲದಕ್ಕೂ ಹಿನ್ನೆಡೆಯಾಗುತ್ತಿತ್ತು. ಆದರೂ ನಾನು ಓದಿನಲ್ಲಿ ಮುಂದಿದ್ದೆ. ನಾನು ಸಣ್ಣವನಿದ್ದಾಗಲೇ ಹಾಡು, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಬಹುಮಾನ, ಪ್ರಶಸ್ತಿಗಳನ್ನು ತೆಗೆದುಕೊಂಡಿದ್ದೀನೆ. ಡಾ. ರಾಜ್ ಕುಮಾರ್ ಅವರ ಅಭಿಮಾನಿ ನಾನು. ಅವರ ಅಭಿನಯದ ಸಿನೆಮಾಗಳಾದ ಸನಾದಿ ಅಪ್ಪಣ್ಣ, ಜೀವನಚೈತ್ರ, ಶಂಕರ್ ಗುರು, ಬಬ್ರುವಾಹನ, ಭಕ್ತ ಪ್ರಹಲ್ಲಾದ... ಹೀಗೆ ಯಾವುದೇ ಸಿನೆಮಾ ಬಿಡುಗಡೆಯಾದರೂ ಮನೆಯಲ್ಲಿ ಹೇಳದೆ ಹೋಗಿ ನೋಡಿಕೊಂಡು ಬರುತ್ತಿದ್ದೆ. ನನ್ನೀವಾಳದಿಂದ ಚಳ್ಳಕೆರೆವರೆಗೂ ನಡೆದುಕೊಂಡು ಹೋಗಿ ಸಿನೆಮಾ ನೋಡಿ ಬರುತ್ತಿದ್ದೆ. ಓದೋದ್ರಲ್ಲೂ ಮುಂದು ಹಾಡೋದ್ರಲ್ಲೂ ಮುಂದಿದ್ದ ನಾನು ಒಮ್ಮೆ ಗೌರಿ ಗಣೇಶನ ಹಬ್ಬದಲ್ಲಿ ಕಾರ್ಯಕ್ರಮದ ಸಲುವಾಗಿ 'ದಾರಿ ತಪ್ಪಿದ ತಂಗಿ' ಎಂಬ ನಾಟಕವೊಂದನ್ನು ಬರೆದು ಮಕ್ಕಳಿಂದ ಅಭಿನಯ ಮಾಡಿಸಿದ್ದೆ. ಅದು ತುಂಬ ಯಶಸ್ವಿ ಕಾರ್ಯಕ್ರಮವೆಂದೆ ಆಗ ಹೆಸರಾಯಿತು. ಮಕ್ಕಳಿಗೆ ಮನೆಪಾಠ ಹೇಳಿಕೊಡುತ್ತಿದ್ದೆ. ಆಗೆಲ್ಲ ಒಂದು ಮಗುವಿಗೆ ತಿಂಗಳಿಗೆ ಹತ್ತು ರೂಪಾಯಿ ಕೊಟ್ಟರೆ ಅದೇ ಹೆಚ್ಚು. ಕೆಲವರು ಕೊಡುತ್ತಿದ್ದರು ಕೆಲವರು ತಿಂಗಳೆಲ್ಲ ಬಂದು ಫೀಸ್ ಕೊಡುವ ಸಮಯದಲ್ಲಿ ರಜೆ ಹಾಕಿ ಬಿಡುತ್ತಿದ್ದರು'.

'ಎಲ್ಲರ ಪ್ರೋತ್ಸಾಹದ ಮೇರೆಗೆ ಎರಡು ಬಾರಿ ಟಿವಿ ಚಾನೆಲ್ ಗೆ ಸಂಗೀತ ಕಾರ್ಯಕ್ರಮಕ್ಕೆ ಹೋಗಿಬಂದೆ. ಒಮ್ಮೆ ಮೊದಲನೆಯ ಸುತ್ತಿನಲ್ಲಿ ಆಯ್ಕೆಯಾಗಿದ್ದೆ ಎರಡನೇ ಸುತ್ತಿನಲ್ಲಿ ಮತ್ತೆ ಫೋನ್ ಮಾಡುತ್ತೇವೆ ಅಂತ ಹೇಳಿ ಕಳಿಸಿಬಿಟ್ಟರು. ನಾನು ಸಂಗೀತವನ್ನು ಶಾಸ್ತ್ರಿಯವಾಗಿ ಕಲಿಯಬೇಕು ಎಂದು ತೀರ್ಮಾನಿಸಿದೆ. ಆದರೆ ನನ್ನ ಹಣಕಾಸಿನ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು ಆದರೂ ಸಂಗೀತ ಕಲಿಯುವ ಹುಚ್ಚು ನನ್ನನ್ನು ತುಂಬ ಆವರಿಸಿತ್ತು. ಹಾಗಾಗಿ ಬೆಂಗಳೂರಿಗೆ ಬಂದು ಸಂಗೀತ ಕಲಿಯುವ ಬಗ್ಗೆ ವಿಚಾರಿಸಿದರೆ ಎಂಟುಸಾವಿರ ರೂಪಾಯಿ ಅಡ್ವಾನ್ಸ್, ತಿಂಗಳಿಗೆ ಸಾವಿರ ರೂಪಾಯಿ ಫೀಸ್ ಹೇಳಿದರು. ವಾರಕ್ಕೆ ಎರಡು ದಿನ ತರಗತಿ ಇರುವುದಾಗಿ ಹೇಳಿದರು. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಲ್ಲಿಂದ ಹೊರಟುಬಂದೆ. ಯಾಕೆಂದರೆ ಕೂಲಿ ನಾಲಿ ಮಾಡಿ ಬದುಕು ಸಾಗಿಸುವ ನಾವು ಅಷ್ಟು ಹಣ ಕೊಡೋದಾದ್ರು ಹೇಗೆ.? ಹಾಗಾಗಿ ವಾಪಾಸ್ ಊರಿಗೆ ಬಂದು ನನ್ನ ಕೆಲಸ ಮಾಡುತ್ತ ಹಾಡುವುದನ್ನು ಮುಂದುವರೆಸಿದೆ' ಎನ್ನುತ್ತಾರೆ.

ಇವರು ಜನಪದ ಗೀತೆ, ಭಾವಗೀತೆ, ಭಜನೆಹಾಡು, ತತ್ವಪದಗಳು, ಚಿತ್ರಗೀತೆಗಳನ್ನು ಸರಾಗವಾಗಿ, ಮನಮೋಹಕವಾಗಿ ಹಾಡುತ್ತಾರೆ. ಇರುವುದು ನಾಲ್ಕು ಅಡಿ ಎತ್ತರ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಇವರ ಹಾಡುಗಾರಿಕೆ ಅದ್ಭುತವಾದದ್ದು. ಪಿ. ಯು. ಸಿ.ವರೆಗೆ ಓದಿರುವ ಮಹಾಂತೇಶ್ ಅವರು ಹಾಡಲು ಶುರು ಮಾಡಿದರೆ ಇವರ ಹಾಡಿಗೆ ಮನಸೋಲದವರಿಲ್ಲ. ಸಂಗೀತವನ್ನು ಆರಾಧಿಸುವ, ಪ್ರೀತಿಸುವ, ಹಾಡುವ ಎಲೆಮರೆಯ ಕಾಯಿ ಮಹಾಂತೇಶ್. ಇವರಿಗೆ ಒಂದೊಳ್ಳೆ ವೇದಿಕೆ ಸಿಗುವ ಹಾಗಾಗಲಿ, ಜನರು ಇವರನ್ನು ಗುರುತಿಸಿ ಪ್ರೋತ್ಸಾಹಿಸುವಂತಾಗಲಿ ಎಂಬ ಸದಾಶಯ ನಮ್ಮದು.

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

MORE NEWS

ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ 

19-10-2024 ಬೆಂಗಳೂರು

"ತಾಯಿಯನ್ನು ತಿಳಿದುಕೊಳ್ಳುವುದು ಹೇಗೆ ಮಾನಸಿಕ ಬೆಳವಣಿಗೆಯೊ ಹಾಗೆಯೆ ಅದೊಂದು ಸಾಮಾಜಿಕ ಬೆಳವಣಿಗೆಯೂ ಆಗಿದೆ. ತಾಯಿ...

ಶಶಿಧರ ತೋಡಕರ: ಸಾಮಾಜಿಕ ಋಣ ಸಂದಾಯದ ಎರಡು ಮಾದರಿಗಳು

17-10-2024 ಬೆಂಗಳೂರು

"ಕಳೆದ ಎರಡು ವರ್ಷಗಳ ಹಿಂದೆ ಪೂಜ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರ ಕುರಿತ ಸಂಸ್ಮರಣಾ ಗ್ರಂಥವನ್ನು ಸಂಪಾದಿಸಿ...

ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು

16-10-2024 ಬೆಂಗಳೂರು

"ಪಂಜೆಯವರಿಗೆ ಮಡಿಕೇರಿಗೆ ವರ್ಗವಾಗಿ ಅಲ್ಲಿ ವೃತ್ತಿಯನ್ನು ಪ್ರಾರಂಭಿಸಿದ ಸಂದರ್ಭದಲ್ಲಿ ಬರೆದಂತಹ ಕೃತಿಯೇ "ಕ...