Date: 21-12-2021
Location: ಬೆಂಗಳೂರು
‘ನಗು, ದುಃಖ, ಸಂತೋಷ, ಒಪ್ಪಿಗೆ, ನಿರಾಕರಣೆ, ನೋವು, ಕೋಪ ಇತ್ಯಾದಿ ಭಾವನೆಗಳನ್ನು ಹಂಚಿಕೊಳ್ಳಲು ನಾವಿಂದು ಭಾಷೆಯ ಹಂಗಿಲ್ಲದೆ ಇಮೋಜಿಗಳನ್ನು ಮತ್ತು ಸಂಕೇತಗಳನ್ನು ಬಳಸುತ್ತಿದ್ದೇವೆ. ಅವೆಲ್ಲವೂ ಭಾಷಾತೀತ ಲೇಖನ ಚಿಹ್ನೆಗಳಾಗಿ ಬಳಕೆಯಲ್ಲೆ ಜಾರಿಯಾಗುವ ಕಾಲ ದೂರವಿಲ್ಲ’ ಎನ್ನುತ್ತಾರೆ ಲೇಖಕ, ವಿಮರ್ಶಕ ಡಾ. ರಾಮಲಿಂಗಪ್ಪ ಟಿ.ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ಲೇಖನ ಚಿಹ್ನೆಗಳ ಕುರಿತು ವಿಶ್ಲೇಷಿದ್ದಾರೆ.
ಏನನ್ನಾದರು ಅಭಿವ್ಯಕ್ತಿಸಲು ಮಾತಾಡುವಾಗ ದನಿಯ ಏರಿಳಿತ, ಮುಖಭಾವ, ಸಮಯದ ಹೊರಪು ಕೊಡುವಿಕೆ, ಆಂಗಿಕ ಸನ್ನೆ ಇತ್ಯಾದಿಗಳಿಂದ ಕೆಲವು ವಿಚಾರಗಳನ್ನು ನಾವು ಅಭಿವ್ಯಕ್ತಿಸುತ್ತೇವೆ. ಅಲ್ಲಿ ಸಂವಹನಕ್ಕೆ ಪ್ರದೇಶ, ಜನಾಂಗ, ವ್ಯಕ್ತಿನಿಷ್ಠವಾದ ಹಲವು ದಾರಿಗಳಿವೆ. ಆದರೆ ಯಾವುದೇ ಬರವಣಿಗೆಯನ್ನು ಮಾಡುವಾಗ ಕೆಲವು ನಿರ್ದಿಷ್ಟವಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಲೇಖನ ಚಿಹ್ನೆಗಳೂ ಕೂಡ ಆ ನಿಯಮಗಳ ಭಾಗ. ಲೇಖನ ಚಿಹ್ನೆಗಳನ್ನು ನಾವು ಈ ಕೆಳಕಂಡಂತೆ ಗುರ್ತಿಸುತ್ತೇವೆ.
ಅಲ್ಪವಿರಾಮ: ವಾಕ್ಯದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಭಾಗಗಳು ಇರಬಹುದು. ಅವುಗಳನ್ನು ಅಲ್ಪವಿರಾಮಗಳ ಮೂಲಕ ಬರೆಯುವುದು ನಿಯಮ. ಹಾಗೆಯೆ ವಾಕ್ಯವನ್ನು ಓದುವಾಗ ಅದರ ಮಧ್ಯಭಾಗದಲ್ಲಿ ಸ್ವಲ್ಪ ಉಸಿರಿನ ವಿರಾಮ ತೆಗೆದುಕೊಳ್ಳಲು ಮತ್ತು ವಾಕ್ಯಾಂಗದ ಪ್ರತ್ಯೇಕತೆಯನ್ನು ಗುರ್ತಿಸಿಕೊಳ್ಳಲು ಈ (,) ಚಿಹ್ನೆಯನ್ನು ಅಲ್ಪವಿರಾಮ ಚಿಹ್ನೆಯಾಗಿ ಬಳಸುತ್ತೇವೆ.
ಉದಾಹರಣೆ: ಸಂವಹನಕ್ಕೆ ಪ್ರದೇಶ, ಜನಾಂಗ, ವ್ಯಕ್ತಿನಿಷ್ಠವಾದ ಹಲವು ದಾರಿಗಳಿವೆ.
2. ಅರ್ಧವಿರಾಮ: ಎರಡು ವಾಕ್ಯ ಭಾಗಗಳು ಒಂದೆ ವಾಕ್ಯದಲ್ಲಿ ಇರುವಾಗ ಇನ್ನೂ ಮುಂದೆ ವಾಕ್ಯದ ಉಳಿದ ಅರ್ಧ ಘಟಕವು ಮುಂದುವರಿಯುತ್ತದೆ ಎಂಬ ಸೂಚನೆಯನ್ನು ಕೊಡುವ ಚಿಹ್ನೆಯೆ ಅರ್ಧವಿರಾಮ. ಮೊದಲ ವಾಕ್ಯಾರ್ಧದ ವಾಕ್ಯಾಂಗದ ಕೊನೆಯಲ್ಲಿ ಈ ಚಿಹ್ನೆಯು ಬರುತ್ತದೆ. ಅಲ್ಲದೆ ಕೆಲವೊಮ್ಮೆ ಒಂದು ವಾಕ್ಯವು ಪೂರ್ಣಗೊಂಡಂತೆ ಕಾಣುತ್ತ ಅದರಲ್ಲಿ ಎರಡನೆ ಮೂರನೆ ಭಾಗವು ಅದರ ಮುಂದುವರಿಕೆ ಆಗಿ ಇರಬಹುದು. ಆ ಭಾಗಗಳಿಗೆ ಸ್ವತಂತ್ರ ವಾಕ್ಯಗಳೆ ಆಗುವ ಲಕ್ಷಣ ಇದ್ದಾಗ್ಯೂ ಅವುಗಳ ನಡುವೆ ಸಾತತ್ಯ ಇರುತ್ತದೆ. ಹಾಗಾಗಿ ಆ ಪ್ರತಿಯೊಂದು ಭಾಗಕ್ಕು ಅರ್ಧವಿರಾಮ ಚಿಹ್ನೆಯನ್ನು ಬಳಸಿ ಅವುಗಳನ್ನು ಬರೆಯಲಾಗುತ್ತದೆ. ಈ ಚಿಹ್ನೆಯನ್ನು (;) ಈ ಗುರುತಿನಿಂದ ಬರೆಯುತ್ತೇವೆ.
ಉದಾ: 1. ಅವರು ಎಲ್ಲರೂ ಮನೆಯಿಂದ ಹೊರಟು; ಕ್ರಿಕೆಟ್ ನೋಡಲು ತೆರಳಿದರು.
2. ಅಂದು ಅಮಾವಾಸ್ಯೆ; ಆ ಕಾರಣ ಬೆಳದಿಂಗಳು ಮೂಡದೆ ಕತ್ತಲಾದಾಗ; ಏನೂ ಕಾಣುತ್ತ ಇರಲಿಲ್ಲ.
3. ಪೂರ್ಣವಿರಾಮ: ವಾಕ್ಯವು ಕೊನೆಗೊಂಡ ಸೂಚನೆಯನ್ನು ನೀಡುವುದೆ ಪೂರ್ಣವಿರಾಮ. ಪ್ರತಿಯೊಂದು ವಾಕ್ಯ ಮುಗಿದಾಗಲು, ಆ ವಾಕ್ಯ ಮುಗಿದುದರ ಸೂಚನೆಯನ್ನಾಗಿ ಒಂದು ಚುಕ್ಕೆ ಇಡುವ ಮೂಲಕ ಈ (.) ಚಿಹ್ನೆಯನ್ನು ಬಳಸುತ್ತೇವೆ.ಉದಾ: ಅಲ್ಲಿ ಕೆಲವು ನಿರ್ದಿಷ್ಟವಾದ ನಿಯಮಗಳಿವೆ.
4. ಆವರಣ ಚಿಹ್ನೆ: ಕೆಲವು ಪದ, ಒಂದುವಾಕ್ಯ ಅಥವಾ ಕಂಡಿಕೆಗಳನ್ನು ವಿವರಣೆಗೆ ನೀಡುವಾಗ ಅವನ್ನು ಆವರಣದಲ್ಲಿ ಇರಿಸುವುದುಂಟು. ಕೆಲವೊಮ್ಮೆ ಕನ್ನಡವಲ್ಲದ ಬೇರೆ ಭಾಷೆಯ ಶಬ್ದವನ್ನೂ ಬರವಣಿಗೆಯಲ್ಲಿ ಅರ್ಥದ ವಿವರಣೆ ಎಂಬಂತೆ, ಅನುವಾದದ ಪದ ಎಂಬಂತೆ ಆವರಣದಲ್ಲಿ ಇಡುವುದುಂಟು. ಒಮ್ಮೊಮ್ಮೆ ಮುಖ್ಯ ಬರವಣಿಗೆಯಿಂದ ಭಿನ್ನವಾದ ಅದಕ್ಕೆ ಸಂಬಂಧಿಸಿದ ಸಂಗತಿಯನ್ನು ಆವರಣದಲ್ಲಿ ಕೊಡುವುದುಂಟು. ಇದಕ್ಕೆ ಬಳಕೆಯೆ ನಿಯಮ. ಆವರಣ ಚಿಹ್ನೆಗಳನ್ನು ವೃತ್ತಾವರಣ ( ), ಪುಷ್ಪಾವರಣ { }, ಚೌಕಾವರಣ [ ], ಹೀಗೆ ಮೂರು ಬಗೆಯಲ್ಲಿ ಬಳಸುತ್ತೇವೆ. ವೃತ್ತಾವರಣ, ಪುಷ್ಪಾವರಣ, ಚೌಕಾವರಣಗಳಲ್ಲಿ ಯಾವುವನ್ನು ಎಲ್ಲಿ ಬಳಸಬೇಕು ಎಂಬ ಬಗ್ಗೆ ನಿರ್ದಿಷ್ಟ ನಿಯಮವಿಲ್ಲ.
ಉದಾ: 1. ಅವರು ಯಾವಾಗಲೂ ನಾನು ಅಮೆರಿಕೆಯಲ್ಲಿದ್ದಾಗ (ವೆನ್ ಐ ವಾಸ್ ಇನ್ ಅಮೆರಿಕಾ) ಎಂದೇ ಮಾತು ಆರಂಭಿಸುತ್ತಾರೆ.
2. ಕಡಿಮೆ ಶಕ್ತಿ ಇರುವ ಗುಂಪುಗಳನ್ನು ಒಟ್ಟು ಸೇರಿಸಿ (ಅಮಾಲ್ಗಮೇಟ್) ಒಂದು ಶಕ್ತ ಗುಂಪನ್ನಾಗಿ ಮಾಡಬೇಕು.
3. ಕೊರೊನಾ ಮಾರಿಯ ಕಾಲದಲ್ಲಿ ಆಮ್ಲಜನಕ ಕೋಠಿಗಳನ್ನು [ಆಕ್ಸಿಜನ್ ಬ್ಯಾಂಕ್] ಸರ್ಕಾರ ತುರ್ತಾಗಿ ಸ್ಥಾಪಿಸಬೇಕು.
5. ಪಾದಾಂತ್ಯ ಚಿಹ್ನೆಗಳು: ಹಿಂದೆ ಹಾಡುಗಳನ್ನು ಬರೆದಿಡುವಾಗ ಪಲ್ಲವಿ, ಪದ್ಯಪಾದ, ಪದ್ಯಸಂಖ್ಯೆ, ಚರಣಗಳನ್ನು ಗುರ್ತಿಸುವಾಗ ವರ್ಣಾವರಣ ಅಥವಾ ಸಂಖ್ಯಾವರಣಗಳನ್ನು ಒಂಟಿ ಮತ್ತು ಜೋಡಿಯಾಗಿ ಎರಡೂ ಬಗೆಯಲ್ಲಿ ಬಳಸುತ್ತಿದ್ದರು. |ಪ|, |ಚ|, |1|, ||2|| ಈ ಚಿಹ್ನೆಗಳಿಂದ ಇವುಗಳನ್ನು ಗುರ್ತಿಸುತ್ತಾರೆ. ಪ ಎಂದರೆ ಪಲ್ಲವಿ ಎಂತಲೂ, ಚ ಎಂದರೆ ಚರಣ ಎಂತಲೂ ಬಳಕೆಯ ಅರ್ಥ. ಒಂದು, ಎರಡು ಅಥವಾ ಮೂರು ಸಂಖ್ಯೆಗಳು ಪದ್ಯಗಳ ಸಂಖ್ಯೆಯನ್ನು ಸೂಚಿಸುತ್ತವೆ. ಹಾಗಾಗಿಯೆ ಇವುಗಳನ್ನು ವರ್ಣಾವರಣ ಮತ್ತು ಸಂಖ್ಯಾವರಣ (ವರ್ಣಗಳ ಆವರಣ, ಸಂಖ್ಯೆಗಳ ಆವರಣ) ಎಂದು ಕರೆಯುತ್ತಾರೆ. ಹಳೆಯ ಛಂದೋಬದ್ಧ ಕಾವ್ಯಗಳನ್ನು ತಾಳೆಗರಿಗಳಲ್ಲಿ ಬರೆಯುವಾಗ ಪದ್ಯದ ಒಂದು ಪಾದ (ಸಾಲು) ಮುಕ್ತಾಯವಾಯಿತು ಎಂಬುದನ್ನು ಸೂಚಿಸಲು ಒಂದು ಗೆರೆಯನ್ನು ಹಾಕುವುದು ಪದ್ಧತಿಯಾಗಿತ್ತು. ಷಟ್ಪದಿಗಳಲ್ಲಿ ಪ್ರತಿ ಮೂರು ಸಾಲಿನ ಕೊನೆಗೆ ಎರಡು ಗೆರೆಗಳನ್ನು ಹಾಕುವ ಪದ್ಧತಿ ಕೂಡ ಇತ್ತು. |, || ಇವುಗಳನ್ನು ಪಾದಾಂತ್ಯ ಚಿಹ್ನೆಗಳೆಂದೂ ಕರೆಯುತ್ತಿದ್ದರು.
ಉದಾ: 1. ನೀನ್ಯಾಕೋ ನಿನ್ನ ಹಂಗ್ಯಾಕೊ ನಿನ್ನ ನಾಮದ ಬಲವೊಂದಿದ್ದರೆ ಸಾಕೊ ||ಪ|| (ಪಲ್ಲವಿಯನ್ನು ಸೂಚಿಸಲು ಪ ಎಂಬ ಅಕ್ಷರಕ್ಕೆ ಹೀಗೆ ವರ್ಣಾರಣ ಚಿಹ್ನೆಗಳನ್ನು ಬಳಸುತ್ತೇವೆ.) ಹಾಗೆಯೆ ಪದ್ಯದ ಸಂಖ್ಯೆಗಳನ್ನು ಗುರ್ತಿಸುವಾಗ |1|, ||2|| ಹೀಗೆ ಒಂಟಿ ಮತ್ತು ಜೋಡು ವರ್ಣಾವರಣಗಳನ್ನೆ ಸಂಖ್ಯಾವರಣಗಳನ್ನಾಗಿಯು ಬಳಸುತ್ತೇವೆ.
6.ಉದ್ಧರಣ ಚಿಹ್ನೆ: ಯಾವುದಾದರು ಬೇರೊಬ್ಬ ವ್ಯಕ್ತಿಯ ಮಾತುಗಳನ್ನು ಬರಹದ ಮಧ್ಯೆ ಉದಾಹರಣೆಯಾಗಿ ಇಲ್ಲವೆ ಉದ್ಧರಣೆಯಾಗಿ ಎತ್ತಿಕೊಂಡು ಕೊಡುವಾಗ ಅದಕ್ಕೆ ಉದ್ಧರಣ ಚಿಹ್ನೆಯನ್ನು ಬಳಸುವುದುಂಟು. ಕೆಲವೊಮ್ಮೆ ಕಥನದಲ್ಲಿ ಬರುವ ಪಾತ್ರಗಳ ಮಾತುಗಳನ್ನೂ ಉದ್ಧರಣ ಚಿಹ್ನೆಯ ಮೂಲಕ ಸೂಚಿಸುವುದುಂಟು. ಇದರಲ್ಲಿ ಒಂಟಿ ಉದ್ಧರಣ ಚಿಹ್ನೆ ಮತ್ತು ಜೋಡು ಉದ್ಧರಣ ಚಿಹ್ನೆ ಎಂದು ಎರಡು ಬಗೆ. ಅವುಗಳನ್ನು (‘ ‘) (“ “) ಈ ಚಿಹ್ನೆಗಳಿಂದ ಬಳಸುತ್ತೇವೆ. ಈ ಚಿಹ್ನೆಗಳನ್ನು ವಾಕ್ಯವೇಷ್ಟನ ಚಿಹ್ನೆಗಳು ಎಂದೂ ಕರೆಯುತ್ತಾರೆ. ಒಂಟಿ ಉದ್ಧರಣ ಚಿಹ್ನೆಗಳನ್ನು ಸಾಮಾನ್ಯವಾಗಿ ಒಂದು ಅಥವಾ ಎರಡು ವಿಶಿಷ್ಟ ಪದಗಳನ್ನು ಗುರ್ತಿಸಿ ಹೇಳುವಾಗಲೂ ಜೋಡು ಉದ್ಧರಣಗಳನ್ನು ಸಾಮಾನ್ಯವಾಗಿ ಇತರರ ಮಾತುಗಳನ್ನು ಉದಾಹರಿಸುವಾಗಲು ಬಳಸುವುದು ರೂಢಿಯಲ್ಲಿತ್ತು. ಆದರೆ ಈಚೆಗೆ ಇತರರ ಮಾತುಗಳನ್ನು ಬಳಸುವಾಗಲು ಒಂಟಿ ಉದ್ಧರಣ ಚಿಹ್ನೆಗಳನ್ನು ಬಳಸುವುದುಂಟು. ಕೆಲವು ವಿಶಿಷ್ಟವಾದ ಪರಿಭಾಷೆಗಳನ್ನು ಬಳಸುವಾಗ ಅವುಗಳನ್ನು ನಾನು ಸಿದ್ಧ ಅರ್ಥದಲ್ಲಿ ಬಳಸುತ್ತಿಲ್ಲ; ಸಮಾಜವು ಅದನ್ನು ಬಳಸುತ್ತದೆ; ಆದರೆ ಅದರ ಅರ್ಥವನ್ನು ನಾನು ರವಾನಿಸಲು ಸಿದ್ಧನಿಲ್ಲ ಎಂಬ ಗೋಷಣೆಗು ಕೆಲವೊಮ್ಮೆ ಬರಹಗಾರರು ಒಂಟಿ ಉದ್ಧರಣ ಚಿಹ್ನೆಯನ್ನು ಬಳಸುತ್ತಾರೆ.
ಉದಾ: 1. ಅವರು ತಮ್ಮ ಭಾಷಣದಲ್ಲಿ “ಸಿಗರೇಟು ಸೇವನೆ, ಮದ್ಯಸೇವನೆಗಳು ಸರ್ಕಾರಕ್ಕೆ ಆದಾಯ ತರುತ್ತವೆ” ಎಂದು ಹೇಳಿದರು.
2. ಅಮೇರಿಕ ‘ಅಣುಬಾಂಬು’ಗಳನ್ನೂ, ‘ಮಿಸೈಲು’ಗಳನ್ನೂ ವಿದೇಶಗಳಿಗೆ ರಫ್ತು ಮಾಡುತ್ತದೆ.
3. ‘ಕೆಳವರ್ಗ’ದ ವಚನಕಾರರು ತಮ್ಮ ‘ಕುಲಕಸುಬು’ಗಳಿಗೆ ಸಂಬಂಧಿಸಿದ ಪದಗಳನ್ನೆ ವಚನಗಳಲ್ಲಿ ಬಳಸಿದ್ದಾರೆ.
ಇಲ್ಲಿ ಕೆಳವರ್ಗ ಎಂಬ ಪದವನ್ನು ಅದು ಸೂಚಿಸುವ ಅರ್ಥದಲ್ಲಿ ನಾನದನ್ನು ಬಳಸುವುದಿಲ್ಲ; ಅದರ ರೂಢಿಗತ ಅರ್ಥವನ್ನು ನಾನು ವಾಹಿಸುವುದಿಲ್ಲ ಮತ್ತು ಒಪ್ಪುವುದಿಲ್ಲ ಎಂಬ ಸೂಚನೆ ಎಂಬಂತೆ ಒಂಟಿ ಉದ್ಧರಣ ಚಿಹ್ನೆಯನ್ನು ಬಳಸಲಾಗುತ್ತದೆ.
7. ವಿಭಜಕ ಚಿಹ್ನೆ: ಯಾವುದಾದರು ಎರಡು ಪದ ಅಥವಾ ಪದಗುಚ್ಛ ಅಥವಾ ವಾಕ್ಯ ಭಾಗಗಳನ್ನು ವಿಂಗಡಿಸಲು ಅಥವಾ ಅಕ್ಕಪಕ್ಕ ಇಟ್ಟು ಬೇರೆ ಬೇರೆ ಎಂದು ಸೂಚಿಸಲು ವಿಭಜಕ ಚಿಹ್ನೆಯನ್ನು ಬಳಸುತ್ತೇವೆ. ಈ ಚಿಹ್ನೆಯನ್ನು - ಹೀಗೆ ಚಿಕ್ಕ ಗೆರೆಯಿಂದ ಗುರ್ತಿಸುತ್ತೇವೆ. ಇದನ್ನು ವಿವರಣಾತ್ಮಕ ಚಿಹ್ನೆಯಾಗಿಯು, ಪೂರಕಾರ್ಥಕ ಚಿಹ್ನೆಯಾಗಿಯು ಬಳಸುವುದುಂಟು.
ಉದಾ: 1. ಅವನು-ಅವಳು ಇಬ್ಬರೂ ಕೂಡಿ ಕೆಲಸ ನಿರ್ವಹಿಸಿದರು.
2. ಕೊಲಂಬಸ್‍ನ ನಂತರ ಅಮೆರಿಕನ್-ಇಂಡಿಯನ್ ಸಂಸ್ಕೃತಿ ನಾಶವಾಯಿತು.
8. ವಿವರಣಾತ್ಮಕ ಚಿಹ್ನೆ: ಯಾವುದಾದರು ಒಂದು ಸಂಗತಿಯನ್ನು ವಿವರಿಸುವಾಗ ಇಲ್ಲವೆ ಉದಾಹರಣೆ ನೀಡುವಾಗ ಈ ಚಿಹ್ನೆಗಳನ್ನು ಬಳಸುತ್ತೇವೆ. ಇವುಗಳನ್ನು: ಹೀಗೆ ಎರಡು ಚುಕ್ಕೆಗಳಿಂದ ಮತ್ತು ಕೆಲವೊಮ್ಮೆ ಎರಡು ಚುಕ್ಕೆಗಳ ನಡುವೆ ಒಂದು ಗೆರೆ ಹಾಕುವ ಮೂಲಕ :- ಹೀಗೆ ಬಳಸುತ್ತೇವೆ. ಇವಲ್ಲದೆ ಸಮಾನ ಚಿಹ್ನೆಯನ್ನೂ = ವಿಭಜಕ ಚಿಹ್ನೆಯನ್ನೂ - ಕೆಲವೊಮ್ಮೆ ವಿವರಣೆಗೆ ಬಳಸುವುದುಂಟು.
9.1. ಉದಾಹರಣೆಗೆ: (ಇಲ್ಲಿ : ಈ ಚಿಹ್ನೆ)
2. ಉದಾಹರಣೆಗೆ ನೋಡುವುದಾದರೆ:-
10. ತಳಗೆರೆ ಮತ್ತು ವಿಳಾಸ ಚಿಹ್ನೆ: ಮಿಂಚಂಚೆಯ ವಿಳಾಸಗಳಲ್ಲಿ ಚಿಕ್ಕ ತಳಗೆರೆಯನ್ನು _ ಹೀಗೆ ಅಂಡರ್‍ಸ್ಕೋರ್ ಎಂಬ ಹೆಸರಿನಲ್ಲಿ ಹಾಗೂ @ ಈ ಚಿಹ್ನೆಯನ್ನು ಅಟ್ ದಿ ರೇಟ್ ಆಫ್ ಎಂಬ ಹೆಸರಿನಲ್ಲಿ ಬಳಸುತ್ತೇವೆ. ಇವುಗಳನ್ನು ಕನ್ನಡದಲ್ಲಿ ಇನ್ನೂ ನಾವು ಹೆಸರಿಸಿಕೊಂಡಿಲ್ಲ.
ಉದಾ: ಕಕಕಕ_ ಕಕಕಕ@ಜಿಮೇಲ್ ಡಾಟ್ ಕಾಮ್.
11.ಪ್ರಶ್ನಾರ್ಥಕ ಚಿಹ್ನೆ: ವಾಕ್ಯವು ಪ್ರಶ್ನೆ ಆಗಿದ್ದಾಗ, ವಾಕ್ಯಗಳಲ್ಲಿ ಪ್ರಶ್ನಾರ್ಥಕ ಪದಗಳು ವಾಕ್ಯದ ನಡುವೆ ಅಥವಾ ಕಡೆಯಲ್ಲಿ ಇದ್ದಾಗ ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸುತ್ತೇವೆ. ಅದನ್ನು (?) ಈ ಚಿಹ್ನೆಯಿಂದ ಗುರ್ತಿಸಲಾಗುತ್ತದೆ. ಯಾರು, ಏನು, ಎಲ್ಲಿಗೆ, ಎಂಥ, ಹೇಗೆ, ಯಾವುದು, ಯಾರು ಇತ್ಯಾದಿಗಳನ್ನು ಪ್ರಶ್ನಾರ್ಥಕ ಪದಗಳು ಎಂದು ಕರೆಯುತ್ತೇವೆ. ಈ ಪದಗಳು ಬಂದಾಗ ಅಗತ್ಯವಾಗಿ ಈ ಚಿಹ್ನೆಗಳನ್ನು ಬಳಸುತ್ತೇವೆ. ಆದರೆ ಇವುಗಳನ್ನು ವಾಕ್ಯದ ಕೊನೆಯಲ್ಲೆ ಬಳಸಬೇಕು ಎಂದೇನಿಲ್ಲ. ನಡುವೆಯೂ ಬಳಸುವುದುಂಟು. ಕೆಲವೊಮ್ಮೆ ಟೈಪಿಸುವಾಗ ಪ್ರಶ್ನಾರ್ಥಕ ಚಿಹ್ನೆಗಳನ್ನು ವಾಕ್ಯದ ಕೊನೆಯ ಅಕ್ಷರದ ಪಕ್ಕ ಹಾಕದೆ ಅದಕ್ಕೆ ಒಂದು ಅಕ್ಷರದಷ್ಟು ತೆರಪು (ಸ್ಪೇಸ್) ನೀಡಿ ಆನಂತರ ಹಾಕುವುದುಂಟು. ಆದರೆ ಹಾಗೆ ಮಾಡಬಾರದು. ಪೂರ್ಣವಿರಾಮವನ್ನು ಹಾಕುವಾಗ ತೆರಪಿಲ್ಲದೆ ಚುಕ್ಕೆಯನ್ನು ವಾಕ್ಯಾಂತ ಅಕ್ಷರದ ಪಕ್ಕವೇ ಹಾಕುವಂತೆ ಪ್ರಶ್ನಾಚಿಹ್ನೆಯನ್ನೂ ತೆರಪಿಲ್ಲದೆ ಹಾಕಬೇಕು.
ಉದಾ: 1. ಆ ಮರಗಳನ್ನು ಯಾರು ಕಡಿದರು?
2. ಮರಗಳನ್ನು ಕಡಿದವರು ಯಾರು? 3. ಮಂಜುಳೆಯನ್ನು ಕೊಂದದ್ದು ಯಾಕೆ? ವಿವರಿಸಿ.
12.ಆಶ್ಚರ್ಯ ಸೂಚಕ ಚಿಹ್ನೆ: ಬಳಸುವ ವಾಕ್ಯದಲ್ಲಿ ಆಶ್ಚರ್ಯ ಭಾವ ಇದ್ದಾಗ ಆ ವಾಕ್ಯದ ಕೊನೆಯಲ್ಲಿ ಆಶ್ಚರ್ಯ ಸೂಚಕ ಚಿಹ್ನೆಯನ್ನು ಬಳಸುತ್ತೇವೆ. ಅಂತಹ ಕಡೆ ಆಶ್ಚರ್ಯ ಸೂಚಕ ಪದಗಳು ವಾಕ್ಯದಲ್ಲಿ ಇರಬಹುದು, ಇಲ್ಲದೆಯು ಇರಬಹುದು. ಆಹಾ, ಓಹೋ, ಅಯ್ಯೋ, ಸಿವನೇ, ರಾಮನೇ, ದೇವರೇ, ಅಮ್ಮಾ, ಥತ್, ತೊತೊತೊ, ಆಹ್, ಅಕಟಕಟಾ ಮೊದಲಾದುವುದಗಳನ್ನು ಆಶ್ಚರ್ಯಸೂಚಕ ಪದಗಳು ಎಂದು ಕರೆಯುತ್ತೇವೆ. ಕೆಲವೊಮ್ಮೆ ಆಶ್ಚರ್ಯಸೂಚಕವನ್ನು ಕೋಪ, ವಿಷಾದ, ಸಂತೋಷ ಮೊದಲಾದ ತೀವ್ರಭಾವಗಳ ಸಂದರ್ಭದಲ್ಲಿಯು ಬಳಸುವುದುಂಟು. ಪ್ರಶ್ನೆ, ಆಶ್ಚರ್ಯ ಇತ್ಯಾದಿಗಳನ್ನು ಸೂಚಿಸುವ ಚಿಹ್ನೆಗಳನ್ನು ಭಾವಸೂಚಕ ಚಿಹ್ನೆಗಳು ಎಂದೂ ಕರೆಯುತ್ತೇವೆ. ಅದನ್ನು ! ಈ ಚಿಹ್ನೆಯಿಂದ ಗುರ್ತಿಸುತ್ತಾರೆ.
ಉದಾ: ಓಹೋ ಸಾಹೇಬರು ಬಂದರಲ್ಲ! 2. ಅಯ್ಯೋ ಸಾಹೇಬರು ಸತ್ತುಹೋದರು! 3. ಅಯ್ಯೋ! ಸಾಹೇಬರು ಸತ್ತು ಹೋದರು. ಹೀಗೆ ಈ ಭಾವಸೂಚಕವನ್ನು ವಾಕ್ಯಾಂತದಲ್ಲು ಭಾವಸೂಚಕ ಪದದ ಪಕ್ಕದಲ್ಲು ಎರಡೂ ಕಡೆ ಬಳಸುವ ಪದ್ಧತಿಯಿದೆ.
13.ಶೇಕಡಾ ಚಿಹ್ನೆ: ನೂರಕ್ಕೆ ಎಷ್ಟು ಎಂದು ಹೇಳುವಾಗ ಕೆಲವೊಮ್ಮೆ ಶೇಕಡ, ಪ್ರತಿಶತ ಎಂದು ಪದವನ್ನು ಬಳಸುವ ಜೊತೆಗೆ ಕೆಲವೊಮ್ಮೆ ಪ್ರತ್ಯೇಕವಾಗಿ ಶೇಕಡ ಚಿಹ್ನೆಯನ್ನು ಬಳಸುತ್ತೇವೆ. ಅದನ್ನು % ಈ ಚಿಹ್ನೆಯಿಂದ ಗುರ್ತಿಸುತ್ತೇವೆ.
ಉದಾ: 1. ಗಂಡುಮಕ್ಕಳು ಶೇ% 65ರಷ್ಟು ಮಂದಿ ಪಾಸಾಗಿದ್ದಾರೆ.
2. ಗಂಡುಮಕ್ಕಳು ಪ್ರತಿಶತ 65% ರಷ್ಟು ಮಂದಿ ಪಾಸಾಗಿದ್ದಾರೆ.
3. ಗಂಡುಮಕ್ಕಳು 65% ಪಾಸಾಗಿದ್ದಾರೆ.
14. ಸಂಖ್ಯಾಸೂಚಿ ಚಿಹ್ನೆ: ಮನೆ ವಿಳಾಸ ಅಥವಾ ಕಛೇರಿ ವಿಳಾಸ ಬರೆಯುವಾಗ ಮನೆ ಅಥವಾ ಕಟ್ಟಡದ ಸಂಖ್ಯೆಯನ್ನು ಸೂಚಿಸಲು ಈ ಚಿಹ್ನೆಯನ್ನು ಬಳಸುತ್ತಾರೆ. ಅದನ್ನು # ಈ ರೀತಿಯಾಗಿ ಬಳಸಲಾಗುತ್ತದೆ.
15. ವಾಕ್ಯಸಂಬಂಧಿ ಚಿಹ್ನೆ: ಮತ್ತು, ಹಾಗೂ ಎಂಬ ಪದಗಳನ್ನು ಪ್ರತಿನಿಧಿಸುವ ಚಿಹ್ನೆಯಿದು. ಇದನ್ನು & ಹೀಗೆ ಬಳಸುತ್ತಾರೆ.
16. ನಕ್ಷತ್ರ ಗುರುತು: ಉದ್ಧರಣವನ್ನು, ವಿವರಣೆಯನ್ನು ಇಲ್ಲವೆ ಅಡಿಟಿಪ್ಪಣಿಯನ್ನು ಸೂಚಿಸಲು ಈ ಚಿಹ್ನೆಯನ್ನು ಬಳಸುವುದುಂಟು. ಇದನ್ನು * ಈ ಚಿಹ್ನೆಯಿಂದ ಸೂಚಿಸುತ್ತಾರೆ.
17. ಅಡಿಟಿಪ್ಪಣ ಚಿಹ್ನೆ: ವಾಕ್ಯ, ಪದ, ಪರಿಭಾಷೆ, ಕಂಡಿಕೆ ಇತ್ಯಾದಿಗಳ ಉದ್ಧರಣದ ಸಂದರ್ಭದಲ್ಲಿ; ಎರವಲುಗಳನ್ನು ಸೂಚಿಸುವ ಸಂದರ್ಭದಲ್ಲಿ ಪದದ ಕೊನೆಯ ಅಕ್ಷರದ ತಲೆಯ ಬಲತುದಿ ಮೇಲೆ ಅಂಕಿಗಳನ್ನು ಬಳಸುವುದುಂಟು. ಅದನ್ನು ಅಡಿಟಿಪ್ಪಣ ಅಥವಾ ಪುಟಟಿಪ್ಪಣ ಅಥವಾ ಕೊನೆಟಿಪ್ಪಣಿಗಳನ್ನು ಸೂಚಿಸಲು ಬಳಸುತ್ತೇವೆ. ಕವನ2 ಹೀಗೆ ಅದನ್ನು ಬಳಸುತ್ತೇವೆ. ಇದನ್ನು ಕೆಲವೊಮ್ಮೆ ತಳಭಾಗದಲ್ಲು ಕವನ2 ಹೀಗೆ ಬಳಸುವುದುಂಟು.
18. ಓರೆಗೆರೆ ಚಿಹ್ನೆ: ಎರಡು ಸಂಗತಿಗಳನ್ನು ಒಂದಲ್ಲ ಇನ್ನೊಂದು, ಒಂದು ಮತ್ತು ಇನ್ನೊಂದು, ಒಂದು ಅಥವಾ ಇನ್ನೊಂದು ಎಂದು ಸೂಚಿಸಲು ಈ ಓರೆಗೆರೆ ಚಿಹ್ನೆಯನ್ನು ಬಳಸುತ್ತೇವೆ. ಇದನ್ನು / ಈ ಚಿಹ್ನೆಯಿಂದ ಗುರ್ತಿಸುತ್ತೇವೆ.
ಉದಾ: ಹುಡುಗರು/ಹುಡುಗಿಯರು ಸಮಾನ.
19. ಎದುರು ಚಿಹ್ನೆ: ಎದುರು, ವಿರೋಧ, ಪರಸ್ಪರ ಎಂಬ ಅರ್ಥವನ್ನು ಕೊಡುವ ಎದುರು ಚಿಹ್ನೆಯನ್ನು ಬರವಣಿಗೆಯಲ್ಲಿ ಇಂಗ್ಲಿಶ್ ಅಕ್ಷರಗಳನ್ನೆ ನೇರ ಎರವಲು ಪಡೆದು ಬಳಸುತ್ತೇವೆ. ಆ ಚಿಹ್ನೆ ಗಿ/S (ವರ್ಸಸ್) ಹೀಗಿದೆ. ಉದಾ: ಪುರುಷರು v/s ಮಹಿಳೆಯರು.
20. ಹಣಸೂಚಿ ಚಿಹ್ನೆ: ಡಾಲರ್, ರೂಪಾಯಿ, ಯೆನ್, ಪೌಂಡ್ ಹೀಗೆ ಬೇರೆ ಬೇರೆ ದೇಶಗಳ ಹಣವನ್ನು ಗುರ್ತಿಸಲು ಒಂದೊಂದು ಚಿಹ್ನೆಗಳನ್ನು ನಾವಿಂದು ಬಳಸಲು ತೊಡಗಿದ್ದೇವೆ. $, ₹, ¥, £ ಇತ್ಯಾದಿಗಳು. ಇವುಗಳಲ್ಲಿ ಹಣದ ಮೊತ್ತವನ್ನು ಬರೆಯುವಾಗ, ಬ್ಯಾಂಕಿನ ವಹಿವಾಟು ನಡೆಸುವಾಗ ಹಣದ ಮೊತ್ತದ ನಂತರ 5600/- ಹೀಗೆ ಒಂದು ಓರೆಗೆರೆ ಮತ್ತು ವಿಭಜಕ ಚಿಹ್ನೆ ಎರಡನ್ನೂ ಸೇರಿಸಿ ಬರೆಯುವ ಪರಿಪಾಠ ಉಂಟು. ಇದು ಸಂಖ್ಯೆ ಅಂತ್ಯವಾಯಿತು ಎಂಬುದನ್ನು ಸೂಚಿಸುತ್ತದೆ.
21. ವಿಸಂಧಿ ಚಿಹ್ನೆ: ಹಳಗನ್ನಡ ಪದಗಳನ್ನು ಬಿಡಿಸುವಾಗ ನಾವು ಸಾಮಾನ್ಯವಾಗಿ ಎರಡು ಪದಗಳ ನಡುವೆ ಒಂದು ಪ್ಲಸ್ ಚಿಹ್ನೆಯನ್ನು ಬಳಸುತ್ತೇವೆ. ಅದನ್ನು ಕನ್ನಡದಲ್ಲಿ ವಿಸಂಧಿ ಚಿಹ್ನೆ ಎಂತಲೂ, ಅಧಿಕ ಚಿಹ್ನೆ ಎಂತಲೂ ಕರೆಯುತ್ತಾರೆ. ವಿಸಂಧಿ, ಅಧಿಕ ಚಿಹ್ನೆಯನ್ನು + ಈ ಗುರುತಿನಿಂದ ಸೂಚಿಸುತ್ತಾರೆ.
ಉದಾ: 1. ರಾಮ+ಇಂದ= ರಾಮನಿಂದ, ಗಿಡ+ಅನ್ನು=ಗಿಡವನ್ನು ಹೀಗೆ ಸಂಧಿಪದಗಳನ್ನು ಬಿಡಿಸಿ ವಿಸಂಧಿ ಮಾಡುವಾಗ ಪ್ಲಸ್ ಚಿಹ್ನೆಯನ್ನು ಬಳಸುವುದರಿಂದ ಇದನ್ನು ವಿಸಂಧಿ ಚಿಹ್ನೆ ಎನ್ನುತ್ತೇವೆ. 4+3, 7+2 ಹೀಗೆ ಗಣಿತ ಲೆಕ್ಕಾಚಾರದಲ್ಲಿ ಇದನ್ನು ಅಧಿಕ ಚಿಹ್ನೆಯಾಗಿ ಬಳಸುತ್ತೇವೆ.
22. ಸಮಾನಾರ್ಥಕ ಚಿಹ್ನೆ: ಒಂದು ಪದಕ್ಕೆ ಅರ್ಥ ಬರೆಯುವಾಗ ಮತ್ತು ಕೆಲವೊಮ್ಮೆ ವಿಸಂಧಿ ಪದಗಳನ್ನು ಕೂಡಿಸಿ ಬರೆಯುವಾಗ ಸಮಾನಾರ್ಥಕ ಚಿಹ್ನೆಯನ್ನು ಬಳಸುತ್ತೇವೆ. ಸಮಾನಾರ್ಥಕ ಚಿಹ್ನೆಯನ್ನು = ಈ ಗುರುತಿನಿಂದ ಬಳಸುತ್ತೇವೆ.
1. ಶರಧಿ= ಸಮುದ್ರ (ಅರ್ಥ ಬರೆಯುವಾಗ ಬಳಸುವ = ಸಮಾನಾರ್ಥಕ ಚಿಹ್ನೆ)
2. ಗಿಡ+ಅನ್ನು=ಗಿಡವನ್ನು (ವಿಸಂಧಿ ಪದಗಳನ್ನು ಕೂಡಿಸಿ ಬರೆಯುವಾಗಲು ಸಮಾನಾರ್ಥಕ ಬಳಸುತ್ತೇವೆ)
ಇತ್ತೀಚೆಗೆ ಅಳತೆ ಮತ್ತು ಮಾಪನಗಳನ್ನು ಬಳಸುವಾಗ ವಿಶೇಷವಾಗಿ ಗಣಿತಶಾಸ್ತ್ರದಲ್ಲಿ ಸಮಾನ ಎನ್ನುವುದಕ್ಕೆ ಬದಲಾಗಿ ಸರಿಸುಮಾರು ಸಮಾನ ಎಂಬುದಕ್ಕೆ ≈ ಈ ಚಿಹ್ನೆಯನ್ನೂ ಕರಾರುವಕ್ಕಾಗಿ ಸಮಾನ ಎಂಬುದಕ್ಕೆ ≡ ಈ ಚಿಹ್ನೆಯನ್ನೂ ಭಿನ್ನ ಅಳತೆಗಳ ಮಾನಗಳು ಒಂದೆ ಸಮಾನ ಎಂದು ಹೇಳಲು ≘ ಈ ಚಿಹ್ನೆಯನ್ನೂ ಬಳಸುತ್ತಾರೆ.
23. ವಿರೋಧಾರ್ಥಕ ಚಿಹ್ನೆ: ಗಣಿತದಲ್ಲಿ ಬಳಸುವ ಇಂಟು ಮಾರ್ಕ್‍ನ್ನು ಕನ್ನಡದಲ್ಲಿ ಹಿಂದಿನಿಂದಲು ವ್ಯಾಕರಣದಲ್ಲಿ ವಿರುದ್ಧ ಪದಗಳನ್ನು ಅಕ್ಕಪಕ್ಕ ಇರಿಸಿ ಬರೆಯುವಾಗ ವಿರೋಧಾರ್ಥಕ ಚಿಹ್ನೆಯಾಗಿ ಬಳಸುತ್ತ ಬಂದಿದ್ದಾರೆ. ಅದನ್ನು ಘಿ ಈ ಚಿಹ್ನೆಯಿಂದ ಗುರ್ತಿಸುತ್ತೇವೆ. ಉದಾ: ಹಗಲುಘಿರಾತ್ರಿ, ಕತ್ತಲು ಘಿಬೆಳಕು
24. ಇತರೆ ಚಿಹ್ನೆಗಳು: ವಿಜ್ಞಾನ ವಿಷಯಗಳಲ್ಲಿ, ಗಣಿತಶಾಸ್ತ್ರದಲ್ಲಿ ನಾವು ಹಲವಾರು ಚಿಹ್ನೆಗಳನ್ನು ಬಳಸುತ್ತೇವೆ. ಅವನ್ನು ವ್ಯಾಕರಣದ ವ್ಯಾಪ್ತಿಯಲ್ಲಿ ನಾವು ಚರ್ಚಿಸಿಲ್ಲ. ಆದರೆ ಅವೂ ಕೂಡ ಲೇಖನ ಚಿಹ್ನೆಗಳೆ ಹೌದು. ವರ್ಗಮೂಲ, ಭಾಗಾಕಾರ, ಗುಣಾಕಾರ, ಸಮಾನ, ಕೂಡು, ಕಳೆ, ಸೈನ್ ತೀಟಾ, ಕಾಸ್ ತೀಟಾ ಹೀಗೆ ಹಲವಾರು ಚಿಹ್ನೆಗಳನ್ನು ಬಳಸುತ್ತೇವೆ. ಅಳತೆ, ತೂಕ, ಎಣಿಕೆಗಳಲ್ಲು ಹಲವಾರು ಬಗೆಯ ಚಿಹ್ನೆಗಳನ್ನು ಬಳಸುತ್ತೇವೆ. ಚಿಹ್ನೆಗಳ ಜೊತೆಗೆ ಯಥೇಚ್ಛವಾಗಿ ಸಂಕ್ಷೇಪಾಕ್ಷರಗಳನ್ನು (ಉದಾಹರಣೆಗೆ ಫೋರ್ಸ್ ಸೂಚಿಸಲು ಎಫ್ ಅಕ್ಷರವನ್ನೂ, ಎನರ್ಜಿ ಸೂಚಿಸಲು ಇ ಅಕ್ಷರವನ್ನೂ) ಹೀಗೆ ಬಳಸುವುದು ಇತ್ತೀಚೆಗೆ ಹೆಚ್ಚು ಹೆಚ್ಚು ಚಾಲ್ತಿಗೆ ಬರುತ್ತಿದೆ.
ಇವಲ್ಲದೆ ಕಾಗುಣಿತದ ತಪ್ಪುಗಳನ್ನು, ಮುದ್ರಣ ದೋಷಗಳನ್ನು ಸರಿಪಡಿಸುವಾಗ ಹಲವಾರು ಬಗೆಯ ಲೇಖನ ಚಿಹ್ನೆಗಳನ್ನು ಬಳಸುತ್ತೇವೆ. ತೆಗೆ, ಸೇರಿಸು, ಎರಡು ಪದಗಳನ್ನು ಬಿಡಿಸಿ ಬರೆ, ಇನ್ನಷ್ಟು ಸೇರಿಸು ಇತ್ಯಾದಿ ಸೂಚನೆಗಳಿಗೆ ಹಲವು ಬಗೆಯ ಲೇಖನ ಚಿಹ್ನೆಗಳನ್ನು ನಾವು ಬಳಸುತ್ತೇವೆ. ಇಷ್ಟೆ ಅಲ್ಲದೆ ವಾಹನ ಸಂಚಾರ ನಿಯಮಗಳನ್ನು ಹೇಳುವಾಗ ಬರಹದಲ್ಲಿ ನಿಲ್ಲಿಸು, ನಡೆ, ಬಲತಿರುವು, ಎಡತಿರುವು, ಯು ತಿರುವು ಹೀಗೆ ಒಂದೊಂದಕ್ಕು ಭಿನ್ನ ಚಿಹ್ನೆಗಳನ್ನು ಬಳಸುತ್ತೇವೆ. ಇವಲ್ಲದೆ ಕೆಲವೊಮ್ಮೆ ಮಾರ್ಗ ಸೂಚನೆಗೆ ತೋರುಬೆರಳನ್ನು ಬಳಸುವುದು, ಬಾಣದ ಗುರುತನ್ನು ಬಳಸುವುದು ಹೀಗೆ ಹಲವು ಚಿಹ್ನೆಗಳನ್ನು ಬಳಸುತ್ತೇವೆ. ಬಳಕೆಯಲ್ಲಿ ಚಿಹ್ನೆಗಳು ದಿನೇ ದಿನೇ ಹೆಚ್ಚಳ ಕಾಣುತ್ತಲೇ ಇವೆ. ಆದರೆ ನಮ್ಮ ವ್ಯಾಕರಣ ನಿಂತಲ್ಲೆ ನಿಂತಿರುತ್ತದೆ.
ಇತ್ತೀಚೆಗೆ ತಂತ್ರಜ್ಞಾನ ಹೆಚ್ಚಾಗಿ ಬೆಳೆದು, ಅಂತರ್ಜಾಲ ಸಂಪರ್ಕ ಸಾಕಷ್ಟು ಮಂದಿಗೆ ಒದಗಿ, ಮೊಬೈಲ್ ಬಳಸುವ ಜನ ಹೆಚ್ಚಾಗಿ ಹಲವು ಬಗೆಯ ಇಮೋಜಿಗಳನ್ನು, ಸಂಕೇತಗಳನ್ನು ಅಭಿವ್ಯಕ್ತಿಗೆ ನಾವು ಬಳಸುತ್ತಿದ್ದೇವೆ. ನಗು, ದುಃಖ, ಸಂತೋಷ, ಒಪ್ಪಿಗೆ, ನಿರಾಕರಣೆ, ನೋವು, ಕೋಪ ಇತ್ಯಾದಿ ಭಾವನೆಗಳನ್ನು ಹಂಚಿಕೊಳ್ಳಲು ನಾವಿಂದು ಭಾಷೆಯ ಹಂಗಿಲ್ಲದೆ ಇಮೋಜಿಗಳನ್ನು ಮತ್ತು ಸಂಕೇತಗಳನ್ನು ಬಳಸುತ್ತಿದ್ದೇವೆ. ಅವೆಲ್ಲವೂ ಭಾಷಾತೀತ ಲೇಖನ ಚಿಹ್ನೆಗಳಾಗಿ ಬಳಕೆಯಲ್ಲೆ ಜಾರಿಯಾಗುವ ಕಾಲ ದೂರವಿಲ್ಲ. ಆಗ ಯೂನಿವರ್ಸಲ್ ವ್ಯಾಕರಣಕ್ಕೆ ಹೊಸದೇ ವಿಸ್ತಾರ ಒದಗಬಹುದು.
ಈ ಅಂಕಣದ ಹಿಂದಿನ ಬರೆಹಗಳು:
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.