ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು

Date: 24-11-2022

Location: ಬೆಂಗಳೂರು


“ಬರಹಗಳಲ್ಲಿ ಪದಗಳು ಬೆಳೆಯುವ ವಿಬಿನ್ನ ಪ್ರಕ್ರಿಯೆಗಳನ್ನು ಪರಿಚಯಿಸಿಕೊಳ್ಳೋಣ. ಪದಗಳು ಬೆಳೆಯುವ ಪ್ರಕ್ರಿಯೆಯನ್ನು ಅರಿತುಕೊಂಡಾಗ ಹೊಸಪದಗಳ ಹುಟ್ಟಿಸುವಿಕೆ ಪ್ರಕ್ರಿಯೆ ಸುಲಬವಾಗುತ್ತದೆ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು’ ವಿಚಾರದ ಕುರಿತು ಬರೆದಿದ್ದಾರೆ.

ಮನುಶ್ಯ ಬಾಶೆಯ ಒಂದು ಮುಕ್ಯವಾದ ಲಕ್ಶಣವೆಂದರೆ ದಿನವೂ ಬದುಕುವುದು. ಬಾಶೆ ಸಮಾಜದ ಬಾಗವಾಗಿ ಇರುವುದು, ಸಮಾಜದ ಬದುಕನ್ನು ರೂಪಿಸುತ್ತಿರುವುದು ಮಾತ್ರವಲ್ಲದೆ ಸಮಾಜದ ನಡುವೆ ತಾನು ರೂಪುಗೊಳ್ಳುವುದು. ಬಾಶೆಯೊಂದರ ಪದಗಳನ್ನು ಅವಲೋಕಿಸುತ್ತಿರುವ ನಾವು ಈ ವಿಚಾರವನ್ನು ಹೀಗೆ ಅರಿತುಕೊಳ್ಳಬಹುದು. ಸಮಾಜ ಬದಲಾಗುತ್ತಿದ್ದಂತೆ ಹೊಸ ಹೊಸ ಪದಗಳು ಅನಿವಾರ‍್ಯವಾಗಿ ಬೇಕಾಗುತ್ತವೆ. ಸಾಮಾಜಿಕ ಅವಶ್ಯಕತೆಗೆ ತಕ್ಕಂತೆ ಜಗತ್ತಿನ ಪ್ರತಿಯೊಂದು ಬಾಶೆಯಲ್ಲಿಯೂ ಹೊಸ ಹೊಸ ಪದಗಳನ್ನು ಹುಟ್ಟಿಸುವುದಕ್ಕೆ ನಿರ‍್ದಿಶ್ಟವಾದ ಪ್ರಕ್ರಮಗಳು ಇವೆ. ಇವತ್ತಿನ ಬರವಣಿಗೆಯಲ್ಲಿ ಕನ್ನಡದಾಗ ಹೊಸ ಪದಗಳನ್ನು ಹುಟ್ಟಿಸುವುದಕ್ಕೆ ಇರುವ ಕೆಲವು ಪ್ರಕ್ರಮಗಳನ್ನು ಕುರಿತು ಮಾತಾಡೋಣ.

ಸಾಮಾನ್ಯವಾಗಿ ಕನ್ನಡದಲ್ಲಿ ಪದಗಳಿಗೆ ಪ್ರತ್ಯಯಗಳು ಸೇರಿ ಹೊಸ ಪದಗಳು ಹುಟ್ಟುತ್ತವೆ. ಇದರೊಟ್ಟಿಗೆ ಎರಡು ಪದಗಳು ಪರಸ್ಪರ ಸೇರಿ ಹೊಸ ಪದಗಳ ಹುಟ್ಟುತ್ತವೆ. ಇವೆರಡು ಕನ್ನಡದಲ್ಲಿ ಹೆಚ್ಚು ಉತ್ಪಾದಕವಾದವುಗಳಾಗಿವೆ. ಅಂದರೆ ಹೆಚ್ಚು ಹೆಚ್ಚು ಸಂಕೆಯ ಪದಗಳು ಕನ್ನಡದಲ್ಲಿ ಈ ಪ್ರಕ್ರಿಯೆಗಳಲ್ಲಿ ಹುಟ್ಟಿವೆ. ಇವುಗಳ ಜೊತೆಗೆ ಬೇರೆ ಬಾಶೆಗಳಿಂದ ತೆಗೆದುಕೊಳ್ಳುವುದು ಕನ್ನಡದಾಗ ಹೊಸಪದಗಳನ್ನು ಬೆಳೆಸುವ, ಕನ್ನಡ ಪದಕೋಶವನ್ನು ಬೆಳೆಸುವ ಇನ್ನೊಂದು ಮಹತ್ವದ ದಾರಿ. ಇದರ ಜೊತೆಗೆ ಇನ್ನೂ ಹಲವಾರು ಸಣ್ಣಸಣ್ಣ ಪ್ರಮಾಣದ ಪ್ರಕ್ರಿಯೆಗಳು ಕನ್ನಡದಲ್ಲಿ ಹೊಸಪದಗಳು ಹುಟ್ಟುವುದಕ್ಕೆ ಕಾರಣವಾಗುತ್ತವೆ. ಈ ಪ್ರಕ್ರಿಯೆಗಳನ್ನು ಒಂದೊಂದಾಗಿ ಮಾತಿಗೆ ತೆಗೆದುಕೊಳ್ಳಬಹುದು.

ಇಂದಿನ ಬರಹದಲ್ಲಿ ಮೂಲಕನ್ನಡದ ಹಂತದಿಂದ ಕನ್ನಡದಲ್ಲಿ ಪದಗಳು ಹೇಗೆ ಬೆಳೆದಿರಬಹುದು ಎಂಬುದರ ಬಗೆಗೆ ತುಸು ಮಾತಾಡಿದೆ. ಆನಂತರ ಈ ಮೇಲೆ ಹೇಳಿದ ಪ್ರತಿಯೊಂದು ಪ್ರಕ್ರಿಯೆ ಬಗೆಗೆ ಮಾತಾಡಬಹುದು. ಮೂಲಕನ್ನಡದ ಹಂತದಲ್ಲಿ ಪದಗಳು ಸಹಜವಾಗಿ ತುಂಬಾ ಕಡಿಮೆ ಇದ್ದಿರಬೇಕು. ಇದನ್ನು ಎರಡು ಕಾರಣಗಳಿಂದ ಒಪ್ಪಬಹುದು. ಮೊದಲನೆಯದು ಮೂಲಕನ್ನಡದ ಕಾಲವನ್ನು ಅಂದಾಜು ನಾಲ್ಕಯ್ದು ಸಾವಿರ ವರುಶ ಎಂದುಕೊಂಡರೆ ಅಶ್ಟು ಹಿಂದೆ ಸಾಮಾಜಿಕ ರಚನೆ ಅಶ್ಟಾಗಿ ಬೆಳೆದಿರಲಿಲ್ಲ. ಆದರೆ ಸಮಾಜ ರಚನೆ ಇದ್ದಿರಬಹುದು, ತುಂಬಾ ಸೀಮಿತವಾಗಿದ್ದಿರಬಹುದು. ಹಾಗಾಗಿ ಸಹಜವಾಗಿ ಅಂದಿನ ಬದುಕಿಗೆ ಕಡಿಮೆ ಸಂಕೆಯ ಪದಗಳು ಸಾಕಾಗಿದ್ದಿರಬಹುದು. ಕುತೂಹಲವೆಂದರೆ ಹೆಚ್ಚಿನ ಆದುನಿಕ ಸಾಮಾಜಿಕ ಬದುಕಿಗೆ ಇನ್ನೂ ತೆರೆದುಕೊಂಡಿಲ್ಲದ ಬುಡಕಟ್ಟು ಬಾಶೆಗಳಲ್ಲಿ ಇಂದಿಗೂ ಮೂರ‍್ನಾಲ್ಕು ಸಾವಿರ ಪದಗಳು ಇದ್ದರೆ ಹೆಚ್ಚು. ಇಂತಾ ಹಲವಾರು ಬಾಶೆಗಳನ್ನು ಬಾರತದಲ್ಲಿ ಕಾಣಬಹುದು.

ಈ ವಿಚಾರವನ್ನು ಕನ್ನಡದ ಸಂದರ‍್ಬದಲ್ಲಿ ಒಪ್ಪುವುದಕ್ಕೆ ಪೂರಕವಾಗಿ ಬೇರೆ ಬೇರೆ ಕೆಲವು ವಿಚಾರಗಳನ್ನು ಆದಾರವಾಗಿ ನೋಡಬಹುದು. ಇಂದಿನ ಕನ್ನಡ ನಿಗಂಟನ್ನು ಗಮನಿಸಿದಾಗ ಸಾಕಶ್ಟು ಪದಗಳು ಸಾಮಾಜಿಕ ಬೆಳವಣಿಗೆಯನ್ನು ಪ್ರತಿನಿದಿಸುವಂತೆ ಬಂದಿವೆ. ಕನ್ನಡದ ಮೊದಮೊದಲ ಬರಹಗಳಲ್ಲಿ ದೊರೆಯುವ ಒಂದೆರಡು ಪದಗಳನ್ನು ಮಾತಿಗೆ ಇಲ್ಲಿ ಬಳಸಿಕೊಳ್ಳಬಹುದು. ಬಾದಾಮಿ ಚಾಲುಕ್ಯರ ಶಾಸನಗಳಲ್ಲಿ ಕಲ್ಮನೆ ಎಂಬ ಪದ ಬಳಕೆಯಾಗಿದೆ. ಹಳೆಯ ಶಾಸನಗಳಲ್ಲಿ ಕಲ್ಬರಹ, ಕಲ್ನಾಟ್ಟು ಎಂಬ ಪದಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಪದಗಳಿಗೆ ಸಹಜವಾಗಿ ತುಂಬಾ ಹಿಂದಿನ ಕತೆ ಇರಲು ಸಾದ್ಯವಾಗದು. ಕಲ್ಲಿನಲ್ಲಿ ಇಲ್ಲವೆ ಕಲ್ಲಿನಿಂದ ಆದ ಮನೆಯನ್ನು ಹೇಳುವುದಕ್ಕೆ ಕಲ್ಮನೆ ಪದ ಬಳಕೆಯಾಗಿದೆ. ಅಂದರೆ ‘ಗವಿ’. ಕಲ್ಮನೆ ಎಂಬ ಪದವೊಂದು ಕನ್ನಡದಲ್ಲಿ ಬೆಳೆಯಬೇಕಾದರೆ ಕನ್ನಡದಲ್ಲಿ ಮನುಶ್ಯರು ವಾಸವಾಗುವುದಕ್ಕೆ ಗವಿಯನ್ನು ಆಶ್ರಯಿಸಿದ್ದಿರಬೇಕು. ಮನುಶ್ಯರು

ಎಲ್ಲರಿಗೂ ತಿಳಿದಿರುವಂತೆ ಅಲೆಮಾರಿಗಳು, ಒಕ್ಕಲುತನದ ಬಳಿಕವಶ್ಟೆ ಒಂದೆಡೆ ನೆಲೆ ಊರಲು ಮೊದಲಾಗಿದೆ. ಹೀಗೆ ಒಂದೆಡೆ ನೆಲೆ ನಿಂತಾಗ ಆಸರೆ ಇಲ್ಲವೆ ಆಶ್ರಯ ಇವುಗಳ ಪರಿಕಲ್ಪನೆ ಬೆಳೆದಿರಬೇಕು. ಹೀಗೆ ಈ ಪರಿಕಲ್ಪನೆ ಬೆಳೆದಾಗ ಮೊದಮೊದಲು ಕಲ್ಲಿನಲ್ಲಿ ಮನುಶ್ಯ ಬದುಕಿದ್ದು ಸ್ಪಶ್ಟ. ಹೀಗೆ ಮನುಶ್ಯ ಕಲ್ಲಿನ ಶ್ರಯದಲ್ಲಿ ನೆಲೆಸಲು ತೊಡಗಿದಾಗ ಅದಕ್ಕೆ ಒಂದು ಹೆಸರು ಇರಬೇಕಾದ ಅವಶ್ಯಕತೆ ಬಂದು ಆ ಪದವನ್ನು ಬಳಸಿರಲು ಸಾದ್ಯ. ಹಾಗಾದರೆ, ಮನುಶ್ಯ ಮನೆ ಎಂಬ ಪರಿಕಲ್ಪನೆ ಬೆಳೆಸಿಕೊಂಡ ನಂತರ ‘ಕಲ್ಮನೆ’ ಪದ ಬೆಳೆದಿದೆ. ಹೀಗೆಯೆ, ಈ ಮೇಲೆ ಹೇಳಿದ ಕಲ್ಬರಹ ‘ಕಲ್ಲಿನ ಬರಹ’-‘ಶಾಸನ ಬರಹ’-‘ಶಾಸನ’, ಕಲ್ನಾಟ್ಟು ‘ಕಲ್ಲು ನೆಟ್ಟದ್ದು’, ‘ನೆಟ್ಟಕಲ್ಲು’-‘ಶಾಸನ’ ಪದಗಳು ಬರುವುದು ಕಲ್ಲಿನಲ್ಲಿ ಬರೆಯುವುದಕ್ಕೆ ಸಾದ್ಯವಾದ ಬಳಿಕ. ಇನ್ನೂ ಸಹಜವಾಗಿ ಇನ್ನೊಂದು ನಮ್ಮ ಕಾಲದ ಉದಾಹರಣೆಯನ್ನು ತೆಗೆದುಕೊಂಡು ಮಾತಾಡುವುದಾದರೆ, ಕನ್ನಡದಲ್ಲಿ ಕಂಪ್ಯೂಟರು ಎಂಬ ಪದ ಹುಟ್ಟಿದ್ದು ಕನ್ನಡ ಮಾತಾಡುವ ಸಮುದಾಯ ಕಂಪ್ಯೂಟರು ಎಂಬ ಸಾದನವೊಂದನ್ನು ಬಳಸಲು ತೊಡಗಿದಾಗ. ಹೀಗೆ ಪ್ರತಿಯೊಂದು ಪದ ಸಮಾಜದ ನಿರ‍್ದಿಶ್ಟ ಅವಸರದಲ್ಲಿ ಹುಟ್ಟಿರುತ್ತದೆ. ಈ ಪದಗಳ ಚರಿತ್ರೆಯನ್ನು ತಿಳಿದುಕೊಂಡಾಗ ಪದ ಹುಟ್ಟಿರಬಹುದಾದ ಅಂದಾಜು ಕಾಲಗಟ್ಟ ನಮಗೆ ಸ್ಪಶ್ಟವಾಗಿ ಕಾಣಿಸುತ್ತದೆ. ಹೀಗೆ ಪದಗಳು ಕಾಲಾನಂತರದಲ್ಲಿ ಬೆಳೆದಿವೆ ಎಂಬುದು ನಮಗೆ ಸ್ಪಶ್ಟವಾಗುತ್ತದೆ. ಇದು ಸಮಾಜದ ಬೆಳವಣಿಗೆಗೆ ಕನ್ನಡಿಯನ್ನೂ ಹಿಡಿಯುತ್ತದೆ ಎನ್ನುವುದು ಮತ್ತೊಂದು ವಿಚಾರ.

ಮೂಲಕನ್ನಡದಲ್ಲಿ ಕಡಿಮೆ ಸಂಕೆಯಲ್ಲಿ ಇದ್ದ ಪದಗಳು ಕಾಲಾಂತರದಲ್ಲಿ ಬೆಳೆದವು ಎಂದರೆ ಅದಕ್ಕೆ ನಿರ‍್ದಿಶ್ಟವಾದ ರಾಚನಿಕ ಹಿನ್ನೆಲೆ ಇರಬೇಕಾಗುತ್ತದೆ. ಇವುಗಳಲ್ಲಿ ಮೂಲಬೂತವಾದ ಮತ್ತು ಅತ್ಯಂತ ಸಹಜವಾದ ಕೆಲವು ವಿಚಾರಗಳನ್ನು ಇಲ್ಲಿ ಉಲ್ಲೇಕಿಸಿದೆ. ಪ್ರಮುಕವಾದವುಗಳನ್ನು ಬೇರೆಬೇರೆಯಾಗಿ ಮಾತಾಡಬಹುದು.

ಮೂಲಕನ್ನಡದ ಹಂತದಲ್ಲಿ ಸಾಮಾನ್ಯವಾಗಿ ಅತಿ ಸಣ್ಣ ಪ್ರಮಾಣದ, ಅಂದರೆ ಒಂದು ಇಲ್ಲವೆ ಎರಡು ಅಕ್ಶರಗಳ ಪದಗಳು ಹೆಚ್ಚಾಗಿ ಇದ್ದವು. ಮೂರಕ್ಶರದ ಪದಗಳು ಅತಿ ವಿರಳ ಎನಿಸುತ್ತದೆ, ಆದರೆ ಇಲ್ಲವೆನಲಾಗಲಿಕ್ಕಿಲ್ಲ. ಯಾಕೆಂದರೆ ಮೂಲದ್ರಾವಿಡಕ್ಕೆ ಹಲವು ಮೂರು ಅಕ್ಶರಗಳ ಪದಗಳನ್ನು ಮತ್ತೆ ಕಟ್ಟಿದೆ. ಹಾಗಾಗಿ ಮೂಲಕನ್ನಡದ ಕಾಲದಲ್ಲಿಯೂ ಮೂರಕ್ಶರದ ಪದಗಳನ್ನು ಕಾಣಬಹುದು. ನಾವೀಗ ಗಮನ ಹರಿಸಬೇಕಾದ ವಿಚಾರವೆಂದರೆ ಒಂದು ಅಕ್ಶರದ ಮತ್ತು ಎರಡು ಅಕ್ಶರದ ಪದಗಳು ಮೂಲಕನ್ನಡದಾಗ ಹೆಚ್ಚಾಗಿದ್ದವು ಮತ್ತು ಇಂದಿನ ಕನ್ನಡದಲ್ಲಿ ಒಂದಕ್ಕರದ ಪದಗಳು ತೀರಾ ಇಲ್ಲವೆನ್ನುವಶ್ಟು ಕಡಿಮೆಯಾಗಿವೆ. ಮೂಲಕನ್ನಡದಾಗ ಎರಡಕ್ಶರದ ಪದಗಳು ಹೆಚ್ಚಿನ ಸಂಕೆಯಲ್ಲಿ ಇದ್ದಿರಬಹುದು, ಆದರೆ ಇವುಗಳಲ್ಲಿ ಹೆಚ್ಚಿನವು ಮೂರಕ್ಕರದ ಪದಗಳಾಗಿ ಬೆಳೆದಿವೆ. ಹಾಗಾದರೆ ಇಲ್ಲಿ ಏನಾಗಿದೆ? ಈ ಪದಗಳು ಬೆಳೆದಿವೆಯೆ, ಬೆಳೆದಿದ್ದರೆ ಹೇಗೆ ಬೆಳೆದಿವೆ ಎಂಬ ಪ್ರಶ್ನೆ ಬರಬಹುದು.

ಸಾಮಾನ್ಯವಾಗಿ ಮೂಲಕನ್ನಡದ ಹಂತದಲ್ಲಿ ಹೆಚ್ಚಿನ ವ್ಯಂಜನಕೊನೆ ಪದಗಳು ಇದ್ದವೆಂಬುದು ತಿಳುವಳಿಕೆ. ಸ್ವರಕೊನೆ ಪದಗಳು ಇದ್ದವಾದರೂ ಕಡಿಮೆ ಇರಬೇಕು. ಪದಗಳ ಮೇಲೆ ಪದಪೂರಣ ಸ್ವರವೊಂದು ಸೇರಿಕೊಳ್ಳುವುದು ಒಂದು ಪ್ರಕ್ರಿಯೆ. ಹೆಚ್ಚಿನ ಪದಗಳಿಗೆ ‘ಉ’ ಸ್ವರ ಹೀಗೆ ಸೇರಿಕೊಂಡಿದೆ. ಮಣ್>ಮಣ್ಣು, ಮಾಳ್>ಮಾಡು, ಮೀನ್>ಮೀನು ಮೊ. ಇಂದಿನ ಕಾಲದಲ್ಲಿ ಈ ‘ಉ’ ಸ್ವರ ಸೇರಿರುವ ಮತ್ತು ಆ ಸ್ವರ ಸೇರಿಲ್ಲದ ಎರಡೂ ರೂಪಗಳು ಬಳಕೆಯಲ್ಲಿರುವ ಉದಾಹರಣೆಯೊಂದನ್ನ ನೋಡಬಹುದು. ಹೂ+ಉ>ಹೂವು. ಈ ಪ್ರಕ್ರಿಯೆಯಲ್ಲಿ ಒಂದಕ್ಕರದ ಪದಗಳು ಎರಡಕ್ಕರದ ಪದಗಳಾಗಿ ಬೆಳೆದಿವೆ.

ಇವುಗಳ ಬಾಶೆಯಲ್ಲಿ ನಡೆಯುವ ವಿಬಿನ್ನ ಪ್ರಕ್ರಿಯೆಗಳು ಪದಗಳ ಬದಲಾವಣೆಗೆ ಕಾರಣವಾಗುತ್ತವೆ. ದ್ವನಿ ಬದಲಾವಣೆ ಪ್ರಕ್ರಿಯೆ, ಅರ‍್ತವ್ಯವಸ್ತೆಯಲ್ಲಿ ಆಗುವ ಬದಲಾವಣೆಯೂ ಪದಗಳ ಬೆಳವಣಿಗೆಗೆ ಕಾರಣವಾಗುತ್ತವೆ. ಸಾಮಾಜಿಕ ಬೆಳವಣಿಗೆಯಿಂದಾಗಿ ಪದಕೋಶ ದೊಡ್ಡಪ್ರಮಾಣದಲ್ಲಿ ಬೆಳವಣಿಗೆ ಹೊಂದುತ್ತದೆ. ಮುಂದಿನ ಕೆಲವು

ಬರಹಗಳಲ್ಲಿ ಪದಗಳು ಬೆಳೆಯುವ ವಿಬಿನ್ನ ಪ್ರಕ್ರಿಯೆಗಳನ್ನು ಪರಿಚಯಿಸಿಕೊಳ್ಳೋಣ. ಪದಗಳು ಬೆಳೆಯುವ ಪ್ರಕ್ರಿಯೆಯನ್ನು ಅರಿತುಕೊಂಡಾಗ ಹೊಸಪದಗಳ ಹುಟ್ಟಿಸುವಿಕೆ ಪ್ರಕ್ರಿಯೆ ಸುಲಬವಾಗುತ್ತದೆ.

ಇಲ್ಲಿ ಇನ್ನೊಂದು ತುಂಬಾ ಜನರಲ್ಲಾದ ಒಂದು ವಿಚಾರ. ಹೊಸ ಪದಗಳನ್ನು ಯಾರು ಹುಟ್ಟಿಸುತ್ತಾರೆ? ವಿದ್ವಾಂಸರು, ಸಾಹಿತಿಗಳು ಮಾತ್ರ ಪದಗಳನ್ನು ಹುಟ್ಟಿಸುತ್ತಾರೆಯೆ? ವಾಸ್ತವ ಹಾಗಿಲ್ಲ. ಸಾಮಾನ್ಯರು ಕನ್ನಡ ಪದಕೋಶವನ್ನು ಬೆಳೆಸಿದ್ದೆ ಹೆಚ್ಚು. ಒಂದೆರಡು ಉದಾಹರಣೆಯೊಂದಿಗೆ ಇವತ್ತಿನ ಮಾತುಕತೆಯನ್ನು ಮುಗಿಸಬಹುದು. ಮೆಂಬರ್ ಎಂಬುದು ಇಂಗ್ಲೀಶಿನಿಂದ ಬಂದ ಪದ. ಇದಕ್ಕೆ ಕನ್ನಡದ ಹೆಣ್ಸೂಚಕ ಪ್ರತ್ಯಯ –ತಿ ಸೇರಿಸಿ ಮೆಂಬರ‍್ತಿ ಎಂಬ ಪದವನ್ನು ಹುಟ್ಟಿಸಿದೆ. ಬೀಟ್ರೋಟ್ ಎಂಬ ಇಂಗ್ಲೀಶಿನ ಪದಕ್ಕೆ ಸಹಜವಾಗಿ ಕನ್ನಡದ ಸಾಮಾನ್ಯರು ರಗುತಗಡ್ಡಿ ಎಂಬ ಪದವನ್ನು ಹುಟ್ಟಿಸಿದ್ದಾರೆ. ಪಟ್ ಪಟ್ ಶಬ್ದವನ್ನು ಮಾಡುವ ವಾಹನವೊಂದು ಪಟ್ ಪಟ್ ಗಾಡಿ ಎಂದು ಹೆಸರನ್ನು ಪಡೆದುಕೊಳ್ಳುತ್ತದೆ.

ಹೀಗೆ ಹೊಸಪದಗಳು ಹುಟ್ಟುವ ಪ್ರಕ್ರಿಯೆ ಸಾಮಾಜಿಕ ಅವಶ್ಯಕತೆಯಾಗಿದ್ದು, ರಾಚನಿಕವಾದ ಹಲವಾರು ಪ್ರಕ್ರಿಯೆಗಳು ಇವೆ. ಅವುಗಳನ್ನ ಒಂದೊಂದಾಗಿ ಎತ್ತಿಕೊಂಡು ಮುಂದೆ ತುಸು ಪರಿಚಯ ಮಾಡಿಕೊಳ್ಳಬಹುದು.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...