Date: 24-10-2024
Location: ಬೆಂಗಳೂರು
"ಯಾವುದೇ ಆಚಾರ, ಸಿದ್ಧಾಂತ ಬದಲುಗೊಳ್ಳಬಹುದೆ ವಿನಃ ನಷ್ಟವಾಗಲಾರದು. ಹಾಗಾಗಿ 1800ರ ನಂತರದಲ್ಲಿ ಪಂಡಿತಮಾನ್ಯ ಪ್ರತಿಷ್ಠಿತ ಸಾಹಿತ್ಯ ವಿಮರ್ಶೆಗಳನ್ನು ಆಧುನಿಕವೆಂದೂ ಮಿಕ್ಕದ್ದನ್ನು ಪ್ರಾಚೀನವೆಂದೂ ಪರಿಕಲ್ಪಿಸಿ ನಾಮಕರಿಸುವುದು ಸಾಧುವಲ್ಲ," ಎನ್ನುತ್ತಾರೆ ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣಕ್ಕೆ ಕನ್ನಡ ವಿಮರ್ಶೆ ಭಾಗ-2 ಕುರಿತು ಬರೆದಿರುವ ಲೇಖನ.
ವಿಮರ್ಶೆಯ ಹೊಸ ನೀರಿನ ಕಾಲ (ಸುಮಾರು ಕ್ರಿ.ಶ. 1800ರಿಂದ 1950ರ ಕಾಲ)
ಆಧುನಿಕ ವಿಮರ್ಶೆ ಎಂಬ ಪರಿಭಾಷೆಯೇ ಸಡಿಲವಾಗಿ ಕಟ್ಟಿಕೊಂಡಿರುವ ಒಂದು ಪರಿಭಾಷೆ. ವಿಮರ್ಶೆಯಲ್ಲಿ ಇದು ಆಧುನಿಕ ಇದು ಪ್ರಾಚೀನ ಎಂದು ಹಾಗೆ ಗೆರೆಕೊರೆದಂತೆ ವಿಂಗಡಿಸಿಕೊಳ್ಳುವುದು ಸೂಕ್ತವಲ್ಲ. ಇಲ್ಲಿ ಇದು ಪ್ರಾಚೀನ ಇದು ಆಧುನಿಕ ಎಂದು ಗುರ್ತಿಸಬಹುದಾದ ಭೇದಗಳನ್ನು ಕಾಣಬಹುದಾದರೂ ನಾವು ಹಾಗೆ ಭಾವಿಸಬೇಕಿಲ್ಲ. ಯಾವುದೇ ಆಚಾರ, ಸಿದ್ಧಾಂತ ಬದಲುಗೊಳ್ಳಬಹುದೆ ವಿನಃ ನಷ್ಟವಾಗಲಾರದು. ಹಾಗಾಗಿ 1800ರ ನಂತರದಲ್ಲಿ ಪಂಡಿತಮಾನ್ಯ ಪ್ರತಿಷ್ಠಿತ ಸಾಹಿತ್ಯ ವಿಮರ್ಶೆಗಳನ್ನು ಆಧುನಿಕವೆಂದೂ ಮಿಕ್ಕದ್ದನ್ನು ಪ್ರಾಚೀನವೆಂದೂ ಪರಿಕಲ್ಪಿಸಿ ನಾಮಕರಿಸುವುದು ಸಾಧುವಲ್ಲ. ಆದರೆ ಸರಿಸುಮಾರು 1800ರಿಂದ 1950ರವರೆಗಿನ ಕಾಲವನ್ನು ಹೊಸ ನೀರು ನುಗ್ಗಿರುವ ಕಾಲ ಎಂದು ಕರೆದುಕೊಳ್ಳಲು ಅಡ್ಡಿಯಿಲ್ಲ. ಹಲವು ಬಗೆಯ ಗದ್ಯರೂಪಿ, ಪ್ರಬಂಧರೂಪಿ, ಸಮೀಕ್ಷಾ ರೂಪಿ ಇತ್ಯಾದಿ ವಿಮರ್ಶೆಗಳು ಸುಮಾರು 1800ರಿಂದ 1950ರವರೆಗಿನ ಕಾಲದಲ್ಲಿ ಸಂಭವಿಸುತ್ತ ಇದ್ದದ್ದನ್ನು ಕಾಣಬಹುದು.
ಈ ಅಜಮಾಸು ಕಾಲವನ್ನು ಆಧುನಿಕ ವಿಮರ್ಶೆಯ ಸಂಭವಕಾಲ ಎಂದು ಕರೆಯಬಹುದೇನೋ. ಆದರೆ ಹಾಗೆ ಭಾವಿಸಿದಾಗ ಕನ್ನಡದ ವಿಮರ್ಶೆಯನ್ನು ಆಧುನಿಕ ಮತ್ತು ಪ್ರಾಚೀನ ಎಂದು ಎರಡಾಗಿ ವಿಂಗಡಿಸಿದಂತೆ ಆಗುತ್ತದೆ. ಇದರಲ್ಲಿ ಯಾವುದನ್ನು ನಾವು ಪ್ರಾಚೀನ ಎಂದು ಕರೆಯುತ್ತೇವೋ ಅದು ಪ್ರಾಚೀನ ಮಾತ್ರವಲ್ಲ; ಅದು ಆಧುನಿಕವೂ, ರೂಪಾಂತರಿತವೂ ಹೌದು. ಆದ್ದರಿಂದ ಇಂತಹ ವಿಂಗಡನೆಯನ್ನು ತಪ್ಪಿಸಬೇಕೆಂದರೆ ಇದನ್ನು ಇಲ್ಲಿ ‘ಹೊಸನೀರಿನ ಕಾಲದ ವಿಮರ್ಶೆ’ ಎಂದೆ ಕರೆದುಕೊಳ್ಳುವುದು ಸೂಕ್ತ ಎನ್ನಿಸುತ್ತದೆ. ಈ ಹೊಸನೀರಿನ ಕಾಲದ ವಿಮರ್ಶೆಯು ಸಂಭವಗೊಂಡ ಬಗೆಗಳ ಹುಡುಕಾಟ ಮತ್ತು ಆ ಬಗೆಗಳು ಹಾಗೇ ಸಂಭವಿಸಲು ಇದ್ದ ಕಾರಣಗಳು ಏನಿರಬಹುದೆಂಬ ಹುಡುಕಾಟ ಈ ಬರೆಹದ ಎರಡನೆ ಭಾಗ. ಮಿತ ವಿವರವುಳ್ಳ ಪರಿಕಲ್ಪನಾತ್ಮಕ ನೆಲೆಗಳಿಂದ ಈ ಬರೆಹವನ್ನು ಕಟ್ಟಲಾಗಿದೆ. ವಿಮರ್ಶೆಯ ವಿನ್ಯಾಸ ಮತ್ತು ತಾತ್ವಿಕತೆ ಹಾಗೂ ಕಾರಣಗಳನ್ನು ಬೇರ್ಪಡಿಸದೇ ಒಟ್ಟೊಟ್ಟಿಗೇ ಪರಿಶೀಲಿಸಲು ಇಲ್ಲಿ ಯತ್ನಿಸಲಾಗಿದೆ.
ಆನಂತರದ ಮುಂದಿನ ಭಾಗದಲ್ಲಿ ಕನ್ನಡ ವಿಮರ್ಶೆಯ ಏರುಗತಿಯ ಕಾಲ ಎಂದು 1950ರ ನಂತರದ ಕಾಲವನ್ನು ಕರೆದುಕೊಂಡು ಈ ಕಾಲದಲ್ಲಿ ಕನ್ನಡದಲ್ಲಿ ಸಂಭವಿಸಿರುವ ವಿಮರ್ಶಾ ಸ್ಕೂಲುಗಳು ಅಥವಾ ಧಾರೆಗಳು ಯಾವುವು ಮತ್ತು ಅವುಗಳ ಸ್ವರೂಪ ಏನು ಎಂದು ಸಂಕ್ಷಿಪ್ತವಾಗಿ ವಿವರಿಸಿಕೊಳ್ಳಲು ಯತ್ನಿಸಲಾಗಿದೆ. ಇವುಗಳನ್ನು ವಿಮರ್ಶೆಯ ಚಿಂತನಾ ಸ್ಕೂಲುಗಳು ಎಂದು ಸ್ಥಾಪಿಸುವುದಕ್ಕೆ ಬೇಕಾದ ಪೂರ್ಣ ಪ್ರಮಾಣದ ತಾತ್ವಿಕ ಸಿದ್ಧತೆ ಇಲ್ಲಿಲ್ಲ. ಆದರೆ ವಿಮರ್ಶೆಯ ಬಗೆಗಳಾಗಿ ಇವುಗಳನ್ನು ಗುರ್ತಿಸಿಕೊಳ್ಳುವ ಸಾಧ್ಯತೆಯಂತು ಇದ್ದೆ ಇದೆ. ಹೀಗಾಗಿ ಇದು ಅಂತಹ ಕನ್ನಡದ ವಿಮರ್ಶೆಯ ಸ್ಕೂಲುಗಳ ಚರ್ಚೆಯ ಕೆಲಸಕ್ಕೆ ಒಂದು ತೋರುಬೆರಳು ಮಾತ್ರ. ಮುಂದೆ ಕನ್ನಡ ವಿಮರ್ಶೆಯನ್ನು ಕಟ್ಟಬಹುದಾದ, ತಾತ್ವೀಕರಿಸಬಹುದಾದ ಸಾಧ್ಯತೆಯ ಒಂದಂಶವನ್ನಷ್ಟೆ ಇಲ್ಲಿ ನಿರೂಪಿಸಲಾಗಿದೆ. ಅಲ್ಲದೆ ಇಲ್ಲಿ ಚಾರಿತ್ರಿಕ ಸಮೀಕ್ಷೆ ಕೂಡ ಇಲ್ಲ. ಹಾಗಾಗಿ ಅಂತಹ ನಿರೀಕ್ಷೆ ಇರುವವರಿಗೆ ಇಲ್ಲಿ ನಿರಾಸೆ ಆಗಬಹುದು.
***
ಸುಮಾರು 1804ರ ಹೊತ್ತಿಗೆ ಜಾನ್ ಮೆಕೆರಲ್ ಕ್ಯಾನರೀಸ್ ಗ್ಯ್ಲಾಮರ್ ಪ್ರಕಟಿಸಿದ್ದಾನೆ. ಡಬ್ಲ್ಯು ರೀವ್‌ನಿಂದ ಸಿದ್ಧಗೊಂಡ ಕರ್ನಾಟಕ ಅಂಡ್ ಇಂಗ್ಲಿಶ್ ಡಿಕ್ಷನರಿ ಪ್ರಕಟವಾಗಿದ್ದು ಸುಮಾರು 1810ರಲ್ಲಿ. 1817ರಲ್ಲಿ ವಿಲಿಯಂ ಕೇರಿ ತನ್ನ ‘ಎ ಗ್ರಾಮರ್ ಆಫ್ ದಿ ಕರ್ನಾಟ ಲಾಂಗ್ವೇಜ್’ ಅನ್ನು ಕಲ್ಕತ್ತದಿಂದ ಪ್ರಕಟಿಸಿದ್ದಾನೆ. ಮೆಕೆರಲ್ 1820ರಲ್ಲಿ ‘ಎ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೆಜ್’ ಅನ್ನು ಮದ್ರಾಸಿನಿಂದ ಪ್ರಕಟಿಸಿದ್ದಾನೆ. ರಾಬರ್ಟ್ ಕಾಲ್ಡ್ವೆಲ್ಲನಿಂದ ‘ಎ ಕಂಪ್ಯಾರೆಟಿವ್ ಗ್ರಾಮರ್ ಆಫ್ ದ್ರವಿಡಿಯನ್ ಲಾಂಗ್ವೇಜಸ್’ 1816ರಲ್ಲಿ ಪ್ರಕಟವಾಗಿದೆ. ಸರಿಸುಮಾರು ಇದೇ ಕಾಲದಲ್ಲಿ ಜೆ. ಬುಚರ್ ತನ್ನ ಕನ್ನಡ ಇಂಗ್ಲಿಶ್ ಡಿಕ್ಷನರಿಯನ್ನು ಪ್ರಕಟಿಸಿದ್ದಾನೆ. ಇದರಲ್ಲಿ ಬುಚರ್ ಪ್ರಸ್ತಾವನೆಯಾಗಿ ‘ಸಮ್ ರಿಮಾರ್ಕ್ಸ್ ಆನ್ ದಿ ಕನ್ನಡ ಲಾಂಗ್ವೇಜ್’ ಎಂದು ಭಾಷಾ ವಿವೇಚನೆಯ ಕೆಲವು ಮಾತುಗಳನ್ನು ಬರೆದಿದ್ದಾನೆ. ಮೊದಮೊದಲಿಗೆ ಮುದ್ರಣ ರೂಪದಲ್ಲಿ ಪ್ರಕಟವಾದ ಕೆಲವು ಕನ್ನಡ ಕೃತಿಗಳಿವು. ಇವುಗಳ ನಂತರ ಇನ್ನೆರಡನ್ನು ನಾವಿಲ್ಲಿ ಗಮನಿಸಬೇಕು. ‘ನಾಗವರ್ಮಾಸ್ ಪ್ರಸೋಡಿ’ ಗ್ರಂಥಕ್ಕೆ ಕಿಟ್ಟೆಲ್ ಬರೆದ ಮುನ್ನುಡಿ ಅ್ಯನ್ ಎಸ್ಸೇ ಆನ್ ಕೆನರೀಸ್ ಲಿಟರೇಚರ್ ಮತ್ತು ಗಾಟ್‌ಫ್ರೈಡ್ ವೈಗಲ್ ಬರೆದ ‘ಆನ್ ಕೆನರೀಸ್ ಲಿಟರೇಚರ್ ಅಂಡ್ ಲ್ಯಾಂಗ್ವೇಜ್’ ಈ ಎರಡೂ ಮೊದಲ ಕನ್ನಡ ಸಾಹಿತ್ಯ ಚರಿತ್ರೆ ರಚನೆಯ ಐರೋಪ್ಯ ಯತ್ನಗಳಾಗಿವೆ. 1 ಸರಿಸುಮಾರು ಇದೇ ಕಾಲದಲ್ಲಿ ದೇವಚಂದ್ರನ ‘ರಾಜಾವಳಿ ಕತೆ’ ಪ್ರಕಟವಾಗಿದೆ. (ಈತನಿಗೆ ಪಾಶ್ಚಾತ್ಯ ವಿದ್ವಾಂಸರ ಪರಿಚಯವಿತ್ತು ಮತ್ತು ಈತ ಅವರಿಗೆ ಸಹಾಯ ಮಾಡಿದ್ದಾನೆ ಕೂಡ) ಹೊಸನೀರಿನ ಕಾಲದಲ್ಲಿ ಪ್ರಕಟವಾಗಿರುವ ಈ ಎಲ್ಲ ಕೃತಿಗಳಲ್ಲಿ ಆಧುನಿಕ ಕನ್ನಡ ವಿಮರ್ಶೆಯ ಮೊಳಕೆಗಳನ್ನು ನಾವು ಕಾಣಬಹುದು.
ಶಾಸನಗಳ ಮತ್ತು ಹಳಗನ್ನಡ ಪಠ್ಯಗಳ ಸಂಗ್ರಹ-ಸಂಪಾದನೆ, ಸಾಹಿತ್ಯಚರಿತ್ರೆ ರಚನೆ, ಅನುವಾದ, ವ್ಯಾಕರಣ, ನಿಘಂಟು, ಭಾಷಾಶಾಸ್ತ್ರೀಯ ಕೃತಿಗಳ ಮೂಲಕ ಆರಂಭದಲ್ಲಿ ಕನ್ನಡ ವಿಮರ್ಶೆಯ ಸಂಭವ ಆಗಿದೆ. ಈ ಕಾಲದಲ್ಲಿ ಮೊದಲಿಗೆ ಸಾಹಿತ್ಯ ವಿಮರ್ಶೆಯ ಉದ್ದೇಶದಿಂದ ಏನೂ ವಿಮರ್ಶೆಯು ಸಂಭವಿಸಲಿಲ್ಲ. ಸ್ಥಳೀಯ ಸಂಸ್ಕೃತಿಗಳನ್ನು ಅಭ್ಯಾಸ ಮಾಡಿ ತಿಳಿದುಕೊಂಡರೆ; 1. ಸ್ಥಳೀಯರನ್ನು ಇನ್ನಷ್ಟು ಚೆನ್ನಾಗಿ ಆಳಬಹುದು. 2. ಸ್ಥಳೀಯರನ್ನು ತಮ್ಮ ಧರ್ಮಕ್ಕೆ ಮತಾಂತರಿಸುವುದು ಸುಲಭವಾಗಬಹುದು. 3. ತಮ್ಮ ಸೇವೆಗೆ ಸ್ಥಳೀಯರನ್ನು ಇನ್ನಷ್ಟು ವಿಧೇಯವಾಗಿ ಬಳಸಿಕೊಳ್ಳಬಹುದು. 4. ತಮ್ಮ ರೆವಿನ್ಯು ಹೆಚ್ಚಿಸಿಕೊಳ್ಳಬಹುದು 5. ಯುದ್ಧ ನೆಲೆಗಳಿಗೆ ಮತ್ತು ಸೈನಿಕ ಚಲನೆೆಗಳಿಗೆ ಸ್ಥಳೀಯ ಭೂಗೋಳ-ಸಂಸ್ಕೃತಿ ತಿಳಿಯಬಹುದು ಎಂದೆಲ್ಲ ಇಂಗ್ಲಿಶರು ಭಾವಿಸಿದ್ದರು. ಇದರಿಂದ ಕಂಪನಿ ಸರಕಾರ ಮತ್ತು ಮಿಶನರಿಗಳು ಸ್ಥಳೀಯ ಸಂಸ್ಕೃತಿಗಳನ್ನು ಅಭ್ಯಾಸ ಮಾಡಲು ತೊಡಗಿದರು. ಎನ್‌ಲೈಟನ್ಮೆಂಟ್ ಪ್ರಾಜೆಕ್ಟಿನ ಮುಖವಾಡ ಹಾಕಿಕೊಂಡ ಇಂಥ ತೊಡಗುವಿಕೆಯ ಫಲವಾಗಿ ಭಾಷಾಂತರ, ಭಾಷಾ ಅಧ್ಯಯನ, ನಿಘಂಟು ರಚನೆ, ಶಾಸನ ಸಂಗ್ರಹ, ಹಳೆ ಪಠ್ಯಸಂಪಾದನೆ, ಭೂಗೋಳ ಶಾಸ್ತ್ರ ಅಧ್ಯಯನ (ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕ ನಕಾಶೆಗಳ ತಯಾರಿಕೆ), ಚರಿತ್ರೆ ರಚನೆ, ಔಪಚಾರಿಕ ಇಂಗ್ಲಿಶ್ ಶಿಕ್ಷಣಕ್ಕಾಗಿ ನಡೆದ ಪಠ್ಯರಚನೆ ಇವುಗಳು ಬೇರೆ ಬೇರೆ ಭೂಭಾಗಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದ ನಡೆಯತೊಡಗಿದವು. ಮುದ್ರಣ ತಂತ್ರಜ್ಞಾನವು ಈ ಕಾಲದಲ್ಲಿ ಮೇಲಿನ ಕೆಲಸಕ್ಕೆ ವೇಗ ಮತ್ತು ವ್ಯಾಪಕತೆಯನ್ನು ತಂದುಕೊಟ್ಟಿತು. ಇದೆಲ್ಲವೂ ಇಂಗ್ಲಿಶರಿಗೆ ಅವರ ಸಾಮ್ರಾಜ್ಯಶಾಹಿಯ ವಿಸ್ತರಣೆಯೇ ಆಗಿತ್ತು. ಈ ವಿಸ್ತರಣೆಯ ಆಶಯದ ಬುಡದಲ್ಲಿ ವೈಟ್‌ಮ್ಯಾನ್ಸ್ ಬರ್ಡನ್ ಧೋರಣೆ, ಉದಾರ ಮಾನವತಾವಾದ, ಜನಾಂಗವಾದ, ವ್ಯಕ್ತಿವಾದ ಮೊದಲಾದ ಇಸಮುಗಳು ಕೆಲಸ ಮಾಡುತ್ತಿದ್ದವು. ಇಂಥ ಶಾಸ್ತ್ರಗಳ ಸಂಭವದಲ್ಲಿ ವಿಮರ್ಶೆಯೂ ಒಂದಾಗಿ ಸಂಭವಿಸಿತು.
ನಮ್ಮ ಹಳೆಯ ಬಗೆಯ ಸಾಹಿತ್ಯದ ಸಾಂಸ್ಕೃತಿಕ ಅನುಸಂಧಾನಗಳು ಈ ಕಾಲದಲ್ಲಿ ನಷ್ಟವಾಗಿರಲಿಲ್ಲ. ಮೈಸೂರು ರಾಜರ ಆಶ್ರಯದಲ್ಲಿ ಅನುವಾದಗಳು (ನಾಟಕ), ಟೀಕುರಚನೆಗಳು, ಸಂಗ್ರಹಗಳು, ಸಂಪಾದನೆಗಳು, ಸ್ವತಂತ್ರರಚನೆಗಳು ನಡೆಯುತ್ತಿದ್ದವು. ಇವುಗಳ ಜೊತೆಗೆ ಸಮಾಜದಲ್ಲಿ ಚದುರಿಕೊಂಡಂತೆ ಪಾರಾಯಣ, ಪಠಣ, ಗಮಕ, ಗಾಯನ, ವಿಚಾರಕ್ಕೆ ಹಾಕುವುದು ಇತ್ಯಾದಿ ಅನುಸಂಧಾನಗಳೂ ನಡೆಯುತ್ತಿದ್ದವು. ಸಾಹಿತ್ಯದ ಅನುಸಂಧಾನವು ಒಂದು ಸಾಂಸ್ಕೃತಿಕ ಆಚಾರವಾಗಿ ಸಮಾಜದಲ್ಲಿ ಚಾಲ್ತಿಯಲ್ಲಿ ಇರುವಂತೆಯೇ ಸಾಹಿತ್ಯ (ಪ್ರಕಾರವಾದಿ) ವಿಮರ್ಶೆಯು ಈ ಕಾಲದಲ್ಲೆ ಸಂಭವಿಸತೊಡಗಿತು. ಈ ಎರಡೂ ಮುಖಗಳು ಪರಸ್ಪರ ಹೆಣೆದುಕೊಳ್ಳದೆ; ವಿಮರ್ಶೆಯು ಅಕ್ಷರಸ್ಥರ ಸಾಹಿತ್ಯ ಪರಿಶೀಲನೆಯಾಗಿ ನಿಧಾನವಾಗಿ ಬೆಳೆಯತೊಡಗಿತು. ಮುದ್ರಣಕ್ರಾಂತಿ ಕೂಡ ಇದನ್ನು ಪೋಷಿಸಿತು.
ತಮ್ಮ ಸ್ವವನ್ನು ಶ್ರೇಷ್ಠವೆಂದು ಭಾವಿಸಿದ್ದ ಆಂಗ್ಲರು ತಮ್ಮದೇ ಚರಿತ್ರೆ ಪ್ರಜ್ಞೆಯ ಪಾಸಿಟಿವಿಸ್ಟ್ ದೃಷ್ಟಿಕೋನ, ಡಾರ್ವಿನ್ನನ ವಿಕಾಸವಾದಿ ದೃಷ್ಟಿಕೋನ, ನ್ಯೂಟೇನಿಯನ್ ಎಂಪಿರಿಸಿಸ್ಟ್ ದೃಷ್ಟಿಕೋನಗಳಿಂದ ಸ್ಥಳೀಯ ಸಂಸ್ಕೃತಿಯನ್ನು ಕಟ್ಟುತ್ತಿದ್ದರು. ಹೀಗಾಗಿ ಸ್ಥಳೀಯ ಓರಿಯೆಂಟಾಲಜಿಯ ದೇಹವು ಸ್ಥಳೀಯವಾಗಿದ್ದರೂ ಅದರ ಮನಸ್ಸು (ರಚನಾ ವಿಧಾನ) ಮಾತ್ರ ಪಶ್ಚಿಮದ್ದೇ ಆಗಿತ್ತು. ಆದುದರಿಂದಲೇ ನಮ್ಮ ಸಾಹಿತ್ಯಚರಿತ್ರೆ ರಚನಾಶಾಸ್ತ್ರ, ವ್ಯಾಕರಣ-ಭಾಷಾಶಾಸ್ತ್ರ, ಶಾಸನಶಾಸ್ತ್ರ, ಭೂಗೋಳಶಾಸ್ತ್ರ, ಪ್ರಾಚೀನ ಪಠ್ಯಗಳ ಗ್ರಂಥಸಂಪಾದನಾಶಾಸ್ತ್ರ ಇತ್ಯಾದಿಗಳೆಲ್ಲವೂ ಆಧಾರವಾದಿ, ವಿಕಾಸವಾದಿ, ವಿಜ್ಞಾನವಾದಿ ದೃಷ್ಟಿಗಳಿಂದ ಆ ಕಾಲದಲ್ಲಿ ರೂಪಿತಗೊಳ್ಳುತ್ತಿದ್ದವು, ಇವುಗಳ ಮೂಲಕ ಪ್ರಕಟವಾಗಿರುವ ನಮ್ಮ ಹೊಸನೀರಿನ ಕಾಲದ ವಿಮರ್ಶೆ ಕೂಡ ಇಂಥ ದೃಷ್ಟಿಗಳಿಂದ ರೂಪಿತಗೊಂಡಿದೆ.
‘ಹೊಸನೀರಿನ ಕಾಲದ ಸಾಹಿತ್ಯ ವಿಮರ್ಶೆ’ಯು (ಸಾಹಿತ್ಯ ಪ್ರಕಾರವಾಗಿ) ಸಂಭವಿಸಿರುವುದು ಮೊದಲು ಇಂಗ್ಲಿಶಿನಲ್ಲಿ ಆದರೆ ಇದು ಬರಿ ಇಂಗ್ಲಿಶಿಗರಿಂದ ಮಾತ್ರ ಸಂಭವಿಸಲಿಲ್ಲ. ‘ಸಾಂಸ್ಕೃತಿಕ ಸ್ಥಳೀಯವನ್ನು ತಿಳಿಯುವ ಶಕ್ತಿ ಅವರಿಗೆ ಇರಲಿಲ್ಲ. ಅದಕ್ಕಾಗಿ ಅವರು ಸ್ಥಳಿಯರನ್ನೇ ಆಶ್ರಯಿಸಿದರು. ಸ್ಥಳೀಯರ ವಿದ್ವತ್ತು ಪರಿಶ್ರಮಗಳ ಸಹಾಯದಿಂದಲೇ ಇವೆಲ್ಲವನ್ನು ತಿಳಿಯುವ ಕೆಲಸ ಮಾಡಿದರು. ಸ್ಥಳೀಯ ವಿದ್ವಾಂಸರನ್ನು ಇವರು ವಿದ್ವಾಂಸರೆಂದು ಪರಿಗಣಿಸುತ್ತಿರಲಿಲ್ಲ. ಮುನಿಷಿಗಳೆಂದು, ಸಹಾಯಕರೆಂದು ಪರಿಗಣಿಸುತ್ತಿದ್ದರು ಮತ್ತು ಅದಕ್ಕಾಗಿ ಇವರಿಗೆ ಕೂಲಿಯನ್ನೂ ಕೊಡುತ್ತಿದ್ದರು’2 ಹೀಗಾಗಿ ಸ್ಥಳೀಯರ ಪರಿಶ್ರಮ ಮತ್ತು ಇಂಗ್ಲಿಶಿಗರ ಹಿತಾಸಕ್ತಿಗಳ ಫಲವಾಗಿ ‘ಹೊಸನೀರಿನ ಕಾಲದ ಸಾಹಿತ್ಯ ವಿಮರ್ಶೆ’ ಪ್ರಕಟವಾಯಿತು. ಈ ವಿಮರ್ಶೆಯ ಭಿನ್ನ ವಿನ್ಯಾಸಗಳನ್ನು ಪ್ರತ್ಯೇಕವಾಗಿ ಈ ಕೆಳಕಂಡಂತೆ ಪರಿಶೀಲಿಸಿಕೊಳ್ಳಬಹುದು;
1.1. ಅನುವಾದಗಳ ಪೀಠಿಕೆ, ಮುನ್ನುಡಿ, ಪ್ರಸ್ತಾವನೆಗಳು
ಪ್ರಾಚೀನ ಗ್ರಂಥಗಳ ಸಂಪಾದನೆ, ನಿಘಂಟು ರಚನೆ, ಕೈಫಿಯತ್ತುಗಳ ಸಂಗ್ರಹ ಮತ್ತು ರಚನೆ, ಶಾಸನ ಸಂಗ್ರಹ ಮತ್ತು ವ್ಯಾಖ್ಯಾನಗಳ ಜೊತೆಜೊತೆಗೆ ಕನ್ನಡದಲ್ಲಿ ಅನುವಾದ ಕರ‍್ಯಗಳೂ ನಡೆಯುತ್ತಿದ್ದವು. ನಿಘಂಟುಗಳಿಗೆ, ಸಂಪಾದನೆಗಳಿಗೆ ಪೀಠಿಕೆ-ಪ್ರಸ್ತಾವನೆಗಳನ್ನು ಪಾಶ್ಚಾತ್ಯರು ಬರೆಯುವ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಪರಂಪರೆಯ ಮೌಲ್ಯಮಾಪನಕ್ಕೆ (ಪರೋಕ್ಷವಾಗಿ) ತೊಡಗಿದಂತೆ ನಮ್ಮವರೂ ತಮ್ಮ ತಮ್ಮ ಅನುವಾದ ಗ್ರಂಥಗಳಿಗೆ ತಮ್ಮದೇ ಪೀಠಿಕೆ-ಪ್ರಸ್ತಾವನೆಗಳನ್ನು ಬರೆಯುವ ಮೂಲಕ ನಮ್ಮ ಪರಂಪರೆ ಮತ್ತು ವರ್ತಮಾನದ ಮೌಲ್ಯಮಾಪನಕ್ಕೆ ತೊಡಗಿದರು. ಹೀಗೆ ಅನುವಾದ ಗ್ರಂಥಗಳ ಪೀಠಿಕೆ-ಮುನ್ನುಡಿ-ಪ್ರಸ್ತಾವನೆಗಳಲ್ಲಿ ಆಧುನಿಕ ವಿಮರ್ಶೆಯು ಸಂಭವಿಸಿತು. ಮೊದಲಿನ ಪಾಶ್ಚಾತ್ಯರ ಪೀಠಿಕೆ ಪ್ರಸ್ತಾವನೆಗಳಲ್ಲಿ ಸ್ಥಳೀಯವನ್ನು ಮೌಲ್ಯಮಾಪನ ಮಾಡುವುದಕ್ಕಿಂತ ತಿಳಿದುಕೊಳ್ಳುವ ಮತ್ತು ವ್ಯಾಖ್ಯಾನಿಸುವ ಆಕಾಂಕ್ಷೆ ಇದ್ದರೆ, ಅನುವಾದಗಳಿಗೆ ಬರೆದ ನಮ್ಮವರ ಪೀಠಿಕೆ-ಪ್ರಸ್ತಾವನೆಗಳಲ್ಲಿ ತಮ್ಮ ತಮ್ಮ ದಾರಿಗಳ ಹುಡುಕಾಟ ಮತ್ತು ಆತ್ಮಪರಿಶೀಲನೆ ಹಾಗೂ ಪರಂಪರೆಯ ಮೌಲ್ಯಮಾಪನ ಎಲ್ಲವೂ ಇದ್ದವು.
ಇಂಗ್ಲಿಶಿನಿಂದ ಮತ್ತು ದೇಶಭಾಷೆಗಳಿಂದ ನಮ್ಮವರಿಗೆ ಕವಿತೆ, ಕಾದಂಬರಿ, ನಾಟಕ ಇತ್ಯಾದಿಗಳನ್ನು ಅನುವಾದಿಸಿಕೊಳ್ಳುವಾಗ ಹಳೇ ಭಾಷೆ, ಛಂದಸ್ಸುಗಳ ಬಗೆಗೆ ಅನಾದರ ಹುಟ್ಟಿತ್ತು. ಸಾಹಿತ್ಯ ಪ್ರಕಾರದ ಸ್ವರೂಪ, ಛಂದೋರೂಪ, ಭಾಷಾ ಬಳಕೆಯ ವಿಧಾನ ಈ ಹಿನ್ನೆಲೆಯಲ್ಲಿ ಹಲವಾರು ಪ್ರಶ್ನೆಗಳು ಇವರಿಗೆ ಹುಟ್ಟಿದವು. ಮತ್ತು ಅನುವಾದವನ್ನು ಹೇಗೆ ಮಾಡಬೇಕು, ಯಾಕೆ ಮಾಡಬೇಕು; ಅನುವಾದದಲ್ಲಿ ಆಕರ ಭಾಷೆ, ಛಂದಸ್ಸು, ಸಂಸ್ಕೃತಿಗಳನ್ನು ನೇರವಾಗಿ ಅನುವಾದಿಸಬೇಕೋ ಅಥವಾ ಸ್ಥಳೀಯ ಭಾಷೆ, ಛಂದಸ್ಸು, ಸಂಸ್ಕೃತಿಗಳಿಗೆ ಅಳವಡಿಸಿ, ರೂಪಾಂತರಿಸಿ ಅನುವಾದಿಸಬೇಕೋ ಎಂಬ ಪ್ರಶ್ನೆಗಳೂ ಹುಟ್ಟಿದವು. ಇಂಥ ಪ್ರಶ್ನೆಗಳಿಗೆ ಉತ್ತರಿಸಿಕೊಳ್ಳುವಾಗ ನಮ್ಮವರು ತಮ್ಮದೇ ಕನ್ನಡ ವಿಮರ್ಶೆಯೊಂದನ್ನು ಪೀಠಿಕೆ, ಪ್ರಸ್ತಾವನೆ ಇತ್ಯಾದಿಗಳಲ್ಲಿ ನಿರ್ಮಿಸಿದರು. ಈ ವಿಮರ್ಶೆಯನ್ನು ಆಧುನಿಕ ಕನ್ನಡ ವಿಮರ್ಶೆಯ ಆದಿ ರೂಪಗಳಲ್ಲಿ ಒಂದು ಎನ್ನಬಹುದು. ಇಲ್ಲಿ 1. ಭಾಷಾಂತರ ತತ್ವ 2. ವಿಮರ್ಶೆಯ ತತ್ವ 3. ಐಡೆಂಟಿಟಿಯ ಪ್ರಶ್ನೆಗಳು 4. ಸಾಹಿತ್ಯ ತತ್ವ 5. ಛಂದೋಚರ್ಚೆ ಇತ್ಯಾದಿಗಳೆಲ್ಲವೂ ಇದ್ದವು. ಇಂತಹ ವಿಮರ್ಶೆಯ ಒಂದೆರಡು ಮಾದರಿಗಳನ್ನು ಈ ಕೆಳಗೆ ನೀಡಲಾಗಿದೆ.
ಪ್ರತಾಪರುದ್ರ (1895) ಅನುವಾದಿತ ನಾಟಕಕ್ಕೆ ಬರೆದ ಮುನ್ನುಡಿಯಲ್ಲಿ ಎಂ.ಎಲ್.ಶ್ರೀಕಂಠೇಶಗೌಡ “ಕಾಲುವೆಗಳಿಂದ ಗಂಟು ಹಾಕಲ್ಪಟ್ಟಿರುವ ಎರಡು ತಟಾಕಗಳಲ್ಲಿ ಹೆಚ್ಚು ನೀರಿರುವ ತಟಾಕದ ನೀರು ಮತ್ತೊಂದು ತಟಾಕಕ್ಕೆ ಹರಿಯುವಂತೆ ಸಂಸ್ಕೃತ ಶಬ್ಧಗಳು ನಿರಂತರವಾಗಿ ಕನ್ನಡಕ್ಕೆ ಬರುತ್ತಲೇ ಇರುವವು. ಹೀಗಿರುವಲ್ಲಿ ಶಬ್ಧಾತಿಶಯದಿಂದ ಔನ್ನತ್ಯ ಸ್ಥಿತಿಯಲ್ಲಿರುವ ಸಂಸ್ಕೃತವನ್ನು ಕನ್ನಡಿಸುವಲ್ಲಿ ಭಾಷಾಂತರಿತ ಗ್ರಂಥವು ನಿಸ್ಸಾರವ್ಯಾತಕ್ಕಾಗಬೇಕು? ಉನ್ನತ ಪ್ರದೇಶದಲ್ಲಿರುವ ತಟಾಕವು ಕಾಲುವೆಯಿಂದ ಗಂಟು ಹಾಕಲ್ಪಟ್ಟಿರುವ ಕೆಳಗಣ ತಟಾಕಕ್ಕಿಂತಲೂ ಎಷ್ಟು ದೊಡ್ಡದಾದರೂ ಎರಡು ತಟಾಕಗಳ ನೀರಿನಲ್ಲಿನ ಸಾರವು-ನೀರಿನ ಮಟ್ಟವು ಒಂದೇ ಸಮನಾಗಿರುವುದೇ ಹೊರ್ತು ಮತ್ತೆ ಹ್ಯಾಗಿದ್ದೀತು? ಮೇಲಣ ತಟಾಕದ ನೀರಿನ ಸಾರ ಮಾತ್ರವೇ ಅಲ್ಲದೆ ಕೆಳಗಣ ತಟಾಕದ ನೀರಿನಲ್ಲೇನಾದರೂ ಸಾರವಿದ್ದರೆ ಅದು ಇದ್ದುಕೊಂಡು ಮೇಲಣ ತಟಾಕದ ಸಾರಕ್ಕಿಂತಲೂ ಕೆಳಗಣ ತಟಾಕದ ಸಾರವು ಅತಿಶಯವಾಗಿರಬಹುದಷ್ಟೆ. ವ್ಯತ್ಯಾಸವೇನೆಂದರೆ ಒಂದರಲ್ಲಿ ನೀರು ಹೆಚ್ಚಾಗಿರುವುದು ಮತ್ತೊಂದರಲ್ಲಿ ನೀರು ಕಡಿಮೆಯಾಗಿರುವುದು. ಈ ಕಾರಣದಿಂದ ಸಂಸ್ಕೃತದಲ್ಲಿ ಕನ್ನಡಕ್ಕಿಂತಲೂ ಬಹಳವಾಗಿ ಗ್ರಂಥಗಳಿರಬೇಕೇ ಹೊರ್ತು ಕನ್ನಡಿಸಿದ ಗ್ರಂಥದಲ್ಲಿ ಸಂಸ್ಕೃತದ ಸಾರವಿಲ್ಲದೇ ಇರಲು ಕಾರಣವೇನೂ ಇಲ್ಲ.”3 ಎಂದು ಹೇಳಿದ್ದಾರೆ. ಇಲ್ಲಿ ಕನ್ನಡ ಸಂಸ್ಕೃತಗಳ ಸಂಬಂಧ ಹೇಗಿರಬೇಕು ಎಂಬ ವಿಚಾರಗಳಿವೆ. ಜೊತೆಗೆ ಶ್ರೀಕಂಠೇಶಗೌಡ ತನ್ನದೇ ಅನುವಾದ ತತ್ವವೊಂದನ್ನು ಪ್ರತಿಪಾದಿಸುತ್ತಿದ್ದಾನೆ. ಇದು ಪರೋಕ್ಷವಾಗಿ ಕನ್ನಡ ರಾಷ್ಟ್ರೀಯತೆ, ಕನ್ನಡ ಐಡೆಂಟಿಟಿಯ ಪ್ರಶ್ನೆ ಕೂಡ. ವಿಮರ್ಶೆಯು ಹೀಗೆ ಅನುವಾದಗಳ ಪೀಠಿಕೆಗಳಲ್ಲಿ ಸ್ವಸಮರ್ಥನೆ, ‘ಸ್ವ’ದ ಅಸ್ಮಿತೆ ಮತ್ತು ತತ್ವ ಮಂಡನೆಗಳಿಗೆ ಕಾರಣವಾಗಿದೆ.
ಭಾಷಾಂತರ ವೈರಿ ಎಂದು ತನ್ನನ್ನು ತಾನು ಕರೆದುಕೊಂಡಿರುವ ಎ.ಬಿ.ಅಯಾಟ್ನಕರ‍್ಸನು ಅಕಿಂಡರೇನ್ ಎಂಬ ಜೀವನ ಚರಿತ್ರೆಗೆ ಬರೆದ ಮುನ್ನುಡಿಯಲ್ಲಿ ಹೇಳಿಕೊಂಡಿರುವ ಮಾತುಗಳನ್ನು ನೋಡಿ; “ಚಂದ್ರಹಾಸ, ವಾಮದೇವ, ದಶರಥ ಎಂಬ ಪದಗಳಿಗೆ ಆಂಗ್ಲೇಯರು ಮೂನ್‌ಲೈಟ್, ಲೆಫ್ಟ್ ಗಾಡ್, ಟೆನ್ ಚಾರಿಯೇಟ್ ಎಂದು ಭಾಷಾಂತರ ಮಾಡುವುದಿಲ್ಲ. ಹೆಚ್ಚೇಕೆ ಆಂಗ್ಲೇಯರು ಗ್ರೀಕ್, ರೋಮನ್, ಪಾರ್ಸಿ, ಹಿಂದೂ ಗ್ರಂಥಗಳನ್ನು ಭಾಷಾಂತರ ಮಾಡಿರುವುದರಲ್ಲಿ ಅಂಕಿತ ನಾಮಗಳನ್ನು ಎಲ್ಲಿಯಾದರೂ ತಮ್ಮ ಮಾತೃಭಾಷೆಗೆ ಭಾಷಾಂತರ ಮಾಡಿದ್ದಾರೆಯೇ? ಹೋಮರ್, ಸೊಫೊಕ್ಲಿಸ್, ಈಸ್ಕಿಲಸ್, ಯೂರಿಪಿಡೀಸ್, ವರ್ಜಿಲ್, ಉಮರ್ ಖಯ್ಯಾಂ, ಕಾಳಿದಾಸ, ಭವಭೂತಿ ಎಂಬ ಕವಿಗಳ ಹೆಸರುಗಳನ್ನಾಗಲೀ ಅವರ ಕಾವ್ಯಗಳಲ್ಲಿ ಉಕ್ತವಾಗಿರುವ ಪಾತ್ರಗಳ ಹೆಸರುಗಳನ್ನಾಗಲೀ ಭಾಷಾಂತರ ಮಾಡಿದಾಗ ಜನರು ನಗಲಾರರೇ? ಥೇಸಿಯಸ್ ಎಂಬ ಪಾತ್ರಕ್ಕೆ ರಾಬರ್ಟ್ ಎಂದು ನಾಮಕರಣ ಮಾಡಿ ಒಲಂಪಿಯನ್ ಆಟಗಳನ್ನಾಡಿಸಬಹುದೇ? ಮಿಡ್ ಸಮ್ಮರ್ ನೈಟ್ಸ್ ಡ್ರೀಮ್‌ಗೂ ಪ್ರಮೀಳಾರ್ಜುನೀಯಕ್ಕೂ ಸಂಬಂಧವೇನು? ಸಿಂಬಲೈನ್ ಜಯಸಿಂಹರಾಜನೇ?... ಉತ್ತಮನೆ? ಸ್ಯಾಂಡ್‌ಪೋರ್ಡ್ ಅಂಡ್ ಮರ್ಟನ್ ಮದನ ಕುಸುಮಾಕರರೇ? ಲೇಡಿ ಹಟ್ಟನ್ಸ್ ವಾರ್ಡ್ ಚಾರುಶಿಲೆಯೇ?... ಆ್ಯಸ್ ಯು ಲೈಕ್ ಇಟ್ ಮನೋರಂಜನಿಯೇ? ಮರ್ಚೆಂಟ್ ಆಫ್ ವೆನಿಸ್ ಪಾಟಲೀಪರಿಣಯವೇ? ಎ ಸಿಲಿಕಾನ್ ಸಮ್ಮರ್ ಕನ್ಯಾವಿತಂತುವೇ? ಏನು ಆಭಾಸ! ಏನು ಮೌಢ್ಯ! ಎಂತಹ ಮೋಸ!! ಮೆಕ್‌ಬೆತ್‌ಗೆ ಪ್ರತಾಪರುದ್ರ ನಾಮವು ಸಹಜವಾಗುವದೆ? ನಿಮ್ಮ ಅಭಿಮತವು ಹಾಗೇ ಇದ್ದರೆ ನಾವು ಇನ್ನು ಮೇಲೆ ಆನೆಕಲ್ಲಿಗೆ ಎಲಿಫೆಂಟ್ ಸ್ಟೋನ್ ಎಂತಲೂ, ಕಲ್ಲಂಗಡಿ ಹಣ್ಣಿಗೆ ಸ್ಟೋನ್ ಬಜಾರ್ ಫ್ರೂಟ್ ಎಂತಲೂ ನೀಲಕಂಠ ಎಂಬುದಕ್ಕೆ ಬ್ಲೂ ನೆಕ್ ಎಂತಲೂ ರಾಮ ಎಂಬುದಕ್ಕೆ ರ‍್ಯಾಮ್ ಎಂತಲೂ ಬರೆಯಬೇಕೆಂದು ಆಂಗ್ಲೇಯ ಗ್ರಂಥಕರ್ತರಿಗೆ ತಿಳಿಸುವೆವು.”4
“ಪಾಠಕರಿಗೆ ತಿಳಿದುಕೊಳ್ಳಲು ಅಸಾಧ್ಯವಾದೀತೆಂದು ಕನ್ನಡದಲ್ಲಿ ಶಬ್ಧಬಾಹುಳ್ಯವಿಲ್ಲವೆಂದು ನೆಪಮಾಡಿಕೊಂಡು ಸುಳ್ಳನ್ನು ಬರೆದು ನಿಜವೆಂದು ಸಾಧಿಸಿ ನರಕಕ್ಕೀಡಾಗುವುದೇತಕ್ಕೆ? ರಾಮವರ್ಮ ಲೀಲಾವತಿಯನ್ನೋದಿಬಿಟ್ಟರೆ ರೋಮಿಯೋ ಅಂಡ್ ಜೂಲಿಯೆಟ್ ಓದಿದಂತಾಯಿತೇ? ಆಂಗ್ಲೇಯ ಸಮಾಜದ ನಡವಳಿಕೆ ತಿಳಿಯಿತೇ? ರೋಮನ್ ಜನರ ಸಂಪ್ರದಾಯವು ಗ್ರಾಹ್ಯವಾಯಿತೇ? ಆ ಕಥೆಯು ನಡೆದ ಕಾಲದಲ್ಲಿ ಇಟಲಿ ದೇಶದ ನಿವಾಸಿಗಳ ಸ್ಥಿತಿ ಹೇಗಿದ್ದಿತೆಂದು ತಿಳಿಯಿತೆ? ಮನೋರಂಜಿನಿಯನ್ನೋದಿದರೆ ರೋಸಲೆಂಡ್ ಎಂಬ ಮ್ಲೇಚ್ಛ ಸ್ತ್ರೀಯ ಮತ್ತು ಅವಳ ಪ್ರಿಯತಮನಾದ... ನಡವಳಿಕೆಯ ಸ್ವಾರಸ್ಯವು ಗೊತ್ತಾಗುವದೇ? ಜಯಸಿಂಹರಾಜ ಚರಿತ್ರೆಯಿಂದ... ಇಮೊಗೆನ್ ದಂಪತಿಗಳ ನೈಜ ಗುಣವು ಹೊರಡುವದೆ? ಹೇಮಚಂದ್ರರಾಜ ವಿಲಾಸಕ್ಕು ಷೇಕ್ಸ್ಪಿಯರ್‌ನ ಕಿಂಗಲಿಯರ್‌ಗೂ ಆನೆಗೂ ಆಡಿಗೂ ಇರುವಷ್ಟು ಸಂಬಂಧವಾದರೂ ಇದೆಯೇ? ಭಿಭಿತ್ಸರ ಸಾಧಿಕದಿಂದ ನಮ್ಮನ್ನು ದೂರಕ್ಕೆ ಓಡಿಸಿಬಿಡುವ ಪ್ರತಾಪರುದ್ರದೇವ ನಾಟಕದಿಂದ ಮೆಕ್‌ಬೆತ್‌ನ ನಿಜಾಂಶವನ್ನು ಕನ್ನಡಿಗರಾರಾದರೂ ಗ್ರಹಿಸಿರುವರೇ? ಹೇಮಲತವು ಹ್ಯಾಮ್ಲೆಟ್ ಭಾಷಾಂತರವೆಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ಲವೇ? ಈ ರೀತಿಯಲ್ಲಿ ಗ್ರಂಥ ಬರೆಯುವುದಕ್ಕಾರಂಭಿಸಿ ಮೇಲ್ಪಂಕ್ತಿಯನ್ನು ಹಾಕಿದ ಮಹಾತ್ಮನಿಗೆ ನಮಸ್ಕಾರ”5
ಇಲ್ಲಿ ಎಂ.ಎಲ್.ಶ್ರೀಕಂಠೇಶಗೌಡ, ಎಂ.ಎಸ್.ಪುಟ್ಟಣ್ಣಾದಿಯಾಗಿ ಎಲ್ಲರ ಇಂಗ್ಲಿಶ್ ಭಾಷಾಂತರಗಳನ್ನು ಕಟುವಾಗಿ ವಿಮರ್ಶೆ ಮಾಡಲಾಗಿದೆ. ಅಲ್ಲದೆ ತನ್ನದೇ ಭಾಷಾಂತರ ತತ್ವ, ಮತ್ತು ಕನ್ನಡವನ್ನು ವೃದ್ಧಿಪಡಿಸುವ ಕಾಳಜಿಯನ್ನು ವ್ಯಕ್ತಪಡಿಸಲಾಗಿದೆ. ಇಂತಹ ಅನೇಕ ಮುನ್ನುಡಿಗಳನ್ನು ಗಮನಿಸಿದರೆ ಕನ್ನಡ ವಿಮರ್ಶೆಯ ಆದಿಮ ಲಕ್ಷಣಗಳನ್ನು ಕಟ್ಟಿಕೊಳ್ಳಬಹುದಾಗಿದೆ. ಇವರ ಅನಂತರದಲ್ಲಿ ಎ.ಆರ್.ಕೃ, ಟಿ.ಎಸ್.ವೆಂಕಣ್ಣಯ್ಯ, ಎಂ.ಆರ್.ಶ್ರೀ, ಡಿ.ಎಲ್.ಎನ್, ತೀನಂಶ್ರೀ, ಆರ್.ನರಸಿಂಹಾಚಾರ್ಯ, ಗೋವಿಂದಪೈ, ಮುಳಿಯ, ಎಸ್.ವಿ.ರಂಗಣ್ಣ, ಮುಗಳಿ, ಮಾಸ್ತಿ, ಡಿವಿಜಿ, ಬೇಂದ್ರೆ, ಕುವೆಂಪು, ಪುತಿನ ಮುಂತಾದ ವಿಮರ್ಶಕರು ತಮ್ಮದೇ ದಾರಿಗಳನ್ನು ಈ ಇಂತಹ ಪೀಠಿಕೆ ಪ್ರಸ್ತಾವನೆಗಳ ಮೆಟ್ಟಿಲುಗಳನ್ನು ಹತ್ತುತ್ತಲೇ ಕಂಡುಕೊಂಡಿದ್ದಾರೆ.
ತಮ್ಮ ಸ್ವತಂತ್ರ ಕಾದಂಬರಿ ‘ಪ್ರಬುದ್ಧ ಪದ್ಮನಯನೆ’ಯ (1898) ಮುನ್ನುಡಿಯಲ್ಲಿ ಗಳಗನಾಥರು “ಶಾಸ್ತ್ರೀಯ ವಿಷಯಗಳ, ಗಹನ ವಿಷಯಗಳ ಗ್ರಂಥಾವಲೋಕನವು ವಿದ್ವಾಂಸರಿಗೆ ಮಾತ್ರ ಸಾಧ್ಯವಾದುದು. ಸಾಧಾರಣ ಜನರಿಗೆ ಆ ಗ್ರಂಥಗಳು ದುರ್ಭೋದವಾಗಿ ಅವರ ಓದುವ ಲವಲವಿಕೆಯು ನಷ್ಟವಾಗುವ ಸಂಭವವುಂಟು. ಕಾರಣ ವಾಚನಾಭಿರುಚಿ ಇಲ್ಲದ ಜನರಲ್ಲಿ ವಾಚನಾಭಿರುಚಿಯನ್ನು ಹುಟ್ಟಿಸಲಿಕ್ಕೂ, ಉದ್ಯೋಗಾತಿಶಯದಿಂದ ಶ್ರಾಂತರಾದವರಿಗೆ ವಿಶ್ರಾಂತಿಯಲ್ಲಿ ಆನಂದಗೊಳಿಸಲಿಕ್ಕೂ, ಮನೋರಂಜನವಾಗಿ ನೀತಿಬೋಧವಾಗುವುದಕ್ಕೂ ಉತ್ತಮ ಕಾದಂಬರಿಗಳು ಬೇಕೇ ಬೇಕು.” “ಸತ್ಯತೆ ಹೃದಯನಿ ರ್ಮಲತೆಯ ಇವೆರಡೂ ಸಾಧನೆಗಳೇ ನಮಗೆ ಇಹ ಪರದಲ್ಲಿಯೂ ಸಾರ್ಥಕಗಳಾಗಿವೆ. ಇವುಗಳನ್ನು ಬಿಟ್ಟು ಸರ್ವಪ್ರಯತ್ನವೂ ನಿರರ್ಥಕವೇ. ಇದನ್ನು ಸಹೃದಯಗೊಳಿಸುವುದೇ ಈ ಪುಸ್ತಕದ ಉದ್ದೇಶವು.”6 ಎಂದು ತಿಳಿಸಿದ್ದಾರೆ. ಇಲ್ಲಿ ಕಾದಂಬರಿ ಪ್ರಕಾರದ ಅವಶ್ಯಕತೆ ಮತ್ತು ಎಂಥ ಕಾದಂಬರಿಯನ್ನು ಬರೆಯಬೇಕೆಂಬ ಕಾದಂಬರಿ ಪ್ರಕಾರ ತತ್ವ ಇತ್ಯಾದಿಗಳಿವೆ.
“ಕಾದಂಬರಿಗಳೆಂದರೆ ಕಡಿಮೆ ಯೋಗ್ಯತೆಯ ಗ್ರಂಥಗಳು, ಕಾದಂಬರಿಕಾರನೆಂದರೆ ಕಡಿಮೆ ಯೋಗ್ಯತೆಯ ಗ್ರಂಥಕಾರನು ಎಂಬ ತಿಳುವಳಿಕೆಯಿಂದ ನಾನು ಕಾದಂಬರಿಗಳನ್ನು ಬರೆದಿರುವದಿಲ್ಲ. ತಾತ್ವಿಕ ವಿಷಯಗಳೆಂಬ ಸಣ್ಣ ಕಹಿ ಗುಳಿಗೆಗಳನ್ನು ನವರಸಗಳ ಕಷಾಯದಲ್ಲಿ ಕುಡಿಸಿ ಸರ್ವಗ್ರಾಹ್ಯವಾಗುವಂತೆ ಪೌಷ್ಟಿಕ ರಸಾಯನವಾಗಿ ಮಾಡುವ ಘನವಾದ ಯೋಗ್ಯತೆಯು ಕಾದಂಬರಿಕಾರರಲ್ಲಿ ಅಲ್ಲದೆ ಮತ್ತೊಬ್ಬ ಲೇಖಕರಲ್ಲಿ ಇರಲಾರದೆಂಬ ಅಹಂಕಾರದಿಂದ ನಾನು ಕಾದಂಬರಿಗಳನ್ನು ಬರೆದಿದ್ದೇನೆ.”7 ಹೀಗೆ ತಾವು ರಚಿಸುವ ಸಾಹಿತ್ಯಕ್ಕೆ ತಮ್ಮದೇ ಸಮರ್ಥನೆಯನ್ನು ಒದಗಿಸುವ ಸಾಹಿತ್ಯ ತತ್ವ ಕೂಡ ಈ ಕಾಲದಲ್ಲಿ ಸೃಷ್ಟಿಯಾಯಿತು. ಈ ಸಾಹಿತ್ಯ ತತ್ವವು ಕೂಡ ವಿಮರ್ಶೆಯೇ. ಹೊಸನೀರಿನ ಕಾಲದ ಅನಂತರದಲ್ಲಿ ಇದುವರೆಗೆ ಇಂಥ ಒಂದು ಪರಂಪರೆಯೇ ನಿರ್ಮಾಣ ಆಗಿರುವುದನ್ನು ಗುರ್ತಿಸಿಕೊಳ್ಳಬಹುದು. ಸಾಹಿತಿಗಳೇ ಬರೆದಿರುವ ಸಾಹಿತ್ಯ ಸಮರ್ಥನೆಗಳು ನಮ್ಮಲ್ಲಿ ಸಾಕಷ್ಟಿವೆ. ನಮ್ಮ ಪ್ರಾಚೀನರಲ್ಲು ಸ್ವಕಾವ್ಯ ಸ್ವರೂಪ ನಿರ್ವಚನ, ಸ್ವಕಾವ್ಯ ಸಮರ್ಥನಾ ಧಾಟಿಯ ಮಾತುಗಳು ಸಾಕಷ್ಟು ಪ್ರಕಟವಾಗಿವೆ.
1.2. ಬೋಧನೆ-ಶೈಕ್ಷಣಿಕತೆ
ಶಾಲೆ, ಕಾಲೇಜುಗಳಲ್ಲಿ ಬೋಧನೆಗೆ ಯಾವ ಯಾವ ಶಿಸ್ತುಗಳನ್ನು ಕಲಿಸಬೇಕು ಮತ್ತು ಹೇಗೆ ಭೋದಿಸಬೇಕು ಎಂಬ ಜಿಜ್ಞಾಸೆಯು ಆಧುನಿಕ ಶೈಕ್ಷಣಿಕ ವ್ಯವಸ್ಥೆಯೊಂದು ಆರಂಭವಾದ ಕಾಲದಿಂದ ಇಂದಿನವರೆಗೆ ನಿರಂತರ ನಡೆಯುತ್ತಲೇ ಬಂದಿದೆ. ಪಠ್ಯ ಮತ್ತು ಅಧ್ಯಯನ ಶಿಸ್ತುಗಳ ನಿರಂತರ ಪರಿಷ್ಕರಣೆ, ರೂಪಣೆಗಳು ನಡೆಯುತ್ತಲೇ ಬಂದಿವೆ. ಈ ಹಿನ್ನೆಲೆಯಲ್ಲಿ ಹಳಗನ್ನಡ ಪಠ್ಯಗಳ (ಶೈಕ್ಷಣಿಕ ಉದ್ದೇಶದ) ಸಂಪಾದನೆ-ಸಂಗ್ರಹಗಳು ಪರಿಣಾಮಕಾರಿ ‘ತರಗತಿ ಬೋಧನೆಯ ಸಾಧ್ಯತೆ’ಯಿಂದ ಸಾಕಷ್ಟು ಪ್ರಭಾವಿತವಾಗಿವೆ. ಅಂದರೆ ನಮ್ಮ ಹೊಸನೀರಿನ ಕಾಲದ ವಿಮರ್ಶೆಯು ಯಾವುದನ್ನು ಚೆನ್ನಾಗಿ ತರಗತಿಯಲ್ಲಿ ಬೋಧಿಸಬಹುದೊ, ತರಗತಿ ಬೋಧನೆಗೆ ತಕ್ಕ ಜಿಜ್ಞಾಸುತನ ಯಾವ ಪಠ್ಯಗಳಲ್ಲಿ ಇದೆಯೋ ಅಂಥವನ್ನು ಆಯ್ದು ಕಟ್ಟುವ ಕೆಲಸವನ್ನು ಮಾಡುತ್ತ ಬಂದಿದೆ. ಇದಲ್ಲದೆ ವಸ್ತು ವಿಶ್ಲೇಷಣೆ, ವಿವರಣೆ, ಸಾರಸಂಗ್ರಹ, ಮೌಲ್ಯಾಧಾರಿತ ಭಾಗಗಳ ವರ್ಣನೆ ಮತ್ತು ವ್ಯಾಖ್ಯಾನಗಳು ಇಂಥ ಕಡೆ ಸ್ಟೂಡಿಯಸ್ಸಾದ ನೆಲೆಗಳಿಂದ ನಡೆದಿವೆ. ಹೀಗಾಗಿ ನಮ್ಮ ಹೊಸನೀರಿನ ಕಾಲದ ವಿಮರ್ಶೆಯ ಸ್ವರೂಪವು ಹೀಗೆ ಸಂಭವಗೊಳ್ಳಲು ಶೈಕ್ಷಣಿಕತೆ ಒಂದು ಮುಖ್ಯ ಕಾರಣವಾಗಿದೆ.
ಸಂಪಾದನಾ ಕಾರ‍್ಯಗಳಿಗೆ ಆರಂಭದಲ್ಲಿ ಶೈಕ್ಷಣಿಕವಾದ ಉದ್ದೇಶಗಳು ಇದ್ದವು. ಹೀಗಾಗಿ ಸಮಗ್ರ/ಸಂಗ್ರಹಿತ ಸಂಪಾದನೆಗಳಲ್ಲಿ ಪ್ರಕಟವಾಗಿರುವ ವಿಮರ್ಶೆಯು ಶೈಕಣಿಕ ಉದ್ದೇಶಗಳಿಂದ ಕೂಡ ನಿಯಂತ್ರಿತವಾಗಿದೆ. ಅಲ್ಲದೆ ಏನನ್ನು ಕಲಿಸಬೇಕು, ಎಷ್ಟನ್ನು ಕಲಿಸಬೇಕು ಎಂಬುದನ್ನು ನಿರ್ಧರಿಸುವುದರ ಹಿಂದೆ ವಸಾಹತುಶಾಹಿ ಮತ್ತು ಸ್ಥಳೀಯ ಪುರೋಹಿತಶಾಹಿ ಕೆಲಸ ಮಾಡಿದೆ. (ಪ್ರಾಚೀನ ಪಠ್ಯಗಳ ಸಂಪಾದನೆ/ಸಂಗ್ರಹದಲ್ಲಿ ಹೆಚ್ಚಾಗಿ ನೈತಿಕ ಎಚ್ಚರ, ಪಾಶ್ಚಾತ್ಯ ವಿದ್ವಾಂಸರ ವೈಜ್ಞಾನಿಕ ಮನೋಭಾವಗಳೇ ಮುಖ್ಯವಾಗಿ ಕೆಲಸ ಮಾಡಿರುವುದನ್ನು ಈಗಾಗಲೇ ವಿವರಿಸಿಕೊಳ್ಳಲಾಗಿದೆ) “ವಿಶ್ವವಿದ್ಯಾಲಯದಲ್ಲಿ ಕನ್ನಡವನ್ನು ಕುರಿತೋದುವವರಿಗೆ ಪಠ್ಯ ಪುಸ್ತಕವಾಗಿ ಮತ್ತು ಸರ್ಕಾರದ ಸೂಚನೆಗನುಸಾರವಾಗಿ ಉಪಯುಕ್ತವಾದ ಕಥನ ಕಾವ್ಯವನ್ನು ಮೂಡಿಸಬೇಕೆಂಬ ದೃಷ್ಟಿಯಿಂದ ಹಿತವಲ್ಲದ ಭಾಗಗಳನ್ನು ಬಿಟ್ಟು ವೈಪರೀತ್ಯಗಳನ್ನು ಕಡಿಮೆ ಮಾಡಿ ಅತಿಯಾಗಿರುವ ವಿವರಗಳನ್ನು ಸಂಕ್ಷೇಪಿಸಿದೆ”8 ಎಂದು ಜೆ.ಸ್ಟೀವೆನ್ಸನ್ ತನ್ನ ಸೋಮೇಶ್ವರ ಶತಕ ಸಂಪಾದನೆಯ ಸಂದರ್ಭದಲ್ಲಿ ಹೇಳಿಕೊಂಡಿದ್ದಾನೆ. ಹಳೆ ಪಠ್ಯಗಳನ್ನು ಸಂಪಾದಿಸುವಾಗ ಪ್ರಕಟವಾಗಿರುವ ವಿಮರ್ಶೆ ಹೀಗೆ ಮುಖ್ಯವಾಗಿ ಶೈಕ್ಷಣಿಕ ಉದ್ದೇಶಗಳಿಂದ ನಿರ್ದೇಶಿತವಾಗಿರುವುದನ್ನು ಕಾಣಬಹುದು. ಈ ಶೈಕ್ಷಣಿಕ ಉದ್ದೇಶಗಳು ಬಹುಪಾಲು ಪಶ್ಚಿಮ ದೃಷ್ಟಿ ಮತ್ತು ಸ್ಥಳೀಯ ಪುರೋಹಿತಶಾಹಿ ದೃಷ್ಟಿಗಳಿಂದ ನಿರ್ದೇಶಿತವಾಗುತ್ತಿದ್ದವು ಎಂಬುವುದರಲ್ಲಿ ಎರಡು ಮಾತಿಲ್ಲ. ಈ ನಿಯಂತ್ರಣವು ಸರ್ಕಾರಿ ನಿಯಂತ್ರಣವೂ ಆಗಿತ್ತು ಕೂಡ.
ಸಾಹಿತ್ಯದ ಕಲಿಕೆ ಮತ್ತು ಅದರ ಶೈಕ್ಷಣಿಕ ಅನುಸಂಧಾನಗಳು ಸಾಹಿತ್ಯದ ವಿಮರ್ಶೆಯ ಕೆಲಸವನ್ನೆ ಮಾಡುತ್ತಿದ್ದರೂ ಅದು ವಿಮರ್ಶೆಯ ಒಂದು ಪಥವಾಗಿ ಏನೂ ಸ್ಥಾಪಿತ ಆಗಲಿಲ್ಲ. ಆದರೆ ವಿಮರ್ಶೆ ಬಹುಪಾಲು ಸಾಹಿತ್ಯದ ಅಧ್ಯಾಪಕರ ಚಟುವಟಿಕೆ ಎಂಬಂತಹ ಭಾವನೆ ಅದಕ್ಕೆ ಅಂಟಿಕೊಂಡಿತು. ಮುಂದೆ ಸಾಹಿತ್ಯದ ಕಲಿಕೆಯ ಭಾಗ ಆಗಿ ವಿಮರ್ಶೆಯನ್ನೂ ಕಲಿಯುವ ಮತ್ತು ಅದರ ಚಾರಿತ್ರಿಕ ಅವಲೋಕನವನ್ನೂ ಮಾಡುವ ಕೆಲಸವು ಶಿಕ್ಷಣದ ಒಂದು ಭಾಗವಾಗಿ ಜಾರಿಯಾಯಿತು. ಅದರಲ್ಲು ಕನ್ನಡ ಸಾಹಿತ್ಯವನ್ನು ಐಚ್ಛಿಕವಾಗಿ ಕಲಿಯುವ ಮಕ್ಕಳ ಶಿಕ್ಷಣದ ಒಂದು ಭಾಗವಾಗಿ ಜಾರಿಯಾಯಿತು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪಠ್ಯಕ್ರಮದ ಭಾಗವಾಗಿ ಎಪ್ಪತ್ತರ ದಶಕದ ನಂತರ ಈ ಬೆಳವಣಿಗೆ ನಡೆದಿರುವುದನ್ನು ಕಾಣಬಹುದು.
1.3. ಪತ್ರಿಕೋದ್ಯಮ ಮತ್ತು ವಿಮರ್ಶೆ
ಪತ್ರಿಕೋದ್ಯಮಕ್ಕೂ ಹೊಸನೀರಿನ ಕಾಲದ ವಿಮರ್ಶೆಗೂ ಒಂದು ಅನ್ಯೋನ್ಯವಾದ ಸಂಬಂಧ ಇದೆ. ಮುದ್ರಣ ತಂತ್ರಜ್ಞಾನವು ಇಲ್ಲಿ ವ್ಯಾಪಕಗೊಳ್ಳುತ್ತಿದ್ದಂತೆ ಬೈಬಲ್ಲಿನ ಅನುವಾದಗಳು ಮತ್ತು ಶೈಕ್ಷಣಿಕ ಪಠ್ಯಗಳ ಜೊತೆಗೆ ಮೈಸೂರು ಒಡೆಯರ ವಲಯದ ಗ್ರಂಥಗಳು ಹಾಗೂ ಪ್ರಾಚೀನ ಗ್ರಂಥಗಳು ಸಂಪಾದಿತಗೊಂಡು ಮುದ್ರಣ ರೂಪ ಪಡೆಯತೊಡಗಿದವು. ಇವೆಲ್ಲವುಗಳ ಜೊತೆಜೊತೆಗೆ ಒಂದೊಂದಾಗಿ ಹಲವಾರು ಪತ್ರಿಕೆಗಳು ಜನ್ಮ ತಾಳಿದವು. ವಾಗ್ಭೂಷಣ, ವಿದ್ಯಾಭೋದಿನಿ, ಸುಹಾಸಿನಿ, ಕಥಾಂಜಲಿ, ಸುರಭಿ, ರಾಷ್ಟ್ರಬಂಧು, ಜಯಕರ್ನಾಟಕ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಶ್ರೀಕೃಷ್ಣ ಸೂಕ್ತಿ, ಜಯಂತಿ, ಜೀವನ, ಪ್ರಬುದ್ಧ ಕರ್ನಾಟಕ, ಸದ್ಬೋಧ ಚಂದ್ರಿಕೆ, ವಿದ್ಯಾದಾಯಿನಿ, ಮಧುರವಾಣಿ, ವಿದ್ಯೋದಯ ನಂದಿನಿ, ಹಿತೈಷಿಣಿ ಹೀಗೆ ಹಲವಾರು ಪತ್ರಿಕೆಗಳು ಹುಟ್ಟಿಕೊಂಡವು. ಇವುಗಳಲ್ಲಿ ಸಾಹಿತ್ಯದ ಜೊತೆಗೆ ವಿಮರ್ಶೆಯೂ ಪ್ರಕಟವಾಗತೊಡಗಿತು.
ಪಾಶ್ಚಾತ್ಯರ ವಿಮರ್ಶಾ ಬರವಣಿಗೆಗಳ ನಂತರ ನಮ್ಮವರ ಅನುವಾದಗಳ, ಸಂಪಾದನೆಗಳ ಮುನ್ನುಡಿ, ಪೀಠಿಕೆ, ಪ್ರಸ್ತಾವನೆಗಳಲ್ಲಿ ಮೊದಲಿಗೆ ವಿಮರ್ಶೆ ಪ್ರಕಟವಾಯಿತು. ಅನಂತರ ಸ್ವತಂತ್ರ ಸಾಹಿತ್ಯ ಕೃತಿ ರಚನೆಗಳ ಮುನ್ನುಡಿ, ಪೀಠಿಕೆಗಳಲ್ಲಿ ಇದು ಪ್ರಕಟವಾಯಿತು. ಇದರ ಜೊತೆಯಲ್ಲಿ ಸಾಹಿತ್ಯಚರಿತ್ರೆ ರಚನೆಗಳಲ್ಲು ವಿಮರ್ಶೆ ಕಾಣಿಸಿಕೊಂಡಿತು. ಇವೆಲ್ಲವುಗಳ ಮೌಲ್ಯಮಾಪನವೂ ಸೇರಿದಂತೆ ಭಿನ್ನ ಭಿನ್ನ ವಿಮರ್ಶೆಯು ಆಗ ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿತು. ಹಾಗೆ ನೋಡಿದರೆ ಹೊಸನೀರಿನ ಕಾಲದ ವಿಮರ್ಶೆಗೆ ಮೊದಲು ಒಂದು ನಿರ್ಧಿಷ್ಟವಾದ ರೂಪರೇಷೆ ಸಿಕ್ಕಿದ್ದೇ ಪತ್ರಿಕಾ ಬರವಣಿಗೆಗಳಲ್ಲಿ. ಕೃತಿ ಮತ್ತು ಕೃತಿಕಾರರ ಕಾಲಚರ್ಚೆ, ಕವಿ-ಕೃತಿಗಳ ಸ್ಥಾನ ನಿರ್ದೇಶನ, ಹೊಸ ಸಾಹಿತ್ಯದ ಸ್ವರೂಪ ಚರ್ಚೆ, ಸಾಹಿತ್ಯ ಚರಿತ್ರೆಗಳ ನಿಲುವುಗಳ ಮತ್ತು ನ್ಯೂನತೆಗಳ ಚರ್ಚೆ, ಮೀಮಾಂಸೆ ಮತ್ತು ಛಂದೋ ಚರ್ಚೆ, ಸಂಶೋಧನಾ ಬರವಣಿಗೆಗಳು ಇವೆಲ್ಲವುಗಳ ಜೊತೆಗೆ ಗ್ರಂಥವಿಮರ್ಶೆ ಕೂಡ ಪತ್ರಿಕೆಗಳ ಮೂಲಕ ಪ್ರಕಟವಾಯಿತು. ಆನಂತರದಲ್ಲಿ ಈ ಗ್ರಂಥವಿಮರ್ಶೆಯೆ ಒಂದು ಮುಖ್ಯ ವಿಮರ್ಶಾ ಪ್ರಕಾರವಾಗಿ ಸ್ಥಾಪನೆ ಆಗಿರುವುದನ್ನು ನಾವು ಕಾಣಬಹುದು.
ವಿಮರ್ಶೆಯು ಒಂದು ಶಿಸ್ತಾಗಿ, ಸಾಹಿತ್ಯ ಪ್ರಕಾರವಾಗಿ ರೂಪುಗೊಳ್ಳುವಲ್ಲಿ ಪಾಶ್ಚಾತ್ಯ ವಿಮರ್ಶೆ ಮಾತ್ರ ಕಾರಣವಲ್ಲ. ನಮ್ಮ ಪತ್ರಿಕೆಗಳ ಪಾತ್ರ ಇಲ್ಲಿ ಬಹು ಮಹತ್ವವಾದುದು. ಮೊದಮೊದಲು ಗ್ರಂಥ ವಿಮರ್ಶೆ ಹೇಗಿತ್ತೆಂಬುದಕ್ಕೆ ಶ್ರೀಕೃಷ್ಣ ಸೂಕ್ತಿ ಪತ್ರಿಕೆಯ 1907ನೆ ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟವಾಗಿರುವ ಗ್ರಂಥವಿಮರ್ಶೆಯ ಈ ಮಾತುಗಳನ್ನು ನೋಡಬಹುದು. “ಹಿಂದೆ ಇದ್ದವುಗಳನ್ನೆ ಗದ್ಯ ರೂಪವಾದುದನ್ನು ಪದ್ಯ ರೂಪವಾಗಿಯೂ, ಪದ್ಯವನ್ನು ವಚನವಾಗಿಯೂ, ಷಟ್ಪದಿಯನ್ನು ಚಂಪುವಾಗಿಯೂ, ಚಂಪುವನ್ನು ಷಟ್ಪದಿಯಾಗಿಯೂ ಬದಲಾಯಿಸಿ ಬರೆಯುವುದೇ ರೂಡಿಯಲ್ಲಿ ಬಂದಿರುವುದಲ್ಲದೆ ಹೊಸ ಹೊಸ ವಿಷಯಗಳನ್ನು ತಿಳಿಸತಕ್ಕ ಗ್ರಂಥ ರಚನೆಯು ಕಡಿಮೆ.” ಹಿತಬೋಧಿನಿ ಇದೇ ಹಿನ್ನೆಲೆಯಲ್ಲಿ ಬಹು ಕಟುವಾಗಿ “ಪಾದಕ್ಕೆ ಇಷ್ಟು ಅಕ್ಷರ ಅಥವಾ ಮಾತ್ರೆಗಳಿದ್ದರೆ ಸರಿ ಎಂಬುದನ್ನು ಮಾತ್ರ ತಿಳಿದುಕೊಂಡು ಕವಿತ್ವವನ್ನು ಮಾಡಿರುವವರು, ತಮ್ಮ ಕವಿತ್ವದ ವಿಷಯದಲ್ಲಿ ಯಾರಾದರೂ ಪೂರ್ವಪಕ್ಷವನ್ನು ಮಾಡಿದರೆ ಏನು ಸಮಾಧಾನ ಹೇಳುವರೊ ತಿಳಿಯದು. ಯೋಗ್ಯತೆಯಿಲ್ಲದೆ ಬರಿ ಚಾಪಲ್ಯದಿಂದ ಛಂದಸ್ಸಿಗೆ ಸರಿಯಾಗಿ ಅಕ್ಷರ ಕೂಡಿಸುವುದನ್ನು ಕಲಿತು; ಶಬ್ಧದೋಷ, ಅರ್ಥದೋಷ, ವಾಕ್ಯದೋಷಗಳಿಗೆ ಜನ್ಮಭೂಮಿ ಎನ್ನಿಸುವ ಶುಷ್ಕ ಕವಿತೆಯನ್ನು ಮಾಡಿ ವಿದ್ವಾಂಸರ ಹಾಸ್ಯಕ್ಕೆ ಪಾತ್ರರಾಗುವುದಕ್ಕಿಂತಲೂ ವಿಷಪಾನವನ್ನು ಮಾಡುವುದು ಉತ್ತಮವು”9 ಎಂದು ಹೇಳುತ್ತದೆ.
“ಇಂಗ್ಲಿಶ್ ಭಾಷೆಯಲ್ಲಿ ದೊರಕುವ ಪ್ರಪಂಚದ ಸಾಹಿತ್ಯ ಸಾರವನ್ನು ಕನ್ನಡಕ್ಕೆ ತಂದು ಒದಗಿಸಿಕೊಳ್ಳುವುದಲ್ಲದೆ, ಆ ಸಾಹಿತ್ಯವನ್ನೆಲ್ಲ ತುಲನಪೂರ್ವಕವಾಗಿ ವಿಮರ್ಶೆಮಾಡಿ, ನಮ್ಮ ಕವಿಗಳಲ್ಲಿರುವ ಗುಣದೋಷಗಳೇನು? ಸತ್ಕಾವ್ಯದ ಲಕ್ಷಣಗಳೇನು? ಎಂಬುದನ್ನು ನಿಷ್ಪಕ್ಷಪಾತ ಬುದ್ಧಿಯಿಂದ ವಿಚಾರ ಮಾಡಿಕೊಳ್ಳಬೇಕು”10 ಎಂಬ ಉದ್ದೇಶವು ಆರಂಭದ ಹಲವು ಪತ್ರಿಕೆಗಳದ್ದಾಗಿತ್ತು. ಕನ್ನಡ ಸಾಹಿತ್ಯ ವಿಮರ್ಶೆಯು ಇಂಗ್ಲಿಷಿನ ವಿಮರ್ಶೆಯನ್ನು ನೋಡಿ ಸಾಕಷ್ಟು ಕಲಿಯಿತು ಎಂಬುದಕ್ಕೆ ಈ ಉಲ್ಲೇಖ ಒಂದು ನಿದರ್ಶನ. ಆದರೆ ಕನ್ನಡ ಪತ್ರಿಕೆಗಳು ನಮ್ಮ ವಿಮರ್ಶೆಯು ಸಮೃದ್ಧಗೊಳ್ಳಲು ಮೊದಮೊದಲು ಬಹು ಅಮೂಲ್ಯ ಕೊಡುಗೆ ನೀಡಿದವು ಎಂಬುದೂ ಕೂಡ ಇಷ್ಟೇ ಮುಖ್ಯವಾದುದು. ಜಯಕರ್ನಾಟಕದಂತಹ ಪತ್ರಿಕೆ ಕನ್ನಡ ರಾಷ್ಟ್ರೀಯತೆ, ಕನ್ನಡ ಸಂಸ್ಕೃತಿ, ಸಾಹಿತ್ಯ, ಚರಿತ್ರೆ, ರಾಜಕೀಯ ಸಾಮಾಜಿಕ ಬದುಕು ಎಲ್ಲಕ್ಕೂ ಗಮನ ನೀಡಿದರೆ; ಪ್ರಬುದ್ಧ ಕರ್ನಟಕ ಸಾಹಿತ್ಯ ವಿಮರ್ಶೆಗೆ-ನಾಡುನುಡಿ ಏಳಿಗೆಗೆ ಹೆಚ್ಚು ಶ್ರಮಿಸಿತು.
1916ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ “ಭಾಷಾ ಸಾಹಿತ್ಯಗಳ ಅಪರ‍್ವ ಶೋಧನ ಕರ‍್ಯದಲ್ಲಿ ಯಥೋಚಿತವಾದ ಅನುಕೂಲವನ್ನುಂಟು ಮಾಡಿಕೊಡುವುದಕ್ಕೆ”11 ಹಾಗೂ “ಕರ್ನಾಟಕ ಏಕೀಕರಣಕ್ಕನುರೂಪವಾದ ವ್ಯಾಕರಣ ರಚನೆ, ಕೋಶ, ಪಾರಿಭಾಷಿಕ ಶಬ್ದಗಳ ನರ‍್ಣಯ, ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ರೂಢವಾಗಿರುವ ವಾಕ್ಪçಚಾರಗಳ ಮತ್ತು ನಾಣ್ಣುಡಿಗಳ ಸಂಗ್ರಹ, ಗದ್ಯರಚನಾಶಾಸ್ತ್ರದ ಅಧ್ಯಯನ, ಪದ್ಯದಲ್ಲಿ ಸುಧಾರಣೆ, ಕನ್ನಡ ಗ್ರಂಥ ಪರೀಕ್ಷಣ-ಮುಂತಾದ ವಿಷಯಗಳನ್ನು ಮಾತ್ರ ಕೈಗೊಂಡು ಕಾರ‍್ಯ ಮಾಡುವುದು”12 ಎಂಬ ಉದ್ದೇಶದೊಂದಿಗೆ ಆರಂಭವಾಗಿ ವಿಮರ್ಶೆಗೆ ತನ್ನದೇ ಕೊಡುಗೆಯನ್ನು ನೀಡಿತು. ತನ್ನ ಕರ‍್ಯವ್ಯಾಪ್ತಿಯಲ್ಲಿ ‘ಗ್ರಂಥ ಪರೀಕ್ಷಣ’ ಎಂಬ ರೂಪದಲ್ಲಿ ಈ ಪತ್ರಿಕೆ ವಿಮರ್ಶೆಗೆ ತನ್ನದೇ ಕಾಣಿಕೆಯನ್ನು ನೀಡಿದೆ. ಡಿ.ಎಲ್.ನರಸಿಂಹಾಚಾರ್ ನಿರಂತರವಾಗಿ ಈ ಪತ್ರಿಕೆಯಲ್ಲಿ ಮಾಡಿದ ಗ್ರಂಥವಿಮರ್ಶೆ-ಗ್ರಂಥಪರೀಕ್ಷಣ ಇಲ್ಲಿ ಗಮನಾರ್ಹ.
ಆರಂಭದಲ್ಲಿ ಪ್ರಭುದ್ಧ ಕರ್ನಾಟಕ, ಜಯ ಕರ್ನಾಟಕ, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಇಂಥ ಪತ್ರಿಕೆಗಳು ತಮ್ಮದೇ ಆದ ಉದ್ದೇಶಗಳಿಂದ ಆರಂಭವಾಗಿ ಸಾಕಷ್ಟು ಕಾಲ ನಡೆದವು. ಇವೆಲ್ಲವುಗಳಲ್ಲಿ ಒಂದು ಖಾಯಂ ಕಾಲಮ್ಮೆಂದರೆ ಅದು ಪುಸ್ತಕ ಪರಿಚಯ ಅಥವಾ ಗ್ರಂಥ ವಿಮರ್ಶೆಯ ಕಾಲಮ್ಮು. ಈ ಕಾಲಮ್ಮುಗಳು ನಮ್ಮಲ್ಲಿ ಪ್ರಾಚೀನ ಸಾಹಿತ್ಯದ ಅನುಸಂಧಾನ ಮತ್ತು ಸಮಕಾಲೀನ ಸಾಹಿತ್ಯದ ಅನುಸಂಧಾನಗಳಲ್ಲಿ ಸ್ಪಷ್ಟವಾದ ಭಿನ್ನತೆಗಳು ಉಂಟಾಗುವುದಕ್ಕೆ ಕಾರಣವಾದವು. ಕೃತಿನಿಷ್ಠ ವಿಮರ್ಶೆ, ವಿವರಣಾತ್ಮಕ ವಿಮರ್ಶೆ, ಪ್ರಾಯೋಗಿಕ ವಿಮರ್ಶೆಯ ವಿಧಾನಗಳು ರೂಪಗೊಳ್ಳುವಲ್ಲಿ ಈ ಗ್ರಂಥ ವಿಮರ್ಶೆಗಳು ಸಾಕಷ್ಟು ಪ್ರಭಾವ ಬೀರಿದವು. ಹಾಗೆ ನೋಡಿದರೆ ಆಧುನಿಕ ಸಾಹಿತ್ಯ ವಿಮರ್ಶೆ ನಮ್ಮಲ್ಲಿ ಸಂಭವಿಸಿರುವ ಕೆಲವೇ ರೂಪಗಳಲ್ಲಿ ಒಂದು ಮುಖ್ಯವಾದ ರೂಪ ಈ ಗ್ರಂಥವಿಮರ್ಶೆ ಆಗಿದೆ.
“ವೃತ್ತ ಪತ್ರಿಕೆಗಳ ಬೆಳವಣಿಗೆಯಿಂದ ವಿಮರ್ಶೆ ಪರಿಚಿತ ವರ್ಗದಿಂದ ಪತ್ರಿಕೆಗಳಿಗೆ ಬರೆಯುವವರ ಕೈಗೆ ಬಂದಿತು. ಸಾಕಷ್ಟು ಪಾಂಡಿತ್ಯ, ಅನುಭವ ದೊರಕಿಸಿಕೊಳ್ಳದ ಜನರ ಕೈಗೆ ಕವಿಯ ಕೃತಿಗಳು ಸಿಕ್ಕಿದವು. ಕ್ರಿಯಾರಂಗದಲ್ಲಿ ತನ್ನ ಪ್ರತಿಭೆಯನ್ನು ಪಸರಿಸಲಾಗದ ಪತ್ರಿಕಾಕರ್ತ ವಿಮರ್ಶನಾ ರಂಗದಲ್ಲಿ ತನ್ನ ಮುದ್ರೆಯೊತ್ತಲೆತ್ನಿಸಿದ. ಕವಿ ಅನೇಕ ವರ್ಷಗಳ ಸಾಧನೆಯಿಂದ, ಪ್ರಯತ್ನದಿಂದ, ಅಭ್ಯಾಸದಿಂದ, ಅಳವಡಿಸಿದ ಕೃತಿಯನ್ನು ವಿಮರ್ಶಕ ಒಂದೇ ಪೆಟ್ಟಿನಿಂದ ಹೊಡೆಯಲು ಯತ್ನಿಸಿದ. ಕವಿ ಪ್ರತಿಭೆಯಿಂದ ತನ್ನ ಪ್ರಭಾವ ಬೆಳೆಸಿದರೆ ವಿಮರ್ಶಕ ತನ್ನ ಕಟುಲೇಖನಿಯಿಂದ ಪ್ರಭಾವ ಬೆಳೆಸತೊಡಗಿದ.”13
‘ವೃತ್ತ ಪತ್ರಿಕೆಗಳ ಬೆಳವಣಿಗೆಯಿಂದ ವಿಮರ್ಶೆ ಪರಿಚಿತ ವರ್ಗದಿಂದ ಪತ್ರಿಕೆಗಳಿಗೆ ಬರೆಯುವವರ ಕೈಗೆ ಬಂದಿತು.’ ಎಂಬ ಮಾತುಗಳಲ್ಲಿ ವಿಮರ್ಶೆಯ ಸೃಷ್ಟಿಯ ಕಾರಣ ಮತ್ತು ವಿಮರ್ಶೆಯ ಸ್ವರೂಪಗಳು ಪಲ್ಲಟವಾಗಿರುವುದನ್ನು ಗುರ್ತಿಸಲಾಗಿದೆ. ಇಂದಿನ ವಿಮರ್ಶೆ ಹೇಗಿದೆ? ಇಂಥ ಪ್ರಶ್ನೆಯನ್ನು ಹೊಸನೀರಿನ ಕಾಲದಲ್ಲಿ ಕೇಳಿಕೊಳ್ಳಲಾಗಿದೆ. ಕಾವ್ಯರಚನೆ ಮತ್ತು ವಿಮರ್ಶೆ ಇವುಗಳಲ್ಲಿ ವಿಮರ್ಶೆಯ ರಚನೆ ಸುಲಭವಾದುದು ಎಂಬ ಸೂಕ್ಷ್ಮ ತಾರತಮ್ಯ ತಿಳುವಳಿಕೆ ಈ ಕಾಲದ ಹಲವು ಪತ್ರಿಕಾ ಬರಣಿಗೆಗಳಲ್ಲಿ ಇದ್ದಂತೆ ಕಾಣುತ್ತದೆ.
“ಹಿಂದಿನ ಕವಿಗಳು ಸುಕವಿವಂದನೆ ಕುಕವಿನಿಂದೆಯೆಂದು ತಮ್ಮ ವಿಮರ್ಶನಾ ನೈಪುಣ್ಯವನ್ನು ಹೊರತೋರುತ್ತಿದ್ದರು. ಇಂದಿನ ಪತ್ರಿಕೆಗಳಲ್ಲಿ ಬೇಕಾದವರ ಮನ್ನಣೆ ಬೇಡಾದವರ ಖಂಡನೆ ಮಾಡುವ ವ್ಯೂಹವನ್ನು ನಮ್ಮ ವಿಮರ್ಶಕರು ಇನ್ನೂ ದಾಟಿಲ್ಲ. ವಿಮರ್ಶಕರು ಗ್ರಂಥವನ್ನು ವಿಮರ್ಶಿಸುವುದರ ಬದಲು ತಮ್ಮ ದೃಷ್ಟಿಯನ್ನು ಕವಿಯು ಪ್ರತಿಪಾದಿಸಲಿಲ್ಲ ಎಂದು ಆಕ್ಷೇಪಿಸುತ್ತಾರೆ. ವಿಮರ್ಶಕನ ಸಂಬಂಧ ಯಾವಾಗಲೂ ತನ್ನ ಮುಂದಿರುವ ಜನತೆಯೊಂದಿಗೆ ಇರಬೇಕೇ ವಿನಾ ಕವಿಯೊಂದಿಗಲ್ಲ... ಕೃತಿ ಹೊರಬಿದ್ದ ಮೇಲೆ ಅದರ ಕರ್ತೃವಿಗೆ ಏನು ಸಂಬಂಧ ಉಳಿದೀತು? ವಿಮರ್ಶಕರ ಬೆಳಕಿನಲ್ಲಿ ಅವನು ಅದನ್ನು ತಿದ್ದಲು ಆಗುವುದೇ? ತಿದ್ದಲು ಇಚ್ಛಿಸುವನೇ? ಎರಡೂ ಸಾಧ್ಯವಿಲ್ಲ. ಕವಿಯನ್ನು ತಿದ್ದಲು ಹೋಗುವ ವಿಮರ್ಶಕ ತನ್ನ ಉದ್ಯೋಗವನ್ನು ಮರೆತು ತನಗೆ ಸಂಬಂಧಪಡದ ಉದ್ಯಮಕ್ಕೆ ಕೈಹಾಕಿದಂತೆ ಆಗುತ್ತದೆ”14 ಹೀಗೆ ಪತ್ರಿಕೆಗಳಲ್ಲಿ ವಿಮರ್ಶೆಯ ವಿಮರ್ಶೆ ಕೂಡ ಆ ಕಾಲದಲ್ಲೇ ಸೃಷ್ಟಿಯಾಗಿರುವುದನ್ನೂ ಕಾಣಬಹುದು. ಇಲ್ಲಿ ಒಂದು ಮಾತು ಮುಖ್ಯವಾದುದು. ‘ವಿಮರ್ಶಕನ ಸಂಬಂಧ ಯಾವಾಗಲೂ ತನ್ನ ಮುಂದಿರುವ ಜನತೆಯೊಂದಿಗಿರಬೇಕೇ ವಿನಾ ಕವಿಯೊಂದಿಗಲ್ಲ.... ಕೃತಿ ಹೊರಬಿದ್ದ ಮೇಲೆ ಅದರ ಕರ್ತೃವಿಗೆ ಏನು ಸಂಬಂಧ ಉಳಿದೀತು?’ ಇಂಥ ಪ್ರಶ್ನೆಗಳು ಕನ್ನಡ ವಿಮರ್ಶೆಯ ತತ್ವವನ್ನೂ ಆಚರಣೆಯ ಜೊತೆಜೊತೆಗೇ ಚರ್ಚಿಸುತ್ತಿದ್ದವು ಎಂಬುದನ್ನು ತಿಳಿಸುತ್ತವೆ. ಅಂದರೆ ವಿಮರ್ಶೆಯ ವಿನ್ಯಾಸ ಮತ್ತು ತಾತ್ವಿಕತೆಗಳನ್ನು ರೂಪಿಸುವಲ್ಲಿ ಹಾಗೂ ವಿಮರ್ಶೆಯ ಗುಣ ಗಾತ್ರಗಳನ್ನು ವೃದ್ಧಿಸುವಲ್ಲಿ ಪತ್ರಿಕೆಗಳು ಅಪಾರ ಕೊಡುಗೆ ನೀಡಿವೆ ಎಂಬುದರಲ್ಲಿ ಎರಡು ಮಾತಿಲ್ಲ.
1.4. ನಮ್ಮತನದ ಹುಡುಕಾಟ- ಐಡೆಂಟಿಟಿ ಪಾಲಿಟಿಕ್ಸ್
ನಮ್ಮತನದ ಹುಡುಕಾಟವೆನ್ನುವುದು ಒಂದು ನಿರಂತರವಾದ ಹುಡುಕಾಟ. ಹೊಸನೀರಿನ ಕಾಲದ ಎಲ್ಲ ಶಾಸ್ತççಗಳ ಸಂಭವದಲ್ಲೂ ಈ ಐಡೆಂಟಿಟಿ ರಾಜಕಾರಣ ಎದ್ದು ಕಾಣದಿದ್ದರೂ ಅಂತಸ್ಥವಾಗಿ ಇರುವುದನ್ನು ಕಾಣಬಹುದು. ಆಧುನಿಕ ಕನ್ನಡ ರಾಷ್ಟಿçÃಯತೆಯ ಬೇರುಗಳು ಈ ಹೊಸನೀರಿನ ಕಾಲದ ಶಾಸ್ತççಗಳಲ್ಲಿ ಮೊಳಕೆಯೊಡೆಯುತ್ತಿವೆ ಕೂಡ. ಮೀಮಾಂಸೆ ಮತ್ತು ವಿಮರ್ಶೆಗಳು ಎರಡು ಭಿನ್ನ ಶಿಸ್ತುಗಳೆಂಬAತೆ ರೂಪ ತಳೆದುದು ಈ ಕಾಲದಲ್ಲೇ. ಆದರೂ ಅವುಗಳಲ್ಲಿ ‘ನಮ್ಮದು’ ಯಾವುದು ‘ಅನ್ಯ’ ಯಾವುದು ಎಂಬ ಹುಡುಕಾಟ ನಿರಂತರವಾಗಿ ಇನ್ನೂ ನಡೆದೇ ಇದೆ. ಈ ಹುಡುಕಾಟದ ಜೊತೆಜೊತೆಗೆ ವಿಮರ್ಶೆ ಮತ್ತು ಮೀಮಾಂಸೆಗಳನ್ನು ಬೆಸೆದು ಕಾವ್ಯ ಮೀಮಾಂಸೆ-ಸಾಹಿತ್ಯ ವಿಮರ್ಶೆಗಳ ಏಕೀಕೃತ ರೂಪವಾದ ಸಾಹಿತ್ಯ ಮೀಮಾಂಸೆಯನ್ನು ಕಟ್ಟುವ ಯತ್ನಗಳೂ ನಡೆದಿವೆ. (ರಹಮತ್ ತರೀಕೆರೆ ಅವರ ಮಾತು ತಲೆಯೆತ್ತುವ ಬಗೆ ಪುಸ್ತಕ ಇದಕ್ಕೆ ಉದಾ.) ಇದು ಬರಿ ಹೊಸ ಪರಿಭಾಷೆಯ ಬಳಕೆಯಷ್ಟೆ ಅಲ್ಲ ಕನ್ನಡ ಸಾಹಿತ್ಯ ಮತ್ತು ಕನ್ನಡ ವಿಮರ್ಶೆಗಳಲ್ಲಿ ಪ್ರಕಟವಾಗಿರುವ ಮೀಮಾಂಸೆಯನ್ನು ಶೋಧಿಸಿ ಕಟ್ಟಿಕೊಳ್ಳುವ ಯತ್ನ ಕೂಡ.
ನಮ್ಮದು ಮತ್ತು ನಮ್ಮದಲ್ಲದ್ದು ಎಂದು ಪ್ರತಿಯೊಂದನ್ನು ಬೇರ್ಪಡಿಸುವ ಕೆಲಸ (ಸಂಸ್ಕೃತಿಯ ಯಾವುದೇ ಅಂಗಗಳಲ್ಲಿ) ವಿಮರ್ಶೆಯಲ್ಲಿ ನಡೆಸುವುದು ಅಷ್ಟು ಸಲೀಸಾದುದಲ್ಲ. ಸಾಧುವೂ ಅಲ್ಲ. ತತ್ವ ಸಿದ್ಧಾಂತಗಳನ್ನು, ಜಿಜ್ಞಾಸೆಗಳನ್ನು ಇಂಗ್ಲಿಷ್ ಅಥವಾ ಕನ್ನಡದಾಚೆಯಿಂದ ಅನುವಾದಿಸಿಕೊಂಡಿರುವುದನ್ನು ಬಿಟ್ಟರೆ ಮಿಕ್ಕಂತೆ ಕನ್ನಡದಲ್ಲಿ ಪ್ರಕಟವಾಗಿರುವ ವಿಮರ್ಶೆಯೆಲ್ಲವೂ ಕನ್ನಡದ್ದೇ ಎಂದು ನಾವು ತಿಳಿಯಬೇಕಾಗಿದೆ. ಕನ್ನಡ ಭಾಷೆಯಲ್ಲಿ ಸಂಭವಿಸಿರುವ ಕನ್ನಡ ವಿಮರ್ಶೆಯೆಲ್ಲ ಕನ್ನಡದ್ದೇ. ಆದರೆ ನಮ್ಮಲ್ಲಿ ಕನ್ನಡದ ವಿಮರ್ಶೆಯ ಸಿದ್ಧಾಂತಗಳು, ಅನ್ಯರಿಂದ ಕಡತಂದ ವಿಮರ್ಶಾ ಸಿದ್ಧಾಂತಗಳು ಎಂಬ ಗೆರೆ ಕೊರೆದಂತಹ ಭಿನ್ನತೆ ಮೊದಮೊದಲಿಗೆ ಇಲ್ಲ. ಮೊದಮೊದಲಿಗೆ ಇಂಗ್ಲಿಶಿನ ಪ್ರೇರಣೆ, ಸ್ಪೂರ್ತಿಯಿಂದ ಹೊಸ ಬಗೆಯ ಓದುಗಳನ್ನು ನಡೆಸುವ ಉಮೇದು ಕಾಣುತ್ತದೆಯೇ ವಿನಾ ನಮ್ಮದೇ ಆದ ಮೆತೆಡ್ಡುಗಳನ್ನು ಮತ್ತು ಪಂಥಗಳನ್ನು ಹುಡುಕಿಕೊಳ್ಳುವ ಇಲ್ಲವೆ ಸೃಷ್ಟಿಸಿಕೊಳ್ಳುವ ಪ್ರತ್ಯೇಕ ಎಚ್ಚರ ಕಾಣುವುದಿಲ್ಲ.
1.5. ಕೋಶರಚನೆ-ನಿಘಂಟುಶಾಸ್ತ್ರ
ಪಾಶ್ಚಾತ್ಯರು ನಿಘಂಟು ರಚನಾಶಾಸ್ತ್ರ, ಶಬ್ದಕೋಶ ರಚನೆಗಳನ್ನು ದೇಶೀ ಶಿಕ್ಷಿತ ವಿದ್ವಾಂಸರ ಸಹಾಯದಿಂದ 1815ರಿಂದ ಈಚೆಗೆ (1817: ರೀವ್) ಕನ್ನಡದಲ್ಲಿ ಬೆಳೆಸಿದರು. ತಮ್ಮ ಉಪಯೋಗಕ್ಕೆ ಅದರಲ್ಲೂ ಬೈಬಲ್ಲಿನ ಅನುವಾದ ಮತ್ತು ಮತಪ್ರಚಾರಗಳಿಗೆ ಇಲ್ಲಿನ ಭಾಷೆಯನ್ನು ತಿಳಿಯುವುದು, ಬಳಸುವುದು ಅವರಿಗೆ ಅಗತ್ಯವಾಗಿತ್ತು. ಅಲ್ಲದೆ ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಇಂಗ್ಲಿಶ್ ಎರಡೂ ಕಲಿತು ತಮಗೆ ಸಹಾಯ ಮಾಡಬಲ್ಲ ಶಿಕ್ಷಿತರನ್ನು ಉತ್ಪಾದಿಸುವುದು ಅವರ ಉದ್ದೇಶವಾಗಿತ್ತು. ಇಂಥ ಶಿಕ್ಷಣಕ್ಕೆ ಬೇಕಾದ ಕನ್ನಡ ಇಂಗ್ಲಿಷ್ ಕೋಶ ಮತ್ತು ಭಾಷಾ ಪಠ್ಯಗಳನ್ನು ಸಿದ್ಧಪಡಿಸಲು ನಮ್ಮವರ ಮೂಲಕ ಬ್ರಿಟಿಷ್ ವಿದ್ವಾಂಸರು ಹಳಗನ್ನಡ ಕೋಶ ಮತ್ತು ಹಳಗನ್ನಡ ಪಠ್ಯಗಳನ್ನು ಹೆಚ್ಚಾಗಿ ಆಧರಿಸಿದರು. ಹೀಗಾಗಿ ನಂತರದಲ್ಲಿ ಈ ಶಾಸ್ತ್ರದ ವಿಸ್ತರಣೆಯಂತೆ ಬೆಳೆದ ಭಾಷಾಚರಿತ್ರೆಯಲ್ಲಿ ಕನ್ನಡ ಭಾಷಾ ಚರಿತ್ರೆ ಎಂದರೆ ಗ್ರಂಥಸ್ಥ ಭಾಷೆಯ ಚರಿತ್ರೆ; ಕನ್ನಡ ಭಾಷೆಯ ಅವಸ್ಥಾಂತರಗಳೆಂದರೆ ಗ್ರಂಥಸ್ಥ ಭಾಷೆಯ ಅವಸ್ಥಾಂತರ ಎಂಬ ಹ್ಯಾಂಗೋವರಿಗೆ ನಾವು ಒಳಗಾದೆವು. ಒಟ್ಟಾರೆ ಗ್ರಂಥಸ್ಥ ಭಾಷೆಯ ಹುಡುಕಾಟವೊಂದು ನಮ್ಮ ಕ್ರ‍್ರಿಯೆಯಾಯಿತು. (ಅದೂ ಲೀನಿರ‍್ರಾಗಿ ವಿಕಾಸಗೊಂಡ ‘ಒಂದು’ ಭಾಷೆಯ ಚರಿತ್ರೆ ನಿರೂಪಣೆಯನ್ನು ಇಲ್ಲಿ ಹೆಚ್ಚಾಗಿ ಮಾಡಲಾಯಿತು.) ಹಳಗನ್ನಡ ಪಠ್ಯಗಳ ಪರಿಷ್ಕರಣೆ ಮತ್ತು ಪ್ರಕಟಣೆ ಹಾಗೂ ಅವುಗಳ ಶೈಕ್ಷಣೀಕರಣದಿಂದಾಗಿ ಕೂಡ ಈ ಕ್ರಿಯೆಗೆ ಹೆಚ್ಚಿನ ಒತ್ತು ಬಿದ್ದಿತು.
ಹಳಗನ್ನಡ ಸಾಹಿತ್ಯ-ಶಾಸ್ತ್ರ ಪಠ್ಯಗಳನ್ನು ಶಬ್ದಕೋಶ-ನಿಘಂಟುಗಳಿಗೆ ಬಳಸಿಕೊಳ್ಳುವ ಕೆಲಸವು ಶಿಕ್ಷಣದಲ್ಲಿ ಅವುಗಳನ್ನು ಸಹಾಯಕ ಸಾಮಗ್ರಿಗಳಂತೆ ಬಳಸುವ ಉದ್ದೇಶದಿಂದ ಆಯಿತು. ಶಿಕ್ಷಣ ವ್ಯವಸ್ಥೆಯಲ್ಲಿ ಈ ರೀತಿಯ ಬಳಕೆಯು ಪರೋಕ್ಷವಾಗಿ ಆಧುನಿಕ ವಿಮರ್ಶೆಯು ಆವಿರ್ಭವವಾಗಲು ಕೂಡ ಸಹಾಯಕವಾಯಿತು. ಇದನ್ನೇ ಬೇರೊಂದು ರೀತಿ ಹೇಳುವುದಾದರೆ ವಿಮರ್ಶೆಯನ್ನು ಜನ ಸಮುದಾಯದಿಂದ ಎತ್ತಿ ಶಿಕ್ಷಿತ ಸಮುದಾಯದ ಚಟುವಟಿಕೆಯನ್ನಾಗಿ ತಂದು ನಿಲ್ಲಿಸಿದ ಕೆಲಸವನ್ನು ನಿಘಂಟು ರಚನಾಶಾಸ್ತ್ರ ಕೂಡ ಮಾಡಿತು. ಆಧುನಿಕ ಸಂದರ್ಭದಲ್ಲಿ ಆಗ ‘ವಿಮರ್ಶೆಯ ಶೈಕ್ಷಣೀಕರಣ’ ಪ್ರಕ್ರಿಯೆಗೆ ನಿಘಂಟು ರಚನಾಶಾಸ್ತç ಸಾಗಿ ಬಂದ ಹಾದಿ ಕೂಡ ತನ್ನದೇ ಕೊಡುಗೆ ನೀಡಿದೆ.
1.6. ಗ್ರಂಥ ಸಂಪಾದನೆ-ಪಠ್ಯವಿಮರ್ಶೆ
ಹಳಗನ್ನಡ ಗ್ರಂಥ ಸಂಪಾದನಾ ಕರ‍್ಯವು ಒಂದು ಅಧ್ಯಯನ ಶಿಸ್ತಾಗಿ ರೂಪಗೊಳ್ಳುವ ಕಾಲದಲ್ಲಿ ಗ್ರಂಥ ಸಂಪಾದನಾ ಶಾಸ್ತçದೊಂದಿಗೆ ವಿಮರ್ಶೆ ಸದಾ ಜಾಗೃತವಾಗಿತ್ತು. ಗ್ರಂಥ ಸಂಪಾದನೆಯಲ್ಲಿ ಪೀಠಿಕೆ, ಪ್ರಸ್ತಾವನೆ, ಅಡಿಟಿಪ್ಪಣಿ, ಮುನ್ನುಡಿ, ಸಂಗ್ರಹಗಳ (ಆಯ್ಕೆ-ಅಲಕ್ಷ್ಯಗಳ) ರೂಪದಲ್ಲಿ ಸಾಹಿತ್ಯ ವಿಮರ್ಶೆ ಇಲ್ಲಿ ಸಂಭವವಾಯಿತು. ಪೀಠಿಕೆ, ಪ್ರಸ್ತಾವನೆ, ಮುನ್ನುಡಿಗಳು ಕೃತಿಯನ್ನು ಮೊದಲಿಗೆ ಅರ್ಥಮಾಡಿಕೊಳ್ಳುವ, ಪರಿಚಯಿಸುವ, ಕೃತಿ-ಕೃತಿಕಾರನ ಚಾರಿತ್ರಿಕ, ಮತೀಯ ವಿವರಗಳನ್ನು ‘ಸಂಶೋಧಿಸುವ’ ಉದ್ದೇಶದಿಂದ ಕೂಡಿದ್ದವು. ಆನಂತರ ಇವುಗಳಿಗೆ ಮೌಲ್ಯಮಾಪನದ, ವಿಶ್ಲೇಷಣೆ-ವಿವರಣೆಯ ಸ್ವರೂಪಗಳು ಪ್ರಾಪ್ತವಾದವು. ಸ್ವತಃ ಗ್ರಂಥಸಂಪಾದನೆ ಕಾರ‍್ಯವನ್ನೆ ‘ಪಠ್ಯವಿಮರ್ಶೆ’ ಎಂದು ಭಾವಿಸಬಹುದಾಗಿದೆ. ಇದು ಪಠ್ಯದ ಅನುಸಂಧಾನ ಆಗಿರುವುದರಿಂದ ಹೀಗೆ ಕರೆಯಲು ಅಡ್ಡಿಯಿಲ್ಲ. ಗ್ರಂಥಗಳನ್ನು ಸಂಪಾದಿಸುವಾಗ ಸಂಭವಿಸಿದ ಮುನ್ನುಡಿ, ಪ್ರಸ್ತಾವನೆ, ಪೀಠಿಕೆ, ಉಪೋದ್ಘಾತ, ಟಿಪ್ಪಣಿ, ಅಡಿಟಿಪ್ಪಣಿ, ಪರಿಶಿಷ್ಟ, ಹಿನ್ನುಡಿ, ಬೆನ್ನುಡಿ, ಅನುಬಂಧ ಇತ್ಯಾದಿಗಳು ವಿಮರ್ಶೆಯ ಬೇರೆ ಬೇರೆ ರೂಪಗಳಾಗಿಯೇ ಸಂಭವಿಸಿದುವು.
1.6.1. ಮುನ್ನುಡಿ, ಪ್ರಸ್ತಾವನೆ, ಪೀಠಿಕೆ, ಟಿಪ್ಪಣಿ, ಅಡಿಟಿಪ್ಪಣಿಗಳು
ಸಂಪಾದಿಸಿ, ಪಾಠ ಪರಿಷ್ಕರಿಸಿ ಮುದ್ರಿಸುವಾಗ ನಮ್ಮಲ್ಲಿ ಆ ಗ್ರಂಥಗಳಿಗೆ ಮುನ್ನುಡಿ, ಪ್ರಸ್ತಾವನೆ, ಪೀಠಿಕೆಗಳನ್ನು ರಚಿಸಿಕೊಡುವುದು ಒಂದು ಜವಾಬ್ದಾರಿ ಎಂಬಂತೆ ನಿರ್ವಹಣೆಯಾಗುತ್ತ ಬಂದಿದೆ. ಹಾಗೆಯೆ ಪಾಠ, ಅರ್ಥ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಟಿಪ್ಪಣಿ, ಅಡಿಟಿಪ್ಪಣಿಗಳನ್ನು ಕೊಡುವುದನ್ನು ಒಂದು ರೂಡಿ ಎಂಬಂತೆ ಪಾಲಿಸುತ್ತ ಬರಲಾಗಿದೆ. ಈ ಕೆಲಸ ಅರಂಭದಲ್ಲಿ ಬಹುಪಾಲು ಕೃತಿ ಸಂಖ್ಯೆ, ಕೃತಿ ಕಾಲ, ಕೃತಿಕಾರನ ಕುಲ, ಕಾಲ ಮತ್ತು ಮತವಿಚಾರ ಇತ್ಯಾದಿಗಳನ್ನು ಕಟ್ಟಿಕೊಳ್ಳುವ ಅಥವಾ ನಿರ್ಣಯಿಸುವ ಕೆಲಸವೇ ಆಗಿರುತ್ತಿತ್ತು. ಇಂಥ ಕೆಲಸವು ಮುನ್ನುಡಿ, ಪ್ರಸ್ತಾವನೆ, ಪೀಠಿಕೆ ಮುಂತಾದ ಹೆಸರಿನಲ್ಲಿ ನಿರ್ದೇಶಿತವಾಗಿದೆ. ನಮ್ಮಲ್ಲಿ ಕೃತಿವಿಮರ್ಶೆ ಪ್ರಕಟವಾದ ಆರಂಭದ ವಿಮರ್ಶಾ ರೂಪಗಳಲ್ಲಿ ಇವು ಕೆಲವು. ಈ ಮುನ್ನುಡಿ, ಪ್ರಸ್ತಾವನೆ, ಪೀಠಿಕೆ ರೂಪದ ಬರವಣಿಗೆಯೇ ಆನಂತರದಲ್ಲಿ ವಿಮರ್ಶೆಯ ಒಂದು ಮುಖ್ಯ ಮಾರ್ಗವಾಗಿ ಬೆಳೆದಿದೆ. ಆರಂಭದಲ್ಲಿ ಹಳಗನ್ನಡ ಗ್ರಂಥಸಂಪಾದನೆ, ಸಂಶೋಧನೆಗಳಿಗೆ ಸೀಮಿತವಾಗಿದ್ದ ಈ ಮಾರ್ಗ ಆನಂತರ ಹೊಸಗನ್ನಡಕ್ಕೂ ತನ್ನ ಮಯ್ಯನ್ನು ಚಾಚಿದೆ. ಹೊಸಗನ್ನಡ ಕೃತಿಗಳಿಗೆ ಮುನ್ನುಡಿ, ಬೆನ್ನುಡಿಗಳನ್ನು ಅನ್ಯರಿಂದ ಬರೆಸುವ ಬಗ್ಗೆ, ಯಾಕೆ ಈ ಮುನ್ನುಡಿಗಳನ್ನು ಬರೆಸಬೇಕು? ಈ ಮುನ್ನುಡಿಗಳು ಹೇಗಿರಬೇಕು? ಎಂಬ ಬಗ್ಗೆ ಸಾಕಷ್ಟು ಜಿಜ್ಞಾಸೆ ನಡೆದಿದೆ. ಪುತಿನರ ‘ಹಣತೆ’ ಸಂಕಲನಕ್ಕೆ ಮುನ್ನುಡಿ ಬರೆಯುತ್ತಾ ಮಾಸ್ತಿಯವರು 1933ರಲ್ಲಿ “ಅನೇಕ ವೇಳೆ ಕವಿಗೆ ಜನದ ಮುಂದೆ ಬಂದು ನಿಲ್ಲುವಾಗ ತನಗೆ ಬೇಕಾದವರ ಕೈಯನ್ನು ಹಿಡಿದು ಬರುವುದು ಸುಖವೆಂದು ಕಾಣುತ್ತದೆ. ಕೃಷ್ಣನನ್ನು ನೋಡ ಹೋದ ರಾಧೆ ಜೊತೆಗೆ ಸಖಿಯನ್ನು ಕರೆದೊಯ್ದಳು. ಆ ಸಖಿ ವಯಸ್ಸಿನಲ್ಲಿ ರಾಧೆಗಿಂತ ಸ್ವಲ್ಪ ಹಿರಿಯಳೆಂದು ನನ್ನ ಊಹೆ. ನಮ್ಮ ಹೊಸ ಕವಿತೆಯ ಸಂಕೋಚವನ್ನು ನಿವಾರಿಸುವುದಕ್ಕೆ ನನ್ನಂಥವನ ಮುನ್ನುಡಿ ಎಂಬ ಇಂಥ ನೆಪ ಒಂದು ಸದ್ಯದಲ್ಲಿ ಅವಶ್ಯಕವಾಗಿದೆ.”15 ಎಂದು ಹೇಳಿದ್ದಾರೆ.
ಹೊಸಗನ್ನಡ ಕೃತಿಗಳಲ್ಲಿ ಕವಿತಾ ಸಂಕಲನಗಳಿಗೆ ಮಾತ್ರ ಅನ್ಯರಿಂದ ಮುನ್ನುಡಿ ಬೆನ್ನುಡಿ ಬರೆಸುವ ಪರಿಪಾಠ ವ್ಯಾಪಕವಾಗಿ ಒಂದು ಶಿಷ್ಟಾಚಾರ ಎಂಬಂತೆ ಹೊಸನೀರಿನ ಕಾಲಕ್ಕೆ ಚಾಲ್ತಿಗೆ ಬಂದಿದೆ. ಕಾವ್ಯವನ್ನುಳಿದು ಮಿಕ್ಕ ನಾಟಕ, ಕತೆ, ಕಾದಂಬರಿ, ಪ್ರಬಂಧ, ಆತ್ಮಚರಿತ್ರೆ, ವಿಮರ್ಶಾ ಸಂಕಲನ ಇವುಗಳಿಗೆಲ್ಲ ಬರೆಸುವ ಪರಿಪಾಠ ಮೊದಮೊದಲು ಇರಲಿಲ್ಲ. 16 ಲೇಖಕರೇ ಕೆಲ ಮಾತು ಬರೆಯುತ್ತಿದ್ದರು. ಆದರೆ ಕ್ರಮೇಣ ಇತರ ಪ್ರಕಾರಗಳಿಗೂ ಮುನ್ನುಡಿ, ಬೆನ್ನುಡಿ ಬರೆಸುವ ಪರಿಪಾಠ ಆನಂತರ ಬೆಳೆಯಿತು. ಈಗಂತೂ ಇದೊಂದು ವಿಮರ್ಶಾ ಮಾರ್ಗವಾಗಿ ಬೆಳೆದು ನಿಂತಿದೆ.
(ಮುಂದುವರೆಯುವುದು...)
ಅಡಿಟಿಪ್ಪಣಿಗಳು
ಹೆಚ್ಚಿನ ವಿವರಗಳಿಗೆ ನೋಡಿ: ಹೊಸಗನ್ನಡ ಅರುಣೋದಯ: ಶ್ರೀನಿವಾಸ ಹಾವನೂರ
ಹತ್ತೊಂಬತ್ತನೆ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆ-ಎ.ಎಸ್.ಜಯರಾಂ: 1983: ಕ.ಸಾ.ಪ. ಬೆಂಗಳೂರು, ಪುಟ 137
ವಸಾಹತುಶಾಹಿ ಮತ್ತು ಭಾಷಾಂತರ -ವಿ.ಬಿ.ತಾರಕೇಶ್ವರ, 2006: ಕನ್ನಡ ವಿ.ವಿ.ಹಂಪಿ. ಪುಟ 129.
ಅದೇ ಪುಟ: 146, 147
ಅದೇ ಪುಟ: 157, 158
ಇಂದಿರಾಬಾಯಿ (1899) ಪೀಠಿಕೆ, ಗುಲ್ವಾಡಿ ವೆಂಕಟರಾಯ: ಪುಟ 3-4, ಶತಮಾನದ ಸಾಹಿತ್ಯ ವಿಮರ್ಶೆ-ಸಂ
ಎಚ್.ಎಸ್.ರಾಘವೇಂದ್ರ ರಾವ್, 2001: ಸಾಹಿತ್ಯ ಅಕಾಡೆಮಿ, ಬೆಂಗಳೂರು
ಅದೇ, ಪುಟ 4, ‘ಸದ್ಗುರು ಪ್ರಭಾವ’-ಗಳಗನಾಥ, ಮುನ್ನುಡಿ.
ನವೋದಯ ಕನ್ನಡ ವಿಮರ್ಶಾ ಸಾಹಿತ್ಯದ ಸ್ವರೂಪ: ಒಂದು ಅಧ್ಯಯನ -ಸುಜಾತ, 2007, ಪುಟ-48 (ಅಪ್ರಕಟಿತ)
ಹಿತಬೋಧಿನಿ ಪತ್ರಿಕೆ, 1986
ಪ್ರಬುದ್ಧ ಕರ್ನಾಟಕ, ಸಂಪುಟ 1, ಸಂಚಿಕೆ 1-1919. ಪುಟ: 5-6
ಕ.ಸಾ.ಪ.ಪ. ಸಂಚಿಕೆ: 1-1-1916, ಪುಟ: 3
ಅದೇ: ಸಂಪುಟ; 4, ಸಂಚಿಕೆ; 2-3, 1919, ಪುಟ: 133
ಅದೇ: ಪುಟ-198
ಅದೇ: ಪುಟ-209
ಸಮಗ್ರ ಕಾವ್ಯ -ಪು.ತಿ.ನರಸಿಂಹಾಚಾರ್, ಪು.ತಿ.ನ. ಟ್ರಸ್ಟ್, ಬೆಂಗಳೂರು, 2004: ಪುಟ: 928
ಅಪವಾದಗಳುಂಟು. ಉದಾಹರಣೆ: ಕುವೆಂಪು ರಕ್ತಾಕ್ಷಿಗೆ ಎ.ಆರ್.ಕೃ. ಮುನ್ನುಡಿ
- ಡಾ. ರಾಮಲಿಂಗಪ್ಪ ಟಿ. ಬೇಗೂರು.
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.