Date: 31-03-2023
Location: ಬೆಂಗಳೂರು
''ಯಾವುದೆ ಒಂದು ವಾಕ್ಯದಲ್ಲಿ ಸಾಮಾನ್ಯವಾಗಿ ಒಂದು ಕೆಲಸ ಇರುತ್ತದೆ. ಆ ಕೆಲಸ ಒಂದು ನಿರ್ದಿಶ್ಟ ಕಾಲದಲ್ಲಿ ನಡೆಯಬೇಕು. ಇದು ಆ ಕೆಲಸ ನಡೆಯುವ ಕಾಲ. ಅದರೊಟ್ಟಿಗೆ ಆ ವಾಕ್ಯವನ್ನು ಮಾತಾಡುವ ಕಾಲವೊಂದು ಬೇರೆ ಇರುತ್ತದೆ. ಈ ವಾಕ್ಯವನ್ನು ಮಾತಾಡುವುದು ಒಂದು ಕೆಲಸ,'' ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕಾಲದ ಕಟ್ಟಳೆ' ಎಂಬ ವಿಚಾರಗಳ ಕುರಿತು ಬರೆದಿದ್ದಾರೆ.
ಕಾಲ ಎನ್ನುವುದು ‘ಸಮಯ’ ಎಂಬ ಅರ್ತದಲ್ಲಿ ಸಹಜವಾಗಿ ದಿನಜೀವನದಲ್ಲಿ ಬಳಕೆಯಲ್ಲಿದೆ. ವ್ಯಾಕರಣ ಓದುವಾಗ ಮೇಶ್ಟ್ರುಗಳು ಕಾಲ ಎಂಬುದನ್ನು ಕಲಿಸುತ್ತಾರೆ. ವ್ಯಾಕರಣದಲ್ಲಿ ಕಾಲ ಎಂದರೆ ಸಮಯ ಎಂಬುದೆ ಆಗಿದೆಯೆ? ಸಮಯ ಅಂದಾಗ ನಿನ್ನೆ-ಇಂದು-ನಾಳೆ ಎಂದು ಇರುವ ಹಾಗೆ ಬಾಶೆಯಲ್ಲಿಯೂ ನಿನ್ನೆ-ಇಂದು-ನಾಳೆ ಎಂಬುದು ಇದೆಯೆ? ಸಾಮಾನ್ಯವಾಗಿ ಹಾಗೆ ನಂಬಲಾಗಿದೆ ಮತ್ತು ನಂಬಿಸಲಾಗಿದೆ. ನಿನ್ನೆ ಎಂದರೆ ಬೂತ, ಇಂದು ಎಂದರೆ ವರ್ತಮಾನ ಮತ್ತು ನಾಳೆ ಎಂದರೆ ಬವಿಶತ್ ಎಂಬ ಮೂರು ಕಾಲಗಳಿವೆ ಎಂದು ಹೇಳಲಾಗುತ್ತದೆ. ಇಲ್ಲಿ ಕಾಲ ಎಂದರೆ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಯಾವುದೆ ಒಂದು ವಾಕ್ಯದಲ್ಲಿ ಸಾಮಾನ್ಯವಾಗಿ ಒಂದು ಕೆಲಸ ಇರುತ್ತದೆ. ಆ ಕೆಲಸ ಒಂದು ನಿರ್ದಿಶ್ಟ ಕಾಲದಲ್ಲಿ ನಡೆಯಬೇಕು. ಇದು ಆ ಕೆಲಸ ನಡೆಯುವ ಕಾಲ. ಅದರೊಟ್ಟಿಗೆ ಆ ವಾಕ್ಯವನ್ನು ಮಾತಾಡುವ ಕಾಲವೊಂದು ಬೇರೆ ಇರುತ್ತದೆ. ಈ ವಾಕ್ಯವನ್ನು ಮಾತಾಡುವುದು ಒಂದು ಕೆಲಸ. ಹಾಗಾದರೆ, ಇಲ್ಲಿ ನಾವು ಎರಡು ಬಿನ್ನ ಕೆಲಸಗಳನ್ನು ಮತ್ತು ಆ ಎರಡು ಬಿನ್ನ ಕೆಲಸಗಳು ನಡೆಯುವ ಎರಡು ಬಿನ್ನ ಕಾಲಗಳನ್ನು ಕುರಿತು ಮಾತಾಡುತ್ತಿದ್ದೇವೆ. ವಾಕ್ಯವನ್ನು ಮಾತಾಡುವ ಕಾಲ ಮತ್ತು ಆ ಕಾಲದಲ್ಲಿ ಇರುವ ಕೆಲಸ ನಡೆಯುವ ಕಾಲ ಇವೆರಡು ಬಿನ್ನ. ವಾಕ್ಯವನ್ನು ಮಾತಾಡುತ್ತಿರುವ ಕಾಲವನ್ನು ಕೇಂದ್ರವಾಗಿಟ್ಟುಕೊಂಡು ಆ ವಾಕ್ಯದಲ್ಲಿ ನಡೆಯುವ ಕೆಲಸದ ಕಾಲವನ್ನು ತಿಳಿದುಕೊಳ್ಳಲಾಗುವುದು. ವಾಕ್ಯದಲ್ಲಿ ಇರುವ ಕೆಲಸವು ಮಾತಾಡುವ ಕಾಲದಲ್ಲಿ ನಡೆಯುತ್ತಿದೆಯೆ, ಅದಕ್ಕಿಂತ ಮೊದಲು ನಡೆದಿದೆಯೆ ಇಲ್ಲವೆ ಅದರ ನಂತರ ನಡೆಯುವುದೆ ಎಂಬುದನ್ನು ಹೇಳುವುದೆ ಕಾಲ.
ಒಂದು ಉದಾಹರಣೆಯೊಂದಿಗೆ ಇದನ್ನು ಇನ್ನಶ್ಟು ಸ್ಪಶ್ಟನೆ ಮಾಡಿಕೊಳ್ಳೋಣ. ಕೆಳಗಿನ ವಾಕ್ಯವನ್ನು ಗಮನಿಸಿ.
ಅವಳು ಮನೆ ಕಟ್ಟುವಳು
ಅವಳು ಮನೆ ಕಟ್ಟುತ್ತಿದ್ದಾಳೆ
ಅವಳು ಮನೆ ಕಟ್ಟಿದಳು
ಈ ವಾಕ್ಯಗಳಲ್ಲಿ ಮೊದಲ ವಾಕ್ಯದಲ್ಲಿ ಇರುವ ಕೆಲಸ ವಾಕ್ಯವನ್ನು ಆಡುವ ಕಾಲದ ನಂತರ ನಡೆಯುತ್ತದೆ ಎಂಬುದು ಗೊತ್ತಾಗುತ್ತದೆ. ಎರಡನೆ ವಾಕ್ಯದಲ್ಲಿ ಆ ವಾಕ್ಯವನ್ನು ಆಡುವ ಸಮಯದಲ್ಲಿಯೆ ಆ ವಾಕ್ಯದಲ್ಲಿನ ಕೆಲಸ, ಅಂದರೆ ಮನೆ ಕಟ್ಟುವ ಕೆಲಸ, ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿದೆ. ಮೂರನೆ ವಾಕ್ಯವನ್ನು ಗಮನಿಸಿದಾಗ, ವಾಕ್ಯದಲ್ಲಿನ ಕೆಲಸವು ಆ ವಾಕ್ಯವನ್ನು ಆಡುವ ವೇಳೆಗೆ ಮುಗಿದಿದೆ ಎಂಬುದು ಗೊತ್ತಾಗುತ್ತದೆ.
ಹೀಗೆ ವಾಕ್ಯವೊಂದರಲ್ಲಿ ಇರುವ ಕೆಲಸದ ಸಮಯವನ್ನು ಕಾಲ ಎನ್ನಲಾಗುವುದು. ಅದನ್ನು ಆಡುವ ಕಾಲದ ನೇರದಲ್ಲಿ ಇಟ್ಟು ಅರ್ತ ಮಾಡಿಕೊಳ್ಳಲಾಗುವುದು. ವಾಕ್ಯವನ್ನು ಆಡುವ ಕಾಲದೊಂದಿಗೆ ವಾಕ್ಯದೊಳಗಿನ ಕೆಲಸವು ನಡೆಯುವ ಕಾಲದ ಸಾಪೇಕ್ಶ ಸಂಬಂದವೆ ಕಾಲ. ಇದನ್ನು ಸುಲಬವಾಗಿ ಬೇರೆ ರೀತಿಯಲ್ಲಿ ಹೇಳುವುದಾದರೆ, ವಾಕ್ಯವೊಂದರಲ್ಲಿ ಇರುವ ಕೆಲಸದ ಇಲ್ಲವೆ ಕ್ರಿಯೆಯ ಸಮಯದ ಅಬಿವ್ಯಕ್ತಿಯೆ ಕಾಲವಾಗಿದೆ.
ಕಾಲವನ್ನು ನಿನ್ನೆ, ಇಂದು, ನಾಳೆ ಇಂತಾ ಪದಕೋಶದ ಗಟಕಗಳ ಮೂಲಕವೂ ವ್ಯಕ್ತಪಡಿಸಬಹುದು. ಆದರೆ, ಕ್ರಿಯಾಪದಗಳ ರೂಪವನ್ನು ಬದಲಿಸುವ ಮೂಲಕವೂ ವ್ಯಕ್ತಪಡಿಸಬಹುದು. ಎರಡನ್ನೂ ಒಟ್ಟಿಗೆ ಬೆರೆಸಿಯೂ ಹೇಳಬಹುದು. ಪದಗಳ ಮೂಲಕ ಗೊತ್ತಾಗುವ ಕಾಲವನ್ನು ವ್ಯಾಕರಣದ ಬಾಗವಾಗಿ ಓದಲಾಗುವುದಿಲ್ಲ, ಬದಲಾಗಿ ಕ್ರಿಯಾಪದರೂಪಗಳ ಮೂಲಕ ಗೊತ್ತಾಗುವ ಕಾಲವನ್ನು ಕಾಲ ಎಂದು ಕರೆಯಲಾಗುತ್ತದೆ. ಕೆಳಗಿನ ಸಾಲೊಂದನ್ನು ಗಮನಿಸಿ,
ಕಳೆದ ವಾರ ಹೊಸ ಕಾರು ತೆಗೆದುಕೊಂಡು ಊರಿಗೆ ನಡೆದರು
ಈ ವಾಕ್ಯದಲ್ಲಿ ಕಾರು ತೆಗೆದುಕೊಳ್ಳುವ ಮತ್ತು ಊರಿಗೆ ನಡೆಯುವ ಕ್ರಿಯೆಗಳು ಮಾತಾಡುವ ಕಾಲಕ್ಕಿಂತ ಮೊದಲೆ ಗಟಿಸಿವೆ. ಇದನ್ನು ವಾಕ್ಯದಲ್ಲಿ ಬಂದಿರುವ ಕಳೆದ ವಾರ ಎಂಬ ಪದದ ಮೂಲಕ ತಿಳಿದುಕೊಳ್ಳಬಹುದು. ಆದರೆ, ಈ ಮಾಹಿತಿ ಹೆಚ್ಚುವರಿ ಮಾಹಿತಿಯಾಗಿದೆ, ಇಲ್ಲವೆ ಗಟಿಸಿದ ಕಾಲದ ನಿರ್ದಿಶ್ಟತೆಗೆ ಅಂದರೆ, ಕ್ರಿಯೆ ಯಾವಾಗ ನಡೆದಿದೆ ಎಂಬುದನ್ನು ಸ್ಪಶ್ಟಗೊಳಿಸುವುದಕ್ಕೆ ಈ ಹೆಚ್ಚುವರಿ ಮಾಹಿತಿ ಬಂದಿದೆ. ಆದರೆ, ವಾಕ್ಯದ ಕಾಲವನ್ನು ತಿಳಿದುಕೊಳ್ಳುವುದಕ್ಕೆ ಕ್ರಿಯಾಪದದ ರೂಪ ಹೆಚ್ಚು ಸಹಾಯ ಮಾಡುತ್ತದೆ. ಇದೆ ವಾಕ್ಯವನ್ನು ಕಾಲವನ್ನು ಸೂಚಿಸುವ ಪದಗಳನ್ನು ಬದಲಿಸಿ ಕೊಟ್ಟಿದೆ, ಗಮನಿಸಿ,
ಹೊಸ ಕಾರು ತೆಗೆದುಕೊಂಡು ಊರಿಗೆ ನಡೆದರು
ಈ ವಾಕ್ಯದಲ್ಲಿ ಕಾಲವನ್ನು ಹೇಳುವ ಪದಗಳು ಇಲ್ಲ. ಆದರೆ, ವಾಕ್ಯದ ಕೆಲಸವು ಗಟಿಸಿದೆ ಎಂಬುದು ಕ್ರಿಯಾಪದದ ರೂಪದ ಮೂಲಕ ಗೊತ್ತಾಗುತ್ತಿದೆ. ಈ ಪದದ ರಚನೆಯನ್ನು ಗಮನಿಸಿ, ನಡೆ+-ದ್-+-ಅರು. ‘ನಡೆ’ ಎಂಬುದು ಕ್ರಿಯಾಪದ. ಇದಕ್ಕೆ ಲಿಂಗ-ವಚನಗಳನ್ನು ಹೇಳುವ –ಅರು ಎಂಬ ರೂಪ ಬಂದಿದೆ. ಇದಕ್ಕಿಂತ ಮೊದಲು, ನಡೆ ಕ್ರಿಯಾಪದದ ಮೇಲೆ –ದ್- ಎಂಬ ಪ್ರತ್ಯಯವು ಬಂದಿದೆ. ಈ ರೂಪ ಬಂದಿರುವುದರಿಂದ ವಾಕ್ಯದಲ್ಲಿ ಇರುವ ಕ್ರಿಯೆಯಾದ ‘ನಡೆಯುವ’ ಕೆಲಸವು ಗಟಿಸಿದೆ ಎಂಬುದು ಗೊತ್ತಾಗುತ್ತದೆ. ಈ –ದ್- ರೂಪವನ್ನು ಬದಲಿಸುವ ಮೂಲಕ ಕಾಲದ ತಿಳುವಳಿಕೆಯಲ್ಲಿ ಬದಲಾಗುವುದನ್ನು ಕಾಣಬಹುದು. ಕೆಳಗೆ ಈ ವಾಕ್ಯದಲ್ಲಿ –ದ್- ರೂಪವನ್ನು ಬದಲಿಸಿ ಕೊಟ್ಟಿದೆ.
ಹೊಸ ಕಾರು ತೆಗೆದುಕೊಂಡು ಊರಿಗೆ ನಡೆದರು
ಹೊಸ ಕಾರು ತೆಗೆದುಕೊಂಡು ಊರಿಗೆ ನಡೆವರು
ಕ್ರಿಯಾಪದದ ರಚನೆಯನ್ನು ಗಮನಿಸಿ,
ನಡೆ+-ದ್-+-ಅರು
ನಡೆ+-ವ್-+-ಅರು
ಕ್ರಿಯಾಪದದ ಮೇಲೆ ಎರಡನೆ ವಾಕ್ಯದಲ್ಲಿ –ವ್- ರೂಪ ಬಂದಿರುವುದರಿಂದ ವಾಕ್ಯದಲ್ಲಿ ಇರುವ ಕೆಲಸವು ಇನ್ನೂ ನಡೆದಿಲ್ಲ ಮತ್ತು ಇನ್ನು ಮುಂದೆ ನಡೆಯುತ್ತದೆ ಎಂಬುದು ತಿಳಿಯುತ್ತದೆ.
ಹೀಗೆ, ಪದಕೋಶದ ಮೂಲಕವಲ್ಲದೆ, ವ್ಯಾಕರಣ ರೂಪಗಳ ಮೂಲಕ ಗೊತ್ತಾಗುವ ಕಾಲವನ್ನು ವ್ಯಾಕರಣದಲ್ಲಿ ಕಾಲ ಎಂದು ಕರೆಯಲಾಗುವುದು.
ವಾಸ್ತವದಲ್ಲಿ ಕಾಲ ಬೂತ-ವರ್ತಮಾನ-ಬವಿಶತ್ ಎಂದು ಮೂರು ಬಗೆಯಾಗಿ ಸರಳವಾಗಿ ನೋಡಬಹುದು ಎನಿಸಿದರೂ, ಜಗತ್ತಿನ ಹೆಚ್ಚು ಬಾಶೆಗಳಲ್ಲಿ ಕಾಲವ್ಯವಸ್ತೆ ತುಂಬಾ ಸಂಕೀರ್ಣವಾಗಿದೆ. ಕೆಲವು ಬಾಶೆಗಳಲ್ಲಿ ಎರಡು ಕಾಲಗಳಿರಬಹುದು, ಇನ್ನು ಕೆಲವು ಬಾಶೆಗಳಲ್ಲಿ ಮೂರು ಕಾಲಗಳು ಇರಬಹುದು. ಕೆಲವು ಬಾಶೆಗಳಲ್ಲಿ ಕಾಲವು ಸ್ಪಶ್ಟವಾಗಿ ವ್ಯಕ್ತವಾಗದೆ ವ್ಯಾಕರಣದ ಇನ್ನಾವುದೊ ರಚನೆಗಳೊಂದಿಗೆ ತಳುಕು ಹಾಕಿಕೊಂಡಿರಬಹುದು. ಆದರೆ, ಕಾಲದ ಅಬಿವ್ಯಕ್ತಿಯು ಇತರ ರಚನೆಗಳೊಂದಿಗೆ ಒಟ್ಟೊಟ್ಟಿಗೆ ಅಬಿವ್ಯಕ್ತಿಯಾಗುತ್ತಿರುತ್ತದೆ.
ಈ ಕೆಳಗಿನ ವಾಕ್ಯಗಳನ್ನು ಗಮನಿಸಿ,
ಹೊಸ ಕಾರು ತೆಗೆದುಕೊಂಡು ಊರಿಗೆ ನಡೆದರು
ಹೊಸ ಕಾರು ತೆಗೆದುಕೊಂಡು ಊರಿಗೆ ನಡೆದಿದ್ದರು
ಹೊಸ ಕಾರು ತೆಗೆದುಕೊಂಡು ಊರಿಗೆ ನಡೆಯುತ್ತಿದ್ದರು
ಹೊಸ ಕಾರು ತೆಗೆದುಕೊಂಡು ಊರಿಗೆ ನಡೆಯುವರಿದ್ದರು
ಇಲ್ಲೆಲ್ಲ ವಾಕ್ಯವನ್ನು ಆಡುವ ಸಮಯಕ್ಕಿಂತ ಮೊದಲೆ ಆಗಿರುವ ಕೆಲಸವನ್ನು ಹೇಳುತ್ತಿದೆಯಾದರೂ ರೂಪವೂ, ಅರ್ತವೂ, ಕೆಲಸವೂ ಬೇರೆಬೇರೆಯಾಗಿದೆ. ಹೀಗಾಗಿ ಇದು ತುಂಬಾ ಸಂಕೀರ್ಣ ರಚನೆ ಎಂದೆನಿಸುತ್ತದೆ. ಕಾಲವನ್ನು ಅಬಿವ್ಯಕ್ತಿಸುವುದಕ್ಕೆ ಎಂದು ಗುರುತಿಸುವ ಕಾಲಪ್ರತ್ಯಯಗಳು ಇನ್ನೂ ಹಲವು ವ್ಯಾಕರಣದ ಕೆಲಸವನ್ನೂ ಮಾಡುತ್ತಿರುವಂತಿವೆ. ಇದರಲ್ಲಿ ಟೆನ್ಸ್-ಆಸ್ಪೆಕ್ಟ್-ಮೂಡ್ ಎಂಬ ಮೂರು ಪ್ರಕಾರಗಳನ್ನು ಗುರುತಿಸುತ್ತಾರೆ. ಇವುಗಳನ್ನು
ಕನ್ನಡದಲ್ಲಿ ಕಾಲ-ಪಕ್ಶ-ಬಾವ ಎಂದು ಅಂದಾಜಾಗಿ ಕರೆಯಲಾಗಿದೆ. ಈ ಮೂರು ಬಿನ್ನ ವ್ಯಾಕರಣದ ರಚನೆಗಳು ವಾಕ್ಯದಲ್ಲಿ ನಡೆದ ಕೆಲಸದ ಕಾಲವನ್ನು, ಪಕ್ಶವನ್ನು, ಬಾವವನ್ನು ಸೂಚಿಸುತ್ತದೆ.
ಕಾಲ ಎಂಬುದು ಕೆಲಸದ ಕಾಲಸ್ತಿತಿಯನ್ನು ಹೇಳುತ್ತದೆ, ಅಂದರೆ ಈ ಮೇಲೆ ಮಾತಾಡಿದಂತೆ ಕೆಲಸವು ಆಗಿದೆಯೊ, ಆಗುತ್ತಿದೆಯೊ, ಆಗುವುದೊ ಎಂಬುದನ್ನು ತಿಳಿಸುತ್ತದೆ. ಪಕ್ಶ ಎಂಬುದು ಕೆಲಸದ ಕಾಲಸ್ತಿತಿಯ ಹೆಚ್ಚುವರಿ ಮಾಹಿತಿಯನ್ನು ಹೇಳುತ್ತದೆ. ಅಂದರೆ, ವಿಬಿನ್ನ ಕಾಲಗಳಲ್ಲಿ ವಾಕ್ಯದಲ್ಲಿನ ಕೆಲಸವು ಮುಗಿದಿದೆಯೊ, ನಡೆಯುತ್ತಿರುವುದೊ ಎಂಬ ಮೊದಲಾದ ಮಾಹಿತಿಯನ್ನು ಕೊಡುತ್ತದೆ. ಬಾವ ಎಂಬುದರ ಮೂಲಕ ವಾಕ್ಯದಲ್ಲಿನ ಕೆಲಸದ ವಾಸ್ತವತೆ ತಿಳಿದುಕೊಳ್ಳಲು ಸಾದ್ಯವಾಗುತ್ತದೆ. ಅಂದರೆ, ವಾಕ್ಯದಲ್ಲಿನ ಕೆಲಸವು ವಾಸ್ತವವೊ, ಸಾದ್ಯತೆಯೊ, ಅವಶ್ಯಕತೆಯೊ ಎಂಬುದನ್ನು. ಈ ವಾಕ್ಯಗಳನ್ನು ಗಮನಿಸಿ
ಕಾಲ: ಬೂತಕಾಲ: ಆಕೆ ನಡೆದಳು
ವರ್ತಮಾನಕಾಲ: ಆಕೆ ನಡೆಯುತ್ತಿರುವಳು
ಬವಿಶತ್ ಕಾಲ: ಆಕೆ ನಡೆಯುವಳು
ಪಕ್ಶ: ಏಕತ್ರ: ಆಕೆ ನಡೆದಳು
ನಿರಂತರ: ಆಕೆ ನಡೆಯುತ್ತಿರುವಳು
ಪುನರಾವರ್ತಿತ: ಆಕೆ ನಡೆಯುತ್ತಿದ್ದಳು
ಬಾವ: ಸಾದ್ಯತೆ: ಆಕೆ ನಡೆಯಬಲ್ಲಳು
ಅವಶ್ಯಕತೆ: ಆಕೆ ವೇಗವಾಗಿ ನಡೆಯಲಿ
ವಾಸ್ತವದಲ್ಲಿ ಕನ್ನಡ ಬಾಶೆಯ ಅದ್ಯಯನ ಸರಿಯಾಗಿ ಆಗಿಲ್ಲ ಎನ್ನುವುದು ಈ ವಿಚಾರಗಳನ್ನು ಗಮನಿಸುವಾಗ ತಿಳಿಯುತ್ತದೆ. ಇಲ್ಲೆಲ್ಲ, ಹೆಚ್ಚು ಹೆಚ್ಚು ತಿಳುವಳಿಕೆ ಅವಶ್ಯಕತೆ ಇದೆ.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ್ವನಾಮಗಳು
ಸರ್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.