Date: 31-03-2022
Location: ಬೆಂಗಳೂರು
'ಹಡಪದ ಲಿಂಗಮ್ಮ ಅಧಿಕ ಸಂಖ್ಯೆಯ ವಚನಗಳನ್ನು ರಚಿಸಿ ಪ್ರಮುಖ ವಚನಕಾರ್ತಿಯೆನಿಸಿಕೊಂಡಿದ್ದಾಳೆ. ಇದುವರೆಗೆ ಈಕೆಯ 114 ವಚನಗಳು ಪ್ರಕಟವಾಗಿವೆ. "ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ" ಅಂಕಿತದಲ್ಲಿ ಈಕೆ ವಚನಗಳನ್ನು ರಚಿಸಿದ್ದಾಳೆ' ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ವಚನಗಾರ್ತಿ ಲಿಂಗಮ್ಮನ ಕುರಿತು ಚರ್ಚಿಸಿದ್ದಾರೆ.
ಲಿಂಗಮ್ಮ ಹಡಪದಪ್ಪಣ್ಣನ ಪತ್ನಿಯಾಗಿದ್ದು, ಇವರ ಕಾಲ ಕ್ರಿ.ಶ. 1160 ಎಂದು ತಿಳಿಯಲಾಗಿದೆ. ಹಡಪದಪ್ಪಣ್ಣನು ಬಸವಣ್ಣನವರ ಆಪ್ತಕಾರ್ಯದರ್ಶಿಯಾಗಿದ್ದ ಮತ್ತು ಅಂಗರಕ್ಷಕನಾಗಿದ್ದನೆಂದು ತಿಳಿದುಬರುತ್ತದೆ. ಲಿಂಗಮ್ಮನಿಗೆ ಚೆನ್ನಮಲ್ಲೇಶ್ವರನೆಂಬ ಗುರುವಿದ್ದನೆಂದು ಆಕೆಯ ವಚನಗಳಿಂದ ತಿಳಿದುಬರುತ್ತದೆ. ಲಿಂಗಮ್ಮನನ್ನು ಕುರಿತು ಮಧ್ಯಕಾಲೀನ ಕಾವ್ಯಕೃತಿಗಳಲ್ಲಿ ಪ್ರಸ್ತಾಪವಿಲ್ಲ. ಆದರೆ "ಗುರುರಾಜ ಚರಿತ್ರೆ"ಯಲ್ಲಿ ಲಿಂಗಮ್ಮನ ಬಗೆಗೆ ಪ್ರಸ್ತಾಪವಿದೆ. "ಚಾರುಗುರುಭಕ್ತಿ ಲಿಂಗಮ್ಮ" ಎಂದು ಆಕೆಯ ಬಗೆಗೆ ಬರೆಯಲಾಗಿದೆ. ಹಡಪದಪ್ಪಣ್ಣ ಕ್ಷೌರಿಕದ ಕಾರ್ಯ ಮಾಡುತ್ತಿದ್ದನೆಂದು ಈಗಾಗಲೇ ಅನೇಕರು ತಿಳಿಸಿದ್ದಾರೆ. ಆದರೆ ಡಾ. ಬಸವರಾಜ ಸಬರದವರು, ಅಪ್ಪಣ್ಣ ಕ್ಷೌರಿಕ ವೃತ್ತಿಯವನಾಗಿರಲಿಲ್ಲ. ಆತ ಬಸವಣ್ಣನವರ ಅಂಗರಕ್ಷಕನಾಗಿದ್ದನೆಂದು ತಿಳಿಸಿದ್ದಾರೆ.
"ಹಡಪದಪ್ಪಣ್ಣ, ಹಡಪದರೇಚಣ್ಣ ಇವರು ಕ್ಷೌರಿಕರಾಗಿರಲಿಲ್ಲವೆಂಬುದಕ್ಕೆ ಅನೇಕ ಆಧಾರಗಳಿವೆ. ಪ್ರಾರಂಭದ ಶಾಸನಗಳಿಂದ ಹಿಡಿದು ಹದಿನಾರನೇ ಶತಮಾನದವರೆಗೆ ದೊರಕಿರುವ ಶಾಸನಗಳಲ್ಲಿ "ಹಡಪದ" ಎಂಬ ಪದಕ್ಕೆ ಪಡೆವಳ' ಎಂಬುದು ಪರ್ಯಾಯ ಪದವಾಗಿದೆ. ಪಡೆವಳರೆಂದರೆ ಶೂರರು, ಸೈನಿಕರು ಎಂದರ್ಥವಾಗುತ್ತದೆ. ಪಡೆಯೆಂದರೆ ಸೈನ್ಯಪಡೆಯೆಂಬ ಅರ್ಥವಿದೆ. ಶರಣರ ಕ್ರಾಂತಿಯ ಸಂದರ್ಭದಲ್ಲಿ ಹಡಪದಪ್ಪಣ್ಣನು, ಬಸವಣ್ಣನಿಗೆ ಒಬ್ಬ ಪಡೆವಳನ ರೀತಿಯಲ್ಲಿದ್ದನೆಂಬುದನ್ನು ನಂಬಬೇಕಾಗುತ್ತದೆ" (ನೋಡಿ-ಹಡಪದ ಶರಣರ ವಚನಗಳಲ್ಲಿ ವೈಚಾರಿಕತೆ - ಡಾ. ಬಸವರಾಜ ಸಬರದ, ಬಸವಧರ್ಮ ಪ್ರಸಾರ ಸಂಸ್ಥೆ, ಭಾಲ್ಕಿ. ಪು-3 ವರ್ಷ 2013)
ಹಡಪದ ರೇಚಣ್ಣನೂ ಕೂಡ ಶೂರನಾಗಿದ್ದನೆಂದು ಐತಿಹ್ಯಗಳಿಂದ ತಿಳಿದುಬರುತ್ತದೆಂದು ಡಾ. ಸಬರದವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಹಡಪದಪ್ಪಣ್ಣ, ರೇಚಣ್ಣ ಕ್ಷೌರಿಕರಾಗಿರಲಿಲ್ಲವೆಂಬುದು ತಿಳಿದುಬರುತ್ತದೆ. ಲಿಂಗಮ್ಮ ಕೂಡ ಶೂರನ ಪತ್ನಿಯೇ ಆಗಿದ್ದಳೆಂಬುದು ಸ್ಪಷ್ಟವಾಗುತ್ತದೆ.
ಕನ್ನಡಿ ಕಾಯಕದ ಅಮ್ಮಿದೇವ, ಕನ್ನಡಿ ಕಾಯಕದ ರೇವಮ್ಮ ಇವರ ವಚನಗಳಲ್ಲಿ ಮಾತ್ರ ಕ್ಷೌರಿಕ ವೃತ್ತಿಗೆ ಸಂಬಧಿಸಿದ ಸಲಕರಣೆಗಳ ಉಲ್ಲೇಖವಿದೆ. ಹಡಪದಪ್ಪಣ್ಣ, ರೇಚಣ್ಣ ಇವರ ವಚನಗಳಲ್ಲಿ ಕ್ಷೌರಿಕ ವೃತ್ತಿಗೆ ಸಂಬಂಧಿಸಿದ ಒಂದು ಪದವೂ ಇಲ್ಲ. ಹಡಪದ ಹೆಸರಿನಿಂದ ಕರೆಯಿಸಿಕೊಳ್ಳುವವರು ಪಡೆವಳರಾಗಿದ್ದರು, ಅಂಗರಕ್ಷಕರಾಗಿದ್ದರು. ಕನ್ನಡಿ ಕಾಯಕದವರೆಂದು ಪರಿಚಿತರಾಗಿರುವ ಕನ್ನಡಿ ಕಾಯಕದ ಅಮ್ಮಿದೇವ, ರೇವಮ್ಮ ಇವರು ಕ್ಷೌರಿಕರಾಗಿದ್ದರೆಂಬುದು ಸ್ಪಷ್ಟವಾಗುತ್ತದೆ.
ಉಳಿದಂತೆ ಲಿಂಗಮ್ಮನ ಜೀವನಚರಿತ್ರೆಗೆ ಸಂಬಂಧಿಸಿದಂತೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಆದರೆ ಲಿಂಗಮ್ಮನ ವಚನದಲ್ಲಿ "ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ, ಸತ್ಯ ಶರಣರ ಪಾದವಿಡಿದೆ"- (ವ-64) ಎಂಬ ಮಾತು ಬರುತ್ತದೆ. ಅಂದರೆ ಆ ಕಾಲದಲ್ಲಿ ಪಡೆವಳರನ್ನೂ ಕೂಡ ಕನಿಷ್ಟರೀತಿಯಿಂದ ನೋಡುತ್ತಿದ್ದರೆಂದು ತಿಳಿದುಬರುತ್ತದೆ. ಚಾತುರ್ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿದರೆ, ಉಳಿದ ಮೂರು ವರ್ಣಗಳನ್ನು ಕೀಳಾಗಿಯೇ ಕಾಣುತ್ತಿದ್ದರೆಂಬುದಕ್ಕೆ ಶಾಸನಗಳಲ್ಲಿ ಅನೇಕ ಆಧಾರಗಳಿವೆ. ಪಡೆವಳರು ಕ್ಷತ್ರಿಯರಂತೆ ರಾಜರಾಗಿರದೆ, ರಾಜರ, ಮಂತ್ರಿಗಳ ಅಂಗರಕ್ಷಕರಾಗಿದ್ದರೆಂಬುದು ಸ್ಪಷ್ಟವಾಗುತ್ತದೆ. ಬಸವಣ್ಣನವರು ಕೂಡಲಸಂಗಮಕ್ಕೆ ಬಂದಾಗ ನೀಲಾಂಬಿಕೆಯನ್ನು ಕರೆತರಲು ಹೇಳುವುದು ಹಡಪದಪ್ಪಣ್ಣನಿಗೆ ಮಾತ್ರ. ಕಲ್ಯಾಣದ ಹತ್ಯಾಕಂಡದ ಆ ಸಂದರ್ಭದಲ್ಲಿ ಶೂರರು ಮಾತ್ರ ಕಾದಾಡಿ ಪಾರಾಗಬಹುದಿತ್ತು. ಅಪ್ಪಣ್ಣ ಪಡೆವಳನಾದುದರಿಂದಲೇ ಬಸವಣ್ಣನವರು ಆತನಿಗೆ ಆ ಕಾರ್ಯವಹಿಸುತ್ತಾರೆ. ಹೆಸರಿನ ಮೇಲೆ ಅವರ ಕುಲವನ್ನು ಗುರುತಿಸುವುದು ತಪ್ಪಾಗುತ್ತದೆ. ಹಡಪದಪ್ಪಣ್ಣನೆಂದ ಕೂಡಲೆ ಕ್ಷೌರಿಕನೆಂದು ಹೇಳುವುದು, ಗಾಣದ ಕಣ್ಣಪ್ಪನೆಂದ ಕೂಡಲೆ ಗಾಣಿಗನೆಂದು ನಿರ್ಧರಿಸುವುದು ತಪ್ಪಾಗುತ್ತದೆ. ಶರಣರ ಕಾಲದಲ್ಲಿದ್ದ ಗಾಣದ ಕಣ್ಣಪ್ಪನು ಗಾಣಿಗನಾಗಿರಲಿಲ್ಲ, ಬದಲಾಗಿ ಆತ ಗಾಳದ ಕಣ್ಣಪ್ಪನಾಗಿದ್ದ, ಮೀನುಗಾರನಾಗಿದ್ದನೆಂದು ನನ್ನ ಇನ್ನೊಂದು ಲೇಖನದಲ್ಲಿ ನಾನು ಸ್ಪಷ್ಟಪಡಿಸಿದ್ದೇನೆ. (ನೋಡಿ-"ವಚನ ತೋರಣ" ಡಾ. ವಿಜಯಶ್ರೀ ಸಬರದ, ಶ್ರೀ ಮುರಘಾಮಠ ಪ್ರಕಾಶನ, ಧಾರವಾಡ 2018,ಪುಟ-113)
ಶರಣರ ಜೀವನಚರಿತ್ರೆಗೆ ಸಂಬಂಧಿಸಿದಂತೆ, ಅವರ ಜಾತಿ, ಹುಟ್ಟೂರು, ತಂದೆ ತಾಯಿಗಳ ಬಗೆಗೆ ಅನೇಕ ವಿವರಗಳು ಸಿಗುವುದೇ ಇಲ್ಲ. ಸಂಶೋಧನೆ ನಡೆದಂತೆಲ್ಲ ಒಂದೊಂದೇ ವಿಷಯ ಸ್ಪಷ್ಟವಾಗುತ್ತ ಹೋಗುತ್ತವೆ. ಈಕೆ ಆಧುನಿಕ ಸಾಹಿತ್ಯದಲ್ಲಿಯೂ ಕಾಣಿಸಿಕೊಂಡಿದ್ದಾಳೆ. ಸುಲೋಚನಾ ಆರಾಧ್ಯ ಅವರು "ಕಿಂಕರ ಕಿರಣ" ಎಂಬ ನಾಟಕವನ್ನು ರಚಿಸಿದ್ದಾರೆ. ಈ ನಾಟಕವು 1978ರಲ್ಲಿ ಪ್ರಕಟವಾಗಿದೆ. ಇದರಲ್ಲಿ ಹಡಪದಪ್ಪಣ್ಣ ಮತ್ತು ಲಿಂಗಮ್ಮ ದಂಪತಿಗಳ ಮಹತ್ವದ ಕಥಾನಕವಿದೆ. ನಾಟಕ ಅನೇಕ ಪ್ರಯೋಗ ಕಂಡಿದೆ.
ಹಡಪದ ಲಿಂಗಮ್ಮ ಅಧಿಕ ಸಂಖ್ಯೆಯ ವಚನಗಳನ್ನು ರಚಿಸಿ ಪ್ರಮುಖ ವಚನಕಾರ್ತಿಯೆನಿಸಿಕೊಂಡಿದ್ದಾಳೆ. ಇದುವರೆಗೆ ಈಕೆಯ 114 ವಚನಗಳು ಪ್ರಕಟವಾಗಿವೆ. "ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ" ಅಂಕಿತದಲ್ಲಿ ಈಕೆ ವಚನಗಳನ್ನು ರಚಿಸಿದ್ದಾಳೆ. ವಚನಗಳ ಜತೆಗೆ ಒಂದು ಸ್ವರವಚನವನ್ನೂ ರಚಿಸಿದ್ದಾಳೆ. 'ಮಂತ್ರಗೋಪ್ಯ' ವೆಂಬ ಚಿಕ್ಕ ಕೃತಿಯನ್ನೂ ಬರೆದಿದ್ದಾಳೆ. ಲಿಂಗಮ್ಮನ ವಚನಗಳನ್ನು ವಿದ್ವಾಂಸರು ಬೋಧೆಯ ವಚನಗಳೆಂದು ಕರೆದಿದ್ದು, ಇಲ್ಲಿ ನೀತಿಬೋಧೆಯೇ ಪ್ರಧಾನವಾಗಿರುವುದನ್ನು ಕಾಣಬಹುದಾಗಿದೆ.
1) "ಕಂಗಳ ಮುಂದಣ ಬೆಳಕ ಕಾಣದೆ, ಕಂಡ ಕಂಡವರ ಹಿಂದೆ ಹರಿದು ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ" (ವ-1263)
2) "ಮಾಣಿಕವ ಕಂಡವರು ತೋರುವರೆ ಅಯ್ಯಾ
ಮುತ್ತು ಕೊಂಡವರು ಅಪ್ಪಿಕೊಂಬರಲ್ಲದೆ?" (ವ. 1266)
3) "ಕಂಗಳ ಮುಂದೆ ಮಾಣಿಕವಿದ್ದು ಕಾಣಲೇಕರಿಯರಯ್ಯಾ?...
ಕಂಗಳ ಮುಂದೆ ಮಹಾಶರಣನಿದ್ದು ಕತ್ತಲೆ ಎನಲೇಕೆ?" (ವ. 1272)
ಇಂತಹ ಅನೇಕ ವಚನಗಳಲ್ಲಿ ಲಿಂಗಮ್ಮ ಕೆಲವು ಪ್ರಶ್ನೆಗಳನ್ನೆತ್ತಿದ್ದಾಳೆ; ಮುಂದಿನ ಭಾಗದಲ್ಲಿ ಅದಕ್ಕೆ ಸಮರ್ಥ ಉತ್ತರಗಳನ್ನು ಕೊಟ್ಟಿದ್ದಾಳೆ. ಕಣ್ಣುಗಳ ಮುಂದೆಯೇ ಬೆಳಕಿದೆ, ತನ್ನೊಳಗೇ ಅರಿವೆಂಬ ಗುರುವಿದ್ದಾನೆ. ತನ್ನಲ್ಲಿ ತಾನು ಕಂಡಕೊಳ್ಳಬೇಕೇ ಹೊರತು ಬೇರೆಕಡೆ ಕಂಡೆನೆಂಬುವವರನ್ನು ಭಂಗಿತರು ಎಂದು ಕರೆದಿದ್ದಾಳೆ. ಮುತ್ತು ಕೊಂಡವರು ಹೇಳುತ್ತಾರೆಯೇ ಹೊರತು, ಮಾಣಿಕವ ಕಂಡವರು ಹೇಳುವರೇ ಎಂಬ ಲಿಂಗಮ್ಮನ ಪ್ರಶ್ನೆ ಮುಖ್ಯವಾದುದಾಗಿದೆ. ಮುತ್ತು ದೇಹವಾದರೆ, ಮಾಣಿಕ ಆತ್ಮವಾಗಿದೆ. ನಮ್ಮ ಕಣ್ಣೆದುರೇ ಎಲ್ಲಾ ಇದೆ. ನಮ್ಮೊಳಗಡೆಯೇ ಎಲ್ಲಾ ಇದೆಯೆಂದು ಹೇಳಿರುವ ಲಿಂಗಮ್ಮ ವ್ಯಕ್ತಿ ಸಾದ್ಯತೆಗಳನ್ನು ಇಲ್ಲಿ ಎತ್ತಿ ಹೇಳಿದ್ದಾಳೆ. ಶರಣರ ಸಂಗದಲ್ಲಿ ಕತ್ತಲೆಂಬುದೇ ಇರುವುದಿಲ್ಲವೆಂಬ ಆಕೆಯ ನಂಬಿಕೆ ನಿಷ್ಠಾಭಕ್ತಿಗೆ ಸಾಕ್ಷಿಯಾಗಿದೆ.
1) "ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು ಅದಕ್ಕೆ ಸುತ್ತಲು ಬೇರು ಆವರಿಸಿತ್ತು" (ವ. 1279)
2) "ಬಟ್ಟಬಯಲಲ್ಲಿ ಒಂದು ಶರಧಿ ಹುಟ್ಟಿತ್ತು
ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು." (ವ. 1240)
3) "ಒಂದು ಊರಿಗೆ ಒಂಭತ್ತು ಬಾಗಿಲು, ಐವರು ಕಾವಲುಗಾರರು, ಆರುಮಂದಿ ಪ್ರಧಾನಿಗಳು, ಇಪ್ಪತ್ತೈದು ಮಂದಿ ಪರಿವಾರ" - (ವ-1308)
ಲಿಂಗಮ್ಮ ಇಂತಹ ಅನೇಕ ಬೆಡಗಿನ ವಚನಗಳನ್ನು ರಚಿಸಿದ್ದಾಳೆ. ಗುಡಿಗುಂಡಾರಗಳ ಬಗೆಗೆ ಉಳಿದ ಧರ್ಮಗಳು ಹೇಳಿದರೆ, ಬಯಲ ಬೆಳಕು ಕುರಿತು ಶರಣರು ಹೇಳಿದ್ದಾರೆ. ಉಳಿದವರು ಗುಡಿಗಳಲ್ಲಿ ದೇವರನ್ನು ಕಂಡರೆ, ಶರಣೆಯರು ಬಯಲಲ್ಲಿ ಬೆಳಕನ್ನು ಕಂಡಿದ್ದಾರೆ. ಆ ಬೆಳಕೇ ನಿಜವಾದ ಜ್ಞಾನವಾಗಿದೆ. ಬಟ್ಟಬಯಲಲ್ಲಿ ಕಾಣಿಸಿಕೊಂಡಿರುವ ಮರ, ಶರಧಿ ಇವು ದೇಹದ ಸಂಕೇತವಾಗಿವೆ. ಶರಧಿಯ ನಡುವಿರುವ ಕಮಲ ಆತ್ಮದ ಸಂಕೇತವಾಗಿದೆ. ಊರು ಎಂದರೆ ಈ ದೇಹ, ಈ ದೇಹಕ್ಕೆ ನವರಂದ್ರಗಳಿವೆ, ಪಂಚಕರ್ಮಗಳಿವೆ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರು ಪ್ರಧಾನಿಗಳಿದ್ದಾರೆ. ಇಪ್ಪತ್ತೈದು ನರನಾಡಿಗಳುಳ್ಳ ಶರೀರ ಇದಾಗಿದೆಯೆಂದು ಬೆಡಗಿನ ಭಾಷೆಯಲ್ಲಿ ಲಿಂಗಮ್ಮ ಹೇಳಿದ್ದಾಳೆ.
ಲಿಂಗಮ್ಮನ ಬೋಧೆಯ ವಚನಗಳು ಹೆಚ್ಚು ಜನಪ್ರಿಯವಾಗಿವೆ. ಮನವನ್ನು ಶುದ್ಧೀಕರಿಸಿಕೊಳ್ಳಲು ತನುವಿಗೆ ಶಿಕ್ಷೆಕೊಟ್ಟು, ತನುಕರಿಗಿಸಿಕೊಳ್ಳಲು ಪ್ರಯತ್ನಿಸುವ ಮನುಜರನ್ನು ಕಂಡು ಲಿಂಗಮ್ಮ ಬೋಧೆಯ ನುಡಿಗಳನ್ನಾಡಿದ್ದಾಳೆ.
1) "ನಮ್ಮ ಶರಣರು ಮನವನೆಂತು ಗೆದ್ದಹರೆಂದಡೆ
ಕಾಮಕ್ರೋಧವ ನೀಗಿ ಲೋಭ ಮೋಹ ಮದಮತ್ಸವರವ ಭೇದಿಸಿ..." (ವ-1244)
2) "ಮನವೆಂತಾಗಬೇಕೆಂದಡೆ, ಗಾಳಿಬೀಸದ ಜಲದಂತೆ, ಮೋಡವಿಲ್ಲದ ಸೂರ್ಯನಂತೆ, ಬೆಳಗಿದ ದರ್ಪಣದಂತೆ...." (ವ-1243)
3) "ಮನವ ನಿಲಿಸುವುದಕ್ಕೆ ಶರಣರ ಸಂಗಬೇಕು. ಜನನ ಮರಣವ ಗೆಲಬೇಕು ಗುರುಲಿಂಗ ಜಂಗಮದಲ್ಲಿ ವಂಚನೆಯಿಲ್ಲದೆ..." (ವ-1245)
ಇಂತಹ ಅನೇಕ ವಚನಗಳಲ್ಲಿ ನೀತಿಬೋಧೆ ಎದ್ದುಕಾಣುತ್ತದೆ. ಮನವನ್ನು ಹೇಗೆ ಗೆಲ್ಲಬೇಕೆಂಬುದನ್ನು ಈ ಮೂರು ವಚನಗಳಲ್ಲಿ ವಿವರಿಸಿದ್ದಾಳೆ. ಅಕ್ಕಿಯ ಥಳಿಸಿದಂತೆ, ಹಲ್ಲ ಸುಲಿದಂತೆ, ಕನ್ನಡಿಯ ನೋಡಿದಂತೆ ಮನನಿರ್ಮಲವಾಗದೆ ಘನವ ಕಾಣದೆಂದು ಸ್ಪಷ್ಟಪಡಿಸಿದ್ದಾಳೆ. ತಾನು ಬಯಲ ದೇಹಿಯಾಗದೆ ನಿಜಮುಕ್ತಿ ಇಲ್ಲವೆಂದು ಹೇಳಿದ್ದಾಳೆ.
ನಿಜವಾದ ಸಾಧಕನು ಮನದಲ್ಲಿಯೇ ಘನವನ್ನು ಕಾಣುತ್ತಾನೆ. ಜಂಗಮದಲ್ಲಿ ಧನವನ್ನು ಕಾಣುತ್ತಾನೆ, ದೇಹದಲ್ಲಿಯೇ ದೇವಾಲಯವನ್ನು ಕಾಣುತ್ತಾನೆಂದು ತಿಳಿಸಿದ್ದಾಳೆ. ಅಂಗವನ್ನು ಗೆದ್ದವನಿಗೆ ಲಿಂಗದ ಹಂಗಿಲ್ಲ, ಅರಿವನ್ನು ಕಂಡವನಿಗೆ ಕುರುಹಿನ ಹಂಗಿಲ್ಲ, ತಾನೇ ತಾನಾದವನಿಗೆ ಧ್ಯಾನದ ಹಂಗಿಲ್ಲ, ಮನ ಮುಗ್ಧನಾದವನಿಗೆ ಮಾನವರ ಹಂಗಿಲ್ಲ, ಆಸೆಯನಳಿದವನಿಗೆ ರೋಷದ ಹಂಗಿಲ್ಲ, ಕಾಮನ ಸುಟ್ಟವನಿಗೆ ಕಳವಳದ ಹಂಗಿಲ್ಲ, ಬಯಲಲ್ಲಿ ಬಯಲಾದವನಿಗೆ ಭಾವದ ಹಂಗಿಲ್ಲವೆಂದು ಹೇಳಿರುವ ಲಿಂಗಮ್ಮ ಆಧ್ಯಾತ್ಮ-ಅನುಭಾವಕ್ಕೆ ಸಂಬಂಧಿಸಿದಂತೆ ಅನೇಕ ಹೊಸ ಸಂಗತಿಗಳನ್ನು ತಿಳಿಸಿದ್ದಾಳೆ.
ನಿತ್ಯ ಸಾಧಕನಿಗೆ ಕತ್ತಲೆ-ಬೆಳಗುಗಳಲ್ಲಿ ಭೇದವಿರುವುದಿಲ್ಲ, ಪರವಸ್ತುವಿನ ನೆಲೆಯ ಕಂಡವನಿಗೆ ಚಿತ್ತ-ಪರಿಚಿತ್ತಗಳೆಂಬ ಭೇದವಿರುವುದಿಲ್ಲ, ತಾನೇ ಕರ್ತೃನಾದವನಿಗೆ ನಿತ್ಯ ಅನಿತ್ಯಗಳೆಂಬುದಿಲ್ಲವೆಂದು ಹೇಳಿರುವ ಲಿಂಗಮ್ಮ ಆಧ್ಯಾತ್ಮ ಕ್ಷೇತ್ರದಲ್ಲಿ ತನ್ನದೇ ದಾರಿಯನ್ನು ಕಂಡುಕೊಂಡಿದ್ದಾಳೆ. ಲಿಂಗಮ್ಮನ ವಚನಗಳಲ್ಲಿ ಕಾವ್ಯಾಂಶ ಕಡಿಮೆಯಿದ್ದರೂ ಆಕೆ ಬಳಸಿರುವ ಉಪಮೆ, ರೂಪಕಗಳು ತುಂಬ ನೂತನವಾಗಿವೆ. ಸರಳವಾದ ಭಾಷೆಯಲ್ಲಿ ಮಹತ್ವದ ವಿಚಾರಗಳನ್ನು ತಿಳಿಸಿದ್ದಾಳೆ.
ವಿಜಯಶ್ರೀ ಸಬರದ
9845824834
ಮುಂದುವರೆಯುವುದು....
ಈ ಅಂಕಣದ ಹಿಂದಿನ ಬರೆಹಗಳು:
ಶಿವಶರಣೆ ಅಮುಗೆ ರಾಯಮ್ಮ
ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು
“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರ...
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
©2024 Book Brahma Private Limited.