ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ

Date: 22-02-2023

Location: ಬೆಂಗಳೂರು


''ಶ್ರೀದೇವಿಯ ವ್ಯಕ್ತಿತ್ವ ಚಿತ್ರಣದಲ್ಲಿ ಓದುಗರಿಗೆ ಒಂದು ಬಗೆಯ ಅಪೂರ್ಣತೆ ಕಾಡುತ್ತದೆ. ಆಕೆಯ ರೂಪಗೊಂಡ ವ್ಯಕ್ತಿತ್ವದ ನಿರೂಪಣೆಗೆ ಇಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ. ಆದರೆ ಅದರ ವಿಕಸನದ ಕಥನಕ್ಕೆ ಸಾಕಷ್ಟು ಅವಕಾಶ ಕಾದಂಬರಿಯಲ್ಲಿ ದೊರಕಿಲ್ಲ. ಇಲ್ಲಿ ಕತೆ ಆಲದ ಮರದ ಹಾಗೆ ಹರಡಿಕೊಳ್ಳದೆ ಇದು ಹೀಗೇ ಮುಗಿಯಬೇಕು ಎಂಬಂತೆ ನೀಲಗಿರಿ ಮರದ ರೀತಿ ನ್ಯಾರೋ ಆಗಿದೆ,''ಎನ್ನುತ್ತಾರೆ ಲೇಖಕ ರಾಮಲಿಂಗಪ್ಪ ಟಿ ಬೇಗೂರು. ಅವರು ತಮ್ಮ ‘ನೀರು ನೆರಳು' ಅಂಕಣದಲ್ಲಿ ‘ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ' ವಿಚಾರದ ಕುರಿತು ಬರೆದಿದ್ದಾರೆ.

1. ಕೃಷಿ ಮತ್ತು ವ್ಯಾಪಾರ, 2. ಸರ್ಕಾರಿ ಉದ್ಯೋಗ ಮತ್ತು ಸಾಂಪ್ರದಾಯಿಕ ಕೃಷಿ ಬದುಕು, 3. ಸಾಂಪ್ರದಾಯಿಕ ಕೌಟುಂಬಿಕತೆ ಮತ್ತು ಬದಲುಗೊಳ್ಳುವ ದಾಂಪತ್ಯ ಸಾಂಗತ್ಯಗಳು ಹೀಗೆ ಅಮರೇಶ ನುಗಡೋಣಿ ಅವರು ಬರೆದಿರುವ ಗೌರಿಯರು ಕಾದಂಬರಿಯಲ್ಲಿ ಈ ಮೂರು ಬಗೆಯ ಬೈನರಿಗಳ ತೌಲನಿಕ ಸಂಕಥನ ಇದೆ. ಆದಾಗ್ಯೂ ಇಲ್ಲಿ ಮೊದಲ ಎರಡಕ್ಕಿಂತ ಮೂರನೆಯದಕ್ಕೆ ಹೆಚ್ಚಿನ ಒತ್ತು ಇದೆ. ಇಲ್ಲಿ ದಾಂಪತ್ಯದಲ್ಲಿನ ಗಂಡು ಹೆಣ್ಣುಗಳ ಪ್ರಧಾನಾಧೀನತೆಯ ನೆಲೆಗಳ ಸಂಘರ್ಷ; ಕುಟುಂಬ, ದಾಂಪತ್ಯಗಳ ವಿಘಟನೆ, ಸಂಘಟನೆ; ಮನುಷ್ಯ ಸಂಬಂಧಗಳ ಕಥನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಮಿಕ್ಕೆಲ್ಲ ನಿರೂಪಣೆಗಳೂ ಆನುಷಂಗಿಕ ಆಗಿ ಬರುತ್ತವೆ. ಹಾಗಾಗಿಯೆ ಈ ಕಾದಂಬರಿ ಒಂದು ಕುಟುಂಬ – ದಾಂಪತ್ಯ ಸಂಕಥನ ಎನ್ನಬಹುದು.

ಇಲ್ಲಿ ಇರುವುದು ಮೂರು ಕುಟುಂಬಗಳ ಕಥನ. ಇವುಗಳಲ್ಲಿ ದಾಕ್ಷಾಯಿಣಿ ಶಂಭುಲಿಂಗರ ಕುಟುಂಬ, ಶಿವಲಿಂಗಪ್ಪ ಚೆನ್ನಮ್ಮರ ಕುಟುಂಬದ ಕತೆಗಳು ಪ್ರಾಸಂಗಿಕವಾಗಿ ಬರುತ್ತವಾದರು ಸದಾಶಿವಪ್ಪ ಪಾರ್ವತಿ ಕುಟುಂಬದ ಕತೆಯೆ ಪ್ರಧಾನವಾಗಿ ಕಥಿತ ಆಗಿದೆ. ಈ ಕುಟುಂಬಗಳಲ್ಲದೆ ಇಲ್ಲಿ ಮಲ್ಲಪ್ಪ ಎಲ್ಲಮ್ಮರ ದಾಂಪತ್ಯ, ಶಿವಲೀಲಾ ಚಂದ್ರಶೇಖರರ ದಾಂಪತ್ಯ, ಅಕ್ಕಮ್ಮ ರಾಮಚಂದ್ರರ, ಶ್ರೀದೇವಿ ಅರುಣರ, ಕಲ್ಯಾಣಿ ಶಂಕರಲಿಂಗರ, ಶರಣ ಚಂದ್ರಕಲಾರ ದಾಂಪತ್ಯ ಹೀಗೆ ಹಲವು ದಾಂಪತ್ಯಗಳ ಕಥನಗಳು ಇವೆ.

ಇಲ್ಲಿ ಹಲವು ಸಂಘಟಿತ ದಾಂಪತ್ಯಗಳ ನಿರೂಪಣೆಗಳೂ ಸದಾಶಿವಪ್ಪ ಪಾರ್ವತಿ ದಂಪತಿಯ ಮೂವರು ಹೆಣ್ಣುಮಕ್ಕಳ ವಿಘಟಿತ ದಾಂಪತ್ಯದ ಕಥನಗಳೂ ಒಟ್ಟಿಗೆ ಇವೆ. ಸರ್ಕಾರಿ ನೌಕರಿಯಲ್ಲಿ ಇರುವ ತನ್ನ ಮೂವರು ಹೆಣ್ಣುಮಕ್ಕಳನ್ನು ನೋಪಿ ಪೂಜೆಗೆ ಒಟ್ಟಿಗೆ ಸೇರಿಸಲು ಪಾರ್ವತಿ ಇಲ್ಲಿ ಮೂರು ವರ್ಷ ಶ್ರಮ ಪಟ್ಟಿದ್ದಾಳೆ. ಹಾಗೆ ಹೆಣ್ಣುಮಕ್ಕಳು ಸಂಪ್ರದಾಯಗಳಿಂದ ದೂರ ಆದದ್ದು ಮತ್ತು ಕಳ್ಳುಬಳ್ಳಿಯನ್ನು ಕಡಿದುಕೊಂಡದ್ದೆ ಅವರ ದಾಂಪತ್ಯದ ವಿಘಟನೆಗೆ ಕಾರಣ ಎಂಬಂತೆ ಕಥನ ಪರೋಕ್ಷವಾಗಿ ಸೂಚಿಸುತ್ತದೆ. ಈ ಮೂರು ದಾಂಪತ್ಯಗಳ ವಿಘಟನೆಯನ್ನು ಹೇಳುವ ಉದ್ದೇಶದಿಂದಲೆ ಕಥನವನ್ನು ಹೆಣೆದಿರುವಂತೆ ಒಟ್ಟಾರೆ ಕಾದಂಬರಿ ಇದೆ.

ತನ್ನ ಚಿಕ್ಕಮ್ಮನ ಎದುರು ತನ್ನ ಕತೆಯನ್ನು ಬಿಚ್ಚಿಕೊಳ್ಳುವ ತಂತ್ರದಲ್ಲಿ ಅಕ್ಕಮ್ಮನ ದಾಂಪತ್ಯ ವಿಘಟನೆಯ ಕಥನ ನಿರೂಪಣೆ ಆಗಿದೆ. “ಎಷ್ಟೆ ಫ್ಯಾಶನ್‌ ಮಾಡ್ರಿ. ತಾಳಿ ಚೈನು ಹಾಕ್ಕೊಳ್ಳದನ್ನ ಮರೀಬಾರದಮ್ಮ” ಎಂದು ಚಿಕ್ಕಮ್ಮ ದಾಕ್ಷಾಯಿಣಿ ಹೇಳಿದಾಗ ಅಕ್ಕಮ್ಮ “ನಾನು ಗಂಡನಿಗೆ ಡೈವೋರ್ಸ್‌ ಕೊಟ್ಟಿದೀನಿ. ನಾಲ್ಕು ವರ್ಷಗಳಾದುವು”. ಎನ್ನುತ್ತಾಳೆ. ದಾಕ್ಷಾಯಿಣಿಗೆ ಶಾಕ್‌ ಆಗುತ್ತದೆ. “ಹಾಗಾದರೆ ನಿನ್ನ ಮಗ ಶಿವದರ್ಶನನಿಗೆ ಒಂದೂವರೆ ವರ್ಷ ಮಾತ್ರವಲ್ಲ.” ಎಂದರೆ ಅದಕ್ಕೆ “ಇವನು ನನ್ನ ಮಗ. ಮದರ್‌ ಬೇಬಿ. ಅವನಿಗೆ ಅಪ್ಪ ಇಲ್ಲ. ಇದ್ದರೂ ನೇಪತ್ಯದಲ್ಲಿ” ಎನ್ನುತ್ತಾಳೆ. (ಪುಟ ೮೨). ಹಳೆಯ ಸಂಪ್ರದಾಯಗಳನ್ನು ಮುರಿಯುವ ಧೈರ್ಯಸ್ಥೆಯಂತೆ ಇಲ್ಲಿ ಅಕ್ಕಮ್ಮ ಕಾಣುತ್ತಾಳೆ. ಆದರೂ ಈಕೆಗೆ ಒಳಗೆ ತನ್ನ ಮಗನನ್ನು ತನ್ನ ತಂದೆ, ತಾಯಿ ಒಪ್ಪಿಕೊಳ್ಳಲಿ ಎಂಬ ಆಸೆಯೂ ಇದೆ. ಮದರ್‌ ಬೇಬಿಯನ್ನು ಹೊಂದುವ ಸಿಂಗಲ್‌ ಪೇರೆಂಟಿಂಗ್‌ ಮನಸ್ಥಿತಿಯನ್ನು ಚಿತ್ರಿಸುವುದು ಮತ್ತು ಅದಕ್ಕೆ ನಮ್ಮ ಸಮಾಜ ತನ್ನ ಸಮ್ಮತಿ ಮುದ್ರೆಯನ್ನು ಒತ್ತಲಿ ಎಂಬುದು ಇಲ್ಲಿನ ನಿರೂಪಣೆಯ ಉದ್ದೇಶವಾಗಿದೆ.

ಮೊದಲ ಮಗಳು ಶಿವಲೀಲಾ ಕಥೆ ಆಕೆಯೆ ಸ್ವತಃ ಅಪ್ಪನ ಎದುರು ತನ್ನ ಕತೆಯನ್ನು ಬಿಚ್ಚಿಕೊಳ್ಳುವ ತಂತ್ರದಲ್ಲಿ ನಿರೂಪಿತ ಆಗಿದೆ. ʼಅಪ್ಪ ಅವನಿಂದ ನಾನು ಡೈವೋರ್ಸ್‌ ಪಡೆದುಕೊಂಡೇ ಐದು ವರ್ಷಗಳಾದುವು. ನಿಮ್ಗ ಹೇಳಿಲ್ಲ. ಅಮ್ಮ ಸೂಕ್ಷ್ಮ ಮನಸ್ಸಿರುವಾಕೆ. ಅದಕ್ಕೆ ಅದರ ಸುಳಿವು ನಿಡಲಿಲ್ಲ. ಅಪ್ಪ ದೇವರು ನನ್ನನ್ನು ಸರಿಯಾದ ವೇಳೆಗೆ ಟ್ರಾನ್ಸ್‌ಫರ್‌ ಮಾಡಿದ. ಆಗ ನನಗೆ ಮೂರು ತಿಂಗಳಾಗಿದ್ದುವುʼ. ಎಂದು ತನ್ನ ಮಗಳು ಹೇಳಿದಾಗ ಸದಾಶಿವಪ್ಪನ ಕಣ್ಣಲ್ಲಿ ನೀರಾಡುತ್ತವೆ. (ಪುಟ 62)

ನೋಪಿ ಪೂಜೆಗೆ ಬರುವ ಹೊತ್ತಿಗೆ ಅವಳ ಮಗ ಶಿವಸಮಯನಿಗೆ ಆರು ವರ್ಷ ವಯಸ್ಸಾಗಿದೆ. ಅವನನ್ನು ಆಕೆ ನೋಪಿ ಪೂಜೆಗೆ ಕರೆತಂದಿರುವುದಿಲ್ಲ. ಅವನನ್ನು ಅದುವರೆಗೆ ನೋಡಲು ಸದಾಶಿವಪ್ಪ ಪಾರ್ವತಿ ಕೂಡ ಹೋಗಿರುವುದಿಲ್ಲ. ಶಿವಲೀಲಾ ಡೈವೋರ್ಸ್‌ ತೆಗೆದುಕೊಂಡು ಐದು ವರ್ಷ ಆಗಿವೆ. ಈ ಸುದ್ದಿ ಕೂಡ ತಂದೆ ತಾಯಿಗೆ ಗೊತ್ತಿಲ್ಲ. ಈಕೆಯ ಅತ್ತೆ ಮಾವಂದಿರಿಗು ಈ ಸುದ್ದಿ ಗೊತ್ತಿಲ್ಲ. ಅಂದರೆ ಇವರ ನಡುವೆ ಅದೆಂತಹ ಭಾವನಾತ್ಮಕ ಸಂಬಂಧ ಇದೆ! ಸಂಬಂಧಗಳ ಬಾವುಣಿಕೆಯ ಅಭಾವ ಮತ್ತು ಸಾಂಗತ್ಯದ ಅಭಾವವೆ ನಮ್ಮನ್ನು ವಿಘಟನೆಗೆ ಒಯ್ಯುತ್ತದೆ ಎಂಬ ಧ್ವನಿ ಇಲ್ಲಿದೆ.

ಶಿವಲೀಲಾ ಮಾವ ರಾಮನಗೌಡ ಮತ್ತು ತಂದೆ ಸದಾಶಿವಪ್ಪ ಬಹಳೆ ಆತ್ಮೀಯರು ಎಂಬಂತೆ ಕಾದಂಬರಿಯಲ್ಲಿ ಚಿತ್ರಣವಿದೆ. ಒಮ್ಮೆ ಆತ ಸೇವೆಯಿಂದ ರಿಟೈರ್‌ ಆದಾಗ ಸದಾಶಿವಪ್ಪನ ಮನೆಗೆ ಬಂದು ನಾಲ್ಕು ದಿನ ಇದ್ದೂ ಹೋಗುತ್ತಾನೆ. ಆಗ ಆತ ನನ್ನ ಇಡೀ ಸರ್ವೀಸಿನಲ್ಲಿ ನಿರುಮ್ಮಳವಾಗಿ ಕಳೆದದ್ದು ಈ ನಾಲ್ಕೈದು ದಿನ ಮಾತ್ರ ಅಂತಲೂ ಹೇಳುತ್ತಾನೆ. ಇಷ್ಟೆಲ್ಲ ಹೊಕ್ಕು ಬಳಕೆ ಇರುವ ಬೀಗರು ಮಗಳ ಮದುವೆ ಒಡೆದು ಹೋಗುವಾಗ ಮಧ್ಯಪ್ರವೇಶ ಮಾಡುವುದಿಲ್ಲ. ಶಿವಲೀಲಾ ಸಂಸಾರದ ಒಡಕು ಇವರಿಗೆ ತಿಳಿದೇ ಇಲ್ಲವೆಂತಲ್ಲ. ಒಮ್ಮೆ ರಾಮನಗೌಡ ಮತ್ತು ಆತನ ಹೆಂಡತಿ ಶಿವಲೀಲಾ ಮನೆಗೂ ಬಂದು ಎರಡು ದಿನ ಇದ್ದೂ ಹೋಗುತ್ತಾರೆ. ಆಗ ಶಿವಲೀಲಾಳೆ ತನ್ನ ಗಂಡನ ಹೊಣೆಗೇಡಿತನದ ಬಗ್ಗೆ ಹೇಳಿಕೊಳ್ಳುತ್ತಾಳೆ. ಆದರೂ ಅವಳ ದಾಂಪತ್ಯ ಹಿರಿಯರ ಯಾವುದೆ ಬಗೆಯ ಮಧ್ಯಪ್ರವೇಶ ಇಲ್ಲದೆ ಮುರಿದುಹೋಗುತ್ತದೆ. ಹೀಗೆ ಎರಡನೆ ಪೀಳಿಗೆಯ ದಾಂಪತ್ಯದ ವಿಘಟನೆಗೆ ಮಹಿಳೆಯ ಆರ್ಥಿಕ ಸ್ವಾತಂತ್ರ್ಯ ಮಾತ್ರ ಕಾರಣವಲ್ಲ; ಪೀಳಿಗೆಗಳ ನಡುವಣ ಬಂಧುತ್ವದ ಸರಿಯಾದ ನಿಭಾವಣೆ ಇಲ್ಲದುದೂ ಕಾರಣ ಎಂದು ಕಾದಂಬರಿ ಬಿಂಬಿಸುತ್ತದೆ.

ಮೂರನೆ ಮಗಳು ಶ್ರೀದೇವಿಯ ಕಥನವು ಆಕೆ ತನ್ನ ಮನಸ್ಸಿನಲ್ಲೆ ತನ್ನ ಕತೆಯನ್ನು ಮೆಲುಕು ಹಾಕುವ ಆತ್ಮಾವಲೋಕನ ತಂತ್ರದ ಮೂಲಕ ನಿರೂಪಿತ ಆಗಿದೆ. ತನ್ನ ತಂದೆ ತಾಯಿಂದ ದೂರಾಗಿ ಹೈಸ್ಕೂಲು ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲು ಕಾಲೇಜು ಓದನ್ನು ಮೈಸೂರಿನಲ್ಲು ಮಾಡಿದವಳು; ಹೈಸ್ಕೂಲಿನವರೆಗೆ ಊರಲ್ಲೆ ಇದ್ದರೂ, ಆಗಾಗ ರಜೆಯಲ್ಲಿ ಊರಿಗೆ ಬಂದು ಮೂರ್ನಾಲ್ಕು ದಿನ ಇದ್ದು ಹೋದರೂ ಆಕೆಗೆ ಮೂಲಂಗಿ ನೆಲದಲ್ಲಿ ಬೆಳೆಯುತ್ತದೆ. ಕೆಲ ತರಕಾರಿ ಬಳ್ಳಿಯಲ್ಲಿ ಬಿಡುತ್ತವೆ ಅನ್ನುವುದೇ ಗೊತ್ತಿಲ್ಲ. ಈಕೆ ತನ್ನ ಕಲೀಗ್‌, ಗೆಳೆಯ ಅರುಣನ ಜೊತೆ ಒಂದು ವರ್ಷ ಕಾಲ ಲೀವ್‌ ಇನ್‌ ರಿಲೇಶನ್‌ನಲ್ಲಿ ಇದ್ದು ಆನಂತರ ಕಲೀಗ್‌ ದೀಪಾ ಪಾಟೀಲಳ ಒತ್ತಾಯಕ್ಕೆ ತನ್ನ ಮದುವೆಯನ್ನು ರಿಜಿಸ್ಟರ್‌ ಮಾಡಿಕೊಳ್ಳುತ್ತಾಳೆ. ಅದಕ್ಕು ಎಷ್ಟೊ ಮೊದಲೆ ಇವಳ ಅವನ ಲೈಂಗಿಕ ಸಂಬಂಧ ನಡೆದಿರುತ್ತದೆ. (ಪುಟ117).

ನೊಂದಾಯಿತ ಮದುವೆ ಆಗಿದ್ದರೂ ಜೊತೆಯಲ್ಲಿ ಬಾಳದೆ ಅವನ ಪಾಡಿಗೆ ಅವನೂ ಇವಳ ಪಾಡಿಗೆ ಇವಳೂ ಇರಬೇಕೆಂಬ ಷರತ್ತಿನೊಂದಿಗೆ; ಇವಳು ಕರೆದಾಗ ಅವನು ಲೈಂಗಿಕ ಕೂಟಕ್ಕೆ ಬರಬೇಕು, ಹೋಗೆಂದಾಗ ಮಳೆಯಿರಲಿ, ಬಿಸಿಲಿರಲಿ, ಹಗಲಾಗಲಿ, ಇರುಳಾಗಲಿ ಎದ್ದು ಹೋಗಬೇಕು ಎಂಬ ಆಚಾರದೊಂದಿಗೆ ಈಕೆ ಅವನೊಂದಿಗೆ ಲೈಂಗಿಕ ಸಂಗಾತ ಜೀವನ ನಡೆಸುತ್ತಿರುತ್ತಾಳೆ. ಹೀಗಾಗಿ ಇವರದು ಬೇರೆ ಬೇರೆ ಸೂರಿನಡಿ ಬದುಕುತ್ತ ಬೇಕಾದಾಗ ಯಾದೃಚ್ಛಿಕ ಲೈಂಗಿಕ ಕೂಟಕ್ಕಾಗಿ ಮಾಡಿಕೊಂಡ ನೊಂದಾಯಿತ ಮದುವೆ. (ಪುಟ 107). ಇದು ನೊಂದಾಯಿತ ಮದುವೆ ಎನ್ನುವುದಕ್ಕಿಂತ ಸಾಮಾಜಿಕ ಮಾನ್ಯತೆ ಬಯಸುವ ಮತ್ತು ವಯಕ್ತಿಕ ಹೊಣೆ ಇಲ್ಲದ ಒಪ್ಪಂದದ ನೊಂದಣಿ ಎನ್ನಬಹುದು. ನಮ್ಮ ಯಾದೃಚ್ಛಿಕ ಲೈಂಗಿಕ ಸಂಬಂಧಕ್ಕೆ ಸಮಾಜದ ಎದುರು ಒಂದು ಒಪ್ಪಿಗೆಯನ್ನು ಉತ್ಪಾದಿಸಿಕೊಳ್ಳುವುದಕ್ಕೆಂದೆ ನೊಂದಣಿ ಹಾದಿ ಹಿಡಿಯಲಾಗಿದ್ದರೂ ಅದಕ್ಕೆ ಅಂತಹ ಮಾನ್ಯತೆ ಇಲ್ಲ ಎಂಬುದೆ ಇಲ್ಲಿ ನಿರೂಪಣೆಯಲ್ಲಿ ಎದ್ದು ಕಾಣುತ್ತದೆ.

ಈಕೆ ಗೌರಿ ನೋಪಿಗೆ ಊರಿಗೆ ಬರುವ ಹೊತ್ತಿಗೆ ಇವರ ಸಂಬಂಧಕ್ಕೆ ನಾಲ್ಕು ವರ್ಷ ಆಗಿ ಅದರಲ್ಲಿ ಬಿರುಕೂ ಮೂಡಿ ಅರುಣನಾಗಲೆ ಡೈವೋರ್ಸ್‌ ಮಟ್ಟಕ್ಕೆ ಹೋಗಿದ್ದಾನೆ. ಸಿಟಿ ಕಾಲೇಜಿನಿಂದ ತಾಲ್ಲೂಕು ಕಾಲೇಜಿಗೆ ಅದಕ್ಕಾಗಿ ವರ್ಗ ಕೂಡ ಮಾಡಿಸಿಕೊಂಡಿದ್ದಾನೆ. ಸಂಬಂಧ ಬ್ರೇಕ್‌ ಅಪ್‌ ಆಗಿದೆ. (116) ಇವಳಿಗೆ ಅರುಣನ ಜೊತೆ ಬ್ರೇಕ್‌ ಅಪ್‌ ಆಗಿರುವ ಸಂಬಂಧ ಪುನಃ ಆರಂಭಿಸಬೇಕು ಎಂಬ ಹಂಬಲವೇನೊ ಇದೆ. ಆದರೆ ಸಾಂಪ್ರದಾಯಿಕ ದಾಂಪತ್ಯಕ್ಕೆ ಸಿದ್ಧವಿರುವ ಅವನಿಗೆ ಇವಳ ಲೈಂಗಿಕ ಸಾಂಗತ್ಯ ಮಾತ್ರವುಳ್ಳ ಒಪ್ಪಂದದ ದಾಂಪತ್ಯಕ್ಕೆ ಒಪ್ಪಿಗೆಯಿಲ್ಲ. (ಪುಟ 121) ಇದನ್ನು ಸಾಂಪ್ರದಾಯಿಕ ದಾಂಪತ್ಯ ಮತ್ತು ಅಪೇಕ್ಷಿತ ದಾಂಪತ್ಯಗಳ ಸಂಘರ್ಷ ಎಂದೂ ಕಾಣಬಹುದು.

ಶ್ರೀದೇವಿಯ ವ್ಯಕ್ತಿತ್ವ ಚಿತ್ರಣದಲ್ಲಿ ಓದುಗರಿಗೆ ಒಂದು ಬಗೆಯ ಅಪೂರ್ಣತೆ ಕಾಡುತ್ತದೆ. ಆಕೆಯ ರೂಪಗೊಂಡ ವ್ಯಕ್ತಿತ್ವದ ನಿರೂಪಣೆಗೆ ಇಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ. ಆದರೆ ಅದರ ವಿಕಸನದ ಕಥನಕ್ಕೆ ಸಾಕಷ್ಟು ಅವಕಾಶ ಕಾದಂಬರಿಯಲ್ಲಿ ದೊರಕಿಲ್ಲ. ಇಲ್ಲಿ ಕತೆ ಆಲದ ಮರದ ಹಾಗೆ ಹರಡಿಕೊಳ್ಳದೆ ಇದು ಹೀಗೇ ಮುಗಿಯಬೇಕು ಎಂಬಂತೆ ನೀಲಗಿರಿ ಮರದ ರೀತಿ ನ್ಯಾರೋ ಆಗಿದೆ.

ಇಲ್ಲಿರುವ ಶಿವಲೀಲಾ ಮತ್ತು ಅಕ್ಕಮ್ಮರ ದಾಂಪತ್ಯ ಮುರಿಯಲು ಅವರ ಗಂಡಂದಿರ ಅನಾಚಾರ ಕಾರಣ ಎಂದಿದ್ದರೆ ಶ್ರೀದೇವಿ ಸಂಬಂಧ ಮುರಿಯಲು ಅಕೆಯ ಸ್ವೇಚ್ಛೆ ಕಾರಣ ಎಂಬಂತೆ ಕಾದಂಬರಿ ಬಿಂಬಿಸುತ್ತದೆ. ಆದರೆ ಅಲ್ಲೊಂದು ಮಹಿಳಾ ಅಪೇಕ್ಷಿತ ಸಾಂಗತ್ಯಜೀವನದ ಮಾದರಿ ಇದೆ. ಅದಕ್ಕೆ ಓದುಗರಲ್ಲಿ ನ್ಯೂಟ್ರಲ್‌ ಆದ ದೃಷ್ಟಿ ಒದಗುತ್ತದೆಯೆ ಎನ್ನುವುದು ಪ್ರಶ್ನೆ. ಈ ಸಂಬಂಧ ಕುರಿತ ನಿರೂಪಣೆಯಲ್ಲಿ ಮಹಿಳಾ ಸ್ವಾಂತಂತ್ರ್ಯ, ಮಹಿಳಾ ಹಕ್ಕುಗಳ ಪ್ರತಿಪಾದನೆ ಮತ್ತು ಪುರುಷಪ್ರಧಾನತೆಯನ್ನು ಮುರಿಯಬೇಕು ಎಂಬ ಆಶಯ ಇರುವಂತೆಯೆ ಸಾಂಪ್ರದಾಯಿಕ ಕುಂಟುಂಬದಲ್ಲಿ ಇದ್ದಲ್ಲಿ ಮಹಿಳೆಯರ ಸ್ವೇಚ್ಛೆಗೆ ಅವಕಾಶ ಆಗುವುದಿಲ್ಲ ಎಂಬ ಇಂಗಿತವೂ ಇದೆ. ಸಾಂಪ್ರದಾಯಿಕ ಕೌಟುಂಬಿಕತೆಯೆ ಆದರ್ಶ ಕೌಟುಂಬಿಕತೆ ಎಂಬ ವಾಲುವಿಕೆಯನ್ನೂ ಕಾದಂಬರಿಯಲ್ಲಿ ಕಾಣಬಹುದು.

ಕುಟುಂಬ, ದಾಂಪತ್ಯಗಳಲ್ಲಿನ ಸ್ತ್ರೀಪುರುಷ ಸಂಬಂಧಿ ಸಂಕಥನವು ಲಿಂಗಸಮಾನತೆಯ ಸಂಘರ್ಷಗಳ ಕಥನವೂ, ಪ್ರಧಾನಾಧೀನತೆಯ ಸಂಘರ್ಷಗಳ ಕಥನವೂ, ಪರಸ್ಪರ ಯಾಜಮಾನ್ಯದ ವಿಘಟನೆ -ಸಂಘಟನೆಯ ಸಂಘರ್ಷಗಳ ಕಥನವೂ ಆಗಿರುತ್ತದೆ. ಹಾಗೆ ನೋಡಿದರೆ ಕುಟುಂಬ ಎನ್ನುವುದು ಸಮಾಜದಲ್ಲಿ ಅಲಾಯಿದ ಆಗಿಯೇನೂ ಇರುವುದಿಲ್ಲ. ಇಲ್ಲಿನ ಸ್ತ್ರೀಪುರುಷ ಸಂಬಂಧವು ಅರ್ಥಿಕತೆ, ಸಾಮಾಜಿಕ ಸನ್ನಿವೇಶಗಳ ಹಾಜರಿ, ಗೈರುಹಾಜರಿ, ಮಠ-ಶಾಲೆ-ಜ್ಞಾನಗಳನ್ನೂ; ರಾಜಕೀಯ ಸಂಪರ್ಕಗಳ ಬಲಾಬಲಗಳನ್ನೂ ಅವಲಂಬಿಸಿರುತ್ತದೆ. ಇವೆಲ್ಲವುಗಳ ಮೂಲಕವೆ ಕುಟುಂಬಸ್ಥರ ತಾಕ್ಷಣಿಕ ಮಾನಸಿಕ ಸ್ಥಿತಿಗತಿಗಳು ಏರ್ಪಡುತ್ತ, ಬದಲುತ್ತ ಇರುತ್ತವೆ. ಇದನ್ನೆ ಕಾದಂಬರಿ ಪ್ರತಿಪಾದಿಸುತ್ತದೆ.

ಸಂಸ್ಕೃತಿಯ ಹೆಸರಿನಲ್ಲಿ ಚಾಲ್ತಿಯಲ್ಲಿ ಇಟ್ಟ ಹಲವು ಬಗೆಯ ಆಚಾರಗಳೂ ಕುಟುಂಬದ ಸಂಬಂಧಗಳನ್ನು ನಿಯಂತ್ರಿಸುತ್ತ, ಪ್ರಭಾವಿಸುತ್ತ ಇರುತ್ತವೆ. ಉದಾಹರಣೆಗೆ ಈ ಕಾದಂಬರಿಯಲ್ಲಿ ಬರುವ ನೋಪಿ ಪೂಜೆಯ ಆಚರಣೆ, ತಾಳಿ ಧರಿಸುವ, ಮೈಮುಚ್ಚುವಂತಹ ಬಟ್ಟೆ, ಸೀರೆ ಉಡುವ ಆಚಾರ, ತಂದೆ ತಾಯಿಗೆ ನೋವು ಉಂಟುಮಾಡಬಾರದು; ಅವರ ಮಾತು ಮೀರಬಾರದು, ಅವರನ್ನು ಸಂತೋಷವಾಗಿ ಇಡಬೇಕು ಎಂಬ ನಂಬುಗೆ, ಹೆಣ್ಣುಗಳೇ ಗಂಡಸರ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ ಮತ್ತು ನಿಮ್ಮ ಒಳ್ಳೆಯ ಕಾಲಕ್ಕಾಗಿ ಕಾಯಿರಿ ಎಂಬ ಉಪದೇಶ ಇತ್ಯಾದಿ ಇತ್ಯಾದಿ ಎಲ್ಲವೂ ಹೆಣ್ಣನ್ನೆ ನಿಯಂತ್ರಿಸುವ ನಂಬಿಕೆ ಮತ್ತು ಮೌಲ್ಯಗಳೆ ಆಗಿವೆ. ಹೆಣ್ಣನ್ನು ಸಮಾನವಾಗಿ ಕಾಣಬೇಕು ಎಂಬ ಆಶಯ, ಹೆಣ್ಣು ತನ್ನ ಮನೆಯನ್ನು (ಕುಟುಂಬ ದಾಂಪತ್ಯವನ್ನು) ಕಾಪಿಟ್ಟುಕೊಳ್ಳಬೇಕು ಎಂಬ ಅಪೇಕ್ಷೆ ಎರಡೂ ಇಲ್ಲಿವೆ. ಅಂದರೆ ಸಾಂಪ್ರದಾಯಿಕ ಸ್ಥಾಪಿತ ಕುಟುಂಬ, ದಾಂಪತ್ಯದ ಸ್ವರೂಪ ಬದಲುಗೊಳ್ಳಬೇಕು ಎಂಬ ಆಶಯ ಮತ್ತು ಸಾಂಸ್ಕೃತಿಕ ಆಚಾರಗಳು ಉಳಿಯಬೇಕು ಎಂಬ ಅಪೇಕ್ಷೆಗಳ ನಡುವಣ ಸಂಘರ್ಷ ಕಾದಂಬರಿಯ ಉದ್ದಕ್ಕು ಇದೆ.

ಗಂಡಿನ ಅನಾಚಾರಗಳು ಕೂಡ ದಾಂಪತ್ಯ ವಿಘಟನೆಗೆ ಕಾರಣ ಎಂಬಂತೆ ಇಲ್ಲಿ ಕಥನ ಇದ್ದರೂ ಅವು ಒಟ್ಟಾರೆ ಕಾದಂಬರಿಯ ತಾತ್ವಿಕತೆಯಲ್ಲಿ ಕರಗಿ ಸಾಂಪ್ರದಾಯಿಕ ಕುಟುಂಬ, ದಾಂಪತ್ಯ ಕಲ್ಪನೆಯನ್ನು ಎತ್ತಿ ಹಿಡಿಯುವ ಕೆಲಸ ಕಾದಂಬರಿಯ ಆಂತರ್ಯದಲ್ಲಿ ಜರುಗಿದೆ. ಅಷ್ಟೆ ಅಲ್ಲ ನಮಗೆ ಗೊತ್ತಿಲ್ಲದೆಯೆ ಹೇಗೆ ನಾವು ಕಥನದಲ್ಲಿ ಪರೋಕ್ಷವಾಗಿ ಊಳಿಗಮಾನ್ಯ ತನವನ್ನು ಬಿತ್ತರಿಸಬಹುದು ಎಂಬುದಕ್ಕೆ ಮಲ್ಲಪ್ಪ ಎಲ್ಲಮ್ಮರ ಜೋಡಿಯ ಚಿತ್ರಣ ಉದಾಹರಣೆಯಾಗಿ ಕಾಣುತ್ತದೆ. ಮಲ್ಲಪ್ಪನಿಗೆ ಸದಾಶಿವಪ್ಪ ಕೊಡುವ ಸಂಬಳದ ಲೆಕ್ಕವೇ ಕಾದಂಬರಿಯಲ್ಲಿ ಇಲ್ಲ. ಎಲ್ಲಮ್ಮನದಂತೂ ಬಿಟ್ಟಿ ಚಾಕರಿ. ಅವಳ ಚಾಕರಿಗೆ ಆರ್ಥಿಕ ಮೌಲ್ಯವೇ ಇಲ್ಲ. ಇದು ಸಾಹಿತ್ಯಕ ವಾಸ್ತವ ಮಾತ್ರವಲ್ಲ ನಮ್ಮ ಸಾಮಾಜಿಕ ವಾಸ್ತವ ಕೂಡ.

ಆತ್ಮಾವಲೋಕನ ತಂತ್ರ, ಆತ್ಮನಿವೇದನಾ ತಂತ್ರ, ಮೂರನೆ ವ್ಯಕ್ತಿಯ ನಿರೂಪಣಾ ತಂತ್ರ, ನಿರೂಪಕ ನಿರೂಪಣೆ ತಂತ್ರ, ಸಂಭಾಷಣಾ ತಂತ್ರ ಹೀಗೆ ಕಾದಂಬರಿಯಲ್ಲಿ ನಿರೂಪಣೆಗೆ ಹಲವು ತಂತ್ರಗಳನ್ನು ಬಳಸಲಾಗಿದೆ. ಎಲ್ಲಿಯೂ ಯಾವುವೂ ಪರಸ್ಪರ ಸಂಘರ್ಷಿಸುವುದಿಲ್ಲ. ಎಲ್ಲವೂ ಒಟ್ಟಾರೆ ಮೇಳೈಸಿ ಕಾದಂಬರಿಯು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ.

ಹಾಗೆಯೆ ನಿರೂಪಣೆಗೆ ರಾಯಚೂರಿನ ಜವಾರಿ ಭಾಷೆ ಮತ್ತು ಕನ್ನಡ ಮಾನಕ ಭಾಷೆ ಎರಡನ್ನೂ ಕಾದಂಬರಿಯಲ್ಲಿ ಬಳಸಲಾಗಿದೆ. ಇಲ್ಲಿ ನಿರೂಪಕನ ಭಾಷೆ ಮಾನಕ ಭಾಷೆಯಾದರೆ ಪಾತ್ರಗಳ ಭಾಷೆ ಜವಾರಿ ಭಾಷೆಯಾಗಿದೆ. ಆದರೆ ಅಲ್ಲಲ್ಲಿ ನಿರೂಪಕನ ಭಾಷೆಯಲ್ಲಿ ಮಾನಕ ಮತ್ತು ಜವಾರಿ ಎರಡೂ ಕಲಸಿಕೊಳ್ಳುತ್ತವೆ. (ಉದಾ: ನೋಡಿ ಪುಟ ೮೧) ಪಾತ್ರಗಳ ಮತ್ತು ನಿರೂಪಕನ ಎರಡೂ ಭಾಷೆಗಳನ್ನು ಜವಾರಿ ಆಗಿಯೆ ಇರಿಸಿಕೊಂಡಿದ್ದರೆ ಕಾದಂಬರಿ ನಿರೂಪಣೆಯ ಅಂದ ಖಂಡಿತಾ ಇನ್ನಷ್ಟು ಹೆಚ್ಚಾಗುತ್ತಿತ್ತು.

ಕಾದಂಬರಿಯ ಆರಂಭದಲ್ಲಿ ಸದಾಶಿವಪ್ಪ ಪಾರ್ವತಿ ದಂಪತಿಗಳ ಹಿರಿಯ ಮಗಳ ಹೆಸರನ್ನು ಶಿವಗೀತಾ ಎನ್ನಲಾಗಿದೆ. ಆದರೆ ಹತ್ತನೆ ಪುಟದ ಆನಂತರದಲ್ಲಿ ಆಕೆಯ ಹೆಸರನ್ನು ಶಿವಲೀಲಾ ಎಂದೆ ಬಳಸಲಾಗಿದೆ. ಕರಡು ತಿದ್ದುವಾಗ ಇದನ್ನು ಗಮನಿಸಬಹುದಿತ್ತು. ಅಲ್ಲದೆ ಮಠದ ಹಿರಿಯ ಸ್ವಾಮಿಗಳ ಮೂಲಕ ಮಾದೇವಪ್ಪ ಗುಡ್ಡದ ಹೊಲ ಖರೀದಿ ಮಾಡಿದ್ದು ರಾಮನಗೌಡ ಎಂಬುವವರಿಂದ ಹಾಗೆಯೆ ಶಿವಲೀಲಾಳ ಮಾವನ ಹೆಸರೂ ರಾಮನಗೌಡ ಎಂದೆ ಇರಿಸಲಾಗಿದೆ. ಮುಂದುವರಿದು ಮಠದ ಕಿರಿ ಸ್ವಾಮಿಯ ಹೆಸರು ಚೆನ್ನಬಸವಸ್ವಾಮಿ ಆದರೆ ಕಲ್ಯಾಣಿಯ ಮಗನ ಹೆಸರೂ ಚೆನ್ನಬಸವ ಎಂದೇ ಇದೆ. ಸಮಾಜದಲ್ಲಿ ಒಂದೆ ಹೆಸರಿನ ಹಲವು ಮಂದಿ ಇರಬಹುದು. ಆದರೆ ಒಂದು ಕಾದಂಬರಿ ಬರೆಯುವಾಗ ಇಬ್ಬಿಬ್ಬರಿಗೆ ಒಂದೆ ತೆರನ ಹೆಸರು ಬಳಸುವುದು ಅಷ್ಟು ಉಚಿತವಲ್ಲ. ಕಲ್ಯಾಣಿ ಶಿವಲೀಲಾಳಿಗೆ ತನ್ನ ಗಂಡ ಹೊಲದಲ್ಲಿ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಜೀವ ತೆಗೆದುಕೊಂಡ ವಿವರಗಳನ್ನು ಹೇಳಿಕೊಳ್ಳುವ ತಂತ್ರದಲ್ಲಿ ಶಂಕರಲಿಂಗನ ವೃತ್ತಾಂತವನ್ನು ನಿರೂಪಿಸಿರುವುದು ಒಳ್ಳೆಯ ತಂತ್ರವೇ ಹೌದು. ಆದರೆ ಶಂಕರಲಿಂಗನ ಹೆಸರು ಸೈತ ಶಿವಲೀಲಾಳಿಗೆ ಗೊತ್ತಿರಲಿಲ್ಲ ಎಂಬಂತೆ (ಪುಟ ೨೩) ಆ ವೃತ್ತಾಂತ ನಿರೂಪಿಸಿರುವುದು ಸ್ವಲ್ಪ ಅತಿಶಯ ಅನ್ನಿಸುತ್ತದೆ.

ಗೌರಿಯರು ಬದಲುಗೊಳ್ಳುವ ಕುಟುಂಬ, ದಾಂಪತ್ಯ ಸಂಕಥನದ ನೆಲೆಯಲ್ಲಿ ಒಂದು ವಿಶಿಷ್ಟ ಕಾದಂಬರಿ. ಅನುಭವಿ ಕತೆಗಾರರಾದ ಅಮರೇಶರು ಈ ಕಾದಂಬರಿಯನ್ನು ಮುಂಬರುವ ಯಾವುದೋ ಮಹಾಕಾದಂಬರಿಯ ತಾಲೀಮಿನ ಹಾಗೆ ಬರೆದಂತೆ ಕಾಣುತ್ತದೆ. ನನ್ನ ಓದಿನ ಅನುಭವದಲ್ಲಿ ಹೇಳುವುದಾದರೆ ಈ ಕಾದಂಬರಿ ಮುಗಿದೇ ಇಲ್ಲ. ಇದು ಒಂದು ಯಶಸ್ವಿ ಕಾದಂಬರಿಯ ಮೊದಲ ಪೀಠಿಕಾ ಭಾಗ ಮಾತ್ರ. ಇದು ಕೊನೆಗೊಂಡಿಲ್ಲ. ಶುರುವಾಗಿದೆ ಅಷ್ಟೆ. (ಹಾಗೆ ನೋಡಿದರೆ ಯಾವ ಕತೆಗಳಿಗು ಕೊನೆ ಎಂಬುದು ಇರುವುದಿಲ್ಲ) ಅಂದರೆ ಇದು ಶಿವಲೀಲಾ, ಅಕ್ಕಮ್ಮ, ಶ್ರೀದೇವಿಯರ ಮೂರು ದಾಂಪತ್ಯಗಳ ಪೀಠಿಕಾ ಕಥನ ಮಾತ್ರ. ಇದು ಮುಂದುವರೆಯಬೇಕು. ಅಮರೇಶ ನುಗಡೋಣಿ ಅವರು ಮುಂದೊಂದು ದಿನ ಗೌರಿಯರು ಭಾಗ ಎರಡನ್ನು ಬರೆಯಲಿ ಎಂದು ಆಶಿಸುತ್ತೇನೆ.

- ಪ್ರೊ. ರಾಮಲಿಂಗಪ್ಪ ಟಿ. ಬೇಗೂರು.

ಈ ಅಂಕಣದ ಹಿಂದಿನ ಬರೆಹಗಳು:
ರಾಷ್ಟ್ರೀಯತೆಯ ಆಚರಣೆಯ ಸುತ್ತ
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...

ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ

26-12-2024 ಬೆಂಗಳೂರು

"ತ.ರಾ‌. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...