ಈ ಪುಸ್ತಕ ಮಾಹಿತಿ ಕೈಪಿಡಿ ಅಲ್ಲ: ಲಕ್ಷ್ಮೀ ಮಚ್ಚಿನ

Date: 14-10-2024

Location: ಬೆಂಗಳೂರು


“ಸಮಾಜದಲ್ಲಿ ಗೌರವಯುತವಾಗಿ, ಸುಸಂಸ್ಕೃತವಾಗಿ ಬದುಕುವುದು ಹೇಗೆ ಎಂದು ಕಲಿಯಲು ಬಹಳಷ್ಟಿರುತ್ತದೆ. ಇದನ್ನು ಕಲಿಸಿಕೊಡುವ ಹೆತ್ತವರು ಕೆಲವರು ಮಾತ್ರ” ಎನ್ನುತ್ತಾರೆ ಲಕ್ಷ್ಮೀ ಮಚ್ಚಿನ. ಅವರು ಪ. ರಾಮಕೃಷ್ಣ ಶಾಸ್ತ್ರಿ ಅವರ ‘ಬದುಕು ಬರಹ ಬವಣೆ’ ಕೃತಿಗೆ ಬರೆದ ಅನಿಸಿಕೆ.

ರೆಕ್ಕೆ ಇದ್ದರೆ ಸಾಕೆ? ಹಕ್ಕಿಗೆ ಬೇಕು ಬಾನು

ಬಯಲಲಿ ತೇಲುತ ತಾನು ಮ್ಯಾಲೆ ಹಾರೋಕೆ?

ಕಾಲೊಂದಿದ್ದರೆ ಸಾಕೆ? ಚಿಗರೆಗೆ ಬೇಕು ಕಾನು

ಗಾಳಿಯ ಮೇಲೆ ತಾನು ಜಿಗಿದು ಓಡೋಕೆ

ಇದು ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರ ಕವನ, ಚಿನ್ನಾರಿಮುತ್ತ ಸಿನಿಮಾದಲ್ಲಿದೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದಲ್ಲಿಗೆ, ಕೆಲಸ ತೆಗೆಸಿಕೊಟ್ಟಲ್ಲಿಗೆ, ಆಸ್ತಿ ಮಾಡಿಟ್ಟಲ್ಲಿಗೆ ತಮ್ಮ ಕರ್ತವ್ಯ ಮುಗಿಯಿತು ಎಂದು ಎಷ್ಟೋ ಮಂದಿ ಭಾವಿಸುತ್ತಾರೆ. ಹಾಗಾಗುವುದಿಲ್ಲ, ಅಷ್ಟೇ ಸಾಕಾಗುವುದಿಲ್ಲ. ಸಮಾಜದಲ್ಲಿ ಗೌರವಯುತವಾಗಿ, ಸುಸಂಸ್ಕೃತವಾಗಿ ಬದುಕುವುದು ಹೇಗೆ ಎಂದು ಕಲಿಯಲು ಬಹಳಷ್ಟಿರುತ್ತದೆ. ಇದನ್ನು ಕಲಿಸಿಕೊಡುವ ಹೆತ್ತವರು ಕೆಲವರು ಮಾತ್ರ. ಅಂತಹ ಬದುಕುವ ವಿಶಾಲ ಅವಕಾಶ ಕಲಿಸಿ ಒದಗಿಸಿಕೊಟ್ಟವರು ನನ್ನ ಅಪ್ಪ ಪ. ರಾಮಕೃಷ್ಣ ಶಾಸ್ತ್ರಿ.

ಅಪ್ಪನಿಗೆ ಎಪ್ಪತ್ತು ಎಂದಾದಾಗ ಬಂಧು, ಲೇಖಕ ಅರವಿಂದ ಚೊಕ್ಕಾಡಿ ಅವರು ಪುಸ್ತಕ ಬರೆಯಬೇಕೆಂಬ ಪ್ರಸ್ತಾಪ ಇಟ್ಟರು. ಯಾವುದೇ ಕಾರಣಕ್ಕೂ ತನ್ನ ಕುರಿತಾಗಿ ಪುಸ್ತಕ ಬರುವುದನ್ನು ಒಪ್ಪದ ಅಪ್ಪನನ್ನು ಒಪ್ಪಿಸುವುದೇ ಹರಸಾಹಸವಾಯಿತು. ನನಗೆ ಆತ್ಮೀಯರಾದ, ಅಪ್ಪನ 50ಕ್ಕಿಂತ ಹೆಚ್ಚು ಪುಸ್ತಕಗಳನ್ನು ಹೊರತಂದ ಮೈಸೂರಿನ ರೂಪಾ ಪ್ರಕಾಶನದ ಯು.ಎಸ್. ಮಹೇಶ್ ಅವರು ಅಪ್ಪನ ಕುರಿತಾದ ಪುಸ್ತಕ ಹೊರತರಲು ಮುಂದಾದರು. ಕಾಂತಾವರ ಕನ್ನಡ ಸಂಘದ ಡಾ. ನಾ. ಮೊಗಸಾಲೆ ಅವರೂ ಸಾಕಷ್ಟು ಬಾರಿ ಕನ್ನಡ ಸಂಘದ ಮೂಲಕವೇ ಹೊರಬರಲಿ ಎಂಬ ಒತ್ತಾಸೆ ವ್ಯಕ್ತಪಡಿಸಿದರು.

ಈ ಪುಸ್ತಕ ಒಂದಷ್ಟು ಘಟನೆಗಳ ದಾಖಲೀಕರಣ ಹೊರತಾಗಿ ಆತ್ಮಕತೆಯೋ, ಮಾಹಿತಿ ಕೈಪಿಡಿಯೋ ಅಲ್ಲ. ಮೂರು-ನಾಲ್ಕು ವರ್ಷವಷ್ಟೇ ಶಾಲೆಗೆ ಹೋದ ವ್ಯಕ್ತಿ ನಾಡಿನ ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗುವಂತೆ 12 ಸಾವಿರಕ್ಕಿಂತ ಹೆಚ್ಚು ಲೇಖನ ಬರೆದು, 100ಕ್ಕೂ ಹೆಚ್ಚು ಪುಸ್ತಕ ತರಲು, ಪದವಿಗೂ ಪಠ್ಯವಾಗಬಲ್ಲಂತೆ ಬರೆಯಬಲ್ಲರು ಎಂದು ಹೇಳುವುದಕ್ಕಷ್ಟೇ ಈ ಪುಸ್ತಕ ಮುನ್ನುಡಿ.

ಪುಸ್ತಕ ಬರುತ್ತದೆಂದಾದಾಗ 70ರ ಸಂಭ್ರಮ ಸಮ್ಮಾನ ಮಾಡಬೇಕೆಂದು ಊರವರು ಮುಂದಾದರು. ಸಂಘಟಕ ಸಂಪತ್ ಸುವರ್ಣರ ನೇತೃತ್ವದಲ್ಲಿ ಅಭಿನಂದನಾ ಸಮಿತಿಯೂ ರಚನೆಯಾಯಿತು. ನಮಗೆ ಸದಾ ಪ್ರೋತ್ಸಾಹ, ಮಾರ್ಗದರ್ಶನ, ಆಶೀರ್ವಾದ ಮಾಡುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮಕ್ಕೆ ಬರಲು ಒಪ್ಪಿ ಕಾರ್ಯಕ್ರಮದ ಘನತೆ ಹೆಚ್ಚಾಯಿತು. ಈ ಹೊತ್ತಿನಲ್ಲಿ ಬಿಡುಗಡೆಯಾಗುವ ಹೊತ್ತಗೆ ಎಂಬ ಹೆಗ್ಗಳಿಕೆಯೂ ಬಂತು. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಅಭಿನಂದನಾ ಸಮಿತಿಯ ಎಲ್ಲರಿಗೂ ಮನದಾಳದ ವಂದನೆಗಳು. ಕಾರ್ಯಕ್ರಮಕ್ಕಾಗಿ ಬೇರೆ ಬೇರೆ ವಿಧದಲ್ಲಿ ಸಹಕರಿಸಿದವರಿಗೆ ಒಡಲಾಳದ ನಮನಗಳು. ಮುನ್ನುಡಿ ಬರೆಯಲು ಒಪ್ಪಿದ ನಿತ್ಯಾನಂದ ಪಡೆಯವರಿಗೂ, ಪ್ರಕಾಶಕ ಯು.ಎಸ್. ಮಹೇಶ್ ಅವರಿಗೂ ನಮೋಸ್ತುಗಳು. ನನಗೆ ಅನ್ನ ನೀಡುತ್ತಿರುವ ಉದಯವಾಣಿ ಬಳಗಕ್ಕೆ ಸದಾ ಋಣಿ.

- ಲಕ್ಷ್ಮೀ ಮಚ್ಚಿನ

MORE NEWS

ಈ ಕೃತಿ ಶ್ರೀಧರ ನಾಯಕ್ ಅವರ ಆತ್ಮಚರಿತ್ರೆಯ ಆಯ್ದ ಭಾಗವಿದ್ದಂತೆ

15-10-2024 ಬೆಂಗಳೂರು

“ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ವಾಸ್ತವಾಂಶಗಳನ್ನು ಜಾಗರೂಕವಾಗಿ, ನಿಖರವಾಗಿ ಮರು ಸೃಷ್ಟಿಸುವ ಕಲೆ&...

ಈ ಕವನ ಸಂಕಲನದಲ್ಲಿ ಬೇರೆ ಬೇರೆ ಆಸಕ್ತಿಯ ವಿಚಾರಗಳನ್ನು ಕಾಣಬಹುದು

15-10-2024 ಬೆಂಗಳೂರು

“ಭೂತಾಯಿಯ ಹೊರತಾಗಿ ಬಂದ ಕವನಗಳನ್ನೆಲ್ಲಾ ಸೇರಿಸಿ ಪ್ರತ್ಯೇಕವಾದ ಒಂದು ಕವನ ಸಂಕಲನವನ್ನು ಹೊರ ತರುವ ಆಲೋಚನೆ ಮನಸ್...

ಪ್ರವಾಸ ಎನ್ನುವುದು ಒಂದು ಉದ್ಯಮ ಸ್ವರೂಪವನ್ನು ತಾಳಿದೆ

14-10-2024 ಬೆಂಗಳೂರು

“ಅಂಡಮಾನ್ ಪ್ರವಾಸ ಕೈಗೊಳ್ಳುವವರಿಗೆ ಈ ಕೃತಿ ಮಾರ್ಗದರ್ಶಿಯಾಗಿ ಉಪಯುಕ್ತವಾಗಿದೆ” ಎನ್ನುತ್ತಾರೆ ವೆಂಕಟೇಶ್...