ಈ ಕವನ ಸಂಕಲನದಲ್ಲಿ ಬೇರೆ ಬೇರೆ ಆಸಕ್ತಿಯ ವಿಚಾರಗಳನ್ನು ಕಾಣಬಹುದು

Date: 15-10-2024

Location: ಬೆಂಗಳೂರು


“ಭೂತಾಯಿಯ ಹೊರತಾಗಿ ಬಂದ ಕವನಗಳನ್ನೆಲ್ಲಾ ಸೇರಿಸಿ ಪ್ರತ್ಯೇಕವಾದ ಒಂದು ಕವನ ಸಂಕಲನವನ್ನು ಹೊರ ತರುವ ಆಲೋಚನೆ ಮನಸ್ಸಿಗೆ ಬಂತು. ಅದರ ಫಲವೇ ಈ ಕವನ ಸಂಕಲನ ಕವನ ಕೃಷಿಕ” ಎನ್ನುತ್ತಾರೆ ಬ್ಯಾಡನೂರು ಶಾಂತವೀರಪ್ಪ. ಅವರು ಕೆ.ವಿ ಲಕ್ಷ್ಮಣ ಮೂರ್ತಿ ಅವರ ‘ಕವನ ಕೃಷಿಕ’ ಕವನ ಸಂಕಲನಕ್ಕೆ ಬರೆದ ಮುನ್ನುಡಿ.

'ಭೂತಾಯಿ' ಬಗ್ಗೆ ಕವನಗಳನ್ನು ಸಂಕಲನಕ್ಕಾಗಿ ಆಹ್ವಾನಿಸಲಾಗಿತ್ತು. ಭೂತಾಯಿ ಕಲ್ಪನೆಯನ್ನು ಕೆಲವು ಕವಿಗಳು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಅದನ್ನು ಭಾರತ ದೇಶವೆಂದು ಅರ್ಥ ಮಾಡಿಕೊಂಡರು. ಕೆಲವರು ಕನ್ನಡಾಂಬೆಯೆಂದು ಅರ್ಥೈಸಿ ಕೊಂಡರು. ಐದು ಐದೆಯರು ಎಂಬ ಕಲ್ಪನೆಯೂ ಇದೆ. ಪ್ರಪ್ರಥಮವಾಗಿ ಮೊದಲ ಆದ್ಯತೆಯನ್ನು ಹೆತ್ತತಾಯಿಗೆ ಕೊಡಲಾಗಿದೆ. ಎರಡನೆಯದಾಗಿ ಕನ್ನಡಾಂಬೆ, ಮೂರನೆಯದು ಭಾರತಾಂಬೆ, ನಾಲ್ಕನೆಯದು ಭೂಮಾತೆ, ಐದನೆಯದು ವಿಶ್ವಮಾತೆ, ಹೀಗೆ ಮುಖ್ಯವಾದುದೆಲ್ಲವನ್ನೂ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಹೋಲಿಸಲಾಗುತ್ತದೆ. ಪವಿತ್ರವಾದ ನದಿಗಳನ್ನೂ ಹೆಣ್ಣಿಗೆ ಹೋಲಿಸಲಾಗುತ್ತದೆ.

ಬಿದಿರು, ಜೇನು, ಕೃಷಿ, ತೋಟಗಾರಿಕೆ, ವನಸಿರಿ, ಪ್ರಕೃತಿ, ನೀರು ಹೀಗೆ ಬೇರೆ ಬೇರೆ, ಪ್ರತ್ಯೇಕವಾಗಿ ಕವನ ಸಂಕಲನವನ್ನು ಹೊರತರುವ ಉದ್ದೇಶ ನಮ್ಮದಾಗಿತ್ತು. ಈ ವಿಷಯಗಳಿಗೆ ಸಾಕಷ್ಟು ಕವನಗಳು ನಿರೀಕ್ಷಿಸಿದಷ್ಟು ಬರಲೇ ಇಲ್ಲ. ಭೂತಾಯಿಯ ಹೊರತಾಗಿ ಬಂದ ಕವನಗಳನ್ನೆಲ್ಲಾ ಸೇರಿಸಿ ಪ್ರತ್ಯೇಕವಾದ ಒಂದು ಕವನ ಸಂಕಲನವನ್ನು ಹೊರ ತರುವ ಆಲೋಚನೆ ಮನಸ್ಸಿಗೆ ಬಂತು. ಅದರ ಫಲವೇ ಈ ಕವನ ಸಂಕಲನ 'ಕವನ ಕೃಷಿಕ'.

'ಈ ಕವನ ಸಂಕಲನದ ಸಂಪಾದಕರಾದ ಸನ್ಮಾನ್ಯ ಶ್ರೀ ಕೆ.ವಿ. ಲಕ್ಷ್ಮಣ ಮೂರ್ತಿಯವರದು ವಿಭಿನ್ನ ಆಲೋಚನೆ, ಎಲ್ಲರಂತಲ್ಲ ಅವರ ಮನಸ್ಸು, ಅಸಾಧ್ಯವಾದುದನ್ನು ಸಾಧ್ಯ ಮಾಡಬೇಕೆಂಬುದು ಅವರ ಛಲ. 'ಯೋಗ'ವನ್ನು ಮಾಡಿ ತೋರಿಸಬಹುದು. ಯೋಗದ ಮಹತ್ವದ ಬಗ್ಗೆ ಲೇಖನವನ್ನು ವಿಸ್ತಾರವಾಗಿ ಬರೆಯಬಹುದು. ಒಂದು ಬೃಹತ್ ಗ್ರಂಥವನ್ನೂ ರಚಿಸಿಬಿಡಬಹುದು. ಆದರೆ ಯೋಗದ ಬಗ್ಗೆ ಒಂದು ಕವನ ಸಂಕಲನವನ್ನು ಏಕೆ ಬೆಳಕಿಗೆ ತರಬಾರದು? ಎಂಬ ಆಲೋಚನೆ ಬಂದು ಯೋಗದ ಬಗ್ಗೆಯೂ ಒಂದು ಕವನ ಸಂಕಲನವನ್ನು ಹೊರತರುತ್ತಿದ್ದಾರೆ ಶ್ರೀ ಕೆ.ವಿ. ಲಕ್ಷ್ಮಣ ಮೂರ್ತಿಯವರು. ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ದೊಡ್ಡದಾಗಿ ಆಲೋಚಿಸುತ್ತಾರೆ.

ಅವರ ಆಲೋಚನೆಗಳಿಗೆ ಯಶಸ್ಸು ದೊರೆಯಲೆಂದು ನಾನು ಆಶಿಸುತ್ತೇನೆ. ನಿವೃತ್ತಿಯ ನಂತರವೂ ಅವರಿಗಿರುವ ಆಸಕ್ತಿ, ಹುರುಪು, ಎಂತಹವರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ. ಬಿಡುವಿಲ್ಲದೆ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಶ್ರೀ ಮಾತಾ ವೈಷ್ಟೋ ದೇವಿ' ಎಂಬ ಪ್ರವಾಸ ಕಥನವು ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಐತಿಹಾಸಿಕ ಕೃತಿ 'ರಾಣಿ ಅಬ್ಬಕ್ಕ ದೇವಿ' ಎಂಬ ಕೃತಿ ಬೆಳಕಿಗೆ ಬರುತ್ತಿದೆ. "ಪ್ರಯಾಸವಿಲ್ಲದ ಭಾರತ ಪ್ರವಾಸ ಎಂಬ ಒಂದು ಕಾದಂಬರಿಯನ್ನೂ ರಚಿಸುತ್ತಿದ್ದಾರೆ. ಅವರ ಚಟುವಟಿಕೆಗಳು ಹುಬ್ಬೇರಿಸುವಂತೆ ಮಾಡುತ್ತದೆ!

ಈ ಕವನ ಸಂಕಲನದಲ್ಲಿ ಬೇರೆ ಬೇರೆ ಆಸಕ್ತಿಯ ವಿಚಾರಗಳು ಬಂದಿವೆ. ದೇಶಾಭಿಮಾನ, ಗ್ರಾಮೀಣ ಜೀವನ, ಪ್ರಕೃತಿ, ಕೃಷಿ, ಜೀವನ, ಜೇನು, ಬಿದಿರು, ತೋಟಗಾರಿಕೆ, ರೈತ, ರಾಗಿ, ನೀರು, ಹೀಗೆ ವಿಭಿನ್ನ ವಿಚಾರಗಳು ಆಸಕ್ತಿಯನ್ನು ಕೆರಳಿಸುತ್ತವೆ. ಕೆಲವು ಬಾಲಿಶವೆನಿಸಿದರೂ, ಕೆಲವು ಪ್ರಬುದ್ಧತೆಯಿಂದ ಕೂಡಿವೆ. ಕೆಲವು ಬರೀ ಹೇಳಿಕೆಯಂತೆ ಕಾಣುತ್ತವೆ. ಅನೇಕ ವಿಷಯಗಳ ಸಂಗಮದಂತಿದೆ ಈ ಕೃತಿ.

ಕೆಲವು ಕವನಗಳು, ಅಂತ್ಯಪ್ರಾಸದಿಂದ ಕೂಡಿವೆ, ಕೆಲವು ಲಯಬದ್ಧವಾಗಿ ಹಾಡಲು ಬರುತ್ತವೆ. ಕೆಲವು ವರದಿಯಂತೆ ಕಾಣುತ್ತವೆ.

ಕೋಮುವಾದ ದೂರವಿರಿಸಿ

ಪ್ರೀತಿಯಿಂದ ಇದ್ದರೆ

ಅಣ್ಣತಮ್ಮ ತಂಗಿಯಂತೆ

ಇರಲು ಬರದು ತೊಂದರೆ

"ಭಾರತಿ ನಮ್ಮ ತಾಯಿ" ಎಂಬ ಕವನವು ಗೇಯಾರ್ಹವಾಗಿದೆ.

ಸುತ್ತ ಹಸಿರು ಎಲೆಗಳ ಹಂದರ

ನಟ್ಟ ನಡುವೆ ಬಾನ ಮಂಗಳದ ಗೋಚರ

ತರು ಲತೆಗಳು ಚಿಲಿಪಿಲಿಯ ಇಂಚರ

ದಟ್ಟ ತಿಳಿ ಎಲೆ ಹಸಿರಿನ ಮಿಶ್ರಮದ ಗೋಚರ

ಎಂಬ ಕವನದಲ್ಲಿ ಅಂತ್ಯಪ್ರಾಸದ ಜೊತೆಗೆ ಪ್ರಕೃತಿಯ ವರ್ಣನೆಯನ್ನೂ ಕಾಣಬಹುದು.

ಜೇನುಗೂಡೆಂದರೆ ಬಿಡಿ ಬಿಡಿಯಲ್ಲ ಒಗ್ಗಟ್ಟು

ಹೆಚ್ಚೇನು, ಮರಿಜೇನು, ಚಿಟ್ಟಿಜೇನು ವಿಧವೆಷ್ಟು?

ಸಾಕಣೆಯಿಂದ ಬರುವುದು ಹಣ ದುಪ್ಪಟ್ಟು

ಜೇನು ಕೃಷಿಯಲ್ಲಿ ತೊಡಗಲಿ ಇಷ್ಟಪಟ್ಟು

ಈ ಕವನದಲ್ಲಿ ಒಂದೊಳ್ಳೆ ಸಂದೇಶವಿದೆ.

ಪೂಜ್ಯ ಕೃಷಿಕ

ಬೇಗನೇ ಆಗು ನೀ ವೈಜ್ಞಾನಿಕ ಕೃಷಿಕ

ಪ್ರೀತಿಯ ಯುವಕೃಷಿಕ

ಸ್ವಾಗತಿಸು ಕೃಷಿಯೇ ನಿನ್ನ ಕಾಯಕ

ಇಲ್ಲಿ ಕೃಷಿಕನನ್ನು 'ಪೂಜ್ಯ ಕೃಷಿಕನೆಂದು ಕರೆದು

ಕೃಷಿಕನನ್ನು ದೈವತ್ವಕ್ಕೇರಿಸಿ ಮಾನ್ಯತೆ ಕೊಟ್ಟಿದ್ದಾರೆ.

ಅನೇಕ ಕವನಗಳು ಗಮನ ಸೆಳೆಯುತ್ತವೆ. ಬಹುತೇಕ ಕವನಗಳು ಅಂತ್ಯಪ್ರಾಸಕ್ಕೆ ಆದ್ಯತೆಯನ್ನು ಕೊಟ್ಟಿವೆ. ಕವಿಗಳು ಕಾವ್ಯದ ಲಕ್ಷಣಗಳನ್ನು ತಿಳಿದುಕೊಂಡು ಕವನ ಬರೆದರೆ ಒಳ್ಳೆಯದು. ಕಾವ್ಯದ ಲಕ್ಷಣಗಳನ್ನು ಅರಿಯಬೇಕಾದರೆ ಕಾವ್ಯಮೀಮಾಂಸೆಯನ್ನು ಓದಬೇಕಾಗುತ್ತದೆ. ಕವಿಗಳು ಕಾವ್ಯ ಮೀಮಾಂಸೆಯನ್ನು ಓದಿರಲೂಬಹುದು. ಓದಿಲ್ಲದೆಯೂ ಇರಬಹುದು. ನನ್ನದು ಕೇವಲ ಸಲಹೆ ಮಾತ್ರ. ಕವನವು ಸಹಜವಾಗಿ ಹುಟ್ಟಬೇಕು. ಇಂತಹದ್ದೇ ವಿಷಯವಾಗಿ ಕವಿತೆಯನ್ನು ಬರೆಯಿರಿ ಎಂದು ಸೂಚಿಸಿದಾಗ ಕವನ ರಚಿಸುವುದು ಕಷ್ಟವಾಗುತ್ತದೆ. ಏನೇ ಆಗಲಿ ಶ್ರೀ ಕೆ.ವಿ. ಲಕ್ಷ್ಮಣ ಮೂರ್ತಿಯವರ ಹೊಸ ಪ್ರಯೋಗ ಯಶಸ್ವಿಯಾಗಲಿ. ಅವರ ಪ್ರಯತ್ನ ಫಲಪ್ರದವಾಗಲಿ ಎಂದು ಬಯಸುತ್ತೇನೆ.

ನನಗೆ ಮುನ್ನುಡಿ ಬರೆಯಲು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತಾ ನನ್ನ ಮಾತುಗಳಿಗೆ ವಿರಾಮ ಹಾಕುತ್ತೇನೆ.

- ಬ್ಯಾಡನೂರು ಶಾಂತವೀರಪ್ಪ

 

MORE NEWS

ಕನ್ನಡದ ಕೊರತೆಯಿರುವ ಪ್ರದೇಶದಲ್ಲಿ, ಕನ್ನಡವನ್ನು ಎತ್ತಿ ಹಿಡಿದವರು ಭಾಲಚಂದ್ರ ಜಯಶೆಟ್ಟಿ

15-10-2024 ಬೆಂಗಳೂರು

“ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೆಯಾದ ವ್ಯಕ್ತಿತ್ವದ ಛಾಪು ಮೂಡಿಸಿದ್ದಾರೆ...

ಡಯಾಬಿಟಿಸ್ ಗೆ ಕಾರಣಗಳೇನು? ಅದರ ನಿವಾರಣೆಗಿರುವ ಪರಿಹಾರಗಳೇನು?

15-10-2024 ಬೆಂಗಳೂರು

“ಸಕ್ಕರೆ ಪ್ರಮಾಣದ ಹೆಚ್ಚಳದ‌‌ ದೈಹಿಕ ಏರುಪೇರುಗಳನ್ನು ಹೊಸತೊಂದು ಸಂಶೋಧನೆ Diabetes Reversal ಎಂ...

ಈ ಕೃತಿ ಶ್ರೀಧರ ನಾಯಕ್ ಅವರ ಆತ್ಮಚರಿತ್ರೆಯ ಆಯ್ದ ಭಾಗವಿದ್ದಂತೆ

15-10-2024 ಬೆಂಗಳೂರು

“ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ವಾಸ್ತವಾಂಶಗಳನ್ನು ಜಾಗರೂಕವಾಗಿ, ನಿಖರವಾಗಿ ಮರು ಸೃಷ್ಟಿಸುವ ಕಲೆ&...