Date: 15-10-2024
Location: ಬೆಂಗಳೂರು
“ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ವಾಸ್ತವಾಂಶಗಳನ್ನು ಜಾಗರೂಕವಾಗಿ, ನಿಖರವಾಗಿ ಮರು ಸೃಷ್ಟಿಸುವ ಕಲೆ” ಎನ್ನುತ್ತಾರೆ ಎಸ್. ದಿವಾಕರ್. ಅವರು ಪಿ. ಶ್ರೀಧರ್ ನಾಯಕ್ ಅವರ ‘ಹೇಳದೇ ಇದ್ದ ವಾಸ್ತವಗಳು’ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ.
ಗೆಳೆಯ ಶ್ರೀಧರ ನಾಯಕ್ ಅವರ "ಹೇಳದೆ ಇದ್ದ ವಾಸ್ತವಗಳು" ಒಂದು ಅಪರೂಪದ ಕೃತಿ. ವ್ಯಕ್ತಿವಿಶೇಷವನ್ನು ಹೇಗೋ ಹಾಗೆ ಸುತ್ತಲಿನ ಪರಿಸರವನ್ನೂ ಸೂಕ್ಷ್ಮವಾಗಿ ಗಮನಿಸುವ ಅವರು ಈ ಕೃತಿಯಲ್ಲಿ ತಮ್ಮ ನೆನಪಿನಲ್ಲಿದ್ದ ಕೆಲವರನ್ನು ಬೇರೆ ಬೇರೆ ಸ್ಥಳಗಳನ್ನು ಓದುಗರ ಕಣ್ಣ ಮುಂದೆ ತಂದು ನಿಲ್ಲಿಸಿದ್ದಾರೆ. ತೀರ ಸಾಮಾನ್ಯವಾದದ್ದರಲ್ಲಿ ಅದ್ವಿತೀಯ ಗುಣವನ್ನು ಗ್ರಹಿಸುವ, ತಮ್ಮ ಅನುಭವಕ್ಕೆ ದಕ್ಕಿದ್ದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ, ಅದಕ್ಕೆ ಎದ್ದು ಕಾಣುವಂಥ ಆಕೃತಿ ಸೃಷ್ಟಿಸುವ ಅವರ ಪ್ರತಿಭೆ ಇಲ್ಲಿನ ಪ್ರತಿಯೊಂದು ಅಧ್ಯಾಯದಲ್ಲೂ ಎದ್ದು ಕಾಣುತ್ತದೆ.
ಬಿಡಿಬಿಡಿಯಾದ ಚಿತ್ರಗಳಿವು, ಹೌದು. ಆದರೆ ಇವು ಏನೇನು ಬಣ್ಣಗಳು ಕೂಡಿದರೆ ಪತ್ರಿಕೋದ್ಯಮವೆಂಬ ಸಂಪೂರ್ಣ ವರ್ಣಚಿತ್ರ ವಾಗುತ್ತದೆ ಎನ್ನುವುದನ್ನು ಸೂಚಿಸುವ ಚಿತ್ರಗಳು. ಚಿತ್ರಕಲೆಯ ಭಾಷೆಯಲ್ಲಿ ಹೇಳುವುದಾದರೆ ಸ್ಕೆಚ್‌ಗಳೋ ಅಥವಾ ಚಿತ್ರಗಳು ರೂಪುರೇಷೆಗಳೋ ಆಗಿರುವ ಇವು ಪತ್ರಕರ್ತನೊಬ್ಬ ತನ್ನ ಸಹಜ ದೃಷ್ಟಿಯಿಂದ ಲೋಕವನ್ನು ಪರಿಭಾವಿಸಿದ ಒಂದು ವಿಶಿಷ್ಟ ಕಾಲಾವಧಿಯ ಬಿಂಬಗಳು.
ಐರಿಷ್ ಲೇಖಕ ವಿಲಿಯಂ ಟ್ರೆವರ್‌ನ ಪ್ರಕಾರ ಸ್ಥಳಗಳು ಮನುಷ್ಯರ ಹಾಗೆ ಅಸು ನೀಗುವುದಿಲ್ಲ. ಆದರೆ ಅವು ಎಷ್ಟು ಮೂಲಭೂತವಾಗಿ ಬದಲಾಗುತ್ತವೆಯೆಂದರೆ ಒಂದು ಕಾಲದಲ್ಲಿ ಅವುಗಳಿಗಿದ್ದ ನಿರ್ದಿಷ್ಟ ಚಹರೆಯೇ ಉಳಿಯದಷ್ಟು. ಶ್ರೀಧರ ನಾಯಕರು ಇಲ್ಲಿ ಚಿತ್ರಿಸಿರುವ ಕಲಬುರಗಿಯಾಗಲೀ ಹಾಸನವಾಗಲೀ ಇಂದು ಮೊದಲಿನ ಹಾಗೆ ಉಳಿದಿಲ್ಲ. ಹಾಗೆಯೇ ಆ ಕಾಲದಲ್ಲಿದ್ದ ಪತ್ರಿಕೋದ್ಯಮವೂ ಈಗ ತನ್ನ ಮೊದಲಿನ ಗುಣಲಕ್ಷಣಗಳನ್ನು ಉಳಿಸಿಕೊಂಡಿಲ್ಲ. ಎರಡೂ ನಗರಗಳು ಜೀವನದ ಎಲ್ಲ ಕ್ಷೇತ್ರಗಳಲ್ಲೂ ತೀವ್ರತಮ ಪರಿವರ್ತನೆಗಳನ್ನು ಕಂಡಿವೆ. ಪತ್ರಿಕೋದ್ಯಮವು ಕೂಡ ತಾಂತ್ರಿಕ ಆವಿಷ್ಕಾರಗಳಿಂದಾಗಿ ತನ್ನ ಮೂಲ ಸ್ವರೂಪವನ್ನು ಸಾಕಷ್ಟು ಕಳಚಿಕೊಂಡಿದೆ.
ನಾನು ಪತ್ರಿಕೋದ್ಯಮವನ್ನು ಸೇರಿದ ಹೊಸದರಲ್ಲಿ ಈ ವೃತ್ತಿಯನ್ನು ವ್ಯವಸ್ಥಿತವಾಗಿ ಕಲಿಸುವ ಶಿಕ್ಷಣ ಸಂಸ್ಥೆಗಳಾಗಲೀ ವಿಶ್ವವಿದ್ಯಾಲಯಗಳಾಗಲಿ, ಇರಲಿಲ್ಲ. ನಾವು ಪತ್ರಿಕಾ ಕಚೇರಿಗಳಲ್ಲಿ ಕೂತು ಟೆಲಿಪ್ರಿಂಟರುಗಳು ಸರಬರಾಜು ಮಾಡುತ್ತಿದ್ದ ದೇಶವಿದೇಶಿ ಸುದ್ದಿಗಳನ್ನು ಭಾಷಾಂತರಿಸುವುದರಿಂದ, ಪ್ರತ್ಯಕ್ಷ ವರದಿಗಾರಿಕೆಯಿಂದ, ದೇಶದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವುದರಿಂದ, ಗ್ಯಾಲಿ ಪ್ರೂಪ್ ಗಳನ್ನು ತಿದ್ದುವುದರಿಂದ ನಮ್ಮ ಕಸುಬನ್ನು ಕಲಿತುಕೊಳ್ಳಬೇಕಾಗಿತ್ತು. ಆ ಕಾಲದಲ್ಲಿ ಒಂದು ಬಗೆಯ ಕಾರ್ಖಾನೆಗಳಂತೆ ಇರುತ್ತಿದ್ದ ಪತ್ರಿಕಾ ಕಚೇರಿಗಳಲ್ಲಿಯೇ ನಾವು ತರಬೇತುಗೊಳ್ಳುತ್ತಿದ್ದೆವು. ಪತ್ರಕರ್ತರೆಲ್ಲರಲ್ಲೂ ತಾವೊಂದು ಕುಟುಂಬದ ಸದಸ್ಯರೆಂಬ ಪ್ರಜ್ಞೆಯಿರುತ್ತಿತ್ತು. ಹಾಗಾಗಿ ಪರಸ್ಪರ ಸ್ನೇಹ ಸೌಹಾರ್ದಗಳಿರುತ್ತಿದ್ದವು. ಮತ್ತೆ ಪತ್ರಕರ್ತರಿಗೆ ವಿಸ್ತ್ರತವಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯಿರಬೇಕೆಂಬ, ಅದಕ್ಕಾಗಿ ಅವರು ಸದಾ ಅಧ್ಯಯನಶೀಲರಾಗಿರಬೇಕೆಂಬ ಅಲಿಖಿತ ನಿಯಮವೂ ಇತ್ತು. ಆಗ ಈ ವೃತ್ತಿಯಲ್ಲಿ ಅಂಥ ಹಣ ಮಾಡುವ ಅವಕಾಶವಿರಲಿಲ್ಲ; ಪತ್ರಕರ್ತರಿಗಿದ್ದದ್ದು ಹಣಕ್ಕಿಂತ ಮಿಗಿಲಾಗಿ ದೇಶದ, ರಾಜ್ಯದ ವಿದ್ಯಮಾನಗಳನ್ನು ಜನತೆಗೆ ತಿಳಿಸಬೇಕೆಂಬ ಉತ್ಸಾಹ, ತಿಳಿಸಿದ್ದೇವೆಂಬ ಧನ್ಯತೆ.
ಶ್ರೀಧರ ನಾಯಕರು ಇದೇ ಹಿನ್ನೆಲೆಯುಳ್ಳ ಪತ್ರಕರ್ತರು. ಪತ್ರಕರ್ತನ ವೃತ್ತಿ ನಿಜಕ್ಕೂ ಎಷ್ಟು ಕಷ್ಟದ್ದು, ಸಂಕೀರ್ಣವಾದದ್ದು ಎಂಬುದನ್ನು ಸ್ವಾನುಭವದಿಂದ ತಿಳಿದಿರುವ ಅವರು ಈ ಕೃತಿಯಲ್ಲಿ ಒಂದೆಡೆ ಹೀಗೆ ಬರೆಯುತ್ತಾರೆ: ಪತ್ರಿಕಾ ಕಚೇರಿಗಳಲ್ಲಿ ಸಂಜೆ ಎಂದರೆ ವರದಿಗಾರರು ಇಡೀ ದಿನ ಓಡಾಡಿ ಸಂಗ್ರಹಿಸಿದ ಸುದ್ದಿಗಳನ್ನು ಮುಖ್ಯ ವರದಿಗಾರರ ಬಳಿ ಚರ್ಚಿಸಿ ಬರೆದು ಸಿದ್ಧಪಡಿಸಿ ಮುಖ್ಯಸ್ಥರಿಗೆ ಕಳಿಸಿ ಮತ್ತೆ ಸಿಗುವ ಸುದ್ದಿಯ ಬೇಟೆಗೆ ಹೊರಡುವ ಹೊತ್ತು... ವಾರದ ರಜೆ ಇದ್ದಾಗ ಮಾತ್ರ ಸಂಜೆಯನ್ನು ಸವಿಯಲು ಸಾಧ್ಯ. ಕೇವಲ ವರದಿಗಾರರಿಗೆ ಮಾತ್ರವಲ್ಲ, ಡೆಸ್ಕ್ನಲ್ಲಿ ಕೆಲಸ ಮಾಡುವ ಉಪ ಸಂಪಾದಕರಿಂದ ತೊಡಗಿ ಅವರ ಮುಖ್ಯಸ್ಥರಿಗೂ ದೇಶ, ವಿದೇಶದ ಸುದ್ದಿಗಳನ್ನು ಎಡಿಟ್ ಮಾಡಿ ಅವುಗಳಿಗೆ ಸಂಬಂಧಪಟ್ಟ ಪೂರಕ ಮಾಹಿತಿ ಅಥವಾ ಸುದ್ದಿ ಸಿಕ್ಕಿದಾಗ ಮುಖ್ಯ ಸುದ್ದಿಗೆ ಅವನ್ನು ಸೇರಿಸುವ ಅವಸರದ ಹೊತ್ತು. ಒಟ್ಟಿನ ಮೇಲೆ ಸಂಜೆ ಒತ್ತಡ ಜಾಸ್ತಿ. ಮುಂದುವರಿದು ಐದಾರು ದಶಕಗಳ ಹಿಂದೆ ಜಿಲ್ಲಾ ವರದಿಗಾರರ ಸ್ಥಿತಿ ಹೇಗಿತ್ತೆಂದು ವಿವರಿಸುತ್ತಾ, ಮೊಬೈಲ್ ಇಲ್ಲದ ಕಾಲದಲ್ಲಿ, ವಿದ್ಯುತ್ ಪೂರೈಕೆ ಅನಿಯಮಿತ ಇರುವ ಕಡೆಗಳಲ್ಲಿ ಸಂಜೆ ಹೊತ್ತಿನಲ್ಲಿ ಸುದ್ದಿಯನ್ನು ಸಂಗ್ರಹಿಸುವುದು ಮಾತ್ರವಲ್ಲ, ಮುಖ್ಯ ಕಚೇರಿಯನ್ನು ಸಂಪರ್ಕಿಸಿ ಸುದ್ದಿಯನ್ನು ಕಳುಹಿಸುವುದು ಸವಾಲಿನ ಕೆಲಸವಾಗಿತ್ತು ಎನ್ನುತ್ತಾರೆ. ಒಮ್ಮೆ ಅವರು ಕಲಬುರ್ಗಿಯಿಂದ ಬೆಂಗಳೂರಿನ ತಮ್ಮ ಕಚೇರಿಗೆ ಸಂಜೆ 4 ಗಂಟೆಯ ಹೊತ್ತಿಗೆ ಬುಕ್ ಮಾಡಿದ ಟ್ರಂಕ್ ಕಾಲ್ ಅವರಿಗೆ ಸಂಪರ್ಕ ಕಲ್ಪಿಸಿದ್ದು ಮರುದಿನ ಸಂಜೆ 4 ಗಂಟೆಗೆ!
ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ನಮ್ಮ ಪತ್ರಕರ್ತರು ಕೆಲವರು ಏನೆಲ್ಲ ಸಾಧಿಸಿದರು ಎಂದು ಆಶ್ಚರ್ಯವಾಗುತ್ತದೆ. ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ವಾಸ್ತವಾಂಶಗಳನ್ನು ಜಾಗರೂಕವಾಗಿ, ನಿಖರವಾಗಿ ಮರು ಸೃಷ್ಟಿಸುವ ಕಲೆ. ಅದು ನಡೆದಿರಬಹುದಾದ ಘಟನೆಗಳನ್ನು ಹೇಗೆ ನಿರೂಪಿಸುತ್ತದೆಯೆಂದರೆ ಓದುಗನಿಗೆ ತಾನೇ ಅವುಗಳನ್ನು ಕಣ್ಣಾರೆ ಕಂಡೆನೆಂದು ಅನ್ನಿಸುವ ಹಾಗೆ, ಅದಕ್ಕೆ ಪರೇಂಗಿತ ಪ್ರಜ್ಞೆ ಬೇಕು, ಮನಸ್ಸು ಗ್ರಹಿಸಿದ್ದನ್ನು ಭಾಷೆಯಲ್ಲಿ ಪಡಿಮೂಡಿಸಬಲ್ಲ ಪ್ರತಿಭೆ ಬೇಕು. ಇವೆಲ್ಲ ಧಾರಾಳವಾಗಿರುವ ಶ್ರೀಧರ ನಾಯಕರು ಭೀಕರ ಬರಗಾಲದಲ್ಲಿ ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರಕಾರ ಆರಂಭಿಸಿದ ಉಚಿತ ರೈಲು ಸಂಚಾರ (ಬರಗಾಲ ಗಾಡಿ), ಉರುಳಿದ ತೈಲದ ಟ್ಯಾಂಕರ್‌ನಿಂದ ಬೆಂಕಿ ಹೊತ್ತಿಕೊಂಡು ಅಸುನೀಗಿದ ಹಲವು ಮಂದಿ, ನಾರು ಹುಣ್ಣಿನ ರೋಗ, ಕನ್ನಡ ಸೂಚನಾಪತ್ರ ಹರಿದ ಪಾಲಿಕೆ ಸದಸ್ಯ, ಶನಿವಾರ ಭಾನುವಾರಗಳಂದೇ ನಡೆಯುತ್ತಿದ್ದ ಅಪರಾಧಗಳ ರಹಸ್ಯ, ಇತ್ಯಾದಿ ಅನೇಕ ವಿದ್ಯಮಾನಗಳನ್ನು ಯುಕ್ತಾಯುಕ್ತ ವಿವೇಚನೆಯಿಂದ, ವಿಹಿತ ಭಾಷಾಪ್ರಯೋಗದಿಂದ, ತೀರ ಸಂಯಮದಿಂದ ವಿವರಿಸುತ್ತಾರೆ. ಅವರು ಕಲಬುರ್ಗಿಯ ಶರಣಬಸವೇಶ್ವರ ದೇವಾಲಯ, ಖಾಜಾ ಬಂದೇ ನವಾಜ್ ದರ್ಗಾ, ಶ್ರವಣಬೆಳೊಳದ ಮಹಾ ಮಸ್ತಕಾಭಿಷೇಕ ಮೊದಲಾದವುಗಳ ಬಗ್ಗೆ ಬರೆಯುವಾಗ ಅವುಗಳ ಐತಿಹಾಸಿಕ ಹಿನ್ನೆಲೆಯನ್ನು ಮರೆಯುವುದಿಲ್ಲ. ಮತ್ತೆ ಕಲಬುರ್ಗಿಯ ಊಟದ ವೈವಿಧ್ಯವನ್ನೋ ಹೊಯ್ಸಳ ಶೈಲಿಯ ಕಲಾಕೌಶಲವನ್ನೋ ಚಿತ್ರಿಸುವಲ್ಲಿ ಅವರದು ಎಂಥ ಸೂಕ್ಷ್ಮಜ್ಞತೆಯೆಂದು ನಮಗೆ ಮನದಟ್ಟಾಗುತ್ತದೆ.
ನನ್ನಂಥವರಿಗೆ ಏನೇನೂ ಗೊತ್ತಿಲ್ಲದ ಕೆಲವರ ವ್ಯಕ್ತಿಚಿತ್ರಗಳೂ ಇಲ್ಲಿವೆ. ಉದಾಹರಣೆಗೆ "ದೊಡ್ಡ ಮನುಷ್ಯನ ಕಥೆ"ಯಲ್ಲಿ ಕಾಣಿಸಿಕೊಳ್ಳುವ ರಾಘು (ರಾಘವೇಂದ್ರ) ಜಾಹಗೀರದಾರ್. ಶ್ರೀಧರ ನಾಯಕರು ಬರೆದಿರುವಂತೆ ನೆಹರೂ, ಇಂದಿರಾ, ಪಿ.ವಿ.ನರಸಿಂಹರಾವ್ ಮುಂತಾದವರ ಸ್ನೇಹವಲಯದಲ್ಲಿದ್ದ, ಅವಿವಾಹಿತರಾಗಿದ್ದ ಅವರಿಗೆ ಕಲಬುರಗಿಯಲ್ಲಿ ಸ್ವಂತ ಮನೆಯಿತ್ತು. ಆದರೆ ಅದು ಬೇರೆಯವರ ಸ್ವಾಧೀನ ಇದ್ದ ಕಾರಣ ಬಾಡಿಗೆಗೆ ಒಂದು ಕೋಣೆ ಹಿಡಿದು ವಾಸವಿದ್ದರು. ಸ್ವಂತ ಊರಲ್ಲಿ ಆಸ್ತಿಪಾಸ್ತಿ ಇದ್ದರೂ ಅದನ್ನು ಅನುಭವಿಸುತ್ತಿದ್ದುದು ಬೇರೆಯವರು. ಸ್ವಾಧೀನಕ್ಕಾಗಿ ನ್ಯಾಯಾಲಯದ ಮೂಲಕ ಹೋರಾಟ ನಡೆಸುತ್ತಿದ್ದರು. ಅವರು ಇಹಲೋಕ ತ್ಯಜಿಸಿದ ಬಳಿಕ ನ್ಯಾಯಾಲಯ ಅವರ ಪರ ತೀರ್ಪು ನೀಡಿತು! ಅವರ ಹಾಗೆಯೇ ಗಮನಾರ್ಹರೆನಿಸುವ ಪೋಲಿಸ್ ಅಧಿಕಾರಿಗಳು ಜಿ.ಕೆ ಬೇಕಲ್ ಮತ್ತು ಚಂದ್ರಕಾಂತ ಆಯೂರ್. ಚಂದ್ರಕಾಂತ ಆಯೂರರದು ಅದೆಂಥ ಅಪೂರ್ವ ಪ್ರಾಮಾಣಿಕತೆಯೆನ್ನುವುದನ್ನು ಇಲ್ಲಿನ "ಎತ್ತರದ ನಿಲುವಿನ ಎತ್ತರದ ವೃಕ್ಷ" ಎಂಬ ಅಧ್ಯಾಯವನ್ನು ಓದಿಯೇ ತಿಳಿಯಬೇಕು.
ಇಡೀ ಕೃತಿಯಲ್ಲಿ ನನಗೆ ಅತೀವ ಆಶ್ಚರ್ಯ ಉಂಟುಮಾಡಿದ್ದೆಂದರೆ 1990ರಲ್ಲಿ ನಡೆದ ಎಲ್.ಕೆ. ಅಡ್ವಾಣಿಯವರ ರಥಯಾತ್ರೆಗೆ ಸಂಬಂಧಿಸಿದ ಒಂದು ಪ್ರಸಂಗ. "ಹಾಸನದಲ್ಲಿ ರಥಯಾತ್ರೆ ನಡೆದಾಗ ಎಲ್ಲ ಪಕ್ಷಗಳಿಗೆ ಸೇರಿದವರು ಭಾಗವಹಿಸಿದ್ದು ವಿಶೇಷ" ಎಂದಿದ್ದಾರೆ ಶ್ರೀಧರ ನಾಯಕರು. ಹೀಗೆ ರಥಯಾತ್ರೆಗೆ ಭಾರತದ ಬೇರೆಲ್ಲೂ ದೊರೆಯದ ಎಲ್ಲ ಪಕ್ಷಗಳವರ ಬೆಂಬಲ ನಮ್ಮಲ್ಲಿ ದೊರೆಯಿತೆಂಬುದು ಉಲ್ಲೇಖನೀಯ.
ಇಲ್ಲಿನ ಕೆಲವು ಬರಹಗಳನ್ನು ಓದಿದಾಗ ನನಗೆ ನನ್ನ ಮೆಚ್ಚಿನ ಕ್ಲೈವ್ ಜೇಮ್ಸ್, ಅಲಿಸ್ಟೇರ್ ಕುಕ್‌ರಂತಹ ಬ್ರಿಟಿಷ್/ಅಮೆರಿಕನ್ ಪತ್ರಕರ್ತರ ಬರಹಗಳು ನೆನಪಾದವು. ಆ ಪತ್ರಕರ್ತರು ವ್ಯಕ್ತಿ/ವಸ್ತು ವಿಶೇಷಗಳನ್ನು ಕುರಿತ ತಮ್ಮ ಆಳವಾದ ಅಧ್ಯಯನದಿಂದ, ವಸ್ತುನಿಷ್ಠ ದೃಷ್ಟಿಯಿಂದ, ವಿಚಾರಸ್ಪಷ್ಟತೆಯಿಂದ, ಒಂದನ್ನು ಹೇಳಿ ಇನ್ನೊಂದನ್ನು ಸೂಚಿಸಬಲ್ಲ ಧ್ವನಿಶಕ್ತಿಯಿಂದ, ಆತ್ಮೀಯ ಶೈಲಿಯಿಂದ, ಓದುಗರನ್ನು ಸೆಳೆದುಕೊಳ್ಳಬಲ್ಲ ಹಾಸ್ಯದಿಂದ ಹೆಸರಾಗಿರುವವರು. ಶ್ರೀಧರ ನಾಯಕರ ಈ ಸ್ವಾನುಭವದ ಚಿತ್ರಗಳಲ್ಲಿ ಕೂಡ ಸೂಕ್ಷ್ಮ ಧ್ವನಿಯಿದೆ. ಭಾವಗೀತೆಯ ನವುರು ಇದೆ. ಜೊತೆಗೆ ತಿಳಿಯಾದ ಹಾಸ್ಯವಿದೆ. ಈ ಹಾಸ್ಯ ಭಾಷಿಕ ಹಾಸ್ಯವಾಗದೆ ಸಾಂದರ್ಭಿಕ ಹಾಸ್ಯವಾಗಿರುವುದು ಗಮನಾರ್ಹ.
ಗೆಳೆಯ ಶ್ರೀಧರ ನಾಯಕರು "ಪ್ರಜಾವಾಣಿ"ಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಒಬ್ಬ ಅನುಭವೀ ಪತ್ರಕರ್ತರು. ಸ್ವಲ್ಪ ಕಾಲ ನಾನೂ ಅವರ ಸಹೋದ್ಯೋಗಿಯಾಗಿದ್ದೆನೆಂಬ ಹೆಮ್ಮೆ ನನಗೆ. ಅವರು ನಮ್ಮ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳನ್ನು ತೀರ ನಿಕಟವಾಗಿ ಗಮನಿಸಿ, ಮುಖ್ಯ ಬೆಳವಣಿಗೆಗಳನ್ನು ಶೋಧಿಸಿ ರಚಿಸಿರುವ ಈ ಕೃತಿ ಒಂದು ರೀತಿಯಲ್ಲಿ ಅವರ ಆತ್ಮಚರಿತ್ರೆಯ ಆಯ್ದ ಭಾಗವಿದ್ದಂತೆ. "ಪತ್ರಕರ್ತನಿಗೆ ಎಲ್ಲವನ್ನೂ ಸುದ್ದಿಯಲ್ಲಿ ಅಡಕಗೊಳಿಸಲು ಸಾಧ್ಯವಿಲ್ಲ. ಹೇಳದೇ ಇದ್ದ ವಿಷಯಗಳು ಹತ್ತು ಹಲವು ಇರುತ್ತವೆ. ಅವುಗಳನ್ನು ಇಲ್ಲಿ ಬರೆದಿದ್ದೇನೆ. ಬರೆಯಬಾರದವುಗಳನ್ನು ಬರೆದಿಲ್ಲ. ಹಳೆಯ ಗಾಯಗಳನ್ನು ಕೆದಕುವುದು ನನ್ನ ಉದ್ದೇಶವಲ್ಲ" ಎಂದವರು ಬರೆದಿದ್ದಾರೆ. ಈ ಕೃತಿಯನ್ನು ಓದುತ್ತಿರುವ ಯಾರಿಗೂ ಅವರ ನೆನಪಿನ ಉಗ್ರಾಣದಲ್ಲಿ ಬೆಳಕಿಗೆ ಬರದೆ ಉಳಿದುಬಿಟ್ಟಿರುವ ಇನ್ನೂ ಅನೇಕ ವ್ಯಕ್ತಿಗಳು, ಪ್ರಸಂಗಗಳು ಇವೆಯೆನ್ನಿಸುವುದು ಸಹಜ. ಕಾಲಕ್ರಮೇಣ ಅವುಗಳನ್ನೂ ಅವರು ವಿಶದವಾಗಿ ಬರೆಯುವಂತಾಗಲಿ, ಆ ಮೂಲಕ ಒಂದು ಕಾಲಘಟ್ಟವೇ ದಾಖಲೆಗೊಂಡು ಇತಿಹಾಸಕ್ಕೆ ಪೂರಕವಾಗುವಂತಾಗಲಿ ಎಂದು ಹಾರೈಸುತ್ತೇನೆ.
- ಎಸ್. ದಿವಾಕರ್
“ಈ ಕಾದಂಬರಿ ತನ್ನ ೧೦೩ ಪುಟಗಳ ಉದ್ದಕ್ಕೂ ಕುತೂಹಲ ಮೂಡಿಸಿಕೊಂಡು ಹೋಗುತ್ತದೆ. ಇಲ್ಲಿ ಪತ್ತೇದಾರಿ ಕಥೆ ಮಾತ್ರವಲ್ಲ...
“ಚರಿತ್ರೆಯ ವಿವರಗಳು ಭಿತ್ತಿಯಾಗಿದ್ದು, ಅದರ ಮೇಲೆ ಮಹಾನ್ ಚಕ್ರವರ್ತಿ ಕೃಷ್ಣದೇವರಾಯನ ಚಾರಿತ್ರ್ಯ, ಅವನ ಪರಿವಾರದ...
“ಈ ಸಂಕಲನ ಮಲೆಯ ಮಹದೇಶ್ವರದ ತಪ್ಪಲಿನ ಗುಡ್ಡಗಾಡು ಜನರ ಬದುಕುಗಳ ಚಿತ್ರಣಗಳನ್ನು ಬಲು ನಿಖರವಾಗಿ ಕೊಡುತ್ತದೆ&rdqu...
©2024 Book Brahma Private Limited.